ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡವಾಳ

ವಿಕಿಸೋರ್ಸ್ದಿಂದ

ಬಂಡವಾಳ - ಈ ಪದಕ್ಕೆ ಅನೇಕ ಅರ್ಥಗಳಿವೆ. ಇವೆಲ್ಲವುಗಳಿಗೂ ಸಾಮಾನ್ಯವಾದ ಅಂಶವೊಂದುಂಟು: ಬಂಡವಾಳ ಒಂದು ದಾಸ್ತಾನು. ಇದಕ್ಕಿಂತ ಭಿನ್ನಪದವಾದ ವರಮಾನ ಎಂಬುದು ಹರಿವನ್ನು ಸೂಚಿಸುತ್ತದೆ. ಬಂಡವಾಳದಿಂದ ವರಮಾನ ಹರಿದು ಬರುತ್ತದೆ, ಅಥವಾ ವರಮಾನ ಹರಿವಿಗೆ ಬಂಡವಾಳವೇ ಮೂಲವಾಗುತ್ತದೆ. ಈ ಅರ್ಥದಲ್ಲಿ ಸಂಪತ್ತಿನ ಉತ್ಪಾದನೆಗೆ ಕಾರಕವಾದ ಭೂಮಿ (ನಿಸರ್ಗ) ಮತ್ತು ದುಡಿಮೆ ಇವುಗಳ ಸಾಲಿಗೆ ಬಂಡವಾಳವೂ ಸೇರಿಕೊಳ್ಳುತ್ತದೆ.

ಬಂಡವಾಳವೆನ್ನುವುದಕ್ಕೆ ಅರ್ಥಶಾಸ್ತ್ರ, ಹಣಕಾಸು ಹಾಗು ಲೆಕ್ಕಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವಾರು ವ್ಯಾಖ್ಯೆಗಳಿವೆ. ಹಣಕಾಸು ಮತ್ತು ಲೆಕ್ಕಶಾಸ್ತ್ರಗಳಲ್ಲಿ ಬಂಡವಾಳವೆಂದರೆ ಒಂದು ವ್ಯಾಪಾರ ಅಥವಾ ಉದ್ಯಮವನ್ನು ಪ್ರಾರಂಭಿಸಿಲು ಬೇಕಾದ ಆರ್ಥಿಕ ಸಂಪನ್ಮೂಲವಾಗಿದೆ. ಇಲ್ಲಿ ಭೌತಿಕ ಬಂಡವಾಳವನ್ನು ಹಣ ಅಥವಾ ಹಣಕಾಸಿನ ಬಂಡವಾಳದ ಮೂಲಕ ಪಡೆಯಬಹುದೆಂದು ನಂಬಲಾಗಿದೆ. ಆದುದರಿಂದ ಉತ್ಪಾದನಾಕಾರಕ ನಾಲ್ಕು ಅಂಶಗಳಲ್ಲಿ ಬಂಡವಾಳವೂ ಸಹ ಒಂದೆಂಬುದನ್ನು ಚಿಕ್ಕದಾಗಿ ನಿಜ ಬಂಡವಾಳ ಅಥವಾ ಬಂಡವಾಳ ವಸ್ತುಗಳು ಎಂದು ಕರೆಯುತ್ತಾರೆ.

ಪೂರ್ವದ ಸೈದ್ಧಾಂತಿಕ ಅರ್ಥಶಾಸ್ತ್ರದಲ್ಲಿ ಬಂಡವಾಳವು ಮುಖ್ಯ ಮೂಲ ಉತ್ಪಾದನಾಕಾರಕ ಘಟಕಗಳಲ್ಲಿ ಒಂದಾಗಿ ಉಳಿದೆರಡು ಘಟಕಗಳಾದ ಭೂಮಿ (ನಿವೇಶನ), ಮಾನವ ಸಂಪನ್ಮೂಲಗಳ ನಂತರ ಬರುತ್ತದೆ. ಕೆಳಗಿನ ಗುಣ ಲಕ್ಷಣಗಳನ್ನು ಹೊಂದಿರುವ ಸರಕು, ವಸ್ತುಗಳು ಬಂಡವಾಳವೆನ್ನಿಸಿಕೊಳ್ಳುತ್ತವೆ :

1). ಇತರ ಸರಕು, ವಸ್ತುಗಳನ್ನು ಉತ್ಪಾದಿಸಲು ಇದನ್ನು ಉಪಯೋಗಿಸಬಹುದು. (ಅದಕ್ಕೆ ಉತ್ಪಾದನಾಕಾರಕ ಘಟಕಗಳಲ್ಲಿ ಇದನ್ನು ಒಂದು ಆಗಿರುವುದು).

2). ಇದು ಮನುಷ್ಯ ನಿರ್ಮಿತವಾದುದು. ಭೂಮಿಯಂತಲ್ಲ. ಏಕೆಂದರೆ, ಅದು ಪ್ರಕೃತಿದತ್ತವಾಗಿ ದೊರಕುವಂತಹುದು ಜತೆಗೆ ಅದು ಭೌಗೋಲಿಕವಾಗಿ ಖನಿಜಗಳಂತೆ ಸಿಗುವಂತಹುದು.

3). ಕಚ್ಚಾವಸ್ತುಗಳಂತಾಗಲಿ ಅಥವಾ ಇತರ ಮಧ್ಯವರ್ತಿ ವಸ್ತುಗಳಂತಾಗಲಿ ಇದನ್ನು ನೇರವಾಗಿ ಉತ್ಪಾದನೆಯಲ್ಲಿ ಉಪಯೋಗಿಸಲು ಬರುವಂತಹದಲ್ಲ.

ಡೇವಿಡ್ ರಿಕಾರ್ಡೋ ಮೊದಲಾದ ಪೂರ್ವ ಸೈದ್ಧಾಂತಿಕ ಅರ್ಥಶಾಸ್ತ್ರಜ್ಞರುಗಳು ವ್ಯಾಖ್ಯಾನಿಸುವಂತೆ ಬಂಡವಾಳವನ್ನು ನಿಶ್ಚಿತ ಬಂಡವಾಳ(ಫಿಕ್ಸೆಡ್ ಕ್ಯಾಪಿಟಲ್) ವೆಂದು ಕರೆಯುವಾಗ ಅದರಲ್ಲಿ ಕಚ್ಚಾ ವಸ್ತುಗಳನ್ನು ಮತ್ತು ಬೇಕಾದ ಇತರ ಮಧ್ಯವರ್ತಿ ಸರಕುಗಳು ಮೊದಲಾದ ಚರ ಬಂಡವಾಳವನ್ನು(ಸಕ್ರ್ಯೂಲೇಟಿಂಗ್ ಕ್ಯಾಪಿಟಲ್) ಸೇರಿಸಿರುತ್ತಾರೆ. ಇವೆರಡೂ ಬಂಡವಾಳದ ಎರಡು ವರ್ಗಗಳಾಗಿವೆ.

ಕಾರ್ಲ್‍ಮಾಕ್ರ್ಸ್ ರವರು ತಮ್ಮ ಸಿದ್ಧಾಂತದಲ್ಲಿ, ಯಂತ್ರ ಸ್ಥಾವರ, ಯಂತ್ರ ಸಾಮಗ್ರಿಗಳು ಮೊದಲಾದ ಮನುಷ್ಯೇತರ ಉತ್ಪಾದಕ ವಸ್ತುಗಳಲ್ಲಿ ಹೂಡುವ ಬಂಡವಾಳವನ್ನು ನಿರಂತರ ಬಂಡವಾಳ( ಕಾನ್‍ಸ್ಟೆಂಟ್ ಕ್ಯಾಪಿಟಲ್) ಎಂದು ಕರೆಯುತ್ತಾರೆ. ಈ ಆರ್ಥಿಕ ಬಂಡವಾಳವು ನಿರ್ಬಂಧಗಳನ್ನು ಪ್ರತಿನಿಧಿಸುತ್ತದೆ. ಕಾನೂನು ಬದ್ಧ ಸಂಸ್ಥೆಗಳು ಮಾಲಿಕತ್ವ ಹೊಂದಿರುವ ಇದು ದ್ರವ್ಯತ್ವ ಗುಣ ಕಾಪಾಡಿಕೊಂಡು ವ್ಯಾಪಾರದಲ್ಲಿ ಉಪಯೋಗವಾಗುತ್ತದೆ.

ಭೂಮಿಯ ಒಡಲಿನಲ್ಲಿರುವ, ತಮ್ಮ ಜೀವನಕ್ಕಾಗಿ ಸಮಾಜದ ಅಂಗಗಳು ರಕ್ಷಿಸುವುದನ್ನು ಪ್ರಕೃತಿ ದತ್ತ ಬಂಡವಾಳ ಎನ್ನುತ್ತಾರೆ. ಉದಾಹರಣೆಗೆ, ಬಹುಪಯೋಗಿ ಹರಿಯುವ ನದಿ ನೀರು.

ಬಹುಜನೋಪಯೋಗಿ ಅಡಿಗಟ್ಟು ಬಂಡವಾಳ (ಇನ್‍ಫ್ರಾಸ್ಟಕ್ಷರಲ್ ಕ್ಯಾಪಿಟಲ್)ವು ಪ್ರಕೃತಿಯೇತರ ನೆರವಿನ ವ್ಯವಸ್ಥೆಯಾಗಿದೆ (ಉದಾ: ವಸ್ತ್ರಗಳು, ವಸತಿ, ರಸ್ತೆ ಸಾರಿಗೆ ಇತ್ಯಾದಿ). ಇದು ಒಂದು ರೀತಿಯಲ್ಲಿ ಹಳೆಯ ಪ್ರಯೋಗವಾದ ತಯಾರಿಕಾ ಬಂಡವಾಳವೆನ್ನಬಹುದು. ಇದರಲ್ಲಿ ಹೆಚ್ಚಳ / ಸವಕಳಿಗಳಿದ್ದರೂ ನಿಸರ್ಗದ ಸಂಪತ್ತು ಇದರಿಂದ ಕಡಿಮೆಯಾಗುತ್ತದೆ. ಮಾನವ ಸಂಪನ್ಮೂಲ ಬಂಡವಾಳ ಇಂದು ವಿಶಿಷ್ಟ ರೀತಿಯಲ್ಲಿ ಜಗತ್ತಿನಲ್ಲಿ ಬಹು ವ್ಯಾಪಕವಾಗಿದೆ. ಮಾನವ ಸಂಪನ್ಮೂಲ ವಿಕಾಸವು ವಿದ್ಯುನ್ಮಾನ ಹಾಗು ಕಂಪ್ಯೂಟರ್ ಜಗತ್ತಿನಲ್ಲಿ ಹೆಚ್ಚಿದ್ದು ಇಲ್ಲಿ ಬೇಕಾಗಿರುವ ಮಾನವ ಬಂಡವಾಳವು ಮೇಲ್ತರಗತಿಯದಾಗಿದೆ. ಇದರಲ್ಲಿನ ಹೂಡಿಕೆಯು ಬಹಳ ಲೆಕ್ಕಾಚಾರದಲ್ಲಿ, ವಿಶ್ಲೇಷಣಾತ್ಮಕ ವಾಗಿ ಮಾಡುವಂತಹುದಾಗಿದೆ. ಸಾಮಾಜಿಕ ಬಂಡವಾಳವೆಂಬುದು ವಿಶ್ವಾಸಾರ್ಹವಾದ ವ್ಯಕ್ತಿ ಮತ್ತು ಆರ್ಥಿಕ ಸ್ಥಿತಿಯ ನಡುವಣ ಸಂಬಂಧ ವಾಗಿದೆ. ವ್ಯಕ್ತಿಗತ ಬಂಡವಾಳವು ವೈಯಕ್ತಿಕವಾಗಿದ್ದು ಸಮಾಜದಿಂದ ರಕ್ಷಿತವಾಗಿದ್ದು ನಂಬಿಕೆ ಅಥವಾ ಹಣಕ್ಕಾಗಿ ವ್ಯಾಪಾರ ಮಾಡುವುದಾಗಿದೆ. ಪ್ರತಿಭೆ, ಜಾಣ್ಮೆ, ಮುಂದಾಳುತ್ವ, ಪ್ರಶಿಕ್ಷಣದ ಜ್ಞಾನ ಇವೆಲ್ಲವುಗಳನ್ನು ಬರಿಯ ದುಡಿಯುವ ಶಕ್ತಿಯ ಕೆಲಸಗಾರರೆನ್ನುವ ಹಳೆಯ ಸಿದ್ಧಾಂತವು ಇಂದಿಗೆ ಅಷ್ಟು ಸಮಂಜಸವಲ್ಲ. ಕೇವಲ ವೇತನ ದಿಂದ ಇವುಗಳನ್ನು ಅಳೆಯುವುದು ಹಳೆಯ ರೀತಿಯಾಯಿತು. ಆದರೆ ಇದಕ್ಕೆ ಹೂಡಿಕೆಯ ಪ್ರಶ್ನೆ ಬಂದಾಗ ಇದಿಷ್ಟೇ ಮಾತ್ರ ಗಮನಿಸದೆ ಮೇಲೆಹೇಳಿದವುಗಳೆಲ್ಲವನ್ನು ಗಮನದಲ್ಲಿಡಬೇಕು. ಈ ಕೆಳಗಿನವುಗಳೆಲ್ಲಾ ಇಂದು ಬಂಡವಾಳದ ಒಂದು ರೂಪುರೇಷೆಯಾಗಿ ಪರಿಶೀಲಿಸಿ, ಬಂಡವಾಳದಲ್ಲಿ ಹೂಡಿಕೆಮಾಡುವಾಗ ಕೂಲಂಕುಷವಾಗಿ ಚರ್ಚಿಸಲಾಗುತ್ತದೆ.

1) ವ್ಯಾಪಾರ ಬಂಡವಾಳ (ಬುಸಿನೆಸ್ ಕ್ಯಾಪಿಟಲ್), ಸಾಹಸೋದ್ಯಮ ಬಂಡವಾಳ (ವೆನ್‍ಚರ್ ಕ್ಯಾಪಿಟಲ್), ನಿಶ್ಚಿತ ಕ್ಯಾಪಿಟಲ್), ದುಡಿಮೆಯ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್), ಬೌದ್ಧಿಕದ ಬಂಡವಾಳ, ಪ್ರಕೃತಿದತ್ತ ಮತ್ತು ಸಾಮಾಜಿಕ ಬಂಡವಾಳ, ಮಾನವ ಸಂಪನ್ಮೂಲ ಬಂಡವಾಳ (ಹ್ಯೂಮನ್ ಬಂಡವಾಳ), ಅಡಿಗಟ್ಟಿನ ಬಂಡವಾಳ), ತಯಾರಿಕಾ ಕ್ಯಾಪಿಟಲ್), ಚರ ಬಂಡವಾಳ (ಸರ್ಕುಲೇಟಿಂಗ್ ಬಂಡವಾಳ), ಬಂಡವಾಳ ಹೂಡಿಕೆ ಮತ್ತು ಷೇರು ಬಂಡವಾಳ.

ಸ್ಥೂಲವಾಗಿ ಹೇಳುವುದಾದರೆ ಯಾವುದೇ ಕ್ಷಣದಲ್ಲಿ ಅಸ್ತಿತ್ವದಲ್ಲಿದ್ದು, ಆರ್ಥಿಕ ಪ್ರಾಮುಖ್ಯವಿರುವ ಅಂಶಗಳ ಮೊತ್ತವೇ ಬಂಡವಾಳ. ಆರ್ಥಿಕವಾಗಿ ಪ್ರಾಮುಖ್ಯವುಳ್ಳದ್ದು ಯಾವುದು ಎಂಬುದರ ವ್ಯಾಖ್ಯೆಗೆ ಅನುಗುಣವಾಗಿ ಬಂಡವಾಳವನ್ನು ಕುರಿತ ನಾನಾ ಪರಿಕಲ್ಪನೆಗಳೂ ವ್ಯಾಖ್ಯೆಗಳೂ ವ್ಯತ್ಯಾಸವಾಗುತ್ತವೆ. ಬಂಡವಾಳ ಪದ ಅದರ ವಿಶಾಲ ಅರ್ಥದಲ್ಲಿ ವ್ಯಕ್ತಿಗಳ ಸಂಖ್ಯೆ, ಬುದ್ಧಿಕೌಶಲ ಸಾಮಥ್ರ್ಯ, ಶಿಕ್ಷಣ ಮುಂತಾದ ಅಭೌತ ಅಂಶಗಳು, ಭೂಮಿ ಕಟ್ಟಡ ಯಂತ್ರ ಸಲಕರಣೆ ಮುಂತಾದ ಭೌತ ಅಂಶಗಳು, ಉದ್ಯಮಗಳಲ್ಲೂ ಮನೆಗಳಲ್ಲೂ ಇರುವ ಸಿದ್ಧ ಅರೆಸಿದ್ಧ ಮುಂತಾದ ಎಲ್ಲ ಬಗೆಯ ಸರಕುಗಳು ಇವೆಲ್ಲವನ್ನೂ ಒಳಗೊಂಡಿದೆ.

ಅರ್ಥಶಾಸ್ತ್ರದಲ್ಲಿ ಬಂಡವಾಳವನ್ನು ಒಂದು ಉತ್ಪಾದನಕಾರಕವಾಗಿ ಪರಿಗಣಿಸುವುದು ರೂಢಿಗೆ ಬಂದಿದೆ. ಬಂಡವಾಳವೆಂಬುದು ಮಾನವನ ಸಂಪತ್ತು. ಆತನ ಒಡೆತನದಲ್ಲಿರುವ ಭೂಮಿಯಿಂದ ಹೊರತಾಗಿ ವರಮಾನ ಸಂಪಾದಿಸುವ ಎಲ್ಲ ಸಂಪತ್ತೂ ಬಂಡವಾಳವೆಂದು ಕೆಲವು ಅರ್ಥಶಾಸ್ತ್ರಜ್ಞರು ವ್ಯಾಖ್ಯಿಸುತ್ತಾರೆ. ಆದರೆ ಈ ವ್ಯಾಖ್ಯೆ ಸಂಪೂರ್ಣ ಸಮರ್ಪಕವಲ್ಲ. ಹಣವೂ ಸಂಪತ್ತಿನ ಒಂದು ರೂಪ. ಇದನ್ನು ಸಾಲವಾಗಿ ನೀಡಿದರೆ ಇದರಿಂದ ವರಮಾನ ಪ್ರಾಪ್ತವಾಗುತ್ತದೆ. ಆದರೆ ಅರ್ಥಶಾಸ್ತ್ರದ ದೃಷ್ಟಿಯಿಂದ ಹಣವೇ ಬಂಡವಾಳವಾಗದು. ಇದರಿಂದ ಯಂತ್ರ, ಕಚ್ಚಾ ಸಾಮಗ್ರಿ ಮುಂತಾದುವನ್ನು ಕೊಂಡರೆ ಆಗ ಇದು ಅರ್ಥಶಾಸ್ತ್ರದ ದೃಷ್ಟಿಯಿಂದ ಬಂಡವಾಳವಾಗುತ್ತದೆ. ಸಂಪತ್ತೇ ಬಂಡವಾಳ. ಇದು ನಿಸರ್ಗದತ್ತ ಸಂಪತ್ತಲ್ಲ. ಮಾನವಕೃತ. ಅರ್ಥಶಾಸ್ತ್ರದಲ್ಲಿ ಬಂಡವಾಳಕ್ಕೆ ಈ ಅರ್ಥವಿದೆ.

ಅರ್ಥಶಾಸ್ತ್ರವೇ ಅಲ್ಲದೆ ವ್ಯವಹಾರದಲ್ಲೂ ಬಂಡವಾಳ ಎಂಬ ಪದದ ಬಳಕೆ ಕಾಣಬಹುದು. ಯಾವುದೇ ಸಂಸ್ಥೆಯ ಆಸ್ತಿ-ಹೊಣೆ ತಃಖ್ತೆಯಲ್ಲಿ ಬಂಡವಾಳವೂ ಒಂದು ಮುಖ್ಯ ಬಾಬ್ತು. ಹೊಣೆಯ ಪಾಶ್ರ್ವದಲ್ಲಿ, ಸಂಸ್ಥೆ ಪಾವತಿಮಾಡಬೇಕಾದ ನಾನಾ ಹೊಣೆಗಳ ಜೊತೆಗೆ ಆ ಸಂಸ್ಥೆಯ ಬಂಡವಾಳದ ಉಲ್ಲೇಖವೂ ಸಾಮಾನ್ಯವಾಗಿ ಇರುತ್ತದೆ. ಇದಕ್ಕೆ ಆ ವರ್ಷದ ಲಾಭವನ್ನು ಕೂಡಿಸಿರುವುದುಂಟು, ಅಥವಾ ಅದನ್ನು ಪ್ರತ್ಯೇಕವಾಗಿ ತೋರಿಸಿರುವುದುಂಟು. ಆಯ-ವ್ಯಯ ತಃಖ್ತೆಯ ಇನ್ನೊಂದು ಬದಿಯಲ್ಲಿ ಆಸ್ತಿಗಳನ್ನು ತೋರಿಸಲಾಗಿರುತ್ತದೆ. ಇಲ್ಲಿ ಸಂಸ್ಥೆಯ ಬಂಡವಾಳವೆಂದರೆ ಅರ್ಥಶಾಸ್ತ್ರದ ಬಂಡವಾಳವಲ್ಲ. ಅರ್ಥಶಾಸ್ತ್ರದ ಪ್ರಕಾರ ಬಂಡವಾಳವೆಂದರೆ ಹಿಂದೆಯೇ ಉತ್ಪಾದಿತವಾದ ಮುಂದಣ ಉತ್ಪಾದನೆಗೆ ಬಳಸಲಾದ ಎಲ್ಲ ಸಂಪತ್ತು. ಉದ್ಯಮಿಯ ಹಾಗೂ ಲೆಕ್ಕಿಗನ ದೃಷ್ಟಿಯಲ್ಲಿ ಬಂಡವಾಳವೆಂದರೆ ಹೂಡಲಾಗಿರುವ ಹಣ. ಈ ಹಣ ನಾನಾ ಆಸ್ತಿಗಳ ರೂಪ ತಳೆದಿರಬಹುದು.

ಅರ್ಥಶಾಸ್ತ್ರ ಹಾಗೂ ಲೆಕ್ಕಶಾಸ್ತ್ರಗಳ ದೃಷ್ಟಿಗಳನ್ನು ಇನ್ನಷ್ಟು ಆಳವಾಗಿ ಪರಿಶೀಲಿಸಿದಾಗ ಇವೆರಡೂ ದೃಷ್ಟಿಗಳಲ್ಲಿ ಮೂಲತಃ ಹೆಚ್ಚಿನ ವ್ಯತ್ಯಾಸವೇನೂ ಇಲ್ಲವೆನಿಸುತ್ತದೆ. ಒಂದು ಸಂಸ್ಥೆಯ ಆಸ್ತಿಗಳ ಮೊತ್ತದಿಂದ ಅದು ಕೊಡಬೇಕಾದ ಸಾಲಗಳನ್ನು ಕಳೆದು ಲಾಭವನ್ನೂ ತೆಗೆದಾಗ ಉಳಿಯುವುದು ಬಂಡವಾಳ. ವಾಸ್ತವವಾಗಿ ಇದು ನಿವ್ವಳ ಆಸ್ತಿ. ಸಂಸ್ಥೆಯ ಸಂಪತ್ತಿನ ಉತ್ಪಾದನೆಗೆ ಕಾರಣವಾದ್ದು ಇದೇ. ಒಂದು ಅರ್ಥ ವ್ಯವಸ್ಥೆಯ ಎಲ್ಲ ಸಂಸ್ಥೆಯ ಸಂಪತ್ತಿನ ಉತ್ಪಾದನೆಗೆ ಕಾರಣವಾದ್ದು ಇದೇ. ಒಂದು ಅರ್ಥ ವ್ಯವಸ್ಥೆಯ ಎಲ್ಲ ಸಂಸ್ಥೆಗಳ ಎಲ್ಲ ಆಸ್ತಿ ಹೊಣೆ ತಃಖ್ತೆಗಳನ್ನೂ ಒಂದುಗೂಡಿಸಿ ಒಂದೇ ತಃಖ್ತೆಯನ್ನು ತಯಾರಿಸಿದ್ದೇ ಆದರೆ ಎಲ್ಲ ಋಣಗಳೂ ಪರಸ್ಪರ ವಜಾ ಆಗಿಬಿಡುತ್ತವೆ. ಏಕೆಂದರೆ ಒಂದು ಸಂಸ್ಥೆಯ ದೃಷ್ಟಿಯಿಂದ ದೇಯವಾದ್ದು ಇನ್ನೊಂದು ಸಂಸ್ಥೆಗೆ ಅಥವಾ ಹಲವು ಸಂಸ್ಥೆಗಳಿಗೆ ಬರಬೇಕಾದ್ದಾಗಿರುತ್ತದೆ. ಕೊನೆಗೆ ಉಳಿಯುವುದು ಇಷ್ಟೇ: ಸಮಾಜದ ಎಲ್ಲ ನೈಜ ಆಸ್ತಿಗಳು ಒಂದು ಕಡೆ, ಅವುಗಳ ಒಟ್ಟು ನಿವ್ವಳ ಮೌಲ್ಯ ಇನ್ನೊಂದು ಕಡೆ. ಅರ್ಥಶಾಸ್ತ್ರಜ್ಞನ ಪರಿಕಲ್ಪನೆಯ ಪ್ರಕಾರ ಇದೇ ಬಂಡವಾಳ.

ಅರ್ಥಶಾಸ್ತ್ರಜ್ಞನ ಹಾಗೂ ಲೆಕ್ಕಿಗನ ದೃಷ್ಟಿಕೋನಗಳನ್ನು ಈ ರೀತಿ ಸಮನ್ವಯಗೊಳಿಸಬಹುದಾದರೂ ಇದನ್ನು ಕುರಿತಂತೆ ಸರ್ವಜನ ಸ್ವೀಕಾರಾರ್ಹ ವ್ಯಾಖ್ಯಾಯನ್ನೇನೂ ರೂಪಿಸಿದಂತಾಗುವುದಿಲ್ಲ. ಆಯಾ ಅವಶ್ಯಕತೆಗಳಿಗೆ ತಕ್ಕಂತೆ ಬಂಡವಾಳದ ಪರಿಕಲ್ಪನೆಯನ್ನು ಹಿಗ್ಗಿಸುವ ಅಥವಾ ಕುಗ್ಗಿಸುವ ಪ್ರಯತ್ನ ನಡೆದಿದೆ. ಉದ್ಯಮ ಸಂಸ್ಥೆಗಳ ವಶದಲ್ಲಿರುವ ಸರಕುಗಳದು ಒಂದು ಗುಂಪಾದರೆ, ಕುಟುಂಬಗಳ ವಶದಲ್ಲಿರುವ ಸರಕುಗಳದು ಇನ್ನೊಂದು ಗುಂಪು. ಮೊದಲನೆಯದನ್ನು ಮಾತ್ರ ಬಂಡವಾಳವೆಂದು ಪರಿಗಣಿಸುವ ಪರಿಪಾಟ ಬೆಳೆದಿದೆ. ಉತ್ಪಾದಿತವಾದ ಸರಕುಗಳು ಮತ್ತು ನಿಸರ್ಗದಿಂದ ಬಳುವಳಿಯಾಗಿ ಬಂದ ಸರಕುಗಳು ಇವುಗಳ ಪೈಕಿ ಮೊದಲನೆಯವನ್ನು ಮಾತ್ರ ಬಂಡವಾಳವೆಂದು ಪರಿಗಣಿಸುವ ಪ್ರಯತ್ನವೂ ನಡೆದಿದೆ. ಆದರೆ ಅನೇಕ ವೇಳೆ ಈ ರೀತಿಯ ವ್ಯತ್ಯಾಸಕಲ್ಪನೆ ಕಷ್ಟವಾಗುತ್ತದೆ. ವ್ಯಕ್ತಿಗಳ ಮೊತ್ತವನ್ನು ಬಂಡವಾಳದಿಂದ ಪ್ರತ್ಯೇಕಿಸಿ ವ್ಯಕ್ತಿತರ ವಸ್ತುಗಳನ್ನು ಮಾತ್ರ ಬಂಡವಾಳವೆಂದು ಭಾವಿಸುವುದೂ ರೂಢಿ. ಸ್ವತಂತ್ರ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ದೇಹ ಶಕ್ತಿ ಬುದ್ಧಿ ಶಕ್ತಿ ಮೊದಲಾದವು ಅವನ ಸ್ವಂತ ಸ್ವತ್ತುಗಳು. ಇವನ್ನು ಲೆಕ್ಕದಲ್ಲಿ ಬರೆದಿಡಲಾಗದು. ಸಂಪತ್ತಿನ ಉತ್ಪಾದನೆಯಲ್ಲಿ ಭೂಮಿ (ನಿಸರ್ಗ) ಹಾಗೂ ದುಡಿಮೆ ಇವು ಎರಸು ಸ್ವತಂತ್ರ ಕಾರಕಗಳೆಂಬುದನ್ನು ಹಿಂದೆಯೇ ಹೇಳಿದೆ. ಆದರೆ ವ್ಯಾಪಕವಾಗಿ ನೋಡಿದಾಗ ಇಡೀ ಸಮಾಜದ ಬಂಡವಾಳದಲ್ಲಿ ಮಾನಬಲವೂ ಸೇರುತ್ತದೆ. ಆರ್ಥಿಕ ದೃಷ್ಟಿಯಿಂದ ಕೆಲವು ಸಂದರ್ಭಗಳಲ್ಲಿ ವ್ಯಕ್ತಿಗಳು ಕೂಡ ಬಂಡವಾಳದಲ್ಲಿ ಸೇರಿ ಹೋಗಬಹುದು. ಉದಾಹರಣೆಗೆ ಗುಲಾಮಪದ್ಧತಿ ಇರುವ ಸಮಾಜದಲ್ಲಿ ಯಂತ್ರ ಪಶು ಮೊದಲಾದವುಗಳಂತೆ ವ್ಯಕ್ತಿಗಳೂ ಬಂಡವಾಳವಾಗುತ್ತಾರೆ. ಅವರನ್ನೂ ಕೊಳ್ಳಬಹುದು ಅಥವಾ ಮಾರಬಹುದು.

ಬಂಡವಾಳವನ್ನು ನಾನಾ ಬಗೆಯಾಗಿ ವಿಂಗಡಿಸಬಹುದು. ಇದು ಕೂಡ ಅವಶಕತೆಗೆ ತಕ್ಕಂತೆ ಮಾಡಲಾಗಿರುವ ವಿಂಗಡಣೆ. ಬಂಡವಾಳ ಆವರ್ತವಾಗಿರಬಹುದು. ಇಲ್ಲವೇ ಸ್ಥಿರವಾಗಿರಬಹುದು. ತಯಾರಿಕೆಯ ಪ್ರಕ್ರಿಯೆಯಲ್ಲಿರುವ ಸರಕು, ಕಚ್ಚಾ ಸಾಮಗ್ರಿ, ಸಿದ್ಧ ಸರಕುಗಳು ಇವು ಆವರ್ತ ಬಂಡವಾಳದ ಉದಾಹರಣೆಗಳು. ಇವುಗಳ ರೂಪಗಳು ಪರಿವರ್ತನೆ ಹೊಂಬಹುದು-ಉದಾಹರಣೆಗೆ ಗೋದಿಯಿಂದ ಹಿಟ್ಟು ಅಥವಾ ಇವುಗಳ ಒಡೆತನದಲ್ಲಿ ಬದಲಾವಣೆ ಆಗಬಹುದು-ಉದಾಹರಣೆಗೆ ಸರಕಿನ ಮಾರಾಟ. ಕಟ್ಟಡ, ಯಂತ್ರ ಮುಂತಾದವು ಸ್ಥಿರ ಬಂಡವಾಳ. ಉತ್ಪಾದನೆಯ ಪ್ರಕ್ರಿಯೆಯಲ್ಲಿ ರೂಪಪರಿವರ್ತನೆ ಹೊಂದದಿರುವಂಥದು. ಸ್ಥಿರ ಬಂಡವಾಳ ಆವರ್ತ ಬಂಡವಾಳವನ್ನು ದುಡಿಯುವ ಬಂಡವಾಳವೆಂದೂ ಕರೆಯುವುದಿದೆ. ಬಾಳಿಕೆ ಬರುವ ಉತ್ಪಾದಕ ಸರಕುಗಳು ಸ್ಥಿರಬಂಡವಾಳ. ಒಂದು ಸಾರಿ ಮಾತ್ರ ಉತ್ಪಾದನೆಯಲ್ಲಿ ಬಳಸಬಹುದಾದ್ದು ದುಡಿಯುವ ಬಂಡವಾಳ.

ನಿಸರ್ಗದಿಂದ ಉತ್ಪಾದಿಸಲಾಗಿದ್ದು ಮತ್ತೆ ಉತ್ಪಾದನೆಯಲ್ಲಿ ತೊಡಗಿಸಲಾದ ಸಂಪತ್ತೇ ಬಂಡವಾಳವಾದ್ದರಿಂದ ಭೂಮಿಯನ್ನು ಅರ್ಥಶಾಸ್ತ್ರದಲ್ಲಿ ಬಂಡವಾಳವೆಂದು ಪರಿಗಣಿಸುವುದಿಲ್ಲ. ಏಕೆಂದರೆ ಅದು ಮಾನವ ಸೃಷ್ಟಿಯಲ್ಲ, ನಿಸರ್ಗದ ಕೊಡುಗೆ. ಭೂಮಿಗೂ ಬಂಡವಾಳಕ್ಕೂ ಇನ್ನೂ ಕೆಲವು ವ್ಯತ್ಯಾಸಗಳನ್ನು ಅರ್ಥಶಾಸ್ತ್ರಜ್ಞರು ಗುರುತಿಸಿದ್ದಾರೆ. ಬಂಡವಾಳ ನಶ್ವರವಾದರೆ ಭೂಮಿ ಅನಶ್ವರ, ಶಾಶ್ವತ, ಬಂಡವಾಳವನ್ನು ಹೆಚ್ಚಿಸುವುದು ಸಾಧ್ಯ. ಬೆಳೆಯುತ್ತಿರುವ ಅರ್ಥ ವ್ಯವಸ್ಥೆಯಲ್ಲಿ ಬಂಡವಾಳದ ದಾಸ್ತಾನು ಸತತವಾಗಿ ವರ್ಧಿಸುತ್ತಿರುತ್ತದೆ. ಆದರೆ ಭೂಮಿಯ ಪರಿಮಾಣ ಸ್ಥಿರ ಹಾಗೂ ಸೀಮಿತ. ಬಂಡವಾಳ ಗತಿಶೀಲ. ಭೂಮಿಗೆ ಈ ಗುಣವಿಲ್ಲ. ಬಂಡವಾಳದ ಮೇಲಣ ವರಮಾನ ಎಲ್ಲೆಡೆಯಲ್ಲೂ ಸಮವಾಗಿರುತ್ತದೆ. ಆದರೆ ಭೂಮಿಯ ಗೇಣಿ ಪ್ರಾದೇಶಿಕವಾಗಿ ವ್ಯತ್ಯಾಸವಾಗುತ್ತದೆ.

ಆದರೆ ಈ ವ್ಯತ್ಯಾಸಗಳನ್ನು ತುಂಬ ದೂರ ಬೆಳೆಸಿಕೊಂಡು ಹೋಗುವುದು ಸರಿಯಲ್ಲ. ಅನೇಕ ವೇಳೆ ಈ ವ್ಯತ್ಯಾಸಗಳೇ ಕೃತಕವೆನಿಸಬಹುದು. ಪ್ರತ್ಯೇಕತೆಯ ಗೆರೆ ಬಹಳ ತೆಳುವಾಗಿ ಅದೃಶ್ಯವಾಗಲೂಬಹುದು. ಭೂಮಿ ನಿಸರ್ಗದತ್ತವಾದ್ದರಿಂದ ಅದನ್ನು ಬಂಡವಾಳ ಎಂದು ಸದಾ ಸಾಧಿಸುವುದಕ್ಕಾಗುವುದಿಲ್ಲ. ಆರ್ಥಿಕವಾಗಿ ಅನುತ್ಪಾದಕವೆನಿಸಿದ್ದ ಭೂಮಿಯನ್ನು ಮಾನವ ಅಭಿವೃದ್ಧಿ ಉತ್ಪಾದಕವಾಗಿ ಮಾಡಿದ್ದಾನೆ. ಮರುಭೂಮಿಗಳು ಕೃಷಿ ಕ್ಷೇತ್ರಗಳಾಗಿ ಪರಿವರ್ತನೆಗೊಂಡಿವೆ. ಇವು ನಿಸರ್ಗದ ಕೊಡುಗೆಗಳಲ್ಲ, ಮಾನವ ದುಡಿಮೆಯ ಫಲ. ಈ ಕಾರಣದಿಂದ ಇಂಥ ಭೂಮಿಯೂ ಬಂಡವಾಳವೆಂದೇ ಪರಿಗಣಿತವಾಗಬಹುದು. ಭೂಮಿ ಅನಶ್ವರ ಎನ್ನೂವುದೂ ಒಂದು ಅರ್ಥದಲ್ಲಿ ಸುಳ್ಳೆನಿಸಬಹುದು. ಅದರ ಸಾರ ಕಳೆದುಹೋಗಬಹುದು. ಅದರ ಫಲವಂತಿಕೆಯ ಗುಣವನ್ನು ದುರ್ಲಕ್ಷಿಸಿ ಮಾಡಿದ ಬೇಸಾಯದಿಂದ ಅದು ಬಂಜರು ನೆಲವಾಗಬಹುದು. ಆಗ ಆರ್ಥಿಕವಾಗಿ ಅದು ನಾಶ ಹೊಂದಿದಂತೆಯೇ.

ಬಂಡವಾಳ ಬೆಳೆಯಬಹುದು: ಆದರೆ ನೆಲವನ್ನು ಹಿಗ್ಗಿಸುವುದಕ್ಕಾಗುವುದಿಲ್ಲ ಎಂಬ ಮಾತೂ ನಿಜವಲ್ಲವೆಂದು ವಾದಿಸಬಹುದು. ನೆಲದ ವಿಸ್ತೀರ್ಣವನ್ನು ಹೆಚ್ಚಿಸುವುದಾಗದಿರಬಹುದು ಅದರ ಉತ್ಪಾದಕತೆಯನ್ನು ಹೆಚ್ಚಿಸುವುದರಿಂದ ವಿಸ್ತೀರ್ಣವನ್ನು ಹೆಚ್ಚಿಸಿದ ಪರಿಣಾಮವೇ ಆಗುತ್ತದೆ. ನೆಲ ಗತಿಶೀಲವಲ್ಲ. ಆದರೆ ಅದರ ಉತ್ಪನ್ನಗಳನ್ನು ಸಾಗಿಸಬಹುದು. ಇದರಿಂದ ಅಗತ್ಯವಿದ್ದಲ್ಲಿಯೇ ನೆಲದ ಫಲ ಪಡೆದಂತೆ. ಆದ್ದರಿಂದ ಭೂಮಿ ಮತ್ತು ಬಂಡವಾಳ ಇವುಗಳ ವ್ಯತ್ಯಾಸಕಲ್ಪನೆ ಯಾವಾಗಲೂ ತರ್ಕಬದ್ಧವೆನಿಸುವುದಿಲ್ಲ. ಈ ವ್ಯತ್ಯಾಸ ಗುಣಾತ್ಮಕವಲ್ಲ, ತರತಮ ಸಂಬಂಧಿಯಾದ್ದು. ವ್ಯಕ್ತಿಗತ ದೃಷ್ಟಿಯಿಂದ ಭೂಮಿಯನ್ನು ಬಂಡವಾಳವೆಂದು ಪರಿಗಣಿಸುವುದು ಹೆಚ್ಚು ತರ್ಕಸಮ್ಮತವಾಗುತ್ತದೆ.

ಹೀಗೆಂದು ಬಂಡವಾಳ ಭೂಮಿ ಎರಡೂ ಒಂದೇ ಎಂದೂ ತೀರ್ಮಾನ ನುಡಿಯುವುದು ಸಲ್ಲ. ಭೂಮಿಯ ವೈಚಿತ್ರ್ಯ ವೈಶಿಷ್ಟ್ಯಗಳನ್ನು ಉತ್ಪ್ರೇಕ್ಷಿಸುವುದು ಸಾಧ್ಯವಾದಾಗ್ಯೂ ಭೂಮಿಯೂ ಬಂಡವಾಳವೂ ಒಂದೇ ಅಲ್ಲವೆಂಬ ಅಂಶವಂತೂ ಉಳಿದೇ ಉಳಿಯುತ್ತದೆ. ಬಂಡವಾಳವನ್ನು ಭೂಮಿಯಿಂದ ಪ್ರತ್ಯೇಕವಾದ ಉತ್ಪಾದನಕಾರಕವೆಂದು ಸ್ವೀಕರಿಸುವುದು ಅಗತ್ಯ.

ಆಧುನಿಕ ಉತ್ಪಾದನ ವ್ಯವಸ್ಥೆಯಲ್ಲಿ ಬಂಡವಾಳದ ಪಾತ್ರ ಮಹತ್ತ್ವದ್ದು. ಬಂಡವಾಳವಿಲ್ಲದೆ ಉತ್ಪಾದನೆಯನ್ನು ಊಹಿಸುವುದು ಸಾಧ್ಯವಿಲ್ಲ. ನಿಸರ್ಗದಲ್ಲಿ ಲಭ್ಯವಿರುವ ವಸ್ತುಗಳನ್ನು ಪಡೆಯುವುದಕ್ಕೂ ಬಂಡವಾಳಬೇಕು. ಗಣಿಗಾರಿಕೆ, ಕೃಷಿ, ಅರಣ್ಯಗಾರಿಕೆ, ಮೀನಿಗಾರಿಕೆ ಎಲ್ಲಕ್ಕೂ ಉಪಕರಣಗಳು ಅಗತ್ಯ. ಇವೆಲ್ಲ ಬಂಡವಾಳವೇ. ಅತ್ಯಂತ ಅದಿಮ ಸಮಾಜಗಳಲ್ಲೂ ಬಂಡವಾಳ ಅಗತ್ಯ. ನಾಗರಿಕತೆ ಬೆಳೆದಂತೆ ಮತ್ತು ಉತ್ಪಾದನೆ ಹೆಚ್ಚು ಹೆಚ್ಚು ಸಂಕೀರ್ಣವಾದಂತೆ ಬಂಡವಾಳದ ಗಾತ್ರವೂ ಸಂಕೀರ್ಣತೆಯೂ ಬೆಳೆದಿದೆ. ತಂತ್ರವಿದ್ಯೆಯ ಬೆಳವಣಿಗೆ, ಅಧಿಕಾಧಿಕ ವಿಶೇಷೀಕರಣ ಇವುಗಳಿಂದಾಗಿ ಇಂದು ಬಂಡವಾಳ ಬಹಳ ಸಂಕೀರ್ಣವಾಗಿದೆ. ಬಂಡವಾಳದಿಂದ ದುಡಿಮೆಗಾರನ ಉತ್ಪಾದಕತೆ ಹೆಚ್ಚುತ್ತದೆ.

ಆರ್ಥಿಕಾಭಿವೃದ್ಧಿಯ ಪ್ರಕ್ರಿಯೆಯಲ್ಲಿ ಬಂಡವಾಳದ್ದು ಹೃದಯ ಸ್ಥಾನ. ಬಂಡವಾಳ ಶೇಖರಣೆಯೇ ಆರ್ಥಿಕಾಭಿವೃದ್ಧಿಯ ಹೆಗ್ಗುರುತು. ಸ್ವತಂತ್ರ ಉದ್ಯಮಕ್ಕೆ ಪ್ರಾಧಾನ್ಯವಿರುವ ಸಮಾಜದಂತೆಯೇ ಸಮಾಜವಾದಿ ವ್ಯವಸ್ಥೆಯಲ್ಲೂ ಬಂಡವಾಳ ಬೇಕೇಬೇಕು. ಸ್ವತಂತ್ರ ಸಮಾಜದಲ್ಲಿ ಬಂಡವಾಳದ ಒಡೆತನ ವ್ಯಕ್ತಿಗತವಾದ್ದು.

ಬಂಡವಾಳದ ರೂಪಣೆಯಿಂದ ಉದ್ಯೋಗ ಪ್ರಾಪ್ತಿಯಾಗುತ್ತದೆ. ಉದ್ಯೋಗ ಎರಡು ಹಂತಗಳಲ್ಲಿ ಸೃಷ್ಟಿ ಆಗುತ್ತದೆ. ಸೃಷ್ಟಿಗೆ-ಎಂದರೆ ಉತ್ಪಾದಕ ಸರಕುಗಳ ತಯಾರಿಕೆಗೆ-ಕಾರ್ಮಿಕರು ಬೇಕು. ಈ ಬಂಡವಾಳವನ್ನು ವಿನಿಯೋಗಿಸಿ ಉತ್ಪಾದನೆಯ ಗಾತ್ರವನ್ನು ವಿಸ್ತರಿಸಿದಾಗ ವಿಸ್ತರಣೆಗೆ ಅನುಗುಣವಾಗಿ ಹೆಚ್ಚು ಕಾರ್ಮಿಕರು ಬೇಕು.

ಹೆಚ್ಚು ಅಭಿವೃದ್ಧಿ ಹೊಂದದ ಸಮಾಜದಲ್ಲಿ ಉತ್ಪಾದನೆ ಶ್ರಮಪ್ರಧಾನವಾಗಿರುತ್ತದೆ. ಅಂದರೆ ಅಲ್ಲಿ ಬಂಡವಾಳಕ್ಕಿಂತ ದುಡಿಮೆಯೇ ಪ್ರಧಾನ. ಇಲ್ಲಿಯವು ಶ್ರಮ ಸಾಂದ್ರ ಕೈಗಾರಿಕೆಗಳು. ಮುಂದುವರಿದ ಅರ್ಥವ್ಯವಸ್ಥೆಯಲ್ಲಿ ಬಂಡವಾಳ ಹೆಚ್ಚಾಗಿರುತ್ತದೆ. ಇಲ್ಲಿ ಉತ್ಪಾದನೆಯ ಗಾತ್ರ, ಹರಹು, ಅಧಿಕ, ಇದು ಶ್ರಮಸಾಂದ್ರವಲ್ಲ, ಬಂಡವಾಳಸಾಂದ್ರ. ಬಂಡವಾಳ ಹೆಚ್ಚಿದಂತೆಲ್ಲ ಮತ್ತು ಉತ್ಪಾದನೆಯಲ್ಲಿ ಯಂತ್ರ ತಂತ್ರ ಹೆಚ್ಚಿದಂತೆಲ್ಲ ದುಡಿಮೆಗಾರರ ಅಗತ್ಯ ಕಡಿಮೆಯಾಗಿ ನಿರುದ್ಯೋಗ ಬೆಳೆಯುವುದೆಂಬುದಾಗಿ ವಾದಿಸುವುದುಂಟು. ಒಂದು ಉತ್ಪಾದನ ವ್ಯವಸ್ಥೆಗೆ ತಕ್ಕಂಥ ಅಧೋರಚನೆ ಸೃಷ್ಟಿಯಾಗದಿದ್ದಾಗ, ಹೊರಹಿನಿಂದ ಬಂಡವಾಳವನ್ನು ಅವಾಹಿಸಿದಾಗ, ಅಸಮತೋಲ ಉಂಟಾಗುತ್ತದೆ. ನಿರುದ್ಯೋಗವೂ ಉತ್ಪಾದನೆಯೂ ಹೆಚ್ಚಿ ಕಷ್ಟ ಸಂಕಟಗಳುಂಟಾಗುತ್ತವೆ. ಅಭಿವೃದ್ಧಿಯ, ಅಧೋರಚನೆಯ ಮಟ್ಟಕ್ಕೆ ತಕ್ಕಂತೆ ಬಂಡವಾಳ ಇಂಥ ಅಸಮತೋಲಗಳಾಗದಂತೆ ಯೋಜಿಸುವುದು ಸಾಧ್ಯ. ಅಭಿವೃದ್ಧಿಶೀಲ ದೇಶಗಳೆಲ್ಲ ಈ ಪ್ರಶ್ನೆಯನ್ನು ಎದುರಿಸಬೇಕಾಗಿದೆ.

ಒಟ್ಟಿನಲ್ಲಿ ಒಂದು ಸಂಸ್ಥೆಯ ಆಧಾರ ಸ್ತಂಭವೇ ಬಂಡವಾಳ. ಆಸ್ತಿ-ಹೊಣೆ ತಃಖ್ತೆಯಲ್ಲಿ ಲೆಕ್ಕಶಾಸ್ತ್ರದ ಅನ್ವಯ ಆಸ್ತಿ-ಜವಾಬ್ದಾರಿ (ಅಸೆಟ್ಸ್ ಹಾಗು ಲಯಬಿಲಿಟಿ) ಗಳ ಸಮೀಕರಣ ಅನುಪಾತವು ಯಾವಾಗಲೂ ಸಮವೆಂಬ ಸಿದ್ಧಾಂತದ ಪ್ರತಿಪಾದನೆಗೆ ಬಂಡವಾಳ ಹಾಗು ಜವಾಬ್ದಾರಿಗಳು ಮೂಲಾಧಾರವಾಗಿವೆ. ಈ ಅನುಪಾತವು ಇಂತಿದೆ :

1. ಬಂಡವಾಳ + ಜವಾಬ್ದಾರಿ = ಆಸ್ತಿಗಳು.

2. ಆಸ್ತಿಗಳು - ಬಂಡವಾಳ = ಉಳಿದ ಜವಾಬ್ದಾರಿಗಳು.

3. ಆಸ್ತಿಗಳು - ಜವಾಬ್ದಾರಿಗಳು = ಬಂಡವಾಳ+ನಿಧಿಗಳು (ಇದ್ದರೆ).

ಸಂಸ್ಥೆ/ಕಂಪನಿಯ ಪ್ರಾರಂಭದಲ್ಲಿ ಬಂಡವಾಳವೆಷ್ಟಿದೆಯೋ ಆಸ್ತಿಗಳು ಅಷ್ಟೇ ಇರುತ್ತದೆಂಬುದು ಮೇಲಿನ ಸಿದ್ಧಾಂತದ ಅನ್ವಯ ಸಾಧಿತವಾಗುತ್ತದೆ. (ಡಿ.ಎನ್.ಆರ್.) (ಪರಿಷ್ಕರಣೆ: ಜಿ.ಆರ್.ವಿ; ವೈ.ಕೆ)