ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭರತನಾಟ್ಯ

ವಿಕಿಸೋರ್ಸ್ದಿಂದ

ಭರತನಾಟ್ಯ ಅತಿ ಪ್ರಾಚೀನ ಎನ್ನಲಾದ ಒಂದು ಶಾಸ್ತ್ರೀಯ ನೃತ್ಯ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಾಣಬರುವ ಈ ನೃತ್ಯದ ಬಗೆಗೆ ಭರತನ ನಾಟ್ಯಶಾಸ್ತ್ರದಲ್ಲಿ ವಿವರವಾಗಿ ಹೇಳಿದೆ. ಸೃಷ್ಟಿಕರ್ತನಾದ ಬ್ರಹ್ಮನೇ ಈ ಶಾಸ್ತ್ರವನ್ನು ರಚಿಸಿದನೆಂದು ನಾಟ್ಯಶಾಸ್ತ್ರ ಹಾಗೂ ನಂದಿಕೇಶ್ವರನ ಆಭಿನಯ ದರ್ಪಣದಲ್ಲಿ ಹೇಳಲಾಗಿದೆ. ಈ ಶಾಸ್ತ್ರ ಸೃಷ್ಟಿಯಾದ ಬಗೆಗೆ ಒಂದು ದಂತ ಕಂಥೆಯೇ ಇದೆ. ಇಂದ್ರಾದಿ ದೇವತೆಗಳು ತಮ್ಮ ಬಿಡುವಿನ ವೇಳೆ ಕಳೆಯಲು ಯಾವುದಾದರೂ ಒಂದು ವಿಧಾನ ಹೇಳಿಕೊಡಬೇಕೆಂದು ಬ್ರಹ್ಮನನ್ನು ಪ್ರಾರ್ಥಿಸಿದರು. ಆಗ ಬ್ರಹ್ಮ ಋಗ್ವೇದದಿಂದ ಪಾಠ್ಯವನ್ನೂ (ಶಬ್ದ) ಸಾಮವೇದದಿಂದ ಗೀತವನ್ನೂ ಯಜುರ್ವೇದದಿಂದ ಅಭಿನಯವನ್ನೂ ಅಥರ್ವವೇದದಿಂದ ರಸಗಳನ್ನೂ ಆಯ್ದುಕೊಂಡು.

ನಾಟ್ಯವೇದಂ ತತಶ್ಚಕ್ರೇ ಚತುರ್ವೇದಾಂಗ ಸಂಭವಂ
ಜಗ್ರಾಹ ಪಾಠಮೃಗ್ವೇದಾತ್ ಸಾಮಭ್ಯೋ ಗೀತಮೇವ ಚ
ಯಜುರ್ವೇದಾದಭಿನಯಾನ್ ರಸಾನಾರ್ಥವಣಾದಪಿ (ನಾಟ್ಯಶಾಸ್ತ್ರ)

ನಾಟ್ಯವೇದವೆಂಬ ಐದನೆಯ ವೇದ ರಚಿಸಿ ತನ್ನ ಮಗನಾದ ಭರತನಿಗೆ ಕೊಟ್ಟ ಭರತ ಅದನ್ನು ಶಾಸ್ತ್ರ ರೂಪದಲ್ಲಿ ಬರೆದು ತನ್ನ ನೂರು ಮಕ್ಕಳ ಎದುರಿನಲ್ಲೂ ಪಠಿಸಿದ. ಅಲ್ಲದೆ ಈ ವಿದ್ಯೆಯನ್ನು ಗಂಧರ್ವ, ಅಪ್ಸರೆಯರಿಗೂ ಹೇಳಿಕೊಟ್ಟ. ಇವರೆಲ್ಲ ಸೇರಿ ಶಿವನ ಎದುರಿನಲ್ಲಿ ನರ್ತಿಸಿದಾಗ ಸ್ವಯಂ ನಟರಾಜ ಎನಿಸಿದ ಶಿವ ತೃಪ್ತನಾಗಿ ಈ ವಿಶಿಷ್ಟ ಕಲೆಯನ್ನು ತನ್ನ ಗಣಗಳಿಗೂ ಬೋಧಿಸುವಂತೆ ಭರತನಿಗೆ ಹೇಳಿದ. ಪಾರ್ವತಿ ಭರತನಿಗೆ ಲಾಸ್ಯ ನೃತ್ಯವನ್ನು ಹೇಳಿದಳು. ಶಿವನೆ ತಾಂಡವ ಗಂಡು ನೃತ್ಯ : ಪಾರ್ವತಿಯ ಲಾಸ್ಯ ಹೆಣ್ಣು ವೃತ್ಯ. ಅನಂತರ ಪಾರ್ವತಿ ಈ ಲಾಸ್ಯ ನೃತ್ಯವನ್ನು ಬಾಣಾಸುರನ ಮಗಳಾದ ಉಷೆಗೆ ಹೇಳಿದಳು_ಇದು ದಂತಕಥೆ. ಹೀಗೆ ಈ ನೃತ್ಯ ಭಾರತ ದೇಶದ ಉದ್ದಗಲಕ್ಕೂ ಪಸರಿಸಿ ಭರತನಾಟ್ಯವೆನಿಸಿದೆ.

ಈ ನೃತ್ಯ ಕಲೆ ಕ್ರಮೇಣ ರಾಜ ಮಹಾರಾಜರ ಆಸ್ಥಾನ ಸೇರಿ ಪ್ರೋತ್ಸಾಹ ಪಡೆಯಿತು. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ನೆಲಸಿ ಬೆಳೆದು ಅರಳಿತು. 2-3ನೆಯ ಶತಮಾನದ ದೇವಾಲಯಗಳ ಶಿಲ್ಪವಿನ್ಯಾಸದಲ್ಲಿ ಸ್ಪಷ್ಟವಾಗಿ ಈ ಕಲೆಯನ್ನು ಗುರುತಿಸಬಹುದು. ತಂಜಾವೂರಿನ ರಾಜರಾಜ ಚೋಳ (965-1014) ಬೃಹದೀಶ್ವರ ದೇವಾಲಯದ ಸಭಾಂಗಣದಲ್ಲಿ ಪೂಜಾಸಮಯದ ನರ್ತನಕ್ಕಾಗಿ ಸುಮಾರು 400 ವರ್ತಕಿಯರನ್ನು ನೇಮಿಸಿದ್ದನಂತೆ. ಚಿದಂಬರಂ ದೇವಾಲಯದ 108 ಕಿರಣಗಳು, ಹಲವಾರು ತಾಹಲವಾರು ತಾಂಡವಭಂಗಿಗಳು ಇದಕ್ಕೆ ಪುಷ್ಟಿಕೊಡುತ್ತದೆ. ಬೇಲೂರಿನ ಮದನಿಕೆ ವಿಗ್ರಹಗಳು ಈ ನಾಟ್ಯದ ವಾಪ್ತಿಯನ್ನು ಸೂಚಿಸುತ್ತದೆ. ಭರತನಾಟ್ಯಕ್ಕೆ ಇಂದು ತಮಿಳುನಾಡಿನ ತಂಜಾವೂರು ಮತ್ತು ಕಾಂಚೀಪುರಗಳು ಕೇಂದ್ರಗಳಾಗಿವೆ. ಈಚಿನ ವರ್ಷಗಳಲ್ಲಿ ಮದ್ರಾಸು, ಮತ್ತು ತಂಜಾವೂರು ಶೈಲಿಗಳೆಂದು ಈ ನಾಟ್ಯದ ವಿವಿಧ ರೂಪಗಳನ್ನು ಗುರುತಿಸಲಾಗಿದೆ.

ಈ ಕಲೆಯನ್ನು ಕರಗತಮಾಡಿಕೊಳ್ಳಬೇಕಾದರೆ ಕಲಾವಿದ ಒಂದು ವಿಧವಾದ ಯೋಗಾಭ್ಯಾಸ ನಡೆಸಬೇಕು. ದೇಹ ಹಾಗೂ ಇಂದ್ರಿಯಗಳು ಆತನ ಹತೋಟಿಯಲ್ಲಿರಬೇಕು. ಈ ಕಲೆಶಾಸ್ತ್ರಗಳ ಆಧಾರದ ಮೇಲೆ ನಿಂತಿದ್ದರೂ ಕಲ್ಪನೆ ಹಾಗೂ ಹೊಸಹುಟ್ಟುಗಳಿಗೆ ಅವಕಾಶ ಕಲ್ಪಿಸಿಕೊಡುತ್ತದೆ. ಸಂಪ್ರದಾಯಪ್ರದ ಕಟ್ಟುನಿಟ್ಟುಗಳು ಏನೇ ಇದ್ದರೂ ಕಲಾವಿದ ತನ್ನ ಕಲ್ಪನೆ ಹಾಗೂ ಮನೋಭಾವಗಳನ್ನು ಅನುಸರಿಸಿ ಈ ಕಲೆಗೆ ತನ್ನದೇ ಆದ ಮೂರ್ತರೂಪ ನೀಡಬಲ್ಲ. ಭರತನಾಟ್ಯದ ಅಭ್ಯಾಸದಲ್ಲಿ ತಾಳ ಮತ್ತು ಹೆಜ್ಜೆವಿನ್ಯಾಸ, ಹಸ್ತಹಳ ವಿನಿಯೋಗ ಮತ್ತು ಮುಖಭಾವಗಳಿಗೆ ಹೆಚ್ಚಾದ ಗಮನ ಕೊಡಬೇಕು. ಅಭ್ಯಾಸ ಬೆಳೆದಂತೆ ಅದರ ಬಗೆಗಿನ ಕಲ್ಪನೆಗಳೂ ವಿಕಾಸಗೊಳ್ಳುತ್ತ ಹೋಗುತ್ತವೆ. ನಾಟ್ಯದಲ್ಲೂ ನಾಟಕದಲ್ಲೂ ನಾಟ್ಯಧರ್ಮಿ ಎಂದರೆ ಆದರ್ಶಕ ಅಥವಾ ಸೂಚನಾತ್ಮಕ ಮತ್ತು ಲೋಕಧರ್ಮಿ ಎಂದರೆ ವಾಸ್ತವಿಕ ಎಂಬ ವಿಚಾರವಾಗಿ ಭರತ ತಿಳಿಸಿದ್ದಾನೆ. ನಾಟ್ಯಶಾಸ್ತ್ರ ನಾಟ್ಯಧರ್ಮಿ ವಿಚಾರಗಳಿಂದ ತುಂಬಿಕೊಂಡು, ಹಸ್ತಮುದ್ರೆ ಮತ್ತು ಅಭಿನಯದ ಮೂಲಕ ನೃತ್ಯಕಾರರು ನಾಟಕಕಾರರು ಸ್ವಕಲ್ಪನೆ ಪ್ರದರ್ಶಿಸುವ ಅವಕಾಶ ಕೊಡುತ್ತದೆ. ಈ ಸಂಕೇತಗಳೇ ಭಾವಸ್ಛುರಣಮಾಡಿ ಪ್ರೇಕ್ಷಕರಿಗೆ ಮಹದಾನಂದ ನೀಡುತ್ತವೆ. ಲೋಕಧರ್ಮಿಯದು ಪಾಮರರು ಒಪ್ಪುವಂಥ ವಿಧಾನ. ಏಕೆಂದರೆ ಇದ್ದುದನ್ನು ಇದ್ದಹಾಗೆ ತೋರಿಸಿದಾಗ ಪ್ರೇಕ್ಷಕರ ಮನಸ್ಸಿಗೆ ಒಪ್ಪುವುದು ಸುಲಭ. ಸೌಂದರ್ಯ ಜ್ಞಾನವನ್ನೂ ಶಾಸ್ತ್ರದ ಅರಿವನ್ನೂ ಹಸ್ತಗತಮಾಡಿಕೊಂಡಿರುವ ಸಹೃದಯರಿಗೆ ನಾಟ್ಯಧರ್ಮಿಯ ಗುಣಗಳು ಸಮ್ಮತವಾಗಬಲ್ಲವು. ಭರತನಾಟ್ಯದಲ್ಲಿ ನೃತ್ಯಮಾತ್ರವೇ ಅಲ್ಲ ರಂಗಸಜ್ಜಿಕೆ, ಸಂಗೀತ, ನಾಟಕ, ಕವಿತ್ವ, ಲಯ, ಬಣ್ಣಗಳ ಜೋಡÀಣೆ ಎಲ್ಲವನ್ನೂ ಅಳವಡಿಸಲಾಗಿರುತ್ತದೆ. ಭಾವ, ರಾಗ, ತಾಳಗಳು ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಆಂತರಿಕ ಅನುಭವಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸುವುದೇ ಭಾವ. ಇಂಥ ಭಾವನೆಗಳನ್ನು ಮುಖ, ಅವಯವ ಇತ್ಯಾದಿಗಳ ಪ್ರಯೋಗದಿಂದ ಪ್ರದರ್ಶಿಸಲಾಗುತ್ತದೆ. ರಾಗ, ತಾಳಗಳ ವೈವಿತ್ರ್ಯ ಈ ನೃತ್ಯದ ಮುಖ್ಯ ಅಂಶ ಎನ್ನಬಹುದು

ಈ ನಾಟ್ಯದ ವಿವಿಧ ಅಂಗಗಳು, ಭಂಗಿಗಳು, ಅಭಿನಯ ವiತ್ತು ರಸಭಾವಗಳ-ಇವುಗಳ ವಿವರಣೆ ಹೀಗಿದೆ:

ವಿವಿಧ ಅಂಗಗಳು : 1. ನೃತ್ಯ : ಸಂಗೀತ ಹಿನ್ನೆಲೆಯಲ್ಲಿದ್ದು ತಾಳಲಯ ಬದ್ಧವಾಗಿರುವ ಸರಳ ನರ್ತನವೇ ನೃತು. ಇದು ಯಾವುದೇ ವಿಷಯ ಅರ್ಥ ಭಾವಗಳನ್ನು ವ್ಯಕ್ತಪಡಿಸುವುದಿಲ್ಲ. ಕೇವಲ ನರ್ತನ ಮಾತ್ರ. ಇದರಲ್ಲಿ ಕರಣಗಳು ಅಡವುಗಳು ಮತ್ತು ಅಂಗಹಾರಗಳು ಸೇರಿವೆ. ಉದಾಹರಣೆಗೆ ಅಲರಿಪು, ಜತಿಸ್ವರ, ತಿಲ್ಲಾನ ನೃತ್ತಗಳು.

2. ನೃತ್ಯ : ಭಾವಸೂಚಕವಾದ ಸ್ಪಷ್ಟ ಮುದ್ರೆ ಮತ್ತು ಮುಖ ಚಲನೆಯಿಂದ ಯಾವುದಾದರೂ ಒಂದು ವಿಷಯದ ತಿರುಳನ್ನು ಅಭಿನಯದ ರೂಪವಾಗಿ ನರ್ತಿಸಿದರೆ ನೃತ್ಯವಾಗುತ್ತದೆ. ಅಭಿನಯದ ತಿರುಳೇ ರಸ, ಆದ್ದರಿಂದ ಅಭಿನಯವೇ ನೃತ್ಯದ ಜೀವಾಳ. ನೃತ್ಯದಲ್ಲಿ ವೃತ್ತ ಮತ್ತು ಅಭಿನಯ ಕೂಡಿಕೊಂಡಿರುತ್ತದೆ. ಉದಾಹರಣೆಗೆ ಶಬ್ದ ಮತ್ತು ವರ್ಣಗಳು ನೃತ್ಯರೂಪವಾಗಿದೆ.

3. ನಾಟ್ಯ : ಕಥೆಯನ್ನು ಮಾತು ಸಂಗೀತ ಅಭಿನಯಗಳಿಂದ ನಾಟಕ ರೂಪದಲ್ಲಿ ಕ್ರಮೇಣ ವಿಸ್ತರಿಸುವುದೇ ನಾಟ್ಯ. ಇತ್ತೀಚೆಗೆ ಇಂಥ ನೃತ್ಯನಾಟಕಗಳು ಭರತನಾಟ್ಯದಲ್ಲಿ ಅಧಿಕವಾಗಿ ಬಳಕೆಗೆ ಬರುತ್ತದೆ.

ಭಂಗಿಗಳು : ಲಾಲಿತ್ಯದಿಂದಲೂ ಗಾಂಭೀರ್ಯದಿಂದಲೂ ಕೂಡಿದ ದೇಹದ ನಿಲ್ದಾಣಗಳಿಗೆ ಭಂಗಿಗಳೆನ್ನುತ್ತಾರೆ. ಇವು ನಾಲ್ಕು ವಿಧ:

1. ಸಮಭಂಗ : ಯಾವ ಬಾಗುವಿಕೆಯೂ ಇಲ್ಲದೆ ದೇಹವನ್ನು ಸಮವಾಗಿ ನಿಲ್ಲಿಸುವುದು. ಉದಾಹರಣೆಗೆ ದೇವಾಲಯದ ದ್ವಾರಪಾಲಕ ವಿಗ್ರಹಗಳು. ವಿಷ್ಟು ಅಥವಾ ತಪಸ್ಸಾಧನೆ ತೋರಿಸುವಾಗ ಸಮಭಂಗವನ್ನು ಉಪಯೋಗಿಸಬೇಕು.

2. ಅಭಂಗ : ಸ್ವಲ್ಪ ಬಾಗುವಿಕೆ. ಮೈಯ ಭಾರವನ್ನು ಒಂದು ಕಾಲಿನ ಮೇಲೆ ಹಾಕಿ ನಿಲ್ಲುವುದು. ಉದಾಹರಣೆ ವಿರಾಮದಲ್ಲಿದ್ದಾಗ ಧ್ಯಾನದಲ್ಲಿದ್ದಾಗ ಇತ್ಯಾದಿ.

3. ಅತಿಭಂಗ : ತೀರ ಬಾರುವಿಕೆ. ತಾಂಡವದ ಲಕ್ಷಣದಿಂದ ಕೂಡಿದೆ. ಉದಾಹರಣೆಗೆ ಬಾಣವನ್ನು ಬಿಡುವಾಗ ಇತ್ಯಾದಿ.

4. ತ್ರಿಭಂಗ : ಮೂರು ಕಡೆ ಬಾಗುವಿಕೆ. ರುಂಡ, ಮುಂಡ, ಕೈಕಾಲುಗಳ ಬಾಗುವಿಕೆ. ಲಾಸ್ಯದ ಲಕ್ಷಣದಿಂದ ಕೂಡಿದೆ. ಉದಾಹರಣೆಗೆ ಸ್ತ್ರೀಯರ ನಿಲವು-ಸೀತಾ, ಲಕ್ಷ್ಮೀ, ಪಾರ್ವತಿ-ಈ ದೇವತೆಗಳನ್ನು ಸೂಚಿಸುವಾಗ.

ರೇಚಕ : ಒಂದು ಅಂಗದ ವರ್ತುಲಾಕಾರದ ಚಲನೆಯೇ ರೇಚಕ. ಈ ಚಲನೆಗಳು ನಾಲ್ಲು; 1. ಪಾದರೇಚಕ ಅಥವಾ ಕಾಲುಗಳ ರೇಚಕ, 2. ಕಟಿರೇಚಕ ಅಥವಾ ಸೊಂಟ ರೇಚಕ, 3. ಹಸ್ತ ರೇಚಕ ಅಥವಾ ಕೈಗಳ ರೇಚಕ 4. ಕತ್ತಿನ ರೇಚಕಗಳು. ಭರತನಾಟ್ಯದಲ್ಲಿ ಭಂಗಿಗಳನ್ನೂ ರೇಚಕಗಳನ್ನು ಧಾರಾಳವಾಗಿ ಕಾಣಬಹುದು.

ತಾಂಡವ ಮತ್ತು ಲಾಸ್ಯ : ಶಿವನಿಂದ ಪ್ರಥಮವಾಗಿ ಮಾಡಲ್ಪಟ್ಟ ಪೌರುಷದ, ಪ್ರಬಲವಾದ, ಮತ್ತು ಚೈತನ್ಯಭರಿತವಾದ ಈ ನೃತ್ಯವನ್ನು ತಾಂಡವವೆಂದೂ ಪಾರ್ವತಿಯಿಂದ ಪ್ರತಿಬಿಂಬಿಸಲ್ಪಟ್ಟ ಲಲಿತವೂ ಮಧುರವೂ ಸೊಗಸಿನಿಂದ ಕೂಡಿರುವುದೂ ಆದ ನೃತ್ಯವನ್ನು ಲಾಸ್ಯ ಎಂದೂ ಕರೆಯಲಾಗಿದೆ. ಈ ನೃತ್ಯಗಳು ಸಂದರ್ಭಕ್ಕೆ ಅನುಸಾರವಾಗಿದೆಯೇ ಹೊರತು ಸ್ತ್ರೀ ಪುರುಷರ ನರ್ತನ ಎಂಬ ಭೇದ ಭಾವವನ್ನು ಪ್ರದರ್ಶಿಸುವುದಿಲ್ಲ. ಆದರೆ ಪುರುಷರು ತಾಂಡವವನ್ನು ಮಾಡಿದರೆ ಮತ್ತು ಸ್ತ್ರೀಯರು ಲಾಸ್ಯ ಮಾಡಿದರೆ ಹೆಚ್ಚು ಕಳೆ ಬರುತ್ತದೆ ಎಂಬ ಭಾವನೆಯಿದೆ. ಭರತನಾಟ್ಯ ಸ್ತ್ರೀಯರಿಗೆ ಮಾತ್ರ ಮೀಸಲಾದುದು ಎಂಬ ಭಾವನೆಯೂ ಇದೆ. ಆದರೆ ನಾಟ್ಯಶಾಸ್ತ್ರದಲ್ಲಿ ಸ್ತ್ರೀ ಪುರುಷ ಸ್ಥಾನಗಳು ವಿವರಿಸಲ್ಪಟ್ಟು ಲಕ್ಪ್ಷಣಗಳನ್ನು ತಿಳಿಸಿರುವುದರಿಂದ ಭರತನಾಟ್ಯವು ಸ್ತ್ರೀ ಪುರುಷರಿಬ್ಬರಿಗೂ ಸೇರಿದ ಕಲೆಯಾಗಿದೆ. ಶೃಂಗಾರ ಭಾವದಿಂದ ಕೂಡಿದ ವಿಷಯವನ್ನು ಲಾಸ್ಯ ರೂಪದಲ್ಲಿ ಸ್ತ್ರೀಯರು ತೋರಿದರೆ ಚೆನ್ನಾಗಿರುತ್ತದೆ. ಹಾಗೆಯೇ ಪುರುಷರು ನಾಯಕರಾಗಿ ವರ್ತಿಸುವುದು ಯುಕ್ತವಾಗಿದೆ.

ಅಭಿನಯ : ಅಭಿನಯದಲ್ಲಿ ನಾಲ್ಕು ವಿಧ. 1 ಆಂಗಿಕ, 2 ವಾಚಿಕ (ಮಾತುಗಳು ಶಬ್ದಗಳು), 3 ಆಹಾರ್ಯ (ಉಡುಪು ವೇಷಭೂಷಣಗಳು,) 4 ಸಾತ್ತ್ವಿಕ (ಆಂತರಿಕ ಭಾವನೆಗಳೂ,)

ಆಂಗಿಕಾಭಿನಯದಲ್ಲಿ ಮತ್ತೆ ಮೂರು ವಿಭಾಗಗಳಿವೆ; ಅಂಗ, ಉಪಾಂಗ, ಪ್ರತ್ಯಂಗ, ಅಂಗ ಎಂದರೆ ತಲೆ, ಕೈಗಳು, ಎದೆ, ಪಕ್ಕೆಗಳು, ಸೊಂಟ ಮತ್ತು ಪಾದಗಳು. ಉಪಾಂಗ ಎಂದರೆ ಕಣ್ಣುಗಳು, ಹುಬ್ಬುಗಳು, ಮೂಗು, ಕೆಳತುಟಿ, ಕದಪು, ಕಣ್ಣಾಲಿಗಳು, ಕೆನ್ನೆಗಳು, ದವಡೆ, ಹಲ್ಲುಗಳು, ನಾಲಗೆ ಮತ್ತು ಮುಖ. ಪ್ರತ್ಯಂಗ ಎಂದರೆ ಭುಜಗಳು, ತೋಳುಗಳು, ಬೆನ್ನು, ಹೊಟ್ಟೆ, ತೊಡೆ, ಕಣಕಾಲು, ಮಣಿಕಟ್ಟು, ಮೊಣಕಾಲು ಮತ್ತು ಕತ್ತು. ಈ ಅವಯವಗಳ ಚಲನೆಯಿಂದ ಯಾವುದೇ ಭಾವವನ್ನಾಗಲೀ ರಸವನ್ನಾಗಲೀ ಅಭಿನಯಿಸಿ ತೋರಿಸಬಹುದು.

ವಾಚಿಕಾಭಿನಯ ಎಂದರೆ ಮಾತಿನ ಸಹಾಯದಿಂದ ಅಭಿನಯಿಸುವುದು. ನೃತ್ಯ ನಾಟಕಗಳಲ್ಲಿ ಸಂಭಾಷಣೆ. ಮಾತು, ನುಡಿಗಳನ್ನೂ ಉಪಹೋಗಿಸುತ್ತಾರೆ. ಆದರೆ ಭರತನಾಟ್ಯ ಪ್ರದರ್ಶನಗಳಲ್ಲಿ ಮಾತಿಲ್ಲ, ಸಂಗೀತ ಸಾಹಿತ್ಯವಿದ್ದರೂ ಸಾಹಿತ್ಯದ ಅರ್ಥವನ್ನು ಮೂಕವಾಗಿ ಅಭಿನಯಿಸಬೇಕು.

ಆಹಾರ್ಯಾಭಿನಯ ಎಂದರೆ ಉಡುಪು ವೇಷಭೂಷಣಗಳಿಂದ ಅಭಿನಯಿಸುವುದು. ಭರತನಾಟ್ಯದಲ್ಲಿ ಸಾಮಾನ್ಯವಾಗಿ ಉಡುಪು ಸರಳವಾಗಿರಬೇಕು. ದೇಹದ ಆಕೃತಿಗೆ ಹಾಗೂ ಮುಖ ಲಕ್ಷಣದ ಅಂದಕ್ಕೆ ಮೆರುಗು ಕೊಡುವಂತಿರಬೇಕು. ಉಡುಪು ವೇಷಭೂಷಣ ಬಣ್ಣಗಳ ಸಹಾಯದಿಂದ ಕಥೆಯ ಬೇರೆ ಬೇರೆ ಪಾತ್ರ ವರ್ಗವನ್ನು ನಿರೂಪಿಸಲು ಅನುಕೂಲವಾಗುತ್ತದೆ. ಕಥೆಕಳಿ ಕಲೆಯಲ್ಲಿ ಆಹಾರ್ಯಾಭಿನಯ ತುಂಬ ಅಗತ್ಯವಿದೆ.

ಸಾತ್ತ್ವಿಕಾಭಿನಯ ಎಂದರೆ ಅಂತರಿಕ ಭಾವನೆ ಅಥವಾ ಇಂಗಿತಗಳಿಂದ ಹೊರಗಿನ ಮುಖಭಾವವನ್ನು ತೋರಿಸುವುದು. ಇದರಲ್ಲಿ ಸಾಮಾನ್ಯವಾಗಿ ಎಂಟು ವಿಧಗಳಿವೆ. ಅವು ಸ್ತಬ್ಧತೆ, ಬೆವರುವಿಕೆ, ರೋಮಾಂಚನ, ಧ್ವನಿ ಬದಲಾವಣೆ, ಕಂಪನ, ಬಣ್ಣ ಬದಲಾವಣೆ, ಕಣ್ಣೀರು, ಮೂರ್ಛೆ, ಇವುಗಳಿಗೆ ಕಾರಣ ಆನಂದ, ಭಯ, ಕೋಪ, ದುಃಖ, ನಾಚಿಕೆ, ಆಶ್ಚರ್ಯ, ದ್ವೇಷ ಮುಂತಾದುವು.

ರಸ ಮತ್ತು ಭಾವ : ವಿಭಾವಾನುಭಾವ ವ್ಯಭಿಚಾರಿ ಸಂಯೋಗಾದ್ರ ಸನಿಷ್ಟತ್ತಿಃ.' ವಿಭಾವ, ಅನುಭಾವ, ವ್ಯಭಿಚಾರಿ ಭಾವಗಳ ಸಂಯೋಗದಿಂದ ರಸ ನಿಷ್ಟತ್ತಿಯಾಗುತ್ತದೆ. ರಸ ಯಾವಾಗಲೂ ಸ್ಥಾಯೀಭಾವದಿಂದ ಉತ್ಪನ್ನವಾಗುತ್ತದೆ. ಶ್ರೇಷ್ಠವಾದ ಊಟಕ್ಕೆ ಸರಿಯಾದ ಆಹಾರ ಸಾಮಗ್ರಿಗಳು ಹೇಗೆ ಅನುಕೂಲವೋ ಹಾಗೇ ಸ್ಥಾಯೀ ಭಾವಗಳಿಂದ ಸರಿಯಾದ ರಸಗಳು ಹುಟ್ಟುತ್ತವೆ. ಯಾವುದು ಅಸ್ವಾದ್ಯವೋ ಎಂದರೆ ರುಚಿಸುವುದೋ ಅದು ರಸ. ಸ್ಥಾಯೀಭಾವವಿಲ್ಲದೆ ರಸವಿಲ್ಲ. ರಸ ಹೊರಡಿಸದೆ ಇರುವ ಸ್ಥಾಯೀಭಾವವಿಲ್ಲ.

ಭರತನಾಟ್ಯದಲ್ಲಿ ಎಂಟು ರಸಗಳನ್ನು ಗುರುತಿಸಲಾಗಿದೆ. ಅವು ಶೃಂಗಾರ, ಹಾಸ್ಯ, ಕರಣ, ರೌದ್ರ, ವೀರ, ಭಯಾನಕ, ಬೀಭತ್ಸ ಮತ್ತು ಅದ್ಭುತ. ನಾಟ್ಯ ಶಾಸ್ತ್ರದಲ್ಲಿ ಶಾಂತರಸವನ್ನು ಸೂಚಿಸಿಲ್ಲ. ಪ್ರತಿಯೊಂದು ಸ್ಥಾಯೀಭಾವದಿಂದ ಒಂದೊಂದು ರಸ ಉತ್ಪನ್ನವಾಗುತ್ತದೆ. ಹಾಗೆಯೇ ಒಂದೊಂದು ರಸಕ್ಕೆ ಒಂದೊಂದು ಅಧಿದೇವತೆ ಹಾಗೂ ಒಂದೊಂದು ಬಣ್ಣ ಸೂಚಿಸಲಾಗಿದೆ.

ರಸ ಸ್ಥಾಯೀಭಾವ ದೇವತೆ ಬಣ್ಣ

ಶೃಂಗಾರ ರತಿ,ಪ್ರೇಮ ವಿಷ್ಣು ಹಸುರು

ಹಾಸ್ಯ ಆನಂದ ಪ್ರಮಥ ಬಿಳಿ

ಕರುಣ ಶೋಕ ಯಮ ಬೂದು

ರೌದ್ರ ಕ್ರೋಧ ರುದ್ರ ಕೆಂಪು

ವೀರ ಉತ್ಸಾಹ ಇಂದ್ರ ಕಿತ್ತಲೆ

ಭಯಾನಕ ಭಯ ಯಮಕಾಲ ಕಪ್ಪು

ಬೀಭತ್ಸ ಜಿಗುಪ್ಸೆ ಶಿವ ನೀಲಿ

ಅದ್ಭುತ ವಿಸ್ಮಯ ಬ್ರಹ್ಮ ಹಳದಿ


ಭರತನ ನಾಟ್ಯಶಾಸ್ತ್ರದಲ್ಲಿ ಶಾಂತರಸವಿಲ್ಲ. ಆದರೂ ಇಂದಿನ ನಾಟ್ಯಪದ್ದತಿಯಲ್ಲಿ ಶಾಂತರಸವೂ ಒಂದೊಂದು ಪರಿಗಣಿಸಿ ನವರಸಗಳು ಎನ್ನಲಾಗಿದೆ. ಈ ಎಂಟು ಸ್ಥಾಯೀಭಾವಗಳಲ್ಲದೆ ಬೇರೆ 33 ವ್ಯಭಿಚಾರೀಭಾವಗಳು ಅಥವಾ ಸಂಚಾರಿ ಅಥವಾ ಚಂಚಲಭಾವಗಳೂ ಮೇಲೆ ಹೇಳಿದ 8 ಭಾವಗಳೂ ಇದೆ. ಸ್ಥಾಯೀಭಾವಗಳು ಪ್ರಧಾನ ಭಾವಗಳು.

33 ವ್ಯಭಿಚಾರಿ ಭಾವಗಳು : ನಿರ್ವೇದ, ಗ್ಲಾನಿ, ಶಂಕಾ, ಅಸೂಯಾ, ಮದ, ಶ್ರಮ, ಆಲಸ್ಯ, ದೈನ್ಯ, ಚಿಂತಾ, ಮೋಹ, ಸ್ಮøತಿ, ಧೃತಿ, ವ್ರೀಡಾ, ಚಪಲತಾ, ಹರ್ಷ, ಆವೇಗ, ಜಡತಾ, ಗರ್ವ, ವಿಷಾದ, ಔತ್ಸುಕ್ಯ, ನಿದ್ರಾ, ಅಪಸ್ಮಾರ, ಸುಪ್ತ, ವಿಬೋಧ, ಅಮರ್ಷ, ಅವಹಿತ್ಥ, ಉಗ್ರತಾ, ಮತಿ, ವ್ಯಾಧಿ, ಉನ್ಮಾದ, ಮರಣ, ತ್ರಾಸ ಮತ್ತು ವಿತರ್ಕ.

ಒಂದೊಂದು ಸ್ಥಾಯೀಭಾವಕ್ಕೆ ಒಂದೊಂದು ವಿಭಾವವೂ ಒಂದೊಂದು ಅನುಭಾವವೂ ಇವೆ. ಸ್ಥಾಯೀಭಾವ ನಿರ್ಧರಿಸುವ ಭಾವಕ್ಕೆ ವಿಭಾವವೆಂದೂ ಪರಿಣಾಮ ಪಡೆದ ಭಾವಕ್ಕೆ ಅನುಭಾವವೆಂದೂ ಹೆಸರು. ಅಲ್ಲದೆ ಮೇಲೆ ವಿವರಿಸಿರುವ ವ್ಯಭಿಚಾರಿ ಭಾವಗಳೂ ಅನ್ವಯಿಸಿಕೊಂಡಿವೆ.

ರಸಗಳ ವಿವರಣೆ ಶೃಂಗಾರ : ರತಿ ಸ್ಥಾಯೀಭಾವ. ಸುಂದರವಾದ ವ್ಯಕ್ತಿಯಿಂದ ಸೂಚಿಸುವುದು. ವಿಭಾವ; ಇನಿಯನ ಭೇಟಿ. ಅನುಭಾವ; ಲಲಿತವಾದ ದೃಷ್ಟಿಚಲನೆ, ಸಿಹಿಮಾತು. ವ್ಯಭಿಚಾರಿ ಭಾವ : ಭಯ ಆಲಸ್ಯ. ಕ್ರೌರ್ಯ, ಜುಗುಪ್ಸೆ ಬಿಟ್ಟು ಉಳಿದ 29 ಭಾವಗಳು.

ಹಾಸ್ಯ : ಹಾಸ್ಯ ಸ್ಥಾಯೀಭಾವ, ವಿಭಾವ : ಅಸಡ್ಡೆಯ ಉಡುಪು ಅನುಭಾವ : ಪಕ್ಕೆಗಳನ್ನು ಹಿಡಿದು ನಗುವುದು. ವ್ಯಭಿಚಾರಿಭಾವ : ಅಲಸ್ಯ. ತೂಕಡಿಕೆ ಇತ್ಯಾದಿ.

ಕರುಣ : ಚಿಂತೆ ಸ್ಥಾಯೀಭಾವ, ವಿಭಾವ; ವಿರಹತಾಪ, ಬಡತನ, ಮರಣ, ಚಿಂತೆ, ಅನುಭಾವ : ಕಣ್ಣೀರು ಶೋಕ, ಬಾಯಾರಿಕೆ, ಬಣ್ಣ ಬದಲಾವಣೆ, ನಿಟ್ಟುಸಿರು ಬಿಡುವುದು. ವ್ಯಭಿಚಾರೀಭಾವ : ಅಸಡ್ಡೆ, ಮೋಮಾರಿತನ, ಉತ್ಸುಕತೆ, ಬೇಸರ, ಸಂಕಟ, ಹುಚ್ಚು, ಹಾತೊರೆಯುವಿಕೆ ಇತ್ಯಾದಿ.

ರೌದ್ರ : ಕೋಪ ಸ್ಥಾಯೀಭಾವ, ವಿಭಾವ : ಅತ್ಯಾಚಾರ, ನಿಂದೆ, ದೂಷಣೆ, ಹೆದರಿಸುವುದು, ಮುಯ್ಯಿಗೆ ಮುಯ್ಯಿ ಇತ್ಯಾದಿ. ಹೊಡೆಯುವುದು. ಕತ್ತರಿಸುವುದು, ಪುಡಿಮಾಡುವುದು, ಚುಚ್ಚುವುದು ಇವು ಈ ರಸದ ಚಲನೆಗಳು. ಅನುಭಾವ : ಕೆಂಪು ಕಣ್ಣುಗಳು, ಹುಬ್ಬುಗಂಟಿಕ್ಕುವುದು, ತುಟಿ ಕಚ್ಚುವುದು. ವ್ಯಭಿಚಾರೀಭಾವ : ದೃಢನಿಶ್ಚಯ, ಉತ್ಸಾಹ, ನಡುಗುವಿಕೆ.

ವೀರ : ಉತ್ಸಾಹ ಸ್ಥಾಯೀಭಾವ. ವಿಭಾವ : ಎಚ್ಚರಿಕೆ, ಸಾಧಿಸುವಿಕೆ, ರಾಜ್ಯತಂತ್ರಕೌಶಲ, ಶಿಸ್ತು, ಕಟ್ಟುನಿಟ್ಟು, ಸೈನಿಕಬಲ. ಅನುಭಾವ : ತಾಳ್ಮೆ, ವೀರತನ, ಉದಾರತ್ವ, ದೃಢತ್ವ. ವ್ಯಭಿಚಾರೀಭಾವ : ತೃಪ್ತಿ, ನ್ಯಾಯಸಾಧನೆ, ಗರ್ವ, ಉನ್ಮತ್ತತೆ, ಉದ್ವೇಗ.

ಭಯಾನಕ : ಹೆದರಿಕೆ ಸ್ಥಾಯೀಭಾವ. ವಿಭಾವ : ಕೆಟ್ಟಧ್ವನಿ, ಭೂತ ದರ್ಶನ ಕಳವಳ, ಕ್ರೂರಮೃಗಗಳ ಗರ್ಜನೆ ವ್ಯಾಕುಲ, ಏಕಾಂತ, ಬಂಧು ಜನರ ಮರಣ ಅಥವಾ ಸೆರೆ. ಅನುಭಾವ : ಕೈಕಾಲು ನಡುಗುವುದು, ರೋಮಾಂಚನ, ಬಣ್ನ ಬದಲಾಯಿಸುವುದು, ಗಂಟಲು ಕಟ್ಟುವುದು, ಕಾರ್ಯಭಂಗ. ವ್ಯಭಿಚಾರೀಭಾವ : ಪಕ್ಷಪಾತ, ಬೆವರುವಿಕೆ, ಸ್ಥಂಭೀಭೂತನಾಗುವುದು.

ಭೀಭತ್ಸ : ಅಸಹ್ಯ ಸ್ಥಾಯೀಭಾವ. ವಿಭಾವ : ಕೆಟ್ಟ ಸಮಾಚಾರವನ್ನು ಕೇಳುವುದು, ಅಶುಚಿ, ಹಾನಿ ಉಂಟುಮಾಡುವ ವಿಷಯಗಳು, ದುರ್ಗಂಧ, ರೇಗಿಸುವಿಕೆ ಇತ್ಯಾದಿ. ವ್ಯಭಿಚಾರೀಭಾವ : ಮಲರೋಗ, ಭ್ರಮೆ, ತಪ್ಪು ತಿಳಿವಳಿಕೆ, ಜಾಡ್ಯ, ಮರಣ, ರೋಗ ಇತ್ಯಾದಿ.

ಅದ್ಭುತ : ಆಶ್ಚರ್ಯ ಸ್ಥಾಯೀಭಾವ. ವಿಭಾವ : ದೇವತೆಯರ ದರ್ಶನ, ಅಪೇಕ್ಷಿಸುವ ವಸ್ತುಲಾಭ ದೇವಾಲಯ, ಅರಮನೆಗಳ ಹೆಬ್ಬಾಗಿಲು, ತಾಂತ್ರಿಕಚಿತ್ರ, ಇಂದ್ರಜಾಲ, ಯಕ್ಷಿಣಿವಿದ್ಯೆ ಇತ್ಯಾದಿ. ಅನುಭಾವ : ಬಾಯಿಬಿಡುವುದು, ನೆಟ್ಟದೃಷ್ಟಿಯಿಂದ ನೋಡುವುದು, ರೋಮಾಂಚನ, ಆನಂದ ಬಾಷ್ಯ, ಹೊಗಳು ಮಾತುಗಳು. ವ್ಯಭಿಚಾರೀಭಾವ : ಅಳುವುದು, ಪಕ್ಷಪಾತ, ಆತುರ, ಗಂಟಲು ಕಟ್ಟುವುದು ಇತ್ಯಾದಿ.

ಶಾಂತ : ಶಾಂತತೆ ಸ್ಥಾಯೀಭಾವ. ವಿಭಾವ : ತೃಪ್ತಿ, ಅರ್ಚನಿ, ಪ್ರಾಥನೆ. ಅನುಭಾವ : ಅರ್ಧನಿಮಿಲಿತ ನೇತ್ರ ಗಂಭೀರತೆ, ವ್ಯಭಿಚಾರೀಭಾವ ಇಲ್ಲ.

ನಾಯಿಕಾ-ನಾಯಕ ಭೇದಗಳು : ನವರಸಗಳಲ್ಲಿ ಪ್ರೇಮವೇ ಮೂಲ ಭೂತ ಭಾವರಸ ಎನಿಸಿದೆ. ಪ್ರೇಮವೇ ಜೀವನದ ತಿರುಳು. ಪರಮಾತ್ಮ ಪ್ರೇಮ ಸ್ವರೂಪಿ. ಪ್ರೇಮವೇ ಪರಮಾತ್ಮ ಎಂಬ ಹೇಳಿಕೆಯಿದೆ. ಆತ್ಮ ಎಂಬ ಪ್ರಿಯತಮೆ ಪರಮಾತ್ಮ ಎಂಬ ದೇವನೊಡನೆ ಐಕ್ಯವಾಗುವುದೇ ಶೃಂಗಾರ. ಭಾವದ ಮುಖ್ಯದ್ಯೇಯ. ಆದ್ದರಿಂದ ನೃತ್ಯಕಲೆಯಲ್ಲಿ ಶೃಂಗಾರ ರಸಕ್ಕೇ ಹೆಚ್ಚು ಪ್ರಾಧಾನ್ಯ. ಶೃಂಗಾರರಸ ಪರಿಪೂರ್ಣ ರಸ. ಶೃಂಗಾರಭಾವ ಅಭಿನಯಿಸಲು ಅನೇಕಾನೇಕ ಶೃಂಗಾರ ಕಾವ್ಯಗಳಿವೆ. ಅವುಗಳಲ್ಲಿ ಜಯದೇವನ ಗೀತಗೋವಿಂದದ ಅಷ್ಟಪದಿಗಳು, ಲೀಲಾಶುಕ ಕವಿಯ ಕೃಷ್ಣಕರ್ಣಾಮೃಗತ; ಕ್ಷೇತ್ರಯ್ಯ, ಸಾರಂಗಪಾಣಿ, ಸಭಾಪತಿ ಅಯ್ಯರ್, ಸುಬ್ಬರಾಮಯ್ಯ, ಇವರು ರಚಿಸಿರುವ ಶೃಂಗಾರಪೂರಿತ ಪದಗಳು, ವಡಿವೇಲು ಬರೆದಿರುವ ಪದವರ್ಣಗಳು ತೀರ್ಥನಾರಾಯಣಯತಿ ವಿರಚಿತ ಕೃಷ್ಣಲೀಲಾತರಂಗಿಣಿ, ಶೃಂಗಾರತಿಲಕ, ಭೂಷಣ, ಪುಷ್ಪಬಾಣ ವಿಲಾಸದ ಪ್ರೇಮಗೀತೆಗಳು ಮುಖ್ಯವಾದವು.

ಈ ಶೃಂಗಾರ ಕಾವ್ಯಗಳು ನಾಯಕ ನಾಯಿಕೆಯರ ಭಾವ ವಿಭಾವ ಅನುಭಾವ ಸಂಚಾರಿಭಾವಗಳನ್ನು ಕೂಲಂಕಷವಾಗಿ ವರ್ಣಿಸುತ್ತವೆ. ಸಂಸ್ಕøತ ಭಾಷೆಯಲ್ಲಿ ನಾಟ್ಯಲಕ್ಷ್ಯಗಳು ಹಲವಾರು ಇವೆ. ಆದರೆ ಕಲಾವಿದನಿಗೆ ಉಪಯುಕ್ತವಾದುದು ಭಾನುಭಟ್ಟನ ರಸಮಂಜರಿ. ಇದರಲ್ಲಿ ನಾಯಕ ನಾಯಿಕೆಯರ ಪಾತ್ರಗಳಲ್ಲಿ ವೈವಿಧ್ಯ ಕಾಣಬಹುದು. ಭಾನುಭಟ್ಟನ ಈ ಗ್ರಂಥದಲ್ಲಿ 1152 ವಿವಿಧ ನಾಯಿಕೆಯರನ್ನು ಹೇಳಿದ್ದಾನೆ. ಶಾರದಾತನಯ ಬರೆದಿರುವಭಾವಪ್ರಕಾಶನಂ ಗ್ರಂಥದಲ್ಲಿ 384 ನಾಯಿಕೆಯರ ವರ್ಣನೆ ಇದೆ. ಇವರಲ್ಲಿ 13 ಸ್ವೀಯ, 2 ಪರಕೀಯ ಮತ್ತು 1 ಸಾಮಾನ್ಯ ನಾಯಿಕೆ ಇರುವಂತೆ ಅರ್ಥ. ಇದರಲ್ಲಿ ಒಂದೊಂದು ವಿಧವೂ 8 ಬೇರೆ ಬೇರೆ ವಿಭಾಗವಾಗಿ ವಿಂಗಡಿಸಲ್ಪಟ್ಟು ಮತ್ತೆ ಅದರಲ್ಲೂ ಒಂದೊಂದರಲ್ಲಿ ಉತ್ತಮ ಮಧ್ಯಮ ಅಧಮ ಎಂಬ ಮೂರು ವರ್ಗಗಳಿದ್ದು ಒಟ್ಟಿನಲ್ಲಿ ್ಲ 384 ನಾಯಿಕೆಯರಿದ್ದಾರೆ.

ಈ ನಾಯಿಕೆಯರಲ್ಲಿ ಸ್ವೀಯ ಅಥವಾ ಸ್ವಕೀಯ ನಾಯಿಕೆ ಒಬ್ಬ ವ್ಯಕ್ತಿಯ ಗುಣಶೀಲೆಯೂ ಪತಿವ್ರತೆಯೂ ಆದ ಸ್ವಂತ ಪತ್ನಿಯನ್ನು ಸೂಚಿಸುತ್ತಾಳೆ. ಪರಕೀಯ ನಾಯಿಕೆ ಅನ್ಯವ್ಯಕ್ತಿಯ ಪತ್ನಿ ಅಥವಾ ತಂದೆ ತಾಯಿಗಳ ಬಳಿ ಇರುವ ಮದುವೆಯಾಗದ ಕನ್ನಿಕೆಯನ್ನು ಸೂಚಿಸುತ್ತಾಳೆ. ಕೊನೆಯ ಸಾಮಾನ್ಯ ನಾಯಿಕೆ ಸಾಮಾನ್ಯ ವೇಶ್ಯಾಸ್ತ್ರೀಯನ್ನು ಸೂಚಿಸುತ್ತಾಳೆ. ಈ ತರಹದ 16 ನಾಯಿಕೆಯರಲ್ಲಿ ಒಂದೊಂದರಲ್ಲೂ ಉತ್ತಮ ಮಧ್ಯಮ ಅಧಮ ಎಂಬುದಾಗಿ ವಿಂಗಡಿಸಲ್ಪಟ್ಟುದಲ್ಲದೆ ಮತ್ತೆ 8 ವಿಧವಾದ ಭೇದ ಮಾಡಿದ್ದಾರೆ. ಅವು ಪ್ರೋತಿತಸತಿತ, ಖಂಡಿತ, ಕಲಹಾಂತರಿಕ, ವಿಪ್ರಲಬ್ಧ, ವಾಸಕ ಸಜ್ಜಿತ, ಸ್ವಾಧೀನ ಪತಿಕ, ಅಥವಾ ಸ್ವಾಧೀನ ಭರ್ತೃಕ, ವಿರಹೋತ್ಕಂಠಿತ, ಸಾರಿಕ. ಭಾವ ಪ್ರಕಾಶನಂ ಗ್ರಂಥದಲ್ಲಿ ಈ 384 ನಾಯಿಕೆಯರ ಲಕ್ಷಣಗಳು ವಿವರವಾಗಿ ವರ್ಣಿಸಲ್ಪಟ್ಟಿವೆ.

ಹಾಗೆಯೇ ಅಭಿನಯದಲ್ಲಿ ನಾಯಕನ ಪಾತ್ರವೂ ಮುಖ್ಯ. ಈ ಪಾತ್ರದಲ್ಲಿ 3 ವಿಧ. ಪತಿ ಪ್ರಿಯತಮ ಮತ್ತು ಸ್ತ್ರೀ ಲೋಲ ಅಥವಾ ವೈಶಿಕ.
ಪತಿ ನಾಲ್ಕು ತರಹ: ಅನುಕೂಲ, ದಕ್ಷಿಣ, ದೃಷ್ಡ, ಮತ್ತು ಶಠ. 
ಪ್ರಿಯತಮ ಸಾಧಾರಣವಾಗಿ ಉಪಪತಿಯೆಂದು ಕರೆಯಲ್ಪಡುವ.
ಸ್ತ್ರೀಲೋಲ ಅಥವಾ ವೈಶಿಕ ಯಾವಾಗಲೂ ವೇಶ್ಯಾಸ್ತ್ರೀಯರೊಡನೆ ಕಾಲಹರಣ ಮಾಡುವವ.
ನಾಯಕರಲ್ಲಿ 4 ವಿಧ. ಧೀರೋದಾತ್ತ, ಧೀರೋಧ್ಧತ, ಧೀರಲಲಿತ, ಧೀರಶಾಂತ.
ಧೀರೋದಾತ್ತ: ಬಲಾಢ್ಯ, ಕರಿಣಾಳು, ಜ್ಞಾ ನಿ.
ಧೀರೋದ್ಧತ: ಗರ್ವ, ಅಸಹನೆ, ಮುಂಗೋಪ ಮತ್ತು ಆತ್ಮಸ್ತುತಿ ಮಾಡಿಕೊಳ್ಳುವ ಸ್ವಭಾವದವ.
ಧೀರಲಲಿತ: ಚಿÀಂತೆ, ವ್ಯಾಕುಲಗಳಲ್ಲಿ ಅಲಕ್ಷ್ಯ, ಆನಂದದಾಯಕ, ಮಧುರಜೀವನಕ್ಕೆ ಇಚ್ಛೆಪಡುವ ಮೃದು ಸ್ವಭಾವದವ.
ಧೀರಶಾಂತ: ಸೌಮ್ಯ, ಉಲ್ಲಸಿತ, ಆತ್ಮ ಭರವಸೆಯುಳ್ಳವ. 
ನಾಯಕ ನಾಯಿಕೆಯರ ವಿವಿಧ ವಿಧಗಳನ್ನು ಗಮನದಲ್ಲಿಟ್ಟುಕೊಂಡು ಗೀತ ಗೋವಿಂದ ಅಥವಾ ಕ್ಷೇತ್ರಯ್ಯನ ಪ್ರಣಯ ಪದಗಳನ್ನು ಓದಿದರೆ ಪಾತ್ರಗಳನ್ನು ವಿಧವಿಧವಾಗಿ ಕವಿಗಳು ರೂಪಿಸುವುದನ್ನು ತಿಳಿಯಬಹುದು.

ಭರತನಾಟ್ಯದಲ್ಲಿ ಹಸ್ತಗಳು: ಹಸ್ತಗಳ ಪ್ರಯೋಗಗಳಿಗೆ ಪ್ರಮುಖ ಸ್ಥಾನವಿದೆ. ಹಸ್ತಗಳಲ್ಲಿ ಮೂರು ವಿಭಾಗ: (1) ಅಸಂಯುತಹಸ್ತ: ಒಂದೇ ಕೈಯಿಂದ ಪ್ರದರ್ಶಿಸುವುದು. (2) ನೃತ್ತ ಹಸ್ತ: ಕೇವಲ ನರ್ತನಕ್ಕೆ ಮಾತ್ರ ಉಪಯೋಗಿಸುವ ಹಸ್ತ. (3) ಸಂಯುತ ಹಸ್ತ: ಎರಡೂ ಕೈಗಳಿಂದ ಪ್ರದರ್ಶಿಸುವುದು ಈ ಹಸ್ತಗಳು ಬೇರೆ ಬೇರೆ ಗ್ರಂಥಗಳಲ್ಲಿ ಬೇರೆ ಬೇರೆಯಾಗಿವೆ. ನಾಟ್ಯಶಾಸ್ತ್ರ 24 ಅಸಂಯುತ ಹಸ್ತಗಳನ್ನೂ 23 ಸಂಯುತ ಹಸ್ತಗಳನ್ನೂ 13 ನೃತ್ತ ಹಸ್ತಗಳನ್ನೂ ತಿಳಿಸುತ್ತದೆ. ಅದರೆ ಅಭಿನಯ ದರ್ಪಣದಲ್ಲಿ 28 ಅಸಂಯುತ ಹಸ್ತಗಳು, 23 ಸಂಯುತ ಹಸ್ತಗಳು, 13 ನೃತ್ತ ಹಸ್ತಗಳನ್ನು ತಿಳಿಸಲಾಗಿದೆ. ಭರತನ ನಾಟ್ಯಶಾಸ್ತ್ರದಲ್ಲಿ ತಿಳಿಸಿರುವ 24 ಅಸಂಯುತ ಹಸ್ತಗಳು ಹೀಗಿವೆ: ಪಾತಕ, ತ್ರಿಪಾತಕ, ಕರ್ತರೀಮುಖ, ಅರ್ಧಚಂದ್ರ, ಅರಾಳ, ಶುಕತುಂಡ, ಮುಷ್ಟಿ, ಶಿಖರ, ಕಲತ್ಥ, ಕಟಕಾಮುಖ, ಸೂಚಿಮುಖ ಅಥವಾ ಸೂಚಾಸ್ಯ, ಪದ್ಮಕೋಶ, ಸರ್ಪಶೀರ್ಷ, ಮೃಗಶೀರ್ಷ, ಕಾಂಗೂಲ ಅಥವಾ ಲಾಂಗೂಲ, ಆಲಪದ್ಮ ಅಥವಾ ಆಲಪಲ್ಲವ, ಚತುರ, ಭ್ರಮರ, ಹಂಸಾಸ್ಯ, ಹಂಸಪಕ್ಷ, ಸಂದಂಶ, ಮುಕುಳ, ಊರ್ಣನಾಭ, ತಾಮ್ರಚೂಡ. ಸಂಯುತ ಹಸ್ತಗಳು : ಅಂಜಲಿ, ಕಪೋತ, ಕರ್ಕಟ, ಸ್ವಸ್ತಿಕ, ಕಟಕ, ವರ್ಧಮಾನಕ, ಉತ್ಸಂಗ, ನಿಷೇಧ, ಡೋಲ, ಪುಷ್ಪಪುಟ, ಮಕರ, ಗಜದಂತ, ಅವಹಿತ್ಥ, ವರ್ಧಮಾನ.

ನೃತ್ಯ ಹಸ್ತಗಳು : ಚತುರಸ್ರ, ಉದ್ವøತ್ತ ಅಥವಾ ತಾಲವೃತ್ತ, ತಲಮುಖ, ಸ್ವಸ್ತಿಕ, ವಿಪ್ರಕೀರ್ಣ, ಅರಾಳಕಟಕಮುಖ, ಅವಿದ್ಧವಕ್ತ್ರ, ಸೂರ್ಯಸ್ಯ, ರೇಚಿತ, ಅರ್ಧರೇಚಿತ, ಉತ್ತಾನವಂಚಿತ, ಪಲ್ಲವ, ನಿತಂಬ, ಕೇಶಬಂಧ, ಲತಾ, ಕರಿಹಸ್ತ, ಪಕ್ಷವಂಚಿತ, ಪಕ್ಷಪ್ರದ್ಯೋತ, ಗರುಡಪಕ್ಷ, ದುಡಪಕ್ಷ, ಊಧ್ರ್ವಮಂಡಲಿ, ಪಾಶ್ರ್ವಮಂಡಲಿ, ವಿಶೋಮಂಡಲಿ, ಉರಃ ಪಾಶ್ರ್ವರ್ಥ ಮಂಡಲಿ, ಮುಷ್ಟಿಕ ಸ್ವಸ್ತಿಕ, ನಲಿನಿಪದ್ಮಕೋಶ, ಆಲಪಲ್ಲವ, ಲಲಿತ, ವಲಿತ. ನಂದಿಕೇಶ್ವರನ ಅಭಿನಯದರ್ಪಣದಲ್ಲಿ ಸೂಚಿಸಿರುವ 28 ಅಸಂಯುತ ಹಸ್ತಗಳು : ಪತಾಕ, ತ್ರಿಪತಾಕ, ಅರ್ಧಪತಾಕ, ಕರ್ತರೀಮುಖ, ಮಯೂರ, ಅರ್ಧಚಂದ್ರ, ಅರಾಳ, ಶುಕತುಂಡ, ಮುಷ್ಟಿ, ಶಿಖರ, ಕಪಿತ್ಥ, ಕಟಕಾಮುಖ, ಸೂಚಿ, ಚಂದ್ರಕಲಾ, ಪದ್ಮಕೋಶ, ಸರ್ಪಶೀರ್ಷ, ಮೃಗಶೀರ್ಷ, ಸಿಂಹಮುಖ, ಲಾಂಗೂಲ, ಆಲಪದ್ಮ, ಚತುರ, ಭ್ರಮರ, ಹಂಸಾಸ್ಯ, ಹಂಸಪಕ್ಷ, ಸಂದಂಶ, ಮುಕುಳ, ತಾಮ್ರಚೂಡ, ತ್ರಿಶೂಲ.

ಸಂಯುತ ಹಸ್ತಗಳು : ಅಂಜಲಿ, ಕಪೋತ, ಕರ್ಕಟ ಸ್ವಸ್ತಿಕ, ಡೋಲ, ಪುಷ್ಪಪುಟ, ಉತ್ಸಂಗ, ಶಿವಲಿಂಗ, ಕಟಕವರ್ಧನ, ಕರ್ತರೀಸ್ವಸ್ತಿಕ, ಶಾಕಟ, ಶಂಖ, ಚಕ್ರ, ಸಂಪುಟ, ಪಾಶ, ಕೀಲಕ, ಮತ್ಸ್ಯಕೂರ್ಮ, ವರಾಹ, ಗರುಡ, ನಾಗಬಂಧ, ಖಟ್ವ, ಭೇರುಂಡ.

ನೃತ್ಯ ಹಸ್ತಗಳು : ಪತಾಕ ಸ್ವಸ್ತಿಕ, ಡೋಲ, ಅಂಜಲಿ, ಕಟಕವರ್ಧನ, ಶಕಟ, ಪಾಶ, ಕೀಲಕ, ಕಪಿತ್ಥ, ಶಿಖರ, ಕೂರ್ಮ, ಹಂಸಾಸ್ಯ, ಆಲಪದ್ಮ.

ಹೀಗೆಯೇ ಬೇರೆ ಗ್ರಂಥಗಳು ಇತರ ಕೆಲವು ಹಸ್ತಗಳನ್ನು ತಿಳಿಸುತ್ತವೆ. ಆದರೆ ಸಾಮಾನ್ಯವಾಗಿ ಎಲ್ಲ ಗ್ರಂಥಗಳಲ್ಲಿ ಮುಖ್ಯವಾದ ಹಸ್ತಗಳು ಒಂದೇ ಸಮವಾಗಿರುತ್ತವೆ.

ಈ ಅಸಂಯುತ ಮತ್ತು ಸಂಯುತ ಹಸ್ತಗಳ ಪ್ರಯೋಗದಿಂದ ಎಂಥ ಮಹತ್ತರ ವಿಚಾರವನ್ನೇ ಆಗಲಿ ಗಂಭೀರ ಶೃಂಗಾರಪೂರಿತ ಸಾಹಿತ್ಯವನ್ನೇ ಆಗಲಿ ವರ್ಣಿಸಬಹುದು. ಕೇವಲ ಹಸ್ತಗಳ ಪ್ರಯೋಗದಿಂದಲೇ ಅಭಿನಯದ ಸಾರ ತಿಳಿಯಲು ಸಾಧ್ಯವಿಲ್ಲ. ಈ ಹಸ್ತಗಳಿಗೆ ತಕ್ಕ ಮುಖಭಾವವಿದ್ದರೆ ಮಾತ್ರ ಪ್ರೇಕ್ಷಕರಿಗೆ ಸನ್ನಿವೇಶಗಳು ಅರ್ಥವಾಗುತ್ತವೆ.

ನೃತ್ತ ಹಸ್ತಗಳನ್ನು ನೃತ್ತದಲ್ಲಿ ಮಾತ್ರ ಪ್ರಯೋಗಿಸಲಾಗುತ್ತದೆ. ಇವು ನೃತ್ತಕಲೆಯ ಅಂದಚಂದಕ್ಕೋಸ್ಕರವಿದ್ದು ಯಾವ ಅರ್ಥವನ್ನೂ ಸೂಚಿಸುವುದಿಲ್ಲ. ನೃತ್ತ ಹಸ್ತಗಳು ಹಸ್ತಕ್ಷೇತ್ರಗಳೆಂಬ ಆಯಾ ನಿಶ್ಚಿತ ಸ್ಥಾನಗಳಲ್ಲಿಯೇ ಚಲಿಸಬೇಕು. ಇವುಗಳ ಚಲನೆಯೂ ನಿಯಮಿತ.

ಚಾರಿಗಳು : ಕಾಲು ಹೆಜ್ಜೆಯಿಂದ ಸಂಚರಿಸುವ ವಿಧಾನ. ಒಂದು ಕಾಲಿನಿಂದ ಎಂದರೆ ಕಾಲು, ಕಣಕಾಲು, ತೊಡೆ, ಹಿಮ್ಮಡಿ, ಮುಮ್ಮಡಿಗಳ ಸಹಾಯದಿಂದ ಮಾಡುವ ಒಂದು ಚಲನೆಯೇ ಚಾರಿ, ಚಾರಿಗಳಿಂದಲೇ ಎಲ್ಲ ಚಲನೆಗಳೂ ಉಂಟಾಗುತ್ತವೆ. ಇವು ನೃತ್ತಕಲೆಯಲ್ಲಿ ಪ್ರಮುಖಸ್ಥಾನ ಪಡೆದಿವೆ. ನಾಟ್ಯಶಾಸ್ತ್ರದಲ್ಲಿ ಹೇಳಿರುª ಎಲ್ಲ ವಿಷಯಗಳೂ ಈ ಚಾರಿಗಳನ್ನು ಹೊಂದಿಕೊಂಡಿವೆ. ಇದರಲ್ಲಿ 16 ಭೌಮಚಾರಿಗಳು,16 ಆಕಾಶಚಾರಿಗಳು ಇವೆ. ಭೌಮಚಾರಿಗಳಲ್ಲಿ ಕಾಲುಗಳು ನೆಲವನ್ನು ಬಿಟ್ಟಿರದೆ ಚಲಿಸುತ್ತವೆ. ಆಕಾಶಚಾರಿಗಳಲ್ಲಿ ಕಾಲನ್ನು ನೆಲದಿಂದ ಮೇಲಕ್ಕೆ ಎತ್ತಿ ವಾಯುವಿನಲ್ಲಿ ಚಲಿಸಬೇಕು.

ಮಂಡಲಗಳು : ಇವು ಚಾರಿಗಳ ಸಂಯೋಜನದಿಂದ ಉತ್ಪನ್ನವಾಗುತ್ತವೆ. 10 ಭೌಮಮಂಡಲಗಳು, 10 ಆಕಾಶಮಂಡಲಗಳು ಇವೆ. ಇವನ್ನು ಯುದ್ಧ ಸನ್ನಿವೇಶಗಳಲ್ಲಿ ಪ್ರಯೋಗಿಸಲಾಗುತ್ತದೆ.

ನಡೆಗಳು : ಭರತ ನಾಟ್ಯದಲ್ಲಿ ನಡೆಗಳು ಹಲವು ವಿಧ. ನಾಟಕ ಪಾತ್ರಧಾರಿಗಳ ಚಲನೆ ಅಥವಾ ನಡೆ, ಅನುರಾಗಯುಕ್ತ ಸ್ತ್ರೀಯನಡೆ, ಗುಪ್ತ ಪ್ರೇಮದಲ್ಲಿಯ ನಡೆ, ಪಚ್ಛಣಕಾಮಿತಗತಿ, ಸುರಾಸುರರ ನಡೆ, ರೌದ್ರಗತಿ, ಬೀಭತ್ಸಗತಿ, ವೀರಗತಿ, ಕರುಣಗತಿ, ಭಯಾನಕಗತಿ, ವಾಣಿಜ್ಯಗತಿ, ವಿಪ್ರಗತಿ, ಆರೋಹಣಗತಿ, ವಾಮನಗತಿ, ವಿದೂಷಕಗತಿ, ಸಿಂಹಗತಿ, ಸಹಜಗತಿ ಮುಂತಾದವನ್ನು ಭರತ ತಿಳಿಸಿದ್ದಾನೆ. ಇವುಗಳಲ್ಲಿ 31 ಗತಿಗಳನ್ನು ಕೂಲಂಕಷವಾಗಿ ಹೇಳಿದ್ದಾನೆ.

ಸ್ಥಾನಕಗಳು : ಇದು ಮೊದಲ ಭಂಗಿ ಇವುಗಳಲ್ಲಿ ಪುರುಷ ಸ್ಥಾನಕಗಳು ಆರು. ಇವು ವೈಷ್ಣವ, ಸಮಪಾದ, ವೈಶಾಖ, ಮಂಡಲ, ಪ್ರತ್ಯಾಲೀಢ, ಅಲೀಢ

ಸ್ತ್ರೀಸ್ಥಾನಕಗಳು ಏಳು : ಆಯುತ, ಅವಹಿತ್ಥ, ಅಶ್ವಕ್ರಾಂತ, ಗತಾಗತ ವಲಿತ, ಮೊಟ್ಟಿತ, ವಿನಿವರ್ತಿತ. ಹೀಗೆಯೇ 23 ದೇಶೀ ಸ್ಥಾನಕಗಳು, ಉಪವಿಷ್ಟ ಸ್ಥಾನಕಗಳು ಕುಳಿತುಕೊಳ್ಳುವ ಸ್ಥಾನಕಗಳು ಮತ್ತು 6 ಸುಪ್ತ ಅಥವಾ ಮಲಗಿರುವ ಸ್ಥಾನಕಗಳು ಇವೆ.

ಕರಣಗಳು : ನಾಟ್ಯಶಾಸ್ತ್ರದಲ್ಲಿ 108 ಕರಣಗಳನ್ನು ತಿಳಿಸಲಾಗಿದೆ. ಕರಣಗಳು ಎಂದರೆ ನರ್ತನದ ಚಿಕ್ಕ ಅಂಶಗಳು ಮತ್ತು ಭಂಗಿಗಳು. ಇವನ್ನು ಚಿದಂಬರಂ ದೇವಾಲಯದ ಹೆಬ್ಬಾಗಿಲಿನಲ್ಲಿ ಕೆತ್ತಲಾಗಿದೆ. ಸಾಮಾನ್ಯವಾಗಿ 70 ಕರಣಗಳು ರೂಢಿಯಲ್ಲಿವೆ. ಉಳಿದವು ಲಿಪಿ ಸಾಧನೆಯಂತಿವೆ. ಎರಡೂ ಕಾಲುಗಳಿಂದ ಮಾಡುವ ಚಲನೆಗಳಿಗೆ ಕರಣ ಎನ್ನುತ್ತಾರೆ. 3 ಕರಣಗಳ ಜೋಡಣೆ ಖಂಡ. 3 ಅಥವಾ 4 ಖಂಡಗಳನ್ನು ಜೋಡಿಸಿದರೆ ಮಂಡಲ ಆಗುತ್ತದೆ.

ಅಂಗಹಾರ : ಕರಣಗಳ ಸಮ್ಮಿಲನ. ಒಂದು ಅಂಗಹಾರದಲ್ಲಿ 4 ರಿಂದ 9 ಕರಣಗಳು ಸೇರಿಕೊಂಡಿವೆ. ಆದರೆ ಕರಣಗಳ ಮತ್ತು ಅಂಗಹಾರಗಳ ಪ್ರದರ್ಶನಗಳು ಈಗ ಪ್ರಯೋಗದಲ್ಲಿಲ್ಲ. ನೃತ್ಯಕಲೆಯಲ್ಲಿ 32 ಅಂಗಹಾರಗಳನ್ನು ಹೇಳಲಾಗಿದೆ. ನೃತ್ತಹಸ್ತವೂ ಒಂದು ಚಲನೆಯೂ ಕೂಡಿದರೆ ಕರಣವಾಗುತ್ತವೆ. 2 ಕರಣಗಳು ಕೂಡಿದರೆ ಒಂದು ಮಾತ್ರಿಕ. 2,3,4 ಮಾತ್ರಿಕಗಳು ಕೂಡಿದರೆ ಒಂದು ಅಂಗಹಾರ ಎನಿಸುತ್ತವೆ.

ಅಡವುಗಳು : ಇವು ಕರಣ ಮತ್ತು ಅಂಗಹಾರಗಳ ಮೇಲೆ ಹೊಂದಿಕೊಂಡಿವೆ. ತಾಳ ಲಯಬದ್ಧವಾಗಿರುವ ವಿಧವಿಧವಾದ ನರ್ತನದ ಅಂಶಗಳಿಗೆ ಅಡವುಗಳು ಎನ್ನುತ್ತಾರೆ ಇವುಗಳಲ್ಲಿ ಕೈಕಾಲು, ತಲೆ, ತೋಳು, ಮೈಗಳ ಚಲನೆ ಇದೆ. ಪ್ರತಿಯೊಂದು ಅಡವು ಮುಖ್ಯವಾಗಿ 3 ವಿಷಯಗಳನ್ನು ಒಳಗೊಂಡಿದೆ : ಸ್ಥಾನಕ. ಚಾರಿ, ನೃತ್ಯಹಸ್ತಗಳು. ಇವನ್ನು ಬೇರೆ ಬೇರೆಯಾಗಿಯೂ ವಿಭಾಗಿಸಬಹುದು. ಸಾಮಾನ್ಯವಾಗಿ ಅಡವುಗಳು 10 ವಿಧ : ತಟ್ಟು ಅಡವು, ನಾಟು ಅಡವು, ಮೆಟ್ಟು ಅಡವು, ತಟ್ಟು ಮೆಟ್ಟು ಅಡವು, ಎಗರು ಮೆಟ್ಟು ಅಡವು, ಮೈ ಅಡವು, ಮುಕ್ತಾಯ ಅಡವು, ಜಾತಿ ಅಡವು, ನಡೆ ಅಡವು, ಅರಧಿ ಅಡವು. ಇವನ್ನು ಅಭ್ಯಾಸ ಮಾಡುವಾಗ ಇವುಗಳ ಅಂಗಶುದ್ಧವನ್ನು ಹೇಳಿಕೊಡಲಾಗುತ್ತದೆ. ಅಂಗಶುದ್ಧ : ಸಂಗೀತದಲ್ಲಿ ಸ್ವರಶುದ್ಧ ಇರುವಂತೆಯೇ ನೃತ್ಯದಲ್ಲಿ ಅಂಗಶುದ್ಧ. ಎಂದರೆ ಚಲಿಸುವಾಗ ಅಂಗಾಂಗಗಳು ನಿಯಮಿತ ಕ್ಷೇತ್ರಗಳಿಗೆ ಚಲಿಸಿದರೆ ಮಾತ್ರ ಕಲೆಯ ಸೊಗಸು ಪ್ರಕಟವಾಗುತ್ತದೆ. ಭರತನಾಟ್ಯ ಹೇಳಿಕೊಡುವವರು ಮ್ತೊತಮೊದಲು ಅಡವುಗಳ ಅಂಗಶುದ್ಧಕ್ಕೆ ಹೆಚ್ಚಾದ ಗಮನ ನೀಡಲಾಗುತ್ತದೆ. ಎಂದರೆ ಕಾಲ್ಚಲನೆ, ಕೈಗಳ ವಿನ್ಯಾಸ ಮತ್ತು ಸ್ಥಾನಕಗಳು ಅಲ್ಲದೆ ಅಂಗಾಂಗಗಳ ಇತರ ಚಲನೆಗಳೂ ನಿಯಮಿತ ರೀತಿಯಲ್ಲಿ ಆಯಾ ಕ್ಷೇತ್ರಗಳಿಗೆ ಚಲಿಸುವಂತೆ ಮಾಡಿದರೆ ಮಾತ್ರ ಪ್ರತಿಯೊಂದು ಅಡವು ಮೆರುಗು ಪಡೆಯುತ್ತದೆ.

ಪ್ರದರ್ಶನ : ಒಂದು ಸಂಪ್ರದಾಯದ ಸಾಮಾನ್ಯ ಭರತನಾಟ್ಯ ಪ್ರದರ್ಶನದಲ್ಲಿ ಅಲರಿಪು, ಜತಿಸ್ವರ, ಶಬ್ದಂ, ವರ್ಣ, ಪದಗಳು, ತಿಲ್ಲಾನ ಮತ್ತು ಒಂದೆರಡು ಶ್ಲೋಕಗಳಿರುತ್ತವೆ. ಎಂದರೆ ಭರತನಾಟ್ಯ ಕಲೆಯಲ್ಲಿ ಇಷ್ಟೇ ಕಾರ್ಯಕ್ರಮವೆಂದು ಅರ್ಥವಲ್ಲ. ನೃತ್ತ ಮತ್ತು ನಾಟ್ಯಕ್ಕೆ ಯೋಗ್ಯವಾದಂಥ ಯಾವುದೇ ಹಾಡನ್ನಾಗಲೀ ಕಥೆಯನ್ನಾಗಲೀ ಈ ನೃತ್ಯದ ಮೂಲಕ ನಿರೂಪಿಸಬಹುದು.

ಅಲರಿಪು : ಒಂದು ಚಿಕ್ಕ ನೃತ್ಯ. ಇದು ಪ್ರಾರ್ಥನಾ ರೂಪವಾದದ್ದು. ದೇವತೆಗಳ ಆರಾಧನೆ ಮತ್ತು ಸಭಾಮರ್ಯಾದೆಯಾಗಿ ನರ್ತಿಸತಕ್ಕದ್ದು. ಅಲರಿಪು ಎಂದರೆ ಮೈ ಕೈಗಳ ಚಲನೆ ಆರಂಭವಾಗಿ ಮುಂದೆ ಬರುವ ಜಟಿಲ ಕಾರ್ಯಕ್ರಮಕ್ಕೆ ಅನುಕೂಲ ಮಾಡುವಂತಿದೆ. ಅಲರಿಪು ನೃತ್ಯವನ್ನು ಮಿಶ್ರ, ಚತುಶ್ರ, ಖಂಡ ಮತ್ತು ಸಂಕೀರ್ಣ ಮುಂತಾದ ಎಲ್ಲ ಜಾತಿಗಳಲ್ಲೂ ಮಾಡಬಹುದು. ಆದರೆ ಸಾಮಾನ್ಯವಾಗಿ ತಿಶ್ರ, ಮಿಶ್ರ ಮತ್ತು ಚತುಶ್ರ ಜಾತಿಯ ಅಲರಿಪುಗಳು ಹೆಚ್ಚಾಗಿ ಪ್ರಚಾರದಲ್ಲಿವೆ. ಇನ್ನೆರಡು ಅಂದರೆ ಖಂಡ ಮತ್ತು ಸಂಕೀರ್ಣ ಜಾತಿಯ ಅಲರಿಪುಗಳು ಅಷ್ಷು ರೂಢಿಯಲ್ಲಿಲ್ಲ.

ಜತಿಸ್ವರ : ಕಾರ್ಯಕ್ರಮದ ಎರಡನೆಯ ನೃತ್ತ. ಇದು ಯಾವ ಅರ್ಥವನ್ನೂ ಸೂಚಿಸುವುದಿಲ್ಲ. ಕಷ್ಟತರವಾದ ಕಾಲ್ಚಲನೆ ಮತ್ತು ತಾಳ ವೈಚಿತ್ರ್ಯಗಳಿಂದ ಕುಣಿಯುವ ನೃತ್ಯವಿದು. ಅನೇಕ ಭಂಗಿಗಳಿಂದಲೂ ತಾಳವೈವಿಧ್ಯದಿಂದಲೂ ಅಡವುಗಳನ್ನು ಜೋಡಿಸಿರುವುದರಿಂದ ಪ್ರೇಕ್ಷಕನಿಗೆ ಆನಂದವೀಯುತ್ತದೆ. ಕರ್ನಾಟಕ ಸಂಗೀತ ಪದ್ಧತಿಯ ಮುಖ್ಯವಾದ ರಾಗಗಳಲ್ಲಿ ಜತಿಸ್ವರಗಳು ಇವೆ. ವಿವಿಧ ತಾಳಗಳಲ್ಲಿ ಎಂದರೆ ಆದಿತಾಳ, ರೂಪಕತಾಳ, ಮಿಶ್ರಛಾಪುತಾಳಗಳಲ್ಲಿ ಜೋಡಿಸಿರಲಾಗುತ್ತದೆ.

ಶಬ್ದಂ: ಮೂರನೆಯ ನೃತ್ಯ. ಮೊದಲ ಬಾರಿ ಪ್ರೇಕ್ಷಕನಿಗೆ ಅಭಿನಯದ ಪರಿಚಯ ಮಾಡಿಕೊಡುತ್ತದೆ. ಇದರ ಸಾಹಿತ್ಯದಲ್ಲಿ ಒಬ್ಬ ರಾಜನ ಅಥವಾ ದೇವರ ಗುಣಗಾನವಿರುತ್ತದೆ. ಸಾಹಿತ್ಯದ ಚರಣಗಳ ಮಧ್ಯೆ ಮಧ್ಯೆ ಒಂದು ಚಿಕ್ಕ ನೃತ್ತದ ಅಂಶವಿರುತ್ತದೆ. ಸಾಮಾನ್ಯವಾಗಿ ಶಬ್ದಂಗಳು ಮಿಶ್ರಛಾಪು ತಾಳದಲ್ಲಿದ್ದು ಅವನ್ನು ರಾಗಮಾಲಿಕೆಯಲ್ಲಿ ಹಾಡುವುದು ರೂಢಿ. ಶಿವಲೀಲೆ, ಕೃಷ್ಣಲೀಲೆ ಅಥವಾ ಇನ್ನಿತರ ವಿಷಯಗಳನ್ನು ವರ್ಣಿಸುವ ಈ ಮಂದಗತಿಯ ಕೃತಿಗಳು ಅಭಿನಯಿಸುವವರಿಗೆ ತಮ್ಮ ಕಲಾ ಪ್ರೌಢಿಮೆಯನ್ನು ತೋರಿಸಲು ಸಾಕಷ್ಟು ಅವಕಾಶ ಒದಗಿಸಿಕೊಡುತÀÀ್ತವೆ. ಕಲಾವಿದನ ಅನುಭವ ಹೆಚ್ಚಿದಂತೆ ಆತ ನೃತ್ಯದಲ್ಲಿ ಹಲವು ಸಂಚಾರಿಭಾವಗಳನ್ನು ವರ್ಣಿಸುವ ಸಂರ್ಭಗಳು ಸಿಗುತ್ತವೆ.

ವರ್ಣ : ಭರತನಾಟ್ಯ ಕಾರ್ಯಕ್ರಮದ ಅತಿಪ್ರಮುಖ ನರ್ತನ. ಇದು ಜಟಿಲವಾಗಿಯೂ ಪರಿಷ್ಕಾರವಾಗಿಯೂ ಇರುತ್ತದೆ. ಇದರಲ್ಲಿ ಅಭಿನಯವೂ ನೃತ್ಯವೂ ಸೇರಿದ್ದು ನೃತ್ಯ ಎನಿಸಿಕೊಳ್ಳುತ್ತದೆ. ಒಮ್ಮೊಮ್ಮೆ ಅಭಿನಯ ಹಾಗೂ ನೃತ್ಯ ಭಾಗವನ್ನು ಒಂದೇ ಸಲ ಪ್ರದರ್ಶಿಸಬೇಕಾಗುವ ಸಂದರ್ಭ ವರ್ಣದ ವೈಶಿಷ್ಟ್ಯ. ಇದರಲ್ಲಿ ಕಲಾವಿದನ ಸಾಧನೆ, ಸಾಮಥ್ರ್ಯ, ಗ್ರಹಣಶಕ್ತಿ, ಯೋಗ್ಯತೆ, ಅರ್ಹತೆ, ಚಾತುರ್ಯ ಮತ್ತು ದೇಹದಾಢ್ರ್ಯದ ಸ್ಪಷ್ಟ ಅರಿವಾಗುತ್ತದೆ. ಭಾವ ರಾಗ ತಾಳಗಳಿಗೆ ತಕ್ಕಂತೆ ಅಭಿನಯಿಸುವಾಗ ಕಾಲ್ಚಲನೆಯ ಸಾಂಗತ್ಯದಿಂದ ಬರುವಂಥ ಸನ್ನಿವೇಶ ಪ್ರೇಕ್ಷಕನ ಮನಸ್ಸಿಗೆ ಪೂರ್ಣ ಆನಂದ ಕೊಡುತ್ತದೆ. ಸಾಹಿತ್ಯಾಭಿನಯದ ಮಧ್ಯೆ ತೀವ್ರಗತಿಯ ತೀರ್ಮಾನಗಳೂ ಸೇರಿ ನೃತ್ಯಗಾರ ಕಾಲ್ಚಲನೆ, ತಾಳಜ್ಞಾನ ಅಭಿನಯ ಮತ್ತು ಭಾವ ಬದಲಾವಣೆಯಲ್ಲಿ ಶ್ರೇಷ್ಠತೆ ಮೆರÉದು ಭರತನಾಟ್ಯಶಾಸ್ತ್ರದ ಆಳವನ್ನೂ ಸೊಗಸನ್ನೂ ತಿಳಿಸುತ್ತಾನೆ. ವರ್ಣದಲ್ಲಿ ಅಂಗಹಾರ, ತೀರ್ಮಾನಗಳ, ಅಭಿನಯದ ವೈವಿಧ್ಯವನ್ನು ಕಾಣಬಹುದು. ಈ ನೃತ್ಯ ಪ್ರದರ್ಶಿಸಲು ಕಲೆಗಾರನಿಗೆ ಸುಮಾರು ಮುಕ್ಕಾಲು ಅಥವಾ ಒಂದು ಗಂಟೆಯಾದರೂ ಬೇಕು ಆಗ ಮಾತ್ರ ಕಲೆಯ ಅಪಾರ ಸಂಪತ್ತು, ಸೌಂದರ್ಯಾನುಭವದ ಗಂಭೀರ ಚಿತ್ರ ಕೂಡಲು ಸಾಧ್ಯವಾಗುತ್ತದೆ.

ವರ್ಣಗಳು : 4 ವಿಧ. ಚೌಕ, ತಾನ, ಪದ ಮತ್ತು ಸ್ವರಜತಿ. ಅಭಿನಯಕ್ಕೂ ನೃತ್ಯಕ್ಕೂ ಪದವರ್ಣ ಮತ್ತು ಚೌಕವರ್ಣಗಳು ಹೆಚ್ಚು ಅನುಕೂಲವಾಗಿವೆ. ತಾನವರ್ಣದಲ್ಲಿ ವಿಳಂಬ ಕಾಲವಿದ್ದು ಅಕ್ಷರ ಕಾಲ ಉದ್ದವಾಗಿರುವುದರಿಂದ ನೃತ್ತಕ್ಕೆ ತುಂಬ ಅವಕಾಶ ಸಿಗುತ್ತದೆ. ತಾನವರ್ಣ ಮಾಡಲು ಹೆಚ್ಚು ತಾಳ್ಮೆ ಬೇಕಾಗುತ್ತದೆ. ಆದರೆ ಇದರಲ್ಲಿ ಅಭಿನಯಕ್ಕೆ ಅಷ್ಟೊಂದು ಅವಕಾಶವಿಲ್ಲ. ಪದಂ : ಭರತನಾಟ್ಯದಲ್ಲಿ ಅಭಿನಯ ಪದಗಳ ಮೂಲಕ ಅಭಿನಯಿಸಲ್ಪಡುತ್ತದೆ. ನೃತ್ಯ ಹೆಚ್ಚಾಗಿಲ್ಲದ ಅಭಿನಯಕ್ಕೆ ಮಾತ್ರ ಪ್ರಾಮುಖ್ಯ ಇರುವ ಹಲವು ಹಾಡುಗಳನ್ನು ಆರಿಸುತ್ತಾರೆ. ಅಭಿನಯವೇ ಭರತನಾಟ್ಯದ ಜೀವಾಳ. ಇದಕ್ಕೆ ಪದಗಳು ಅತ್ಯಂತ ಸಹಾಯಕಾರಿ. ಪದದ ಸಾಹಿತ್ಯಕ್ಕೆ ಸರಿಯಾಗಿ ಕೈಮುದ್ರೆಗಳನ್ನೂ ಮುಖದ ಭಾವಗಳನ್ನೂ ಉಪಯೋಗಿಸಿ ಅಭಿನಯಿಸಬೇಕಾಗುತ್ತದೆ. ಅಭಿನಯಕ್ಕೆ ಪದಗಳು ಹಲವು ವಿಧ, ಅಸಂಖ್ಯಾತ. ಇವು ಶೃಂಗಾರ ರಸ ಹಾಗೂ ಭಕ್ತಿಭಾವವುಳ್ಳವು. ಪದ ಮತ್ತು ಜಾವಳಿಗಳು ಸಾಮಾನ್ಯವಾಗಿ ತೆಲುಗು, ತಮಿಳು, ಕನ್ನಡ ಭಾಷೆಯಲ್ಲಿವೆ. ಕೀರ್ತನೆಗಳು ತೆಲುಗು, ತಮಿಳು, ಕನ್ನಡ, ಸಂಸ್ಕøತದಲ್ಲಿರುತ್ತವೆ. ಒಳ್ಳೆಯ ಸಾಹಿತ್ಯವನ್ನು ಪದದ ಅಭಿನಯದ ಮೂಲಕ ಪ್ರದರ್ಶಿಸಬಹುದು. ಪದಗಳಲ್ಲಿ ನಾಯಕ -ನಾಯಿಕಾ ಭಾವಗಳು ಇದ್ದು ನಟಿಸುವವನಿಗೂ ಪ್ರೇಕ್ಷಕನಿಗೂ ಆನಂದನೀಡುತ್ತವೆ. ಭರತನಾಟ್ಯ ಕಾರ್ಯಕ್ರಮದಲ್ಲಿ ವರ್ಣದ ಪ್ರದರ್ಶನವಾದ ಮೇಲೆ ಪದಗಳನ್ನು ಅಭಿನಯಿಸುವ ರೂಢಿ. ಇವು ಹಲವು ರಾಗಗಳಲ್ಲೂ, ರಾಗಮಾಲಿಕೆಯಲ್ಲೂ ಹಲವು ತಾಳಜಾತಿಗಳಲ್ಲೂ ಇದ್ದು ಹಾಡುವವರಿಗೆ ಹರ್ಷ ನೀಡುವಂತಾಗಿರುತ್ತವೆ. ತಿಲ್ಲಾನ : ಭರತನಾಟ್ಯ ಪ್ರದರ್ಶನದ ಕೊನೆಯ ಕಾರ್ಯಕ್ರಮ. ತಿಲ್ಲಾನದಲ್ಲಿ ಆಕರ್ಷಕ ಭಂಗಿಗಳೂ ತಾಳವೇಗವೂ ಅಡವು ವೈವಿಧ್ಯವೂ ಇದ್ದು ಪ್ರೇಕ್ಷಣೀಯವಾಗಿರುತ್ತದೆ. ಇದನ್ನು ಪ್ರದರ್ಶಿಸಲು ಕಲಾವಿದರಲ್ಲಿ ತಾಳ ಜ್ಞಾನ ಮತ್ತು ಪ್ರಜ್ಞಾಶಕ್ತ ಚೆನ್ನಾಗಿರಬೇಕು. ತಿಲ್ಲಾನಗಳು ಹಳವು ರಾಗಗಳಲ್ಲಿ ಹಲವು ತಾಳಗಳಲ್ಲಿ ರಚಿಸಲ್ಪಟ್ಟಿರುÀತ್ತವೆ. ಕೊನೆಯಲ್ಲಿ ದೇವರನ್ನಾಗಲೀ ಸುಪ್ರಸಿದ್ಧ ದೊರೆಗಳನ್ನಾಗಲೀ ಕೊಂಡಾಡುವ ಸಾಹಿತ್ಯವಿದ್ದು ಅದನ್ನು ಅಭಿನಯ ರೂಪದಲ್ಲಿ ಪ್ರದರ್ಶಿಸಿ ಅನಂತರ ಆಕರ್ಷಣೇಯ ನೃತ್ಯದಿಂದ ತಿಲ್ಲಾನ ಮುಕ್ತಾಯವಾಗುತ್ತದೆ.

ಕವಿತಾ : ಇದು ಉತ್ತರ ಭಾರತದ ಕಥಕ್ ನೃತ್ಯ ಸಂಪ್ರದಾಯದಲ್ಲಿ ಕಂಡುಬರುವ ಶೈಲಿ. ವೈದಿಕ ಬ್ರಾಹ್ಮಣರು ಮಹಾಭಾರತ ರಾಮಾಯಣ ಪ್ರರಾಣ ಕಥೆಗಳನ್ನು ಸ್ವಾರಸ್ಯವಾಗಿ ಹೇಳುತ್ತಿದ್ದುದರಿಂದ ಅವರಿಗೆ ಕಥಕರು ಎಂಬ ಹೆಸರು ಬಂತು. ಈ ಕಥಕರೇ ಕಥಕ್ ಎಂಬ ಶಾಸ್ತ್ರೀಯ ನೃತ್ಯಸಂಪ್ರದಾಯವನ್ನು ಕಾಪಾಡಿಕೊಂಡು ಬಂದವರು. ಕಥಕ್ ಸಂಪ್ರದಾಯದಲ್ಲಿ ಅಮದ್; ಥೌಟ್, ನಟ್ಪರಿ, ಪರಮೇಲು ಮುಂತಾದ ವಿವಿಧ ಶೈಲಿಗಳು ಇರುವಂತೆ ಇದೂ ಒಂದು. ಕವಿತಾ ಎಂದರೆ ಒಂದು ಕವಿತೆಯನ್ನು ತಾಳಕ್ಕೆ ಸರಿಯಾಗಿ ನರ್ತಿಸುವುದು. ಇದಕ್ಕೆ ಒಂದು ನಟ್ಪರಿಯನ್ನು ಸೇರಿಸುತ್ತಾರೆ. ಪ್ರದರ್ಶಿಸುವಾಗ ಕಾಲುಹೆಜ್ಜೆಗಳು ಯಾವುದಾದರೂ ಒಂದು ನಿರ್ದಿಷ್ಟ ಲಯ ಸೂಚಿಸುತ್ತವೆ. ಕವಿತಾ ಭಾಗ ಅಭಿನಯಕ್ಕೆ ಸಂಬಂಧಪಟ್ಟದ್ದಾದರೂ ಅದನ್ನು ನೃತ್ಯವಿಭಾಗಕ್ಕೇ ಸೇರಿಸುತ್ತಾರೆ, ಏಕೆಂದರೆ ಕವಿತಾ ಪ್ರದರ್ಶನದಲ್ಲಿ ಹೆಚ್ಚಾಗಿ ಕಾಲಹೆಜ್ಜೆಯ ತಾಳ ವೈಚಿತ್ರ್ಯವಿದ್ದು ಅದು ನೃತ್ತ ಹಾಗೂ ನೃತ್ಯವನ್ನು ಜೋಡಿಸುವ ಒಂದು ಸಂಬಂಧಸಾಧನವಾಗಿದೆ.

ದರು : ಕೂಚಿಪುಡಿ ಸಂಪ್ರದಾಯದ ಶಾಸ್ತ್ರೀಯ ನೃತ್ಯಕಲೆಯಲ್ಲಿ ಇದನ್ನು ಕಾಣಬಹುದು. ಕೂಚಿಪುಡಿ ನೃತ್ಯನಾಟಕದ ಪ್ರದರ್ಶನಕ್ಕೆ ಮೊದಲುದರು ಎಂಬ ನರ್ತನವನ್ನು ಮಾಡಿ ರಂಗಪ್ರವೇಶ ಮಾಡುತ್ತಾರೆ. ಇಬ್ಬರು ಸ್ವಯಂ ಸೇವಕರು ಒಂದು ಬಿಳೀ ಬಟ್ಟೆಯನ್ನು ಪರದೆಯಂತೆ ಅಡ್ಡವಾಗಿ ರಂಗಸ್ಥಳದ ಮೇಲೆ ಹಿಡಿದುಕೊಳ್ಳುತ್ತಾರೆ. ಅದರ ಹಿಂದೆ ನೃತ್ಯ ಕಲಾವಿದನ ತಲೆ ಮತ್ತು ಕಾಲುಗಳನ್ನು ಮಾತ್ರ ಪ್ರೇಕ್ಷಕರು ಕಾಣಬಹುದು. ಪರದೆಯನ್ನು ಫಕ್ಕನೆ ತೆಗೆಯುತ್ತಿರುವಾಗಲೇ ನರ್ತಕ ಮುಂದೆ ಬಂದು ತನ್ನ ನೃತ್ಯವನ್ನು ವಿಸ್ತಾರವಾಗಿ ಮಾಡಲಾರಂಭಿಸುತ್ತಾನೆ. ಈ ನರ್ತನದಿಂದ ಪಾತ್ರ ಪರಿಚಯ ಪ್ರೇಕ್ಷಕರಿಗೆ ಆಗುತ್ತದೆ.

ಕೂಚಿಪುಡಿ ನೃತ್ಯ ಸಂಪ್ರದಾಯ ಆಂಧ್ರಪ್ರದೇಶದ ಕುಚೇಲಪುರ ಅಥವೌ ಕೂಚಿಪುಡಿ ಎಂಬ ಹಳ್ಳಿಯಲ್ಲಿ ಸುಮಾರು 6 ಶತಮಾನಗಳ ಹಿಂದೆ ಆರಂಭವಾಯಿತು. ಆ ಹಳ್ಳಿಯ ಬ್ರಾಹ್ಮಣರು ಶಿವಲೀಲೆ, ಭಾಗವತರ ಕಥೆಗಳನ್ನು ನಾಟ್ಯನಾಟಕಗಳನ್ನಾಗಿ ಆಡಿ ಕಲಾಸೇವೆ ಮಾಡುತ್ತಿದ್ದರು. ಪಾತ್ರ ಪರಿವಯ ಮಾಡಲು ಕುಣಿದು ಬರುವ ಈ ದರುಗಳು ಹಲವು ವಿಧಗಳಲ್ಲಿವೆ. ಇವು ಆಶುಕಲ್ಪಿತ ಕುಣಿತವಲ್ಲ. ಕೂಚಿಪುಡಿ ಸಂಪ್ರದಾಯಬದ್ಧ ಶಾಸ್ತ್ರೀಯ ನರ್ತನದ ಭಾಗ. ಒಂದೊಂದು ನೃತ್ಯದಲ್ಲಿ, ಒಂದೊಂದು ರಚನೆಯಲ್ಲಿ ನಿರ್ದಿಷ್ಟ ದರುಗಳನ್ನು ಸೇರಿಸುತ್ತಾರೆ. ಭಾಮಾಕಲಾಪಂನಲ್ಲಿ ಎಂಟು ದರುಗಳಿವೆ. ತಮಿಳು ನಾಡಿನ ಭಾಗವತರ ಮೇಳ ಎಂಬ ನೃತ್ಯ ನಾಟಕಗಳಲ್ಲೂ ಈ ದರುಗಳನ್ನು ಕಾಣಬಹುದು.

ಅಷ್ಟಪದಿ : ಹನ್ನೆರಡನೆಯ ಶತಮಾನದಲ್ಲಿ ಜಯದೇವಕವಿ ಸಂಸ್ಕøತದಲ್ಲಿ ಬರೆದ ಗೀತಗೋವಿಂದದಲ್ಲಿ ಅಷ್ಟಪದಿಗಳಿವೆ. ಇದು ಕೃಷ್ಣನ ಶೃಂಗಾರ ಲೀಲಾ ವಿನೋದಗಳನ್ನು ರಮ್ಯವಾಗಿಚಿತ್ರಿಸುವ ಸಾಹಿತ್ಯವುಳ್ಳ ಗಾಯನಕ್ಕೆ ಯೋಗ್ಯವಾದ ಕೃತಿಗಳ ಮಾಲೆಗಳಿಂದ ಕೂಡಿದೆ. ಇದರಲ್ಲಿ 24 ಅಷ್ಟಪದಿಗಳಿವೆ. ಪ್ರತಿಯೊಂದು ಕೃತಿಗೂ ಎಂಟು ಪಾದಗಳಿರುವುದರಿಂದ ಈ ಕೃತಿಗೆ ಅಷ್ಟಪದಿ ಎಂದು ಹೆಸರು. ಗಾಯನಕ್ಕೆ ಯೋಗ್ಯವಾದ ಕೃತಿಗಳನ್ನು ರಚಿಸಿದವರಲ್ಲಿ ಜಯದೇವನೇ ಮೊದಲ ಕವಿ. ಈ ಕೃತಿಗಳಿಗೆ ಆ ಕಾಲದಲ್ಲಿ ವಾಡಿಕೆಯಲ್ಲಿದ್ದ ರಾಗ, ತಾಳಗಳನ್ನು ಕವಿಯೇ ಸೂಚಿಸಿರುತ್ತಾನೆ. ಆದರೆ ಅವು ಈಗ ಬಳಕೆಯಲ್ಲಿಲ್ಲ. ಅಷ್ಟಪದಿಗಳು ಭಾರತದಲ್ಲೆಲ್ಲ ವಿಶೇಷವಾಗಿ ಹಾಡಲ್ಪಡುತ್ತವೆ. ಉತ್ತರ ಭಾರತದಲ್ಲಿ ಹಿಂದೂಸ್ಥಾನಿ ಸಂಗೀತ ಶೈಲಿಯಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಕರ್ನಾಟಕ ಪದ್ಧತಿಯಲ್ಲಿ ಅಷ್ಟಪದಿಗಳನ್ನು ಹಾಡುವುದು ಸಾಮಾನ್ಯವಾಗಿದೆ. ಅಷ್ಟಪದಿಗಳು ನೃತ್ಯಕಲೆಯ ನರ್ತನ ಹಾಗೂ ಅಭಿನಯ ಪ್ರದರ್ಶಿಸಲು ಅತಿ ಸುಂದರವಾಗಿವೆ. ಇವುಗಳಲ್ಲಿಯ ಪ್ರತಿಭಾನ್ವಿತ ಕಲಾವಿದನಿಗೆ ಅಭಿನಯ ನೀಡಲು ಒಳ್ಳೆಯ ಅವಕಾಶ ಕೊಡುತ್ತದೆ. ಗೀತಗೋವಿಂದದಲ್ಲಿಯ ನಾಯಕ, ನಾಯಕಿ, ಸಖಿ ಪಾತ್ರಗಳು ಅಭಿನಯ ಕಲೆಗೆ ಅತ್ಯಂತ ಉಪಯುಕ್ತವಾಗಿವೆ. ಹಾಡುಗಾರರಿಗೂ ನೃತ್ಯಕಲಾವಿದರಿಗೂ ಅಷ್ಟಪದಿಗಳು ಹೇಳಿ ಮಾಡಿಸಿದಂತಿವೆ.

ಹಿನ್ನೆಲೆ ಸಂಗೀತ : ಯಾವುದೇ ಭರತನಾಟ್ಯ ಪ್ರದರ್ಶನ ಯಶಸ್ವಿಯಾಗ ಬೇಕಾದರೆ ಹಿನ್ನೆಲೆ ಸಂಗೀತವೂ ಮುಖ್ಯ. ಈ ಕಲೆಯನ್ನು ಹೇಳಿಕೊಡುವಾತ ಸಾಮಾನ್ಯವಾಗಿ 'ನಟುವಾಂಗಂ' ಸಂಗೀತ ಒದಗಿಸುತ್ತಾನೆ. ಎಂದರೆ ಕೈಯಲ್ಲಿ ತಾಳಗಳನ್ನು ಇಟ್ಟುಕೊಂಡು ಹಾಡುತ್ತ ಕಲಾವಿದ ಹಾಕುವ ಹೆಜ್ಜೆ ವಿನ್ಯಾಸಗಳನ್ನು ತಾಳದಿಂದ ತಟ್ಟಿ ತೀರ್ಮಾನ, ಜತಿಗಳ ಪರಿಚಯ ಮಾಡಿಕೊಡುತ್ತಾನೆ. ನಟುವಾಂಗಂ ವಿದ್ಯೆ ಸಾಮಾನ್ಯವಲ್ಲ, ಜಟಿಲವಾದುದು. ಇದನ್ನು ಕರಗತ ಮಾಡಿ ಕೊಳಲು ಹಲವು ವರ್ಷಗಳ ಅಭ್ಯಾಸ ಅಗತ್ಯ. ಇವನ ಜೊತೆಗೆ ಒಬ್ಬ ಹಾಡುಗಾರನೂ, ಕೊಳಲು, ಪಿಟೀಲು, ಮೃದಂಗ, ಶ್ರುತಿಗೆ ತಂಬೂರಿ ಮುಂತಾದ ಪಕ್ಕವಾದ್ಯಗಳನ್ನು ನುಡಿಸುವವರೂ ಇರುತ್ತಾರೆ. ತಾಳವನ್ನು ಸೂಚಿಸಲು ಒಂದು ಜೊತೆ ತಾಳಗಳು ಅಗತ್ಯ, ಪುರಾತನ ಕಾಲದಲ್ಲಿ ಮುಖವೀಣೆ, ಕ್ಲಾರಿ ಯೊನೆಟ್, ಕಹಳೆ, ಕೊಂಬು ಮುಂತಾದ ವಾದ್ಯಗಳು ಬಹಳಕಾಲದ ತನಕ ರೂಢಿಯಲ್ಲಿದ್ದುವು ಈ ಹಿನ್ನೆಲೆ ಸಂಗೀತಕ್ಕೆ ಮುಖ್ಯವಾಗಿ ಶ್ರುತಿಪೆಟ್ಟಿಗೆ ಅಥವಾ ತಂಬೂರಿ, ಕೊಳಲು, ಪಿಟೇಲು, ಮೃದಂಗ, ತಾಳಗಳು ಪ್ರಚಾರದಲ್ಲಿವೆ. ಹಿಂದೆ ನಿಂತು ಕೊಂಡು ಸಂಗೀತ ಒದಗಿಸುತ್ತಿದ್ದರು. ಆಕೆ ಹಿಂದೆ ಮುಂದೆ ಹೋದಂತೆ ಸಂಗೀತಗಾರರೂ ಆಕೆಯನ್ನು ಅನುಸರಿಸಿ ಮೇಲಿನ ಶ್ರುತಿಯಲ್ಲಿ ಸಂಗೀತ ಒದಗಿಸುತ್ತಿದ್ದರು. ಈಗ ಸಾಮಾನ್ಯವಾಗಿ ಹಿಮ್ಮೇಳದವರು ರಂಗಸ್ಥಳದ ಬಲಪಕ್ಕದಲ್ಲಿ ಕುಳಿತು ಕೆಳಗಿನ ಶ್ರುತಿಯಲ್ಲಿ ಸಂಗೀತ ನೀಡುತ್ತಾರೆ.

ಸಾಂಕೇತಿಕ ಭಾಷೆ : ಭರತನಾಟ್ಯ ಅಭ್ಯಾಸಮಾಡುವಾಗ ಕೆಲವು ಸಾಂಕೇತಿಕ ಶಬ್ದಗಳನ್ನು ಬಳಸುತ್ತಾರೆ. ಅಭ್ಯಾಸಕ್ಕೆ ತೊಡಗಿದಾಗ ಸೊಲ್ಲುಕಟ್ಟುಗಳನ್ನೂ ಸಂಗೀತದ ಸ್ವರಗಳನ್ನೂ ನೃತ್ಯಕ್ಕೆ ಅಳವಡಿಸಿಕೊಳ್ಳುತ್ತಾರೆ. ನೃತ್ತದ ತಾಳ ವೈಚಿತ್ರ್ಯವನ್ನು ಅಡವು ಜೋಡಣೆಗಳ ಜತಿಗಳನ್ನು ಹಾಡುವಾಗ ಸೊಲ್ಲುಕಟ್ಟುಗಳನ್ನು ಹೇಳುತ್ತಾರೆ. ಇವು ಮುಖ್ಯವಾಗಿ ನೃತ್ಯಗಾರರಿಗೆ ನೃತ್ಯದಲ್ಲಿ ಮುಂದಕ್ಕೆ ಸಾಗಲು ಮಾರ್ಗದರ್ಶಕವಾಗಿರುತ್ತವೆ.

ಗುರುಗಳು : ಕೆಲವು ಪ್ರಸಿದ್ಧ ನಾಟ್ಯಗುರುಗಳು ಅಥವಾ ನಟುವನಾರರು. 1 ಪಂದನಲ್ಲೂರು ಮೀನಾಕ್ಷಿಸುಂದರಂಪಿಳ್ಳೆ : ಇವರು ಈ ಕಲೆಯಲ್ಲಿ ಪಂಡಿತರಾಗಿದ್ದು ಅಗ್ರಸ್ಥಾನ ಪಡೆದವರಾಗಿದ್ದರು. ಇವರು ಇಂದು ಪ್ರಖ್ಯಾತಿ ಪಡೆದಿರುವ ಅನೇಕ ಕಲಾವಿದರನ್ನು ತರಬೇತು ಮಾಡಿದರು. ಈ ಸಂಪ್ರದಾಯವನ್ನು ಇವರ ಮನೆತನದವರಾದ ವಿದ್ವಾನ್ ಚೊಕ್ಕಲಿಂಗಮ್ ಪಿಳ್ಳೆ, ಮೊಮ್ಮಗ ವಿದ್ವಾನ್ ಕೃಷ್ಣ ಮೂರ್ತಿಪಿಳ್ಳೆ ಮತ್ತು ಮಗ ವಿದ್ವಾನ್ ಮುತ್ತಯ್ಯ ಪಿಳ್ಳೆ ಇವರು ಕಾಪಾಡಿ ಕೊಂಡು ಬಂದಿದ್ದಾರೆ.

2 ನಾಟ್ಯ ಕಲಾಕೇಸರಿ ರಾಮಯ್ಯ ಪಿಳ್ಳೆ : ಇವರು ಕೆಲವು ಕಲಾವಿದರಿಗೆ ಪಾಠ ಹೇಳಿದ್ದಾರೆ. ಇವರ ಸಂಪ್ರದಾಯದಲ್ಲಿ ಮನಸೆಳೆಯುವ ಭಂಗಿಗಳು ವಿಚಿತ್ರವಾದ ಅಡವು ಜಾತಿಗಳು ಸೇರಿಕೊಂಡಿವೆ.

3 ಯಲ್ಲಪ್ಪ ಮುದಲಿಯಾರ್ : ಇವರು ನಟುವಾಂಗಂ ಮಾಡುವ ವಿಶಿಷ್ಟ ಕಲೆಯಲ್ಲಿ ಹೆಸರು ಮಾಡಿದವರು.

4 ಮೈಸೂರಿನ ಜಟ್ಟಿ ತಾಯಮ್ಮ : ಇವರು ನಾಟ್ಯ ಸರಸ್ವತಿ ಎಂಬ ಬಿರುದು ಪಡೆದಿದ್ದರು. ಮೈಸೂರು ಸಂಪ್ರದಾಯದ ಭರತನಾಟ್ಯವನ್ನು ಉಳಿಸಿಕೊಂಡು ಬಂದವರು. ಇವರು ಜಾವಳಿ ಪದಗಳ ಅಭಿನಯಕ್ಕೆ ಬಲು ಹೆಸರುವಾಸಿಯಾಗಿದ್ದರು. ಇವರ ಶಿಷ್ಯವರ್ಗದಲ್ಲಿ ಪ್ರಮುಖರಾದವರು ವೆಂಕಟಲಕ್ಷ್ಮಮ್ಮ ಹಾಗೂ ಮೂಗೂರು ಸುಂದರಮ್ಮನವರು.

ಭಾರತೀಯ ನಾಟ್ಯ ಕಲೆಯಲ್ಲಿ ಯಶಸ್ಸನ್ನು ಪಡೆದ ಕೆಲವು ಪ್ರಸಿದ್ಧಿ ನೃತ್ಯ ಕಲಾವಿದರು -

ಬಾಲಸರಸ್ವತಿ: ಅಭಿನಯದ ರಾಣಿ ಎನಿಸಿಕೊಂಡವರು. ರುಕ್ಮಿಣಿ ಅರುಂಡೇಲ್ ಭರತನಾಟ್ಯದ ಪುನರುತ್ಥಾನಕ್ಕೆ ಕಾರಣರಾದವರು. ರಾಮಗೋಪಾಲ್: ಭಾರತೀಯ ನಾಟ್ಯವನ್ನು ದೇಶವಿದೇಶಗಳಲ್ಲಿ ಪ್ರಖ್ಯಾತ ಪಡಿಸಿದರು. ಶಾಂತಾರಾವ್: ಸಂಪ್ರದಾಯ ಬದ್ಧವಾಗಿಯೂ ಶಾಸ್ತ್ರಬದ್ಧವಾಗಿಯೂ ಕಲೆಯನ್ನು ಪ್ರದರ್ಶಿಸಿ ಮನಸೆಳೆದವರು. ಮೃಣಾಲಿನಿ ಸಾರಾಭಾಯ್: ಶಾಸ್ತ್ರೀಯ ಸಂಪ್ರದಾಯದಲ್ಲಿ ನೃತ್ಯ ನಾಟಕಗಳಿಗೆ ಕೈಹಾಕಿ ಯಶಸ್ವಿಯಾದವರು. ಚಂದ್ರಭಾಗದೇವಿ ಮತ್ತು ಯು. ಎಸ್. ಕೃಷ್ಣರಾವ್ ದಂಪತಿಗಳು: ಹಳೆಯ ಮೈಸೂರು ಸಂಸ್ಥಾನದಲ್ಲಿ ಕಲಾಸಕ್ತಿ ಪಡೆದ ಮೊದಲ ದಂಪತಿಗಳು. ತಾರಾಚೌಧುರಿ: ಭರತನಾಟ್ಯದ ಭಂಗಿಗಳ ಸುಂದರತೆಗೆ ಹೆಚ್ಚು ಗಮನ ಕೊಟ್ಟು ಸೌಂದರ್ಯಾನುಭವ ಕೊಟ್ಟವರು. ವೈಜಯಂತಿಮಾಲಾ : ಸಿನಿಮಾ ತಾರೆಯಾದರೂ ಭರತನಾಟ್ಯವನ್ನು ಅಭಿಮಾನದಿಂದ ಕಾಪಾಡಿಕೊಂಡು ಬಂದವರು. ರೋಶನ್‍ವಜೀಫ್‍ದಾರ್: ಭರತನಾಟ್ಯದ ನಾಯಿಕಾ ಭಾವಗಳಲ್ಲಿ ಅಂದವನ್ನು ಕಂಡವರು. ಇಂದ್ರಾಣಿ ರೆಹಮಾನ್: ಭಾರತೀಯ ಶಾಸ್ತ್ರೀಯ ನೃತ್ಯಕಲೆಯನ್ನು ವಿದೇಶಗಳಲ್ಲಿ ಪ್ರದರ್ಶಿಸಿ ಪ್ರಪಂಚ ವಿಖ್ಯಾತಿ ಗಳಿಸಿದವರು ಮತ್ತು ಒಡಿಸ್ಸಿ ನೃತ್ಯ ಸಂಪ್ರದಾಯದ ಪುನರುತ್ಥಾನಕ್ಕೆ ಕಾರಣರಾದವರು. ರೀತಾ ಚಟರ್ಜಿ : ಬಹುಮುಖವಾದ ಕಲಾಭಿಮಾನ ಪಡೆದ ಕಲಾವಿದೆ. ಯಾಮಿನಿ ಕೃಷ್ಣ ಮೂರ್ತಿ : ಕೂಚಿಪುಡಿ ಭರತನಾಟ್ಯ ಪ್ರದರ್ಶನಕ್ಕೆ ಹೆಸರಾದವರು.

ಭರತನಾಟ್ಯ ಒಂದು ವಿಶಿಷ್ಟವಾದ ಕಲೆ. ಇದರಲ್ಲಿ ಅನೇಕ ಕಲೆಗಳು ಮಿಲನವಾಗಿವೆ. ಒಂದು ಒಳ್ಳೆಯ ಭರತನಾಟ್ಯವನ್ನು ನೋಡಿದಾಗ ನೃತ್ಯ ವಿಧಾನದ ಅನಂತತೆ ಅಭಿನಯ ಸಂಪತ್ತು ಸಹೃದಯನಾದ ಪ್ರೇಕ್ಷಕನಿಗೆ ಮನದಟ್ಟಾಗಿ ಮರೆಯಲಾರದ ಕಲಾನುಭವ ಉಂಟಾಗುತ್ತದೆ. ಅಂಥ ಒಂದು ಅನುಭವವೇ ನಿಜವಾದ ಕಲೆ. (ಯು.ಎಸ್.ಕೆ.;ಸಿಎಚ್.ಡಿ)