ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೇಲೂರು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಬೇಲೂರು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕು ಆಡಳಿತ ಕೇಂದ್ರ ಪಟ್ಟಣ. ಈ ತಾಲ್ಲೂಕನ್ನು ಪೂರ್ವ ಮತ್ತು ಆಗ್ನೇಯದಲ್ಲಿ ಹಾಸನ ತಾಲ್ಲೂಕು, ಪಶ್ಚಿಮದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು, ಉತ್ತರ ಮತ್ತು ವಾಯವ್ಯದಲ್ಲಿ ಚಿಕ್ಕಮಗಳೂರು ತಾಲ್ಲೂಕು, ದಕ್ಷಿಣ ಮತ್ತು ನೈಋತ್ಯದಲ್ಲಿ ಸಕಲೇಶಪುರ ಮತ್ತು ಆಲೂರು ತಾಲ್ಲೂಕುಗಳು ಮತ್ತು ಈಶಾನ್ಯದಲ್ಲಿ ಅರಸೀಕೆರೆ ತಾಲ್ಲೂಕು ಸುತ್ತುವರಿದಿವೆ. ಬೇಲೂರು, ಬಿಕ್ಕೋಡು ಅರೆಹಳ್ಳಿ, ಮಾದಹಳ್ಳಿ ಮತ್ತು ಹಳೇಬೀಡು ಈ ತಾಲ್ಲೂಕಿನ ಹೋಬಳಿಗಳು. 383 ಹಳ್ಳಿಗಳನ್ನೊಳಗೊಂಡಿದೆ. ಒಟ್ಟು ವಿಸ್ತೀರ್ಣ 840.2 ಚ.ಕಿ.ಮೀ. ಜನಸಂಖ್ಯೆ 1,83,080 (2001).

ಬೇಲೂರು ತಾಲ್ಲೂಕು ಮಲೆನಾಡ ಪ್ರದೇಶಕ್ಕೆ ಸೇರಿದ್ದು ಸಮುದ್ರಮಟ್ಟದಿಂದ ಸುಮಾರು 968ಮೀ ಎತ್ತರದಲ್ಲಿದೆ. ಇದರ ಪೂರ್ವಭಾಗ ಅರೆಮಲೆನಾಡು ಪ್ರದೇಶ. ಪಶ್ಚಿಮ ಮತ್ತು ಉತ್ತರ ಭಾಗ ಗುಡ್ಡ ಪ್ರದೇಶವಾಗಿದ್ದು, ಸ್ವಲ್ಪ ಭಾಗ ಕಾಡುಪ್ರದೇಶವೂ ಉಂಟು. ಇಲ್ಲಿಯ ಮುಖ್ಯನದಿ ಯಗಚಿ. ಇದು ತಾಲ್ಲೂಕಿನ ಮಧ್ಯದಲ್ಲಿ ವಾಯವ್ಯದಿಂದ ಆಗ್ನೇಯಕ್ಕೆ ಹರಿಯುತ್ತದೆ. ಹೇಮಾವತಿ ನದಿ ತಾಲ್ಲೂಕಿನ ನೈಋತ್ಯದಲ್ಲಿ ಸ್ವಲ್ಪದೂರ ಸಕಲೇಶಪುರ ತಾಲ್ಲೂಕನ್ನು ಬೇಲೂರು ತಾಲ್ಲೂಕಿನಿಂದ ಬೇರ್ಪಡಿಸುವ ಗಡಿಯಾಗಿ ಹರಿದಿದೆ.

ಜಿಲ್ಲೆಯಲ್ಲೆ ಹೆಚ್ಚು ನೀರಾವರಿ ಪ್ರದೇಶ ಈ ತಾಲ್ಲೂಕಿಗೆ ಸೇರಿದ್ದು. ಇಲ್ಲಿಯ ಕೆಂಪು ಮತ್ತು ಹಳದಿ ಮಣ್ಣಿನ ಭೂಮಿಯಲ್ಲಿ ಬತ್ತ, ಕಬ್ಬು, ಕಾಫಿ, ಅಡಕೆ, ಏಲಕ್ಕಿ, ಮೆಣಸು ಇವುಗಳೊಂದಿಗೆ ರಾಗಿ, ನೆಲಗಡಲೆ ಮುಂತಾದವನ್ನೂ ಬೆಳೆಸುತ್ತಾರೆ.

ಈ ತಾಲ್ಲೂಕಿನ ಕೈಗಾರಿಕೆಗಳಲ್ಲಿ ಮರದ ಸಾಮಾನುಗಳ ತಯಾರಿಕೆ, ಜೇನು ಸಾಕಣೆ ಮುಖ್ಯವಾದುವು. ಹಿತ್ತಾಳೆ ಪಾತ್ರೆಗಳ ತಯಾರಿಕೆ, ವಿಗ್ರಹ ಕೆತ್ತನೆ ಕೆಲಸವೂ ಉಂಟು. ಹಾಸನ, ಬೇಲೂರು, ಚಿಕ್ಕಮಗಳೂರು, ಸಕಲೇಶಪುರ-ಬೇಲೂರು, ಬಾಗೆ-ಬೇಲೂರು, ಬಾಣಾವರ-ಬೇಲೂರು, ಮೂಡಿಗೆರೆ ಮಾರ್ಗಗಳು ತಾಲ್ಲೂಕಿನ ಪ್ರಮುಖರಸ್ತೆಗಳಾಗಿವೆ. ಈ ತಾಲ್ಲೂಕಿನ ಮುಖ್ಯ ಸ್ಥಳಗಳಲ್ಲಿ ಹಳೇಬೀಡು ಪ್ರಸಿದ್ಧ ಐತಿಹಾಸಿಕ ಹಾಗೂ ಪ್ರವಾಸಿ ಕೇಂದ್ರ. ಚಟಚಟನಹಳ್ಳಿಯಲ್ಲಿ ಹೊಯ್ಸಳ ದೇವಾಲಯವಿದೆ.

ಬೇಲೂರು ಈ ತಾಲ್ಲೂಕಿನ ಆಡಳಿತಕೇಂದ್ರ ಪಟ್ಟಣ. ಜನಸಂಖ್ಯೆ 20,225 (2001). ಪಟ್ಟಣ ಯಗಚಿ ನದಿಯ ಎಡದಂಡೆಯ ಮೇಲಿದೆ. ಪುರಸಭೆಯ ಆಡಳಿತಕ್ಕೆ ಒಳಪಟ್ಟಿರುವ ಈ ಪಟ್ಟಣ ಅಂಚೆ, ದೂರವಾಣಿ, ಆಸ್ಪತ್ರೆ, ಶಾಲೆಗಳು, ರಕ್ಷಿತ ನೀರು ಸರಬರಾಜು ವಿದ್ಯುತ್ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ. ಬೇಲೂರು ಕರ್ನಾಟಕ ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದು. ಈ ಪಟ್ಟಣಕ್ಕೆ ಹಿಂದೆ ವೇಲೂರು, ವೇಲಾಪುರ ಎಂಬ ಹೆಸರುಗಳಿದ್ದುವು. ಕೆಲವು ಹೊಯ್ಸಳ ಶಾಸನಗಳಲ್ಲಿ ಬೇಲುಹೂರು, ವೇಲಾಪುರ ಎಂಬ ಹೆಸರುಗಳು ದೊರೆಯುತ್ತವೆ. ಬೇಲೂರಿನ ಮುಖ್ಯ ಆಕರ್ಷಣೆಯೆಂದರೆ ಹೊಯ್ಸಳರ ಕಾಲದ ಚೆನ್ನಕೇಶವ ದೇವಾಲಯ. ಇದು ಹೊಯ್ಸಳ ಶೈಲಿಯ ಸುಂದರ ಕಟ್ಟಡಗಳಲ್ಲಿ ಒಂದು. ದೇವಾಲಯದ ಉತ್ತರ ಗೋಡೆಯ ಮೇಲೆ ಬಾಗಿಲ ಪೂರ್ವದ ಬಳಿಯ ಒಂದು ಶಾಸನ ಮತ್ತು ಅದೇ ದೇವಾಲಯದ ಒಂದು ತಾಮ್ರ ಶಾಸನದಿಂದ ತಲಕಾಡುಗೊಂಡ ವಿಷ್ಣುವರ್ಧನ ಹೇವಿಳಂಬಿ ಸಂವತ್ಸರದ ಚೈತ್ರ ಶುದ್ಧ ಪಂಚಮಿ ಶನಿವಾರದಂದು (ಮಾರ್ಚ್ 20, 1117) ಈ ದೇವಾಲಯವನ್ನು ಪ್ರತಿಷ್ಠಾಪಿಸಿದನೆಂದು ತಿಳಿದುಬರುತ್ತದೆ. ದೇವಾಲಯದ ಮೂಲವಿಗ್ರಹದ ಪೀಠದ ಮೇಲಿನ ಶಾಸನದಲ್ಲಿ ದೇವರನ್ನು ವಿಜಯನಾರಾಯಣನೆಂದು ಕರೆಯಲಾಗಿದೆ. ದೇವಾಲಯ ಗರ್ಭಗುಡಿಯಿಂದ ಕೂಡಿ ನಕ್ಷತ್ರಾಕಾರದ ತಳವಿನ್ಯಾಸವನ್ನು ಹೊಂದಿದೆ. ಈ ಗುಡಿಯ ಸುತ್ತ ಎತ್ತರವಾದ ಪ್ರಾಕಾರಗೋಡೆಗಳಿವೆ. ಕೇಶವ ದೇವಾಲಯದ ಬಲಗಡೆಗೆ ಸ್ವಲ್ಪ ಹಿಂದೆ ಕಪ್ಪೆಚೆನ್ನಿಗರಾಯನ ಗುಡಿಯಿದೆ. ದೇವಾಲಯದ ನೇರ ಹಿಂಭಾಗದಲ್ಲಿ ವೀರನಾರಾಯಣ ಗುಡಿಯಿದೆ. ಹೊಯ್ಸಳ ಶಿಲ್ಪಿಗಳು ತಮ್ಮ ಶಿಲ್ಪಕೌಶಲವನ್ನು ಈ ದೇವಾಲಯಗಳ ಮುಖಾಂತರ ತೋರಿಸಿದ್ದಾರೆ. ಇಲ್ಲಿಯ ಒಂದೊಂದು ವಿಗ್ರಹವೂ ಒಂದೊಂದು ಸುಂದರ ಶಿಲ್ಪಕೃತಿ. (ಕೆ.ಆರ್.)