ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೃಹತ್ಕಥೆ
ಬೃಹತ್ಕಥೆ ಕಲ್ಪಿತ ವಸ್ತುವನ್ನು ಆಧರಿಸಿದುದೆ ಕಥೆ. ಕಥೆಯೊಳಗೆ ಕಥೆ ಸೇರಿ ಬೆಳೆದು ದೊಡ್ಡದಾದರೆ ದೊಡ್ಡಕಥೆ. ವಡ್ಡ ಕಥೆ, ಪೆರುಂಗತೆ, ಬೃಹತ್ಕಥೆಯಾಗುತ್ತದೆ. ಇದೂ ಒಂದು ಕಥೆ; ಪರಿಕಥೆಯಲ್ಲ; ಖಂಡಕಥೆಯಲ್ಲ; ಸಕಲ ಕಥೆಯಲ್ಲ; ಬೃಹತ್ಕಥೆ. ಎಲ್ಲ ಜಾತಿಯ ಕಥೆಗಳನ್ನು ಒಳಗೊಂಡಿರುವ ದೊಡ್ಡ ಕಥೆ. ಕಥೆಯ ಊರು ದೇಶ ಕಾಲುಗಳು ಸತ್ಯವಾದರೂ ಅದು ಚರಿತ್ರೆಗೂ ಭೂಗೋಳಕ್ಕೂ ದೂರ. ಬಾಯಿಂದ ಬಾಯಿಗೆ, ಕೈಯಿಂದ ಕೈಗೆ, ಕಾಲದಿಂದ ಕಾಲಕ್ಕೆ ಕಥೆಯ ಆಕಾರ, ಪ್ರಮಾಣ, ಬಣ್ಣ ಬದಲಾಯಿಸುತ್ತ ಹೋಗುತ್ತಿರುತ್ತದೆ. ಪ್ರಸ್ತುತ ಬೃಹತ್ಕಥೆ ಪೈಶಾಚೀ ಭಾಷೆಯಲ್ಲಿ ಗುಣಾಢ್ಯನಿಂದ ರಚಿತವಾಗಿ ಅದನ್ನೇ ಸಂಸ್ಕøತ ಭಾಷೆಯಲ್ಲಿ ರಚಿಸಿದ ಸೋಮದೇವನವರೆಗೆ ಇದು ಯಾವ ಯಾವ ಹಂತದಲ್ಲಿ ಇಷ್ಟೆಷ್ಟು ಬೆಳೆದು ಬದಲಾಯಿಸಿರಬಹುದೆಂಬುದು ಊಹೆಗೆ ಮಾತ್ರ ಸಾಧ್ಯ.
ಬೃಹತ್ಕಥೆಯ ತಾಯಿಬೇರು ಉದಯನನ ಕಥೆ. ಆತ ವತ್ಸದೇಶದ ರಾಜ. ದಕ್ಷಿಣದಲ್ಲಿ ಅವಂತಿರಾಜ್ಯ; ಪೂರ್ವದಲ್ಲಿ ಮಗಧರಾಜ್ಯ. ಆ ರಾಜ್ಯಗಳ ಹೆಣ್ಣುಗಳನ್ನು ಮದುವೆಯಾಗಿ ತನ್ನ ರಾಜ್ಯವನ್ನು ಬಲಪಡಿಸಿಕೊಂಡ. ಅವನ ಆ ಮದುವೆಗಳು ನಡೆದದ್ದು ಸ್ವಾರಸ್ಯ ಪ್ರಸಂಗಗಳು. ಇಷ್ಟು ಸಾಕು ನವರಸಭರಿತವಾದ ಕಾವ್ಯವಾಗುವುದಕ್ಕೆ. ಪ್ರತಿಜ್ಞಾಯೌಗಂಧರಾಯಣ, ಸ್ವಪ್ನವಾಸವದತ್ತದಂಥ ಅಮರನಾಟಕ ಈ ಘಟನೆಗಳ ಮೇಲೆಯೇ ಹುಟ್ಟಿದ್ದು.
1. ಆರ್ಯಾಸಪ್ತಶತಿಯ ಆರಂಭದಲ್ಲಿ ಗೋವರ್ಧನ ಕವಿ ಶ್ರೀ ರಾಮಾಯಣ ಭಾರತ ಬೃಹತ್ಕಥಾನಾಂ ಕವೀನ್ ನಮಸ್ಕುರ್ಮಂ ತ್ರಿಸ್ರೋತಾ ಇವ ಸರಸಾ ಸರಸ್ವತೀ ಸ್ಫುರತಿಯೈರ್ಭಿನ್ನಾ ಎಂದು ಹೇಳಿ ಬ್ರಹತ್ಕಥೆಗೆ ರಾಮಾಯಣ ಮಹಾಭಾರತಗಳಿಗೆ ಸಮನಾದ ಶ್ರೇಷ್ಠಸ್ಥಾನವನ್ನು ಕೊಟ್ಟಿದ್ದಾನೆ. ಬೃಹತ್ಕಥೆಯ ಉತ್ಪತ್ತಿಯನ್ನು ಕುರಿತು ಸೋಮದೇವ ತನ್ನ ಕಥಾಸರಿತ್ಸಾಗರದಲ್ಲಿರುವ ಲಂಬಕ ಒಂದರಲ್ಲಿ ಹೀಗೆಂದು ಹೇಳಿದ್ದಾನೆ.
ಪಾರ್ವತಿಯಿಂದ ಶಾಪಗ್ರಸ್ತನಾದ ಪುಷ್ಪದಂತನೆಂಬ ಗಣಶ್ರೇಷ್ಠ ಭೂಲೋಕದಲ್ಲಿ ಹುಟ್ಟಿ ವರರುಚಿ ಅಥವಾ ಕಾತ್ಯಾಯನ ಎಂಬ ಹೆಸರಿನಿಂದ ಖ್ಯಾತನಾಗಿ ಯೋಗನಂದನೆಂಬ ರಾಜನ ಬಳಿಯಲ್ಲಿ ಕೆಲವು ವರ್ಷಗಳು ಮಂತ್ರಿಯಾಗಿದ್ದ. ತನ್ನ ಹೆಂಡತಿಯ ಸಾವಿನಿಂದ ಆತ ವೈರಾಗ್ಯ ಹೊಂದಿ ಸಂಸಾರ ತ್ಯಜಿಸಿ ಅರಣ್ಯಕ್ಕೆ ಹೋಗಿ, ವಿಂಧ್ಯವಾಸಿನೀ ದೇವಿಯ ದರ್ಶನ ಪಡೆದ. ಸ್ವಪ್ನದಲ್ಲಿ ದೇವಿ ಕೊಟ್ಟ ಆಜ್ಞೆಯಂತೆ ಆತ ವಿಂಧ್ಯಾಟವಿಯಲ್ಲಿದ್ದ ಕಾಣ ಭೂತಿಯೆಂಬ ಪಿಶಾಚನ ಬಳಿಗೆ ಹೋಗಿ ಪರಮೇಶ್ವರ ಪಾರ್ವತಿಗೆ ಹೇಳಿದ ಒಂದೊಂದು ಲಕ್ಷ ಗ್ರಂಥ ಪರಿಮಾಣವುಳ್ಳ ಏಳು ಮಹಾಕಥೆಗಳನ್ನು ಅವನಿಗೆ ಹೇಳಿ ಇನ್ನು ಸ್ವಲ್ಪಕಾಲದಲ್ಲಿ ಗುಣಾಢ್ಯ ಎಂಬ ಹೆಸರಿನಿಂದ ಭೂಲೋಕದಲ್ಲಿ ಹುಟ್ಟಿರುವ ಮಾಲ್ಯವಂತನೆಂಬ ಪ್ರಮಥ ನಿನ್ನ ಬಳಿಗೆ ಬರುತ್ತಾನೆ. ಅವನಿಗೆ ನೀನು ಈ ಕಥೆಗಳನ್ನು ಹೇಳು. ಅನಂತರ ನಿನಗೂ ಆತನಿಗೂ ಶಾಪವಿಮೋಚನೆಯಾಗುವುದು ಎಂದು ಹೇಳಿ ಬದರಿಕಾಶ್ರಮಕ್ಕೆ ಹೋಗಿ ಯೋಗಧಾರಣೆಯಿಂದ ಪ್ರಾಣವನ್ನು ಬಿಟ್ಟು ಕೈಲಾಸಕ್ಕೆ ಹೋದ.
ಸ್ವಲ್ಪ ದಿವಸಗಳಲ್ಲಿ ಕಾಣಭೂತಿ ಬಳಿಗೆ ಗುಣಾಢ್ಯ ಬಂದ. ಈತ ಸಾತವಾಹನ ರಾಜನಿಗೆ ಮಂತ್ರಿಯಾಗಿದ್ದವ. ಈ ಹಿಂದೆ ಮಾಡಿದ್ದ ಪ್ರತಿಜ್ಞೆಗನುಸಾರವಾಗಿ ಸಂಸ್ಕøತ, ಪ್ರಾಕೃತ ಮತ್ತು ದೇಶ ಭಾಷೆ ಎಂಬ ಮೂರು ಭಾಷೆಗಳನ್ನು ತ್ಯಜಿಸಿ ಅಡವಿಗೆ ಬಂದು ತನ್ನ ಇಬ್ಬರು ಶಿಷ್ಯರೊಡನೆ ವಾಸಮಾಡುತ್ತ ಅಲ್ಲಿ ಇದ್ದ ಪಿಶಾಚಗಳ ಭಾಷೆಯನ್ನು ಕೇಳಿ ಕೇಳಿ ತಾನೂ ಅದನ್ನು ತಿಳಿದುಕೊಂಡ. ವರರುಚಿ ತನಗೆ ಹೇಳಿದ್ದ ಏಳು ಕಥೆಗಳನ್ನು ಕಾಣಭೂತಿ ಗುಣಾಢ್ಯನಿಗೆ ಹೇಳಿ ಅವನ್ನು ಭೂಲೋಕದಲ್ಲಿ ಪ್ರಸಿದ್ಧಪಡಿಸಬೇಕೆಂದು ತಿಳಿಸಿದ. ಅಡವಿಯಲ್ಲಿ ಸಾಧನ ಸಂಪತ್ತು ಏನೂ ಇಲ್ಲದ್ದರಿಂದ ಗುಣಾಢ್ಯ ಆ ಕಥೆಗಳನ್ನು ಪೈಶಾಚೀ ಭಾಷೆಯಲ್ಲಿ ತನ್ನ ರಕ್ತದಿಂದ ಬರೆದು ಆ ಪುಸ್ತಕವನ್ನು ಸಾತವಾಹನನಿಗೆ ತನ್ನ ಶಿಷ್ಯರ ಕೈಲಿ ಕಳಿಸಿದ. ಅರಣ್ಯದಲ್ಲಿ ಬಹುಕಾಲ ವಾಸಮಾಡಿದ್ದರಿಂದ ಸಂಸ್ಕಾರವಿಲ್ಲದೆ ವಿಕಾರವಾಗಿದ್ದ ಆ ಶಿಷ್ಯರ ರೂಪವನ್ನೂ ರಕ್ತದಲ್ಲಿ ಬರೆದಿದ್ದ ಪತ್ರಗಳನ್ನೂ ಪೈಶಾಚೀಭಾಷೆಯಲ್ಲಿ ಬರೆದಿದ್ದ ಕಥೆಗಳನ್ನು ನೋಡಿ ರಾಜ ಜುಗುಪ್ಸೆ ಗೊಂಡು ಪುಸ್ತಕವನ್ನು ತಿರಸ್ಕರಿಸಿದ. ಶಿಷ್ಯರು ಪುಸ್ತಕದೊಡನೆ ಹಿಂತಿರುಗಿ ಗುಣಾಢ್ಯನಿಗೆ ಈ ವಿಷಯ ತಿಳಿಸಿದಾಗ ಗುಣಾಢ್ಯ ಬಹಳವಾಗಿ ಖೇದಗೊಂಡ. ಆಗ ಆಡವಿಯಲ್ಲಿಯೇ ಒಂದು ಅಗ್ನಿಕುಂಡ ಮಾಡಿ ಒಂದೊಂದು ಪತ್ರವನ್ನೂ ಅಲ್ಲಿ ನೆರೆದಿದ್ದ ಮೃಗಪಕ್ಷಿಗಳಿಗೆ ಕೇಳುವಂತೆ ಗಟ್ಟಿಯಾಗಿ ಓದಿ ಅನಂತರ ಅದನ್ನು ಅಗ್ನಿಕುಂಡದೊಳಗೆ ಹಾಕತೊಡಗಿದ. ಹೀಗೆ ಆರು ಲಕ್ಷ ಗ್ರಂಥವುಳ್ಳ ಆರು ಕಥೆಗಳು ಸುಟ್ಟುಹೋದ ಸಮಯಕ್ಕೆ ಸರಿಯಾಗಿ ಸಾತವಾಹನ ಅಲ್ಲಿಗೆ ಬಂದು ಗುಣಾಢ್ಯನ ಕ್ಷಮೆ ಕೇಳಿ ಉಳಿದಿದ್ದ ಒಂದು ಲಕ್ಷ ಗ್ರ್ರಂಥವುಳ್ಳ ಒಂದು ಕಥೆಯ ಪುಸ್ತಕವನ್ನು ಅವನಿಂದ ಪಡೆದ.
2. ಸೋಮದೇವನ ಕಥಾಸರಿತ್ಸಾಗರ ಸುಮಾರು 21,600 ಗ್ರಂಥದ ಪರಿಮಾಣವುಳ್ಳದ್ದು. ಅದು ಬೃಹತ್ಕಥಾಸಾರದ ಸಂಗ್ರಹವೆಂದು ಅವನೇ ಹೇಳಿ ಕೊಂಡಿದ್ದಾನೆ. ಆದ್ದರಿಂದ ಈ ಬೃಹತ್ಕಥಾಸಾರ ಸುಮಾರು 45,000 ಗ್ರಂಥದ ಪರಿಮಾಣವುಳ್ಳದ್ದಾಗಿ ಇದ್ದಿರಬಹುದು. ಬೃಹತ್ಕಥೆಯಲ್ಲಿ 45,000 ಸುಮಾರು ಎರಡರಷ್ಟು ಎಂದರೆ ಒಂದು ಲಕ್ಷ ಗ್ರ್ರಂಥವಿತ್ತೆಂಬುದರಲ್ಲಿ ಅಸಂಭವವಾದುದೇನೂ ಇಲ್ಲ.
ಈ ಬೃಹತ್ಕಥೆ ನಷ್ಟವಾಗಿ ಹೋಗಿದೆ. ಆದರೆ ಇದರಲ್ಲಿದ್ದ ವಿಷಯಗಳ ಎಂದರೆ ಕಥೆಗಳ ಸಂಗ್ರಹ ಕಥಾ ಸರಿತ್ಸಾಗರದಲ್ಲಿಯೂ ಕ್ಷೇಮೇಂದ್ರನ ಬೃಹತ್ಕಥಾ ಮಂಜರಿಯಲ್ಲಿಯೂ ದೊರೆತಿದೆ. ಈ ಎರಡೂ ಶ್ಲೋಕ ರೂಪವಾಗಿ ಸಂಸ್ಕøತದಲ್ಲಿವೆ. ಕಥಾಸರಿತ್ಸಾಗರ ಕ್ರಿ.ಶ. 1063-81ರ ಮಧ್ಯಕಾಲದಲ್ಲಿ ರಚಿತವಾಗಿದೆ. ಇದರಲ್ಲಿ ಹದಿನೆಂಟು ಲಂಬಕಗಳಿವೆ.
1. ಕಥಾಪೀಠ 7. ರತ್ನಪ್ರಭಾ 13. ಮದಿರಾವತೀ 2. ಕಥಾಮುಖ 8. ಸೂಯಾಪ್ರಭಾ 14. ಪಂಚ 3. ಲಾವಾಣಕ 9. ಅಲಂಕಾರವತೀ 15. ಮಹಾಭಿಷೇಕ 4. ನರವಾಹನದತ್ತ ಜನನ 10. ಶಕ್ತಿಯಶ 16. ಸುರತಮಂಜರೀ 5. ಚತುರ್ದಾರಿಕಾ 11. ವೇಲಾ 17. ಪದ್ಮಾವತೀ 6. ಮದನಮಂಚುಕು 12. ಶಶಾಂಕಾವತೀ 18.
ವಿಷಮಶೀಲ ನರವಾಹನದತ್ತ ವತ್ಸರಾಜನಾದ ಉದಯನ ಮತ್ತು ಅವನ ಪಟ್ಟಮಹಿಷಿ ವಾಸವದತ್ತೆ ಇವರ ಮಗನಾಗಿ ಹುಟ್ಟಿ ಯೌವನಪ್ರಾಪ್ತನಾಗಿ ಶತ್ರುಗಳನ್ನು ಸೋಲಿಸಿ ವಿದ್ಯಾಧರ ಚಕ್ರವರ್ತಿಯಾದುದನ್ನೂ ಅವನು ಮದನಮಂಚುಕಾ ಮೊದಲಾದ ಕನ್ಯಕೆಯರನ್ನು ವಿವಾಹವಾದುದನ್ನೂ ನಿರೂಪಿಸುವುದೇ ಗ್ರಂಥದ ಮುಖ್ಯೋದ್ದೇಶ. ಈ ವಿಷಯಗಳು 4-18ನೆಯ ಲಂಬಕದಲ್ಲಿ ವರ್ಣಿಸಲ್ಪಟ್ಟಿವೆ. ಉಪÉೂೀದ್ಘಾತ ರೂಪವಾಗಿ 2, 3ನೆಯ ಲಂಬಕಗಳಲ್ಲಿ ಉದಯನನ ಜನನ, ಅವನು ವಾಸವಕತ್ತೆಯನ್ನೂ ಪದ್ಯಾವತಿಯನ್ನೂ ಮದುವೆಯಾದ ವಿಷಯವೂ ಹೇಳಿದೆ. 1ನೆಯ ಲಂಬಕದಲ್ಲಿ ಬೃಹತ್ಕಥೆ ಹರನಿಂದ ಪಾರ್ವತಿಗೆ ಹೇಳಿ ಅದು ಗುಣಾಢ್ಯನಿಂದ ಹೇಗೆ ಪೈಶಾಚೀ ಭಾಷೆಯಲ್ಲಿ ಬರೆಯ ಲಾಯಿತು. ಆ ಏಳು ಲಕ್ಷ ಗ್ರಂಥಗಳಲ್ಲಿ ಆರು ಕಥೆಗಳನ್ನು ಒಳಗೊಂಡು ಆರು ಲಕ್ಷ ಗ್ರಂಥದ ಪುಸ್ತಕ ಭಾಗ ಅಗ್ನಿಕುಂಡದಲ್ಲಿ ಹಾಕಲ್ಪಟ್ಟು ನಾಶವಾದ ಮೇಲೆ ಉಳಿದಿದ್ದ ಒಂದು ಲಕ್ಷ ಗ್ರಂಥಪರಿಮಾಣದ ಒಂದು ಕಥೆ ಸಾತವಾಹನರಾಜನ ಕೈಸೇರಿದ ವಿಷಯ ನಿರೂಪಿಸಿದೆ. ಎಲ್ಲ ಲಂಬಕಗಳಲ್ಲಿಯೂ ಮುಖ್ಯ ಕಥೆಯಲ್ಲದೆ ನಾನಾ ವಿಧವಾದ ಸುಮಾರು 320 ಇತರ ಕಥೆಗಳು ಹೇಳಲ್ಪಟ್ಟಿವೆ.
3. ಸೋಮದೇವನಂತೆ ಕಾಶ್ಮೀರ ದೇಶದವನೇ ಆದ ಕ್ಷೇಮೇಂದ್ರ ಕವಿ ಕ್ರಿ.ಶ. ಸು.1037ರಲ್ಲಿ ಎಂದರೆ ಸೋಮದೇವನಿಗಿಂತ ಸುಮಾರು 30 ವರ್ಷಗಳ ಹಿಂದೆ ಬೃಹತ್ಕಥಾಮಂಜರೀ ಎಂಬ ಗ್ರಂಥ (ಸಂಸ್ಕøತ ಶ್ಲೋಕಗಳಲ್ಲಿ) ರಚಿಸಿದ. ಕಥಾ ಸರಿತ್ಸಾಗರದಲ್ಲಿರುವಂತೆ ಇದರಲ್ಲಿಯೂ 18 ಲಂಬಕಗಳಿರುವುವು. ಆದರೆ ಕಥಾ ಸರಿತ್ಸಾಗರದಲ್ಲಿ 6 ರಿಂದ 18ವರೆಗಿನ ಲಂಬಕಗಳು ಬೃಹತ್ಕಥಾಮಂಜರಿಯಲ್ಲಿ 7, 14, 6, 15, 16, 8, 9, 11, 13, 17, 18, 12 ಮತ್ತು 10ನೆಯ ಲಂಬಕಗಳಾಗಿರುವುವು. ಕಥೆ ಮತ್ತು ಹೆಸರು ಇವೆರಡರಲ್ಲಿಯೂ ಈ ಗ್ರಂಥಗಳ ನಡುವೆ ಅನೇಕ ವ್ಯತ್ಯಾಸಗಳಿರುವುವು. ಆದ್ದರಿಂದ ಕ್ಷೇಮೇಂದ್ರನ ಗ್ರಂಥಕ್ಕೆ ಆಧಾರ ಭೂತವಾಗಿದ್ದ ಗ್ರಂಥ ಸೋಮದೇವನ ಗ್ರಂಥಕ್ಕೆ ಆಧಾರಭೂತವಾಗಿದ್ದ ಬೃಹತ್ಕಥಾಸಾರವಲ್ಲವೆಂದು ದೃಢವಾಗಿ ಹೇಳಬಹುದು. ಬೃಹತ್ಕಥಾಸಾರ ಎಂದೂ 10-12ನೆಯ ಲಂಬಕಗಳ ಕೊನೆಯಲ್ಲಿ ಬೃಹತ್ಕಥಾ ಎಂದೂ ಇದೆ. ಹೀಗೆ ಹೆಸರುಗಳಲ್ಲಿ ವ್ಯತ್ಯಾಸವಿರುವುದಕ್ಕೆ ಕಾರಣ ತಿಳಿಯದು. ಅದರ ಆಕರ ಯಾವ ಭಾಷೆಯಲ್ಲಿತ್ತು. ಗದ್ಯವೋ ಪದ್ಯವೋ ಎಂಬುದೂ ತಿಳಿಯದು. ಕ್ಷೇಮೇಂದ್ರನ ತನ್ನ ಗ್ರಂಥದ ಪ್ರಾರಂಭದಲ್ಲಿ
ಏವಂ ಕಿಲ ಪುರಾಣೇಷು ಸರ್ವಾಗಮವಿಧಾಯಿಷ ವಿಶ್ವಶಾಸನ ಶಾಲಿನ್ಯಾಂ ಶ್ರುತೌ ಚ ಶ್ರೂಯತೇ ಕಥಾ
ಎಂದು ಹೇಳಿ ಬೃಹತ್ಕಥಾಮಂಜರಿಯಲ್ಲಿಯ ಕಥೆ ಪುರಾಣದಲ್ಲಿಯೂ ಶ್ರುತಿಯಲ್ಲಿಯೂ ಉಕ್ತವಾಗಿದೆ ಎಂದಿದ್ದಾನೆ.
ಕ್ರಿ.ಶ.ಸು. 750ರಲ್ಲಿ ಆದಿಪುರಾಣ ಬರೆದ ಗುಣಸೇನ ಆ ಗ್ರಂಥದ ಆದಿಯ ಹತ್ತು ಶ್ಲೋಕಗಳಲ್ಲಿ ತಾನು ಬರೆಯುವ ಗ್ರಂಥದ ಸ್ವರೂಪ ಬಣ್ಣಿಸಿ ಅದನ್ನು ಗುಣಾಢ್ಯನ ಬೃಹತ್ಕಥೆಯೊಡನೆ ಹೋಲಿಸಿದ್ದಾನೆ. ಈ ವರ್ಣನೆ ಯಲ್ಲಿರುವ ಶ್ರುತಸ್ಕಂಧಾಮಷಾಹ್ಲತಂ ಎಂಬ ವಿಶೇಷಣ ಆದಿಪುರಾಣಕ್ಕಲ್ಲದೆ ಬೃಹತ್ಕಥೆಗೂ ಅನ್ವಯಿಸಬೇಕಾದ್ದರಿಂದ ಈ ಬೃಹತ್ಕಥೆ ಶ್ರುತಿಯಲ್ಲಿ ದೊರೆಯುತ್ತೆಂದು ಜಿನಸೇನ ಕೂಡ ಅಭಿಪ್ರಾಯಪಟ್ಟಿದ್ದಂತೆ ತೋರುತ್ತದೆ.
4. ಕಥಾಸರಿತ್ಸಾಗರಕ್ಕೂ ಬೃಹತ್ಕಥಾಮಂಜರಿಗೂ ಆಕರಗಳು ಭಿನ್ನವಾದಾಗ್ಯೂ ಈ ಎರಡು ಗ್ರಂಥಗಳಲ್ಲಿಯೂ ಬೃಹತ್ಕಥಾ ಶ್ಲೋಕಸಂಗ್ರಹದಲ್ಲಿಯೂ ದೊರೆಯುವ ವಿಷಯ (ಕಥೆಗಳು) ಒಂದೇ ಆದ್ದರಿಂದ ಮೂಲ ಬೃಹತ್ಕಥೆಯಲ್ಲಿದ್ದ ಕಥೆಗಳು ಇವೇ ಎಂದು ದೃಢವಾಗಿ ಹೇಳಬಹುದು. ಇವು ನಾನಾ ರೂಪವಾಗಿರುವುವು. ಮಹಾಭಾರತದ ಕಥೆಗಳೂ ಪ್ರಾಯಿಕವಾಗಿ ರಾಜರು, ಕ್ಷತ್ರಿಯರು, ವೈಶ್ಯರು, ಬೇಡರು, ಸ್ವೈರಿಣಿ ಸ್ತ್ರೀಯರು, ಪತಿವ್ರತಾಸ್ತ್ರೀಯರು, ಮೂಢರು, ಜೂಜುಗಾರರು, ಧೂರ್ತರು, ನಾವಿಕರು, ಯಕ್ಷರು, ಸಿದ್ಧರು, ಬೇತಾಳಗಳು, ವಿದ್ಯಾಧರರು ಮೊದಲಾದ ಅನೇಕ ವಿಧವಾದ ಜನರ ನಡತೆಯನ್ನು ಚಿತ್ರಿಸುವುವು. ಮೇಲೆ ಉದ್ಧøತವಾದ ಆದಿ ಪುರಾಣದ ಶ್ಲೋಕಗಳು ಹೇಳಿರುವಂತೆ ಈ ಗ್ರಂಥದಲ್ಲಿ ಕನ್ನಡಿಯಲ್ಲಿರುವಂತೆ ಜಗತ್ತೆಲ್ಲವೂ ಕ್ರೋಡೀಕೃತವಾಗಿ ಪ್ರತಿಬಿಂಬಿತವಾಗಿರುವುವು.
5. ಈಗ ಪ್ರಚಾರದಲ್ಲಿರುವ ಪಂಚತಂತ್ರ ಮತ್ತು ವೇತಾಲ ಪಂಚವಿಂಶತಿ ಗ್ರಂಥಗಳೂ ಬೃಹತ್ಕಥಾಮಂಜರಿ ಕಥಾಸರಿತ್ಸಾಗರಗಳಲ್ಲಿ ಸಂಗ್ರಹ ರೂಪದಲ್ಲಿ ಅಂತರ್ಗತವಾಗಿರುವುವು. ಇವು ಮೂಲ ಬೃಹತ್ಕಥೆಯಲ್ಲಿ ಒಳ ಪಟ್ಟಿದ್ದವೋ ಇಲ್ಲವೋ ಎಂಬುದು ಸಂದೇಹಗ್ರಸ್ತ. ಇವು ಒಳಪಟ್ಟಿದ್ದ ಪಕ್ಷದಲ್ಲಿ ಮೂಲ ಬೃಹತ್ಕಥೆ ಈ ಎರಡು ಗ್ರಂಥಗಳಿಗಿಂತ ಈಚೆಗೆ ಬರೆಯಲ್ಪಟ್ಟಿರಬೇಕು (ಆದರೆ ಈ ಗ್ರಂಥಗಳ ರಚನಕಾಲವೇ ಅನಿಶ್ಚಿತ). ಇದು ಕ್ರಿ.ಶ.600ಕ್ಕಿಂತ ಹಿಂದೆಯೇ ಬರೆಯಲ್ಪಟ್ಟಿತೆಂಬುದರಲ್ಲಿ ಸಂದೇಹವಿಲ್ಲ.
6. ಕ್ರಿ.ಶ.ಸು. ಐದನೆಯ ಅಥವಾ ಆರನೆಯ ಶತಮಾನದಲ್ಲಿ ಗಂಗವಾಡಿ ರಾಜ್ಯ ಆಳುತ್ತಿದ್ದ ದುರ್ವಿನೀತ ಎಂಬ ಗಂಗರಾಜ ದೇವಭಾರತೀ ನಿಜದ್ಧಬೃಹತ್ಕಥಃ (ಬೃಹತ್ಕಥೆಯನ್ನು ಸಂಸ್ಕøತ ಭಾಷೆಯಲ್ಲಿ ರಚಿಸಿದವ) ಎಂದು ಅನೇಕ ತಾಮ್ರಶಾಸನಗಳಲ್ಲಿ ಹೊಗಳಲ್ಪಟ್ಟಿದ್ದಾನೆ. ಈ ಗ್ರಂಥ ದೊರೆತಿಲ್ಲ.
7, ಪೆರುಂಗತೈ (ಬೃಹತ್ಕಥೆ) ಎಂಬ ಪದ್ಯಮಯವಾದ ತಮಿಳು ಗ್ರಂಥದಲ್ಲಿ ವತ್ಸರಾಜನಾದ ಉದಯನನ ಕಥೆ, ಅವನು ವಾಸವದತ್ತೆಯನ್ನು ವಿವಾಹವಾದುದು ಮತ್ತು ನರವಾಹನದತ್ತನ ಜನನ ವರ್ಣಿಸಲ್ಪಟ್ಟಿದೆ. ಈ ಗ್ರಂಥದ ಲಿಖಿತ ಪುಸ್ತಕವೊಂದು ಮಾತ್ರ ದೊರೆತಿವೆ. ಆದಿಯ ಕೆಲವು ಪತ್ರಗಳು ನಷ್ಟವಾಗಿವೆ. ಈ ಪುಸ್ತಕ ಅಸಮಗ್ರ. ಇದರಲ್ಲಿ ಮೊದಲಿನ 31 ಅಧ್ಯಾಯಗಳು 32ನೆಯ ಅಧ್ಯಾಯದ ಸ್ವಲ್ಪ ಭಾಗ ಇದೆ. ಅಧ್ಯಾಯಗಳಲ್ಲಿ ಬಹುಭಾಗ ಉದಯನನ ಕಥೆಯನ್ನೇ ಕಾಣಬಹುದು. ಗ್ರಂಥಕಾರ ಕೊಂಗುವೇಳಿರ್ ಎಂಬ ಕೊಂಗುನಾಡಿನ ಸಣ್ಣ ರಾಜ. ಇವನ ಕಾಲ ತಿಳಿಯದು. ಗ್ರಂಥ ಜೈನಮತ ಪರವಾಗಿದೆ. ರಾಮಾಯಣ ಮಹಾಭಾರತ ಕಥೆಗಳು ಜೈನರಲ್ಲಿ ಅನೇಕ ಮಾರ್ಪಾಟುಗಳನ್ನು ಹೊಂದಿರುವಂತೆ ಕಥಾಸರಿತ್ಸಾಗರ ಮೊದಲಾದ ಸಂಸ್ಕøತ ಗ್ರಂಥಗಳಲ್ಲಿರುವ ಕಥೆಗಳು ತಮಿಳು ಗ್ರಂಥದಲ್ಲಿ ಬಹಳ ಮಾರ್ಪಾಟು ಹೊಂದಿವೆ. ಆದ್ದರಿಂದ ಈ ಗ್ರಂಥವೂ ಬೃಹತ್ಕಥೆಯ ಮೂಲ ರೂಪ ಹೇಗಿತ್ತೆಂಬುದನ್ನು ನಿರ್ಣಯಿಸುವುದಕ್ಕೆ ಯಾವ ಸಹಾಯವನ್ನೂ ಮಾಡಲಾರದು.
8. ಪೈಶಾಚೀಭಾಷೆಯಲ್ಲಿ ಗುಣಾಢ್ಯ ರಚಿಸಿದ ಬೃಹತ್ಕಥೆ ಗದ್ಯ ಗ್ರ್ರಂಥವೋ ಪದ್ಯ ಗ್ರ್ರಂಥವೋ ತಿಳಿಯದು. ಕಥಾ ಎಂದರೆ ಗದ್ಯರೂಪವಾದ ಕಥೆಯೆಂದು ದಂಡಿಯ ಹೇಳಿಕೆ ಅನುಸರಿಸಿ ಈ ಗ್ರಂಥ ಗದ್ಯದಲ್ಲಿ ಬರೆಯಲ್ಪಟ್ಟಿತೆಂದು ಕೆಲವರ ಅಭಿಪ್ರಾಯ. ಒಂದು (ಏಳು) ಲಕ್ಷಗ್ರಂಥ ಎಂದು ಕಥಾಸರಿತ್ಸಾಗರದಲ್ಲಿ ಹೇಳಿರುವ ಮಾತಿಗೆ ಒಂದು (ಏಳು) ಲಕ್ಷ ಶ್ಲೋಕಗಳುಳ್ಳ ಗ್ರಂಥವೆಂದು ಇನ್ನು ಕೆಲವರು ಅರ್ಥ ಮಾಡುತ್ತಾರೆ. ಈ ಭಿನ್ನಾಭಿ ಪ್ರಾಯಗಳು ಗುಣಾಢ್ಯನಿಂದ ಪೈಶಾಚೀ ಭಾಷೆಯಲ್ಲಿ ಬರೆಯಲ್ಪಟ್ಟ ಗ್ರಂಥಕ್ಕೆ ಸಂಬಂಧಿಸಿದವು. ಸಾತವಾಹನ ರಾಜನಿಂದ ಪ್ರಚುರಪಡಿಸಲ್ಪಟ್ಟ ಬೃಹತ್ಕಥೆಯಾದರೆ ಪೈಶಾಚೀ ಭಾಷೆಯಲ್ಲಿರಲಿಲ್ಲ. ಭಾಷೆಯಲ್ಲಿತ್ತು. ಸಾತವಾಹನನಿಂದ ಸೇರಿಸಲ್ಪಟ್ಟ ಒಂದು ಪೀಠಿಕೆಯೂ (ಕಥಾ ಪೀಠ) ಅದರಲ್ಲಿತ್ತು. ಈ ಭಾಷೆ ಯಾವುದೆಂಬ ವಿಷಯವಾಗಿಯೂ ಇವರಲ್ಲಿ ಬರೆಯಲ್ಪಟ್ಟಿದ್ದ ಗ್ರಂಥ ಗದ್ಯದಲ್ಲಿತ್ತೋ ಪದ್ಯದಲ್ಲಿತ್ತೋ ಎಂಬ ವಿಷಯವಾಗಿ ಜಿಜ್ಞಾಸೆ ನಡೆದಿಲ್ಲ.
ಬೃಹತ್ಕಥಾಸಾರ ಸಂಗ್ರಹವಾದ ಕಥಾ ಸರಿತ್ಸಾಗರದ ಕನ್ನಡ ಭಾಷಾಂತರ ಕಾರ್ಯ 1908ರ ಸುಮಾರಿಗೇ ನಡೆಯಿತು. ಸಾಗರದ ಶ್ರೀಕಂಠಶರ್ಮ ಅವರಿಂದ ರಚಿತವಾದ ಈ ಗ್ರಂಥದ ಮೊದಲ ಭಾಷಾಂತರವನ್ನು ಸವಿ ನುಡಿಯ ಸಂಪಾದಕರಾದ ಸಂಪಂಗಿ ರಾಮಯ್ಯನವರು ತಮ್ಮ ಪುಸ್ತಕಮಾಲೆಯಲ್ಲಿ ಹನ್ನೆರಡನೆಯ ಗ್ರಂಥವಾಗಿ ಪ್ರಕಟಿಸಿದರು. ಎರಡನೆಯ ಭಾಷಾಂತರ ತರೀಕೆರೆಯ ಚಿದಂಬರ ಪಂಡಿತರದು. ಇವರು ಮೈಸೂರು ವಿಶ್ವವಿದ್ಯಾನಿಲಯದ ಅಪೇಕ್ಷೆಯ ಮೇಲೆ ಬರೆದರು. ಆದರೆ ವಿಶ್ವ ವಿದ್ಯಾನಿಲಯದ ಪ್ರೋತ್ಸಾಹ ದೊರೆಯದೆ ಅವರು ತಾವೇ ಕರ್ನಾಟಕ ಕಥಾ ಸರಿತ್ಸಾಗರವೆಂಬ ಮಾಸ ಪತ್ರಿಕೆಯ ರೂಪವಾಗಿಯೂ ಸದ್ಬೋಧ ಚಂದ್ರಿಕೆ, ವಿಚಾರ ತರಂಗಿಣೀ ಎಂಬ ಮಾಸಪತ್ರಿಕೆಗಳಲ್ಲಿಯೂ ಸುಮಾರು 1921 ರಿಂದ 1934ರ ತನಕ ಪ್ರಕಟಿಸಿದರು. ಇದಷ್ಟೂ ಒಂದು ಸಂಪುಟವಾಗಿ ಹೊರಬಂದಿತು. ಆದರೆ ಉಳಿದೆರಡು ಸಂಪುಟಗಳು ಹೊರಬರಲಿಲ್ಲ. ಈ ಮುದ್ರಣದ ಪ್ರತಿಗಳು ಈಗ ಲಭ್ಯವಿಲ್ಲ. ಭಾಷೆ ಲಲಿತವಾಗಿ ಸರಳವಾಗಿದೆ.
1952ರಲ್ಲಿ ಎ.ಆರ್. ಕೃಷ್ಣಶಾಸ್ತ್ರೀ ಅವರು ಕಥಾಸರಿತ್ಸಾಗರದ ಸಾರ ಸಂಗ್ರಹವನ್ನು ಕಥಾಮೃತ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಇದೊಂದು ಉತ್ಕøಷ್ಟ ಗ್ರ್ರಂಥ. ಸರಳ ಕನ್ನಡದಲ್ಲಿ ಎಲ್ಲ ವಯಸ್ಸಿನ ಎಲ್ಲ ಸಂಸ್ಕಾರಗಳ ಎಲ್ಲ ರುಚಿಗಳ ಜನರಿಗೂ ಪ್ರಿಯವಾಗುವಂತೆ ರಚಿತವಾಗಿರುವ ಇದು ಕನ್ನಡ ಭಾಷೆಯಲ್ಲಿ ಬಂದಿರುವ ಅಮೂಲ್ಯ ಗ್ರಂಥಗಳಲ್ಲಿ ಒಂದಾಗಿದೆ. *