ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಹಣಕಾಸು

ವಿಕಿಸೋರ್ಸ್ದಿಂದ

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಹಣಕಾಸು

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಅನೇಕ ರೀತಿಯ ಹಣಕಾಸು ಸಂಸ್ಥೆಗಳ ಸಂಮಿಶ್ರಣ. ಭಾರತದ ರಿಸರ್ವ ಬ್ಯಾಂಕು ದೇಶದ ಹಣ ಪೇಟೆಯ ಪರಮೋನ್ನತ ಸಂಸ್ಥೆ. ಇದಲ್ಲದೆ ಇತರ ಬಗೆಯ ಬ್ಯಾಂಕುಗಳೂ ಭಾರತದಲ್ಲಿವೆ. ಅವುಗಳಲ್ಲಿ ಮುಖ್ಯವಾದವು ವಾಣಿಜ್ಯ ಬ್ಯಾಂಕುಗಳು ಸಂಯುಕ್ತ ಬಂಡವಾಳ ಸಂಸ್ಥೆಯ ಚೌಕಟ್ಟಿನಲ್ಲಿ. ಭಾರತೀಯ ಕಂಪನಿ ಅಧಿನಿಯಮದ ರೀತ್ಯ ಸ್ಥಾಪಿತವಾದ ಈ ಸಂಸ್ಥೆಗಳೇ ಅಲ್ಲದೇ ವಿಶಿಷ್ಟವಾದ ಸ್ಥಾನಮಾನವುಳ್ಳ ಭಾರತೀಯ ಸ್ಟೇಟ್ ಬ್ಯಾಂಕೂ ಈ ಬಗೆಯವು. ಪ್ರಮುಖ ವಾಣಿಜ್ಯ ಬ್ಯಾಂಕುಗಳೆಲ್ಲ ರಾಷ್ಟ್ರೀಕರಣವಾಗಿವೆ. ಇತ್ತೀಚೆಗೆ ಸ್ಥಾಪನೆಯಾಗಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನೂ ಈ ಗುಂಪಿಗೆ6 ಸೇರಿಸಬಹುದು. ವಿದೇಶೀ ಬ್ಯಾಂಕುಗಳದು ಇನ್ನೊಂದು ಗುಂಪು. ರಿಸರ್ವ ಬ್ಯಾಂಕಿನಿಂದ ಹಿಡಿದು ವಿದೇಶಿ ಬ್ಯಾಂಕುಗಳವರೆಗೆ ಎಲ್ಲ ಬ್ಯಾಂಕುಗಳೂ ಆಧುನಿಕ ಹಣಕಾಸು ಸಂಸ್ಥೆಗಳು; ಪಾಶ್ಚಾತ್ಯ ಬ್ಯಾಂಕು ವ್ಯವಸ್ಥೆಯ ಮಾದರಿಯಲ್ಲಿ ರಚಿತವಾದ ಸಂಘಟಿತ ಸಂಸ್ಥೆಗಳು.

ಈ ಆಧುನಿಕ ಬ್ಯಾಂಕು ಸಂಸ್ಥೆಗಳ ಜೊತೆಗೆ ಪ್ರಾಚೀನ ಕಾಲದಿಂದಲೂ ಹಣದ ವ್ಯವಹಾರ ನಡೆಸುತ್ತ ಬಂದಿರುವ ಅಪ್ಪಟ ಸ್ಥಳೀಯವೆನ್ನಬಹುದಾದ ವ್ಯವಸ್ಥೆಯೂ ಭಾರತದಲ್ಲಿದೆ. ಇದನ್ನು ಒಂದು ವ್ಯವಸ್ಥೆಯೆಂದು ಪರಿಗಣಿಸುವುದು ಸ್ಥೂಲವಾದ ಅರ್ಥದಲ್ಲಿ ಮಾತ್ರ. ಇದರಲ್ಲಿಯೂ ಘಟಕಗಳು ಸಂಘಟಿತವಲ್ಲ; ರಿಸರ್ವ್ ಬ್ಯಾಂಕಿನ ಕಟ್ಟುಪಾಡುಗಳಿಗೆ ಇವು ಅಷ್ಟಾಗಿ ಒಳಪಡುವುದಿಲ್ಲ. ಆದರೂ ದೇಶದ ಉದ್ದಗಲಕ್ಕೂ ಹರಡಿಕೊಂಡಿರುವ ಈ ದೇಶೀಯ ಬ್ಯಾಂಕಿಂಗ್ ವ್ಯವಸ್ಥೆ ಇಂದಿಗೂ ವ್ಯಾಪಕವಾದ ಹಣದ ವಹಿವಾಟುಗಳನ್ನು ನಿರ್ವಹಿಸುತ್ತಿದೆ. ಸಾಹುಕಾರರು, ಸೇಠರು, ಮಹಾಜನರು, ಮುಲ್ತಾನಿಗಳು, ಬನಿಯ, ಚೆಟ್ಟಿಯಾರರು ಇವೆ ಮೊದಲಾದ ಹೆಸರುಗಳಿಂದ ದೇಶದ ವಿವಿಧ ಭಾಗಗಳಲ್ಲಿ ವಂಶಪಾರಂಪರ್ಯವಾಗಿ ಬಂದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಇದು ದೇಶೀಯ ಬ್ಯಾಂಕಿಂಗ್ ವ್ಯವಸ್ಥೆ.

ಈ ಎರಡೂ ರೀತಿಯ ವ್ಯವಸ್ಥೆಗಳಲ್ಲದೆ ಇನ್ನೂ ಕೆಲವು ಸಂಸ್ಥೆಗಳಿವೆ. ಅಂಚೆ ಕಛೇರಿಯ ಉಳಿತಾಯ ಬ್ಯಾಂಕುಗಳು, ಕೃಷಿಕರಿಗೆ ಹಣಕಾಸಿನ ನೆರವು ನೀಡುತ್ತಿರುವ ಸಹಕಾರ ಬ್ಯಾಂಕುಗಳು, ಭೂ ಅಭಿವೃದ್ಧಿ ಬ್ಯಾಂಕುಗಳು, ಕೈಗಾರಿಕೋದ್ಯಮಿಗಳಿಗೆ ಧನಸಹಾಯ ನೀಡುತ್ತಿರುವ ಕೈಗಾರಿಕಾ ಹಣಕಾಸು ನಿಗಮ, ರಾಜ್ಯ ಹಣಕಾಸು ನಿಗಮ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಪರ ರಾಷ್ಟ್ರೀಯ ಬ್ಯಾಂಕು (ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‍ಮೆಂಟ್-ನಬಾರ್ಡ್) ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಚೌಕಟ್ಟಿಗೆ ಒಳಪಡುತ್ತವೆ.

ದೇಶೀಯ ಬ್ಯಾಂಕಿಂಗ್ ವ್ಯವಸ್ಥೆ: ಭಾರತದಲ್ಲಿ ಲೇವಾದೇವಿ ವ್ಯವಹಾರಗಳು ಮತ್ತು ಆಧುನಿಕ ಬ್ಯಾಂಕ್ ವ್ಯವಹಾರಗಳಿಗೆ ಭಿನ್ನವಾದ ಒಂದು ರೀತಿಯ ಅಸಂಘಟಿತ ಕೊಡು-ಕೊಳ್ಳುವ ವ್ಯವಹಾರಗಳು ಬಹಳ ಹಿಂದಿನ ಕಾಲದಿಂದಲೂ ನಡೆದು ಬಂದಿದೆ. ಲೇವಾದೇವಿಯ ವ್ಯವಹಾರಗಳು ಸಾರ್ವತ್ರಿಕವಾದುವಾಗಿದ್ದರೆ ಬ್ಯಾಂಕ್ ವ್ಯವಹಾರಗಳು ಕೆಲವು ಜನಾಂಗಗಳಿಗೆ ಸೀಮಿತಗೊಂಡಿದ್ದು ಅನುವಂಶಿಕವಾಗಿ ನಡೆದುಬಂದಿವೆ. ದೇಶೀಯ ಬ್ಯಾಂಕರುಗಳ ವಲಯದ ಪ್ರಮುಖ ಉಪವಿಭಾಗಗಳು ಎರಡು. ಗ್ರಾಮೀಣ ಪ್ರದೇಶಗಳಲ್ಲಿ ಲೇವಾದೇವಿ ವ್ಯವಹಾರ ನಡೆಸುವವರದು ಒಂದು. ಪಟ್ಟಣಗಳಲ್ಲಿ ನಗರಗಳಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿರುವವರದು ಇನ್ನೊಂದು. ಭಾರತದ ಆಂತರಿಕ ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಪರಿಮಾಣದಲ್ಲಿ ಹಣ ಒದಗಿಸುತ್ತ ಬಂದವರು ದೇಶೀಯ ಬ್ಯಾಂಕರುಗಳು.

ಹಣದ ಅಗತ್ಯ ಇರುವವರಿಗೆ ಸಾಲ ನೀಡುವುದು ಗ್ರಾಮಾಂತರ ಲೇವಾದೇವಿಗಾರ ಮುಖ್ಯ ಉದ್ದೇಶ. ಇವನು ಸ್ವಂತ ಬಂಡವಾಳದಿಂದಲೇ ತನ್ನ ವ್ಯವಹಾರ ನಡೆಸುತ್ತಾನೆ. ಒಡವೆ ವಸ್ತುಗಳ ಆಧಾರದ ಮೇಲೋ ಗೊತ್ತಾದ ಕಾಲಾವಧಿಯ ಒಳಗಾಗಿ ಮರುಪಾವತಿ ಮಾಡುವುದಾಗಿ ಸಾಲಗಾರ ನೀಡುವ ವಾಗ್ದಾನದ ಆಧಾರದ ಮೇಲೋ ಅವನು ಸಾಲ ನೀಡುತ್ತಾನೆ. ಜೊತೆಗೆ ಪದಾರ್ಥಗಳ ವ್ಯಾಪಾರವನ್ನೂ ನಡೆಸುವುದುಂಟು. ಸಾಲಗಾರರು ಉತ್ಪಾದಿಸಿದ ವಸ್ತುವನ್ನು ತಾನೇಕೊಂಡು ಮಾರಾಟಮಾಡುತ್ತ ಬಂದಿದ್ದಾನೆ. ಹೀಗೆ ರೈತನಿಗೂ ಪೇಟೆಗೂ ಮಧ್ಯವರ್ತಿಯಂತೆ ವ್ಯವಹರಿಸುವ ಇವನು ಗ್ರಾಮ ಅರ್ಥ ವ್ಯವಸ್ಥೆಯ ಒಂದು ಮುಖ್ಯಕೊಂಡಿಯಾಗಿ ಬೆಳೆದು ಬಂದಿದ್ದಾನೆ. ಆದರೆ ಇವನು ತನ್ನ ಸ್ಥಾನಮಾನಗಳನ್ನು ದುರುಪಯೋಗಪಡಿಸಿಕೊಂಡಿರುವುದೇ ಹೆಚ್ಚು. ಇವನ ಬಲಿಷ್ಠ ಹಿಡಿತಕ್ಕೆ ಒಮ್ಮೆ ಸಿಕ್ಕಿದ ರೈತ ಅದರಿಂದ ಬಿಡಿಸಿಕೊಳ್ಳುವುದೇ ಕಷ್ಟವೆಂಬುದು ಇವನ ಮೇಲಿನ ಆಪಾದನೆಗಳಲ್ಲೊಂದು. ಬಡ್ಡಿಯ ದರ ಸಾಮಾನ್ಯವಾಗಿ ಅಧಿಕ. ಇವರಲ್ಲಿ ಕುಸೀದ ಪದ್ಧತಿಯೂ ಉಂಟು.

(ನೋಡಿ- ಕುಸೀದ-ಪದ್ಧತಿ)

ಪಟ್ಟಣಗಳಲ್ಲೂ ನಗರಗಳಲ್ಲೂ ವ್ಯವಹಾರ ನಡೆಸುವ ಬ್ಯಾಂಕರುಗಳ ಪ್ರಭಾವ ಭಾರತದ ಹಣದಮಾರುಕಟ್ಟೆಯಲ್ಲಿ ಬಹಳ ಹಿರಿದಾದ್ದು. ಹಣದ ನೆರವು ನೀಡುವುದರಲ್ಲಿ ಆಧುನಿಕ ಬ್ಯಾಂಕುಗಳು ಹಲವಾರು ಕಟ್ಟುಪಾಡುಗಳಿಗೆ ಒಳಗಾಗಿರುವುದರಿಂದ ಇಂದಿಗೂ ಅನೇಕ ಸಣ್ಣ ವರ್ತಕರೂ ಉದ್ಯಮಿಗಳೂ ದೇಶೀಯ ಬ್ಯಾಂಕರುಗಳ ಗಿರಾಕಿಗಳಾಗಿದ್ದಾರೆ. ವಾಣಿಜ್ಯ ಬ್ಯಾಂಕುಗಳೊಂದಿಗೆ ಸ್ಪರ್ಧಿಸುತ್ತಿರುವ ಈ ಬ್ಯಾಂಕರುಗಳು ಆ ಸಂಸ್ಥೆಗಳಿಗಿಂತ ಸುಲಭವಾಗಿ, ಶೀಘ್ರವಾಗಿ ಸಾಲ ಒದಗಿಸುತ್ತಾರೆ. ಸಾಲ ನೀಡುವುದು, ಠೇವಣಿ ಸ್ವೀಕರಿಸುವುದು, ಹುಂಡಿಗಳ ವ್ಯವಹಾರ-ಈ ಎಲ್ಲ ಕಲಾಪಗಳೂ ಇವರಿಗುಂಟು. ಇವುಗಳ ಜೊತೆಗೆ ಇವರು ವ್ಯಾಪಾರ ಕೂಡ ನಡೆಸುತ್ತಾರೆ; ಸಟ್ಟಾವಹಿವಾಟುಗಳಲ್ಲಿ ತೊಡಗುತ್ತಾರೆ; ಆದ್ದರಿಂದ ಇವರ ವ್ಯವಹಾರಗಳು ಯಾವಾಗಲೂ ಕ್ಷೇಮಕರವಲ್ಲ. ರಿಸರ್ವ್‍ಬ್ಯಾಂಕು ವಿಧಿಸುವ ಯಾವ ವಿನಿಮಯಗಳಿಗೂ ಬದ್ಧರಾಗದೆ, ತಮ್ಮದೇ ಆದ ನಿಬಂಧನೆಗಳ ಪ್ರಕಾರ ವ್ಯವಹಾರ ನಡೆಸುತ್ತ, ಅನೇಕ ವೇಳೆ ಸಮಾಜಕ್ಕೆ ಹಿತವಲ್ಲದ ಮತ್ತು ರಹಸ್ಯವಾದ ಕಲಾಪಗಳಲ್ಲಿ ಪಾಲ್ಗೊಳ್ಳುವ ಇವರನ್ನು ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯ ಚೌಕಟ್ಟಿನೊಳಕ್ಕೆ ತರುವುದು ಹೇಗೆಂಬುದೇ ದೊಡ್ಡ ಸಮಸ್ಯೆ.

ನಿಯಂತ್ರಣ ಕ್ರಮಗಳು: ಭಾರತೀಯ ಹಣಮಾರುಕಟ್ಟೆಯ ದೇಶೀಯ ಮತ್ತು ಆಧುನಿಕ ಬ್ಯಾಂಕು ವ್ಯವಹಾರಗಳನ್ನು ಏಕೀಕರಿಸುವ ಅಗತ್ಯವನ್ನು ಕೇಂದ್ರೀಯ ಬ್ಯಾಂಕ್ ವಿಚಾರಣಾ ಸಮಿತಿ 1931ರಷ್ಟು ಹಿಂದೆಯೇ ಒತ್ತಿ ಹೇಳಿತ್ತು; ರಿಸರ್ವ್ ಬ್ಯಾಂಕ್ ಸ್ಥಾಪಿತವಾದಾಗ ಅದರೊಂದಿಗೆ ದೇಶೀಯ ಬ್ಯಾಂಕರುಗಳ ಸಂಪರ್ಕ ಕಲ್ಪಿಸಬೇಕೆಂದೂ ಹುಂಡಿಗಳ ಬಳಕೆ ಕ್ರಿಯಾತ್ಮಕವಾಗಿರುವಂಥ ಪಾಶ್ಚಾತ್ಯ ಮಾದರಿಯ ಹುಂಡಿಮಾರುಕಟ್ಟೆ ವಿಕಸಿಸುವಂತೆ ಕ್ರಮಕೈಗೊಳ್ಳಬೇಕೆಂದೂ ಶಿಫಾರಸು ಮಾಡಲಾಗಿತ್ತು. ಆ ಪ್ರಕಾರ 1935ರ ತರುವಾಯ ರಿಸರ್ವ್ ಬ್ಯಾಂಕ್ ದೇಶೀಯ ಬ್ಯಾಂಕರುಗಳನ್ನು ತನ್ನ ಕಕ್ಷೆಗೆ ಒಳಪಡಿಸಿಕೊಳ್ಳಲು ಹಲವಾರು ರೀತಿಯಲ್ಲಿ ಪ್ರಯತ್ನಿಸಿತು; ನೇರವಾದ ಸಂಪರ್ಕ ಸಾಧಿಸುವ ಉದ್ದೇಶದಿಂದ ಒಂದು ಯೋಜನೆ ರೂಪಿಸಿತು. ದೇಶೀಯ ಬ್ಯಾಂಕರುಗಳು ವ್ಯಾಪಾರ ಮತ್ತು ಕಮಿಷನ್ ವ್ಯವಹಾರಗಳನ್ನು ಕೈಬಿಡಬೇಕೆಂದೂ ಪಾಶ್ಚಾತ್ಯ ರೀತಿಯಲ್ಲಿ ಲೆಕ್ಕವಿಡುವ ವಿಧಾನ ರೂಢಿಸಿಕೊಳ್ಳಬೇಕೆಂದೂ ಠೇವಣಿಗಳ ಸಂಗ್ರಹಣೆ ಹೆಚ್ಚಿಸಿಕೊಳ್ಳಬೇಕೆಂದೂ ತಮ್ಮ ವಹಿವಾಟುಗಳನ್ನು ಅಧಿಕೃತ ಲೆಕ್ಕ ಪರಿಶೋಧನೆಗೆ ಒಳಪಡಿಸಬೇಕೆಂದೂ ತನಗೆ ನಿಯತಕಾಲಿಕ ವರದಿ ಒಪ್ಪಿಸಬೇಕೆಂದೂ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿತು. ದೇಶೀಯ ಬ್ಯಾಂಕರುಗಳು ಲಂಡನ್ ಮಾದರಿಯ ಮಟ್ಟದ ಮನೆಗಳಂತೆ ಕಾರ್ಯ ನಿರ್ವಹಿಸಬೇಕು ಮತ್ತು ಹುಂಡಿಗಳು ನ್ಯಾಯಸಮ್ಮತ ವಹಿವಾಟುಗಳನ್ನು ಪ್ರತಿನಿಧಿಸುವ ಸಕ್ರಿಯ ಸಾಧನಗಳಾಗಬೇಕೆಂಬುದು ರಿಸರ್ವ್ ಬ್ಯಾಂಕಿನ ಬಯಕೆಯಾಗಿತ್ತು; ಈ ಎಲ್ಲ ಹೊಣೆಗಾರಿಕೆಗಳನ್ನು ನಿರ್ವಹಿಸುವುದಾದರೆ ಅನುಸೂಚಿತ (ಷೆಡ್ಯೂಲ್ಡ್) ಬ್ಯಾಂಕುಗಳಿಗೆ ನೀಡುವ ಸಕಲ ಸವಲತ್ತುಗಳನ್ನೂ ದೊರಕಿಸಿಕೊಡುವುದಾಗಿ ರಿಸರ್ವ್ ಬ್ಯಾಂಕ್ ಭರವಸೆ ನೀಡಿತು.

1954ರ ಷರಾಫ್ ಸಮಿತಿಯೂ ರಿಸರ್ವ್ ಬ್ಯಾಂಕಿನ ಈ ಸಲಹೆ ಸೂಚನೆಗಳನ್ನು ಅನುಮೋದಿಸಿದ್ದಲ್ಲದೆ ದೇಶೀಯ ಬ್ಯಾಂಕರುಗಳ ಹುಂಡಿಗಳು ಅನುಸೂಚಿತ ಬ್ಯಾಂಕುಗಳ ಮೂಲಕ ಮರುಚಲಾವಣೆಗೊಳ್ಳುವುದನ್ನು ಉತ್ತೇಜಿಸಬೇಕೆಂದು ಸಲಹೆ ಮಾಡಿತು. ಆದರೆ ರಿಸರ್ವ್ ಬ್ಯಾಂಕಿನ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ದೇಶೀಯ ಬ್ಯಾಂಕರುಗಳನ್ನು ಸಂಘಟಿತ ಹಣಮಾರುಕಟ್ಟೆಗೆ ಕೂಡಿಸುವ ಪ್ರಯತ್ನ ಹಾಗೆಯೇ ಉಳಿಯಿತು.

ದೇಶೀಯ ಬ್ಯಾಂಕರುಗಳು ನಿರ್ವಹಿಸುವ ಪಾತ್ರ ಉಪಯುಕ್ತವಾಗಿದ್ದರೂ ಅವರು ವಿಧಿಸುವ ಅಧಿಕ ಬಡ್ಡಿ ದರ ಮತ್ತು ಕೈಗೊಳ್ಳುವ ಬೇನಾಮಿ ವ್ಯವಹಾರಗಳನ್ನು ಗಮನಿಸಿದ 1972ರ ಬ್ಯಾಂಕ್ ಆಯೋಗವೂ ಅವರ ಚಟುವಟಿಕೆಗಳನ್ನು ನಿಯಂತ್ರಿಸುವುದು ಅವಶ್ಯಕವೆಂದು ಸೂಚಿಸಿತು. ದೇಶೀಯ ಬ್ಯಾಂಕರುಗಳೊಡನೆ ವಾಣಿಜ್ಯ ಬ್ಯಾಂಕುಗಳು ಹೊಂದಿರುವ ಕೆಲವು ವ್ಯವಹಾರಗಳನ್ನು ನಿಗ್ರಹಿಸುವುದರ ಮೂಲಕ ರಿಸರ್ವ್‍ಬ್ಯಾಂಕ್ ಇವರುಗಳನ್ನು ನಿಯಂತ್ರಿಸುವುದೇ ಸರಿಯಾದ ಮಾರ್ಗವೆಂದೂ, ವಾಣಿಜ್ಯ ಬ್ಯಾಂಕುಗಳು ದೇಶೀಯ ಬ್ಯಾಂಕರುಗಳಿಂದ ಕ್ರಮಬದ್ಧವಾಗಿ ಸಂದಾಯ ಪಡೆಯಬೇಕೆನ್ನುವುದರ ಜೊತೆಗೆ ಅವುಗಳ ವಹಿವಾಟುಗಳು ಆಂತರಿಕ ಹಾಗೂ ಬಾಹ್ಯ ತನಿಖೆಗೆ ಒಳಪಡುವಂತೆ ಎಚ್ಚರಿಕೆ ವಹಿಸಬೇಕೆಂದೂ ಆಯೋಗ ಸಲಹೆ ಮಾಡಿತು. ಆಯೋಗದ ಸಲಹೆಯ ಮೇರೆಗೆ ದೇಶೀಯ ಬ್ಯಾಂಕರುಗಳು ತಮ್ಮ ಹುಂಡಿಗಳನ್ನು ವಾಣಿಜ್ಯ ಬ್ಯಾಂಕುಗಳಲ್ಲಿ ವಟಾಯಿಸಿ ಕೊಳ್ಳಬೇಕಾದಲ್ಲಿ ಕೆಲವು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ ಎಂದಾಯಿತು: ಅವರು ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಬಾರದು; ಕನಿಷ್ಠ ಒಂದು ಲಕ್ಷ ರೂಪಾಯಿಗಳ ಬಂಡವಾಳ ಹೊಂದಿರಬೇಕು; ಕರಾರುವಾಕ್ಕಾಗಿ ಲೆಕ್ಕಪತ್ರಗಳನ್ನಿಡಬೇಕು; ವಾರ್ಷಿಕ ಲೆಕ್ಕ ತನಿಖೆಗೆ ಒಳಪಡಬೇಕು; ರಿಸರ್ವ್ ಬ್ಯಾಂಕಿಗೆ ತಮ್ಮ ವಾರ್ಷಿಕ ವಹಿವಾಟುಗಳ ವರದಿ ಒಪ್ಪಿಸಬೇಕು; ಒಬ್ಬೊಬ್ಬರೂ ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಿಂದ ಸಾಲ ಪಡೆಯಬಾರದು; ಬಡ್ಡಿಯ ದರಕ್ಕೆ ಸಂಬಂಧಿಸಿದಂತೆ ದೇಶೀಯ ಮತ್ತು ವಾಣಿಜ್ಯ ಬ್ಯಾಂಕರುಗಳ ನಡುವೆ ಒಡಂಬಡಿಕೆ ಏರ್ಪಡಿಸಬೇಕು.

ದೇಶೀಯ ಬ್ಯಾಂಕರುಗಳ ಭವಿಷ್ಯ: ದೇಶದಲ್ಲಿ ಬ್ಯಾಂಕ್‍ಗಳು ಅಭಿವೃದ್ಧಿ ಹೊಂದಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಸೌಲಭ್ಯಗಳು ಹರಡುತ್ತಿರುವುದರಿಂದಲೂ ಮುಂಬರುವ ದಿನಗಳಲ್ಲಿ ದೇಶಿಯ ಬ್ಯಾಂಕರುಗಳ ಪ್ರಾಮುಖ್ಯ ಕ್ಷೀಣಿಸುತ್ತದೆ ಎಂಬುದು ಕೆಲವರ ವಾದ. ಇದಕ್ಕೆ ಪ್ರತಿಯಾಗಿ ದೇಶೀಯ ಬ್ಯಾಂಕುಗಳ ವ್ಯವಹಾರ ಚಾತರ್ಯ ಇಲ್ಲದಿರುವುದರಿಂದಲೂ ಈ ಬ್ಯಾಂಕುಗಳಿಂದ ಸಾಲ ಪಡೆಯಲು ಅನೇಕ ಕಟ್ಟಳೆಗಳನ್ನು ಪಾಲಿಸಬೇಕಾಗಿರುವುದರಿಂದಲೂ ಸಾಲದ ಹಣಕ್ಕೆ ಆಧುನಿಕ ಬ್ಯಾಂಕುಗಳು ಕೇಳುವ ಆಧಾರ ಷರತ್ತುಗಳು ಬಹುತೇಕ ಸಾಲಗಾರರಿಗೆ ನುಂಗಲಾರದ ತುತ್ತಾಗಿರುವುದರಿಂದಲೂ ದೇಶೀಯ ಬ್ಯಾಂಕುಗಳ ಪ್ರಗತಿಗೆ ವಿಪುಲ ಅವಕಾಶಗಳಿವೆ ಎಂಬುದು ಮತ್ತೆ ಕೆಲವರ ವಾದ. ಬ್ಯಾಂಕು ಆಯೋಗದ ಪ್ರಕಾರ ದೇಶೀಯ ಬ್ಯಾಂಕರುಗಳು ದೇಶದ ಭವಿಷ್ಯದ ಆರ್ಥಿಕ ಬೆಳೆವಣಿಗೆಯಲ್ಲಿ ಅತ್ಯುಪಯುಕ್ತ ಪಾತ್ರವನ್ನು ನಿರ್ವಹಿಸಲು ಸಾಧ್ಯ; ಆದರೆ ಅವರ ಕಾರ್ಯಕ್ಷೇತ್ರ ವೈವಿಧ್ಯಮಯವಾಗಬೇಕು, ವಿಶಾಲವಾಗಬೇಕು, ವೃತ್ತಿಗೌರವ ಘನತೆಗಳು ಹೆಚ್ಚಾಗಬೇಕು. ಕೆಲವು ಬ್ಯಾಂಕೇತರ ಹಣಕಾಸು ಮಧ್ಯವರ್ತಿಗಳ ಕಾರ್ಯಗಳನ್ನು ಹಮ್ಮಿಕೊಂಡು ಸಂಘಟಿತ ಹಣಮಾರುಕಟ್ಟೆಯೊಡನೆ ನಿಕಟಸಂಪರ್ಕ ಕಲ್ಪಿಸಿಕೊಳ್ಳಬೇಕು.

ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ: ಭಾರತದಲ್ಲಿ ಐರೋಪ್ಯ ಮಾದರಿಯ ಬ್ಯಾಂಕ್ ವ್ಯವಹಾರಗಳು ಪ್ರಾರಂಭವಾದುದು 19ನೆಯ ಶತಮಾನದಲ್ಲಿ. ಭಾರತೀಯ ರಿಸರ್ವ್‍ಬ್ಯಾಂಕ್ ಹಾಗೂ ಅದರ ಸಹಾಯಕ ಬ್ಯಾಂಕುಗಳು ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳು, ವಿದೇಶಿ ವಿನಿಮಯ ಬ್ಯಾಂಕುಗಳು, ಕೃಷಿ ಮತ್ತು ಕೈಗಾರಿಕಾ ಹಣಕಾಸು ಸಂಸ್ಥೆಗಳು ಮತ್ತು ಅಂಚೆಕಛೇರಿ ಉಳಿತಾಯದ ವ್ಯವಸ್ಥೆ ಇವುಗಳಿಂದ ಕೂಡಿದ ವಿಶಾಲ ಜಾಲ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ.

ಭಾರತೀಯ ರಿಸರ್ವ ಬ್ಯಾಂಕ್ : ದೇಶದ ಕೆಂದ್ರೀಯ ಬ್ಯಾಂಕಾದ ಭಾರತೀಯ ರಿಸರ್ವಬ್ಯಾಂಕ್ 1935 ರಲ್ಲಿ ಪೇರುದಾರರ ಸಂಸ್ಥೆಯಾಗಿ ಸ್ಥಾಪಿತವಾಯಿತು. ಇದರ ಅಧಿಕೃತ ಬಂಡವಾಳ ರೂ 5 ಕೋಟಿ; ತಲಾ ರೂ 100 ರ ಷೇರುಗಳಾಗಿ ವಿಭಾಗಿಸಲಾಗಿತ್ತು. ಭಾರತಕ್ಕೆ ಸ್ವಾತಂತ್ರ ಬಂದಮೇಲೆ 1949 ರಲ್ಲಿ ಇದನ್ನು ರಾಷ್ಟ್ರೀಕರಿಸಲಾಯಿತು, ಇದರ ಒಡೆತನ ಮತ್ತು ನಿಯಂತ್ರಣ ಈಗ ಸಂಪೂರ್ಣವಾಗಿ ಭಾರತ ಸರ್ಕಾರಕ್ಕೆ ಸೇರಿದ್ದಾಗಿದೆ. 20 ಮಂದಿ ಸದಸ್ಯರಿರುವ ಕೇಂದ್ರೀಯ ಮಂಡಳಿಯೊಂದಕ್ಕೆ ಇದರ ಆಡಳಿತ ವ್ಯವಸ್ಥೆಯನ್ನು ವಹಿಸಿಕೊಡಲಾಗಿದೆ. ಸರ್ಕಾರದಿಂದ ನೇಮಕವಾದ ಗವರ್ನರ್, ನಾಲ್ವರು ಡೆಪ್ಯುಟಿ ಗವರ್ನರ್‍ಗಳು, ಹತ್ತು ನಿರ್ದೇಶಕರು, ಮುಂಬಯಿ, ಕಲ್ಕತ್ತ, ಮದರಾಸು ಮತ್ತು ದೆಹಲಿಗಳಲ್ಲಿರುವ ಬ್ಯಾಂಕಿನ ಸ್ಥಳೀಯ ಮಂಡಳಿಗಳನ್ನು ಪ್ರತಿನಿಧಿಸುವ ನಾಲ್ವರು ನಿರ್ದೇಶಕರು ಮತ್ತು ಕೇಂದ್ರ ಸರ್ಕಾರದ ಹಣಕಾಸು ವಿಭಾಗದ ಅಧಿಕಾರ ಇವರು ಕೇಂದ್ರ ಮಂಡಳಿಯ ಸದಸ್ಯರು, ಕೇಂದ್ರ ಸರ್ಕಾರದ ಆದೇಶದಂತೆ ಬ್ಯಾಂಕಿನ ಕಾರ್ಯಕಲಾಪಗಳನ್ನು ನಿರ್ವಹಿಸುವುದು ಕೇಂದ್ರ ಮಂಡಳಿಯ ಹೊಣೆ. ಆಯಾ ಪ್ರದೇಶಗಳನ್ನು ಕುರಿತ ವಿಚಾರಗಳ ಬಗ್ಗೆ ಕೇಂದ್ರ ಮಂಡಳಿಗೆ ಸಲಹೆ ನೀಡುವುದು ಸ್ಥಳೀಯ ಮಂಡಳಿಗಳ ಕರ್ತವ್ಯ.

ಆಂತರಿಕ ರಚನೆ ಮತ್ತು ನಿರ್ವಹಣೆ; ಸರ್ಕಾರದಿಂದ ನೇಮಕವಾದ ಗವರ್ನರ್ ಕೇಂದ್ರ ನಿರ್ದೇಶಕರ ಮಂಡಳಿಯ ಅಧ್ಯಕ್ಷರೂ ಪ್ರಧಾನ ಕಾರ್ಯನಿರ್ವಾಹಕರೂ ಆಗಿರುತ್ತಾರೆ. ಗವರ್ನರನ ಗೈರುಹಾಜರಿಯಲ್ಲಿ ಒಬ್ಬ ಡೆಪ್ಯುಟಿ ಗವರ್ನರ್ ಆ ಅಧಿಕಾರ ಪಡೆಯುತ್ತಾನೆ. ಚೈನಂದಿನ ಕಾರ್ಯಾಚರಣೆಯಲ್ಲಿ ಗವರ್ನರನಿಗೆ ಇಬ್ಬರು ಡೆಪ್ಯುಟಿ ಗವರ್ನರುಗಳು ಮತ್ತು ಮೂವರು ಕಾರ್ಯಕಾರಿ ನಿರ್ದೇಶಕರು ಸಹಾಯಕರಾಗಿರುತ್ತಾರೆ. ಡೆಪ್ಯುಟಿ ಗವರ್ನರುಗಳ ಕಾರ್ಯ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಕಾರ್ಯ ನೈಪುಣ್ಯ ಮತ್ತು ಉತ್ತಮ ಸಂಘಟನೆ-ಇವು ಬ್ಯಾಂಕಿನ ಆಂತರಿಕ ವ್ಯವಹಾರಗಳ ಗುಣಲಕ್ಷಣಗಳು. ಆ ಕೇಂದ್ರೀಯ ಬ್ಯಾಂಕಿಂಗ್ ಪ್ರಾಥಮಿಕ ಕಾರ್ಯಭಾರಗಳಾದ ನೋಟು ಮುದ್ರಣ ಮತ್ತು ಸಾಮಾನ್ಯ ಬ್ಯಾಂಕಿಂಗ್ ವ್ಯವಹಾರಗಳು ಎರಡು ಪ್ರತ್ಯೇಕ ವಿಭಾಗಗಳ ಮೂಲಕ ನಿರ್ವಹಿಸಲ್ಪಡುತ್ತವೆ. ಈ ವಿಭಾಗಗಳು ಬೆಂಗಳೂರು, ಮುಂಬಯಿ ಕಲ್ಕತ್ತ ಹೈದರಾಬಾದ್, ಕಾನ್‍ಪುರ, ಮದರಾಸು, ನಾಗಪುರ, ನವದೆಹಲಿ ಮತ್ತು ಪಟ್ನಾಗಳಲ್ಲಿ ಸ್ಥಳೀಯ ಕಛೇರಿಗಳನ್ನು ಹೊಂದಿವೆ. ರಿ¸ರ್ವ್‍ಬ್ಯಾಂಕಿನ ಪ್ರಧಾನ ಕಛೇರಿ ಮುಂಬಯಿಯಲ್ಲಿದೆ. ಕೇಂದ್ರ ಬ್ಯಾಂಕಿನ ಕಛೇರಿಗಳಿಲ್ಲದ ಸ್ಥಳಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಅದರ ಸಹಾಯಕ ಬ್ಯಾಂಕುಗಳು ಕೇಂದ್ರಿಯ ಬ್ಯಾಂಕಿನ ಏಜೆಂಟ್‍ಗಳಾಗಿರುತ್ತವೆ.

ಬ್ಯಾಂಕ್ ವಿಭಾಗ : ಬ್ಯಾಂಕ್ ವಿಭಾಗ ಒಬ್ಬ ಕಾರ್ಯ ನಿರ್ಮಹಣಾಧಿಕಾರಿಯ ಅಧೀನಕ್ಕೆ ಒಳಪಟ್ಟಿರುತ್ತದೆ. ಕೇಂದ್ರೀಯ ಬ್ಯಾಂಕ್, ಸರ್ಕಾರದ ಹಾಗೂ ಬ್ಯಾಂಕುಗಳ ಬ್ಯಾಂಕಾಗಿ ನಿರ್ವಹಿಸಬೇಕಾದ ಎಲ್ಲ ಕಲಾಪಗಳ ನಿರ್ವಹಣೆ ಬ್ಯಾಂಕ್ ವಿಭಾಗಕ್ಕೆ ಸೇರಿದೆ. ಬ್ಯಾಂಕ್ ವಿಭಾಗದಲ್ಲಿ ಸಾರ್ªಜನಿಕ ಲೆಕ್ಕ ವಿಭಾಗ, ಸಾರ್ವಜನಿಕ ಸಾಲದ ವಿಭಾಗ, ಠೇವಣಿ ಖಾತೆಗಳ ವಿಭಾಗ ಮತ್ತು ಸಾಲ ಪುಸ್ತಕಗಳ ವಿಭಾಗ ಎಂಬ ನಾಲ್ಕು ಉಪವಿಭಾಗಗಳಿವೆ. ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಹಣಕಾಸು ವ್ಯವಹಾರ ಇಲಾಖೆಗಳ ಹಣಕಾಸು ವ್ಯವಹಾರಗಳನ್ನು ಸಾರ್ವಜನಿಕ ಲೆಕ್ಕ ವಿಭಾಗ ನಿರ್ವಹಣೆ ಸಾರ್ವಜನಿಕ ಸಾಲದ ವಿಭಾಗದ ಕರ್ತವ್ಯ. ಠೇವಣಿ ಖಾತೆಗಳ ವಿಭಾಗ ಕೇಂದ್ರೀಯ ಬ್ಯಾಂಕಿನ ಆಂತರಿಕ ಹಣಕಾಸಿನ ಖಾತೆಗಳನ್ನು ನಿರ್ವಹಿಸುವುದರ ಜೊತೆಗೆ ವಾಣಿಜ್ಯ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‍ಗಳ ಶಾಸನಬದ್ಧ (ಸ್ಟಾಚ್ಯುಟರಿ) ನಗದು ಶಿಲ್ಕಿನ ವ್ಯವಹಾರಗಳನ್ನು ಕೂಡ ನೋಡಿಕೊಳ್ಳುತ್ತದೆ. ಸರ್ಕಾರದ ಹಾಗೂ ಇತರ ಅನುಮೋದಿತ ಸಂಘ ಸಂಸ್ಥೆಗಳ ಪರವಾಗಿ ಸಾಲ ಪತ್ರಗಳನ್ನು ಕೊಳ್ಳುವ ಮತ್ತು ಮಾರಾಟಮಾಡುವ ಕಾರ್ಯವನ್ನು ಸಾಲಪತ್ರಗಳ ವಿಭಾಗ ನಿರ್ವಹಿಸುತ್ತದೆ.

ನೋಟು ಮುದ್ರಣ ವಿಭಾಗ: ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಕೊಡುವ ಕಾರ್ಯದ ದಕ್ಷ ನಿರ್ವಹಣೆಗಾಗಿ ಇಡೀ ದೇಶವನ್ನು 10 ಕ್ಷೇತ್ರಗಳಾಗಿ ವಿಭಾಗಿಸಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ನೋಟು ಮುದ್ರಣ ವಿಭಾಗದ ಶಾಖೆಗಳಿರುತ್ತವೆ. ಒಂದೊಂದು ಶಾಖೆಯನ್ನೂ ಎರಡು ಪ್ರತ್ಯೇಕ ವಿಭಾಗÀಗಳಾಗಿ ವಿಂಗಡಿಸಲಾಗಿದೆ: ಸಾಮಾನ್ಯ ವಿಭಾಗ ಮತ್ತು ನಗದು ವಿಭಾಗ. ಈ ಎರಡೂ ವಿಭಾಗಗಳ ನಿರ್ವಹಣೆಯನ್ನು ಚಲಾರ್ಥ (ಕರೆನ್ಸಿ) ಅಧಿಕಾರಿ ನೋಡಿ ಕೊಳ್ಳುತ್ತಾನೆ. ಸಾಮಾನ್ಯ ವಿಭಾಗದ ಕಾರ್ಯ ನೋಟುಗಳ ಸರಬರಾಜನ್ನು ನೋಡಿಕೊಳ್ಳುವುದಾಗಿದ್ದರೆ, ಮುದ್ರಣದ ಜವಾಬ್ದಾರಿ ಮುದ್ರಣ ವಿಭಾಗದ ಕರ್ತವ್ಯ. ಸಾಮಾನ್ಯ ವಿಭಾಗವನ್ನು ತಿರಸ್ಕøತಿ ನೋಟುಗಳ ವಿಭಾಗ, ತನಿಖೆಯ ವಿಭಾಗ, ದಾಸ್ತಾನು ವಿಭಾಗ, ಲೆಕ್ಕದ ವಿಭಾಗ ಮತ್ತು ದಾಖಲಾತಿಯ ವಿಭಾಗಗಳಾಗಿ ಮತ್ತೆ ವಿಭಜಿಸಲಾಗಿದೆ.

ಕಾರ್ಯಭಾರಗಳು: ಕೇಂದ್ರೀಯ ಬ್ಯಾಂಕಿನ ಎಲ್ಲ ಕಾರ್ಯಭಾರಗಳನ್ನೂ ನಿರ್ವಹಿಸುವುದು ರಿಸರ್ವ್ ಬ್ಯಾಂಕಿನ ಹೊಣೆ. ಅವುಗಳ ಜೊತೆಗೆ ಸಾಮಾನ್ಯ ಬ್ಯಾಂಕ್ ವ್ಯವಹಾರಗಳನ್ನೂ ಅದು ನೆರವೇರಿಸುತ್ತದೆ. ರಿಸರ್ವ್‍ಬ್ಯಾಂಕಿನ ಕಾರ್ಯಭಾರಗಳು ಈ ರೀತಿ ಇವೆ:

1. ನೋಟ್ ಮುದ್ರಣ ಮತ್ತು ಚಲಾವಣೆ : ಭಾರತದಲ್ಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ನೀಡುವ ಏಕಸ್ವಾಮ್ಯ ರಿಸರ್ವ ಬ್ಯಾಂಕಿನದು. ಎಲ್ಲ ಮೌಲ್ಯವರ್ಗಗಳ ನೋಟು ಮತ್ತು ನಾಣ್ಯಗಳನ್ನು (ಒಂದು ರೂಪಾಯಿ ದರ ಹೊರತಾಗಿ) ಮುದ್ರಿಸುವ/ಟಂಕಿಸುವ ಏಕಮೇವ ಹಕ್ಕು ಈ ಬ್ಯಾಂಕಿಗಿದೆ. ಒಂದು ರೂಪಾಯಿಯ ನೋಟು/ನಾಣ್ಯಗಳನ್ನು ಕೇಂದ್ರ ಸರ್ಕಾರದ ಹಣಕಾಸಿನ ಇಲಾಖೆ ಮುದ್ರಿಸುತ್ತದೆ/ಟಂಕಿಸುತ್ತದೆ. ಚಿನ್ನದ ನಾಣ್ಯ, ಗಟ್ಟಿ, ವಿದೇಶಿ ಸಾಲಪತ್ರಗಳು, ರೂಪಾಯಿ ನಾಣ್ಯ ರೂಪಾಯಿ ಸಾಲಪತ್ರಗಳು ಇವು ನೋಟು ಮುದ್ರಣ ವಿಭಾಗದ ಆಸ್ತಿಗಳು. ರಿಸರ್ವ ಬ್ಯಾಂಕು ಚಲಾವಣೆಗಾಗಿ ನೀಡುವ ನೋಟುಗಳಿಗೆ ಆಧಾರವಾಗಿ (ಮೀಸಲು ನಿಧಿಯಾಗಿ) ಕನಿಷ್ಠ ರೂ 115 ಕೋಟಿ ಮೌಲ್ಯದ ಚಿನ್ನವನ್ನೂ ಒಳಗೊಂಡು ರೂ. 200 ಕೋಟಿಗೆ ಕಡಿಮೆಯಿಲ್ಲದಷ್ಟು ಮೌಲ್ಯದ ವಿದೇಶಿ ವಿನಿಮಯ ಪ್ರತಿಭೂತಿಗಳನ್ನು ಇಟ್ಟಿರಬೇಕೆಂಬುದು ನಿಯಮ. ರಿಸರ್ವ ಬ್ಯಾಂಕಿನ ಈಗಿನ ನೋಟು ಚಲಾವಣೆಯ ಪದ್ಧತಿಯನ್ನು ಕನಿಷ್ಠ ನಿಧಿ ಪದ್ಧತಿ ಎಂದು ಕರೆಯಲಾಗಿದೆ.

2. ಬ್ಯಾಂಕುಗಳ ಬ್ಯಾಂಕ್: ಐದು ಲಕ್ಷರೂಗಳಿಗೆ ಕಡಿಮೆಯಿಲ್ಲದಷ್ಟು ಪಾವತಿಯಾದ ಬಂಡವಾಳ ಹೊಂದಿರುವ ಪ್ರತಿಯೊಂದು ಬ್ಯಾಂಕೂ ತನ್ನ ಒಟ್ಟು ಠೇವಣಿಯ ಶೇಕಡಾ 3ಕ್ಕೆ ಕಡಿಮೆ ಇಲ್ಲದಷ್ಟು ಹಣವನ್ನು ರಿಸರ್ವ ಬ್ಯಾಂಕಿನಲ್ಲಿಟ್ಟಿರಬೇಕು. (ನಗದು ಮೀಸಲು ಅನುಪಾತ )ಇದರ ಮೇಲೆ ಬ್ಯಾಂಕ್ ಬಡ್ಡಿ ಕೊಡುವುದಿಲ್ಲ. ಅಷ್ಟೇ ಅಲ್ಲದೆ, ತಮ್ಮಲಿರುವ ಹೆಚ್ಚುವರಿ ನಗದನ್ನೂ ಬ್ಯಾಂಕ್‍ಗಳು ರಿಸರ್ವ ಬ್ಯಾಂಕಿನಲ್ಲಿಡುತ್ತವೆ. ಅಗತ್ಯಬಿದ್ದಾಗ ರಿಸರ್ವ ಬ್ಯಾಂಕಿನಿಂದ ಅವು ನೆರವು ಪಡೆಯಬಹುದು. ಬ್ಯಾಂಕ್‍ಗಳ ಬ್ಯಾಂಕಾದ ರಿಸರ್ವ ಬ್ಯಾಂಕ್ ಇತರ ಬ್ಯಾಂಕುಗಳಿಗೆ ಸಾಲದ ನೆರವನ್ನೂ ನೀಡುತ್ತದೆ. ಕಡ್ಡಾಯ ಠೇವಣಿ ಪ್ರಮಾಣವನ್ನು ವ್ಯತ್ಯಾಸಗೊಳಿಸಿ ತನ್ಮೂಲಕ ಬ್ಯಾಂಕುಗಳ ವ್ಯವಹಾರಗಳನ್ನು ನಿಯಂತ್ರಿಸುವುದು ರಿಸರ್ವ ಬ್ಯಾಂಕ್ ಈಚೆಗೆ ಅನುಸರಿಸುತ್ತಿರುವ ಇನ್ನೊಂದು ಪದ್ಧತಿ.

3 ಉದ್ದರಿ ನಿಯಂತ್ರಣ: ವಾಣಿಜ್ಯ ಬ್ಯಾಂಕುಗಳ ಉದ್ದರಿ ಸೃಷ್ಟಿಯನ್ನು ನಿಯಂತ್ರಿಸವುದು. ರಿಸರ್ವ ಬ್ಯಾಂಕಿನ ಇನ್ನೊಂದು ಕಾರ್ಯಭಾರ. ಬ್ಯಾಂಕ್ ದರವನ್ನು ಏರಿಸುವುದು ಮತ್ತು ಇಳಿಸುವುದು ಸರ್ಕಾರಿ ಸಾಲ ಪತ್ರಗಳನ್ನು ಬಹಿರಂಗಪೇಟೆಯಲ್ಲಿ ಕೊಳ್ಳುವುದು ಮತ್ತು ಮಾರುವುದು, ನಿಯಂತ್ರಣದ ಮುಖ್ಯ ಪರಂಪರಾಗತ ವಿಧಾನಗಳು, ಅಲ್ಲದೆ, ವಾಣಿಜ್ಯ ಬ್ಯಾಂಕ್ ಇಡಬೇಕಾದ ಠೇವಣಿಯ ಪ್ರಮಾಣವನ್ನು ವ್ಯತ್ಯಾಸಗೊಳಿಸಿ ತನ್ಮೂಲಕ ಅವುಗಳ ವ್ಯವಹಾರಗಳನ್ನು ಹತೋಟಿಯಲ್ಲಿಡುವುದು ರಿಸರ್ವ ಬ್ಯಾಂಕ್ ಈಚೆಗೆ ಅನುಸರಿಸುತ್ತಿರುವ ಇನ್ನೊಂದು ಕ್ರಮ. ಬ್ಯಾಂಕುಗಳ ಮೇಲ್ವಿಚಾರಣೆ ಮತ್ತು ಪರೀಕ್ಷಣ; ಬ್ಯಾಂಕುಗಳಿಗೆ ವ್ಯವಹಾರ ನಡೆಸಲು ಪರವಾನಗಿ ನೀಡುವುದು ಅಥವಾ ಬಿಡುವುದು; ಬ್ಯಾಂಕುಗಳಿಂದ ಅವುಗಳ ವಹಿವಾಟಿನ ಬಗ್ಗೆ ನಿಯತಕಾಲಿಕ ವಿವರಣೆ ವರದಿಗಳನ್ನು ಪಡೆದು ಅವನ್ನು ಪರಿಶೀಲನೆಗೆ ಒಳಪಡಿಸುವುದು; ಬ್ಯಾಂಕುಗಳ ಸಾಲನೀಡಿಕೆ ವ್ಯವಹಾರಗಳನ್ನು ಹಲವಾರು ನಿಬಂಧನೆಗಳಿಗೆ ಒಳಪಡಿಸಿ ಅವುಗಳನ್ನು ಮಿತಿಮೀರಿ ಹೋಗದಂತೆ ಎಚ್ಚರಿಕೆ ವಹಿಸುವುದು; ಬ್ಯಾಂಕ್ ವ್ಯವಹಾರಗಳಲ್ಲಿ ಅಹಿತಕಾರಿ ಬೆಳವಣಿಗೆಗಳಾಗದಂತೆ ಕಣ್ಣಿಟ್ಟು ಕಾಯ್ದು, ಅಂಥ ಪ್ರವೃತ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕುವುದು; ಎಲ್ಲ ಹಣ ಸಂಸ್ಥೆಗಳ ಮೇಲೆ ನೈತಿಕ ಭೌತಿಕ ಪ್ರಭಾವ ಬೀರಿ ಅವು ದೇಶದ ಹಿತಕ್ಕೆ ಅನುಗುಣವಾಗಿ ವರ್ತಿಸುವಂತೆ ಮಾಡುವುದು-ಇವೆಲ್ಲ ರಿಸರ್ವ ಬ್ಯಾಂಕಿನ ಹೊಣೆಗಳು.

4 ಸರ್ಕಾರದ ಬ್ಯಾಂಕು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ವ್ಯವಹಾರಗಳನ್ನು ರಿಸರ್ವ್ ಬ್ಯಾಂಕ್ ನಡೆಸುತ್ತದೆ. ಸರ್ಕಾರಕ್ಕೆ ಸಲ್ಲಿಸಬೇಕಾದ ಹಣದ ಸ್ವೀಕಾರ, ಅದು ಕೊಡಬೇಕಾದ ಹಣಪಾವತಿ, ಸರ್ಕಾರದ ಪರವಾಗಿ ಹಣದ ರವಾನೆ, ವಿದೇಶಿ ಚಲಾರ್ಥಗಳನ್ನು (ಕರೆನ್ಸಿ) ಕೊಳ್ಳುವುದು ಮತ್ತು ಮಾರುವುದು, ಸರ್ಕಾರದ ಸಾಲದ ವ್ಯವಹಾರಗಳ ನಿರ್ವಹಣೆ, ಬ್ಯಾಂಕಿಂಗ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ ನೀಡುವುದು-ಇವು ಈ ಕ್ಷೇತ್ರದಲ್ಲಿ ರಿಸರ್ವ ಬ್ಯಾಂಕಿನ ಕಾರ್ಯಗಳು. ಆದರೆ ಈ ಎಲ್ಲ ಕಾರ್ಯಗಳನ್ನೂ ನಿರ್ವಹಿಸಲು ದೇಶದ ಎಲ್ಲೆಡೆಗಳಲ್ಲೂ ರಿಸರ್ವ ಬ್ಯಾಂಕಿನ ಶಾಖೆಗಳಿಲ್ಲ. ರಿಸರ್ವ ಬ್ಯಾಂಕಿನ ಶಾಖೆಗಳಿಲ್ಲದಂಥ ಸ್ಥಳಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಅಥವಾ ಅದರ ಸಹಾಯಕ ಬ್ಯಾಂಕುಗಳು ರಿಸರ್ವ ಬ್ಯಾಂಕಿನ ಅಭಿಕರ್ತೃಗಳಾಗಿ ಈ ಕೆಲಸ ನಿರ್ವಹಿಸುತ್ತವೆ.

5 ವಿನಿಮಯ ದರದ ಪಾಲನೆ: ಚಿನ್ನದ ಮತ್ತು ಅನ್ಯದೇಶಗಳ ನಾಣ್ಯಗಳ ಲೆಕ್ಕದಲ್ಲಿ ಭಾರತದ ರೂಪಾಯಿಯ ವಿನಿಮಯ ದರ ಅಧಿಕೃತ ಮಟ್ಟದಲ್ಲೇ ಇರುವಂತೆ ಕ್ರಮ ಕೈಗೊಳ್ಳಬೇಕಾದ್ದು ರಿಸರ್ವ ಬ್ಯಾಂಕಿನ ಕರ್ತವ್ಯ. ಇದಕ್ಕಾಗಿ ರಿಸರ್ವ ಬ್ಯಾಂಕ್ ರೂಪಾಯಿಗೆ ಪ್ರತಿಯಾಗಿ ವಿದೇಶೀ ಹಣವನ್ನು ಕೊಳ್ಳಲು ಅಥವಾ ಮಾರಲು ಬಾಧ್ಯವಾಗಿರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದು ಈ ಬಗೆಯ ವ್ಯವಹಾದ ಕೈಗೊಂಡು ರೂಪಾಯಿ ಹಾಗೂ ವಿದೇಶೀ ವಿನಿಮಯಗಳ ಬೇಡಿಕೆ-ಪೂರೈಕೆಗಳನ್ನು ಆಧರಿಸಿ ರೂಪಾಯಿಯ ವಿನಿಮಯ ದರವನ್ನು ಅಧಿಕೃತ ಮಟ್ಟದಲ್ಲಿ ಕಾಯ್ದಿರಿಸುತ್ತದೆ. ಭಾರತದ ವಿದೇಶಿ ವ್ಯಾಪಾರದಲ್ಲಿ ಪ್ರಮುಖ ಪಾಲು ಪಡೆಯುವ ರಾಷ್ಟ್ರಗಳ ಕರೆನ್ಸಿಯ ದೃಷ್ಟಿಯಲ್ಲಿ ಭಾರತದ ರೂಪಾಯಿಯ ವಿನಿಮಯ ಮೌಲ್ಯವನ್ನು ಆಗಿಂದಾಗ್ಗೆ ನಿರ್ಧರಿಸಿ ಪ್ರಕಟಿಸುವುದು ರಿಸರ್ವ ಬ್ಯಾಂಕಿನ ಹೊಣೆಯಾಗಿದೆ.

6 ತೀರುವಳಿ ವ್ಯವಸ್ಥೆ : ದೇಶದಲ್ಲಿ ಕಾರ್ಯ ಪ್ರವೃತ್ತವಾದ ವಿವಿಧ ವಾಣಿಜ್ಯ ಬ್ಯಾಂಕುಗಳು ತಮ್ಮ ದೈನಂದಿನ ವ್ಯವಹಾರಗಳನ್ನು ಪರಸ್ಪರ ಕೊಡಬೇಕಾದ ಅಥವಾ ಪಡೆಯಬೇಕಾದ ಹಣದ ತೀರುವಳಿ ವ್ಯವಸ್ಥೆಯನ್ನು ಏರ್ಪಡಿಸಿ ನಿರ್ವಹಿಸುವ ಕೆಲಸವೂ ರಿಸರ್ವ ಬ್ಯಾಂಕಿಗೆ ಸೇರಿದ್ದು.

7 ಕೃಷಿ ಉದ್ದರಿ ಪೂರೈಕೆ: ಕೃಷಿ ಪ್ರಧಾನವಾದ ಭಾರತದಲ್ಲಿ ರೈತರಿಗೆ ಅವಶ್ಯವಾದ ಹಣಕಾಸನ್ನು ಒದಗಿಸಲು ರಿಸರ್ವ ಬ್ಯಾಂಕ್ ಕೃಷಿ ಉದ್ದರಿ ಇಲಾಖೆ ಎಂಬ ಪ್ರತ್ಯೇಕ ಇಲಾಖೆಯನ್ನೆ ತೆರೆದಿತ್ತು. ಈಚೆಗೆ ಕೃಷಿ ಉದ್ದರಿಯ ಪುನರ್ಧನ ಪೋಷಣೆಯ (ರೀ-ಫೈನಾನ್ಸ್) ಕಾರ್ಯಕ್ಕಾಗಿ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ರಿಸರ್ವ್‍ಬ್ಯಾಂಕ್ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ರಾಷ್ಟ್ರೀಯಬ್ಯಾಂಕ್ (ನಬಾರ್ಡ್) ಆರಂಭವಾಗಿ ರಿಸರ್ವ್ ಬ್ಯಾಂಕಿನ ಈ ಕಾರ್ಯಭಾರವನ್ನು ವಹಿಸಿಕೊಂಡಿದೆ.

8 ಅಂಕೆ-ಅಂಶ ಸಂಗ್ರಹ: ದೇಶದ ಹಣಕಾಸಿನ ಸ್ಥಿತಿಗಳಿಗೆ ಸಂಬಂಧಿಸಿದಂತೆ ನಾನಾ ಅಂಕೆ ಅಂಶಗಳನ್ನು ರಿಸರ್ವ್‍ಬ್ಯಾಂಕ್ ಸಂಗ್ರಹಿಸಿ ಪ್ರಕಟಿಸುತ್ತದೆ. ಈ ಕುರಿತು ಬ್ಯಾಂಕ್ ಪ್ರಕಟಿಸುವ ನಿಯತಕಾಲಿಕ ವರದಿಗಳು ಸರ್ಕಾರಕ್ಕೂ ಇತರ ಬ್ಯಾಂಕುಗಳಿಗೂ ಸಾರ್ವಜನಿಕರಿಗೂ ಉಪಯುಕ್ತವಾದವು. 9 ಸಿಬ್ಬಂದಿಯ ತರಬೇತಿ: ಬ್ಯಾಂಕುಗಳು, ಸಹಕಾರ ಸಂಸ್ಥೆಗಳು ಮುಂತಾದವಕ್ಕೆ ಅಗತ್ಯವಾದ ಸಿಬ್ಬಂದಿಯ ತರಬೇತಿಗಾಗಿ ರಿಸರ್ವ್‍ಬ್ಯಾಂಕ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುತ್ತಿದೆ. ಇದರಿಂದ ದೀರ್ಘಕಾಲದಲ್ಲಿ ಈ ಕ್ಷೇತ್ರದಲ್ಲಿ ದಕ್ಷ ಮತ್ತು ಅನುಭವಿ ಕೆಲಸಗಾರರು ಲಭ್ಯವಾಗುತ್ತಾರೆ. ದೇಶದ ಬ್ಯಾಂಕಿಂಗ್ ಮತ್ತು ಸಹಕಾರ ಕ್ಷೇತ್ರಗಳು ಉತ್ತಮವಾಗಿ ಕೆಲಸ ಮಾಡಲು ಸಹಾಯವಾಗುತ್ತದೆ.

ರಿಸರ್ವ್‍ಬ್ಯಾಂಕ್ ಮತ್ತು ಆರ್ಥಿಕಾಭಿವೃದ್ಧಿ: ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ರಿಸರ್ವ್ ಬ್ಯಾಂಕಿನ ಹೊಣೆ ಸಾಮಾನ್ಯವಾಗಿ ಹಣ ಮತ್ತು ಸಾಲ ನಿಯಂತ್ರಣಕ್ಕೆ ಸೀಮಿತವಾಗಿರುತ್ತದೆ. ಪದಾರ್ಥಗಳ ಬೆಲೆಗಳಲ್ಲೂ ಉತ್ಪಾದನೆ, ಅನುಭೋಗ, ಉದ್ಯೋಗ, ವರಮಾನಗಳಲ್ಲೂ ಆಗಿಂದಾಗ್ಗೆ ಸಂಭವಿಸುವ ಏರಿಳಿತಗಳನ್ನು ನಿವಾರಿಸಿ ದೇಶದ ಆರ್ಥಿಕಸ್ಥಿತಿಯನ್ನು ಕಾಪಾಡುವುದು ಬ್ಯಾಂಕುಗಳ ಕರ್ತವ್ಯ. ಆದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ರಿಸರ್ವ್ ಬ್ಯಾಂಕಿನ ಹೊಣೆ ಇನ್ನೂ ಗುರುತರವಾದ್ದು. ಅಭಿವೃದ್ಧಿಗೆ ಅಗತ್ಯವಾದ ಕಾರ್ಯಕ್ರಮಗಳನ್ನು ಕೈಗೊಳ್ಳುವುದೂ ಇದರ ಜವಾಬ್ದಾರಿ. ಉತ್ಪಾದನೆಯ ಸಾಧನಗಳನ್ನು ರೂಢಿಸಿ ದೇಶದ ಪರಮಾವಧಿ ಪ್ರಗತಿಗೆ ಅವು ಒದಗುವಂತೆ ತೊಡಗಿಸುವುದೂ ರಿಸರ್ವ್ ಬ್ಯಾಂಕಿನ ಕೆಲಸ. ಅಭಿವೃದ್ಧಿಗಾಗಿ ಹೆಚ್ಚು ಹೆಚ್ಚು ಹಣವನ್ನು ವೆಚ್ಚ ಮಾಡತೊಡಗಿದಾಗ ಬೆಲೆಗಳು ಏರದಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಭಾರತೀಯ ರಿಸರ್ವ್‍ಬ್ಯಾಂಕ್ ಈ ನಿಟ್ಟಿನಲ್ಲೂ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ರಾಜ್ಯ ಸರ್ಕಾರಗಳು ಅಗಾಧ ಹಣ ವೆಚ್ಚ ಮಾಡತೊಡಗಿದಾಗ, ಅದರಿಂದಾಗಿ ಅಧಿಕ ಹಣವನ್ನು ಚಲಾವಣೆಗೆ ತರಬೇಕಾಗುತ್ತದೆ. ಜನರ ಹಣದ ವರಮಾನವೂ ಅಧಿಕವಾಗುತ್ತದೆ. ಆದರೆ ಅದಕ್ಕೆ ಸಮವಾಗಿ ಪದಾರ್ಥಗಳ ಉತ್ಪಾದನೆ ತತ್‍ಕ್ಷಣದಲ್ಲೇ ಹೆಚ್ಚಾಗುವುದಿಲ್ಲ. ಹಣದ ವೆಚ್ಚ ಇಂದಾದರೆ ಅದರ ಫಲ ಮುಂದೆ ಎಂದೋ ದೊರಕುತ್ತದೆ. ಹಣದ ಪ್ರಸರಣದಿಂದ ಬೆಲೆಗಳು ಏರುವ ಪ್ರವೃತ್ತಿ ತೋರುವುದು ಸಹಜ. ಬೆಲೆಗಳು ಏರುವುದರಿಂದ ಜನಕ್ಕೆ ತೊಂದರೆಯಾಗುವುದೂ ಅಭಿವೃದ್ಧಿಕಾರ್ಯಗಳ ವೆಚ್ಚ ಏರುವುದೂ ಸಹಜ. ಬೆಲೆಗಳ ಏರಿಕೆಯನ್ನು ತಡೆಗಟ್ಟಲು ರಿಸರ್ವ್‍ಬ್ಯಾಂಕ್ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ದೇಶದಲ್ಲಿ ಹಣದ ಪರಿಚಲನೆ ಹೆಚ್ಚಾದಾಗ ಬ್ಯಾಂಕುಗಳ ಠೇವಣಿಗಳ ಮೊತ್ತ ಇನ್ನೂ ಬೆಳೆಯುತ್ತದೆ. ಅದಕ್ಕೆ ಅನುಗುಣವಾಗಿ ಉದ್ದರಿ ಸೃಷ್ಟಿಯಿಂದ ಜನಕ್ಕೆ ಸುಲಭವಾಗಿ ಉದ್ದರಿ ದೊರಕುವುದರಿಂದ ಖರ್ಚುಗಳು ಏರಿ, ಪದಾರ್ಥಗಳ ಬೇಡಿಕೆ ಅಧಿಕವಾಗಿ ಬೆಲೆಗಳು ಇನ್ನೂ ಏರುತ್ತವೆ. ಇವನ್ನೆಲ್ಲ ತಡೆಗಟ್ಟಲು ರಿಸರ್ವ್‍ಬ್ಯಾಂಕ್ ಅನೇಕ ನಿಯಂತ್ತಣ ಕ್ರಮಗಳನ್ನು ಕೈಗೊಳ್ಳುತ್ತದೆ. ಬಡ್ಡಿ ದರದ ನಿಷ್ಕರ್ಷ, ಬ್ಯಾಂಕ್ ಉದ್ದರಿ ಹತೋಟಿ. ಅವು ಅನಾವಶ್ಯಕ ಕಲಾಪಗಳಿಗೆ ಸಾಲನೀಡದಂತೆ ಕಟ್ಟುಪಾಡು ಮುಂತಾದ ನಾನಾ ವಿಧಾನಗಳಿಂದ ಅರ್ಥವ್ಯವಸ್ಥೆಯ ಅನಿಷ್ಟಕಾರಿ ಪ್ರವೃತ್ತಿಗಳನ್ನು ತಡೆಗಟ್ಟಲು ರಿಸರ್ವ್‍ಬ್ಯಾಂಕ್ ಯತ್ನಿಸಬೇಕಾಗುತ್ತದೆ. ಆದರೆ ಈ ನಿಯಂತ್ರಣ ಕ್ರಮಗಳಿಂದ ನೈಜ ಉದ್ಯಮ ಚಟುವಟಿಕೆಗಳಿಗೆ ತಡೆ ಉಂಟಾಗದಂತೆ ಎಚ್ಚರಿಕೆ ಕೂಡ ವಹಿಸಬೇಕಾಗುತ್ತದೆ. ನಿರ್ದಿಷ್ಟ ಮಾರ್ಗಗಳಲ್ಲಿ ಉದ್ದರಿ ಹರಿಯುವಂಗೆ ನಿಯಂತ್ರಿಸಬೇಕಾಗುತ್ತದೆ.

ದೇಶದ ಅಭಿವೃದ್ಧಿಕಾರ್ಯಗಳಿಗೆ ಸರ್ಕಾರ ಒದಗಿಸುವ ಮುಂಗಡ ಪತ್ರದ ನಿಗದಿತ ಹಣವನ್ನು ಪೂರೈಸುವುದು ರಿಸರ್ವ್‍ಬ್ಯಾಂಕಿನ ಕಾರ್ಯವಾಗಿದೆ. ಸಹಕಾರ ಸಂಘಗಳ ಮೂಲಕ ವ್ಯವಸಾಯಕ್ಕೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ಒದಗಿಸುವುದಕ್ಕಾಗಿ ಅದು ಪ್ರಯತ್ನ ಕೈಗೊಂಡಿದೆ. ಇದಕ್ಕಾಗಿ ಅದು ಈಗ ಪ್ರತ್ಯೇಕ ಸಂಸ್ಥೆಗಳನ್ನು ಸ್ಥಾಪಿಸಿದೆ.

ಕೈಗಾರಿಕಾಭಿವೃದ್ಧಿಗೆ ಅಗತ್ಯವಾದ ಹಣಕಾಸನ್ನು ಒದಗಿಸುವ ಕಾರ್ಯದಲ್ಲೂ ರಿಸರ್ವ್‍ಬ್ಯಾಂಕ್ ಹಿಂದೆ ಬಿದ್ದಿಲ್ಲ. ಇದಕ್ಕಾಗಿಯೇ ಅದು ಕೈಗಾರಿಕಾ ಹಣಕಾಸು ನಿಗಮ, ರಾಜ್ಯಗಳ ಕೈಗಾರಿಕಾ ಹಣಕಾಸು ನಿಗಮ, ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ, ರಾಷ್ಟ್ರೀಯ ಕೈಗಾರಿಕಾಭಿವೃದ್ಧಿ ನಿಗಮ, ಕೈಗಾರಿಕಾ ಉದ್ದರಿ ಮತ್ತು ವಿನಿಮಯ ಯೋಜನೆಯ ನಿಗಮ ಮತ್ತು ಕೈಗಾರಿಕಾಭಿವೃದ್ಧಿ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಮೂಲಕ ದೇಶದ ಅಭಿವೃದ್ಧಿಗಾಗಿ ಪಡೆಯಲಾಗಿರುವ ನೆರವೂ ಗಮನಾರ್ಹವಾದ್ದು.

ವಾಣಿಜ್ಯ ಬ್ಯಾಂಕುಗಳು: ಇವು ಭಾರತದ ಸಂಘಟಿತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಭಾರತೀಯ ಸ್ಟೇಟ್‍ಬ್ಯಾಂಕ್ ಸಂಯುಕ್ತ ಬಂಡವಾಳ ಕಂಪನಿಗಳಾಗಿ ನೋಂದಣಿಗೊಂಡು ವ್ಯವಹಾರ ನಡೆಸುತ್ತಿದ್ದು 1969 ಮತ್ತು 1980ರಲ್ಲಿ ರಾಷ್ಟ್ರೀಕರಣಗೊಂಡ ಒಟ್ಟು ಇಪ್ಪತ್ತು ದೊಡ್ಡ ಬ್ಯಾಂಕುಗಳು ಮತ್ತು ಖಾಸಗಿ ಒಡೆತನದಲ್ಲಿರುವ ಸಂಯುಕ್ತ ಬಂಡವಾಳ ಬ್ಯಾಂಕುಗಳು-ಇವೆಲ್ಲ ವಾಣಿಜ್ಯ ಬ್ಯಾಂಕುಗಳು.

ಭಾರತದಲ್ಲಿ ಐರೋಪ್ಯ ಮಾದರಿಯ ವಾಣಿಜ್ಯ ಬ್ಯಾಂಕುಗಳು ಸ್ಥಾಪನೆಯಾಗತೊಡಗಿದ್ದು 19ನೆಯ ಶತಮಾನದಲ್ಲಿ. 18ನೆಯ ಶತಮಾನದ ಅಂತ್ಯದ ವೇಳೆಗೆ ಈಸ್ಟ್ ಇಂಡಿಯ ಕಂಪನಿ ತನ್ನ ಕಲಾಪಗಳಿಗೆ ಪೂರಕವಾಗಿ ಏಜೆನ್ಸಿ ಗೃಹಗಳನ್ನು ಸ್ಥಾಪಿಸಿತು. ಇವು ಭಾರತೀಯ ವಾಣಿಜ್ಯ ಬ್ಯಾಂಕುಗಳ ಮೂಲಸಂಸ್ಥೆಗಳು, ಬ್ರಿಟಿಷ್ ಸರ್ಕಾರ ಈಸ್ಟ್ ಇಂಡಿಯ ಕಂಪನಿಯ ವಾಣಿಜ್ಯ ಹಕ್ಕುಗಳನ್ನು ಕಸಿದುಕೊಂಡ ತರುವಾಯ ಏಜೆನ್ಸಿ ಗೃಹಗಳ ಪ್ರಾಮುಖ್ಯ ಕ್ಷೀಣಿಸಿತು. ತರುವಾಯ ಬ್ಯಾಂಕ್ ಆಫ್ ಬೆಂಗಾಲ್ (1806), ಬ್ಯಾಂಕ್ ಆಫ್ ಬಾಂಬೆ(1840), ಮತ್ತು ಬ್ಯಾಂಕ್ ಆಫ್ ಮದ್ರಾಸ್ (1848) ಎಂಬ ಮೂರು ಪ್ರಾಂತೀಯ ಬ್ಯಾಂಕುಗಳು ಸ್ಥಾಪನೆಯಾದುವು, ಅವು ಕೂಡು ಬಂಡವಾಳ ಸಂಸ್ಥೆಗಳಾಗಿದ್ದುವು. ಇವುಗಳ ಷೇರುದಾರರು ಬಹುತೇಕ ವಿದೇಶಿಯರಾಗಿದ್ದರು. ಆಗಿನ ಭಾರತ ಸರ್ಕಾರವೂ ಇವುಗಳಲ್ಲಿ ಕೆಲವು ಷೇರುಗಳನ್ನು ಪಡೆದಿದ್ದು ಇವುಗಳ ಕಲಾಪಗಳ ಮೇಲೆ ಹತೋಟಿ ಹೊಂದಿತ್ತು. 1860 ರಲ್ಲಿ ಜಾರಿಗೆ ಬಂದ ಬ್ಯಾಂಕ್ ಕಾನೂನ ಮಿತ ಹೊಣೆಗಾರಿಕೆಯ ತತ್ತ್ವದಮೇಲೆ ಬ್ಯಾಂಕುಗಳನ್ನು ಸ್ಥಾಪಿಸಿಕೊಳ್ಳಲು ಅವಕಾಶ ಕಲ್ಪಿಸಿತು. ಸುಮಾರು ಅದೇ ವೇಳೆಗೆ ಪ್ರಾರಂಭವಾದ ಸ್ವದೇಶಿ ಚಳವಳಿ ವಿದೇಶಿ ಬ್ಯಾಂಕುಗಳನ್ನು ಬಹಿಷ್ಕರಿಸಿ ಭಾರತೀಯ ಬ್ಯಾಂಕುಗಳಲ್ಲಿ ಮಾತ್ರ ವ್ಯವಹರಿಸಬೇಕೆಂದು ಜನರನ್ನು ಪ್ರೋತ್ಸಾಹಿಸಿತು. ಪರಿಣಾಮವಾಗಿ ಅನೇಕ ದೇಶೀಯ ಕೂಡು ಬಂಡವಾಳ ಬ್ಯಾಂಕುಗಳು ಅಸ್ತಿತ್ತ್ವಕ್ಕೆ ಬಂದುವು. 1935 ರಲ್ಲಿ ಕೇಂದ್ರೀಯ ಬ್ಯಾಂಕಾಗಿ ಸ್ಥಾಪಿತವಾದ ಭಾರತೀಯ ರಿಸರ್ವ ಬ್ಯಾಂಕಿನ ದಕ್ಷನಾಯಕತ್ವದಿಂದಲೂ 1949ರಲ್ಲಿ ಜಾರಿಗೆ ಬಂದ ಬ್ಯಾಂಕಿಂಗ್ ಕಂಪನಿಗಳ ಅಧಿನಿಯಮದಿಂದಲೂ ಭಾರತದ ವಾಣಿಜ್ಯ ಬ್ಯಾಂಕುಗಳು ಗಮನಾರ್ಹ ಸ್ಥಿರತೆಯನ್ನೂ ಪ್ರಭಾವವನ್ನೂ ಗಳಿಸಿಕೊಂಡುವು.

ವಾಣಿಜ್ಯ ಬ್ಯಾಂಕುಗಳನ್ನು ಅನುಸೂಚಿತ (ಷೆಡ್ಯೂಲ್ಡ್) ಮತ್ತು ಅನನುಸೂಚಿತ (ನಾನ್ ಷೆಡ್ಯೂಲ್ಡ್) ಎಂದು ವಿಂಗಡಿಸಲಾಗಿದೆ. ಭಾರತೀಯ ರಿಸರ್ವ ಬ್ಯಾಂಕ್ ಕಾಯಿದೆ (1934) ಎರಡನೆಯ ಅನುಸೂಚಿಯ ಪ್ರಕಾರ ಇರುವ ಬ್ಯಾಂಕುಗಳು ಅನುಸೂಚಿತ ಬ್ಯಾಂಕುಗಳು, ಇದಕ್ಕೆ ಒಳಪಡದವು ಅನನುಸೂಚಿತ ಬ್ಯಾಂಕುಗಳಾಗಿವೆ. ಯಾವುದೇ ವಾಣಿಜ್ಯ ಬ್ಯಾಂಕು ಅನುಸೂಚಿತಕ್ಕೆ ಒಳಪಡಬೇಕಾದರೆ:

1 ಅದರ ಸಂದಾಯ ಬಂಡವಾಳ ಮತ್ತು ಮೀಸಲು ನಿಧಿಗಳ ಒಟ್ಟು ಐದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬಾರದು. 2 ತನ್ನ ಚಾಲ್ತಿ ಹಾಗೂ ವಾಯಿದೆ ಠೇವಣಿಗಳ ಶೇಕಡಾ ಮೂರರಷ್ಟು ನಗದನ್ನು ಮೀಸಲಾಗಿ ರಿಸವ್ ಬ್ಯಾಂಕಿನಲ್ಲಿ ಠೇವಣಿ ಇಡಬೇಕು. ನಗದು ಮೀಸಲಿನ ಶೇಕಡಾ ಪ್ರಮಾಣವನ್ನು ರಿಸರ್ವ್ ಬ್ಯಾಂಕ್ ಶೇಕಡಾ 15ರ ವರೆಗೆ ಹೆಚ್ಚಿಸಬಹುದು, 3 ಬ್ಯಾಂಕ್ ಪ್ರತಿ ವಾರ ರಿಸರ್ವ್ ಬ್ಯಾಂಕಿಗೆ ತನ್ನ ವಹಿವಾಟುಗಳ ವರದಿ ಒಪ್ಪಿಸಬೇಕು. 4 ಕಂಪನಿಗಳ ಅಧಿನಿಯಮದ 1856 ಮೂರನೆಯ ಕಲಮಿನಲ್ಲಿ ಪ್ರೋಕ್ತವಾಗಿರುವಂತೆ ಆ ಬ್ಯಾಂಕ್ ರಾಜ್ಯ ಸಹಕಾರ ಬ್ಯಾಂಕ್ ಇಲ್ಲವೆ ಕಂಪನಿಯಾಗಿರಬೇಕು. ದೇಶದಲ್ಲಿ 14 ವಿದೇಶಿ ಬ್ಯಾಂಕುಗಳೂ 73 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳೂ ಸೇರಿದಂತೆ ಒಟ್ಟು 148 ಅನುಸೂಚಿತ ಬ್ಯಾಂಕುಗಳಿವೆ.

ಅನುಸೂಚಿತ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕಿನಿಂದ ಕೆಲವು ಸೌಲಭ್ಯಗಳು ದೊರಕುತ್ತವೆ. ಅನುಮೋದಿತ ಉದ್ದರಿಪತ್ರಗಳ ಆಧಾರದಮೇಲೆ ಉದ್ದರಿ ಪಡೆಯ ಬಹುದು; ತಮ್ಮ ಹುಂಡಿಗಳನ್ನು ವಟಾಯಿಸಿಕೊಳ್ಳಬಹುದು ಮತ್ತು ರಿಯಾಯಿತಿ ದರದಲ್ಲಿ ಹಣಪಾವತಿ ಹಾಗೂ ವರ್ಗಾವಣೆಯ ಸೌಲಭ್ಯ ಪಡೆಯಬಹುದು.

ಅನುಸೂಚಿತ ಬ್ಯಾಂಕುಗಳ ಮೇಲೆ ರಿಸರ್ವ್ ಬ್ಯಾಂಕಿಗೆ ಯಾವುದೇ ರೀತಿಯ ವಿಶೇಷ ನಿಯಂತ್ರಣ ಇರುವುದಿಲ್ಲ. ಆದರೂ ಈ ಬ್ಯಾಂಕುಗಳು ರಿಸರ್ವ್ ಬ್ಯಾಂಕಿಗೆ ತಮ್ಮ ವಹಿವಾಟುಗಳ ಮಾಸಿಕ ವರದಿ ಒಪ್ಪಿಸಬೇಕು ಮತ್ತು ತಮ್ಮ ಠೇವಣಿಗಳ ಒಂದು ಭಾಗವನ್ನು ನಗದು ಮೀಸಲಾಗಿ ರಿಸರ್ವ್ ಬ್ಯಾಂಕಿನಲ್ಲಿ ಠೇವಣಿ ಇಡಬೇಕೆಂಬ ನಿಯಮವಿದೆ, ರಿಸರ್ವ್ ಬ್ಯಾಂಕಿನಿಂದ ಅನುಸೂಚಿತ ಬ್ಯಾಂಕುಗಳು ಪಡೆಯುವ ಸೌಲಭ್ಯಗಳನ್ನು ಇವು ಕೂಡ ಪಡೆಯುತ್ತವೆ. 1939 ರಲ್ಲಿ ದೇಶದಲ್ಲಿ ಒಟ್ಟು 1500 ಕೂಡುಬಂಡವಾಳ ಬ್ಯಾಂಕುಗಳಿದ್ದು ಅವುಗಳ ಪೈಕಿ 1,400 ಅನುಸೂಚಿತ ಬ್ಯಾಂಕುಗಳಾಗಿದ್ದುವು. ಬಹುತೇಕ ಬ್ಯಾಂಕುಗಳ ಪಾವತಿಯಾದ ಬಂಡವಾಳದ ಮೊತ್ತ ರೂ 50,000 ಕ್ಕಿಂತಲೂ ಕಡಿಮೆ ಇತ್ತು. 1949 ರ ಬ್ಯಾಂಕ್ ಅಧಿನಿಯಮದ ಮತ್ತು ತರುವಾಯ ಅದಕ್ಕೆ ತಂದ ತಿದ್ದುಪಡಿಗಳ ಪ್ರಕಾರ ಸಾಧಿಸಲಾದ ಬ್ಯಾಂಕುಗಳ ಕಡ್ಡಾಯ ವಿಲೀನದ ಫಲವಾಗಿ ಅನುಸೂಚಿತ ಬ್ಯಾಂಕುಗಳ ಸಂಖ್ಯೆ ಕ್ಷೀಣಿಸುತ್ತ ಬಂದಿದೆ.

ಒಡೆತನದ ಆಧಾರದ ಮೇಲೆ ವಾಣಿಜ್ಯ ಬ್ಯಾಂಕುಗಳನ್ನು ಸರ್ಕಾರಿ ವಲಯದ ಬ್ಯಾಂಕುಗಳು ಮತ್ತು ಖಾಸಗಿ ವಲಯದ ಬ್ಯಾಂಕುಗಳು ಎಂದು ವಿಂಗಡಿಸಬಹುದು. ಭಾರತೀಯ ಸ್ಟೇಟ್ ಬ್ಯಾಂಕ್, ಅದರ ಸಹಾಯಕ ಬ್ಯಾಂಕುಗಳು, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ವiತ್ತು ಸರ್ಕಾರಿ ವಲಹದ ಸಂಸ್ಥೆಗಳು ಇವುಗಳ ಒಟ್ಟು ಸಂಖ್ಯೆ 101. ದೇಶದಲ್ಲಿ ವ್ಯವಹಾರ ನಡೆಸುತ್ತಿರುವ 14 ವಿದೇಶಿ ಬ್ಯಾಂಕುಗಳೂ ಸೇರಿದಂತೆ ಖಾಸಗಿ ಕ್ಷೇತ್ರದಲ್ಲಿ ಒಟ್ಟು 52 ಬ್ಯಾಂಕುಗಳಿವೆ.

ಕಾರ್ಯಭಾರಗಳು; ವಾಣಿಜ್ಯ ಬ್ಯಾಂಕ್ ಉಳಿತಾಯಗಾರರು ಮತ್ತು ಸಾಲಗಾರರ ನಡುವಣ ಹಣಕಾಸು ಮಧ್ಯವರ್ತಿ. ಆದರೆ ಇಂದಿನ ಯೋಜಿತ ಅರ್ಥ ವ್ಯವಸ್ಥೆಯಲ್ಲಿ ವಾಣಿಜ್ಯ ಬ್ಯಾಂಕಿನ ಪಾತ್ರ ಇಷ್ಟಕ್ಕೆ ಸೀಮಿತವಲ್ಲ-ಪರಿವರ್ತನೆಯ ಸಾಧನವಾಗಿ ಅದು ಕಾರ್ಯನಿರ್ವಹಿಸಬೇಕಾಗುತ್ತದೆ; ರಾಷ್ಟ್ರೀಯ ಉತ್ಪನ್ನದ ಹೆಚ್ಚಳ ಪ್ರಾದೇಶಿಕ ಅಸಮತೆಗಳ ನಿವಾರಣೆ, ಹೆಚ್ಚು ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ಆರ್ಥಿಕ ಸ್ಥಿರತೆ ಇವನ್ನು ಸಾಧಿಸುವ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಹೆಗಲು ಕೊಡಬೇಕಾಗಿದೆ. ಈ ಕಾರಣದಿಂದಾಗಿ ವಾಣಿಜ್ಯ ಬ್ಯಾಂಕುಗಳ ಅರ್ಥ ಹಾಗೂ ಕಾರ್ಯಗಳು ವಿಕಾಸಗೊಳ್ಳುತ್ತವೆ. ವಾಣಿಜ್ಯ ಬ್ಯಾಂಕುಗಳ ವ್ಯವಹಾರಗಳಲ್ಲಿ ಸಾಮಾಜಿಕ ವೆಚ್ಚ ಮತ್ತು ಹೊಣೆಗಾರಿಕೆಗಳ ಪಾಲು ಹೆಚ್ಚಾಗುತ್ತಿದೆ.

ಕಾರ್ಯತಃ ಭಾರತೀಯ ವಾಣಿಜ್ಯ ಬ್ಯಾಂಕುಗಳು ಇತರ ದೇಶಗಳ ವಾಣಿಜ್ಯ ಬ್ಯಾಂಕುಗಳಿಗಿಂತ ಭಿನ್ನವಲ್ಲ. 1949 ರ ಬ್ಯಾಂಕ್ ನಿಯಂತ್ರಣ ಕಾಯಿದೆಯ ಅಧಿನಿಯಮದಂತೆ ಭಾರತೀಯ ವಾಣಿಜ್ಯ ಬ್ಯಾಂಕುಗಳ ಕಾರ್ಯಭಾರಗಳಿವು:

1 ಠೇವಣಿಗಳ ಸ್ವೀಕಾರ: ಜನರಿಂದ ಮತ್ತು ಸಂಸ್ಥೆಗಳಿಂದ ಠೇವಣಿಗಳನ್ನು ಸ್ವೀಕರಿಸುವುದು. ಈ ಠೇವಣಿಗಳಲ್ಲಿ ಮೂರು ವಿಧ: ಚಾಲ್ತಿ ಠೇವಣಿಗಳು, ಉಳಿತಾಯ ಠೇವಣಿಗಳು ಮತ್ತು ಸಾವಧಿ ಠೇವಣಿಗಳು. 2 ಉದ್ದರಿ ನೀಡಿಕೆ. 3 ಉದ್ದರಿ ಸೃಷ್ಟಿ ಮತ್ತು ತತ್ಸಂಬಂಧಿ ಕಾರ್ಯಗಳು.

ವಾಣಿಜ್ಯ ಬ್ಯಾಂಕುಗಳು 1949 ರ ಬ್ಯಾಂಕ್ ನಿಯಂತ್ರಣ ಕಾಯಿದೆಯ ಅಧಿನಿಯಮಕ್ಕೆ ಹೊರತಾದ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ಹೀಗೆ, ವಿದೇಶಗಳಲ್ಲಿ ಬಳಕೆಯಲ್ಲಿರುವ ಯಂತ್ರೋಪಕರಣಗಳನ್ನು ಖರೀದಿಸಿ ಅವನ್ನು ಗುತ್ತಿಗೆ ಅಥವಾ ಬಾಡಿಗೆಗಾಗಿ ಕೊಡುವ ಪದ್ದತಿ ವಾಣಿಜ್ಯ ಬ್ಯಾಂಕುಗಳಿಗೆ ನಿಷಿದ್ಧವಾಗಿದೆ. ಇದೇ ರೀತಿ ಈ ವ್ಯವಹಾರಗಳಿಗೆ ಭಾರತೀಯ ಬ್ಯಾಂಕುಗಳು ಪರಕ್ರಾಮ್ಯ ಸಂಲೇಖಗಳಲ್ಲಿ (ನೆಗೋಷಿಯಬಲ್ ಇನ್‍ಸ್ಟ್ರುಮೆಂಟ್ಸ್) ವಹಿವಾಟು ನಡೆಸುವಂತಿಲ್ಲ.

ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣ: ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣ ಭಾರತೀಯ ಸ್ಟೇಟ್ ಬ್ಯಾಂಕಿನ ಸ್ಥಾಪನೆಯ ಕಾಲದಿಂದಲೂ ಚರ್ಚಿತ ವಿಷಯವಾಗಿತ್ತು. 1949ರ ಬ್ಯಾಂಕ್ ನಿಯಂತ್ರಣ ಕಾಯಿದೆಯ ಅಧಿನಿಯಮದ ಫಲವಾಗಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಏಕರೂಪತೆ ಮತ್ತು ಆಂತರಿಕ ಹೊಂದಾಣಿಕೆ ಪ್ರಾಪ್ತವಾಗಿ ಠೇವಣಿಗಳ ಸಂಗ್ರಹಣೆಗೂ ಉದ್ದರಿ ವಿತರಣೆಗಳಿಗೂ ಗಮನಾರ್ಹವಾದ ಬೆಂಬಲ ದೊರಕಿತು. ಆದರೂ ಅಭಿವೃದ್ಧಿ ಯೋಜನೆಗಳ ಆದ್ಯತೆಗೆ ಅನುಗುಣವಾಗಿ ಸಾಲವಿತರಣೆಯಲ್ಲಿ ಒಂದು ನಿಕಟ ಆಂತರಿಕ ಸಂಬಂಧದ ಆವಶ್ಯಕತೆ ಇತ್ತು. ಏಕ ಸ್ವಾಮ್ಯ ಪ್ರವೃತ್ತಿಗಳು, ಅಧಿಕಾರ ವಿಕೇಂದ್ರಿಕರಣ ಮತ್ತು ಸಂಪನ್ಮೂಲಗಳ ಅಸಮರ್ಪಕ ವಿನಿಯೋಗಗಳನ್ನು ತಡೆಗಟ್ಟಿ ಸಮತೂಕದ ಬೆಳೆವಣಿಗೆ ಸಾಧಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಕೆಲವು ಮೂಲಭೂತ ಸಾಮಾಹಿಕ ಆರ್ಥಿಕ ಗುರಿಗಳನ್ನು ಸಾಧಿಸಬೇಕಾಗುತ್ತದೆ. ರಾಷ್ಟ್ರೀಕರಣದಿಂದ ಬ್ಯಾಂಕಿಂಗ್ ವ್ಯವಸ್ಥೆಯ ಕೆಲವು ನ್ಯೂನತೆಗಳನ್ನು ನಿವಾರಿಸಿಲೊಳ್ಳಬಹುದಾದರೂ ಸರಿಯಾದ ಏರ್ಪಾಡುಗಳನ್ನು ಮಾಡಿಕೊಳ್ಳದೆ ಅದರ ಅನುಷ್ಠಾನ ಕಷ್ಟವಾದೀತು ಎಂಬ ದೃಷ್ಟಿಯಿಂದ ಮೊದಲ ಹೆಚ್ಚೆಯಾಗಿ ವಾಣಿಜ್ಯ ಬ್ಯಾಂಕುಗಳನ್ನು ಸಾಮಾಜಿಕ ನಿಯಂತ್ರಣಕ್ಕೆ ಒಳಪಡಿಸಬೇಕೆಂದು ನಿರ್ಧರಿಸಲಾಯಿತು. ಈ ಕ್ರಮದಿಂದ ಬ್ಯಾಂಕುಗಳ ಕಾರ್ಯಕಲಾಪಗಳು ವಿಸ್ತøತಗೊಂಡು ಉದ್ಧರಿ ಸಂವಿಭಾಗದಲ್ಲಿ ಕೃಷಿ ಮತ್ತು ಕೈಗಾರಿಕೆಗಳಿಗೆ ಉತ್ತಮ ಸ್ಥಾನಮಾನಗಳು ಪ್ರಾಪ್ತವಾಗುವುವೆಂದೂ ಅಭಿವೃದ್ಧಿಯೋಜನೆಗಳ ಯಶಸ್ವೀ ಅನುಷ್ಠಾನಕ್ಕೆ ಅನುಕೂಲವಾಗುವುವೆಂದೂ ಭಾವಿಸಲಾಗಿತ್ತು. ರಿಸರ್ವ್ ಬ್ಯಾಂಕಿನ. ವಿ.ಎ. ಪನಂಡೀಕರ್ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣವನ್ನು ಕುರಿತು 1967 ರಲ್ಲಿ ಸರ್ಕಾರಕ್ಕೆ ಒಪ್ಪಿಸಿದ ವರದಿಂiÀiಲ್ಲಿ ರಾಷ್ಟ್ರೀಕರಣಕ್ಕೆ ಬದಲಾಗಿ ವಾಣಿಜ್ಯ ಬ್ಯಾಂಕುಗಳ ಮೇಲೆ ಸಾಮಾಜಿಕ ನಿಯಂತ್ರಣ ವಿಧಿಸಬೇಕೆಂದೂ ಬ್ಯಾಂಕುಗಳಿಗೆ ಯುಕ್ತ ನಿರ್ದೇಶನ ನೀಡುವುದಕ್ಕಾಗಿ ಫ್ರೆಂಚ್ ಮಾದರಿಯಲ್ಲಿ ರಾಷ್ಟ್ರೀಯ ಉದ್ದರಿ ಸಲಹಾಮಂಡಳಿಯೊಂದನ್ನು ಸ್ಥಾಪಿಸಬೇಕೆಂದೂ ಸೂಚಿಸಿದ್ದರು. ಅದರಂತೆ 1967ಡಿಸೆಂಬರ್ ಮೂರನೆಯ ವಾರದಲಿ ಸಾಮಾಜಿಕ ನಿಯಂತ್ರಣ ಅಧಿನಿಯಮ ರಾಷ್ಟ್ರಾಧ್ಯಕ್ಷರ ಒಪ್ಪಿಗೆ ಪಡೆಯಿತು. ರಾಷ್ಟ್ರೀಯ ಉದ್ದರಿ ಸಲಹಾಮಂಡಳಿಯ ಸ್ಥಾಪನೆ ಮತ್ತು ಪ್ರತಿಯೊಂದು ಬ್ಯಾಂಕಿನ ನಿರ್ದೇಶಕರ ಮಂಡಳಿಯ ಪುನಾರಚನೆ ಇವು ಸಾಮಾಜಿಕ ನಿಯಂತ್ರಣ ಅಧಿನಿಯಮದ ಉದ್ದೇಶದ್ವಯಗಳು. ಅದರಂತೆ, 1968ರ ಜನವರಿಯಲ್ಲಿ ಅಖಿಲ ಭಾರತದ ಸಲಹಾಮಂಡಳಿ ಸ್ಥಾಪಿತವಾಗಿ ಕಾರ್ಯಾರಂಭಿಸಿತು 1969 ಫೆಬ್ರುವರಿ 1 ರಂದು ವಾಣಿಜ್ಯ ಬ್ಯಾಂಕುಗಳ ಮೇಲೆ ಸಾಮಾಜಿಕ ನಿಯಂತ್ರಣ ಅನುಷ್ಠಾನ್ಕಕೆ ಬಂತು. ನಿಯಂತ್ರಣದ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ವಿವಿಧ ಕ್ಷೇತ್ರಗಳಿಗೆ ಸಾಲ ವಿತರಿಸುವಲ್ಲಿ ಉದ್ದರಿ ಸಲಹಾಮಂಡಳಿ ನೆರವಾಗತೊಡಗಿತು. ಬ್ಯಾಂಕಿಂಗ್ ಕಂಪನಿಗಳು ತಂತಮ್ಮ ನಿರ್ದೇಶಕರ ಮಂಡಳಿಗಳನ್ನು ಪುನಾರಚಿಸಿಕೊಂಡವು. ಕೃಷಿ, ಗ್ರಾಮೀಣ ಅಭಿವೃದ್ಧಿ, ಸಣ್ಣ ಕೈಗಾರಿಕೆಗಳು ಸಹಕಾರಿ ಬ್ಯಾಂಕ್ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಪ್ರಾಯೋಗಿಕ ಅನುಭವವುಳ್ಳವರು ನಿರ್ದೇಶಕ ಮಂಡಳಿಗಳಲ್ಲಿ ಸ್ಥಾನ ಪಡೆದರು. ಆದರೆ ಸಾಮಾಜಿಕ ನಿಯಂತ್ರಣ ಅಭಿವೃದ್ಧಿಶೀಲ ಅರ್ಥವ್ಯವಸ್ಥೆಯೊಂದರ ರಾಷ್ಟ್ರೀಯ ಆಧ್ಯತೆಗಳು ಮತ್ತು ಗುರಿಗಳಿಗೆ ಅನುಗುಣವಾದ ಆವಶ್ಯಕತೆಗಳನ್ನು ಪೂರೈಸುವಷ್ಟು ಸಮರ್ಥವಲ್ಲ ಎಮಬುದು ಮನವರಿಕೆಯಾಯಿತು. ಆದ್ದರಿಂದ ಸರ್ಕಾರ 1969 ಜುಲೈ 19 ರಂದು ಒಂದು ಸುಗ್ರೀವಾಜ್ಞೆ ಹೊರಡಿಸಿ ಕನಿಷ್ಠ ರೂ. 50 ಕೋಟಿ ಠೇವಣಿಗಳಿದ್ದ 14 ಪ್ರಮುಖ ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಿಸಿತು; ದೇಶದಲ್ಲಿ ಸಮಾಜವಾದೀ ವ್ಯವಸ್ಥೆಯನ್ನು ಸ್ಥಾಪಿಸಲು ಆವಶ್ಯವಾದ ಕ್ರಮವಿದೆಂದು ಸಾರಿತು. ಈ ಕ್ರಮದಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಅದರ ಸಹಾಯಕ ಬ್ಯಾಂಕುಗಳೂ ಸೇರಿದಂತೆ ಇಡೀ ದೇಶದ ಬ್ಯಾಂಕ್ ವ್ಯವಹಾರದ ಅಧಿಕಾರಾಂಶ ಸರ್ಕಾರದ ಅಧೀನಕ್ಕೆ ಒಳಪಟ್ಟಿತು. ರಾಷ್ಟ್ರೀಕರಣ ಗೊಂಡ ಬ್ಯಾಂಕುಗಳು ಸ್ಥಾಪಿತವಾದ ವರ್ಷ ಮತ್ನು ರಾಷ್ಟ್ರೀಕರಣದ ವೇಳೆ ಅವು ಹೊಂದಿದ್ದ ಠೇವಣಿಗಳ ವಿವರಗಳನ್ನು ಮುಂದೆ ಕೊಡಲಾಗಿದೆ. ಬ್ಯಾಂಕು

ಸ್ಥಾಪಿತವಾದ ವರ್ಷ ಠೇವಣಿಗಳ ಮೊತ್ತ 1969ರಲ್ಲಿ (ಕೋಟಿ ರೂ)

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ ... 1911 432

ಬ್ಯಾಂಕ್ ಆಫ್ ಇಂಡಿಯ ... 1906 395

ಪಂಜಾಬ್ ನ್ಯಾಷನಲ್ ಬ್ಯಾಂಕ್ ... 1894 356

ಬ್ಯಾಂಕ್ ಆಫ್ ಬರೋಡ ... 1908 314

ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ ... 1943 241

ಕೆನರಾ ಬ್ಯಾಂಕ್ ... 1906 146

ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯ ... 1950 144

ದೇನಾ ಬ್ಯಾಂಕ್ ... 1906 146

ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ... 1919 115

ಅಲಹಬಾದ್ ಬ್ಯಾಂಕ್ ... 1865 113

ಸಿಂಡಿಕೇಟ್ ಬ್ಯಾಂಕ್ ... 1925 112

ಇಂಡಿಯನ್ ಓವರ್‍ಸೀಸ್ ಬ್ಯಾಂಕ್ ... 1936 93

ಇಂಡಿಯನ್ ಬ್ಯಾಂಕ್ ... 1907 85

ಬ್ಯಾಂಕ್ ಆಫ್ ಮಹಾರಾಷ್ಟ್ರ ... 1935 73



2,741


1980 ಏಪ್ರಿಲ್ 15 ರಂದು ಮತ್ತೆ 6 ಬ್ಯಾಂಕುಗಳನ್ನು ರಾಷ್ಟ್ರೀಕರಿಸಲಾಯಿತು: 1 ಆಂಧ್ರ ಬ್ಯಾಂಕ್. 2 ಕಾರ್ಪೋರೇಷನ್ ಬ್ಯಾಂಕ್, 3 ದಿ ನ್ಯೂ ಬ್ಯಾಂಕ್ ಆಫ್ ಇಂಡಿಯ, 4 ದಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, 5 ಪಂಜಾವ್ ಅಂಡ್ ಸಿಂಧ್ ಬ್ಯಾಂಕ್ ಮತ್ತು 6 ವಿಜಯ ಬ್ಯಾಂಕ್. ಬ್ಯಾಂಕುಗಳ ರಾಷ್ಟ್ರೀಕರಣದಿಂದ ನಿರೀಕ್ಷಿಸಲಾಗಿದ್ದ ಅನುಕೂಲಗಳು ಇವು: 1 ರಾಷ್ಟ್ರೀಕೃತ ಬ್ಯಾಂಕುಗಳು ದೇಶದ ಅಭಿವೃದ್ಧಿ ಕಾರ್ಯದಲ್ಲಿ ಆದ್ಯತಕ್ಷೇತ್ರಗಳಿಗೆ ನೆರವು ನೀಡುವುದರ ಮೂಲಕ ಆರ್ಥಿಕ ಪ್ರಗತಿಗೆ ನೆರವಾಗುತ್ತವೆ. 2 ಷೇರುದಾರರ ಬ್ಯಾಂಕುಗಳಿಗಿದ್ದ ಲಾಭದ ದೃಷ್ಟಿಯನ್ನು ಬದಿಗೊತ್ತಿ ವೆಚ್ಚಕ್ಕಿಂತ ಸಾಮಾಜಿಕ ಗುರಿಗಳ ಕಡೆಗೆ ಇವು ಹೆಚ್ಚಿನ ಲಕ್ಷ್ಯ ನೀಡುವುದು ಸಾಧ್ಯವಾಗುತ್ತದೆ. 3 ರಾಷ್ಟ್ರದ ಪಂಚವಾರ್ಷಿಕ ಯೋಜನೆಯಲ್ಲಿ ನಿರೂಪಿಸಿದ ರೀತಿಯಲ್ಲಿ ಬಂಡವಾಳ ಹೂಡಿಕೆಗೆ ಇವು ಅನುವು ಮಾಡಿಕೊಡುತ್ತವೆ. 4 ರಾಷ್ಟ್ರೀಕರಣಕ್ಕೆ ಮುಂಚೆ ಬ್ಯಾಂಕುಗಳು ಕೆಲವು ಕ್ಷೇತ್ರಗಳನ್ನು ಬಹಳವಾಗಿ ಅಲಕ್ಷಿಸಿದ್ದುವು. ಇನ್ನು ಕೆಲವು ವಲಯಗಳಲ್ಲಿ ಅತಿಯಾದ ಸ್ಪರ್ಧೆಯಿತ್ತು. ಕೆಲವು ಪ್ರದೇಶಗಳಲ್ಲಿ ಹಲವಾರು ಬ್ಯಾಂಕುಗಳು ಹರಡಿಕೊಂಡಿದ್ದರೆ ಇನ್ನು ಕೆಲವು ಪ್ರದೇಶಗಳು ಬ್ಯಾಂಕ್ ಸೌಲಭ್ಯವಿಲ್ಲದೆ ಹಿಂದುಳಿದಿದ್ದುವು. ಈ ವ್ಯತ್ಯಾಸಗಳನ್ನು ನಿವಾರಿಸುವುದು ರಾಷ್ಟ್ರೀಕೃತ ಬ್ಯಾಂಕುಗಳ ಹೊಣೆ. 5 ಕೃಷಿಕರಿಗೂ ಸಣ್ಣ ಕೈಗಾರಿಕೋದ್ಯಮಿಗಳಿಗೂ ಸಣ್ಣ ವ್ಯಾಪಾರಿಗಳಿಗೂ ಹಣ ಒದಗಿಸುವುದು ಇವುಗಳಿಂದ ಹೆಚ್ಚು ಸಾಧ್ಯ. ರಾಷ್ಟ್ರೀಯ ಉತ್ಪನ್ನದಲ್ಲಿ ಸುಮಾರು ಅರ್ಧದಷ್ಟು ಪಾಲು ಪಡೆದಿರುವ ಕೃಷಿ ಕ್ಷೇತ್ರಕ್ಕೆ ಬ್ಯಾಂಕುಗಳ ಒಟ್ಟು ಸಾಲದಲ್ಲಿ ಇಲ್ಲಿಯತನಕ ಲಭ್ಯವಾಗುತ್ತಿದ್ದುದರ ಶೇಕಡಾ 10ರಷ್ಟು ಮಾತ್ರ. 6 ಭಾರತದ ರಫ್ತು ವ್ಯಾಪಾರ, ಜನರ ವಸತಿ ಸೌಕರ್ಯ ಇವಕ್ಕೂ ಈ ಬ್ಯಾಂಕುಗಳು ಹೆಚ್ಚು ಗಮನಗೊಡುತ್ತವೆ. ರಫ್ತು ವ್ಯಾಪಾರವನ್ನು ವೃದ್ಧಪಡಿಸುವುದರಿಂದ ದೇಶಕ್ಕೆ ಹೆಚ್ಚು ವಿದೇಶೀ ವಿನಿಮಯ ಸಂಪಾದನೆಯಾಗುತ್ತದೆ. ಇದರಿಂದ ಅಭಿವೃದ್ಧಿಗೆ ಅವಶ್ಯಕವಾದ ಪದಾರ್xಗಳನ್ನು ಇತರ ದೇಶಗಳಿಂದ ಕೊಳ್ಳುವುದು ಸಾಧ್ಯವಾಗುತ್ತದೆ. ಗೃಹನಿರ್ಮಾಣ ಕಾರ್ಯದಿಂದ ಅನೇಕರ ಜೀವನ ಸುಧಾರಿಸುತ್ತದೆ; ಹಲವರಿಗೆ ಉದ್ಯೋಗ ಲಭಿಸುತ್ತದೆ; ಇತರ ಕೈಗಾರಿಕೆಗಳಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. 7 ಖಾಸಗಿ ಬ್ಯಾಂಕುಗಳು ಬೃಹತ್ ಕೈಗಾರಿಕೋದ್ಯಮಿಗಳ ಅನುವರ್ತಿಗಳಾಗಿ ಜನಸಾಮಾನ್ಯರ ಹಣದ ದುರ್ವಿನಿಯೋಗ ಮಾಡುತ್ತಿದ್ದುದನ್ನು ತಪ್ಪಿಸುವುದು ರಾಷ್ಟ್ರೀಕರಣದ ಉದ್ದೇಶಗಳಲ್ಲೊಂದು. ಸಂಪತ್ತು ಕೆಲವರಲ್ಲಿ ಕೇಂದ್ರಿಕೃತವಾಗದಂತೆ. ವರಮಾನಗಳಲ್ಲಿ ಅಂತರವೇರ್ಪಡದಂತೆ ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳು ಒಂದು ಸಾಧನ. 8 ಬ್ಯಾಂಕು ರಾಷ್ಟ್ರೀಕರಣ ಅಂಥ ಕ್ರಾಂತಿಕಾರಿ ಕ್ರಮವೇನೂ ಅಲ್ಲ. ಅಭಿವೃದ್ಧಿಶೀಲ ದೇಶಗಳಲ್ಲಿ ವಿರಳವಾಗಿರುವ ಸಂಪನ್ಮೂಲಗಳನ್ನು ಅತ್ಯಂತ ಜರೂರಾದ ಅಭಿವೃದ್ಧಿಕಾರ್ಯಗಳಿಗೆ ಒದಗುವಂತೆ ಮಾಡಲು ಅವು ಸರ್ಕಾರದ ನಿರ್ದೇಶನಕ್ಕೆ ಒಳಪಟ್ಟು ಕೆಲಸಮಾಡುವುದು ಅಗತ್ಯವೆಂಗ ತತ್ತ್ವವನ್ನು ಬಂಡವಾಳವಾದಿ ರಾಷ್ಟ್ರಗಳ ಆರ್ಥಿಕ ಪರಿಣತರು ಕೂಡ ಒಪ್ಪಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳ ಪ್ರಗತಿ: ರಾಷ್ಟ್ರೀಕರಣದ ತರುವಾಯ ಬ್ಯಾಂಕುಗಳ ಕಾರ್ಯಕಲಾಪಗಳು ವಿಸ್ತøತಗೊಂಡಿವೆ. ಠೇವಣಿಗಳ ಮೊತ್ತ ಮೆಚ್ಚುವಂಥ ರೀತಿಯಲ್ಲಿ ಹೆಚ್ಚಾಗಿದೆ. ಹಿಂದೆ ವಂಚಿತವಾಗಿದ್ದ ಕ್ಷೇತ್ರಗಳೂ ಇಂದು ಸಾಲ ಸೌಲಭ್ಯಗಳನ್ನು ಪಡೆಯುತ್ತಿವೆ. ಮುಂಗಡ ಮತ್ತು ವಿನಿಯೋಜನೆಗಳೂ ಗಣನೀಯವಾಗಿ ಹೆಚ್ಚಾಗಿವೆ, ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯ ಸಾಧನೆಗಳು ಇವು : ಬ್ಯಾಂಕ ಸೌಲಭ್ಯಗಳ ವಿಸ್ತರಣೆ: ರಾಷ್ಟ್ರೀಕರಣಪೂರ್ವದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಮರುಭೂಮಿಗಳೆನಿಸಿಕೊಂಡಿರದ ಪ್ರದೇಶಗಳೂ ಇಂದು ವಿಶೇಷ ರೀತಿಯ ಬ್ಯಾಂಕು ಸೌಲಭ್ಯ ಪಡೆದಿದೆ. ಗ್ರಾಮೀಣ ಮತ್ತು ಬ್ಯಾಂಕು ರಹಿತ ಪ್ರದೇಶಗಳಲ್ಲಿ ಅನೇಕ ಬ್ಯಾಂಕ್ ಶಾಖೆಗಳನ್ನು ತೆರೆಯಲಾಗಿದೆ. 1969 ರಲ್ಲಿ ಪ್ರತಿ 65,000 ಜನ ಸಂಖ್ಯೆಗೆ 1 ರಂತೆ ಬ್ಯಾಂಕ್ ಇದ್ದರೆ, 1980 ರವೇಳೆಗೆ ಪ್ರತಿ 20,000 ಕ್ಕೆ 1ರಂತೆ ಬ್ಯಾಂಕ್ ಆಯಿತು. ಠೇವಣಿಗಳ ಮೊತ್ತ ಈ ಅವಧಿಯಲ್ಲಿ ರೂ 3872 ಕೋಟಿಯಿಂದ ರೂ 36,909 ಕೋಟಿಗೆ ಏರಿದೆ. ರಾಷ್ಟ್ರೀಕರಣಾಂತರ ಸರ್ಕಾರೀ ವಲಯದ ಬ್ಯಾಂಕುಗಳು ತೆರೆದಿರುವ ಶಾಖೆಗಳ ವಿವರಗಳನ್ನು ಮುಂದೆ ಕೊಡಲಾಗಿದೆ. ಸರ್ಕಾರೀ ವಲಯದ ಬ್ಯಾಂಕುಗಳ ಶಾಖೆಗಳು ಬ್ಯಾಂಕುಗಳು 1969 ಜೂನ್ 30 1980 ಜೂನ್ 30 ಹೆಚ್ಚಳ ಗ್ರಾಮೀಣ ಪ್ರದೇಶಗಳಲ್ಲಿ ತೆರೆಯಲಾದ ಶಾಖೆಗಳ ಸಂಖ್ಯೆ

ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಅದರ ಸಹಾಯಕ ಬ್ಯಾಂಕುಗಳು 14 ರಾಷ್ಟ್ರೀಕೃತ ಬ್ಯಾಂಕುಗಳು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು 1,569 893 4,134 -- 5,293 2,447 15,356 2,678 3,724 1,554 11,222 2,678 2,046 732 5,742 2,473


6,596 25,774 19,178 10,993


ಅಲಕ್ಷಿತ ಕ್ಷೇತ್ರಗಳಿಗೆ ಸಾಲ ವಿಸ್ತರಣೆ: 1969ಕ್ಕೆ ಮುಂಚೆ ರಾಷ್ಟ್ರೀಕೃತ ಬ್ಯಾಂಕುಗಳು ಬೃಹತ್ ವ್ಯಾಪಾರ ಹಾಗೂ ಕೈಗಾರಿಕೋದ್ಯಮಿಗಳಿಗೆ ಮಾತ್ರವೇ ಹಣಕಾಸಿನ ನೆರವು ನೀಡುತ್ತಿದ್ದುವು. ಈ ಬ್ಯಾಂಕುಗಳ ದೃಷ್ಟಿಯಲ್ಲಿ ಮರುಪಾವತಿ ಸಾಮಥ್ರ್ಯವಿಲ್ಲದಿದ್ದ ಸಣ್ಣ ರೈತರು, ಗೃಹಕೈಗಾರಿಕೋದ್ಯವಿಗಳು, ಚಿಲ್ಲರೆ ವ್ಯಾಪಾರಿಗಳು ಕೈ ಕಸಬಿನವರು ಮತ್ತು ಸ್ವಯಂ ಉದ್ಯೋಗನಿರತರು ಇವರರಿರೆ ಯಾವುದೇ ರೀತಿಯ ಹಣಕಾಸಿನ ನೆರವು ದೊರಕುತ್ತಿರಲಿಲ್ಲ. ರಾಷ್ಟ್ರೀಕರಣದ ತರುವಾಯ ದೇಶದ ಬ್ಯಾಂಕಿಂಗ್ ನೀತಿಯಲ್ಲಿ ಮಹತ್ತರ ಮಾರ್ಪಾಟು ಉಂಟಾಗಿ ಮೇಲಿನ ಅಲಕ್ಷಿತ ವರ್ಗಗಳೂ ಹಣಕಾಸಿನ ನೆರವು ಪಡೆಯುತ್ತಿವೆ. ರಸ್ತೆ ಮತ್ತು ಜಲಸಾರಿಗೆ ಅಭಿವೃದ್ಧಿ ಕಾರ್ಯಗಳಿಗೂ ರಾಷ್ಟ್ರೀಕೃತ ಬ್ಯಾಂಕುಗಳು ಅಲಕ್ಷಿತ ಕ್ಷೇತ್ರಗಳ ಅಭ್ಯುದಯದಲ್ಲಿ ಪಾಲ್ಗೊಳುತ್ತಿವೆ. ಠೇವಣಿ ಸಂಗ್ರಹಣೆ: ಬ್ಯಾಂಕುಗಳ ರಾಷ್ಟ್ರೀಕರನದಿಂದ ಶಾಖೆಗಳ ವಿಸ್ತರಣೆ ತೀವ್ರಗೊಂಡು ಉಳಿತಾಯದಾರರಿಗೆ ಉತ್ತೇಜನ ದೊರಕುವುದರಿಂದ ಠೇವಣಿ ಸಂಗ್ರಹಣೆ ಗಣನೀಯವಾಗಿ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಇತ್ತು. ಈ ವಿಚಾರವಾಗಿ ರಾಷ್ಟ್ರೀಕರಣ ನಿರೀಕ್ಷಿತ ಫಲಗಳನ್ನು ತಂದಿದೆ. ಒಟ್ಟು ಠೇವಣಿಗಳ ಮೊತ್ತ 1969 ಜುಲೈನಲ್ಲಿ ರೂ 4.665 ಕೋಟಿ ಇದ್ದದ್ದು 1981 ಜೂನ್ ವೇಳೆಗೆ ರೂ 40,000 ಕೋಟಿಗೆ ಏರಿತ್ತು. ಠೇವಣಿ ಏರಿಕೆಯ ವಾರ್ಷಿಕದರ ಶೇಕಡಾ 16-17. ಠೇವಣಿ ವಿಮಾ ನಿಗಮ: ಭಾರತೀಯ ಬ್ಯಾಂಕುಗಳ ಸಂಘ ನೀಡಿದ ಸಲಹೆಯನ್ನು ಅನುಮೋದಿಸಿ 1961 ರಲ್ಲಿ ಠೇವಣಿದಾರರ ಹಿತರಕ್ಷಣೆ ಮತ್ತು ಬ್ಯಾಂಕ್ ದಿವಾಳಿತನಕ್ಕೆ ಒಂದು ಮೂಲಭೂತ ಪರಿಹಾರಮಾರ್ಗವಾಗಿ 1962 ಜನವರಿ 1 ರಂದು ಠೇವಣಿ ವಿಮಾ ನಿಗಮದ ಮಾದರಿಯಲ್ಲಿ ರಚಿಸಲಾಗಿರುವ ಈ ಸಂಸ್ಥೆಯಲ್ಲಿ ದಾಖಲಾತಿ ಪಡೆದಿದೆ. ಬ್ಯಾಂಕುಗಳ ಐಚ್ಛಿಕ ವಿಲೀನತೆ ಮತ್ತು ಆಸ್ತಿ ಹೊಣೆಗಳ ಸಂಖ್ಯೆ 1962-80 ರ ಅವಧಿಯಲ್ಲಿ 287 ರಿಂದ 78 ಕ್ಕೆ ಇಳಿಯಿತು. ಠೇವಣಿ ವಿಮೆಯ ಸವಲತ್ತನ್ನು ಸಹಕಾರ ಬ್ಯಾಂಕುಗಳಿಗೂ ವಿಸ್ತರಿಸುವ ಸಲುವಾಗಿ 1968 ರಲ್ಲಿ ವಿಮಾ ಅಥವಾ ಅದಕ್ಕೂ ಹೆಚ್ಚಿನ ಪಾವತಿಯಾದ ಬಂಡವಾಳ ಹೊಂದಿರುವ ಸಹಕಾರಿ ಬ್ಯಾಂಕುಗಳು ವಿಮಾಯೋಗ್ಯವಾದವು. 1970 ರ ವೇಳೆಗೆ 859 ಸಹಕಾರ ಬ್ಯಾಂಕುಗಳು ವಿಮೆ ಇಳಿಸಿಕೊಂಡಿದ್ದುವು. ತರುವಾಯ 1976 ರ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಅಧಿನಿಯಮದನ್ವಯ ಅಸ್ತಿತ್ವಕ್ಕೆ ಬಂದ ಪ್ರಾದೇಶೀಕ ಗ್ರಾಮೀಣ ಬ್ಯಾಂಕುಗಳೂ ವಿಮೆ ಇಳಿಸಿವೆ. 1968 ತಿದ್ದುಪಡಿ ಅಧಿನಿಯಮದ ಪ್ರಕಾರ ನಿಗಮದ ಅಧಿಕೃತ ಬಂಡವಾಳವನ್ನು ರೂ. 1 ಕೋಟಿಯಿಂದ ರೂ 5 ಕೋಟಿಗೆ ಹೆಚ್ಚಿಸಲಾಯಿತು. ನಿರ್ದೇಶಕರ ಸಂಖ್ಯೆ 5 ರಿಂದ 8 ಕ್ಕೆ ಏರಿತು. ವಿಮಾ ಯೋಜನೆಯ ವಿಸ್ತರಣೆಯಿಂದಾಗಿ ಹೆಚ್ಚಿದ ನಿರ್ವಹಣೆ ವೆಚ್ಚವನ್ನು ಸರಿದೂಗಿಸಿಕೊಳ್ಳಲು ಸಾಧ್ಯವಾಗುವಂತೆ ಪಾವತಿಯಾದ ಬಂಡವಾಳವನ್ನು ರೂ 1.5 ಕೋಟಿಯಿಂದ ರೂ 2 ಕೋಟಿಗೆ ಹೆಚ್ಚಿಸಲಾಗಿದೆ. ಈ ಬಂಡವಾಳವನ್ನು ಸಂಪೂರ್ಣವಾಗಿ ರಿಸರ್ವ್ ಬ್ಯಾಂಕ್ ಒದಗಿಸಿದೆ. ಅಲ್ಲದೆ ಈ ನಿಗಮ ರೂ 5 ಕೋಟಿಯವರೆಗೆ ರಿಸರ್ವ ಬ್ಯಾಂಕಿನಿಂದ ಸಾಲ ಪಡೆಯಬಹುದಾಗಿದೆ. ಪ್ರತಿ ಬ್ಯಾಂಕಿನ ಠೇವಣಿದಾರನಿಗೆ ನಿಗಮ ಒದಗಿಸುವ ವಿಮಾ ರಕ್ಷೆಯ ಮೊಬಲಗನ್ನು ಪ್ರಾರಂಭದಲ್ಲಿ ರೂ 1500 ಕ್ಕೆ ಮಿತಿಗೊಳಿಸಲಾಗಿತ್ತು. ಇದನ್ನು 1968 ಜನವರಿ 1ರಿಂದ ರೂ 5000ಕ್ಕೂ 1970 ಏಪ್ರಿಲ್ 1ರಿಂದ ರೂ 10,000ಕ್ಕೂ 1976 ಏಪ್ರಿಲ್ 1ರಿಂದ ರೂ 20,000ಕ್ಕೂ ಹೆಚ್ಚಿಸಲಾಯಿತು. (ನಂತರ ಅದನ್ನು 30,000ಕ್ಕೆ ಏರಿಸಲಾಯಿತು. ಸಧ್ಯದಲ್ಲಿ (2005) ಅದರ ಮಿತಿಯನ್ನು ಒಂದು ಲಕ್ಷಕ್ಕೆ ಏರಿಸಲಾಗಿದೆ) ನಿಗಮ ತನ್ನ ಹಣಕಾಸು ಪರಿಸ್ಥಿತಿಯನ್ನು ಪರಿಗಣಿಸಿ ಜೊತೆಗೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆದು ವಿಮಾ ರಕ್ಷೆಯ ಮೊತ್ತವನ್ನು ಕಾಲ ಕಾಲಕ್ಕೆ ಹೆಚ್ಚಿಸುವ ಅಧಿಕಾರ ಪಡೆದಿದೆ. ವಿಮೆ ಇಳಿಸಿದ ಬ್ಯಾಂಕುಗಳಿಗೆ ನಿಗಮ ವಿಧಿಸಬಹುದಾದ ಗರಿಷ್ಠ ವಿಮಾಕಂತು ಆಯಾ ಬ್ಯಾಂಕುಗಳ ಠೇವಣಿಗಳ ಮೊಬಲಗಿನ ಪ್ರತಿ ರೂ 100ಕ್ಕೆ ವರ್ಷಕ್ಕೆ 15 ಪೈಸೆ ಕಂತು ಲೆಕ್ಕಾಚಾರದಲ್ಲಿ ಕೆಂದ್ರ ಸರ್ಕಾರ, ರಾಜ್ಯಸರ್ಕಾರಗಳು, ವಿದೇಶಿ ಸರ್ಕಾರ ಅಥವಾ ಇನ್ನೊಂದು ಬ್ಯಾಂಕ್ ಇಟ್ಟ ಠೇವಣಿಗಳು ಸೇರುವುದಿಲ್ಲ. ಠೇವಣಿ ವಿಮಾ ಯೋಜನೆಯ ಯಶಸ್ಸು ಬಲುಮಟ್ಟಿಗೆ ವಿಮಾ ಇಳಿಸಿದ ಬ್ಯಾಂಕುಗಳು ಮೇಲ್ಚಿಚಾರಣೆಯನ್ನೂ ತಮ್ಮ ವಹಿವಾಟಿನ ಗುಣಮಟ್ಟವನ್ನು ಸುಧಾರಿಸಿಕೊಳ್ಳುವಲ್ಲಿ ಆ ಬ್ಯಾಂಕುಗಳು ಕೈಗೊಳ್ಳುವ ಪ್ರಯತ್ನವನ್ನೂ ಅವಲಂಬಿಸಿದೆ. ಈ ಯೋಜನೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ವಿಮಾ ಯೋಜನೆಯ ಮಾದರಿಯಲ್ಲಿದ್ದರೂ ಕೆಲವು ವಿಚಾರಗಳಲ್ಲಿ ಭಿನ್ನವಾಗಿದೆ. ಅಮೆರಿಕದಲ್ಲಿ ವಾಣಿಜ್ಯ ಬ್ಯಾಂಕುಗಳು ಠೇವಣಿ ವಿಮಾ ನಿಗಮದ ತನಿಖೆಗೆ ಒಳಪಟ್ಟಿದ್ದರೆ ಭಾರತದಲ್ಲಿ ಅವು ರಿಸರ್ವ ಬ್ಯಾಂಕಿನ ತನಿಖೆಗೆ ಒಳಪಟ್ಟಿವೆ. ಇಲ್ಲಿ ವಿಮಾ ನಿಗಮದ ಕೋರಿಕೆಯ ಮೇರೆಗೆ ರಿಸರ್ವ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳನ್ನು ತನಿಖೆಮಾಡಿ ವರದಿ ಒಪ್ಪಿಸುತ್ತದೆ. ಠೇವಣಿ ವಿಮೆ ಕಾರ್ಪೊರೇಷನ್ ಸ್ಥಾಪನೆಯಾದಾಗಿನಿಂದ ಇಲ್ಲಿಯತನಕ 14 ಸಂದರ್ಭಗಳಲ್ಲಿ ವಿಮೆದಾರ ಬ್ಯಾಂಕುಗಳ ಠೇವಣಿದಾರರಿಗೆ ವಿಮೆ ಪರಿಹಾರ ನೀಡಲಾಗಿದೆ. 1966 ರಲ್ಲಿ ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನ ಮತ್ತು ಮುಂಬಯಿಯ ಹಬೀಬ್ ಬ್ಯಾಂಕ್‍ಗಳು ಪರಿಹಾರ ಪಡೆದುವು. 1979 ರ ತನಕ ನಿಗಮ ನೀಡಿರುವ ಪರಿಹಾರದ ಮೊತ್ತ ರೂ 134,85 ಲಕ್ಷ. 1978 ರಲ್ಲಿ ಭಾರತದ ಸಾಲ ಖಾತರಿ ನಿಗಮ ವಿಮಾ ನಿಗಮಕ್ಕೆ ಸೇರ್ಪಡೆಯಾಯಿತು. ಪರಿಣಾಮವಾಗಿ ವಿಮಾ ನಿಗಮದ ಹೆಸರನ್ನು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವೆಂದು ಬದಲಾಯಿಸಿತು. ಇಂದು ವಿಮಾ ನಿಗಮ ಸಾಲ ಖಾತರಿ ಯೋಜನೆಯನ್ನು ಒಳಗೊಂಡಿದೆ. ಅಗ್ರ ಬ್ಯಾಂಕ್ ಯೋಜನೆ: 1969 ರಲ್ಲಿ 14 ಪ್ರಮುಖ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣವಾದ ಬಳಿಕ ಗ್ರಾಮಾಂತರ ಪ್ರದೇಶಗಳಿಗೆ ಬ್ಯಾಂಕ್ ಸೇವ ಸೌಲಭ್ಯ ಗಳನ್ನು ಒದಗಿಸುವ ಅಂಗವಾಗಿ ಕೇಂದ್ರ ಸರ್ಕಾರ ಶಾಖೆಗಳನ್ನು ವಿಸ್ತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ತತ್ಫಲವಾಗಿ ಅಗ್ರ ಬ್ಯಾಂಕ್ ಯೋಜನೆ ರೂಪುಗೊಂಡಿತು. ಇದು ಪ್ರಾದೇಶಿಕ ದೃಷ್ಟಿಯುಳ್ಳ ಯೋಜನೆ. ಶಾಖೆಗಳ ವಿಸ್ತರಣೆಗಾಗಿ ಪ್ರಾದೇಶಿಕ ಅನುಗಮನವನ್ನು ಡಿ.ಆರ್. ಗಾಡ್ಗಿಲ್ ಅಧ್ಯಕ್ಷತೆಯಲ್ಲಿ ನೇಮಕ ಗೊಂಡಿದ್ದ ರಾಷ್ಟ್ರೀಯ ಉದ್ದರಿ ಮಂಡಳಿಯ ಅಧ್ಯಯನ ತಂಡ ಪರಿಕಲ್ಪಿಸಿತು. ಪ್ರಾದೇಶಿಕ ಶಾಖಾ ವಿಸ್ತರಣೆಯ ಪರಿಕಲ್ಪನೆಯನ್ನು ಅನುಮೋದಿಸಿದ ಬ್ಯಾಂಕರುಗಳ ಸಮಿತಿ (ನಾರಿಮನ್ ಸಮಿತಿ) ಈ ಯೋಜನೆಗೆ ಒಂದು ಪ್ರಾಯೋಗಿಕ ಆಯಾಮ ನಿರ್ಮಿಸಿತು. 1969 ರ ಕೊನೆಯ ಭಾಗದಲ್ಲಿ ಭಾರತದ ರಿಸರ್ವ ಬ್ಯಾಂಕ್ ಅಗ್ರಬ್ಯಾಂಕ್ ಯೋಜನೆಯನ್ನು ಅಂಗೀಕರಿಸಿದ್ದಲ್ಲದೆ ಅದನ್ನು ಮುಂಬಯಿ ಕಲ್ಕತ್ತ, ಮದರಾಸು ಮತ್ತು ಸೂಚಿಸಿತು ಕೂಡ. ಆ ಪ್ರಕಾರ ಭಾರತೀಯ ಸ್ಟೇಟ್ ಅದರ ಸಹಾಯಕ ಬ್ಯಾಂಕುಗಳು ಆಗಿನ 14 ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಮೂರು ಖಾಸಗಿ ಬ್ಯಾಂಕುಗಳಿಗೆ ಜಿಲ್ಲೆಗಳನ್ನು ಹಂಚಲಾಯಿತು. ಪ್ರಸ್ತುತ ಒಟ್ಟು 25 ಬ್ಯಾಂಕುಗಳು 336 ಜಿಲ್ಲೆಗಳ ಸರ್ವಾಂತೀಣ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿವೆ. ಮುಖ್ಯ ಉದ್ದೇಶಗಳು: ಪ್ರತಿಯೊಂದು ಬ್ಯಾಂಕಿಂಗ್ ಸಂಸ್ಥೆಯು ಗೊತ್ತಾದ ಒಂದು ಅಥವಾ ಹಲವು ಜಿಲ್ಲೆಗಳನ್ನು ದತ್ತುವಾಗಿ ಸ್ವೀಕರಿಸಿ ಅವುಗಳ ಸರ್ವಾಂಗೀಣ ಅಭಿವೃದ್ಧಿಯ ಹೊಣೆ ಹೊರಬೇಕೆಂಬುದು ಯೋಜನೆಯ ಮೂಲಭೂತ ಉದ್ದೇಶ. ಬ್ಯಾಂಕುಗಳು ತಮ್ಮ ಪಾಲಿಗೆ ಬಂದ ಜಿಲ್ಲೆಗಳಲ್ಲಿ ಸಹಕಾರಿ ಬ್ಯಾಂಕ್, ವಾಣಿಜ್ಯ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳನ್ನು ಸಂಘಟಿಸುವುದರ ಮೂಲಕ ಜಿಲ್ಲೆಯ ಅಭಿವೃದ್ಧಿಯನ್ನು ಸಾಧಿಸಲು ಯತ್ನಿಸುತ್ತವೆ. ಸ್ಥಳ ಸಮೀಕ್ಷೆಯನ್ನು ಕೈಗೊಂಡು ಬ್ಯಾಂಕ್ ರಹಿತ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಶಾಖೆಗಳನ್ನು ತೆರೆಯುವ ಕ್ರಮ ಕೈಗೊಳ್ಳುತ್ತವೆ. ಠೇವಣಿ ಸಂಗ್ರಹಣೆ ಮತ್ತು ಉದ್ದರಿಯ ಅಂತರವನ್ನು ಅಂದಾಜುಮಾಡಿ ಜಿಲ್ಲೆಯ ಠೇವಣಿ ಸಾಮಥ್ರ್ಯವನ್ನು ಹೆಚ್ಚಿಸಲು ಯತ್ನಿಸುತ್ತವೆ. ಮಾರ್ಗದರ್ಶಿ ಬ್ಯಾಂಕುಗಳು ಪ್ರಾಮಾಣಿಕವಾಗಿಯೂ ಪರಿಣಾಮಕಾರಿಯಾಗಿಯೂ ಕಾರ್ಯೋನ್ಮುಖವಾದಲ್ಲಿ ಸಂಬಂಧಪಟ್ಟ ಪ್ರದೇಶಗಳಲ್ಲಿ ಠೇವಣಿ ಸಂಗ್ರಹಣೆ ವೃದ್ಧಿಗೊಂಡು ಕೃಷಿ ಮತು ಸಣ್ಣ ಕೈಗಾರಿಕೆಗಳಿಗೆ ದೊರಕುವ ಧನ ಸಹಾಯ ಹೆಚ್ಚಾಗುತ್ತದೆ ಎಂದು ಭಾವಿಸಲಾಗಿದೆ . ಈ ಯೋಜನೆಯಿಂದ ಆಗುವ ಪ್ರಯೋಜನಗಳಿವು: 1 ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರ ಬ್ಯಾಂಕುಗಳ ಸುವ್ಯವಸ್ಥಿತ ವಿಸ್ತರಣೆಯಿಂದ ಇಡೀ ದೇಶದ ಬೇಕು-ಬೇಡಗಳನ್ನು ಸಮೀಕ್ಷಿಸಬಹುದು. 2 ಶಾಖೆಗಳ ವಿಸ್ತರಣೆ, ಮೇಲ್ವಚಾರಣೆ ಮತ್ತು ಮಾರ್ಗದರ್ಶನ ಪರಿಣಾಮಕಾರಿಯಾಗುತ್ತದೆ ಮತ್ತು ಪ್ರಗತಿಪರವಾಗುತ್ತದೆ. 3 ಜಿಲ್ಲಾ ಮಟ್ಟದಲ್ಲಿ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಉದ್ದರಿ ಸಂಸ್ಥೆಗಳು ಮತ್ತು ಸರ್ಕಾರಗಳ ನಡುವೆ ಕ್ರಿಯಾಶೀಲ ಹೊಂದಾಣಿಕೆ ಸಾಧ್ಯವಾಗುತ್ತದೆ. 4 ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪೂರಕವಾಗುವಂತೆ ಉದ್ದರಿ ಮತ್ತು ಬ್ಯಾಂಕ್ ವ್ಯವಹಾರಗಳನ್ನು ಸಂಘಟಿಸುವುದು ಸಾಧ್ಯವಾಗುತ್ತದೆ. 5 ಬ್ಯಾಂಕುಗಳ ಜಿಲ್ಲಾ ಅಭಿವೃದ್ಧಿಗೆ ಇದ್ದಿರಬಹುದಾದ ಅಡಚಣೆಗಳನ್ನು ಗುರುತಿಸಿ ಸಂಯುಕ್ತ ಪರಿಹಾರ ಕೈಗೊಳ್ಳುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸಲಹೆ ನೀಡುವುದು ಸಾಧ್ಯವಾಗುತ್ತದೆ. 1973-74 ರ ವೇಳೆಗೆ ಅಗ್ರ ಬ್ಯಾಂಕುಗಳು 380 ಜಿಲ್ಲೆಗಳನ್ನು ಸಮೀಕ್ಷೆ ಮಾಡಿದ್ದುವು. ಅಲ್ಪಾಭಿವೃದ್ಧಿ ರಾಜ್ಯಗಳೆನಿಸಿಕೊಂಡ ಆಸ್ಸಾಮ್, ಬಿಹಾರ, ಪಶ್ಚಿಮ ಬಂಗಾಳ, ಒರಿಸ್ಸಾ, ಮಧ್ಯಪ್ರದೇಶ, ಮತ್ತು ಉತ್ತರ ಪ್ರದೇಶ ರಾಜ್ಯಗಳನ್ನು ಶೇಕಡಾ 90 ರಷ್ಟು ಜಿಲ್ಲೆಗಳು ಸಮೀಕ್ಷಿಸಲ್ಪಟ್ಟಿದ್ದವು. ಮತ್ತೆ ಕೆಲವು ಬ್ಯಾಂಕುಗಳು ತಂತಮ್ಮ ಜಿಲ್ಲೆಗಳಲ್ಲಿಯೇ ನಿಕಟತಮ ಅಧ್ಯಯನ ನಡೆಸಿ ಅದರ ಅನ್ವಯ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡುವು, ಈ ವ್ಯಾಪಕ ಸಮೀಕ್ಷೆಯ ಆಧಾರದ ಮೇಲೆ 1978 ಜೂನ್ ವೇಳೆಗೆ 393 ಜಿಲ್ಲೆಗಳಲ್ಲಿ ವಿವಿಧ ರೀತಿಯು ಅಭಿವೃದ್ಧಿ ಕಾಂiÀರ್iಗಳು ಪ್ರಾರಂಭವಾದುವು. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ಅನುಸೂಚಿತ ಬ್ಯಾಂಕುಗಳು ಮತ್ತು ಇತರ ವಾಣಿಜ್ಯ ಬ್ಯಾಂಕುಗಳು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳನ್ನೊಳಗೊಂಡ ಸಲಹಾ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ಜಿಲ್ಲೆಯ ಪುರೋಭಿವೃದ್ಧಿಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಬ್ಯಾಂಕುಗಳಿಗೆ ಸಲಹೆ ಸೂಚನೆಗಳನ್ನು ನೀಡಬಹುದು. 1975 ಆಗಸ್ಟ್‍ನಲ್ಲಿ ಮಹಾರಾಷ್ಟ್ರ ಮತ್ತು ಗುಜರಾತು ರಾಜ್ಯಗಳಲ್ಲಿಯ ಮಾರ್ಗದರ್ಶಿ ಯೋಜನೆಗಳ ರೂಪರೇಷೆಗಳನ್ನು ಪರಿಶೀಲಿಸಲು ಭಾರತದ ರಿಸರ್ವ ಬ್ಯಾಂಕ್ ಎರಡು ಅಧ್ಯಯನ ತಂಡಗಳನ್ನು ನೇಮಿಸಿತು. ಅಗ್ರ ಬ್ಯಾಂಕುಗಳು 3 ರಿಂದ 5 ವರ್ಷಗಳ ಒಳಗೆ ಪೂರ್ಣಗೊಳ್ಳುವಂಥ ಮತ್ತು ತಾಂತ್ರಿಕವಾಗಿಯೂ ಆರ್ಥಿಕವಾಗಿಯೂ ಸುಲಭ ಗ್ರಾಹ್ಯವಾಗಿರುವಂಥ ಆಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕೆಂದೂ ಆ ಯೋಜನೆಗಳನ್ನು ಎಲ್ಲ ಹಣಕಾಸು ಸಂಸ್ಥೆಗಳು ಸಾಮೂಹಿಕವಾಗಿ ಕಾರ್ಯಗತಗೊಳಿಸಬೇಕೆಂದೂ ಅಧ್ಯಯನ ತಂಡಗಳು ಸಲಹೆ ಮಾಡಿದುವು. 1976 ರಲ್ಲಿ ಅಗ್ರ ಬ್ಯಾಂಕ್ ಯೋಜನೆಗಲ ಪ್ರಗತಿಯನ್ನು ಪರಾಮರ್ಶಿಸಿ ಪರಿಣಾಮಕಾರಿಯಾದ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವುದಕ್ಕಾಗಿ ರಿಸರ್ವ ಬ್ಯಾಂಕ್ ಒಂದು ವರಿಷ್ಠ ಮಂಡಳಿಯನ್ನು ನೇಮಿಸಿತು. ಇದರ ನಿರ್ದೇಶನದಂತೆ 13 ರಾಜ್ಯ ಸರ್ಕಾರಗಳು, ತಮ್ಮ ವಿವಿಧ ಇಲಾಖೆಗಳ ಮತ್ತು ಬ್ಯಾಂಕುಗಳ ನಡುವೆ ನೇರ ಸಂಪರ್ಕ ಏರ್ಪಡಿಸುವ ಉದ್ದೇಶದಿಂದ ರಾಜ್ಯ ಹಾಗೂ ಜಿಲ್ಲೆ ಮಟ್ಟಗಳಲ್ಲಿ ಪ್ರತ್ಯೇಕವಾದ ಕೇಂದ್ರಗಳನ್ನು ತೆರೆಯಲಾಗಿದೆ. 1978-79 ರಲ್ಲಿ ವರಿಷ್ಠ ಮಂಡಳಿ ನೀಡಿದ ನಿರ್ದೇಶನಕ್ಕೆ ಅನುಗುಣವಾಗಿ ಮಾರ್ಗದರ್ಶಿ ಬ್ಯಾಂಕುಗಳು 1982 ರಿಂದ ಮುಂದೆ ಸರ್ಕಾರದ ಪ್ರಚಲಿತ ಪಂಚವಾರ್ಷಿಕ ಯೋಜನೆಯ ಕಾರ್ಯಗಳಿಗೆ ಪೂರಕವಾಗಿ ಪ್ರತಿವರ್ಷ ಡಿಸೆಂಬರ್ ತಿಂಗಳಿನಲ್ಲಿ ಆಯಾ ವರ್ಷದ ಸಾಲ ಯೋಜನೆಯನ್ನು ತಯಾರಿಸಬೇಕೆಂಬುದಾಗಿ ನಿಶ್ಚಯಿಸಲಾಯಿತು. ಈ ನೂತನ ಜಿಲ್ಲಾ ಉದ್ದರಿ ಯೋಜನೆಗಳು ಸಮಗ್ರವಾಗಿದ್ದು ಜಿಲ್ಲೆಯ ಘಟಕ, ಕ್ಷೇತ್ರ ಯೋಜನೆ ಮತ್ತು ಬ್ಯಾಂಕುವಾರು ಆಧಾರದ ಮೇಲೆ ಸಾಂಘಿಕ ಸಾಲಸಂಸ್ಥೆಗಳ ಸಾಲದ ಗೊತ್ತುಗುರಿಗಳನ್ನು ಸೂಚಿಸಬೇಕೆಂದು ಆದೇಶಿಸಲಾಗಿದೆ. ಅಗ್ರ ಬ್ಯಾಂಕ್ ಯೋಜನೆಯ ಯಶಸ್ಸಿಗಾಗಿ ಸೂಚಿಸಲಾಗಿರುವ ಇತರ ಕ್ರಮಗಳು ಇವು: 1 ಪ್ರತಿಯೊಂದ ಜಿಲ್ಲೆಯಲ್ಲಿ ಸಾಲ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದಕ್ಕೆ ಪ್ರತ್ಯೇಕವಾದ ಅಗ್ರ ಬ್ಯಾಂಕ್ ನೌಕರ ವರ್ಗವಿರಬೇಕು. 2 ಅಗ್ರ ಯೋಜನೆಯ ಪರಿಣಾಮಕಾರಿಯಾದ ಅನುಷ್ಠಾನ ಖಾತರಿಪಡಿಸಿಕೊಳ್ಳಲು ರಿಸರ್ವ ಬ್ಯಾಂಕಿನ ಅಧಿಕಾರಿ ವರ್ಗ ಜಿಲ್ಲೆಯ ಉದ್ದರಿ ಯೋಜನೆಯ ರಚನೆ ಮತ್ತು ಅನುಷ್ಠಾನದ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕೆಂದು ತೀರ್ಮಾನಿಸಲಾಗಿದೆ. ಬ್ಯಾಂಕುಗಳು ರಿಸರ್ವ ಬ್ಯಾಂಕಿನ ಅಭಿವೃದ್ಧಿ ವಿಭಾಗಕ್ಕೆ ತ್ರೈಮಾಸಿಕ ಮತ್ತು ವಾರ್ಷಿಕ ವರದಿಗಳನ್ನು ಒಪ್ಪಿಸಬೇಕು. 3 ಉದ್ದರಿ ಯೋಜನೆಯ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಸಲಹ ಮಂಡಳಿ ಪ್ರತೀ ತಿಂಗಳೂ ತಪ್ಪದೆ ಸಭೆ ಸೇರಬೇಕು. 4 ಪ್ರತಿಯೊಂದು ವಾಣಿಜ್ಯ ಬ್ಯಾಂಕಿನ ಪ್ರಾಧಾನ ಕಛೇರಿಯೂ ತನ್ನ ಶಾಖೆಗಳು ನಿರ್ವಹಿಸುವ ಕಲಾಪಗಳನ್ನು ಪರಿಶೀಲಿಸಲಯ ಆಸ್ಪದವಿರುವಂಥ ವಿಧಾನಗಳನ್ನು ರೂಪಿಸಿಕೊಳ್ಳಬೇಕು. ಒಟ್ಟಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಸಂಪನ್ಮೂಲಗಳನ್ನು ಸಂಗ್ರಹಿಸುವುದು ಮತ್ತು ಪ್ರತಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ನೆರವು ನೀಡುವುದು ಈ ಎರಡೂ ಉದ್ದೇಶಗಳಿಗೆ ಮಹತ್ತ್ವ ನೀಡಲಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ : ಇದು ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್. 19ನೆಯ ಶತಮಾನದ ಆದಿಭಾಗದಲ್ಲಿ ಅಸ್ತಿತ್ವದಲ್ಲಿದ್ದ ಕಲ್ಕತ್ತ, ಮುಂಬಯಿ ಮತ್ತು ಮದರಾಸ್‍ನ ಪ್ರಾಂತೀಯ ಬ್ಯಾಂಕುಗಳು ಭಾರತೀಯ ಸ್ಟೇಟ್ ಬ್ಯಾಂಕಿನ ಮೂಲ ಸಂಸ್ಥೆಗಳು, 1921 ರಲ್ಲಿ ಈ ಮೂರನ್ನೂ ಒಗ್ಗೂಡಿಸಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾವನ್ನು ಸ್ಥಾಪಿಸಲಾಯಿತು. 1935ಕ್ಕೆ ಮುಂಚೆ ಭಾರತದಲ್ಲಿ ಪ್ರತ್ಯೇಕ ಕೇಂದ್ರಿಯ ಬ್ಯಾಂಕ್ ಇರಲಿಲ್ಲ. ಕೇಂದ್ರೀಯ ಬ್ಯಾಂಕ್ ನಿರ್ವಹಿಸಬೇಕಾದ ಎಲ್ಲ ಕಾರ್ಯಗಳನ್ನು ಇಂಪೀರಿಯಲ್ ಬ್ಯಾಂಕ್ ನಿರ್ವಹಿಸುತ್ತಿತ್ತು. ಈ ಕಾರಣದಿಂದಾಗಿ ಭಾರತದ ಹಣದ ಪೇಟೆಯಲ್ಲಿ ಅದಕ್ಕೆ ವಿಶೇಷ ಗೌರವ ಪ್ರತಿಷ್ಠೆಗಳಿದ್ದುವು. 1935ರ ರಿಸರ್ವ ಬ್ಯಾಂಕ್ ಅಸ್ತಿತ್ವಕ್ಕೆ ಬಂದ ತರುವಾಯ ಇಂಪೀರಿಯಲ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್ ಮಾತ್ರವೇ ಆಗಿ ಮುಂದುವರಿಯಿತು. 1949 ರಲ್ಲಿ ಭಾರತದ ರಿಸರ್ವ ಬ್ಯಾಂಕನ್ನು ರಾಷ್ಟ್ರೀಕರಿಸಲಾಯಿತು. ಇಂಪೀರಿಯಲ್ ಬ್ಯಾಂಕನ್ನು ಸಹ ರಾಷ್ಟ್ರೀಕರಿಸಬೇಕೆಂಬ ವಾದಕ್ಕೆ ಆಗ ಹೆಚ್ಚಿನ ಬೆಂಬಲ ದೊರಕಿತು. ಇಂಪೀರಿಯಲ್ ಬ್ಯಾಂಕ್ ಭಾರಿ ಮೊತ್ತದ ಸಂಪನ್ಮೂಲಗಳನ್ನು ಹೊಂದಿತ್ತಾದ ಕಾರಣ ಅದರ ಮೇಲೆ ಸರಿಯಾದ ಹತೊಟಿ ಹೊಂದಿರಲು ರಿಸರ್ವ ಬ್ಯಾಂಕಿಗೆ ಕಷ್ಟವಾಯಿತು. ಅಲ್ಲದೆ ಈ ಬ್ಯಾಂಕ್ ವಿದೇಶೀಯರ ಆಡಳಿತಕ್ಕೆ ಒಳಪಟ್ಟಿತ್ತು. ಇದರ ಆಡಳಿತ ವಹಿವಾಟುಗಳನ್ನು ಭಾರತ ಸರ್ಕಾರ ಅಧೀನಕ್ಕೆ ತರಲು ರಾಷ್ಟ್ರೀಕರಣ ಬಿಟ್ಟರೆ ಬೇರೆ ದಾರಿಯೇ ಇಲ್ಲವೆನಿಸಿತು. ಇವೆಲ್ಲಕ್ಕಿಂತ ಮುಖ್ಯವಾಗಿ ಸಹಕಾರಿ ಬ್ಯಾಂಕುಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ನೆರವು ನೀಡಲು ಯತ್ನಿಸಿತಾದರೂ ಹೆಚ್ಚು ಪ್ರಯೋಜನವಾಗುತ್ತಿರಲಿಲ್ಲ, ಹೀಗೆ, ಸ್ವಾತಂತ್ರ್ಯ ದೊರಕಿದ ಅನಂತರ ಕೃಷಿ ಉತ್ಪಾದನೆಯನ್ನು ವೃದ್ಧಿಗೊಳಿಸುವುದಕ್ಕಾಗಿ ರೈತರಿಗೆ ಹಣಕಾಸಿನ ನೆರವು ನೀಡಲು ಯುಕ್ತ ಕ್ರಮಕೈಗೊಳ್ಳುವುದು ಅಗತ್ಯವಾಯಿತ್ತು. ಇದೇ ಸಂದರ್ಭದಲ್ಲಿ ರಿಸರ್ವ ಬ್ಯಾಂಕ್ ನೇಮಿಸಿದ್ದ ಅಖಿಲ ಭಾರತ ಗ್ರಾಮೀಣ ಉದ್ದರಿ ಸರ್ವೇಕ್ಷಣವು (1952) ಗ್ರಾಮೀಣ ಸಾಲದ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಹಳ್ಳಿಗಾಡುಗಳಲ್ಲಿ ಆಧುನಿಕ ಬ್ಯಾಂಕಿಂಗ್ ಸೌಕರ್ಯಗಳನ್ನು ಹೆಚ್ಚಿಸಬೇಕಾದರೆ ಸರ್ಕಾರದ ಅಧೀನದಲ್ಲಿ ಕೆಲಸಮಾಡುವ ಒಂದು ದೊಡ್ಡ ವಾಣಿಜ್ಯ ಬ್ಯಾಂಕಿಂಗ್ ಸಂಸ್ಥೆಯನ್ನು ರಾಷ್ಟ್ರೀಕರಿಸುವುದರಿಂದ ಈ ಉದ್ದೇಶ ಸಾಧಿತವಾಗುವುದೆಂದೂ ಸಲಹೆ ನೀಡಿತು; ಪರಿಣಾಮವಾಗಿ, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಹೊಸ ಶಾಖೆಗಳನ್ನು ತೆರೆಯುವ ಮತ್ತು ಸಹಕಾರಿ ಬ್ಯಾಂಕುಗಳ ಪುರೋಭಿವೃದ್ಧಿಗೆ ವಿಶೇಷ ನೆರವು ನೀಡುವುದರ ಮೂಲಕ ಕೃಷಿ ಕ್ಷೇತ್ರದ ಸರ್ವತೊಮುಖ ಪ್ರಗತಿಗೆ ದಾರಿಮಾಡಿಕೊಡುವ ಉದ್ದೇಶದಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಅಧಿನಿಯಮದ ಪ್ರಕಾರ 1955 ಜುಲೈ 1 ರಂದು ಇಂಪೀರಿಯಲ್ ಬ್ಯಾಂಕ್‍ನ್ನು ರಾಷ್ಟ್ರೀಕರಿಸಿ ಅದನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಎಂದು ಹೆಸರಿಸಲಾಯಿತು. ಸ್ಟೇಟ್ ಬ್ಯಾಂಕ್ 1960 ಜೂನ್ 30 ರೊಳಗೆ 400 ಶಾಖೆಗಳನ್ನು ತೆರೆಯಬೇಕೆಂದು ನಿರ್ಧರಿಸಿತು. ಆ ಸಂಬಂಧವಾಗಿ ಬ್ಯಾಂಕಿಗೆ ಸಂಭವಿಸಬಹುದಾಗಿದ್ದ ನಷ್ಟವನ್ನು ತುಂಬಿಕೊಳ್ಳಲು ಅಧಿನಿಯಮದ ರೀತ್ಯ ಸಂಯೋಜನೆ ಹಾಗೂ ಅಭಿವೃದ್ಧಿ ನಿಧಿಯೊಂದನ್ನು ಸ್ಥಾಪಿಸಲಾಯಿತು. ಆಡಳಿತ ವ್ಯವಸ್ಥೆ : ಸ್ಟೇಟ್ ಬ್ಯಾಂಕಿನ ಅಧಿಕೃತ ಬಂಡವಾಳ ರೂ 20 ಕೋಟಿ. ತೊಡಗಿಸಿದ ಬಂಡವಾಳ ರೂ 5.6ಕೋಟಿ. ಭಾರತೀಯ ರಿಸರ್ವ ಬ್ಯಾಂಕ್, ವಿಮಾ ಸಂಸ್ಥೆ ಮತ್ತು ಹಿಂದೆ ಇಂಪೀರಿಯಲ್ ಬ್ಯಾಂಕಿನಲ್ಲಿ ಷೇರುದಾರರಾಗಿದ್ದು ಕೆಲವರು ಈ ಬ್ಯಾಂಕಿನ ಷೇರುದಾರರು. ಇದರ ಆಡಳಿತವನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ 30 ಜನ ಸದಸ್ಯರ ಒಂದು ಮಂಡಳಿ ನಿರ್ವಹಿಸುತ್ತದೆ. ರಿಸರ್ವ ಬ್ಯಾಂಕಿನ ಸಲಹೆಯ ಮೇರೆಗೆ ಭಾರತ ಸರ್ಕಾರ ಅಧ್ಯಕ್ಷ ಉಪಾಧ್ಯಕ್ಷರನ್ನು ನೇಮಿಸುತ್ತದೆ. ಇವರ ಜೊತೆಗೆ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ 8 ಮಂದಿ ಕಾರ್ಯನಿರ್ವಾಹಕರನ್ನು ಸರ್ಕಾರವೇ ನೇಮಿಸುತ್ತದೆ. ಷೇರುದಾರರು 6 ಮಂದಿಯನ್ನು ಚುನಾಯಿಸುತ್ತಾರೆ. ಭಾರತ ಸರ್ಕಾರದ ಪರವಾಗಿ ಒಬ್ಬ ನಿರ್ವಾಹಕನೂ ರಿಸರ್ವ ಬ್ಯಾಂಕಿನ ಪರವಾಗಿ ಒಬ್ಬ ನಿರ್ವಾಹಕನೂ ಇರುತ್ತಾರೆ. ಈ ಕೇಂದ್ರಿಯ ಮಂಡಳಿಯಲ್ಲದೆ 4 ಪ್ರಾದೇಶಿಕ ಮಂಡಳಿಗಳಿರುತ್ತವೆ. ಇವು ಮುಂಬೈ, ಕಲ್ಕತ್ತ, ಮದರಾಸ ಮತ್ತು ನವದೆಹಲಿಗಳಲ್ಲಿವೆ. ಆಯಾ ಪ್ರದೇಶಗಳ ಅವಶ್ಯಕತೆಗಳ ಕಡೆಗೆ ಇವು ಗಮನ ನೀಡುತ್ತವೆ. ಕಾರ್ಯವ್ಯಾಪ್ತಿ: ಆಸ್ತಿಗಳ ದೃಷ್ಟಿಯಿಂದ ಅತ್ಯಂತ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಪ್ರಪಂಚದ ಬ್ಯಾಂಕುಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹನ್ನೊಂದನೆಯದಾಗಿದ್ದರೆ ಠೇವಣಿ ಬೆಳೆವಣಿಗೆಯ ದೃಷ್ಟಿಯಿಂದ ಹದಿನಾಲ್ಕನೆಂiÀiದಾಗಿದೆ. ಠೇವಣಿಗಳ ಮೊತ್ತದ ದೃಷ್ಟಿಯಿಂದ 78 ನೆಯ ಸ್ಥಾನದಲ್ಲಿದೆ. ಜಪಾನನ್ನು ಬಿಟ್ಟರೆ ಪ್ರಪಂಚದ ಮೊದಲನೆಯ ನೂರು ಬ್ಯಾಂಕುಗಳ ಸಾಲಿಗೆ ಸೇರಿರುವ ಏಷ್ಯಾಖಂಡದ ಏಕೈಕ ಬ್ಯಾಂಕ್ ಇದು. ಇದು ಸಂಗ್ರಹಿಸಿದ ಠೇವಣಿಗಳ ಮೊತ್ತ 1983 ರಲ್ಲಿ 2317 ಕೋಟಿ, 1983 ರಲ್ಲೆ ಬ್ಯಾಂಕ್ 314 ಹೊಸ ಶಾಖೆಗಳನ್ನು ತೆರೆಯಿತು. ಈ ಪೈಕಿ 265 ಶಾಖೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯಲ್ಪಟ್ಟಿವೆ. ಪ್ರಸ್ತುತ (ಯಾವಾಗ?) ಬ್ಯಾಂಕ್ 6567 ಕಛೇರಿಗಳನ್ನು ಹೊಂದಿದ್ದು ಅವುಗಳಲ್ಲಿ ಶೇಕಡಾ 76 ರಷ್ಟು ಕಛೇರಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಹರಡಿಕೊಂಡಿವೆ. (ನೋಡಿ- ಭಾರತೀಯ-ಸ್ಟೇಟ್-ಬ್ಯಾಂಕ್) ಬ್ಯಾಂಕ್ ಹಮ್ಮಿಕೊಂಡಿರುವ ಮುಖ್ಯ ಕಾರ್ಯಕ್ರಮಗಳು ಇವು: 1 ಗ್ರಾಮೀಣ ಇರಸಾಲು ಸೌಲಭ್ಯ: ಗ್ರಾಮಾಂತರ ಪ್ರದೇಶಗಳಲ್ಲಿ (ರೆಮಿಟಿನ್ಸ್) ಸವಲತ್ತುಗಳನ್ನು ವಿಸ್ತರಿಸುವ ಉದ್ದೇಶದಿಂದ ರಾಜ್ಯಬ್ಯಾಂಕು ಕೇಂದ್ರೀಯ ಮತ್ತು ರಾಜ್ಯ ಸಹಕಾರ ಬ್ಯಾಂಕುಗಳಿಗೆ ವಿಧಿಸುತ್ತಿದ್ದ ಇರಸಾಲು ಕಟ್ಟಲೆಗಳನ್ನು ಸರಳಗೊಳಿಸಿದೆ. ಸಹಕಾರ ಬ್ಯಾಂಕುಗಳು ಉಚಿತವಾಗಿ ವಾರಕ್ಕೆ ಮೂರು ಬಾರಿ ಹಣ ವಗಾಯಿಸಿಕೊಳ್ಳುವ ಅನುಕೂಲ ಪಡೆದಿದೆ. ಈ ರೀತಿ ವರ್ಗಾಯಿಸಲ್ಪಡುವ ಹಣ ವರ್ಷಕ್ಕೆ ರೂ 800 ಕೋಟಿಗೂ ಮೀರುವುದೆಂದು ಅಂದಾಜು. 2 ಸಹಕಾರಿ ಬ್ಯಾಂಕುಗಳಿಗೆ ಉದ್ದರಿ: ಕೇಂದ್ರೀಯ ಮತ್ತು ರಾಜ್ಯ ಸಹಕಾರ ಬ್ಯಾಂಕುಗಳಿಗೆ ಅಲ್ಪಾವಧಿ ಉದ್ದರಿ ಒದಗಿಸುವುದು ಸ್ಟೇಟ್ ಬ್ಯಾಂಕಿನ ಅತಿಮುಖ್ಯ ಕಾರ್ಯಕ್ರಮಗಳ ಪೈಕಿ ಒಂದು. ಸರ್ಕಾರದ ಸಾಲಪತ್ರಗಳ ಆಧಾರದ ಮೇಲೆ ಮಂಜೂರು ಮಾಡುವ ಈ ಸಾಲಗಳಿಗೆ ಮಾಮೂಲು ದರಕ್ಕಿಂತ 1 ರಿಂದ 1.5 ರಷ್ಟು ರಿಯಾಯಿತಿ ಬಡ್ಡಿಯನ್ನು ವಿಧಿಸಲಾಗುವುದು. 3 ಭೂ ಅಭಿವೃದ್ಧಿ ಬ್ಯಾಂಕುಗಳಿಗೆ ನೆರವು: ಭೂ ಅಭಿವೃದ್ಧಿ ಬ್ಯಾಂಕುಗಳು ಕೈಗೊಳ್ಳುವ ಭೂಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ದೀರ್ಘಾವಧಿಯ ಸಾಲಗಳನ್ನು ನೀಡುವುದು ಇದರ ಇನ್ನೊಂದು ಮುಖ್ಯಕಾರ್ಯ. ಭೂಅಭಿವೃದ್ಧಿ ಬ್ಯಾಂಕುಗಳು ಮಾರಾಟ ಮಾಡುವ ಸರ್ಕಾರದ ಬಾಂಡುಗಳನ್ನು ಕೊಳ್ಳಲು ಹಣ ಒದಗಿಸುವುದು ಒಂದು ರೀತಿಯ ಸಹಾಯವಾದರೆ ಭೂಅಭಿವೃದ್ಧಿ ಬಾಂಡುಗಳನ್ನು ಕೊಳ್ಳುವುದರ ಮೂಲಕ ಆ ಬಾಂಡುಗಳನ್ನು ಹಣದ ಪೇಟೆಯಲ್ಲಿ ಜನಪ್ರಿಯವಾಗಿಸುವುದು ಇನ್ನೊಂದು ರೀತಿಯ ನೆರವು. ಜೊತೆಗೆ ಈ ಬ್ಯಾಂಕುಗಳು ಬಾಂಡುಗಳನ್ನು ಮಾರಾಟಮಾಡಿ ಹಣ ದೊರಕಿಸಿಕೊಳ್ಳುವ ತನಕ ಅವುಗಳ ವಾರ್ಷಿಕ ವಹಿವಾಟುಗಳಿಗೆ ಅನುಕೂಲವಾಗುವಂತೆ ಅಲ್ಪಾವಧಿಯ ಸಾಲ ಒದಗಿಸಲಾಗುವುದು. 4 ಗ್ರಾಮ ದತ್ತು ಯೋಜನೆ : ಸ್ಟೇಟ್ ಬ್ಯಾಂಕ್ ಸಮುದಾಯ ಇತ್ತೀಚಿಗೆ ಗ್ರಾಮಗಳನ್ನು ದತ್ತು ಪಡೆಯುವ ಯೋಜನೆಯನ್ನು ಆಚರಣೆಗೆ ತಂದಿವೆ. ಈ ಯೋಜನೆಯ ಅನ್ವಯ ಪ್ರತಿಯೊಂದು ಬ್ಯಾಂಕ್ ಒಂದು ಅಥವಾ ಹೆಚ್ಚು ಗ್ರಾಮಗಳನ್ನು ದತ್ತು ಪಡೆದು ಆ ಗ್ರಾಮ ಅಥವಾ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಹಣಕಾಸಿನ ಅಗತ್ಯಗಳನ್ನು ಪೂರೈಸುತ್ತದೆ. 5 ಸಂಘಟಿತ ಗ್ರಾಮೀಣ ಅಭಿವೃದ್ಧಿ: ಹಳ್ಳಿಗಳ ಆರ್ಥಿಕ ಅಗತ್ಯಗಳು ಮಾತ್ರವಲ್ಲವೆ ಅವುಗಳ ಸಾಮಾಜಿಕ ಮತ್ತು ಸಾಂಸ್ಕøತಿಕ ಅವಶ್ಯಕತೆಗಳನ್ನು ಕೂಡ ಈಡೇರಿಸುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಸಮುದಾಯ 1977 ರಲ್ಲಿ ಒಂದು ಸಂಘಟಿತ ಗ್ರಾಮೀಣ ಅಭಿವೃದ್ಧಿ ಯೋಜನೆಯನ್ನು ರೂಪಿಸಿತು. ಇದರ ಅನ್ವಯ ದೇಶಾದ್ಯಂತ 250 ಗ್ರಾಮಗಳನ್ನು ಆಯ್ಕೆಮಾಡಲಾಗಿದ್ದು ಅವುಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸಲಾಗಿದೆ. ಇದರ ಪ್ರಥಮ ಹಂತದಲ್ಲಿ ಗ್ರಾಮಗಳ ಆರ್ಥಿಕ ಅಗತ್ಯಗಳನ್ನೂ ದ್ವಿತೀಯ ಹಂತದಲ್ಲಿ ಸಾಮಾಜಿಕ ಮತ್ತು ಸಾಂಸ್ಕøತಿಕ ಅಗತ್ಯಗಳನ್ನೂ ಪೂರೈಸುವ ಕಾರ್ಯಕ್ರಮಗಳು ಆರಂಭವಾಗಿದೆ. ಸಾಮಾಜಿಕ ಸುಧಾರಣೆಯ ಅಂಗವಾಗಿ ಯೋಜನೆಯ ಪ್ರಥಮ ವರ್ಷದಲ್ಲಿಯೇ 214 ಗ್ರಾಮಗಳಿಗೆ ಸೇರಿದ ಸುಮಾರು 26,500 ಖಾತೆಗಳ ಮೇಲೆ ರೂ. 3 ಕೋಟಿ ಧನಸಹಾಯ ನೀಡಲಾಗಿದೆ. 6 ಕೃಷಿ ಅಭಿವೃದ್ಧಿ ಶಾಖೆಗಳು: ಸ್ಟೇಟ್ ಬ್ಯಾಂಕ್ ಸಮುದಾಯ ಕೈಗೊಳ್ಳುತ್ತಿರುವ ಮತ್ತೊಂದು ಪ್ರಗತಿಪರ ಕಾರ್ಯಕ್ರಮವೆಂದರೆ ತಮ್ಮ ವಿಶೇಷ ಕೃಷಿ ಅಭಿವೃದ್ಧಿ ಶಾಖೆಗಳ ಮೂಲಕ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವಾಗುವುದು. ಕೃಷಿಕರಿಗೆ ಧನಸಹಾಯ ನೀಡುವುದಕ್ಕಿಂತ ಮಿಗಿಲಾಗಿ ಆಯಾ ಪ್ರದೇಶದ ಕೃಷಿ ಅಭಿವೃದ್ಧಿಗೆ ನೆರವಾಗುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. 1980 ಜನವರಿ ತಿಂಗಳ ವೇಳೆಗೆ ದೇಶಾದ್ಯಂತ 384 ಶಾಖೆಗಳು ಪ್ರಾರಂಭವಾಗಿದ್ದು ಅವುಗಳಲ್ಲಿ 195 ಶಾಖೆಗಳು ಹಿಂದುಳಿದ ಪ್ರದೇಶಗಳಲ್ಲಿದ್ದುವು. ಈತನ 11 ಲಕ್ಷ ರೈತರಿಗೆ ಸುಮಾರು ರೂ 275 ಕೋಟಿ ನೆರವು ನೀಡಲಾಗಿದೆ. 7 ಭಿನ್ನಕ ಬಡ್ಡಿ ದರ ಯೋಜನೆ: ಈ ಯೋಜನೆ ಮೂಲತಃ ದುರ್ಬಲ ವರ್ಗಗಳಿಗಾಗಿ ರೂಪುಗೊಂಡÀದ್ದು. ಇದರ ಪ್ರಕಾರ ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ನೀಡುವ ಸಾಲದ ಮೇಲೆ ಶೇಕಡಾ 4 ರಷ್ಟು ಬಡ್ಡಿಯನ್ನು ಮಾತ್ರ ವಿಧಿಸಲಾಗುತ್ತದೆ. ಈ ಯೋಜನೆಯ ಮೂಲಕ ಪ್ರಯೋಜನ ಪಡೆದವರ ಸಂಖ್ಯೆ 1981 ಜೂನ್ ವೇಳೆಗೆ 26.68 ಲಕ್ಷಕ್ಕೆ ಏರಿತು. ಸಹಾಯದ ಮೊತ್ತ ರೂ 225 ಕೋಟಿ. 8 ಸಹಕಾರಿ ಮಾರಾಟ ಮತ್ತು ಕೃಷಿ ಉತ್ಪನ್ನ ಸಂಸ್ಕರಣ ಸಂಘಗಳಿವೆ ನೆರವು: ಸಹಕಾರಿ ಮಾರಾಟ ಸಂಘಗಳಿಗೆ ವಿಶೇಷ ನೆರವು ನೀಡುವುದು ಭಾರತಿಯ ಸ್ಟೇಟ್ ಬ್ಯಾಂಕ್ ಹಮ್ಮಿಕೊಂಡಿರುವ ಇನ್ನೊಂದು ಪ್ರಮುಖ ಚಟುವಟಿಕೆ. ಸಹಕಾರಿ ಕೃಷಿ ಉತ್ಪನ್ನ ಮಾರಾಟ ವ್ಯವಹಾರಗಳಿಗೆ ಕೇಂದ್ರ ಸಹಕಾರ ಬ್ಯಾಂಕುಗಳ ನೇರ ಸೌಲಭ್ಯವಿಲ್ಲದೆ ಇರುವ ಸ್ಥಳಗಳಲ್ಲಿ ಮಾರಾಟ ಸಂಘಗಳು ದಾಸ್ತಾನುಗಳ ಆಧಾರದ ಮೇಲೆ ಸ್ಟೇಟ್ ಬ್ಯಾಂಕಿನಿಂದ ಸಾಲ ಪಡೆಯಬಹುದು. ಅಲ್ಲದೆ ನ್ಯಾಯವಾದ ಬೆಲೆ ಸಿಗುವವರೆಗೆ ಕಾಯಬೇಕಾದ ಪರಿಸ್ಥಿತಿಯಲ್ಲಿಯೂ ದಾಸ್ತಾನು ಅಥವಾ ಸ್ಥಿರ ಆಸ್ತಿಯನ್ನು ಒತ್ತೆಯಾಗಿಟ್ಟು ಮುಂಗಡ ಪಡೆಯಬಹುದಾಗಿದೆ. ಇಂಥ ಮುಂಗಡಗಳ ಮೇಲೆ ಮಾಮುಲು ದರಕ್ಕಿಂತ ಶೇಕಡಾ ಅರ್ಧದಷ್ಟು ಕಡಿಮೆ ಬಡ್ಡಿ ವಿಧಿಸಲಾಗುತ್ತದೆ. ಸಕ್ಕರೆ ಕಾರ್ಖಾನೆ, ಸೆಣಬಿನ ಕಾರ್ಖಾನೆ, ಎಣ್ಣಿ ಗಿರಣಿ ಮತ್ತು ಇತರ ಸಂಸ್ಕರಣ ಸಹಕಾರ ಸಂಘಗಳೂ ಈ ಷರತ್ತುಗಳಿಗೆ ಅನುಗುಣವಾಗಿ ಧನಸಹಾಯ ಪಡೆಯಬಹುದಾಗಿದೆ. 9 ಉಗ್ರಾಣಗಳ ನಿರ್ಮಾಣಕ್ಕೆ ನೆರವು: ಕೃಷಿ ಮಾರುಕಟ್ಟೆಗಳು ಅಭಿವೃದ್ಧಿ ಹೊಂದಬೇಕಾದರೆ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ದಾಸ್ತಾನು ಮಾಡುವ ಉಗ್ರಾಣಗಳು ಬಹಳ ಅಗತ್ಯ. ಇವನ್ನು ನಿರ್ಮಿಸುವುದಕ್ಕಾಗಿ ಉಗ್ರಾಣ ನಿರ್ಮಾಣ ಮಂಡಳಿಗಳ ಮೂಲಕ ಸ್ಟೇಟ್ ಬ್ಯಾಂಕ್ ಧನಸಹಾಯ ಒದಗಿಸುತ್ತದೆ. ಈ ಸಾಲಗಳಿಗೆ ಮಳಿಗೆಗಳು ದಾಸ್ತಾನುಗಳ ಮೇಲೆ ¨ರೆದ ರಸೀದಿಗಳು ಆಧಾರವಾಗಿರುತ್ತವೆ. ಇದರ ಜೊತೆಗೆ ಮಳಿಗೆಯವರು ಉಗ್ರಾಣ ನಿರ್ಮಾಣ ಮಂಡಳಿಯ ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯಬಹುದಾಗಿದೆ. 10 ಸಣ್ಣ ಮತ್ತು ಗ್ರಾಮ ಕೈಗಾರಿಕೆಗಳಿಗೆ ಸಹಾಯ : ಸ್ಟೇಟ್ ಬ್ಯಾಂಕ್ ಪ್ರಾರಂಭದಿಂದಲೂ ಸಣ್ಣ ಮತ್ತು ಗ್ರಾಮಕೈಗಾರಿಕಾಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತ ಬಂದಿದೆ. ಇದಕ್ಕಾಗಿ 1960 ರಲ್ಲಿ ರಿಸರ್ವ ಬ್ಯಾಂಕ್ ರೂಪಿಸಿದ ಸಾಲದ ಯೋಜನೆಯ ಪೂರ್ಣ ಪ್ರಯೋಜನ ಪಡೆದುಕೊಂಡಿದೆ. ಇಂದು ಸಣ್ಣ ಮತ್ತು ಗ್ರಾಮಕೈಗಾರಿಕೊದ್ಯಮಿಗಳಿಗೆ ಸುಲಭ ಷರತ್ತುಗಳ ಮೇಲೆ ಧನಸಹಾಯ ನೀಡುತ್ತಿದೆ. ಯಾಂತ್ರಿಕ ಸಲಹೆ ಸೂಚನೆಗಳನ್ನು ನೀಡುವ ಏರ್ಪಾಟು ಮಾಡಿದೆ. 1982 ರಿಂದ 1983 ರ ಅಂತ್ಯದ ತನಕ ಸಣ್ಣ ಕೈಗಾರಿಕೆಗಳಿಗೆ ನೀಡಿದ ಸಾಲಗಳ ಮೊತ್ತ ರೂ 1438 ಕೋಟಿ. ಸುಮಾರು 4 ಲಕ್ಷ ಕೈಗಾರಿಕಾ ಘಟಕಗಳು ಪ್ರಯೋಜನ ಪಡೆದಿದೆ. ಇದೇ ಅವಧಿಯಲ್ಲಿ 2.6 ಲಕ್ಷ ಗ್ರಾಮಕೈಗಾರಿಕೆಗಳು ಸುಮಾರು ರೂ 63.6 ಕೋಟಿ ನೆರವು ಪಡೆದವು. 11 ಕೈಗಾರಿಕಾ ಪುನಾರಚನೆಗಾಗಿ ಸಹಾಯ: ಸ್ಟೇಟ್ ಬ್ಯಾಂಕ್ ಹಿಂದಿನಿಂದ ಮುಂದುವರಿಸಿಕೊಂಡು ಬಂದಿರುವ ಕೈಗಾರಿಕಾ ಪುನಾರಚನೆಗೆ ನೆರವಾಗುವ ಕ್ರಮದ ಅಂಗವಾಗಿ 1983 ಅಂತ್ಯದ ವೇಳೆಗೆ 211 ವ್ಯಾಧಿಗ್ರಸ್ಥ ಮಧ್ಯಮ ಹಾಗೂ ದೊಡ್ಡ ಕೈಗಾರಿಕೆಗಳಿಗೆ ರೂ 736 ಕೋಟಿ ಸಹಾಯ ಒದಗಿಸಲಾಗಿದೆ. 12 ವಿದೇಶಿ ವ್ಯಾಪಾರಕ್ಕೆ ನೆರವು: ವಿದೇಶಿ ವ್ಯಾಪಾರಾಭಿವೃದ್ಧಿಯನ್ನು ಪ್ರೋತ್ಸಾಹಿಸುವುದರಲ್ಲಿಯೂ ಸ್ಟೇಟ್ ಬ್ಯಾಂಕ್ ಹಿಂದುಳಿದಿಲ್ಲ. ನೇರವಾಗಿ ವಿದೇಶೀ ವಿನಿಮಯ ವ್ಯವಹಾರ ಕೈಗೊಳ್ಳುವ ಅಧಿಕಾರ ಪಡೆದಿರುವ ಈ ಬ್ಯಾಂಕ್ ಆಮದು ಮತ್ತು ರಫ್ತು ವ್ಯಾಪಾರಸ್ಥರಿಗೆ ಧನಸಹಾಯ ನೀಡುವುದರ ಮೂಲಕ ಈ ಕ್ಷೇತ್ರದಲ್ಲಿ ವಿದೇಶಿ ಸಂಸ್ಥೇಗಳ ಸ್ವಮ್ಯವನ್ನು ಮೊಟಕುಗೊಳಿಸಿದೆ. 1983 ರಲ್ಲಿ ರಫ್ತುವ್ಯಾಪಾರೋದ್ಯಮಿಗಳಿಗೆ ರೂ 428 ಕೋಟಿ ನೆರವು ನೀಡಿತು. ಅವಶ್ಯಕ ವಸ್ತುಗಳ ಆಮದು ವ್ಯಾಪಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆರ್ಥಿಕವಾಗಿ ಕಷ್ಟದಲ್ಲಿದ ಭಾರತೀಯ ಹಡಗು ಕಂಪನಿಗಳಿಗೆ ರೂ 360 ಕೋಟಿ ಧನಸಹಾಯ ನೀಡಿತು. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಸ್ಟೇಟ್ ಬ್ಯಾಂಕಿನ ಶಾಖೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಆ ಪ್ರದೇಶಗಳ ಜನರಲ್ಲಿ ಉಳಿತಾಯ ಮನೋಭಾವ ಕಂಡುಬರುತ್ತದೆ. ಹೀಗೆ ಸ್ಟೇಟ್ ಬ್ಯಾಂಕ್ ಭಾರತದ ಅರ್ಥವ್ಯವಸ್ಥೆಯಲ್ಲಿ ಅತ್ಯಂತ ಮಹತ್ತ್ವದ ಪಾತ್ರ ನಿರ್ವಹಿಸುತ್ತಿದೆ. ಸ್ಟೇಟ್ ಬ್ಯಾಂಕ್ ಹಮ್ಮಿಕೊಂಡಿರುವ ಅಭಿವೃದ್ಧಿಯ ಕಾರ್ಯಕ್ರಮಗಳ ಫಲವಾಗಿ ಮುಖ್ಯವಾಗಿ ಭಾರತೀಯ ಕೃಷಿಕ್ಷೇತ್ರ ನೂತನ ಆಯಾಮ ಪಡೆದುಕೊಳ್ಳುತ್ತಿರುವುದನ್ನು ನಿಚ್ಚಳವಾಗಿ ಗುರುತಿಸಬಹುದಾಗಿದೆ. ಸ್ಟೇಟ್ ಬ್ಯಾಂಕಿನ ಕ್ರಿಯಾಶೀಲತೆಯಿಂದಾಗಿ ಹಣದ ಪೇಟೆಯ ಮೇಲೆ ಸರ್ಕಾರದ ಪರಿಣಾಮಕಾರಿಯಾದ ಹತೋಟಿ ಸಾಧ್ಯವಾಗುತ್ತಿದೆ. ದೇಶದ ಬ್ಯಾಂಕ್ ವ್ಯವಸ್ಥೆಯನ್ನು ಅಭಿವೃದ್ಧಿಯೋಜನೆಗಳಿಗೆ ಹೊಂದಿಸುವಲ್ಲಿ ಸ್ಟೇಟ್ ಬ್ಯಾಂಕ್ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಆದರೂ ಸಹಕಾರ ಸಂಘಗಳಿಗೆ ಮತ್ತು ಸಣ್ಣ ಹಾಗೂ ಗ್ರಾಮಕೈಗಾರಿಕೆಗಳಿಗೆ ಸ್ಟೇಟ್ ಬ್ಯಾಂಕ್ ನೀಡುತ್ತಿರುವ ನೆರವು, ಪುರಸ್ಕಾರ ಪ್ರೋತ್ಸಾಹಗಳು ಸಾಲವು ಎಂದೂ ಅಭಿಪ್ರಾಯವಿದೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಮಹತ್ತ್ವದ ಪಾತ್ರವಹಿಸುವ ಸಹಕಾರ ಸಂಘಗಳು ಸಣ್ಣ ಹಾಗು ಗ್ರಾಮ ಕೈಗಾರಿಕೆಗಳಿಗೆ ನೆರವು ನೀಡುವಾಗ ಕೇವಲ ಭದ್ರತೆಯನ್ನೇ ಪರಿಗಣಿಸದೆ ಅವುಗಳ ಪ್ರಾಮುಖ್ಯತೆಯನ್ನೂ, ಉತ್ಪಾದನೆಯನ್ನೂ ಗಮನಿಸುವುದು ಅಗತ್ಯ ಎಂದು ಹೇಳಲಾಗಿದೆ. ವಿದೇಶಿ ಬ್ಯಾಂಕುಗಳು: ಭಾರತದಲ್ಲಿ 30 ವಿದೇಶೀ ಬ್ಯಾಂಕುಗಳು ಕೆಲಸಮಾಡುತ್ತಿವೆ. ಆ ಪೈಕಿ ಹೆಸರಿಸಬೇಕಾದವು ಲಾಯ್ಡ್ ಬ್ಯಾಂಕ್ ನ್ಯಾಷನಲ್, ಗ್ರಿಂಡ್ಲೆ ಬ್ಯಾಂಕ್(ಸ್ಟಾಂಡರ್ಡ್ ಅಂಡ್ ಚಾಟರ್ಡ್ ಬ್ಯಾಂಕಿನೊಂದಿಗೆ ವಿಲೀನವಾಗಿದೆ) ಸಿಟಿ ಬ್ಯಾಂಕ್, ಸ್ಟಾಂಡಡ ಅಂಡ್ ಚಾರ್ಟರ್ಡ್ ಬ್ಯಾಂಕ್, ಹಾಂಕಾಂಗ್ ಅಂಡ್ ಷಾಂಘಾಯ್ ಬ್ಯಾಂಕ್, ದಿ ಅಮೆರಿಕನ್ ಎಕ್ಸ್‍ಪ್ರೆಸ್ ಬ್ಯಾಂಕ್, ಡಾಯಿಷ್ ಬ್ಯಾಂಕ್, ನ್ಯೂ ಚೈನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಹಿಡಾಚಿ. ಇವು ನಿರ್ವಹಿಸುವ ಕಾರ್ಯಗಳು ಮುಖ್ಯವಾಗಿ ನಾಲ್ಕು: 1) ವಿದೇಶಿ ವ್ಯಾಪಾರಕ್ಕೆ ಹಣ ಪೂರೈಸುವುದು, 2) ಠೇವಣಿ ಸ್ವೀಕಾರ, ಉದ್ದರಿ ಮೊದಲಾದ ವ್ಯವಹಾರಗಳನ್ನು ನಡಸುವುದು, 3) ರಿಸರ್ವ್ ಬ್ಯಾಂಕಿನ ಆದೇಶದ ಮೇರೆಗೆ ವಿದೇಶಿ ಕರೆನ್ಸಿಯ ಕ್ರಯ-ವಿಕ್ರಯ ಕಾರ್ಯ ಕೈಗೊಳ್ಳುವುದು ಮತ್ತು 4) ರಫ್ತು ಹಾಗೂ ಆಮದು ವಿನಿಮಯ ಪತ್ರಗಳನ್ನು ಕೊಳ್ಳುವುದು. ವಿದೇಶೀ ಬ್ಯಾಂಕುಗಳು ಆಂತರಿಕ ವ್ಯಾಪಾರಕ್ಕೂ ಹಣ ಒದಗಿಸುತ್ತವೆ. ಪಶ್ಚಿಮ ಬಂಗಾಳದಲ್ಲಿ ಸೆಣಬಿನ ವ್ಯಾಪಾರ, ದೆಹಲಿಯಲ್ಲಿ ಜವಳಿ ವ್ಯಾಪಾರ, ಕಾನ್‍ಪುರದಲ್ಲಿ ಚರ್ಮದ ವ್ಯಾಪಾರ ಇವು ವಿದೇಶೀ ಬ್ಯಾಂಕುಗಳಿಂದ ನೆರವು ಪಡೆಯುತ್ತಿವೆ. ಈ ಬ್ಯಾಂಕುಗಳ ಮೇಲಿರುವ ಮುಖ್ಯವಾದ ಆಪಾದನೆಗಳು ಇವು: 1 ಈ ಬ್ಯಾಂಕುಗಳು ವಿದೇಶಿ ವ್ಯಾಪಾರವನ್ನೆಲ್ಲ ಗುತ್ತಿಗೆಗೆ ಹಿಡಿದಿದ್ದು ದಲ್ಲಾಳಿ ವಟ್ಟ ಹಾಗೂ ವಿಮಾಕಂತುಗಳ ರೂಪದಲ್ಲಿ ಹೇರಳ ಹಣ ಸಂಪಾದಿಸುತ್ತವೆ. 2 ಸಾಲಗಳು, ಮುಂಗಡಗಳ ಮತ್ತು ಉದ್ಯೋಗಗಳನ್ನು ನೀಡುವಾಗ ತಂತಮ್ಮ ದೇಶದವರಿಗೆ ಆದ್ಯತೆ ನೀಡುತ್ತವೆ. 3 ಭಾರತೀಯ ರಫ್ತು ವ್ಯಾಪಾರಿಗಳು ತಮ್ಮ ರಫ್ತುಗಳಿಗೆ ವಿದೇಶೀ ವಿಮಾ ಕಂಪನಿಗಳಲ್ಲಿಯೇ ವಿಮೆ ಮಾಡಬೇಕೆಂದು ಒತ್ತಾಯ ಹೇರುತ್ತವೆ. ಈ ಆಪಾದನೆಗಳನ್ನು ತೊಡೆದುಹಾಕುವ ಸಲುವಾಗಿ ಇತ್ತೀಚಿಗೆ ರಿಸರ್ವ್ ಬ್ಯಾಂಕ್ ಈ ಬ್ಯಾಂಕುಗಳ ವ್ಯವಹಾರಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿದೆ. ಭಾರತೀಯ ಬ್ಯಾಂಕುಗಳೂ ವಿದೇಶೀ ವಿನಿಮಯ ವ್ಯವಹಾರದಲ್ಲಿ ತೊಡಗುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಈ ಬ್ಯಾಂಕುಗಳು ಭಾರತದ ರಿಸರ್ವ್ ಬ್ಯಾಂಕಿನಿಂದ ಅನುಮತಿ ಪತ್ರ ಪಡೆದಿರಬೇಕೆಂದು ನಿಬಂಧನೆ ಹಾಕಲಾಗಿದೆ. ಠೇವಣಿ ಸ್ವೀಕಾರ, ವಿದೇಶೀ ವಿನಿಮಯ ವ್ಯವಹಾರ, ಸಾಲ ಪೂರೈಕೆ ಬಂಡವಾಳ ವಿನಿಮಯ ಯೋಜನೆ ಇತ್ಯಾದಿ ಎಲ್ಲ ವ್ಯವಹಾರಗಳೂ ರಿಸರ್ವ್ ಬ್ಯಾಂಕಿನ ನೇರ ನಿಯಂತ್ರಣಕ್ಕೆ ಒಳಪಟ್ಟಿವೆ. ಉಳಿತಾಯ ಬ್ಯಾಂಕುಗಳು: ಇವು ಜನ ಸಾಮಾನ್ಯರ ಉಳಿತಾಯ ಸಂಗ್ರಹಿಸಿ, ಅದನ್ನು ದೇಶದ ಪ್ರಗತಿಗೆ ಒದಗಿ ಬರುವ ಬಂಡವಾಳವಾಗಿ ಪರಿವರ್ತಿಸುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳು. ಭಾರತದಲ್ಲಿ 19ನೆಯ ಶತಮಾನದಲ್ಲಿ ಉಳಿತಾಯ ಠೇವಣಿಗಳನ್ನು ಸ್ವೀಕರಿಸುವುದಕ್ಕಾಗಿಯೆ ಪ್ರತ್ಯೇಕ ಬ್ಯಾಂಕುಗಳು ಸ್ಥಾಪಿತವಾಗಿದ್ದುವು. ಇಂದು ಪ್ರತ್ಯೇಕ ಬ್ಯಾಂಕುಗಳಿಲ್ಲ. ಬದಲಾಗಿ ಎಲ್ಲ ವಾಣಿಜ್ಯ ಬ್ಯಾಂಕುಗಳೂ ಉಳಿತಾಯ ಠೇವಣಿಗಳನ್ನು ಸ್ವೀಕರಿಸುತ್ತವೆ. ಅಂಚೆ ಕಚೇರಿಗಳೂ ಉಳಿತಾಯ ಠೇವಣಿಗಳನ್ನು ಸ್ವೀಕರಿಸುತ್ತವೆ. ಠೇವಣಿದಾರರು ಕೆಲವು ನಿಬಂಧನೆಗಳಿಗೆ ಒಳಪಟ್ಟು ತಮ್ಮ ಹಣವನ್ನು ಡ್ರಾ ಮಾಡಬಹುದಾಗಿದೆ. ಠೇವಣಿಗಳ ಮೇಲೆ ಬಡ್ಡಿ ಕೊಡಲಾಗುವುದು. ಕೃಷಿ ಹಣಕಾಸು: ಭಾರತ ಕೃಷಿ ಪ್ರಧಾನವಾದ ರಾಷ್ಟ್ರ. ಒಟ್ಟು ಜನಸಂಖ್ಯೆಯ ಶೇಕಡಾ 70ಕ್ಕೂ ಹೆಚ್ಚಿನ ಜನರಿಗೆ ಕೃಷಿಯೇ ಜೀವನಾಧಾರ. ರಾಷ್ಟ್ರೀಯ ವರಮಾನದಲ್ಲಿ ಕೃಷಿ ಕ್ಷೇತ್ರದ್ದು ಸಿಂಹಪಾಲು. ಸಕ್ಕರೆ, ಸಣಬು, ಹತ್ತಿಬಟ್ಟೆ ಮೊದಲಾದವುಗಳ ಕೈಗಾರಿಕೆಗಳಿಗೆ ಕೃಷಿ ಅಭಿವೃದ್ಧಿಯೇ ಜೀವಾಳ. ಸರಕು ಸಾಗಣೆಯಲ್ಲಿ ಕೃಷಿ ಉತ್ಪನ್ನಗಳದೇ ಮೇಲುಗೈ. ವಿದೇಶೀ ವಿನಿಮಯ ಗಳಿಕೆಯಲ್ಲೂ ಕೃಷಿ ಕ್ಷೇತ್ರ ಹಿಂದೆ ಬಿದ್ದಿಲ್ಲ. ಆದಾಗ್ಯೂ ಎಕರೆವಾರು ಮತ್ತು ತಲಾವಾರು ಎರಡೂ ದೃಷ್ಟಿಯಿಂದ ಉತ್ಪಾದನೆ ಕಡಿಮೆ. ಭಾರತೀಯ ಕೃಷಿಕರಲ್ಲಿ ಬಹುತೇಕ ಮಂದಿ ಸಣ್ಣ ಮತ್ತು ಅತಿಸಣ್ಣ ರೈತರು. ಶೇಕಡಾ 72.6ರಷ್ಟು ಭೂಹಿಡುವಳಿಗಳ ವಿಸ್ತೀರ್ಣ ತಲಾ ಎರಡು ಹೆಕ್ಟೇರುಗಳಿಗಿಂತಲೂ ಕಡಿಮೆ. ಹಳ್ಳಿಗಳ ಬೆಳೆವಣಿಗೆಯೂ ಕೃಷಿ ಉತ್ಪನ್ನದ ವೃದ್ಧಿಯೂ ಯೋಜನೆಯ ಮೊದಲ ಅಗತ್ಯ. ಗ್ರಾಮ ಭಾಗದಲ್ಲಿ ಬಾಳಸಂಪನ್ನತೆ ಎಷ್ಟು ಸರ್ವತೋಮುಖವಾಗಿ ಬೆಳೆದರೆ ಅಷ್ಟೂ ಯೋಜನೆಯ ಕಾರ್ಯ ನೆರವೇರಿದಂತಾಗುತ್ತದೆ. ಒಟ್ಟಿನಲ್ಲಿ ಇರುವ ಜನರಿಗೂ ಹೆಚ್ಚುತ್ತಿರುವ ಜನಸಂಖ್ಯೆಗೂ ಸಾಕಾಗುವಂತೆ ಆಹಾರ ಪದಾರ್ಥಗಳ ಉತ್ಪತ್ತಿಗೂ ಕೈಗಾರಿಕೆಯ ಹಲವಾರು ಮೂಲ ಸಾಮಗ್ರಿಗಳ ಉತ್ಪಾದನೆಗೂ ಕೃಷಿ ಅಭಿವೃದ್ಧಿ ಅತ್ಯಗತ್ಯ. ಆಹಾರ ಧಾನ್ಯಗಳಲ್ಲಿ ಸ್ವಾವಲಂಬನೆ ಮತ್ತು ಸ್ವಯಂಪೂರ್ಣತೆ ಸಾಧಿಸಬೇಕಾಗಿದೆ. ಆದ್ದರಿಂದ ಕೃಷಿ ಅಭಿವೃದ್ಧಿಗೆ ಬೇಕಾದ ಸಕಲ ಸಾಧನ ಸವಲತ್ತುಗಳೂ ಒದಗಬೇಕು ಎಂಬುದು ಸರ್ಕಾರದ ಆಶಯ. ಭಾರತೀಯ ಕೃಷಿಕ್ಷೇತ್ರ ಹಿಂದುಳಿದಿರುವುದಕ್ಕೆ ಇರುವ ಹಲವು ಕಾರಣಗಳ ಪೈಕಿ ಹಣಕಾಸಿನ ಕೊರತೆಯೂ ಒಂದು. ಸಾಲಕ್ಕೆ ಊರಿನ ಸಾಹುಕಾರರನ್ನೇ ಅವಲಂಬಿಸಬೇಕಾಗಿದ್ದ ಸ್ಥಿತಿ ತಪ್ಪಿ ಸಹಕಾರ ತತ್ತ್ವದ ಸಂಘಗಳು ಇರಬೇಕು; ಹಳ್ಳಿಯ ಪ್ರತಿಯೊಂದು ಕುಟುಂಬವೂ ಅದರಲ್ಲಿ ಸದಸ್ಯತ್ವ ಪಡೆದಿರಬೇಕು. ರೈತರ ಸಂಪತ್‍ಸ್ಥಿತಿ ಎಂಥದೇ ಇರಲಿ ಅವನು ಪ್ರಾಮಾಣಿಕನಾಗಿರುವತನಕ ಅವನಿಗೆ ಬೇಕಾದ ಬಂಡವಾಳ ಪೂರೈಕೆಗೆ ತೊಂದರೆಯಾಗದ ರೀತಿಯಲ್ಲಿ ಕೃಷಿಗೆ ಹಣಕಾಸು ವ್ಯವಸ್ಥೆಯನ್ನು ಏರ್ಪಡಿಸುವ ನಿಟ್ಟಿನಲ್ಲಿ ಸರ್ಕಾರವು ಸಹಕಾರ ಸಂಘಗಳ ಮೂಲಕ ಕ್ರಮ ಕೈಗೊಳ್ಳುತ್ತಿದೆ. ಕೃಷಿಕರು ವಿಭಿನ್ನ ಉದ್ದೇಶಗಳಿಗೆ ಮತ್ತು ವಿವಿಧ ಕಾಲಾವಧಿಗಳಿಗೆ ಹಣಕಾಸಿನ ನೆರವನ್ನು ಅಪೇಕ್ಷಿಸುತ್ತಾರೆ. ಭಾರತೀಯ ರೈತರ ಹಣಕಾಸಿನ ಅವಶ್ಯಕತೆಯನ್ನು ಅದರ ಉದ್ದೇಶ ಮತ್ತು ಅವಧಿಗೆ ಅನುಗುಣವಾಗಿ ಮೂರು ಭಾಗಗಳಾಗಿ ವಿಂಗಡಿಸ ಬಹುದು: ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳು. ಹನ್ನೆರಡು ತಿಂಗಳುಗಳಿಗಿಂತಲೂ ಕಡಿಮೆ ಅವಧಿಗೆ ಬೇಕಾಗಿರುವ ಸಾಲವನ್ನು ಅಲ್ಪಾವಧಿ ಸಾಲ ಎಂದು ಪರಿಗಣಿಸಲಾಗುತ್ತದೆ. ಬಿತ್ತನೆ ಬೀಜ, ಗೊಬ್ಬರ, ದನಗಳ ಮೇವು ಮುಂತಾದವನ್ನು ಕೊಳ್ಳಲು, ಭೂಕಂದಾಯ ಪಾವತಿ, ಕೂಲಿ ಮತ್ತು ಕೆಲವು ವೇಳೆ ಗೃಹಕೃತ್ಯದ ವೆಚ್ಚಗಳನ್ನು ಭರಿಸಲು ಅಲ್ಪಾವಧಿ ಸಾಲ ಪಡೆಯಲಾಗುತ್ತದೆ. ಸಾಮಾನ್ಯವಾಗಿ ರೈತರಿಗೆ ಅಲ್ಪಾವಧಿ ಸಾಲದÀ ಅಗತ್ಯಗಳೇ ಹೆಚ್ಚು. ಜಾನುವಾರು ಮತ್ತು ಬೇಸಾಯೋಪಕರಣಗಳನ್ನು ಕೊಳ್ಳಲು ಬಾವಿ ದುರಸ್ತು ಮತ್ತು ಜಮೀನು ಆಬಾದು(ಅಭಿವೃದ್ಧಿ) ಮುಂತಾದ ಕಾರ್ಯಗಳಿಗೆ ಮಧ್ಯಮಾವಧಿ ಸಾಲದ ಅಗತ್ಯವಿರುತ್ತದೆ. ಇದರ ಅವಧಿಯು ಒಂದು ವರ್ಷದಿಂದ ಐದು ವರ್ಷಗಳವರೆಗೆ ಇರುತ್ತದೆ. ಐದು ವರ್ಷಗಳಿಗಿಂತ ಮೇಲ್ಪಟ್ಟ ಅವಧಿಗೆ ಅಗತ್ಯವಿರುವ ಸಾಲವನ್ನು ದೀರ್ಘಾವಧಿಯ ಸಾಲವೆಂದು ಪರಿಗಣಿಸಲಾಗುತ್ತದೆ. ಯಂತ್ರೋಪಕರಣಗಳನ್ನು ಕೊಳ್ಳುವುದು, ಬಾವಿ ತೋಡಿಸುವುದು, ಜಮೀನು ಕೊಳ್ಳುವುದು ಮುಂತಾದ ಉದ್ದೇಶಗಳಿಗಾಗಿ ದೀರ್ಘಾವಧಿ ಸಾಲದ ಅಗತ್ಯ ಉಂಟಾಗುತ್ತದೆ. ಅಂದಾಜು: ಆಧುನಿಕ ಬೇಸಾಯ ವಿಧಾನದ ಪರಿಣಾಮವಾಗಿ ಮತ್ತು ಕೃಷಿ ಸಹಜವಾದ ಅತಂತ್ರ ಅನಿಶ್ಚಿತತೆಗಳಿಂದಾಗಿ ರೈತರ ಹಣಕಾಸಿನ ಅಗತ್ಯಗಳು ದಿನೇ ದಿನೇ ಹೆಚ್ಚುತ್ತ ಬಂದಿವೆ. ನಾಲ್ಕನೆಯ ಯೋಜನೆಯಲ್ಲಿ (1969-74) ಅಲ್ಪಾವಧಿ ಮತ್ತು ದೀರ್ಘವಧಿ ಸಾಲಗಳ ಅಗತ್ಯ ತಲಾ ರೂ 2000 ಕೋಟಿ ಎಂದು ಅಖಿಲ ಭಾರತ ಗ್ರಾಮೀಣ ಉದ್ದರಿ ಸಮೀಕ್ಷೆಯ ಸಮಿತಿ (1969) ಅಂದಾಜು ಮಾಡಿತ್ತು. ಇದೇ ರೀತಿ ಐದನೆಯ ಪಂಚವಾರ್ಷಿಕ ಯೋಜನೆಯಲ್ಲಿ (1974-79) ಅಲ್ಪಾವಧಿ ಮತ್ತು ದೀರ್ಘಾವಧಿ ಉದ್ದರಿ ಅನುಕ್ರಮವಾಗಿ ರೂ 3000 ಮತ್ತು ರೂ 2400 ಕೋಟಿ ಎಂಬುದು ಅಂದಾಜು. 1980-81ರಲ್ಲಿ ಈ ಎಲ್ಲ ಬಗೆಯ ಸಾಲಗಳೂ 1979ರಲ್ಲಿದ್ದುದಕ್ಕಿಂತ ಎರಡು ಪಟ್ಟು ಹೆಚ್ಚಾಗಿದ್ದುವು. ಹಣಕಾಸು ಮೂಲಗಳು: ಇಂದು ಹಲವಾರು ಮೂಲಗಳಿಂದ ಕೃಷಿ ಹಣಕಾಸು ಒದಗಿಬರುತ್ತಿದೆ. ಈ ಮೂಲಗಳಲ್ಲಿ ಕೆಲವು ಖಾಸಗಿಯಾಗಿದ್ದರೆ ಇನ್ನು ಕೆಲವು ಸಾಂಸ್ಥಿಕವಾಗಿವೆ. ಖಾಸಗಿ ಮೂಲಗಳು: ಲೇವಾದೇವಿಗಾರರು, ವ್ಯಾಪಾರಿಗಳು, ದಲ್ಲಾಳಿಗಳು, ಜಮೀನುದಾರರು ಮೊದಲಾದವರು ಸಾಲಕ್ಕೆ ಖಾಸಗಿ ಮೂಲವಾಗಿದ್ದಾರೆ. ಲೇವಾದೇವಿಗಾರರಲ್ಲಿ ಎರಡು ವಿಧ : ಉಪವೃತ್ತಿಯ ಲೇವಾದೇವಿಗಾರರು ಮತ್ತು ವೃತ್ತಿಮೂಲ ಲೇವಾದೇವಿಗಾರರು. ಇವರೇ ಪ್ರಮುಖರಾಗಿದ್ದ ಕಾಲವಿತ್ತು. ಇಂದು ಆ ಸ್ಥಿತಿ ಇಲ್ಲ. 1951ರ ವರೆಗೆ ಅಖಿಲಭಾರತ ಗ್ರಾಮೀಣ ಉದ್ದರಿ ಅಗತ್ಯಗಳನ್ನು ಲೇವಾದೇವಿಗಾರರೇ ಪೂರೈಸುತ್ತಿದ್ದರು. ರಿಸರ್ವ್ ಬ್ಯಾಂಕ್ ನಡೆಸಿದ ಸಮೀಕ್ಷೆಯ ಪ್ರಕಾರ (1961-62) ಲೇವಾದೇವಿಗಾರರು ಶೇಕಡಾ 49ರಷ್ಟು ಗ್ರಾಮೀಣ ಉದ್ದರಿ (ಯಾರ?) ಅಗತ್ಯಗಳನ್ನು ಈಡೇರಿಸುತ್ತಿದ್ದುದು ಗೊತ್ತಾಗುತ್ತದೆ. 1975-76ರ ವೇಳೆಗೆ ಇದು ಶೇಕಡಾ 43ಕ್ಕೆ ಇಳಿದಿತ್ತು. ಲೇವಾದೇವಿಗಾರರ ಪ್ರಾಮುಖ್ಯತೆ ಕುಗ್ಗುತ್ತ ಬಂದಿರುವುದು ಸ್ಪಷ್ಟ. ವ್ಯಾಪಾರಿಗಳು ಮತ್ತು ತರಗು ದಲ್ಲಾಳಿಗಳು ರೈತರಿಗೆ ಸಾಲನೀಡುವುದೇ ಅಲ್ಲದೆ ಅವರ ಫಸಲನ್ನು ಸುಗ್ಗಿಯಲ್ಲಿ ಅಗ್ಗವಾಗಿಕೊಂಡು ತುಟ್ಟಿಯಾದಾಗ ಮಾರಾಟ ಮಾಡಿ ಲಾಭ ಸಂಪಾದಿಸುವ ಪದ್ಧತಿ ಕೂಡ ಬೆಳೆದಿದೆ. ತೆಂಗು, ಹತ್ತಿ, ನೆಲಗಡಲೆ ಮುಂತಾದ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದಂತೆ ಇವರ ಚಟುವಟಿಕೆಗಳು ಹೆಚ್ಚು. 1961-62ರಲ್ಲಿ ಶೇಕಡಾ 8.8ರಷ್ಟು ಗ್ರಾಮೀಣ ಸಾಲಗಳನ್ನು ಇವರು ಪೂರೈಸುತ್ತಿದ್ದರೆಂದು ತಿಳಿದುಬಂದಿದೆ. ಸಾಮಾನ್ಯವಾಗಿ ಲಾಭ ಸಂಪಾದನೆಯ ದೃಷ್ಟಿಯಿಂದ ನಡೆಯುವ ಲೇವಾದೇವಿ, ಸಟ್ಟಾ ವ್ಯಾಪಾರ, ಕಮೀಷನ್, ದಲ್ಲಾಳಿ ವ್ಯವಹಾರಗಳು ಶೋಷಣೆಯ ದಾರಿ ಹಿಡಿಯುತ್ತವೆ. ಬಡ್ಡಿಯ ದರ ಹೆಚ್ಚಾಗಿರುವುದರಿಂದಲೂ ಬೇಸಾಯದ ಅನಿಶ್ಚಿತತೆಗಳಿಂದ ಮರುಪಾವತಿ ಸಾಮಥ್ರ್ಯ ಕುಗ್ಗುವದರಿಂದಲೂ ರೈತರು ಶಾಶ್ವತವಾಗಿ ಸಾಲಗಾರರ ಹಿಡಿತಕ್ಕೆ ಒಳಗಾಗುತ್ತಾರೆ. ಜೀತ ಪದ್ಧತಿ ಹುಟ್ಟಿದ್ದೇ ಈ ಕಾರಣದಿಂದ. ಖಾಸಗಿ ಸಾಲಗಾರರಿಂದಾಗುವ ರೈತರ ಶೋಷಣೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಅನೇಕ ಬಗೆಯ ಕ್ರಮಕೈಗೊಂಡಿದೆ. ಖಾಸಗಿ ಸಾಲಿಗರ ಅನೀತಿಯುತ ವಹಿವಾಟುಗಳನ್ನು ನಿಯಂತ್ರಿಸಲು ಅನೇಕ ಕಾನೂನುಗಳು ಜಾರಿಗೆ ಬಂದಿವೆ; ಈ ಪ್ರಕಾರ, ಲೇವಾದೇವಿಗಾರರು ಸರ್ಕಾರದ ಪರವಾನಿಗೆ ಪಡೆಯಬೇಕಾಗಿದೆ; ವಹಿವಾಟುಗಳ ಸರಿಯಾದ ಲೆಕ್ಕಪತ್ರಗಳನ್ನು ಇಡಬೇಕಾಗಿದೆ. ಸಾಲ ನೀಡಿದ್ದಕ್ಕೆ ಮತ್ತು ಅದು ಮರುಪಾವತಿ ಆದುದಕ್ಕೆ ದಾಖಲೆ ಇಡಬೇಕಾಗಿದೆ, ರಶೀತಿ ನೀಡಬೇಕಾಗಿದೆ. ಗರಿಷ್ಠ ಬಡ್ಡಿಯ ದರವನ್ನು ಸರ್ಕಾರವೇ ನಿರ್ಧಾರಮಾಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಹಣಕಾಸು ವ್ಯವಸ್ಥೆಗೆ ಒಂದು ಪ್ರಬಲ ಮತ್ತು ಪರಿಣಾಮಕಾರಿ ಪರ್ಯಾಯ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಅನೇಕ ಸಂಘ ಸಂಸ್ಥೆಗಳು ರೈತರ ನೆರವಿಗೆ ನಿಲ್ಲುವಂತೆ ಸರ್ಕಾರ ಮಾಡಿದೆ. ಇಷ್ಟಾದರೂ ಖಾಸಗಿ ಜನರು ಒಂದು ರೀತಿಯಲ್ಲಿ ತಮ್ಮ ಲಾಭಕೋರ ಲೇವಾದೇವಿ ವ್ಯವಹಾರಗಳನ್ನು ಮುಂದುವರಿಸುತ್ತಲೇ ಇದ್ದಾರೆ. ರೈತರೂ ಅವರಿಂದ ಸಾಲ ಪಡೆಯುತ್ತಲೇ ಇದ್ದಾರೆ. ಕೃಷಿವರ್ಗ ತಮ್ಮ ಸರ್ವತೋಮುಖ ಅಭಿವೃದ್ಧಿಗಾಗಿಯೇ ರೂಪುಗೊಂಡಿರುವ ಸಾಂಸ್ಥಿಕ ಹಣಕಾಸು ಸೌಲಭ್ಯಗಳನ್ನು ಪರಿಣಾಮಕಾರಿಯಾಗಿಯೂ ಲಾಭದಾಯಕವಾಗಿಯೂ ವಿನಿಯೋಗಿಸಿಕೊಳ್ಳಲು ಮನಸ್ಸು ಮಾಡಿದ ಹೊರತು ಈ ಖಾಸಗಿ ಮೂಲಗಳ ಮಹತ್ತ್ವ ಕಡಿಮೆಯಾಗುವುದೇ ಇಲ್ಲ; ಅಲ್ಲದೆ ಕೃಷಿ ಕ್ಷೇತ್ರದ ಅಭಿವೃದ್ಧಿಯೂ ಕಷ್ಟವಾಗುತ್ತದೆ. ಸಾಂಸ್ಥಿಕ ಮೂಲಗಳು: ಕೃಷಿಕರು ತಮ್ಮ ಉತ್ಪನ್ನ ವರಮಾನಗಳನ್ನು ಹೆಚ್ಚಿಸಿ ಕೊಳ್ಳುವುದಕ್ಕೆ ನೆರವಾಗುವುದೇ ಸಾಂಸ್ಥಿಕ ಅಥವಾ ಸರ್ಕಾರಿ ಮೂಲಗಳ ಪರಮ ಉದ್ದೇಶ. ಈ ಸಂಸ್ಥೆಗಳು ವಿಧಿಸುವ ಬಡ್ಡಿ ದರ ಸಾಪೇಕ್ಷವಾಗಿ ಬಹಳ ಕಡಿಮೆ ಇರುವುದಷ್ಟೇ ಅಲ್ಲದೆ ರೈತರ ಆರ್ಥಿಕ ಸ್ಥಿತಿ ಮತ್ತು ಉದ್ದೇಶಗಳಿಗೆ ಅನುಗುಣವಾಗಿ ವ್ಯತ್ಯಾಸಗೊಳ್ಳುತ್ತದೆ ಕೂಡ. ಸಾಲದ ಮೊತ್ತ ಮತ್ತು ಅವಧಿಗೆ ತಕ್ಕಂತೆ ಸಾಲಗಳನ್ನು ರೈತರಿಗೆ ಅನುಕೂಲವಾಗಿ ವರ್ಗೀಕರಿಸಲಾಗಿದೆ. ಭಾರತೀಯ ರೈತರಿಗೆ ಆಧುನಿಕ ಬೇಸಾಯ ಪದ್ಧತಿಯ ವಿಧಿ ವಿಧಾನಗಳ ಬಗ್ಗೆ ತಿಳಿವಳಿಕೆ ನೀಡುವುದು. ಸುಧಾರಿತ ತಳಿಯ ಬಿತ್ತನೆ, ರಸಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಳ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡುವುದು ಅವರ ಹಣಕಾಸಿನ ಅಗತ್ಯಗಳನ್ನು ಪೂರೈಸುವಷ್ಟೇ ಮಹತ್ತ್ವದ್ದು. ಕೃಷಿ ಕ್ಷೇತ್ರದ ಪ್ರಗತಿ ಸಾಧಿಸಬೇಕಾದರೆ ಹಣಕಾಸಿನ ನೆರವು ಮತ್ತು ಬೇಸಾಯ ಸುಧಾರಣಾ ಕ್ರಮಗಳು ಜೊತೆ ಜೊತೆಯಾಗಿಯೇ ಸಾಗಬೇಕು ಎಂಬುದು ಅಭಿವೃದ್ಧಿ ರಾಷ್ಟ್ರಗಳ ಅನುಭವ. ಈ ಅವಳಿ ಉದ್ದೇಶಗಳನ್ನು ಸರ್ಕಾರದಿಂದ ನಿಯೋಜಿತಗೊಂಡು ಸಾಮಾಜಿಕ ಹಿತಕ್ಕೆ ಬದ್ಧವಾಗಿರುವಂಥ ಹಣಕಾಸು ಸಂಸ್ಥೆಗಳ ಮೂಲಕ ಸಾಧಿಸಬಹುದೇ ಹೊರತಾಗಿ ಲಾಭಸಂಪಾದನೆಯೇ ಪರಮಗುರಿಯಾಗಿರುವ ಖಾಸಗಿ ಹಣಕಾಸು ಸಂಸ್ಥೆಗಳಿಂದ ಅಲ್ಲ. ಕೃಷಿ ಹಣಕಾಸಿನ ಸಾಂಸ್ಥಿಕ ಮೂಲಗಳನ್ನು ಮುಂದೆ ವಿವರಿಸಲಾಗಿದೆ: ಸಹಕಾರಿ ಬ್ಯಾಂಕುಗಳು: ದುರ್ಬಲ ಬೇಸಾಯಗಾರರಿಗೆ ಹಣಕಾಸಿನ ನೆರವು ನೀಡಿ ಅವರ ಉತ್ಪನ್ನ ವರಮಾನ ವರ್ಧಿಸುವಂತೆ ಕ್ರಮಕೈಗೊಳ್ಳುವುದರ ಮೂಲಕ ಅವರನ್ನು ಲಾಭಕೋರ ಲೇವಾದೇವಿಗಾರರು ಮತ್ತು ತರಗು ದಲ್ಲಾಳಿಗಳ ಬಿಗಿ ಮುಷ್ಟಿಯಿಂದ ಬಿಡುಗಡೆ ಮಾಡುವ ಮಹತ್ತರ ಉದ್ದೇಶದಿಂದ ಭಾರತ 1904ರಲ್ಲಿ ಸಹಕಾರ ಚಳವಳಿಯನ್ನು ಹಮ್ಮಿಕೊಂಡಿತು. ಶೋಷಣೆರಹಿತವಾದ ವಿಕೇಂದ್ರೀಕೃತ ಸ್ವರೂಪದ, ಸ್ವಯಂಪ್ರೇರಿತ ಸದಸ್ಯತ್ವದಿಂದ ಕೂಡಿರುವ `ಸರ್ವರಿಗೆ ಸಮ ಬಾಳು; ಸರ್ವರಿಗೆ ಸಮಪಾಲು ಎಂಬ ತತ್ತ್ವಕ್ಕೆ ಬದ್ಧವಾಗಿರುವ ಸಹಕಾರವನ್ನು ಭಾರತೀಯ ಯೋಜನಾಕಾರರು ಆರ್ಥಿಕಾಭಿವೃದ್ಧಿಯ ತಂತ್ರವಾಗಿ, ಸಾಧನವಾಗಿ ಸ್ವೀಕರಿಸಿದ್ದಾರೆ. ರಚನೆ: ಭಾರತೀಯ ಸಹಕಾರಿ ಬ್ಯಾಂಕುಗಳ ರಚನೆ ಮೂರು ಅಂತಸ್ತುಗಳಿಂದ ಕೂಡಿದೆ. ಇದು ಸಂಯುಕ್ತ ಮಾದರಿಯದು. ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಕೃಷಿ ಸಾಲ ಸಂಘಗಳೂ ಜಿಲ್ಲಾ ಮಟ್ಟದಲ್ಲಿ ಕೇಂದ್ರೀಯ ಸಹಕಾರ ಬ್ಯಾಂಕುಗಳೂ ರಾಜ್ಯ ಮಟ್ಟದಲ್ಲಿ ರಾಜ್ಯ ಸಹಕಾರ ಬ್ಯಾಂಕುಗಳೂ ಸ್ಥಾಪನೆಯಾಗಿವೆ. ಇವು ಅಲ್ಪಾವಧಿ ಹಾಗೂ ಮಧ್ಯಮಾವಧಿ ಸಾಲನೀಡುವ ಸಂಸ್ಥೆಗಳು. ದೀರ್ಘಾವಧಿ ಸಾಲದ ಆವಶ್ಯಕತೆಗಳನ್ನು ಬೂ ಅಭಿವÀೃದ್ಧಿ ಬ್ಯಾಂಕುಗಳು ಎರಡು ಮಟ್ಟದಲ್ಲಿ ಪೂರೈಸುತ್ತಿವೆ. ತಾಲ್ಲೂಕು ಮಟ್ಟದಲ್ಲಿ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಾಥಮಿಕ ಕೃಷಿ ಉದ್ದರಿ ಸಹಕಾರೀ ಸಂಘಗಳು: ರೈತರ ಅಲ್ಪಾವಧಿ ಹಾಗೂ ಮಧ್ಯಮಾವಧಿ ಸಾಲದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಪ್ರಾಥಮಿಕ ಕೃಷಿ ಉದ್ದರಿ ಸಂಘಗಳು ಪ್ರಮುಖವಾದವು. ಇಡೀ ಸಹಕಾರ ವ್ಯವಸ್ಥೆ ಈ ಸಂಘಗಳ ಅಡಿಪಾಯದ ಮೇಲೆ ನಿಂತಿದೆ. ದುರ್ಬಲ ರೈತಜನಾಂಗದ ಆರ್ಥಿಕ ಸಂಕಷ್ಟಗಳನ್ನು ಪರಿಹರಿಸಿ ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು ಇವುಗಳ ಪರಮಗುರಿ. ಹತ್ತು ಅಥವಾ ಹೆಚ್ಚು ಮಂದಿ ಕೂಡಿ ಇಂಥ ಸಂಘಗಳನ್ನು ರಚಿಸಿಕೊಳ್ಳಬಹುದು. ಷೇರುಗಳ ಮಾರಾಟದ ಜೊತೆಗೆ ಕೇಂದ್ರೀಯ ಸಹಕಾರ ಬ್ಯಾಂಕಿನಿಂದ ಸಾಲ ಪಡೆಯುವುದರ ಮೂಲಕ ಬಂಡವಾಳ ಸಂಗ್ರಹಿಸಲಾಗುತ್ತದೆ. ಷೇರುದಾರರು ಸಂಘದ ಸದಸ್ಯತ್ವ ಪಡೆಯುತ್ತಾರೆ. ಇವುಗಳ ಆಡಳಿತವನ್ನು ಅಧ್ಯಕ್ಷ ಕಾರ್ಯದರ್ಶಿ ಮತ್ತು ಖಜಾಂಚಿ ಇವರಿಂದ ಕೂಡಿದ ಆಡಳಿತ ಮಂಡಳಿ ನಿರ್ವಹಿಸುತ್ತದೆ. ಆಡಳಿತ ಮಂಡಳಿಯನ್ನು ಷೇರುದಾರರು ಚುನಾಯಿಸುತ್ತಾರೆ. ದೊರೆತ ಲಾಭವನ್ನು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗಾಗಿ ವಿನಿಯೋಗಿಸಲಾಗುತ್ತದೆ; ಅದನ್ನು ಷೇರುದಾರರಲ್ಲಿ ಹಂಚವುದಿಲ್ಲ. 1978-79ರಲ್ಲಿ ದೇಶಾದ್ಯಂತ 1,02,000 ಸಹಕಾರಿ ಸಂಘಗಳಿದ್ದು ಇವು ಶೇಕಡಾ 41ರಷ್ಟು ಅಲ್ಪಾವಧಿ ಹಾಗೂ ಮಧ್ಯಮಾವಧಿ ಸಾಲದ ಆವಶ್ಯಕತೆಗಳನ್ನು ಪೂರೈಸಿದುವು. ಆದಾಗ್ಯೂ ಇವುಗಳ ಬೆಳವಣಿಗೆ ಮತ್ತು ಇವು ಒದಗಿಸುತ್ತಿರುವ ನೆರವಿನ ಗಾತ್ರ ತೃಪ್ತಿಕರವಾಗಿಲ್ಲ ಎಂಬ ಅಭಿಪ್ರಾಯವಿದೆ. ದೇಶದ ವಿವಿಧ ಭಾಗಗಳಲ್ಲಿ ಒಂದೇ ಸಮವಾಗಿ ವ್ಯಾಪಿಸಿಲ್ಲ ಎಂಬುದೊಂದು ಅಪವಾದ. ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದರೆ ಪಶ್ಚಿಮ ಬಂಗಾಳ, ಬಿಹಾರ, ಒರಿಸ್ಸ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಪ್ರಗತಿ ಎನೇನೂ ಸಾಲದು. ಅಲ್ಲದೆ ದೇಶಾದ್ಯಂತ ಬಹುತೇಕ ಸಂಘಗಳು ಹಣಕಾಸಿನ ಮುಗ್ಗಟ್ಟಿನಿಂದ ಕೂಡಿದ್ದು ರೈತರಿಗೆ ನೆರವಾಗುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಆದಾಗ್ಯೂ ಈ ಸಂಘಗಳು ಕೃಷಿ ಹಣಕಾಸಿನ ಉತ್ತಮ ಸಾಂಸ್ಥಿಕ ಮೂಲವಾಗಿ ಬೆಳೆದು ಬಂದಿರುವುದು ಸ್ತುತ್ಯರ್ಹ. ಕೇಂದ್ರೀಯ ಸಹಕಾರಿ ಬ್ಯಾಂಕುಗಳು: ಪ್ರಾಥಮಿಕ ಸಹಕಾರ ಸಂಘಗಳು ಒಂದುಗೂಡಿ ಜಿಲ್ಲಾ ಮಟ್ಟದಲ್ಲಿ ಕೇಂದ್ರೀಯ ಸಹಕಾರಿ ಬ್ಯಾಂಕುಗಳ ಸ್ಥಾಪನೆಯಾಗಿದೆ. ಪ್ರತಿಯೊಂದು ಜಿಲ್ಲೆಗೂ ಒಂದೊಂದು ಬ್ಯಾಂಕ್ ಇರುತ್ತದೆ. ಇದನ್ನು ಜಲ್ಲಾ ಸಹಕಾರಿ ಬ್ಯಾಂಕ್ ಎಂದೂ ಕರೆಯುತ್ತಾರೆ. ಆಯಾ ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಸಹಕಾರ ಸಂಘವೂ ಷೇರುಗಳನ್ನು ಪಡೆಯುವುದರ ಮೂಲಕ ಕೇಂದ್ರೀಯ ಸಹಕಾರ ಬ್ಯಾಂಕಿನ ಸದಸ್ಯತ್ವ ಪಡೆಯುತ್ತದೆ. ಖಾಸಗಿ ವ್ಯಕ್ತಿಗಳೂ ಷೇರುದಾರರಾಗಬಹುದು. ಸದಸ್ಯ ಸಹಕಾರಿ ಸಂಘಗಳ ಕಾರ್ಯಾಚರಣೆಯ ಮೇಲ್ವಿಚಾರಣೆ ಅವುಗಳಿಗೆ ಹಣಕಾಸಿನ ನೆರವು ನೀಡುವುದು ಕೇಂದ್ರೀಯ ಸಹಕಾರ ಬ್ಯಾಂಕಿನ ಮುಖ್ಯ ಕರ್ತವ್ಯ. ಜೊತೆಗೆ ಇದು ಸಾಮಾನ್ಯ ಬ್ಯಾಂಕ್ ವ್ಯವಹಾರಗಳನ್ನೂ ನಡೆಸುತ್ತದೆ. ಕೆಲವು ಬ್ಯಾಂಕುಗಳು ಸಾರ್ವಜನಿಕರಿಗೆ ಆಸ್ತಿಪಾಸ್ತಿಗಳ ಆಧಾರದ ಮೇಲೆ ಸಾಲ ನೀಡುವುದುಂಟು. ಷೇರುಗಳ ಮಾರಾಟ ಸಾರ್ವಜನಿಕರಿಂದ ಠೇವಣಿ ಸ್ವೀಕಾರ ಮತ್ತು ರಾಜ್ಯ ಸಹಕಾರಿ ಬ್ಯಾಂಕಿನಿಂದ ಸಾಲ ಪಡೆಯವುದರ ಮೂಲಕ ಕೇಂದ್ರೀಯ ಸಹಕಾರಿ ಬ್ಯಾಂಕುಗಳು ಬಂಡವಾಳ ಸಂಗ್ರಹಿಸುತ್ತವೆ. ಈ ಬ್ಯಾಂಕುಗಳ ಬಗ್ಗೆ ಇರುವ ಮುಖ್ಯ ಆಪಾದನೆ ಎಂದರೆ ಬಹಳಷ್ಟು ಬ್ಯಾಂಕನ್ನೇ ಅವಲಂಬಿಸಿರುತ್ತವೆ ಎಂಬುದು. ಬಂಡವಾಳ ಕೊರತೆಯನ್ನು ಅನುಭವಿಸುತ್ತಿರುವ ಕೇಂದ್ರೀಯ ಸಹಕಾರಿ ಬ್ಯಾಂಕ್‍ಗಳಿಗೆ ಹಣಕಾಸಿನ ನೆರವು ನೀಡುವುದಕ್ಕಾಗಿ ರಿಸರ್ವ್ ಬ್ಯಾಂಕ್ ರಾಷ್ಟ್ರೀಯ ಕೃಷಿ ಸಾಲದ ನಿಧಿಯಿಂದ ರಾಜ್ಯ ಸರ್ಕಾರಗಳಿಗೆ ಸುಲಭ ಬಡ್ಡಿಯ ದರದಲ್ಲಿ ಸಾಲ ಒದಗಿಸುವ ಯೋಜನೆಯನ್ನು ಜಾರಿಗೆ ತಂದಿತು. 1978-79ರಲ್ಲಿ ದೇಶಾದ್ಯಂತ 338 ಕೇಂದ್ರೀಯ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು ಪ್ರಾಥಮಿಕ ಸಹಕಾರ ಸಂಘಗಳಿಗೆ ರೂ 2407 ಕೋಟಿ ನೆರವು ನೀಡಿದುವು. ಈ ಬ್ಯಾಂಕುಗಳು ಗಳಿಸಿದ ಲಾಭದಲ್ಲಿ ಒಂದು ಭಾಗವನ್ನು ಷೇರುದಾರರಿಗೆ ಹಂಚಲಾಗುತ್ತದೆ. ಉಳಿದದ್ದರಲ್ಲಿ ಸ್ವಲ್ಪ ಭಾಗವನ್ನು ಜಿಲ್ಲೆಯ ಕ್ಷೇಮಾಭ್ಯುದಯ ಕಾರ್ಯಗಳಿಗಾಗಿ ವೆಚ್ಚಮಾಡಲಾಗುತ್ತದೆ. ರಾಜ್ಯ ಸಹಕಾರಿ ಬ್ಯಾಂಕುಗಳು: ಪ್ರತಿ ರಾಜ್ಯದ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯ ಶೃಂಗ ಸಂಸ್ಥೆಯಾಗಿರುವ ಬ್ಯಾಂಕನ್ನು ಅಪೆಕ್ಸ್ ಬ್ಯಾಂಕ್ ಎಂದು ಕರೆಯುತ್ತಾರೆ. ಕೇದ್ರೀಯ ಸಹಕಾರ ಬ್ಯಾಂಕುಗಳಿಗೆ ಹಣಕಾಸಿನ ನೆರವು ನೀಡುವುದು ಮತ್ತು ಅವುಗಳ ಕಾರ್ಯಕಲಾಪಗಳ ಮೇಲ್ವಿಚಾರಣೆ ಈ ಬ್ಯಾಂಕುಗಳ ಮುಖ್ಯ ಕರ್ತವ್ಯ. ಈ ಮೂಲಕ ರಾಜ್ಯ ಸಹಕಾರಿ ಬ್ಯಾಂಕುಗಳು ಸಹಕಾರ ಸಂಘಗಳಿಗೂ ದೇಶದ ಪರಮೋನ್ನತ ಬ್ಯಾಂಕಿಂಗ್ ಸಂಸ್ಥೆಯಾದ ರಿಸರ್ವ್‍ಬ್ಯಾಂಕಿಗೂ ತನ್ಮೂಲಕ ದೇಶದ ಹಣದ ಪೇಟೆಗೂ ಸಂಪರ್ಕ ಕಲ್ಪಿಸುವ ಸಂಸ್ಥೆಯಾಗಿ ಬೆಳೆಯಿತು. ಷೇರುಗಳ ಮಾರಾಟ, ಸಾರ್ವಜನಿಕರಿಂದ ಠೇವಣಿ ಸ್ವೀಕಾರ ಮತ್ತು ರಿಸರ್ವ್ ಬ್ಯಾಂಕಿನಿಂದ ಸಾಲಪಡೆಯುವುದರ ಮೂಲಕ ಇವು ಬಂಡವಾಳ ಸಂಗ್ರಹಿಸುತ್ತವೆ. ಕೇಂದ್ರೀಯ ಸರ್ಕಾರಿ ಬ್ಯಾಂಕುಗಳು ಷೇರುಗಳನ್ನು ಕೊಳ್ಳುವುದರ ಮೂಲಕ ರಾಜ್ಯ ಸಹಕಾರಿ ಬ್ಯಾಂಕಿನ ಸದಸ್ಯತ್ವ ಪಡೆಯುತ್ತವೆ. ರಾಜ್ಯ ಸಹಕಾರಿ ಬ್ಯಾಂಕುಗಳು ಸಾಮಾನ್ಯವಾಗಿ ಪ್ರಾಥಮಿಕ ಸಹಕಾರ ಸಂಘಗಳೊಡನೆ ನೇರವಾಗಿ ವ್ಯವಹರಿಸುವುದಿಲ್ಲವಾದರೂ ಕೇಂದ್ರೀಯ ಸಹಕಾರಿ ಬ್ಯಾಂಕುಗಳಿಲ್ಲದ ಕಡೆಗಳಲ್ಲಿ ನೇರವಾಗಿ ನೆರವು ನೀಡುವುದುಂಟು. 1978-79ರಲ್ಲಿ ಈ ಸಹಾಕಾರಿ ಬ್ಯಾಂಕುಗಳ ಸಂಖ್ಯೆ 79 ಇದ್ದು ರೂ 1206 ಕೋಟಿ ಠೇವಣಿ ಇದ್ದು ರೂ 2236 ಕೋಟಿ ನೀಡಿದ ಸಾಲದ ಮೊತ್ತವಾಗಿತ್ತು. ಭೂ ಅಭಿವೃದ್ಧಿ ಬ್ಯಾಂಕುಗಳು: ಈ ಬ್ಯಾಂಕುಗಳನ್ನು ಜಮೀನು ಅಡಮಾನ ಬ್ಯಾಂಕುಗಳೆಂದೂ ಕರೆಯುತ್ತಾರೆ. ರೈತರ ದೀರ್ಘಾವಧಿ ಸಾಲದ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಸ್ಥಾಪಿತವಾದ ಸಂಸ್ಥೆಗಳಿವು. ಜಮೀನಿನ ಆಧಾರದ ಮೇಲೆ 15ರಿಂದ 20 ವರ್ಷಗಳ ತನಕ ಜಮೀನಿನ ಅಭಿವೃದ್ಧಿಗಾಗಿ, ಬಾವಿಗಳ ನಿರ್ಮಾಣಕ್ಕಾಗಿ, ಟ್ರ್ಯಾಕ್ಟರ್ ಮುಂತಾದ ಯಂತ್ರೋಪಕರಣ ಕೊಳ್ಳುವುದಕ್ಕಾಗಿ ದನದ ಕೊಟ್ಟಿಗೆ ನಿರ್ಮಾಣಕ್ಕಾಗಿ ಮತ್ತು ಹಳೆಯ ಸಾಲ ತೀರಿಸುವುದಕ್ಕಾಗಿ ಸಾಲ ಪಡೆಯಬಹುದು. ಭೂ ಅಭಿವೃದ್ಧಿ ಬ್ಯಾಂಕುಗಳು ಸಂಯುಕ್ತ ಮಾದರಿಯ ಸಹಕಾರ ಸಂಸ್ಥೆಗಳೇ ಆಗಿವೆ. ತಾಲ್ಲೂಕು ಮಟ್ಟದಲ್ಲಿ ಕೇಂದ್ರೀಯ ಭೂ ಅಭಿವೃದ್ಧಿ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತವೆ. ಕೆಲವು ರಾಜ್ಯಗಳಲ್ಲಿ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳಿರುವುದಿಲ್ಲ. ಅಂಥ ಪ್ರದೇಶಗಳಲ್ಲಿ ಕೇಂದ್ರೀಯ ಭೂ ಅಭಿವೃದ್ಧಿಬ್ಯಾಂಕಿನ ಶಾಖೆಗಳಿರುತ್ತವೆ. ಮಧ್ಯ ಪ್ರದೇಶ ರಾಜ್ಯದಲ್ಲಿ ರಾಜ್ಯ ಸಹಕಾರಿ ಬ್ಯಾಂಕೇ ಕೇಂದ್ರೀಯ ಭೂ ಅಭಿವೃದ್ಧಿ ಬ್ಯಾಂಕಿನ ಕಾರ್ಯ ನಿರ್ವಹಿಸುತ್ತದೆ. ಅದಕ್ಕಾಗಿ ಪ್ರತ್ಯೇಕ ವಿಭಾಗವನ್ನು ಹೊಂದಿದೆ. ಆಂಧ್ರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಕೇಂದ್ರೀಯ ಭೂ ಅಭಿವೃದ್ಧಿ ಬ್ಯಾಂಕುಗಳಿದ್ದು ಅವನ್ನು ಸಂಯೋಜಿಸಿ ಇಡೀ ರಾಜ್ಯಕ್ಕೆ ಒಂದೇ ಬ್ಯಾಂಕಿರುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಇದೇ ರೀತಿ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನ ರಚನೆಯಲ್ಲಿಯೂ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಉಂಟು. ಈ ಬ್ಯಾಂಕುಗಳು ಷೇರುಗಳ ಮಾರಾಟ, ಠೇವಣಿ ಮತ್ತು ಸಾಲಪತ್ರಗಳ ಮಾರಾಟ ಈ ಮೂಲಕ ಬಂಡವಾಳ ಸಂಗ್ರಹಿಸುತ್ತವೆ. ಸಾಲಪತ್ರಗಳೇ ಪ್ರಧಾನ ಬಂಡವಾಳ ಮೂಲಗಳಾಗಿವೆ. ದೀರ್ಘಾವಧಿಯ ಸಾಲದ ರೂಪದಲ್ಲಿರುವ ಸಾಲಪತ್ರಗಳನ್ನು ಸಾಮಾನ್ಯವಾಗಿ 20 ವರ್ಷಗಳ ಅವಧಿಗೆ ನೀಡಲಾಗುತ್ತದೆ. ಸಾಲಪತ್ರಗಳನ್ನು ವಿಮಾ ಕಂಪನಿಗಳು, ವಾಣಿಜ್ಯ ಬಾಂಕುಗಳ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಅದರ ಸಹಾಯಕ ಸಂಸ್ಥೆಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕೊಳ್ಳುತ್ತವೆ. ಸಾಲಪತ್ರಗಳಿಗೆ ಸಂಬಂಧಿತ ರಾಜ್ಯ ಸರ್ಕಾರಗಳು ಗ್ಯಾರಂಟಿ ನೀಡುತ್ತವೆ. ಇವುಗಳಲ್ಲದೆ, 7 ವರ್ಷಗಳ ಅವಧಿಯ ಸಾಧಾರಣ ಸಾಲಪತ್ರಗಳನ್ನೂ ಹೊರಡಿಸುವುದುಂಟು. ಇವನ್ನು ರಿಸರ್ವ್ ಬ್ಯಾಂಕ್, ಗ್ರಾಮ ಪಂಚಾಯಿತಿಗಳು ಮತ್ತು ರೈತರು ಕೊಳ್ಳುತ್ತಾರೆ. ಇತ್ತೀಚಿಗೆ ಈ ಬ್ಯಾಂಕುಗಳು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಮರುಹಣಕಾಸಿನ ಸೌಲಭ್ಯ ಪಡೆಯುತ್ತಿವೆ. ಪ್ರಾಥಮಿಕ ಸಹಕಾರ ಸಂಘಗಳಂತೆಯೇ ಭೂ ಅಭಿವೃದ್ಧಿ ಬ್ಯಾಂಕುಗಳು ಸಹ ಹೆಚ್ಚಿನ ಪ್ರಗತಿಯನ್ನೇನೂ ಸಾಧಿಸಿಲ್ಲ. ಶೇಕಡಾ ಸುಮಾರು 65ರಷ್ಟು ಬ್ಯಾಂಕುಗಳು ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ. ಇವು ಸಾಲ ನೀಡುವಾಗ ಜಮೀನಿನ ಆಧಾರವನ್ನು ಒತ್ತಾಯಿಸುವದರಿಂದ ಬಲುಮಟ್ಟಿಗೆ ಶ್ರೀಮಂತ ರೈತರು ಮಾತ್ರ ಇವುಗಳಿಂದ ಪ್ರಯೋಜನ ಪಡೆಯಲು ಸಾಧ್ಯವಾಗಿದೆ. ಸಕಾಲದಲ್ಲಿ ಹಣಕಾಸು ದೊರೆಯದಿರುವ ನಿದರ್ಶನಗಳೂ ಬಹಳ ಇವೆ. ಮೇಲಾಗಿ ಇವು ಪೂರೈಸುತ್ತಿರುವ ಸಾಲ ತೀರ ಅಲ್ಪ. 1950-51 ಮತ್ತು 1974-75ರ ನಡುವೆ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳ ಸಂಖ್ಯೆ 286ರಿಂದ 356ಕ್ಕೆ ಏರಿದ್ದು ಕೇಂದ್ರೀಯ ಭೂ ಅಭಿವೃದ್ಧಿ ಬ್ಯಾಂಕುಗಳ ಸಂಖ್ಯೆ 5ರಿಂದ 19ಕ್ಕೆ ಏರಿದೆ. 1980-81ರಲ್ಲಿ ಈ ಬ್ಯಾಂಕುಗಳು ನೀಡಿದ ಸಾಲಗಳ ಮೊತ್ತ ರೂ 439 ಕೋಟಿ. ಸರ್ಕಾರ ಮತ್ತು ಕೃಷಿ ಹಣಕಾಸು: ಸರ್ಕಾರವೂ ರೈತರಿಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲಗಳನ್ನು ನೀಡಿದೆ. ಇವುಗಳಿಗೆ ತಕಾವಿ ಸಾಲಗಳೆಂದು ಹೆಸರು. ಪ್ರವಾಹ, ಕ್ಷಾಮ ಇತ್ಯಾದಿ ತುರ್ತು ಸನ್ನಿವೇಶಗಳಲ್ಲಿ ಮಾತ್ರ ನೀಡಲಾಗುವ ಈ ಸಾಲಗಳ ಮೇಲೆ ವಿಧಿಸುವ ಬಡ್ಡಿ ಶೇಕಡಾ 6. ಮರುಪಾವತಿ ವಿಧಾನ ಬಹಳ ಅನುಕೂಲವಾಗಿದ್ದು ಭೂ ಕಂದಾಯದ ಜೊತೆಯಲ್ಲಿ ಪಾವತಿ ಮಾಡಬಹುದಾಗಿದೆ. ಕಡಿಮೆ ಬಡ್ಡಿ ದರದಿಂದಾಗಿ ಈ ಸಾಲಗಳು ಜನಪ್ರಿಯವಾಗಿದ್ದರೂ ರೈತರಿಗೆ ಹೆಚ್ಚೇನೂ ಪ್ರಯೋಜನವಾಗಿಲ್ಲ. 1978ರಲ್ಲಿ ರಾಜ್ಯ ಸರ್ಕಾರಗಳು ಕೇವಲ ರೂ 109 ಕೋಟಿ ತಕಾವಿ ಸಾಲಗಳನ್ನು ನೀಡಿದ್ದರೆ ಇತರ ಹಣಕಾಸು ಸಂಸ್ಥೆಗಳು ಒಟ್ಟು ರೂ 2756 ಕೋಟಿ ಸಾಲ ನೀಡಿದ್ದುವು. ಕೃಷಿ ಮರುಹಣಕಾಸು ಮತ್ತು ಅಭಿವೃದ್ಧಿ ನಿಗಮ: ದೀರ್ಘಾವಧಿ ಸಾಲದ ನೀಡಿಕೆಯನ್ನು ಸುಧಾರಿಸುವ ಉದ್ದೇಶದಿಂದ 1963 ಜುಲೈಯಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಭೂ ಅಭಿವೃದ್ಧಿ ಬ್ಯಾಂಕುಗಳು ನಿರೀಕ್ಷಿತ ಪ್ರಗತಿ ಸಾಧಿಸದಿದ್ದುದೇ ಈ ಸಂಸ್ಥೆಯ ಸ್ಥಾಪನೆಗೆ ಮುಖ್ಯಕಾರಣ. ಅವು ಹಳೆಯ ಸಾಲಗಳ ಮರುಪಾವತಿ ಮತ್ತು ಜಮೀನು ಕೊಳ್ಳುವ ವ್ಯವಹಾರಗಳತ್ತ ಹೆಚ್ಚಿನ ಗಮನ ಹರಿಸಿ ಯಾಂತ್ರೀಕೃತ ಬೇಸಾಯ, ಕೊಳವೆ ಬಾವಿಗಳ ನಿರ್ಮಾಣ, ತೋಟಗಾರಿಕೆ, ಪಶುಸಂಗೋಪನೆ, ಕೋಳಿಸಾಕಣೆ ಮುಂತಾದ ಕೃಷಿ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದ್ದ ಅಂಶವನ್ನು ಗಮನಿಸಿದ ಸರ್ಕಾರ ಮುಖ್ಯವಾಗಿ ಈ ಕೊರತೆಯನ್ನು ತುಂಬಿಕೊಡುವುದಕ್ಕಾಗಿಯೇ ಮರುಹಣಕಾಸು ಮತ್ತು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿತು. ಈ ನಿಗಮವು 5 ಕೋಟಿ ರೂಪಾಯಿಯ ಬಂಡವಾಳದೊಡನೆ ಪ್ರಾರಂಭವಾಯಿತು. ಮುಂದೆ ಭಾರತ ಸರ್ಕಾರ ಈ ನಿಗಮಕ್ಕೆ 5 ಕೋಟಿ ರೂಪಾಯಿಗಳ ಬಡ್ಡಿರಹಿತ ಸಾಲ ನೀಡಿತು. ಠೇವಣಿ ಸ್ವೀಕಾರ ಮತ್ತು ಸಾಲಪತ್ರಗಳ ಮಾರಾಟದ ಮೂಲಕ ನಿಗಮ ತನ್ನ ಬಂಡವಾಳವನ್ನು ರೂ. 100 ಕೋಟಿಗೆ ಹೆಚ್ಚಿಸಿಕೊಳ್ಳುವ ಅಧಿಕಾರ ಪಡೆದಿತ್ತು. ಭೂ ಅಭಿವೃದ್ಧಿ ಬ್ಯಾಂಕುಗಳಾಗಲಿ ಸಹಕಾರ ಸಂಘಗಳಾಗಲಿ ನಿಗಮ ನೆರವು ನೀಡುತ್ತಿತ್ತು. ಉದಾಹರಣೆಗೆ ಸಣ್ಣನೀರಾವರಿ ಯೋಜನೆ, ಬಂಜರು ಭೂಮಿಯ ಸಾಗುವಳಿ, ಹಣ್ಣಿನ ತೋಟ ಅಭಿವೃದ್ಧಿ, ಯಾಂತ್ರೀಕೃತ ಬೇಸಾಯ ಇತ್ಯಾದಿ ಕಾರ್ಯಗಳಿಗೆ ಮರುಹಣಕಾಸು ನಿಗಮದಿಂದ ನೆರವು ದೊರಕುತ್ತಿತ್ತು. ವಾಸ್ತವವಾಗಿ ನಿಗಮ ಈ ಕಾರ್ಯಗಳಿಗಾಗಿ ಭೂ ಅಭಿವೃದ್ಧಿ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳ ಮೂಲಕ ನೇರವು ನೀಡುತ್ತಿತ್ತು. ಬಡ್ಡಿಯದರ ಬಲು ಕಡಿಮೆ. ಸಾಲ ಮರು ಪಾವತಿಯ ಅವಧಿ 25ರಿಂದ 40 ವರ್ಷಗಳ ತನಕ. ಕೇಂದ್ರೀಯ ಭೂ ಅಭಿವೃದ್ಧಿ ಬ್ಯಾಂಕುಗಳು ಮತ್ತು ರಾಜ್ಯ ಸಹಕಾರಿ ಬ್ಯಾಂಕುಗಳು ಮಾತ್ರವಲ್ಲದೆ ಅನುಸೂಚಿತ ಬ್ಯಾಂಕುಗಳು ಸಹ ಮರುಹಣಕಾಸು ಪ್ರಯೋಜನ ಪಡೆಯುತ್ತಿವೆ. 1980-81ರಲ್ಲಿ ನಿಗಮ ಒಟ್ಟು 4,494 ಅಭಿವೃದ್ಧಿ ಕಾರ್ಯಗಳನ್ನು ಮಂಜೂರುಮಾಡಿತು. ಆ ತನಕ ಒಟ್ಟು 16,574 ಕಾರ್ಯಕ್ರಮಗಳಿಗೆ ಮಂಜೂರಾತಿ ನೀಡಿರುವುದೆಂದು ತಿಳಿದುಬಂದಿದೆ. ಮರು ಹಣಕಾಸು ನಿಗಮದ ಸಾಲದ ಸೌಲಭ್ಯಗಳು ಇತರ ಸಂಘ ಸಂಸ್ಥೆಗಳ ನೀಡುವ ಸೌಲಭ್ಯಗಳಿಗೆ ಪೂರಕ. ಇದು ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯಲ್ಲಿ ಹೆಚ್ಚಿನ ಆಸಕ್ತಿವಹಿಸಿ ಶೇಕಡಾ 90ರಷ್ಟು ಮರುಹಣಕಾಸಿನ ಸೌಲಭ್ಯ ನೀಡುತ್ತಿತ್ತು. ಸಣ್ಣ ಮತ್ತು ಅತಿಸಣ್ಣ ರೈತರು ಹಾಗೂ ಕೃಷಿಕಾರ್ಮಿಕರ ಅಭಿವೃದ್ಧಿ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಮರುಹಣಕಾಸು ಸೌಲಭ್ಯ ನೀಡುವುದರ ಮೂಲಕ ಅವರ ಅಭ್ಯುದಯ ಕಾರ್ಯದಲ್ಲಿ ಭಾಗಿಯಾಗುತ್ತಿತ್ತು. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು 20 ಅಂಶಗಳ ಕಾರ್ಯಕ್ರಮದ ಮುಖ್ಯ ಅಂಶಗಳ ಪೈಕಿ ಒಂದಾದ ಗ್ರಾಮೀಣ ಋಣ ಪರಿಹಾರ ಹಾಗೂ ರೈತರು ಮತ್ತು ಕುಶಲ ಕಾರ್ಮಿಕರಿಗೆ ಸಾಂಸ್ಥಿಕ ಹಣಕಾಸಿನ ನೆರವು ನೀಡುವುದಕ್ಕೆ ಸಂಬಂಧಿಸಿದಂತೆ 1972 ಫೆಬ್ರುವರಿಯಲ್ಲಿ ವರದಿ ಸಲ್ಲಿಸಿದ ಆರ್. ಜಿ. ಸರಯ್ಯಾ ಅವರ ನೇತೃತ್ವದ ಬ್ಯಾಂಕಿಂಗ್ ಆಯೋಗ ಗ್ರಾಮೀಣ ಬ್ಯಾಂಕುಗಳ ರಚನೆಗೆ ಶಿಫಾರ್ಸು ಮಾಡಿತು. ಆ ಪ್ರಕಾರ 1975 ಸೆಪ್ಟೆಂಬರ್ 26 ರಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸುಗ್ರೀವಾಜ್ಞೆಯನ್ನು ಹೊರಡಿಸಲಾಯಿತು. 1975 ಅಕ್ಟೋಬರ್ 2 ರಂದು 5 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಅಸ್ತಿತ್ವಕ್ಕೆ ಬಂದುವು. ಕ್ರಮೇಣ ಇವುಗಳ ಸಂಖ್ಯೆ ಬೆಳೆದಿದೆ. ಅನುಕ್ರಮವಾಗಿ ಸಿಂಡಿಕೇಟ್ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯ ಮುಂತಾದ ಹಲವು ಬ್ಯಾಂಕುಗಳು ತಾವು ಪ್ರಾಯೋಜಿಸಿದ ಬ್ಯಾಂಕುಗಳ ಜವಾಬ್ದಾರಿ ಹೊತ್ತಿವೆ. ಪ್ರತಿಯೊಂದು ಬ್ಯಾಂಕಿನ ಅಧಿಕೃತ ಬಂಡವಾಳ 1 ಕೋಟಿ ರೂಪಾಯಿಗಳು, ಪಾವತಿಯಾದ ಬಂಡವಾಳ 25 ಲಕ್ಷ ರೂಪಾಯಿಗಳು. ಪಾವತಿಯಾದ ಬಂಡವಾಳದಲ್ಲಿ ಶೇಕಡಾ 50ರಷ್ಟನ್ನು ಕೇಂದ್ರ ಸರ್ಕಾರ, ಶೇಕಡಾ 15 ರಷ್ಟನ್ನು ಸಂಬಂಧಪಟ್ಟ ರಾಜ್ಯ ಸರ್ಕಾರ, ಉಳಿದ ಶೇಕಡಾ 35 ಭಾಗವನ್ನು ಪ್ರಾಯೋಜಿಸಿದ ವಾಣಿಜ್ಯ ಬ್ಯಾಂಕು ನೀಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ವ್ಯಾಪಾರ, ವಾಣಿಜ್ಯ, ಕೈಗಾರಿಕೆ ಮತ್ತಿತರ ಉತ್ಪಾದಕ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು. ಕುಶಲ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರೋದ್ಯಮಿಗಳು ಮೊದಲಾದವರಿಗೆ ಹಣಕಾಸಿನ ಮತ್ತು ಇತರ ಸೌಕರ್ಯಗಳನ್ನು ಒದಗಿಸುವುದು ಗ್ರಾಮೀಣ ಬ್ಯಾಂಕುಗಳ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಬ್ಯಾಂಕುಗಳು ಮೂಲತಃ ವಾಣಿಜ್ಯ ಬಾಂಕುಗಳೇ ಆದರೂ ಕೆಲವು ವಿಚಾರಗಳಲ್ಲಿ ಇವು ಅವುಗಳಿಗಿಂತ ಭಿನ್ನವಾಗಿವೆ: 1. ಗ್ರಾಮೀಣ ಬ್ಯಾಂಕುಗಳ ಕಾರ್ಯಕ್ಷೇತ್ರ ಒಂದು ರಾಜ್ಯದ ಒಂದು ಅಥವಾ ಹೆಚ್ಚಿನ ಜಿಲ್ಲೆಗಳನ್ನು ಒಳಗೊಂಡ ಗೊತ್ತಾದ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. 2. ಸಣ್ಣ ಮತ್ತು ಅತಿಸಣ್ಣ ರೈತರು. ಭೂಹೀನ ಕೃಷಿ ಕಾರ್ಮಿಕರು, ಕುಶಲ ಕೆಲಸಗಾರರು ಮತ್ತು ಇತರ ಸಣ್ಣ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಮಾತ್ರ ಹಣಕಾಸಿನ ನೆರವು ನೀಡುತ್ತವೆ. 3. ಈ ಬ್ಯಾಂಕುಗಳು ನೀಡುವ ಸಾಲಗಳ ಮೇಲೆ ವಿಧಿಸುವ ಬಡ್ಡಿಯ ದರ ಸಹಕಾರ ಸಂಘಗಳ ಬಡ್ಡಿಯ ದರಕ್ಕಿಂತ ಹೆಚ್ಚಿರಕೂಡದು. ಜವಾಬ್ದಾರಿ ಹೊತ್ತ ವಾಣಿಜ್ಯ ಬ್ಯಾಂಕ್ ಮತ್ತು ಭಾರತೀಯ ರಿಸರ್ವ್‍ಬ್ಯಾಂಕ್‍ಗಳು ಗ್ರಾಮೀಣ ಬ್ಯಾಂಕುಗಳಿಗೆ ಅನೇಕ ನೆರವು ಮತ್ತು ರಿಯಾಯಿತಿಗಳನ್ನು ನೀಡುತ್ತವೆ. ಗ್ರಾಮೀಣ ಪ್ರದೇಶಗಳಿಗೆ ಸಾಂಸ್ಥಿಕ ಹಣಕಾಸಿನ ನೆರವು ನೀಡುವ ಪರ್ಯಾಯ ಸಂಸ್ಥೆಗಳಾಗಿ ಗ್ರಾಮೀಣ ಬ್ಯಾಂಕುಗಳು ನಿರ್ವಹಿಸುತ್ತಿರುವ ಪಾತ್ರ ಮಹತ್ವ್ತಪೂರ್ಣವಾದದ್ದು. ಸಹಕಾರ ಉದ್ದರಿ ಸಂಘಗಳ ಅಥವಾ ವಾಣಿಜ್ಯ ಬ್ಯಾಂಕುಗಳ ಸ್ಥಾನಪಲ್ಲಟ ಮಾಡುವುದು ಈ ಬ್ಯಾಂಕುಗಳ ಉದ್ದೇಶವಲ್ಲ. ಬದಲಾಗಿ ಅವುಗಳಿಗೆ ಒತ್ತಾಸೆಯಾಗಿ ನಿಂತು ಕಾರ್ಯನಿರ್ವಹಿಸುವುದೇ ಇವುಗಳ ಉದ್ದೇಶ. 1981 ಜೂನ್ ತಿಂಗಳ ವೇಳೆಗೆ ದೇಶದ 18 ರಾಜ್ಯಗಳಲ್ಲಿ ಒಟ್ಟು 102 ಗ್ರಾಮೀಣ ಬ್ಯಾಂಕುಗಳು ಅಸ್ತಿತ್ವದಲ್ಲಿದ್ದು ಸಮಾಜದ ದುರ್ಬಲ ವರ್ಗಗಳಿಗೆ ಒಟ್ಟು ರೂ. 261ಕೋಟಿ ಅಲ್ಪಾವಧಿ ಸಾಲ ನೆರವು ನೀಡಿದ್ದವು. ಈ ನೆರವಿನ ಗಾತ್ರ ಒಟ್ಟು ಉದ್ದರಿಯ (ರೂ 302 ಕೋಟಿ) ಶೇಕಡಾ 90ರಷ್ಟಾಗಿತ್ತು. ಈ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮರುಹಣಕಾಸಿನ ಸೌಲಭ್ಯಗಳೇ ಅಲ್ಲದೆ ಅನೇಕ ರೀತಿಯ ನೆರವು ಮತ್ತು ರಿಯಾಯಿತಿಗಳನ್ನೂ ನೀಡುತ್ತಿದೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ಸಾಂಸ್ಥಿಕ ಹಣಕಾಸು ವ್ಯವಸ್ಥೆಯ ಪುನರ್ ವಿಮರ್ಶಾ ಸಮಿತಿ: 1979 ಮಾರ್ಚ್ 1ರಂದು ಭಾರತೀಯ ರಿಸರ್ವ್ ಬ್ಯಾಂಕ್ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಇರುವ ಸಾಂಸ್ಥಿಕ ಹಣಕಾಸು ವ್ಯವಸ್ಥೆಯ ಕಾರ್ಯಾಚರಣೆಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಈ ಸಮಿತಿಯನ್ನು ನೇಮಿಸಿತು. ಸಮಿತಿ 1981 ಮಾರ್ಚ್ ತಿಂಗಳಿನಲ್ಲಿ ತನ್ನ ಅಂತಿಮ ವರದಿಯನ್ನು ರಿಸರ್ವ್ ಬ್ಯಾಂಕಿಗೆ ಸಲ್ಲಿಸಿತು. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಹಣಕಾಸು ಸಂಸ್ಥೆಗಳ ಲೋಪದೋಷಗಳನ್ನು ಪರಿಶೀಲಿಸಿದ ಸಮಿತಿ ಅನೇಕ ಶಿಫಾರ್ಸುಗಳನ್ನು ರಿಸರ್ವ್ ಬ್ಯಾಂಕಿನ ಮುಂದಿಟ್ಟಿತು. ಪ್ರಮುಖವಾದವು ಇವು: ಸಹಕಾರ ಸಾಲದ ವ್ಯವಸ್ಥೆಯನ್ನು ಕುರಿತು: ಸಮಿತಿ ಅಭಿಪ್ರಾಯ ಪಟ್ಟಿರುವಂತೆ ಗ್ರಾಮೀಣ ಅಭಿವೃದ್ಧಿಗಾಗಿ ಸಂಘಟಿತ ವಿಧಾನವನ್ನು ಅನುಷ್ಠಾನಕ್ಕೆ ತರಬೇಕಾದರೆ ಗ್ರಾಮ ಮಟ್ಟದಲ್ಲಿ ದಕ್ಷರೀತಿಯ ಸಾಲ ಸರಬರಾಜು ವ್ಯವಸ್ಥೆ ಅತ್ಯಾವಶ್ಯಕ. ಈ ದೃಷ್ಟಿಯಿಂದ ಹಾಲಿ ಇರುವ ಮೂರು ಅಂತಸ್ತಿನ ಸಹಕಾರ ಸಾಲದ ವ್ಯವಸ್ಥೆಯನ್ನು, ದೊಡ್ಡ ರಾಜ್ಯಗಳಲ್ಲಿ ಹಾಗೆಯೇ ಉಳಿಸಿಕೊಂಡರೂ ಕೇಂದ್ರಾಡಳಿತ ಪ್ರದೇಶಗಳಂಥ ಚಿಕ್ಕ ರಾಜ್ಯಗಳಲ್ಲಿ ಬದಲಾಯಿಸಿ ಎರಡು ಅಂತಸ್ತಿನ ಸಾಲದ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಈ ಪ್ರಕಾರ, ಚಿಕ್ಕ ರಾಜ್ಯಗಳಲ್ಲಿ ಗ್ರಾಮಮಟ್ಟದ ಸಹಕಾರ ಸಂಘಗಳು, ಜಿಲ್ಲಾ ಮಟ್ಟದ ಕೇಂದ್ರೀಯ ಸಹಕಾರ ಬ್ಯಾಂಕ್‍ಗಳು ಮತ್ತು ರಾಜ್ಯಮಟ್ಟದ ರಾಜ್ಯ ಸಹಕಾರಿ ಬ್ಯಾಂಕ್ ಇಲ್ಲವಾಗಿರುವುದರಿಂದ ಸಹಕಾರ ಸಂಘಗಳು ರಾಜ್ಯ ಸಹಕಾರಿ ಬ್ಯಾಂಕುಗಳನ್ನುಳ್ಳ ಎರಡೇ ಅಂತಸ್ತಿನ ಸಾಲದ ವ್ಯವಸ್ಥೆ ಸೂಕ್ತವಾಗುತ್ತದೆ. ಸಾಧ್ಯವಿರುವಲ್ಲೆಲ್ಲ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲದ ವ್ಯವಸ್ಥೆಗಳನ್ನು ಸಂಘಟಿಸಬೇಕೆಂಬುದು ಸಮಿತಿ ಮಾಡಿರುವ ಇನ್ನೊಂದು ಶಿಫಾರ್ಸು. ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಏಳು ವರ್ಷಗಳ ತನಕದ ಅವಧಿಗೂ ದೀರ್ಘಾವಧಿ ಸಾಲದ ಸಂಸ್ಥೆಗಳು ಮೂರು ವರ್ಷಕ್ಕೆ ಮೇಲ್ಪಟ್ಟು ಯಾವುದೇ ಅವಧಿಗೂ ಸಾಲ ನೀಡಲು ಅವಕಾಶವಾಗುವಂತೆ ಸಹಕಾರ ಸಂಘಗಳ ಅಧಿನಿಯಮವನ್ನು ತಿದ್ದುಪಡಿ ಮಾಡಬೇಕೆಂದು ಸೂಚಿಸಲಾಗಿದೆ. ಅಲ್ಲದೆ, ಮೂರು ವರ್ಷಗಳೊಳಗೆ ಸಹಕಾರ ಸಂಘಗಳನ್ನು ಎಲ್ಲ ಗ್ರಾಮೀಣ ಜನರಿಗೂ ಎಲ್ಲ ರೀತಿಯ ಸಾಲ ಸೌಲಭ್ಯಗಳನ್ನು ನೀಡುವಂಥ ವಿವಿಧೋದ್ದೇಶ ಸೇವಾಸಂಸ್ಥೆಗಳಾಗಿ ಪರಿವರ್ತಿಸಬೇಕೆಂದು ಸೂಚಿಸಲಾಗಿದೆ. ಭೂಅಭಿವೃದ್ಧಿ ಬ್ಯಾಂಕುಗಳನ್ನು ಕುರಿತು: ತಮಗಿರುವ ಸೇವಾವಕಾಶಗಳನ್ನು ದುರ್ವಿನಿಯೋಗಿಸಿಕೊಂಡು ಅದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂ ಅಭಿವೃದ್ಧಿ ಬ್ಯಾಂಕುಗಳನ್ನು ಪುನಾರಚಿಸುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಲಾಗಿದೆ. ಭೂಅಭಿವೃದ್ಧಿ ಬ್ಯಾಂಕುಗಳಿಗೆ ಅಡಮಾನವಾಗಿರುವ ಜಮೀನುಗಳನ್ನು ಕೊಂಡು ಬೇರೆಯವರಿಗೆ ಮಾರಾಟ ಮಾಡುವುದು ಅಥವಾ ಉದ್ದೇಶಿತ ವರ್ಗಗಳಿಗೆ (ಸಣ್ಣ, ಅತಿ ಸಣ್ಣ ರೈತ) ದೀರ್ಘ ಕಾಲಾವಧಿಗೆ ಗುತ್ತಿಗೆ ಕೊಡುವುದರ ಮೂಲಕ ಬ್ಯಾಂಕುಗಳು ಸಾಲದ ಬಾಕಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರಗಳು ನೆರವಾಗಬೇಕೆಂದು ಸೂಚಿಸಲಾಗಿದೆ. ಬ್ಯಾಂಕುಗಳು ಭೂ ಆಧಾರವಿಲ್ಲದ ಉದ್ದೇಶಗಳಿಗೂ ಸಾಲ ಒದಗಿಸುವ ರೀತಿಯಲ್ಲಿ ತಮ್ಮ ಕಾರ್ಯ ಕಲಾಪಗಳನ್ನು ಪುನಾರೂಪಿಸಿಕೊಳ್ಳಬೇಕೆಂದು ಸಲಹೆ ಮಾಡಲಾಗಿದೆ. ವಾಣಿಜ್ಯ ಬ್ಯಾಂಕುಗಳು ಮತ್ತು ಗ್ರಾಮೀಣ ಬ್ಯಾಂಕುಗಳನ್ನು ಕುರಿತು: ವಾಣಿಜ್ಯ ಬ್ಯಾಂಕುಗಳು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಿಗೆ ಶಾಖೆಗಳನ್ನು ವಿಸ್ತರಿಸಬೇಕೆಂದು ಹೇಳಿರುವುದಲ್ಲದೆ ಕಾರ್ಯನಿರತ ಸಹಕಾರ ಸಂಘಗಳು ಸಾಲ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಕೂಡ ಸೂಚಿಸಲಾಗಿದೆ. ಗ್ರಾಮಾಂತರ ಕುಟುಂಬಗಳಿಗೆ ಬ್ಯಾಂಕ್ ಸೌಕರ್ಯಗಳನ್ನು ಒದಗಿಸಲು ಮತ್ತು ಸಾಲ ಸೌಲಭ್ಯಗಳ ಸದ್ವಿನಿಯೋಗದ ಬಗೆಗೆ ಮೇಲ್ವಿಚಾರಣೆ ಕೈಗೊಳ್ಳುವ ಗ್ರಾಮೀಣ ಬ್ಯಾಂಕುಗಳು ಅತ್ಯಂತ ಯೋಗ್ಯವಾದವು ಎಂಬುದು ಸಮಿತಿಯ ಅಭಿಪ್ರಾಯ. ಅದ್ದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಶಾಖೆಗಳನ್ನು ತೆರೆಯಲು ಪರವಾನಿಗೆ ನೀಡುವಾಗ ಗ್ರಾಮೀಣ ಬ್ಯಾಂಕುಗಳು ತಮ್ಮ ಗ್ರಾಮ ಶಾಖೆಗಳ ವಹಿವಾಟುಗಳನ್ನು ಗ್ರಾಮೀಣ ಬ್ಯಾಂಕುಗಳಿಗೆ ವರ್ಗಾಯಿಸಬೇಕೆಂದೂ ಸೂಚಿಸಲಾಗಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್: ಸಂಘಟಿತ ಗ್ರಾಮೀಣ ಅಭಿವೃದ್ಧಿಯ ಹಾದಿಯಲ್ಲಿ ಉದ್ಭವಿಸುವ ಸಮಸ್ಯೆಗಳತ್ತ ನಿರಂತರ ಗಮನ ಹರಿಸಲು ಮತ್ತು ನಿರ್ದಿಷ್ಟ ನಿರ್ದೇಶನ ನೀಡಲು ಒಂದು ಪ್ರತ್ಯೇಕ ಸಂಸ್ಥೆಯ ಅಗತ್ಯವನ್ನು ಮನಗಂಡ `ಕ್ರಾಫಿಕಾರ್ಡ್ ಸಮಿತಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಸ್ಥಾಪನೆಗೆ ಶಿಫಾರ್ಸು ಮಾಡಿತು. ಇದಕ್ಕೆ ಮೊದಲು 1976ರಲ್ಲಿ ರಾಷ್ಟ್ರೀಯ ಕೃಷಿ ಆಯೋಗ ಗ್ರಾಮೀಣ ಪ್ರದೇಶಗಳ ಎಲ್ಲ ವಿಧವಾದ ಸಾಲದ ಆವಶ್ಯಕತೆಗಳನ್ನು ಒಂದು ಸಂಘಟಿತ ಸಾಲ ಪದ್ದತಿಯ ಮುಖೇನ ಪೂರೈಸಬೇಕು ಎಂದು ಸಲಹೆ ಮಾಡಿತ್ತು. ಈ ಎಲ್ಲ ಸಲಹೆ ಶಿಫಾರ್ಸುಗಳ ಅಧಾರದಮೇಲೆ 1982 ನವೆಂಬರ್ 2ರಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಸ್ತಿತ್ವಕ್ಕೆ ಬಂತು, ಕ್ರಾಫಿಕಾರ್ಡ್ ಸಮಿತಿ ಪರಿಭಾವಿಸಿದಂತೆ ಇದು ಏಕೈಕ ಮರು ಹಣಕಾಸು ಸಂಸ್ಥೆಯಾಗಿರುವುದಲ್ಲದೆ ದೇಶದ ಇಡೀ ಗ್ರಾಮೀಣ ಸಾಲ ವ್ಯವಸ್ಥೆಯ ನಾಯಕ ಸಂಸ್ಥೆಯೂ ಆಗಿರುತ್ತದೆ. ರಿಸರ್ವ್ ಬ್ಯಾಂಕಿನ ಅಧೀನ ಸಂಸ್ಥೆಯಾಗಿದ್ದ ಕೃಷಿ ಮರು ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಬದಲು ಇದು ಈ ಕಾರ್ಯ ನಿರ್ವಹಿಸುವುದಲ್ಲದೆ ರಿಸರ್ವ್ ಬ್ಯಾಂಕಿನ ಕೃಷಿ ಸಾಲ ವಿಭಾಗ ಮತ್ತು ಗ್ರಾಮೀಣ ಯೋಜನೆ ಹಾಗೂ ನಿಯಂತ್ರಣ ಕೇಂದ್ರದ ಬಹುತೇಕ ಕಾರ್ಯ ಕಲಾಪಗಳನ್ನೂ ತಾನೇ ವಹಿಸಿಕೊಂಡಿದೆ. ಆದಾಗ್ಯೂ ಈ ಬ್ಯಾಂಕು ಗ್ರಾಮೀಣ ಸಾಲಕ್ಕೆ ಸಂಬಂಧಪಟ್ಟ ಅಭಿವೃದ್ಧಿ ತರಬೇತಿ, ಸಲಹೆ ಸೂಚನೆ ಇತ್ಯಾದಿಗಳ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದೆ. ಬ್ಯಾಂಕಿನ ಅಧಿಕೃತ ಬಂಡವಾಳ ರೂ 100 ಕೋಟಿ. ಅದನ್ನು ಸರಿಸಮವಾಗಿ ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕುಗಳು ನೀಡಿವೆ. ಅಲ್ಲದೆ ಕೃಷಿ ಮರು ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಂಪನ್ಮೂಲಗಳನ್ನು ಹಾಗೂ ರಾಷ್ಟ್ರೀಯ ಕೃಷಿನಿಧಿ ಮತ್ತು ರಾಷ್ಟ್ರೀಯ ಕೃಷಿ ಸಾಲ ನಿಧಿಯನ್ನು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ವರ್ಗಾಯಿಸಲಾಗುವುದು. ಸದ್ಯಕ್ಕೆ ರಾಷ್ಟ್ರೀಯ ಕೃಷಿನಿಧಿಯನ್ನು ರಾಷ್ಟ್ರೀಯ ಗ್ರಾಮೀಣ ಉದ್ದರಿ ನಿಧಿ ಎಂಬುದಾಗಿಯೂ ಮತ್ತು ರಾಷ್ಟ್ರೀಯ ಕೃಷಿ ಉದ್ದರಿ ನಿಧಿಯನ್ನು ರಾಷ್ಟ್ರೀಯ ಗ್ರಾಮೀಣ ಸಾಲ ಸ್ಥಿರೀಕರಣ ನಿಧಿ ಎಂಬುದಾಗಿಯೂ ಕರೆಯಲಾಗಿದೆ. ಒಟ್ಟಿನಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಕಾರ್ಯಕಲಾಪಗಳಿಗೆ ಸಮರ್ಪಕ ಹಣಕಾಸು ಒದಗಿಸುವುದು ಭಾರತೀಯ ರಿಸರ್ವ್ ಬ್ಯಾಂಕಿನ ಸಂಪೂರ್ಣ ಹೊಣೆಗಾರಿಕೆ. ಸಂಘಟಿತ ಗ್ರಾಮೀಣ ಅಭಿವೃದ್ಧಿಯನ್ನು ಬಲಪಡಿಸುವ ದೃಷ್ಟಿಯಿಂದ ಕೃಷಿ ಗ್ರಾಮೀಣ ಸಣ್ಣ ಕೈಗಾರಿಕೆಗಳು, ಗೃಹಕೈಗಾರಿಕೆಗಳು, ಗ್ರಾಮೀಣ ಕುಶಲ ಕಲೆಗಾರಿಕೆ ಇತ್ಯಾದಿ ಕಾರ್ಯಗಳಿಗೆ ಅಲ್ಪಾವಧಿ ಉದ್ದರಿ ಆವಶ್ಯಕತೆಗಳನ್ನು ಪೂರೈಸುವ ಮರುಹಣಕಾಸು ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮೂಲಭೂತ ಉದ್ದೇಶ. ಗ್ರಾಮೀಣ ಅಭಿವೃದ್ಧಿಗೆ ನೆರವಾಗುತ್ತಿರುವ ಈ ಬಗೆಯ ಬ್ಯಾಂಕುಗಳಿಗೂ ಮರು ಹಣಕಾಸಿನ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಕೃಷಿಕರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ತನ್ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಪ್ರವರ್ತಿಸುವ ಕಾರ್ಯದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅತ್ಯಂತ ಮಹತ್ತ್ವದ ಪಾತ್ರ ನಿರ್ವಹಿಸುತ್ತಿದೆ. ಕೈಗಾರಿಕಾ ಹಣಕಾಸು : ಹಣಕಾಸು ಕೈಗಾರಿಕಾಭಿವೃದ್ಧಿಯ ಜೀವಾಳ. ಸಣ್ಣ ಕೈಗಾರಿಕೆಯಾಗಲಿ ಬೃಹತ್ ಕೈಗಾರಿಕಾ ಕ್ಷೇತ್ರವಾಗಲಿ ಎರಡರ ಪ್ರಗತಿಯೂ ಬಹಳ ಕಾಲದ ವರೆಗೆ ಬಂಡವಾಳ ಕೊರತೆಯಿಂದಲೇ ಕುಂಠಿತವಾಯಿತು. ಕೃಷಿಕರಂತೆಯೇ ಕೈಗಾರಿಕೋದ್ಯಮಿಗಳು ಕೂಡ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಹಣಕಾಸಿನ ನೆರವನ್ನು ಅಪೇಕ್ಷಿಸಿದರೂ ಅವರಿಗೆ ದುಡಿಯುವ ಬಂಡವಾಳದ ಅವಶ್ಯಕತೆಯು ಹೆಚ್ಚು. ಕೈಗಾರಿಕಾ ಹಣಕಾಸು ಮೂಲಗಳನ್ನು ಅಧ್ಯಯನದ ಅನುಕೂಲಕ್ಕಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು. ಸಣ್ಣ ಮತ್ತು ಗೃಹಕೈಗಾರಿಕೆಗಳಿಗೆ ಹಣಕಾಸಿನ ನೆರವು ನೀಡುವ ಸಂಸ್ಥೆಗಳದ್ದು ಒಂದು ಗುಂಪು. ಬೃಹತ್ ಕೈಗಾರಿಕೆಗಳಿಗೆ ಹಣ ಒದಗಿಸುವ ಸಂಸ್ಥೆಗಳದ್ದು ಇನ್ನೊಂದು ಗುಂಪು. ಸಣ್ಣ ಮತ್ತು ಗೃಹಕೈಗಾರಿಕಾ ಹಣಕಾಸು ಮೂಲಗಳು : ಗ್ರಾಮಾಂತರ ಪ್ರದೇಶಗಳಲ್ಲಿರುವ ಸಣ್ಣ ಮತ್ತು ಗೃಹಕೈಗಾರಿಕೆಗಳಿಗೆ ಸಾಲವೊದಗಿಸುವ ಪ್ರಮುಖವಾಗಿ ಮೊದಲ ಗುಂಪಿನ ಸಂಸ್ಥೆಗಳು ಮೂಲವಾಗಿ ಬೆಳೆದಿವೆ. ಈ ಸಂಘಗಳು ಹಣಕಾಸಿನ ನೆರವು ನೀಡುವುವಷ್ಟೇ ಅಲ್ಲದೆ ಕಚ್ಚಾ ಸಾಮಗ್ರಿ ಮತ್ತು ಯಂತ್ರೋಪಕರಣಗಳನ್ನು ಒದಗಿಸುವುದರ ಜೊತೆಗೆ ಸರಕು ಮಾರಾಟದ ಹೊಣೆಯನ್ನೂ ಹೊರುತ್ತವೆ. ಕೈಮಗ್ಗದ ಉದ್ಯಮ, ಕುಂಬಾರಿಕೆ, ನಾರು ಮತ್ತು ಹಗ್ಗದ ತಯಾರಿಕೆ, ಚಮ್ಮಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಕೈಗಾರಿಕಾ ಸಹಕಾರ ಸಂಘಗಳು ಯಶಸ್ಸು ಸಾಧಿಸಿವೆ. ಕೃಷಿ ಹಣಕಾಸು ಕ್ಷೇತ್ರದಲ್ಲಿರುವಂತೆಯೇ ಕೈಗಾರಿಕಾ ಸಹಕಾರ ಸಂಘಗಳು ಕೂಡ ಕೇಂದ್ರೀಯ ಹಾಗೂ ರಾಜ್ಯ ಸಹಕಾರ ಬ್ಯಾಂಕುಗಳಿಂದ ಬಂಡವಾಳ ಪಡೆಯುತ್ತವೆ. ವಾಣಿಜ್ಯ ಬ್ಯಾಂಕುಗಳು: ಈ ಸಂಸ್ಥೆಗಳು ಬಹಳ ಕಾಲದ ತನಕ ಬೃಹತ್ ಕೈಗಾರಿಕೆಗಳಿಗೆ ಹಣ ಒದಗಿಸುವ ಸಂಸ್ಥೆಗಳಾಗಿಯೇ ಕಾರ್ಯ ನಿರ್ವಹಿಸುತ್ತಿದ್ದವು. ಸಣ್ಣ ಮತ್ತು ಗೃಹ ಕೈಗಾರಿಕೆಗಳಿಗೆ ವಾಣಿಜ್ಯ ಬ್ಯಾಂಕುಗಳಲ್ಲಿ ಪ್ರವೇಶವಿರಲಿಲ್ಲ. ಮೊತ್ತಮೊದಲ ಬಾರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ರಿಸರ್ವ್ ಬ್ಯಾಂಕಿನ ಸಲಹೆ ಪಡೆದು ಕೈಗಾರಿಕೆಗಳಿಗೆ ಹಣಕಾಸಿನ ನೆರವು ನೀಡುವುದಕ್ಕಾಗಿ ಒಂದು ಯೋಜನೆ ರೂಪಿಸಿತು. ತರುವಾಯ, ಅದನ್ನು ಎಲ್ಲ ರಾಜ್ಯ ಬ್ಯಾಂಕು ಶಾಖೆಗಳಿಗೂ ವಿಸ್ತರಿಸಲಾಯಿತು. 1969ರ ಬಳಿಕ ರಾಷ್ಟ್ರೀಕೃತ ಬ್ಯಾಂಕುಗಳೂ ಸಣ್ಣ ಮತ್ತು ಗೃಹ ಕೈಗಾರಿಕೆಗಳಿಗೆ ಸಾಲ ಒದಗಿಸುತ್ತಿವೆ. 1980 ಜೂನ್ ವೇಳೆಗೆ ಎಲ್ಲ ಅನುಸ್ರಚಿತ ಬ್ಯಾಂಕುಗಳೂ ಕೂಡಿ ಒಟ್ಟು ರೂ 3520 ಕೋಟಿ ಸಾಲ ನೀಡಿದ್ದುವು. ಇದರಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಪಾಲು ರೂ 2210 ಕೋಟಿ. ಸಾಲ ಖಾತರಿ ಯೋಜನೆ : 1960 ಜುಲೈಯಲ್ಲಿ ಅಸ್ತಿತ್ವಕ್ಕೆ ಬಂದ ಸಾಲ ಖಾತರಿ ಯೋಜನೆ ಸಣ್ಣಕೈಗಾರಿಕಾ ಹಣಕಾಸು ಕ್ಷೇತ್ರದಲ್ಲಿ ಮಹತ್ತ್ವದ ಬೆಳವಣಿಗೆ. ಸಣ್ಣ ಮತ್ತು ಗೃಹಕೈಗಾರಿಕೆಗಳಿಗೆ ಸಾಲ ನೀಡುವ ಹಣಕಾಸು ಸಂಸ್ಥೆಗಳಿಗೆ ರಕ್ಷಣೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಅವುಗಳಿಗೆ ಸಂಭವಿಸಬಹುದಾದ ನಷ್ಟಗಳಿಗೆ ಇದು ಹೊಣೆಗಾರಿಕೆ ವಹಿಸುತ್ತದೆ ಮತ್ತು ನಷ್ಟ ತುಂಬಿ ಕೊಡುವ ಖಾತರಿ ನೀಡುತ್ತದೆ. ಇದರ ಆಡಳಿತವನ್ನು ರಿಸರ್ವ್ ಬ್ಯಾಂಕ್ ನೋಡಿಕೊಳ್ಳುತ್ತದೆ. ಎಲ್ಲ ಪ್ರಮುಖ ವಾಣಿಜ್ಯ ಬ್ಯಾಂಕುಗಳು, ರಾಜ್ಯ ಹಣಕಾಸು ನಿಗಮಗಳು ಮತ್ತು ಸಹಕಾರಿ ಬ್ಯಾಂಕುಗಳು ಸೇರಿದಂತೆ ಒಟ್ಟು 328 ಹಣಕಾಸು ಸಂಸ್ಥೆಗಳು ಸಾಲ ಖಾತರಿ ಯೋಜನೆಯ ವ್ಯಾಪ್ತಿಗೊಳಪಟ್ಟಿದೆ. 1981ರ ವಾರ್ಚ್ ವೇಳೆಗೆ ರೂ 3705 ಕೋಟಿ ಖಾತರಿ ಒದಗಿಸಲಾಗಿದೆ. ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ: ಈ ನಿಗಮ 1955ನೇ ಇಸವಿ ಫೆಬ್ರುವರಿಯಲ್ಲಿ ಸ್ಥಾಪನೆಯಾಯಿತು. ಇದರ ಉದ್ದೇಶಗಳು ಈ ರೀತಿ ಇವೆ: 1. ಸಣ್ಣ ಕೈಗಾರಿಕೆಗಳಿಗೆ ಹಣಕಾಸಿನ ಹಾಗೂ ತಾಂತ್ರಿಕ ನೆರವು ನೀಡುವುದು. 2. ಸಣ್ಣ ಹಾಗೂ ಗೃಹ ಕೈಗಾರಿಕೆಗಳು ತಯಾರಿಸುವ ವಸ್ತುಗಳಿಗೆ ಸರ್ಕಾರದ ಆದೇಶಗಳನ್ನು ಪಡೆದು ಕೊಡುವುದು. 3. ಸಣ್ಣ ಮತ್ತು ಬೃಹತ್ ಕೈಗಾರಿಕಾ ಚಟುವಟಿಕೆಗಳನ್ನು ಸಂಯೋಜಿಸುವುದರ ಮೂಲಕ ಸಣ್ಣ ಕೈಗಾರಿಕೆಗಳು ಬೃಹತ್ ಕೈಗಾರಿಕೆಗಳಿಗೆ ಬೇಕಾಗುವ ಬಿಡಿಭಾಗಗಳನ್ನು ತಯಾರಿಸುವಂತೆ ಪ್ರೋತ್ಸಾಹ ನೀಡುವುದು, ಮತ್ತು 4. ಸಣ್ಣ ಕೈಗಾರಿಕೆಗಳು ಪಡೆದ ಸಾಲಗಳಿಗೆ ಖಾತರಿ ನೀಡುವುದು. ಈ ಉದ್ದೇಶಗಳೇ ಅಲ್ಲದೆ. ನಿಗಮ ಸಣ್ಣ ಕೈಗಾರಿಕೆಗಳಿಗೆ ಬೇಕಾಗುವ ಯಂತ್ರೋಪಕರಣಗಳನ್ನು ಒದಗಿಸಲು ಕಂತು ಖರೀದಿ ಯೋಜನೆಯನ್ನು ಸಹ ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಯ ಅಂಗವಾಗಿ 1980ರ ವೇಳೆಗೆ ನಿಗಮ ರೂ 110 ಕೋಟಿ ಯಂತ್ರೋಪಕರಣಗಳನ್ನು ಸರಬರಾಜು ಮಾಡಿದೆ. ಇದೇ ಅವಧಿಯಲ್ಲಿ ಸಣ್ಣ ಕೈಗಾರಿಕೋತ್ಪನ್ನಗಳಿಗೆ ರೂ 742 ಕೋಟಿಯ ಸರ್ಕಾರದ ಆದೇಶವನ್ನೂ ದೊರಕಿಸಿಕೊಟ್ಟಿದೆ. ಸಣ್ಣ ಮತ್ತು ಗೃಹಕೈಗಾರಿಕೆಗಳಿಗೆ ಸಾಲದ ಸೌಲಭ್ಯಗಳನ್ನು ಒದಗಿಸುತ್ತಿರುವ ಇತರ ಮೂಲಗಳ ಪೈಕಿ ಹೆಸರಿಸಬಹುದಾದ್ದು ಎಂದರೆ ರಾಜ್ಯ ಹಣಕಾಸು ನಿಗಮ. ಈ ಸಂಸ್ಥೆ ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ನೆರವಾಗುತ್ತಿದೆ. ಬೃಹತ್ ಕೈಗಾರಿಕಾ ಹಣಕಾಸು ಮೂಲಗಳು: ಬೃಹತ್ ಕೈಗಾರಿಕೆಗಳಿಗೆ ಮುಖ್ಯವಾಗಿ ಎರಡು ಉದ್ದೇಶಗಳಿಗೆ ಹಣಕಾಸು ಅವಶ್ಯಕವಾಗಿದೆ: ಯಂತ್ರೋಪಕರಣಗಳನ್ನು ಕೊಳ್ಳುವುದು, ಕಾರ್ಖಾನೆಯ ನಿರ್ಮಾಣ, ವಿಸ್ತರಣೆ, ಆಧುನೀಕರಣ ಪುನರ್‍ನಿರ್ಮಾಣವೇ ಮೊದಲಾದ ಸ್ಥಿರ ಬಂಡವಾಳ ವೆಚ್ಚಗಳಿಗಾಗಿ ಮತ್ತು ಕಚ್ಚಾ ಸಾಮಗ್ರಿಗಳನ್ನು ಕೊಳ್ಳುವುದು, ದಾಸ್ತಾನು ಮಾಡುವುದು. ಸಂಬಳ ಸಾರಿಗೆ ಪಾವತಿ ಮಾಡುವುದು. ಸ್ಥಿರಬಂಡವಾಳಕ್ಕಾಗಿ ಬೇಕಾಗುವ ನಿಧಿಯನ್ನು ಷೇರು ಮಾರಾಟ, ಸಾಲ ಪತ್ರಗಳನ್ನು ಹೊರಡಿಸುವುದು, ಸಾರ್ವಜನಿಕರಿಂದ ಠೇವಣಿ ಸ್ವೀಕರಿಸುವುದು ಮತ್ತು ಲಾಭಾಂಶವನ್ನು ತೆಗೆದಿಡುವ ಮೂಲಕ ಹೊಂದಿಸಿಕೊಳ್ಳುತ್ತವೆ. ದುಡಿಯುವ ಬಂಡವಾಳವನ್ನು ಈಗಾಗಲೇ ಸೂಚಿಸಿರುವ ಮೂಲಗಳಿಂದಲ್ಲದೆ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಸಹ ಸಾಲದ ರೂಪದಲ್ಲಿ ಪಡೆಯುತ್ತವೆ. ಷೇರುಗಳು ಮತ್ತು ಸಾಲಪತ್ರಗಳು: ಬೃಹತ್ ಕೈಗಾರಿಕೆಗಳು ತಮ್ಮ ಬಹು ಭಾಗ ಬಂಡವಾಳವನ್ನು ವಿವಿಧ ರೀತಿಯ ಷೇರು ಮತ್ತು ಡಿಬೆಂಚರುಗಳನ್ನು ಹೊರಡಿಸುವುದರ ಮೂಲಕ ಸಂಗ್ರಹಿಸುತ್ತವೆ. ಇತ್ತೀಚೆಗೆ ಕಡಿಮೆ ಮೌಲ್ಯದ (ಉದಾಹರಣೆಗೆ ರೂ.10) ಷೇರುಗಳನ್ನು ಹೊರಡಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅಲ್ಲದೆ, ಇಂದು ಡಿಬೆಂಚರುಗಳ ಮಾರಾಟ ಬಂಡವಾಳ ಸಂಗ್ರಹಣೆಯ ಒಂದು ಜನಪ್ರಿಯ ವಿಧಾನವಾಗಿದೆ. ಸಾರ್ವಜನಿಕ ಠೇವಣಿಗಳು: ಮುಂಬಯಿ ಮತ್ತು ಸೋಲಾಪುರದ ಕೆಲವು ಹತ್ತಿಗಿರಣಿಗಳು ಠೇವಣಿ ಸಂಗ್ರಹಣೆಯ ಮೂಲಕ ಸ್ಥಿರಬಂಡವಾಳ ಹೊಂದಿಸಿಕೊಂಡಿವೆಯಾದರೂ ಈ ಪದ್ಧತಿ ಹೆಚ್ಚು ಜನಪ್ರಿಯವಾಗಿರುವುದು ಅಹಮದಾಬಾದಿನಲ್ಲಿ. ಅಹಮದಾಬಾದಿನ ಜನತೆಯಲ್ಲಿ ತಮ್ಮ ಉಳಿತಾಯದ ಹಣವನ್ನು ಹತ್ತಿಗಿರಣಿಗಳ ವ್ಯವಸ್ಥಾಪಕರಲ್ಲಿ ಠೇವಣಿ ಇಡುವ ಪದ್ಧತಿ ಬಹಳ ಕಾಲದಿಂದಲೂ ಇದೆ. ಠೇವಣಿಗಳು 6 ತಿಂಗಳುಗಳಿಂದ ಒಂದು ವರ್ಷದ ಅವಧಿಯನ್ನು ಹೊಂದಿರುತ್ತವೆ. ಇವುಗಳಿಗೆ ನಿರ್ದಿಷ್ಟ ದರದ ಬಡ್ಡಿ ಕೊಡಲಾಗುತ್ತದೆ. ಈ ಮೂಲಕ ಸಂಗ್ರಹವಾದ ಹಣವನ್ನು ವ್ಯವಸ್ಥಾಪಕರು ಗಿರಣಿಗಳಲ್ಲಿ ವಿನಿಯೋಜಿಸುತ್ತಾರೆ. ಬ್ಯಾಂಕು ಸಾಲಗಳು : ವಾಣಿಜ್ಯ ಬ್ಯಾಂಕುಗಳು ಸರ್ಕಾರಿ ಸಾಲಪತ್ರ ಮತ್ತು ದಾಸ್ತಾನುಗಳ ಭದ್ರತೆಯ ಮೇಲೆ ಕೈಗಾರಿಕೆಗಳಿಗೆ ದುಡಿಯುವ ಬಂಡವಾಳವನ್ನು ಒದಗಿಸುವುದುಂಟು. ಆದರೆ ಸ್ಥಿರ ಬಂಡವಾಳದ ಅಗತ್ಯಗಳನ್ನು ಪೂರೈಸುವಲ್ಲಿ ಈ ಬ್ಯಾಂಕುಗಳ ಪಾತ್ರ ಇಲ್ಲವೆಂದೇ ಹೇಳಬೇಕು. ಠೇವಣೀದಾರರ ಅಲ್ಪಾವಧಿ ನಿಧಿಗಳಿಂದ ವ್ಯವಹರಿಸುವ ಬ್ಯಾಂಕುಗಳು ದೀರ್ಘಾವಧಿ ಹಣಕಾಸನ್ನು ಒದಗಿಸುವುದು ಕಷ್ಟವೇ ಸರಿ. ಆದರೂ ಹಣ ಬೇಕೆಂದಾಗ ಮಾರಾಟ ಮಾಡಲು ಸಾಧ್ಯವಿರುವ ಡಿಬೆಂಚರುಗಳು ಮೇಲೆ ಸಾಲ ಕೊಡಬಹುದು ಎಂಬ ಅಭಿಪ್ರಾಯವಿದ್ದರೂ ಸಕಾಲಿಕ ಮಾರಾಟ ಕಷ್ಟವಾಗಬಹುದು ಎಂದು ಹೇಳಲಾಗಿದೆ. ಬೃಹತ್ ಕೈಗಾರಿಕೆಗಳ ಹಣಕಾಸಿನ ಅಗತ್ಯಗಳನ್ನು ಪೂರೈಸುವಲ್ಲಿ ಮೇಲ್ಕಂಡ ಮೂಲಗಳ ಅಸಾಮಥ್ರ್ಯ ಮತ್ತು ಅದಕ್ಷತೆಗಳನ್ನು ಗಮನಿಸಿದ ಸರ್ಕಾರ ಆ ಕೊರತೆಯನ್ನು ತುಂಬುವ ಸಲುವಾಗಿ ಸ್ವಾತಂತ್ರ್ಯೋತ್ತರದಲ್ಲಿ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದೆ. ಇವನ್ನು ಆಧುನಿಕ ಕೈಗಾರಿಕಾ ಹಣಕಾಸು ಸಮಸ್ಯೆಗಳೆಂದು ಕರೆಯುತ್ತಾರೆ. ಭಾರತದ ಕೈಗಾರಿಕಾ ಹಣಕಾಸು ನಿಗಮ  : ಪಾರ್ಲಿಮೆಂಟಿನ ವಿಶೇಷ ಕಾಯಿದೆಯ ಮೇರೆಗೆ 1948 ಜುಲೈ 1ರಂದು ಭಾರತದ ಕೈಗಾರಿಕಾ ಹಣಕಾಸು ನಿಗಮ ಅಸ್ತಿತ್ವಕ್ಕೆ ಬಂತು. ಇದರ ಅಧಿಕೃತ ಬಂಡವಾಳ ರೂ.20 ಕೋಟಿ. ಭಾರತದ ಕೈಗಾರಿಕಾಭಿವೃದ್ಧಿ ಬ್ಯಾಂಕ್, ಅನುಸೂಚಿತ ಬ್ಯಾಂಕುಗಳು, ವಿಮಾ ಕಂಪನಿಗಳು, ವಿನಿಯೋಜನ ಟ್ರsಸ್ಟ್‍ಗಳು ಮತ್ತು ಸಹಕಾರಿ ಬ್ಯಾಂಕುಗಳು ನಿಗಮದ ಷೇರುದಾರರಾಗಿವೆ. ಬಂಡವಾಳದ ಮರುಪಾವತಿ ಮತ್ತು ಕನಿಷ್ಠ ಶೇಕಡಾ 2 ವಾರ್ಷಿಕ ಲಾಭಾಂಶಕ್ಕೆ ಕೇಂದ್ರ ಸರ್ಕಾರ ಖಾತರಿ ನೀಡುತ್ತದೆ. ಬಾಂಡು ಮತ್ತು ಡಿಬೆಂಚರುಗಳನ್ನು ಹೊರಡಿಸುವುದು, ವಿಶ್ವಬ್ಯಾಂಕ್ ಮತ್ತು ಇತರ ಸಂಸ್ಥೆಗಳಿಂದ ವಿದೇಶೀಹಣವನ್ನು ಸಾಲ ಪಡೆಯುವುದು ಸಾರ್ವಜನಿಕರಿಂದ ಠೇವಣಿ ಸ್ವೀಕರಿಸುವುದು ಮತ್ತು ಒಮ್ಮೆಗೆ 18 ತಿಂಗಳುಗಳ ಅವಧಿಗೆ ರೂ. 3 ಕೋಟಿ ವರೆಗೆ ಸಾಲ ಪಡೆಯುವುದು ಮೊದಲಾದವು ನಿಗಮಕ್ಕೆ ಇರುವ ಅಧಿಕಾರಗಳು. ನಿಗಮದ ಆಡಳಿತ 12 ಜನ ನಿರ್ದೇಶಕರಿರುವ ಒಂದು ಮಂಡಳಿಯ ಮೂಲಕ ನಡೆಯುತ್ತದೆ. ಈ ಪೈಕಿ ನಾಲ್ಕು ಮಂದಿಯನ್ನು ಕೇಂದ್ರ ಸರ್ಕಾರ ನಾಮಕರಣ ಮಾಡುತ್ತದೆ. ರಿಸರ್ವ್ ಬ್ಯಾಂಕ್ ಇಬ್ಬರನ್ನೂ ಹಾಗೂ ಬ್ಯಾಂಕುಗಳು, ವಿಮಾಕಂಪನಿಗಳು, ವಿನಿಯೋಜನ ಟ್ರಸ್ಟ್‍ಗಳು ಮತ್ತು ಸಹಕಾರಿ ಬ್ಯಾಂಕುಗಳು ಉಳಿದ 6 ಮಂದಿಯನ್ನೂ ನಾಮಕರಣ ಮಾಡುತ್ತವೆ. ಈ ಮಂಡಳಿಯ ಮೇಲೆ ಕೇಂದ್ರೀಯ ಸಮಿತಿ ಇರುತ್ತದೆ. ನಿಗಮದ ಕಾರ್ಯಕಲಾಪಗಳನ್ನು ನಿಯೋಜಿಸುವುದು ಮತ್ತು ನೀತಿ ನಿಯಮಗಳನ್ನು ರೂಪಿಸುವುದು ಕೇಂದ್ರೀಯ ಸಮಿತಿಯ ಕೆಲಸವಾಗಿದೆ. ಕಾರ್ಯಗಳು: 25 ವರ್ಷಗಳ ಅವಧಿಗೆ ಸಾಲ ನೀಡುವುದು ಅಥವಾ ಉದ್ಯಮಗಳ ಡಿಬೆಂಚರ್ ಮತ್ತು ಷೇರುಗಳನ್ನು ಕೊಂಡು ಹಣ ಒದಗಿಸುವುದು ಕೈಗಾರಿಕೆಗಳು ಮುಕ್ತ ಮಾರುಕಟ್ಟೆಯಲ್ಲಿ 25 ವರ್ಷಗಳ ಅವಧಿಗೆ ಪಡೆಯುವ ಸಾಲಕ್ಕೆ ಖಾತರಿ ಒದಗಿಸುವುದು, ಕೈಗಾರಿಕೆಗಳ ಸ್ಟಾಕುಗಳು, ಷೇರುಗಳು ಮತ್ತು ಡಿಬೆಂಚರುಗಳ ಮಾರಾಟಕಾರ್ಯ ನಿರ್ವಹಿಸುವುದು, ಕೆಲವು ಗೊತ್ತಾದ ಕೈಗಾರಿಕೆಗಳಿಗೆ ವಿದೇಶೀ ಹಣದಲ್ಲಿ ಸಾಲ ಒದಗಿಸಿಕೊಡುವುದು ಮತ್ತು ಮರುಪಾವತಿಯ ಆಧಾರದ ಮೇಲೆ ಕೈಗಾರಿಕೆಗಳು ಮಾಡಿಕೊಳ್ಳುವ ಬಂಡವಾಳ ಸರಕುಗಳ ಆಮದುಗಳಿಗೆ ಖಾತರಿ ಒದಗಿಸುವುದು - ಇವು ನಿಗಮ ನಿರ್ವಹಿಸುತ್ತಿರುವ ಮುಖ್ಯವಾದ ಕಾರ್ಯಗಳು. ತಯಾರಿಕೆ, ಗಣಿ, ಹಡಗು ನಿರ್ಮಾಣ, ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ವಿತರಣೆಗೆ ಸಂಬಂಧಪಟ್ಟ ಕೈಗಾರಿಕೆಗಳಿಗೆ ಮಾತ್ರ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲಗಳನ್ನು ನೀಡುವ ಅಧಿಕಾರ ನಿಗಮಕ್ಕಿದೆ. ಯಾವುದೇ ಒಂದು ಉದ್ಯಮಕ್ಕೆ ಗರಿಷ್ಠ ರೂ 1 ಕೋಟಿಯವರೆಗೆ ನೆರವು ನೀಡಬಹುದು. ವಿಶೇಷ ಸಂದರ್ಭಗಳಲ್ಲಿ, ಸರ್ಕಾರದ ಪೂರ್ವಾನುಮತಿ ಪಡೆದು ಒಂದು ಕೋಟಿಗೂ ಮೀರಿ ನೆರವು ನೀಡಬಹುದು. ರೂಪಾಯಿ ಸಾಲ ಮತ್ತು ವಿದೇಶೀಹಣದ ಸಾಲಗಳ ಮೇಲೆ ಅನುಕ್ರಮವಾಗಿ ಶೇಕಡಾ 11.25 ಮತ್ತು 11.50ರಂತೆ ಬಡ್ಡಿ ವಿಧಿಸಲಾಗುವುದು. ಸೂಚಿತ ಹಿಂದುಳಿದ ಪ್ರದೇಶಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಕಡಿಮೆ ಬಡ್ಡಿ ವಿಧಿಸಲಾಗುವುದು. ಸಾಲಗಳಿಗೆ ಭೂಮಿ, ಕಟ್ಟಡ, ಯಂತ್ರೋಪಕರಣಗಳು ಮುಂತಾದ ಸ್ಥಿರ ಆಸ್ತಿಗಳ ಭದ್ರತೆಯಲ್ಲದೆ ಋಣಿ ಉದ್ಯಮದ ಇಬ್ಬರು ನಿರ್ದೇಶಕರ ಭರವಸೆಯನ್ನೂ ಪಡೆಯಲಾಗುವುದು. ಸಾಮಗ್ರಿ ಮತ್ತು ಸಿದ್ಧ ವಸ್ತುಗಳ ಆಧಾರದಮೇಲೆ ನಿಗಮವು ಸಾಲ ಕೊಡುವುದಿಲ್ಲ. ನಿಗಮವು ತನ್ನ ಹಿತಾಸಕ್ತಿಗಳ ರಕ್ಷಣೆ ಮತ್ತು ದಕ್ಷ ಆಡಳಿತ ನಿರ್ವಹಣೆಗಾಗಿ ನೆರವು ಪಡೆದ ಉದ್ಯಮದ ಆಡಳಿತ ಮಂಡಳಿಗೆ ಇಬ್ಬರು ನಿರ್ದೇಶಕರನ್ನು ನೇಮಕ ಮಾಡುವ ಅಧಿಕಾರ ಪಡೆದಿದೆ. ಸಾಲವನ್ನು ಮರುಪಾವತಿ ಮಾಡಲಾಗದ ಉದ್ಯಮ ಸಂಸ್ಥೆಗಳನ್ನು ತಾನೇ ವಹಿಸಿಕೊಳ್ಳುವ ಅಥವಾ ಅಡಮಾನವಾಗಿರುವ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿ ತನ್ನ ಹಣ ಪಡೆಯುವ ಅಧಿಕಾರ ನಿಗಮಕ್ಕೆ ಇದೆ. ಸಾಲ ಪಡೆದ ಸಂಸ್ಥೆಗಳಿಂದ ನಿಯತ ಕಾಲಿಕ ವರದಿಗಳನ್ನು ಪಡೆಯುತ್ತದೆ. ಇದುವರೆಗೆ ನಿಗಮವು 1360 ಯೋಜನೆಗಳಿಗೆ 1200 ಕೋಟಿ ರೂಗಳ ನೆರವು ನೀಡಿದೆ. ಆಹಾರ ತಯಾರಿಕಾ ಘಟಕಗಳು, ಹತ್ತಿಗಿರಣಿಗಳು, ಕಾಗದ ತಯಾರಿಕೆ, ಮೂಲ ರಾಸಾಯನಿಕ ವಸ್ತುಗಳ ತಯಾರಿಕೆ, ಸಿಮೆಂಟು, ಗೊಬ್ಬರ, ಲೋಹಗಳು ಮತ್ತು ಲೋಹದ ಪದಾರ್ಥಗಳು, ಯಂತ್ರೋಪಕರಣಗಳು, ಮೋಟರ್‍ವಾಹನಗಳು, ಗಾಜು ಮತ್ತು ರಬ್ಬರ್ ತಯಾರಿಕೆ ಇತ್ಯಾದಿ ಕೈಗಾರಿಕೆಗಳು ನಿಗಮದಿಂದ ನೆರವು ಪಡೆದಿರುವ ಕೆಲವು ಮುಖ್ಯ ಉದ್ಯಮಗಳು ಹೊಸದಾಗಿ ಪ್ರಾರಂಭವಾಗುವ ಕೈಗಾರಿಕೆಗಳಿಗೆ ತಾಂತ್ರಿಕ ಹಾಗೂ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ನಿಗಮ 1975ರ ಮಾರ್ಚ್‍ನಲ್ಲಿ ಬಂಡವಾಳ ನಷ್ಟ ಹೊಣೆಗಾರಿಕೆಯ ಪ್ರಾಧಿಕಾರವನ್ನು ಸ್ಥಾಪಿಸಿತು. ಈ ಮೂಲಕ ಹೊಸದಾಗಿ ಪ್ರಾರಂಭಿಸುವ ಉದ್ಯಮಗಳಿಗೆ ಬಡ್ಡಿ ರಹಿತ ಅಥವಾ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಹಣಕಾಸು ನೆರವು ನೀಡಲಾಗುವುದಲ್ಲದೆ ತಾಂತ್ರಿಕ ಮತ್ತು ನಿರ್ವಹಣಾತ್ಮಕ ಮಾರ್ಗದರ್ಶನವನ್ನೂ ನೀಡಲಾಗುವುದು. ಪ್ರಾಧಿಕಾರದ ಮೂಲಕ 1981 ಮಾರ್ಚ್ ತನಕ ರೂ 2.10 ಕೋಟಿ ನೆರವು ನೀಡಲಾಗಿದೆ. ನಿಗಮದ ಕಾರ್ಯಕಲಾಪಗಳ ಬಗ್ಗೆ ಹಲವಾರು ಟೀಕೆಗಳಿವೆ. ಸಾಲಗಳ ಮೇಲೆ ಶೇಕಡಾ 11.25ರ ಬಡ್ಡಿ ದುಬಾರಿ ಎಂಬ ಅಭಿಪ್ರಾಯವಿದೆ. ಸಾಲಗಳ ಮಂಜೂರಾತಿ ಅನಾವಶ್ಯಕವಾಗಿ ವಿಳಂಬವಾಗುತ್ತದೆ ಎಂಬ ದೂರಿದೆ. ಸಾಲಗಳಿಗೆ ಉದ್ಯಮ ಸಂಸ್ಥೆಯ ಸ್ಥಿರ ಆಸ್ತಿಗಳ ಭದ್ರತೆ ಪಡೆಯುವುದರ ಜೊತೆಗೆ ಇಬ್ಬರು ನಿರ್ದೇಶಕರ ಭರವಸೆ ಕೇಳುವುದರ ಔಚಿತ್ಯವನ್ನು ಪ್ರಶ್ನಿಸಲಾಗಿದೆ. ನೆರವು ನೀಡುವಲ್ಲಿ ಪಕ್ಷಪಾತ ಮಾಡಲಾಗಿದೆ ಎಂದೂ ಸಕ್ಕರೆ ಮತ್ತು ಬಟ್ಟೆ ಗಿರಣಿಗಳಲ್ಲಿ ಅನಗತ್ಯ ಆಸಕ್ತಿ ತೋರಲಾಗಿದೆ ಎಂದೂ ಟೀಕಿಸಲಾಗಿದೆ. ಇಂಥ ಕುಂದುಕೊರತೆಗಳನ್ನು ಪರಿಶೀಲಿಸುವುದಕ್ಕಾಗಿ 1952ರಲ್ಲಿ ಸುಚೇತ ಕೃಪಲಾನಿ ಅವರ ಅಧ್ಯಕ್ಷತೆಯಲ್ಲಿ ಒಂದು ತನಿಖಾ ಸಮಿತಿಯನ್ನು ನೇಮಿಸಲಾಗಿತ್ತು. ಸಮಿತಿ ಮಾಡಿದ ಶಿಫಾರ್ಸುಗಳು ಈ ರೀತಿ ಇವೆ. 1. ನಿಗಮಕ್ಕೆ ಪೂರ್ಣಾವಧಿಯ ಅಧ್ಯಕ್ಷರಿರಬೇಕು. ಅವರಿಗೆ ಸಹಾಯಕವಾಗಿ ಜನರಲ್ ಮ್ಯಾನೇಜರ್ ಹಾಗೂ ಪೂರ್ಣಕಾಲಿಕ ವ್ಯವಸ್ಥಾಪಕ ನಿರ್ದೇಶಕರಿರಬೇಕು. ಆಡಳಿತ ಮಂಡಳಿಯಲ್ಲಿ ಬರೀ ಉದ್ಯಮಿಗಳೇ ಇರುವುದಕ್ಕೆ ಬದಲಾಗಿ ಅರ್ಥಶಾಸ್ತ್ರಜ್ಞರಿಗೂ ಆಡಳಿತ ತಜ್ಞರಿಗೂ ಲೆಕ್ಕಾಚಾರತಜ್ಞರಿಗೂ ಪ್ರಾತಿನಿದ್ಯವಿರಬೇಕು. ನಿಗಮದ ಶಾಖೆಗಳ ಕಛೇರಿಗಳಲ್ಲಿ ಪ್ರಾದೇಶಿಕ ಸಲಹಾಮಂಡಳಿ ಇರಬೇಕು. 2. ನಿಗಮವು ಸಮಗ್ರ ವಾರ್ಷಿಕ ವರದಿಯನ್ನು ಪ್ರಕಟಿಸಬೇಕು. ನಿಗಮದ ಯಾವುದೇ ನಿರ್ದೇಶಕ/ರಿಗೆ ಬೇರೆ ಯಾವುದೇ ಉದ್ಯಮ ಸಂಸ್ಥೆಯ ಸಂಬಂಧವಿದ್ದಲ್ಲಿ ಅದನ್ನು ಸ್ಪಷ್ಟಪಡಿಸಬೇಕು. 3 ಸಾಲ ಮಂಜೂರಾತಿಯಲ್ಲಿ ನಿಗಮ ಅನುಸರಿಸಬೇಕಾದ ನೀತಿ ನಿಯಮಗಳ ಬಗ್ಗೆ ಸರ್ಕಾರ ನಿಗಮಕ್ಕೆ ಸ್ಪಷ್ಟ ನಿರ್ದೇಶನಗಳನ್ನು ನೀಡಬೇಕು. ಹಿಂದುಳಿದ ಪ್ರದೇಶಗಳನ್ನು ಸರ್ಕಾರವೇ ಸಮೀಕ್ಷಿಸಿ ನಿರ್ದೇಶಿಸಬೇಕಲ್ಲದೆ ರೂ 50 ಲಕ್ಷಕ್ಕೂ ಮೀರಿದ ಸಾಲದ ಅರ್ಜಿಗಳನ್ನು ಸಚಿವಾಲಯದ ಪರಿಗಣನೆಗೆ ವಹಿಸಬೇಕು. ಸಣ್ಣ ಪುಟ್ಟ ತಿದ್ದುಪಡಿಗಳೊಡನೆ ಈ ವರದಿಯನ್ನು ಭಾರತ ಸರ್ಕಾರ ಅಂಗೀಕರಿಸಿದೆ. ರಾಜ್ಯ ಹಣಕಾಸು ನಿಗಮಗಳು : ಭಾರತದ ಕೈಗಾರಿಕಾ ಹಣಕಾಸು ನಿಗಮ ಅಖಿಲಭಾರತ ಮಟ್ಟದ ಸಂಸ್ಥೆ. ರಾಜ್ಯಗಳಲ್ಲಿಯ ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ನೆರವು ನೀಡಲು ಪ್ರತ್ಯೇಕ ನಿಗಮಗಳಿರಬೇಕೆಂದು ಜಾರಿಗೆ ಬಂದ 1951ರ ಅಧಿನಿಯಮದ ಪ್ರಕಾರ 1957 ಸೆಪ್ಟಂಬರ್ ತಿಂಗಳಿನಲ್ಲಿ ರಾಜ್ಯ ಹಣಕಾಸು ನಿಗಮಗಳು ಸ್ಥಾಪಿತವಾದುವು. ದೇಶದಲ್ಲಿ ಈಗ ಒಟ್ಟು 18 ರಾಜ್ಯ ಹಣಕಾಸು ನಿಗಮಗಳಿವೆ. ನಿಗಮಗಳ ಅಧಿಕೃತ ಬಂಡವಾಳವನ್ನು ರೂ. 50 ಲಕ್ಷ ಕನಿಷ್ಠ ಮತ್ತು ರೂ 5 ಕೋಟಿ ಗರಿಷ್ಠ ಮಿತಿಗಳಿಗೊಳಪಟ್ಟು ಆಯಾ ರಾಜ್ಯ ಸರ್ಕಾರಗಳು ನಿಗದಿಪಡಿಸುತ್ತವೆ. ಈ ರೀತಿ ನಿಗದಿಯಾದ ಬಂಡವಾಳವನ್ನು ಸಮಮೌಲ್ಯದ ಷೇರುಗಳಾಗಿ ವಿಭಜಿಸಲಾಗಿದ್ದು ಅವನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳು, ಭಾರತೀಯ ರಿಸರ್ವ್ ಬ್ಯಾಂಕ್, ಷೆಡ್ಯೂಲ್ಡ್ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಕೊಂಡಿವೆ. ಖಾಸಗಿ ವ್ಯಕ್ತಿಗಳೂ ನಿಗಮದ ಷೇರುದಾರರಾಗಿರುವುದುಂಟು. ಯಾವುದೇ ನಿಗಮದ ಷೇರು ಬಂಡವಾಳ ರೂ. 2 ಕೋಟಿ ಮೀರಬಾರದೆಂಬ ನಿಯಮವಿದೆ. ನಿಗಮ 18 ತಿಂಗಳುಗಳ ಅವಧಿಗೆ ರಿಸರ್ವ್ ಬ್ಯಾಂಕಿನಿಂದ ಸಾಲ ಪಡೆಯಬಹುದಲ್ಲದೆ ರಿಸರ್ವ್ ಬ್ಯಾಂಕಿನ ಅನುಮೋದನೆ ಪಡೆದು ರಾಜ್ಯ ಸರ್ಕಾರದಿಂದಲೂ ಸಾಲ ಪಡೆಯಬಹುದಾಗಿದೆ. ಪ್ರತಿಯೊಂದು ನಿಗಮದ ಆಡಳಿತವನ್ನೂ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯಕಾರಿ ಸಮಿತಿಯನ್ನೊಳಗೊಂಡ ನಿರ್ದೇಶಕರ ಮಂಡಳಿ ನಿರ್ವಹಿಸುತ್ತದೆ. ನಿಗಮ ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ಶಾಖೆಗಳನ್ನು ತೆರೆಯಬಹುದಾಗಿದೆ. ಕಾರ್ಯಗಳು : ರಾಜ್ಯ ಹಣಕಾಸು ನಿಗಮಗಳಿಂದ ವಿಧವಾದ ಕೈಗಾರಿಕೆಗಳೂ ನೆರವು ಕೋರಬಹುದು. ಈದೃಷ್ಟಿಯಿಂದ ನಿಗಮಗಳ ಕಾರ್ಯಕ್ಷೇತ್ರ ಭಾರತದ ಕೈಗಾರಿಕಾ ಹಣಕಾಸು ನಿಗಮಕ್ಕಿಂತ ವಿಶಾಲವಾದುದು. ರಾಜ್ಯ ಹಣಕಾಸು ನಿಗಮಗಳ ಕಾರ್ಯಕಲಾಪಗಳು ಈ ರೀತಿ ಇವೆ: ಕೈಗಾರಿಕಾ ಸಂಸ್ಥೆಗಳು ಸಾರ್ವಜನಿಕ ಹಣ ಪೇಟೆಯಲ್ಲಿ ಪಡೆದ 20 ವರ್ಷಗಳಿಗೆ ಮೀರಿದ ಸಾಲಗಳಿಗೆ ಖಾತರಿಯಾಗಿ ನಿಲ್ಲುವುದು. ಕೈಗಾರಿಕಾ ಸಂಸ್ಥೆಗಳ ಸ್ಟಾಕು, ಷೇರು, ಬಾಂಡು ಅಥವಾ ಡಿಬೆಂಚರುಗಳನ್ನು ಮಾರಾಟ ಮಾಡುವುದು. 20 ವರ್ಷಗಳಿಗೆ ಮೀರದ ಸಾಲಗಳನ್ನು ನೀಡುವುದು. ಸಂಸ್ಥೆಗಳ ಷೇರು, ಸ್ಟಾಕು ಮತ್ತು ಡಿಬೆಂಚರುಗಳನ್ನು ಕೊಳ್ಳುವುದರ ಮೂಲಕ ಹಣ ಒದಗಿಸುವುದು. ಈ ನಿಗಮಗಳು ಕಾರ್ಯ ಆರಂಭಿಸಿದಂದಿನಿಂದ 1980ರ ತನಕ ಮಂಜೂರು ಮಾಡಿದ ಸಾಲಗಳ ಮೊತ್ತ ರೂ 1268.5 ಕೋಟಿ. ರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ನಿಗಮ : ಹತ್ತಿ ಜವಳಿ ಕೈಗಾರಿಕೆ ಮತ್ತು ಸೆಣಬಿನ ಗಿರಣಿಗಳ ಸುಧಾರಣೆ ಹಾಗೂ ಅಧುನೀಕರಣ ಮತ್ತು ಯಂತ್ರ ಕೈಗಾರಿಕೆಯ ವಿಸ್ತರಣೆಗಾಗಿ ವಿಶೇಷ ಹಣಕಾಸಿನ ನೆರವು ನೀಡುವ ಉದ್ದೇಶದಿಂದ 1954ರಲ್ಲಿ ಈ ನಿಗಮವನ್ನು ಸ್ಥಾಪಿಸಲಾಯಿತು. ಕೈಗಾರಿಕಾ ಯೋಜನೆಗಳ ಪ್ರವರ್ತನೆ, ಸ್ಥಾಪನೆ, ಕಾರ್ಯಾಚರಣೆ ಹಾಗೂ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೋದ್ಯಮಗಳ ಸಾಮರಸ್ಯ ಸಾಧಿಸುವುದು ಇದರ ಗುರಿ. ನಿರ್ದಿಷ್ಟ ಉದ್ಯಮಗಳ ಆಧುನೀಕರಣ ಮತ್ತು ಅನಿವಾರ್ಯವಾದಲ್ಲಿ ರಾಷ್ಟ್ರೀಕರಣಕ್ಕೆ ಹಣ ಒದಗಿಸುವುದು. ಖಾಸಗಿ ಉದ್ಯಮಶೀಲರು ಆಕರ್ಷಿತರಾಗದಿರುವ ಕ್ಷೇತ್ರಗಳಲ್ಲಿ ಉದ್ಯಮ ಘಟಕಗಳನ್ನು ಯೋಜಿಸಿ ಅಭಿವೃದ್ಧಿ ಪಡಿಸುವುದು, ಕೈಗಾರಿಕೆಗಳಿಗೆ ತಾಂತ್ರಿಕ ಮತ್ತು ಸಲಹಾ ಸೇವೆಗಳನ್ನು ಒದಗಿಸುವುದು ಈ ನಿಗಮದ ಮುಖ್ಯ ಕಾರ್ಯಗಳು. ಇದು ವಿದೇಶಗಳಿಗೂ ಸೆಲಹಾ ಸೇವೆ ನೀಡುತ್ತದೆ. 1977-78ರ ಮೇಳೆಗೆ ವಿದೇಶಗಳಿಗೆ ನೀಡಿದ ಸಲಹಾ ಸೇವೆಗಳಿಂದ ಈ ನಿಗಮ ರೂ 50 ಲಕ್ಷ ವಿದೇಶೀ ವಿನಿಮಯ ಗಳಿಸಿತ್ತು. ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮಗಳು: 1960ರಿಂದೀಚೆಗೆ ಎಲ್ಲ ರಾಜ್ಯಗಳೂ ತಂತಮ್ಮ ಕೈಗಾರಿಕಾಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿಕೊಂಡಿವೆ. ಆಯಾರಾಜ್ಯದಲ್ಲಿಯ ಕೈಗಾರಿಕಾಭಿವೃದ್ಧಿಯನ್ನು ಪ್ರವರ್ತಿಸುವುದು ಈ ನಿಗಮಗಳ ಉದ್ದೇಶ. ಅದಕ್ಕಾಗಿ ಕೈಗಾರಿಕೆಗಳಿಗೆ ಸಾಲ ನೀಡುತ್ತವೆ. ಷೇರು, ಡಿಚೆಂಚರುಗಳನ್ನು ಕೊಂಡು ಹಣ ಒದÀಗಿಸುತ್ತವೆ. ಉದ್ಯಮಗಳಿಗೆ ನೇರವಾಗಿ ಸಹಾಯಮಾಡುವ ಅಧಿಕಾರ ಇವುಗಳಿಗಿದೆ. ದೇಶದಲ್ಲಿ ಸದ್ಯಕ್ಕೆ 19 ನಿಗಮಗಳಿವೆ. 1979ರ ವೇಳೆಗೆ ಈ ನಿಗಮಗಳು ಒಟ್ಟು 102 ಕೋಟಿ ರೂಗಳ ಸಾಲಗಳನ್ನು ಮಂಜೂರು ಮಾಡಿದ್ದುವು. ಭಾರತದ ಕೈಗಾರಿಕಾ ಸಾಲ ಮತ್ತು ವಿನಿಯೋಜನೆ ನಿಗಮ: ವಿಶೇಷವಾಗಿ ಖಾಸಗಿ ಕ್ಷೇತ್ರದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ವಿಶ್ವ ಬ್ಯಾಂಕಿನ ನಿಯೋಗವೊಂದರಿಂದ ಪ್ರವರ್ತನೆ ಗೊಂಡು ಕಂಪನಿ ಅಧಿನಿಯಮದನ್ವಯ 1955 ಜನವರಿ 5ರಂದು ಈ ನಿಗಮ ಅಸ್ತಿತ್ವಕ್ಕೆ ಬಂದಿತು. ಇದರ ಅಧಿಕೃತ ಬಂಡವಾಳ ರೂ 60 ಕೋಟಿ. ರೂ. 22 ಕೋಟಿ ಪಾವತಿಯಾದ ಬಂಡವಾಳ. ಅಗತ್ಯಬಿದ್ದಲ್ಲಿ ಇದು ಸಾಲ ಪಡೆಯುವ ಅಧಿಕಾರ ಪಡೆದಿದೆ. 11 ಜನ ನಿರ್ದೇಶಕರ ಮಂಡಳಿ ಆಡಳಿತ ನಿರ್ವಹಿಸುತ್ತದೆ. ಭಾರತೀಯ ಬ್ಯಾಂಕುಗಳು. ವಿಮಾ ಕಂಪನಿಗಳು, ಸಾರ್ವಜನಿಕರು ಅಲ್ಲದೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಹಣಕಾಸು ನಿಗಮಗಳು ಮತ್ತು ಬ್ರಿಟಿಷ್ ಪೌರಸ್ತ್ಯ ವಿನಿಮಯ ಬ್ಯಾಂಕುಗಳು ಈ ನಿಗಮದ ಷೇರು ಪಡೆದಿವೆ. ಹೊಸ ಉದ್ಯಮಗಳ ಸ್ಥಾಪನೆ, ಹಾಲಿ ಇರುವ ಉದ್ಯಮಗಳ ವಿಸ್ತರಣೆ, ಆಧುನೀಕರಣ ಮತ್ತು ತಾಂತ್ರಿಕಜ್ಞಾನದ ನೆರವು ನೀಡುವುದು ನಿಗಮದ ಮುಖ್ಯ ಕಾರ್ಯಭಾರಗಳು. ಈ ನಿಟ್ಟಿನಲ್ಲಿ ನಿಗಮ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲಗಳನ್ನು ನೀಡುತ್ತದೆ. ಉದ್ಯಮ ಸಂಸ್ಥೆಗಳ ಷೇರು ಡಿಬೆಂಚರುಗಳನ್ನು ಮಾರಾಟ ಮಾಡುತ್ತದೆ. ಖಾಸಗಿ ವಿನಿಯೋಜನ ಮೂಲಗಳಿಗೆ ಸಾಲದ ಖಾತರಿ ಒದಗಿಸುತ್ತದೆ. ತಾಂತ್ರಿಕ ಮತ್ತು ಆಡಳಿತಾತ್ಮಕ ಸಲಹೆ ಸೂಚನೆಗಳನ್ನು ನೀಡುತ್ತದೆ. ಸ್ಥಾಪನೆಯಾದಂದಿನಿಂದ 1981 ಮಾರ್ಚ್ ತನಕ ನಿಗಮ ಒಟ್ಟು ರೂ 1573 ಕೋಟಿ ಸಾಲಗಳನ್ನು ಮಂಜೂರು ಮಾಡಿದ್ದು ಅದರಲ್ಲಿ ರೂ 1089 ಕೋಟಿಗಳಷ್ಟನ್ನು ವಿತರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಹೊಸ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವತ್ತ ನಿಗಮ ಹೆಚ್ಚು ಆಸಕ್ತಿ ವಹಿಸುತ್ತಿದೆ. ಈ ಉದ್ದೇಶಕ್ಕಾಗಿ ನಿಗಮ 1981 ಮಾರ್ಚ್ ವೇಳೆಗೆ ಒಟ್ಟು 478 ಕೋಟಿ ಸಾಲಗಳನ್ನು ಮಂಜೂರು ಮಾಡಿತ್ತು. ಅದರಲ್ಲಿ ರೂ 295 ಕೋಟಿಯನ್ನು ವಿತರಿಸಿದೆ. ಭಾರತದ ಕೈಗಾರಿಕಾಭಿವೃದ್ಧಿ ಬ್ಯಾಂಕು: ಇಷ್ಟಾದರೂ ದೇಶದ ಕೈಗಾರಿಕಾ ಹಣಕಾಸು ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಲಾಗುತ್ತಿಲ್ಲ ಎಂಬ ಮನವರಿಕೆಯಿಂದ ಹೊಸದಾಗಿ ಪ್ರಾರಂಭವಾಗುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಕೈಗಾರಿಕೆಗಳ ಹಣಕಾಸು ಅಗತ್ಯಗಳನ್ನು ಪರಿಪೂರ್ಣವಾಗಿ ಪೂರೈಸುವ ಮತ್ತು ಇರುವ ಎಲ್ಲಾ ಕೈಗಾರಿಕಾ ಹಣಕಾಸು ಸಂಸ್ಥೆಗಳ ಕಾರ್ಯ ಕಲಾಪಗಳನ್ನು ತ್ವರಿತ ಕೈಗಾರಿಕೀಕರಣಕ್ಕೆ ಪೂರಕವಾಗಿ ಸಂಯೋಜಿಸುವ ಅವಳಿ ಉದ್ದೇಶಗಳಿಂದ ಸರ್ಕಾರ ಭಾರತದ ಕೈಗಾರಿಕಾಭಿವೃದ್ಧಿ ಬ್ಯಾಂಕನ್ನು 1964 ಜುಲೈ 16ರಂದು ಸ್ಥಾಪಿಸಿತು. ಭಾರತೀಯ ಕೈಗಾರಿಕಾ ಹಣಕಾಸು ಕ್ಷೇತ್ರದ ಸಂಸ್ಥೆಯಾಗಿರುವ ಈ ಬ್ಯಾಂಕು 1976ರ ತನಕ ಭಾರತದ ರಿಸರ್ವ್ ಬ್ಯಾಂಕಿನ ಅಧೀನ ಸಂಸ್ಥೆಯಾಗಿತ್ತು. ಈಗ ಇದು ಭಾರತ ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟಿದೆ. ಬ್ಯಾಂಕಿನ ಅಧಿಕೃತ ಬಂಡವಾಳ ರೂ 50 ಕೋಟಿ. ಇದನ್ನು ರೂ 100 ಕೋಟಿಗೆ ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಸ್ವಯಮಾಧಿಕಾರ(ಸ್ವಾಯತ್ತತೆ-ಂuಣoಟಿomಥಿ) ಹೊಂದಿರುವ ಬ್ಯಾಂಕಿನ ಆಡಳಿತವನ್ನು ರಿಸರ್ವ್ ಬ್ಯಾಂಕಿನ ಕೇಂದ್ರೀಯ ನಿರ್ದೇಶಕರ ಮಂಡಳಿಯನ್ನು ಹೋಲುವ ನಿರ್ದೇಶಕರ ಮಂಡಳಿ ನಿರ್ವಹಿಸುತ್ತದೆ. ವಿವಿಧ ರಾಜ್ಯ ಹಾಗೂ ಪಟ್ಟಣಗಳಲ್ಲಿ ಬ್ಯಾಂಕಿನ ಶಾಖೆಗಳನ್ನು ತೆರೆಯಲಾಗಿದೆ. ಕಾರ್ಯಭಾರಗಳು: ಕೈಗಾರಿಕಾಭಿವೃದ್ಧಿ ಬ್ಯಾಂಕಿನ ಕಾರ್ಯಭಾರಗಳನ್ನು ಮೂರು ಪ್ರತ್ಯೇಕ ಇಲಾಖೆಗಳಿಗೆ ವಹಿಸಲಾಗಿದೆ. ಸ್ವದೇಶೀ ಹಣಕಾಸು ಇಲಾಖೆ, ವಿದೇಶೀ ಹಣಕಾಸು ಇಲಾಖೆ ಮತ್ತು ಗ್ರಾಮೀಣ ಕೈಗಾರಿಕೆಗಳ ಇಲಾಖೆ. ಕೈಗಾರಿಕಾ ಸಂಸ್ಥೆಗಳಿಗೆ ರೂಪಾಯಿ ಸಾಲದ ವ್ಯವಹಾರಗಳನ್ನು ಸ್ವದೇಶೀ ಹಣಕಾಸು ಇಲಾಖೆ ನೋಡಿಕೊಳ್ಳುತ್ತದೆ. ವಿದೇಶೀ ಹಣಕಾಸು ಇಲಾಖೆ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯೇ ಮೊದಲಾದ ವಿದೇಶಿ. ಮೂಲಗಳಿಂದ ದೊರಕುವ ಸಾಲಗಳ ವ್ಯವಹಾರಗಳನ್ನು ನಿರ್ವಹಿಸುತ್ತದೆ. ಸಣ್ಣ ಹಾಗೂ ಗ್ರಾಮೀಣ ಕೈಗಾರಿಕೆಗಳ ಅಭಿವೃದ್ಧಿಗೆ ಸಂಬಂಧಪಟ್ಟ ವ್ಯವಹಾರಗಳನ್ನು ಗ್ರಾಮೀಣ ಕೈಗಾರಿಕೆಗಳ ಇಲಾಖೆ ನೋಡಿಕೊಳ್ಳತ್ತದೆ. ಬ್ಯಾಂಕಿನಿಂದ ಒದಗುವ ಹಣಕಾಸು ಮತ್ತು ಇತರ ಸಹಾಯ ಸವಲತ್ತುಗಳು ಈ ರೀತಿ ಇವೆ: ಪ್ರತ್ಯೇಕ ನೆರವು: ಕೈಗಾರಿಕಾಭಿವೃದ್ಧಿ ಬ್ಯಾಂಕ್ ಉದ್ಯಮ ಸಂಸ್ಥೆಗಳಿಗೆ ನೇರವಾಗಿ ಸಾಲಗಳನ್ನು ನೀಡುತ್ತದೆ. ಅವುಗಳ ಷೇರು ಮತ್ತು ಡಿಬೆಂಚರುಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡಿಕೊಡುವ ಜವಾಬ್ದಾರಿ ವಹಿಸುತ್ತದೆ. ಭಾರತದ ಕೈಗಾರಿಕಾ ಹಣಕಾಸು ನಿಗಮ, ರಾಜ್ಯ ಸಹಕಾರಿ ಬ್ಯಾಂಕ್, ಅನುಸೂಚಿತ ಬ್ಯಾಂಕುಗಳು ಮತ್ತಿತರ ಹಣಕಾಸು ಸಂಸ್ಥೆಗಳಿಂದ ಉದ್ಯಮ ಸಂಸ್ಥೆಗಳು ಪಡೆಯುವ ಸಾಲಗಳಿಗೆ ಈ ಬ್ಯಾಂಕ್ ಖಾತರಿ ನೀಡುತ್ತದೆ. ಹೀಗೆ ಉದ್ಯಮ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ನೆರವಾಗುವ ವಿಚಾರದಲ್ಲಿ ಕೈಗಾರಿಕಾಭಿವೃದ್ಧಿ ಬ್ಯಾಂಕ್ ಭಾರತದ ಕೈಗಾರಿಕಾ ಹಣಕಾಸು ನಿಗಮವನ್ನು ಮತ್ತು ಭಾರತದ ಕೈಗಾರಿಕಾ ಸಾಲ ಮತ್ತು ವಿನಿಯೋಜನೆಯ ನಿಗಮವನ್ನು ಹೋಲುತ್ತದೆ. ಪರೋಕ್ಷ ನೆರವು: ಕೈಗಾರಿಕಾಭಿವೃದ್ಧಿ ಬ್ಯಾಂಕ್ ಉದ್ಯಮ ಸಂಸ್ಥೆಗಳಿಗೆ ಪರೋಕ್ಷವಾಗಿ ನೆರವು ನಿಡುವುದುಂಟು. ಉದ್ಯಮ ಸಂಸ್ಥೆಗಳು ಭಾರತದ ಕೈಗಾರಿಕಾ ಹಣಕಾಸು ನಿಗಮದಿಂದ, ರಾಜ್ಯ ಸಹಕಾರಿ ಬ್ಯಾಂಕಿನಿಂದ ಮತ್ತು ಇತರ ಮೂಲಗಳಿಂದ ಪಡೆಯುವ 3ರಿಂದ 25 ವರ್ಷಗಳ ಅವಧಿ ಸಾಲಗಳಿಗೂ ಯಾವುದೇ ಬ್ಯಾಂಕುಗಳಿಂದ ಪಡೆಯುವ 3ರಿಂದ 10 ವರ್ಷಗಳ ತನಕದ ಅವಧಿಯ ಸಾಲಗಳಿಗೂ ಮತ್ತು ರಫ್ತು ಮಾಡುವ ಉದ್ದೇಶದಿಂದ ಪಡೆದ ಸಾಲಗಳಿಗೂ ಕೈಗಾರಿಕಾಭಿವೃದ್ಧಿ ಬ್ಯಾಂಕು ಮರು ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತದೆ. ವಿಶೇಷ ನೆರವು: 1984ರ ಭಾರತದ ಕೈಗಾರಿಕಾಭಿವೃದ್ದಿ ಬ್ಯಾಂಕ್ ಅಧಿನಿಯಮದ ಮೇರೆಗೆ ಅಭಿವೃದ್ಧಿ ನೆರವು ನಿಧಿ ಸ್ಥಾಪಿತವಾಗಿದೆ. ಬೇರೆ ಯಾವ ಮೂಲಗಳಿಂದಲೂ ಹಣಕಾಸು ನೆರವು ಪಡೆಯಲಾಗದೆ ಇರುವ ಉದ್ಯಮ ಸಂಸ್ಥೆಗಳಿಗೆ ಈ ನಿಧಿಯಿಂದ ನೆರವು ನೀಡಲಾಗುತ್ತಿದೆ. 1964ರಿಂದ 1981 ಜೂನ್ ತನಕ ಬ್ಯಾಂಕ್ ಒಟ್ಟು 7088 ಕೋಟಿ ರೂಗಳ ಪ್ರತ್ಯಕ್ಷ ಸಾಲ ಮಂಜೂರುಮಾಡಿದ್ದು ಅದರಲ್ಲಿ ರೂ 4730 ಕೋಟಿ ಸಾಲ ವಿತರಣೆಯಾಗಿದೆ. ಇದೇ ಅವಧಿಯಲ್ಲಿ 2560 ಕೋಟಿ ರೂಗಳ ಹಣಕಾಸಿನ ನೆರವು ನೀಡಲಾಗಿದೆ. ಹಿಂದುಳಿದ ಪ್ರದೇಶಗಳ ಆಭಿವೃದ್ಧಿಗಾಗಿ: ಆರ್ಥಿಕವಾಗಿ ಹಿಂದುಳಿದಿರುವ ಪ್ರದೇಶಗಳಲ್ಲಿ ಕೈಗಾರಿಕಾಭಿವೃದ್ಧಿಯನ್ನು ಪ್ರವರ್ತಿಸುವ ಸಲುವಾಗಿ 1969 ಜುಲೈ ತಿಂಗಳಿನಿಂದ ಕೈಗಾರಿಕಾಭಿವೃದ್ದಿ ಬ್ಯಾಂಕ್ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಇದರ ಅನ್ವಯ ಹಿಂದುಳಿದ ಪ್ರದೇಶದಲ್ಲಿ ಪ್ರಾರಂಭವಾಗಿರುವ ಕೈಗಾರಿಕೆಗಳಿಗೆ ಭಾರತದ ಕೈಗಾರಿಕಾ ಹಣಕಾಸು ನಿಗಮ ಮತ್ತು ಭಾರತದ ಕೈಗಾರಿಕಾ ಸಾಲ ಹಾಗೂ ವಿನಿಯೋಜನೆಯ ನಿಗಮಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಕೈಗಾರಿಕೆಯೊಂದಕ್ಕೆ 2 ಕೋಟಿ ರೂಪಾಯಿಗಳ ವರೆಗೆ ಸಾಲ ಒದಗಿಸುವ ಗುರಿ ಇದೆ. 1980-81ರಲ್ಲಿಯೇ 745 ಕೋಟಿ ರೂಪಾಯಿಗಳ ಸಾಲ ಮಂಜೂರಾಗಿದ್ದು 416 ಕೋಟಿ ರೂಗಳಷ್ಟು ಸಾಲ ವಿತರಣೆಯಾಗಿತ್ತು. ಸಣ್ಣ ಕೈಗಾರಿಕೆಗಳಿಗೆ ನೆರವು : ರಾಜ್ಯ ಮಟ್ಟದ ಕಾನೂನುಬದ್ಧ ಹಣಕಾಸು ಸಂಸ್ಥೆಗಳು ಮತ್ತು ವಾಣಿಜ್ಯ ಬ್ಯಾಂಕುಗಳು ನೀಡಿದ ಸಾಲಗಳಿಗೆ ಮರುಹಣಕಾಸು ಸೌಲಭ್ಯ ಒದಗಿಸುವುದರ ಮೂಲಕ ಸಣ್ಣ ಕೈಗಾರಿಕೆಗಳು ಮತ್ತು ಸರಕುಸಾಗಣೆ ವಾಹನಗಳನ್ನು ಕೊಳ್ಳಲು ಕೈಗಾರಿಕಾಭಿವೃದ್ಧಿ ಬ್ಯಾಂಕ್ ನೆರವು ನೀಡುತ್ತದೆ. ಟ್ರ್ರಕ್ಕು, ಜೀಪು ಇತ್ಯಾದಿ ಸರಕು ಸಾಗಣೆ ವಾಹನಗಳನ್ನು ಖರೀದಿಸಲು ವಾಗ್ದಾನ ಪತ್ರಗಳ ಆಧಾರದ ಮೇಲೆ ಸಾಲ ಒದಗಿಸಲಾಗುವುದು. ಈ ಉದ್ದೇಶಗಳಿಗಾಗಿ 1980-81ರಲ್ಲಿ ಒಟ್ಟು ರೂ 469 ಕೋಟಿ ಸಾಲ ಮಂಜೂರು ಮಾಡಲಾಗಿದೆ. ಸಂತುಲಿತ ಪ್ರಾದೇಶಿಕ ಬೆಳೆವಣಿಗೆ: ಕೈಗಾರಿಕಾಭಿವೃದ್ಧಿ ಮತ್ತು ಸಂತುಲಿತದ ಪ್ರಾದೇಶಿಕ ಬೆಳವಣಿಗೆಯ ಉದ್ದೇಶ ದ್ವಯಗಳನ್ನು ಈಡೇರಿಸುವ ಸಲುವಾಗಿ 1970 ಲಾಗಾಯ್ತು ಕೈಗಾರಿಕಾಭಿವೃದ್ಧಿ ಬ್ಯಾಂಕ್ ಕೆಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಂಡಿದೆ. ಇತರ ವಾಯಿದೆಬದ್ಧ ಸಾಲಿಗ ಸಂಸ್ಥೆಗಳ ಜತೆಗೂಡಿ ಇಡೀ ದೇಶದ ಕೈಗಾರಿಕಾಭಿವೃದ್ಧಿ ಕೈಗೊಂಡಿದೆ. ಇತರ ವಾಯಿದೆಬದ್ಧ ಸಾಲಿಗ ಸಂಸ್ಥೆಗಳ ಜತೆಗೂಡಿ ಇಡೀ ದೇಶದ ಕೈಗಾರಿಕಾ ಸಾಮಥ್ರ್ಯ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಒಟ್ಟು 389 ಕೈಗಾರಿಕಾ ಯೋಜನೆಗಳನ್ನು ಗುರುತಿಸಲಾಗಿದೆ. ಈ ಪೈಕಿ ರೂ 283 ಕೋಟಿ ವಿನಿಯೋಜನೆಯನ್ನು ಒಳಗೊಂಡಿರುವ 74 ಯೋಜನೆಗಳು ಕಾರ್ಯಗತವಾಗಿವೆ. ಉದಾರ ಸಾಲದ ಯೋಜನೆ : ಸಿಮೆಂಟು, ಹತ್ತಿಗಿರಣಿ, ಸಣಬು, ಸಕ್ಕರೆ ಮತ್ತು ಕೆಲವು ಯಾಂತ್ರಿಕ ಕೈಗಾರಿಕಾ ಘಟಕಗಳು ತಮ್ಯ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವಂತೆ ಆಧುನೀಕರಿಸುವ ಉದ್ದೇಶದಿಂದ 1976ರಲ್ಲಿ ಅವಕ್ಕೆ ಉದಾರ ಸಾಲದ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯ ಅನ್ವಯ ತಾಂತ್ರಿಕವಾಗಿ ಹಿಂದುಳಿದಿರುವ ಉತ್ಪಾದನ ಘಟಕಗಳಿಗೆ ಶೇಕಡಾ 7.5ರ ಬಡ್ಡಿಯ ದರದಲ್ಲಿ 15 ವರ್ಷಗಳ ಅವಧಿಗೆ ಸಾಲ ಒದಗಿಸಲಾಗುವುದು. ಭಾರತದ ಕೈಗಾರಿಕಾ ಹಣಕಾಸು ನಿಗಮ ಮತ್ತು ಭಾರತದ ಕೈಗಾರಿಕಾ ಉದ್ದರಿ ಮತ್ತು ವಿನಿಯೋಜನ ನಿಗಮಗಳ ಹಣಕಾಸು ಸಹಭಾಗಿತ್ವದಲ್ಲಿ ಕಾರ್ಯಗತವಾಗುತ್ತಿರುವ ಈ ಯೋಜನೆಯ ಅಂಗವಾಗಿ 1981 ಜೂನ್ ತನಕ ರೂ 324 ಕೋಟಿ ನೆರವು ನೀಡಲಾಯಿತು. ಭಾರತದ ಯೂನಿಟ್ ಟ್ರಸ್ಟ್: ಜನತೆಯ ಉಳಿತಾಯವನ್ನು ಕ್ರೋಡೀಕರಿಸಿ ಅದನ್ನು ಲಾಭದಾಯಕವಾಗಿ ಕೈಗಾರಿಕಾಭಿವೃದ್ಧಿ ಕಾರ್ಯಗಳಲ್ಲಿ ವಿನಿಯೋಗಿಸುವುದರ ಮೂಲಕ ಅರ್ಥವ್ಯವಸ್ಥೆಯಲ್ಲಿ ಕೈಗಾರಿಕಾ ಪ್ರಗತಿಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತದ ಯೂನಿಟ್ ಟ್ರಸ್ಟ್ ಸಂಸ್ಥೆ 1964 ಫೆಬ್ರುವರಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ಟ್ರಸ್ಟಿನ ಮೂಲ ಬಂಡವಾಳ 5 ಕೋಟಿ ರೂಗಳು. ಈ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್, ಜೀವ ವಿಮಾ ನಿಗಮ, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಅದರ ಸಹಾಯಕ ಬ್ಯಾಂಕುಗಳು, ಅನುಸೂಚಿತ ಬ್ಯಾಂಕುಗಳು ಮತ್ತು ಇದರ ಹಣಕಾಸು ಸಂಸ್ಥೆಗಳು ನೀಡಿವೆ. ಟ್ರಸ್ಟಿನ ಆಡಳಿತವನ್ನು ಟ್ರಸ್ಟಿಗಳ ಮಂಡಳಿ ನಿರ್ವಹಿಸುತ್ತದೆ. ಟ್ರಸ್ಟಿನ ಮೂಲಭೂತ ಉದ್ದೇಶಗಳು ಎರಡು: ಕಡಿಮೆ ಆದಾಯದ ಮತ್ತು ಮಧ್ಯಮವರ್ಗದ ಜನರಲ್ಲಿ ಉಳಿತಾಯ ಪ್ರವೃತ್ತಿಯನ್ನು ಉತ್ತೇಜಿಸಿ ಉಳಿತಾಯ ಮಾಡಿದ ಹಣವನ್ನು ಸಂಗ್ರಹಿಸುವುದು ಮತ್ತು ವಿಸ್ತøತಗೊಳ್ಳುತ್ತಿರುವ ದೇಶದ ಕೈಗಾರಿಕೀಕರಣದಲ್ಲಿ ಈ ವರ್ಗದ ಜನರೂ ಪಾಲುದಾರರಾಗುವಂತೆ ಮಾಡುವುದು. ಈ ಎರಡು ಮೂಲಭೂತ ಉದ್ದೇಶಗಳ ಸಾಧನೆಗೆ ಟ್ರಸ್ಟು ಮೂರು ವಿಧಾನಗಳನ್ನು ಅನುಸರಿಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಯೂನಿಟ್ಟುಗಳನ್ನು ಮಾರಾಟ ಮಾಡಲೆತ್ನಿಸುವುದು. ಯೂನಿಟ್ಟುಗಳ ಮಾರಾಟದಿಂದ ಬಂದ ಹಣವನ್ನು ಕೈಗಾರಿಕಾ ಸಂಸ್ಥೆಗಳ ಸಾಲಪತ್ರಗಳಲ್ಲಿ ವಿನಿಯೋಜಿಸುವುದು; ಅನುಸೂಚಿತ ಬ್ಯಾಂಕುಗಳಲ್ಲಿ ಠೇವಣಿ ಇಡುವುದು. ಯೂನಿಟ್ಟುಗಳನ್ನು ಕೊಂಡವರಿಗೆ ಲಾಭಾಂಶ ನೀಡುವುದರ ಮೂಲಕ ಉಳಿತಾಯ ಪ್ರವೃತಿಯನ್ನು ಉತ್ತೇಜಿಸುವುದು. 1981-82ರ ತನಕ 6.5 ಲಕ್ಷ ಜನರು ಯೂನಿಟ್ಟುಗಳನ್ನು ಕೊಂಡಿದ್ದಾರೆ. ಆ ಮೂಲಕ ರೂ 391 ಕೋಟಿ ಸಂಗ್ರಹವಾಗಿದೆ. ಈ ಹಣದಲ್ಲಿ, ಶೇಕಡಾ 27ರಷ್ಟನ್ನು ಸಾಮಾನ್ಯ ಷೇರುಗಳಲ್ಲೂ 27ರಷ್ಟನ್ನು ಅಧಿಮಾನ ಷೇರುಗಳಲ್ಲೂ ವಿನಿಯೋಜಿಸಲಾಗಿದೆ. ಉಳಿದ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದೆ. ರೂ 250 ಕೋಟಿಯನ್ನು ಸಾಲಪತ್ರಗಳಲ್ಲಿ ವಿನಿಯೋಜಿಸಲಾಗಿದೆ. 1976ರಲ್ಲಿ ಯೂನಿಟ್ ಟ್ರಸ್ಟ್ ಬಂಡವಾಳ ಯೂನಿಟ್ ಯೋಜನೆಯನ್ನು ಆರಂಭಿಸಿತು. ಇದರ ಉದ್ದೇಶ ಉತ್ತಮ ಭವಿಷ್ಯವಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಉದ್ಯಮ ಕಂಪನಿಗಳ ಷೇರುಗಳನ್ನು ಕೊಳ್ಳುವುದರ ಮೂಲಕ ಯೂನಿಟ್ಟುದಾರರಿಗೆ ಉತ್ತಮ ಲಾಭಾಂಶ ದೊರಕಿಸಿಕೊಡುವುದು ಮತ್ತು ಆ ಮೂಲಕ ದೇಶದ ಉಳಿತಾಯವನ್ನು ಉತ್ತಮಪಡಿಸುವುದು. ಭಾರತದ ಕೈಗಾರಿಕಾ ಪುನಾರಚನಾ ನಿಗಮ : ಭಾರತೀಯ ಕಂಪನಿ ಅಧಿನಿಯಮದನ್ವಯ 1971 ಏಪ್ರಿಲ್‍ನಲ್ಲಿ ಈ ನಿಗಮ ಸ್ಥಾಪಿತವಾಯಿತು. ನಿಂತು ಹೋದ ಮತ್ತು ಅಸ್ವಸ್ಥ ಕೈಗಾರಿಕಾ ಘಟಕಗಳಿಗೆ ಷೇರು ಬಂಡವಾಳ ಒದಗಿಸುವುದು. ಸಾಲ ನೀಡುವುದು, ತಾಂತ್ರಿಕ ಮಾರ್ಗದರ್ಶನ ನೀಡುವುದು ಮತ್ತು ಕಾರ್ಮಿಕ ಮಾಲೀಕ ಸಂಬಂಧಗಳನ್ನು ಉತ್ತಮ ಪಡಿಸುವುದರ ಮೂಲಕ ಘಟಕಗಳನ್ನು ಪುನಶ್ಚೇತನಗೊಳಿಸುವುದೇ ನಿಗಮದ ಪ್ರಧಾನ ಗುರಿ. ಅಗತ್ಯಬಿದ್ದಲ್ಲಿ ಅಂಥ ಘಟಕಗಳನ್ನು ತಾನೇ ವಹಿಸಿಕೊಂಡು ನಡೆಸುತ್ತದೆ. ಇದರ ಆಡಳಿತವನ್ನು ನಿರ್ದೇಶಕರ ಮಂಡಳಿಯೊಂದಕ್ಕೆ ವಹಿಸಲಾಗಿದೆ. ದೈನಂದಿನ ಕಾಯಾಚರಣೆಯನ್ನು ಭಾರತದ ಕೈಗಾರಿಕಾಭಿವೃದ್ಧಿ ಬ್ಯಾಂಕಿನಿಂದ ನೇಮಕಗೊಂಡ ವ್ಯವಸ್ಥಾಪಕ ನಿರ್ದೇಶಕ ನಿರ್ವಹಿಸುತ್ತಾನೆ. 1971ರಿಂದ 1981 ಮಾರ್ಚ್ ತನಕ ನಿಗಮ ಒಟ್ಟು 97 ಅಸ್ವಸ್ಥ ಹಾಗೂ ನಿಂತುಹೋದ ಕೈಗಾರಿಕಾ ಘಟಕಗಳಿಗೆ ರೂ 96 ಕೋಟಿ ನೆರವು ನೀಡಿದೆ. ಭಾರತದ ಪ್ರಮುಖ ಕೈಗಾರಿಕಾ ಹಣಕಾಸು ಸಂಸ್ಥೆಗಳು 1980-81ರಲ್ಲಿ ಒಟ್ಟು ರೂ 1373.72 ಕೋಟಿ, 1981-82ರಲ್ಲಿ ರೂ 1735.37 ಕೋಟಿ ನೆರವು ನೀಡಿವೆ. ಹಾಗೇ 1980-81ರಲ್ಲಿ ಷೇರು ಮತ್ತು ಡಿಬೆಂಚರುಗಳನ್ನು ಕೊಳ್ಳುವ ಮೂಲಕ ಒಟ್ಟು ರೂ 51-67 ಕೋಟಿಯನ್ನು ವಿತರಣೆಮಾಡಿವೆ.

(ಕೆ.ಜಿಒ.) (ಪರಿಷ್ಕರಣೆ: ಜಿ.ಆರ್.ವಿ,; ವೈ.ಕೆ)