ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಗ್ದಾದ್
ಬಾಗ್ದಾದ್ - ಇರಾಕಿನ ರಾಜಧಾನಿ. ಬಾಗ್ದಾದ್ ಪ್ರಾಂತ್ಯದ (ಮುಹಾಫಜó) ಆಡಳಿತ ಕೇಂದ್ರ. ಪ್ರಾಚೀನ ಮೆಸೊಪೊಟೇಮಿಯದ ಪ್ರಮುಖ ನಗರ. ಟೈಗ್ರಿಸ್ ನದಿಯ ಎರಡೂ ದಂಡೆಗಳ ಮೇಲೆ, ಪರ್ಷಿಯನ್ ಕೊಲ್ಲಿಯ ವಾಯವ್ಯಕ್ಕೆ 560 ಕಿಮೀ.ದೂರದಲ್ಲಿ, ಇರಾಕಿನ ಉತ್ತರ ಮಧ್ಯದಲ್ಲಿ ಇದೆ. ಜನಸಂಖ್ಯೆ 3,205,645 (1975). ನಗರದ ನಿವೇಶನ ಸಪಾಟಾಗಿದೆ. ಅದು ಸಮುದ್ರ ಮಟ್ಟದಿಂದ ಸುಮಾರು 34 ಮೀ ಎತ್ತರದಲ್ಲಿದೆ. ಮೂಲ ನಗರವನ್ನು ಟೈಗ್ರಿಸ್ ನದಿಯ ಪಶ್ಚಿಮ ದಂಡೆಯ ಮೇಲೆ ಸ್ಥಾಪಿಸಲಾಗಿತ್ತಾದರೂ 1000 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಈ ನಗರದ ಬಹುಭಾಗ ನದಿಯ ಪೂರ್ವ ದಂಡೆಯ ಮೇಲೆ ಬೆಳೆದಿದೆ. ಅಲ್-ಕರ್ಕ್ ಕರಾಡೆಟ್, ಮರಿಯಮ್ ಮತ್ತು ಅಲ್-ಮನ್‍ಸೂರ್ ವಸತಿಗಳಿರುವ ಉಪನಗರ ಪಶ್ಚಿಮ ದಂಡೆಯ ಮೇಲೆ ಬೆಳೆಯುತ್ತಿದೆ. ಪೂರ್ವದಂಡೆಯ ನಗರ ಭಾಗವನ್ನೂ ವಸತಿಗಳನ್ನೂ ಕೂಡಿಸುವ ಸೇತುವೆಗಳಿವೆ. ಅವುಗಳಲ್ಲೊಂದರ ಮೇಲೆ ರೈಲು ಮಾರ್ಗವಿದೆ.
ವಾಯುಗುಣ: ಮೇ ಇಂದ ಅಕ್ಟೋಬರ್‍ವರೆಗೆ ಇಲ್ಲಿ ಸುಡು ಬೇಸಗೆ. ಆಗ ಒಣ ಹವೆ ಇರುತ್ತದೆ. ಜುಲೈ ಆಗಸ್ಟ್ ತಿಂಗಳುಗಳಲ್ಲಿ ದೈನಿಕ ಸರಾಸರಿ ಉಷ್ಣತೆ ಸೂರ್ಯೋದಯಕ್ಕೆ ಮುಂಚೆ 270 ಸೆ. ಇರುವುದಾದರೂ ನಡುಹಗಲಿನಲ್ಲಿ ಅದು 410 ಸೆ ನಿಂದ 430 ಸೆ. ವರೆಗೂ ಕೆಲವು ವೇಳೆ 500ಸೆ. ವರೆಗೂ ಏರುತ್ತದೆ. ಆದರೆ ರಾತ್ರಿಯಲ್ಲಿ 240ಸೆ. ಗೆ ಇಳಿಯುತ್ತದೆ. ಚಳಿಗಾಲದಲ್ಲಿ ತಂಪಾಗಿರುತ್ತದೆ. ಆಗ ದೈನಿಕ ಸರಾಸರಿ ಉಷ್ಣತೆ 130ಸೆ. ಬೇಸಗೆಯಲ್ಲಿ ಬೀಸುವ ವಾಯವ್ಯದ ಮಾರುತಗಳು ಉಷ್ಣತೆಯ ತೀವ್ರತೆಯನ್ನು ಸ್ವಲ್ಪಮಟ್ಟಿಗೆ ಶಮನ ಮಾಡುವುವಾದರೂ ಅವು ಹಲವೇಳೆ-ವಿಶೇಷವಾಗಿ ಜುಲೈನಲ್ಲಿ ಧೂಳಿನ ಬಿರುಗಾಳಿಗಳನ್ನು ಉಂಟುಮಾಡುತ್ತವೆ. ವರ್ಷದಲ್ಲಿ ಸುಮಾರು 130 ಮಿಮೀ. ಮಳೆ ಬೀಳುತ್ತದೆ. ಜನ: ನಗರವಾಸಿಗಳಲ್ಲಿ ಅರಬರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕುರ್ದ್, ಆಫ್ಘನ್, ಆರ್ಮೇನಿಯನ್ ಮುಂತಾದವರೂ ಇದ್ದಾರೆ. ಇಲ್ಲಿಯ ಮುಖ್ಯ ಧರ್ಮ ಇಸ್ಲಾಮ್. ಮುಸ್ಲಿಮರಲ್ಲಿ ಷಿಯಾ ಮತ್ತು ಸುನ್ನಿಗಳಿದ್ದಾರೆ. ಕ್ರೈಸ್ತರ ಸಂಖ್ಯೆಯೂ ಗಮನಾರ್ಹವಾಗಿದೆ. ಮುಖ್ಯ ಭಾಷೆ ಅರಬ್ಬೀ. ಹಲವು ಜನರಿಗೆ ಅರ್ಥವಾಗುವ ವಿದೇಶಿ ರಾಷ್ಟ್ರಭಾಷೆಗಳಲ್ಲಿ ಇಂಗ್ಲಿಷ್ ಮುಖ್ಯವಾದ್ದು.
ವಸತಿ ಸೌಕರ್ಯ: ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ನಗರದಲ್ಲಿ ವಸತಿ ಸೌಕರ್ಯದ ಕೊರತೆಯಿದೆ. ಹೊಸದಾಗಿ ನಿರ್ಮಿಸಲಾಗುತ್ತಿರುವ ಮನೆಗಳ ಸಂಖ್ಯೆಗೂ ಬೆಳೆಯುತ್ತಿರುವ ಜನಸಂಖ್ಯೆಗೂ ಹೊಂದಾಣಿಕೆಯಾಗುತ್ತಿಲ್ಲ. ನದಿಯ ಎರಡೂ ದಂಡೆಗಳ ಮೇಲೆ ಉಪನಗರಗಳು ಬೆಳೆಯುತ್ತಿವೆ. ದುರ್ಬಲ ವರ್ಗದವರಿಗಾಗಿ ವಸತಿಗಳನ್ನು ನಿರ್ಮಿಸಲಾಗುತ್ತಿದೆ. 1956ರಲ್ಲಿ ಪೂರ್ಣಗೊಂಡ ಟೈಗ್ರೀಸ್ ಕಟ್ಟೆಯಿಂದಾಗಿ ಪ್ರವಾಹದ ಹಾವಳಿ ಕಡಿಮೆಯಾಗಿರುವುದರಿಂದ ನಗರ ಬೆಳೆಯುವುದಕ್ಕೆ ಸಹಾಯಕವಾಗಿದೆ. ನದಿಯ ಎರಡೂ ಪಾಶ್ರ್ವಗಳನ್ನೊಳಗೊಂಡಿರುವ ಹೊಸ ನಗರ ಯೋಜನೆ ವರ್ತುಲಾಕಾರದಲ್ಲಿದೆ. ವಿದ್ಯುತ್ ಮತ್ತು ನೀರು ಪೂರೈಕೆಯ ವ್ಯವಸ್ಥೆಯನ್ನು ಸರ್ಕಾರವಹಿಸಿಕೊಂಡಿದೆ.
ಸಾರಿಗೆ: ನಗರದೊಳಗೆ ಬಸ್ಸು ಮತ್ತು ಟ್ಯಾಕ್ಸಿ ವ್ಯವಸ್ಥೆಯಿದೆ. 1950ರಿಂದೀಚೆಗೆ ಮೋಟಾರ್ ವಾಹನಗಳ ಸಂಖ್ಯೆ ತೀವ್ರಗತಿಯಲ್ಲಿ ಬೆಳೆದಿದೆ. ಸರ್ಕಾರದ ಅಧೀನದ ರೈಲ್ವೆ ವ್ಯವಸ್ಥೆಯ ಮೂರು ಮಾರ್ಗಗಳು ಬಾಗ್ದಾದಿನಲ್ಲಿ ಸೇರುತ್ತವೆ. ನಗರದಲ್ಲಿ ಎರಡು ನಾಗರಿಕ ವಿಮಾನ ನಿಲ್ದಾಣಗಳಿವೆ. ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಹುನೈದಿಯಲ್ಲಿ. ಬಾಗ್ದಾದ್ ದೊಡ್ಡ ನದೀ ಬಂದರೂ ಆಗಿದೆ.
ಆರ್ಥಿಕ ಜೀವನ: ದೇಶದ ಸಾರಿಗೆ, ಕೈಗಾರಿಕೆ, ವಾಣಿಜ್ಯ ಮತ್ತು ಹಣಕಾಸಿನ ವ್ಯವಹಾರಗಳಿಗೆ ಬಾಗ್ದಾದ್ ಕೇಂದ್ರ. ದೇಶದ ಕೈಗಾರಿಕೆಗಳಲ್ಲಿ, ವಿಶೇಷವಾಗಿ ಜವಳಿ ಚರ್ಮ, ಉಡುಪು ಮತ್ತು ಆಹಾರ ಕೈಗಾರಿಕೆಗಳಲ್ಲಿ, ಶೇ. 25ರಷ್ಟು ಬಾಗ್ದಾದಿನಲ್ಲಿವೆ. ಎರಡನೆಯ ಮಹಾಯುದ್ಧದ ಅನಂತರ ತೈಲದಿಂದಾಗಿ ಇರಾಕಿನ ವರಮಾನ ಹೆಚ್ಚಿತು. ಇದರ ಪ್ರಭಾವ ಬಾಗ್ದಾದಿನ ಮೇಲೆ ಆಗಿದೆ. ಹತ್ತಿರವೇ ಒಂದು ತೈಲ ಸಂಸ್ಕರಣ ಕೇಂದ್ರವಿದೆ. ಪಾದರಕ್ಷೆ, ಹತ್ತಿ, ರೇಷ್ಮೆ, ಉಡುಪು, ಇಟ್ಟಿಗೆ, ಸಿಮೆಂಟು, ತಂಬಾಕಿನ ಪದಾರ್ಥಗಳು ಬಾಗ್ದಾದಿನಲ್ಲಿ ತಯಾರಾಗುತ್ತವೆ. ಖರ್ಜೂರ ಮತ್ತು ದ್ರಾಕ್ಷಿಯಿಂದ ಮದ್ಯ ತಯಾರಿಕೆಯೂ ಇಲ್ಲಿ ಆಗುತ್ತದೆ. ಇಲ್ಲಿ ರೈಲ್ವೆ ಕಾರ್ಯಗಾರವೂ ಉಕ್ಕಿನ ಕಾರ್ಖಾನೆಯೂ ಇವೆ. ಇರಾಕಿನ ಕೇಂದ್ರೀಯ ಬ್ಯಾಂಕ್ ಇರುವುದು ಇಲ್ಲೆ. ಶಿಕ್ಷಣ: ಬಾಗ್ದಾದ್ ವಿಶ್ವವಿದ್ಯಾಲಯ (1958) ಉಚಿತ ಉಚ್ಚ ಶಿಕ್ಷಣ ನೀಡುತ್ತದೆ. ಅಲ್‍ಹಿಕ್ಮಾ (1956), ಆಲ್-ಮಸ್ತಾನ್, ಸಿರಿಯ, (1963) ವಿಶ್ವವಿದ್ಯಾಲಯ ಕಾಲೇಜುಗಳು. ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆ ಮತ್ತು ಲಲಿತ ಕಲೆಗಳ ಸಂಸ್ಥೆ ಇವು ಇತರ ಶಿಕ್ಷಣ ಸಂಸ್ಥೆಗಳು.
(ಜಿ.ಕೆ.ಯು.)
ಇತಿಹಾಸ: ಬಾಗ್ದಾದಿನ ಬಳಿಯಲ್ಲಿ ಅನೇಕ ಸಾಮ್ರಾಜ್ಯಗಳ ರಾಜಧಾನಿಗಳು ಸ್ಥಾಪಿತವಾಗಿದ್ದುವು. ಆಗಾಡೆ, ಬ್ಯಾಬಿಲಾನ್, ಬುರ್ಜ್, ಅರಾರ್ಕುಫ್ ಇವು ಬಾಗ್ದಾದಿನ ಪಶ್ಚಿಮಕ್ಕಿದ್ದುವು. ಸೆಲ್ಯೂಷಿಯ ಮತ್ತು ಟಿಸಿಫಾನ್ ಇವು 32 ಕಿಮೀ ದಕ್ಷಿಣದಲ್ಲಿದ್ದುವು. ಬಾಗ್ದಾದ್ (ದೇವರಿತ್ತ ವರ) ಎಂಬ ಪರ್ಷಿಯನ್ ಹೆಸರಿನ ಗ್ರಾಮ ಟೈಗ್ರಿಸ್ ನದಿಯ ಎಡದಂಡೆಯ ಮೇಲಿತ್ತು. ಎರಡನೆಯ ಅಬ್ಬಾಸಿದ್ ಖಲೀಫ ಅಲ್ ಮನ್ಸೂರ್ (762-66) ಇಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿ ಅದನ್ನು ಮನ್ಸೂರಿಯ ಎಂದು ಕರೆದ. ಅಂದಿನಿಂದ ನಗರ ಮುಖ್ಯವಾಗಿ ನದಿಯ ಪೂರ್ವದ ದಂಡೆಯ ಮೇಲೆ ದಕ್ಷಿಣದತ್ತ ಬೆಳೆಯಿತು. ಆ ಕಾಲದ ಅತ್ಯಂತ ದೊಡ್ಡ ಸಾಮ್ರಾಜ್ಯದ ರಾಜಧಾನಿಯಾಗಿದ್ದರಿಂದ ಬಹು ಬೇಗ ಬೆಳೆಯಿತು. ಅತ್ಯಲ್ಪ ಕಾಲದಲ್ಲಿ ನಾಗರಿಕ ಪ್ರಪಂಚದ ಮುಂದುವರಿದ ಸಾಂಸ್ಕøತಿಕ ಮತ್ತು ವಾಣಿಜ್ಯ ಕೆಂದ್ರಗಳಲ್ಲೊಂದಾಯಿತು. ಇದು ತುರ್ಕಿ, ಪರ್ಷಿಯ, ಮಧ್ಯಏಷ್ಯ, ಪರ್ಷಿಯನ್ ಕೊಲ್ಲಿ, ಅರೇಬಿಯ, ಭಾರತ, ಸಿರಿಯ, ಭೂಮಧ್ಯ ಸಮುದ್ರದ ಬಂದರುಗಳು ಮೊದಲಾದ ಎಡೆಗಳಿಂದ ಅಂತರರಾಷ್ಟ್ರೀಯ ಮಾರ್ಗಗಳು ಸಂಧಿಸುವ ಸ್ಥಳವಾಯಿತು. ಖಲೀಫ ಹರೂನ್ ಅಲ್ ರಷೀದನ (786-809) ಕಾಲದಲ್ಲಿ ಬಾಗ್ದಾದ್ ಸ್ವರ್ಣಯುಗವನ್ನು ಕಂಡಿತು. ಖಲೀಫರ ದರ್ಬಾರಿನವರು ಮತ್ತು ಅರಬ್ ಶ್ರೀಮಂತರಲ್ಲದೆ ಧನಿಕ ವ್ಯಾಪಾರಿಗಳು, ವಿದ್ವಾಂಸರು, ಗಾಯಕರು ಸಂಗೀತಜ್ಞರು, ನರ್ತಕಿಯರು ಅಲ್ಲಿ ವಾಸಿಸುತ್ತಿದ್ದರು. ಅದುವರೆಗೆ ಧರ್ಮ ಮತ್ತು ಕಾವಯಗಳ ಭಾಷೆಯಾಗಿದ್ದ ಅರಬ್ಬಿಗೆ ಪರ್ಷಿಯನ್, ಸಿರಿಯಾಕ್ ಮತ್ತು ಗ್ರೀಕ್ ಸಾಹಿತ್ಯಗಳ ಕೃತಿಗಳು ಭಾಷಾಂತರಗೊಂಡುವು. ಅನಂತರ ರಾಜಧಾನಿಯನ್ನು ತಾತ್ಪೂರ್ತಿಕವಾಗಿ ಉತ್ತರದ ಸಮರಕ್ಕೆ ಸ್ಥಳಾಂತರಿಸಲಾಯಿತು. 1258ರಲ್ಲಿ ಹೂಲಾಗೂ (1217-65) ಮತ್ತು ಅವರ ಮಂಗೋಲ್ ಅನುಯಾಯಿಗಳು ಕೊನೆಯ ಅಬ್ಬಾಸಿದ್ ಖಲೀಫನನ್ನು ಕೊಲೆಮಾಡಿ ಬಾಗ್ದಾದಿನ ಬಹು ಭಾಗವನ್ನು ನಾಶಮಾಡಿದರು. ಆಗ ನಗರದ ಕರಾಳಯುಗ ಪ್ರಾರಂಭವಾಗಿ 20ನೆಯ ಶತಮಾನದವರೆಗೂ ಮುಂದುವರಿಯಿತು. ಹೂಲಾಗೂ, ಅವನ ಅನಂತರ ತೈಮೂರ್ ಮತ್ತು ಇತರ ಮಂಗೋಲ್ ಮತ್ತು ಟಾರ್ಟರ್ ಆಕ್ರಮಣಕಾರರು ಈ ಪ್ರದೇಶದ ನೀರಾವರಿ ವ್ಯವಸ್ಥೆಯನ್ನು ನಾಶಗೊಳಿಸಿ ದಕ್ಷಿಣ ಮೆಸೊಪೋಟೇಮಿಯವನ್ನು ಬರಡುಗೊಳಿಸಿದರು. 16ನೆಯ ಶತಮಾನದಲ್ಲಿ ಮತ್ತು 17ನೆಯ ಶತಮಾನದ ಆದಿಭಾಗದಲ್ಲಿ ಸಫಾವಿದ್ ಪರ್ಷಿಯನ್ನರು ಮತ್ತು ಆಟೋಮನ್ ತುರ್ಕರ ನಡುವಣ ಕಲಹಕ್ಕೆ ಬಾಗ್ದಾದ್ ನಿಮಿತ್ತವಾಗಿತ್ತು. 1508ರಲ್ಲಿ 1ನೆಯ ಶಹ ಇಸ್ಮೈಲ್ ನಗರವನ್ನು ವಶಪಡಿಸಿಕೊಂಡ. ಮೂವತ್ತು ವರ್ಷಗಳ ಅನಂತರ ಸುಲ್ತಾನ್ ಸುಲೇಮಾನ್ ಇದನ್ನು ಅವನಿಂದ ಕಸಿದುಕೊಂಡ. 1621ರಲ್ಲಿ ಪರ್ಷಿಯನ್ನರು ಇದನ್ನು ತಿರುಗಿ ಆಕ್ರಮಿಸಿಕೊಂಡು 1638ರಲ್ಲಿ 4ನೆಯ ಮುರಾದನಿಗೆ ಬಿಟ್ಟುಕೊಟ್ಟರು. ಅಂದಿನಿಂದ ಒಂದನೆಯ ಮಹಾಯುದ್ಧದವರೆಗೂ ಬಾಗ್ದಾದ್ ಆಟೊಮನ್ ಗವರ್ನರನ ಸ್ಥಾನವಾಗಿತ್ತು. ಆ ಸಮಯದಲ್ಲಿ ನಗರ ಅನೇಕ ಸಲ ಟೈಗ್ರಿಸ್ ಮತ್ತು ಯುಫ್ರೇಟೀಸ್ ನದಿಗಳ ಪ್ರವಾಹಗಳಿಗೆ ಒಳಗಾಗಿತ್ತು. ಪ್ಲೇಗ್ ಪಿಡುಗು ಕೂಡ ಅನೇಕಸಲ ಇಲ್ಲಿಯ ಜನರನ್ನು ಆಹುತಿ ತೆಗೆದುಕೊಂಡಿತು. 1755ರಲ್ಲಿ ಬ್ರಿಟಿಷರು ಇಲ್ಲಿ ಒಂದು ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದರು. ಮಿಥಾತ್ ಪಾಪಾ ಇದರ ಗವರ್ನರ್ ಆಗಿದ್ದಾಗ ನಗರಕ್ಕೆ ತಂತಿ ವ್ಯವಸ್ಥೆ ಬಂತು. 1871ರಲ್ಲಿ ಬಾಗ್ದಾದ್ ರೈಲ್ವೆಯ ಆಗಮನದಿಂದ ನಗರಕ್ಕೆ ಅಂತರರಾಷ್ಟ್ರೀಯ ರಾಜಕೀಯದ ಪ್ರವೇಶವಾಯಿತು. 1917ರಲ್ಲಿ ಬ್ರಿಟಿಷ್ ಪಡೆಗಳು ನಗರವನ್ನು ಗೆದ್ದುಕೊಂಡುವು. 1921ರ ಆಗಸ್ಟ್ 23ರಂದು ಬ್ರಿಟಿಷರ ಒಪ್ಪಿಗೆಯಿಂದ ಸ್ವತಂತ್ರ ಇರಾಕ್ ದೇಶಕ್ಕೆ 1ನೆಯ ಫೈಸಲ್ ದೊರೆಯಾದ. ಬಾಗ್ದಾದ್ ಇದರ ರಾಜಧಾನಿಯಾಯಿತು. 1942ರಲ್ಲಿ ಬ್ರಿಟಿಷ್ ವಿರೋಧಿಗಳ ನಿಷ್ಫಲ ದಂಗೆಗೆ ಇದು ಕೇಂದ್ರವಾಗಿತ್ತು. 1958ರಲ್ಲಿ ಸೇನಾಕ್ರಾಂತಿ ನಡೆದು ರಾಜಪ್ರಭುತ್ವ ಕೊನೆಗೊಂಡಿತು. (ಜಿ.ಕೆಯು; ಕೆ.ಎ.ಕೆ.)
ವಾಸ್ತುಶಿಲ್ಪ: ಮಹಮದ್ ಪೈಗಂಬರರ ಉತ್ತರಾಧಿಗಳೆಂದು ಷಿಯಾ ಪಂಥೀಯ ಮುಸ್ಲಿಮರು ನಂಬಿರುವ 12 ಇಮಾಮರಲ್ಲಿ 7ನೆಯ ಮತು 9ನೆಯ ಇಮಾಮರಾದ ಮುಸಾಅಲ್-ಕಜಿಮ್ ಮತ್ತು ಮುಹಮ್ಮದ್ ಅಲ್-ಜವಾದರ ಗೋರಿಗಳು ಬಾಗ್ದಾದಿನಲ್ಲಿವೆ. ಅಬ್ಬಾಸಿದ್ ಅರಮನೆ, 1232ರಲ್ಲಿ ಖಲೀಫ್ ಅಲ್ ಮಸ್ತಾನ್ ಸೀರ್ ಕಟ್ಟಿಸಿ ದತ್ತಿಯಾಗಿ ಕೊಟ್ಟ ಮಸ್ತಾನ್ ಸಿರಿಯ ಕಾಲೇಜು ಇವು ಅಬ್ಬಾಸಿದರ ಕಾಲದ 13ನೆಯ ಶತಮಾನದ ಕಟ್ಟಡಗಳು. ಈಗ ಪುರಾತನ ಅರಬ್ ಅವಶೇಷಗಳ ವಸ್ತು ಸಂಗ್ರಹಾಲಯವಾಗಿರುವ ಕಟ್ಟಡವನ್ನು 1358ರಲ್ಲಿ ಬಾಗ್ದಾದಿನ ಗವರ್ನರ್ ಮಿರ್ಜಾನ್ ಇಬ್ನ್ ಅಬ್ದಾ ಅಲ್ಲಾ ನಿರ್ಮಿಸಿದ. ರಾಜಿóಮೇನ್‍ನಲ್ಲಿರುವ ಮಸೀದಿಗೆ ಭವ್ಯವಾದ ಬಂಗಾರದ ಗುಮ್ಮಟವಿದೆ. ಇದು 19ನೆಯ ಶತಮಾನದ್ದು. ಇದೂ ಇತರ ನೂರಾರು ಮಸೀದಿಗಳೂ ಮಿನಾರತುಗಳೂ ವಾಸ್ತುವಿನ ದೃಷ್ಟಿಯಿಂದ ಗಮನಾರ್ಹವಾಗಿವೆ. ದೊರೆ 1ನೆಯ ಫೈಸಲನ ಸಮಾಧಿಭವನ, ಬಿಳಿ ಅರಮನೆ, ನಗರ ಭವನ, ರಕ್ಷಣ ಇಲಾಖೆಯ ಕಟ್ಟಡ, ಜಫರಾನಿಯಲ್ಲಿರುವ ಅಲ್-ಹಿಕ್ಮ ವಿಶ್ವ ವಿದ್ಯಾಲಯದ ಕಟ್ಟಡ, ಇರಾಕ್ ವಸ್ತು ಸಂಗ್ರಹಾಲಯದ ಕಟ್ಟಡ, ರಾಯಲ್ ಖಿಲಾಲ್ ಮೊದಲಾದವು ಆಧುನಿಕ ಕಟ್ಟಡಗಳಲ್ಲಿ ಕೆಲವು.
ಸಂಪರ್ಕ: ಬಾಗ್ದಾದಿನಲ್ಲಿ ಸುಮಾರು ಹನ್ನೆರಡು ಪ್ರಮುಖ ದಿನಪತ್ರಿಕೆಗಳು ಪ್ರಕಟವಾಗುತ್ತವೆ. ಅಲ್ಲದೆ ರಾಜಕೀಯ ವಾರ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು, ತಂತ್ರವಿದ್ಯಾ ಪತ್ರಿಕೆಗಳು, ಶಿಕ್ಷಣವೇ ಮೊದಲಾದವನ್ನು ಕುರಿತ ಸರ್ಕಾರಿ ಪ್ರಕಟಣೆಗಳು ಕೂಡ ಹೊರಡುತ್ತವೆ. ರೇಡಿಯೋ ಬಾಗ್ದಾದ್ ಇಡೀ ದೇಶಕ್ಕೆ ವಿವಿಧ ತರಂಗಾಂತರಗಳಲ್ಲಿ ಅನೇಕ ಭಾಷೆಗಳಲ್ಲಿ ಪ್ರಸಾರ ಮಾಡುತ್ತದೆ. ಅರಬ್ ರಾಷ್ಟ್ರಗಳಲ್ಲೇ ಮೊದಲನೆಯಾದ ಬಾಗ್ದಾದ್ ದೂರದರ್ಶನ ಕೇಂದ್ರ 1956ರಲ್ಲಿ ಕಾರ್ಯಾರಂಭ ಮಾಡಿತು. ಗ್ರಂಥಾಲಯಗಳು, ವಸ್ತುಸಂಗ್ರಹಾಲಯಗಳು: ಅರಬ್ಬೀ ಇತಿಹಾಸ ಮತ್ತು ಸಾಹಿತ್ಯ ಕೃತಿಗಳನ್ನೊಳಗೊಂಡಿರುವ ವಖ್ಫ್ ಗ್ರಂಥಾಲಯ (1929), ಬಾಗ್ದಾದ್ ವಿಶ್ವವಿದ್ಯಾಲಯ ಗ್ರಂಥಾಲಯ, ಅಬ್ಬಾಸಿದ್ ಅರಮನೆಯ ವಸ್ತು ಸಂಗ್ರಹಾಲಯ (1935), ಶಸ್ತ್ರಾಸ್ತ್ರ ಸಂಗ್ರಹಾಲಯ (1940), ಉಡುಪು ಮತ್ತು ಮಾನವಕುಲವಿವರಣೆಗಳ ಸಂಗ್ರಹಾಲಯ (1941), ಇರಾಕ್ ವಸ್ತು ಸಂಗ್ರಹಾಲಯ (1923), ಇರಾಕ್ ಪ್ರಕೃತಿವಿಜ್ಞಾನ ವಸ್ತುಸಂಗ್ರಹಾಲಯ (1946), ಅರಬ್ ಅವಶೇಷ ಸಂಗ್ರಹಾಲಯ (1937), ಆಧುನಿಕ ಕಲಾ ರಾಷ್ಟ್ರೀಯ ವಸ್ತು ಸಂಗ್ರಹಾಲಯ (1963) ಇವು ಬಾಗ್ದಾದಿನಲ್ಲಿರುವ ಮುಖ್ಯ ವಸ್ತು ಸಂಗ್ರಹಾಲಯಗಳು. (ಜಿ.ಕೆಯು.)