ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಾಹ್ಮೀಲಿಪಿ

ವಿಕಿಸೋರ್ಸ್ದಿಂದ

ಬ್ರಾಹ್ಮೀಲಿಪಿ ಭಾರತೀಯ ಭಾಷೆಗಳಿಗೆ ಮೂಲವಾದ ಲಿಪಿಗಳ ಪೈಕಿ ಒಂದು ಇದರ ಉಗಮದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಇದನ್ನು ಮುಖ್ಯವಾಗಿ ಎರಡು ಭಾಗಗಳಲ್ಲಿ ವಿಂಗಡಿಸಬಹುದು: 1. ಬ್ರಾಹ್ಮೀಲಿಪಿಯ ಉಗಮಕ್ಕೆ ಪರದೇಶ ಲಿಪಿಗಳೇ ಆಧಾರ, 2. ಬ್ರಾಹ್ಮೀಲಿಪಿ ಭಾರತದ ಸ್ವತಂತ್ರಲಿಪಿ.

1 ಈ ಲಿಪಿ ಬೇರೆ ದೇಶದಲ್ಲಿ ಉಗಮ ಹೊಂದಿ, ಭಾರತಕ್ಕೆ ವಲಸೆಗಾರರ ಮೂಲಕ ಬಂದು, ಅನಂತರ ಇಲ್ಲಿ ತನ್ನ ಬೆಳೆವಣಿಗೆ ಕಂಡುಕೊಂಡಿತು ಎಂದು ಅಭಿಪ್ರಾಯ ಪಟ್ಟಿರುವ ಅನೇಕ ವಿದ್ವಾಂಸರುಂಟು. ಅವರಲ್ಲಿ ಜೇಮ್ಸ್ ಪ್ರಿನ್ಸೆಪ್ ಎಂಬಾತ ಬ್ರಾಹ್ಮೀ ಲಿಪಿಯ ಬಗ್ಗೆ 19ನೆಯ ಶತಮಾನದ ಆದಿ ಭಾಗದಲ್ಲಿಯೇ ಅಧ್ಯಯನ ನಡೆಸಿ, ಇದು ಗ್ರೀಕ್ ಲಿಪಿಯಿಂದ ಬೆಳೆದದ್ದು ಎಂಬ ತೀರ್ಮಾನಕ್ಕೆ ಬಂದ. ಹೆಲೆವಿ ಎಂಬಾತ ಇದು ಖರೋಷ್ಠಿ ಅರಮೇಯಿಕ್ ಮತ್ತು ಗ್ರೀಕ್ ಲಿಪಿಗಳ ಮಿಶ್ರಣವೆಂದೂ ಇದರ ಉಗಮ ಕ್ರಿ. ಪೂ. ನಾಲ್ಕನೆಯ ಶತಮಾನದಲ್ಲಿ ಆಯಿತು ಎಂದೂ ಹೇಳಿದ್ದಾನೆ. ಟೆರೆನ್ ಡೆ ಲಾ ಕೊಪಿರೆ ಎಂಬಾತ ಇದು ಚೀನಾದ ಚಿತ್ರಲಿಪಿಯಿಂದ (ಪಿಕ್ಟೋಗ್ರಾಫ್) ಬೆಳೆದದ್ದು ಎಂದು ವಾದಿಸುತ್ತಾನೆ.

ಬ್ರಾಹ್ಮೀಲಿಪಿ ದಕ್ಷಿಣ ಸಿಮಿಟಕ್ ಲಿಪಿಯಿಂದ ಬಂದುದು ಎಂದು ನಿರ್ಣಯಿಸಿರುವ ವಿದ್ವಾಂಸರಲ್ಲಿ ಡೀಕೆ ಮತ್ತು ಕ್ಯಾನನ್ ಐಸಾಕ್ ಟೈಲರ್ ಎಂಬುವರು ಮುಖ್ಯರು. ಬ್ಯೂಲರ್, ವೆಬರ್, ಬೆನ್ಛೇ, ಜೆನ್ಸನ್ ಮುಂತಾದವರು ಬ್ರಾಹ್ಮೀಲಿಪಿಗೂ ಫಿನೀಷಿಯನ್ ಲಿಪಿಗೂ ಬಲುಮಟ್ಟಿಗೆ ಹೋಲಿಕೆ ಇರುವುದರಿಂದ ಫಿನೀಷಿಯನ್ ಲಿಪಿಯೇ ಇದರ ಉಗಮಕ್ಕೆ ಕಾರಣ ಎಂದು ವಾದಿಸಿದ್ದಾರೆ.

2 ಇದು ಮೂಲತ: ಭಾರತದ ಲಿಪಿ ಎಂದು ಹೇಳಿರುವ ಇದುವಿದ್ವಾಂಸರಲ್ಲಿ ಎರಡು ಗುಂಪುಗಳಿವೆ (1) ಆರ್ಯರು ಸೃಷ್ಠಿಸಿದ್ದು ಎನ್ನುವವರು (2) ಮೂಲ ದ್ರಾವಿಡಲಿಪಿ ಎಂದು ವಾದಿಸುವವರು.

ಅಲೆಕ್ಸಾಂಡರ್, ಕನ್ನಿಂಗ್‍ಹ್ಯಾಮ್, ಲಸ್ಸೆನ್ ಮುಂತಾದವರು ವೈದಿಕ ಕಾಲದ ಜನರಿಂದ ಅಥವಾ ಆರ್ಯರಿಂದ ಚಿತ್ರಲಿಪಿಯ ಆಧಾರದ ಮೇಲೆ ರಚಿತವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಉದಾಹರಣೆಗೆ ರ-ರಜ್ಜು (ಹಗ್ಗ). ಮ-ಮುಖ, ನ-ನಾಸ (ಮೂಗು) ಶ-ಶ್ರವಣ (ಕಿವಿ) ಇತ್ಯಾದಿ.

ಎಡ್ವರ್ಡ್ ತಾಮಸ್ ಮತ್ತು ಟಿ.ಎನ್. ಸುಬ್ರಮಣಿಯನ್ ಎನ್ನುವವರು ಈ ಲಿಪಿ ದ್ರಾವಿಡ ಮೂಲವೆಂದು ಹೇಳುತ್ತಾರೆ. ಆರ್ಯರು ಭಾರತಕ್ಕೆ ಬರುವ ಮೊದಲು ಇಲ್ಲಿದ್ದವರು ದ್ರಾವಿಡರು ಎಂಬ ವಿಚಾರವನ್ನು ಅನೇಕ ಮಂದಿ ವಿದ್ವಾಂಸರು ಒಪ್ಪಿದ್ದಾರೆ ದ್ರಾವಿಡರು ಅರ್ಯರ ಸಂಸ್ಕøತಿಯ ಮೇಲೆ ಹೆಚ್ಚು ಪ್ರಭಾವ ಬೀರಿರುವ ಕಾರಣ ಬ್ರಾಹ್ಮೀಲಿಪಿಯ ಉಗಮಕ್ಕೆ ದ್ರಾವಿಡರೇ ಕಾರಣರೆಂದೂ ದ್ರಾವಿಡರ ಈ ಲಿಪಿಯನ್ನು ಆರ್ಯರು ಅಭಿವೃದ್ಧಿಪಡಿಸಿದರೆಂದೂ ಕೆಲವು ವಿದ್ವಾಂಸರ ಊಹೆ.

ಈ ಲಿಪಿ ಬ್ರಹ್ಮನಿಂದ ರಚಿತಾವಾಯಿತೆಂಬುದು ಸಾಂಪ್ರದಾಯಿಕ ವಾದ. ಬ್ರಹ್ಮವಿದ್ಯೆಯನ್ನು ಕಲಿಯಲೋಸುಗ ಉಗಮಿಸಿದ ಈ ಲಿಪಿಗೆ ಬ್ರಾಹ್ಮೀ ಎಂದು ಹೆಸರು ಬಂತು ಎನ್ನುವ ಸಾಂಪ್ರದಾಯಿಕ ಅಭಿಪ್ರಾಯವನ್ನು ಕೆಲವರು ಒಪ್ಪುತ್ತಾರೆ. ಇದರ ಉಗಮ ಭಾರತದಲ್ಲೇ ಅಯಿತು ಎಂದು ಅಭಿಪ್ರಾಯಪಟ್ಟಿರುವ ವಿದ್ವಾಂಸರಿಗೆ ಸಿಂಧೂಲಿಪಿ ಹೆಚ್ಚು ಸಹಕಾರಿಯಾಗಿದೆ. ಸಿಂಧೂ ನಾಗರಿಕತೆಯಲ್ಲಿ ಲಿಪಿಯ ಬಳಕೆ ಇತ್ತೆಂಬ ವಿಚಾರ 1923ರಲ್ಲಿ ನಡೆದ ಸಿಂಧೂ ನಾಗರಿಕತೆಯ ಶೋಧನೆಯ ಅನಂತರ (ಕ್ರಿ.ಪೂ. 2500-1800) ತಿಳಿದು ಬರುತ್ತದೆ. ಸಿಂಧೂ ಲಿಪಿಯ ಸಂಪೂರ್ಣ ಅಧ್ಯಯನ ಇನ್ನೂ ಅಗಬೇಕಾಗಿರುವುದರಿಂದ ಅದು ಬ್ರಾಹ್ಮೀಲಿಪಿಯ ಪೂರ್ವರೂಪ ಎಂದು ಹೇಳುವುದು ಸರಿಯಲ್ಲ. ಕೆಲವು ವಿದ್ವಾಂಸರು ಇದು ಸಾಮ್ರಾಟ ಅಶೋಕನ ಕಾಲಕ್ಕಿಂತ ಮೊದಲೇ ಬಳಕೆಯಲ್ಲಿತ್ತು ಎಂದು ಹೇಳಿದರೆ ಮತ್ತೆ ಕೆಲವರು ಇದು ಅಶೋಕನ ಕಾಲದಲ್ಲಿ ಸಂಸ್ಕøತಬಲ್ಲ ಪಂಡಿತರಿಂದ ರಚಿಸಲ್ಪಟ್ಟಿತು ಎಂದು ಹೇಳುತ್ತಾರೆ. ಬ್ರಾಹ್ಮೀಲಿಪಿ ಅಶೋಕನ ಕಾಲದಲ್ಲಿ ಹುಟ್ಟಿತು ಎನ್ನುವುದಕ್ಕೆ ಎಸ್. ಶಂಕರ ನಾರಾಯಣನ್ ನಾಲ್ಕು ಕಾರಣ ಕೊಡುತ್ತಾರೆ: 1 ಅಶೋಕನಿಗಿಂತ ಮೊದಲು ಬರೆದಂಥ ಲಿಖಿತ ಅಧಾರಗಳು ದೊರೆಯದೇ ಇರುವುದು (ಸಿಂಧೂ ನಾಗರಿಕತೆಯ ಲಿಪಿಗಳನ್ನು ಬಿಟ್ಟು): 2 ಮೆಗಾಸ್ತನೀಸ್ ಚಂದ್ರಗುಪ್ತಮೌರ್ಯನ ಕಾಲದಲ್ಲಿ ಭಾರತಕ್ಕೆ ಬಂದಾಗ ಭಾರತದಲ್ಲಿ ಬರೆವಣಿಗೆ ಗೊತ್ತಿರಲಿಲ್ಲ ಎಂಬ ಹೇಳಿಕೆ ಕೊಟ್ಟಿರುವುದು: 3 ಬೌದ್ಧ ಭಿಕ್ಷುಗಳಿಗೆ (ಅಶೋಕನಿಗಿಂತ ಮೊದಲು) ಬುದ್ಧನ ಉಪದೇಶಗಳನ್ನು ಮೌಖಿಕವಾಗಿ ಉಪದೇಶಿಸುತ್ತಿದ್ದುದು: 4 ಅಶೋಕನ ಬ್ರಾಹ್ಮೀಯಲ್ಲಿ ಹೆಚ್ಚಿನ ಪ್ರಾಂತೀಯ ಭೇದಗಳು ಇಲ್ಲದೆ ಇರುವುದು.

ಬ್ರಾಹ್ಮೀಲಿಪಿ ಕ್ರಿ.ಪೂ. ಮೂರನೆಯ ಶತಮಾನದ ಪೂರ್ವಾರ್ಧದಲ್ಲಿ ರಚನೆಯಾಯಿತು ಎಂದು ಎಸ್.ಅರ್. ಗೋಯಲ್ ಹೇಳುತ್ತಾರೆ. ಈ ಅಭಿಪ್ರಾಯ ಒಪ್ಪಿರುವ ಡಿ.ಸಿ. ಸರ್ಕಾರ್, ಟ.ಪಿ. ವರ್ಮಾ ಮುಂತಾದವರು ಅಶೋಕನ ಕಾಲದಲ್ಲಿ ಬ್ರಾಹ್ಮೀಲಿಪಿ ಶೋಧನೆಯಾಯಿತೆ ವಿನಾ ರಚನೆಯಾಗಲಿಲ್ಲ ಎಂದು ಹೇಳುತ್ತಾರೆ. ಆಶೋಕ ಬೌದ್ಧ ಧರ್ಮ ಪ್ರಚಾರಗೊಳಿಸಲು ಈ ಲಿಪಿಯನ್ನೂ ಪಾಲಿ ಭಾಷೆಯನ್ನೂ ಬಳಸಿದ ಎಂಬ ವಿಚಾರ ತಿಳಿದುಬಂದಿದೆ.

ಈ ಎಲ್ಲ ಅಭಿಪ್ರಾಯಗಳಿಂದ ಬ್ರಾಹ್ಮೀ ಅಶೋಕನ ಕಾಲದಲ್ಲಿ ಹುಟ್ಟಿತೆ ಅಥವಾ ಮೊದಲೇ ಇದ್ದ ಲಿಪಿಯನ್ನು ಅಶೋಕ ಅಭಿವೃದ್ಧಿಗೊಳಿಸಿದನೇ ಎಂಬುದನ್ನು ಖಚಿತವಾಗಿ ಹೇಳುವುದು ಸಾಧ್ಯವಾಗದಿದ್ದರೂ ಆಶೋಕ ಅದರ ಅಭಿವೃದ್ಧಿಗೆ ಕಾರಣನಾದ ಎಂದು ಹೇಳಬಹುದು.

ಅಶೋಕನ ದಕ್ಷಿಣ ಭಾರತದ ಬ್ರಾಹ್ಮೀಲಿಪಿ ಸರಳ ಸುಂದರ ಲಿಪಿ. ಇದರಲ್ಲಿ ಲಂಬ ರೇಖೆಗಳು ಹೆಚ್ಚು. ಶತಮಾನಗಳುರುಳಿದಂತೆ ಬ್ರಾಹ್ಮೀಲಿಪಿ ಕುಶಾನ, ಕ್ಷತ್ರಪ, ಸಾತವಾಹನ, ಗುಪ್ತಮೊದಲಾದ ರಾಜರ ಆಡಳಿತ ಕಾಲಗಳಲ್ಲಿ ವಿಕಾಸಹೊಂದಿ, ಅನೇಕ ರೂಪಗಳನ್ನು ಪಡೆಯುತ್ತಾ ಹೋಯಿತು. (ಕೆ.ಪಿ.ಎ.)

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]