ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಕ್ತಿಯೋಗ

ವಿಕಿಸೋರ್ಸ್ದಿಂದ

ಭಕ್ತಿಯೋಗ ಮೋಕ್ಷಪ್ರಾಪ್ತಿಗಾಗಿಯೂ ಭಗವಂತನ ಅನುಗ್ರಹ ಸಂಪಾದನೆಗಾಗಿಯೂ ಭಕ್ತ ನಡೆಸುವ ಸಾಧನೆ. ಭಾರತೀಯ ಧರ್ಮ ಹಾಗೂ ತತ್ತ್ವಶಾಸ್ತ್ರಗಳ ಪರಮ ಲಕ್ಷ್ಯವೇ ಮೋಕ್ಷವೆಂಬ ಪುರುಷಾರ್ಥ. ಇದರ ಸಿದ್ಧಿಗೆ ಅಥವಾ ಸಾಕ್ಷಾತ್ಕಾರಕ್ಕೆ ಹೇಳುವ ಮುಖ್ಯವಾದ ಮೂರು ಸಾಧನಗಳಿಗೆ ಜ್ಞಾನಯೋಗ; ಕರ್ಮಯೋಗ; ಭಕ್ತಿಯೋಗ ಎಂಬ ಹೆಸರುಗಳಿವೆ. ಭಗವದ್ಗೀತೆಗಿಂತ ಹಿಂದಿನ ವೇದೋಪನಿಷತ್ತುಗಳ ಪ್ರಾಚೀನ ಕಾಲದಲ್ಲಿ ಜ್ಞಾನಯೋಗಕ್ಕೆ ಪ್ರಾಧಾನ್ಯವಿದ್ದಂತೆ ಭಗವದ್ಗೀತೆಯ ಕೆಲವು ಅಧ್ಯಾಯಗಳಲ್ಲಿ ಕರ್ಮಯೋಗಕ್ಕೆ ಪ್ರಾಶಸ್ತ್ಯ ಬಂದಿದೆ. ಆದರೆ ಶ್ವೇತಾಶ್ವತರ ಮುಂತಾದ ಉಪನಿಷತ್ತುಗಳು, ರಾಮಾಯಣ ಮಹಾಭಾರತಗಳು, ಭಗವದ್ಗೀತೆಯ ಕಡೆಯ ಅಧ್ಯಾಯಗಳು ಮತ್ತು ಎಲ್ಲಕ್ಕೂ ಹೆಚ್ಚಾಗಿ ಶ್ರೀಮದ್ಭಾಗವತ ಮುಂತಾದ ಪುರಾಣಗಳು ಎಲ್ಲವೂ ಏಕಕಂಠದಿಂದ ಭಕ್ತಿಯೋಗದ ಮಹಿಮೆಯನ್ನೇ ಎತ್ತಿ ಹೇಳುತ್ತವೆ. ಆದ್ದರಿಂದ ಭಕ್ತಿಯೋಗದ ಇತಿಹಾಸ ಪ್ರಾಚೀನವಿರುವಂತೆ ಅತ್ಯಂತ ವ್ಯಾಪಕವೂ ಆಗಿದೆ. ಇದಕ್ಕೆ ಕನಿಷ್ಠ ಇಪ್ಪತ್ತು ಶತಮಾನಗಳ ಇತಿಹಾಸವಿದೆ. ಶೈವ, ವೈಷ್ಣವ, ಶಾಕ್ತ ಮುಂತಾದ ವಿವಿಧ ಪಂಥಗಳೂ ಇದಕ್ಕೆ ಅಗ್ರಮಾನ್ಯತೆ ನೀಡಿವೆ. ಇದರ ಮಹಿಮೆಯನ್ನು ಕವಿಗಳು ಸ್ತೋತ್ರ ರೂಪದಲ್ಲಿ ಕೊಂಡಾಡಿದ್ದಾರೆ. ನಾರದ, ಶಾಂಡಿಲ್ಯ ಮುಂತಾದ ಋಷಿಗಳು ಭಕ್ತಿಸೂತ್ರಗಳನ್ನು ರಚಿಸಿ ವಿಖ್ಯಾತರಾಗಿದ್ದಾರೆ. ಎಲ್ಲ ಕಾಲದ, ಎಲ್ಲ ಪ್ರಾಂತಗಳ ಅನುಭಾವಿ ಸಂತಶ್ರೇಷ್ಠರುಗಳಾದ ಚೈತನ್ಯ ಮಹಾಪ್ರಭು, ತುಲಸೀದಾಸ, ಮೀರಾಬಾಯಿ, ತುಕಾರಾಮ, ರಾಮದಾಸ, ಕನಕದಾಸ, ಪುರಂದರದಾಸ ತ್ಯಾಗರಾಜ, ರಾಮಕೃಷ್ಣಪರಮಹಂಸ ಮೊದಲಾದವರು ಭಕ್ತಿಯ ಮಹಿಮೆಯ ಉನ್ನತಿಯನ್ನು ಮುಕ್ತಕಂಠದಿಂದ ಹಾಡಿದ್ದಾರೆ. ಅದು ವೀರಶೈವ ವಚನವಾಙ್ಮಯವಿರಲಿ, ಜೈನವಾಙ್ಮಯವಿರಲಿ, ಹರಿದಾಸ ಪಂಥದವರ ರಚನೆಗಳಿರಲಿ ಕನ್ನಡ ಸಾಹಿತ್ಯದ ಸಿಂಹಪಾಲು ಭಕ್ತಿ ನಿರ್ಭರತೆಯಿಂದ ಪ್ರಭಾಪೂರ್ಣವಾಗಿರುವುದು ಸುವಿದಿತ. ಶಂಕರ, ರಾಮಾನುಜ, ಮಧ್ವ ಹೀಗೆ ಆಚಾರ್ಯತ್ರಯರೂ ತಮ್ಮ ತಮ್ಮ ರೀತಿಯಲ್ಲಿ ಭಕ್ತಿಯೋಗಕ್ಕೆ ಸ್ಥಾನ ಕಲ್ಪಿಸಿಯೇ ಇರುವರೆಂಬುದು ಇದರ ಹೆಗ್ಗಳಿಕೆ. ಹೀಗೆ ದರ್ಶನ, ಸಾಹಿತ್ಯ, ಸಂಗೀತ ಎಲ್ಲದರಲ್ಲಿಯೂ ಭಕ್ತಿಪ್ರವಾಹ ಹರಿದಿರುವುದು ಭಾರತೀಯ ಸಂಸ್ಕøತಿಯ ವೈಶಿಷ್ಟ್ಯಗಳಲ್ಲಿ ಒಂದು.

ಭಕ್ತಿ ಎಂಬ ಸಂಸ್ಕೃತ ಪದವು "ಭಜ್" ಎಂಬ ಮೂಲದಿಂದ ಬಂದಿದ್ದು, ಭಕ್ತಿ ಎಂದರೆ "ಜ್ಞಾನ" ಎಂದು ಅರ್ಥ. ಸೇವೆ, ಉಪಾಸನೆ, ಆರಾಧನೆ ಎಂಬುದು ಇದರ ಸಾಮಾನ್ಯಾರ್ಥ. ದೇವರ ಸೇವೆ, ಉಪಾಸನೆ ಎಂಬುದು ರೂಢವಾದ ಪರಂಪರಾಗತ ಅರ್ಥ. ಭಗವಂತನ ಅನುಗ್ರಹದ ಸಂಪಾದನೆಗೆ ಸಾಧನವೇ ಭಕ್ತಿ. ಮಧುಸೂದನ ಸರಸ್ವತಿ ತನ್ನ "ಭಕ್ತಿರಸಾಯನ" ಎಂಬ ಗ್ರಂಥದಲ್ಲಿ ದ್ರವೀಭಾವಪೂರ್ವಿಕಾ ಮನಸೋಭಗವದಾಕಾರತಾರೂಪಾ ಸವಿಕಲ್ಪವೃತ್ತಿಃ ಭಕ್ತಿಃ ಎಂದು ಲಕ್ಷ್ಮಣ ಹೇಳಿದ್ದಾನೆ. ಭಗವಂತನನ್ನು ನೆನೆಯುತ್ತ ಮನಸ್ಸು ಕರಗಿ ನೀರಾಗುತ್ತದೆ; ಭಗವದಾಕಾರವನ್ನೇ ತಳೆಯುವ ಸಾಧನವಾಗುತ್ತದೆ. ಹಾಗಾದಾಗ ಆ ಮನೋವೃತ್ತಿಯೇ ಭಕ್ತಿಯೆನಿಸುತ್ತದೆ. ಭಗವಂತನ ಅನಂತಕಲ್ಯಾಣ ಗುಣಗಳನ್ನು ನೆನೆಯುವುದೇ ತಡ, ಧಾರಾವಾಹಿ ಭಕ್ತಿ ಪುಟಿಯುವುದು ಭಕ್ತನ ವೈಶಿಷ್ಟ್ಯ ಆದ್ದರಿಂದಲೇ ಉಪನಿಷತ್ತುಗಳಲ್ಲಿ ಪರಮಾತ್ಮನನ್ನು ರಸೋವೈಸಃ ಎಂದೂ ಸ ಏ ವ ರಸಾನಾಂ ರಸತಮಃ ಪರಮ ಎಂದೂ ಪರಮಾನಂದ ಸ್ವರೂಪನೆಂದೂ ಬಣ್ಣಿಸಲಾಗಿದೆ. ಯಸ್ಯ ದೇವೇ ಪರಾಭಕ್ತಿಃ ಎಂದು ಸ್ಪಷ್ಟವಾಗಿ ಉಲ್ಲೇಖ ಬರುವುದು ಶ್ವೇತಾಶ್ವತರ ಉಪನಿಷತ್ತಿನಲ್ಲಿ.

ಇದರ ಶಾಸ್ತ್ರೀಯ ಅಥವಾ ಪಾರಿಭಾಷಿಕ ವ್ಯಾಖ್ಯೆ ನಮಗೆ ಮೊದಲು ಕಾಣಸಿಗುವುದು ನಾರದ ಭಕ್ತಿ ಸೂತ್ರದಲ್ಲಿ. ಈ ಸೂತ್ರಗ್ರಂಥದ ಕಾಲ ಖಚಿತವಿಲ್ಲ. ಇದು ಬಹಳ ಪ್ರಾಚೀನವಲ್ಲದೆಯೂ ಇರಬಹುದು. ಆದರೆ ಇದರಲ್ಲಿ ಅಡಕವಾಗಿರುವ ತತ್ತ್ವ ಅರ್ವಾಚೀನವೆಂದೂ ಕಡೆಗಣಿಸಬೇಕಾಗಿಲ್ಲ. ಭಗವಂತನಲ್ಲಿ ಭಕ್ತಿಯೆಂಬುದು ಪರಮಪ್ರೇಮ, ಅಮೃತಸ್ವರೂಪ. ಇದನ್ನು ಪಡೆದಾತ ಸಿದ್ಧನಾಗುತ್ತಾನೆ. ಅಮೃತನಾಗುತ್ತಾನೆ, ತೃಪ್ತನಾಗುತ್ತಾನೆ. ಮತ್ತೇನನ್ನೂ ಇವನಿಗೆ ಶೋಕ ದ್ವೇಷಗಳಿರುವುದಿಲ್ಲ; ಮತ್ತಾವ ಇಷ್ಟ ಆಸಕ್ತಿಗಳೂ ಉಳಿದಿರುವುದಿಲ್ಲ. ಅದರ ಲಾಭದಿಂದ ಮತ್ತನಾಗಿ ಮೈಮರೆಯುತ್ತಾನೆ. ಆತ್ಮರಾಮನಾಗುತ್ತಾನೆ. ಭಕ್ತಿಯೆಂಬ ಪ್ರೇಮ ಕಾಮವಲ್ಲ. ಏಕೆಂದರೆ ಅದರಲ್ಲಿ ವಿರಕ್ತಿ ತುಂಬಿರುತ್ತದೆ. ಲೌಕಿಕ ವೈದಿಕ ಕರ್ಮಗಳಲ್ಲೆಲ್ಲ ವಿರಕ್ತಿಯೇ ಭಕ್ತಿಯ ಒಂದು ಮುಖ್ಯಾಂಗ.

ನಾರದಭಕ್ತಿಸೂತ್ರದಲ್ಲಿ ಇದರ ಭಿನ್ನವಿವರಣೆಗಳನ್ನೂ ಉಲ್ಲೇಖಿಸಲಾಗಿದೆ. ಪಾರಾಶರ್ಯ-ವ್ಯಾಸನ ಮತದಂತೆ ಪೂಜಾದಿಗಳಲ್ಲಿ ಅನುರಾಗವೇ ಭಕ್ತಿ. ಗರ್ಗನ ಮತದಂತೆ ಕಥಾದಿಗಳಲ್ಲಿ ಅನುರಾಗ ಭಕ್ತಿ; ಶಾಂಡಿಲ್ಯನ ಮತದಲ್ಲಿ ಆತ್ಮಾನಂದಕ್ಕೆ ಅವಿರುದ್ಧವಾದಾಗ ಮಾತ್ರ ಹಿಂದಿನ ಲಕ್ಷಣಗಳು ಭಕ್ತಿಗೆ ಸಲ್ಲುತ್ತವೆ. ಆದರೆ ನಾರದನ ಸ್ವಂತ ಅಭಿಪ್ರಾಯದಂತೆ ಭಗವಂತನಲ್ಲೇ ಸಕಲಾಚಾರವನ್ನೂ ಅರ್ಪಣೆ ಮಾಡುವುದು ಮತ್ತು ಭಗವಂತನ ಮರೆವಿನಿಂದ ಪರಮವ್ಯಾಕುಲತೆ ಉಂಟಾಗುವುದೇ ಭಕ್ತಿ ಲಕ್ಷಣ. ಇದಕ್ಕೆ ಉದಾಹರಣೆ ನಂದಗೋಕುಲದ ಗೋಪಿಯರಿಗೆ ಕೃಷ್ಣನಲ್ಲಿದ್ದ ಪರಮಾನುರಾಗ. ಅಲ್ಲಿ ಕೂಡ ಹರಿಯ ಮಾಹಾತ್ಮ್ಯದ ಅರಿವನ್ನು ಅವರೆಂದೂ ಕಳೆದುಕೊಂಡಿಲ್ಲ. ಕಳೆದುಕೊಂಡಿದ್ದರೆ ಮಾತ್ರ ಅವರ ಅನುರಾಗ ಜಾರೆಯರ ರೀತಿಯಲ್ಲಿ ಪಾಪಪೂರಿತವಾಗುತ್ತಿತ್ತು. ಅಂಥ ಲೌಕಿಕ ಪ್ರೇಮದಲ್ಲಿ ತತ್ಸುಖ- ಸುಖಿತ್ವವೆಂಬ ಗುಣಕ್ಕೆ ಎಡೆಯಿರುವುದೆಲ್ಲ; ಸ್ವಾರ್ಥವೇ ತುಂಬಿರುತ್ತದೆ.

ಭಕ್ತಿಯೋಗ, ಕರ್ಮಯೋಗ ಜ್ಞಾನಯೋಗಗಳಿಗಿಂತ ಅಧಿಕತರ ಎಂಬುದು ನಾರದನ ಅಭಿಪ್ರಾಯ. ಏಕೆಂದರೆ ಅದು ಬರಿಯ ಮೋಕ್ಷಸಾಧನವಾಗಿರದೆ ಸಕಲಸಾಧನೆಗಳಿಗೂ ಪರಮ ಫಲವೇ ಆಗಿರುತ್ತದೆ. ಭಗವಂತನಿಗೆ ಅಭಿಮಾನ ಕಂಡರೆ ದ್ವೇಷ; ದೈನ್ಯಪ್ರಿಯನಾತ. ಕೆಲವರು ಪರಾಭಕ್ತಿಗೆ ಜ್ಞಾನಸಾಧನವೆನ್ನುತ್ತಾರೆ. ಕೆಲವರು ಅವುಗಳಲ್ಲಿ ಅನ್ಯೋನ್ಯ ಸಾಧನತ್ವವನ್ನು ಆರೋಪಿಸುತ್ತಾರೆ. ಆದರೆ ನಾರದ ಮಾತ್ರ ಭಕ್ತಿ ಸ್ವಯಂ ಫಲರೂಪವೆಂದೇ ಭಾವಿಸುತ್ತಾನೆ. ಆದ್ದರಿಂದ ಅದೇ ಪರಮೋಪಾದೇಯ.

ಈ ಪರಮಫಲರೂಪವಾದ ಭಕ್ತಿಗೆ ವಿಷಯತ್ಯಾಗ, ದುಸ್ಸಂಗತ್ಯಾಗ, ಅವ್ಯಾಹತ ಭಜನೆ, ಭಗವದ್ಗುಣಗಳ ಶ್ರವಣ ಮತ್ತು ಸಂಕೀರ್ತನ, ಭಗವಂತನ ಕೃಪೆ, ಮಹಾತ್ಮರ ಸಂಗ, ಕಾಮ ಕ್ರೋಧಾದಿಗಳ ವರ್ಜನ, ಕರ್ಮಫಲತ್ಯಾಗ ಮುಂತಾದವು ಸಾಧನಗಳು.

ಈ ಪರಮಭಕ್ತಿಯ ಸ್ವರೂಪ ಅನುಭವೈಕ ಗಮ್ಯ; ಶಬ್ದಗಳಿಂದ ಹೇಳಲು ಬರುವಂಥದಲ್ಲ. ಇದು ಮೂಕನ ರಸಾಸ್ವಾದನೆಯಂತೆ. ಸಾಧನೆಗಳಿಂದ ಅರ್ಹತೆ ಪಡೆದಾತನಲ್ಲಿ ಭಕ್ತಿ ಪ್ರಕಟಗೊಳ್ಳುತ್ತದೆ. ಇದು ಗುಣರಹಿತ, ಕಾಮನಾರಹಿತ; ಆದರೆ ಪ್ರತಿಕ್ಷಣ ಹೆಚ್ಚುತ್ತಲೇ ಹೋಗುತ್ತದೆ. ಅವಿಚ್ಛಿನ್ನ ತೈಲಧಾರೆಯಂತೆ ನಿರಂತವಾಗುತ್ತದೆ.

ಸಾಧನಭಕ್ತಿಗೆ ಗೌಣಭಕ್ತಿಯೆಂದು ಹೆಸರು. ಇದನ್ನೇ ಭಗವದ್ಗೀತೆಯಲ್ಲಿ ಆರ್ತ, ಜಿಜ್ಞಾಸು, ಅರ್ಥಾರ್ಥಿ ಮುಂತಾದವರ ಭಕ್ತಿಯೆಂದು ವಿಂಗಡಿಸಲಾಗಿದೆ. ಸಾಸ್ತ್ವಿಕ, ರಾಜಸ, ತಾಮಸ ಎಂಬ ಗುಣಭೇದದಿಂದಲೂ ಈ ಭಕ್ತಿ ವಿಭಿನ್ನವಾಗುತ್ತದೆ. ಭಕ್ತಿಗೆ ಅನ್ಯ ಪ್ರಮಾಣಗಳ ಅಗತ್ಯವಿಲ್ಲ; ಅದು ಪರಮ ಶಾಂತಿ ಹಾಗೂ ಆನಂದಾನುಭವರೂಪವಾದ್ದರಿಂದ ಅದೇ ಸ್ವಯಂ ಪ್ರಮಾಣ.

ಭಕ್ತರು ಪುಲಕಿತಶರೀರರಾಗಿ ಲೋಕವನ್ನೇ ಪಾವನಗೊಳಿಸುತ್ತ್ತಾರೆ. ಅವರು ಮಾಡಿದ್ದೆಲ್ಲ ಪುಣ್ಯಾಚರಣೆ; ಹೀಳಿದೆಲ್ಲ ಶಾಸ್ತ್ರವಾಕ್ಯವಾಗುತ್ತದೆ. ಅಂಥವರಿಂದ ಪಿತೃಗಳು ಹರ್ಷಿಸುತ್ತಾರೆ; ಹೀಳಿದ್ದೆಲ್ಲ ಶಾಸ್ತ್ರವಾಕ್ಯವಾಗುತ್ತದೆ. ಅಂಥವರಿಂದ ಪಿತೃಗಳು ಹರ್ಷಿಸುತ್ತಾರೆ; ದೇವತೆಗಳು ಕುಣಿಯುತ್ತಾರೆ. ಭೂಮಿ ಧನ್ಯಳಾಗುತ್ತಾಳೆ, ಭಕ್ತರಲ್ಲಿ ಜಾತಿ, ಕುಲ, ವಿದ್ಯೆ, ರೂಪ ಧನ, ಕ್ರಿಯೆ-ಎವೇ ಮೊದಲಾದ ಯಾವುದೇ ಭೇದಭಾವನೆಗಳಿಗೂ ಅವಕಾಶವಿರುವುದಿಲ್ಲ. ಅವರು ಇತರರೊಂದಿಗೆ ವಾದಕ್ಕೆ ಇಳಿಯಲಾರರು.

ನಾರದನ ಪ್ರಕಾರ ಭಕ್ತಿ ಹನ್ನೊಂದು ಬಗೆಗಳನ್ನು ಒಳಗೊಂಡಿದೆ:1 ಗುಣಮಹಾತ್ಮ್ಯಾಸಕ್ತಿ, 2 ರೂಪಾಸಕ್ತಿ 3 ಪೂಜಾಸಕ್ತ. 4 ಸ್ಮರಣಾಸಕ್ತಿ, 5 ದಾಸ್ಯಾಸಕ್ತಿ, 6 ಸಖ್ಯಾಸಕ್ತಿ, 7 ವಾತ್ಸಲ್ಯಾಸಕ್ತ, 8 ಕಾಂತಾಸಕ್ತಿ, 9 ಆತ್ಮನಿವೇದನಾಸಕ್ತಿ, 10 ತನ್ಮಯತಾಸಕ್ತಿ ಮತ್ತು 11 ಪರಮವಿರಹಾಸಕ್ತಿ. ಇದನ್ನೇ ಭಾಗವತರಲ್ಲಿ ಶ್ರವಣ, ಕೀರ್ತನ ಮುಂತಾಗಿ ಒಂಬತ್ತು ಭಕ್ತಿ ಪ್ರಕಾರಗಳೆಂದು ಪರಿಗಣಿಸಲಾಗಿದೆ. ಸಾಧನಭಕ್ತಿಯಿಂದ ಚಿತ್ತಶುದ್ಧಿಯಾಗುವುದೆಂದು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಇದೇ ಸ್ಥೂಲಭಕ್ತಿ. ಇದರಿಂದಾಚೆಗೆ ಇರುವುದೇ ಸೂಕ್ಷ್ಮಭಕ್ತಿ ಅಥವಾ ಫಲಭಕ್ತಿ. ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಬಲೀಯಸೀ ಎಂದು ಶಂಕರಾಚಾರ್ಯರು ಭಕ್ತಿಗೆ ಮಹತ್ತ್ವದ ಸ್ಥಾನ ನೀಡಿದ್ದಾರೆ. ರಾಮಾನುಜ, ಮಧ್ವ ಇಬ್ಬರಿಗೂ ಭಕ್ತಿಯೇ ಅತ್ಯಂತ ಉಪಕಾರಕವಾದ ಪುರುಷಾರ್ಥ ಸಾಧನ. ಅದಿಲ್ಲದೆ ಜ್ಞಾನವೂ ಸಿದ್ಧಿಸದು. ಅವಿವೇಕಿಗಳಿಗೆ ಪಂಚೇಂದ್ರಿಯ ವಿಷಯಗಳಲ್ಲಿ ಅಷ್ಟೇ ಅನುರಕ್ತಿಯಿರುತ್ತದೆ. ಅದೇ ಭಗವತ್ಪರವಾಗಿ ಮಾರ್ಪಡುವುದು ಭಕ್ತಿಯೆನಿಸುತ್ತದೆ ಎಂದು ವಿಶಿಷ್ಟಾದ್ವೈತಾಚಾರ್ಯರಾದ ಮಣವಾಲಮಹಾಮುನಿಗಳ ವಿವರಣೆ. ಇದಕ್ಕೆ ಕಾರಣ ಪಾಂಚರಾತ್ರಾಗಮ ಮುಂತಾದ ಪ್ರಾಚೀನ ವೈಷ್ಣವಾಗಮಗಳ ಸಿದ್ಧಾಂತವೇ. ಮನೋಗತಿರವಿಚ್ಛಿನ್ನಾಹತಾ ಪ್ರೇಮಪರಿಪ್ಲುತಾ, ಅಭಿಸಂಧಿವಿ ನಿರ್ಮುಕ್ತಾ ಭಕ್ತಿಃ ವಿಷ್ಣುವಶಂಕರೀ ಎಂಬುದು ನಾರದ ಪಾಂಚರಾತ್ರದ ವಚನ. ಇದು ಭಗವಂತನ ಮಾಹಾತ್ಮ್ಯದ ಅರಿವಿನಿಂದ ಮೂಡಿಬಂದಿರಬೇಕು. ಸುದೃಢವೂ ಸರ್ವಾಧಿಕವೂ ಅದ ಈ ಸ್ನೇಹವೇ ಮೋಕ್ಷಪ್ರದ; ಮುಕ್ತಿಗೆ ಬೇರೆ ದಾರಿಯಿಲ್ಲ ಎಂಬುದು ಮಧ್ವಾಚಾರ್ಯರ ನಿರ್ಣಯ (ಮಾಹಾತ್ಮ್ಯಜ್ಞಾನ ಪೂರ್ವಸ್ತು ಸುಧೃಢಃ ಸರ್ವತ್ಯೋಧಿಕಃ ಸ್ನೇಹೋ ಭಕ್ತಿರಿತಿ ಪ್ರೋಕ್ತಸ್ತಯಾ ಮುಕ್ತಿರ್ನಚಾನ್ಯಥಾ-ಮಹಾಭಾರತ ತಾತ್ಪರ್ಯ ನಿರ್ಣಯ).

ಶ್ರೀವಿಷ್ಣೋಃ ಶ್ರವಣೀ ಪರೀಕ್ಷಿತಭವದ್ವೈಯಾಸಕಿಃ ಕೀರ್ತನೇ
ಪ್ರಹ್ಲಾದಃ ಸ್ಮರಣೀ ತದಂಘ್ರಿಭಜನೇ ಲಕ್ಷ್ಮೀಃ ಪೈಥುಃ ಪೂಜನೇ
ಅಕ್ರೂರಸ್ತ್ವಭಿವಂದನೇ ಚ ಹನುಮಾನ್ ದಾಸ್ಯೇ ಚ ಸಖ್ಯೇರ್ಜುನಃ
ಸರ್ವಸ್ವಾತ್ಮನಿವೇದನೇ ಬಲಿರಭೂತ್ ಕೈವಲ್ಯಮೇಣಾಂ ಮತಮ್
ಭಕ್ತಿ ಚಂದ್ರಿಕಾ, ಶಾಂಡಿಲ್ಯ ಸೂತ್ರವ್ಯಾಖ್ಯೆ
ವಿಷ್ಣುವಿನ ಶ್ರವಣಕ್ಕೆ ಪರೀಕ್ಷಿದ್ರಾಜ ಪರಮ ನಿದರ್ಶನ; ಇಡಿಯ ಭಾಗವತವನ್ನೇ ಶ್ರವಣಮಾಡಿದ ಮೊದಲಿಗನೇ

ಆತ. ಕೀರ್ತನಕ್ಕೆ ವೈಯಾಸಿಕಿ ಅಥವಾ ವ್ಯಾಸರ ಮಗನಾದ ಶುಕ; ಭಾಗವತ ಸಂಕೀರ್ತನ ಈತನ ಬಾಯಿಂದಲೇ ಮೊದಲಾಯಿತು. ಸ್ಮರಣಕ್ಕೆ ಪ್ರಹ್ಲಾದ; ಪಾದಸೇವನೆಗೆ ಲಕ್ಷ್ಮೀ; ಪೂಜೆಗೆ ಪೃಥುಚಕ್ರವರ್ತಿ; ಅಭಿವಂದನೆಗೆ ಅಕ್ರೂರ; ದಾಸ್ಯಭಾವಕ್ಕೆ ಆಂಜನೇಯ; ಸಖ್ಯಕ್ಕೆ ಅರ್ಜುನ; ಸರ್ವಾರ್ಪಣೆಗೆ ಬಲಿಚಕ್ರವರ್ತಿ; ಈ ಭಕ್ತ ಶಿರೋಮಣಿಗಳಿಗೆಲ್ಲ ಕೈವಲ್ಯ ಪ್ರಾಪ್ತವಾಗಿದೆ. ಶಾಂಡಿಲ್ಯಸೂತ್ರದಲ್ಲಿ ಪೃಥುವಿನಂತೆ ಧ್ರುವ, ಪ್ರಹ್ಲಾದ, ಅಂಬರೀಷ, ಶುಕ, ಸನಕ ನಾರದಾದಿಗಳನ್ನು ಹೆಸರಿಸಿ ಭಕ್ತಾಗ್ರಣಿಗಳೆನ್ನಲಾಗಿದೆ. ಇವರ ಚರಿತ್ರೆಯೇ ಭಾಗವತದ ತಿರುಳು.

ಭಕ್ತಿಯ ಪ್ರಾಚೀನತೆ ವೇದಗಳವರೆಗೂ ವ್ಯಾಪ್ತಿಸುತ್ತದೆ. ಭಕ್ತಿಃ ಪ್ರಮೇಯಾ ಶ್ರುತಿಭ್ಯಃ ಎಂದು ಶಾಂಡಿಲ್ಯಸೂತ್ರ ಹೇಳಿದರೆ, ಆಧುನಿಕ ವೇದಸಂಶೋಧಕರು ಋಗ್ವೇದಸೂಕ್ತಗಳಲ್ಲಿ ಭಕ್ತಿಶಬ್ದವನ್ನಲ್ಲದಿದ್ದರೂ, ಭಕ್ತಿಭಾವದ ಆವಿರ್ಭಾವವನ್ನು ಗುರುತಿಸುತ್ತಾರೆ. ವಿಷ್ಣುಸೂಕ್ತದಲ್ಲಿ ತ್ರಿವಿಕ್ರಮ ವೈಭವದ ವರ್ಣನೆಯೇ ಬಂದಿದೆ. ಆದರೆ ವಿಷ್ಣುವಿನ ಅವತಾರಗಳನ್ನು ಬಣ್ಣಿಸುವ ಅದರಲ್ಲೂ ಮನುಷ್ಯಾವತಾರಗಳಾದ ರಾಮ, ಕೃಷ್ಣ ಮುಂತಾದವನ್ನು ಕೊಂಡಾಡುವ ಪುರಾಣಗಳಲ್ಲಿ ಭಕ್ತಿಯೊಂದೇ ಅವ್ಯಾಹತವಾಗಿ ಹರಿದುಬಂದಿದೆ. ಅವತಾರಗಳಲ್ಲೂ ಕೃಷ್ಣಸ್ತು ಭಗವಾನ್ ಸ್ವಯಮ್ ಎಂದುದರಿಂದ ಕೃಷ್ಣಾವತಾರಕ್ಕೆ ಅದ್ವಿತೀಯವಾದ ಮಹಿಮೆ ಉಕ್ತವಾಗಿದೆ. ಸ್ವರೂಪಾವತಾರಗಳಂತೆ ಆವೇಶಾವತಾರಗಳನ್ನೂ ಅವತಾರವಾದ ಒಪ್ಪುತ್ತದೆ. ಉದಾಹರಣೆಗೆ ವ್ಯಾಸ, ಪರಶುರಾಮ ಇವರು ಸ್ವರೂಪಾವೇಶಾದ ಅವತಾರಗಳಾದರೆ ಧನ್ವಂತರಿ ಶಕ್ತ್ಯಾವೇಶದ ಅವತಾರ. ವಿಗ್ರಹ ಸಾಲಿಗ್ರಾಮಾದಿಗಳು ಅರ್ಚಾವತಾರಗಳು.

ಭಕ್ತಿಯೋಗದ ಮಹಿಮೆಯನ್ನು ನಿಷ್ಕøಷ್ಟವಾಗಿ ನಿರ್ಣಯಿಸಿ ಎತ್ತಿಹೇಳುವ ಮಾಲಿಕ ಗ್ರಂಥವೆಂದರೆ ಭಗವದ್ಗೀತೆಯೇ. ಒಮ್ಮೊಮ್ಮೆ ಭಕ್ತಿಯೋಗವನ್ನು ಜ್ಞಾನಯೋಗದಲ್ಲಿ ಅಂತರ್ಭಾವ ಮಾಡಿದಂತೆ ತೋರಿದರೂ ವ್ಯಾಖ್ಯಾನಕಾರರು ತೋರಿಸುವಂತೆ ಅದೆಲ್ಲ ಸಾಧನ ಭಕ್ತಿಯನ್ನು ಮಾತ್ರ ಕುರಿತದ್ದು. ನಾರದಸೂತ್ರ ಹೇಳುವ ಫಲರೂಪ ಪರಾಭಕ್ತಿಯನ್ನಲ್ಲ. ಅಲ್ಲಿಯೇ ಮುಂದೆ ಹೇಳುವ ವಾಕ್ಯ ಪರಾಭಕ್ತಿಯ ಪಾರಮ್ಯವನ್ನು ಎತ್ತಿಹೇಳುತ್ತದೆ. ಮೋಕ್ಷಕ್ಕಿಂತಲೂ ಫಲಭಕ್ತಿಯ ಪ್ರಾಶಸ್ತ್ಯ ಹೆಚ್ಚಿನದೆಂದು ತಂತ್ರಗಳಲ್ಲಿ ಹೇಳಲಾಗಿದೆ. ಹರಿಭಕ್ತಿ ಮಹಾರಾಣಿಯಿದ್ದಂತೆ; ಮಿಕ್ಕೆಲ್ಲ ಮುಕ್ತಿ ಭುಕ್ತಿಗಳೂ ಆಕೆಯ ಪರಿಚಾರಿಕೆಯರಂತೆ ('ಹರಿಭಕ್ತೇರ್ಮಹಾದೇವ್ಯಾಃ ಸರ್ವಾ ಮುಕ್ತ್ಯಾದಿಸಿದ್ಧೆಯಃ | ಭುಕ್ತಯಶ್ಚಾ ದ್ಬುತಾಸ್ತಸ್ಯಾಶ್ಚೇಷ್ಟಿಕಾವದನುವ್ರತಾಃ ಭಕ್ತಿಚಂದ್ರಿಕೆಯಲ್ಲಿ ಉದಾಹೃತ ಶಾಂಡಿಲ್ಯ ಸೂತ್ರ) ಭಗವತ್ಪ್ರೇಮ ಹೃದಯದಲ್ಲಿ ರೂಢಮೂಲವಾದರೆ ನಾಲ್ಕು ಪರುಷಾರ್ಥಗಳೂ ಹುಲ್ಲಿಗಿಂತ ಭಕ್ತನಿಗೆ ಕಡೆಯೆನಿಸುತ್ತವೆಂಬುದು ಚೈತನ್ಯಸಂಪ್ರದಾಯದವರ ಸಿದ್ಧಾಂತ (ಮನಾಗೇವ ಪ್ರರೂಢಾಯಂ ಹೃದಯೇ ಭಗವದ್ರತಾ, ಪುರುಷಾರ್ಥಾಸ್ತು ಚತ್ವಾರಃ ತೃಣಾಯಂತೇ ಸಮಂತತಃ-ಭಕ್ತಿರಸಾಮೃತ ಸಿಂಧು).

ವೇದ, ಇತಿಹಾಸ, ಪುರಾಣ, ಕಾವ್ಯಾದಿಗಳಲ್ಲಿ ಭಕ್ತಿರಸ ಅಖಂಡವಾಗಿ ಹರಿದಂತೆ ದ್ರಾವಿಡವೇದವೆನಿಸುವ ತುಮಿಳಿನ ಪ್ರಬಂಧಗಳಲ್ಲಿ ಆಳ್ವಾರುಗಳ ಭಕ್ತಿರಸಾವೇಶ ಉಕ್ಕಿದೆ. ಶೈವ ನಾಯನಾರ್‍ಗಳ ಭಕ್ತಿನಿರ್ಭರತೆ ಪೆರಿಯ ಪುರಾಣಾದಿಗಳ ವಸ್ತುವಾಗಿದೆ. ವೇದ ಸಂಸ್ಕøತಿಗೂ ಪೂರ್ವದ ಮೊಹೆಂಜೊದಾರೋ ಸಂಸ್ಕøತಿಯಲ್ಲೇ ಭಕ್ತಿಯೋಗದ ಬೀಜಗಳಿದ್ದುದನ್ನು ಸಾರುವ ಸಾಕ್ಷ್ಯಗಳನ್ನು ಪ್ರಾಗೈತಿಹಾಸಿಕ ಸಂಶೋಧಕರು ಎತ್ತಿ ತೋರಿಸುತ್ತಿದ್ದಾರೆ.

ಭಗವಂತನನ್ನು ಹರಿಯೆನ್ನಲಿ, ಹರನೆನ್ನಲಿ, ಗಣಪತಿ, ಸೂರ್ಯ, ಜಗದೀಶ್ವರಿ ಮುಂತಾಗಿ ನಾಮಾಂತರಗಳಿಂದ ಕರೆಯಲಿ, ಹಿಂದಿನ ಕವಿಗಳು ನಾಮಸ್ಮರಣೆಗೆ, ಮಹಿಮಾವರ್ಣನೆಗೆ ತೆರೆದ ಹೃದಯದಿಂದ, ತುಂಬಿದ ಭಾವದಿಂದ, ಪ್ರಥಮ ಪ್ರಾಶಸ್ತ್ಯವೀಯುತ್ತಾರೆ. ಮಹಾಕವಿ ಕಾಳಿದಾಸ ಕೂಡ ಶಿವನನ್ನು ಸ್ಥಿರಭಕ್ತಿ ಯೋಗ ಸುಲಭ ನೆಂದು ಹಾಡಲು ಮರೆಯುವುದಿಲ್ಲ. ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ ಎಂದು ಬಸವಣ್ಣನವರು ಹಾಡಿದ್ದಾರೆ. ಮಾನವ ಜನ್ಮ ಸಾರ್ಥಕವಾಗಲು, ಪರಮಾನಂದದ ಸಾಕ್ಷಾತ್ಕಾರವಾಗಬೇಕು. ಅದಕ್ಕೆ ಭಕ್ತಿಯೇ ಸಾಧನ; ಭಕ್ತಿಯೇ ಫಲ ಎಂಬುದು ಭಾರತೀಯ ಧರ್ಮಗಳೆಲ್ಲವುಗಳ ಸಮನ್ವಯ ಸೂತ್ರವೆನ್ನಬಹುದು. ಏಕೆಂದರೆ ಜೈನ ಬೌದ್ಧ ಧರ್ಮಗಳಲ್ಲೂ ಭಕ್ತಿಗೆ ಮುಖ್ಯ ಸ್ಥಾನವಿದೆ. ಭಗವದ್ಗೀತೆಯಲ್ಲಿ ಭಕ್ತನನ್ನು ಯುಕ್ತತಮ ಎನ್ನಲಾಗಿದೆ.

ಈ ಶ್ರದ್ಧೆಯ ಫಲವಾಗಿಯೇ ಭಗವತ್ಟ್ರೇಮವನ್ನು ಹಿಂದಿನ ಆಲಂಕಾರಿಕರು ಶೃಂಗರಾದಿ ಲೌಕಿಕ ನವರಸಗಳಲ್ಲಿ ಒಂದೆನ್ನಲು ಹಿಂಜರಿದರು. ಎಷ್ಟೆಂದರು ಶೃಂಗಾರಾದಿಗಳ ಅಲೌಕಿಕ ಆನಂದನಿರ್ಭರತೆ ಕ್ಷಣಿಕ; ಬ್ರಹ್ಮಾನಂದನಿರ್ಭರತೆಯಂತೆ ನಿತ್ಯವಲ್ಲವೆಂಬುದು ಅದರ ಗ್ರಹಿಕೆ. ಆದ್ದರಿಂದ ಭಕ್ತಿಯನ್ನವರು ಭಾವವೆಂದೇ ಭಾವಿಸುತ್ತಿದ್ದರು. ಆದರೆ ಹದಿನೈದನೆಯ ಶತಮಾನದಲ್ಲಿ ಚೈತನ್ಯಭಕ್ತಿಪಂಥದವರು ಹೊಸ ವ್ಯಾಖ್ಯಾನಮಾಡಿ ಭಗವತ್ಪ್ರೇಮವೊಂದನ್ನೇ, ರಸೋವೈಸ: ಎಂಬ ಪರಮರಸದ ಲಕ್ಷಣವನ್ನಾಗಿಸಿದ್ದರಿಂದ ಭಕ್ತಿಯೇ ಪರಮರಸವೆನಿಸುವಂತಾಯಿತು. ಭಗವಂತನ ಕೃಷ್ಣಾವತಾರದ ಗೋಪೀವೃತ್ತಾಂತ ಕೂಡ ಲೌಕಿಕ ಮಾಲಿನ್ಯದಿಂದ ಮುಕ್ತವಾಗಿ ಪರಿಶುದ್ಧ ಪರಮರಸವೆನಸುವಂತಾಯಿತು. ಇದು ಭಕ್ತಿಯೋಗದ ಇತಿಹಾಸದ ಒಂದು ಸ್ಥೂಲಚಿತ್ರ. ಭಕ್ತಿದೇವಿ ದ್ರಾವಿಡದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬೆಳೆದು ಮಹಾರಾಷ್ಟ್ರದಲ್ಲಿ ನಡೆದು ಗುರ್ಜರದೇಶದಲ್ಲಿ ಮುಪ್ಪಾದಳೆಂದು ಭಾಗವತಮಾಹಾತ್ಮ್ಯದಲ್ಲಿ ಬರೆಯಲಾಗಿದೆ. (ಕೆ.ಕೆ.)