ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಿಜಾಪುರ
ಬಿಜಾಪುರ ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಹಾಗೂ ತಾಲ್ಲೂಕು ಮತ್ತು ಹೋಬಳಿ; ಅವುಗಳ ಆಡಳಿತ ಕೇಂದ್ರ ನಗರ. ಜಿಲ್ಲೆ : ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಈ ಜಿಲ್ಲೆ ಬೆಳಗಾಂವಿ ವಿಭಾಗಕ್ಕೆ ಸೇರಿದೆ. ಉ.ಅ.15( 19 ಮತ್ತು 17( 29 ಮತ್ತು ಪೂ.ರೇ. 75( 19 ಮತ್ತು 76( 32 ಗಳ ನಡುವಿದೆ. ಈ ಜಿಲ್ಲೆಯ ಪಶ್ಚಿಮಕ್ಕೆ ಬೆಳಗಾಂವಿ, ದಕ್ಷಿಣಕ್ಕೆ ಬಾಗಲಕೋಟೆ, ಆಗ್ನೇಯಕ್ಕೆ ರಾಯಚೂರು, ಈಶಾನ್ಯ ಮತ್ತು ಪೂರ್ವಕ್ಕೆ ಗುಲ್ಬರ್ಗ ಜಿಲ್ಲೆಗಳೂ ಉತ್ತರ ಮತ್ತು ವಾಯವ್ಯಕ್ಕೆ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಮತ್ತು ಸೊಲ್ಲಾಪುರ ಜಿಲ್ಲೆಗಳೂ ಮೇರೆಗಳಾಗಿವೆ. ಬಸವನ ಬಾಗೇವಾಡಿ, ಮುದ್ದೇಬಿಹಾಳ, ಬಿಜಾಪುರ, ಸಿಂದಗಿ, ಇಂಡಿ ತಾಲ್ಲೂಕುಗಳು. 18 ಹೋಬಳಿಗಳೂ 5 ಪಟ್ಟಣಗಳೂ ಇವೆ. ಗ್ರಾಮಾಂತರ ಜನಸಂಖ್ಯೆ 1,41,3290 ಪಟ್ಟಣ ವಾಸಿಗಳು 3,95,573 ಮಂದಿ. ಇದರಲ್ಲಿ 9,28,550 ಮಂದಿ ಪುರುಷರು. 8,80,313 ಮಂದಿ ಮಹಿಳೆಯರಿದ್ದು ಒಟ್ಟು ಜನಸಂಖ್ಯೆ 1,80,8863 (2001).
ಜಿಲ್ಲೆ ದಖನ್ ಪ್ರಸ್ಥಭೂಮಿಯ ಒಣ ಮತ್ತು ಶುಷ್ಕ ವಲಯದಲ್ಲಿದೆ. ದಖನ್ ಟ್ರ್ಯಾಪ್: ಕಲಾದಗಿ ಶಿಲಾವರ್ಗ ಮತ್ತು ಪರ್ಯಾಯ ದ್ವೀಪದ ನೈಸ್ ಶಿಲಾವರ್ಗದಿಂದ ಈ ಜಿಲ್ಲೆ ಕೂಡಿದೆ. ಭೀಮ ಮತ್ತು ಕೃಷ್ಣಾ ನದಿಗಳ ನಡುವಿನ ಪ್ರದೇಶ ಮುಖ್ಯವಾಗಿ ಟ್ರ್ಯಾಪ್ ಕಲ್ಲಿನ ಗುಡ್ಡಗಳಿಂದ ಕೂಡಿದೆ. ಬಾಗೇವಾಡಿ, ಸಿಂದಗಿ, ಮುದ್ದೇಬಿಹಾಳ ತಾಲ್ಲೂಕುಗಳಲ್ಲಿ ಸ್ಥಳೀಯ ನೈಸ್ ಶಿಲಾಗುಡ್ಡಗಳು ಮತ್ತು ಇತರ ರೂಪಾಂತರ ಶಿಲಾವರ್ಗಗಳಿವೆ. ಅಥಣಿ, ಬಿಜಾಪುರ ರಸ್ತೆಯ ದಕ್ಷಿಣಕ್ಕೆ ಹೆಚ್ಚಾಗಿ ಸವಕಲು ಉಳಿಕೆ ಗುಡ್ಡಗಳಿವೆ. ಕೃಷ್ಣಾನದಿಯ ಬಳಿ ಅನೇಕ ಸಣ್ಣ ದಿಣ್ಣೆಗಳಿವೆ. ತಿಕೋಟದ ಇನ್ನೊಂದು ಪಾಶ್ರ್ವದಲ್ಲೂ ಇದೇ ಬಗೆಯ ಭೂಲಕ್ಷಣಗಳು ಕಂಡುಬರುತ್ತವೆ. ಕಲಾದಗಿ ಶ್ರೇಣಿಯಲ್ಲಿ ಅಡ್ಡಡ್ಡಲಾಗಿ ಹಬ್ಬಿರುವ ಶಿಲಾ ಸ್ತರಗಳಲ್ಲಿ ಮಡ್ಡಿ ಮತ್ತು ಸ್ವಲ್ಪ ಮಟ್ಟಿಗೆ ರೂಪಾಂತರಿತ ಶಿಲೆಗಳು ಕಂಡುಬರುತ್ತವೆ. ಈ ಶ್ರೇಣಿಯನ್ನು ಉತ್ತರ ಘಟಪ್ರಭಾ ಶ್ರೇಣಿ ಮತ್ತು ಉತ್ತರ ಮಲಪ್ರಭಾ ಶ್ರೇಣಿ ಎಂದು ವಿಂಗಡಿಸಬಹುದು. ಮೊದಲನೆಯದು ತೇರದಾಳದಿಂದ ಕೃಷ್ಣಾಕಣಿವೆಯ ಕಡೆಗೆ ಹಬ್ಬಿದೆ. ಎರಡನೆಯದು ಸಮರೂಪದ ಶಿಖರ ಸಾಲು ಮತ್ತು ಸ್ವಾಭಾವಿಕ ಇಳಿಜಾರುಗಳಿಂದ ಕೂಡಿದ್ದು ಬೆಳಗಾವಿ ನಗರದ ಬಳಿಯಿಂದ ಪ್ರಾರಂಭವಾಗುತ್ತದೆ. ಇದರ ಪಶ್ಚಿಮ ಭಾಗ ಕೆರೂರ ಘಟ್ಟ ಎಂದು ಹೆಸರಾಗಿದೆ. ಬಾದಾಮಿ ಗುಡ್ಡ ಸಮೂಹಗಳು ಕೆಂಪು ಮರಳು ಕಲ್ಲುಗಳಿಂದ ಕೂಡಿವೆ. ಗುಳೇದ ಗುಡ್ಡ ಬೆಟ್ಟಗಳು ಸಮತಟ್ಟಾದ ತುದಿಗಳಿಂದ ಕೂಡಿವೆ. ಬಿಜಾಪುರ ಜಿಲ್ಲೆಯಲ್ಲಿರುವ ಎಲ್ಲ ಶಿಲಾವರ್ಗಕ್ಕೂ ಪರ್ಯಾಯ ದ್ವೀಪ ನೈಸ್ ಶಿಲಾ ಸಂಕೀರ್ಣವೇ ಮೂಲ ಶಿಲೆಯಾಗಿದೆ. ನೈಸ್ ಶಿಲೆ ಮುಖ್ಯವಾಗಿ ಹುನಗುಂದ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳಲ್ಲಿ ಕಂಡುಬರುತ್ತದೆ. ಇಲ್ಲಿಯ ಪ್ರಾಚೀನ ಶಿಲಾವರ್ಗದಲ್ಲಿ ಷಿಸ್ಟ್, ಫೈಲೈಟ್ಸ್, ಹ್ಯಾಮಟೈಟ್, ಕ್ವಾಟ್ರ್ಸ್ ಶಿಲೆಗಳಿವೆ. ಷಿಸ್ಟ್‍ನಲ್ಲಿ ಹಾರ್ನ್ ಬ್ಲೆಂಡ್ ಷಿಸ್ಟ್, ಮೈಕಷಿಸ್ಟ್, ಕ್ಲೋರೈಟ್ ಷಿಸ್ಟ್, ಹ್ಯಾಮಟೈಟ್ ಷಿಸ್ಟ್ ಇತ್ಯಾದಿ ಪ್ರಭೇದಗಳಿವೆ. ಕಲಾದಗಿ ಶ್ರೇಣಿಗಳು ಮಡ್ಡಿ ಶಿಲೆಗಳಿಗೆ ಸೇರಿದ್ದು ಮೇಲಣ ಭೀಮಾ ಶ್ರೇಣಿಯಲ್ಲಿ ಸುಣ್ಣ ಕಲ್ಲುಗಳು ಇದ್ದರೆ ಕೆಳಗಣ ಭೀಮಾ ಶ್ರೇಣಿಯಲ್ಲಿ ಬೆಣಚು ಕಲ್ಲು ಮತ್ತು ಒರಟು ಮರಳು ಕಲ್ಲುಗಳಿವೆ.
ಈ ಜಿಲ್ಲೆಯನ್ನು ಭೀಮಾ ಕಣಿವೆ. ಮಧ್ಯದ ಪ್ರಸ್ಥಭೂಮಿ, ಡೋಣಿ ಕಣಿವೆ, ಕೃಷ್ಣಾ ಕಣಿವೆ, ದಕ್ಷಿಣ ಶ್ರೇಣಿಗಳು, ಆಗ್ನೇಯದ ಗುಡ್ಡಗಳು ಮತ್ತು ಹುನಗುಂದ ಬಯಲು ಮತ್ತು ಬಿಜಾಪುರ ನಗರ ಪ್ರದೇಶ ಎಂದು ಏಳು ಭಾಗಗಳಾಗಿ ವಿಂಗಡಿಸಬಹುದು. ಭೀಮಾ ಕಣಿವೆ ಭೀಮಾ ನದಿಯು ದಕ್ಷಿಣ ದಂಡೆಯಲ್ಲಿ 6 ರಿಂದ 12 ಕಿಮೀ ಅಗಲವಾಗಿ ನದಿಯ ಉದ್ದಕ್ಕೂ ಹಬ್ಬಿದೆ. ಪ್ರವಾಹ ತಂದು ಹಾಕುವ ಮೆಕ್ಕಲು ಮಣ್ಣಿನಿಂದ ಈ ಪ್ರದೇಶ ವ್ಯವಸಾಯಕ್ಕೆ ತೋಟಗಾರಿಕೆಗೆ ಹೆಚ್ಚು ಉಪಯೋಗ. ಈ ಭಾಗದ ಹಳ್ಳಿಗಳು ಜನಭರಿತವಾಗಿಯೂ ಸಂಪದ್ಭರಿತವಾಗಿಯೂ ಇವೆ. ಮಧ್ಯದ ಪ್ರಸ್ಥಭೂಮಿ ಭೀಮಾ ಕಣಿವೆಯ ದಕ್ಷಿಣಕ್ಕೆ ಬರುತ್ತದೆ. ಅಲ್ಲಿಯ ಪ್ರದೇಶ ಬಲುಮಟ್ಟಿಗೆ ಬರಡಾಗಿದ್ದು ಬೋಳು ಬೆಟ್ಟಗುಡ್ಡಗಳಿಂದ ಕೂಡಿದೆ. ಈ ಪ್ರಸ್ಥ ಭೂಮಿ ದಕ್ಷಿಣಕ್ಕೆ ಕೃಷ್ಣಾ ಕಣಿವೆಯವರೆಗೂ ಹಬ್ಬಿದ್ದು ಮಧ್ಯೆ ಡೋಣಿ ಕಣಿವೆಯಿಂದ ಬೇರ್ಪಟ್ಟಿದೆ. ಅಲ್ಲಲ್ಲಿ ತುರುಚಲು ಕಾಡು ಬಿಟ್ಟರೆ ಬಯಲು ಬೆಟ್ಟಗಳೇ ಸಾಮಾನ್ಯ. ಇಲ್ಲಿ ನೀರಾವರಿ ಸೌಲಭ್ಯ ಕಡಿಮೆ. ಖುಷ್ಕಿ ಬೆಳೆ ಹೆಚ್ಚು. ಕುರಿಸಾಕಣೆ ಮುಖ್ಯ ಕಸಬು. ಜಿಲ್ಲಾ ಕೇಂದ್ರವಾದ ಬಿಜಾಪುರ ಈ ವಲಯದಲ್ಲಿದೆ. ಡೋಣಿ ಕಣಿವೆ ಮಧ್ಯ ಪ್ರಸ್ಥಭೂಮಿಯ ಭಾಗವಾಗಿಯೇ ಇದ್ದರೂ ಅದು ಕೆಲವು ವಿಶಿಷ್ಟ ಭೂಲಕ್ಷಣಗಳನ್ನು ಹೊಂದಿದೆ. ಅಗಲವಾದ ನದಿ ಪಾತ್ರ, ಕಪ್ಪು ಮಣ್ಣಿನ ಹೊದಿಕೆ. ಅಲ್ಲಲ್ಲಿ ಬರುವ ಚೌಳು ನೆಲ ಮತ್ತು ಜವುಗು ಪ್ರದೇಶಗಳು ಇಲ್ಲಿಯ ಪ್ರಸ್ಥಭೂಮಿ ಲಕ್ಷಣಗಳಿಗೆ ಹೊರತಾಗಿವೆ. ಒಳ್ಳೆ ಮಳೆ ಬಿದ್ದ ವರ್ಷಗಳಲ್ಲಿ ಗೋಧಿ ಮತ್ತು ದ್ವಿದಳಧಾನ್ಯಗಳು ಹೇರಳವಾಗಿ ಬೆಳೆಯುತ್ತವೆ. ಕೃಷ್ಣಾ ಕಣಿವೆಯಲ್ಲಿ ದಕ್ಷಿಣ ಭಾರತದ ದೊಡ್ಡ ನದಿಗಳಲ್ಲೊಂದಾದ ಕೃಷ್ಣಾ ನದಿ ಈ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಹರಿಯುತ್ತದೆ. ಇದರ ಪಾತ್ರ ವಿಸ್ತಾರವಾದುದು. ಮಳೆಗಾಲದಲ್ಲಿ ಇದು ಮೆಕ್ಕಲು ಮಣ್ಣನ್ನು ತನ್ನ ದಂಡೆಯುದ್ಧಕ್ಕೂ ಚೆಲ್ಲುತ್ತದೆ. ಬೇಸಿಗೆಯಲ್ಲಿ ನೀರು ಕಡಿಮೆ ಆಗುವುದರಿಂದ ಈ ನದಿ ಪಾತ್ರ ಬೇಸಾಯಕ್ಕೆ ಉಪಯುಕ್ತವಾಗುವುದು. ದಕ್ಷಿಣ ಶ್ರೇಣಿಗಳು ಘಟಪ್ರಭಾ ಮತ್ತು ಮಲಪ್ರಭಾ ಶ್ರೇಣಿಗಳಿಂದ ಕೂಡಿವೆ. ಗಟ್ಟಿ ಬಂಡೆಗಳು, ಮರಳ ಕಲ್ಲು ಮತ್ತು ಬೆಣಚು ಕಲ್ಲುಗಳಿಂದ ಕೂಡಿದ ಈ ಪ್ರದೇಶದಲ್ಲಿ ನೀರಿನ ಹರಿವೆಯಿಂದ ಸುಣ್ಣ ಕಲ್ಲು ಮತ್ತು ಜೇಡಿಮಣ್ಣಿನ ಭಾಗಗಳಲ್ಲಿ ಭೂಸವೆತ ಉಂಟಾಗಿದೆ. ಫಲವತ್ತಾದ ಮಣ್ಣಿಲ್ಲ, ಕುರುಚಲು ಕಾಡುಗಳಿವೆ. ಆಗ್ನೇಯ ಬೆಟ್ಟಗಳು ಮುದ್ದೇಬಿಹಾಳ ತಾಲ್ಲೂಕು ಒಳಗೊಂಡಿದೆ. ಮಲಪ್ರಭಾ ನದಿಯ ಬಲ ಪಾಶ್ರ್ವಕ್ಕೆ ಕಂಡುಬರುವ ನೈಸ್ ಮತ್ತು ಗ್ರಾನೈಟ್ ಶಿಲೆಯ ಗುಡ್ಡಗಳು ಕಪ್ಪು ಮಣ್ಣು ಬಯಲಿನಿಂದ ಕೂಡಿವೆ. ಹತ್ತಿ ಉತ್ಪನ್ನಗಳಿಗೆ ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿರುವ ಈ ವಲಯ ಮೊದಲಿನಿಂದಲೂ ಸಂಪದ್ಭರಿತ. ಬಿಜಾಪುರ ಪಟ್ಟಣ ಪ್ರದೇಶ ಎತ್ತರವಾದ ದಿಬ್ಬದ ಮೇಲಿದೆ. ಭೂಗರ್ಭ ನೀರು ಸಾಕಷ್ಟು ದೊರೆಯುತ್ತದೆ. ಹದಿನಾರು ಹದಿನೇಳನೆಯ ಶತಮಾನಗಳಲ್ಲಿ ಬಿಜಾಪುರ ರಾಜ್ಯದ ರಾಜಧಾನಿಯಾಗಿದ್ದ ಈ ಪ್ರದೇಶ ಸ್ಮಾರಕಗಳ ಬೀಡು. ದ್ವಿದಳ ಧಾನ್ಯಗಳು, ಹತ್ತಿ, ಗೋಧಿ ಮೊದಲಾದ ವಸ್ತುಗಳ ವಾಣಿಜ್ಯ ಕೇಂದ್ರ.
ಕೃಷ್ಣಾ ನದಿ ಈ ಜಿಲ್ಲೆಯ ಮಧ್ಯಭಾಗದಲ್ಲಿ ಹರಿಯುತ್ತದೆ. ಭೀಮಾ, ಡೋಣಿ, ಘಟಪ್ರಭಾ ಮತ್ತು ಮಲಪ್ರಭಾ ಇದರ ಉಪನದಿಗಳು. ಜಿಲ್ಲೆಯಲ್ಲಿ ಕೃಷ್ಣಾ ನದಿ ಹರಿವಿನ ಉದ್ದ 201 ಕಿಮೀ.ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳಗಾಂವಿ ಗಡಿಯಾಗಿ ಸುಮಾರು 24 ಕಿವೀ ದೂರ ಹರಿದ ನಂತರ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಈ ನದಿ ಮುಂದೆ ರಾಯಚೂರು ಜಿಲ್ಲೆಯನ್ನು ಪ್ರವೇಶಿಸುತ್ತದೆ. ಭೀಮಾನದಿ ಕೃಷ್ಣೆಯ ಮುಖ್ಯ ಉಪನದಿಗಳಲ್ಲೊಂದು, ಅದು ಮಹಾರಾಷ್ಟ್ರದ ಸಹ್ಯಾದ್ರಿ ಶ್ರೇಣಿಯಲ್ಲಿ ಹುಟ್ಟಿ ಆಗ್ನೇಯಭಿಮುಖವಾಗಿ ಹರಿದು ಕರ್ನಾಟಕದ ಗುಲ್ಬರ್ಗ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗಳ ಸರಹದ್ದಾಗಿ ಹರಿದು ಮುಂದೆ ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳ ನಡುವಿನ ಗಡಿಯಾಗಿ ಮಾರ್ಪಡುತ್ತದೆ. ಇದರಿಂದಾಗಿ ಭೀಮಾ ನದಿಯ ದಕ್ಷಿಣ ದಂಡೆ ಮಾತ್ರ ಬಿಜಾಪುರ ಜಿಲ್ಲೆಗೆ ಸೇರಿದ್ದು. ಸುಮಾರು 96 ಕಿಮೀನಷ್ಟು ದೂರ ಹರಿಯುತ್ತದೆ. ಕೃಷ್ಣಾನದಿಯ ಉಪನದಿಗಳಲ್ಲೆಲ್ಲ ಅತ್ಯಂತ ಹೆಚ್ಚು ದೂರ ಹರಿಯುತ್ತದೆ. ಕೃಷ್ಣಾ ನದಿಯ ಉಪನದಿಗಳಲ್ಲೆಲ್ಲ ಅತ್ಯಂತ ಹೆಚ್ಚು ದೂರ (ಸುಮಾರು 160 ಕಿಮೀ) ಈ ಜಿಲ್ಲೆಯಲ್ಲಿ ಹರಿಯುವ ನದಿ ಡೋಣಿ.
ಈ ನದಿಯೂ ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳಗಾಂವಿ ಜಿಲ್ಲೆಯನ್ನು ಹಾದು ಈ ಜಿಲ್ಲೆಯನ್ನು ಬಿಜಾಪುರದ ತಾಲ್ಲೂಕಿನಲ್ಲಿ ಪ್ರವೇಶಿಸುತ್ತದೆ. ಬಿಜಾಪುರ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳಲ್ಲಿ ಹರಿಯುವ ಈ ನದಿ ಈ ಜಿಲ್ಲೆಯನ್ನು ತಾಳೀಕೋಟೆಗೆ ಸ್ವಲ್ಪ ದಕ್ಷಿಣದಲ್ಲಿ ದಾಟಿ ಸುಮಾರು 20 ಕಿಮೀನಷ್ಟು ಮುಂದೆ ಹರಿದು ಕೃಷ್ಣಾ ನದಿಯೊಂದಿಗೆ ಕೂಡಿಕೊಳ್ಳುತ್ತದೆ. ಡೋಣಿ ಮಳೆಗಾಲದಲ್ಲಿ ಬಿರುಸಾಗಿ ಹರಿದರೆ ಬೇಸಿಗೆಯಲ್ಲಿ ಬತ್ತಿಕೊಂಡಿರುತ್ತದೆ. ಅದರ ಪಾತ್ರದಲ್ಲಿ ನದಿ ತಂದುಹಾಕುವ ಕೆಸರು ಮಣ್ಣ ತುಂಬಿರುತ್ತದೆ. ಬಿಜಾಪುರದ ಒಣ ಪ್ರದೇಶದಲ್ಲಿ ಹರಿಯುವ ಈ ನದಿ ವ್ಯವಸಾಯಕ್ಕೆ ತುಂಬ ಅನುಕೂಲಕರವಾಗಿದ್ದು ಡೋಣಿ ಬೆಳೆದರೆ ಓಣೆಲ್ಲ ಜೋ¼ ಎಂಬ ನಾಣ್ಣುಡಿ ಇದೆ.
ಬಿಜಾಪುರ ಜಿಲ್ಲೆಯ ಅರಣ್ಯ ಸಂಪತ್ತು ಅಲ್ಪ. ಇಲ್ಲಿಯ ಅರಣ್ಯ ಕುರುಚಲು ಮತ್ತು ಮುಳ್ಳು ಮರಗಳಿಂದ ಕೂಡಿದೆ. ಜಿಲ್ಲೆಯ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿರುವ ಈ ಕಾಡುಗಳಲ್ಲಿ ಕಕ್ಕೆ, ದಿಂಡಲು, ಗಂಧ, ನೇರಳೆ, ಆಲ ಮೊದಲಾದ ಮರಗಳಿವೆ. ಜಿಲ್ಲೆಯ ಉತ್ತರ ಭಾಗ ಮತ್ತು ಪೂರ್ವ ಭಾಗದ ಕೆಲವು ತಾಲ್ಲೂಕುಗಳಲ್ಲಿ ಕಾಡುಗಳೇ ಇಲ್ಲ. ಉಳಿದ ಭಾಗಗಳಲ್ಲಿ ಜಾಲಿ ಮರಗಳು ಹೆಚ್ಚು. ಬೇವು, ಹುಣಿಸೆ ಮೊದಲಾದ ಕೆಲವು ಮರಗಳಿವೆ. ಈಗ ಕೈಗೊಳ್ಳಲಾಗುತ್ತಿರುವ ಜಿಲ್ಲಾ ಅರಣ್ಯ ಅಭಿವೃದ್ಧಿ ಯೋಜನೆಗಳಿಂದ ಸ್ವಲ್ಪ ಮಟ್ಟಿನ ಅರಣ್ಯ ವಿಸ್ತರಣೆ ಮತ್ತು ಸಂರಕ್ಷಣೆ ಕಾರ್ಯ ನಡೆದಿದೆ. ಇಲ್ಲಿ ಕಾಡು ಕಡಿಮೆ ಇರುವುದರಿಂದ ಸ್ವಾಭಾವಿಕವಾಗಿಯೇ ಕಾಡು ಪ್ರಾಣಿಗಳೂ ಕಡಿಮೆ. ಇಲ್ಲಿಯ ಅರಣ್ಯಗಳಲ್ಲಿ ಕಾಡುಹಂದಿ, ಕಾಡುಬೆಕ್ಕು, ಕತ್ತೆ ಕಿರುಬ, ತೋಳ, ನರಿ, ಚಿಗರೆ, ಮೊಲ, ಮಂಗ ಮೊದಲಾದ ಪ್ರಾಣಿಗಳೂ, ನವಿಲು ಕ್ರೌಂಚ ಕವುಜುಗ, ಪುರಲೆಹಕ್ಕಿ, ಪಾರಿವಾಳ, ಕಾಡುಕೋಳಿ, ಕಬ್ಬಾರೆ ಮೊದಲಾದ ಪಕ್ಷಿಗಳೂ ಹೆಬ್ಬಾವು, ಮಣ್ಣುಮುಕ್ಕ, ಕ್ಯಾರೆ, ನಾಗರ, ಚೆಂಗಿ, ಹಸಿರು, ಮಂಡಲ ಮತ್ತು ಬಾಲಪಡಕ ಮೊದಲಾದ ಹಾವುಗಳಿವೆ. ನದಿ, ಕೆರೆ, ಕುಂಟೆಗಳಲ್ಲಿ ಮೀನುಗಳುಂಟು.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಒಣ ವಾಯುಗುಣ. ವರ್ಷದಲ್ಲಿ ಸರಾಸರಿ 37 ದಿವಸ ಮಳೆಯಾಗುವುದರಿಂದ ಒಣ ದಿನಗಳು ಹೆಚ್ಚು. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಅಧಿಕ ಉಷ್ಣತೆ ಇರುವುದು. ಮುಂಗಾರು ಮಳೆಯ ಕಾಲ ಜೂನ್‍ನಿಂದ ಸೆಪ್ಟೆಂಬರ್ ತನಕ. ವಾರ್ಷಿಕ ಸರಾಸರಿ ಮಳೆ 682.6 ಮಿಮೀ. ಕೃಷ್ಣಾ ನದಿಯ ದಕ್ಷಿಣದ ಶ್ರೇಣಿಗಳು ಮತ್ತು ಮುದ್ದೇಬಿಹಾಳದ ಉತ್ತರಕ್ಕೆ ಇರುವ ಶ್ರೇಣಿಗಳಲ್ಲಿ ಕಟ್ಟಡದ ಕಲ್ಲುಗಳು ಅಗಾಧ ಪ್ರಮಾಣದಲ್ಲಿವೆ. ಈ ಜಿಲ್ಲೆಯ ಅಧಿಕ ಭಾಗ ಕಪ್ಪು ಮಣ್ಣು ಅಥವಾ ಎರೆಮಣ್ಣಿನಿಂದ ಕೂಡಿದೆ. ಕಪ್ಪು ಮಣ್ಣಿನ ಭೂಮಿ ಹೆಚ್ಚು ಫಲವತ್ತಾಗಿದ್ದು ಜೋಳ, ಹತ್ತಿ, ನೆಲಗಡಲೆ, ತೊಗರಿ ಮೊದಲಾದ ಬೆಳೆಗಳಿಗೆ ಉತ್ಕøಷ್ಟವಾಗಿದೆ. ಬಿಜಾಪುರ ಜಿಲ್ಲೆಯಲ್ಲಿ ಹಲವು ಮುಖ್ಯ ನದಿಗಳು ಹರಿಯುವುದರಿಂದ ನದಿ ಬಯಲುಗಳಲ್ಲಿ ಗೋಡು ಮಣ್ಣು ಅಥವಾ ಮೆಕ್ಕಲು ಮಣ್ಣು ವ್ಯವಸಾಯಕ್ಕೆ ಅನುಕೂಲಕರವಾಗಿದೆ. ಈ ಜಿಲ್ಲೆಯಲ್ಲಿ ಮಳೆಯನ್ನು ಅವಲಂಬಿಸಿದ ಜಿರಾಯತ್ ನೀರಾವರಿ ಸೌಲಭ್ಯದ ಬಾಗಾಯತ್ ವ್ಯವಸಾಯಗಳುಂಟು. ಖಾರಿಫ್ ಬೆಳೆಯಲ್ಲಿ ಜೋಳ, ಬಾಜ್ರ, ಬತ್ತ, ದ್ವಿದಳ ಧಾನ್ಯಗಳು, ನೆಲಗಡಲೆ, ಮೆಣಸಿನಕಾಯಿ ಮೊದಲಾದ ಬೆಳೆಗಳನ್ನು ಬೆಳೆಸುತ್ತಾರೆ. ರಾಬಿ ಅಥವಾ ಹಿಂಗಾರು ಮಳೆ ಆಧಾರಿತ ಬೆಳೆಯಲ್ಲಿ ಜೋಳ, ಗೋಧಿ, ಕುಸುಬೆ, ನಾರಗಸೆ ಬೀಜ ಮೊದಲಾದವನ್ನು ಬೆಳೆಸುತ್ತಾರೆ. ಕೆಂಪು ಮಣ್ಣಿನ ಪ್ರದೇಶದಲ್ಲಿ ವಿವಿಧ ಗೊಬ್ಬರಗಳ ಬಳಕೆಯಿಂದ ಒಳ್ಳೆಯ ಬೆಳೆ ತೆಗೆಯಬಹುದು. ಕೆರೆ, ಕುಂಟೆ, ಕಾಲುವೆಗಳಿರುವ ಪ್ರದೇಶಗಳಲ್ಲಿ ನೀರಾವರಿ ಬೆಳೆ ಬೆಳೆಸುತ್ತಾರೆ. ಇಂಥ ಕಡೆಗಳಲ್ಲಿ ಕಬ್ಬು, ಬತ್ತ, ಹಣ್ಣುಗಳು, ತರಕಾರಿ ಮೊದಲಾದವನ್ನು ಬೆಳೆಸುತ್ತಾರೆ. ಕೊತ್ತಂಬರಿ, ಮೆಣಸಿನ ಕಾಯಿ, ಅರಿಶಿನ, ಬೆಳ್ಳುಳ್ಳಿ, ಈರುಳ್ಳಿ, ತೊಗರಿ, ಹುರುಳಿ, ಹೆಸರು, ಅವರೆ, ಹೊಗೆಸೊಪ್ಪು ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಸುತ್ತಾರೆ. ತೆಂಗು, ಅಡಿಕೆ, ದ್ರಾಕ್ಷಿ ಮೊದಲಾದ ತೋಟದ ಬೆಳೆಗಳನ್ನು ಅಲ್ಲಲ್ಲಿ ಬೆಳೆಸಲಾಗುತ್ತದೆ.
ಈ ಜಿಲ್ಲೆಯಲ್ಲಿ ಮಲಪ್ರಭಾ ಯೋಜನೆ, ಚಿತ್ತವಾಡಗಿ ಯೋಜನೆ, ಮೇಲಣ ಕೃಷ್ಣಾ ಯೋಜನೆ, ಮೊದಲಾದವು ಕಾರ್ಯಗತವಾಗುತ್ತಿವೆ. ಕೆರೆಗಳೇ ಮುಖ್ಯ ನೀರಾವರಿ ಆಸರೆಗಳಾಗಿವೆ. ಇನ್ನೂ ಕೆಲವೇ ವರ್ಷಗಳಲ್ಲಿ ಜಿಲ್ಲೆಯ ಗಣನೀಯ ಪ್ರದೇಶ ಕಾಲುವೆ ನೀರಾವರಿಗೆ ಒಳಪಡುತ್ತದೆ.
ಈ ಜಿಲ್ಲೆ ಕೈಗಾರಿಕೆಯಲ್ಲಿ ಮುಂದುವರಿದಿಲ್ಲ. ಆದರೆ ಹತ್ತಿಬೀಜ ಬೇರ್ಪಡಿಸಿ ಅರಳೆ ತೆಗೆಯುವ ಉದ್ಯಮ ಕಳೆದ ಶತಮಾನದಿಂದಲೂ ಅಭಿವೃದ್ಧಿ ಹೊಂದುತ್ತಿದೆ. ಎಳ್ಳು, ಕುಸುಬೆ, ಹರಳು, ಬೇವಿನ ಬೀಜ ಇವುಗಳಿಂದ ಎಣ್ಣೆ ತೆಗೆಯುವ ಗಾಣಗಳು ಮತ್ತು ಯಂತ್ರಗಳು ಸ್ಥಾಪಿತವಾಗಿವೆ. ನೆಲಗಡಲೆ ಎಣ್ಣೆ ತೆಗೆಯುವ ಗಿರಣಿಗಳು ಇವೆ. ದಖನ್ನಿನ ಮಸ್ಲಿನ್ ಬಟ್ಟೆಗಳು ತಮ್ಮ ನವುರುತನಕ್ಕೂ ಬಾಳಿಕೆಗೂ ಪ್ರಾಚೀನ ಕಾಲದಿಂದಲೂ ಪ್ರಸಿದ್ಧ. ಪಾದರಕ್ಷೆಗಳು ಮತ್ತು ಇತರ ಚರ್ಮದ ವಸ್ತುಗಳನ್ನು ಇಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ. ಕುಂಬಾರಿಕೆ ಬಡಗಿ ಕೆಲಸ ಮೊದಲಾದವು ಪರಂಪರಾನುಗತವಾಗಿ ಬಂದಿವೆ. ಲೋಹದ ಕಾರ್ಯಾಗಾರಗಳಿವೆ.
ಜಿಲ್ಲೆಯಲ್ಲಿ ವ್ಯವಸಾಯ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ನೆರವಾಗಿ ಅನೇಕ ಸಹಕಾರಿ ಮತ್ತು ಹಣಕಾಸು ಸಂಸ್ಥೆಗಳು ಕೃಷೀತರ ಸಾಲ ಸಹಕಾರ ಸಂಘಗಳೂ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‍ಗಳೂ ಕೇಂದ್ರ ಸಹಕಾರ ಬ್ಯಾಂಕುಗಳೂ ಮತ್ತು ಕೈಗಾರಿಕಾ ಸಹಕಾರ ಬ್ಯಾಂಕುಗಳೂ ಇವೆ.
ಈ ಜಿಲ್ಲೆಯ ಮೂಲಕ ಒಂದು ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತದೆ. ಅದು ಚಿತ್ರದುರ್ಗ-ಕುಷ್ಟಗಿ-ಬಿಜಾಪುರ ಮತ್ತು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರಗಳನ್ನು ಸಂಪರ್ಕಿಸುತ್ತದೆ. ಇದರ ಉದ್ದ 193 ಕಿಮೀ. ಮಾರ್ಗ ಮಧ್ಯದಲ್ಲಿ ಇದು ಬಿಜಾಪುರ ಜಿಲ್ಲೆಯ ಬಾಗೇವಾಡಿ, ಹೂವಿನ ಹಿಪ್ಪರಗಿ, ಮುದ್ದೇಬಿಹಾಳ ಪಟ್ಟಣಗಳ ಮೂಲಕ ಹಾದು ಹೋಗುತ್ತದೆ. ಮಹಾರಾಷ್ಟ್ರದ ರತ್ನಗಿರಿಯಿಂದ ಆಂಧ್ರಪ್ರದೇಶದ ಹೈದರಾಬಾದನ್ನು ಸಂಪರ್ಕಿಸಿರುವ ರಾಜ್ಯ ಹೆದ್ದಾರಿ ಈ ಜಿಲ್ಲೆಯಲ್ಲಿ ತಿಕೋಟ, ಬಿಜಾಪುರ, ಹಿಪ್ಪರಗಿ, ಮತ್ತು ಸಿಂದಗಿಗಳ ಮೂಲಕ ಹಾದುಹೋಗುತ್ತದೆ. ಸೊಲ್ಲಾಪುರ-ಹುಬ್ಬಳ್ಳಿ ಮಾರ್ಗ ಇನ್ನೊಂದು ಪ್ರಮುಖ ರಾಜ್ಯ ಹೆದ್ದಾರಿ. ಅದು ಬಿಜಾಪುರ-ಬಾಗೇವಾಡಿಯನ್ನು ಸಂಪರ್ಕಿಸುತ್ತದೆ.
ಈ ಜಿಲ್ಲೆ ಕೇಂದ್ರ ಸ್ಥಳದಲ್ಲಿದ್ದು ಹೊರ ಜಿಲ್ಲೆಗಳೊಡನೆ ಸಂಪರ್ಕಸಾಧಿಸುವ ಅನೇಕ ಮಾರ್ಗಗಳಿವೆ. ಬಿಜಾಪುರ-ಬಾಗೇವಾಡಿ-ತಾಳಿಕೋಟೆ-ಗುಲ್ಭರ್ಗ ರಸ್ತೆ ಮೊದಲಾದವು ಮುಖ್ಯವಾದುವು. ಇವಲ್ಲದೆ ಜಿಲ್ಲೆಯ ಕೇಂದ್ರವಾದ ಬಿಜಾಪುರದೊಂದಿಗೆ ಎಲ್ಲ ತಾಲ್ಲೂಕುಗಳನ್ನು ಕೂಡಿಸುವ ವಿವಿಧ ರಸ್ತೆ ಮಾರ್ಗಗಳಿವೆ. ಬಿಜಾಪುರ-ಜಮಖಂಡಿ, ಬಿಜಾಪುರ-ಬಾಗಲಕೋಟೆ ಮತ್ತು ಮುದ್ದೇಬಿಹಾಳ-ಹುನಗುಂದ ಮಾರ್ಗಗಳಲ್ಲಿ ಕೃಷ್ಣಾನದಿಗೆ ಸೇತುವೆಗಳನ್ನು ಕಟ್ಟಲಾಗಿದೆ. ದೇವಣಗಾಂವ್ ಮತ್ತು ಧೂಳಖೇಡ ಬಳಿ ಭೀಮಾನದಿಗೆ ಸೇತುವೆಗಳನ್ನು ನಿರ್ಮಿಸಲಾಗಿದೆ. ಪಟ್ಟದಕಲ್ಲು ಬಳಿ ಮಲಪ್ರಭಾ ನದಿಗೂ ಮೂಧೋಳ ಮತ್ತು ಬಾಗಲಕೋಟೆ ಬಳಿ ಘಟಪ್ರಭಾ ನದಿಗೂ ಸೇತುವೆಗಳಿವೆ. ಡೋಣಿ ನದಿಗೆ ಅನೇಕ ಸೇತುವೆಗಳಿವೆ. ಹುಬ್ಬಳ್ಳಿ ಸೊಲ್ಲಾಪುರ ರೈಲು ಮಾರ್ಗ ಈ ಜಿಲ್ಲೆಯ ಮೂಲಕ ಹಾದು ಹೋಗುತ್ತದೆ. ಈ ಜಿಲ್ಲೆಯಲ್ಲಿ ಬಾದಾಮಿ, ಬಾಗಲಕೋಟೆ, ಬಿಜಾಪುರ ಮತ್ತು ಇಂಡಿ ರೋಡು-ಇವು ಪ್ರಮುಖ ನಿಲ್ದಾಣಗಳು. ಜಿಲ್ಲೆಯಲ್ಲಿ ಒಟ್ಟು 126 ಕಿಮೀ ರೈಲು ಮಾರ್ಗಗಳಿವೆ. ಅಂಚೆ, ತಂತಿ, ವಿದ್ಯುತ್ ಸೌಕರ್ಯಗಳಿವೆ. ಬಿಜಾಪುರ ಜಿಲ್ಲೆಯಲ್ಲಿ ಸರ್ಕಾರ ಮತ್ತು ಖಾಸಗಿ ಸಂಘ ಸಂಸ್ಥೆಗಳ ಪ್ರಯತ್ನದಿಂದಾಗಿ ಹಲವಾರು ಶಿಕ್ಷಣ ಸಂಸ್ಥೆಗಳು ವಿದ್ಯಾಪ್ರಸಾರದಲ್ಲಿ ನಿರತವಾಗಿವೆ. ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಿವೆ. ಕಲಾ ಮತ್ತು ವಿಜ್ಞಾನ ಪದವಿ ಕಾಲೇಜುಗಳಿವೆ. ಮಹಿಳಾ ಕಾಲೇಜು, ವೈದ್ಯಕೀಯ, ವಾಣಿಜ್ಯ ಮತ್ತು ಶಿಕ್ಷಣ ತರಬೇತಿ ಕಾಲೇಜುಗಳಿವೆ. ಸೈನಿಕ ತರಬೇತಿ ಶಾಲೆ, ತಾಂತ್ರಿಕ ಸಂಸ್ಥೆಗಳು ಎಂಜಿನಿಯರಿಂಗ್ ಕಾಲೇಜುಗಳಿವೆ. ಈ ಜಿಲ್ಲೆ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿದೆ. ಹರಿಜನ ಗಿರಿಜನರಿಗೆ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಸರ್ಕಾರ ಅನೇಕ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದೆ. ಆಸ್ಪತ್ರೆಗಳೂ ಔಷಧಾಲಯಗಳೂ ಆರೋಗ್ಯ ಮತ್ತು ಕುಟುಂಬ ಯೋಜನಾ ಕೇಂದ್ರಗಳೂ ಇವೆ. ಬಿಜಾಪುರ ಜಿಲ್ಲೆಯಲ್ಲಿ ಶಿಲಾಯುಗದ ಕಾಲದಿಂದಲೂ ಜನವಸತಿ ಇದ್ದುದಕ್ಕೆ ಆಧಾರಗಳು ದೊರೆತಿವೆ. ಇಲ್ಲಿಯ ಖ್ಯಾಡ, ಥಾಣಕಳಿರೂರು, ಬಾಗಲಕೋಟೆ, ತೇರದಾಳ, ಸಾಲ್ವಡಗಿ, ಬಾದಾಮಿ, ಜಾಲಿಹಾಳ. ಬನಹಟ್ಟಿ ಮೊದಲಾದ ಕಡೆಗಳಲ್ಲಿ ಅತ್ಯಂತ ಹಳೆಯ ಶಿಲಾಯುಗ ಕಾಲದಿಂದ ಹಿಡಿದು ಲೋಹಯುಗ ಕಾಲದವರೆಗಿನ ವಿವಿಧ ಪ್ರಾಚೀನ ನಿವೇಶನಗಳು ಕಂಡುಬಂದಿವೆ. ಪೌರಾಣಿಕವಾಗಿಯೂ ಇಲ್ಲಿಯ ಅನೇಕ ಸ್ಥಳಗಳು ಪ್ರಾಮುಖ್ಯ ಪಡೆದಿವೆ. ಪಶ್ಚಿಮ ಚಾಲುಕ್ಯರ ರಾಜಧಾನಿ ಬಾದಾಮಿಗೆ ಪ್ರಾಚೀನ ಕಾಲದಲ್ಲಿ ವಾತಾಪಿ ಎಂಬ ಹೆಸರೂ ಇತ್ತು. ಅಗಸ್ತ್ಯಮಹರ್ಷಿಗಳು ದಕ್ಷಿಣಕ್ಕೆ ಬಂದಾಗ ಜನಪೀಡರಾಗಿದ್ದ ವಾತಾಪಿ ಮತ್ತು ಇಲ್ವಲರೆಂಬ ರಾಕ್ಷಸರು ಇಲ್ಲಿ ಇದ್ದರೆಂದು ಪ್ರತೀತಿ ಇದೆ. ಅಗಸ್ತ್ಯರು ಅವರನ್ನು ನಾಶಮಾಡಿದರು. ಜಮಖಂಡಿ ತಾಲ್ಲೂಕಿನ ಆಸಂಗಿ ಬಳಿಯ ಆಸಗಿ ಎಂಬ ಸ್ಥಳದಲ್ಲಿ ಅಗಸ್ತ್ಯರ ಆಶ್ರಮವಿತ್ತೆಂದು ಹೇಳಲಾಗಿದೆ. ಮಹಾಕೂಟದಲ್ಲಿ ಪುಷ್ಕರಣಿಯನ್ನು ಅಗಸ್ತ್ಯ ಸ್ಥಾಪಿಸಿದನೆಂಬ ಐತಿಹ್ಯವಿದೆ. ಪರಶುರಾಮ ಕ್ಷತ್ರಿಯರನ್ನು ಸಂಹರಿಸಿ ಬಂದು ಮಲಪ್ರಭಾ ನದಿಯಲ್ಲಿ ತನ್ನ ಕೊಡಲಿಯನ್ನು ತೊಳೆದನೆಂದೂ ಆಗ ನದಿಯೆಲ್ಲಾ ಕೆಂಪಾಯಿತೆಂದೂ ಅದನ್ನು ಕಂಡ ಜನ ಅಯ್ಯೋಹೊಳೆ ಎಂದರೆಂದೂ ಪ್ರತೀತಿ. ಮುಂದೆ ಆ ಸ್ಥಳಕ್ಕೆ ಅಯ್ಯೋವೊಳೆ ಅಥವಾ ಐಹೊಳೆ ಎಂಬ ಹೆಸರು ಬಂದಿತು ಎಂಬುದು ಇನ್ನೊಂದು ಪೌರಾಣಿಕ ಪ್ರಸಂಗ. ಬಾಗಲಕೋಟೆಯನ್ನು ರಾವಣನ ಸಂಗೀತಗಾರರಿಗೆ ದತ್ತಿ ನೀಡಲಾಗಿತ್ತೆಂದು ಪ್ರತೀತಿ ಇದೆ. ಹಾಗೆಯೇ ಇಲ್ಲಿಯ ಅನೇಕ ಸ್ಥಳಗಳು ಪೌರಾಣಿಕ ಹಿನ್ನಲೆ ಪಡೆದಿದೆ.
ಇತಿಹಾಸ ಕಾಲಕ್ಕೆ ಬಂದರೆ ಕ್ರಿಸ್ತಶಕಾರಂಭ ಕಾಲದಲ್ಲಿ ರೋಮನ್ ಸಾಮ್ರಾಜ್ಯದ ಪರವಾಗಿ ವಾಣಿಜ್ಯಕ್ಕಾಗಿ ಕರ್ನಾಟಕಕ್ಕೆ ಬರುತ್ತಿದ್ದ ಅನೇಕ ವರ್ತಕರು ಪ್ರವಾಸಿಗರು ತಮ್ಮ ಕಥನಗಳನ್ನು ಬರೆದಿಟ್ಟಿದ್ದಾರೆ. ಅವುಗಳಲ್ಲಿ ಈ ಜಿಲ್ಲೆಯ ಹಿಪ್ಪರಗಿ ಪಟ್ಟದ ಕಲ್ಲು, ಇಂಡಿ ಮೊದಲಾದ ಸ್ಥಳಗಳಿವೆ ಎಂದು ಗುರುತಿಸಲಾಗಿದೆ. ಈ ಜಿಲ್ಲೆಯನ್ನು ಮೌರ್ಯರು, ಸಾತವಾಹನರು ಮುಂದೆ ಕದಂಬರು ಆಳಿದರು. ಕ್ರಿ. ಶ. ಆರನೆಯ ಶತಮಾನದಿಂದ ಈ ಜಿಲ್ಲೆ ಭಾರತದ ಇತಿಹಾಸದಲ್ಲೇ ಮಹತ್ತ್ವದ ಸಾಮ್ರಾಜ್ಯ ಒಂದನ್ನು ಸ್ಥಾಪಿಸಿದ ಬಾದಾಮಿ ಚಾಲುಕ್ಯರ ನೆಲೆವೀಡಾಯಿತು. ಅವರು ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆರನೆಯ ಶತಮಾನದಿಂದ ಎಂಟನೆಯ ಶತಮಾನದ ತನಕ ಆಳಿದರು. ಅನಂತರ ನೆರೆಯ ಗುಲ್ಬರ್ಗ ಜಿಲ್ಲೆಯಲ್ಲಿರುವ ಮಾನ್ಯಖೇಟವನ್ನೂ ರಾಜಧಾನಿಯನ್ನಾಗಿ ಮಾಡಿಕೊಂಡು ರಾಷ್ಟ್ರಕೂಟರು ಹತ್ತನೆಯ ಶತಮಾನದ ತನಕ ಆಳಿದರು. ತರುವಾಯ ಬಿದರೆ ಜಿಲ್ಲೆಯ ಕಲ್ಯಾಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮತ್ತೆ ಚಾಲುಕ್ಯರೇ ಹನ್ನೆರಡನೆಯ ಶತಮಾನದ ತನಕ ಆಳಿದರು. ಹೀಗೆ ಬಿಜಾಪುರ ಜಿಲ್ಲೆ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಸಾಮ್ರಾಜ್ಯಗಳ ರಾಜಧಾನಿಗಳು ಸ್ಥಾಪಿತವಾಗಿದ್ದರಿಂದ ಇಲ್ಲಿ ಅನೇಕ ಪ್ರಾಚೀನ ಐತಿಹಾಸಿಕ ಸ್ಥಳಗಳಿವೆ.
ಸಿಂದಗಿ ತಾಲ್ಲೂಕಿನ ಹಿಪ್ಪರಗಿಯಲ್ಲಿ ಪ್ರಾಚೀನ ಕಾಲ್ಮೀಶ್ವರ ದೇವಾಲಯವಿದೆ. ಅದನ್ನು ಕವಿ ಕಾಳಿದಾಸ ಪೂಜಿಸುತ್ತಿದ್ದನೆಂದು ಪ್ರತೀತಿ ಇದೆ. ಕನ್ನಡ ಕವಿ ಚಕ್ರವರ್ತಿ ರನ್ನ ಹುಟ್ಟಿದ ಮುದವೊಳಲು ಅಥವಾ ಮುಧೋಳ್ ಈಗ ಅದೇ ಹೆಸರಿನ ತಾಲ್ಲೂಕು ಕೇಂದ್ರವಾಗಿದೆ.
ಹನ್ನೆರಡನೆಯ ಶತಮಾನದಲ್ಲಿ ನಡೆದ ವೀರಶೈವ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಯಲ್ಲಿ ಈ ಜಿಲ್ಲೆ ಮಹತ್ತ್ವದ ಪಾತ್ರ ವಹಿಸಿತು. ಈಗಿನ ಬಸವನ ಬಾಗೇವಾಡಿ ಬಸವಣ್ಣನವರ ಜನ್ಮಸ್ಥಳ. ಇಲ್ಲಿ ಬಸವೇಶ್ವರರ ಭವ್ಯ ದೇವಾಲಯವಿದೆ. ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಸೇರುವ ಕೂಡಲಸಂಗಮದಲ್ಲಿ ಸಂಗಮೇಶ್ವರ ದೇವಾಲಯವಿದೆ. ಇಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ.
ಸಾಲೊಟಗಿ ಹತ್ತನೆಯ ಶತಮಾನದಲ್ಲಿ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ವಿಜಯನಗರ ಮತ್ತು ಶಾಹೀ ಸುಲ್ತಾನರ ನಡುವೆ 1565ರ ಐತಿಹಾಸಿಕ ಯುದ್ಧ ನಡೆದ ರಕ್ಕಸ ತಂಗಡಿ ಕೂಡಲಸಂಗಮದ ಬಳಿ ಇದೆ. ಬಿಜಾಪುರ ಹದಿನಾರು ಮತ್ತು ಹದಿನೇಳನೆಯ ಶತಮಾನಗಳಲ್ಲಿ ಆದಿಲ್‍ಶಾಹೀ ಮನೆತನದ ರಾಜಧಾನಿಯಾಗಿತ್ತು. ತೊರವೆ ರಾಮಾಯಣವನ್ನು ರಚಿಸಿದ ಕುಮಾರ ವಾಲ್ಮೀಕಿಯ ಸ್ಥಳ ಬಿಜಾಪುರ ತಾಲ್ಲೂಕಿನ ತೊರವಿ.
ಕಲ್ಯಾಣದ ಚಾಲುಕ್ಯರ ನಿರ್ಗಮನಾನಂತರ ಈ ಜಿಲ್ಲೆಯ ಭಾಗಗಳು ದೇವಗಿರಿಯ ಯಾದವರ ಮತ್ತು ದ್ವಾರಸಮುದ್ರದ ಹೊಯ್ಸಳರ ರಾಜ್ಯಗಳ ವ್ಯಾಪ್ತಿಗೆ ಸೇರಿದುವು. 1347 ಗುಲ್ಬರ್ಗದಲ್ಲಿ ಬಹುಮನಿ ರಾಜ್ಯ ಸ್ಥಾಪನೆಯಾದಾಗ ಈ ಜಿಲ್ಲೆಯ ಉತ್ತರ ಮತ್ತು ಪೂರ್ವಭಾಗಗಳು ಆ ರಾಜ್ಯಕ್ಕೆ ಸೇರಿದುವು. 15ನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಬಿಜಾಪುರದ ಆದಿಲ್‍ಶಾಹಿಗಳು ಪ್ರಬಲರಾಗಿ ಬಹಮನಿ ರಾಜ್ಯ ಒಡಿದುಹೋಯಿತು. ಆಗ ಹುಟ್ಟಿಕೊಂಡ ಐದು ಶಾಹೀ ರಾಜ್ಯಗಳಲ್ಲಿ ಬಿಜಾಪುರವೂ ಒಂದು. 1686ರಲ್ಲಿ ಬಿಜಾಪುರ ರಾಜ್ಯವನ್ನು ಮೊಗಲ್ ಚಕ್ರವರ್ತಿ ಔರಂಗಜೇಬ್ ವಶಪಡಿಸಿಕೊಂಡ. 1723ರ ತನಕ ಇದು ಮೊಗಲರ ಅಧೀನದಲ್ಲಿತ್ತು. ಮುಂದೆ ಸ್ವತಂತ್ರ ರಾಜ್ಯ ಸ್ಥಾಪಿಸಿದ ಹೈದರಾಬಾದಿನ ನಿಜಾಮ ಉಲ್‍ಮುಲ್ಕನ ಆಧಿಪತ್ಯಕ್ಕೊಳಗಾಯಿತು. 1760ರಲ್ಲಿ ಇದು ಮರಾಠರ ವಶಕ್ಕೆ ಹೋಯಿತು.
ಹೈದರ್ ಮತ್ತು ಟಿಪ್ಪುಸುಲ್ತಾನರ ಕಾಲದಲ್ಲಿ ಮೈಸೂರು ರಾಜ್ಯ ಪ್ರಬಲವಾದ ಮೇಲೆ 1778-87ರ ಅವಧಿಯಲ್ಲಿ ಈ ಜಿಲ್ಲೆಯ ದಕ್ಷಿಣ ಭಾಗ ಮೈಸೂರು ರಾಜ್ಯಕ್ಕೆ ಸೇರಿತು. ಮುಂದೆ ಮರಾಠರ ಆಳ್ವಿಕೆಗೆ ಒಳಪಟ್ಟಿತು. 1818ರಲ್ಲಿ ಬಿಜಾಪುರ ಭಾಗವನ್ನು ಮರಾಠರಿಂದ ಬ್ರಿಟಿಷರು ವಶಪಡಿಸಿಕೊಂಡರು. ಅದು ಮುಂಬಯಿ ಪ್ರಾಂತದ ಭಾಗವಾಯಿತು. 1864ರ ತನಕವೂ ಜಿಲ್ಲೆಯ ವಿವಿಧ ಭಾಗಗಳು ಧಾರವಾಡ, ಸೊಲ್ಲಾಪುರ, ಸತಾರ ಮತ್ತು ಬೆಳಗಾಂವಿ ಕಲೆಕ್ಟರೇಟುಗಳ ಆಡಳಿತಕ್ಕೊಳಪಟ್ಟಿದ್ದುವು. 1864ರಲ್ಲಿ ಈಗಿನ ಬಿಜಾಪುರ ಜಿಲ್ಲೆಯನ್ನು ರಚಿಸಲಾಯಿತು. ಆಗ ಕಲಾದಗಿ ಅದರ ಆಡಳಿತ ಕೇಂದ್ರವಾಗಿತ್ತು. 1885ರಲ್ಲಿ ಜಿಲ್ಲಾ ಆಡಳಿತ ಕೇಂದ್ರವನ್ನು ಬಿಜಾಪುರಕ್ಕೆ ವರ್ಗಾಯಿಸಲಾಯಿತು. ಈ ಜಿಲ್ಲೆಯ ವ್ಯಾಪ್ತಿಯಲ್ಲಿದ್ದು ಸಂಸ್ಥಾನಗಳಾಗಿದ್ದ ಜಮಖಂಡಿ, ಔಂದ್, ಕುರಂದವಾಡ, ಮೂಧೋಳ ಮತ್ತು ಸಾಂಗಲಿಗಳನ್ನು 1948ರಲ್ಲಿ ಜಿಲ್ಲೆಗೆ ಸೇರಿಸಲಾಯಿತು. 1947ರಿಂದ ಮುಂಬಯಿ ಪ್ರಾಂತದ ಒಂದು ಜಿಲ್ಲೆಯಾಗಿತ್ತು. 1956ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯಾದಾಗ ಬಿಜಾಪುರ ಕರ್ನಾಟಕ ರಾಜ್ಯಕ್ಕೆ ಸೇರಿತು.
ನಾಗಚಂದ್ರ, ಕೊಂಡುಗುಳಿ ಕೇಶಿರಾಜ, ಚಾಮರಸ, ದೇವರದಾಸಿಮಯ್ಯ, ಮಡಿವಾಳ ಮಾಚಯ್ಯ, ಕೃಷ್ಣದ್ವೈಪಾಯನಾಚಾರ್ಯ, ರುಕ್ಮಾಂಗದ ಪಂಡಿತ, ಮಹಿಪತಿದಾಸ ಮೊದಲಾದ ಸಾಹಿತ್ಯ ದಿಗ್ಗಜಗಳು, ತತ್ವಜ್ಞಾನಿಗಳು ಇಲ್ಲಿ ಹುಟ್ಟಿ ಬಾಳಿದರು. ಆಲೂರು ವೆಂಕಟರಾಯರು ಹುಟ್ಟಿದ್ದು ಬಿಜಾಪುರದಲ್ಲಿ, ಮೈಲಾರ ಮಹದೇವಪ್ಪ, ಹರ್ಡೇಕರ್ ಮಜಂಜಪ್ಪ, ಫ. ಗು. ಹಳಕಟ್ಟಿ ಮೊದಲಾದವರು ಇದನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ಸಾಹಿತ್ಯ ಸಮಾಜೋದ್ಧಾರಕರಾಗಿ ದುಡಿದರು. ಈ ಜಿಲ್ಲೆಗೆ ಸೇರಿದ ರಾಮಚಂದ್ರದತ್ತಾತ್ರೇಯ ರಾನಡೆ ದೊಡ್ಡ ವಿದ್ವಾಂಸಕರಾಗಿದ್ದರು. ಬಿ. ಡಿ. ಜತ್ತಿಯವರು ಭಾರತದ ಉಪರಾಷ್ಟ್ರಪತಿಯಾಗಿದ್ದರು. ಇವರಲ್ಲದೆ ಈ ಜಿಲ್ಲೆಯ ಅನೇಕ ಮಂದಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಮಾಜೋದ್ಧಾರದಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಕಾಣಿಕೆ ಸಲ್ಲಿಸಿದ್ದಾರೆ. (ಡಿ.ಎಸ್.ಜೆ.)
ತಾಲ್ಲೂಕು: ಜಿಲ್ಲೆಯ ವಾಯವ್ಯ ಭಾಗದಲ್ಲಿರುವ ಬಿಜಾಪುರ ತಾಲ್ಲೂಕನ್ನು ಈಶಾನ್ಯ ಮತ್ತು ಉತ್ತರದಲ್ಲಿ ಇಂಡಿ, ಪೂರ್ವದಲ್ಲಿ ಸಿಂದಗಿ, ಆಗ್ನೇಯ ಹಾಗೂ ಪೂರ್ವದಲ್ಲಿ ಬಸವನ ಬಾಗೇವಾಡಿ, ದಕ್ಷಿಣ ನೈಋತ್ಯ ಮತ್ತು ಬಾಗಲಕೋಟೆ ಜಿಲ್ಲೆಯೂ ಉತ್ತರದಲ್ಲಿ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯೂ ಸುತ್ತುವರಿದಿದೆ. ನಾಗಠಾಣ, ಬಿಜಾಪುರ, ಕೋಟ, ಬಬಲೇಶ್ವರ ಮತ್ತು ಮಂದಾಪುರ ಹೋಬಳಿಗಳು: ಒಟ್ಟು 108 ಗ್ರಾಮಗಳು ಮತ್ತು ಒಂದು ನಗರ ಇದೆ ವಿಸ್ತೀರ್ಣ 2,657.8 ಚ. ಕಿಮೀ. ಬಿಜಾಪುರ ತಾಲ್ಲೂಕಿನಲ್ಲಿ 2,92,856 ಮಂದಿ ಪುರುಷರು, 2,76,025 ಮಂದಿ ಮಹಿಳೆಯರೂ ಇದ್ದು ಒಟ್ಟು ಜನಸಂಖ್ಯೆ 5,68,881 ಇದೆ (2001) ಇದರಲ್ಲಿ 3,15,574 ಮಂದಿ ಗ್ರಾಮ ವಾಸಿಗಳು, 2,53,307 ಮಂದಿ ಪಟ್ಟಣ ವಾಸಿಗಳಾಗಿದ್ದಾರೆ.
ಕೃಷ್ಣಾನದಿ ಈ ತಾಲ್ಲೂಕಿನ ದಕ್ಷಿಣದ ಗಡಿಯಲ್ಲಿ ಬೀಳಗಿ ತಾಲ್ಲೂಕನ್ನು ಬೇರ್ಪಡಿಸಿ ಪೂರ್ವಾಭಿಮುಖವಾಗಿ ಹರಿಯುತ್ತದೆ. ದೋಣಿನದಿ ತಾಲ್ಲೂಕಿನ ಮಧ್ಯೆ ಪೂರ್ವಾಭಿಮುಖವಾಗಿ ಹರಿದು ಮುಂದೆ ಬಸವನ ಬಾಗೇವಾಡಿ ತಾಲ್ಲೂಕನ್ನು ಪ್ರವೇಶಿಸುವುದು. ಈ ನದಿಗಳ ನೀರನ್ನು ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲಾಗಿದೆ. ಕೆಲವು ಕೆರೆ ಮತ್ತು ಬಾವಿಗಳ ನೀರನ್ನೂ ವ್ಯವಸಾಯಕ್ಕೆ ಬಳಸುವುದಂಟು. ಬೇಸಿಗೆ ಕಾಲದಲ್ಲಿ ಹಚ್ಚು ಸೆಕೆ ಎನಿಸಿದರೂ ಉಳಿದ ಕಾಲದಲ್ಲಿ ಹವಾ ಹಿತಕರವೆನ್ನಬಹುದು. ಸರಾಸರಿ ಮಳೆ 721 ಮಿಮೀ. (1963) ಮುಖ್ಯ ಬೆಳೆಗಳು ಜೋಳ, ಸಜ್ಜೆ, ಗೋಧಿ, ಬತ್ತ ಇವುಗಳ ಜೊತೆಗೆ ಹತ್ತಿ, ನೆಲಗಡಲೆ, ಕಬ್ಬು, ದ್ವಿದಳ ಧಾನ್ಯಗಳನ್ನೂ ಬೆಳೆಸುತ್ತಾರೆ.
ಮೊದಲಿನಿಂದಲೂ ಈ ತಾಲ್ಲೂಕು ಗೃಹಕೈಗಾರಿಕೆಗಳಿಗೆ ಪ್ರಸಿದ್ಧಿ. ದೊಡ್ಡ ಕೈಗಾರಿಕೆಗಳು ಅಭಿವೃದ್ಧಿಯಾಗಿಲ್ಲ. ಸೇಂಗಾ ಬೀಜಗಳನ್ನು ಸುಲಿಯುವ ಕೆಲವು ಕಾರ್ಖಾನೆಗಳೂ ಹತ್ತಿ ನೂಲುವ ಮತ್ತು ಬೀಜವನ್ನು ಬೇರ್ಪಡಿಸುವ ಕಾರ್ಖಾನೆಗಳೂ ಇವೆ. ಉಣ್ನೆ ಮತ್ತು ಹತ್ತಿನೇಯ್ಗೆ ಇದ್ದು ಕಂಬಳಿ ಮುಂತಾದವನ್ನು ತಯಾರಿಸುವರು. ಚರ್ಮ ಮತ್ತು ನಾರಿನ ವಸ್ತುಗಳ ಉತ್ಪಾದನೆಯುಂಟು. ಮರಗೆಲಸ, ಗಾಜಿನ ಬಳೆಗಳನ್ನು ತಯಾರಿಸುವುದು. ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳನ್ನು ಮಾಡುವುದು, ಬೀಡಿ ತಯಾರಿಕೆ ಇತ್ಯಾದಿ ಗೃಹ ಕೈಗಾರಿಕೆಗಳೂ ಉಂಟು. ವಾಣಿಜ್ಯೋದ್ಯಮಕ್ಕೆ ಸಹಕಾರಿಯಾಗಿ ಕೆಲವು ಬ್ಯಾಂಕುಗಳು ಸಹಕಾರ ಸಂಘಗಳೂ ತಾಲ್ಲೂಕಿನಲ್ಲಿವೆ.
ಈ ತಾಲ್ಲೂಕಿನ ಪೂರ್ವದಲ್ಲಿ ಹುಬ್ಬಳ್ಳಿ-ಸೊಲ್ಲಾಪುರ ರೈಲು ಮಾರ್ಗ ದಕ್ಷಿಣೋತ್ತರವಾಗಿ ಹಾದು ಹೋಗಿದೆ. ಬಿಜಾಪುರ ಸಿಂದಗಿ, ಗುಲ್ಬರ್ಗ, ಹುಬ್ಬಳ್ಳಿ, ಬಸವನ ಬಾಗೇವಾಡಿ, ಬಬಲೇಶ್ವರ, ಅಥಣಿ, ಜತ್ ಮುಂತಾದೆಡೆಗೆ ರಸ್ತೆ ಸಂಪರ್ಕವಿದೆ. ವಿದ್ಯುತ್, ಅಂಚೆ, ತಂತಿ ಮತ್ತು ದೂರವಾಣಿಯ ಸೌಲಭ್ಯಗಳು ಇವೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳೂ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜುಗಳೂ ಇದ್ದು ಈ ತಾಲ್ಲೂಕಿನಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲವಿದೆ. ಸರ್ಕಾರಿ ಆಸ್ಪತ್ರೆ ಮತ್ತು ಔಷಧಾಲಯಗಳೂ ಇವೆ.
ಈ ತಾಲ್ಲೂಕಿನಲ್ಲಿ ಚಾರಿತ್ರಿಕ ಮತ್ತು ಧಾರ್ಮಿಕ ಪ್ರಾಮುಖ್ಯವಿರುವ ಅನೇಕ ಸ್ಥಳಗಳಿವೆ. ಅವುಗಳಲ್ಲಿ ಬಿಜಾಪುರದ ಪೂರ್ವಕ್ಕೆ ಸುಮಾರು 16 ಕಿ,ಮೀ ದೂರದಲ್ಲಿರುವ ಕುಮಟಗಿ ಆದಿಲ್‍ಶಾಹಿಗಳ ಕಾಲದಲ್ಲಿ ರಾಜರ ಮತ್ತು ಶ್ರೀಮಂತರ ವಿಶ್ರಾಂತಿ ಮತ್ತು ಕ್ರೀಡಾವಿನೋದ ಸ್ಥಳವಾಗಿತ್ತು. ಇಲ್ಲಿ ಆ ಕಾಲದ ಒಂದು ದೊಡ್ಡ ಕೆರೆ, ಅನೇಕ ಕೊಳಗಳು, ಕಾರಂಜಿಗಳು, ಮಂಟಪಗಳು ಮತ್ತು ಬಂಗಲೆಗಳ ಅವಶೇಷಗಳು ಇವೆ. ಬಿಜಾಪುರದ ನೈಋತ್ಯಕ್ಕೆ 24 ಕಿ.ಮೀ ದೂರದಲ್ಲಿರುವ ಬಬಲೇಶ್ವರದ ಶಾಂತವೀರ ಮಠ ಪ್ರಸಿದ್ಧವಾದುದು. ಇಲ್ಲಿ 1780ರಲ್ಲಿ ರಚಿತವಾದ ಸಿದ್ಧೇಶ್ವರ ದೇವಾಲಯವಿದೆ. ಕಾಖಂಡಕಿ ಮತ್ತು ಮಂದಾಪುರ ಐತಿಹಾಸಿಕ ಪ್ರಾಮುಖ್ಯವಿರುವ ಸ್ಥಳಗಳು. ಉಪ್ಪಲದಿನ್ನಿಯಲ್ಲಿ ಸಂಗಮನಾಥ ದೇವಾಲಯ ಇದೆ. ಕೃಷ್ಣಾ ನದಿಯ ಎಡದಂಡೆಯ ಮೇಲೆ ಇರುವ ಬಬಲಾದ ಗ್ರಾಮದಲ್ಲಿ ಪ್ರಾಚೀನ ಚಂದ್ರಗಿರಿ ಮಠ ಇದೆ. ಇದೇ ನದಿಯ ದಂಡೆಯಲ್ಲಿರುವ ಜೈನಾಪುರ ಒಂದು ತೀರ್ಥಕ್ಷೇತ್ರ. ಬಿಜಾಪುರದ ಪಶ್ಚಿಮದಲ್ಲಿ 22 ಕಿ.ಮೀ ದೂರದಲ್ಲಿರುವ ತಿಕೋಟದಲ್ಲಿ ಇಬ್ರಾಹಿಂ ಆದಿಲ್‍ಶಾನ ಕಾಲದಲ್ಲಿ ಪ್ರಧಾನ ಮಂತ್ರಿಯಾಗಿದ್ದ ತಾಜಕಾನ್ ಕಟ್ಟಿಸಿದ ವಾಡೆ ಮತ್ತು ಮಸೀದಿ ಇವೆ. ಬಿಜಾಪುರಕ್ಕೆ 8 ಕಿ.ಮೀ ದೂರದಲ್ಲಿರುವ ತೊರವಿಯಲ್ಲಿ ಎರಡನೆಯ ಇಬ್ರಾಹಿಂ ಆದಿಲ್‍ಶಾನ ಕಾಲದಲ್ಲಿ ಕಟ್ಟಿದ ಅರಮನೆಗಳ ಅನೇಕ ಅವಶೇಷಗಳೂ, ನರಸಿಂಹ ದೇವಾಲಯ, ನರಸಿಂಹ ತೀರ್ಥ, ಮಸೀದಿ ಮುಂತಾದವೂ ಇವೆ.
ಪಟ್ಟಣ: ಬಿಜಾಪುರ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿಯ ಆಡಳಿತ ಕೇಂದ್ರ. ಬಿಜಾಪುರ ಪಟ್ಟಣ ಸೊಲ್ಲಾಪುರದ ದಕ್ಷಿಣಕ್ಕೆ 96 ಕಿಮೀ ದೂರದಲ್ಲೂ ಬೆಂಗಳೂರಿನಿಂದ ವಾಯವ್ಯಕ್ಕೆ 579 ಕಿಮೀ ದೂರದಲ್ಲೂ ಇದೆ. ಪಟ್ಟಣದ ವಿಸ್ತೀರ್ಣ 14.50 ಚಕಿಮೀ, ಮಹಾನಗರ ಜನಸಂಖ್ಯೆ 2,53,307 ಕೇಂದ್ರ ನಗರ ಜನಸಂಖ್ಯೆ 2,45,946 (2001).
ಇಂದು ಬಿಜಾಪುರ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಪಟ್ಟಣ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅನೇಕ ಸರ್ಕಾರಿ ಕಚೇರಿಗಳು ಇಲ್ಲಿವೆ. ಇಲ್ಲಿ ವಿಜ್ಞಾನ ಕಲಾ ಹಾಗೂ ವಾಣಿಜ್ಯ ಕಾಲೇಜುಗಳೂ ವಿವಿಧ ಹಂತದ ಶಾಲೆಗಳೂ, ತಾಂತ್ರಿಕ ಶಿಕ್ಷಣ ಮತ್ತು ಸೈನಿಕ ತರಬೇತಿ ಶಾಲೆ ಇವೆ. ವಿದ್ಯುತ್, ಅಂಚೆ, ತಂತಿ, ದೂರವಾಣಿ ಮತ್ತು ವೈದ್ಯಕೀಯ ಸೌಲಭ್ಯಗಳಿವೆ. ಪಟ್ಟಣ ಸುತ್ತಮುತ್ತಲಿನ ಪ್ರದೇಶದ ಮುಖ್ಯ ವ್ಯಾಪಾರ ಸ್ಥಳ. ಅನೇಕ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿವೆ. ಉತ್ತಮ ಮಾರುಕಟ್ಟೆ ಸೌಲಭ್ಯಗಳಿವೆ. ಹತ್ತಿ ಮತ್ತು ಸೇಂಗಾ ವ್ಯಾಪಾರ ಇಲ್ಲಿಯ ವಿಶೇಷ. ಬಿಜಾಪುರ, ಹುಬ್ಬಳ್ಳಿ, ಸೊಲ್ಲಾಪುರ ರೈಲುಮಾರ್ಗದ ಒಂದು ಮುಖ್ಯನಿಲ್ದಾಣ. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಿಗೂ ಮುಖ್ಯ ಊರುಗಳಿಗೂ ಇಲ್ಲಿಂದ ಮೋಟಾರು ಸಂಪರ್ಕವಿದೆ. ಪಟ್ಟಣ ಪುರಸಭಾಡಳಿತಕ್ಕೆ ಸೇರಿದೆ.
ಬಿಜಾಪುರ ಆದಿಲ್‍ಶಾಹೀ ಅರಸರ ರಾಜಧಾನಿಯಾಗಿ ಪ್ರಸಿದ್ಧ. ಜಿಲ್ಲಾ ಮಧ್ಯದ ಪ್ರಸ್ಥಭೂಮಿಯಲ್ಲಿ ಡೋಣಿನದಿಯ ಜಲಾನಯನ ಭೂಮಿಯ ಉತ್ತರಕ್ಕೆ ಸಮುದ್ರ ಮಟ್ಟದಿಂದ 594 ಮೀ ಎತ್ತರವಿರುವ ಕಿರಿಯಗಲದ ಒಂದು ಮರಡಿಯ ಮೇಲೆ ಈ ಪಟ್ಟಣವನ್ನು ಕಟ್ಟಲಾಗಿದೆ. ಇಲ್ಲಿಂದ ಸುತ್ತಣ ಪ್ರದೇಶಗಳನ್ನು ಸುಲಭವಾಗಿ ಪರಿಶೀಲನೆ ಮಾಡಲು ಅನುಕೂಲವಾಗಿರುವುದರಿಂದ ಹಾಗೂ ಭೂಮಿಯ ಕೆಳತಳದಲ್ಲಿ ಸಮೃದ್ಧವಾಗಿ ನೀರಿರುವುದರಿಂದ ಆದಿಲ್‍ಶಾಹೀ ಅರಸರು ಬಿಜಾಪುರವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು. ಬಿಜಾಪುರದ ಮೂಲ ಹೆಸರು ವಿಜಯಪುರ. ಈ ಊರಿನ ಸಮೀಪದಲ್ಲಿ ದೊರೆತಿರುವ ಶಾಸನಗಳು 1036ರ ಸುಮಾರಿಗೆ ಈ ಹೆಸರು ಬಳಕೆಯಲ್ಲಿತ್ತೆಂಬುದನ್ನ ತೋರಿಸುತ್ತವೆ. ಸುಮಾರು 1100ರಲ್ಲಿ ನಾಗಚಂದ್ರ ಬರೆದ ಮಲ್ಲಿನಾಥ ಪುರಾಣದಲ್ಲಿ ವಿಜಯಪುರದ ಹೆಸರು ಬರುತ್ತದೆ. ಇಲ್ಲಿ ದೊರಕಿರುವ ಶಿಲಾಸ್ತಂಭವೊಂದು ಸುಮಾರು 7ನೆಯ ಶತಮಾನದ್ದು. ಈ ಶಿಲಾಸ್ತಂಭಕ್ಕೂ ವಿಜಯಪುರವೆಂಬ ಹೆಸರಿಗೂ ಸಂಬಂಧ ಕಲ್ಪಿಸುವುದಾದರೆ ಈ ಊರು 7ನೆಯ ಶತಮಾನಕ್ಕೂ ಹಿಂದಿನದು ಎಂದು ಊಹಿಸಬಹುದು. ಬಹಮನೀ ರಾಜ್ಯ ಸ್ಥಾಪನೆಯಾದಾಗ (1347)ಬಿಜಾಪುರ ಅದರ ಒಂದು ಮುಖ್ಯ ಸ್ಥಳವಾಗಿದ್ದು ಗುಲ್ಬರ್ಗ ಪ್ರಾಂತ್ಯಕ್ಕೆ ಸೇರಿತ್ತು. 1478ರಲ್ಲಿ ಈ ಸುತ್ತಣ ಪ್ರದೇಶ ಸೇರಿದ ಒಂದು ಪ್ರಾಂತ್ಯ ರಚನೆಯಾಗಿ ಬಿಜಾಪುರವೇ ಅದರ ಕೇಂದ್ರವಾಯಿತು. ಇಲ್ಲಿಯ ಪ್ರಾಂತ್ಯಾಧಿಕಾರಿ ಯೂಸುಫ್ ಆದಿಲ್ ಖಾನ್ ಸ್ವತಂತ್ರನಾಗಿ ಆದಿಲ್‍ಶಾಹೀ ರಾಜ್ಯ ಸ್ಥಾಪನೆಯಾದಾಗ (1489) ಇದೇ ಅದರ ರಾಜಧಾನಿಯಾಯಿತು. 1686ರಲ್ಲಿ ಔರಂಗಜೇಬ್ ಈ ಪಟ್ಟಣವನ್ನು ವಶಪಡಿಸಿಕೊಂಡ ಅನಂತರ ಇದರ ಪ್ರಾಮುಖ್ಯ ಇಳಿಮುಖವಾಗಲಾರಂಭಿಸಿತು. ಮುಂದೆ ಮುಗಲರು, ಹೈದರಾಬಾದಿನ ನಿಜಾಮರು, ಪೇಶ್ವೆಗಳು ಇವರಲ್ಲಿ ಕೈಬದಲಾಗುತ್ತಿದ್ದ ಈ ಪಟ್ಟಣ 1818ರಲ್ಲಿ ಬ್ರಿಟಿಷರ ವಶವಾಗಿ ಮುಂಬಯಿ ಪ್ರಾಂತ್ಯಕ್ಕೆ ಸೇರಿತು.
ಬಿಜಾಪುರ ಇಂದು ಭಾರತಕ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲೊಂದು. ಇಸ್ಲಾಮೀ ಅರಸರ ಕಾಲದಲ್ಲಿ ಕಟ್ಟಿದ ಇಲ್ಲಿಯ ಅನೇಕ ಕಟ್ಟಡಗಳು, ಅವುಗಳ ವಾಸ್ತುರಚನಾಕೌಶಲ ಹಾಗೂ ಸೌಂದರ್ಯ ದೃಷ್ಟಿಯಿಂದ ಅನುಪಮವಾಗಿದ್ದು ಪ್ರಪಂಚದ ಅನೇಕ ಕಡೆಗಳಿಂದ ಕುತೂಹಲಗಳನ್ನು ಆಕರ್ಷಿಸುತ್ತವೆ. ಈ ಕಾರಣದಿಂದ ಇಲ್ಲಿ ಹಲವು ಪ್ರವಾಸಿ ಮಂದಿರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಗಳ ಶಾಖೆಗಳು ಇಲ್ಲಿ ಕೆಲಸ ಮಾಡುತ್ತಿವೆ. (ಎಸ್.ಎಚ್.)
ಬಿಜಾಪುರ ಮತ್ತು ಪರಸರದಲ್ಲಿ 300ಕ್ಕೂ ಹೆಚ್ಚು ಪ್ರಾಚೀನ ಕಟ್ಟಡಗಳೂ ಪ್ರೇಕ್ಷಣೀಯ ಸ್ಥಳಗಳೂ ಇವೆ. ಮುಖ್ಯವಾದ ಕೆಲವನ್ನು ಮಾತ್ರ ಇಲ್ಲಿ ವಿವರಿಸಲಾಗಿದೆ.
ಕೋಟೆ: ಬಿಜಾಪುರ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವಿನ್ಯಾಸದಲ್ಲಿ ಸುಮಾರು ದೀರ್ಘವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿಮೀ. ಪಶ್ಚಿಮ ಪೂರ್ವವಾಗಿ ಕೋಟೆಯ ಒಳಭಾಗದ ಉದ್ದ ಸುಮಾರು 4 ಕಿಮೀ. (ಈಗಿನ ಬಿಜಾಪುರ ಪಟ್ಟಣದ ಬಹುಭಾಗ ಈ ಕೋಟೆಯ ಒಳಗೇ ಇದೆ.) ಕೋಟೆಯ ಸುತ್ತಲೂ ಸುಮಾರು 13 ರಿಂದ 16 ಮೀಟರ್ ಅಗಲದ ಕಂದಕವಿದೆ. ಕೋಟೆಗೆ ಮೆಕ್ಕಾ, ಶಾಹಪುರ, ಬಹಮನೀ ಅಲಿಪುರ್, ಮನಗೋಳಿ, ದರ್ವಾಜಗಳೆಂಬ ಐದು ಮುಖ್ಯ ದ್ವಾರಗಳಿದ್ದುವು.
ಗೋಳಗುಮ್ಮಟ: ರೈಲು ನಿಲ್ದಾಣದಿಂದ ಪಶ್ಚಿಮಕ್ಕೆ ಅನತಿ ದೂರದಲ್ಲಿ, ವಿಶಾಲವಾದ ಆವರಣದಲ್ಲಿ ಇರುವ ಈ ಕಟ್ಟಡ ಮಹಮ್ಮದ್ ಆದಿಲ್ ಶಾ ತನಗಾಗಿ ಕಟ್ಟಿಸಿಕೊಂಡ ಗೋರಿ. ಇದು ಬಿಜಾಪುರದಲ್ಲೇ ಅತ್ಯಂತ ಎತ್ತರದ ಕಟ್ಟಡವಾಗಿದ್ದು ಸುತ್ತಲ ಹಲವು ಕಿ.ಮೀವರೆಗೆ ಕಾಣುತ್ತದೆ. ಅಗಾಧ ಪ್ರಮಾಣ, ಅದರಲ್ಲೂ ಪ್ರಪಂಚದಲ್ಲೇ ಅತಿ ವಿಸ್ತಾರದ ಹಜಾರವನ್ನು ಕಂಬಗಳ ಆಸರೆ ಇಲ್ಲದೆ ಅಚ್ಛಾದಿಸಿರುವ ಬೃಹತ್ ಗುಮ್ಮಟ, ವಾಸ್ತು ನಿರೂಪಣೆಯಲ್ಲಿ ಕಂಡುಬರುವ ಗಂಡುಶೈಲಿ, ಒಳಗಿನ ಪಿಸುಗುಟ್ಟುವ ಗ್ಯಾಲರಿ, ಈ ಅಂಶಗಳಿಂದ ಈ ಕಟ್ಟಡ ಪ್ರಪಂಚದ ಅದ್ಭುತ ವಾಸ್ತುಕೃತಿಗಳಲ್ಲಿ ಒಂದು ಎಂದು ವಿಖ್ಯಾತವಾಗಿದೆ. ಮುಖ್ಯ ಕಟ್ಟಡದ ಮುಂದೆ ಇರುವ ನಗರಖಾನಾ ಕಟ್ಟಡದಲ್ಲಿ ಒಂದು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. (1912). ಇದರಲ್ಲಿ ಆದಿಲ್‍ಶಾಹೀ ಕಾಲದ ಶಾಸನಗಳು, ಶಿಲ್ಪಗಳು, ವರ್ಣಚಿತ್ರಗಳು, ಹಸ್ತಪ್ರತಿಗಳು, ಸನದುಗಳು, ಪಾರಸೀ ಮತ್ತು ಅರಬ್ಬೀ ಲಿಪಿಯ ಕಲಾತ್ಮಕ ಬರಹಗಳು, ವಸ್ತ್ರಗಳು, ಪಿಂಗಾಣಿ ವಸ್ತುಗಳು, ಮರದ ಕೆತ್ತನೆಗಳು, ನಾಣ್ಯಗಳು ಆಯುಧೋಪಕರಣಗಳು ಮತ್ತು ಇಸ್ಲಾಮೀ ಆಳ್ವಿಕೆಯ ಪೂರ್ವಕಾಲದ ಕೆಲವು ಶಾಸನಗಳು ಮತ್ತು ಶಿಲ್ಪಗಳನ್ನು ಇಡಲಾಗಿದೆ.
ಅರಕಿಲ್ಲಾ: ಇದು ಪಟ್ಟಣದ ಮಧ್ಯಭಾಗದಲ್ಲಿರುವ ಒಳಕೋಟೆ. ಕೋಟೆ ಈಗ ಉಳಿದಿರುವಂತೆ ಸುಮಾರು ವೃತ್ತಾಕಾರವಾಗಿದ್ದು ಅನೇಕ ಒತ್ತು ಅಟ್ಟಾಲಕಗಳಿಂದ ಭದ್ರಗೊಳಿಸಿರುವ ಎತ್ತರದ ಗೋಡೆ ಮತ್ತು ಸುತ್ತು ಕಂದಕದಿಂದ ಕೂಡಿದೆ. ಯೂಸೆಫ್ ಆದಿಲ್ ಖಾನ್ ಈ ಕೋಟೆಯನ್ನು ಕಟ್ಟಲು ಆರಂಭಿಸಿದನಂತೆ. ಆದರೆ ಇದು ಪೂರ್ಣಗೊಂಡಿದ್ದು ಒಂದನೆಯ ಇಬ್ರಾಹಿಮ್ ಆದಿಲ್‍ಶಾನ ಕಾಲದಲ್ಲಿ. ಹಿಂದೆ ಈ ಒಳಕೋಟೆಗೆ ಐದು ರಾಜ್ಯಗಳಿದ್ದುವು. ಮೂರು ದ್ವಾರಗಳ ಸುಳುಹು ಸಹ ಇಂದು ದೊರೆಯುವುದಿಲ್ಲ. ಈಗಿನ ಪ್ರಧಾನ ಪ್ರವೇಶದ್ವಾರ ಆಗ್ನೇಯ ಕಡೆ ಇದೆ. ಈ ಕೋಟೆಯೊಳಗಿದ್ದ ಅರಮನೆಗಳು ಭಗ್ನವಾಗಿವೆ. ಕಾರಂಜಿಗಳೆಲ್ಲ ಬತ್ತಿಹೋಗಿವೆ. ಒಳಕೋಟೆಯ ಮಧ್ಯದಲ್ಲಿರುವ ಆನಂದಮಹಲ್ ಕಟ್ಟಡವನ್ನು ಎರಡನೆಯ ಇಬ್ರಾಹಿಮ್ ಆದಿಲ್ ಶಾ 1589ರಲ್ಲಿ ಕಟ್ಟಿಸಿದ. ಇದು ಬಿಜಾಪುರದ ಸುಂದರ ಅರಮನೆಗಳಲ್ಲಿ ಒಂದು. ಇದರ ಮೇಲಿನ ಚಾವಣಿಯನ್ನು ಗಚ್ಚಿನ ಶಿಲ್ಪಗಳಿಂದಲೂ ಪ್ರವೇಶ ದ್ವಾರದ ಎದುರಿನ ನಡುಗೋಡೆಯನ್ನು ಬಣ್ಣ ಬಣ್ಣ ಕಲ್ಲುಗಳಿಂದ ಹುದುಗಿಸಿ ಮಾಡಿದ ಶಾಸನಗಳು ಮತ್ತು ಚಿತ್ರಗಳಿಂದಲೂ ಅಲಂಕರಿಸಲಾಗಿತ್ತು. ಈಗ ಆನಂದ ಮಹಲ್‍ನ ಕೆಲವು ಭಾಗಗಳನ್ನು ಪುನರ್ನಿರ್ಮಿಸಲಾಗಿದ್ದು, ಅನೇಕ ಸರ್ಕಾರಿ ಕಛೇರಿಗಳಿಗೆ ಅವಕಾಶ ಮಾಡಿಕೊಡಲಾಗಿದೆ, ಕರೀಮುದ್ದೀನನ ಮಸೀದಿಯನ್ನು ಹಳೆಯ ಹಿಂದು ದೇವಾಲಯಗಳ ಕಂಬಗಳು ಮತ್ತು ಚಪ್ಪಡಿಗಳನ್ನು ಉಪಯೋಗಿಸಿ ದೇವಾಲಯದ ವಾಸ್ತು ಸಂಪ್ರದಾಯದಲ್ಲಿ ಕಟ್ಟಲಾಗಿದೆ; ಇದು ಬಿಜಾಪುರದ ಅತ್ಯಂತ ಪ್ರಾಚೀನ ಮಸೀದಿ. ಒಳಗಿನ ಕಂಬವೊಂದರ ಮೇಲಿರುವ ಕನ್ನಡ ಶಾಸನದಿಂದ ಕರೀಮುದ್ದೀನನ ಆಜ್ಞೆಯಂತೆ ಸಾಲೋಟಗಿಯ ಕೀವಯ್ಯ ಎಂಬ ಶಿಲ್ಪಿ 1520ರಲ್ಲಿ ಇದನ್ನು ಕಟ್ಟಿದನೆಂದು ತಿಳಿದುಬರುತ್ತದೆ. ಕರೀಮುದ್ದೀನ್ 14ನೆಯ ಶತಮಾನದ ಆದಿಭಾಗದಲ್ಲಿ ಬಿಜಾಪುರ ಪ್ರಾಂತ್ಯಾಧಿಕಾರಿಯಾಗಿದ್ದನೆಂದು ತೋರುತ್ತದೆ.
ಗಗನಮಹಲ್ ಸುಮಾರು 1561ರ ನಿರ್ಮಾಣ. ಹಿಂದೆ ಇದು ರಾಜರ ನಿವಾಸ ಹಾಗೂ ಸಭಾಸದನ. ಪ್ರಸಿದ್ಧ ಚಾಂದಬೀಬಿ ಆಡಳಿತ ನಡೆಸುತ್ತಿದ್ದುದು ಇಲ್ಲಿಂದಲೇ. ಔರಂಗಜೇಬ್ ಬಿಜಾಪುರವನ್ನು ಆಕ್ರಮಿಸಿದ ಅನಂತರ ತನ್ನ ವಿಜಯದ ದರ್ಬಾರನ್ನು ನಡೆಸಿದ್ದು ಹಾಗೂ ಕೊನೆಯ ಆದಿಲ್ ಶಾಹೀ ರಾಜ ಸಿಕಂದರನಿಗೆ ಬೆಳ್ಳಿಯ ಸಂಕೋಲೆಯನ್ನು ತೊಡಿಸಿ ಔರಂಗಜೇಬನ ಎದುರು ತಂದಿದ್ದು ಈ ಸಭಾಂಗಣದಲ್ಲಿ. ಒಳಕೋಟೆಯ ಪಶ್ಚಿಮ ಭಾಗದಲ್ಲಿರುವ ಸಾತ್ ಮಂಜಿಲ್ ಒಂದು ಬೃಹತ್ ಕಟ್ಟಡ. ಹಿಂದೆ ಇದು ಏಳು ಅಂತಸ್ತಿನ ಕಟ್ಟಡ. ಐದನೆಯ ಅಂತಸ್ತಿನಿಂದ ಮೇಲಿನ ಅಂತಸ್ತಿಗೆ ಇದ್ದ ಮೆಟ್ಟಿಲುಗಳು ಈಗಲೂ ಉಳಿದಿವೆ. ಪಟ್ಟಣದ ಭಾಗದಲ್ಲೆಲ್ಲ ಅತ್ಯಂತ ಎತ್ತರವಾಗಿ ಎದ್ದುಕಾಣುವ ಈ ಕಟ್ಟಡ ಚಿಕ್ಕದಾದರೂ ಆಕರ್ಷಕವಾಗಿದೆ. ಇದರ ಮೇಲು ಮಚ್ಚಿನಿಂದ ಇಡೀ ಪಟ್ಟಣದ ವಿಹಂಗಮ ನೋಟ ಸಿಗುತ್ತದೆ. ಈ ಕಟ್ಟಡ ಎರಡನೆಯ ಇಬ್ರಾಹಿಮ್ ಆದಿಲ್ ಶಾ ಕಟ್ಟಿಸಿದ ಅರಮನೆ; 1583ರ ರಚನೆ. ಸಾತ್ ಮಂಜಿಲ್ನ ಎದುರುಗಡೆ ಕೊಳವೊಂದರ ಮಧ್ಯದಲ್ಲಿ ಜಲಮಂಜಿಲ್ ಇದೆ. ಇದೊಂದು ಚಿಕ್ಕದಾದ, ಸುಂದರ ಕಟ್ಟಡ, ಬಿಜಾಪುರದ ಅರಸರು ವಿಹಾರಕ್ಕಾಗಿ ಇದನ್ನು ಬಳಸುತ್ತಿದ್ದರೆಂದು ತೋರುತ್ತದೆ.
ಒಳಕೋಟೆಯ ಸುಮಾರು ಮಧ್ಯದಲ್ಲಿ ಎತ್ತರದ ಸುತ್ತು ಗೋಡೆಯ ಮಧ್ಯದಲ್ಲಿ ಮೆಕ್ಕಾಮಸೀದಿ ಇದೆ. ಇದನ್ನು ಮೆಕ್ಕಾದಲ್ಲಿರುವ ಮಸೀದಿಯನ್ನು ಅನುಕರಿಸಿ ಕಟ್ಟಲಾಗಿದೆ ಎನ್ನುತ್ತಾರೆ. ಮಸೀದಿಯ ಸುತ್ತಲೂ ಹಾಸುಗಲ್ಲಿನ ತೆರೆದ ಪ್ರಾಂಗಣವಿದ್ದು ಅದರ ಸುತ್ತಲೂ ಕಮಾನು ಸಾಲಿನ ಕೈಸಾಲೆ ಇದೆ. ವಾಸ್ತು ರಚನಾದೃಷ್ಟಿಯಿಂದ ಇದು ಎರಡನೆಯ ಇಬ್ರಾಹಿಮ್ ಆದಿಲ್ ಶಾನ ಕಾಲದಲ್ಲಿ ಕಟ್ಟಲಾಗಿರಬೇಕೆಂದು ಊಹಿಸಬಹುದು, ಇಬ್ರಾಹಿಮ್ ರೋಜಾವನ್ನು ಕಟ್ಟಿದ ಮಲಿಕ್ ಸಂದಲ್‍ನೆ ಇದನ್ನು ಕಟ್ಟಿರಬೇಕೆಂದು ಊಹೆ. ಎರಡನೆಯ ಆಲಿ ಆದಿಲ್‍ಶಾನ ಸಮಾಧಿ ಚಾವಣಿರಹಿತವಾದ ಚಚ್ಚೌಕ ಆಕಾರದ ಬೃಹತ್ ಕಟ್ಟಡ. ಇದನ್ನು ಅಲಿ ತನ್ನ ತಂದೆಯ ಸಮಾಧಿ ಗೋಳಗುಮ್ಮಟವನ್ನು ಮೀರಿಸುವಂತೆ ಕಟ್ಟಲು ಉದ್ದೇಶಿಸಿ ಪಟ್ಟಕ್ಕೆ ಬಂದ ಹೊಸತರಲ್ಲೇ ಆರಂಭಿಸಿದರೂ ಪೂರ್ಣಗೊಳಿಸಲಾಗಿಲ್ಲ. ಅಸಾರ್ ಮಹಲ್ ಒಳಕೋಟೆಯಿಂದ ಪೂರ್ವಕ್ಕೆ ಎತ್ತರ ಪ್ರದೇಶದಲ್ಲಿ ಇರುವ ಈ ಕಟ್ಟಡ ಅಸಾರ್ ಶಾಹೀ ಕಾಲದ ಅರಮನೆ. ಬಹುಶಃ ಹೆಚ್ಚು ಶಿಥಿಲವಾಗದೆ ಉಳಿದಿರುವ ಮಹಲ್‍ಗಳಲ್ಲಿ ಒಂದು. ಸುಲ್ತಾನ ಮಹಮದ್ದ್ ಆದಿಲ್ ಶಾ 1646ರಲ್ಲಿ ಇದನ್ನು ಕಟ್ಟಿಸಿದ. ಆ ಕಾಲದಲ್ಲಿ ಈ ಅರಮನೆ ಅದಾಲತ್ ಮಹಲ್ ಎಂಬ ಹೆಸರಿನಲ್ಲಿ ನ್ಯಾಯಾಲಯವಾಗಿದ್ದಿತೆಂದೂ ಹೇಳಿಕೆ. ಮಧ್ಯದ ಸಭಾಂಗಣ ಬಂಗಾರವರ್ಣದಿಂದ ಅಲಂಕೃತವಾಗಿದೆ. ಇದರ ದಕ್ಷಿಣಕ್ಕಿರುವ ಒಂದು ಕೋಣೆಯ ಗೋಡೆಗಳು ಅದ್ಭುತವಾಗಿ ಚಿತ್ರಿತವಾಗಿದೆ. ಇಲ್ಲಿ ವ್ಯಕ್ತಿಗಳನ್ನು ಚಿತ್ರಿಸಿರುವುದನ್ನು ಕಂಡ ಔರಂಗಜೇಬ್ ಕೋಪಗೊಂಡು ಎಲ್ಲ ಚಿತ್ರಗಳ ಮುಖಗಳನ್ನು ಅಳಿಸಿಹಾಕಲು ಆಜ್ಞೆ ಮಾಡಿದನಂತೆ. ಈ ಮಹಲಿನ ಕೆಳ ಅಂತಸ್ತಿನಲ್ಲಿರುವ ಒಂದು ಚಿಕ್ಕಕೋಣೆ ಕಿತಾಬ್‍ಖಾನಾ (ಗ್ರ್ರಂಥಾಲಯ) ಆಗಿತ್ತು. ಮಹಲಿನ ಮುಂಭಾಗದಲ್ಲಿ ಒಂದು ದೊಡ್ಡ ಕೊಳ ಇದೆ. ನೆಲದೊಳಗೆ ಹುದುಗಿಸಿರುವ ಕೊಳಾಯಿಗಳ ಮೂಲಕ ಬೇಗಂತಲಾಬ್ ಮತ್ತು ತೊರವಿಕೆರೆಗಳಿಂದ ಇಲ್ಲಿಗೆ ನೀರು ಪೂರೈಕೆಯ ವ್ಯವಸ್ಥೆ ಮಾಡಲಾಗಿದ್ದು, ಇಂದಿಗೂ ಅದು ಸುಸ್ಥಿತಿಯಲ್ಲಿದೆ. ಜಾಹಾಜ್ ಮಹಲ್ ಮೇಲಿನ ಕಟ್ಟಡದ ಬಳಿಯಲ್ಲೇ ಇರುವ, ಈಗ ಬಹುಮಟ್ಟಿಗೆ ಶಿಥಿಲವಾಗಿರುವ ಈ ಕಟ್ಟಡ ಹಿಂದೆ ಬಿಜಾಪುರದ ನೌಕಾಪಡೆಯ ಆಡಳಿತ ಕಚೇರಿಯಾಗಿತ್ತು. ಜಾಮಿ ಮಸೀದಿ ಆದಿಲ್ ಶಾಹೀ ಕಾಲದಲ್ಲಿ ಕಟ್ಟಲಾಗಿದ್ದು ಇಂದಿಗೂ ಉಪಯೋಗದಲ್ಲಿರುವ ಬೃಹತ್ ಕಟ್ಟಡಗಳಲ್ಲೊಂದು. ಇಲ್ಲಿ ಪ್ರತಿ ವ್ಯಕ್ತಿಯೂ ನಿಲ್ಲುವ ಸ್ಥಳಗಳನ್ನು ಕಪ್ಪುಬಣ್ಣದ ಪಟ್ಟೆಗಳಿಂದ ಆಯಾಕಾರದ ಅಂಕಣಗಳನ್ನು ವಿಂಗಡಿಸಲಾಗಿದೆ. ಬಂಗಾರದ ರೇಕುಗಳು ಮತ್ತು ಉಜ್ವಲ ವರ್ಣಗಳಿಂದ ಅಲಂಕೃತವಾಗಿರುವ ಮಿಹ್ರಾಜ್ ಇಲ್ಲಿಯ ಸುಂದರ ಆಕರ್ಷಣೆ ಒಂಬತ್ತು ಗುಮ್ಮಟಗಳುಳ್ಳ ಮಸೀದಿ ನವ ಗುಂಬಚ್. ಇದರ ಕಮಾನುಗಳು ಸ್ವಲ್ಪ ಕುಳ್ಳೆನಿಸುವುದನ್ನು ಬಿಟ್ಟರೆ ಇದೊಂದು ಸುಂದರ ಕಟ್ಟಡ. ಮೆಹತರ್ ಮಹಲ್ ಚಿಕ್ಕದಾದರೂ ಚೊಕ್ಕವಾಗಿ ರಚಿತವಾಗಿದೆ. ಅದಾಲತ್ ಮಹಲ್ ಪಟ್ಟಣದ ನಡುವೆ ಸುತ್ತಲೂ ವಿಶಾಲವಾದ ಮರಗಳ ತೋಪಿನ ಮಧ್ಯದಲ್ಲಿರುವ ಎರಡತಂಸ್ತಿನ ಭವ್ಯ ಕಟ್ಟಡ, ಮೂಲತಃ ಆದಿಲ್ ಶಾಹೀಗಳ ಕಾಲದ್ದು. ಈಗ ಜಿಲ್ಲಾಧಿಕಾರಿಗಳ ನಿವಾಸವಾಗಿ ಉಪಯೋಗವಾಗುತ್ತಿದೆ. ಇದರ ಉತ್ತರದಲ್ಲಿ ಔರಂಗಜೇಬ್ ಕಟ್ಟಿಸಿದ್ದೆನ್ನುವ ಒಂದು ಮಸೀದಿ ಇದೆ. ಅದಾಲತ್ ಮಹಲ್‍ನ ಸಮೀಪದಲ್ಲಿದ್ದ ಶಿಥಿಲವಾಗಿದ್ದ ಸೂರಜ್ ಮಹಲನ್ನು ರಪೇರಿ ಮಾಡಿ ಈಗ ಸೇವಕರ ನಿವಾಸಗಳಾಗಿ ಉಪಯೋಗಿಸಲಾಗುತ್ತಿದೆ. ಅದಾಲತ್ ಮಹಲ್‍ನ ಆಗ್ನೇಯದಲ್ಲಿ ಅರ್ಷ್ ಮಹಲ್ ಇದೆ. ಇದು ಎರಡನೆಯ ಆದಿಲ್ ಶಾ 1669 ರಲ್ಲಿ ತನ್ನ ವಿಹಾರಕ್ಕಾಗಿ ಕಟ್ಟಿಸಿಕೊಂಡ ಚಿಕ್ಕ ಮನೆ ಅರಮನೆ. ಬಹಳ ಶಿಥಿಲವಾಗಿದ್ದ ಈ ಕಟ್ಟಡವನ್ನು ಈಚೆಗೆ ರಿಪೇರಿ ಮಾಡಿದ್ದು, ಜಿಲ್ಲಾ ವೈದ್ಯಾಧಿಕಾರಿಗಳ ನಿವಾಸವಾಗಿ ಬಳಸಲಾಗುತ್ತಿದೆ. ಅರ್ಷ್ ಮಹಲ್‍ನ ಎದುರಿಗೆ ಒಳಕೋಟೆಯ ಅಟ್ಟಾಲಕವೊಂದರ ನೆತ್ತಿಯ ಮೇಲೆ ಪಾನಿ ಮಹಲ್ ಮಂಟಪ ಇದೆ. ಬಹುಶಃ ಹಿಂದೆ ಇದೊಂದು ಉದ್ಯಾನ ಮಂಟಪವಾಗಿತ್ತು. ಕಂದಕದ ನೀರಿನ ಬಲಿಯಲ್ಲೇ ಇದ್ದುದರಿಂದ ಇದಕ್ಕೆ ಈ ಹೆಸರು ಬಂದಿರಬೇಕು. ಚೀನೀ ಮಹಲ್ (ಫರಕ್ ಮಹಲ್) ಯೂಸುಫ್ ಆದಿಲ್ ಶಾ ಕಟ್ಟಿಸಿದ ಸಭಾ ಮಂದಿರ. ಇದರಲ್ಲಿ ಸುತ್ತಲೂ ನಾಲ್ಕು ಕಡೆ ಕೋಣೆಗಳಿರುವ ದೊಡ್ಡ ಸಭಾಂಗಣವಿದೆ. ವಿಸ್ತಾರ ಹಾಗೂ ಭವ್ಯತೆಯಲ್ಲಿ ಈ ಸಭಾಂಗಣವನ್ನು ಮೀರಿಸುವ ಕಟ್ಟಡ ಬಿಜಾಪುರದಲ್ಲಿ ಬೇರೊಂದಿಲ್ಲ. ಈಗ ಈ ಕಟ್ಟಡವನ್ನು ಜಿಲ್ಲಾಧಿಕಾರಿಗಳ ಕಚೇರಿಯಾಗಿ ಉಪಯೋಗಿಸಲಾಗುತ್ತಿದೆ. ಮಾಲಿಕ್-ಇ-ಮೈದಾನ್ ಒಂದು ದೊಡ್ಡ ಕಂಚಿನ ಫಿರಂಗಿ. 55 ಟನ್ ತೂಕವಿದೆ. ಪೂರ್ಣವಾಗಿ ಎರಕ ಹೊಯ್ದು ಮಾಡಲಾಗಿದೆ. ಇದರ ಮೂತಿ ಸಿಂಹದ ಆಕಾರದಲ್ಲಿದ್ದು ಹೊರಮೈಯನ್ನು ಉಜ್ಜಿ ನಯಮಾಡಲಾಗಿದೆ. ಇದರ ಮೇಲೆ ಕೆತ್ತಲಾಗಿರುವ ಪಾರಸೀ ಮತ್ತು ಅರಬ್ಬೀ ಶಾಸನಗಳಿಂದ ಈ ಫಿರಂಗಿಯನ್ನು ತುರ್ಕಿ ದೇಶದಿಂದ ಬಂದು ನೆಲಸಿದ್ದ ಅಧಿಕಾರಿಯೊಬ್ಬ 1549ರಲ್ಲಿ ಅಹಮದ್ ನಗರದಲ್ಲಿ ತಯಾರಿಸಿದನೆಂದು ತಿಳಿಯುತ್ತದೆ. ಇದನ್ನು 1565ರ ತಾಳೀಕೋಟೆ ಯುದ್ಧಕ್ಕೂ ತೆಗೆದುಕೊಂಡು ಹೋಗಲಾಗಿತ್ತಂತೆ. 1632ರಲ್ಲಿ ಬಿಜಾಪುರ ಅರಸರು ಇದನ್ನು ವಶಪಡಿಸಿಕೊಂಡು ವಿಜಯದ ಕುರುಹಾಗಿ ಇಲ್ಲಿಗೆ ತಂದರು. ಈಗ ಇದನ್ನು ಸೆರ್ಜ್ ಬುರುಜಿನ ಮೇಲೆ ಇಡಲಾಗಿದೆ. ಲಂಡ್ ಕಸಬ್ ಫಿರಂಗಿ. ಬಿಜಾಪುರ ಅತ್ಯಂತ ದೊಡ್ಡ ಫಿರಂಗಿ. ತೂಕ ಸುಮಾರು 46.5 ಟನ್. ಸುಮಾರು 300 ವರ್ಷಗಳಿಗೂ ಹೆಚ್ಚು ಕಾಲದಿಂದ ಮಳೆ ಬಿಸಿಲಲ್ಲಿ ನಿಂತಿದ್ದರೂ ಈ ಫಿರಂಗಿ ತುಕ್ಕು ಅಥವಾ ಇನ್ನಾವುದೇ ರೀತಿಯಿಂದ ಶಿಥಿಲವಾಗದೆ ಸುಸ್ಥಿತಿಯಲ್ಲಿದೆ. ಒಂದನೆಯ ಅಲಿ ಆದಿಲ್ ಶಾನ ಸಮಾಧಿ ಪಟ್ಟಣದ ನೈಖುತ್ಯ ಭಾಗದಲ್ಲಿದೆ. ಈ ಸಮಾಧಿ ಬಿಜಾಪುರದ ಅರಸರ ಅತಿ ಪ್ರಾಚೀನ ಸಮಾಧಿ ಕಟ್ಟಡ. ತಾಜ್ ಬಾವಡಿ ಮೆಕ್ಕಾ ದರ್ವಾಜಾದಿಂದ ಸುಮಾರು 92 ಮೀಟರ್ ಪೂರ್ವಕ್ಕಿರುವ ದೊಡ್ಡ ಕೊಳ. ಈ ಕೊಳಕ್ಕೆ ಕಮಾನಿನ ಪ್ರವೇಶಮಾರ್ಗವಿದೆ. ಇಬ್ರಾಹಿಂ ರೋಜಾವನ್ನು ಕಟ್ಟಿದ ಪ್ರಸಿದ್ಧ ಶಿಲ್ಪಿ ಮಲಿಕ್ ಸುಂದಲ್ ಈ ಕೊಳವನ್ನು ಎರಡನೆಯ ಇಬ್ರಾಹಿಂ ಆದಿಲ್ ಶಾನ ರಾಣಿ ತಾಜ್‍ಳಿಗಾಗಿ ಕಟ್ಟಿದ. ಚಾಂದ್ ಬಾವಡಿ ಒಂದನೆಯ ಆಲಿ ಆದಿಲ್ ಶಾ 1579ರಲ್ಲಿ ತನ್ನ ಹೆಂಡತಿ ಚಾಂದಬೀಬಿಯ ಗೌರವಾರ್ಥ ಕಟ್ಟಿದ ಕೊಳ. ಉಪರಿ ಬುರುಜ್ ಚಾಂದ್ ಬಾವಡಿಯ ದಕ್ಷಿಣದಲ್ಲಿ ಇರುವ ದೊಡ್ಡ ವೃತ್ತಾಕಾರದ ರಕ್ಷಣಾಗೋಪುರ. ಇದರ ಮೇಲೆ ಕಿರುನಳಿಗೆಯುಳ್ಳ, ಬಹು ಉದ್ದವಾದ ಎರಡು ಫಿರಂಗಿಗಳನ್ನು ಹಿಡಲಾಗಿದೆ. ಈ ರಕ್ಷಣಾ ಗೋಪುರದ ಅವಶ್ಯಕತೆಗೆ ತಕ್ಕಂತೆ, ಮದ್ದಿನ ಕೋಣೆ ಮತ್ತು ನೀರಿನ ತೊಟ್ಟಿಗಳನ್ನೂ ಇದರಲ್ಲಿ ಅಳವಡಿಸಲಾಗಿದೆ. ಬುರುಜಿನ ನೆತ್ತಿಯ ಬಳಿ ಇರುವ ಒಂದು ಶಾಸನದ ಪ್ರಕಾರ ಇದು ಸುಮಾರು 1584ರ ನಿರ್ಮಾಣ. ಅಫ್ಜಲ್‍ಖಾನನ ಸಮಾಧಿ ಕಟ್ಟಡ ಮತ್ತು ಮಸೀದಿ ಕೋಟೆಯ ಹೊರಗಡೆ ಶಾಹಪುರದ ದರ್ವಾಜಾದಿಂದ ಸುಮಾರು 4 ಕಿಮೀ ದೂರದಲ್ಲಿ ಇರುವ ಈ ಕಟ್ಟಡಗಳು ಸುಮಾರು 1653ರ ಹೊತ್ತಿಗೆ ಪೂರ್ಣವಾಯಿತು. ಆದರೆ ಸಮಾಧಿ ಕಟ್ಟಡ ಇನ್ನೂ ಅರೆಯಾಗಿದ್ದಾಗ ಅಫ್ಜಲ್‍ಖಾನ್ ಶಿವಾಜಿಯೊಡನೆ ಯುದ್ಧಕ್ಕೆ ಹೋಗಿ ಮೃತನಾದ. ಕಟ್ಟಡ ಅಪೂರ್ಣವಾಗಿಯೇ ಉಳಿಯಿತು. ಅವನನ್ನು ಪ್ರತಾಪಗಡದಲ್ಲೆ ಸಮಾಧಿ ಮಾಡಲಾಗಿದ್ದು, ಈ ಕಟ್ಟಡ ಈಗಲೂ ಖಾಲಿಯಾಗಿ ಉಳಿದಿದೆ. ಅಫ್ಜಲ್ ಖಾನನ ಪತ್ನಿಯರ ಸಮಾಧಿಗಳು ಅವನ ಸಮಾಧಿ ಕಟ್ಟಡದ ದಕ್ಷಿಣದಲ್ಲಿ ತೋಪಿನ ನಡುವೆ ಇವೆ. ಕೋಟೆಯಿಂದ ಪಶ್ಚಿಮಕ್ಕೆ ದೊಡ್ಡ ಪ್ರಾಕಾರದ ಮಧ್ಯೆ ಇರುವ ಇಬ್ರಾಹಿಮ್ ರೋಜಾ ಕಟ್ಟಡಗಳ ಗುಂಪು ಎರಡನೆಯ ಇಬ್ರಾಹಿಮ್ ಆದಿಲ್ ಶಾನ ಸಮಾಧಿ ಮತ್ತು ಜೊತೆಯ ಮಸೀದಿಯನ್ನೊಳಗೊಂಡಿದೆ. ಸುಮಾರು 1626 ರಲ್ಲಿ ಪೂರ್ಣವಾದ ಈ ಕಟ್ಟಡ ತನ್ನ ಅನುಪಮ ಸೌಂದರ್ಯದಿಂದ ಕರ್ನಾಟಕ ಇಸ್ಲಾಮೀ ವಾಸ್ತು ರಚನೆಗಳಲ್ಲಿ ಅಗ್ರಸ್ಥಾನ ಪಡೆದಿದೆ. ಇಬ್ರಾಹಿಮ್ ರೋಜಾಕ್ಕೂ ತಾಜ್ ಮಹಲಿಗೂ ಕೆಲವು ಹೋಲಿಕೆಗಳಿವೆ. ತಾಜ್‍ಮಹಲನ್ನು ಕಟ್ಟುವ ಮುನ್ನ ಪ್ರಖ್ಯಾತ ಕಟ್ಟಡಗಳನ್ನು ಪರಿಶೀಲಿಸಲಾಯಿತಂತೆ. ಈ ರೀತಿ ಪರಿಶೀಲಿಸಿದ ಭವ್ಯ ಕಟ್ಟಡಗಳಲ್ಲಿ ಇಬ್ರಾಹಿಮ್ ರೋಜಾ ಸಹ ಒಂದಿರಬಹುದೆಂಬ ಅಭಿಪ್ರಾಯವಿದೆ.
ಇಬ್ರಾಹಿಮ್ ರೋಜಾದ ವಾಯವ್ಯಕ್ಕೆ ಮೋತಿ ಗುಂಬಜ್ ಇದೆ. ಇದರ ಒಳಗೋಡೆಗೆ ಬಿಳಿಯ ಮುತ್ತನ್ನು ಪುಡಿಮಾಡಿ ಲೇಪಮಾಡಲಾಗಿದೆ. ಆದ್ದರಿಂದ ಇದಕ್ಕೆ ಮೋತಿ ಗುಂಬಜ್ ಎಂಬ ಹೆಸರಿದೆ. ಅಮೀನ್ ದರ್ಗಾ ಬಿಜಾಪುರದ ಪವಿತ್ರ ಸ್ಥಳಗಳಲ್ಲೊಂದು. ಪಟ್ಟಣದಿಂದ ಪಶ್ಚಿಮಕ್ಕೆ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿದೆ. ಇದು ಹಜರತ್ ಖ್ವಾಜಾ ಅಮೀನುದ್ದೀನ್ ಎಂಬ ಸಂತರ ಸಮಾಧಿ. ಸಂಗೀತ ಮಹಲ್ ಬಿಜಾಪುರದ ಸಮೀಪದಲ್ಲಿ ಎರಡನೆಯ ಇಬ್ರಾಹಿಮ್ ಆದಿಲ್ ಷಾ ಕಟ್ಟಿಸಿದ ನವರಸಪುರ ಪಟ್ಟಣದ ಮಧ್ಯೆ ಇರುವ ಅರಮನೆ. ವಾಸ್ತುವಿನ್ಯಾಸದಲ್ಲಿ ಗಗನಮಹಲನ್ನು ಹೋಲುವ ಈ ಕಟ್ಟಡ, ಎತ್ತರದ ಸುತ್ತು ಪ್ರಾಕಾರದ ಮಧ್ಯೆ ಇದೆ. ಕಟ್ಟಡ ಬಹಳ ಶಿಥಿಲವಾಗಿದೆ. ಹಿನ್ನಲೆಯಲ್ಲಿ ಬೆಟ್ಟ ಸಾಲು, ಎರಡು ಪಕ್ಕಗಳಲ್ಲಿ ಹರಿಯುವ ಚಿಕ್ಕ ಝರಿ ಮತ್ತು ಅನೇಕ ಅರಮನೆಗಳ ಅವಶೇಷಗಳ ಮಧ್ಯೆ ಇರುವ ಈ ಕಟ್ಟಡದ ಸನ್ನಿವೇಶ ಆಕರ್ಷಕವಾಗಿದೆ. ರುಕ್ಮಾಂಗದ ಪಂಡಿತನ ಸಮಾಧಿ ಪಟ್ಟಣದ ಆಗ್ನೇಯದಲ್ಲಿ ಕೋಟೆಯ ಹೊರಗೆ ಇದೆ. ರುಕ್ಮಾಂಗದ ಪಂಡಿತ ಆದಿಲ್ ಶಾಹೀ ಆಸ್ಥಾನದ ನ್ಯಾಯಾಧಿಕಾರಿಯೊಬ್ಬರ ಮಗನಾಗಿ 1610ರಲ್ಲಿ ಜನಿಸಿದ. ಈತ ಒಳ್ಳೆಯ ಸಂಗೀತಗಾರನಾಗಿ, ವೈದ್ಯನಾಗಿ, ಯೋಗಿಯಾಗಿ, ಪವಾಡಪುರುಷನಾಗಿ ಪ್ರಸಿದ್ಧನಾಗಿದ್ದ. ಈತನ ಗೌರವಾರ್ಥ ಇಲ್ಲಿ ವರ್ಷಂಪ್ರತಿ ಉತ್ಸವ ನಡೆಯುತ್ತದೆ.
ಒಂದು ಕಾಲದಲ್ಲಿ ಇಡೀ ಭಾರತದಲ್ಲೇ ವೈಭವದ ನಗರವಾಗಿ ಬೆಳೆದಿದ್ದ ಬಿಜಾಪುರ ಎಲ್ಲೆಡೆಯಲ್ಲೂ ಇಂದು ಆ ಕಾಲದ ಭವ್ಯ ಕಟ್ಟಡಗಳ ಅವಶೇಷಗಳನ್ನು ಕಾಣಬಹುದು. ಕೇಂದ್ರ ಪುರಾತತ್ವ ಇಲಾಖೆ ಮುಖ್ಯವಾದ ಕೆಲವನ್ನು ಆರಿಸಿ ರಕ್ಷಿಸಿರುವವುಗಳ ಸಂಖ್ಯೆಯೇ ಸುಮಾರು 300 ರಷ್ಟು. ಇವಲ್ಲವೆ ಎರಡು ಅಂತಸ್ತುಗಳಲ್ಲಿ ಕಟ್ಟಲಾಗಿರುವ ಅಂದ ಮಸೀದಿ (1608), ಔರಂಗಜೇಬ್ ಕಟ್ಟಿಸಿದ ಈದ್ಗಾ (1687) ಚಾಂದಬೀಬಿ ಕಟ್ಟಿಸಿದ ಬುಖಾರಿ ಮಸೀದಿ, ಛೋಟ್ ಅಸಾರ್ ಎಂಬ ಚಿಕ್ಕ ಮಸೀದಿ ಇವು ಸಹ ಉಲ್ಲೇಖಾರ್ಹ. ಬಿಜಾಪುರದ ಈಗಿನ ಪ್ರವಾಸಿಮಂದಿರ ಸಹ ಮೂಲತಃ ಆದಿಲ್ ಶಾಹೀ ಕಾಲದ ಕಟ್ಟಡ. ಈ ಪ್ರಾಚೀನ ಕಟ್ಟಡಗಳಲ್ಲದೆ ಬಿಜಾಪುರದಲ್ಲಿ ಈಚೆಗೆ ಕಟ್ಟಲಾಗಿರುವ ಬಾಲಾಜಿಮಂದಿರ, ಮಹಾಲಕ್ಷ್ಮಿ ದೇವಾಲಯ, ನರಸಿಂಹ ದೇವಾಲಯ, ರಾಮಮಂದಿರ, ಸಿದ್ಧೇಶ್ವರ ದೇವಾಲಯ ಮೊದಲಾದವೂ ಸ್ಥಳೀಯವಾಗಿ ಪ್ರಸಿದ್ಧವಾಗಿವೆ.