ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೇನ್ಸ್, ಎಡ್ವರ್ಡ್
ಬೇನ್ಸ್, ಎಡ್ವರ್ಡ್ 1774-1848. ನ್ಯಾಯಾಂಗ ಹಾಗೂ ಸಂವಿಧಾನ ಸಮನ್ವಯತೆಗಾಗಿ ನವ್ಯ ಸೂತ್ರಗಳನ್ನು ರೂಪಿಸಿದವರಲ್ಲಿ ಮೊದಲಿಗ. ಹುಟ್ಟಿದ್ದು ಇಂಗ್ಲೆಂಡಿನ ಪ್ರಿಸ್ಟನ್ ಹತ್ತಿರ ಇರುವ ವಾರ್ಡನ್ ಲೀ-ಡೀಲ್ ಪಟ್ಟಣದಲ್ಲಿ. ಸ್ನೇಹಿತರ ಸಹಾಯದಿಂದ ಮರ್‍ಕ್ಯೂರಿ ಎಂಬ ಪತ್ರಿಕೆಯ ಒಡೆತನ ವಹಿಸಿ ಕೊಂಡ (1801) ಅಂದಿನ ದಿನಗಳಲ್ಲಿ ಪ್ರಾಂತೀಯ ಪತ್ರಿಕೆಗಳು ಜನತೆಯನ್ನು ಆಕರ್ಷಿಸುತ್ತಿರಲಿಲ್ಲ. ತನ್ನ ಪತ್ರಿಕೆಯಲ್ಲಿ ಸುದ್ದಿ ಹಾಗೂ ಸಂಪಾದನ ಕಾರ್ಯಗಳಿಗೆ ಹೊಸ ಆಯಾಮ ನೀಡಿದ.
ಇವನ ಸಂಸದೀಯ ಧೋರಣೆಯ ಫಲವಾಗಿ ಲಾರ್ಡ್ ಮೆಕಾಲೇ 1832ರಲ್ಲಿ ಮರಳಿ ಲೀಡ್ಸ್‍ಗೆ ಬರಬೇಕಾಯಿತು. ಮೆಕಾಲೆಯ ಅನಂತರ ಇವನು ಸಂಸತ್ತಿನ ಸದಸ್ಯನಾಗಿ ಪಾರ್ಲಿಮೆಂಟ್ ಸೇರಿದ (1834). ಆದರೆ ಅಲ್ಲಿಯ ರಾಜಕೀಯ ತಿಕ್ಕಾಟಕ್ಕೆ ಬೇಸತ್ತು ಸಂಸತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ (1841).
ಸಂಸತ್ತಿನಲ್ಲಿ ಇರುವವರೆಗೆ ಇವನು ಲಿಬರಲ್ ಪಕ್ಷದಪರವಾಗಿದ್ದ. ಆದರೂ ಆ ಪಕ್ಷದ ನಿಯಂತ್ರಣಕ್ಕೊಳಗಾಗದೆ ತನ್ನ ವಿಚಾರಗಳನ್ನು ನಿರ್ಭಿತಿಯಿಂದ ಪ್ರಕಟಿಸುತ್ತಿದ್ದ. ರಾಷ್ಟ್ರೀಯ ಶಿಕ್ಷಣದಲ್ಲಿ ಸರ್ಕಾರ ಕೈಹಾಕುವುದನ್ನು ಕಟುವಾಗಿ ಟೀಕಿಸಿದ. ರಾಷ್ಟ್ರೀಯ ಶಿಕ್ಷಣ ಕುರಿತು ಜಾನ್ ರಸೆಲ್‍ರಿಗೆ ಇವನು ಬರೆದ ಪತ್ರಗಳು (1846) ಸರ್ಕಾರದ ಮೇಲೆ ಪ್ರಭಾವ ಬೀರಿದುವು.
ಇವನಿಗೆ ಇಬ್ಬರು ಮಕ್ಕಳು. ಕಿರಿಯ ಮಗ ಎಡ್ವರ್ಡ್ ಬೇನ್ಸ್ ತಂದೆಯ ಜೀವನ ವೃತ್ತಾಂತವನ್ನು ಬರೆದು ಪ್ರಕಟಿಸಿದ (1861. ಮರ್‍ಕ್ಯೂರಿ ಪತ್ರಿಕೆಯನ್ನು ವಹಿಸಿಕೊಂಡು ಪ್ರಕಟಿಸಿದ. ಹಿರಿಯ ಮಗನಾದ ಬಾಲ್‍ಬಾಟ್ ರಾಜಕೀಯ ಹಾಗೂ ಕಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ. ಬಡವರ ಕಾನೂನು ಸಮಿತಿಯ ಅಧ್ಯಕ್ಷಸ್ಥಾನವನ್ನು ಹೊಂದಿದ್ದ (1849).
ಬೇನ್ಸ್ 82 ವರ್ಷಗಳ ತುಂಬು ಜೀವನದ ಅನಂತರ 1848 ಆಗಸ್ಟ್ 3 ರಂದು ನಿಧನಹೊಂದಿದ. (ಎಂ.ಕೆ.ಎ.)