ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತೀಯ ಚಲನಚಿತ್ರ
ಭಾರತೀಯ ಚಲನಚಿತ್ರ
ಮೂಕಿಯುಗ (1896-1933)
ಸಿನಿಮಾ ಎಂಬ ಪ್ರಕಾರ ಭಾರತಕ್ಕೆ ಹೊಸದಾದರೂ ಅದನ್ನು ಹೋಲುವ ಕಲೆ, ಇಲ್ಲಿತ್ತು. ಶಾಂಬ್ರಿಕ್ ಖರೋಲಿಕ ಎಂದು ಪ್ರಚಲಿತವಿದ್ದ ಕಲೆ ಮಾಯಾ ಲಾಂದ್ರ - ಮ್ಯೂಜಿಕ್ ಲ್ಯಾನ್‍ಟ್ರನ್ ಸುಧಾರಿತ ರೂಪ ಪೂನಾದ ಮಹದೇವರಾವ್ ಗೋಪಾಲ್ ಪಟವರ್ಧನ್ ಮತ್ತು ವಿನಾಯಕ ಮಹದೇವ ಪಟವರ್ಧನ ಅವರ ಮಕ್ಕಳು, ಮಾಯಾ ಲಾಂದ್ರ ಬಳಸಿ ಜಾಗಿನ ಫಲಕದ ಮೇಲೆ ಬಿಡಿ ವರ್ಣ ಚಿತ್ರಗಳನ್ನು ಕೈ ಚಳಕದ ಮೂಲಕ ಚಲಿಸುವಂತೆ ಮಾಡಿ, ಚಲನಚಿತ್ರದ ಭ್ರಮೆ ಉಂಟು ಮಾಡುತ್ತಿದ್ದರು. ಪೌರಾಣಿಕ ಕತೆ, ಗಾಯನ ನಿರೂಪಣೆ ಹಿನ್ನೆಲೆಯಲ್ಲಿ, ವ್ಯಾಪಾರ ದೃಷ್ಟಿಯಿಂದಲೂ ಈ ಮಾಯಾಲಾಂದ್ರ ನಿರೂಪಣೆ ಯಶಸ್ವಿಯಾಗಿತ್ತು.
ಪ್ರಪಂಚದಲ್ಲಿ ಪರಿಚಿತವಾದ ಆರು ತಿಂಗಳ ಒಳಗಾಗಿಯೇ ಸಿನಿಮಾ ಭಾರತಕ್ಕೆ ಬಂದಿತು. ಲ್ಯುಮಿಯೆರ್ ಪ್ರತಿನಿಧಿ ಮಾರಿಸ್ ಸೆಸ್ಟೈಯರ್ (ಒಚಿuಡಿiಛಿe Sesಣಚಿiಡಿ) 1896ನೇ ಜುಲೈ 7ರಂದು ಮುಂಬಯಿಯ ಗೇಟ್ ವೇ ಆಫ್ ಇಂಡಿಯಾಕ್ಕೆ ಹೋಗುವ ದಾರಿಯಲ್ಲಿದ್ದ ವ್ಯಾಟ್ಸನ್ ಹೋಟಲ್‍ನಲ್ಲಿ ಭಾರತದಲ್ಲಿನ ಮೊದಲ ಪ್ರದರ್ಶನ ನೀಡಿದ. ದಿನಕ್ಕೆ ನಾಲ್ಕು ಪ್ರದರ್ಶನಗಳು. ಪ್ರವೇಶಧನ ಒಂದು ರೂಪಾಯಿ. ಎಂಟ್ರಿ ಆಫ್ ಸಿನಿಮಾಟೋಗ್ರಾಫಿ, ಅರೈವಲ್ ಆಫ್ ಎ ಟ್ರೈನ್, ಎ ಡೆಮಾಲಿಷನ್ “ಲೀವಿಂಗ್ ದಿ ಫ್ಯಾಕ್ಟರಿ”, “ಲೇಡೀಸ್ ಅಂಡ್ ಸೋಲ್ಜರ್ಸ್ ಅನ್ ದಿ ವೀಲ್ಸ್ ಮುಂತಾದ ಚಿತ್ರಗಳು ಮುಂದಿನ 35 ದಿನಗಳ ಕಾಲ ಅಲ್ಲಿ ಯಶಸ್ವಿ ಪ್ರದರ್ಶನವನ್ನು ಕಂಡವು. ಕ್ರಮೇಣ ಸ್ಟುವರ್ಟ್‍ನ ವಿಟಾಗ್ರಾಫ್, ಮೋಟಾ ಸ್ಕೋಪ್ ಆಂಡರ್‍ಸನ್ಸ್ ಸ್ಕೋಪ್ ಗ್ರಾಫ್ ಮುಂತಾದ ಸಂಸ್ಥೆಗಳ ಚಿತ್ರಗಳೂ ಭಾರತಕ್ಕೆ ಬಂದವು. ಲ್ಯೂಮಿಯರ್ ಸೋದರರ ಚಿತ್ರಗಳನ್ನು ನೋಡಿದವರಲ್ಲಿ ಒಬ್ಬರಾದ ಹರಿಶ್ಚಂದ್ರ ಸಖಾರಾಮ್ ಭಾಟ್‍ವಾಡೇಕರ್ (ಸಾವೇದಾದಾ) ಪ್ರೊಜೆಕ್ಟರ್ ಮತ್ತು ಕೆಲ ಕಿರುಚಿತ್ರಗಳನ್ನು ಕೊಂಡರು. ಶ್ರೀಮಂತರ ಮನೆಯಲ್ಲಿ ಖಾಸಗಿ ಪ್ರದರ್ಶನವನ್ನು ಅವರು ಏರ್ಪಡಿಸುತ್ತಿದ್ದರು. ವಿದೇಶಿ ಛಾಯಾಗ್ರಾಹಕರು ಭಾರತೀಯ ಹಿನ್ನೆಲೆ ಚಿತ್ರಗಳನ್ನು ತಯಾರಿಸಲಾರಂಭಿಸಿದ್ದನ್ನು ಕಂಡು ಆಕರ್ಷಿತರಾದ ಸಾವೇದಾದ 1899ರಲ್ಲಿ ಕ್ಯಾಮರ ಖರೀದಿಸಿ ಭಾರತೀಯ ಹಿನ್ನೆಲೆ ಚಿತ್ರಗಳನ್ನು ತಯಾರಿಸಲಾರಂಭಿಸಿದರು. 1903ರಲ್ಲಿ ವೈಸರಾಯ್, ಲಾರ್ಡ್ ಕರ್ಜನರ ದೆಹಲಿ ದರ್ಬಾರನ್ನು ಚಿತ್ರಿಸಿ ಎಲ್ಲರ ಮೆಚ್ಚುಗೆ ಪಡೆದರು. ಅವರ ಚಿತ್ರಗಳನ್ನು ನೋಡಿ ಪ್ರಭಾವಿತರಾದ ಮದರಾಸಿನ ಆರ್. ವೆಂಕಯ್ಯ, ತಮ್ಮ ಮಗ ಆರ್. ಪ್ರಕಾಶರನ್ನು ಜರ್ಮನಿಗೆ ತರಬೇತಿ ಪಡೆಯಲು ಕಳುಹಿಸಿದರು. ಪ್ರಕಾಶ್ ಸಿಸಿಲ್. ಬಿ. ಡಿಮಿಲಿ ಅವರ ಸಹಾಯಕರಾಗಿ ದುಡಿದು ಅನುಭವಗಳಿಸಿದ ನಂತರ ಭಾರತಕ್ಕೆ ಹಿಂತಿರುಗಿ ಭೀಷ್ಮ ಪ್ರತಿಜ್ಞಾ (1921) ಚಿತ್ರವನ್ನು ಚಿತ್ರಿಸಿದರು. ಮೂಕಿಚಿತ್ರ ತಯಾರಿಕೆ ಬೇಗ ದೇಶಾದ್ಯಂತ ಆಸಕ್ತಿ ಸೆಳೆದುಕೊಂಡಿತು. ಅನೇಕ ಭಾರತೀಯ ಉದ್ಯಮಶೀಲರನ್ನು ಆಕರ್ಷಿಸಿತು. ಆರಂಭದಲ್ಲಿ ಸಂಚಾರಿ ಸಿನಿಮಾಗಳು, ಅನಂತರ ಪಟ್ಟಣಗಳಲ್ಲಿ ಖಾಯಂ ಪ್ರದರ್ಶನ ಮಂದಿರಗಳು ಆರಂಭವಾದವು. ಹಾಗೆಯೇ ನಿರ್ಮಾಣ ಚಟುವಟಿಕೆಗಳೂ ಬೆಳೆದವು. ಕಲ್ಕತ್ತದಲ್ಲಿ ತಯಾರಾದ ಫ್ಲವರ್ ಆಫ್ ಪರ್ಷಿಯಾ ಕಿರುಚಿತ್ರ ಕಲ್ಕತ್ತೆಯ ಸ್ಟಾರ್ ಚಿತ್ರಮಂದಿರದಲ್ಲಿ 1899ರ ಫೆಬ್ರವರಿ 9ರಂದು ತೆರೆ ಕಂಡಿತು. ಇದರಿಂದ ಪ್ರೇರಿತರಾದ ಕಲ್ಕತ್ತೆಯ ಹೀರಾಲಾಲ್ ಸೇನ್ ಮತ್ತು ಆತನ ಸೋದರ ಮೋತಿಲಾಲ್ ಸೇನ್ ಲಂಡನ್ನಿನಿಂದ ಬಯಾಸ್ಕೋಪ್ ಸಿನಿಮಾಟೋಗ್ರಾಫ್ ಅನ್ನು ಆಮದು ಮಾಡಿಕೊಂಡು ಅಂದಿನ ಖ್ಯಾತ ನಾಟಕಕಾರ ಅಮರನಾಥ ದತ್ತ ಅವರ ಬೆಂಬಲದೊಂದಿಗೆ “ಬಂಕಿಮ್ ಚಂದರ್ ಕಿ ಸೀತಾರಾಮ್”, ಆಲಿಬಾಬಾ ಭ್ರಮರ್, ಬುದ್ಧದೇವ ಮೊದಲಾದ ನಾಟಕಗಳನ್ನು ಚಿತ್ರಿಸಿದರು ಅನಂತರ ಅವುಗಳನ್ನು ಅದೇ ಚಿತ್ರಮಂದಿರದಲ್ಲಿ ಪ್ರದರ್ಶಿಸಿದರು. ಅವು ಅತ್ಯಂತ ಜನಪ್ರಿಯವೂ ಆದವು. 1903ರಲ್ಲಿ ಮಲೇರಿಯಾ ರೋಗದ ಕುರಿತ ಪ್ರಥಮ ಜಾಹಿರಾತು ಚಿತ್ರ ತೆರೆಕಂಡರೆ, 1905ರಲ್ಲಿ ಜ್ಯೋತಿಷ್ ಸರ್ಕಾರ್ ಚಿತ್ರಿಸಿದ ಬಂಗಾಳ ವಿಭಜನೆ ವಿರುದ್ಧದ ಚಳವಳಿ ಚಿತ್ರಣ ಪ್ರಥಮ ರಾಜಕೀಯ ಸಾಕ್ಷ್ಯಚಿತ್ರವಾಯಿತು. ಜೆ. ಎಫ್. ಮದನ್ ಕಲ್ಕತ್ತದಲ್ಲಿ ನಿರ್ಮಿಸಿದ ಎಲ್ಪಿನ್‍ಸ್ಟನ್ ಪಿಕ್ಚರ್ ಪ್ಯಾಲೇಸ್ ಭಾರತದಲ್ಲಿ ಭಾರತೀಯರಿಂದಲೇ ತಯಾರಾದ ಮೊದಲ ಚಿತ್ರಮಂದಿರವಾಯಿತು. ಹೀಗೆ ಭಾರತದ ಮೂಕಿ ಚಿತ್ರ ಪರಂಪರೆಯಲ್ಲಿ ಸುಮಾರು 1300 ಚಿತ್ರಗಳು ಬಂದವು. ಪುರಾಣವೂ ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿದ್ದ ವಸ್ತುವನ್ನು ಹೊಂದಿದ್ದ ಅವು ತಮ್ಮ ಪ್ರಯೋಗಶೀಲತೆಯಲ್ಲಿ ಗಮನ ಸೆಳೆಯುವಂತಿದ್ದವು. ವಿಪರ್ಯಾಸವೆಂದರೆ ಈ ಪೈಕಿ ದಕ್ಷಿಣ ಭಾರತದಿಂದ ಬಂದ ಮೂಕಿ ಚಿತ್ರಗಳ ಸಂಖ್ಯೆ ಕೇವಲ 100 ಮಾತ್ರ. ಕಚ್ಚಾ ಹಂತವನ್ನು ದಾಟಿ ಕಥಾ ಚಿತ್ರಗಳು ಆರಂಭವಾಗಲು ಸಿನಿಮಾ ಭಾರತದಲ್ಲಿ ಕಾಲೂರಿದ ನಂತರ 15 ವರ್ಷಗಳು ಬೇಕಾಯಿತು. ಈ ಹಂತದಲ್ಲಿ ಕೆಲವು ಸಾಕ್ಷ್ಯಚಿತ್ರಗಳು ಮತ್ತು ಸುದ್ದಿ ಚಿತ್ರಗಳ ತಯಾರಿಕೆ ಬಿಟ್ಟರೆ ಬೇರೆ ಯಾವುದೇ ಚಟುವಟಿಕೆ ಇರಲಿಲ್ಲ. 1913ರಲ್ಲಿ ದುಂಢಿರಾಜ್ ಗೋವಿಂದ್ ಫಾಲ್ಕೆ ಅವರ ಚಿತ್ರ ರಾಜಾ ಹರಿಶ್ಚಂದ್ರ ಮೇ 3ರಂದು ಬಿಡುಗಡೆಯಾಯಿತು. ಇಲ್ಲಿಂದ ಕಥಾಚಿತ್ರಗಳ ಪರಂಪರೆ ಆರಂಭವಾಯಿತು. ಭಾರತ ಚಿತ್ರರಂಗದ ಇತಿಹಾಸದಲ್ಲಿ ದುಂಢಿರಾಜ್ ಗೋವಿಂದ ಫಾಲ್ಕೆ (ದಾದಾ ಸಾಹೇಬ್ ಫಾಲ್ಕೆ)ಯವರದು ಮಾರ್ಗ ಪ್ರವರ್ತಕರ ಸ್ಥಾನಮಾನ. ವೈದಿಕ ಮನೆತನದಲ್ಲಿ 1870ರ ಏಪ್ರಿಲ್ 30 ರಂದು ಜನಿಸಿದ ಫಾಲ್ಕೆ ಮುಂಬಯಿ ಮತ್ತು ಬರೋಡದಲ್ಲಿ ಕಲಾ ಶಿಕ್ಷಣ ಪಡೆದರು. ಸಂಗೀತ, ಅಭಿನಯ, ಶಿಲ್ಪಕಲೆ, ಯಕ್ಷಿಣಿಗಳಲ್ಲಿ ಪರಿಶ್ರಮವಿದ್ದ ಅವರು ಜರ್ಮನಿಗೆ ಹೋಗಿ ವರ್ಣ ಮುದ್ರಣದಲ್ಲಿ ತರಬೇತಿ ಪಡೆದು ಬಂದರು. 1910ರ ಡಿಸೆಂಬರ್ 10ರಂದು ಮುಂಬಯಿ ಪಿಕ್ಚರ್ ಪ್ಯಾಲೇಸ್‍ನಲ್ಲಿ “ದಿ ಲೈಫ್ ಆಫ್ ದಿ ಕ್ರೈಸ್ಟ್” ಚಿತ್ರ ನೋಡಿ ಭಾರತೀಯ ಹಿನ್ನಲೆ ಚಿತ್ರ ಮಾಡುವ ಕನಸು ಕಂಡರು. ಇಂಗ್ಲೆಂಡಿಗೆ ಹೋಗಿ ವಿಶೇಷ ತರಬೇತಿ ಪಡೆದು ಬಂದ ಅವರು ಆರಂಭದಲ್ಲಿ ಶ್ರೀಕೃಷ್ಣನ ಕತೆ ಆರಿಸಿಕೊಂಡರು. ನಂತರ ಬಂಡವಾಳದ ದೃಷ್ಟಿಯಿಂದ ರಾಜ ಹರಿಶ್ಚಂದ್ರನ ಕತೆ ಆರಿಸಿಕೊಂಡರು. ಆರು ತಿಂಗಳ ಶ್ರಮದ ಫಲವಾಗಿ 3,700 ಅಡಿ ಉದ್ದದ ಚಿತ್ರ ತಯಾರಾಯಿತು. ಪ್ರಪ್ರಥಮ ಸ್ವದೇಶಿ ಕಥಾಚಿತ್ರ `ರಾಜಾ ಹರಿಶ್ಚಂದ್ರ 1913ರ ಮೇ 3ರಂದು ಮುಂಬಯಿಯ ಕಾರೊನೇಷನ್ ಸಿನಿಮಾದಲ್ಲಿ ತೆರೆಕಂಡು ಹೊಸ ಇತಿಹಾಸ ನಿರ್ಮಿಸಿತು. ಮುಂದೆ ತಮ್ಮ ಫಾಲ್ಕೆ ಫಿಲಂಸ್ ಅನ್ನು ಹಿಂದೂಸ್ಥಾನ್ ಫಿಲಂ ಕಂಪನಿಯಲ್ಲಿ ವಿಲೀನಗೊಳಿಸಿದ ಫಾಲ್ಕೆ 5,500 ಅಡಿ ಉದ್ದದ “ಶ್ರೀ ಕೃಷ್ಣ ಜನ್ಮ” ನಂತರ “ಕಾಲಿಯ ಮರ್ದನ್ ನಿರ್ಮಿಸಿದರು. ಇದರಿಂದ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ನಾಸಿಕ್‍ನಲ್ಲಿ ಸ್ಟುಡಿಯೋ ಆರಂಭಿಸಿದರು. 1917ರಿಂದ 1932ರವರೆಗೆ 97 ಕಥಾಚಿತ್ರಗಳನ್ನು ಮತ್ತು 26 ಕಿರುಚಿತ್ರಗಳನ್ನು `ಹಿಂದೂಸ್ಥಾನ್ ಫಿಲಂ ಕಂಪನಿ ತಯಾರಿಸಿತು, ಇದರಲ್ಲಿ 45 ಕಥಾಚಿತ್ರಗಳು 16 ಕಿರುಚಿತ್ರಗಳು ಫಾಲ್ಕೆ ಅವರ ಕೊಡುಗೆ, ಉಳಿದವು ಅವರ ಶಿಷ್ಯರ ಕೃತಿಗಳು. ಫಾಲ್ಕೆ ಮತ್ತು ಅವರ ಶಿಷ್ಯರ ಬಹುತೇಕ ಚಿತ್ರಗಳು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತ ಮತ್ತು ಅದರ ಉಪಕತೆಗಳನ್ನು ಆಧರಿಸಿದ್ದವು. ಬಾಂಬೆ ಸಿನಿಮಾ ನಿರ್ಮಾತೃಗಳಿಗೆ ಶ್ರೀಕೃಷ್ಣನ ಕತೆಗಳು ಪ್ರಧಾನ ಆಕರವಾಗಿದ್ದವು. ಮೂಕಿ ಚಿತ್ರಗಳೆಲ್ಲ ಸರಳವಾದ ಕಥಾನಕಗಳನ್ನೇ ಅವಲಂಬಿಸಿದ್ದವು ಎಂಬುದು ಇದರ ಅರ್ಥವಲ್ಲ. ಶ್ರೀರಾಮ ಮತ್ತು ರಾವಣರ ಚಿತ್ರಗಳಲ್ಲಿ ಅನೇಕ ಸಂಕೀರ್ಣ ಆಯಾಮಗಳನ್ನು ಈ ಚಿತ್ರಗಳು ಹುಡುಕಿದ್ದವು. ಮೂಕಿ ಯುಗದ ಕೆಲವು ಪ್ರಮುಖ ವ್ಯಕ್ತಿಗಳು.
ಜಮ್‍ಷೆಡ್‍ಜಿ ಪ್ರೇಮ್‍ಜಿ ಮದನ್ (1856-1923) : ಮುಂಬಯಿಯಲ್ಲಿ ಜನಿಸಿದ ಇವರು ಬಾಲ್ಯದಿಂದಲೂ ಸಿನಿಮಾದತ್ತ ಆಸಕ್ತರಾಗಿ ನಜೀರ್ ಅವರ ಥಿಯೇಟ್ರಿಕಲ್ ಕಂಪನಿಯಲ್ಲಿ ನಟರಾಗಿ ಸೇರಿದರು. 1817ರಲ್ಲಿ ಎಲಿಫಿನ್‍ಸ್ಟನ್ ಬಯೋಸ್ಕೋಪ್ ಕಂಪನಿ ಆರಂಭಿಸಿದರು. 1919ರಲ್ಲಿ ಮದನ್ ಥಿಯೇಟರ್ಸ್ ಎಂಬ ಸಹಕಾರಿ ತತ್ವದ ಕಂಪನಿ ಆರಂಭಿಸಿದರು. ಅದು ಭಾರತದ ಪ್ರಮುಖ ಹಂಚಿಕೆ ಮತ್ತು ನಿರ್ಮಾಣ ಸಂಸ್ಥೆಯಾಗಿ ಬಹುಬೇಗ ಪ್ರಸಿದ್ಧಿಯಾಯಿತು. ನಳ ದಮಯಂತಿ (1920), ಧ್ರುವಚರಿತೆ(1921), ರಾಮಾಯಣ(1922), ರತ್ನಾವಳಿ(1922) ಮುಖ್ಯ ಚಿತ್ರಗಳು. 1923ರಲ್ಲಿ ಅವರ ಸಾವಿನ ನಂತರವೂ ಅವರ ಮಕ್ಕಳು ಚಿತ್ರ ಚಟುವಟಿಕೆ ಮುಂದುವರೆಸಿದರು.
ಬಾಬೂರಾವ್ ಪೆಂಟರ್(1890-1954) : ಪೆಂಟರ್ ಎಂಬುದು ಬಾಬೂರಾವ್ ಅವರ ನಿಜವಾದ ಹೆಸರೇನಲ್ಲ. ಅದು ಅಭಿಮಾನಿಗಳು ನೀಡಿದ ಬಿರುದು. ಕೊಲ್ಹಾಪುರದಲ್ಲಿ ಮಹಾರಾಷ್ಟ್ರ ಫಿಲಂ ಕಂಪನಿ ಆರಂಭಿಸಿದ ಪೆಂಟರ್ ಅವರ ಮೊದಲ ಚಿತ್ರ ಸೈರಂಧ್ರಿ (1920). ಅದರಲ್ಲಿ ಸುಪ್ತವಾಗಿದ್ದ ರಾಜಕೀಯ ಟೀಕೆಗಳ ಕಾರಣ ಆ ಚಿತ್ರ ಸರಕಾರದ ಆಗ್ರಹಕ್ಕೆ ಗುರಿಯಾಯಿತು. ಅವರ ಮುಂದಿನ ಚಿತ್ರ ಸುರೇಖಾ ಹರಣ್(1921)ನಲ್ಲಿ ಶಾಂತಾರಾಂ ಗುರು. ಗ್ರಹಿಕೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತಂದ ಪೆಂಟರ್ ನಿರ್ಮಿಸಿದ ಪ್ರಮುಖ ಚಿತ್ರಗಳೆಂದರೆ ಸಿಂಹಗಡ್(1923) ಕಲ್ಯಾಣ ಖಜೀನ(1924) ಶಬಲಶಹ(1925) ಮತ್ತು ರಾಣಾ ಹಮೀರ್(1925). ಸ್ನೇಹಿತರೊಡನೆ ಅವರು ನಿರ್ಮಿಸಿದ ಕಚ ದೇವಯಾನಿ(1919) ಕೂಡ ಮುಖ್ಯ ಚಿತ್ರವಾಯಿತು. ಬಾಬೂರಾವ್ ಪೆಂಟರ್ ಅವರ ಮಹಾರಾಷ್ಟ್ರ ಫಿಲಂ ಕಂಪನಿ ಚಿತ್ರರಂಗಕ್ಕೆ 200ಕ್ಕೂ ಹೆಚ್ಚು ತಂತ್ರಜ್ಞರನ್ನು ನೀಡಿತು. ಸಾವ್ಕಾರಿಪಾಶಾ ಶಾಚಿತರಾಂ ಅಭಿನಯದ ಸಾಮಾಜಿಕ ಚಿತ್ರ.
ದ್ವಾರಕಾದಾಸ್ ಎಸ್ ಸಂಪತ್(1884-1958) : ಭಾರತೀಯ ಚಿತ್ರರಂಗದ ಕಾರಣ ಪುರುಷರಲ್ಲಿ ಒಬ್ಬರಾದ ಸಂಪತ್ ಅವರು ತಮ್ಮ ಕೊಹಿನೂರು ಫಿಲಂ ಕಂಪನಿ ಮೂಲಕ ಒಂದು ದಶಕದಲ್ಲಿ (1919-1929) 98 ಚಿತ್ರಗಳನ್ನು ನಿರ್ಮಿಸಿದರು. ಅವುಗಳಲ್ಲಿ ವಿಕ್ರಮ-ಊರ್ವಶಿ(1920) ಸತಿ ಅನಸೂಯ(1921) ಟೆಲಿಫೋನ್ ಗರ್ಲ್(1926) ಚಾರಿತ್ರಿಕ ಚಿತ್ರಗಳಾದವು. ಆರ್ದೇಶರ್ ಇರಾನಿ(1886-1969) : ಆರ್ದೇಶರ್ ಇರಾನಿ ತಮ್ಮ ವೃತ್ತಿಯನ್ನು ಪ್ರದರ್ಶಕರಾಗಿ ಆರಂಭಿಸಿದ್ದರು. ಫಾಲ್ಕೆ ಅವರ ಹಿಂದೂಸ್ತಾನ್ ಫಿಲಂ ಕಂಪನಿಯ ಮ್ಯಾನೇಜರ್ ಕೆ ಎಂ ದವೆ ಅವರ ಜೊತೆಗೂಡಿ, ಸ್ಟಾರ್ ಫಿಲಂ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿದರು. ಈ ಸಂಸ್ಥೆಯಿಂದ ನಿರ್ಮಾಣವಾದ ಮೊದಲ ಚಿತ್ರ ವೀರ ಅಭಿಮನ್ಯು(1922) ಮುಂದೆ ರತ್ನಾವಳಿ(1922) ಕೃಷ್ಣಾರ್ಜುನ ಯುದ್ಧ(1923) ಚಂದ್ರಗುಪ್ತ(1923)ದಂತಹ ಹಲವು ಯಶಸ್ವಿ ಚಿತ್ರಗಳನ್ನು ಇರಾನಿ ನಿರ್ಮಿಸಿದರು. 1936ರಲ್ಲಿ ಇರಾನಿ ಇಂಪೀರಿಯಲ್ ಫಿಲಂ ಕಂಪನಿ ಸ್ಥಾಪಿಸಿದರು. ಈ ಮೂಲಕ 67 ಮೂಕಿ ಚಿತ್ರಗಳು ನಿರ್ಮಾಣವಾದವು. ಪ್ರಥಮ ವಾಕ್ಚಿತ್ರ ಅಲಂ ಅರಾ ದ ನಿರ್ಮಾತೃ.
ಚಂದೂಲಾಲ್ ಷಾ (1898-1975) : ಬಹು ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದ ಚಂದೂಲಾಲ್ ಷಾ ಲಕ್ಷ್ಮಿ ಫಿಲಂನಿಂದ ತಮ್ಮ ಬಣ್ಣದ ಬದುಕನ್ನು ಆರಂಭಿಸಿದರು. ನಂತರ ಕೊಹಿನೂರು ಫಿಲಂ ಕಂಪನಿ ಸೇರಿ ಅಲ್ಲಿ ಟೈ ಪಿಸ್ಟ್ ಗರ್ಲ್(1926) ನಿರ್ದೇಶಿಸಿದರು. ಚಿತ್ರ ಯಶಸ್ವಿಯಾಯಿತು. ಕೊಹಿನೂರ್‍ಗೆ ಅವರು ಗುಣಸುಂದರಿ(1927) ಸೇರಿದಂತೆ ಐದು ಯಶಸ್ವಿ ಚಿತ್ರಗಳನ್ನು ನೀಡಿದರು. ನಂತರ ತಮ್ಮ ಸ್ವಂತ ತಯಾರಿಕಾ ಸಂಸ್ಥೆಯಾಗಿ ರಣಜೀತ್ ಫಿಲಂ ಕಂಪನಿ ಸ್ಥಾಪಿಸಿದರು. ಈ ಸಂಸ್ಥೆ 30 ಯಶಸ್ವಿ ಚಿತ್ರಗಳನ್ನು ನಿರ್ಮಿಸಿತು. ಅವುಗಳಲ್ಲಿ ರಜಪುತಾನಿ(1929) ತೂಫಾನ್ ಮೇಲ್(1932) ದೇಶ್ ದೀಪಕ್(1930) ರಾಸಲೀಲೆ ರಾಧ(1930) ಮುಖ್ಯವಾದವು.
ಮೆಜೆಸ್ಟಿಕ್ ಫಿಲಂ ಕಂಪನಿ (1924), ರಾಯಲ್ ಫಿಲಂ ಸ್ಟುಡಿಯೋ ಇಂಡೋ ಬ್ರಿಟಿಷ್ ಫಿಲಂ ಕಂಪನಿ (1921), ಶಾರದ ಫಿಲಂ ಕಂಪನಿ (1925) ಇವು ಮುಂಬೈ, ಕಲ್ಕತ್ತದಲ್ಲಿ ಕಾರ್ಯ ನಿರ್ವಹಿಸಿದ ಪ್ರಮುಖ ಸಂಸ್ಥೆಗಳು. ದಕ್ಷಿಣ ಭಾರತದಲ್ಲಿ ನಟರಾಜ್ ಮೊದಲಿಯಾರ್ ಮತ್ತು ಧರ್ಮಲಿಂಗಂ ಕೀಚಕವಧಾ (1916) ನಿರ್ಮಿಸಿ ಈ ಭಾಗದಲ್ಲಿ ಚಿತ್ರ ಚಟುವಟಿಕೆಗಳಿಗೆ ನಾಂದಿ ಹಾಡಿದರು. ಮುಂದೆ ಜನರಲ್ ಪಿಕ್ಚರ್ಚ್ ಕಾರ್ಪೋರೇಷನ್ ದಕ್ಷಿಣ ಭಾರತದಲ್ಲಿ ಚಿತ್ರ ಚಟುವಟಿಕೆ ನಡೆಸಿತು. ಆದರೂ ದಕ್ಷಿಣ ಭಾರತದಲ್ಲಿ ಮೂಕಿಯುಗ ಕ್ಷೀಣವಾಗಿ ಇತ್ತು. ಸೂರ್ಯ ಫಿಲಂ ಕಂಪನಿ ಈ ಭಾಗದಲ್ಲಿ 39 ಚಿತ್ರಗಳನ್ನು ನಿರ್ಮಿಸಿ ಕೆಲ ಮಟ್ಟಿಗಿನ ಬೆಳಕು ಚೆಲ್ಲಿದರೆ ಗುಬ್ಬಿ ವೀರಣ್ಣನವರ ಕರ್ನಾಟಕ ಪಿಕ್ಚರ್ಸ್ ಕಾರ್ಪೊರೇಷನ್, ಸೂರ್ಯಪ್ರಕಾಶ್ ಫಿಲಂ, ಮೈಸೂರು ಪಿಕ್ಚರ್ಸ್ ಕಾರ್ಪೊರೇಷನ್ ಮುಂತಾದವು ಇಲ್ಲಿ ಚಿತ್ರ ಚಟುವಟಿಕೆಗಳನ್ನು ಜೀವಂತವಾಗಿರಿಸಿದವು.
ಮೂಕಿಚಿತ್ರಗಳ ನಿರ್ಮಾತೃಗಳು ಕೇವಲ ಚಲನೆಯಲ್ಲಿ ಕತೆಯಲ್ಲಿ ಮಾತ್ರ ಅನ್ವೇಷಕರಾಗಿರಲಿಲ್ಲ. ಅದನ್ನು ಕಲಾಮಾಧ್ಯಮವಾಗಿಸುವಲ್ಲೂ ಶ್ರಮಿಸಿದರು. ಸುಕನ್ಯ ಸಾವಿತ್ರಿ (1922), ಪೃಥ್ವಿ ವಲ್ಲಭ್ (1924), ರಾಜಾ ರವಿವರ್ಮನ ಕಲೆಗಾರಿಕೆಯಿಂದ ಪ್ರಭಾವಿತವಾಗಿ ಚಿತ್ರ ಮತ್ತು ಚಲನಚಿತ್ರದ ನಡುವೆ ಹೊಂದಾಣಿಕೆ ಮೂಡಿಸಲು ಶ್ರಮಿಸಿದ ಪ್ರಯತ್ನಗಳಾಗಿದ್ದಿದ್ದನ್ನು ಈ ಹಂತದಲ್ಲಿ ಗುರುತಿಸಬಹುದು. ಕೋಹಿನೂರು ಫಿಲಂ ಕಂಪನಿ ಇಂತಹ ಪ್ರಯತ್ನಗಳಿಗೆ ಸಾಂಸ್ಥಿಕರೂಪ ನೀಡಿತು. ಕ್ಯಾಮರಾಮನ್ ಪಾಂಡುರಂಗ ನಾಯಕ್, ನಟರಾದ ಕೊಲಿಲ್, ರಾಜ ಸ್ಟಾಂಡೋ ನಟಿಯರಾದ ಸುಲೋಚನ, ಜುಬೇದ, ಗೋಹರ್‍ಬಾಯಿ ಈ ಸಂಸ್ಥೆ ಮೂಲಕ ಚಿತ್ರ ಮಾಧ್ಯಮಕ್ಕೆ ಕಲೆಯ ಸ್ಥಾನಮಾನ ನೀಡಲು ಶ್ರಮಿಸಿದರು. ವಾಣಿಜ್ಯಕ ದೃಷ್ಟಿಯಿಂದ ರಾಜಾ ಹರಿಶ್ಚಂದ್ರವನ್ನು ಭಾರತದ ಮೊದಲ ಯಶಸ್ವಿ ಚಿತ್ರವೆಂದು ಕರೆಯಬಹುದು. 23 ದಿನಗಳ ಯಶಸ್ವಿ ಪ್ರದರ್ಶನದ ನಂತರ ಇದು ಹಲವು ಮರು ಪ್ರದರ್ಶನಗಳನ್ನೂ ಕಂಡಿತು. ಈ ಚಿತ್ರದ ಯಶಸ್ಸು ಚಲನಚಿತ್ರಕ್ಕೆ ಬಂಡವಾಳ ತೊಡಗಿಸಲು ಉದ್ಯಮಿಗಳನ್ನು ಪ್ರೇರೇಪಿಸಿತು. ಆದರೆ ಮೊದಲನೇ ಮಹಾಯುದ್ಧದ ಆರಂಭ ಆ ಪ್ರಯತ್ನಕ್ಕೆ ಹಿನ್ನೆಡೆ ಉಂಟು ಮಾಡಿತು. 1915ರಲ್ಲಿ ಫಾಲ್ಕೆ, ಮೋಹಿನಿ ಭಸ್ಮಾಸುರ ಮತ್ತು ಸತ್ಯವಾನ್ ಸಾವಿತ್ರಿಯನ್ನು ನಿರ್ಮಿಸಿದರು. ಇದರಲ್ಲಿ ಅಭಿನಯಿಸಿದ ದುರ್ಗಾಖೋಟೆ ಮತ್ತು ಕಮಲಾಬಾಯಿ ಗೋಖಲೆ ಭಾರತದ ಮೊದಲ ಕಲಾವಿದೆಯರು. ಅಲ್ಲಿಯವರೆಗೆ ಸ್ತ್ರೀಪಾತ್ರಗಳನ್ನು ಪುರುಷರೇ ಮಾಡುತ್ತಿದ್ದರು.
1920ರಲ್ಲಿ ಸುಬೇತ್ಸಿಂಗ್ ಶಾಕುಂತಲಾ ನಿರ್ಮಿಸಿದರು. ಇದು ಅದುವರೆಗಿನ ಚಿತ್ರಗಳಿಗಿಂತ ಭಿನ್ನ ಪ್ರಯತ್ನವಾಗಿದ್ದಿತು. ಆದರೆ ದುರದೃಷ್ಟವಶಾತ್ ಚಿತ್ರ ಯಶಸ್ವಿಯಾಗಲಿಲ್ಲ. 1923ರಲ್ಲಿ ಫಾಲ್ಕೆ “ಮುನ್ಸಿಪಲ್ ಎಲೆಕ್ಷನ್” ಎಂಬ ಚಿತ್ರದ ಮೂಲಕ ಸಾಮಾಜಿಕ ವಸ್ತುವನ್ನು ತಂದರು. ಅದೇ ವರ್ಷ ಹಿಮಾಂಶು ರಾಯ್ “ಲೈಟ್ ಆಫ್ ಏಷಿಯ ಎಂಬ ಅದ್ದೂರಿ ಚಿತ್ರ ತಯಾರಿಸಿದರು. ಅದು ಅಂತರರಾಷ್ಟ್ರೀಯ ಮನ್ನಣೆ ಪಡೆಯಿತು. ಇಪ್ಪತ್ತರ ದಶಕದ ಕೊನೆಗೆ ಸಾಮಾಜಿಕ ಚಿತ್ರಗಳು ಬರಲಾರಂಭಿಸಿದವು. ಪೂನಾದ ಯುನೈಟೆಡ್ ಪಿಕ್ಚರ್ಸ್ ಅವರು ತಯಾರಿಸಿದ ಟೂ ಅನ್‍ಟಚಬಲ್ಸ್ ಅಂತಹ ಚಿತ್ರಗಳಲ್ಲೊಂದು. ಸುಲೋಚನಾ ಬೆಳ್ಳಿ ತೆರೆಗೆ ಕಾಲಿಟ್ಟ ಮೇಲೆ ಸ್ತ್ರೀ ಪಾತ್ರಗಳ ಮಾದರಿಯೇ ಬೇರೆಯಾಯಿತು. ಹಲವು ಪ್ರಯೋಗಶೀಲ ಚಿತ್ರಗಳು ಬಂದವು ಅಲ್ಲಾವುದ್ದೀನ್, ಆಲಿಬಾಬಾ, ಅನಾರ್ಕಲಿ, ಹ್ಯಾಮ್ಲೆಟ್, ಕೂಡ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. ವಾಕ್ಚಿತ್ರಗಳು ಬಂದ ಮೇಲೆ ಮೂಕಿಚಿತ್ರಗಳು ಕೊನೆಗೊಂಡವು. ಸುಮಾರು 1,300 ಮೂಕಿಚಿತ್ರಗಳು ನಿರ್ಮಾಣವಾಗಿರಬಹುದು ಎಂದು ಊಹಿಸಲಾಗಿದೆ. ಪ್ರಸ್ತುತ ಅವುಗಳಲ್ಲಿ ಕೇವಲ 15 ಚಿತ್ರಗಳು ಮಾತ್ರ ಲಭ್ಯ. ಬಿ. ಡಿ. ಬಿಲ್ಮೋರಿಯ, ರಾಜಾಸ್ಯಾಂಡೊ, ಜಾಲ್ ಮರ್ಚೆಂಟ್, ಮಾಸ್ಟರ್ ವಿಠಲ್, ಹಿಮಾಂಶು ರಾಯ್, ಪ್ರಭಾಕರ್ ಪವಾರ್, ಲಲಿತಾ ಪವಾರ್, ಜುಬೇದಿಯಾ, ಸುಲೋಚನಾ, ಸಿತಾದೇವಿ, ಗೋಹರ್, ಜಿಲ್ಲೋ, ಮಾಧುರಿ ಇವರು ಮೂಕಿ ಚಿತ್ರಯುಗದ ತಾರೆಯರಲ್ಲಿ ಕೆಲವರು. ಬೆಂಗಳೂರು ಕೂಡ ಮೂಕ ಚಿತ್ರಗಳ ಕಾಲದಲ್ಲಿ ಒಂದು ಮುಖ್ಯ ಕೇಂದ್ರವಾಗಿತ್ತು. ಲಕ್ಷ್ಮಿಬಾಯಿ, ಕಮಲಾಬಾಯಿ, ಅವರು ಚಿತ್ರರಂಗ ಪ್ರವೇಶಿಸಿದ್ದು ಮೂಕಿಯುಗದ ಕಾಲದಲ್ಲೇ. ಕನ್ನಡದ ಪ್ರಮುಖ ಬರಹಗಾರರಾದ ಶಿವರಾಮ ಕಾರಂತ, ಟಿ.ಪಿ ಕೈಲಾಸಂ, ವಿಸೀ ಮುಂತಾದವರು ಮೂಕೀ ಚಿತ್ರಗಳತ್ತ ಆಸಕ್ತರಾಗಿದ್ದರು. (ನೋಡಿ- ಕನ್ನಡ-ಚಲನಚಿತ್ರ)
ವಾಕ್ಚಲನ ಚಿತ್ರಗಳ ನಿರ್ಮಾಣ ಆರಂಭವಾದೊಡನೆ, ಮೂಕಿ ಚಿತ್ರಗಳ ತಯಾರಿಕೆ ನಿಲ್ಲಲಿಲ್ಲ. ಮೊದಲ ವಾಕ್ಚಿತ್ರ ತೆರೆಕಂಡ ವರ್ಷದಲ್ಲೇ 207 ಮೂಕಿಚಿತ್ರಗಳು ತಯಾರಾದವು.
ಬೆಳ್ಳಿತೆರೆಗೆ ಮಾತು ಬಂದಾಗ (1934-1949)
ಭಾರತದಲ್ಲಿ ವಾಕ್ಚಿತ್ರಕ್ಕಾಗಿ ಮೊದಲು ಪ್ರಯತ್ನಿಸಿದ ಸಂಸ್ಥೆ ಮದನ್ ಥಿಯೇಟರ್ಸ್ 1929ರಲ್ಲಿ ಮೆಲೊಡಿ ಅಫ್‍ಲವ್ ಚಿತ್ರಕ್ಕೆ ಮಾತು ಜೋಡಿಸಿ ಸಂಸ್ಥೆ ಬಿಡುಗಡೆ ಮಾಡಿತು. 1931ರಲ್ಲಿ ಸಂಸ್ಥೆ ಹಾಡು-ನೃತ್ಯಗಳನ್ನೊಳಗೊಂಡ ಚಿತ್ರಗಳನ್ನು ತಯಾರಿಸಿತು. ಆದರೆ ಸಂಪೂರ್ಣ ಮಾತಿನ ಚಿತ್ರ ತಯಾರಿಸಿದ ಕೀರ್ತಿ ಇಂಪೀರಿಯಲ್ ಕಂಪನಿಗೆ ಆಯಿತು. ಅವರ `ಅಲಂ ಅರಾ 1931ರ ಮಾರ್ಚ್ 14ರಂದು ತೆರೆಕಂಡಿತು.
ಭಾರತದಲ್ಲಿ ಮೊದಲ ವಾಕ್ಚಿತ್ರ ನಿರ್ಮಿಸಿದ ಕೀರ್ತಿ ಇಂಪೀರಿಯಲ್ ಫಿಲಂ ಕಂಪನಿಗೆ ಸಲ್ಲುತ್ತದೆ. ಮೊದಲ ಬಾರಿಗೆ ಬೆಳ್ಳಿತೆರೆಗೆ ಮಾತಿನ ಸ್ವರ್ಶ ನೀಡಿದ ಅಲಂಅರಾ (ಐighಣ oಜಿ ಣhe ತಿoಡಿಟಜ) ಮುಂಬೈ ಮೆಜೆಸ್ಟಿಕ್ ಚಿತ್ರ ಮಂದಿರದಲ್ಲಿ 1931ರ ಮಾರ್ಚಿ 14ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ “ದೇ ದೇ ಖುದಾ ಕೆ ನಾಮ್ ಪರ್ ಪ್ಯಾರೆ... ಎಂಬ ಡಬ್ಲ್ಯು ಎಂ ಖಾನ್ ಹಾಡಿದ ಗೀತೆ ಕೂಡ ಇತ್ತು. ಮೊದಲ ವಾಕ್ಚಿತ್ರ ತಯಾರಿಕೆಗೆ ಇಂಪೀರಿಯಲ್, ಕೃಷ್ಣ ಮತ್ತು ಮದನ್ ನಡುವೆ ತೀವ್ರ ಪೈಪೋಟಿ ಇತ್ತು. "ಆಲಂಆರಾ" ಈ ಪೈಪೋಟಿಯಲ್ಲಿ ಮುಂದಾಯಿತು, ಖಾನ್ ಬಹದ್ದೂರ್ ಅರ್ದೇಶಿರ್ ಎಂ ಇರಾನಿ ಅವರ ಸಾಹಸದಿಂದ ಇದು ಸಾಧ್ಯವಾಯಿತು. ಇದರ ಬೆನ್ನ ಹಿಂದೆಯೇ ಕೃಷ್ಣ ಮೂವಿಟೋನ್ ರವರ “ಘರ್‍ಕಿ ಲಕ್ಷ್ಮೀ” ಮದನ್ ಥಿಯೇಟರ್ಸ್ ಅವರ “ಶಿರೀನ್ ಫರಹಾದ್” ತೆರೆಕಂಡವು. ವಾಕ್ಚಿತ್ರಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದ್ದಂತೆ `ಸರಸ್ವತಿ ಫಿಲಂ' ಕಂಪನಿ ಅವರು ಶಬ್ದಚಿತ್ರಗಳ ತಯಾರಿಕೆಗೆ ಅಗತ್ಯವಾದ ಯಂತ್ರೋಪಕರಣಗಳನ್ನು ವಿದೇಶದಿಂದ ತರಿಸಿಕೊಂಡರು. ಹೀಗೆ ನಿರ್ಮಾಣವಾದ ದೇವಿ ದೇವಯಾನಿ ಬಹು ಜನ ಮನ್ನಣೆ ಪಡೆಯಿತು. ಅಯೋಧ್ಯೆಚ ರಾಜ ಮರಾಠಿಯಲ್ಲಿತ್ತು. “ಅಯೋಧ್ಯ ಕಾ ರಾಜಾ” ಚಿತ್ರವನ್ನು ಹಿಂದಿಯಲ್ಲಿ ಗೋವಿಂದರಾವ್ ಟೆಂಬೆ ಮತ್ತು ದುರ್ಗಾಖೋಟೆಯವರ ತಾರಾಗಣದಲ್ಲಿ ಪ್ರಭಾತ ಸಂಸ್ಥೆ ನಿರ್ಮಿಸಿತು. ವಾಕ್ಚಿತ್ರಗಳ ಯಶಸ್ವಿನಿಂದ ಮೂಕಿ ಚಿತ್ರಗಳಿಗೂ ಮಾತು ನೀಡುವ ಪ್ರಯತ್ನ ಆರಂಭವಾಯಿತು. ಗರೀಬಿ ಜಾನ್, ನೂರ್‍ಜಹಾನ್ ಹೀಗೆ ಮಾತು ಪಡೆದ ಕೆಲವು ಚಿತ್ರಗಳು. ಮುಂಬೈನಿಂದ ಆರಂಭವಾದ ಚಳವಳಿ ಕಲ್ಕತ್ತ ತಲುಪಿ ದೇಶಾದ್ಯಂತ ವ್ಯಾಪಿಸಿತು. ಹೀಗೆ ವಾಕ್ಚಿತ್ರಗಳ ಚಳವಳಿ ನಡೆದರೂ, 1934ರವರೆಗೆ ಮೂಕಿ ಚಿತ್ರಗಳ ನಿರ್ಮಾಣ ಮುಂದುವರೆದವು.
ವಿವಿಧ ಭಾಷೆಗಳ ಪ್ರಥಮ ವಾಕ್ಚಿತ್ರಗಳು ಬಂಗಾಳಿ - ಜಮೈ ಶಶ್ಟಿ (1931) ತೆಲುಗು - ಭಕ್ತ ಪ್ರಹ್ಲಾದ (1931) ತಮಿಳು- ಕಾಳಿದಾಸ್ (1931) ಮರಾಠಿ- ಅಯೋಧ್ಯೆಚ ರಾಜ (1932) ಗುಜರಾಥಿ- ನರಸೀಮೆಹತಾ (1932) ಒರಿಯಾ- ಸೀತಾಬೀಬತಾ (1934) ಕನ್ನಡ- ಸತಿ ಸುಲೋಚನ (1934) ಅಸ್ಸಾಮಿ- ಜ್ಯೋಮತಿ (1935) ಪಂಜಾಬಿ- ಶೈಲಾ ( 1935) ಮಲೆಯಾಳಂ- ಬಾಲನ್ (1938) ಕೊಂಕಣಿ- ಮೋಗಾಚೋ ಆಂವ್ಲೊ (1950) ಮಣಿಪುರಿ- ಮಾತಂಗಿ ಮಣಿಪುರಿ (1972) ಉರ್ದು- ಆಲಂಆರಾ (1931) ಸಿಂಧಿ- ಏಕ್ತಾ (1942) ಭೋಜಪುರಿ- ಗಂಗಾ ಮೇರಿ ತೂಹೆ ಪ್ಯಾರಿ ಚಾರ್ದಬಿ(1961) ತುಳು- ಎನ್ನತಂಗಡಿ (1971) ಸಂಸ್ಕøತ- ಆದಿಶಂಕರಾಚಾರ್ಯ (1983)
ಮೂಕಿ ಚಿತ್ರಗಳಿಂದ ಮಾತಿನ ಯುಗಕ್ಕೆ ಬಂದ ಚಲನಚಿತ್ರಗಳ ಮೇಲೆ ಪ್ರಭಾವ ಬೀರಿದ್ದು ಪಾರ್ಸಿ ರಂಗಭೂಮಿ. ಕಥಾವಸ್ತು ಏನೇ ಆಗಿದ್ದರೂ ಎಲ್ಲಾ ಪ್ರೇಕ್ಷಕರಿಗೆ ಇಷ್ಟವಾಗಬಲ್ಲ, ನಾಯಕ-ನಾಯಕಿಯರಂತೇ ಹಾಸ್ಯ ಖಳ ಪಾತ್ರಗಳನ್ನು ಹೊಂದಿರುತ್ತಿತ್ತು. ವಾಡಿಯಾ ಮೂವಿಟೋನ್ ಅವರ ಲಾಲ್-ಎ ಯಮನ್ ಇಂತಹ ಸಾಧ್ಯತೆಗೆ ನಾಂದಿ ಹಾಡಿದ ಚಿತ್ರ. ಹಿಮಾಂಶು ರಾಯ್ ನಿರ್ಮಿಸಿದ ಈ ಚಿತ್ರವನ್ನು ರಾಯಲ್ ನೌಕಾಪಡೆಯ ಮಾಜಿ ಕ್ಯಾಪ್ಟನ್ ಫ್ರೀರ್-ಹಂಟ್ ನಿರ್ದೇಶಿಸಿದ್ದರು. ಈ ಚಿತ್ರ ಯೂರೋಪಿನ ಪ್ರೇಕ್ಷಕರನ್ನು ಗಮನದಲ್ಲಿರಿಸಿ ನಿರ್ಮಾಣವಾಗಿತ್ತು. ಮುಂದೆ ಈ ಸಂಸ್ಥೆಯ ದೇಶಾದ್ಯಂತ ಯಶಸ್ವಿಯಾದ ಚಿತ್ರವನ್ನು ನೀಡಿತು. ಅದೆಂದರೆ ನಾರಾಯಣ ಆಪ್ಟೆ ಅವರ ಮರಾಠಿ ಕಾದಂಬರಿ ಆಧಾರಿತ ಚಿತ್ರ ಭಾಗ್ಯಶ್ರೀ ಸಿನಿಮಾವನ್ನು ಭಾರತೀಯ ಸಾಧ್ಯತೆಗೊಳಪಡಿಸಿದ ಪ್ರಯೋಗಶೀಲತೆಗಾಗಿಯೇ ಈ ಚಿತ್ರ ಇತಿಹಾಸದಲ್ಲಿ ದಾಖಲಾಗುತ್ತದೆ. 1932ರಲ್ಲಿ ಬಿಡುಗಡೆಯಾದ ಮದನ್ ಥಿಯೇಟರ್ಸ್ ಅವರ ಇಂದ್ರ ಸಭಾ ದಲ್ಲಿ 71 ಹಾಡುಗಳಿದ್ದವು. ಇದು ವಾಕ್ಚಿತ್ರದ ಆರಂಭಿಕ ಹಂತದ ಪ್ರಧಾನ ಲಕ್ಷಣವಾಗಿಯೂ ಮುಂದುವರೆಯಿತು. ರಂಗಗೀತೆಗಳ ಮುಂದಿನ ಹಂತವಾಗಿ ಇವತ್ತಿಗೂ ಚಿತ್ರಗೀತೆಗಳು ಭಾರತೀಯ ಚಿತ್ರರಂಗದ ಪ್ರಧಾನ ಅಂಶವಾಗಿ ಬೆಳೆದು ಬಂದಿವೆ. ಇದು ಭಾರತೀಯ ಚಿತ್ರವನ್ನು ಪಾಶ್ಚಾತ್ಯ ಚಿಂತನೆಗಳಿಂದ ವಿಭಿನ್ನವಾಗಿಸಿದ ಅಂಶಗಳಲ್ಲಿ ಮುಖ್ಯವಾದುದ್ದು ಕೂಡ.
1932ರಲ್ಲಿ ಬಿ.ಎನ್. ಸರ್ಕಾರ್ ಅವರ ನ್ಯೂ ಥಿಯೇಟರ್ಸ್ ಮೊಹಬತ್ ಕೆ ಆಂಸೂ, ಸುಭಹ್ ಕಿ ಸಿತಾರಾ ಮತ್ತು ಜಿಂದಾಲಾಶ್ ಚಿತ್ರಗಳನ್ನು ನಿರ್ಮಿಸಿದರು. ಈ ಚಿತ್ರಗಳ ಮೂಲಕ ನಟ ಮತ್ತು ಗಾಯಕರಾಗಿ ಅಭಿನಯಿಸಿದ್ದ ಕೆ. ಎಲ್. ಸೈಗಲ್ ಅವರು ಅಪಾರ ಜನಪ್ರಿಯತೆ ಪಡೆದರು. ಎಜರಾ ಮಿರ್ ನಿರ್ದೇಶನದ ಜರೀನಾ ತನ್ನ ತಾಂತ್ರಿಕ ಕೌಶಲ್ಯದಿಂದ ಗಮನ ಸೆಳೆಯಿತು. ಮದನ್ ಥಿಯೇಟರ್ಸ್ ಈ ಹಂತದಲ್ಲಿ ಎರಡು ಮುಖ್ಯ ಪ್ರಯತ್ನಗಳನ್ನು ಮಾಡಿತು. ಬಿಲ್ವ ಮಂಗಲ್ ಚಿತ್ರವನ್ನು ಬಣ್ಣದಲ್ಲಿ ದೃಶ್ಯೀಕರಿಸಿ ಹೊರದೇಶದಲ್ಲಿ ಪ್ರಿಂಟ್ ಪಡೆಯಲು ಬಯಸಿತು. ಆದರೆ ಫಲಿತಾಂಶ ಉತ್ತೇಜನಕರವಾಗಿರಲಿಲ್ಲ. ಎರಡನೇ ಮುಖ್ಯ ಪ್ರಯೋಗವೆಂದರೆ ಇಂದ್ರಸಭಾ. ಈ ಚಿತ್ರ ಹಾಡುಗಳನ್ನು ಆಧರಿಸಿತ್ತು. ನಗರ್ ದಾಸ್ ನಾಯಕ್ ಸಂಗೀತ ನೀಡಿದ್ದ ಈ ಚಿತ್ರದಲ್ಲಿ ಕಾಂತ್ ಮತ್ತು ನಿಸಾರ್ ಅವರ ಗಾಯನದಲ್ಲಿನ ಪ್ರಮುಖ ಆಕರ್ಷಣೆ.
ತಾಂತ್ರಿಕ ಬೆಳೆವಣಿಗೆಯಲ್ಲಿ ಪ್ರಭಾತ್, ನ್ಯೂ ಥಿಯೇಟರ್ಸ್, ಬಾಂಬೆ ಟಾಕಿಸ್‍ನ ಪಾತ್ರ ಬಹಳ ಮುಖ್ಯವಾದದ್ದು. 1931ರಿಂದ 1940ರ ಅವಧಿಯಲ್ಲಿ 1,515 ವಾಕ್ಚಿತ್ರಗಳು ನಿರ್ಮಾಣವಾದವು. ಅವುಗಳಲ್ಲಿ 927 ಹಿಂದಿ ಭಾಷೆಯಲ್ಲಿದ್ದವು. ಇಂಪೀರಿಯಲ್, ರಣಜಿತ್, ಸಾಗರ್ ಮತ್ತು ವಾಡಿಯಾ ಮುಂಬೈನಲ್ಲಿ ನೆಲೆಗೊಂಡಿದ್ದರಿಂದ ಅದೇ ಮುಖ್ಯ ಚಿತ್ರ ನಿರ್ಮಾಣಕೇಂದ್ರವಾಗಿತ್ತು. ನ್ಯೂ ಥಿಯೇಟರ್ಸ್ ಕಲ್ಕತ್ತಾದಲ್ಲಿ ಸಕ್ರಿಯವಾಗಿದ್ದವು.
ಮದನ್ ನಂತರ ಪ್ರಭಾತ್ ಬಣ್ಣಕ್ಕಾಗಿ ಪ್ರಯತ್ನಿಸಿದರು. ಶಾಂತರಾಂ ನಿರ್ದೇಶನದ ಸೈರಂಧ್ರಿಯನ್ನು ವರ್ಣದಲ್ಲಿ ಚಿತ್ರೀಕರಿಸಿ ಜರ್ಮನಿಗೆ ಸಂಸ್ಕರಣೆಗೆ ಕಳುಹಿಸಲಾಯಿತು ಆದರೆ ಅಲ್ಲಿ ತಾಂತ್ರಿಕ ದೋಷ ಪತ್ತೆಯಾಯಿತು. ಈ ತೇಪೆ ವರ್ಣಚಿತ್ರವನ್ನೇ ಬಿಡುಗಡೆ ಮಾಡಿದರೆ ಜನ ಸ್ವೀಕರಿಸಲಿಲ್ಲ. ಇದೇ ಸಂದರ್ಭದಲ್ಲಿ ಮೂಕಿ ಚಿತ್ರಗಳಿಗೆ ಮಾತನ್ನು ಜೋಡಿಸುವ ಪ್ರಯತ್ನಗಳು ನಡೆದವು. ರೀಮೇಕ್ (ಅಂದರೆ ಮೂಕಿಚಿತ್ರಗಳನ್ನು ಮಾತಿನೊಂದಿಗೆ ಮತ್ತೆ ತಯಾರಿಸುವ ಪ್ರಯತ್ನ) ಕೂಡ ನಡೆಯಿತು.
ವಾಡಿಯಾ ಸೋದರರ ಹಂಟರ್‍ವಾಲಿ ವಿಶಿಷ್ಟ ಪ್ರಯತ್ನ. ಹೆಣ್ಣು ಸಾಹಸ ಪ್ರದರ್ಶನ ನೀಡುವ ಈ ಪ್ರಯೋಗದಿಂದ ವಾಡಿಯಾ ಪ್ರಖ್ಯಾತರಾದರು. ನ್ಯೂ ಥಿಯೇಟರ್ಸ್‍ನಿಂದ ದೇವದಾಸ್ ನಿರ್ಮಾಣವಾಯಿತು. ಶರಶ್ಚಂದ್ರ ಚಟರ್ಜಿಯವರ ಪ್ರಖ್ಯಾತ ಬಂಗಾಳಿ ಕಾದಂಬರಿ ಆಧಾರಿತ ಚಿತ್ರ ಬಹುತೇಕ ಎಲ್ಲಾ ಭಾರತೀಯ ಭಾಷೆಗಳಲ್ಲೂ ತೆರೆ ಕಂಡಿತು. ಬಂಗಾಳಿಯಲ್ಲಿ ಬರುವಾ, ಹಿಂದಿಯಲ್ಲಿ ಕೆ. ಎಲ್. ಸೈಗಲ್ ಜಮುನಾ ಅಭಿನಯಿಸಿದ್ದರು. ತಿಮಿರ್ ಬರನ್ ಅವರ ಸಂಗೀತ ನಿರ್ದೇಶನದಲ್ಲಿ, ಕೆ.ಎಲ್. ಸೈಗಲ್ ಮತ್ತು ಅಂಧಗಾಯಕ ಕೆ.ಸಿ. ಡೇ ಅವರು ಹಾಡಿದ ಗೀತೆಗಳು ನಾಡಿನಾದ್ಯಂತ ಜನಪ್ರಿಯವಾದವು (ನಿರ್ದೇಶಕ ಪಿ. ಸಿ. ಬರೂವ).
ಶಾಂತಾರಾಂ ಮೂವತ್ತರ ದಶಕದ ಕೊನೆಗೆ ಕಲಾತ್ಮಕತೆಯ ಸ್ಪರ್ಶವುಳ್ಳ ಚಿತ್ರಗಳನ್ನು ನಿರ್ಮಿಸಲು ಆರಂಭಿಸಿದರು. ಧರ್ಮಾತ್ಮ, ದುನಿಯಾ ನಾ ಮಾನೆ(ಮರಾಠಿಯಲ್ಲಿ ಕುಂಕು), ಆದ್ಮಿ ಪಡೋಸಿ ಮೊದಲಾದ ಚಿತ್ರಗಳು ಕಥಾ ವಸ್ತುವಿನ ಕುರಿತು ಚಿತ್ರರಂಗ ಕಾಳಜಿ ವಹಿಸುವಂತೆ ಮಾಡಿದವು. ಮೆಹಬೂಬ್ ಖಾನ್ ಔರತ್ ಎಂಬ ಚಿತ್ರ ನಿರ್ಮಿಸಿದರು. ಇದು ಮುಂದೆ “ಮದರ್ ಇಂಡಿಯಾ” ಎಂದು ಪುನರ್ ನಿರ್ಮಾಣವಾಗಿ ಪ್ರಖ್ಯಾತಿ ಪಡೆಯಿತು. ವಾಡಿಯಾ ಮೂವಿಟೋನ್ ಅವರು “ರಾಜನರ್ತಕಿ” ಚಿತ್ರವನ್ನು ಇಂಗ್ಲೀಷ್, ಹಿಂದಿ, ಬಂಗಾಳಿ ಹೀಗೆ ಮೂರು ಭಾಷೆಗಳಲ್ಲಿ ನಿರ್ಮಿಸಿದರು. ಇದು ಮುಂದೆ ಬಹು ಭಾಷಾ ನಿರ್ಮಾಣಕ್ಕೆ ಆರಂಭ ಒದಗಿಸಿತು. ಸಾಧು-ಸಂತರ ಕತೆಗಳ ಸಾಮಾಜಿಕ ಸುಧಾರಣೆ ವಸ್ತುಗಳೂ ಚಿತ್ರ ಮಾಧ್ಯಮದಲ್ಲಿ ಬದಲು ಆರಂಭಿಸಿದವು. ಎರಡನೇ ಮಹಾಯುದ್ಧ ಮತ್ತು ಸ್ವಾತಂತ್ರ್ಯ ಸಂಗ್ರಾಮ ತಾರಕಕ್ಕೇರಿದ್ದು ಚಿತ್ರರಂಗದ ಮೇಲೆ ಗಂಭೀರ ಪರಿಣಾಮ ಬೀರಿತು. ಆದರೆ 1947ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ಹೊಸಭರವಸೆಯೊಂದಿಗೆ ಎಲ್ಲಾ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಉತ್ಸಾಹದಿಂದ ಮುಂದುವರೆಯಿತು.
ಪ್ರಭಾತ್ ಚಿತ್ರದ ಸೈರಂಧ್ರಿ (1933) ಜರ್ಮನಿಯಲ್ಲಿ ತಾಂತ್ರಿಕ ಸೌಲಭ್ಯ ಪಡೆದು ವರ್ಣಮಂiÀiವಾಗಿ ಮೂಡಿ ಬಂದು ಬಣ್ಣ ಪಡೆದ ಮೊದಲ ವಾಕ್ಚಿತ್ರವಾಯಿತು. ಭಾಗ್ಯ ಚಕ್ರ (1935) ಹಿನ್ನೆಲೆ ಗಾಯನವನ್ನು ಪಡೆಯುವ ಮೂಲಕ ಇನ್ನೊಂದು ಹೊಸ ಅಧ್ಯಾಯ ಆರಂಭಿಸಿತು. ಇವೆಲ್ಲದರಿಂದ ಚಿತ್ರ ಚಟುವಟಿಕೆಗಳು ತೀವ್ರವಾಗಿದ್ದವು. ಈ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಸಂಘಟನೆಯ ಅಗತ್ಯ ಹೆಚ್ಚಾಯಿತು. ಮೊದಲು “ಬಂಗಾಲ್ ಮೋಷನ್ ಪಿಕ್ಚರ್ಸ್ ಅಸೋಸಿಯೇಷನ್” ಅಸ್ತಿತ್ವಕ್ಕೆ ಬಂದಿತು (1936) ಶೀಘ್ರದಲ್ಲೇ ಮುಂಬಯಿನಲ್ಲಿ ಇಂಡಿಯನ್ ಮೋಷನ್ ಪಿಕ್ಚರ್ ಪ್ರಡ್ಯುಸರ್ಸ್ ಅಸೋಸಿಯೇಷನ್ (1937) ಅಸ್ತಿತ್ವಕ್ಕೆ ಬಂದಿತು. ಇದೇ ವರ್ಷ ಪ್ರಭಾತ್ ಸಂಸ್ಥೆಯ ಸಂತ ತುಕಾರಾಂ ವೆನಿಸ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರ ಪುರಸ್ಕಾರ ಪಡೆಯುವುದರೊಂದಿಗೆ ಭಾರತೀಯ ಚಿತ್ರರಂಗ ಅಂತರರಾಷ್ಟ್ರೀಯ ನಕ್ಷೆಯಲ್ಲಿ ಸ್ಥಾನ ಪಡೆಯಿತಲ್ಲದೆ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲೂ ಕಾರಣವಾಯಿತು. ದಕ್ಷಿಣ ಭಾರತದಲ್ಲೂ ಚಿತ್ರ ಚಟುವಟಿಕೆಗಳೂ ತೀವ್ರವಾಗಿದ್ದವು. ತಮಿಳುನಾಡಿನಲ್ಲಿ ಆರ್. ಸುಬ್ರಹ್ಮಣ್ಯಂ ಬಾಲಯೋಗಿನಿ (1936), ಸೇವಾಸದನ (1938), ತ್ಯಾಗಭೂಮಿ (1939) ಮುಂತಾದ ಚಿತ್ರಗಳೊಂದಿಗೆ ಭದ್ರ ಬುನಾದಿ ಹಾಕಿದರು. ತಮಿಳು ಚಿತ್ರರಂಗದ ಆರಂಭಿಕ ಚಿತ್ರಗಳು ಬಹುತೇಕ ನಾಟಕಗಳನ್ನು ದೃಶ್ಯೀಕರಿಸಿಕೊಂಡಿದ್ದವು. 20,000 ಅಡಿ ಉದ್ದವನ್ನೂ 30ಕ್ಕೂ ಹೆಚ್ಚಿನ ಹಾಡುಗಳನ್ನು ಈ ಚಿತ್ರಗಳು ಹೊಂದಿದ್ದವು. ಪ್ರಸಿದ್ಧ ಸಂಗೀತಗಾರರಾದ ಜಿ.ಎನ್.ಬಾಲಸುಬ್ರಹ್ಮಣ್ಯಂ, ಮಹಾರಾಜಪುರಂ ಸಂತಾನಂ, ರತ್ನಬಾಯಿ ಸೋದರಿಯರು, ಎಂ.ಎಸ್. ಸುಬ್ಬಲಕ್ಷ್ಮೀ, ತ್ಯಾಗರಾಜ ಭಾಗವತರ್, ದಂಡ ಪಾಣಿದೇಶೀಕರ್, ಕೆ ಬಿ ಸುಂದರಾಂಬಾಳ್ ಮುಂತಾದವರು ಸಂಗೀತಕ್ಕಾಗಿಯೇ ಚಿತ್ರಗಳಲ್ಲಿ ಅಭಿನಯಿಸಿದರು. ಮೂಕಿಚಿತ್ರಗಳು ಹೆಚ್ಚು ಪ್ರಚುರದಲ್ಲಿದ್ದ ತೆಲುಗಿನಲ್ಲಿ ವಾಕ್ಚಿತ್ರಗಳು ಬಹುಬೇಗ ಜನಪ್ರಿಯವಾದವು. ಸಿ. ಪುಲ್ಲಯ್ಯ, ಸಿ. ನರಸಿಂಹರಾವ್, ಕೆ.ಕೆ. ರಂಗರಾವ್ ಮುಂತಾದ ನಿರ್ದೇಶಕರು ವೈಭವದ ಯುಗವನ್ನೇ ಆರಂಭಿಸಿದರು. ಕನ್ನಡದಲ್ಲಿ ಗುಬ್ಬಿ ವೀರಣ್ಣ, ಆರ್. ನಾಗೇಂದ್ರರಾವ್, ಹೆಚ್. ಎಲ್. ಎನ್. ಸಿಂಹ ಮುಂತಾದವರು ವಾಕ್ಚಿತ್ರಗಳಿಗೆ ಚಾಲನೆ ನೀಡಿದರು. ಮಲೆಯಾಳಂನಲ್ಲಿ 1949ರಲ್ಲಿ ಪಿ.ಜೆ. ಕುರಿಯನ್, ನಿರ್ಮಲಾ ನಿರ್ಮಿಸುವವರೆಗೂ ಸ್ಥಳೀಯರು ಚಿತ್ರ ಚಟುವಟಿಕೆಗಳಲ್ಲಿ ತೊಡಗದಿದ್ದರೂ, ದಕ್ಷಿಣ ಭಾರತದ ಉಳಿದ ಭಾಷೆಯ ಚಿತ್ರ ನಿರ್ಮಾತೃಗಳು ಇಲ್ಲಿ ಚಿತ್ರ ಚಟುವಟಿಕೆಯನ್ನು ಜೀವಂತವಾಗಿರಿಸಿದ್ದರು. 1938ರಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಒಕ್ಕೂಟ ಅಸ್ತಿತ್ವಕ್ಕೆ ಬಂದಿತು.
1943ರಲ್ಲಿ ಸಾಕ್ಷ್ಯಚಿತ್ರಗಳಿಗೆ ಚಾಲನೆ ದೊರಕಿತು. ಭಾರತ ಸರ್ಕಾರದ ನ್ಯೂಸ್ ಪರೇಡ್ ಸಾಕ್ಷ್ಯಚಿತ್ರಗಳನ್ನೂ ಮತ್ತು ನ್ಯೂಸ್ ರೀಲ್‍ಗಳನ್ನು ತಯಾರಿಸಲು ಆರಂಭಿಸಿತು. 1948ರಲ್ಲಿ ಮುಂಬೈ ಮತ್ತು ಮದ್ರಾಸಿನಲ್ಲಿ ಸೆನ್ಸಾರ್ ಬೋರ್ಡ್ ಅಸ್ತಿತ್ವಕ್ಕೆ ಬಂದಿತು. ಇದರ ಜೊತೆಗೆ ಭಾರತೀಯ ಚಿತ್ರ ಒಕ್ಕೂಟಕ್ಕೆ ಚಾಲನೆ ದೊರೆಯಿತು. ಎಸ್. ಕೆ. ಪಾಟೀಲ್ ಸಮಿತಿಯನ್ನು ಸರ್ಕಾರ ಈ ಕಾರಣಕ್ಕಾಗಿ ಸ್ಥಾಪಿಸಿತು (1949). ಇದರ ವರದಿಯಂತೆ 1951ರಲ್ಲಿ ಭಾರತೀಯ ಸೆನ್ಸಾರ್ ಬೋರ್ಡ್ ಮತ್ತು ಫಿಲಂ ಫೆಡರೇಷನ್‍ಗಳು ಅಸ್ತಿತ್ವಕ್ಕೆ ಬಂದವು. 1952ರ ಜನವರಿ 24ರಂದು ಮೊದಲ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂಬೈನಲ್ಲಿ ಜರುಗಿತು. ಇದರಿಂದ ಅಂತರರಾಷ್ಟ್ರೀಯ ಚಿತ್ರಗಳನ್ನು ನೋಡುವ ಅದರ ನಿರ್ಮಾತೃಗಳೊಂದಿಗೆ ಚರ್ಚಿಸುವ ಅವಕಾಶ ಭಾರತೀಯರಿಗೆ ಲಭಿಸಿತು. ಇದು ಭಾರತ ಚಿತ್ರರಂಗದಲ್ಲಿ ಗಮನಾರ್ಹ ತಿರುವಿಗೆ ಕಾರಣವಾಯಿತು. 1952ರಲ್ಲಿ ಭಾರತ ಸರ್ಕಾರ ಸಿನಿಮಾಟೊಗ್ರಾಫ್ ಕಾಯಿದೆಯನ್ನು ಅಂಗೀಕರಿಸುವುದರೊಂದಿಗೆ ಚಿತ್ರ ಚಟುವಟಿಗೆಗಳಿಗೆ ಅಧಿಕೃತ ಸ್ಥಾನಮಾನ ಲಭಿಸಿತು.
ಈ ಹಂತದಲ್ಲಿ ಸ್ಟುಡಿಯೋಗಳು ಪ್ರಧಾನ ಪಾತ್ರ ವಹಿಸಿದ್ದನ್ನು ನೋಡಬಹುದಾಗಿದೆ. ಇಂಪೀರಿಯಲ್, ಸಾಗರ್, ಕೃಷ್ಣ, ಶಾರದಾ, ರಣಜಿತ್, ಪ್ರಭಾತ್, ಮದನ್, ಅರೋರ ಮುಂತಾದ ಸ್ಟುಡಿಯೋಗಳು ಮೂಕಿಯುಗದಿಂದಲೂ ಸಕ್ರಿಯವಾಗಿದ್ದರೆ, ಬಾಂಬೆ ಟಾಕೀಸ್, ಪ್ರಕಾಶ್, ವಾಡಿಯಾ, ಪ್ಯಾರಮ್ಯಾಂಟ್ ಮುಂತಾದ ಸ್ಟುಡಿಯೋಗಳು ವಾಕ್ಚಿತ್ರಯುಗದಲ್ಲಿ ಬೆಳಕಿಗೆ ಬಂದವು. ಈ ಸ್ಟುಡಿಯೋ ಯುಗದಲ್ಲಿ ಗಾಯನ ಬಲ್ಲ ಕಾನನ್ ದೇವಿ, ಕೆ.ಎಲ್. ಸೈಗಾಲ್, ಸುರೇಂದ್ರ, ನೂರ್‍ಜಹಾನ್, ಪಂಕಜ್ ಮಲ್ಲಿಕ್ ಮುಂತಾದವರು ಹೆಚ್ಚು ಜನಪ್ರಿಯರಾಗಿದ್ದರು. ಕಾಲಕ್ರಮೇಣ ದೇವಿಕಾರಾಣಿ, ನಜ್ಮಲ್ ಹುಸೇನ್, ಆಶೋಕ್ ಕುಮಾರ್, ಮೋತಿಲಾಲ್, ಶಾಂತಾ ಆಪ್ಟೆ, ಚಂದ್ರಮೋಹನ್ ಮುಂತಾದವರು ತಮ್ಮ ಅಭಿನಯದಿಂದಲೂ ಜನಪ್ರಿಯರಾದರು. ದಾದಾಸಾಹೇಬ್ ಫಾಲ್ಕೆ, ಬಾಬಾರಾವ್ ಪೇಂಟರ್, ಬಿ.ಎನ್. ರೆಡ್ಡಿ, ಮೆಹಬೂಬ್ ಖಾನ್ ಮೊದಲಾದವರು ಭಾರತೀಯ ಚಿತ್ರರಂಗ ಭದ್ರವಾಗಿ ನೆಲೆಯೂರುವಲ್ಲಿ ಶ್ರಮಿಸಿದರು.
ಆದರೆ ಎರಡನೇ ಮಹಾಯುದ್ಧ ಭಾರತ ಚಿತ್ರರಂಗದ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟು ಮಾಡಿತು. ಇದರಿಂದ ಉಂಟಾದ ಆರ್ಥಿಕ ಮುಗ್ಗಟ್ಟಿನ ಫಲವಾಗಿ ಸ್ಟುಡಿಯೋ ವ್ಯವಸ್ಥೆ ಕುಸಿಯಲು ಆರಂಭಿಸಿತು. ಒಂದು ಬದಲಾದ ವ್ಯವಸ್ಥೆ ರೂಪುಗೊಳ್ಳುತ್ತಿರುವಾಗಲೇ ಭಾರತ ಸ್ವಾತಂತ್ರ್ಯ ಪಡೆಯಿತು. ಇದು ತಂದ ಸಂಭ್ರಮ ಒಂದು ಕಡೆಯಾದರೆ, ದೇಶ ವಿಭಜನೆಯ ನೋವು ಇದನ್ನು ಹಿಂಬಾಲಿಸಿತು. ಅನೇಕ ಕಲಾವಿದರು, ಚಿತ್ರ ನಿರ್ಮಾತೃಗಳು ಎರಡು ದೇಶಗಳ ನಡುವೆ ಹಂಚಿ ಹೋದರು. ವಿಭಜನೆಯಿಂದ ಉಂಟಾದ ಕೋಮು ದುಳ್ಳುರಿ ಆ ಹಂತದ ಬಹುತೇಕ ಚಿತ್ರಗಳ ವಸ್ತುವಾಯಿತು. ಚಿತ್ರಗಳು ಈಗಾಗಲೇ ಪ್ರಧಾನ ಮನೋರಂಜನ ಮಾಧ್ಯಮವಾಗಿ ಸ್ವೀಕೃತವಾಗಿದ್ದವು. ಕ್ರಮೇಣ ಕಲಾವಿದರು ಪ್ರೇಕ್ಷಕರ ಆರಾಧ್ಯ ದೈವಗಳಾಗತೊಡಗಿದ್ದರು. ಇದು ಒಂದು ಮಾರ್ಗದ ಚಿತ್ರಗಳನ್ನು ನಿಯಂತ್ರಿಸಿದರೆ, ಕಲಾತ್ಮಕ ಕಾಳಜಿ ಇನ್ನೊಂದು ಮಾರ್ಗಕ್ಕೆ ನಾಂದಿ ಹಾಡಿತು. ತಾರೆಗಳು ಮಿನುಗಲಾರಂಭಿಸಿದರು (1950-1959) : ಎರಡನೇ ಮಹಾಯುದ್ಧದ ನಂತರ ಚಿತ್ರ ನಿರ್ಮಾಣದ ಮೇಲೆ ಇದ್ದ ನಿಷೇಧಗಳು ದೂರವಾದವು. ಇದರಿಂದ 1945ರಲ್ಲಿ 99 ಚಿತ್ರಗಳು ನಿರ್ಮಾಣವಾದರೆ, 1946ರಲ್ಲಿ ಈ ಸಂಖ್ಯೆ 200ಕ್ಕೆ ಏರಿತು. 1950ರ ಸುಮಾರಿಗೆ ವರ್ಷಕ್ಕೆ 250 ಚಿತ್ರಗಳು ನಿರ್ಮಾಣವಾಗತೊಡಗಿದವು. ನೂರಕ್ಕೂ ಹೆಚ್ಚು ಬಂಡವಾಳಗಾರರು ಕ್ಷೇತ್ರ ಪ್ರವೇಶಿಸಿದರು. ಬಾಂಬೆ, ಕಲ್ಕತ್ತ ಮತ್ತು ಮದ್ರಾಸ್‍ನಲ್ಲಿ ಚಿತ್ರ ಚಟುವಟಿಕೆ ಹೆಚ್ಚಿತು. ಇದರಿಂದ ಹಣದ ಹೊಳೆ ಹರಿಯಲಾರಂಭಿಸಿತು. ಹೊಸ ಬಂಡವಾಳಗಾರರು ಸ್ಟುಡಿಯೋಗಳಲ್ಲಿದ್ದ ತಾರೆಯರನ್ನು ಹೊರತಂದು ಚಿತ್ರ ನಿರ್ಮಾಣಕ್ಕೆ ತೊಡಗಿದರು. ಇದು ಸ್ಟುಡಿಯೋಗಳ ಅವಸಾನಕ್ಕೂ ತಾರಾಪದ್ಧತಿ ಬೆಳೆವಣಿಗೆಗೂ ಕಾರಣವಾಯಿತು. ಸ್ವಾತಂತ್ರ್ಯನಂತರದ ಬೆಳವಣಿಗೆಯಲ್ಲಿ ಬಹಳ ಮುಖ್ಯವಾದದ್ದೆಂದರೆ ಸ್ಟುಡಿಯೋ ವ್ಯವಸ್ಥೆ ಕುಸಿಯಲು ಆರಂಭಿಸಿದ್ದು. ಸುಶಿಕ್ಷಿತರು ಚಿತ್ರರಂಗಕ್ಕೆ ಬಂದದ್ದು. ಇವೆರಡರ ಪರಿಣಾಮ ಚಿತ್ರರಂಗ ಹೆಚ್ಚು ವಾಣಿಜ್ಯಿಕವಾಗಿ ಬೆಳೆಯತೊಡಗಿತು. ಚಿತ್ರರಂಗಕ್ಕೆ ಹೊಸ ಕಥಾವಸ್ತುಗಳು ಬರಲು ಆರಂಭಿಸಿದವು. ಚೇತನ್ ಆನಂದ್ ಅವರ ನೀಚಾನಗರ್ ಶ್ರೀಮಂತ ಮತ್ತು ಬಡವರ ಸಂಘರ್ಷ ಚಿತ್ರಿಸಿತು. ಉದಯಶಂಕರ್ ಕಲ್ಪನಾ ಎಂಬ ವಿಶಿಷ್ಟ ಚಿತ್ರವನ್ನು ತಯಾರಿಸಿದರು. ಬ್ಯಾಲೆಗಳ ಮೂಲಕ ಚಿತ್ರತವಾದ ಈ ಚಿತ್ರ ಸಂಗೀತ ಮತ್ತು ನೃತ್ಯಕ್ಕೆ ಪ್ರಾಧಾನ್ಯತೆ ನೀಡಿತ್ತು. ರಾಜ್ ಕಪೂರ್ ತಮ್ಮ ಆರ್. ಕೆ. ಪ್ರೊಡಕ್ಷನ್ ಮೂಲಕ ಚಿತ್ರ ನಿರ್ಮಾಣ ಆರಂಭಿಸಿದರು ಆಗ್ ಚಿತ್ರದಿಂದಲೇ ಕನಸು ಮತ್ತು ರಮ್ಯ ಕಲ್ಪನೆಗಳನ್ನು ಚಿತ್ರರಂಗಕ್ಕೆ ತಂದರು. ಆವಾರಾ, ಶ್ರೀ 420, ಬೂಟ್ ಪಾಲೀಷ್, ಜಾಗ್ರದಹೋ, ಸಂಗಮ್ ಅವರ ಮುಖ್ಯ ಚಿತ್ರಗಳಾದವು.
ಬಿಮಲ್‍ರಾಯ್ ಹಿಂದಿ ಚಿತ್ರರಂಗಕ್ಕೆ ತಮ್ಮದೇ ಆದ ರೀತಿ ಹೊಸತನ ತುಂಬಿದರು. “ದೋ ಬೀಗಾ ಜಮೀನ್”, ಪರಿಣೀತ, ಮಧುಮತಿ, ಸುಜಾತ ಈ ಘಟ್ಟದಲ್ಲಿ ಬಂದ ಅವರ ಮುಖ್ಯ ಚಿತ್ರಗಳು. ಅವರ ಬಹುತೇಕ ಚಿತ್ರಗಳು ಬಂಗಾಳಿಯ ಪ್ರಖ್ಯಾತ ಲೇಖಕ ಶರಶ್ಚಂದ್ರ ಚಟರ್ಜಿ ಅವರ ಕಾದಂಬರಿಗಳನ್ನು ಆಧರಿಸಿದ್ದವು. ಸಾಮಾಜಿಕ ಬದುಕಿನ ದ್ವಂದ್ವಗಳನ್ನು ಹಿಡಿದಿಟ್ಟ ಈ ಚಿತ್ರಗಳು ತಮ್ಮದೇ ಕಾಣಿಕೆಯನ್ನು ಚಿತ್ರರಂಗಕ್ಕೆ ಸಲ್ಲಿಸಿದವು.
ಗುರುದತ್ ಚಲನಚಿತ್ರದ ಮೂಲಭೂತ ಪರಿಕಲ್ಪನೆಗಳನ್ನೇ ಬದಲಾಯಿಸಬಲ್ಲ ಕೆಲವು ಪ್ರಯೋಗಗಳನ್ನೂ ಮಾಡಿದರು ಪ್ಯಾಸಾ, ಕಾಗಜ್ ಕಾ ಪೂಲ್, ಚೌಧವಿ ಕಾ ಚಾಂದ್ ಚಿತ್ರಗಳು ವಸ್ತು ಮತ್ತು ನಿರ್ವಹಣೆಗಳೆರಡರಲ್ಲಿ ವಿಶಿಷ್ಟವಾಗಿದ್ದವು. ಇದರಲ್ಲಿ ಕಾಗಜ್ ಕಾ ಫೂಲ್ ಭಾರತದ ಮೊದಲ ಸಿನಿಮಾ ಸ್ಕೋಪ್ ಚಿತ್ರವಾಗಿದ್ದು ಕ್ಯಾಮರಾ ಕೋನಗಳಿಂದ ಭಾವಗಳನ್ನು ಅಭಿವ್ಯಕ್ತಿಸಬಲ್ಲ ಪ್ರಯೋಗಶೀಲ ಚಿತ್ರವಾಗಿತ್ತು. (ಛಾಯಾಗ್ರಾಹಕ : ವಿ ಕೆ ಮೂರ್ತಿ ಕನ್ನಡಿಗರು)
ಈ ಹಂತದಲ್ಲಿ ತಾರಾವ್ಯವಸ್ಥೆ ಹೆಚ್ಚು ಪ್ರಚಾರಕ್ಕೆ ಬಂದಿತು ದಿಲೀಪ್ ಕುಮಾರ್ ಮತ್ತು ರಾಜ್ ಕಪೂರ್ ಬಹು ಜನಪ್ರಿಯರಾದರು, ಜನಪ್ರಿಯತೆಗೆ ತಕ್ಕಂತಹ ಚಿತ್ರಗಳ ನಿರ್ಮಣದಲ್ಲಿ ಆಸಕ್ತರಾದರು. ದೇವ ಆನಂದ್, ಅಶೋಕ್ ಕುಮಾರ್, ಭರತ್ ಭೂಷಣ್, ರಾಜೇಂದ್ರ ಕುಮಾರ್, ಸುನಿಲ್‍ದತ್ ಜನಪ್ರಿಯ ತಾರಾಪರಿವಾರಕ್ಕೆ ಪ್ರಾಣ್, ಕೆ.ಎನ್. ಸಿಂಗ್ ಪ್ರಮುಖ ಖಳ ನಟರಾದರೆ, ಆಗ ಓಂ ಪ್ರಕಾಶ್ ಮತ್ತು ಜಾನಿವಾಕರ್ ಜನಪ್ರಿಯ ಹಾಸ್ಯ ನಟರಾದರು. ಕಿಶೋರ್ ಕುಮಾರ್ ಗಾಯನ ಮತ್ತು ಅಭಿನಯಗಳೆರಡರಲ್ಲಿ ಖ್ಯಾತರಾದರು. ನಟಿಯರಲ್ಲಿ ನರ್ಗಿಸ್ ತಮ್ಮ ಸಹಜ ಅಭಿನಯದಿಂದ ಖ್ಯಾತರಾದರು. ಮೀನಾಕುಮಾರಿ, ಮಧುಬಾಲಾ ಪ್ರಖ್ಯಾತರಾದ ಇತರ ಕಲಾವಿದೆಯರು. ಈ ಹಂತದಲ್ಲಿ ಸಂಗೀತಕ್ಕೆ ಚಿತ್ರರಂಗದಲ್ಲಿ ಮಹತ್ವ ಬಂದಿತು. ದೀನನಾಥ್ ಮಂಗೇಶ್ಕರ್ ಅವರ ಪುತ್ರಿಯರಾದ ಲತಾ ಮತ್ತು ಆಶಾ ಗಾಯಕಿಯರಾಗಿ ಖ್ಯಾತರಾದರು. ಗಾಯಕರಲ್ಲಿ ಕಿಶೋರ್‍ಕುಮಾರ್, ಮಹಮ್ಮದ್ ರಫಿ, ಮುಖೇಶ್ ಜನಪ್ರಿಯರಾದರು. ಹಳೆಯುಗದ ಗಾಯಕರಾದ ಕೆ.ಎಲ್. ಸೈಗಲ್ ಮತ್ತು ನೂರ್‍ಜಹಾನ್ ಈಗಲೂ ತಮ್ಮ ಗಾಯನ ಮುಂದುವರಿಸಿದರು.
ವಸ್ತುವಿನಲ್ಲಿ ಹಿಂದಿ ಚಿತ್ರರಂಗ ಕಂಡುಕೊಂಡ ಬದಲಾವಣೆ ತಾರಾಪದ್ಧತಿಗೆ ಅನುಗುಣವಾಗಿತ್ತು. ಇದರಿಂದ ಚಿತ್ರೀಕರಣದಲ್ಲಿ ಶ್ರೀಮಂತಿಕೆ ಕಾಣಿಸಿಕೊಂಡಿತು. ಮೋದಿ ಅವರ ಪುಕಾರ್ ಮತ್ತು ಪೃಥ್ವಿ ವಲ್ಲಭ್‍ಅನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹದು. ಕೇದಾರ್‍ಶರ್ಮ ಅವರ ಚಿತ್ರಲೇಖಾ, ಜೆ ಬಿ ಎಚ್ ವಾಡಿಯ ಅವರ `ಕೋರ್ಟ್ ಡ್ಯಾನ್ಸರ್, ಈ ದೃಷ್ಟಿಯಿಂದ ಗಮನಾರ್ಹ ಪ್ರಯೋಗಗಳು. ಈ ದಶಕದಲ್ಲಿ ಹಿಂದಿ ಚಿತ್ರರಂಗ ಪಡೆದುಕೊಂಡ ತಾಂತ್ರಿಕತೆ ಮತ್ತು ವ್ಯಾಕರಣ ಹಲವು ದಶಕಗಳ ಕಾಲ ಬದಲಾಗದೆ ಉಳಿದುಕೊಂಡಿತು. ದೃಶ್ಯಮಾಧ್ಯಮ ಕನಸುಗಾರಿಕೆಯ ವಿಸ್ತರಣೆ ಎಂಬಂತೆ ಪಡೆದ ಆಯಾಮ ತಾರಾವ್ಯವಸ್ಥೆ ಗಟ್ಟಿಯಾಗಿ ಬೆಳೆಯಲು ಕಾರಣವಾಯಿತು.
ಬಂಗಾಳಿ ಚಿತ್ರರಂಗದಲ್ಲಿ ಐವತ್ತರ ದಶಕದಲ್ಲೇ ಮಹತ್ತರ ಬದಲಾವಣೆಗಳು ಸಂಭವಿಸಿವು. 1955ರಲ್ಲಿ ಸತ್ಯಜಿತ್ ರೇ ಪಥೇರ್ ಪಾಂಚಾಲಿ ನಿರ್ಮಿಸಿದರು. ಇದು ಕ್ಯಾನೆ ಪ್ರಶಸ್ತಿ ಸೇರಿದಂತೆ ಹಲವು ಅಂತರರಾಷ್ಟ್ರೀಯ ಮನ್ನಣೆ ಪಡೆದು ಬಂಗಾಳಿ ಚಿತ್ರರಂಗ ಹಾಗೂ ಭಾರತೀಯ ಚಿತ್ರರಂಗಗಳ ಮೇಲೆ ತನ್ನದೇ ಆದ ಪರಿಣಾಮ ಬೀರಿತು. ಈ ಚಿತ್ರದ ಯಶಸ್ವಿನಿಂದ ಪಡೆದ ಋತ್ವಿಕ್ ಘಟಕ್ ಬಂಗಾಳಿ ನಿರಾಶ್ರಿತರ ಸಮಸ್ಯೆಯ ಆಯಾಮ ಬಳಸಿಕೊಂಡು ನಾಗರಿಕ್ (1953), ಅಜಂತ್ರಿಕ್ (1958), ಚಿತ್ರಗಳನ್ನು ನಿರ್ಮಿಸಿ ದೇಶದ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡರು. ಹೀಗೆ ಪ್ರಭಾವಿತರಾದ ಇನ್ನೊಬ್ಬ ಪ್ರಮುಖ ನಿರ್ದೇಶಕ ಮೃಣಾಲ್‍ಸೇನ್ ಅವರ ರಾತ್ ಭೋರ್ (1956) ಮಹತ್ವ ಪಡೆಯದಿದ್ದರೂ ಮುಂದಿನ ಚಿತ್ರಗಳಾದ ನೀಲ್ ಆಕಾಶೇರ್ ನೀಚೆ (1959), ಬೈಸೆ ಶ್ರಾವಣ್ (1960), ಏಕ್ ದಿನ್ ಅಚಾನಕ್(1988) ಬದಲಾವಣೆಯ ಗಾಳಿಗೆ ಪೂರಕವಾದವು. ಇತ್ತ ತರುಣ್ ಮಜುಮ್‍ದಾರ್‍ರಂತಹ ನಿರ್ದೇಶಕರು ವ್ಯಾಪಾರಿ ಚಿತ್ರರಂಗವನ್ನು ಜೀವಂತವಾಗಿರಿಸಿದರು. ತಮಿಳು ಚಿತ್ರರಂಗದಲ್ಲಿ ಸಿ. ಎನ್, ಅಣ್ಣಾದೊರೈ ವೇಲೇಕಾರಿ (1949)ಗೆ ನೀಡಿದ ಸಂಭಾಷಣೆ, ಚಲನಚಿತ್ರದಲ್ಲಿ ಭಾಷೆಗೆ ಪ್ರಮುಖ ಸ್ಥಾನ ಕಲ್ಪಿಸಿತು. ಮುಂದೆ ಅವರ ಶಿಷ್ಯರಾದ ಕರುಣಾನಿಧಿ ತಮ್ಮ ಸಂಭಾಷಣೆಗಳಿಂದ ಚಿತ್ರಮಾಧ್ಯಮದಲ್ಲಿ ಹೆಸರಾದರು. ಅಣ್ಣಾದೊರೈ ಮತ್ತು ಕರುಣಾನಿಧಿ ಅವರಿಗೆ ಚಲನಚಿತ್ರ ರಾಜಕೀಯ ಅಸ್ತ್ರವಾಯಿತು. ಶಿವಾಜಿ ಗಣೇಶನ್ ಮತ್ತು ಎಂ.ಜಿ.ಆರ್ ತಮಿಳು ಚಿತ್ರರಂಗದಲ್ಲಿ ಜನಪ್ರಿಯತೆಯ ಶಿಖರವನ್ನೇರಿದರು. ಇವರಿಂದ ತಮಿಳು ಚಿತ್ರರಂಗದಲ್ಲಿ ಬಹುಬೇಗ ತಾರಾ ವ್ಯವಸ್ಥೆ ಬಂದಿತು. ತೆಲುಗು ಚಿತ್ರರಂಗದಲ್ಲಿ ನಲವತ್ತರ ದಶಕದಲ್ಲೇ ಕಾಂಚನಮಾಲಾ, ಕನ್ನಾಂಬಾ ರಂತಹ ಜನಪ್ರಿಯ ತಾರೆಯರಿದ್ದರು. ಆದರೆ ಅಕ್ಕಿನೇನಿ ನಾಗೇಶ್ವರರಾವ್ ಮತ್ತು ಎನ್.ಟಿ ರಾಮರಾವ್ ಅವರ ಆಗಮನದೊಂದಿಗೆ ಚಿತ್ರರಂಗದ ಸ್ವರೂಪವೇ ಬದಲಾಯಿತು. ಈ ಇಬ್ಬರು ತಾರೆಯರು ಮುಂದಿನ ಹಲವು ದಶಕಗಳ ಕಾಲ ತೆಲುಗು ಚಿತ್ರರಂಗವನ್ನು ಆಳಿದರು.
ಕನ್ನಡದಲ್ಲಿ ರಾಜ್‍ಕುಮಾರ್, ಉದಯಕುಮಾರ್, ಕಲ್ಯಾಣಕುಮಾರ್ ನಾಯಕರಾಗಿ ನರಸಿಂಹರಾಜು, ಬಾಲಕೃಷ್ಣ ಹಾಸ್ಯನಟರಾಗಿ ಜನಪ್ರಿಯರಾಗಿದ್ದ ಕನ್ನಡ ಚಿತ್ರರಂಗ ಐವತ್ತರ ದಶಕದಲ್ಲಿ ತಾರಾಪದ್ಧತಿಯಿಂದ ಹೊರತಾಗಿ ಪ್ರಯೋಗಶೀಲವಾಗಿತ್ತು. ಮಲೆಯಾಳಂನಲ್ಲಿ ಪಿ. ಸುಬ್ರಹ್ಮಣ್ಯಂ ಅವರು 1951ರಲ್ಲಿ ತಿರುವನಂತಪುರದಲ್ಲಿ ಸ್ಥಾಪಿಸಿದ ಮೇರಿಲ್ಯಾಂಡ್ ಸ್ಟುಡಿಯೋ ಮಹತ್ತರ ಬದಲಾವಣೆಗೆ ಕಾರಣವಾಯಿತು. ಸತ್ಯನ್, ಎಸ್.ಕೆ. ಪಿಳ್ಳೈ, ಶ್ರೀಧರನ್ ನಾಯರ್, ಬಿ. ಎಸ್. ಸರೋಜ, ಪದ್ಮಿನಿ ಮುಂತಾದವರು ಜನಪ್ರಿಯ ತಾರೆಯರಾದರು. ಮರಾಠಿ ಚಿತ್ರರಂಗದಲ್ಲಿ ದತ್ತಾ ಧರ್ಮಾಧಿಕಾರಿ ಕಣ್ಣೀರಿನ ಕತೆಗಳಿಂದ ಜನಪ್ರಿಯರಾದರೆ, ರಾಜಾಪರಾಂಜಪೆ ಹಾಸ್ಯ ಚಿತ್ರಗಳಿಂದ ಜನಪ್ರಿಯರಾದರು. ಹೀಗೆ ಐವತ್ತರ ದಶಕ ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳಲ್ಲಿ ವಿವಿಧ ನೆಲೆಯ ಬೆಳವಣಿಗೆಯನ್ನು ಕಂಡಿತು. ಬಹಳ ಸ್ವಷ್ಟವಾಗಿ ವ್ಯಾಪಾರಿ ಮತ್ತು ಕಲಾತ್ಮಕ ಚಿತ್ರಗಳೆಂಬ ಕವಲು ಕಾಣಿಸಿಕೊಳ್ಳಲು ಆರಂಭಿಸಿದ್ದು ಈ ಹಂತದಲ್ಲೇ.
ತಾಂತ್ರಿಕ ವೈಭವ, ಕಲಾತ್ಮಕತೆಯತ್ತ ಕಾಳಜಿ (1960-69) : 1967ರ ಸೆಪ್ಟೆಂಬರ್ 1 ರಂದು ಮಹಾರಾಷ್ಟ್ರ ಸರ್ಕಾರ ಮನೋರಂಜನಾ ತೆರಿಗೆ ವಿಧಿಸಿತು. ಬಹುತೇಕ ರಾಜ್ಯಸರ್ಕಾರಗಳು ಇದನ್ನು ಅನುಸರಿಸಿದವು. ತೆರಿಗೆ ವ್ಯವಸ್ಥೆ ಬಂದ ಮೇಲೆ ಚಿತ್ರಂಗದ ಅಪಾರ ಪರಿಣಾಮ ಬೀರಿತು. ನಿರ್ಮಾಣ ಮತ್ತು ವಿತರಣೆ ನಡುವೆ ಕಂದಕ ಉಂಟಾಯಿತು. ನಿರ್ಮಾಣ ಸಂಸ್ಥೆಗಳ ಬದಲು ನಿರ್ಮಾಪಕರು ಬಂದರು. ಕನಿಷ್ಠ ಬಂಡವಾಳ ಹಿಂತಿರುಗಿ ಬರುವಂತಾಗಲು ಕೆಲವು ಕಥಾಸೂತ್ರಗಳು ಸಿದ್ಧವಾದವು. ನಾಯಕರನ್ನು ಕೇಂದ್ರವಾಗಿರಿಸಿ ಚಿತ್ರ ನಿರ್ಮಾಣ ಮಾಡುವ ಪದ್ಧತಿ ಬೆಳೆಯಿತು. ಚಿತ್ರ ಸೋತರೆ ಅದರ ಪೂರ್ತಿ ಜವಾಬ್ದಾರಿ ವಿತರಕನ ಮೇಲೆ ಬೀಳುತ್ತಿದ್ದರಿಂದ ಅವನು ಹೊಸ ವ್ಯವಸ್ಥೆಯಲ್ಲಿ ಚಿತ್ರಸೂತ್ರಕ್ಕೆ ಆಗ್ರಹಿಸತೊಡಗಿದ. ಇದು ತಾರೆಗಳು ಸೂಪರ್ ಸ್ಟಾರ್‍ಗಳಾಗಲು ಮುಖ್ಯ ಕಾರಣವಾಯಿತು.
ಐವತ್ತರ ದಶಕ ಬಹಳ ಪ್ರಯೋಗಶೀಲತೆಯ ಕುರುಹನ್ನು ತೋರಿಸಿದ್ದರೂ ಅರವತ್ತರ ದಶಕ ಸಂದಿಗ್ಧದಲ್ಲೇ ಕಳೆಯಿತು. ತಾಂತ್ರಿಕವಾಗಿ ಹೊಸ ಹೊಸ ಅವಿಷ್ಕಾರಗಳು ಒಂದೆಡೆ ಸಂಭವಿಸಿದ್ದರೆ. ಇನ್ನೊಂದೆಡೆ ತಾರಾ ವ್ಯವಸ್ಥೆ ಪ್ರಬಲವಾಗಿ ಅದು ಚಿತ್ರದ ಅರ್ಥವ್ಯವಸ್ಥೆಯನ್ನೇ ನಿಯಂತ್ರಿಸಲು ಆರಂಭಿಸಿತು. ಅರವತ್ತರ ದಶಕ ಆರಂಭವಾದದ್ದು ಕೆ ಅಸೀಫ್ ಅವರ ಮೋಗಲ್-ಎ-ಆಜಂ(1960) ಐತಿಹಾಸಿಕ ಯಶಸ್ವಿನೊಂದಿಗೆ, ದೇವ್ ಆನಂದರ ಗೈಡ್, ಸುಬೋಧ್ ಮುಖರ್ಜಿ ಅವರ ಜಂಗ್ಲಿ, ದಿಲೀಪ್ ಕುಮಾರ್ ಅವರ ಗಂಗಾ ಜಮುನಾ, ಗುರುದತ್ ಅವರ ಸಾಹಿಬ್ ಬೀಬಿ ಔರ್ ಗುಲಾಮ್, ಬಿಮಲ್ ರಾಯ್ ಅವರ ಬಂಧಿನಿ, ರಾಜ್‍ಕುಮಾರ್ ಅವರ ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ, ಸಂಗಮ್, ಚೇತನ್ ಆನಂದ್ ಅವರ ಹಕೀಕತ್, ಪ್ರಮೋದ್ ಚಕ್ರವರ್ತಿ ಅವರ ಲವ್ ಇನ್ ಟೊಕಿಯೊ, ನಾಗಿರೆಡ್ಡಿ ಅವರ ರಾಮ್ ಔರ್ ಶ್ಯಾಮ್, ಹೃಷಿಕೇಶ್ ಮುಖರ್ಜಿ ಅವರ ಆಶೀರ್ವಾದ್ ಈ ದಶಕದ ಕೆಲವು ಮುಖ್ಯ ಚಿತ್ರಗಳು. ಅಶೋಕ್‍ಕುಮಾರ್, ದಿಲೀಪ್‍ಕುಮಾರ್, ರಾಜ್‍ಕಪೂರ್, ದೇವ್‍ಆನಂದ್, ಭರತ್‍ಭೂಷಣ್, ಸುನಿಲ್‍ದತ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ರಾಜ್‍ಕುಮಾರ್, ಧರ್ಮೇಂದ್ರ, ಮನೋಜ್‍ಕುಮಾರ್, ಸಂಜೀವ್‍ಕುಮಾರ್, ಜಿತೇಂದ್ರ ಮುಂತಾದ ನಟರೂ ನರ್ಗೀಸ್, ಮಧುಬಾಲಾ, ಮೀನಾಕುಮಾರಿ, ಸುರಯ್ಯ, ಗೀತಾಬಾಲಿ, ವಹೀದಾ ರೆಹಮಾನ್, ಆಶಾಪಾರೀಖ್, ಮಾಲಾಸಿನ್ಹ ಮುಂತಾದ ನಟಿಯರು ತಾರೆಗಳಾಗಿ ಮಿನುಗಿದರು. ಅಲ್ಲದೆ ಮಹಮದ್‍ರಫಿ, ಮುಖೇಶ್, ಮನ್ನಾಡೆ ಕಿಶೋರ್‍ಕುಮಾರ್, ಲತಾಮಂಗೇಶ್ಕರ್, ಆಶಾ ಭೋಂಸ್ಲೆ ಮುಂತಾದ ಹಿನ್ನಲೆ ಗಾಯಕರೂ ಪ್ರಸಿದ್ಧಿ ಪಡೆದರು. ಹೀಗೆ ಒಂದೆಡೆ ಹಿಂದಿ ಚಿತ್ರರಂಗ ಬಣ್ಣದ ಕನಸುಗಳನ್ನು ಹಂಚುತ್ತಿದ್ದರೆ ಹೊಸ ಅಲೆ ಸಿನಿಮಾ ಇದಕ್ಕೆ ಪರ್ಯಾಯವಾಗಿ ರೂಪುಗೊಳ್ಳಲು ಆರಂಭಿಸಿತು. ಬಸು ಚಟರ್ಜಿ ಅವರ ಸಾರಾ ಆಕಾಶ್, ರಾಜೇಂದರ್ ಸಿಂಗ್ ಬೇಡಿ ಅವರ ದಸ್ತಕ್, ಮಣಿಕೌಲ್ ಅವರ ಉಸ್ಕಿ ರೋಟಿ, ಕುಮಾರ್ ಸಾಹನಿ ಅವರ ಮಾಯಾದರ್ಪಣ್, ಬಸು ಭಟ್ಟಚಾರ್ಯರ ಅನುಭವ್, ಕಾಂತಿಲಾಲ್ ರಾಥೋಡ್ ಅವರ ಕಂಕು ಸಿನಿಮಾ ತನ್ನದೇ ಆದ ಗುಣಗಳನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳಾದವು. ಈ ಹಂತದ ಚಿತ್ರಗಳಲ್ಲಿ ಐದು ಮಾದರಿಗಳನ್ನು ಕಾಣಬಹುದು. ಒಂದು ಮನೋರಂಜನಾ ಮಾಧ್ಯಮವಾಗಿ ಚಲನಚಿತ್ರವನ್ನು ಬಿಂಬಿಸಿದ ಮಾದರಿ, ಎರಡು, ಲೈಂಗಿಕತೆಯ ಹಸಿ, ಹಸಿ ಚಿತ್ರಣಗಳುಳ್ಳ ಕಚ್ಚಾ ಮಾದರಿ, ಮೂರನೆಯದು ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿದ ವಿಶ್ಲೇಷಣಾತ್ಮಕ ಚಿತ್ರಗಳು, ನಾಲ್ಕನೆಯದು ಹೊಸ ಅಲೆ ಚಿತ್ರಗಳು, ಐದನೆಯದು ಹಿಂಸೆ ಮತ್ತು ಕ್ರೌರ್ಯವನ್ನು ಪ್ರಧಾನವಾಗಿ ಚಿತ್ರಿಸಿದ ಚಿತ್ರಗಳು. ರಾಜಕೀಯವಾಗಿಯೂ ನೆಹರೂಯುಗ ಮೂಡಿಸಿದ ನಿರಾಶೆ ಪಾಕಿಸ್ಥಾನ ಮತ್ತು ಚೀನಾದ ಆಕ್ರಮಣ ಮೂಡಿಸಿದ ಹತಾಶೆ ಮುಂತಾದ ಅಂಶಗಳು ಈ ಕಾಲದ ಚಿತ್ರಗಳನ್ನು ಪ್ರಭಾವಿಸಿದವು.
ಪರ್ಯಾಯ ಮಾರ್ಗ ಬಂಗಾಳದಲ್ಲಿ ಹಿಂದಿನ ದಶಕದಂತೆ ಉಚ್ಟ್ರಾಯದಲ್ಲಿ ಮುಂದುವರೆಯಿತು ಸತ್ಯಜಿತ್ ರಾಯ್ ಅವರ ಚಿತ್ರಲೇಖಾ (1964) ಮತ್ತು ಗೋಪಿ ಗಾಯ್ನೇ ಬಾಗೇ ಬಾಯ್ನೇ (1968) ಸಿನಿಮಾ ವ್ಯಾಕರಣವನ್ನೇ ವಿಸ್ತರಿಸುವಷ್ಟು ವಿಭಿನ್ನವಾಗಿ ಬಂದವು. ಋತ್ವಿಕ್ ಘಾಟಕ್, ತಪನ್ ಸಿನ್ಹಾ, ಮೃಣಾಲ್ ಸೇನ್‍ರಂತೆ ಕುಮಾರ್ ಬೋಸ್, ಅಸಿತ್‍ಸೇನ್, ಇಂದರ್‍ಸೇನ್, ಬಿಜಯ್‍ಬೋಸ್, ಪ್ರಭಾತ್ ಮುಖರ್ಜಿ, ದಿನೇಶ್ ಗುಪ್ತ ಮುಂತಾದ ಅನೇಕ ಪ್ರತಿಭಾವಂತ ನಿರ್ದೇಶಕರು ಬಂಗಾಳಿ ಚಿತ್ರಗಳು ಶ್ರೇಷ್ಠತೆಯ ಶಿಖರವೇರಲು ನೆರವಾದರು.
ತಮಿಳು ಚಿತ್ರರಂಗದಲ್ಲಿ ಕಮಲಹಾಸನ್ ಮತ್ತು ರಜನೀಕಾಂತ್ ಈ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದರು. ಕೆ. ಬಾಲಚಂದರ್ ವ್ಯಾಪಾರಿ ಚಿತ್ರಗಳಿಗೆ ಕಲಾತ್ಮಕತೆ ಹೊಳಪನ್ನು ನೀಡುವ ಹೊಸ ಸಾಧ್ಯತೆಯತ್ತ ಬೆಳಕು ಚೆಲ್ಲಿದರು. ತೆಲುಗು ಚಿತ್ರರಂಗದಲ್ಲಿ ಶೋಭನ್‍ಬಾಬು (1960) ಮತ್ತು ಕೃಷ್ಣ (1965) ರಂಗ ಪ್ರವೇಶಿಸಿ ಹೊಸತನದ ಮಿಂಚನ್ನು ತಂದರು. ಕನ್ನಡ ಚಿತ್ರರಂಗದಲ್ಲಿ ಪುಟ್ಟಣ್ಣ ಕಣಗಾಲ್, ಎನ್. ಲಕ್ಷ್ಮೀನಾರಾಯಣ್ ರಂಗ ಪ್ರವೇಶದೊಂದಿಗೆ ಹೊಸಗಾಳಿ ಬೀಸತೊಡಗಿತು. ಮಲಯಾಳಿ ಚಿತ್ರರಂಗ ಹಲವು ಸಾಹಿತ್ಯ ಕೃತಿಗಳನ್ನು ಸಿನಿಮಾ ಮಾಧ್ಯಮಕ್ಕೆ ತರುವ ಮೂಲಕ ತನ್ನ ವೈಭವದ ಯುಗವನ್ನು ಕಂಡುಕೊಂಡಿತು. ರಾಮು ಕಾರಿಯತ್ ಅವರ ಚೆಮ್ಮೀನ್ (1965) ಪಿ. ಭಾಸ್ಕರನ್ ಅವರ ಇರುತ್ತಿನೆ ಅತುಲ್ (1967) ಎ. ವಿನ್ಸೆಂಟ್ ಅವರ ತುಲಾಭಾರಂ (1968) ಅವುಗಳಲ್ಲಿ ಬಹಳ ಮುಖ್ಯವಾದವು. ಪ್ರೇಮ್ ನಜೀರ್ ಜನಪ್ರಿಯರಾದರು. ಗ್ರೇಟರ್ ಮುಂಬೈ ರಾಜ್ಯ ಗುಜರಾತ್ ಮತ್ತು ಮಹಾರಾಷ್ಟ್ರವಾಗಿ ವಿಭಜನೆಯಾದ್ದರಿಂದ ಎರಡೂ ಭಾಷೆಯ ಚಿತ್ರರಂಗ ತೀವ್ರ ಹಿನ್ನೆಡೆ ಅನುಭವಿಸಿದವು. ಒಟ್ಟಾಗಿ ಅರವತ್ತರ ದಶಕ ಚಿತ್ರರಂಗ ವ್ಯಾಪಾರೀಕರಣಗೊಳ್ಳುವುದರ ಸೂಚನೆ ನೀಡುವುದರ ಜೊತೆಗೆ ತನ್ನ ಸ್ವಂತಿಕೆ ಉಳಿಸಿಕೊಳ್ಳಲು ಪ್ರಯತ್ನವನ್ನೂ ಕಾಣುವುದರೊಂದಿಗೆ ಸಂಕೀರ್ಣವಾದ ಘಟ್ಟವನ್ನು ತಲುಪಿತು. 1970-79 ವಿಸ್ತರಿಸಿದ ಬಿರುಕು: 70ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಎರಡು ರೀತಿಯ ಬದಲಾವಣೆಗಳು ಕಾಣಿಸಿಕೊಂಡವು. ತಾಂತ್ರಿಕವಾಗಿ ನೇರ ನಿರೂಪಣೆಯಿಂದ ಉಂಟಾಗುತ್ತಿದ್ದ ಕೃತ್ರಿಮತೆ ದಾಟಲು ವೈಡ್‍ಸ್ಕ್ರೀನ್ ಲಾಂಗ್ - ಟೇಕ್ ಹಾಗೂ ಘಟನಾತ್ಮಕ ನಿರೂಪಣೆಯಿಂದ ಚಿತ್ರದ ವೇಗ ಮತ್ತು ನಿರೂಪಣೆಯನ್ನು ಸೂಕ್ಷವಾಗಿಸಿಕೊಂಡ ಪರ್ಯಾಯ ಸಿನಿಮಾ ಹಾಲಿವುಡ್ ಚಿತ್ರಗಳು ಮೂಡಿಸಿದ್ದ ಭ್ರಮಾತ್ಮಕತೆ ಮುರಿಯಲು ಜಗತ್ತಿನಾದ್ಯಂತ ಚಳುವಳಿಯಂತೆ ಆರಂಭವಾಯಿತು. ಭಾರತದಲ್ಲೂ ಅದರ ಪರಿಣಾಮ ಉಂಟಾಯಿತು. ಕೆ.ಎ. ಅಬ್ಬಾಸ್, ಚೇತನ್ ಆನಂದ್, ಶಾಂತರಾಂ, ಗುರುದತ್, ಹೃಷಿಕೇಶ್ ಮುಖರ್ಜಿ ಮುಂತಾದವರು ಆರಂಭದ ದಿನದಲ್ಲೇ ಸೂಕ್ಷ್ಮ ನಿರೂಪಣೆಯ ಚಿತ್ರಗಳನ್ನು ರೂಪಿಸಿದ್ದರು. ಸತ್ಯಜಿತ್ ರೇ ಅವರ ಪಥೇರ್ ಪಾಂಚಾಲಿ ಈ ಚಳುವಳಿಗೆ ಒಂದು ರೂಪವನ್ನು ನೀಡಿತು. ಎಪ್ಪತ್ತರ ದಶಕದಲ್ಲಿ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಹೊಸ ಅಲೆ ಚಿತ್ರಗಳು ಕಾಣಿಸಿಕೊಂಡು ಬದಲಾವಣೆಯ ಗಾಳಿ ಬೀಸಲು ಕಾರಣವಾಯಿತು. ಎನ್.ಎಫ್.ಡಿ.ಸಿಯ ಯೋಜನೆಗಳು ಮತ್ತು ಆಗ ಹುಟ್ಟಿಕೊಂಡ ಚಿತ್ರ ಸಮಾಜಗಳು ಈ ಚಳವಳಿಗೆ ಇಂಬು ನೀಡಿದವು. ಭಾರತೀಯ ಚಿತ್ರ ಸಮಾಜಗಳ ಒಕ್ಕೂಟ ಇಂತಹ ಪ್ರಯತ್ನಗಳಿಗೆ ಬೆನ್ನೆಲುಬಾಯಿತು. ಇನ್ನೊಂದು ದಿಕ್ಕಿನಲ್ಲಿ ಪ್ರಧಾನವಾಹಿನಿ ಸಿನಿಮಾ ತನ್ನದಾದ ಗುಣಗಳನ್ನೆಲ್ಲ ಕಳೆದುಕೊಳ್ಳುವಷ್ಟರ ಮಟ್ಟಿಗೆ ಜನಪ್ರಿಯತೆಗೆ ಬಲಿಯಾಯಿತು. ಆಂಶಿಕವಾಗಿರುತ್ತಿದ್ದ ಹಿಂಸೆ ಮತ್ತು ಕಾಮ ಪ್ರಚೋದಕತೆ ಈಗ ಪ್ರಧಾನ ವಸ್ತುವಾಯಿತು. ತುರ್ತಪರಿಸ್ಥಿತಿ ಘೋಷಣೆ ಅದರ ಕರಾಳ ದಿನಗಳು ನಂತರ ಜನತಾಪಕ್ಷದ ಅಲ್ಪ ಆಳ್ವಿಕೆ ಅದರ ಪತನ ತಂದ ನಿರಾಸೆ ಜೊತೆಗೆ ಮೇರೆ ಮೀರಿದ ರಾಜಕೀಯ ಭ್ರಷ್ಟಾಚಾರ ಮತ್ತು ಲಂಚಗುಳಿತನ ರಾಜಕೀಯ ಚಿತ್ರಗಳಿಗೆ ಪ್ರೇರಣೆ ನೀಡಿತು, ಅದೂ ಕೂಡ ಹಸಿಹಸಿಯಾಗಿ ಅಭಿವ್ಯಕ್ತವಾಯಿತು. ವಾಣಿಜ್ಯಕವಾಗಿ ಬೆಳೆದು ನಿಂತ ಚಲನಚಿತ್ರ ಉದ್ಯಮವಾಗಿ ತಾರಾಪದ್ಧತಿ ಅದನ್ನು ನಿಯಂತ್ರಿಸುವ ವ್ಯವಸ್ಥೆಯಾಯಿತು. ರಾಜೇಶ್ ಖನ್ನ, ಅಮಿತಾಬ್ ಬಚ್ಚನ್ ಸೂಪರ್‍ಸ್ಟಾರ್‍ಗಳಾದರು. ರಿಶಿಕಪೂರ್, ಮಿಥುನ್ ಚಕ್ರವರ್ತಿ, ಶತ್ರುಘ್ನ ಸಿನ್ಹಾ ಮುಂತಾದವರು ಬೇಡಿಕೆ ತಾರೆಯರಾದರು. ಹೇಮಮಾಲಿನಿ, ರೇಖಾ, ಶರ್ಮಿಳಾ ಟಾಗೂರ್, ಜೀನತ್ ಅಮಾನ್, ಡಿಂಪಲ್ ಕಪಾಡಿಯಾ ಮುಂತಾದವರು ಕನಸಿನ ಕನ್ಯೆಯರಾಗಿ ಮಿಂಚಿದರು. ಪ್ರಧಾನವಾಹಿನಿಯಲ್ಲಿ ಕಮಲ್ ಅಮ್ರೋಹಿ ಅವರ ಪಾಕೀಜಾ, ರಾಜ್‍ಕಪೂರ್ ಅವರ ಶ್ರೀ 420, ಜಾಗ್ತೆ ರಹೋ, ರಮೇಶ್ ಸಿಪ್ಪಿ ಅವರ ಶೋಲೆ ಸೇರಿದಂತೆ ದೀವಾರ್, ಸೀತಾ ಔರ್ ಗೀತಾ, ಶೋಲೆ, ಜಾನಿ ಮೇರಾ ನಾಮ್, ಅಮರ್ ಅಕ್ಬರ್ ಅಂತೋನಿ, ಮುಕದ್ದರ್ ಕಾ ಸಿಕಂದರ್ ಮುಂತಾದ ಯಶಸ್ವಿ ಚಿತ್ರಗಳು ಬಂದವು. ಹೊಸ ಅಲೆಯಲ್ಲಿ ಗುಣಮಟ್ಟ ಕಾಪಾಡಿಕೊಂಡ ಪ್ರಯೋಗಶೀಲ ಚಿತ್ರಗಳಾದ ಗೋವಿಂದ ನಿಹಲಾನಿ ಅವರ ಅಕ್ರೋಶ್, ರವೀಂದ್ರ ಧರ್ಮರಾಜ್ ಅವರ ಚಕ್ರ, ಸಾಯಿ ಪರಾಂಜಪೆ ಅವರ ಸ್ಪರ್ಶ ತೆರೆ ಕಂಡವು. ಎರಡೂ ಮಾದರಿಗಳ ನಡುವಿನ ಬಿರುಕು ಹೆಚ್ಚಾಯಿತು ಹಾಗೂ ಎರಡೂ ಪರಸ್ಪರ ವಿರುದ್ಧ ಎಂಬ ನೆಲೆ ತಲುಪಿದವು. ಎಂ ಎಸ್ ಸತ್ಯು ಅವರ ದೇಶ ವಿಭಜನೆ, ಮತೀಯ ಗಲಭೆ, ರಾಜಕಾರಣಿಗಳ ಚದುರಂಗದಾಟದ ಹಿನ್ನೆಲೆಯ `ಗರಂ ಹವಾ(1975) ದಶಕದ ಗಣನೀಯ ಚಿತ್ರಗಳಲ್ಲೊಂದು.
ಬಂಗಾಳಿ ಚಿತ್ರರಂಗದಲ್ಲಿ ಹೊಸ ಪೀಳಿಗೆ ನಿರ್ದೇಶಕರಾದ ಗೌತಮ್ ಘೋಷ್, ಉತ್ಪಲೇಂದು ಚಕ್ರವರ್ತಿ, ಬುದ್ಧದೇವ್ ದಾಸ್‍ಗುಪ್ತ, ನಯೇಂದು ಚಟರ್ಜಿ, ಅಪರ್ಣಾಸೇನ್ ಮುಂತಾದವರು ರಾಯ್ ಆರಂಭಿಸಿದ ಚಳವಳಿಯನ್ನು ಯಶಸ್ವಿಯಾಗಿ ಮುಂದುವರಿಸಿದರು. ಹಿರಿಯ ನಿರ್ದೇಶಕರೂ ಹಲವು ಉತ್ತಮ ಚಿತ್ರಗಳನ್ನು ನೀಡಿದರು. ತಮಿಳು ಚಿತ್ರರಂಗದಲ್ಲಿ ಭಾರತೀರಾಜಾ ಮತ್ತು ಬಾಲು ಮಹೇಂದ್ರ ಹೊಸತನವನ್ನು ತಂದರು. ತೆಲುಗು ಚಿತ್ರರಂಗ ಕೂಡ ಟಿ.ಪ್ರಕಾಶ್‍ರಾವ್, ಕೆ.ರಾಘವೇಂದ್ರರಾವ್, ಕೆ.ವಿಶ್ವನಾಥ್, ಕೆ.ಬಾಲಚಂದರ್ ಅಂತಹ ಪ್ರತಿಭಾನ್ವಿತ ನಿರ್ದೇಶಕರಿಂದ ಹೊಸತನ ಪಡೆಯಿತು. ಆದರೆ ಇಲ್ಲಿ ಹೊಸ ಅಲೆ ಚಳವಳಿ ಗಟ್ಟಿಯಾಗಿ ಕಾಣಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಚಳವಳಿ ಯಶಸ್ವಿಯಾದದ್ದಲ್ಲದೆ ಬಹುತೇಕ ಚಿತ್ರಗಳು ರಾಷ್ಟ್ರಮನ್ನಣೆ ಪಡೆದವು. ರಾಜ್‍ಕುಮಾರ್ ಸೂಪರ್‍ಸ್ಟಾರ್ ಆದರು. ಹೊಸ ಅಲೆ ಚಳವಳಿ ಮಲೆಯಾಳಂನಲ್ಲಿ ಅತ್ಯಂತ ಯಶಸ್ವಿಯಾಯಿತು. ಪಿ.ಎನ್. ಮೆನನ್ ಅವರ ಒಲವಮ್ ತಿರುವಂ (1970) ಚಿತ್ರಮಾಧ್ಯಮದ ಉತ್ಕøಷ್ಟ ಸಾಧ್ಯತೆಯಾಗಿ ಹೊರಹೊಮ್ಮಿತು, ಆಡೂರ್ ಗೋಪಾಲಕೃಷ್ಣನ್ ಅವರ ಸ್ವಯಂವರಂ (1972) ಎಂ. ಟಿ. ವಾಸುದೇವನ್ ನಾಯರ್ ಅವರ ನಿರ್ಮಾಲ್ಯಂ (1973), ಜಿ. ಅರವಿಂದನ್ ಅವರ ಉತ್ತರಾಯಣಂ (1974), ಕೆ. ಜಿ. ಜಾರ್ಜ್ ಅವರ ಸ್ವಪ್ನದಾನಂ (1975), ಸಿ. ರಾಧಾಕೃಷ್ಣ ಅವರ ಅಗ್ನಿ (1978), ಜಿ.ಎನ್. ಪಣಿಕ್ಕರ್ ಅವರ ಏಕಾಕಿನಿ (1978), ಈ ಚಳವಳಿಯಲ್ಲಿ ಬಂದ ಇನ್ನೂ ಕೆಲವು ಉತ್ತಮ ಚಿತ್ರಗಳು. ಮರಾಠಿ ಚಿತ್ರರಂಗದಲ್ಲಿ ಮಹತ್ತರ ಬದಲಾವಣೆಗಳಾದವು. ಸತ್ಯದೇವ್ ದುಬೆ ಅವರ ಶಾಂತಲಾ ಗೋವಿಂದ ನಿಹಲಾನಿಯವರ `ಕೋರ್ಟ್ ಚಾಲು ಆಹೆ ಕಲಾತ್ಮಕ ಚಿತ್ರಗಳಾಗಿಯೇ ಭರ್ಜರಿ ಯಶಸ್ಸು ಕಂಡಿತು. ವಿ. ಶಾಂತರಾಂ ಅವರ “ಪಿಂಜರಾ” ದಾಖಲೆಯ ಯಶಸ್ಸು ಕಂಡಿತು. ಡಾ. ಜಬ್ಬರ್ ಪಟೇಲರ ಸಾಮ್ನಾ ದಂಗು ಬಡಿಸುವ ಯಶಸ್ಸು ಪಡೆಯಿತು. ಇವೆಲ್ಲವೂ ಕಳೆ ಗುಂದಿದ್ದ ಮರಾಠಿ ಚಿತ್ರರಂಗಕ್ಕೆ ಜೀವ ತುಂಬಿದವು. ಕಲಾತ್ಮಕ ಮತ್ತು ಜನಪ್ರಿಯತೆ ನಡುವಿನ ಬಿರುಕು ಮಾಯಾವಾಗಿದ್ದು ಬಹುಶಃ ಮರಾಠಿ ಚಿತ್ರರಂಗದಲ್ಲೇ. ಗುಜರಾತಿಯಲ್ಲಿ ಹೊಸ ಅಲೆ ಚಳವಳಿ ಯಶಸ್ವಿಯಾಯಿತು. ಕಾಂತಿಲಾಲ್ ರಾಥೋಡರ ಕಂಕು ಹೊಸ ಸಾಧ್ಯತೆ ನಿರ್ಮಿಸಿತು. ಹೀಗೆ 70ರ ದಶಕದ ಅಂತ್ಯದ ವೇಳೆಗೆ ಒಂದೆರಡು ಭಾಷೆಗಳ ಅಪವಾದ ಬಿಟ್ಟರೆ ಇಡೀ ಭಾರತೀಯ ಚಿತ್ರರಂಗ ಜನಪ್ರಿಯತೆ ಮತ್ತು ಕಲಾತ್ಮಕತೆ ನಡುವೆ ವಿಭಜನೆಯಾಗಿತ್ತು.
1980-2004 ಸ್ವಂತಿಕೆ ಮತ್ತು ಸವಕಲು ಸೂತ್ರಗಳ ಸುತ್ತ: 1975ರಲ್ಲಿ ಬಿಡುಗಡೆಯಾದ ಶೋಲೆ ಭಾರತೀಯ ಚಿತ್ರರಂಗದ ವ್ಯಾಕರಣವನ್ನೇ ಪುನರ್ರಚಿಸಿತು ಎನ್ನಬಹುದು. ಹಿಂಸೆ ಕ್ರೌರ್ಯ ಮತ್ತು ಆಡಳಿತ ವ್ಯವಸ್ಥೆ ಬಗೆಗಿನ ನಿರಾಶೆ ತಮ್ಮದೇ ಆದ ರೀತಿಯಲ್ಲಿ ಹಿಂದಿ ಚಿತ್ರರಂಗದಲ್ಲಿ ಬಿಂಬಿತವಾಗತೊಡಗಿತು. ತುರ್ತು ಪರಿಸ್ಥಿತಿ ಘೋಷಣೆ, ಜನತಾ ಸರ್ಕಾರದ ಅಲ್ಪಾಯುಷಿ ಪ್ರಯೋಗ, ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆ, ರಾಜಕೀಯ, ಕೋಮುಗಲಭೆಗಳು ಚಿತ್ರರಂಗದ ಮೇಲೆ ತನ್ನದೇ ಆದ ಪರಿಣಾಮ ಬೀರಿತು. ಸ್ತ್ರೀಪಾತ್ರಗಳು ಈ ಹಂತದಲ್ಲಿ ಗಮನಾರ್ಹ ಬದಲಾವಣೆ ಕಂಡವು. ಪುರುಷ ಪಾತ್ರಗಳಂತೆ ಸಾಹಸಗಳನ್ನೆಲ್ಲಾ ಮಾಡಬಹುದಾದ ಆಯಾಮ ಒಂದು ಕಡೆಯಾದರೆ ಸಾಧ್ಯವಾದಷ್ಟು ಕಡಿಮೆ ವಸ್ತ್ರ ಧರಿಸಿ ಉದ್ರೇಕಕಾರಿ ಭಂಗಿಗಳಲ್ಲಿ, ಕಾಣಿಸಿಕೊಳ್ಳುವರು ಇನ್ನೊಂದು ಮಾದರಿ. ಇದು ಭಾರತೀಯ ನಾರಿ ಎಂಬ ಈವರೆಗಿನ ಪರಿಕಲ್ಪನೆಗಿಂತ ತೀರ ಭಿನ್ನವಾಗಿತ್ತು.
1980ರ ದಶಕದ ಮುಖ್ಯ ಬೆಳೆವಣಿಗೆ ಎಂದರೆ ಬೆಳ್ಳಿತೆರೆ ಕಿರುತೆರೆ ಸವಾಲನ್ನು ಎದುರಿಸುವಂತಾದದ್ದು. ಇನ್ಸಾಟ್-1ಬಿ ಉಡಾವಣೆ, ದೆಹಲಿಯಲ್ಲಿ ನಡೆದ ಏಷ್ಯಾಡ್, 1983ರ ಭಾರತದ ವಿಶ್ವಕಪ್ ವಿಜಯ ಟಿ ವಿ ಜನಪ್ರಿಯತೆಗೆ ಕಾರಣವಾಯಿತು. 1980ರಲ್ಲಿ 15.7 ಲಕ್ಷದಲ್ಲಿದ್ದ ಟಿ ವಿ ಗಳ ಸಂಖ್ಯೆ 1984ರಲ್ಲಿ 67.5 ಲಕ್ಷಕ್ಕೇರಿತು. 1985ರಲ್ಲಿ ನಿರ್ಮಾಣವಾದ 912 ಚಿತ್ರಗಳ ಪೈಕಿ ಶೇ. 70ರಷ್ಟು ಭಾರಿ ನಷ್ಟ ಅನುಭವಿಸಿದವು. ಇದು ಭೂಗತ ಲೋಕ ಹಿಂದಿ ಚಿತ್ರರಂಗ ಆಕ್ರಮಿಸಲು ಕಾರಣವಾಯಿತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಿಂದ ಹಿಂದಿಚಿತ್ರರಂಗದ ಅರ್ಧಕ್ಕಿಂತ ಹೆಚ್ಚು ಬಂಡವಾಳ ಭೂಗತಲೋಕದಿಂದ ಬರುತ್ತಿರುವುದು ಸಾಬೀತಾಯಿತು.
ಈ ಹಂತದಲ್ಲಿ ಸೂಪರ್ ಸ್ಟಾರ್ ವ್ಯವಸ್ಥೆಯೂ ಪ್ರಚುರವಾಯಿತು. ರಾಜೇಶ್ ಖನ್ನ ಅವರ ನಂತರ ಅಮಿತಾಬ್ ಬಚ್ಚನ್ ಈ ಕೀರ್ತಿಗೆ ಪಾತ್ರರಾದರು ದೀವಾರ್, ತ್ರಿಶೂಲ್, ಲಾವಾರೀಸ್ ಮುಂತಾದ ಇಮೇಜ್‍ಗೆ ಹೊಂದುವ ಚಿತ್ರಗಳು ಬಂದವು. ಬಚ್ಚನ್ ಯಗದಲ್ಲಿ ನಾಯಕನಿಗೆ ಸೋಲೇ ಇಲ್ಲವೆಂಬಷ್ಟು ಪರಿಪೂರ್ಣನಾಗುವುದು ಸಾಧ್ಯವಾಯಿತು. ಹಿಂದಿ ಚಿತ್ರರಂಗ ಕಂಡ ಇನ್ನೊಂದು ಮುಖ್ಯ ಬದಲಾವಣೆ ಎಂದರೆ ಚಿತ್ರಕತೆ ಮತ್ತು ಸಂಭಾಷಣೆಗಳಿಗೆ ಮಹತ್ವ ಸಿಕ್ಕು ಅದನ್ನು ರಚಿಸಲು ವೃತ್ತಿಪರವಾದ ಪ್ರತಿಭಾವಂತರು ರೂಪುಗೊಂಡಿದ್ದರು. ಮನಮೋಹನ್ ದೇಸಾಯಿ ತಮ್ಮ ವಿಶಿಷ್ಟ ರೀತಿಯ ನಿರೂಪಣೆಯಿಂದ ಅಮರ್ ಅಕ್ಬರ್ ಅಂತೋಣಿಯನ್ನು ನೀಡಿ ಜನಪ್ರಿಯರಾದರು, ಹೀಗೆ ಪ್ರಕಾಶ್ ಮೆಹ್ರಾ ಅವರ ಮುಕದ್ದರ್ ಕಾ ಸಿಕಂದರ್ ವಿಶಿಷ್ಟ ಸಂಭಾಷಣೆಯಿಂದ ಜನಪ್ರಿಯವಾಯಿತು. ಅಮಿತಾಬ್ ಬಚ್ಚನ್ ಮತ್ತು ಯಶ್ ಚೋಪ್ರ್ರಾ ಜೋಡಿ ದೀವಾರ್, ಕಭೀ ಕಭೀ, ಸಿಲ್‍ಸಿಲಾ, ಚಾಂದಿನಿಯಂತಹ ವಿಶಿಷ್ಟ ಚಿತ್ರಗಳನ್ನು ನೀಡಿತು. ಸುಭಾಷ್ ಘಾಯ್ ಅವರ ಕರ್ಜ್ ಮತ್ತು ಹೀರೊ ಕುಪಿತ ನಾಯಕ ಪರಿಕಲ್ಪನೆಗೆ ಹೊಸ ಆಯಾಮ ನೀಡಿತು. ಇನ್ನೊಂದು ವಿಶಿಷ್ಟ ಬೆಳವಣಿಗೆ ಎಂದರೆ ಪರ್ಯಾಯ ಸಿನಿಮಾಗಳಿಂದಲೂ ತಾರೆಯರು ಉದಯಿಸಿದರು ನಾಸಿರುದ್ದೀನ್ ಷಾ, ಓಂ ಪುರಿ, ಸ್ಮಿತಾಪಾಟೀಲ್, ಶಬಾನಾ ಆಜ್ಮಿ, ಅನಂತ್‍ನಾಗ್ ಮುಂತಾದವರು ಕಲಾತ್ಮಕ ಚಿತ್ರಗಳ ಸಾರವನ್ನೆಲ್ಲ ಬಿಂಬಿಸಬಲ್ಲ ಪ್ರತಿಭಾವಂತರಾಗಿದ್ದರು. ಗೋವಿಂದ ನಿಹಲಾನಿ ಅವರ ಅರ್ಧಸತ್ಯ ಗಿರೀಶ್ ಕಾರ್ನಾಡರ ಉತ್ಸವ್, ಮೀರಾನಾಯರ್ ಅವರ ಕಾಮಸೂತ್ರ, ಕುಮಾರ್ ಸಾಹನಿ ಅವರ ತರಂಗ್, ಕೇತನ್ ಮೆಹ್ತಾ ಅವರ ಮಿರ್ಚ್‍ಮಸಾಲ ಹೊಸ ಅಲೆ ಚಿತ್ರಗಳ ಸಾಧ್ಯತೆಯನ್ನು ವಿಸ್ತರಿಸಿ ಹೊಸ ಆವಿಷ್ಕಾರಕ್ಕೆ ಕಾರಣವಾದವು.
ದಕ್ಷಿಣ ಭಾರತದ ಯಶಸ್ವಿ ಚಿತ್ರಗಳು ಹಿಂದಿ ಚಿತ್ರರಂಗಕ್ಕೆ ರೀಮೇಕ್ ಆದದ್ದು ಇನ್ನೊಂದು ಬೆಳವಣಿಗೆಗೆ ಎಂದು ಹೇಳಬಹುದು. “ಸೋಲ್ವಾ ಸಾವನ್”, `ಸಂಗಮ್, `ಏಕ್ ದೂಜೆ ಕೇಲಿಯೆ, ಸದ್ಮಾ ಓಹ್ ಸಾತ್ ದಿನ್, ಈಶ್ವರ್ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾದವು. ಬಿ.ಆರ್. ಛೋಪ್ರಾ. ಮತ್ತು ಮಹೇಶ್ ಭಟ್ ಸಾಮಾಜಿಕ ಚಿತ್ರಗಳಿಗೆ ವಿಶಿಷ್ಟ ಆಯಾಮ ನೀಡಿದರೆ, ಈ ದಶಕದಲ್ಲಿ ವಿಜಯಮೆಹ್ತ, ಕಲ್ಪನಾಲಾಜ್ಮಿ, ಅರುಣಾರಾಜೆ, ಸಾಯಿ ಪರಾಂಜಪೆ ಮುಂತಾದ ಪ್ರತಿಭಾವಂತ ಮಹಿಳಾ ನಿರ್ದೇಶಕಿಯರು ಬಂದರು. ಮಣಿರತ್ನಂ, ಗುಲ್ಜಾರ್, ಗೌತಮ್ ಘೋಷ್, ಜೆ.ಪಿ.ದತ್ತ, ಅಮುಲ್ ಪಾಲೇಕರ್ ಕಲಾತ್ಮಕ ಮತ್ತು ವ್ಯಾಪಾರಿ ಚಿತ್ರದ ನಡುವಿನ ಸುವರ್ಣ ಮಾಧ್ಯಮ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಕಯಾಮತ್ ಸೆ ಕಯಾಮತ್ ತಕ್, ಮೈನೆ ಪ್ಯಾರ್ ಕಿಯಾ ಚಿತ್ರಗಳ ಯಶಸ್ಸು ಹೊಸ ಪೀಳಿಗೆಯ ತುಡಿತದತ್ತ ಹಿಂದಿ ಚಿತ್ರರಂಗ ಆಸಕ್ತಿ ವಹಿಸುವಂತೆ ಮಾಡಿತು.
90ರ ದಶಕದಲ್ಲಿ ಹಮ್ ಆಪ್ ಕೆ ಹೈ ಕೌನ್, ದಿಲ್ವಾಲೆ ದುಲ್ಹನಿಯಾ ಲೆಜಾಯೆಂಗೆ ಮತ್ತು ಗದರ್-ಏಕ್ ಪ್ರೇಮ್ ಕಹಾನಿ ಭರ್ಜರಿ ಯಶಸ್ಸು ಕಾಣುವುದರೊಂದಿಗೆ ಹೊಸ ಪರಂಪರೆ ಆರಂಭವಾಯಿತು. ಮಾಧುರ್ಯ ಪ್ರಧಾನ ಸಂಗೀತ, ವೈಭವೋಪೇತ ಚಿತ್ರೀಕರಣ, ಬಹು ತಾರಾಗಣ ಮುಖ್ಯ ಅಂಶಗಳಾದವು. ಇನ್ನೊಂದೆಡೆ ದಿಲ್‍ಸೆ, ತಾಲ್ ಗಳಿಂದ ಆರಂಭವಾದ ವೈಭವೋಪೇತ ಸಂಗೀತಮಯ ಚಿತ್ರಣದಲ್ಲೇ ವೈಚಾರಿಕ ಆಯಾಮ ಹೇರುವ ಪ್ರಯತ್ನ ಲಗಾನ್‍ನಿಂದ ಒಂದು ನೆಲೆಗೆ ಬಂದಿತು. ಅಮೀರ್‍ಖಾನ್ ಅವರ ಈ ವಿಶಿಷ್ಟ ಪ್ರಯತ್ನ ದೇಶಪ್ರೇಮ ಮತ್ತು ಕ್ರಿಕೆಟ್‍ನ ಆಕರ್ಷಣೆಯನ್ನು ಕಲಾತ್ಮಕವಾಗಿ ಬಳಸಿ ಜನಪ್ರಿಯತೆ ನಡುವೆ ವೈಚಾರಿಕತೆ ಹಿಡಿದ ಕ್ರಮಕ್ಕೆ ಮೆಚ್ಚುಗೆಗೆ ಪಾತ್ರವಾಯಿತು.
ಬಾಲಿವುಡ್ ಕ್ರಮೇಣ ಹಾಲಿವುಡ್‍ನ ನೆರಳಾಗಿ ಬೆಳೆಯಲಾರಂಭಿಸಿದ್ದನ್ನು ಈ ಹಂತದಲ್ಲಿ ನೋಡಬಹುದು. `ದೇವದಾಸ್ ಇದಕ್ಕೊಂದು ಉದಾಹರಣೆ ಶರಶ್ಚಂದ್ರ ಚಟರ್ಜಿಯವರ ಪ್ರಖ್ಯಾತ ಬಂಗಾಳಿ ಕಾದಂಬರಿ ಆಧರಿತ ಚಿತ್ರವನ್ನು ಬೆಳ್ಳಿತೆರೆಯ ಎಳವೆಯಲ್ಲೇ ನ್ಯೂಥಿಯೇಟರ್ಸ್‍ರವರು ತೆರೆಗೆ ತಂದರು. ಅದು ಎಲ್ಲಾ ಭಾರತೀಯ ಭಾಷೆಗಳಲ್ಲಿ ತೆರೆ ಕಂಡಿತು. ತೆಲಗಿನಲ್ಲಿನ ನಾಗೇಶ್ವರರಾವ್ ಅಭಿನಯವಂತೂ ಅದನ್ನು ದಂತಕತೆಯಾಗಿಸಿಬಿಟ್ಟಿತು. ಸಂಜಯ್ ಬನ್ಸಾಲಿ ಅದನ್ನು ಮತ್ತೆ ಬೆಳ್ಳಿತೆರೆಗೆ ತಂದಾಗ ದೃಶ್ಯ ಶ್ರೀಮಂತಿಕೆ, ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯ ರೈ ಅವರ ಮಾದಕತೆ ಮುಖ್ಯವಾಯಿತೇ ಹೊರತು ಕತೆಯಲ್ಲ. ಹೀಗೆ ಬಾಹ್ಯಾಕಾಶ ಜೀವಿಗಳ ಕುರಿತ ಕುತೂಹಲವನ್ನು ವಸ್ತುವಾಗಿವುಳ್ಳ 'ಕೊಯಿ ಮಿಲ್ ಗಯಾ" ಚಿತ್ರವಾದಾಗ ವೈಜ್ಞಾನಿಕ ಅಂಶಗಳಿಗಿಂತ ಮನೋರಂಜನಾತ್ಮಕ ಸಂಗತಿಗಳೇ ಮೇಲುಗೈ ಪಡೆದಿದ್ದವು. `ಧೂಮ್ ಬೈಕ್ ಚಲನೆಯ ಹುಚ್ಚನ್ನೇ ಬಂಡವಾಳವಾಗಿಸಿಕೊಂಡಿತು.
ಗೋವಿಂದ ನಿಹಲಾನಿ ಅವರ ದೃಷ್ಟಿ, ಗುಲ್ಜಾರ್ ಅವರ ಲೇಕಿನ್, ಸುಧೀರ್ ಮಿಶ್ರ ಅವರ `ಧಾರಾವಿ ವಿನೋದ್ ಚೋಪ್ರಾ ಅವರ ಪರಿಂದಾ ದೇಸಾಯಿ ಅವರ `ಮುಜೆ ದೋಸ್ತಿ ಕರೇಂಗಿ' ಶೇಖರ್ ಕಪೂರ್ ಅವರ ಬ್ಯಾಂಡಿಟ್‍ಕ್ವೀನ್ ಪರ್ಯಾಯ ಮಾರ್ಗವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಇತ್ತೀಚೆಗೆ ತೆರೆಗೆ ಬಂದ `ಪಹೇಲಿ `ಪರಿಣಿತಾ `ಬ್ಲಾಕ್ `ಪೇಜ್‍ತ್ರೀಯಂತಹ ಚಿತ್ರಗಳು ಹೊಸ ಆಶಾವಾದ ಸೃಷ್ಟಿಸಿವೆ. ಇವು ಸಾಹಿತ್ಯಕ್ಕಿಂತ ಸಿನಿಮಾ ಹೇಗೆ ಭಿನ್ನ ಮಾಧ್ಯಮ ಎಂಬುದನ್ನು ಪರಿಣಾಮಕಾರಿಯಾಗಿ ಸಾಬೀತು ಮಾಡಿವೆ. ದೃಶ್ಯ ಸಾಧ್ಯತೆಗಳನ್ನು ಭಾವಸೂಕ್ಷ್ಮತೆ ಹಿಡಿಯಲು ಬಳಸುತ್ತಿರುವ ಇಂತಹ ಚಿತ್ರಗಳಲ್ಲಿ ಕ್ಯಾಮೆರಾ ಮುಖ್ಯ ಪಾತ್ರ ವಹಿಸುತ್ತಿದೆ. ಇಂತಹ ಚಿತ್ರಗಳು ಜನಮನ್ನಣೆ ಗಳಿಸುತ್ತಿರುವುದನ್ನು ಗಮನಿಸಿದರೆ ಹಿಂದಿ ಚಿತ್ರರಂಗದ ಭವಿಷ್ಯದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲು ಅವಕಾಶವಿದೆ.
ಹಿಂದಿ ಚಿತ್ರರಂಗದ ಜೊತೆಗೆ ಭೂಗತ ಜಗತ್ತಿನ ಸಂಪರ್ಕ ಹೆಚ್ಚು ಹೆಚ್ಚು ಸ್ಪಷ್ಟವಾಗಿ ದಿಗಿಲು ಹುಟ್ಟಿಸುವ ಬೆಳವಣಿಗೆಯಾಗಿತ್ತು. ಟಿ. ಸೀರೀಸ್ ಖ್ಯಾತಿಯ ಗುಲ್‍ಷನ್‍ಕುಮಾರ್ ಭೂಗತ ಜಗತ್ತಿಗೆ ಬಲಿಯಾದರೆ, ಸಂಜಯ್‍ದತ್ ಅವರ ಭೂಗತ ಜಗತ್ತಿನ ಸಂಪರ್ಕವೂ ತನಿಖೆಗೆ ವಸ್ತುವಾಯಿತು. ಭರತ್ ಷಾ ತಪ್ಪು ಹಾದಿ ತುಳಿದಿದ್ದು ಪತ್ತೆಯಾಯಿತು, ಮೋನಿಕಾ ಬೇಡಿ ಪ್ರಕರಣ ಸಮಸ್ಯೆಯ ತೀವ್ರತೆಯನ್ನು ತೋರಿಸಿತು. ಭೂಗತ ಜಗತ್ತಿನ ಕರಿನೆರಳು ಹಿಂದಿ ಚಿತ್ರರಂಗದ ಮೇಲಿರುವುದು ಸಾಬೀತಾಗುತ್ತಲೇ ಹೋಯಿತು. ನಿನ್ನೆಯ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ನರು ಮೇಜರ್ ಸಾಬ್, ಲಾಲ್ ಬಾದ್‍ಷಾ, ಹಿಂದೂಸ್ಥಾನ್ ಕೆ ಕಸೂರ್, ಸೂರ್ಯವಂಶ ಹೀಗೆ ಸಾಲುಸಾಲಾಗಿ ಸೋಲಿನ ಸರಪಳಿಯಲ್ಲಿ ಸಿಕ್ಕಿಬಿದ್ದು ಹಿನ್ನಡೆ ಕಂಡರು, ಆದರೆ ಸ್ಟಾರ್ ಪ್ಲಸ್ ದೂರದರ್ಶನ ವಾಹಿನಿಯ ಕೌನ್ ಬನೇಗ ಕರೋಡ್‍ಪತಿ ಕಾರ್ಯಕ್ರಮ ಅವರಿಗೆ ಮರಳಿ ಜನಪ್ರಿಯತೆ ತಂದು ಕೊಟ್ಟಿತು. ಬ್ಲಾಕ್ ಅವರೊಳಗಿನ ಕಲಾವಿದನನ್ನು ನಿಸ್ಸಂದೇಹವಾಗಿ ಸಾಬೀತು ಮಾಡಿತು.
ಈ ದಶಕ ಖಾನ್‍ತ್ರಯರ ಉನ್ನತಿಗೆ ಕುರುಹಾಯಿತು. ಇವರಲ್ಲಿ ಶಾರೂಖಾನ್ ಒಂದು ಹೆಜ್ಜೆ ಮುಂದೆ ನಿಂತರು. ಕರಣ್ ಅರ್ಜುನ್, ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ, ದಿಲ್ ತೋ ಪಾಗಲ್ ಹೈ, ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಗಮ್ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿ ಅವರು ಸೂಪರ್‍ಸ್ಟಾರ್ ಆದರೆ, ಸಲ್ಮಾನ್ ಖಾನ್ ಹಮ್ ದಿಲ್ ದೇ ಚುಕೆ ಸನಂ ಮತ್ತು ಬೀವಿ ನಂ.1 ಗಳಿಂದ ತಾರಾ ಮೌಲ್ಯ ಪಡೆದರು. ಕಯಾಮತ್ ಸೆ ಕಯಾಮತ್ ತಕ್ ಚಿತ್ರದಿಂದ ಜನಪ್ರಿಯರಾದ ಅಮೀರ್‍ಖಾನ್, ಲಗಾನ್, ದಿಲ್ ಚಾಹತಾ ಹೈ ನಿಂದ ಗಮನ ಸೆಳೆದರು. ಕಹೋನಾ ಪ್ಯಾರ್ ಹೈ ನಿಂದ ಜನಪ್ರಿಯರಾದ ಹೃತಿಕ್ ರೋಷನ್ ತಮ್ಮದೇ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡರು. ಕೋಯಿ ಮಿಲ್‍ಗಯಾ ಅವರ ಅಭಿನಯ ಸಾಮಥ್ರ್ಯಕ್ಕೆ ನಿದರ್ಶನವಾಯಿತು. ಅಕ್ಷಯ ಖನ್ನ, ಗೋವಿಂದ, ಅಜಯ್ ದೇವಗನ್, ಸುನಿಲ್ ಶೆಟ್ಟಿ, ಅನಿಲ್ ಕಪೂರ್, ಅಭಿಷೇಕ್ ಬಚ್ಚನ್ ಜನಪ್ರಿಯತೆ ಪಡೆದ ಇನ್ನಿತರ ತಾರೆಯರು.
ಮಾಧುರಿ ದೀಕ್ಷಿತ್ ನಟಿಯರ ಪೈಕಿ ಹೆಚ್ಚು ಜನಪ್ರಿಯರಾದರು. ತೇಜಾಬ್, ದಿಲ್, ಸಾಜನ್, ಬೇಟಾ, ಖಳನಾಯಕ್, ಹಮ್ ಆಪ್ ಕೆ ಹೇ ಕೌನ್, ರಾಜ, ದಿಲ್ ತೋ ಪಾಗಲ್ ಹೈ ಹೀಗೆ ಸಾಲು ಸಾಲಾಗಿ ಯಶಸ್ವಿ ಚಿತ್ರಗಳನ್ನು ನೀಡಿದರು. 90ರ ದಶಕದ ಅಂಚಿನಲ್ಲಿ ಬಂದ ಕಾಜಲ್, ಡರ್, ಇಷ್ಕ್, ಗುಪ್ತ್, ಕರಣ್ ಅರ್ಜುನ್, ದಿಲ್‍ವಾಲೆ ದುಲ್ಹನಿಯಾ ಲೇ ಜಾಯೆಂಗೆ, ಕಭಿ ಖುಷಿ ಕಭಿ ಗಮ್ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಸಹಜ ಅಭಿನಯ ನೀಡಿ ಖ್ಯಾತಿ ಮೆಚ್ಚುಗೆ ಪಡೆದರು. ಮೋನಿಷಾ ಕೋಯಿರಾಲಾ, ರವೀನಾ ಟಂಡನ್, ಸೋನಾಲಿ ಬೇಂದ್ರೆ, ಶಿಲ್ಪಾಶೆಟ್ಟಿ, ಉರ್ಮಿಳಾ ಮಾತೋಂಡ್ಕರ್, ಪ್ರೀತಿ ಜಿಂಟಾ, ಕರೀನಾ ಕಪೂರ್ ಮುಂತಾದವರು ಜನಪ್ರಿಯರಾದರು. “ವಿಶ್ವ ಸುಂದರಿ” ಮುಕುಟ ಧರಿಸಿದ ಐಶ್ವರ್ಯ ರೈ, ಯುಕ್ತಾ ಮುಖಿ, ಸುಶ್ಮಿತಾ ಸೇನ್ ಮುಂತಾದವರೂ ಚಿತ್ರರಂಗದತ್ತ ಆಸಕ್ತರಾದರು. ಈ ಪೈಕಿ ಐಶ್ವರ್ಯ ರೈ ತಮ್ಮ ಚೆಲುವು ಮತ್ತು ಸಹಜಾಭಿನಯದಿಂದ ಅಂತರರಾಷ್ಟ್ರೀಯ ಖ್ಯಾತಿಗಳಿಸಿದರು. 21ನೇ ಶತಮಾನ ಕೆಲವು ಯುವ ನಿರ್ದೇಶಕರ ಆಗಮನದ ಕುರುಹಾಯಿತು. ಮನ್ಸೂರ್ ಖಾನ್, ಆದಿತ್ಯ ಚೋಪ್ರ, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ಜೋ ಜೀತಾ ವಹೀ ಸಿಕಂದರ್, ದಿಲ್ ವಾಲೆ ದುಲ್ಹನಿಯಾ ಲೇ ಜಾಯಂಗೆ, ಹಮ್ ಆಪ್ ಕೆ ಹೇ ಕೌನ್, ಕುಚ್ ಕುಚ್ ಹೋತಾ ಹೈ, ದೇವದಾಸ್ ನಂತಹ ವಿಶಿಷ್ಟ ಚಿತ್ರಗಳು ಮೂಡಿ ಬಂದವು. ಮಣಿರತ್ನಂ ಅವರ “ರೋಜಾ” ಭಾರತ-ಪಾಕಿಸ್ಥಾನದ ಗಡಿ ವಿವಾದ ಅದು ಹುಟ್ಟಿಸುವ ಮಾನವೀಯ ಸಮಸ್ಯೆ, ಭಯೋತ್ಪಾದನೆಯ ಕರಾಳ ಮುಖ ಎಲ್ಲವನ್ನು ಬಿಡಿಸಿಟ್ಟಿತು. ಚೋಪ್ರಾ ಅವರ ಮಿಷನ್ ಕಾಶ್ಮೀರ್, ಜೆ.ಪಿ.ದತ್ತ ಅವರ ಬಾರ್ಡರ್, ಮಣಿರತ್ನಂ ಅವರ ದಿಲ್ ಸೇ ಈ ಮಾದರಿಯಲ್ಲಿ ಬಂದ ಪ್ರಮುಖ ಚಿತ್ರಗಳು. ಇತ್ತೀಚಿನ ದಿನದಲ್ಲಿ ಯುದ್ಧ ಮತ್ತು ಶಾಂತಿಯ ನಡುವಿನ ಆತಂಕ ಹಿಂದಿ ಚಿತ್ರರಂಗವನ್ನು ಪ್ರಮುಖವಾಗಿ ಕಾಡುತ್ತಿದ್ದು ಆ ಮಾದರಿಯ ಹಲವು ಚಿತ್ರಗಳು ಬರುತ್ತಿವೆ.
ಬಂಗಾಳಿ ಚಿತ್ರರಂಗ ಕೂಡ ಈಗ ಸಂದಿಗ್ಧಕ್ಕೆ ಸಿಲುಕಿದೆ. ಹೊಸ ಅಲೆ ಉಳಿದೆಡೆಯಂತಲ್ಲದಿದ್ದರೂ ಕೆಲ ಮಟ್ಟಿಗೆ ನಿಲುಗಡೆಗೆ ಬಂದಿದೆ. ಸಂದೀಪ್ ರಾಯ್ (ಪಾಟಿಕ್ ಚಂದ್, ಉತ್ತರಾನ್) ಋತುಪರ್ಣ ಘೋಷ್ (ಉನಿಷೆ ಏಪ್ರಿಲ್ ದಾಹನ್), ಅಶೋಕ್ ವಿಶ್ವನಾಥನ್ (ಸನ್ನಾ ತಕ್ ಸುರು) ಮಾಲ್ಯ ಭಟ್ಟಾಚಾರ್ಯ (ತಾಹಿನಿ) ಭರವಸೆಯ ಎಳೆಗಳನ್ನು ಉಳಿಸಿಕೊಂಡಿದ್ದರೆ ತಮಿಳು ಚಿತ್ರರಂಗ ಸಾಕಷ್ಟು ವೈವಿಧ್ಯಮಯವಾಗಿದೆ. ಮಣಿರತ್ನಂ ಅವರ ಮೌನರಾಗಂ, ನಾಯಗನ್, ರೋಜಾ, ಅಂಜಲಿ, ದಳಪತಿ, ಇರುವರ್ ಮುಂತಾದ ಚಿತ್ರಗಳಲ್ಲಿ ಹೊಸತನ ತುಂಬಿರುವುದಲ್ಲದೆ ರಾಷ್ಟ್ರೀಯ ಮನ್ನಣೆ ದೊರಕಿಸಿಕೊಂಡಿವೆ. ಕಮಲಾಹಾಸನ್ ತಮ್ಮ ಶ್ರೇಷ್ಠ ಅಭಿನಯ ಸಾಮಥ್ರ್ಯದಿಂದ ಹಲವು ಅಚ್ಚರಿಯ ಚಿತ್ರಗಳನ್ನು ನೀಡಿದ್ದರೆ, ಕೆ. ಭಾಗ್ಯರಾಜ್ ಲವಲವಿಕೆಯ ಚಿತ್ರಗಳನ್ನು ನೀಡಿದ್ದಾರೆ. ಇಳಯರಾಜಾ, ದೇವಾ, ಎ.ಆರ್. ರೆಹಮಾನ್ ಮುಂತಾದ ಸಂಗೀತ ನಿರ್ದೇಶಕರು ನಾದದ ಸಾಮಥ್ರ್ಯದಿಂದ ಹಿರಿಮೆ ತಂದಿದ್ದಾರೆ. ಆದರೆ 21ನೇ ಶತಮಾನದಲ್ಲಿ ತಮಿಳು ಚಿತ್ರರಂಗ ಕೂಡ ಸೂತ್ರಗಳ ಸರಪಳಿಯಲ್ಲಿ ಸಿಕ್ಕಿ ಬಿದ್ದಿದೆ. ಗತ ವೈಭವ ಪಡೆಯಲು ಒದ್ದಾಡುತ್ತಿದೆ. ತೆಲುಗು ಚಿತ್ರರಂಗ ಕೆ. ವಿಶ್ವನಾಥ್ ಅವರ `ಶಂಕರಾಭರಣಂನ ಯಶಸ್ವಿನಿಂದ ಹೊಸ ಸ್ವರೂಪ ಪಡೆಯುವ ಕುರುಹನ್ನು ತೋರಿಸಿತ್ತು. ಆದರೆ ನಾರಸಿಂಗರಾವ್ ಅವರ ದಾಸಿ ಕೆ. ವಿಶ್ವನಾಥ್ ಅವರ ಸ್ವಾತಿಕಿರಣಂ, ದಾಸರಿ ನಾರಾಯಣರಾವ್ ಅವರ `ಸೂರಿಗಾಡು ನಂತಹ ಕೆಲವು ಪ್ರಯತ್ನ ಬಿಟ್ಟರೆ ಜನಪ್ರಿಯತೆಯ ಪ್ರವಾಹವೇ ಇಲ್ಲಿ ಕಾಣಿಸುತ್ತದೆ. ಚಿರಂಜೀವಿ, ನಾಗಾರ್ಜುನ, ಬಾಲಕೃಷ್ಣ, ವೆಂಕಟೇಶ್, ಮೋಹನ್‍ಬಾಬು, ಸುಮನ್ ಮುಂತಾದ ನಟರೂ ವಿಜಯಶಾಂತಿ, ಸೌಂದರ್ಯ, ರಂಭಾ, ಅರ್ಚನಾ, ಮೀನಾ ರಂತಹ ನಟಿಯರು ತಾರೆಗಳಾಗಿ ಮಿನುಗುತ್ತಿದ್ದಾರೆ. ಇಲ್ಲಿ ಕೂಡ ಸವಕಲು ಸೂತ್ರಗಳೇ ವಿಜೃಂಭಿಸುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಗಿರೀಶ್ ಕಾಸರವಳ್ಳಿಯಂತಹ ನಿರ್ದೇಶಕರು ಕಲಾತ್ಮಕತೆಯ ಹೊಳಹನ್ನು ಉಳಿಸಿಕೊಂಡು ಬಂದರೆ ಉಳಿದಂತೆ ಜನಪ್ರಿಯತೆಯ ಹಪಹಪಿಕೆಯೆ ಮೆರೆಯುತ್ತಿದೆ. ಮಲೆಯಾಳಂ ಚಿತ್ರರಂಗ ಎಂಬತ್ತರ ದಶಕದಲ್ಲಿ ತಾಂತ್ರಿಕವಾಗಿ ಹಲವು ಹೊಸ ಬೆಳವಣಿಗೆಯನ್ನು ಕಂಡಿತು. “ಪಡಿಯಾಟ್ಟಂ” ತಾಂತ್ರಿಕ ಕೌಶಲ್ಯದಿಂದ ಗಮನ ಸೆಳೆದು ಕೊಂಡರೆ ಮೈ ಡಿಯರ್ ಕುಟ್ಟಿಚ್ಚಾತನ್ ನಿಂದ ಮೂರು ಆಯಾಮಗಳ (3ಆ) ಚಿತ್ರಗಳ ಪರಂಪರೆ ಆರಂಭವಾಯಿತು. ಆದರೆ ಇದು ಬಹುಕಾಲ ಉಳಿಯಲಿಲ್ಲ. ಮುಮ್ಮಟ್ಟಿ ಮತ್ತು ಮೋಹನ್‍ಲಾಲ್ ಜನಪ್ರಿಯತೆಯ ತುತ್ತ ತುದಿಯಲ್ಲಿ ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ್ದರಿಂದ ಅಲ್ಲಿ ಹೊಸ ಅಲೆ ಚಳುವಳಿ ನಿಲುಗಡೆಗೆ ಬರಲಿಲ್ಲ. ಸಂದಿಗ್ಧತೆಯ ಪ್ರಶ್ನೆ ಇದ್ದರು ಮಲೆಯಾಳಂ ಚಿತ್ರರಂಗ ಇದರಿಂದ ಕ್ರಿಯಾಶೀಲವಾಗಿದೆ. ಮರಾಠಿ ಚಿತ್ರರಂಗ, ಹಿಂದಿ ಚಿತ್ರರಂಗ ವೈಭವದ ಶಿಖರಗಳನ್ನೇರುತ್ತಿದ್ದಂತೆ ಸಮಸ್ಯೆಗೆ ಸಿಲುಕಿತು. ರಂಗಭೂಮಿಯ ಪ್ರಾಬಲ್ಯ ಮತ್ತು ಹಿಂದಿ ಚಿತ್ರರಂಗದ ನೆರಳಿನಲ್ಲೇ ಇರಬೇಕಾದ ಅನಿವಾರ್ಯತೆ ಅದನ್ನು ಸಮಸ್ಯೆಗೆ ಸಿಲುಕಿಸಿದೆ. ಸಂಜಯ್ ಸರ್ಕಾರ್ ಅವರ ಔರತ್, ಕೈಫ್ ಜಬ್ಬಾರ್ ಪಟೇಲ್ ಅವರ ಏಕ್ ಹೋತಾ ವಿದೂಷಕ್, ಅಮೋಲ್ ಪಾಲೇಕರ್ ಅವರ ಬಾಂಗ್ರವಾಡಿ, ಸುಮಿತ್ರ ಬಾಟಿ ಅವರ ದೋಗಿ ಗಮನಾರ್ಹ ಚಿತ್ರಗಳಾಗಿ ಕೊಂಚ ಉಸಿರಾಡಲು ನೆರವು ನೀಡಿವೆ. ಕೇತನ್ ಮೆಹ್ತಾ ಅವರ ಭವನಿ ಭವಾಯ್ (1980) ಗುಜರಾತಿ ಚಿತ್ರರಂಗದಲ್ಲಿ ಗಮನಾರ್ಹ ಚಿತ್ರವಾಗಿ ಮೂಡಿ ಬಂದಿತು. ಆದರೆ ಇದರಿಂದ ಗಮನಾರ್ಹ ಬದಲಾವಣೆ ಕಾಣಲಿಲ್ಲ ಸಾಮಾನ್ಯವಾಗಿ ಜಾನಪದ ಮತ್ತು ಕೌಟುಂಬಿಕ ವಸ್ತುವನ್ನು ಹೊಂದಿರುತ್ತಿದ್ದ ಇಲ್ಲಿನ ಚಿತ್ರರಂಗ ಕ್ರಮೇಣ ಹಸಿ-ಬಿಸಿ ಪ್ರಚೋದಕ ಚಿತ್ರಣಗಳಿಂದ ತುಂಬಿ ಹೋಯಿತು. ಕಾಂತಿಲಾಲ್ ರಾಥೋಡ್, ಕೇತನ್ ಮೆಹ್ತಾರಂತಹ ಪ್ರತಿಭಾವಂತರೇ ಕೆಲಸವಿಲ್ಲದೆ ಕುಳಿತಿರಬೇಕಾದ ಸ್ಥಿತಿ ಉಂಟಾಯಿತು. ಇತ್ತೀಚಿನ ದಿನದಲ್ಲಿ ಬಂದ ಗಮನಾರ್ಹ ಗುಜರಾತಿ ಚಿತ್ರವೆಂದರೆ ಸಂಜೀತ್ ಷಾ ಅವರ “ಹುನ್ ಹುಂಷಿ ಹುಂಷಿ ಲಾಲ್ (1992) ಮಾತ್ರ.
ಈಶಾನ್ಯ ರಾಜ್ಯಗಳಲ್ಲಿ ಅಸ್ಸಾಮಿ ಭಾಷೆಯಲ್ಲಿ ಗಮನಾರ್ಹ ಚಿತ್ರಗಳು ಬಂದಿವೆ. 60-70ರ ದಶಕದಲ್ಲಿ ಇಲ್ಲಿ ಗಮನಾರ್ಹ ಚಿತ್ರಗಳು ಬಂದವು. ಜಾನು ಬರುವಾ (ಅಪರೂಪ, ಪಾಪೂರಿ, ಬಹದೂರ್) ಸಂಜೀವ್ ಹಜಾರಿಕ (ಅನಿರ್‍ಬಾನ್, ಕಾಲ್ ಸಂಧ್ಯಾ) ಡಾ. ಸಾಂತವಾನ ಬರ್ಡೋಲಿ (ಅಡಜಾಯಿ), ಬಿಡಾಯತ್ ಚಕ್ರವರ್ತಿ (ರಾಗ್ ಬಿರಾಗ್) ಮುಂತಾದ ಮಹತ್ವದ ಚಿತ್ರಗಳನ್ನು ನೀಡಿದ್ದರೆ ಅಸ್ಸಾಮಿ ಚಿತ್ರರಂಗಕ್ಕೆ ತನ್ನದೇ ಸ್ವರೂಪವಿದ್ದು ಅಲ್ಲಿನ ಸ್ಥಳೀಯ ಸಮಸ್ಯೆಗಳು ಮಾಧ್ಯಮದ ಮೂಲಕ ಬಿಂಬಿತವಾಗಿದ್ದು ಮಹತ್ವದ ಅಂಶವಾಗಿದೆ. ಮಣಿಪುರಿ ಚಿತ್ರರಂಗ ಈಶಾನ್ಯ ರಾಜ್ಯದ ಇನ್ನೊಂದು ಗಮನಾರ್ಹ ಮಜಲು. ಇಲ್ಲಿ ಚಲನಚಿತ್ರ ಕಾಲಿಟ್ಟಿದ್ದು ತೀರಾ ತಡವಾಗಿ ಕೆ. ಮನಮೋಹನ್ ಸಿಂಗ್ ನಿರ್ಮಾಣದ ದೇಬಕಿ ಕುಮಾರ್ ಬೋಸ್ ನಿರ್ದೇಶನದ ಮಾತಮಗಿ ಮಣಿಪುರಿ (1972) ಮೊದಲ ಮಣಿಪುರಿ ಚಿತ್ರ, ನಂತರ ಎಸ್.ಎನ್. ಚಾಂದ್, (ನಾಣಾಕ್-ತಿ-ಕೋ ನಾಗ್‍ಸೆ), ಅಭಿರಾಮ್ ಸ್ಯಾಂ ಶರ್ಮ (ಲಾಮ್‍ಜಾ ಪರಶಸುರಾಮ್) ನೀಲಮಣಿ ಸಿಂಗ್ (ಕೊಂಜನ್) ಚಾರವಿ ಕೆ, ಎಂ. ವಿ. ಸಿಂಗ್ (ತಾಬಾ) ಇಲ್ಲಿ ಗಮನಾರ್ಹ ಚಿತ್ರಗಳನ್ನು ನೀಡಿದ್ದಾರೆ. ಹೊಸ ಪೀಳಿಗೆಯ ಅಮಕ್ ಚಾಮ್ ಅವರ ಕೋನತಾಂಗ್ ಪನೋರಮಾಕ್ಕೆ ಆಯ್ಕೆಯಾಗಿ ಮಣಿಪುರಿ ಚಿತ್ರರಂಗಕ್ಕೆ ರಾಷ್ಟ್ರೀಯ ಸ್ಥಾನಮಾನ ದೊರಕಿಸಿದ್ದು ಒಂದು ಮುಖ್ಯ ಬೆಳವಣಿಗೆ.
ಉರ್ದು, ಭಾರತೀಯ ಚಿತ್ರರಂಗದ ಇನ್ನೊಂದು ಮುಖ್ಯ ವಾಹಿನಿ, ಭಾರತದ ಮೊದಲ ವಾಕ್ಚಿತ್ರ `ಅಲಂ ಅರಾವೇ ಉರ್ದುವಿನಲ್ಲಿ ನಿರ್ಮಿತವಾದದ್ದು ಎಂಬುದಲ್ಲಿ ಗಮನಾರ್ಹವಾದದ್ದು. ಸ್ವಾತಂತ್ರ್ಯ ಪೂರ್ವದಲ್ಲಿ ಅಂಕ್‍ಕಾ ನಾಶ್, ಜೀನತ್, ಅರಬ್ ಕಾ ಚಾಂದ್, ಮಿರ್ಜ ಸಾಹಿಬಾ, ಮೆಹಂದಿ ಮುಂತಾದ ಅನೇಕ ಉರ್ದು ಚಿತ್ರಗಳು ನಿರ್ಮಿತವಾದವು, ಸ್ವಾತಂತ್ರ್ಯನಂತರ ಉರ್ದು ಚಿತ್ರಗಳ ನಿರ್ಮಾಣ ಭಾರತದಲ್ಲಿ ಕಮ್ಮಿಯಾಯಿತು. ಕಮಲ್ ಅಮ್ರೋಹಿ ತಮ್ಮ ಚಿತ್ರಗಳಲ್ಲಿ ಉರ್ದು ಸಂಭಾಷಣೆ ಬಳಸಿದ್ದಲ್ಲದೆ ಪಾಕೀಜಾ ಮತ್ತು ರಜಿಯಾ ಸುಲ್ತಾನ್ ಎಂಬ ಎರಡು ಉರ್ದು ಚಿತ್ರಗಳನ್ನು ನಿರ್ಮಿಸಿದರು. ಎ.ಆರ್. ಕರ್ದಾರ್ ಅವರ ಮಿರ್ಜಾಗಾಲಿಬ್ (1954) ಗಮನಾರ್ಹ ಉರ್ದು ಚಿತ್ರವಾಗಿ ಬಂಗಾರದ ಪದಕ ಪಡೆಯಿತು. ಗುರುದತ್ ಚಾಂದ್ (1960) ಮತ್ತು ಬಿಮಲ್ ರಾಯ್ ಬೆನಜೀರ್ (1964) ಎಂಬ ಉರ್ದು ಚಿತ್ರಗಳನ್ನು ನಿರ್ಮಿಸಿದರು. ನಂತರ ಅಲ್ಲೊಂದು ಇಲ್ಲೊಂದು ಉರ್ದು ಚಿತ್ರಗಳು ಬಂದಿವೆ. ಗರಂಹವಾ, ಗಮನ್, ಲೈಲಾ ಮಜ್ನು, ನೂರಿ ಉಮ್ರಾವ್ ಜಾನ್, ನಿಖಾ ಮುಂತಾದ ಚಿತ್ರಗಳು ಗಮನಾರ್ಹವಾಗಿವೆ. 90ರ ದಶಕದಲ್ಲಿ ಮನ್ಸೂರ್ ಆಲಿ ಖಾನ್‍ರ ಜೋ ಜೀತಾ ವಹಿ ಸಿಕಂದರ್ ಮತ್ತು ಶ್ಯಾಂ ಬೆನಗಲ್‍ರ `ಜರ್ದಾರಿ ಬೇಗಂ. ಸುದ್ದಿ ಮಾಡಿದ ಉರ್ದು ಚಿತ್ರಗಳು. ಸಿಂಧಿ ಭಾಷೆಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲೇ ಜೆ.ಬಿ.ಎಚ್. ವಾಡಿಯಾ ಏಕ್ತ ಎಂಬ ಚಿತ್ರ ನಿರ್ಮಿಸಿದರು. ಆದರೆ ಆ ಭಾಷೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಚಿತ್ರ ನಿರ್ಮಾಣವಾಗಿಲ್ಲ. ಸೈಯಿದ್ ಹುಸೇನ್ ಆಲಿಷಾ (ಉಮರ್ ಮಾವ್ರಿ) ಟಿ.ಎಂ. ಬಿಹಾರಿ (ಅಜಾನಾ), ದೀಪಕ್ ಆಶಾ (ಇನ್ಸಾಫ್ ಕೆಹತೆ) ಗೋವಿಂದ್ ಮಲಾಹಿ (ಸಿಂಧೂ ಕಿನಾರೆ) ಮುಖ್ಯವಾದ ಕೆಲವು ಚಿತ್ರಗಳನ್ನು ನೀಡಿದ್ದರೆ, ಭೋಜ್‍ಪುರಿ ಭಾಷೆಯಲ್ಲಿ ವಿಶ್ವನಾಥ್ ಶಹಬಾದಿ ಗಂಗಾ ಮಿಯಾ ಬಾಹೆ ಪ್ಯಾರಿ ಚರಾಹದೆ ಚಿತ್ರವನ್ನು 1961ರಲ್ಲಿ ನಿರ್ಮಿಸುವ ಮೂಲಕ ನಾಂದಿ ಹಾಡಿದರು. 1978 ಅಶೋಕ್ ಜೈನ್ ದಂಗಲ್ ನಿರ್ಮಿಸುವ ಮೂಲಕ ಈ ಭಾಷೆಯ ಚಿತ್ರರಂಗಕ್ಕೆ ನೆಲೆ ಕಲ್ಪಿಸಿದರು. ನಜೀರ್ ಹುಸೇನ್ ಅವರ ಬಾಲಮ್ ಪರ್ ದೆಸಿಯಾ ಗಮನಾರ್ಹ ಪ್ರಯೋಗವಾಯಿತು. ಅಶೋಕ್ ಜೈನ್, ವಿಶ್ವನಾಥ್ ಸಾಹಬಾದಿ, ನಜೀರ್ ಹುಸೇನ್, ದಿಲೀಪ್ ಬೋಸ್, ಕೆ., ಅಕ್ಬರ್ ಬಾಲಮ್, ಪ್ರೇಂಕುಮಾರ್ ದತ್ತ ಬೋಜಪುರಿ ಭಾಷೆಯಲ್ಲಿ ಗಮನಾರ್ಹ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಸಂಸ್ಕøತ ಭಾಷೆಯಲ್ಲಿ 1983ರಲ್ಲಿ ಜಿ.ವಿ ಅಯ್ಯರ್ `ಆದಿ ಶಂಕರಾಚಾರ್ಯ ನಿರ್ಮಿಸಿದರು 1992ರಲ್ಲಿ ಅವರೇ ಭಗವದ್ಗೀತೆ ನಿರ್ಮಿಸಿದರು. ಎರಡು ಚಿತ್ರಗಳು ಬಂಗಾರದ ಪದಕ ಪಡೆದರೂ ಸಂಸ್ಕøತ ಭಾಷೆಯಲ್ಲಿ ಮತ್ತೆ ಚಿತ್ರಗಳು ಬರಲಿಲ್ಲ. ಕೊಂಕಣಿ ಭಾಷೆಯಲ್ಲಿ ಸುಖೀ ಕೋಣ್ ಮೋಗಾಚೋ ಆಂವ್ಲೊ 1950ರಲ್ಲೇ ನಿರ್ಮಾಣವಾದುವು. ಸೀಮಿತ ಮಾರುಕಟ್ಟೆಯಿಂದ ಕೊಂಕಣಿಯಲ್ಲಿ ಹೆಚ್ಚಿನ ಚಿತ್ರಗಳು ಬರಲಿಲ್ಲ ಬರ್ಗಾಂಜಾ ತುಳು ಭಾಷೆಯಲ್ಲಿ ಎನ್ನ ತಂಗಡಿ (1971) ಚಿತ್ರವಾಯಿತು. ಎಸ್. ಆರ್. ರಾಜನ್ ಈ ಚಿತ್ರದ ನಿರ್ಮಾಪಕ. ಆರೂರು ಪಟ್ಟಾಭಿ ನಿರ್ದೇಶಕ. “ದಾರದ ಬುಡದಿ” ಚಿತ್ರದ ಮೂಲಕ ಹೆಸರು ಮಾಡಿದರು. ಬರಹಗಾರ ವಿಶು ಕುಮಾರ್ ಕೋಟಿ ಚೆನ್ನಯ ಚಿತ್ರದ ಮೂಲಕ ಹೊಸ ತಿರುವು ನೀಡಿದರು. ಕೆ.ಎನ್. ಟೈಲರ್ ಕಾಸ್ ದಾಯ ಕಂಡನೆ, ತುಳುನಾಡ ಸಿರಿ ಚಿತ್ರಗಳಿಂದ ಗಮನ ಸೆಳೆದರು ಆರೂರು ಪಟ್ಟಾಭಿ ಅವರ ಬದ್ಕರೆ ಬುಡ್ಲೆ ಮಹತ್ವದ ಪ್ರಯೋಗವಾಯಿತು. ಡಾ. ರಿಚರ್ಡ್ ಕ್ಯಾಸ್ಟಿಲೀನ್ 18 ಲಕ್ಷ ರೂ. ವೆಚ್ಚದಲ್ಲಿ ಬಂಗಾರ್ ಪಟ್ಲೇರ್ (1993) ನಿರ್ಮಿಸಿ ಇತಿಹಾಸ ಸೃಷ್ಟಿಸಿದರು. ಮುಂದೆ ತುಳು ಚಿತ್ರರಂಗ ಗಮನಾರ್ಹವಾಗಿ ಬೆಳೆಯಲಿಲ್ಲ. ಕನ್ನಡ ಚಿತ್ರರಂಗದ ನೆರಳಿನಲ್ಲೇ ಬೆಳೆಯಬೇಕಾದ ಅನಿವಾರ್ಯತೆ ಅದನ್ನು ಕ್ರಮೇಣ ನಿಷ್ಕ್ರಿಯವಾಗಿಸಿತು. ಇತ್ತೀಚೆಗೆ ಕೋಡ್ಲು ರಾಮಕೃಷ್ಣರ ತುಡರ್ ಮಹತ್ವದ ಚಿತ್ರ ಎನ್ನಿಸಿದೆ. ಕೊಡವ ಭಾಷೆಯಲ್ಲಿ ನಾಡಮಣ್ಣಿ ನಾಡಕೂಳು, ಮಂದಾರಪೂ, ಬಾಳ್ ಫಲಂದತ್ ನಂತಹ ಚಿತ್ರಗಳು ಲಂಬಾಣಿ ಭಾಷೆಯಲ್ಲಿ ಝಡಿರೋ ಪಂಖೇೀರು ಚಿತ್ರ ಬಂದಿದ್ದರೂ ಅಲ್ಲಿ ತನ್ನದೇ ಆದ ಚಿತ್ರರಂಗ ನಿರ್ಮಾಣವಾಗಿಲ್ಲ.
ಹೀಗೆ ಹರಿಯಾನವಿ, ಕಾಶ್ಮೀರಿ, ಮಾಳ್ವಿ, ಮೈಥಿಲಿ, ನೇಪಾಲಿ, ರಾಜಸ್ಥಾನಿ ಭಾಷೆಗಳಲ್ಲಿ ಚಿತ್ರಗಳು ಬಂದಿದ್ದರೂ ಅಲ್ಲಿ ಗಮನಾರ್ಹವಾದ ಪ್ರಗತಿ ಕಾಣಿಸಿಲ್ಲ. ಬಾಲಿವುಡ್ ಬೃಹತ್ ಆಗಿ ಬೆಳೆದಿರುವುದರಿಂದ ದೇಶಿ ಭಾಷೆಗಳು ಅದರ ನೆರಳಾಗೇ ಬೆಳೆಯುತ್ತಿದೆ. ದೇಶಿ ಚಿತ್ರಗಳಲ್ಲಿ ಸ್ವಂತಿಕೆ ಮಣ್ಣಿನ ಗುಣಗಳು ದೂರವಾಗಿ ಸಾರ್ವತ್ರಿಕವಾದ ಅಂಶಗಳು ನೆಲೆಯೂರುತ್ತಿವೆ. ಹೀಗಾಗಿ ಹಂತಹಂತವಾಗಿ ಪ್ರತ್ಯೇಕತೆ ಮಾಂiÀiವಾಗಿ ಭಾಷೆ ಕಾರಣಕ್ಕೆ ಅವು ಭಿನ್ನ ಎನ್ನಿಸಬಹುದಾದ ಸಾಧ್ಯತೆ ಹತ್ತಿರದಲ್ಲಿದೆ. ಜಾಗತೀಕರಣದ ಎದುರು ನಿಲ್ಲುವ ಚೈತನ್ಯ ಭಾರತೀಯ ಚಿತ್ರರಂಗಕ್ಕೆ ಬರುವುದು ಇಂದಿನ ಆವಶ್ಯಕತೆಯಾಗಿದೆ. (ನೋಡಿ- ಕನ್ನಡ-ಚಲನಚಿತ್ರ) (ಎನ್.ಎಸ್.ಎಸ್.ಎಂ) (ಪರಿಷ್ಕರಣೆ : ಎನ್.ಎಸ್.ಎಸ್.)
ಅನುಬಂಧ 1 ರಾಷ್ಟ್ರಪತಿಗಳ ಸ್ವರ್ಣ ಪದಕ ಪಡೆದ ಚಿತ್ರಗಳು ಇಸವಿ ಹೆಸರು ಭಾಷೆ ನಿರ್ದೇಶಕರು 1954 - ಶ್ಯಾಮ್‍ಚಿ ಆಯಿ ಮರಾಠಿ - ಪಿ.ಕೆ. ಆತ್ರೆ 1955 - ಮಿರ್ಜಾ ಗಾಲಿಬ್ ಉರ್ದು - ಸೋಹ್ರಾಬ್ ಮೋದಿ 1956 - ಪಥೇರ್ ಪಂಚಾಲಿ ಬಂಗಾಳಿ - ಸತ್ಯಜಿತ್ ರೇ 1957 - ಕಾಬೂಲಿವಾಲಾ ಬಂಗಾಳಿ - ತಪನ್ ಸಿನ್ಹ 1958 - ದೋ ಆಂಖೆ ಬಾರಾ
ಹಾತ್ ಹಿಂದಿ - ವಿ.ಶಾಂತರಾಂ
1959 - ಸಾಗರ್ ಸಂಗಮೆ ಬಂಗಾಳಿ - ದೇಬಕಿ ಕುಮಾರ್ ಬೋಸ್ 1961 - ಅನುರಾಧ ಹಿಂದಿ - ಹೃಷಿಕೇಷ್ ಮುಖರ್ಜಿ 1963 - ದಾದ ಠಾಕೂರ್ ಬಂಗಾಳಿ - ಸುಧೀರ್ ಮುಖರ್ಜಿ 1964 - ಶಹರ್ ಔರ್ ಸಪ್ನಾ ಹಿಂದಿ - ಕೆ.ಎ. ಅಬ್ಬಾಸ್ 1965 - ಚಾರುಲತಾ ಬಂಗಾಳಿ - ಸತ್ಯಜಿತ್ ರೇ 1966 - ಚೆಮ್ಮೀನ್ ಮಲೆಯಾಳಿ - ರಾಮು ಕರಿಯತ್ 1967 - ತೀಸ್ರೀ ಕಸಂ ಹಿಂದಿ - ಬಸು ಭಟ್ಟಾಚಾರ್ಯ 1968 - ಹಾತಿ ಬಜಾರಿ ಬಂಗಾಳಿ - ತಪನ್ ಸಿನ್ಹ 1969 - ಗೋಪಿಗಾಯ್ನೇ ಬಾಗೇ ಬೈಯ್ನೇ ಬಂಗಾಳಿ - ಸತ್ಯಜಿತ್ ರೇ 1970 - ಭುವನ್ ಶೋಮ್ ಹಿಂದಿ - ಮೃಣಾಲ್ ಸೇನ್ 1971 - ಸಂಸ್ಕಾರ ಕನ್ನಡ - ಪಟ್ಟಾಭಿರಾಮರೆಡ್ಡಿ 1973 - ಸ್ವರ್ಣಭೂಮಿ ಮಲೆಯಾಳಂ - ಆಡೂರು ಗೋಪಾಲಕೃಷ್ಣ 1974 - ನಿರ್ಮಾಲ್ಯಂ ಮಲೆಯಾಳಂ - ಎಂ.ಟಿ. ವಾಸುದೇವ ನಾಯಕ್ 1975 - ಚೋಮನ ದುಡಿ ಕನ್ನಡ - ಬಿ.ವಿ.ಕಾರಂತ್ 1976 - ಮೃಗಯಾ ಹಿಂದಿ - ಮೃಣಾಲ್‍ಸೇನ್ 1977 - ಘಟಶ್ರಾದ್ಧ ಕನ್ನಡ - ಗಿರೀಶ್ ಕಾಸರವಳ್ಳಿ 1978 - (ಪ್ರಶಸ್ತಿ ನೀಡಲಿಲ್ಲ) 1979 - ಶೋಧ್ ಹಿಂದಿ - ಬಿಪಲಾಬ್ ರಾಯ್ 1980 - ಆಕ್ಲೇರ್ ಸಂಧಾನೆ ಬಂಗಾಳಿ - ಮೃಣಾಲ್ ಸೇನ್ 1981 - ದಖಾಲ್ ಬಂಗಾಳಿ - ಗೌತಮ್ ಘೋಷ್ 1982 - ಭೋರ್ ಬಂಗಾಳಿ - ಉತ್ಪಲೇಂದು ಚಕ್ರವರ್ತಿ 1983 - ಆದಿಶಂಕರಾಚಾರ್ಯ ಸಂಸ್ಕøತ - ಜಿ.ವಿ.ಅಯ್ಯರ್ 1984 - ದಾಮುಲ್ ಹಿಂದಿ - ಪ್ರಕಾಶ್ ಝಾ 1985 - ಚಿದಂಬರಂ ಮಲೆಯಾಳಿ - ಅರವಿಂದನ್ 1986 - ತಬರನ ಕತೆ ಕನ್ನಡ - ಗಿರೀಶ್ ಕಾಸರವಳ್ಳಿ 1987 - ಹಲೋದಿಯಾ ಚೋರಾಯೆ ಅಸ್ಸಾಮಿ - ಜಾನು ಬರುವ 1988 - ಪಿರವೈ ಮಲೆಯಾಳಂ - ಶಾಜಿ. ಎನ್. ಕರುಣ್ 1989 - ಬಾಗ್ ಬಹಾದುರ್ ಹಿಂದಿ - ಬುದ್ಧದೇವ್ ದಾಸ್ ಗುಪ್ತ 1990 - ಮರುಪಾಕಂ ತಮಿಳು - ಕೆ.ಎಸ್. ಸೇತು ಮಾಧವನ್ 1991 - ಆಗುಂತಕ್ ಬಂಗಾಳಿ - ಸತ್ಯಜಿತ್ ರೇ 1992 - ಭಗವದ್ಗೀತಾ ಸಂಸ್ಕತ - ಜಿ.ವಿ.ಅಯ್ಯರ್ 1993 - ಚರಾಚರ್ ಬಂಗಾಳಿ - ಬುದ್ಧದೇವ್ ದಾಸ್ ಗುಪ್ತ 1994 - ಉನೀಷೆ ಏಪ್ರಿಲ್ ಬಂಗಾಳಿ - ಋತುಪರ್ಣ ಘೋಷ್ 1995 - ಕಥಾಪುರುಷನ್ ಮಲೆಯಾಳಂ - ಅಡೂರು ಗೋಪಾಲಕೃಷ್ಣನ್ 1996 - ಲಾಲ್ ದರ್ಜಾ ಬಂಗಾಳಿ - ಬುದ್ಧದೇವ್ ದಾಸ್ ಗುಪ್ತ 1997 - ತಾಯಿ ಸಾಹೇಬ ಕನ್ನಡ - ಗಿರೀಶ್ ಕಾಸರವಳ್ಳಿ 1998 - ಸಮರ್ ಹಿಂದಿ - ಶ್ಯಾಂಬೆನಗಲ್ 1999 - ವಾನಪ್ರಸ್ಥಂ ಮಲೆಯಾಳಂ - ಶಾಜಿ ಎನ್. ಕರುಣ್ 2000 - ಶಾಂತಂ ಮಲೆಯಾಳಂ - ಜಯರಾಜ್ 2001 - ದ್ವೀಪ ಕನ್ನಡ - ಗಿರೀಶ್ ಕಾಸರವಳ್ಳಿ 2002 - ಮಂಡೋ ಮಯಾರ್ ಉಪಖ್ಯಾನ್ ಬಂಗಾಳಿ - ಬುದ್ಧದೇವ್ ದಾಸ್ ಗುಪ್ತ 2003 - ಶ್ವಾಸ್ ಮರಾಠಿ - ಸಂದೀಪ್ ಸಾವಂತ್ 2004 - ಪೇಜ್ ತ್ರೀ ಹಿಂದಿ - ಮಧರ್ ಭಂಡಾರ್‍ಕರ್
ಅನುಬಂಧ 2
ಅಂತರರಾಷ್ಟ್ರೀಯ ಮನ್ನಣೆ ಪಡೆದ ಭಾರತೀಯ ಚಿತ್ರಗಳು 1946- ಚೇತನ್ ಆನಂದ್‍ದ ನೀಚಾನಗರ್ ಕ್ಯಾನೆ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿತು 1950- ನಿಮಾಯ್‍ಘೋಷ್‍ರ ಬಂಗಾಳಿ ಚಿತ್ರ ಚಿನ್ಮೂಲ್ ಗೆ ಸೋವಿಯತ್ ಯೂನಿಯನ್‍ನಲ್ಲಿ ನಡೆದ ಚಿತ್ರೋತ್ಸವದಲ್ಲಿ ಮೆಚ್ಚಿಗೆ 1954- ಬಿಮಲ್ ರಾಯ್ ಅವರ ಬಂಗಾಳಿ ಚಿತ್ರ ದೋ ಬೀಗಾ ಜಮೀನ್ ಗೆ ಕ್ಯಾನೆ ಚಿತ್ರೋತ್ಸವದಲ್ಲಿ ಮೆಚ್ಚಿಗೆ 1956- ಸತ್ಯಜಿತ್ ರೇ ಅವರ ಬಂಗಾಳಿ ಚಿತ್ರ ಪಥೇರ್ ಪಂಚಾಲಿ ಕ್ಯಾನೆ ಚಿತ್ರೋತ್ಸವದಲ್ಲಿ ಅತ್ಯುತ್ತಮ ಮಾನವೀಯ ದಾಖಲತಿ ಎಂಬ ಪ್ರಶಸ್ತಿ ಪ್ರಾಪ್ತಿ 1957- ಬರ್ಲಿನ್ ಚಿತ್ರೋತ್ಸವದಲ್ಲಿ ಕಾಬೂಲಿವಾಲ (ಸಿಲ್ವರ್ ಬೇರ್) ಪ್ರಶಸ್ತಿ ಪಡೆದರೆ ಅಪರಾಜಿತೋ ವೆನಿಸ್ ಚಿತ್ರೋತ್ಸವದಲ್ಲಿ ಬಂಗಾರದ ಪದಕ 1958- ಮದರ್ ಇಂಡಿಯಾ ಆಸ್ಕರ್‍ಗೆ ನಾಮಕರಣವಾದ ಮೊದಲ ಚಿತ್ರ 1959- ಸತ್ಯಜಿತ್ ರೇ ಅವರ ಜಲಸಾಘರ್ ಮಾಸ್ಕೊ ಚಿತ್ರೋತ್ಸವದಲ್ಲಿ ಬೆಳ್ಳಿ ಪದಕ ಪಡೆಯಿತು 1960- ಮೃಣಾಲ್ ಸೇನರ ಬೈಷೆ ಶ್ರಾವಣ್ ಚಿತ್ರಕ್ಕೆ ಲಂಡನ್ ಚಿತ್ರೋತ್ಸವದಲ್ಲಿ ತೀರ್ಪುಗಾರರ ಮೆಚ್ಚಿಗೆ 1963- ಕೆ.ಎ.ಅಬ್ಬಾಸರ ಮುನ್ನಾ ಉರುಗ್ವೆ ಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ 1965- ಬರ್ಲಿನ್ ಚಿತ್ರೋತ್ಸವದಲ್ಲಿ ಸತ್ಯಜಿತ್ ರೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪುರಸ್ಕಾರ 1966- ಕಾರ್ಲೋವಾಯ್‍ವೇರಿ ಚಿತ್ರೋತ್ಸವದಲ್ಲಿ ಪೃಥ್ವಿರಾಜ್ ಕಪೂರ್‍ಗೆ ಅತ್ಯುತ್ತಮ ನಟ ಪ್ರಶಸ್ತಿ 1967- ಚಿಕಾಗೋ ಚಿತ್ರೋತ್ಸವದಲ್ಲಿ ಡಾಕ್‍ಘರ್ ಗೆ ಬಂಗಾರದ ಪದಕ ಪಡೆಯಿತು 1972- ಸತ್ಯಜಿತ್ ರೇ ಅವರ ಆಸಾನಿ ಸಂಕೇತ್ ಗೆ ಬರ್ಲಿನ್ ಚಿತ್ರೋತ್ಸವದಲ್ಲಿ ಬಂಗಾರದ ಪದಕ ಪಡೆಯಿತು 1978- ಕಾರ್ಚೇಲಿ ಚಿತ್ರೋತ್ಸವದಲ್ಲಿ ಮೃಣಾಲ್ ಸೇನ್‍ರವರ ಒಕ ಊರಿ ಕಥಾ ವಿಶೇಷ ಪ್ರಶಸ್ತಿ 1981- ಲ್ಯಾಕಾರ್ನೊ ಚಿತ್ರೋತ್ಸವದಲ್ಲಿ ರವೀಂದ್ರ ಧರ್ಮರಾಜರ ಚಕ್ರಕ್ಕೆ ಬಂಗಾರದ ಪದಕ 1982- ಅಪರ್ಣ ಸೇನರ 36 ಚೌರಂಗಿಲೇನ್ ಗೆ ಮನೀಲಾ ಚಿತ್ರೋತ್ಸವದಲ್ಲಿ ಬಂಗಾರದ ಪದಕ ಪ್ರಾಪ್ತಿ 1983- ಮೃಣಾಲ್ ಸೇನ್‍ರವರ ಶೀರಾಜ್ ಕ್ಯಾನೆ ಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ ಪಡೆಯಿತು 1984- ಕಾರ್ಲೋವಾಯ್‍ವೇರಿ ಚಿತ್ರೋತ್ಸವದಲ್ಲಿ ಅರ್ಧಸತ್ಯ ಚಿತ್ರಕ್ಕಾಗಿ ಓಂಪುರಿಗೆ ಅತ್ಯುತ್ತಮ ನಟ ಪ್ರಶಸ್ತಿ 1986- ಲ್ಯಾಕರ್ನೋ ಚಿತ್ರೋತ್ಸವದಲ್ಲಿ ಉತ್ಪಲೇಂದ್ರ ಚಕ್ರವರ್ತಿ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ 1988- ಮೀರಾ ನಾಯರ್ ಅವರ ಸಲಾಂ ಬಾಂಬೆಗೆ ಕ್ಯಾನೆ ಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ 1992- ಸತ್ಯಜಿತ್ ರೇ ಅವರಿಗೆ ಜೀವಮಾನದ ಸಾಧನೆಗಾಗಿ ವಿಶೇಷ ಆಸ್ಕರ್ ಪುರಸ್ಕಾರ 1995- ತಮಿಳು ನಟ ಶಿವಾಜಿ ಗಣೇಶನ್ ಅವರಿಗೆ ಫ್ರೆಂಚ್ ಸಕಾರದ ಪ್ರತಿಷ್ಠಿತ ಬೌಮಿರ್ ಪುರಸ್ಕಾರ 1997- ಮ್ಯಾನ್Àಹೀಮ್ ಚಿತ್ರೋತ್ಸವದಲ್ಲಿ ದೀಪಾ ಮೆಹ್ತ ಅವರ ಫೈರ್ ಚಿತ್ರಕ್ಕೆ ವಿಶೇಷ ಪ್ರಶಸ್ತಿ 1999- ಕ್ಯಾನೆ ಚಿತ್ರೋತ್ಸವದಲ್ಲಿ ಮೀರಾನಾಯರ್‍ಗೆ ಗೋಲ್ಡನ್ ಕ್ರಾಬ್ ಪ್ರಶಸ್ತಿ 2000- ಬುದ್ಧದೇವ್ ದಾಸ್ ಗುಪ್ತ ಅವರಿಗೆ ಮೀನನ್ ಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿ 2002- ಮೃಣಾಲ್‍ಸೇನ್ ಅಮರ್ ಭೂಷಣ್ ಚಿತ್ರಕ್ಕೆ ಕೈರೋ ಚಿತ್ರೋತ್ಸವದಲ್ಲಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಇದೇ ಚಿತ್ರಕ್ಕೂ ನಂದಿತಾ ದಾಸ್ ಅವರಿಗೆ ಶ್ರೇಷ್ಟ ನಟಿ ಪ್ರಶಸ್ತಿ 2003- ಆದೂರ್ ಗೋಪಾಲ್ ಕೃಷ್ಣನ್ ಅವರಿಗೆ ಫ್ರೆಂಚ್ ಸರ್ಕಾರದಿಂದ ಕಮ್ಯಾಂಡರ್ ಆಫ್ ಆರ್ಡರ್ ಪ್ರಶಸ್ತಿ 2004- ಪಾಥೋ ಸೆನ್ ಗುಪ್ತ ಅವರ ಹವಾ ಆನೆದೆ ಚಿತ್ರಕ್ಕೆ ಡರ್ಬಾನ್ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರ ಪುರಸ್ಕಾರ