ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಾಗ್ಜೀವಯುಗ

ವಿಕಿಸೋರ್ಸ್ ಇಂದ
Jump to navigation Jump to search

ಪ್ರಾಗ್ಜೀವಯುಗ

ಭೂ ಇತಿಹಾಸದಲ್ಲಿ ಸುಮಾರು ಅರುವತ್ತು ಕೋಟಿ ವರ್ಷ ಪ್ರಾಚೀನದಿಂದ ತೊಡಗಿ ಇಪ್ಪತ್ತೆರಡೂವರೆ ಕೋಟಿ ವರ್ಷ ಪ್ರಾಚೀನದವರೆಗಿನ ಸುಮಾರು ಮೂವತ್ತೇಳೂವರೆ ಕೋಟಿ ವರ್ಷ ವ್ಯಾಪ್ತಿ ಇರುವ ಪ್ರಮುಖ ಕಾಲ ವಿಭಾಗ (ಪೇಲಿಯೊಝೋಯಿಕ್). ಪುರಾತನ ಜೀವಯುಗ ಪರ್ಯಾಯನಾಮ. ಆದಿಜೀವಯುಗಕ್ಕೂ (ಪ್ರೋಟಿರೋಝೋಯಿಕ್) ಮಧ್ಯಜೀವ ಯುಗಕ್ಕೂ (ಮೀಸೊಝೋಯಿಕ್) ನಡುವಿನ ಯುಗ. ಆಧುನಿಕ ರೇಡಿಯೊವಿಕಿರಣ ಪರೀಕ್ಷೆಗಳ ಪ್ರಕಾರ ಇದರ ವ್ಯಾಪ್ತಿ ಸುಮಾರು ಮೂವತ್ತನಾಲ್ಕು ಕೋಟಿ ವರ್ಷಗಳ ಅಕಶೇರುಕಗಳು, ಮೀನುಗಳು ಉಭಯ ಚರಿಗಳು, ಕೀಟಗಳು ಮತ್ತು ಉರಗಗಳು ಕ್ರಮೇಣ ಈ ಯುಗದಲ್ಲಿ ವಿಕಸಿಸಿದವು.

ಭೂ ಇತಿಹಾಸವನ್ನು ಪ್ರಕೃತಿಯೇ ಜಲಜಶಿಲಾಕಡತದ ಮೇಲೆ ಬರೆದಿದೆ. ಈ ಕಡತದ ಪೂರ್ವಾರ್ಧ ಬಹಳ ಅಸ್ಪಷ್ಟ. ಆ ಕಾಲಗಳಲ್ಲಿ ಜೀವರಾಶಿ ಇತ್ತೆಂಬುದನ್ನು ಎಲ್ಲರೂ ಒಪ್ಪುವರಾದರೂ ಅದರ ವಿವರಗಳು ಚೆನ್ನಾಗಿ ತಿಳಿದಿಲ್ಲ. ಅಂದರೆ ಆ ಕಾಲಗಳ ಶಿಲಾಸ್ತೋಮಗಳ ಸ್ಪಷ್ಟ ಮತ್ತು ಸಂದೇಹಾತೀತ ಜೀವ್ಯವಶೇಷಗಳು ದೊರೆಯುತ್ತಿಲ್ಲ. ಅದರಿಂದಾಗಿ ಪ್ರಪಂಚದ ವಿವಿಧ ಭಾಗಗಳಲ್ಲಿ ಇರುವ ಆ ಕಾಲಗಳ ಶಿಲಾಸ್ತೋಮಗಳನ್ನು ಪರಸ್ಪರ ಹೋಲಿಸಲು ಸಾಧ್ಯವಿಲ್ಲದಂತಾಗಿದೆ. ಉತ್ತರಾರ್ಧದಲ್ಲಿ ಗತಕಾಲಗಳ ಜೀವರಾಶಿ ಸ್ಪಷ್ಟವಾಗಿ ರಕ್ಷಿಸಲ್ಪಟ್ಟಿರುವುದೇ ಅಲ್ಲದೆ ಅದು 55-60 ಕೋಟಿ ವರ್ಷಗಳ ಅವಧಿಯಲ್ಲಿ ವಿಕಾಸಪಥದಲ್ಲಿ ನಡೆದು ಬಂದ ಜಾಡುಗಳನ್ನೂ ತಿಳಿಯಲು ಸಾಧ್ಯವಾಗಿದೆ. ಅದ್ದರಿಂದ ಭೂ ಇತಿಹಾಸದ ಉತ್ತರಾರ್ಧದಲ್ಲಿ ನಡೆದ ಘಟನಾವಳಿಗಳನ್ನು ಕಾಲಾನುಕ್ರಮವಾಗಿ ಜೋಡಿಸಿ ಪ್ರಪಂಚದ ನಾನಾ ಭಾಗಗಳ ಶಿಲಾಸ್ತೋಮಗಳನ್ನು ಪರಸ್ಪರ ಹೋಲಿಸುವುದು ಸಾಧ್ಯವಾಗಿದೆ.

ಭೂ ಕಾಲದ ಉದ್ದಕ್ಕೂ ಪ್ರಕೃತಿ ಜೀವರಾಶಿಗೆ ನಾನಾ ಪಣಗಳನ್ನು ಒಡ್ಡುತ್ತ ಬಂದಿದೆ. ಜೀವರಾಶಿ ಅವನ್ನೆಲ್ಲ ಎದುರಿಸಿ ವಿಕಾಸಗೊಂಡಿದೆ ಅಂಥ ಪ್ರತಿ ಸಂದರ್ಭದಲ್ಲಿಯೂ ಕೆಲವು ವರ್ಗಗಳು ಪಣಗಳನ್ನು ಎದುರಿಸಲಾರದೆ ನಿರ್ನಾಮ ಹೊಂದಿರುವುದೂ ಎದುರಿಸಿ ವಿಜಯಿಯಾದ ವರ್ಗಗಳು ತಮ್ಮ ಸ್ವರೂಪಗಳನ್ನು ಬದಲಾಯಿಸಿಕೊಂಡಿರುವುದೂ ಕಾಣಬರುತ್ತದೆ. ಇಂಥ ಸಂದರ್ಭಗಳ ಪೈಕಿ ಎರಡು ಅತ್ಯಂತ ಮುಖ್ಯವಾದವು. ಅವುಗಳಿಗೆ ಪರ್ವಕಾಲಗಳೆಂದು ಹೆಸರು. ಆ ಕಾಲಗಳಲ್ಲಿ ಜೀವರಾಶಿ ಅತ್ಯಧಿಕ ಪರಿವರ್ತನೆ ಹೊಂದಿರುವುದು. ಪರ್ವಕಾಲಗಳನ್ನು ಆಧರಿಸಿ ಭೂ ಇತಿಹಾಸದ ಉತ್ತರಾರ್ಧವನ್ನು ಮೂರು ಮುಖ್ಯ ಭಾಗಗಳಾಗಿ ವಿಭಾಗಿಸಿರುತ್ತಾರೆ. ಪ್ರಾಗ್ಜೀವಯುಗ, ಮಧ್ಯಜೀವಯುಗ, ಆಧುನಿಕ ಜೀವಯುಗ.

ಪ್ರಾಚೀನಜೀವಯುಗದ ಅಥವಾ ಪ್ರಾಗ್ಜೀವಯುಗದ ಶಿಲಾಸ್ತೋಮಗಳನ್ನು ಎರಡು ಭಾಗಗಳಾಗಿ ವಿಭಾಗಿಸಬಹುದು; ಪೂರ್ವಾರ್ಧ ಶಿಲಾಸ್ತೋಮಗಳು ಮತ್ತು ಉತ್ತರಾರ್ಧ ಶಿಲಾಸ್ತೋಮಗಳು. ಟ್ರೈಲೊಬೈಟ್, ಗ್ರಾಪ್ಟೊಲೈಟ್ ಮತ್ತು ಬ್ರೇಕಿಯೊಪೋಡ ಪ್ರಾಣಿವರ್ಗಗಳ ಅವಶೇಷಗಳು ಹೇರಳವಾಗಿರುವುದೂ ಬೆನ್ನೆಲುಬುಳ್ಳ ಪ್ರಾಣಿಗಳ ಮತ್ತು ನೆಲವಾಸಿ ಸಸ್ಯಗಳ ಅವಶೇಷಗಳು ಇಲ್ಲದಿರುವುದೂ (ಅತ್ಯಂತ ಕೊನೆಯ ಭಾಗದಲ್ಲಿ ಹೊರತು) ಪೂರ್ವಾರ್ಧ ಶಿಲಾಸ್ತೋಮಗಳ ವೈಶಿಷ್ಟ್ಯ. ಮತ್ಸ್ಯ, ದ್ವಿಚರ ಪ್ರಾಣಿಗಳ ಮತ್ತು ನೆಲವಾಸಿ ಸಸ್ಯಗಳ ಅವಶೇಷಗಳು ಹೇರಳವಾಗಿರುವಿಕೆ, ಟ್ರೈಲೊಬೈಟುಗಳ ವಿರಳತೆ ಮತ್ತು ಗ್ರಾಪ್ಟೊಲೈಟುಗಳ ಇಲ್ಲದಿರುವಿಕೆ ಇವು ಉತ್ತರಾರ್ಧ ಶಿಲಾಸ್ತೋಮಗಳ ವೈಶಿಷ್ಟ್ಯ. ಪೂರ್ವಾರ್ಧವನ್ನು ಕೇಂಬ್ರಿಯನ್, ಅರ್ಡೊವೀಶಿಯನ್ ಮತ್ತು ಸೈಲೂರಿಯನ್ ಎಂಬ ಮೂರು ಭಾಗಗಳಾಗಿಯೂ ಉತ್ತರಾರ್ಧವನ್ನು ಡೆವೊನಿಯನ್, ಕಾರ್ಬಾನಿಫೆರಸ್ ಮತ್ತು ಪರ್ಮಿಯನ್ ಎಂಬ ಮೂರು ಭಾಗಗಳಾಗಿಯೂ ವಿಭಾಗಿಸಲಾಗಿದೆ.

ಪ್ರಾಗ್ಜೀವಯುಗ ಎಂಬ ಹೆಸರನ್ನು ಮೊದಲು ಸೆಡ್ಜ್‍ವಿಕ್ (1785-1873, ಇಂಗ್ಲಿಷ್ ಭೂವಿಜ್ಞಾನಿ) ಪೂವಾರ್ಧ ಶಿಲಾಸ್ತೋಮಗಳಿಗೆ ಬಳಸಿದ. 1841ರಲ್ಲಿ ಜೆ. ಫಿಲಿಪ್ಸ್ (1800-74, ಇಂಗ್ಲಿಷ್ ಭೂವಿಜ್ಞಾನಿ) ಅದರ ಎಲ್ಲೆಯನ್ನು ಪರ್ಮಿಯನ್ ಕಲ್ಪದ ಕೊನೆಯತನಕ ವಿಸ್ತರಿಸಿದ. ಅಂದಹಾಗೆ ಪ್ರಾಗ್ಜೀವಯುಗದ ಶಿಲಾಸ್ತೋಮಗಳು ಅನೇಕ ಸಾವಿರ ಮೀಟರ್ ದಪ್ಪ ಇರುವ ಪೂರ್ವಕೇಂಬ್ರಿಯನ್ ಶಿಲಾಸ್ತೋಮಗಳು ಮೇಲೂ ಮಧ್ಯಜೀವಯುಗದ ಸ್ತೋಮಗಳ ಕೆಳಗೂ ನಿಕ್ಷೇಪಗೊಂಡಿವೆ. ಪ್ರಾಗ್ಜೀವಯುಗದ ಕೆಳಗಣ ಮತ್ತು ಮೇಲಣ ಎಲ್ಲೆಗಳು ಸಾಮಾನ್ಯವಾಗಿ ಅನನುರೂಪ್ಯತೆಯಲ್ಲಿ ಕೊನೆಗಾಣುತ್ತವೆ. ಅಂದರೆ ಈ ಶಿಲಾಸ್ತೋಮಗಳು ನಿಕ್ಷೇಪಗೊಳ್ಳುವ ಮೊದಲು ಮತ್ತು ಅನಂತರ ದೀರ್ಘಕಾಲ ಶಿಲಾನಿಕ್ಷೇಪಕಾರ್ಯ ನಿಂತು ಶಿಲಾಸವೆತ ಕಾರ್ಯ ನಡೆದಿದೆ ಎಂದು ಅರ್ಥ. ಆದರೆ ಈ ಅನನುರೂಪ್ಯಂಗಗಳು ಎಲ್ಲ ಕಡೆಗಳಲ್ಲಿಯೂ ಇರಲೇಬೇಕೆಂದೇನೂ ಇಲ್ಲ; ಕೆಲವು ಕಡೆ ಇಲ್ಲದಿರುವುದಕ್ಕೆ ಅನುಭವಕ್ಕೆ ಬಂದಿದೆ. ಪ್ರಾಗ್ಜೀವಯುಗದ ಶಿಲಾಸ್ತೋಮಗಳು ಶಿಲಾಸಂಯೋಜನೆಯಲ್ಲಿ ಪೂರ್ವಕೇಂಬ್ರಿಯನ್ ಮತ್ತು ಮಧ್ಯಜೀವಯುಗದ ಶಿಲಾಸ್ತೋಮಗಳಿಗಿಂತ ಭಿನ್ನವಾಗಿರುವುದೇ ಅಲ್ಲದೆ ಭಿನ್ನ ಜೀವ್ಯವಶೇಷಗಳಿಂದಲೂ ಕೂಡಿದೆ.

ಪ್ರಾಗ್ಜೀವಯುಗದ ಶಿಲಾಸ್ತೋಮಗಳಲ್ಲಿ ಮರಳು ಮತ್ತು ಜೇಡುಶಿಲೆಗಳೇ ಪ್ರಧಾನವಾಗಿದ್ದು, ಸುಣ್ಣಶಿಲೆ ಅವುಗಳ ಮಧ್ಯೆ ವಿರಳವಾಗಿ ನಿಕ್ಷೇಪಗೊಂಡಿರುತ್ತದೆ. ಭೂಪ್ರದೇಶಕ್ಕೆ ಸಮೀಪದ ಕಡಿಮೆ ಆಳದ ಸಾಗರದ ಅಡಿಯಲ್ಲಿ ಅವು ನಿಕ್ಷೇಪಗೊಂಡಿವೆ ಎಂಬುದಕ್ಕೆ ಅನೇಕ ಸಾಕ್ಷ್ಯಗಳು ದೊರೆಯುತ್ತವೆ. ಗುಂಡುಶಿಲೆ, ಮರಳುಶಿಲೆ ಮತ್ತು ಜೇಡುಶಿಲೆಗಳ ಪುನರಾವೃತ್ತಿ; ಅಲೆಗಳು ಮತ್ತು ಬಿಸಿಲು ಬಿರುಕುಗಳು ಇರುವ ಪದರುಗಳ ಮೇಲ್ಮೈ, ಬಿಲಗಳು ಮತ್ತು ಪ್ರಾಣಿಗಳು ಓಡಾಡಿದ ಜಾಡುಗಳು; ಮೇಲಾಗಿ ಜೀವ್ಯವಶೇಷಗಳು. ಇವೆಲ್ಲವೂ ಈ ಶಿಲಾಸ್ತೋಮಗಳು ಭೂಖಂಡಪ್ರದೇಶಕ್ಕೆ ಸಮೀಪವಾಗಿ ಅಥವಾ ಭೂಮಿಯಿಂದ ಸುತ್ತುವರಿಯಲ್ಪಟ್ಟ, ಆಳವಿಲ್ಲದ ಸಾಗರದ ಅಡಿಯಲ್ಲಿ ನಿಕ್ಷೇಪಗೊಂಡವು ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಬ್ರಿಟಿಷ್ ದ್ವೀಪಗಳ ವೇಲ್ಸ್ ಪ್ರದೇಶದಲ್ಲಿ ಪ್ರಾಗ್ಜೀವಯುಗದ ಪೂರ್ವಾರ್ಧ ಶಿಲಾಸ್ತೋಮಗಳು ಅತ್ಯುತ್ತಮವಾಗಿ ರೂಪುಗೊಂಡಿವೆ. ಅವುಗಳ ದಪ್ಪ ಸುಮಾರು 3660 ಮೀಟರುಗಳು. ಅವುಗಳಲ್ಲಿ ಜೀವ್ಯವಶೇಷಗಳು ಅಷ್ಟು ಹೇರಳವಾಗಿ ಇಲ್ಲದಿದ್ದರೂ ಶಿಲಾಪರಂಪರೆಯ ಕಾಲಾನುಕ್ರಮವನ್ನು ನಿರ್ಧರಿಸಲು ಬೇಕಾದಷ್ಟು ಕುರುಹುಗಳಿವೆ. ಅತ್ಯಂತ ಪ್ರಾಚೀನಕಾಲಗಳ ಶಿಲಾಪರಂಪರೆ ಮತ್ತು ಜೀವಪರಂಪರೆಯ ಕಾಲಾನುಕ್ರಮವನ್ನು ಮೊದಲು ನಿರ್ಧರಿಸಿದ ಪ್ರದೇಶ ಇದಾಗಿರುವುದರಿಂದ ಭೂ ಇತಿಹಾಸದಲ್ಲಿ ಇದಕ್ಕೆ ಪ್ರಾಧಾನ್ಯ ಇದೆ.

1835ಕ್ಕೆ ಹಿಂದೆ ಮಿಡ್‍ಲ್ಯಾಂಡ್ ಕಲ್ಲಿದ್ದಲು ಪ್ರದೇಶ ಮತ್ತು ಹಳೆ ಕೆಂಪು ಶಿಲಾವರ್ಗಗಳಿಗೆ ವಾಯುವ್ಯದಲ್ಲಿಯ ವೇಲ್ಸ್ ಪ್ರದೇಶದ ಶಿಲೆಗಳು ಜೀವ್ಯವಶೇಷರಹಿತ ಶಿಲಾಸ್ತೋಮಗಳೆಂದೂ ಶಿಲಾಪರಂಪರೆಯ ಕಾಲಾನುಕ್ರಮ ನಿರ್ಧರಿಸುವ ಸೂತ್ರಗಳು ಅವಕ್ಕೆ ಅನ್ವಯಿಸುವುದಿಲ್ಲವೆಂದೂ ಭಾವಿಸಲಾಗಿತ್ತು. ಮರ್ಚಿಸನ್ ಎಂಬಾತ ಷ್ರಾಪ್ಪೈರಿನಿಂದ ವೇಲ್ಸ್ ಕಡೆಗೆ ವಾಯವ್ಯಾಭಿಮುಖವಾಗಿ ಈ ಶಿಲಾಸ್ತೋಮಗಳ ಪರಿಶೋಧನೆ ಕೈಗೊಂಡ. ಆತ ಈ ಶಿಲೆಗಳಲ್ಲಿ ಹೇರಳವಾದ ಜೀವ್ಯವಶೇಷಗಳಿರುವುದನ್ನೂ ವಾಯವ್ಯಕ್ಕೆ ಹೋದಂತೆಲ್ಲ ಶಿಲೆಗಳ ವಯಸ್ಸು ಹೆಚ್ಚಾಗುತ್ತಿರುವುದನ್ನೂ ವರದಿ ಮಾಡಿದ. ರೋಮನ್ ಆಕ್ರಮಣ ಕಾಲದಲ್ಲಿ ಆ ಪ್ರದೇಶದಲ್ಲಿ ವಾಸವಾಗಿದ್ದ ಗುಡ್ಡಗಾಡಿನ ಜನರ ಬುಡಕಟ್ಟಿನ ಹೆಸರಾದ ಸೈಲೂರಿಯನ್(ಸೈಲೂರ್) ಎಂಬ ಹೆಸರನ್ನು ಅ ಶಿಲೆಗಳಿಗಿಟ್ಟ ಅದೇ ಕಾಲದಲ್ಲಿ ಸೆಡ್ಜ್‍ವಿಕ್, ವೇಲ್ಸ್ ಪ್ರದೇಶದಿಂದ ಆಗ್ನೇಯಾಭಿಮುಖವಾಗಿ ಅವೇ ಶಿಲೆಗಳ ಪರಿಶೋಧನೆ ನಡೆಸಿದ. ಅವುಗಳಿಗೆ ವೇಲ್ಸಿನ ಲ್ಯಾಟಿನ್ ಪದವಾದ ಕೇಂಬ್ರಿಯನ್ (ಕೇಂಬ್ರಿಯ) ಎಂಬ ಹೆಸರನ್ನು ಕೊಟ್ಟ. ಅಂದರೆ ಸೆಡ್ಜ್‍ವಿಕ್ ಆ ಶಿಲಾಸ್ತೋಮಗಳ ತಳದಿಂದ ಮೇಲಕ್ಕೂ ಮರ್ಚಿಸನ್ ಮೇಲ್ಬಾಗದಿಂದ ತಳಕ್ಕೂ ಪರಿಶೋಧಿಸಿದಂತಾಯಿತು. ಅವರಿಬ್ಬರೂ ಮಧ್ಯದಲ್ಲಿ ಸಂಧಿಸಲೇಬೇಕಲ್ಲವೇ? ಹಾಗಾಗಲಿಲ್ಲ. ಮರ್ಚಿಸನ್ ತಳದವರೆಗೆ ಮುಟ್ಟಿ ಶಿಲಾಸ್ತೋಮವೆಲ್ಲವನ್ನೂ ಸೈಲೂರಿಯನ್ನಿನಲ್ಲಿ ಸೇರಿಸಿದ. ಸೆಡ್ಜ್‍ವಿಕ್ ಆದರೋ ಕೇಂಬ್ರಿಯನ್ನನ್ನು ಈಗಿನ ಅರ್ಡೊವೀಶಿಯನ್ ತುದಿಯವರೆಗೂ ವಿಸ್ತರಿಸಿದ. ಇದರಿಂದ ಕೇಂಬ್ರಿಯನ್-ಸೈಲೂರಿಯನ್ ಸೀಮಾ ಸಮಸ್ಯೆ ಉಂಟಾಯಿತು.

ಆ ಮೊದಲು ವಿಲಿಯಮ್‍ಸ್ಮಿತ್ (1769-1839, ಇಂಗ್ಲಿಷ್ ಭೂವಿಜ್ಞಾನಿ) ಮಧ್ಯ ಜೀವಕಲ್ಪದ ಶಿಲಾಸ್ತೋಮಗಳನ್ನು ತನ್ನವೇ ಆದ ವಿಶಿಷ್ಟ ಜೀವ್ಯವಶೇಷಗಳಿಂದ ಕೂಡಿದ ಅನೇಕಾನೇಕ ಶಿಲಾಪಾದಗಳಾಗಿ ವಿಂಗಡಿಸಿದ್ದ. ಮರ್ಚಿಸನ್ ಪ್ರಾಗ್ಜೀವಕಲ್ಪದ ಪೂರ್ವಾರ್ಧ ಭಾಗದ ಶಿಲಾಸ್ತೋಮಗಳಾದ ಗ್ರೇವೇಕ್ ಶಿಲೆಗಳನ್ನು ಕೂಡ ವಿಶಿಷ್ಟ ಜೀವ್ಯವಶೇಷಗಳಿಂದ ಕೂಡಿದ ಶಿಲಾಪಾದಗಳಾಗಿ ವಿಂಗಡಿಸಬಹುದೆಂದು ರುಜುವಾತಿಸಿದ. ಅದೇ ಕಾಲದಲ್ಲಿ ಬೊಹಿಮಿಯಾ ಪ್ರಾಂತದ ಈ ಕಾಲಗಳ ಶಿಲಾಸ್ತೋಮಗಳನ್ನು ಬರಾಂಡೆ ಎಂಬಾತ ಪರಿಶೋಧಿಸಿ ಆ ಶಿಲೆಗಳಲ್ಲಿನ ಜೀವ್ಯವಶೇಷಗಳು ಒಂದೇ ಜೀವ ಪರಂಪರೆಗೆ ಸೇರಿದ ಮೂರು ನಿರ್ದಿಷ್ಟ ತಲೆಮಾರಿಗೆ ಸೇರಿದವು ಎಂಬುದನ್ನು ಕಂಡುಕೊಂಡ. ಬರಾಂಡೆ ಆ ಶಿಲಾಸ್ತೋಮವನ್ನು ಸೈಲೂರಿಯನ್ ಶಿಲಾಸ್ತೋಮಗಳೆಂದು ಕರೆದ. ತನ್ನ ಜೀವಮಾನವನ್ನೆಲ್ಲ ಪ್ರಾಗ್ಜೀವಯುಗದ ಪೂರ್ವಾರ್ಧ ಶಿಲಾಸ್ತೋಮಗಳ ಪರಿಶೋಧನೆಯಲ್ಲೇ ಕಳೆದ ಎಫ್. ಸ್ಮಿಟ್ ಕೇಂಬ್ರಿಯನ್ ಎಂಬುದು ಸೈಲೂರಿಯನ್ನಿನ ಒಂದು ಭಾಗ ಎಂಬ ನಿಲವನ್ನು ತಳೆದ.

ಕೇಂಬ್ರಿಯನ್-ಸೈಲೂರಿಯನ್ ಸೀಮಾ ವಿವಾದ ಸೆಡ್ಜ್‍ವಿಕ್ ಮತ್ತು ಮರ್ಚಿಸನ್ ಭೂವಿಜ್ಞಾನಿಗಳ ಜೀವಮಾನಕಾಲದಲ್ಲಿ ಬಗೆಹರಿಯಲಿಲ್ಲ. ಆದರೆ ಕೇಂಬ್ರಿಯನ್ ಎಂಬ ಪದವನ್ನು ಬರಾಂಡೆ ವಿವರಿಸಿದ. ಮೊದಲನೆಯ ತಲೆಮಾರಿನ ಜೀವ್ಯವಶೇಷಗಳನ್ನು ಒಳಗೊಂಡ ಶಿಲೆಗಳಿಗೆ ಮಾತ್ರ, ಅಂದರೆ ಟ್ರೆಮಾಡಿಕ್ ಶಿಲಾಪದರಗಳ ಅಂತ್ಯದವರೆಗೆ ಈ ಪದ ಅನ್ವಯವಾಗಬೇಕೆಂಬ ಸರ್ವಾನುಮತ ಮೂಡಿತ್ತು. 1879ರಲ್ಲಿ, ಲ್ಯಾಪ್‍ವರ್ತ್ ಎಂಬುವ ಒಂದು ರಾಜಿಸೂತ್ರವನ್ನು ಮುಂದಿಟ್ಟ. ಮರ್ಚಿಸನ್ ಆದಿ ಸೈಲೂರಿಯನ್ ಭಾಗದಲ್ಲಿ ಸೇರಿಸಿದ್ದ ಶಿಲಾಪದರಗಳನ್ನು (ಅದೇ ಶಿಲಾಪದರಗಳನ್ನು ಸೆಡ್ಜ್‍ವಿಕ್ ಅಂತ್ಯ ಕೇಂಬ್ರಿಯನ್ನಿನಲ್ಲಿ ಸೇರಿಸಿದ್ದ) ಮರ್ಚಿಸನ್ನನ ಸೈಲೂರಿಯನ್ನಿನಿಂದಲೂ ಸೆಡ್ಜ್‍ವಿಕ್ಕನ ಕೇಂಬ್ರಿಯನ್ನಿನಿಂದಲೂ ಬೇರ್ಪಡಿಸಿ ಅವುಗಳಿಗೆ ಅರ್ಡೋವೀಶಿಯನ್ ಎಂಬ ಹೆಸರನ್ನು ಕೊಟ್ಟರು.

ರೆನೆವೀರ್ ಎಂಬಾತ ಪ್ರಪಂಚ ವಿಜ್ಞಾನಿಗಳ ಸಮ್ಮೇಳನದಲ್ಲಿ 1897ರ ಈ ಶಿಲಾಸ್ತೋಮಗಳನ್ನೆಲ್ಲ ಸೈಲೂರಿಕ್ ಎಂದು ಕರೆದು ಇದನ್ನು ಮೂರು ಭಾಗಗಳಾಗಿ ವಿಭಾಗಿಸಿ ಅವುಗಳಿಗೆ ಅನುಕ್ರಮವಾಗಿ ಕೇಂಬ್ರಿಯನ್, ಅರ್ಡೊವೀಶಿಯನ್ ಮತ್ತು ಸೈಲೂರಿಯನ್ ಎಂದು ಹೆಸರಿಟ್ಟ. ಸೈಲೂರಿಕ್ ಎಂಬ ಪದವನ್ನು ಶಿಲಾಸ್ತೋಮವೆಲ್ಲಕ್ಕೂ ಸೈಲೂರಿಯನ್ ಎಂಬ ಪದವನ್ನು ಅದರ ಮೇಲ್ಬಾಗಕ್ಕೂ ಅನ್ವಯಿಸುವ ಈ ಸೂತ್ರಕ್ಕೆ ಮಾನ್ಯತೆ ದೊರೆಯಲಿಲ್ಲ. ಡಿ. ಲಪರೆಂಟ್ ಎಂಬಾತ ಪ್ರಾಗ್ಜೀವಕಲ್ಪದ ಪೂರ್ವಾರ್ಧ ಶಿಲಾಸ್ತೋಮಗಳನ್ನೆಲ್ಲ ಸೈಲೂರಿಯನ್ ಎಂದು ಕರೆದು ಅವುಗಳ ಮೂರು ಭಾಗಗಳನ್ನು ಅನುಕ್ರಮವಾಗಿ ಕೇಂಬ್ರಿಯನ್, ಅಡೊವೀಶಿಯನ್ ಮತ್ತು ಗೋತ್‍ಲ್ಯಾಂಡಿಯನ್ ಎಂದು ಕರೆದಿರುತ್ತಾನೆ.

ಸೈಲೂರಿಯನ್ ಯುಗದ ಅಂತ್ಯದಲ್ಲಿ ದೊಡ್ಡ ಪ್ರಳಯವಾಯಿತು. ಅದರ ಪರಿಣಾಮವಾಗಿ ಭೂಜಲಗಳ ಸ್ಥಳಾಂತರ, ಹೊಸ ಪರ್ವತಸ್ತೋಮಗಳ ಅವತರಣ ಮತ್ತು ಅಗಾಧ ಜ್ವಾಲಾಮುಖಿ ಕಾರ್ಯಾಚರಣೆಗಳು ನಡೆದವು. ಆ ಕಾಲದಲ್ಲಿ ಕೆಲಡೋನಿಯನ್ ಪರ್ವತಸ್ತೋಮಗಳ ಅವತರಣಿಕೆಯಾದ್ದರಿಂದ ಅದಕ್ಕೆ ಕೆಲಡೋನಿಯನ್ ಪ್ರಳಯವೆಂಬ ಹೆಸರು ಬಂದಿದೆ. ಕೆಲಡೋನಿಯನ್ ಪ್ರಳಯದಿಂದ ಭೂಮಿಯ ಛಾಯೆಯೇ ಬದಲಾಯಿಸಿತು. ಈ ಪ್ರಳಯ ಜೀವರಾಶಿಯ ಮೇಲೆ ವಿಶೇಷ ಪ್ರಭಾವ ಬೀರಿತು.

ಈ ಬದಲಾವಣೆಗಳಿಂದ ಭೂಮಿಯ ಮೇಲೆ, ಅನೇಕ ಚಿಕ್ಕಚಿಕ್ಕ ಮತ್ತು ಪರಸ್ಪರ ಬೇರ್ಪಟ್ಟ ಭೂಜಲಾಶಯಗಳು ಉಂಟಾದವು. ಭೂಮಿಯ ಮೇಲೆ ಮೊದಲ ಬಾರಿಗೆ ಸಸ್ಯಗಳು ಬೆಳೆಯತೊಡಗಿದವು. ಭೂ ಜಲಾಶಯಗಳನ್ನು ಮತ್ಸ್ಯ ಮತ್ತು ಕಪ್ಪೆಯ ಜಾತಿಗೆ ಸೇರಿದ ದ್ವಿಚರ ಪ್ರಾಣಿಗಳು ಆಕ್ರಮಿಸಿಕೊಂಡವು. ಹೀಗಾಗಿ ಭೂ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡು ಬೇರೆ ಬೇರೆ ರೀತಿಯ ಶಿಲಾಸಂಚಯನ ಪ್ರಾರಂಭವಾಯಿತು. ಕ್ರಮೇಣ ಭೂಮಿ ಟೆರಿಡೊಫೈಟ್ ಮತ್ತು ಟರಿಡೊಸ್ಟರ್ಮ್ ಜಾತಿಗಳಿಗೆ ಸೇರಿದ ದೊಡ್ಡ ದೊಡ್ಡ ಮರಗಳಿಂದ ಕೂಡಿದ ಕಾಡುಗಳನ್ನು ಹೊಂದಿ ಕಂಗೊಳಿಸಿತು. ಮುಂದೆ ಅವು ಜಲಸಮಾಧಿ ಹೊಂದಿ ಶಿಲಾನಿಕ್ಷೇಪಗಳಿಂದ ಮುಚ್ಚಲ್ಪಟ್ಟು ಕಲ್ಲಿದ್ದಲಾಗಿ ಮಾರ್ಪಟ್ಟಿತು. ಆ ಕಾಡುಗಳಲ್ಲಿ ದ್ವಿಚರ ಪ್ರಾಣಿಗಳು ಮತ್ತು ಹಲ್ಲಿ ಉರಗ ಜಾತಿಗಳಿಗೆ ಸೇರಿದ ಅನಿಯತ ತಾಪಿ ಪ್ರಾಣಿಗಳು ನಿಬಿಡವಾಗಿದ್ದವು.

ಪ್ರಾಗ್ಜೀವಯುಗದ ಉತ್ತರಾರ್ಧ ಶಿಲಾಸ್ತೋಮಗಳನ್ನು ಡೆವೋನಿಯನ್ ಕಾರ್ಬಾನಿಫೆರಸ್ ಮತ್ತು ಪರ್ಮಿಯನ್ ಎಂಬ ಮೂರು ಭಾಗಗಳಾಗಿ ವಿಭಾಗಿಸಿರುತ್ತಾರೆ. ಉತ್ತರ ಅಮೆರಿಕದಲ್ಲಿ ಆ ಶಿಲಾಸ್ತೋಮಗಳನ್ನು ಡೆವೋನಿಯನ್, ಮಿಸ್ಸಿಸಿಪಿಯನ್, ಪೆನ್ಸಿಲ್ವೇನಿಯನ್ ಮತ್ತು ಪರ್ಮಿಯನ್ ಎಂದು ನಾಲ್ಕು ಭಾಗಗಳಾಗಿ ವಿಭಾಗಿಸಿರುತ್ತಾರೆ. ಅಂದರೆ ಉ.ಅಮೆರಿಕದಲ್ಲಿ ಕಾರ್ಬಾನಿಫೆರಸ್ ಯುಗವನ್ನು ಎರಡು ಭಾಗಗಳಾಗಿ ವಿಭಾಗಿಸಿ ಮೊದಲನೆಯ ಭಾಗಕ್ಕೆ ಮಿಸ್ಸಿಸಿಪಿಯನ್ ಎಂದೂ ಎರಡನೆಯ ಭಾಗಕ್ಕೆ ಪೆನ್ಸಿಲ್ವೇನಿಯನ್ ಎಂದೂ ಕರೆದಿದ್ದಾರೆ. ಕೆಲವು ವಿಜ್ಞಾನಿಗಳು ಕಾರ್ಬಾನಿಫೆರಸ್ ಮತ್ತು ಪರ್ಮಿಯನ್ ಎರಡನ್ನೂ ಸೇರಿಸಿ ಪರ್ಮೊಕಾರ್ಬಾನಿಫೆರಸ್ ಎಂದು ಕರೆದಿರುವುದುಂಟು. (ಡಿ.ಆರ್.)