ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತಿಯಾರ್, ಶುದ್ಧಾನಂದ

ವಿಕಿಸೋರ್ಸ್ದಿಂದ

ಭಾರತಿಯಾರ್, ಶುದ್ಧಾನಂದ 1897, ಕವಿ, ಯೋಗಿ, ಸಂನ್ಯಾಸಿ. ತಮಿಳುನಾಡಿನ ರಾಮನಾಥಪುರ ಜಿಲ್ಲೆಯ ಶಿವಗಂಗೈನಲ್ಲಿ ಜನನ. ಜೀವನದುದ್ದಕ್ಕೂ ವಿರಕ್ತಿಮಾರ್ಗ ಅನುಸರಿಸಿದ ಇವರು ಇಂದಿಗೂ ಸಂನ್ಯಾಸಿಯಾಗಿಯೇ ಉಳಿದಿದ್ದಾರೆ. ಮದರಾಸಿನ ಅಡೈಯಾರ್‍ನಲ್ಲಿರುವ ಯೋಗ ಸಮಾಜದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಮಿಳು ಮಾತ್ರವಲ್ಲದೆ ಇಂಗ್ಲಿಷ್, ಫ್ರೆಂಚ್, ತೆಲುಗು ಕನ್ನಡ, ಮಲಯಾಳ ಮೊದಲಾದ ಅನೇಕ ಭಾಷೆಗಳನ್ನೂ ಇವರು ಚೆನ್ನಾಗಿ ಬಲ್ಲರು. ತಮಿಳಿನಲ್ಲಿ ಯೋಗಸಿದ್ಧಿ (1940); ಕಾಲತ್ತೆರ್ (ಕಾಲವೆಂಬರಥ); ಭಾರತ ಶಕ್ತಿ (1945) ಎಂಬ ಕೃತಿಗಳನ್ನೂ ಅಲ್ಲದೆ ಕಾವ್ಯ. ಗೀತನಾಟಕ, ಕೀರ್ತನೆಗಳು ಮುಂತಾದ ಅನೇಕ ಕೃತಿಗಳನ್ನೂ ರಚಿಸಿದ್ದಾರೆ. ಇಂಗ್ಲಿಷಿನಲ್ಲಿ ದಿ ಗಾಸ್ಪಲ್ ಆಫ್ ಪರ್‍ಫಕ್ಟ್ ಲೈಫ್, ಶ್ರೀಅರಬಿಂದೊ, ದಿ ಡಿವೈನ್ ಮಾಸ್ಟರ್ ಸೇಂಟ್ ವೆಲ್ಲೂವರ್ ಅಂಡ್ ಕುರುಳ್, ಫ್ಯೂಚರ್ ಆಫ್ ಮ್ಯಾನ್‍ಕೈಂಡ್ ಮೊದಲಾದ 50ಕ್ಕೂ ಹೆಚ್ಚು ಕೃತಿಗಳನ್ನೂ ಫ್ರೆಂಚ್‍ನಲ್ಲಿ ಆರು, ತೆಲುಗಿನಲ್ಲಿ ಮೂರು, ಹಿಂದಿಯಲ್ಲಿ ನಾಲ್ಕು ಕೃತಿಗಳನ್ನೂ, ಹೀಗೆ 173ಕ್ಕೂ ಹಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರು ಕವಿಯೋಗಿ, ಮಹಾಋಷಿ ಮೊದಲಾದ ಹಲವು ಬಿರುದುಗಳಿವೆ. ಇವರು ತಮ್ಮ ಕವಿತೆಗಳಲ್ಲಿ ಹೊಸ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಇವರ ಕವಿತೆಗಳಲ್ಲಿ ದೇಶಾಭಿಮಾನ, ಮತೀಯ ಶ್ರದ್ಧಾಭಕ್ತಿ ಎದ್ದು ಕಾಣುತ್ತವೆ. ಇವರ ಭಾರತಶಕ್ತಿ ಒಂದು ಮಹಾಕಾವ್ಯ. (ಎಸ್.ಕೆ.ಬಿ.)