ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬನ್ನೇರುಘಟ್ಟ
ಬನ್ನೇರುಘಟ್ಟ ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ಆನೇಕಲ್ಲು ತಾಲ್ಲೂಕಿನ ಒಂದು ಗ್ರಾಮ, ಬೆಂಗಳೂರು ನಗರದಿಂದ ದಕ್ಷಿಣಕ್ಕೆ 16 ಕಿಮೀ ದೂರದಲ್ಲಿದೆ. ಜನಸಂಖ್ಯೆ 3,958 (2001). ಈ ಗ್ರಾಮದ ಚಂಪಕಧಾಮ ಸ್ವಾಮಿ ದೇವಾಲಯ ಪ್ರಸಿದ್ಧವಾದುದು. ಇದರ ಮಹಾದ್ವಾರ ಒಂದು ಸುಂದರ ರಚನೆ. ಗರ್ಭಗುಡಿಯಲ್ಲಿ ಶ್ರೀಭೂಸಮೇತ ವಿಷ್ಣುವಿನ ಚಂಪಕಧಾಮ ವಿಗ್ರಹವಿದೆ. ಹಿಂದೆ ದಾಮೋದರ ದೇವಾಲಯವೆಂದು ಹೆಸರಿದ್ದ ಈ ಗುಡಿಯನ್ನು ಹೊಯ್ಸಳ ಸಾಮಂತನಾಗಿದ್ದ ಪೂರ್ವಾದಿರಾಯ ಎಂಬ ತಮಿಳು ಅರಸ 1257ರಲ್ಲಿ ಕಟ್ಟಿಸಿದ್ದಾಗ ಇಲ್ಲಿಯ ಒಂದು ಶಾಸನದಿಂದ ತಿಳಿಯುತ್ತದೆ. ದೇವಾಲಯದ ಎದುರಿನ ಧ್ವಜಸ್ತಂಭದ ತಳದಲ್ಲಿರುವ ಕೆಲವು ತಮಿಳು ಶಾಸನಗಳು 13ನೆಯ ಶತಮಾನಕ್ಕೆ ಸೇರಿದವು. ಈ ಗ್ರಾಮದ ಹಿಂಬದಿಯಲ್ಲಿರುವ ಬನ್ನೇರುಘಟ್ಟ ಬೆಟ್ಟದ (997ಮೀ) ಮೇಲೆ ಸಂಪಂಗಿರಾಮಸ್ವಾಮಿ ದೇವಾಲಯವಿದೆ. ಪ್ರತಿವರ್ಷವೂ ಮಾರ್ಚ್-ಏಪ್ರಿಲ್ ತಿಂಗಳಲ್ಲಿ 3 ದಿನಗಳು ರಥೋತ್ಸವ ನಡೆಯುವುದು.
ಸರ್ಕಾರ ರಾಷ್ಟ್ರೀಯ ಉದ್ಯಾನ ಯೋಜನೆಯನ್ವಯ ಬನ್ನೇರುಘಟ್ಟ ಪ್ರದೇಶವನ್ನು ಆರಿಸಿಕೊಂಡಿದೆ. ಈ ರಾಷ್ಟ್ರೀಯ ಉದ್ಯಾನದ ಒಟ್ಟು ಪ್ರದೇಶ ಸುಮಾರು 129 ಚ,ಕಿಮೀ. ಇದರಲ್ಲಿ ನಾನಾಜಾತಿಯ ಮರಗಿಡ ಉಂಟು. ದೇಶದ ಹಲವು ಭಾಗಗಳಿಂದ ತಂದ ವಿವಿಧ ಕಾಡುಪ್ರಾಣಿಗಳನ್ನು ಇಲ್ಲಿಯ ಸ್ವಾಭಾವಿಕ ಪರಿಸರದಲ್ಲಿ ಸಂರಕ್ಷಿಸುವುದು ಈ ಯೋಜನೆಯ ಉದ್ದೇಶ. ಪ್ರಾಣಿಗಳಿಗೆ ಬೇಕಾದ ನೀರಿನ ಸೌಲಭ್ಯಕ್ಕಾಗಿ ಇಲ್ಲಿ ಹರಿಯುವ ಸಣ್ಣ ತೊರೆಗಳಿಗೆ ಅಡ್ಡಗಟ್ಟೆಹಾಕಿ ನೀರನು ಸಂಗ್ರಹಿಸಲಾಗಿದೆ. ಸಫಾರಿ ಪಾರ್ಕ್‍ನ ನಿರ್ಮಾಣ ಈ ಯೋಜನೆಯ ಗಮರ್ನಾಹ ಅಂಶ, ಇಲ್ಲಿ ಸಿಂಹ, ಹುಲಿ, ಆಫ್ರಿಕನ್ ಗೊರಿಲ್ಲಾಗಳನ್ನು ಸಂರಕ್ಷಿಸಿ ಅವುಗಳ ವಂಶಾಭಿವೃದ್ಧಿ ಕಾರ್ಯ ಮಾಡಲಾಗುವುದು, ಮೋಸಳೆಕೇಂದ್ರ ಈ ಉದ್ಯಾನದ ಮತ್ತೊಂದು ಗಮನಾರ್ಹ ಸ್ಥಳ, ಮೊಸಳೆಗಳ ವಂಶಾಭಿವೃದ್ಧಿಗಾಗಿ ಇಲ್ಲಿ ಒಂದು ಸಣ್ಣ ಕೃತಕ ಸರೋವರ ನಿರ್ಮಿಸಿ ಅದರೊಳಗೆ ವಿವಿಧ ಜಾತಿಯ ಮೊಸಳೆಗಳನ್ನು ಬಿಡಲಾಗಿದೆ. ಬನ್ನೇರುಘಟ್ಟ ಮುಂದೆ ಭಾರತದಲ್ಲಿಯೇ ಒಂದು ಪ್ರಸಿದ್ದ ವಿಹಾರ ಕೇಂದ್ರವಾಗುವುದರಲ್ಲಿದೆ.
ಪರಿಷ್ಕರಣೆ : ಕೆ. ಎಸ್. ನವೀನ್