ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಸವರಾಜಯ್ಯ, ಎಂ ಎನ್

ವಿಕಿಸೋರ್ಸ್ದಿಂದ

ಬಸವರಾಜಯ್ಯ, ಎಂ ಎನ್ (1914-2004). ಮದರಾಸಿನಲ್ಲಿ ತಳ ಊರಿದ್ದ ಕನ್ನಡ ಚಿತ್ರೋದ್ಯಮ ತಾಯ್ನಾಡಿಗೆ ಮರಳಿ ವಲಸೆ ಬರಲು ಶ್ರಮಿಸಿದವರು. ಎಂ.ಎನ್. ಬಸವರಾಜಯ್ಯ ಜನಸಿದ್ದು 1914ರಲ್ಲಿ. ತಮ್ಮ ತಂದೆ ನಡೆಸುತ್ತಿದ್ದ ವಿಮಾ ಉದ್ಯಮವನ್ನು ತಮ್ಮ 20ನೆ ವಯಸ್ಸಿನಲ್ಲಿ ವಹಿಸಿಕೊಂಡರು. ವಿಮಾ ಉದ್ಯಮದ ರಾಷ್ಟ್ರೀಕರಣ ಸನ್ನಿಹಿತವಾದಾಗ, ಅವರು ತಮ್ಮ ಕಾರ್ಯಕ್ಷೇತ್ರ ವಿಸ್ತರಣೆಗೆ ಆಯ್ಕೆ ಮಾಡಿದ ಕ್ಷೇತ್ರ ಚಿತ್ರೋದ್ಯಮ. ಮೈಸೂರಿನಲ್ಲಿದ್ದ ನವಜ್ಯೋತಿ ಸ್ಟುಡಿಯೋ ಕೊನೆಯುಸಿರೆಳೆದ ಮೇಲೆ, ಕನ್ನಡ ಚಲನಚಿತ್ರ ಉದ್ಯಮ ಮದರಾಸಿನಲ್ಲಿ ಭದ್ರವಾಗಿ ನೆಲೆಯೂರಿತ್ತು. ಕನ್ನಡ ಚಿತ್ರಗಳಲ್ಲಿ ಕನ್ನಡತನ ಉಳಿಯಬೇಕಾದರೆ, ಅವುಗಳು ಕನ್ನಡ ನಾಡಿನಲ್ಲೇ ಚಿತ್ರಗೊಳ್ಳಬೇಕಾದುದು ಅಗತ್ಯವೆಂದು ಮನಗಂಡು, ಆಧುನಿಕ ಸ್ಟುಡಿಯೋ ಸ್ಥಾಪಿಸ ತೊಡಗಿದರು. ಅನ್ಯಭಾಷಾಚಿತ್ರಗಳ ಸ್ಪರ್ಧೆ, ಕನ್ನಡ ಚಿತ್ರಗಳಿಗೆ ಮಿತವಾದ ಮಾರುಕಟ್ಟೆ ಇರುವ ಕಾರಣ, ಕನ್ನಡ ಚಿತ್ರಗಳ ಬೆಳವಣೆಗೆಗೆ ಸಹಾಯಧನ ಅಗತ್ಯವೆಂಬುದನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಳ್ಳಲು ನಿರಂತರ ಶ್ರಮಿಸಿದರು

ಇಲವಾಲ ರಸ್ತೆಯಲ್ಲಿದ್ದ ಮೈಸೂರು ಅರಸರಿಗೆ ಸೇರಿದ ಚಿತ್ತರಂಜನ್‍ಮಹಲ್‍ನ್ನು ಖರೀದಿಸಿ ಅಲ್ಲಿ ಪ್ರೀಮಿಯರ್ ಸ್ಟುಡಿಯೋ ಸ್ಥಾಪಿಸಿದರು. 1954ರಲ್ಲಿ ಈ ಸ್ಟುಡಿಯೋವನ್ನು ಆರಂಭಿಸಿದಾಗ ಬಸವರಾಜಯ್ಯನವರಿಗಿದ್ದ ಆಶಯ ಒಂದೇ. ಅದು ಕನ್ನಡ ಚಿತ್ರೋದ್ಯಮ ಕನ್ನಡನಾಡಿನಲ್ಲೇ ಉಳಿದು ಬೆಳೆಯಬೇಕು ಎಂಬುದು. ಕನ್ನಡ ಚಿತ್ರನಿರ್ಮಾಪಕರೆಲ್ಲರೂ ತಮ್ಮ ಸ್ಟುಡಿಯೋನಲ್ಲಿಯೇ ಚಿತ್ರೀಕರಣ ನಡೆಸಲು ಅನುಕೂಲವಾಗುವಂತೆ ಏಳು ಫ್ಲೋರುಗಳನ್ನು ಕಟ್ಟಿದರು. ಕಪ್ಪು ಬಿಳುಪು ಚಿತ್ರ ಸಂಸ್ಕರಣೆ, ಡಬ್ಬಿಂಗ್, ಎಡಿಟಿಂಗ್ ಸೌಲಭ್ಯಗಳನ್ನು ಕಲ್ಪಿಸಿದರು. ಮಿಗಿಲಾಗಿ ಕಚ್ಚಾಫಿಲಂ ಪಡೆಯುವುದು ದುಸ್ತರವಾಗಿದ್ದ ಸಮಯದಲ್ಲಿ ಕಚ್ಚಾಫಿಲಂ ಒದಗಿಸಿ ನೆರವಾದರು. ಚಿತ್ರೀಕರಣ ಶುಲ್ಕದಲ್ಲಿ ರಿಯಾಯಿತಿ ಕೊಟ್ಟರು. ಪ್ರೀಮಿಯರ್ ಸ್ಟುಡಿಯೋ ಮಾತ್ರವಲ್ಲದೆ ಹೊರಾಂಗಣ ಚಿತ್ರೀಕರಣ ಘಟಕಗಳನ್ನು ತೆರೆದರು. ತಮ್ಮ ಸ್ಟುಡಿಯೋದಲ್ಲಿ ಸಿಕ್ಕದ ಯಾವ ಸೌಲಭ್ಯ ನಿಮಗೆ ಮದರಾಸಿನಲ್ಲಿ ಸಿಗುವುದು ಎಂದು ಪ್ರಶ್ನಿಸುವಷ್ಟರಮಟ್ಟಿಗೆ ಆಧುನಿಕ ಯಂತ್ರೋಪಕರಣಗಳನ್ನು ತರಿಸಿದರು. ತಾವೇ ಸೆಟ್‍ಗಳನ್ನು ನಿರ್ಮಿಸಿ ಕನ್ನಡ ಚಿತ್ರ ನಿರ್ಮಾಪಕರಿಗೆ ಕಡಿಮೆದರದಲ್ಲಿ ಒದಗಿಸಿದರು. ಹಾಗೆಯೇ ಅಲ್ಪಸ್ವಲ್ಪ ಬಂಡವಾಳ ಕೈಲಿಟ್ಟುಕೊಂಡು ಚಿತ್ರನಿರ್ಮಿಸಲು ಬಂದವರಿಗೆ ಬುದ್ಧಿಹೇಳಿಕಳಿಸಿಯೂ ಇದ್ದಾರೆ. ತಮ್ಮ ಪ್ರೀಮಿಯರ್ ಸ್ಟುಡಿಯೋದಲ್ಲಿ ಚಿತ್ರೀಕರಿಸಲು ಬಂದು ಬೃಹತ್ ಸೆಟ್‍ಗಳನ್ನು ಹಾಕಿದ ಇತರ ಭಾಷಾ ನಿರ್ಮಾಪಕರಿಂದ ಆ ಸೆಟ್‍ಗಳನ್ನು ತಾವೇ ಕೊಂಡು ರಿಯಾಯಿತಿ ದರದಲ್ಲಿ ಕನ್ನಡ ಚಿತ್ರ ನಿರ್ಮಾಪಕರಿಗೆ ಒದಗಿಸುತ್ತಿದ್ದುದೂ ಉಂಟು.

``ಸ್ತ್ರೀರತ್ನ (1954) ಚಿತ್ರವೇ ಪ್ರೀಮಿಯರ್‍ನಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ. ಈ ಚಿತ್ರವನ್ನು ಬಸವರಾಜಯ್ಯನವರು ಭಾಗಶಃ ಬಣ್ಣದಲ್ಲಿ ನಿರ್ಮಿಸಿದ್ದರಲ್ಲದೆ, ಕೆ.ಎಸ್.ಅಶ್ವಥ್ ಹಾಗೂ ಶ್ರೀಕಾಂತ್‍ರನ್ನೂ ಪರಿಚಯಿಸಿದರು. ಪ್ರಿಮಿಯರ್ ಸ್ಟುಡಿಯೋ 7 ಫ್ಲೋರುಗಳಲ್ಲಿ 4-5 ಚಿತ್ರಗಳ ಚಿತ್ರೀಕರಣ ನಿರಂತರವಾಗಿ ನಡೆಯುತ್ತಿತ್ತು. ಕನ್ನಡವಲ್ಲದೆ, ತಮಿಳಿ, ತೆಲಗು, ಮಲಯಾಳಂ, ಹಿಂದಿ ಚಿತ್ರಗಳೂ ಇಲ್ಲಿ ಚಿತ್ರಣಗೊಂಡವು. ದಿನ ಕಳೆದಂತೆ, ಹೊರಾಂಗಣದಲ್ಲಿ ಚಿತ್ರಿಕರಣ ಮಾಡುವ ಪ್ರವೃತ್ತಿ ಬೆಳೆಯಿತು. ಸ್ಟುಡಿಯೋಗಳ ಅವಲಂಬನೆ ಕಡಿಮೆಯಾಯಿತು. ಈ ಹೊಸ ಪ್ರವೃತ್ತಿಯ ಬಿಸಿ ಸ್ಟುಡಿಯೋಗೂ ತಟ್ಟಿತು. ಸಂಜಯ್‍ಖಾನ್‍ರ ``ಟಿಪ್ಪುವಿನ ಖಡ್ಗ ಕಿರುತೆರೆಯ ಧಾರಾವಾಹಿಯ ಚಿತ್ರೀಕರಣ ಈ ಸ್ಟುಡಿಯೋವಿನಲ್ಲಿ ನಡೆದಿದ್ದಾಗ ಅಕಸ್ಮಾತ್ತಾಗಿ ಸಂಭವಿಸಿದ ಭೀಕರ ಅಗ್ನಿ ದುರಂತದ ನಂತರ ಪ್ರೀಮಿಯರ್‍ನ ಗ್ರಹಚಾರ ಕೆಟ್ಟಿತು. ವಯೋವೃದ್ಧರಾಗಿದ್ದ ಬಸವರಾಜ್ಯನವರೂ, ಇಷ್ಟೆಲ್ಲಾ ಮಾಡಿಕೊಟ್ಟರೂ ಕನ್ನಡ ಚಿತ್ರ ನಿರ್ಮಾಪಕರು ಮದ್ರಾಸು ವ್ಯಾಮೋಹದಿಂದ ಮುಕ್ತರಾಗಲಿಲ್ಲವಲ್ಲವೆಂದು ನೊಂದುಕೊಂಡು ಆಸಕ್ತಿಯನ್ನು ಕಳೆದುಕೊಂಡರು. ಒಂದೊಂದೇ ಫ್ಲೋರುಗಳನ್ನು ಇತರೆ ಉದ್ದೇಶಗಳಿಗೆ ಬಾಡಿಗೆಗೆ ಕೊಡುತ್ತಾ ಬಂದರು. ತಾವೇ ಕಟ್ಟಿ ಬೆಳೆಸಿದ ಪ್ರೀಮಿಯರ್ ಸಾಮ್ರಾಜ್ಯದ ಅವನತಿಯನ್ನೂ ಕಂಡು ನೊಂದರು. ಚಿತ್ರೋದ್ಯಮದ ಮುಖ್ಯವಾಗಿ ಕನ್ನಡ ಚಿತ್ರೋದ್ಯಮದ ಬೆಳೆವಣಿಗೆಗಾಗಿ ಶ್ರಮಿಸಿದ ಎಂ.ಎನ್.ಬಸವರಾಯ್ಯನವರ ಸೇವೇಗಾಗಿ, ಕರ್ನಾಟಕ ಸರಕಾರ 1996-97ನೆ ಸಾಲಿನ ಡಾ|| ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಿತು. ಬಸವರಾಜಯ್ಯ 2004ರಲ್ಲಿ ಮೈಸೂರಿನಲ್ಲಿ ನಿಧನರಾದರು. (ಎಂ.ಬಿ.ಎಸ್)