ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು

ವಿಕಿಸೋರ್ಸ್ದಿಂದ

ಭಾರತದ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು

[ಸಂಪಾದಿಸಿ]

ಭಾರತದಲ್ಲಿ ಆಕಾಶವಾಣಿ ಪ್ರಸಾರ ಹೇಗೆ ಆರಂಭವಾಯಿತು ಎನ್ನುವುದರ ಬಗ್ಗೆ ನಿಖರವಾದ ಅಧಿಕೃತ ದಾಖಲೆಗಳು ಯಾವುವೂ ಇಲ್ಲ. ಭಾರತ ಸರ್ಕಾರದ ಇಲಾಖೆಯಲ್ಲಿಯ ಕಾರ್ಯದರ್ಶಿಗೆ ಪ್ರಸಾರ ನಿಯಂತ್ರಣಾಧಿಕಾರಿ ಆಗಿದ್ದ ಲಯನೆಲ್ ಫೀಲ್ಡೆನ್ 1939 ಜೂನ್ 3ರಂದು ಒಪ್ಪಿಸಿದ ವರದಿಯೇ ಮೊದಲ ಸಂಪೂರ್ಣ ಅಧಿಕೃತ ದಾಖಲೆ. ಅದೃಷ್ಟವಶಾತ್ ಫಿಲ್ಡೆನ್ ತನ್ನ ವರದಿಯಲ್ಲಿ ಆಕಾಶವಾಣಿಯ ವ್ಯವಸ್ಥಿತ ಐತಿಹಾಸಿಕ ಸಮೀಕ್ಷೆಯನ್ನು ಸೇರಿಸಿದ್ದು ಸಾಕಷ್ಟು ಉಪಯುಕ್ತ ಮಾಹಿತಿ ನೀಡುತ್ತಿದೆ. ಸ್ವಾತಂತ್ರ್ಯಾನಂತರ ಸರ್ಕಾರದಿಂದ ನೇಮಿಸಲಾದ ಚಂದಾ ಮತ್ತು ವರ್ಗೀಸ್ ಸಮಿತಿಗಳು ಆಕಾಶವಾಣಿಯ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸಿವೆ. 1977ರಲ್ಲಿ ಆಕಾಶವಾಣಿಯ ಅರ್ಧಶತಮಾನೋತ್ಸವ ಆಚರಿಸಲಾಯಿತು. ಆದರೆ ನಿಜವಾಗಿ ಪ್ರಸಾರ ಆರಂಭವಾದದ್ದು 1926ರಲ್ಲಿ, 1927ರಲ್ಲಿ ಅಲ್ಲ. ಆಗಿನ ಕಾಲದ ಪತ್ರಿಕಾ ವರದಿಗಳು ಇದರ ಬಗ್ಗೆ ಅಲ್ಪಸ್ವಲ್ಪ ಬೆಳಕು ಚೆಲ್ಲಿವೆ. ಇಂಡಿಯನ್ ಸ್ಟೇಟ್ಸ್ ಮತ್ತು ಈಸ್ಟರ್ನ್ ಏಜೆನ್ಸಿ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಫ್.ಇ. ರೋಷರ್‍ಗೆ ಪ್ರಸಾರ ವ್ಯವಸ್ಥೆಯಲ್ಲಿ ಆಸಕ್ತಿ. ತಮ್ಮ ಬಾನುಲಿ ಪ್ರಸಾರ ಸೇವೆಯನ್ನು ಸ್ಥಾಪಿಸಲು ಅವರು ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರದಿಂದ ಅನುಮತಿ ಆಶಿಸಿದರು (1922). ಕೆಲವು ತಿಂಗಳುಗಳ ಬಳಿಕ ದೆಹಲಿಯಲ್ಲಿ ಪ್ರಸಾರ ಸಮ್ಮೇಳನ ನಡೆಯಿತು. ಅಲ್ಲಿ ಕಲ್ಕತ್ತಾ ಕೇಂದ್ರದಿಂದ ಆಕಾಶವಾಣಿ ಪ್ರಸಾರಕ್ಕೆ ಒಪ್ಪಿಗೆ ನೀಡಲಾಯಿತು. ರೇಡಿಯೊ ಕ್ಲಬ್ ಆಫ್ ಬೆಂಗಾಲ್ ಸಹಕಾರದೊಡನೆ 1923 ನವೆಂಬರ್‍ನಲ್ಲಿ ಮೊದಲ ಕಾರ್ಯಕ್ರಮ ಪ್ರಸಾರವಾಯಿತು. ಹಾಗೆಯೇ ಬಾಂಬೆ ರೇಡಿಯೊ ಕ್ಲಬ್ 1924 ಜೂನ್‍ನಲ್ಲಿ ತನ್ನ ಪ್ರಸಾರ ಆರಂಭಿಸಿತು. ಈ ಎರಡೂ ಪ್ರಸಾರ ಯಂತ್ರಗಳನ್ನು ಮಾರ್ಕೋನಿ ಕಂಪನಿ ಎರವಲಾಗಿ ನೀಡಿತ್ತು. ಇಂಥ ಸಣ್ಣ ಪ್ರಸಾರ ಕೇಂದ್ರಗಳು ಮದರಾಸು, ಕರಾಚಿ ಮತ್ತು ರಂಗೂನ್ ಪಟ್ಟಣಗಳಲ್ಲಿ ನೆಲೆಗೊಂಡವು.

ಇವೆಲ್ಲಕ್ಕೂ ಮುನ್ನ ಪ್ರಾಯೋಗಿಕ ಪ್ರಸಾರವೊಂದು ನಡೆದಿತ್ತು. ಅಂಚೆ ಮತ್ತು ತಂತೀ ಇಲಾಖೆಯ ಸಹಕಾರದೊಡನೆ ಮುಂಬಯಿ ನಗರದ ಟೈಮ್ಸ್ ಆಫ್ ಇಂಡಿಯ ಪತ್ರಿಕೆ ತನ್ನ ಕಛೇರಿಯಿಂದ ಗವರ್ನರ್ ಸರ್ ಜಾರ್ಜ್ ಲಾಯ್ಡ್ ಕೇಳಲು ಅನುವಾಗುವಂತೆ ಪುಣೆ ನಗರದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮವನ್ನು 1921 ಆಗಸ್ಟ್ ತಿಂಗಳಿನಷ್ಟು ಹಿಂದೆಯೇ ಪ್ರಸಾರ ಮಾಡಿತ್ತು. ಈ ಶತಮಾನದ ಮೂರನೆಯ ದಶಕ ಪ್ರಾರಂಭವಾಗುವಾಗಲೇ ಭಾರತದಲ್ಲಿಯೂ ಬಾನುಲಿ ಪ್ರಸಾರದ ಬಗ್ಗೆ ಅನೇಕರಿಗೆ 'ಹುಚ್ಚು ಹಿಡಿದಿತ್ತು. ಅವರಲ್ಲಿ ಬಹಳಷ್ಟು ಮಂದಿ ಹವ್ಯಾಸೀ ಪ್ರಸಾರಕರಾಗಲು ಇಚ್ಛಿಸಿದ್ದವರು. ಇಂಥ ಹಲವು ಮಂದಿ ಸೇರಿ ಮದರಾಸಿನಲ್ಲಿ 1924 ಮೇ 16ರಂದು ಮದ್ರಾಸ್ ಪ್ರೆಸಿಡೆನ್ಸಿ ರೇಡಿಯೊ ಕ್ಲಬ್ ಸ್ಥಾಪಿಸಿದರು. ಮದ್ರಾಸ್ ಪ್ರಾಂತದ ಗವರ್ನರ್ ವೈಕೌಂಟ್ ಗೊಷೆನ್ ಇದರ ಪೋಷಕ. ಪ್ರಾಯೋಗಿಕ ಪ್ರಸಾರ ತತ್‍ಕ್ಷಣದಿಂದಲೇ ಆರಂಭವಾಯಿತಾದರೂ ಇದರ ಔಪಚಾರಿಕ ಉದ್ಘಾಟನೆ 1924 ಜುಲೈ 31ರಂದು ಆಯಿತು. ಕೃಷ್ಣಸ್ವಾಮಿ ಚೆಟ್ಟಿ ತಾವು ಇಂಗ್ಲೆಂಡಿನಿಂದ ತಂದಿದ್ದ ಪುಟ್ಟ ಪ್ರಸಾರ ಯಂತ್ರವನ್ನು ಇದಕ್ಕಾಗಿ ನೀಡಿದರು. ಇದರ ಸಾಮಥ್ರ್ಯ 40 ವ್ಯಾಟ್. ಕೆಲವು ಕಾಲಾನಂತರ 200 ವ್ಯಾಟ್ ಸಾಮಥ್ರ್ಯದ ಪ್ರಸಾರ ಯಂತ್ರವನ್ನು ಸ್ಥಾಪಿಸಲಾಯಿತು. ಪ್ರತಿದಿನ ಸಂಜೆ ಎರಡೂವರೆ ಗಂಟೆಗಳ ಕಾಲ ಸಂಗೀತ ಮತ್ತು ಭಾಷಣ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದುವು. ಭಾನುವಾರ ಮತ್ತು ಇತರ ಸಾರ್ವಜನಿಕ ರಜಾ ದಿನಗಳಂದು ವಿಶೇಷ ಬೆಳಗಿನ ಪ್ರಸಾರ ಕಾರ್ಯಕ್ರಮ ಕೂಡ ಇರುತ್ತಿತ್ತು.

ಆರ್ಥಿಕ ಮುಗ್ಗಟ್ಟು ಪ್ರಸಾರ ಕೇಂದ್ರವನ್ನು ಮುಸುಕಿತು. ಮದ್ರಾಸು ಕೇಂದ್ರ 1927 ಅಕ್ಟೋಬರಿನಲ್ಲಿ ಮುಚ್ಚಲ್ಪಟ್ಟಿತು. ಭಾರತ ಸರ್ಕಾರದ ಲೈಸೆನ್ಸ್ ಶುಲ್ಕದ ಧನಸಹಾಯ ಸಾಕಾಗಲಿಲ್ಲ. ಕ್ಲಬ್ ತನ್ನ ಪ್ರಸಾರಯಂತ್ರವನ್ನು ಮದ್ರಾಸ್ ನಗರಪಾಲಿಕೆಗೆ ವಹಿಸಿಕೊಟ್ಟಿತು. ನಗರಪಾಲಿಕೆ ನಿಯತ ಪ್ರಸಾರವನ್ನು 1930 ಏಪ್ರಿಲ್ 1ರಂದು ಆರಂಭಿಸತು. ಪ್ರತಿದಿನ ಸಂಜೆ 5-30ರಿಂದ 7-30ರ ತನಕ ಎರಡು ಗಂಟೆಗಳ ಕಾಲ ಸಂಗೀತ ಪ್ರಸಾರ ಮಾಡಲಾಗುತ್ತಿತ್ತು. ತಿಂಗಳಲ್ಲಿ ಒಂದು ಸೋಮವಾರ ಪಾಶ್ಚಾತ್ಯ ಸಂಗೀತಕ್ಕೆಂದು ಮೀಸಲಾಗಿತ್ತು. ಕಥೆ ಮತ್ತು ಸಂಗೀತ ಪಾಠಗಳನ್ನು ಶಾಲಾ ಮಕ್ಕಳಿಗಾಗಿ ವಾರದ ಇತರ ದಿನಗಳಲ್ಲಿ ಸಂಜೆ 4ರಿಂದ 4-30ರ ತನಕ ಅರ್ಧಗಂಟೆ ಕಾಲ ಪ್ರಸಾರ ಮಾಡಲಾಗುತ್ತಿತ್ತು. ಭಾನುವಾರ ಮತ್ತು ರಜಾದಿನಗಳೆಂದು ಬೆಳಗ್ಗೆ 10ರಿಂದ 11ರ ತನಕ ಗ್ರಾಮಾಫೋನ್ ಮುದ್ರಿಕೆಗಳ ಪ್ರಸಾರವೂ ಇತ್ತು. ಈ ಸೇವೆ 1938 ಜೂನ್ 16ರ ತನಕ ಅಂದರೆ ಕೇಂದ್ರ ಆಕಾಶವಾಣಿಯಲ್ಲಿ ವಿಲೀನವಾಗುತನಕ ಮುಂದುವರಿಯಿತು. ಹಳೆಯ ಪ್ರಸಾರ ಯಂತ್ರವನ್ನು ಹೊಸ 10 ಕೆವಿ ಹ್ರಸ್ವತರಂಗ ಮತ್ತು 0.25 ಕೆವಿ. ಮಧ್ಯಮ ತರಂಗ ಪ್ರಸಾರಯಂತ್ರಗಳಿಂದ ಬದಲಿಸಲಾಯಿತು. ಹವ್ಯಾಸಿಗಳ ಈ ಕೇಂದ್ರ ಅತ್ಯಂತ ಜನಪ್ರಿಯವಾಗಿತ್ತು.

ಇಂಡಿಯನ್ ರೇಡಿಯೊ ಟೈಮ್ಸ್ ಪತ್ರಿಕೆ 1927 ಜುಲೈ 15ರಂದು ಪ್ರಕಟವಾಗಿ ಇಂಡಿಯನ್ ಬ್ರಾಡ್‍ಕಾಸ್ಟಿಂಗ್ ಕಂಪನಿಯ (ಭಾರತೀಯ ಪ್ರಸಾರ ಸಂಸ್ಥೆ) ಉದಯವನ್ನು ಗುರುತಿಸಿತು, ಮುಂಬಯಿ ಆಕಾಶವಾಣಿ ಕೇಂದ್ರ ಅಂದಿನ ವೈಸರಾಯ್ ಲಾರ್ಡ್ ಇರ್ವಿನ್‍ನಿಂದ 1927 ಜುಲೈ 23ರಂದು ಉದ್ಘಾಟಿಸಲ್ಪಟ್ಟಿತು. ಇದರ ಪ್ರಸಾರ ವ್ಯವಸ್ಥೆ ಬಗ್ಗೆ ಈ ಖಾಸಗಿ ಕಂಪನಿ ಮತ್ತು ಭಾರತ ಸರ್ಕಾರದ ನಡುವೆ ಒಂದು ಒಪ್ಪಂದ ಏರ್ಪಟ್ಟಿತು. ಇದೇ ಕಂಪನಿಯ ಸ್ವಾಮ್ಯದಲ್ಲಿದ್ದ ಕಲ್ಕತ್ತಾ ಕೇಂದ್ರವನ್ನು ಐದು ವಾರಗಳ ತರುವಾಯ ಆಗಸ್ಟ್ 26ರಂದು ಬಂಗಾಳದ ಗವರ್ನರ್ ಸರ್ ಸ್ಟಾನ್ಲಿ ಜಾಕ್‍ಸನ್ ಉದ್ಘಾಟಿಸಿದ. ಮುಂಬಯಿ ಮತ್ತು ಕಲ್ಕತ್ತಾ ಕೇಂದ್ರಗಳಲ್ಲಿ 1.5 ಕೆವಿ ಮಧ್ಯಮ ತರಂಗದ ಪ್ರಸಾರ ಯಂತ್ರಗಳಿದ್ದುವು. ಪ್ರಸಾರ ವ್ಯಾಪ್ತಿ ಕೇವಲ 48 ಕಿಮೀ. ಈ ಕೇಂದ್ರಗಳು ಉನ್ನತಮಟ್ಟದ ಪ್ರತಿಭೆಯನ್ನು ಆಕರ್ಷಿಸಿದುವು. ವಿಖ್ಯಾತ ಸಂಗೀತಗಾರ ಕೆ.ಸಿ.ಡೇಯ ನೇತೃತ್ವದಲ್ಲಿ ಕಲ್ಕತ್ತಾ ಕೇಂದ್ರ ಸಂಗೀತ ಪಾಠ ಕಾರ್ಯಕ್ರಮ ಪ್ರಸಾರ ಮಾಡುತ್ತಿತ್ತು. ಮತ್ತೊಬ್ಬ ಸಂಗೀತಗಾರ ಪಂಕಜ್ ಮಲ್ಲಿಕ್ ಅವರ ರಬೀಂದ್ರ ಸಂಗೀತ ಪಾಠಗಳು ಅಷ್ಟೇ ಜನಪ್ರಿಯವಾಗಿದ್ದುವು.

ನಿಯತ ಬಾನುಲಿ ಸೇವೆ ಆರಂಭವಾದ ಮೇಲೂ ಹವ್ಯಾಸಿ ಕೇಂದ್ರಗಳು ಮುಂದುವರಿದುವು. ಸರ್ಕಾರ ಇದಕ್ಕೆ ವಿರೋಧವಾಗಿರಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಇಂಥ ಕೇಂದ್ರಗಳ ಪೈಕಿ ಒಂದು ಲಾಹೋರಿನಲ್ಲಿ ವೈಎಂಸಿಎ ಸ್ಥಾಪಿಸಿದ (1928) ಪಟ್ಟ ಬಾನುಲಿ ಕೇಂದ್ರ. ಇದು ಏಕ ಕೊಠಡಿಯ ಏಕವ್ಯಕ್ತಿ ಪ್ರಯತ್ನ. ಪಂಜಾಬ್ ಪಠ್ಯಪುಸ್ತಕ ಸಮಿತಿ ಲಾಹೋರ್ ಬಾನುಲಿ ಕೇಂದ್ರಕ್ಕೆ ವರ್ಷಕ್ಕೆ ರೂ. 1500 ಅನುದಾನ ನೀಡುತ್ತಿತ್ತು. ವೆಚ್ಚದ ಉಳಿದ ಭಾಗವನ್ನು ಪಂಜಾಬ್ ಸರ್ಕಾರ ಭರಿಸುತ್ತಿತ್ತು. ಈ ಕೇಂದ್ರ 1937 ಸೆಪ್ಟೆಂಬರ್ 1ರ ತನಕ ಮುಂದುವರಿಯಿತು. ಭಾರತ ಸರ್ಕಾರದ ಆಕಾಶವಾಣಿ ತನ್ನ ಐದನೆಯ ಕೇಂದ್ರವನ್ನು 1937 ಡಿಸೆಂಬರ್ 16ರಂದು ಆರಂಭಿಸಿತು. ಇದರ ಸಾಮಥ್ರ್ಯ 5 ಕೆವಿ. ಮಧ್ಯಮ ತರಂಗದ ಪ್ರಸಾರಯಂತ್ರ. ಮಾರ್ಕೋನಿ ಕಂಪನಿಯ ಸಹಾಯದಿಂದ ವಾಯುವ್ಯ ಪ್ರಾಂತದ ಸರ್ಕಾರ ಪೇಷಾವರ್‍ನಲ್ಲಿ 1935ರಷ್ಟು ಹಿಂದೆಯೇ ಪ್ರಸಾರಕೇಂದ್ರ ಹೊಂದಿತ್ತು. ವಾಯುವ್ಯ ಪ್ರಾಂತದ ಸರ್ಕಾರ 1937 ಏಪ್ರಿಲ್ 1ರಂದು ಈ ಕೇಂದ್ರವನ್ನು ಭಾರತ ಸರ್ಕಾರಕ್ಕೆ ವಹಿಸಿಕೊಟ್ಟಿತು.

ಮೂರು ವರ್ಷಗಳಲ್ಲಿ ಇಂಡಿಯನ್ ಬ್ರಾಡ್‍ಕಾಸ್ಟಿಂಗ್ ಕಂಪನಿ ಅವಸಾನ ಕಂಡಿತು. ಇಷ್ಟು ಹೊತ್ತಿಗಾಗಲೇ ಸಂಸ್ಥೆಗೆ ಎರಡು ಲಕ್ಷ ರೂಪಾಯಿ ನಷ್ಟ ಸಂಭವಿಸಿತ್ತು. ಇದು ಏನೇ ಇರಲಿ, ಆಕಾಶವಾಣಿ ಪ್ರಸಾರ ಈ ವೇಳೆಗೆ ಭಾತದಲ್ಲಿ ಬೇರೂರಿತ್ತು. ಇಂಚ್‍ಟೇಪ್ ಸಮಿತಿ ದೇಶದ ಪ್ರಸಾರ ವ್ಯವಸ್ಥೆ ನಷ್ಟದಲ್ಲಿ ನಡೆಯುತ್ತಿರುವುದನ್ನು ತೋರಿಸಿ. ಭಾರತಕ್ಕೆ ಇದು ತಕ್ಕುದಲ್ಲವೆಂದು ಹೇಳಿ ಅದನ್ನು ಕೊನೆಗೊಳಿಸಬೇಕೆಂದು ಶಿಫಾರಸು ಮಾಡಿತು. ಪತ್ರಿಕೆಗಳಲ್ಲಿ ಸಮಿತಿಯ ವರದಿ ಪ್ರಕಟವಾದದ್ದೇ ತಡ ಅದು ಸಾರ್ವಜನಿಕ ಅಭಿಪ್ರಾಯವನ್ನು ಕೆರಳಿಸಿತು. ಸಾರ್ವಜನಿಕ ಒತ್ತಡಕ್ಕೆ ಮಣಿದ ಸರ್ಕಾರ ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆಯ ಅಧೀನದಲ್ಲಿ ಪ್ರಸಾರ ವ್ಯವಸ್ಥೆಯನ್ನು ತಾನೇ ವಹಿಸಿಕೊಂಡಿತು, ಇಂಡಿಯನ್ ಸ್ಟೇಟ್ ಬ್ರಾಡ್‍ಕಾಸ್ಟಿಂಗ್ ಸರ್ವಿಸ್ ಭಾರತ ರಾಜ್ಯ ಪ್ರಸಾರ ಸೇವೆ ಎಂಬ ಅಂಕಿತದಲ್ಲಿ ಉದಯವಾಯಿತು. ಪ್ರಾಯೋಗಿಕ ಪ್ರಸಾರವ್ಯವಸ್ಥೆ ಮುಂದುವರಿಯಿತು. ಎರಡು ವರ್ಷಗಳ ತರುವಾಯ ಅಂದರೆ 1932ರಲ್ಲಿ ಅಂತಿಮವಾಗಿ ಸರ್ಕಾರದ ಆಡಳಿತದಲ್ಲಿ ಪ್ರಸಾರ ಸೇವೆಯನ್ನು ನಡೆಸಿಕೊಂಡು ಹೋಗಲು ನಿರ್ಧರಿಸಲಾಯಿತು.

ಮರುವರ್ಷದ (1933) ಅಂತ್ಯದಲ್ಲಿ ಪರವಾಗಿ ಪಡೆದ ರೇಡಿಯೊ ಸೆಟ್ಟುಗಳ ಸಂಖ್ಯೆ 10,872. ಪ್ರಸಾರ ವ್ಯವಸ್ಥೆಯ ಮೇಲೆ ಹಿಡಿತಹೊಂದಲು 1934 ಜನವರಿ 1ನೇ ತಾರೀಕಿನಂದು 1933ರ ಇಂಡಿಯನ್ ವೈರ್‍ಲೆಸ್ ಟೆಲಿಗ್ರಫಿ ಆ್ಯಕ್ಟ್ (ಭಾರತೀಯ ವೈರ್‍ಲೆಸ್ ದೂರದರ್ಶನ ಶಾಸನ) ಜಾರಿಗೆ ಬಂದಿತು. ಇದೇ ಇಂದಿಗೂ ದೇಶದ ಬಾನುಲಿ ಪ್ರಸಾರ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ. ರಾಷ್ಟ್ರದಲ್ಲಿ ಸಂವಿಧಾನದತ್ತವಾಗಿ ಪ್ರಸಾರ ವ್ಯವಸ್ಥೆಯ ಸ್ಥಾನವನ್ನು 1935ರ ಶಾಸನದ 129ನೇ ವಿಧಿ ವಿಶದಪಡಿಸಿತು. ಅದರಂತೆ ವಿವಿಧ ರಾಜ್ಯಗಳು ಪ್ರಸಾರ ಯಂತ್ರಗಳನ್ನು ಹೊಂದಲು ಮತ್ತು ಪ್ರಸಾರಕೇಂದ್ರಗಳನ್ನು ಸ್ಥಾಪಿಸಲು ಅವಕಾಶವಾಯಿತು.

ನಿಯತ ಬಾನುಲಿ ಕೇಂದ್ರಗಳ ಸ್ಥಾಪನೆಗೆ ಮುಂದೆ ಇದ್ದ ಹವ್ಯಾಸೀ ಬಾನುಲಿ ಪ್ರಸಾರಕ ಕ್ಲಬ್‍ಗಳು ಉಪಯುಕ್ತ ಸೇವೆ ಸಲ್ಲಿಸಿದುವು. ವಿವಿಧ ಕಾರಣಗಳಿಂದಾಗಿ ಸರ್ಕಾರಕ್ಕೆ ಪ್ರಸಾರ ಕೇಂದ್ರಗಳನ್ನು ಸ್ಥಾಪಿಸಲು ಆಗದಿದ್ದಾಗ ಇವು ಪ್ರಸಾರ ಕಾರ್ಯವನ್ನು ದಕ್ಷತೆಯಿಂದ ನಿರ್ವಹಿಸಿದುವು. ಆದರೆ ಈ ಕ್ಲಬ್‍ಗಳ ಆರ್ಥಿಕ ಪರಿಸ್ಥಿತಿ ಎಂದೂ ಉತ್ತಮವಾಗಿರಲಿಲ್ಲ. ಕೆಲವು ಮಂದಿ ಖಾಸಗೀ ವ್ಯಕ್ತಿಗಳ ಬಳಿ ಸ್ವಂತ ಪ್ರಸಾರಯಂತ್ರಗಳಿದ್ದುವು.

ಪ್ರಸಾರಸೇವೆ 1934ರಿಂದ ತ್ವರಿತ ಗತಿಯಲ್ಲಿ ವಿಸ್ತಾರಗೊಂಡಿತು. ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್ ಸಂಸ್ಥೆಯ ಲಯನೆಲ್ ಫೀಲ್ಡೆನ್ ಭಾರತೀಯ ಪ್ರಸಾರ ವ್ಯವಸ್ಥೆಯ ಮೊದಲ ನಿಯಂತ್ರಣಾಧಿಕಾರಿಯಾಗಿ ನೇಮಿತರಾದರು. ದೆಹಲಿ ಪ್ರಸಾರ ಕೇಂದ್ರ 1936 ಜನವರಿ 1ರಂದು ಅಸ್ತಿತ್ವಕ್ಕೆ ಬಂದಿತು. ಆಗ ಇಂಡಿಯನ್ ಬ್ರಾಡ್‍ಕಾಸ್ಟಿಂಗ್ ಸರ್ವಿಸ್ ಸಂಸ್ಥೆಯ ಹೆಸರನ್ನು ಆಲ್ ಇಂಡಿಯಾ ರೇಡಿಯೊ ಎಂದು ಬದಲಾಯಿಸಲಾಯಿತು.

ಆಲ್ ಇಂಡಿಯಾ ರೇಡಿಯೊ ಎಂಬ ಹೆಸರನ್ನು ಸೃಷ್ಟಿಸಿದ ಕೀರ್ತಿ ಆಗಿನ ವೈಸ್‍ರಾಯ್ ಲಾರ್ಡ್ ಲಿನ್‍ಲಿತ್‍ಗೋ ಅವರಿಗೆ ಸಲ್ಲುತ್ತದೆ. ಭಾರತೀಯರಿಗೆ ಉಚ್ಚರಿಸಲು ಸುಲಭಸಾಧ್ಯವಾದ ಪದವಿದು. ಅದೇ ಇಂದಿಗೂ ಉಳಿದು ಬಂದಿದೆ. ಇಷ್ಟು ಹೊತ್ತಿಗಾಗಲೇ ಆಕಾಶವಾಣಿ ಎಂಬ ಪದ ಚಾಲ್ತಿಯಲ್ಲಿತ್ತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಎಂ. ವಿ. ಗೋಪಾಲಸ್ವಾಮಿಯವರು 1935ರಲ್ಲಿ ಪ್ರಾಯೋಗಿಕ ಪ್ರಸಾರದಲ್ಲಿ ತೊಡಗಿದ್ದರು. ಅವರಲ್ಲಿದ್ದ ಪ್ರಸಾರಯಂತ್ರದ ಸಾಮಥ್ರ್ಯ 30 ವ್ಯಾಟ್ ಅದನ್ನು ತಮ್ಮ ಮನೆಯಲ್ಲಿಯೇ ಸ್ಥಾಪಿಸಿದರು. ಸ್ವಲ್ಪ ಕಾಲಾನಂತರ 250 ವ್ಯಾಟ್ ಸಾಮಥ್ರ್ಯದ ಪ್ರಸಾರ ಯಂತ್ರವನ್ನು ಪಡೆದರು. ಮೈಸೂರಿನ ಬಾನುಲಿ ಕೇಂದ್ರವನ್ನು ಆಕಾಶವಾಣಿ ಎಂದೇ ಹೆಸರಿಸಿದರು. ಮೈಸೂರು ಪುರಸಭೆ ಅವರಿಗೆ ಅನುದಾನ ನೀಡುತ್ತಿತ್ತು. ಇಂಗ್ಲಿಷ್ ಮತ್ತು ವಿದೇಶೀ ಸುದ್ದಿಸೇವೆ ಬಿಟ್ಟರೆ ಸಾಮಾನ್ಯವಾಗಿ ಎಲ್ಲ ಪ್ರಸಾರಗಳಲ್ಲೂ ಈಗ ಈ ಶಬ್ದವನ್ನೇ ಬಳಸಲಾಗುತ್ತಿದೆ. ಆಗ ಮೈಸೂರು ಕೇಂದ್ರಕ್ಕೆ ಖಾಸಗಿಯವರ ನೆರವೂ ಇತ್ತು. ಮೈಸೂರು ರಾಜ್ಯ ಸರ್ಕಾರ 1942ರಲ್ಲಿ ಅದನ್ನು ತಾನೇ ವಹಿಸಿಕೊಂಡಿತು.

ಬಡೋದೆಯ ಮಹಾರಾಜ ಗಾಯಕ್‍ವಾಡ್ 1939ರಲ್ಲಿ ಬಡೋದೆ ಪ್ರಸಾರ ಕೇಂದ್ರಕ್ಕೆ ಅಡಿಗಲ್ಲು ಹಾಕಿದರು. ಹೈದರಾಬಾದಿನ ನಿಜಾಮರು ಹೈದರಾಬಾದ್ ಮತ್ತು ಔರಂಗಾಬಾದ್‍ಗಳಲ್ಲಿ ಅದೇ ಕಾಲದಲ್ಲಿ ಎರಡು ಕೇಂದ್ರಗಳನ್ನೂ ನಿರ್ಮಿಸಿದರು. ತಿರುವಾಂಕೂರಿನ ಮಹಾರಾಜರು ತಿರುವನಂತಪುರದಲ್ಲಿ 5 ಕೆವಿ. ಸಾಮಥ್ರ್ಯದ ಮಧ್ಯಮ ತರಂಗ ಪ್ರಸಾರಯಂತ್ರವನ್ನು ನೆಲೆಗೊಳಿಸಿದರು.

ಎರಡನೆಯ ಮಹಾಯುದ್ಧ ಆರಂಭವಾಗುತ್ತಿದ್ದಂತೆ ಬಾನುಲಿಗೆ ಹೆಚ್ಚು ಮಹತ್ತ್ವ ದೊರಕಿತು. ಯುದ್ಧದ ಲಕ್ಷಣಗಳು 1935ರಲ್ಲಿಯೇ ಕಾಣಿಸಿಕೊಂಡಿದ್ದುವು. ಮಿಲಿಟರಿ ಆಯಕಟ್ಟಿನ ದೃಷ್ಟಿಯಿಂದ ಭಾರತದ ಪ್ರಸಾರ ವ್ಯವಸ್ಥೆ ಮುಖ್ಯವಾಗಿತ್ತು. ಸಂಪರ್ಕ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಒಲವು ತೋರಿದ್ದು ಈಗಲೇ. ಯುದ್ಧದ ಕಾರಣ ಶತ್ರುಗಳಿಂದ ತೊಂದರೆ ಆಗುವುದನ್ನು ತಪ್ಪಿಸಲು ತಂತೀ ಮಾರ್ಗದ ಮೂಲಕ ಕೇಂದ್ರದಿಂದ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವುದು ಯುಕ್ತವೆಂದು ಕಂಡುಬಂದಿತು. ಭಾರತದಲ್ಲಿ ಬಾನುಲಿ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ಬಿರುಸಿನ ಪ್ರಯತ್ನಗಳಾದುವು. ವಾಯುವ್ಯ ಪ್ರಾಂತ ಸರ್ಕಾರಕ್ಕೆ ಪ್ರಸಾರಯಂತ್ರಗಳನ್ನು ಎರವಲು ನೀಡಿದ ಮಾರ್ಕೋನಿ ಕಂಪನಿ ಗ್ರಾಮೀಣ ಪ್ರದೇಶಗಳಿಗಾಗಿ ಸಮುದಾಯ ರೇಡಿಯೊ ಸೆಟ್ಟುಗಳನ್ನು ನೀಡಲು ಮುಂದೆ ಬಂದಿತು. ಹಳ್ಳಿಗಳಿಗೆ ಬಾನುಲಿ ತಲುಪಿಸುವ ಮೊದಲ ಯತ್ನವಿದು. ಅದೇ ವರ್ಷ ಭಾರತೀಯ ಕೃಷಿ ಸಂಸ್ಥೆ ಅಲಹಾಬಾದಿನಲ್ಲಿ ಗ್ರಾಮೀಣ ಕಾರ್ಯಕ್ರಮಗಳ ಬಾನುಲಿ ಪ್ರಸಾರವನ್ನು ಆರಂಭಿಸಿತು. ಅದಾದ ಒಂದು ವರ್ಷಕ್ಕೆ ಡೆಹರಾಡೂನ್ ಹವ್ಯಾಸಿ ಪ್ರಸಾರ ಕ್ಲಬ್ ಬಾನುಲಿ ಪ್ರಸಾರವನ್ನು ಆರಂಭಿಸಿತು. ಸಾರ್ವಜನಿಕರಿಂದ ಚಂದಾ ಸಂಗ್ರಹಿಸಿ 1936 ಏಪ್ರಿಲ್ 6ರಂದು ಪ್ರಸಾರ ಕೈಗೊಳ್ಳಲಾಯಿತು. ಆದರೆ ಹಣದ ಮುಗ್ಗಟ್ಟಿನಿಂದ 1938ರಲ್ಲಿ ಈ ಕೇಂದ್ರಗಳನ್ನು ಮುಚ್ಚಲಾಯಿತು.

ಬಾನುಲಿ ಮಾಧ್ಯಮಕ್ಕೆ ಟೀಕಾಕಾರರು ಇರಲಿಲ್ಲ ಎಂದಲ್ಲ. ಅಂಥವರ ಪೈಕಿ ರಾಜಾಜಿ ಅವರು ಪ್ರಮುಖರು. ಆಗ ಮದ್ರಾಸ್ ಪ್ರಾಂತದ ಪ್ರಧಾನಿ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರು ಭಾರತದಲ್ಲಿ ಪ್ರಸಾರ ವ್ಯವಸ್ಥೆ ನೆಲೆ ಗೊಳಿಸುವುದರ ವಿರುದ್ಧ ಪ್ರಬಲವಾಗಿ ವಾದಿಸಿದರು. ಈ ನಡುವೆ ಅಂತಾರಾಷ್ಟ್ರೀಯ ಪ್ರಸಾರ ನಿಯಂತ್ರಣ ಮಂಡಲಿ ಭಾರತಕ್ಕೆ ತರಂಗಾಂತರಗಳನ್ನು ಮಂಜೂರು ಮಾಡಿತು. ದೆಹಲಿಯಲ್ಲಿ 1937 ಜನವರಿಯಲ್ಲಿ ಪ್ರಥಮ ಬಾರಿಗೆ ಭಾರತೀಯ ಬಾನುಲಿ ಕೇಂದ್ರ ನಿರ್ದೇಶಕರ ಸಮ್ಮೇಳನ ನಡೆಯಿತು. ಆ ವರ್ಷದ ಕೊನೆಯಲ್ಲಿ ಮೊದಲ ಹ್ರಸ್ವತರಂಗ ಪ್ರಸಾರಯಂತ್ರ ದೆಹಲಿಯಲ್ಲಿ ಕಾರ್ಯಾರಂಭಿಸಿತು. ಇಂಥ ಇತರ ಕೇಂದ್ರಗಳೆಂದರೆ ಮುಂಬಯಿ ಮತ್ತು ಕಲ್ಕತ್ತಾ. ಮಧ್ಯಮ ತರಂಗ ಪ್ರಸಾರ ಯಂತ್ರಗಳು ನೆಲೆಗೊಂಡ ನಗರಗಳು ಪೆಷಾವರ್, ಲಾಹೋರ್, ಲಕ್ನೋ ಮತ್ತು ಮದ್ರಾಸು.

ವಿದೇಶೀ ಪ್ರಸಾರವನ್ನು ದಾಖಲೆ ಮಾಡುವ ಅನುಶ್ರವಣ (ಮಾನಿಟರಿಂಗ್) ವಿಭಾಗ 1939ರಲ್ಲಿ ರಕ್ಷಣಾ ಅಧಿಕಾರಿಗಳ ನಿಯಂತ್ರಣದಲ್ಲಿ ಅಸ್ತಿತ್ವಕ್ಕೆ ಬಂದಿತು. ಯುದ್ಧಾನಂತರ ಈ ಕೇಂದ್ರವನ್ನು ಸಿಮ್ಲಾಗೆ ವರ್ಗಾಯಿಸಲಾಯಿತು. ವಿದೇಶೀ ಪ್ರಸಾರ ಕೂಡ ಈಗಲೇ ಆರಂಭವಾಯಿತು. ಮೊದಲ ಪ್ರಸಾರವಾದದ್ದು ಪುಷ್ತೊ ಭಾಷೆಯಲ್ಲಿ 1939 ಅಕ್ಟೋಬರ್ 1ರಂದು. ಕಾಲೇಜು ವಿದ್ಯಾರ್ಥಿಗಳಿಗಾಗಿ ಮದ್ರಾಸು ಕೇಂದ್ರ ಕಾರ್ಯಕ್ರಮವನ್ನು ರೂಪಿಸಿತು.

ರಾಷ್ಟ್ರ ಸ್ವಾತಂತ್ರ್ಯಗಳಿಸಿದಾಗ ಇದ್ದ ಬಾನುಲಿಕೇಂದ್ರಗಳ ಸಂಖ್ಯೆ ಒಂಬತ್ತು. ಅವುಗಳಲ್ಲಿ ದೆಹಲಿ, ಕಲ್ಕತ್ತಾ, ಮುಂಬಯಿ, ಮದ್ರಾಸು, ಲಕ್ನೋ ಮತ್ತು ತಿರುಚ್ಚಿ ಕೇಂದ್ರಗಳು ಭಾರತದಲ್ಲಿ ಉಳಿದರೆ ಲಾಹೋರ್, ಪೆಷಾವರ್ ಮತ್ತು ಢಾಕಾ ಕೇಂದ್ರಗಳು ಪಾಕಿಸ್ತಾನಕ್ಕೆ ಸೇರಿದುವು. ಮಹಾರಾಜರ ಆಡಳಿತದಲ್ಲಿದ್ದ ರಾಜ್ಯಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಂಡ ಬಳಿಕ ಹೈದರಾಬಾದ್, ಔರಂಗಾಬಾದ್, ತಿರುವನಂತಪುರ, ಬಡೋದೆ ಮತ್ತು ಮೈಸೂರು ಕೇಂದ್ರಗಳು ಆಕಾಶವಾಣಿಯ ಸ್ವಾಮ್ಯಕ್ಕೆ ಒಳಪಟ್ಟವು. ಪಂಜಾಬ್ ವಿಭಜನೆ ಪರಿಸ್ಥಿತಿಯಿಂದಾಗಿ ಅಲ್ಲಿ ಕೂಡಲೆ ಒಂದು ಆಕಾಶವಾಣಿ ಕೇಂದ್ರ ಸ್ಥಾಪಿಸಬೇಕಾದ ಅಗತ್ಯವಿತ್ತು. ಹೀಗೆ 1947 ನವೆಂಬರ್ 1ರಂದು ಜಲಂಧರ್ ಕೇಂದ್ರ ಉದಯವಾಯಿತು. ಪಾಕಿಸ್ಥಾನ ಕಾಶ್ಮೀರದ ಮೇಲೆ ಆಕ್ರಮಣ ನಡೆಸಿದಾಗ ಜಮ್ಮುವಿನಲ್ಲಿ ಡಿಸೆಂಬರ್ 1ರಂದು ಆಕಾಶವಾಣಿ ನಿಲಯವನ್ನು ಸ್ಥಾಪಿಸಲಾಯಿತು. ಹ್ರಸ್ವತರಂಗ ಕೇಂದ್ರವನ್ನು ನಗರದಲ್ಲಿ 1948 ಜುಲೈ 1ರಂದು ಸ್ಥಾಪಿಸಲಾಯಿತು.

ಸರ್ದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆ ದೇಶದಲ್ಲಿ ಆಕಾಶವಾಣಿ ಕೇಂದ್ರಗಳನ್ನು ಸ್ಥಾಪಿಸಲು ಒಂದು ಯೋಜನೆ ಕೈಗೊಂಡಿತು. ಇಲಾಖೆಯ ಎಂಟು ವರ್ಷಗಳ ಯೋಜನೆಯ ಅಂದಾಜು ವೆಚ್ಚ ರೂ 364 ಲಕ್ಷ. ಮಿತ ಸಾಮಥ್ರ್ಯದ ಪ್ರಸಾರಯಂತ್ರಗಳಿಗೆ ಆದ್ಯತೆ ನೀಡಲಾಯಿತು. 1950ರ ಸುಮಾರಿಗೆ ಬಾನುಲಿ ಕೇಂದ್ರಗಳ ಸಂಖ್ಯೆ ಇಪ್ಪತ್ತೈದನ್ನು ತಲಪಿತು. ಪ್ರಸಾರಕಾಲ 1947ರಲ್ಲಿ 26,342 ಗಂಟೆಗಳಿದ್ದರೆ 1950ರಲ್ಲಿ 60,000 ಗಂಟೆಗಳನ್ನು ತಲಪಿತು. ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಪ್ರಸಾರವಾಗುತ್ತಿತ್ತು. ಮಧ್ಯಮ ತರಂಗ ಪ್ರಸಾರ ದೇಶದ ಜನಸಂಖ್ಯೆಯ ಶೇಕಡಾ 21ರಷ್ಟನ್ನು ತಲಪಿತು. ಭೌಗೋಳಿಕವಾಗಿ ಶೇಕಡಾ 12ರಷ್ಟು ಪ್ರದೇಶವನ್ನು ಒಳಗೊಂಡಿತು. ರಾಜ್ಯಗಳ ರಾಜಧಾನಿಗಳ ಹೊಸ ಆಕಾಶವಾಣಿ ನಿಲಯಗಳನ್ನು ತೆರೆಯಲಾಯಿತು. ಇವಲ್ಲದೇ ಸಾಂಸ್ಕøತಿಕ ನಗರಗಳಾದ ಅಲಹಾಬಾದ್, ಅಮೃತಸರ, ಅಹಮದಾಬಾದ್, ಕಲ್ಲಿಕೋಟೆ, ಕಟಕ್, ಧಾರವಾಡ, ಗುವಾಹಾತಿ, ನಾಗಪುರ, ಪಾಟ್ನಾ, ಷಿಲ್ಲಾಂಗ್ ಮತ್ತು ವಿಜಯವಾಡ ಬಾನುಲಿ ಕೇಂದ್ರಗಳನ್ನು ಪಡೆದುವು. ಸುದ್ದಿಸೇವೆ ಮತ್ತು ವಿದೇಶಸೇವೆ ವಿಭಾಗಗಳನ್ನು 1948ರಲ್ಲಿ ಪ್ರತ್ಯೇಕಿಸಲಾಯಿತು. ಆಕಾಶವಾಣಿ 1950ರಲ್ಲಿ 11 ಭಾಷೆಗಳಲ್ಲಿ ವಾರಕ್ಕೆ 116 ಗಂಟೆಗಳ ಕಾಲ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿತ್ತು.

ಭಾರತದ ಸಂವಿಧಾನ 1950 ಜನವರಿ 26ರಂದು ಚಾಲ್ತಿಗೆ ಬಂದಿತು. ಅದರಂತೆ ಆಕಾಶವಾಣಿ ಪೂರ್ಣವಾಗಿ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿತು. ಪಂಚವಾರ್ಷಿಕ ಯೋಜನೆಗಳು ಆರಂಭವಾಗಿ ಅವುಗಳ ಅಂಗವಾಗಿ ಆಕಾಶವಾಣಿಯನ್ನು ಕ್ರಮೇಣ ವಿಸ್ತಾರಗೊಳಿಸಲಾಯಿತು. ಕಲ್ಕತ್ತಾ, ಮುಂಬಯಿ, ಅಹಮದಾಬಾದ್, ಜಲಂಧರ್ ಮತ್ತು ಲಕ್ನೋ ಕೇಂದ್ರಗಳು 50 ಕಿಲೋವ್ಯಾಟ್ ಮಧ್ಯಮ ತರಂಗ ಪ್ರಸಾರಯಂತ್ರಗಳನ್ನು ಪಡೆದುವು. ಪುಣೆ, ರಾಜಕೋಟೆ, ಇಂದೂರು, ಬೆಂಗಳೂರು, ಜೈಪುರ ಮತ್ತು ಸಿಮ್ಲಾ ನಗರಗಳಲ್ಲಿ ಬಾನುಲಿ ಕೇಂದ್ರಗಳನ್ನು ತೆರೆಯಲಾಯಿತು, ಜೊತೆಗೆ 14,000 ಸಮುದಾಯ ರೇಡಿಯೊ ಸೆಟ್ಟುಗಳನ್ನು ಸ್ಥಾಪಿಸಲಾಯಿತು, ಜೊತೆಗೆ ಬೆಂಗಳೂರು ಕೇಂದ್ರ 1955 ನವೆಂಬರ್ 2ರಿಂದ ತನ್ನ ಕಾರ್ಯಕ್ರಮಗಳನ್ನು ಬಿತ್ತರಿಸಿತು. ಜೈಪುರ ಮತ್ತು ಅಜ್ಮೀರ್‍ಗಳನ್ನು ಡಿಸೆಂಬರ್ 11ರಂದು ಒಟ್ಟುಗೂಡಿಸಲಾಯಿತು. ಈ ಮುನ್ನ 1952ರಲ್ಲಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮವನ್ನು ರೂಪಿಸಲಾಯಿತು. ಮರುವರ್ಷ ರಾಷ್ಟ್ರೀಯ ಭಾಷಣ ಮತ್ತು ಚರ್ಚಾ ಕಾರ್ಯಕ್ರಮಗಳನ್ನು ಬಿತ್ತರಿಸಲಾಯಿತು. ಮೊದಲ ಬಾನುಲಿ ಸಂಗೀತ ಸಮ್ಮೇಳನ 1953 ಅಕ್ಟೋಬರ್ 23 ರಂದು ನಡೆಯಿತು. ಸರ್ದಾರ್ ಪಟೇಲ್ ಸ್ಮಾರಕ ಭಾಷಣಗಳು ಮತ್ತು ಬಾನುಲಿ ಸುದ್ದಿ ನಿರೂಪಣೆ 1955ರಲ್ಲಿ ಪ್ರಾರಂಭವಾದುವು.

ಮೊದಲ ಪಂಚವಾರ್ಷಿಕ ಯೋಜನೆ ಮುಗಿಯುವ ವೇಳೆಗೆ ಇದ್ದ 25 ಬಾನುಲಿ ಕೇಂದ್ರಗಳು ದೇಶದ ಶೇಕಡಾ 31ರಷ್ಟು ಪ್ರದೇಶ ಮತ್ತು ಶೇಕಡಾ 41ರಷ್ಟು ಜನಸಂಖ್ಯೆಯನ್ನು ಆವರಿಸಿಕೊಂಡಿದ್ದುವು. ಅಂದರೆ ಸುಮಾರು 15.5 ಲಕ್ಷ ಕಿಮೀ ಪ್ರದೇಶ ಮತ್ತು ಸುಮಾರು 22 ಕೋಟಿ ಜನರನ್ನು ತಲಪುತ್ತಿದ್ದುವು. ಹೊಸ ಪ್ರಸಾರ ಕೇಂದ್ರಗಳು ಹುಟ್ಟಿದ ಹಾಗೆ ಹಳೆಯ ಕೆಲವು ಕೇಂದ್ರಗಳನ್ನು ಸರ್ಕಾರ ಮುಚ್ಚಿತು. ಗೌಹಾತಿ ಕೇಂದ್ರವನ್ನು ಪ್ರಾರಂಭಿಸಿದಾಗ ಷಿಲ್ಲಾಂಗ್ ಬಾನುಲಿ ಕೇಂದ್ರವನ್ನೂ ಅಹಮದಾಬಾದ್ ಕೇಂದ್ರ ಆದಾಗ ಬಡೋದೆಯ ಕೇಂದ್ರವನ್ನೂ ಜಲಂಧರ ಕೇಂದ್ರ ಆದಾಗ ಅಮೃತಸರ ಕೇಂದ್ರವನ್ನೂ ಬೆಂಗಳೂರು ಕೇಂದ್ರ ಆದಾಗ ಮೈಸೂರು ಕೇಂದ್ರವನ್ನೂ ಮುಚ್ಚಲಾಯಿತು.

ವಿವಿಧ ಭಾರತಿ ಕಾರ್ಯಕ್ರಮವನ್ನು 1957 ಮಾರ್ಚ್ 22ರಂದು ಮುಂಬಯಿಯಲ್ಲಿ ಉದ್ಘಾಟಿಸಲಾಯಿತು. ಸ್ವಲ್ಪ ಕಾಲಾನಂತರ ಮದ್ರಾಸಿನಲ್ಲಿಯೂ ವಿವಿಧ ಭಾರತಿ ಪ್ರಸಾರ ಕೇಂದ್ರವನ್ನು ಆರಂಭಿಸಲಾಯಿತು. ವಿವಿಧ ಭಾರತಿ ಲಘು ಸಂಗೀತ ಕಾರ್ಯಕ್ರಮವನ್ನು ಬಿತ್ತರಿಸುತ್ತದೆ. ಗೌಹಾತಿ ಮತ್ತು ರಾಂಚಿ ಕೇಂದ್ರಗಳಿಂದ 29 ವಿವಿಧ ಗಿರಿಜನ ಬುಡಕಟ್ಟುಗಳಿಗಾಗಿ ಕಾರ್ಯಕ್ರಮಗಳನ್ನು ಪ್ರಸಾರಿಸಲಾಗುತ್ತಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ದೆಹಲಿಯಿಂದ 1959 ಆಗಸ್ಟ್ 15ರಂದು ವಿಶೇಷ ಪ್ರಸಾರಸೇವೆ ಪಡೆದುವು. ರೇಡಿಯೊ ಸಿಲೋನ್ ಪ್ರಸಾರಕ್ಕಿದ್ದ ಜನಪ್ರಿಯತೆಯನ್ನು ಕಡಿಮೆಗೊಳಿಸಿ ಭಾರತೀಯ ಪ್ರಸಾರಕ್ಕೆ ದೇಶದ ಶ್ರೋತೃಗಳನ್ನು ಸೆಳೆಯುವುದೇ ವಿವಿಧ ಭಾರತಿ ಕಾರ್ಯಕ್ರಮದ ಉದ್ದೇಶ.

ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ ರೂ 5.6 ಕೋಟಿಯನ್ನು ಬಾನುಲಿ ವ್ಯವಸ್ಥೆಗಾಗಿ ವೆಚ್ಚ ಮಾಡಲಾಯಿತು. ದೇಶದ ಜನಸಂಖ್ಯೆಯ ಶೇಕಡಾ 55ರಷ್ಟು ಮತ್ತು ಭೂಪ್ರದೇಶದ ಶೇಕಡಾ 37ರಷ್ಟು ಭಾಗ ಮಧ್ಯಮ ತರಂಗ ಪ್ರಸಾರವ್ಯಾಪ್ತಿಯಲ್ಲಿ ಬಂದುವು. ಒಪೆರಾ, ನಾಟಕ, ಶಬ್ದಚಿತ್ರ ಮತ್ತು ಶಾಸ್ತ್ರೀಯ ಸಂಗೀತಗಳ ರಾಷ್ಟ್ರೀಯ ಕಾರ್ಯಕ್ರಮಗಳು ಪ್ರಸಾರವಾದುವು. ಗೋವಾ ವಿಮೋಚನೆಯೊಡನೆ 1962 ಜನವರಿ 9ರಂದು ಅಲ್ಲಿಯ ಬಾನುಲಿಕೇಂದ್ರ ಆಕಾಶವಾಣಿಯ ನಿಯಂತ್ರಣದ ಕಕ್ಷೆಗೆ ಸೇರಿತು. ಇದರಿಂದ ಪ್ರಸಾರಕೇಂದ್ರಗಳ ಸಂಖ್ಯೆ 61ನ್ನು ತಲಪಿತು.

ಎರಡನೆಯ ಪಂಚವಾರ್ಷಿಕ ಯೋಜನೆ ಕೊನೆಗೊಂಡಾಗ ಭಾರತದಲ್ಲಿ 28 ಬಾನುಲಿ ಕೇಂದ್ರಗಳು ಮತ್ತು ಮೂರು ಸ್ಟುಡಿಯೋ ಕೇಂದ್ರಗಳು ಇದ್ದುವು ಬಹುತೇಕ ಕೇಂದ್ರಗಳು ಉತ್ತರ ವಲಯದಲ್ಲಿ, ಅತ್ಯಂತ ಕಡಿಮೆ ಎಂದರೆ ಪೂರ್ವವಲಯದಲ್ಲಿ. ಮೂರನೆಯ ಯೋಜನೆಯಲ್ಲಿ (1961-66) ಮಧ್ಯಮ ತರಂಗದ ಇನ್ನಷ್ಟು ಉಪಕೇಂದ್ರಗಳನ್ನು ಸ್ಥಾಪಿಸಲಾಯಿತು. ಯೋಜನಾಂತ್ಯದಲ್ಲಿ 34 ಮುಖ್ಯಕೇಂದ್ರಗಳು, 17 ಉಪಕೇಂದ್ರಗಳು, 26 ವಿವಿಧ ಭಾರತಿ ಪ್ರಸಾರ ಕೇಂದ್ರಗಳು, 4 ಸ್ಟುಡಿಯೋಗಳು ಮತ್ತು 49 ಗ್ರಹಣ ಕೇಂದ್ರಗಳು ಆಕಾಶವಾಣಿ ಜಾಲದಲ್ಲಿದ್ದುವು. ಒಟ್ಟು 82 ಮಧ್ಯಮ ಮತ್ತು 28 ಹ್ರಸ್ವ ತರಂಗ ಪ್ರಸಾರ ಯಂತ್ರಗಳಿದ್ದುವು. ಪ್ರಸಾರ ಸಾಮಥ್ರ್ಯದ ಮೊತ್ತ 1961 ಕೆವಿ. ಈ ವೇಳೆಗೆ ಆಕಾಶವಾಣಿಯ ಕಾರ್ಯಕ್ರಮಗಳು ಜನಸಂಖ್ಯೆಯ ಶೇಕಡಾ 75ರಷ್ಟು ಮತ್ತು ದೇಶದ ಭೂಭಾಗದ ಶೇಕಡಾ 60ರಷ್ಟನ್ನು ತಲಪಲು ಸಾಧ್ಯವಾಯಿತು. ಹತ್ತು ಬಾನುಲಿ ಕೇಂದ್ರಗಳಲ್ಲಿ ಕೃಷಿ ಮತ್ತು ಗೃಹ ವಿಭಾಗಗಳನ್ನು ತೆರೆಯಲಾಯಿತು. ಗ್ರಾಮೀಣ ಕಾರ್ಯಕ್ರಮಗಳನ್ನು ಎಲ್ಲ ಆಕಾಶವಾಣಿ ನಿಲಯಗಳಿಂದ 1965ರಲ್ಲಿ ಪ್ರಸರಿಸಲು ಕ್ರಮ ಕೈಗೊಳ್ಳಲಾಯಿತು. ಮೂರನೆಯ ಯೋಜನಾವಧಿಯಲ್ಲಿ ಬಾನುಲಿಗಾಗಿ ರೂ 7.64 ಕೋಟಿಯನ್ನು ನಿಗದಿಗೊಳಿಸಲಾಗಿತ್ತು. ಪ್ರಸಾರ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಪರಿಶೀಲಿಸಿ ಶೀಫಾರಸುಗಳನ್ನು ಮಾಡಲು ಭಾರತ ಸರ್ಕಾರ ಅಶೋಕ ಚಂದಾ ಅವರ ನೇತೃತ್ವದಲ್ಲಿ 1964ರಲ್ಲಿ ಸಮಿತಿಯೊಂದನ್ನು ರಚಿಸಿತು. ಇದು ತನ್ನ ವರದಿಯನ್ನು 1966ರಲ್ಲಿ ಸಲ್ಲಿಸುತ್ತ ಬಾನುಲಿ ಮತ್ತು ದೂರದರ್ಶನಗಳಿಗೆ ಪ್ರತ್ಯೇಕ ಸ್ವಾಯತ್ತ ಸಂಸ್ಥೆಗಳನ್ನು ರೂಪಿಸಬೇಕೆಂದು ಶಿಫಾರಸು ಮಾಡಿತು. ಇದನ್ನು ಸರ್ಕಾರ 1970ರಲ್ಲಿ ಔಪಚಾರಿಕವಾಗಿ ತಿರಸ್ಕರಿಸಿತು. .ಆದರೆ ವಾಣಿಜ್ಯ ಪ್ರಸಾರಕ್ಕೆ ಸಂಬಂಧಿಸಿದ ಶಿಫಾರಸನ್ನು ಒಪ್ಪಿಕೊಂಡಿತು. ಆಕಾಶವಾಣಿ ತನ್ನ ವಾಣಿಜ್ಯ ಸೇವೆಯನ್ನು 1967 ನವೆಂಬರಿನಲ್ಲಿ ಮುಂಬಯಿ-ನಾಗಪುರ-ಪುಣೆ ಕೇಂದ್ರಗಳಿಂದ ಬಿತ್ತರಿಸಿತು. ಇದು ಕ್ರಮೇಣ ದೆಹಲಿ, ಮದ್ರಾಸು ಮತ್ತು ತಿರುಚ್ಚಿರಾಪಳ್ಳಿಯ ಕೇಂದ್ರಗಳಿಗೆ 1969ರಲ್ಲಿ ವಿಸ್ತøತಗೊಂಡಿತು. ಇದಾದ ತರುವಾಯದ ಮೂರು ವಾರ್ಷಿಕ ಯೋಜನೆಗಳಲ್ಲಿ ಮಧ್ಯಮ ತರಂಗದ ಇನ್ನೂ 11 ಆಕಾಶವಾಣಿ ನಿಲಯಗಳನ್ನು ಸ್ಥಾಪಿಸಲಾಯಿತು.

ನಾಲ್ಕನೆಯ ಯೋಜನೆಯ ಅವಧಿಯಲ್ಲಿ (1969-74) ವಿದೇಶಪ್ರಸಾರಕ್ಕಾಗಿ ಅತಿಬಲಿಷ್ಠ ಪ್ರಸಾರಯಂತ್ರಗಳನ್ನು ಕಲ್ಕತ್ತ ಮತ್ತು ರಾಜಕೋಟೆಗಳಲ್ಲಿ ಸ್ಥಾಪಿಸಲಾಯಿತು. ಶಕ್ತ ಮಧ್ಯಮ ತರಂಗ ಪ್ರಸಾರಯಂತ್ರಗಳನ್ನು ಕೋಹಿಮಾ, ಜೋಧಪುರ ಮತ್ತು ಸಿಮ್ಲಾ ನಗರಗಳು ಪಡೆದುವು. ಗಡಿಪ್ರದೇಶಗಳಲ್ಲಿ ಭಾರತದ ಪ್ರಸಾರವನ್ನು ಬಲಪಡಿಸಲಾಯಿತು. ಎತ್ತರದ ಪ್ರದೇಶಗಳಾದ ಲೇಹ್ ಮತ್ತು ತವಾಂಗ್ ಸಹ ಪ್ರಸಾರಕೇಂದ್ರಗಳನ್ನು ಪಡೆದುವು. ವಿವಿಧ ಭಾರತಿ ವಿಭಾಗವನ್ನು 1971ರಲ್ಲಿ ದೆಹಲಿಯಿಂದ ಮುಂಬಯಿಗೆ ವರ್ಗಾಯಿಸಲಾಯಿತು. ಇದೇ ವೇಳೆ ಭಾರತ ರೇಡಿಯೋ ಸೆಟ್ಟುಗಳ ನಿರ್ಮಾಣದಲ್ಲಿ ಸ್ವಯಂಪೂರ್ಣತೆ ಸಾಧಿಸಿತು. ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಕಾರ್ಖಾನೆ ಬೇಕಾದ ವಸ್ತುಗಳನ್ನು ತಯಾರಿಸುತ್ತಿದೆ.

ಆಕಾಶವಾಣಿಯ ತಾಂತ್ರಿಕ ವಿಭಾಗ ಸಹ ಪ್ರಗತಿಪಥದಲ್ಲಿ ಮುನ್ನಡೆದಿದೆ. ವಿದೇಶೀ ನೆರವಿಲ್ಲದೆಯೇ ಆಕಾಶವಾಣಿಯ ತಂತ್ರವಿದರು. ಪ್ರಸಾರ ನಿರ್ವಹಣೆಯಲ್ಲಿ ಸ್ವಸಾಮಥ್ರ್ಯಗಳಿಸಿದ್ದಾರೆ ಮತ್ತು ಹ್ರಸ್ವತರಂಗ ಯಂತ್ರಗಳ ಪ್ರಸಾರದ ಮೇಲೆ ಹತೋಟಿ ಸಾಧಿಸಿದ್ದಾರೆ. ಆಕಾಶವಾಣಿಯ ಸಂಶೋಧನ ವಿಭಾಗ ರಷ್ಯಾದ ಸ್ಪುಟ್ನಿಕ್ 1 ಉಪಗ್ರಹದಿಂದ 1957 ಅಕ್ಟೋಬರಿನಲ್ಲಿ ಬೀಪ್ ಬೀಪ್ ಸಂಜ್ಞೆಗಳನ್ನು ತೋಡಪುರ್ ಕೇಂದ್ರದಲ್ಲಿ ಗ್ರಹಿಸಿ ತನ್ನ ಕೌಶಲವನ್ನು ಪ್ರದರ್ಶಿಸಿತು. ಹಾಗೆಯೇ 1963 ಜೂನ್ 20ರಂದು ಗಗನಯಾತ್ರಿ ರಷ್ಯಾದ ವ್ಯಾಲೆಂಟೀನಾ ತೆರೆಷ್ಕೊವಾ ಅವರ ಧ್ವನಿಯನ್ನು ದಾಖಲೆ ಮಾಡಿಕೊಂಡ ಪ್ರಥಮ ಯಶಸ್ಸು ಭಾರತೀಯ ಆಕಾಶವಾಣಿಗೆ ಸೇರಿತು. ವಿಶೇಷ ಧ್ವನಿ ದಾಖಲು ಯಂತ್ರಗಳನ್ನು ಬಳಸಿ ಆಕಾಶ ನೌಕೆಗಳ ಸಂಜ್ಞೆಗಳನ್ನು ಗುರುತಿಸಿದ್ದು ತೋಡಪುರ ಕೇಂದ್ರ.

ಆಕಾಶವಾಣಿಯ ಜಾಲ ವಿಸ್ತರಿಸಿದಂತೆ ಅದರ ಎಂಜಿನಿಯರಿಂಗ್ ವಿಭಾಗವನ್ನು ನಾಲ್ಕುವಲಯಗಳಾಗಿ ವಿಭಜಿಸಲಾಯಿತು. ಅದರಂತೆ ಉತ್ತರ, ದಕ್ಷಿಣ, ಪೂರ್ವ, ಮತ್ತು ಪಶ್ಚಿಮ ಪ್ರಾದೇಶಿಕ ವಲಯಗಳು ಉದಯವಾದುವು. ಮುಂಬಯಿ ನಗರದಲ್ಲಿ 1976ರಲ್ಲಿ ಪಶ್ಚಿಮವಲಯದ ಕೇಂದ್ರ ಕಛೇರಿಯನ್ನು ತೆರೆಯಲಾಯಿತು. ಸ್ವಲ್ಪಕಾಲದಲ್ಲೇ ಕಲ್ಕತ್ತೆಯಲ್ಲಿ ಪೂರ್ವವಲಯದ ಕಛೇರಿಯನ್ನು ಆರಂಭಿಸಲಾಯಿತು. ಕಾರ್ಯಕ್ರಮ ಸಲಹಾ ಸಮಿತಿಗಳನ್ನು ರಾಜ್ಯಗಳ ರಾಜಧಾನಿಗಳಲ್ಲಿಯ ಆಕಾಶವಾಣಿ ನಿಲಯಗಳಿಗೆ ಮಾತ್ರ ನೇಮಿಸಲಾಗುತ್ತಿತ್ತು. ಆಯಾ ರಾಜ್ಯದ ವಾರ್ತಾಮಂತ್ರಿ ಇದಕ್ಕೆ ಅಧ್ಯಕ್ಷರಾಗುತ್ತಿದ್ದರು. ವಿಧಾನಸಭೆಯ ವಿರೋಧಪಕ್ಷದ ನಾಯಕರು, ಇಬ್ಬರು ವಿಧಾನಸಭಾ ಸದಸ್ಯರು, ಇಬ್ಬರು ಸಂಸತ್ ಸದಸ್ಯರು, 12 ಜನ ವಿಷಯ ತಜ್ಞರು ಮತ್ತು ಕೆಲವು ಮಂದಿ ಪದನಿಮಿತ್ತ ಸದಸ್ಯರು ಸಲಹಾ ಸಮಿತಿಯಲ್ಲಿರುತ್ತಿದ್ದರು. ಈ ಸಭೆ ಸೇರುತ್ತಿದ್ದುದೇ ಅಪರೂಪ. ಆದ್ದರಿಂದ ಕಾರ್ಯಕ್ರಮ ಸಲಹಾಸಮಿತಿಗಳನ್ನು ಪ್ರತಿಯೊಂದು ಆಕಾಶವಾಣಿ ಕೇಂದ್ರದಲ್ಲೂ ರಚಿಸಲು ನಿರ್ಧರಿಸಲಾಯಿತು. ಪ್ರತಿಯೊಂದು ಸಮಿತಿಯಲ್ಲೂ 45 ಜನರನ್ನು ಸದಸ್ಯರಾಗಿ ನೇಮಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮಗಳ ವಿಮರ್ಶೆ ನಡೆಸುವುದು ಸಮಿತಿಯ ಕಾರ್ಯ. ಇದ್ದ 83 ಕೇಂದ್ರಗಳ ಪೈಕಿ 1977ರಲ್ಲಿ ಆರು ಪ್ರಸಾರನಿಲಯಗಳಲ್ಲಿ ಮಾತ್ರ ಸಲಹಾಸಮಿತಿಗಳು ಕಾರ್ಯಾರಂಭ ಮಾಡಿದುವು. ಯುವ ಪ್ರತಿಭೆ ಗುರುತಿಸಲು ಸಹಾಯಕವಾಗುವಂತೆ ಯುವವಾಣಿ ಕಾರ್ಯಕ್ರಮವನ್ನು 1973ರಲ್ಲಿ ಪ್ರಸಾರಪಟ್ಟಿಯಲ್ಲಿ ಸೇರಿಸಲಾಯಿತು. ಕಾಲಕ್ರಮೇಣ ಕಾರ್ಯಕ್ರಮಗಳ ವೈವಿಧ್ಯ ಜಾಸ್ತಿ ಆಯಿತು. ಸೇನಾಪಡೆ, ಗಡಿಪ್ರದೇಶ, ಕಾರ್ಖಾನೆ ಕಾರ್ಮಿಕರು, ಗುಡ್ಡಗಾಡು ಜನರು ಮತ್ತು ಇತರರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

ಆಂತರಿಕ ತುರ್ತುಪರಿಸ್ಥಿತಿ 1975 ಜೂನ್ 25ರಂದು ಜಾರಿಗೆ ಬಂದಾಗ ಆಕಾಶವಾಣಿಯ ನೀತಿ ಸಂಹಿತೆಯನ್ನು ಕೈಬಿಟ್ಟು ಪ್ರಸಾರ ವ್ಯವಸ್ಥೆಯನ್ನು ಪೂರ್ವ ಪರಿಶೀಲನೆಗೆ ಒಳಪಡಿಸಲಾಯಿತು. ಜನತಾ ಸರ್ಕಾರ 1977 ಮಾರ್ಚ್‍ನಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನೀತಿಸಂಹಿತೆಯನ್ನು ಮತ್ತೆ ಜಾರಿಗೆ ತರಲಾಯಿತು. ದೂರದರ್ಶನವನ್ನು ಆಕಾಶವಾಣಿಯಿಂದ 1976 ಏಪ್ರಿಲ್ 1ರಂದು ಪ್ರತ್ಯೇಕಿಸಿ ದೂರದರ್ಶನವೆಂದು ಹೆಸರಿಸಲಾಯಿತು.

ಆಕಾಶವಾಣಿ ಈಗ ಸುಮಾರು 242 ಸುದ್ದಿಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಇವು 37 ಭಾಷೆ ಮತ್ತು 34 ಉಪಭಾಷೆಗಳಲ್ಲಿ ದೆಹಲಿ ಹಾಗೂ 34 ಪ್ರಾದೇಶಿಕ ಕೇಂದ್ರಗಳಿಂದ ಒಳನಾಡು ಮತ್ತು ಹೊರದೇಶ ಸೇವೆಗಳಲ್ಲಿ ಪ್ರಸಾರ ಆಗುತ್ತಿವೆ. ಸಣ್ಣ ಪತ್ರಿಕೆಗಳಿಗಾಗಿ ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ನಿಧಾನಗತಿಯ ಸುದ್ದಿ ಪ್ರಸಾರವಾಗುತ್ತಿತ್ತು. ಆಕಾಶವಾಣಿ ಈಗ ಭಾಷಾ ಕಲಿಕೆಯ ಕಾರ್ಯಕ್ರಮಗಳನ್ನು ಕೂಡ ಬಿತ್ತರಿಸುತ್ತದೆ. ಹಿಂದಿಯೇತರ ರಾಜ್ಯಗಳ ಜನರಿಗಾಗಿ ಹಿಂದಿಯಲ್ಲಿ ನಿಯತವಾಗಿ ದಕ್ಷಿಣ ರಾಜ್ಯಗಳ ಹಾಗೂ ಇತರ ಹಿಂದಿಯೇತರ ಕೇಂದ್ರಗಳಿಂದ ಭಾಷಾಪಾಠವನ್ನು 1669ರಿಂದ ಪ್ರಸರಿಸುತ್ತಿದೆ. ಹಾಗೆಯೇ ಹಿಂದೀ ಜನರಿಗಾಗಿ ಹಿಂದೀ ಬಾನುಲಿ ಕೇಂದ್ರಗಳು ಇತರ ಭಾರತೀಯ ಭಾಷೆಗಳಲ್ಲಿ ಕಲಿಸುವ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ. ಉದಾಹರಣೆಗೆ ಪಾಟ್ನಾ ಬಾನುಲಿ ಕೇಂದ್ರ ತಮಿಳು, ತೆಲುಗು, ಮರಾಠಿ, ಮಲಯಾಳಮ್, ಬಂಗಾಳಿ ಪಂಜಾಬಿ ಭಾಷೆಗಳನ್ನು ಕಲಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ಜೈಪುರ ಕೇಂದ್ರ ಕನ್ನಡ, ತಮಿಳು ಮತ್ತು ಬಂಗಾಳಿ ಪಾಠಗಳನ್ನು ಹಾಗೂ ದೆಹಲಿ ಕೇಂದ್ರ ಗುಜರಾತಿ, ಬಂಗಾಳಿ, ಒರಿಯಾ, ತಮಿಳು ಮತ್ತು ಮರಾಠಿ ಭಾಷಾಪಾಠಗಳನ್ನು ಪ್ರಸಾರ ಮಾಡುತ್ತಿವೆ. ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳು ಉರ್ದು ಪಾಠಗಳನ್ನು ಬಿತ್ತರಿಸುತ್ತಿದೆ.

ಹದಿನಾರು ಮತ್ತು ಇಪ್ಪತ್ತನಾಲ್ಕು ವರ್ಷಗಳ ನಡುವೆ ಇರುವ ಯುವಕಲಾಕಾರರಿಗಾಗಿ ಪ್ರತಿವರ್ಷ ಸಂಗೀತಸ್ಪರ್ಧೆ ನಡೆಯುತ್ತದೆ. ಕಾರ್ಯಕ್ರಮಗಳನ್ನು ಸುಧಾರಿಸುವ ಸಲುವಾಗಿ ಆಕಾಶವಾಣಿ ನಾಟಕ, ನುಡಿಚಿತ್ರ, ಸಂಗೀತ, ಯುವವಾಣಿ ಮತ್ತಿತರ ಕಾರ್ಯಕ್ರಮಗಳಿಗಾಗಿ ವಾರ್ಷಿಕ ಪ್ರಶಸ್ತಿ ಯೋಜನೆಯೊಂದನ್ನು 1978ರಿಂದ ಹಮ್ಮಿಕೊಂಡಿದೆ. ಹವ್ಯಾಸಿ ಪ್ರಸಾರಕರಿಗಾಗಿ ಭಾರತದಲ್ಲಿ ಸಂಪರ್ಕ ಖಾತೆ 24 ಅನುಮತಿ ಪತ್ರಗಳನ್ನು ನೀಡಿದೆ. ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಈಗ ದೇಶದ ನಾಲ್ಕು ಕೇಂದ್ರಗಳಲ್ಲಿ ಎಫ್ ಎಮ್ (ಫ್ರಿಕ್ವೆನ್ಸಿ ಮಾಡ್ಯುಲೇಷನ್) ಬಾನುಲಿ ನಿಲಯಗಳಿವೆ : ಮದ್ರಾಸು, ದೆಹಲಿ, ಮುಂಬಯಿ ಮತ್ತು ಕಲ್ಕತ್ತಾ. ಮೊದಲ ಎಫ್‍ಎಮ್ ಕೇಂದ್ರ ಮದ್ರಾಸಿನಲ್ಲಿ (ನೋಡಿ- ಬಾನುಲಿ) 1977 ಜುಲೈ ತಿಂಗಳಲ್ಲಿ ಸ್ಥಾಪನೆಯಾಯಿತು.

ದೂರದರ್ಶನ : ಭಾರತದಲ್ಲಿ ಪ್ರಾಯೋಗಿಕ ದೂರದರ್ಶನ ಪ್ರಸಾರ 1959 ಸೆಪ್ಟೆಂಬರ್ 15ರಂದು ದೆಹಲಿಯಲ್ಲಿ ಆರಂಭವಾಯಿತು. ಯುನೆಸ್ಕೂ ನೆರವಿನ ಈ ಯೋಜನೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿತ್ತು. ಮೊದಲಲ್ಲಿ 21 ವಯಸ್ಕರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಕೇಂದ್ರಗಳಲ್ಲಿ ಸಮುದಾಯ ದೂರದರ್ಶನ ಸೆಟ್ಟುಗಳನ್ನು ಸ್ಥಾಪಿಸಲಾಯಿತು. ಪ್ರತಿಯೊಂದು ಕೇಂದ್ರದಲ್ಲೂ ಒಂದು ಟೆಲಿಕ್ಲಬ್ ಸ್ಥಾಪನೆ ಆಯಿತು. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಒಂದು ಗಂಟೆ ಕಾಲ ಭಾಷಣ, ನಾಟಕ, ನೃತ್ಯ, ಸಂಗೀತ ಮುಂತಾದ ಕಾರ್ಯಕ್ರಮಗಳನ್ನು ದೆಹಲಿ ದೂರದರ್ಶನದಲ್ಲಿ ನೋಡಬಹುದಿತ್ತು. ಸ್ವಲ್ಪ ಕಾಲಾನಂತರ ಯುನೆಸ್ಕೊ 45 ಸೆಟ್ಟುಗಳನ್ನು ನೀಡಿದಾಗ ಅವನ್ನು ಪ್ರೌಢಶಾಲೆಗಳಿಗೆ ಹಂಚಲಾಯಿತು. ರಸ್ತೆ ನಿಯಮಪಾಲನೆ, ಸಮುದಾಯ ಆರೋಗ್ಯ, ಉತ್ತಮ ನಡವಳಿಕೆ, ಆಹಾರ ಕಲಬೆರಕೆ, ಸಾರ್ವಜನಿಕ ಆಸ್ತಿಗೆ ಧಕ್ಕೆ ಮತ್ತು ನಗರಯೋಜನೆ ಇವುಗಳಿಗೆ ಸಂಬಂಧಿಸಿದ

ಕಾರ್ಯಕ್ರಮಗಳನ್ನು 1960 ಡಿಸೆಂಬರ್ ಮತ್ತು 1961 ಮೇ ನಡುವೆ ಬಿತ್ತರಿಸಲಾಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನದ ಫೋರ್ಡ್ ಪ್ರತಿಷ್ಠಾನ ಶಾಲಾ ದೂರದರ್ಶನ ಕಾರ್ಯಕ್ರಮದಲ್ಲಿ 1961ರಿಂದ ನಾಲ್ಕು ವರ್ಷಗಳ ಕಾಲ ಸಹಾಯ ನೀಡಲು ಸುದ್ದಿ ಮತ್ತು ಪ್ರಸಾರ ಇಲಾಖೆಯೊಡನೆ ಒಪ್ಪಂದ ಮಾಡಿಕೊಂಡಿತು. ಇದರಂತೆ 1965ರಲ್ಲಿ 600 ಸೆಟ್ಟುಗಳನ್ನು ಪ್ರೌಢಶಾಲೆಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಎರಡನೆಯ ಪೂರ್ಣ ದೂರದರ್ಶನ ಕೇಂದ್ರ ಚಾಲ್ತಿಗೆ ಬರಲು ಬಹಳಷ್ಟು ವರ್ಷಗಳೇ ಹಿಡಿದುವು. ಈ ಕೇಂದ್ರ ಮುಂಬಯಿಯಲ್ಲಿ 1972 ಅಕ್ಟೋಬರ್ 2ರಂದು ಪ್ರಾರಂಭಿಸಲಾಯಿತು. ಮೂರನೆಯ ಕೇಂದ್ರವನ್ನು ಶ್ರೀನಗರದಲ್ಲಿ 1973 ಜನವರಿ 26ರಂದು ಪ್ರಾರಂಭಿಸಲಾಯಿತು. ಅಮೃತಸರ ಮರುಪ್ರಸಾರ ಕೇಂದ್ರ ಅದೇ ವರ್ಷ ಸೆಪ್ಟೆಂಬರ್ 29ರಂದು ಮತ್ತು ಪುಣೆ ಮರುಪ್ರಸಾರ ನಿಲಯ ಅಕ್ಟೋಬರ್ 2ರಂದು ಅಸ್ತಿತ್ವಕ್ಕೆ ಬಂದುವು. ಕಲ್ಕತ್ತಾ ಮತ್ತು ಮದ್ರಾಸು 1975ರಲ್ಲಿ ಮಸ್ಸೂರಿ 1977ರಲ್ಲಿ ಮತ್ತು ಕಾನ್ಪುರ 1979ರಲ್ಲಿ ಮರುಪ್ರಸಾರ ಕೇಂದ್ರಗಳನ್ನು ಪಡೆದವು. ಅಲ್ಲಿಂದೀಚೆಗೆ ದೇಶಾದ್ಯಂತ ದೂರದರ್ಶನ ಕೇಂದ್ರಗಳ ಅಥವಾ ಮರುಪ್ರಸಾರ ಕೇಂದ್ರಗಳ ಸ್ಥಾಪನೆ ತ್ವರಿತಗತಿಯಿಂದ ಮುಂದುವರಿದು 1984ರ ವೇಳೆಗೆ ಹೆಚ್ಚುಕಡಿಮೆ ಸರ್ವವ್ಯಾಪಿ ಆಗಿದೆ.

ಒಂದು ವರ್ಷಕಾಲ ನಡೆದ ಸೈಟ್ (ಸ್ಯಾಟೆಲ್ಲೈಟ್ ಇನ್‍ಸ್ಟ್ರಕ್ಷನಲ್ ಟೆಲಿವಿಶನ್ ಎಕ್ಸ್‍ಪೆರಿಮೆಂಟ್) ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್ ಕಾರ್ಯಕ್ರಮವನ್ನು ಇಲ್ಲಿ ಹೆಸರಿಸಬೇಕು. ಆಕಾಶವಾಣಿ ಮತ್ತು ಇಸ್ರೋ ಜೊತೆಗೂಡಿ 1974 ಆಗಸ್ಟ್ 1ರಂದು ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಸಾ ಸಂಸ್ಥೆಯ ಎ.ಟಿ.ಎಸ್.-6 ಉಪಗ್ರಹದ ಮೂಲಕ ದೂರದರ್ಶನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದುವು. ಗ್ರಾಮೀಣ ಶಿಕ್ಷಣ ಇದರ ಉದ್ದೇಶವಾಗಿತ್ತು. ಇದಕ್ಕೆ ಕಾರಣಪುರುಷ ದಿವಂಗತ ವಿಕ್ರಮ ಸಾರಾಭಾಯ್. ಆರು ರಾಜ್ಯಗಳ 2,400 ಹಳ್ಳಿಗಳಿಗೆ ಉಪಗ್ರಹದಿಂದ ನೇರಪ್ರಸಾರ ಕಲ್ಪಿಸಲಾಗಿದ್ದು ಸಮುದಾಯ ದೂರದರ್ಶನ ಸೆಟ್ಟುಗಳನ್ನು ಇಡಲಾಯಿತು. ಈ ರಾಜ್ಯಗಳು ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಮಧ್ಯಪ್ರದೇಶ, ಒರಿಸ್ಸಾ ಮತ್ತು ರಾಜಸ್ಥಾನ. ಇವುಗಳಿಗೆ ಬೇಕಾದ ಕಾರ್ಯಕ್ರಮಗಳನ್ನು ದೆಹಲಿ, ಕಟಕ್ ಮತ್ತು ಹೈದರಾಬಾದ್ ಭೂಕೇಂದ್ರಗಳಲ್ಲಿ ರೂಪಿಸಲಾಗುತ್ತಿತ್ತು. ಅಹಮದಾಬಾದ್‍ನಲ್ಲಿದ್ದ ಭೂಸಂಪರ್ಕ ಕೇಂದ್ರದಿಂದ ಕಳುಹಿಸಲಾಗುತ್ತಿತ್ತು. ಉಪಗ್ರಹದಿಂದ ಇವನ್ನು ಆಯ್ದ ಹಳ್ಳಿಗಳಿಗೆ ಮರುಪ್ರಸಾರ ಮಾಡಲಾಗುತ್ತಿತ್ತು. ಇದು ಅಂತಾರಾಷ್ಟ್ರೀಯ ಆಸಕ್ತಿಯನ್ನು ಕೆರಳಿಸಿದ ಪ್ರಯೋಗ. ಯೋಜನೆ 1976 ಜೂನ್ 31ರಂದು ಯಶಸ್ವಿಯಾಗಿ ಕೊನೆಗೊಂಡಿತು. ಸಮುದಾಯ ಶಿಕ್ಷಣ ಕುರಿತು ಪ್ರಸಾರವಾದ ಇದರ ಕಾರ್ಯಕ್ರಮಗಳ ಬಗ್ಗೆ ವಿವರವಾದ ಅಧ್ಯಯನಗಳು ನಡೆದಿದವೆ.

ವರ್ಣದೂರದರ್ಶನ : ಭಾರತಕ್ಕೆ ವರ್ಣ ದೂರದರ್ಶನ ಬಹಳ ತಡವಾಗಿ ಬಂದಿತು. ಎಪ್ಪತ್ತರ ದಶಕದಿಂದ ಇದರ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದಕ್ಕಾಗಿ ಅನೇಕ ಸಮಿತಿಗಳನ್ನು ರಚಿಸಲಾಯಿತು. ದೆಹಲಿಯಲ್ಲಿ ಮೊದಲ ದೂರದರ್ಶನ ಕೇಂದ್ರ ಆರಂಭವಾದ ಇಪ್ಪತ್ತಮೂರು ವರ್ಷಗಳ ಬಳಿಕ ವರ್ಣದೂರದರ್ಶನ ಪ್ರಸಾರ ಆರಂಭವಾಯಿತು. ಕೇಂದ್ರ ಸರ್ಕಾರ ನೇಮಿಸಿದ ತಾಂತ್ರಿಕ ಸಲಹಾ ಸಮಿತಿ 1975 ಆಗಸ್ಟ್‍ನಲ್ಲಿ ತನ್ನ ಎರಡನೆಯ ಸಭೆ ಸೇರಿದಾಗ ವರ್ಣ ಪ್ರಸಾರ ಕುರಿತು ವಿವರವಾಗಿ ಚರ್ಚಿಸಿತು.

ಇದಾದ ಬಳಿಕ ರಚಿತವಾದ ಬಿ. ಜಿ. ವರ್ಗಿಸ್ ಕಾರ್ಯತಂಡ 1978ರಲ್ಲಿ ಸಲ್ಲಿಸಿದ ತನ್ನ ವರದಿಯಲ್ಲೂ ವರ್ಣ ಪ್ರಸಾರದ ಬಗ್ಗೆ ಪ್ರಸ್ತಾವಿಸಲಾಗಿತ್ತು. ಸಾಕಷ್ಟು ಸಂಶೋಧನೆ ನಡೆದು ಉತ್ತಮ ಫಲಿತಾಂಶ ದೊರಕಿದ ಬಳಿಕ ವರ್ಣದೂರದರ್ಶನ ಭಾರತದಲ್ಲಿ ಕಾಲಿಡಬಹುದೆಂದು ಸೂಚಿಸಲಾಗಿತ್ತು. ವರ್ಣದೂರದರ್ಶನದಿಂದ ಅಂತಾರಾಷ್ಟ್ರೀಯ ಕಾರ್ಯಕ್ರಮ ವಿನಿಮಯಕ್ಕೆ ಅವಕಾಶವಾಗುತ್ತದೆಂದು ಕಾರ್ಯ ತಂಡ ಅಭಿಪ್ರಾಯ ಪಟ್ಟಿತು. ಯಾವುದಾದರೂ ಮಹಾನಗರದಿಂದ ವರ್ಣ ಪ್ರಸಾರವನ್ನು ಪ್ರಾಯೋಗಿಕವಾಗಿ ಕೈಗೊಳ್ಳಬಹುದೆಂದು ಶಿಫಾರಸು ಮಾಡಿತು. ಈ ಶಿಫಾರಸು ಅನೇಕ ಪ್ರಾಯೋಗಿಕವಾಗಿ ಪ್ರಸಾರಗಳನ್ನು ನಡೆಸುವುದಕ್ಕೆ ಪ್ರೋತ್ಸಾಹ ನೀಡಿತು. ದೆಹಲಿಯಲ್ಲಿ 1979 ಡಿಸೆಂಬರಿನಲ್ಲಿ ನಡೆದ ಭಾರತ ವ್ಯಾಪಾರಮೇಳ ಮತ್ತು 1980 ಜನವರಿಯ ರಾಷ್ಟ್ರೀಯ ಕೈಗಾರಿಕಾ ಮೇಳದಲ್ಲಿ ವರ್ಣ ದೂರದರ್ಶನದ ಸೆಟ್ಟುಗಳನ್ನು ಪ್ರದರ್ಶಿಸಲಾಗಿತ್ತು. ಈ ಪ್ರಯೋಗಗಳ ಯಶಸ್ಸಿನ ಪರಿಣಾಮವಾಗಿ ಎಲೆಕ್ಟ್ರಾನಿಕ್ಸ್ ಇಲಾಖೆ ವರ್ಣ ದೂರದರ್ಶನಕ್ಕೆ ಸಂಬಂಧಿಸಿದಂತೆ ವಿವರವಾಗಿ ಆಧ್ಯಯನ ನಡೆಸಲು 1980 ಮಾರ್ಚ್ ತಿಂಗಳಿನಲ್ಲಿ ಗೌತಮ್ ಸೋನಿ ಅವರ ಅಧ್ಯಕ್ಷತೆಯಲ್ಲಿ ಒಂದು ಕಾರ್ಯತಂಡವನ್ನು ನೇಮಿಸಿತು. 1984 ಜೂನ್ ತಿಂಗಳಿನಲ್ಲಿ ಕಾರ್ಯತಂಡ ತನ್ನ ವರದಿಯನ್ನು ಸಲ್ಲಿಸಿತು.

ಕಾರ್ಯತಂಡ ಮತ್ತು ಮಾಧ್ಯಮ ಸಲಹಾ ಸಮಿತಿ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆಯ ಶಿಫಾರಸಿಗೆ ಅನುಗಣವಾಗಿ ಕೇಂದ್ರ ಮಂತ್ರಿಮಂಡಲ 1982 ಏಪ್ರಿಲ್‍ನಲ್ಲಿ ವರ್ಣದೂರದರ್ಶನವನ್ನು ಹಂತಹಂತವಾಗಿ ದೇಶದಲ್ಲಿ ಪರಿಚಯಿಸಲು ನಿರ್ಧರಿಸಿತು. ಏಷ್ಯನ್ ಕ್ರೀಡಾಕೂಟದ ಪ್ರಸಾರವನ್ನು ವರ್ಣದಲ್ಲಿ ನಡೆಸಬೇಕು ಎಂದು ತೀರ್ಮಾನಿಸಲಾಯಿತು. ಇದಕ್ಕೆ ಮುನ್ನ ದೆಹಲಿ ಮತ್ತು ಮುಂಬಯಿ ದೂರದರ್ಶನ ಪ್ರಸಾರ ಯಂತ್ರಗಳನ್ನು ಸುಧಾರಿಸಲು ಸೂಚನೆ ನೀಡಲಾಯಿತು. ಹೊರಾಂಗಣ ವರ್ಣಪ್ರಸಾರ ವ್ಯಾನ್‍ಗಳನ್ನು ದೆಹಲಿ ಮತ್ತು ಮುಂಬಯಿ ಕೇಂದ್ರಗಳು ಪೂರಕವಾಗಿ ಬಳಸಬಹುದೆಂದು ಹೇಳಲಾಯಿತು. ಆರನೆಯ ಯೋಜನೆಯಲ್ಲಿ ಸ್ಥಾಪಿತವಾಗುವ ಬೆಂಗಳೂರು, ಅಹಮದಾದ್, ಗೌಹಾತಿ ಮತ್ತು ತಿರುವನಂತಪುರ ಕೇಂದ್ರಗಳನ್ನು ವರ್ಣಪ್ರಸಾರಕ್ಕೆ ಆಯ್ಕೆ ಮಾಡಲಾಯಿತು. ಮರುಪ್ರಸಾರ ಕೇಂದ್ರಗಳಾಗಿ ಸ್ಥಾಪಿತವಾಗಬೇಕಿದ್ದ ಕಸೌಳಿ, ಕೊಡೈಕೆನಾಲ್, ಅಸನ್‍ಸೋಲ್ ಪಣಜಿ, ವಾರಾಣಸಿ, ವಿಜಯವಾಡ, ಮುರ್ಷಿದಾ ಬಾದ್ ಮತ್ತು ಕಟಕ್ ನಗರಗಳೂ ಈ ಪಟ್ಟಿಯಲ್ಲಿ ಸೇರಿದುವು.

ದೇಶದಲ್ಲಿ ಮೊದಲ ಬಾರಿಗೆ ವರ್ಣದೂರದರ್ಶನ ಪ್ರಸಾರ ಆದದ್ದು 1982 ಆಗಸ್ಟ್ 15ರಂದು: ನವದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನೋತ್ಸವದಂದು ಪ್ರಧಾನಮಂತ್ರಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಪ್ರಸಾರ ಭಾಷಣ ವರ್ಣದಲ್ಲಿ ಪ್ರಸಾರವಾಯಿತು. ಆಗ ಚಾಲ್ತಿಯಲ್ಲಿದ್ದ 13 ಇತರ ಕೇಂದ್ರಗಳು ಈ ಕಾರ್ಯಕ್ರಮವನ್ನು ವರ್ಣದಲ್ಲಿ ಮರುಪ್ರಸಾರ ಮಾಡಿದವು. ಆಮೇಲೆ 1982ರಲ್ಲೇ ನವಂಬರ್-ಡಿಸೆಂಬರ್‍ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ ವರ್ಣ ದೂರದರ್ಶನ ಪ್ರಸಾರ ಹೊಸ ಮಜಲನ್ನು ತಲುಪಿತು. ಏಷ್ಯನ್ ಕ್ರೀಡಾಕೂಟದ ವರ್ಣದೂರರ್ಶನ ಪ್ರಸಾರಕ್ಕಾಗಿ ನಲವತ್ತು ಪ್ರಸಾರಯಂತ್ರಗಳನ್ನು ಬಳಸಲಾಯಿತು. ಏಷ್ಯನ್ ಕ್ರೀಡಾಕೂಟದ ಅನಂತರವೂ ದೆಹಲಿ ದೂರದರ್ಶನ ಕೇಂದ್ರ ವರ್ಣಪ್ರಸಾರವನ್ನು ಮುಂದುವರಿಸಿತು. ಸುದ್ದಿ, ಕೃಷಿದರ್ಶನ, ಕ್ರೀಡೆ, ಚಲನಚಿತ್ರ ಮುಂತಾ ಕಾರ್ಯಕ್ರಮಗಳ ಪ್ರಸಾರ ವರ್ಣದಲ್ಲಿ ಆಗುತ್ತದೆ. ತರುವಾಯ 1983 ಜೂನ್‍ಗಳಲ್ಲಿ ಜಲಂಧರ್ ಮತ್ತು ಕಲ್ಕತ್ತಾ ಕೇಂದ್ರಗಳೂ ವರ್ಣಪ್ರಸಾರ ಪ್ರಾರಂಭಿಸಿದುವು.

1984ರಲ್ಲಿ ಅಸ್ತಿತ್ವದಲ್ಲಿರುವ 43 ಕೇಂದ್ರಗಳ ಪೈಕಿ ಮರುಪ್ರಸಾರ ಕೇಂದ್ರಗಳ ಸಂಖ್ಯೆ 36. 7 ದೂರದರ್ಶನ ಕೇಂದ್ರಗಳು ಮಾತ್ರ ಪೂರ್ಣ ಪ್ರಮಾಣದ ಸ್ವತಂತ್ರ ಪ್ರಸಾರ ವ್ಯವಸ್ಥೆಯನ್ನು ಹೊಂದಿವೆ. (ಕೆ.ವಿ.ಎನ್.)