ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತೀಯ ನ್ಯಾಯ

ವಿಕಿಸೋರ್ಸ್ದಿಂದ

ಭಾರತೀಯ ನ್ಯಾಯ

ಭಾರತೀಯ ಪ್ರಾಚೀನ ನ್ಯಾಯವನ್ನು ಧರ್ಮ ಎಂಬ ಪದದಿಂದಲೂ ಆಧುನಿಕ ನ್ಯಾಯವನ್ನು ಇದೇ ಪದದಿಂದಲೂ ಗುರುತಿಸಲಾಗುತ್ತದೆ.

ಪ್ರಾಚೀನ ನ್ಯಾಯ: ಧರ್ಮ ಪದದ ಬಳಕೆ ಋಗ್ವೇದದ ಮಂತ್ರಗಳಲ್ಲಿ ಆಗಿದೆ. ಈಗ ತಿಳಿದಿರುವಂತೆ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ಅತಿ ಪ್ರಾಚೀನ ಕೃತಿಯಾದ ಗೌತಮ ಧರ್ಮಸೂತ್ರವೂ 'ವೇದೋ ಧರ್ಮ ಮೂಲಂ ತದ್ವಿದಾಂ ಚ ಸ್ಮೈತಿ ಶೀಲೆ ಎಂದು ಹೇಳದ್ದರೂ ಋಗ್ವೇದದಲ್ಲಿ ಪ್ರಾಸಂಗಿಕವಾಗಿ ಬಂದಿರುವ ವಿವಾಹ ವಿಚಾರಗಳು, ಆಸ್ತಿಯ ಹಕ್ಕುಬಾದ್ಯತೆಗಳು, ಉತ್ತರಾಧಿಕಾರದ ವಿಚಾರಗಳು ಜೂಜುಕಟ್ಟೆ, ಸಂತೆಮಾಳ, ಸೆರೆಮನೆ ಮುಂತಾದವನ್ನು ವೇದಪೂರ್ವಕಾಲದ ರೂಢಿಗಳ ಅಥವಾ ನ್ಯಾಯ ಕಲ್ಪನೆಗಳ ಸ್ವರೂಪಗಳೆಂದು ಪರಿಗಣಿಸಬೇಕಾಗುವುದುರಿಂದ, 18ನೆಯ ಶತಮಾನ ತನಕದ ಭಾರತೀಯ ಪ್ರಾಚೀನ ನ್ಯಾಯದ ಇತಿಹಾಸವನ್ನು ವೇದಪೂರ್ವ ಕಾಲ, ವೇದಕಾಲ, ಧರ್ಮ ಶಾಸ್ತ್ರಗಳ ಕಾಲ, ಧರ್ಮಶಾಸ್ತ್ರಗಳ ಬಗೆಗಿನ ವ್ಯಾಖ್ಯಾನ ಕಾಲ ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸ ಬಹುದು. ಈ ವಿಂಗಡಣೆಯಲ್ಲಿ ಭಾರತೀಯ ಪ್ರಾಚೀನ ನ್ಯಾಯಶಾಸ್ತ್ರದ ಚಾರಿತ್ರಿಕ ಹಿನ್ನಲೆಯಲ್ಲಿಯ ಧರ್ಮನ್ಯಾಯಗಳ ಬಗೆಗಿನ ಕಲ್ಪನೆ, ಸ್ವರೂಪ ಮತ್ತು ಅರ್ಥವ್ಯಾಪ್ತಿ ಇವುಗಳ ವಿವಿಧ ಘಟ್ಟಗಳೂ ಅಡಕವಾಗಿವೆ. ಇಂದಿಗೂ ಮೊದಲು ಹೇಳಿದ ಮುಂಚಿನ ಮೂರು ಘಟ್ಟಗಳ ಕಾಲ ಮತ್ತು ಪ್ರತಿಯೊಂದು ಘಟ್ಟದ ಅವಧಿ ಇವುಗಳ ಬಗೆಗೆ ಉಚಿತವಾದ ನಿರ್ಣಯಗಳು ಇಲ್ಲ. ಪ್ರಸಕ್ತ ಲೇಖನ ಧರ್ಮಶಾಸ್ತ್ರದಲ್ಲಿ ಬರುವ ನ್ಯಾಯಶಾಸ್ತ್ರಕ್ಕೆ ಸೀಮಿತವಾಗಿದೆ. ಇಲ್ಲಿ ಪ್ರಾಚೀನ ನ್ಯಾಯದ ಇತಿಹಾಸ ಹಾಗೂ ನ್ಯಾಯಶಾಸ್ತ್ರದ ಸಂಕ್ಷಿಪ್ತವಿವರಣೆಗಳನ್ನು ಕೊಡಲಾಗಿದೆ.

ಭಾರತೀಯ ಪ್ರಾಚೀನ ನ್ಯಾಯದ ಪ್ರಾಚೀನತೆಯ ಬಗ್ಗೆ ಹೆಚ್ಚಿನ ಸಂಶೋಧನೆ ಆಗಿಲ್ಲ. ಪ್ರಪಂಚದ ಪ್ರಾಚೀನತಮ ನ್ಯಾಯಶಾಸ್ತ್ರ ಇದೆಂದು ಹೇಳಲು ಸಾಕಷ್ಟು ಆಧಾರಗಳಿದ್ದರೂ ಆ ಬಗ್ಗೆ ಅಂಗೀಕಾರ ದೊರೆತಿಲ್ಲ. ಅದಕ್ಕೆ ಎರಡು ಪ್ರಮುಖ ಕಾರಣಗಳುಂಟು. ಭಾರತೀಯ ನ್ಯಾಯಶಾಸ್ತ್ರಜ್ಞರು ಸಮಗ್ರ ಸ್ವರೂಪದ ಸಂಶೋಧನೆ ಮಾಡದಿರುವುದು; ಪಾಶ್ಚಾತ್ಯ ನ್ಯಾಯಶಾಸ್ತ್ರಜ್ಞರು ತಾವು ಗ್ರಹಿಸುವ ಮತ್ತು ತಮಗೆ ತಿಳಿದರುವ ಭಾರತೀಯ ನ್ಯಾಯ ಸಾಹಿತ್ಯ ಮತ್ತು ಧಾರ್ಮಿಕ ಸ್ವರೂಪದ ವಿವೇಚನೆಯ ಮುನ್ನೆಲೆಯಲ್ಲಿ ತಳೆದಿರುವ ಧೋರಣೆಗಳು. ಇವರಲ್ಲಿ ಕೆಲವರು ಧಾರ್ಮಿಕ ಸಂಕುಚಿತತೆಗೆ ಅಧೀನರಾಗಿದ್ದಾರೆ. ಮೂರು ಸಾವಿರ ವರ್ಷದಷ್ಟು ಹಳೆಯದೆನ್ನಲಾಗುವ ಗ್ರೀಕ್ ನ್ಯಾಯಕ್ಕೆ ಗೊತ್ತಿರುವ ನ್ಯಾಯ ಶಾಸ್ತ್ರದ ಮೊದಲ ದ್ರಷ್ಟಾರ ಅಥೆನ್ಸಿನ ಡ್ರಾಕೊ. ಇವನ ಕಾಲ ಕ್ರಿ. ಪೂ 621. ಹಾಗೆಯೇ ರೋಮನ್ ನ್ಯಾಯದ ಇತಿಹಾಸವನ್ನು ಕ್ರಿ. ಪೂ. 753ಕ್ಕೆ ಒಯ್ದರೂ ಕ್ರಿ. ಪೂ. 451-450ರ ಹಿಂದಿನ ರೋಮನ್ ನ್ಯಾಯದ ರೂಪರೇಷೆಗಳು ಖಚಿತವಾಗಿ ದೊರೆಯುವುದಿಲ್ಲ. ಸಾಮ್ರಾಟ ಅಲೆಕ್ಸಾಂಡೆರ್ ಭಾರತಕ್ಕೆ ದಂಡೆತ್ತಿ ಬಂದದ್ದು ಕ್ರಿ.ಪೂ. 326ರ ಸುಮಾರಿಗೆ. ಆ ವೇಳೆಗಾಗಲೇ ಭಾರತದ ಧರ್ಮಶಾಸ್ತ್ರ ವಿಶಿಷ್ಟರೂಪ ತಾಳಿತ್ತು. ಹಾಗೆ ನೋಡಿದರೆ ಅದರ ಇತಿಹಾಸ ಅದಕ್ಕೂ ಒಂದು ಸಾವಿರ ವರ್ಷವಾದರೂ ಹಿಂದೆ ಹೋಗಬಹುದು. ಈ ಬಗ್ಗೆ ಮುಂದೆ ವಿವೇಚಿಸಿದೆ. ಒಪ್ಪಿಗೆ ಆಗಿರುವ ಅಂಶಗಳನ್ನು ಗಣನೆಗೆ ತೆಗೆದುಕೊಂಡರೂ ಪ್ರಪಂಚದ ಅತ್ಯಂತ ಪುರಾತನ ನ್ಯಾಯಪದ್ಧತಿಗಳೆಂದು ಪರಿಗಣಿಸಲ್ಪಡುವ ಮೂರು ನಾಲ್ಕು ನ್ಯಾಯ ಪದ್ಧತಿಗಳಲ್ಲಿ ಭಾರತೀಯ ನ್ಯಾಯವೂ ಒಂದು ಎಂಬುದು ನಿರ್ವಿವಾದ.

ವೇದಪೂರ್ವಕಾಲದ ವ್ಯಾಪ್ತಿ ಇನ್ನೂ ಖಚಿತವಾಗಿ ನಿರ್ಣಯವಾಗಿಲ್ಲ. ಈ ಕಾಲದ ನ್ಯಾಯಶಾಸ್ತ್ರದ ಇತಿಹಾಸದ ಬಗ್ಗೆ ಸಂಶೋಧನೆ ಆಗಿಲ್ಲ. ಪಾಂಡುರಂಗವಾಮನ ಕಾಣೆಯವರ ಕೃತಿಯಾದ 'ಧರ್ಮಶಾಸ್ತ್ರದ ಇತಿಹಾಸ ಕ್ಕೆ ಋಗ್ವೇದ ಕಾಲದ ನಿರ್ದಿಷ್ಟ ನಿರ್ಣಯ ಆವಶ್ಯಕವಾಗಿರಲಿಲ್ಲವಾದ ಕಾರಣ ಈ ಬಗ್ಗೆ ಹೆಚ್ಚು ಸಂಶೋಧನೆ ನಡೆದಿಲ್ಲ. ಕ್ರಿ. ಪೂ. 20,000-16,000 ಅವಧಿಯಲ್ಲಿ ವೇದ ರಚನೆಯ ಕಾಲ ಆರಂಭವಾಯಿತು ಅನ್ನುವವರೂ ಇದ್ದಾರೆ. ಋಗ್ವೇದದ ಕಾಲ ಬಾಲಗಂಗಾಧರತಿಲಕರ ಪ್ರಕಾರ ಕ್ರಿ. ಪೂ. 6000. ಯಾಕೋಬಿ ಕ್ರಿ. ಪೂ. 4500 ಎನ್ನುತ್ತಾನೆ. ಹೌಗ್ ಪ್ರಕಾರ ಕ್ರಿ. ಪೂ. 2400-2000. ಮ್ಯಾಕ್ಸ್ ಮುಲ್ಲರನ ಬರಹಗಳೇ ಆತನ ಧಾರ್ಮಿಕ ಸಂಕುಚಿತತೆಗೆ ಸಾಕ್ಷಿ. ಕ್ರಿ.ಪೂ. 14ನೆಯ ಶತಮಾನಕ್ಕೆ ಸೇರಿದ ಬೋಗಸ್-ಕೋಯಿಯ ಬಗೆಗಿನ ಸಂಶೋಧನೆ ವೇದಕಾಲ ಅದಕ್ಕೂ ಹಿಂದಿನದು ಎಂಬ ನಿರ್ಣಯಕ್ಕೆ ಪುಷ್ಟಿಕೊಡುತ್ತದೆ. ಒಟ್ಟಾರೆ ಕ್ರಿ.ಪೂ. 6000-1200ರ ಅವಧಿಯನ್ನು ವೇದಕಾಲವೆಂದೂ ಅದಕ್ಕೂ ಹಿಂದಿನ ಕಾಲವನ್ನು ವೇದ ಪೂರ್ವಕಾಲವೆಂದೂ ಇಟ್ಟುಕೊಳ್ಳಬಹುದು.

ವೇದಪೂರ್ವ ಕಾಲದ ದ್ರಾವಿಡ ಆರ್ಯರ ಪ್ರತ್ಯೇಕ ಸಂಸ್ಕøತಿಗಳಿಗೆ ಸಂಬಂಧಿಸಿದ ಪ್ರಾಚೀನ ನ್ಯಾಯದ ಸ್ವರೂಪದ ಬಗ್ಗೆ ಖಚಿತವಾಗಿ ನಿರೂಪಿಸಬಲ್ಲ ಸಂಶೋಧನೆ, ನಿರ್ಣಯಗಳು ಇನ್ನೂ ಆಗಿಲ್ಲ. ವೇದ, ಸೂತ್ರ ಮತ್ತು ಸ್ಮøತಿ ಸಾಹಿತ್ಯಗಳಿಗೆ ಆಕರವಾಗಿದ್ದ ರೂಢಿಗಳು, ನ್ಯಾಯಿಕ ಕಲ್ಪನೆಗಳು ಸಂಪೂರ್ಣವಾಗಿ ದ್ರಾವಿಡ ಮೂಲದವೊ ಆರ್ಯ ಮೂಲದವೊ ಅಥವಾ ಉಭಯ ಜನಾಂಗಗಳ ಸಮ್ಮಿಶ್ರ ಸಮಾಜದ ಮೂಲದವೊ ಎಂಬುದರ ಬಗ್ಗೆ ತುಲನಾತ್ಮಕ ಅಧ್ಯಯನ ಆಗಿಲ್ಲ. ಬಂದ ಆರ್ಯರು ಇದ್ದ ದ್ರಾವಿಡರ ರೂಢಿಗಳನ್ನು ರೂಢಿಸಿಕೊಂಡರು ಮತ್ತು ವೇದಗಳು ಹೊಸ ಜನಾಂಗದ ಕೊಡುಗೆ ಎಂಬ ಸಂಶೋಧನೆ ಇತ್ತೀಚಿನದು. ಮನುಪ್ರಣಿತ ಮಾನವಧರ್ಮಕ್ಕೆ ಋಗ್ವೇದವೇ ಮೂಲವಾದರೂ ಅದರಲ್ಲಿ ಬರುವ ಸಮಾಜ ಮತ್ತು ವ್ಯಕ್ತವ್ಯವಹಾರಗಳಿಗೆ ವೇದಪೂರ್ವಕಾಲದ ರೂಢಿಗಳೇ ಆಧಾರ, ಹೊಸ ಜನಾಂಗ ರೂಪುಗೊಂಡದ್ದು ಆರ್ಯರು ಭಾರತಕ್ಕೆ ಅಧಿಕ ಭಾಗದಲ್ಲಿ ನೆಲಸಿದ ಬಳಿಕ. ಪ್ರಾದೇಶಿಕ ಸಂಪ್ರದಾಯಗಳಿಗೆ ಅವರು ಒಗ್ಗಿಕೊಳ್ಳುವುದರಲ್ಲಿ ಜಾಣ್ಮೆ ತೋರಿ, ತಮ್ಮ ಭಾಷೆಯನ್ನು ಎಲ್ಲೆಡೆಗೂ ವಿಸ್ತರಿಸಿದರು. ವೇದಪೂರ್ವ ಕಾಲದಲ್ಲಿ ಜಾತಿ ಪದ್ಧತಿ ಇರಲಿಲ್ಲ. ಹೊಲ, ಹಟ್ಟಿ, ಹಸು ದ್ರಾವಿಡರ ಸಂಪತ್ತು. ಆರ್ಥಿಕ ಸಾಮಾಜಿಕ ಮತ್ತು ಜೀವನಧೋರಣೆಗಳ ಕಾರಣಗಳಿಂದಾಗಿ ಆಗಿನ ಕಾಲದಲ್ಲಿ ವಿವಾದಗಳು ಕಡಿಮೆ. ಅಲ್ಲಲ್ಲಿ ಇದ್ದು ವಿವಿಧ ದ್ರಾವಿಡ ಉಪಭಾಷಾ ಬುಡಕಟ್ಟಿನವರು ತಮ್ಮ ತಮ್ಮಲ್ಲಿಯೇ ವಿವಾದಗಳನ್ನು ಬಗೆಹರಿಸಿಕೊಳ್ಳತ್ತಿದ್ದರು. ಇವರ ನೀತಿಯ ನೆಲಗಟ್ಟು ಹೊಸ ಜನಾಂಗದ ಭಕ್ತಿ ಭಾವುಕತೆಗಳಿಗೆ ಆಧಾರ. ಋಗ್ವೇದದಲ್ಲಿ ಬರುವ 'ಕಸ್ಮೈ ದೇವಾಯ ಹವಿಷಾ ವಿಧೇಮ್ ಎಂಬ ಭವ್ಯ ಕಲ್ಪನೆಗೆ ದ್ರಾವಿಡ ಮೂಲದ ಕಂದಮಿಳರ "ಕಂ" ದೇವರ ಕಲ್ಪನೆ ಕೂಡ ಆಧಾರ ಎಂಬುದಾಗಿ ಅಭಿಪ್ರಾಯಪಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದ್ರಾವಿಡರ ರೂಢಿಗಳು ಪ್ರಾಚೀನ ನ್ಯಾಯದ ಬೆನ್ನೆಲುಬು ಅನ್ನಬಹುದು.

ಭಾರತೀಯ ಪ್ರಾಚೀನ ನ್ಯಾಯದ ಭಾಷೆ ಸಂಸ್ಕøತ. ಭಾರತದಲ್ಲಿ ಭಾಷಾ ವೈವಿಧ್ಯ ಹಿಂದಿನಿಂದಲೇ ಇದ್ದರೂ ದೇಶದ ಆದ್ಯಂತ ಹರಡಿಕೊಂಡಿದ್ದ ಆರ್ಯರ ಭಾಷೆಯಾದ ಸಂಸ್ಕøತವೇ ಹೊಸ ಜನಾಂಗದ ಭಾಷೆಯಾಗಿ ಪರಿಣಮಿಸಿತು. ತೃಪ್ತಿಯ ಕಾಲದಲ್ಲಿ ಹುಟ್ಟಿ ಬಂದ ಹೊಸ ಜನಾಂಗದ ದೃಷ್ಟಿ ವ್ಯಕ್ತಿ ವಿಕಸನ, ಆತ್ಮೋನ್ನತಿ, ಬ್ರಹ್ಮಜ್ಞಾನಗಳ ಕಡೆಗೆ ಹರಿಯಿತು. ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷ ಅವರ ಸಂಸಾರದ ಸಾರ. ಈ ಜೀವನಕ್ರಮಕ್ಕೆ ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸ ಎಂಬ ನಾಲ್ಕು ಬಗೆಯ ಆಶ್ರಮಗಳ ಆಶ್ರಯ, ಹೊಸ ಸಮಾಜದಲ್ಲಿ ಏಕತೆಯನ್ನು ರೂಪಿಸಿ ಬೆಳಸಿಕೊಂಡು ಬರುವುದಕ್ಕೆ ಮತ್ತು ಅದರ ಭಾವುಕತೆಯ ಸ್ತೋತ್ರಕ್ಕೆ ಸಾಧನವಾಯಿತು ಸಂಸ್ಕøತ ಭಾಷೆ, ಅಂತೆಯೇ ಅದು ಧರ್ಮಶಾಸ್ತ್ರದ ಭಾಷೆಯೂ ಆಯಿತು. ಪ್ರಾಚೀನ ಸೂತ್ರಕಾರರಾದ ಹಿರಣ್ಯಕೇಶಿ, ಆಪಸ್ತಂಬ, ಬೌಧಾಯನರು ದಕ್ಷಿಣದವರು. ಆಚಾರ್ಯರು ದೇಶಾದ್ಯಂತ ಇದ್ದಕಾರಣ ಮತ್ತು ಈಗಿನ ಸಮಾಜದಲ್ಲಿ ಧಾರ್ಮಿಕ ಏಕತೆಯನು ಸಾರಿದ್ದ ಕಾರಣ ಹಾಗೂ ನ್ಯಾಯಸೂತ್ರಗಳಿಗೆ ಇದ್ದ ಮಾನ್ಯತೆಯನ್ನು ಪ್ರಾದೇಶಿಕ ರೂಢಿಗಳಿಗೂ ಕೊಟ್ಟಿದ್ದ ಕಾರಣಗಳಿಂದಾಗಿ ಏಕತೆಯಲ್ಲಿ ವೈವಿಧ್ಯವನ್ನು ಹೊಂದಿದ್ದ ಪ್ರಾಚೀನ ನ್ಯಾಯ ಮತ್ತು ಅದಕ್ಕೆ ಸಾಧಕವಾಗಿದ್ದ ಸಂಸ್ಕøತಭಾಷೆ ಎರಡೂ ನ್ಯಾಯಶಾಸ್ತ್ರದ ರಚನೆ ಮತ್ತು ವಿತರಣೆಗಳ ದೃಷ್ಟಿಯಿಂದ ಸಾವಿರಾರು ವರ್ಷ ಪರ್ಯಂತ ಆಚರಣೆಯಲ್ಲಿದ್ದುವು.

ವೇದಕಾಲದಲ್ಲಿ ವರ್ಣಾಶ್ರಮ ಧರ್ಮ ಮತ್ತು ವರ್ಣಧರ್ಮ ಎರಡನ್ನೂ ಕಾಣಬಹುದಾದರೂ ವರ್ಣಧರ್ಮ ಈಗ ಪ್ರಚಲಿತವಿರವಂಥ ಜಾತಿಪದ್ದತಿಯ ಘಟ್ಟ ಮುಟ್ಟಿರಲಿಲ್ಲ. ಆಯಾ ಕಾಲದ ನ್ಯಾಯ ಕಲ್ಪನೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಆಯಾ ಕಾಲದಲ್ಲಿಯ ಸಮಾಜರಚನೆ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಅರಿತಿರಬೇಕಾಗುತ್ತದೆ. ಗೌತಮಸೂತ್ರದಲ್ಲಿ ಬ್ರಾಹ್ಮಣನ ಲಕ್ಷಣಗಳನ್ನು ಹೇಳಲಾಗಿದೆ. ಅಂಥ ಬ್ರಾಹ್ಮಣ ಗೈಯಬಹುದಾದ ಆಕಸ್ಮಿಕ ಅಪರಾಧಕ್ಕೆ ಎಂಥ ದಂಡ ಎಂಬುದನ್ನು ಅಲ್ಲಿ ವಿಧಿಸಿದೆ. ಋಗ್ವೇದದ ಕಾಲಕ್ಕೆ ಬ್ರಾಹ್ಮಣ, ಕ್ಷತ್ರಿಯ, ವ್ಯಶ್ಯ ಮತ್ತು ಶೂದ್ರ ಪದಗಳು ಜೀವನಪದ್ಧತಿಯನ್ನು ಸೂಚಿಸುತ್ತವೆ. ಜೀವನಪದ್ಧತಿಗಳು ವ್ಯಕ್ತಿಗಳನ್ನು ಅವಲಂಬಿಸಿದುವು. ಆಗಿನ ಕಾಲದಲ್ಲಿ ರಾಜರು ಇದ್ದರು. ಭೂಮಿ ಸಾಮಾನ್ಯವಾಗಿ ರಾಜರದಾದರೂ ಕೃಷಿಕನಿಗೂ ಒಡೆತನದ ಹಕ್ಕಿತ್ತು. ಹೊಲ, ಹಸು, ಕುದರೆ, ಬಟ್ಟೆ, ಬಂಗಾರಗಳು ದಾನದ ಮತ್ತು ವ್ಯವಹಾರದ ವಸ್ತುಗಳಾಗಿದ್ದುವು. ಮನುಷ್ಯನೂ ಮಾರಾಟದ ವಸ್ತು ಆಗಿದ್ದ ಎನ್ನುವ ಅಭಿಪ್ರಾಯವಿದೆ. ವಿವಾಹ ಮತ್ತು ಉತ್ತರಾಧಿಕಾರದ ವಿಚಾರಗಳು ಸ್ಪಷ್ಟರೂಪದಲ್ಲಿರಲಿಲ್ಲ. ಪುತ್ರಿಕಾ ಪದ್ಧತಿಗೆ ಋಗ್ವೇದವೇ ಆಧಾರ. 'ಕೇವಲಾ ಘೋಭವತಿ ಕೇವಲಾದಿ ಎಂಬ ಋಗ್ವೇದದ ಉಕ್ತಿ ವಿಶಿಷ್ಟವಾದುದು. ತನ್ನೊಬ್ಬನಿಗಾಗಿಯೇ ಆಹಾರವನ್ನು ಒದಗಿಸಿಕೊಳ್ಳವುದನ್ನು ನಿಷೇಧಿಸುವುದರ ಹಿಂದೆ ಇರಬಹುದಾದ ಮರ್ಮವನ್ನು ಅರಿಯಬೇಕಾಗುತ್ತದೆ. ಸಾಧಕ ಕುಟುಂಬಗಳು ತಮ್ಮ ಸಾತ್ತ್ವಿಕತೆ ಬೀರಿದ್ದಕಾಲ. 'ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಜೀವನ ವಿಧಾನ ಮತ್ತು ಸಂಸ್ಕಾರ ಹಾಗೂ ಸದಾಚಾರಗಳ ಪರಿಸರಗಳು ಬ್ರಾಹ್ಮಣತ್ವವನ್ನು ಕಾಪಾಡುತ್ತವೆ ಎಂಬಂಥ ನಂಬಿಕೆ ಮೂಡಿ ಬಂದಕಾಲ. ಅಂತಯೇ ಬ್ರಾಹ್ಮಣನಾಗುವ ಮತ್ತು ಮೋಕ್ಷಸಾಧಿಸುವ ಹವ್ಯಾಸ ಹಂಬಲಗಳನ್ನೆ ಹೊಂದಿದ್ದ ಜನರ ನ್ಯಾಯ ನೀತಿ ಮತ್ತು ಕರ್ತವ್ಯ ಪ್ರಧಾನವಾದದ್ದು ಎಂದು ಹೇಳಲಾಗಿದೆ.

ಪ್ರಾಚೀನ ನ್ಯಾಯಶಾಸ್ತ್ರದ ಇತಿಹಾಸ ಮತ್ತು ವರ್ಣಗಳ ಅಸ್ತಿತ್ವದ ದೃಷ್ಟಿಯಿಂದ ಮಹ್ತತ್ವದ ಕಾಲ ಎಂದರೆ ಧರ್ಮಶಾಸ್ತ್ರಗಳ ಕಾಲ. ನ್ಯಾಯಶಾಸ್ತ್ರದ ವಿವೇಚನೆ ವಿವರಣೆ ಮತ್ತು ಸ್ಪಷ್ಟೀಕರಣಕ್ಕೆ ಸಹಾಯವಾಗಿರುವ ಯಾಸ್ಕನ ನಿರುಕ್ತ ಮತ್ತು ಜೈಮಿನಿಯ ಮೀಮಾಂಸಾ ಗ್ರಂಥಗಳು ಇದೇ ಕಾಲದವು-ಕ್ರಿ.ಪೂ.ಸು. 1200ರಿಂದ ಕ್ರಿ.ಶ.ಸು. 200ರ ತನಕದ ಅವಧಿ. ಆರಂಭಕಾಲದ ಕೃತಿಕಾರರು ಮತ್ತು ಅವರ ಕಾಲನಿರ್ಣಯ ಬಲು ಕಷ್ಟದ ಕೆಲಸ. 'ಸರ್ವೇಷಾಂ ತುಸ ನಾಮಾನಿ ಕರ್ಮಾಣಿಚ ಪೃಥಕ್ ಪೃಥಕ್ ವೇದ ಶಬ್ದೇಭ್ಯ ಏವಾದೌಪೃಥಕ್ ಸಂಸ್ಥಾಶ್ಚ ನಿರ್ಮಮೇ ಎಂದು ಮನುಸ್ಮøತಿಯಲ್ಲಿ (1-21) ಉಕ್ತವಾಗಿರುವುದನ್ನು ನೋಡಿದರೆ ಋಷಿಗಳು ತಮ್ಮ ಮೂಲ ನಾಮ ಧ್ಯೇಯಗಳನ್ನು ತ್ಯಜಿಸಿ ವೇದೋಕ್ತ ಶ್ರೀನಾಮಗಳನ್ನೇ ಸ್ವೀಕರಿಸುತ್ತಿದ್ದರೆಂದು ತಿಳಿಯುತ್ತದೆ. ತತ್ ಪ್ರಯುಕ್ತ ಅನೇಕ ಸೂತ್ರಕಾರರ ಮತ್ತು ಸ್ಮೈತಿಕಾರರ ಬಗ್ಗೆ ಇತರ ಆಧಾರಗಳ ಮೂಲಕ ವಿಶೇಷ ಸಂಶೋಧನೆಯನ್ನು ಮಾಡಬೇಕಾಗುತ್ತದೆ. ಧರ್ಮಶಾಸ್ತ್ರಗಳ ಕಾಲವನ್ನು ಧರ್ಮಶಾಸ್ತ್ರಗಳ ಕಾಲ ಮತ್ತು ಸ್ಮøತಿಗಳ ಕಾಲ ಎಂದು ವಿಂಗಡಿಸುವುದುಂಟು. ಧರ್ಮಶಾಸ್ತ್ರಗಳ ಕಾಲ ಮತ್ತು ಅನಂತರದ ಧರ್ಮಶಾಸ್ತ್ರಗಳ ಮೇಲಿನ ವ್ಯಾಖ್ಯಾನಗಳ ಕಾಲಗಳನ್ನು ಕುರಿತು ಕಾಣೆಯವರು 'ಧರ್ಮಶಾಸ್ತ್ರದ ಇತಿಹಾಸ ಎಂಬ ಅತಿ ಮಹತ್ತ್ವದ ಗ್ರಂಥ ಬರೆದಿದ್ದಾರೆ. ಇದನ್ನು ಹಿಂದೂ ಧರ್ಮದ ವಿಶ್ವಕೋಶ ಎಂದು ಹೇಳಲಾಗುತ್ತಿದ್ದರೂ ಈ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ ಎಂದು ಹೇಳಬೇಕಾಗುತ್ತದೆ. ಹಾಗೆ ಹೇಳಲು ಕಾರಣಗಳಿವೆ. ಕಾಲನಿರ್ಣಯಕ್ಕೆ ಉಪಲಬ್ಧ ಕೃತಿಗಳನ್ನು ಆಧರಿಸುವುದು ಸರಿಯಾಗಲಾರದು. ಈ ಬಗ್ಗೆ ಬೇರೆಡೆಗೂ ಹೇಳಲಾಗಿದೆ. ಸಮಾಜ ವ್ಯವಸ್ಥೆಯಲ್ಲಿ ಕಾಲದಿಂದ ಕಾಲಕ್ಕೆ ಆದ ಸ್ಥಿತ್ಯಂತರದ ಬಗ್ಗೆ ಮತ್ತು ಆ ನೆಲಗಟ್ಟಿನ ಮೇಲೆ ಕಾಲನಿರ್ಣಯ ಮಾಡುತ್ತಾರೆ. ವರ್ಣಗಳು ಜಾತಿರೂಪವನ್ನು ತಳೆಯಲು ತೆಗೆದುಕೊಂಡ ಕಾಲಾನುಕ್ರಮ, ಇತಿಹಾಸದ ಬಗೆಗಿನ ಸಂಶೋಧನೆಗಳನ್ನು ಕೆಲವು ಕಡೆ ಗಮನಿಸಿಲ್ಲ. ಮಹಾರಾಷ್ಟ್ರದ ಕೃತಿಕಾರರನ್ನು ಗುರುತಿಸಿದ್ದಾರೆ. ಆದರೆ ಇತರ ಪ್ರಾಂತೀಯರನ್ನು ಗುರುತಿಸಿಲ್ಲ. ಕರ್ನಾಟಕದವರನ್ನು ಹಾಗೆಂದು ಹೇಳಲು ಹಿಂಜರಿದಿದ್ದಾರೆ. ಪ್ರಾಚೀನ ನ್ಯಾಯದಲ್ಲಿ ಅತಿ ಪ್ರಮುಖ ಪಾತ್ರವಹಿಸಿದ 'ಮಿತಾಕ್ಷರ ದ ಕರ್ತೃ ವಿಜ್ಞಾನೇಶ್ವರ ಕರ್ನಾಟಕದವ, ಮಾಧೆವಾಚಾರ್ಯ, ಅಪರಾರ್ಕರು ಕರ್ನಾಟಕದವರು. ಹಿರಣ್ಯಕೇಶಿ ಕರ್ನಾಟಕ ದವನಿರಬೇಕು. ಇನ್ನೂ ಎಷ್ಟು ಜನ ಕರ್ನಾಟಕದವರು ಇದ್ದಾರೆ ಮತ್ತು ಅವರು ಹೇಳದೆ ಇರುವ ವ್ಯಾಖ್ಯಾನ ಮತ್ತು ನಿರ್ಬಂಧಗಳು ಇನ್ನೂ ಇವೆಯೇ ಎಂಬುದು ಸಂಶೋಧನೆಯಿಂದ ತಿಳಿಯಬಹುದಾಗಿದೆ. ಅದರ ಅಪೂರ್ವ ಕೃತಿಗಳು ಸಂಶೋಧನೆಗೆ ಅಮೂಲ್ಯ ಆಕರಗಳು.

ಧರ್ಮಸೂತ್ರಗಳ ಕಾಲವನ್ನು ಕ್ರಿ.ಪೂ. 1200-600 ಅವಧಿ ಎನ್ನಬಹುದು. ಕಾಣೆಯವರ ಪ್ರಕಾರ ಇದು ಕ್ರಿ.ಪೂ. 600-300 ಅವಧಿ. ವೇದಗಳ ಕಾಲ ಕ್ರಿ. ಪೂ. 1200ಕ್ಕಿಂತ ಹಿಂದಿನರು ಎಂಬ ಬಗ್ಗೆ ಈಗಾಗಲೇ ವಿವೇಚಿಸಲಾಗಿದೆ ಸೂತ್ರ ಸಾಹಿತ್ಯ ವೇದ ಸಾಹಿತ್ಯದ ಅಂತಿಮ ಘಟ್ಟದಲ್ಲಿ ಬಂದ ಸಾಹಿತ್ಯ. ಧರ್ಮ ಸೂತ್ರಗಳು ಕಲ್ಪಸೂತ್ರಗಳ ಭಾಗವಾಗಿದ್ದುವು ಎಂಬ ಅಭಿಪ್ರಾಯವಿದೆ. ಕಲ್ಪಸೂತ್ರ ಸಂಪ್ರದಾಯದಲ್ಲಿ ಸ್ರೌತ, ಗೃಹ್ಯ ಮತ್ತು ಧರ್ಮಸೂತ್ರಗಳೆಂಬ ಮೂರು ಅಂಗಗಳಿವೆ. ಕಲ್ಪ ಸಂಪ್ರದಾಯಕ್ಕೆ ಸೇರಿರದ ಧರ್ಮಸೂತ್ರಗಳೂ ದೊರೆತಿದೆ. ಆರಂಭಕಾಲದಲ್ಲಿ ಬೇರೆ ಬೇರೆ ವೈದಿಕ ಶಾಖೆಗಳಿಗೆ ಸಂಬಂಧಿಸಿದ್ದುವು. ಕಾಲಕ್ರಮದಲ್ಲಿ ಎಲ್ಲ ಧರ್ಮಸೂತ್ರಗಳು ಎಲ್ಲ ಶಾಖೆಗಳಿಗೂ ಪ್ರಮಾಣವೆನಿಸಿದುವು. ಗೌತಮ ಧರ್ಮಸೂತ್ರ, ಆಪಸ್ತಂಬ ಧರ್ಮಸೂತ್ರ ಮತ್ತು ಬೌಧಾಯನ ಧರ್ಮಸೂತ್ರ ಇವುಗಳಲ್ಲಿ ಯಾವುದು ಪ್ರಾಚೀನ ಎಂಬುದರ ಬಗ್ಗೆ ಭಿನ್ನಾಭಿಪ್ರಾಯವಿದೆ. ಮನುಧರ್ಮಸೂತ್ರ ಇತ್ತು ಆದರೆ ಉಪಲಬ್ಧವಿಲ್ಲ ಎಂಬ ಅಭಿಪ್ರಾಯವೂ ಇದೆ. ಮನಧರ್ಮಸೂತ್ರ ಇರಲೇ ಇಲ್ಲ. ಗೌತಮ ಧರ್ಮಸೂತ್ರ ಅತ್ಯಂತ ಪ್ರಾಚೀನಧರ್ಮ ಸೂತ್ರ ಎಂಬುದು ಕಾಣೆಯವರ ಅಭಿಪ್ರಾಯ.

ಧರ್ಮಸೂತ್ರಗಳಿಗೂ ಗೃಹ್ಯ ಸೂತ್ರಗಳಿಗೂ ಹತ್ತಿರದ ಸಂಬಂಧವಿದೆ. ಗೃಹ್ಯ ಸೂತ್ರಗಳಲ್ಲಿ ಗಾಹ್ರ್ಯ ಜೀವನಕ್ಕೆ ಸಂಬಂಧಿಸಿದ ಯಜ್ಞ ನಿಯಮಗಳು, ವಾರ್ಷಿಕ ಯಾಗಗಳು, ನಿತ್ಯ ತರ್ಪಣಗಳು, ಶ್ರಾದ್ಧ ಹಾಗೂ ಇತರ ಸಂಸ್ಕಾರ ಇತ್ಯಾದಿ ವಿಷಯಗಳಿದ್ದರೆ ಧರ್ಮಸೂತ್ರಗಳಲ್ಲಿ ಜನರ ಆಚಾರ, ಹಕ್ಕು, ಕರ್ತವ್ಯ, ಬ್ರಹ್ಮಚರ್ಯ, ವಿವಾಹ, ಸ್ನಾತಕರ ವಿಧಿಗಳು, ಉತ್ತರಾಧಿಕಾರ, ದತ್ತು ದಂಡವಿಧಿ, ಸ್ತ್ರೀಧನ ಮತ್ತು ಇತರ ವ್ಯವಹಾರಗಳ ಬಗೆಗಿನ ವಿಚಾರಗಳು ಇವೆ. ಎಂದೇ ಧರ್ಮಸೊತ್ರಗಳು, ಸ್ವಲ್ಪಮಟ್ಟಿಗೆ ನ್ಯಾಯಶಾಸ್ತ್ರದೊಂದಿಗೆ ಸಂಬಂಧ ಹೊಂದಿರುವುದಾಗಿವೆ. ಗೌತಮ, ಬೌಧಾಯನ, ಆಪಸ್ತಂಬ, ಹಿರಣ್ಯಕೇಶಿ, ವಸಿಷ್ಠ, ವಿಷ್ಣು, ಹಾರೀತ ವೈಖಾನಸ, ಅತ್ರಿ, ಉಶನಸ್, ಕಣ್ವ ಅಥವಾ ಕಾಣ್ವ, ಕಶ್ಯಪ ಅಥವಾ ಕಾಶ್ಯಪ, ಗಾಗ್ರ್ಯ, ಚ್ಯವನ, ಜಾತೂಕಣ್ರ್ಯ, ದೇವಲ, ಪೈಠನಸಿ, ಬುಧ, ಬೃಹಸ್ಪತಿ, ಭರದ್ವಾಜ ಅಥವಾ ಭಾರದ್ವಾಜ, ಶಾತಪತ, ಸುಮಂತು ಮುಂತಾದವರು ಧರ್ಮಸೂತ್ರಗಳನ್ನು ಬರೆದ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ.

ಭಾರತೀಯ ಪ್ರಾಚೀನ ನ್ಯಾಯಶಾಸ್ತ್ರದ ಇತಿಹಾಸ ಮತ್ತು ನಯಾಯ ಸ್ವರೂಪ ಹಾಗೂ ದರ್ಶನಗಳ ದೃಷ್ಟಿಯಿಂದ ಅತ್ಯಂತ ಮಹತ್ತ್ವದ ಘಟ್ಟ ಸ್ಮøತಿಗಳ ಕಾಲ ಎನ್ನಬಹುದು. ಸ್ಮøತಿಗಳಲ್ಲಿ ಮನು, ಯಾಜ್ಞವಲ್ಕ್ಯ, ಪರಾಶರ, ನಾರದ, ಬೃಹಸ್ಪತಿ ಮತ್ತು ಕಾತ್ಯಾಯನರ ಸ್ಮøತಿಗಳು ಮುಖ್ಯ. ಮನುಸ್ಮøತಿಯ ಕಾಲವನ್ನು ಕ್ರಿ. ಪೂ. 800-600 ಎನ್ನಬಹುದು. ಉಪಲಬ್ದ ಪ್ರತಿಯನ್ನು ಆಧರಿಸಿ ಕೌಟಲ್ಯನ ಅರ್ಥಶಾಸ್ತ್ರಕ್ಕಿಂತ ಮನಸ್ಮøತಿ ಅರ್ವಾಚೀನ ಎನ್ನುತ್ತಾರೆ ಕಾಣೆ. ಪರಾಶರ ನಾರದ ಮತ್ತು ಬೃಹಸ್ಪತಿಗಳನ್ನು ಕೌಟಲ್ಯ ಉಲ್ಲೇಖಿಸಿದ್ದಾನೆ. ಈ ಮೂವರೂ ಮನುಸ್ಮøತಿಯನ್ನು ಉಲ್ಲೇಖಿಸುತ್ತಾರೆ. ಮೇಲಾಗಿ ಗೌತಮ ಸೂತ್ರದಲ್ಲಿಯೂ ಮನುವಿನ ಉಲ್ಲೇಖವಿದೆ. ಕೌಟಲ್ಯ ಅಲೆಕ್ಸಾಂಡರನ ಸಮಕಾಲೀನ, ಅಂದರೆ ಕ್ರಿ. ಪೂ. ಸುಮಾರು 326. ಹಾಗೆಯೇ ಬುದ್ಧನ ಕಾಲ ಕ್ರಿ. ಪೂ. 563-483. ಮಹಾಭಾರತ ಇದಕ್ಕೂ ಅರ್ವಾಚೀನ ಅಲ್ಲ. ಯಾಜ್ಞವಲ್ಕ್ಯರ ಮೇಲೆ ಬುದ್ಧನ ಪ್ರಭಾವವಿದೆ ಎಂಬ ಅಭಿಪ್ರಾಯವೂ ಇದೆ. ಈ ಎಲ್ಲ ದೃಷ್ಟಿಯಿಂದ ಮತ್ತು ಋಷಿಗಳ ಹೆಸರಿನ ಬಗ್ಗೆ ಮನುಸ್ಮøತಿಯಲ್ಲಿಯ ಹಿಂದೆ ಹೇಳಿದ ಶ್ಲೋಕದ ಮುನ್ನೆಲೆಯಲ್ಲಿ ಕಾಣೆಯವರು ಮಾಡಿದ ಕಾಲ ನಿರ್ಣಯಗಳ ಬಗ್ಗೆ ಇನ್ನೂ ಸಂಶೋಧನೆ ಆಗಬೇಕು. ಮನುಸ್ಮøತಿಯಲ್ಲಿ ಬರುವ ಸಮಾಜ ರಚನೆಯಲ್ಲಿ ಬ್ರಾಹ್ಮಣ ವರ್ಣದ ಘನತೆ ಇನ್ನೂ ಉನ್ನತ ಸ್ಥಿತಿಯಲ್ಲಿತ್ತು. ಯಾರೂ ಹುಟ್ಟಿನಿಂದ ಬ್ರಾಹ್ಮಣರಾಗುತ್ತಿರಲಿಲ್ಲ. ಕುಲ ಕಸಬುಗಳು ಇನ್ನೂ ಜಾತಿಯ ರೂಪ ತಾಳಿರಲಿಲ್ಲ. ಮಹಾಭಾರತ ಮತ್ತು ಯಾಜ್ಞವಲ್ಕ್ಯರ ಕಾಲಕ್ಕೆ ಅಧಮ ಬ್ರಾಹ್ಮಣರ ಸಂಖ್ಯೆ ಬೆಳಯಲಾರಂಭಿಸಿತು. ಬ್ರಾಹ್ಮಣನಾಗಿ ಉಳಿಯಲು ಕಷ್ಟವಾಗತೊಡಗಿತು. ಅಂತೆಯೇ ಹಲವು ನಿರ್ಬಂಧಗಳು ಸಡಿಲಗೊಂಡವು. ಅಲ್ಲದೇ ಅಧಮ ಬ್ರಾಹ್ಮಣರನ್ನು ರಾಜ ಊಳಿಗದ ಕೆಲಸಕ್ಕೆ ಎಂದರೆ ಶೂದ್ರರ ಕೆಲಸಕ್ಕೆ ನೇಮಿಸಿಕೊಳ್ಳಬಹುದಾಗಿತ್ತು.

ಸೂತ್ರ ಸಾಹಿತ್ಯಕ್ಕಿಂತ ಸ್ಮ್ಯತಿ ಸಾಹಿತ್ಯ ನ್ಯಾಯಶಾಸ್ತ್ರಕ್ಕೆ ಹೆಚ್ಚು ಹತ್ತಿರದ ಸಂಬಂಧ ಹೊಂದಿದೆ. ಮನುಸ್ಮøತಿ, ಯಾಜ್ಞವಲ್ಕ್ಯಸ್ಮøತಿ, ಪರಾಶರ ಸ್ಮøತಿ, ನಾರದಸ್ಮøತಿ, ಬೃಹಸ್ಪತಿ ಸ್ಮøತಿ. ಕಾತ್ಯಾಯನ ಸ್ಮøತಿಗಳು ಅತಿಮುಖ್ಯ ಮತ್ತು ಪ್ರಾಚೀನ ಸ್ಮøತಿಗಳು, ಇತರ ಅನೇಕರು ಸ್ಮøತಿಗಳನ್ನು ರಚಿಸಿದ್ದಾರೆ. ಅವರಲ್ಲಿ ಅಂಗೀರಸ್, ಋಷ್ಯಶೃಂಗ, ದಕ್ಷ ಪಿತಾಮಹ, ಪುಲಸ್ತ್ಯ, ಪೈಠನಸಿ, ಪ್ರಚೇತಸ್, ಪ್ರಜಾಪತಿ, ಮರೀಚಿ, ಯಮ, ತಾಗಾಕ್ಷಿ, ವಿಶ್ವಾಮಿತ್ರ, ವ್ಯಾಸ, ಸಂವರ್ತ ಮತ್ತು ಹಾರೀತ ಇವರು ಮುಖ್ಯರು. ಇವಲ್ಲದೇ ಚತುರ್ವಂಶತಿ ಮತ, ಷಟ್‍ಸ್ರಿಂಶನ್ಮತ ಹಾಗೂ ಸ್ಮøತಿ ಸಂಗ್ರಹಗಳಂಥ ಸಂಕಕಲನಗಳೂ ಈ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಕೆಲವರ ಸ್ಮøತಿಗಳು ಉಪಲಬ್ಧವಿಲ್ಲ. ಇದೇ ಕಾಲಕ್ಕೆ ಸೇರಿದ ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳು ನ್ಯಾಯಶಾಸ್ತ್ರದ ಬೆಳವಣಿಗೆಗೆ ಸಹಾಯಕವಾಗಿವೆ. ಲಭ್ಯ ಸ್ಮøತಿಗಳ ಸಂಖ್ಯೆ ಸುಮಾರು ನೂರು. ಇವುಗಳ ಕರ್ತೃ ಮತ್ತು ಕಾಲ ನಿರ್ಣಯ ಕಷ್ಟದ ಕೆಲಸ. ಕೆಲವು ಅರ್ವಾಚೀನ ಸ್ಮøತಿಗಳ ಕಾಲ ಕ್ರಿ.ಶ. 300ರ ತನಕವೂ ಇರಬಹುದು. ಕಾಲನಿರ್ಣಯದ ಜಟಿಲ ಸಮಸ್ಯೆಯನ್ನು ಉಪಲಬ್ಧಕೃತಿಗಳು ಮತ್ತು ಪ್ರತಿಗಳು ಮತ್ತಷ್ಟು ಗೊಂದಲಕ್ಕೆ ಈಡು ಮಾಡಿವೆ. ಒಟ್ಟಾರೆ ಸ್ಮøತಿಗಳ ಕಾಲವನ್ನು ಕ್ರಿ. ಪೂ. 800-300 ಅವಧಿ ಎನ್ನಬಹುದು.

ಕ್ರಿ. ಶ. 300-1800 ಅವಧಿಯನ್ನು ಧರ್ಮಶಾಸ್ತ್ರಗಳ ಮೇಲಿನ ವ್ಯಾಖ್ಯಾನಗಳ ಮತ್ತು ನಿಬಂಧೆಗಳ ಕಾಲವೆಂದೂ ಭಾರತೀಯ ಪ್ರಾಚೀನ ನ್ಯಾಯದ ಕೊನೆಯ ಘಟ್ಟವೆಂದೂ ಹೇಳಬಹುದು. ಕ್ರಿ. ಪೂ. 600ರಿಂದ ಈ ಕಾಲದ ಆದಿಭಾಗದ ತನಕ ಭಾರತ ಧಾರ್ಮಿಕ ಮತ್ತು ವೈಚಾರಿಕ ಆಂದೋಲನಗಳನ್ನು ಕಂಡಿತ್ತು. ಜೈನ ಮತ ಧಾರ್ಮಿಕ ಬದಲಾವಣೆಯನ್ನು ತಂದಿತಾದರೂ ನ್ಯಾಯಶಾಸ್ತ್ರದ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ಭೌದ್ಧ ಮತ ಕೂಡ ಹಿಂದೂ ನ್ಯಾಯಿಕ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ತಂದಂತೆ ಅನಿಸುವುದಿಲ್ಲ. ಬುದ್ಧನ ಅನಂತರದ ಅಗ್ನಿಪುರಾಣದಲ್ಲಿ ಬರುವ ನ್ಯಾಯಪದ್ಧತಿಯಲ್ಲಿ ಪರಿವರ್ತನೆ ಇಲ್ಲವೆಂದು ಕಾಣೆ ವಿವರಿಸಿದ್ದಾರೆ. ಇಲ್ಲಿಯ ಹಿಂದೂ ನ್ಯಾಯಶಾಸ್ತ್ರದ ಪ್ರಭಾವ ಬೌದ್ಧ ನ್ಯಾಯದ ಮೇಲೆ ಸಂಪೂರ್ಣವಾಗಿ ಬಿದ್ದಿದೆ. ಧರ್ಮಶಾಸ್ತ್ರ ಅಲ್ಲಿ ಧಮ್ಮಸತ್, ಧಮ್ಮಥಟ್ ಮುಂತಾದ ಹೆಸರುಗಳಲ್ಲಿ ಪ್ರಕಟವಾಗಿ ಆಯಾ ದೇಶಗಳ ನ್ಯಾಯಶಾಸ್ತ್ರಗಳ ಮೇಲೆ ಪ್ರಭಾವ ಬೀರಿದೆ. ಭಾರತೀಯ ನ್ಯಾಯದ ಪ್ರಭಾವ ಬರ್ಮಾ, ಜಾವಾ, ಬಾಲಿ ಸಯಾಮೀದ್ವೀಪ, ಇಂಡೊನೇಷ್ಯಾ, ಮಲೇಸ್ಯಾ ದೇಶಗಳ ಮೇಲೂ ಆಗಿತ್ತು.

18ನೆಯ ಶತಮಾನದ ಕೊನೆಯತನಕದ ವಿಸ್ತಾರವಾದ ಅವಧಿಯ ಮೊದಲು ಹಂತದಲ್ಲಿ ನ್ಯಾಯಿಕ ಕಲ್ಪನೆಗಳನ್ನು ಹೊಂದಿರುವಂಥ ಅಗ್ನಿ. ವಾಯು, ವಿಷ್ಣು, ಮಾರ್ಕಂಡೇಯ, ಮತ್ಸ್ಯ ಮತ್ತು ಕೂರ್ಮ ಇತ್ಯಾದಿ ಪುರಾಣಗಳು ಅಸ್ತಿತ್ವದಲ್ಲಿ ಬಂದು ಅವುಗಳ ಪ್ರವಚನದಿಂದಾಗಿ ಜನಸಾಮಾನ್ಯರೂ ನ್ಯಾಯವನ್ನು ಅರಿಯುವಂತಾಯಿತು. ಅಲ್ಲದೆ ವೈದಿಕ ಧರ್ಮ ಮತ್ತೆ ಚೇತರಿಸಿಕೊಳ್ಳತೊಡಗಿತು. ಶ್ರೀ ಶಂಕರ, ಶ್ರೀ ಮಧ್ವಾಚಾರ್ಯ, ಶ್ರೀ ರಾಮಾನುಜಾಚಾರ್ಯ ಮತ್ತು ಈ ಆಚಾರ್ಯರುಗಳ ಅನುಯಾಯಿಗಳು ಅಲ್ಲದೇ ದೇಶದ ಇತರ ಪಂಥಗಳವರೂ ಸನಾತನ ಧರ್ಮಕ್ಕೆ ಹೊಸ ತಿರುವುಕೊಟ್ಟರು. ಇದರಿಂದಾಗಿ ಹಿಂದೂ ನ್ಯಾಯ ಅಭಿವೃದ್ಧಿಹೊಂದಲು ಅವಕಾಶದೊರೆಯಿತು. ಈ ಕಾಲದ ಇತರ ವಿಶೇಷಗಳು ಎಂದರೆ ವಿತಾಕ್ಷರ ಮತ್ತು ದಯಾಭಾಗ ಎಂಬ ಎರಡು ಪ್ರಮುಖ ಸಂಪ್ರದಾಯಗಳು ಮತ್ತು ಮಿತಾಕ್ಷರ ಸಂಪ್ರದಾಯದ ಉಪಸಂಪ್ರದಾಯಗಳಾದ, ವಾರಾಣಸಿಸಂಪ್ರದಾಯ, ಮಿಥಿಲಾ ಸಂಪ್ರದಾಯ, ಮಹಾರಾಷ್ಟ್ರ ಅಥವಾ ಮುಂಬೈ ಸಂಪ್ರದಾಯ ಮತ್ತು ದ್ರಾವಿಡಸಂಪ್ರದಾಯಗಳು ಅಸ್ತಿತ್ವದಲ್ಲಿ ಬಂದಿರುವುದು. ಮಹಮ್ಮದೀಯರ ಆಡಳಿತದಲ್ಲಿ ಆಚರಣೆಗೆ ಬಂದ ಕಂದಾಯ ನೀತಿಯ ಫಲವಾದ ಜಮೀನ್ದಾರಿ ಸ್ವರೂಪದ ನ್ಯಾಯಿಕ ಬದಲಾವಣೆ ಮತ್ತು ಇಸ್ಲಾಮೀನ್ಯಾಯವನ್ನು ಮಹಮ್ಮದೀಯರಿಗೆ ಅನ್ವಯಿಸಿದುದರ ಪರಿಣಾಮವಾಗಿ ಇಸ್ಲಾಮೀ ಪದ್ಧತಿಯ ನ್ಯಾಯಾಲಯಗಳು ಅಸ್ತಿತ್ವದಲ್ಲಿ ಬಂದುದು ಭಾರತೀಯ ನ್ಯಾಯದ ವಿಶೇಷಗಳೇ ಸರಿ.

ಅನೇಕ ಪ್ರದೇಶಗಳಲ್ಲಿ ಮಹಮ್ಮದೀಯರಾಜರು ಆಡಳಿತ ನಡೆಸಿದರೂ ಅವರು ಹಿಂದೂ ನ್ಯಾಯಶಾಸ್ತ್ರಕ್ಕೆ ಮಾರ್ಪಾಡುಗಳನ್ನಾಗಲಿ ಅಡೆತಡೆಗಳನ್ನಾಗಲಿ ತರಲಿಲ್ಲ. ಅವರ ಆಡಳಿತಗಳಲ್ಲಿ ಸಣ್ಣಪ್ರಮಾಣದ ವಿವಾದಗಳನ್ನು ಗ್ರಾಮ ನಗರಗಳಲ್ಲಿಯ ವೃತ್ತಿ ಸಂಘಗಳು, ಆಡಳಿತಗಾರರು ಮತ್ತು ಪ್ರಮುಖರು ಬಗೆಹರಿಸುತ್ತಿದ್ದರು. ದೊಡ್ಡ ದೊಡ್ಡ ವಿವಾದಗಳನ್ನು ರಾಜರು ಹಿಂದೂ ನ್ಯಾಯಶಾಸ್ತ್ರಜ್ಞರ ಸಹಾಯದೊಂದಿಗೆ ನಿರ್ಣಯಿಸುತ್ತಿದ್ದರು. ಹೀಗಾಗಿ ಕ್ರಮೇಣ ಹಿಂದೂ ನ್ಯಾಯಾಲಯಗಳು ಇಲ್ಲವಾದುವು. ಸುಲ್ತಾನರು, ಮೊಗಲ್ ಬಾದಶಹರು, ದಕ್ಷಿಣದ ಕಲಬುರ್ಗಿಯ ಬಹಮನೀ ರಾಜ್ಯದ ಉಪಶಾಖೆಗಳಾದ ಶಾಹಿಮನೆತನದ ಅರಸರು, ಹೈದರಾಬಾದಿನ ನಿಜಾಮರು, ಔಧ್‍ನ ನವಾಬರು, ಆರ್ಕಾಟ ನವಾಬರು, ಹೈದರಾಲಿ ಟೀಪು ಮೊದಲಾದವರ ಆಡಳಿತದ ಫಲವಾಗಿ ದಿವಾನೀ ಅದಾಲತ್ ಮತ್ತು ಫೌಜುದಾರೀ ಅದಾಲತ್‍ಗಳು (ನ್ಯಾಯಾಲಯಗಳು) ಅಸ್ತಿತ್ವಕ್ಕೆ ಬಂದುವು. ಅಕ್ಬರ್ ಬಾದಶಹ ಹಿಂದೂ ನ್ಯಾಯಶಾಸ್ತ್ರದಲ್ಲಿಯೂ ಆಸಕ್ತಿ ತೋರಿಸಿದ್ದ. ಸತಿ ಮತ್ತು ದಿವ್ಯಗಳ ವಿಚಾರದಲ್ಲಿ ಸುಧಾರಣೆ ತರಲು ಆತ ಪ್ರಯತ್ನಿಸಿದ್ದ.

ಹಿಂದೆ ಹೇಳಿದ ಮಿತಾಕ್ಷರದ ಕಾಲಕ್ಕಿಂತ ಹಿಂದೆಯೇ ಕೆಲವು ವ್ಯಾಖ್ಯಾನಕಾರರು ಆಗಿಹೋಗಿದ್ದಾರೆ. ಅವರಲ್ಲಿ ಅಸಹಾಯ, ಬರ್ತಜರ್Ð ವಿಶ್ವರೂಪ, ಭಾರುಚಿ, ಶ್ರೀಕರ, ಮೇಧಾತಿಥಿ, ಧಾರೇಶ್ವರ, ಭೋಜದೇವ, ದೇವಸ್ವಾಮಿನ್, ಜಿತೇಂದ್ರಿಯ, ಬಾಲಕ, ಬಾಲರೂಪ ಯೋಗಲಕ ಮೊದಲಾದವರು ಮುಖ್ಯರು. ಅಸಹಾಯ, ವಿಶ್ವರೂಪ, ಮತ್ತು ಮೇಧಾತಿಥಿ ಅತ್ಯಂತ ಪ್ರಸಿದ್ಧರು. ಮಿತಾಕ್ಷರವನ್ನು ಬರೆದ ವಿಜ್ಞಾನಯೋಗಿನ್ ಕರ್ನಾಟಕದವ ಈತ ಕಲ್ಯಾಣ ಚಾಲುಕ್ಯ ಮನೆತನದ ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ. ಮಿತಾಕ್ಷರವನ್ನು ಭಾರತೀಯ ಪ್ರಾಚೀನ ನ್ಯಾಯದ ಮೇರುಕೃತಿ ಎಂದು ಪರಿಗಣಿಸಲಾಗಿದೆ. ಬಂಗಾಲ ದೇಶ ಬಿಟ್ಟು ಇತರ ಎಲ್ಲ ಪ್ರದೇಶಗಳಲ್ಲಿಯೂ ಇದಕ್ಕೆ ಮಾನ್ಯತೆಯಿದೆ. ಬಂಗಾಲದಲ್ಲಿ ಕೂಡ ಜೀಮೂತವಾಹನ ದಯಾಭಾಗದಲ್ಲಿ ಹೇಳಿರುವ ವಿಷಯಗಳಲ್ಲಿ ಮಿತಾಕ್ಷರಕ್ಕೆ ಮಾನ್ಯತೆ ಇದೆ. ಯಾಜ್ಞವಲ್ಕ್ಯ ಸ್ಮøತಿಯನ್ನು ಕುರಿತ ವ್ಯಾಖ್ಯಾನ ವಿಜ್ಞಾನೇಶ್ವರನ ಕಾಲದ ಅನಂತರದ ಹಿಂದೂ ನ್ಯಾಯಶಾಸ್ತ್ರಜ್ಞರಲ್ಲಿ ಕಾಮಧೇನು ಹಲಾಯುಧ, ಭಾವದೇವಭಟ್ಟ, ಪ್ರಕಾಶ, ಪಾರೀಜಾತ, ಗೋವಿಂದರಾಜ, ಲಕ್ಷೀಧರ, ಜೀಮೂತವಾಹನ, ಅಪರಾರ್ಕ, ಪ್ರದೀಪ, ಶ್ರೀಧರ, ಅನಿರುದ್ಧ ಬಲ್ಲಾಳಸೇನ ಮತ್ತು ಲಕ್ಷ್ಮಣಸೇನ, ಹರಿಹರ, ದೇವಣ್ಣಭಟ್ಟ, ಹರದತ್ತ, ಹೇಮಾದ್ರಿ, ಕಲ್ಲೂಕಭಟ್ಟ, ಶ್ರೀದತ್ತ ಉಪಾಧ್ಯಾಯ, ಚಾಂದೇಶ್ವರ, ಹರಿನಾಥ, ಮದನಪಾಲ ಮತ್ತು ವಿಶ್ವೇಶ್ವರಭಟ್ಟ, ಮದನ ರತ್ನ ವಿದ್ಯಾಪತಿ, ವರದರಾಜ, ಶೂಲಪಾಣಿ, ರುದ್ರಧರ, ಮಿಶರುಮಿಶ್ರ, ವಾಚಸ್ಪತಿಮಿಶ್ರ, ವರ್ಧಮಾನ, ನೃಸಿಂಹ ಪ್ರಸಾದ, ಪ್ರತಾಪ ರುದ್ರದೇವ ಗೋವಿಂದಾನಂದ, ನಾರಾಯಣ ಭಟ್ಟ, ತೋಡರಮಲ್, ನಂದಪಂಡಿತ, ಕಮಲಾಕರಭಟ್ಟ, ನೀಲಕಂಠಭಟ್ಟ, ಮಿತ್ರಮಿಶ್ರ, ಅನಂತದೇವ, ನಾಗೋಜಿಭಟ್ಟ, ಬಾಲಕೃಷ್ಣ ಅಥವಾ ಬಾಲಂಭಟ್ಟ, ಕಾಶೀನಾಥ ಉಪಾಧ್ಯಾಯ, ಜಗನ್ನಾಥ ತರ್ಕಪಂಚಾನನ ಇವರು ಮುಖ್ಯರು. ಕಾಣೆಯವರು ಅಸ್ಸಾಮಿನ ಕಾಮರೂಪ ಸಂಪ್ರದಾಯದ ನೀಲಾಂಬರ, ದಾಮೋದರ ಮಿಶ್ರ, ಪೀತಾಂಬರ ಮತ್ತು ಲಕ್ಷ್ಮೀಪತಿ ಇವರುಗಳ ಬಗ್ಗೆಯೂ ವಿವರ ಕೊಟ್ಟಿದ್ದಾರೆ.

ಪ್ರಾದೇಶಿಕ ಸಂಪ್ರದಾಯಗಳು ಅಸ್ತಿತ್ವದಲ್ಲಿ ಬಂದದ್ದನ್ನು ಈಗಾಗಲೇ ಹೇಳಲಾಗಿದೆ. ಇವುಗಳಿಗೆ ಸೇರಿದ ಪ್ರದೇಶಗಳಲ್ಲಿ ಕೆಲವೊಂದು ಗ್ರಂಥಗಳಿಗೆ ಮಾತ್ರ ವಿಶೇಷ ಮನ್ನಣೆ ಕೊಡಲಾಗುತ್ತಿತ್ತು. ಬಂಗಾಲದಲ್ಲಿ ಜೀಮೂತವಾಹನರ ದಯಾಭಾಗಕ್ಕೆ ಹೆಚ್ಚಿನ ಮನ್ನಣೆಯಿತು. ರಘುನಂದನನ ದಾಯಾತತ್ತ್ವಕ್ಕೂ ಈ ಪ್ರದೇಶದಲ್ಲಿ ಮಾನ್ಯತೆ ಇತ್ತು. ಮಿತಾಕ್ಷರು ಸಂಪ್ರದಾಯದ ಉಪಸಂಪ್ರದಾಯಗಳ ಪ್ರದೇಶಗಳಲ್ಲಿ ಮನ್ನಣೆ ಪಡೆದ ಗ್ರಂಥಗಳು ಹೀಗಿವೆ :

ಉಪಸಂಪ್ರದಾಯ ಗ್ರಂಥದ ಹೆಸರು ಗ್ರಂಥಕರ್ತೃ

ವಾರಾಣಸಿ ಸಂಪ್ರದಾಯ ವೀರಮಿತ್ರೋದಯ ನಿರ್ಣಯಸಿಂಧು ಮಿತ್ರಮಿಶ್ರ ಕಮಲಾಕರ

ಮಿಥಿಲಾ ಸಂಪ್ರದಾಯ ವಿವಾದಚಿಂತಾಮಣಿ ವಿವಾದರತ್ನಾಕರ ಮದನಪಾರಿಜಾತ ವಾಚಸ್ಪತಿ ಮಿಶ್ರ ಚಾಂದೇಶ್ವರ ವಿಶ್ವೇಶ್ವರ ಭಟ್ಟ

ಮಹಾರಾಷ್ಟ್ರ ಅಥವಾ ವ್ಯವಹಾರ ಮಯೂಖ ನೀಲಕಂಠಭಟ್ಟ

ಮುಂಬೈ ಸಂಪ್ರದಾಯ ವೀರಮಿತ್ರೋದಯ ನಿರ್ಣಯ ಸಿಂಧು ಮಿತ್ರ ಮಿಶ್ರ ಕಮಲಾಕರ

ದ್ರಾವಿಡಸಂಪ್ರದಾಯ ಸ್ಮøತಿಚಂದ್ರಿಕಾ ಪರಾಶರಮಾಧವೀಯ ಸರಸ್ವತಿ ವಿಲಾಸ ವ್ಯವಹಾರ ನಿರ್ಣಯ ದೇವಣ್ಣ ಭಟ್ಟ ಮಾದವಾಚಾರ್ಯ ಪ್ರತಾಪರುದ್ರದೇವ ವರದರಾಜ


ದತ್ತಕ ಮೀಮಾಂಸಾ ಮತ್ತು ದತ್ತಕ ಚಂದ್ರಿಕಾ ಎರಡೂ ಗ್ರಂಥಗಳು ದತ್ತಕ ವಿಷಯದಲ್ಲಿ ಭಾರತಾದ್ಯಂತ ಮನ್ನಣೆ ಪಡೆದಿದ್ದುವು. ಇವುಗಳಲ್ಲಿ ವ್ಯತ್ಯಾಸ ಕಂಡುಬಂದಾಗ, ಬಂಗಾಲದಲ್ಲಿ ದತ್ತಕ ಚಂದ್ರಿಕಾಕ್ಕೆ ಹೆಚ್ಚಿನ ಮನ್ನಣೆ ಇತ್ತು. ಹಿಂದೆ ಹೇಳಿದ ಕಾಶೀನಾಥ ಉಪಾಧ್ಯಾಯ ಮತ್ತು ಜಗನ್ನಾಥ ತರ್ಕ ಪಂಚಾನನರು 18ನೆಯ ಶತಮಾನದ ಕೊನೆಯ ಭಾಗದವರು. ಇವರು ಪ್ರಾಚೀನ ನ್ಯಾಯದ ಕೊನೆಯ ಘಟ್ಟದವರು. ಧರ್ಮಶಾಸ್ತ್ರಗಳ ಮೇಲಿನ ವ್ಯಾಖ್ಯಾನಗಳ ಕಾಲದಲ್ಲಿ ಹಿಂದೂ ನ್ಯಾಯದ ಸ್ವರ್ಣಯುಗದ ಸ್ಮøತಿ ಸಾಹಿತ್ಯವನ್ನು ಚಿಂತನ, ಮಂಥನ, ಪರಾಮರ್ಶನ, ಪೃಥಕ್ಕರಣ, ವಿಸ್ತರಣ ಮತ್ತು ವಿವರಣೆಗಳಿಂದ ಶ್ರೀಮಂತಗೊಳಿಸಲಾಗಿದೆ. ಧರ್ಮಸೂತ್ರ ಮತ್ತು ಸ್ಮøತಿಗಳ ಕಾಲದಿಂದ ಸೂತ್ರಕಾರರು, ಸ್ಮøತಿಕಾರರು, ವ್ಯಾಖ್ಯಾನಕಾರರು ಮತ್ತು ನಿಬಂಧಕಾರರು ಇವರುಗಳ ವಿಚಕ್ಷಣೆಯಿಂದ ಹೊರಹೊಮ್ಮಿದ ನ್ಯಾಯಶಾಸ್ತ್ರದ ವಿವರಣೆಯನ್ನು ಇನ್ನು ಮುಂದೆ ಕೊಡಲಾಗಿದೆ.

ಸ್ಮøತಿಗಳಲ್ಲಿಯ 'ವ್ಯವಹಾರಪಾದ ಅಥವಾ 'ವಿವಾದಪದ ವಿವಾದಗಳಿಗೆ ಸಂಬಂಧಿಸಿದೆ. ವ್ಯವಹಾರಪದದ ವರ್ಗೀಕರಣ, ಸಂಖ್ಯೆ ಮತ್ತು ವಿಷಯಗಳ ಸಮೀಕರಣ ಇವನ್ನು ಕುರಿತಂತೆ ಸ್ಮøತಿಕಾರರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮೂಲ ವಿಷಯಗಳು ಹೆಚ್ಚು ಕಡಿಮೆ ಒಂದೇ ಆಗಿವೆ. ಮನುವಿನ ಮೇರೆಗೆ ವಿವಾದ ವಿಷಯಗಳು ಹದಿನೆಂಟು. ಆದರೆ ಯಾಜ್ಞವಲ್ಕ್ಯರ ಮೇರೆಗೆ ಹತ್ತೊಂಬತ್ತು. ಮುಂದೆ ಒಂದೆರಡು ವಿಷಯಗಳೂ ಸೇರಿವೆ. ಅವು ಸಾಮಾನ್ಯವಾಗಿ ಹೀಗಿವೆ: ಋಣಾದಾನ-ಸಾಲಸೂಲಿ; ಉಪನಿಧಿ; ಅಸ್ವಾಮಿ ವಿಕ್ರಯ; ಪಾಲುಗಾರಿಕೆ; ದತ್ತಾನಪಾಕರ್ಮ-ಕೊಟ್ಟದ್ದನ್ನು ಮರಳಿ ಪಡೆಯುವುದು; ಸಂಬಳ ಬಾಡಿಗೆ ಇತ್ಯಾದಿ; ಕರಾರು ಭಂಗ; ಮಾರಾಟ ನಿಲುಗಡೆ; ಸ್ವಾಮಿ-ಸೇವಕ ವಿವಾದಗಳು; ಸೀಮಾ ವಿವಾದಗಳು; ವಾಕ್ಪಾರುಷ್ಯ-ನಿಂದೆ ಮಾನಭಂಗ; ದಂಡಪಾರುಷ್ಯ; ಸ್ತೇಯ-ಕಳ್ಳತನ; ಸಾಹಸ-ಘೋರಾಪರಾಧ; ಸ್ತ್ರೀ ಸಂಗ್ರಹಣ-ವ್ಯಭಿಚಾರ; ದಾಯಭಾಗ-ಉತ್ತರಾಧಿಕಾರ; ದ್ಯೂತ-ಜೂಜು; ಕಂಟಕ ಶೋಧನ; ಮತ್ತು ಪ್ರಕೀರ್ಣಕ. ಜೀವನ ವ್ಯವಹಾರಗಳಲ್ಲಿ ಹೊಸ ಹೊಸ ಸನ್ನಿವೇಶಗಳು ಸಂದರ್ಭಗಳು ಉಂಟಾದಾಗ ಉದ್ಭವಿಸುವ ಹೊಸ ವಿವಾದಾತ್ಮಕ ವಿಷಯಗಳನ್ನೂ ಪ್ರಕ್ರಿಯಾ ನಿಯಮಗಳನ್ನೂ ತದನಂತರದ ಸ್ಮøತಿಕಾರರು ವಿವೇಚಿಸಿದ್ದಾರೆ. ಇವುಗಳ ವಿವೇಚನೆ ಮಾಡುವಾಗ ಆಯಾ ವಿಷಯಗಳಿಗೆ ಸಂಬಂಧಿಸಿದ ಆವಶ್ಯಕ ಸಹಾಯಕ ಪೂರಕ ಆನುಷಂಗಿಕ ವಿಷಯಗಳನ್ನು ಸ್ಮøತಿ ವ್ಯಾಖ್ಯಾನಗಳಲ್ಲಿ ವಿವೇಚಿಸಿದ್ದಾರೆ.

ಭಾರತೀಯ ಪ್ರಾಚೀನ ನ್ಯಾಯ ಧರ್ಮದ ಅವಿಭಾಜ್ಯ ಅಂಗ, ದಯೆಯೇ ಧರ್ಮದ ಮೂಲ, ಸದಾಚಾರ ಸಂಪನ್ನತೆ ಅದರ ಮಾರ್ಗ, ಅಂತೆಯೇ ಪ್ರಾಚೀನ ನ್ಯಾಯ ಕರ್ತವ್ಯನಿಷ್ಠವೂ ನೀತಿನಿಷ್ಠವೂ ಸಾಮಾಜಿಕ ಪ್ರಜ್ಞಾನಿಷ್ಠವೂ ಆಗಿತ್ತು. ಈ ಹಿನ್ನೆಲೆಯನ್ನು ನ್ಯಾಯಶಾಸ್ತ್ರದಲ್ಲಿ ಪ್ರತಿಷ್ಠಾಪಿಸಲು ಪಾಪದ ನಿಮಿತ್ತತೆ. ಪ್ರಾಯಶ್ಚಿತ್ತದ ವ್ಯವಸ್ಥೆ ಇವು ನಿತ್ಯ ವ್ಯವಹಾರ ವಿವಾದಗಳಲ್ಲಿಯೂ ತಲೆ ಹಾಕಿದವು. ಋಣದ ಮೂಲಕಲ್ಪನೆಯೂ ಇದೇ ಮೂಲದ್ದು-ದೇವಋಣ. ಋಷಿ ಋಣ, ಪಿತೃಋಣ, ಋಣವಿಮೋಚನೆ. ಈ ಮಾರ್ಗದಲ್ಲಿದ್ದ ಸಮಾಜ ಬಡ್ಡಿ ವ್ಯವಹಾರವನ್ನು ಅಧರ್ಮವೆಂದು ಪರಿಗಣಿಸಿತ್ತು. ಸಾಮಾಜಿಕ ಆವಶ್ಯಕತೆ ನ್ಯಾಯದಲ್ಲಿ ತಾನಾಗಿಯೇ ಅಂತರ್ಗತವಾಗುತ್ತದೆ. ಗೌತಮ ಮತ್ತು ಮನು ಇವರ ಕಾಲಕ್ಕೆ ಬಡ್ಡಿ ವ್ಯವಹಾರ ಮನ್ನಣೆ ಪಡೆದಿತ್ತು. 1/80 ರಷ್ಟು ಬಡ್ಡಿಯನ್ನು (ವೃದ್ಧಿ) ಹಾಕಬಹುದಾಗಿತ್ತು. ಹೆಚ್ಚಿನ ಬಡ್ಡಿ ಹಾಕುವುದು ಪತಿತಕಾರ್ಯವಾಗಿತ್ತು. ತೆಗೆದುಕೊಂಡ ಸಾಲದ ಎರಡು ಪಟ್ಟು ದ್ವೈಗುಣ್ಯ ಹಾಗೆಯೇ ತ್ರೈಗುಣ್ಯರಷ್ಟನ್ನು ಮರಳಿಸುವ ನಿಯಮಗಳನ್ನು ಸ್ಮøತಿಕಾರರು ಖಂಡಿಸಿದ್ದಾರೆ. ದ್ವೈಗುಣ್ಯ ರೀತಿಯ ದಾಂದುಪತ್ ಪದ್ಧತಿ ಆಧುನಿಕ ಕಾಲದ ತನಕವೂ ಇದ್ದುದನ್ನು ಕಾಣಬಹುದಾಗಿದೆ.

ನಾರದ, ಬೃಹಸ್ಪತಿ, ಕೌಟಲ್ಯರ ವೇಳೆಗೆ ಸಾಲಕ್ಕೆ ಸಂಬಂಧಿಸಿದ ನ್ಯಾಯ ನಿಯಮಗಳು ವಿಶಿಷ್ಟ ರೂಪತಾಳಿದುವು. ಏಳು ರೀತಿಯ ಸಾಲುಗಳನ್ನೂ ನಾಲ್ಕು ರೀತಿಯ ಬಡ್ಡಿಗಳನ್ನೂ ನಾರದ ವಿವರಿಸಿದ್ದಾನೆ. ಚಕ್ರಬಡ್ಡಿಯ ನಿಯಮಗಳು ಅಸ್ತಿತ್ವದಲ್ಲಿದ್ದುವು. ಸಾಲಕೊಡುವ ಕುಸೀದಕರ ಮೇಲೆ ಕಣ್ಣಿಡುವ ಪರಿಪಾಠದ ಕ್ರಮ ಆಡಳಿತದ ಅಂಗವಾಗಿದ್ದುದನ್ನು ಅರ್ಥಶಾಸ್ತ್ರದಿಂದ ತಿಳಿಯಬಹುದಾಗಿದೆ. ಸಾಲವನ್ನು ಲಿಖಿತ ಪತ್ರದ ಪ್ರಕಾರ ಅಥವಾ ಸಾಕ್ಷಿಗಳ ಸಮಕ್ಷಮ ಕೊಡಬೇಕೆಂದು ಬೃಹಸ್ಪತಿ ಸೂಚಿಸಿದ್ದಾನೆ ಯಾವ ಯಾವ ವಸ್ತುಗಳನ್ನು ಸಾಲವಾಗಿ ಪಡೆಯಬಹುದಿತ್ತು. ಯಾವ ಯಾವ ದರದಲ್ಲಿ ಅಥವಾ ರೂಪದಲ್ಲಿ ಬಡ್ಡಿಯನ್ನು ಕೊಡಬೇಕಾಗಿತ್ತು. ವಾಪಾಸಾತಿಯ ನಿಯಮಗಳು ಇವನ್ನೂ ಯಾವ ಯಾವ ಆಧಾರದ ಮತ್ತು ನಿರ್ಬಂಧಗಳ ಮೇಲೆ ಸಾಲ ಕೊಡಬಹುದಾಗಿತ್ತು ಮತ್ತು ಅವುಗಳ ಬಗೆಗಿನ ವಿವಾದಗಳು, ತಪ್ಪಿತಸ್ಥರಿಗೆ ದಂಡಗಳು ಇತ್ಯಾದಿ ವಿಷಯಗಳನ್ನೂ ಸ್ಮøತಿಗಳು ವಿವರಿಸಿವೆ.

ಆಸ್ತಿ. ಅದರ ಮೇಲಿನ ಒಡೆತನ ಮತ್ತು ಸ್ವತ್ತಿನ ಸ್ವಾಧೀನತ್ವದ ಬಗೆಗಿನ ನ್ಯಾಯಿಕ ಕಲ್ಪನೆಗಳು ಸ್ಮøತಿಗಳ ಕಾಲಕ್ಕೆ ವಿಧಿಬದ್ದವಾಗಿದ್ದುವು. ಸ್ವಾಮಿತ್ವ (ಓನರ್‍ಶಿಪ್) ಮತ್ತು ಸ್ವಾಧೀನತ್ವಗಳ (ಭುಕ್ತಿ, ಪೊಸೆಶನ್) ವ್ಯತ್ಯಾಸ ಹಾಗೂ ಅರ್ಥವ್ಯಾಪ್ತಿಗಳು ಪ್ರಾಚೀನಕಾಲದಲ್ಲಿಯೇ ನಿರ್ದಿಷ್ಟವಾಗಿ ತಿಳಿದಿದ್ದುವು. ಈ ಬಗೆಗಿನ ವರ್ಗೀಕರಣ ಮತ್ತು ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳು ಇತ್ಯಾದಿ ವಿಷಯಗಳು ಸ್ಮøತಿ ಸಾಹಿತ್ಯದಲ್ಲಿ ದೊರೆಯುತ್ತವೆ. ಭುಕ್ತಿರೇವ ಗರೀಯಸೀ ಎಂಬ ಬೃಹಸ್ಪತಿಯ ಕಾಲದ ನಿಯಮ ಇಂದಿಗೂ ಮಾನ್ಯ. ಸ್ವಂತಕ್ಕೆ ಮತ್ತು ಬೇರೆ ಬೇರೆ ವಿಧದಲ್ಲಿ ಸ್ವತ್ತಿನ ಬಳಕೆ ಆಗುತ್ತಿತ್ತು. ವ್ಯವಹಾರಸ್ವರೂಪ ಮತ್ತು ಬೇರೆ ಬೇರೆ ವಿಧದಲ್ಲಿ ಸ್ವತ್ತಿನ ಬಳಕೆ ಆಗುತ್ತಿತ್ತು. ವ್ಯವಹಾರ ಸ್ವರೂಪ ಮತ್ತು ಅಪರಾಧಿಕ ಸ್ವರೂಪದ ಆಸ್ತಿಯ ಬಗೆಗಿನ ವಿವಾದಗಳನ್ನು ರಾಜನ ಅಥವಾ ಆತನಿಂದ ನೇಮಿಸಲಾದ ನ್ಯಾಯಾಲಯಗಳ ಮೂಲಕ ಬಗೆಹರಿಸಿಕೊಳ್ಳಲಾಗುತ್ತಿತ್ತು. ಪ್ರತಿಕೂಲ ಸ್ವಾಧೀನವನ್ನೂ ಸ್ಮøತಿಕಾರರು ವಿವೇಚಿಸಿದ್ದಾರೆ. ನಾರದ ಸ್ಮøತಿಯಲ್ಲಿ ಈ ಬಗ್ಗೆ ಸಾಕಷ್ಟು ನಿಯಮಗಳು ಇವೆ. ಪ್ರತಿಕೂಲ ಸ್ವಾಧೀನಕಾರನನ್ನು ಕೆಲವು ಸಂದರ್ಭಗಳಲ್ಲಿ ಕಳ್ಳನೆಂದು ಪರಿಗಣಿಸಿ ದಂಡಿಸಲಾಗುತ್ತಿತ್ತು. ಯಾಜ್ಞವಲ್ಕ್ಯರ 'ಅಪ್ರತಿಷಿದ್ಧಂ ಅನುಮತಂ ಭವತಿ' ಎಂಬುದು ನ್ಯಾಯಸಮ್ಮತವಾಗಿತ್ತು. ಈ ಬಗ್ಗೆ ಮತ್ತು ಆಸ್ತಿಯ ಇತರ ವ್ಯವಹಾರಗಳ ಬಗ್ಗೆ ಕಲಮಿತಿಯ ನಿಯಮಗಳು ಇದ್ದವು. ಭೂಮಿ ಮತ್ತು ಇತರ ವಸ್ತುಗಳ ಸ್ವಾಧೀನತ್ವದ ಅನ್ವಯದ ಸ್ವಾಮಿತ್ವದ ಅಧಿಕಾರಕ್ಕೆ ಬೇರೆ ಬೇರೆ ಕಾಲ ಮಿತಿಗಳು ಇದ್ದುವು. ಭೂಮಿ ಸಂಬಂಧದಲ್ಲಿ ರಾಜನ ಒಡೆತನದ ಅಧಿಕಾರಕ್ಕೆ ಶತಮಾನಗಳ ಕಾಲದ ಪ್ರತಿಕೂಲ ಸ್ವಾಧೀನವೂ ಭಂಗತರಲು ಅವಕಾಶವಿರಲಿಲ್ಲ. ಇತರರ ವಿಷಯದಲ್ಲಿ ಕನಿಷ್ಠ 100 ವರ್ಷಗಳ ಸತತಪ್ರತಿಕೂಲ ಸ್ವಾಧೀನ ಇರಬೇಕಾಗಿತ್ತು. ಮನು ಮತ್ತು ಯಾಜ್ಞವಲ್ಕ್ಯರ ಕಾಲದಲ್ಲಿ ಅದು ತ್ರಿಪುರಷಭೋಗದ ಕಾಲಮಿತಿಯಾಗಿತ್ತು. ಮುಂದೆ ನಾರದರ ಕಾಲಕ್ಕೆ ಕನಿಷ್ಠ 60 ವರ್ಷದ ಕಾಲಮಿತಿಯಾಗಿ ಪರಿಣಮಿಸಿತು. ಉಪನಿಧಿ, ನಿಕ್ಷೇಪ, ನ್ಯಾಸ ಇವು ಒಬ್ಬನ ಸ್ವತ್ತು. ಇನ್ನೊಬ್ಬನಲ್ಲಿ ಉಳಿದಿರುವಾಗಿನ ಸ್ಥಿತ್ಯಂತರಗಳು ಅಂದರೆ ಹಸ್ತಾಂತರದ ಕಾರಣ ಒತ್ತೆ ಅಥವಾ ಅಡವು ಮತ್ತು ಇತರ ರೂಪದ್ದಾಗಿರಬಹುದು. ನಂಬುಗೆಯ ಮೇಲೆ ಅಥವಾ ತಿಳಿದು ಇಲ್ಲವೇ ತಿಳಿಯದೆ ವಸ್ತುವನ್ನು ಬಿಟ್ಟರಬಹುದು. ಜಾಮೀನಿನ ನಿಮಿತ್ತ ಬಿಟ್ಟಿರಬಹುದು. ಅಂಥ ವಸ್ತುಗಳನ್ನು ಕಾಪಾಡುವ ಮತ್ತು ಮರಳಿಸುವ ಜವಾಬುದಾರಿಯ ಹೊಣೆ ಇರುತ್ತಿತ್ತು. ಸ್ವಾಧೀನಕಾರ ಈ ಬಗೆಗಿನ ನಿಯಮಗಳನ್ನು ವ್ಯತಿಕ್ರಮಿಸಿದರೆ, ವ್ಯತಿ ಕ್ರಮದ ಸ್ವರೂಪ ಆಧರಿಸಿ ದಂಡ ಹಾಕುವಂತೆ ಮನ ವಿಧಿಸಿದ್ದಾನೆ; ಅಲ್ಲದೇ ದಂಡಗಳ ಪ್ರಮಾಣಗಳನ್ನು ಉಲ್ಲೇಖಿಸಿದ್ದಾನೆ ಕೂಡ. ಒತ್ತೆ ಅಥವಾ ಅಡವು ಇಟ್ಟವನು ಹಾಗೆ ಇಟ್ಟ ವಸ್ತುವನ್ನು ವಾಪಸು ಮಾಡುವಂತೆ ಕೇಳಿದಾಗ, ವಸ್ತುವನ್ನು ಇಟ್ಟುಕೊಂಡವನು ವಾಪಸು ಮಾಡಲು ಅಕಾರಣವಾಗಿ ನಿರಾಕರಿಸಿದರೆ ನಿರಾಕರಿಸಿದವನನ್ನು ಕಳ್ಳನೆಂದು ಪರಿಗಣಿಸಿ ದಂಡಹಾಕಬೇಕೆನ್ನತ್ತಾನೆ ಕೌಟಿಲ್ಯ.

ಹಲವಾರು ವಿಧದ ಜಾಮೀನುಗಳಿದ್ದುವು. ಅವುಗಳ ಕಾರಣಗಳನ್ನು ಇಲ್ಲವೇ ರೀತಿಗಳನ್ನು ಆಧರಿಸಿ ಜಾಮೀನುಗಳ ವರ್ಗೀಕರಣ ಮಾಡಲಾಗುತ್ತಿತ್ತು. ಉದಾಹರಣೆಗೆ ಸಾಲದ ಮರುಪಾವತಿಗೆ ಜಾಮೀನು ನಿಂತವ ಲಗ್ನಕ. ಅಪರಾಧಿಯ ಮರುಹಾಜರಾತಿಗೆ ಜಾಮೀನು ನಿಂತವ ಉಪಸ್ಥಾನ. ಇನ್ನೊಬ್ಬನ ಪ್ರಾಮಾಣಿಕತೆಗೆ ಜಾಮೀನು ನಿಂತವ ಅಭಯ. ಜಾಮೀನುದಾರನ ಹೊಣೆಗಾರಿಕೆ, ಪರಿಹಾರ ಕೊಡುವುದಾದಲ್ಲಿ, ಅಂಥ ಹೊಣೆಗಾರಿಕೆಗೆ ಅವನು, ಅವನ ಆಸ್ತಿ, ಅವನ ಆಸ್ತಿಯನ್ನು ಪಡೆದ ಮಕ್ಕಳು ಮತ್ತು ಮೊಮ್ಮಕ್ಕಳು ಹೊಣೆ ಆಗಿರುತ್ತಿದ್ದರು.

ಕರಾರು ಪ್ರಕಾರಗಳು ಬಹಳ, ಅವು ಒಪ್ಪಿಗೆ, ಒಪ್ಪಂದ ಅಥವಾ ಒಡಂಬಡಿಕೆಯ ಸ್ವರೂಪದ್ದಾಗಿರಬಹುದು. ಕರಾರು(ಸಂವಿದ್)ಪಾಲನೆ. ವ್ಯತ್ರಿಕ್ರಮಗಳನ್ನು ಮತ್ತು ಆ ಬಗೆಗಿನ ದಂಡಗಳನ್ನು ಮನು ಉಲ್ಲೇಖಿಸಿದ್ದಾನೆ. ವೃತ್ತಿ ವಿವಾದಗಳನ್ನು ಸಾಮಾನ್ಯವಾಗಿ. ಕುಲಕಸಬುಗಳಿಗೆ ಸಂಬಂಧಿಸಿದ ಶ್ರೇಣಿ, ಪೂಗ, ಗಣ, ವ್ರಾತ ಮಹಾಜನ ಜಂಬ ವಿವಿಧರೀತಿಯ ಸಂಘ ಸಂಸ್ಥೆಗಳು ನಿರ್ಣಯಿಸುತ್ತಿದ್ದುವು.

ವಿನಿಮಯ ಮತ್ತು ವಿಕ್ರಯಕ್ಕೆ ಸಂಬಂಧಿಸಿದ ನ್ಯಾಯಿಕ ಕಲ್ಪನೆಗಳಿಗೆ ದಾನದ ಕಲ್ಪನೆಯೇ ಮೂಲ. ವೇದಪೂರ್ವ ಮತ್ತು ವೇದಕಾಲಗಳಲ್ಲಿ ಮಿತಿಮೀರಿದ ಸಂಗ್ರಹ ಸಂಚಯಗಳಿಗೆ ಸಾಮಾಜಿಕ ನಿಷೇಧವಿತ್ತು. ಗೃಹ್ಯ ಮತ್ತು ಧರ್ಮ ಸೂತ್ರಗಳ ಕಾಲದಲ್ಲಿ ಬ್ರಾಹ್ಮಣ ಮತ್ತು ಇತರರು ಎಷ್ಟು ಅವಧಿಗಾಗುವಷ್ಟು ಸಂಗ್ರಹಿಸಬೇಕು ಎನ್ನುವುದರ ಬಗ್ಗೆ ನಿಯಮಗಳು ಇದ್ದುವು. ಪರಸ್ಪರ ಆವಶ್ಯಕತೆಗಳನ್ನು ತುಂಬಿಕೊಳ್ಳಲು ದಾನದ ಪದ್ಧತಿಯನ್ನು ಅವಲಂಬಿಸಬೇಕಾಗಿತ್ತು. ದಾನಕ್ಕೆ ಮಾನ್ಯತೆ ಇತ್ತು. ದಾನದ ಸ್ವರೂಪಗಳೂ ಇದ್ದುವು. ದಾನಕ್ಕೆ ಮಾನ್ಯತೆ ಇತ್ತು. ದಾನದ ಸ್ವರೂಪಗಳೂ ಇದ್ದುವು. ಆ ಬಗೆಗಿನ ನಿಯಮಗಳು ನ್ಯಾಯಶಾಸ್ತ್ರದಲ್ಲಿ ಕಡಿಮೆಯಾಗಲು ವಿನಿಮಯ ಪದ್ಧತಿ ಕಾರಣವಾಯಿತು. ಕಾಲಾನುಕ್ರಮದಲ್ಲಿ ವಿಕ್ರಯವೂ ಅಸ್ತಿತ್ವಕ್ಕೆ ಬಂದಿತು. ಸ್ಥಾವರದ ಮಾರಾಟ ಸ್ಮøತಿಗಳ ಕಾಲದಲ್ಲಿ ರೂಢಿಗತವಾಯಿತು. ಯಾವುದೇ ಕಾರಣಕ್ಕಾಗಿ ತನ್ನಲ್ಲಿ ಬಂದು ಸೇರಿದ ವಸ್ತುವನ್ನು ತನ್ನದಾಗಿರದ ಸಂದರ್ಭದಲ್ಲಿ ಮಾರಾಟ ಮಾಡುವಂತಿರಲಿಲ್ಲ; ಈ ನಿಯಮವನ್ನು ವ್ಯತಿಕ್ರಮಿಸಿ ಮಾರಾಟ ಮಾಡಿದರೆ, ಅಂಥ ಮಾರಾಟವನ್ನು ನ್ಯಾಯಾಧೀಶ ಅಥವಾ ರಾಜ ರದ್ದುಗೊಳಿಸಬೇಕೆಂದು ಮನು, ಯಾಜ್ಞವಲ್ಕ್ಯ ಮತ್ತು ನಾರದರು ಪ್ರತಿಪಾದಿಸಿದ್ದಾರೆ. ವರ್ಣಾಶ್ರಮದ ಪ್ರಥಮ ಘಟ್ಟ ವಿದ್ಯಾರ್ಥಿ ಜೀವನ. ವಿದ್ಯಾರ್ಥಿಗಳಿಗೂ ಹಲವು ಸಾಮಾಜಿಕ ಕರ್ತವ್ಯಗಳಿದ್ದು ಅವುಗಳ ವ್ಯತಿಕ್ರಮಕ್ಕೆ ಪ್ರಾಯಶ್ಚಿತ್ತಗಳು ಇದ್ದುವು. ಮೇಲಾಗಿ ಕೆಲವು ಸಂದರ್ಭಗಳಲ್ಲಿ ಗುರುವಿನ ಮತ್ತು ಇತರ ಆಶ್ರಮವಾಸಿಯ ಆಸ್ತಿಗೆ ಉತ್ತರಾಧಿಕಾರದ ಅಧಿಕಾರವನ್ನು ಪಡೆಯಬಹುದಾಗಿತ್ತು. ಮುಂದಿನ ಘಟ್ಟವೇ ಗೃಹಸ್ಥಾಶ್ರಮ. ಧನ್ಯೋಗೃಹಸ್ಥಾಶ್ರಮೀ ಎಂಬ ಉಕ್ತಿಯಲ್ಲಿದ್ದ ಅರ್ಥವ್ಯಾಪ್ತಿಯ ಶ್ರೀಮಂತಿಕೆ ಊಹಾತೀತವಾದದ್ದು. ವಿವಾಹ ಎಂಬ ಪದದಲ್ಲಿ ಅಡಗಿದೆ ಆ ಶ್ರೀಮಂತಿಕೆ. ಆಧ್ಯಾತ್ಮಿಕ ಸ್ವಾಸ್ಥ್ಯ, ನ್ಯಾಯಿಕ ನೆಲೆಗಟ್ಟಿನ ಸಂಸಾರ, ಸಂತಾನ, ಸಂರಕ್ಷಣೆಗಳ ಸ್ವಾಸ್ಥ್ಯ, ಸಂತತಿಯ ಸಂಪತ್ತಿನ ಭೋಗ, ವಿತರಣೆಗಳಲ್ಲಿಯ ಸ್ವಾಸ್ಥ್ಯಗಳ ಶ್ರೀಮಂತಿಕೆಗೆ ವಿವಾಹ ಆಧಾರವಾದದ್ದು ಎನ್ನುತ್ತಾರೆ ನ್ಯಾಯ ಹಾಗೂ ಸಮಾಜ ಶಾಸ್ತ್ರಜ್ಞರು. ಋಗ್ವೇದದಲ್ಲಿ ಎಷ್ಟು ರೀತಿಯ ವಿವಾಹಗಳು ಇದ್ದುವು ಎಂದು ಹೇಳುವುದು ಕಷ್ಟ. ಆದರೆ ಅದರಲ್ಲಿ ಬಾಲ್ಯ ವಿವಾಹ, ವಯಸ್ಕರ ವಿವಾಹ ಮತ್ತು ವಿಧವಾ ವಿವಾಹಗಳ ವಿವರ ದೊರೆಯುತ್ತದೆ. ಮನುಸ್ಮøತಿಯ ಮೇರೆಗೆ ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ, ಅಸುರ, ಗಾಂಧರ್ವ, ರಾಕ್ಷಸ ಮತ್ತು ಪಿಶಾಚಗಳೆಂಬ ಎಂಟು ವಿಧದ ವಿವಾಹ ರೂಪಗಳಿದ್ದುವು. ಮೊದಲ ನಾಲ್ಕು ವಿಧಗಳಲ್ಲಿ ಕನ್ಯಾದಾನದ ಕಲ್ಪನೆ ಇದ್ದು. ಇವುಗಳ ಸಮ್ಮಿಶ್ರಣ ಸ್ವರೂಪದ ಕನ್ಯಾಧಾನ ಪದ್ಧತಿ ಸಾಮಾನ್ಯವಾಗಿ ಎಲ್ಲ ವರ್ಣಗಳಲ್ಲಿಯೂ ಆಚರಣೆಯಲ್ಲಿ ಉಳಿಯಿತು. ಸ್ವಯಂವರದ ಪದ್ಧತಿಗೂ ಗಾಂಧರ್ವ ವಿವಾಹ ಪದ್ಧತಿಗೂ ವ್ಯತ್ಯಾಸವಿದೆ. ಸ್ವಯಂವರದ ಪದ್ಧತಿಯನ್ನು ಕೆಲವೇ ಸಂದರ್ಭಗಳಲ್ಲಿ ಕ್ಷತ್ರಿಯರು ಆಚರಿಸಿದ್ದಾರೆ.

ಬಾಲ್ಯವಿವಾಹ ಪದ್ಧತಿ ಹಿಂದೂ ವಿವಾಹ ಪದ್ಧತಿಗಳಲ್ಲಿಯ ಒಂದು ಕಳಂಕವೆಂಬ ಅಭಿಪ್ರಾಯವಿದೆ. ಋಗ್ವೇದದಲ್ಲಿ ಬಂದ ಒಂದು ಉದಾಹರಣೆ ಬಿಟ್ಟರೆ ಕ್ರಿ. ಪೂ. 200ರ ತನಕ ಬಾಲ್ಯ ವಿವಾಹ ಮಾನ್ಯತೆ ಪಡೆದಂತೆ ಕಾಣುವುದಿಲ್ಲ. ಮನುವಿನ ಮೇರೆಗೆ ವರನಿಗೆ 30 ಮತ್ತು ವಧುವಿಗೆ 12 ವರ್ಷಗಳ ವಯಸ್ಸು ವಿಹಿತವಾದದ್ದು. ವಧುಗಳ ವರ್ಗೀಕರಣವನ್ನು ಮಾಡಿದ್ದಾರೆ. ನಗ್ನಿಕಾ, ಗೌರಿ, ರೋಹಿಣಿ. ಕನ್ಯಾ ಮತ್ತು ರಜಸ್ವಲಾ ಎಂಬುದಾಗಿ ಅವರ ವಯಸ್ಸಿನ ಆಧಾರದ ಮೇಲೆ ಗುರುತಿಸುವುದುಂಟು. ರಜಸ್ವಲಾ ಎಂದರೆ 12 ವರ್ಷ ಮೀರಿದ ಪ್ರಬುದ್ಧ ಕನ್ಯೆ. ಉಪನಯನ ಸಂಸ್ಕಾರಕ್ಕೆ 8 ವರ್ಷದ ಗಡವು ಇದ್ದು ಅದೇ ವಯಸ್ಸನ್ನು ವಧುವಿಗೂ ಅನ್ವಯಿಸಿರಬೇಕು. ಗೃಹ್ಯ ಸೂತ್ರಗಳಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳು ಇವೆ. ವಿವಾಹ ಆದಮೇಲೆ ದಂಪತಿಗಳು ಕನಿಷ್ಠ ಮೂರು ರಾತ್ರಿ ಕಳೆದ ತರುವಾಯ ಸಮಾಗಮ ಮಾಡಬೇಕೆಂಬ ನಿಯಮವಿದ್ದ ಕಾರಣ ವಧು ಪ್ರಬುದ್ಧಳಾದ ಮೇಲೆ ವಿವಾಹ ಆಗುತ್ತಿದ್ದಿರಬೇಕು ಎಂದು ಊಹಿಸಬಹುದಾಗಿದೆ. 8 ರಿಂದ 12 ರ ಮಧ್ಯದ ವಯಸ್ಸಿನೊಳಗೆ ವಿವಾಹಮಾಡುವುದು ವಿಹಿತವೆಂಬುದಾಗಿ ಸೂತ್ರಕಾರರು ಮತ್ತು ಸ್ಮøತಿಕಾರರು ಅಭಿಪ್ರಾಯಪಟ್ಟದ್ದರಿಂದ ಕ್ರಿ. ಶ. 5ನೆಯ ಶತಮಾನದ ತನಕ ಬಾಲ್ಯವಿವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಆಮೇಲೆ ಅನೇಕ ಕಾರಣಗಳಿಗಾಗಿ 18ನೆಯ ಶತಮಾನದ ತನಕ ಬಾಲ್ಯವಿವಾಹಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಚರಣೆಯಲ್ಲಿದ್ದುದನ್ನು ಕಾಣಬಹುದಾಗಿದೆ. ಸಪಿಂಡ, ಸಗೋತ್ರ ಮತು ಸಪ್ರವರ ಸಂಬಂಧಕ್ಕೆ ನಿಷೇಧವಿತ್ತು. ಇತರ ನಿಷೇಧಗಳಲ್ಲಿ ಅಂಗವಿಕಲತೆ, ರೋಗ ಮತ್ತು ನಪುಂಸಕತೆ ಸೇರಿದ್ದುವು. ಕುಲಹೀನನಾದರೂ ಸರಿ, ವರಹೀನನಾಗಬಾರದು ಎಂಬುದು ಸಾಮಾಜಿಕ ಪ್ರಜ್ಞ. ಅದು ಸಮ್ಮತವೂ ಆಗಿತ್ತು. ಮೇಲುಜಾತಿಯ ವರ ಮತ್ತು ಕೆಳಜಾತಿಯ ವಧು ನಡುವೆ ಜರಗಿದ ವಿವಾಹ ಅನುಲೋಮ ವಿವಾಹ. ಇಂಥ ವಿವಾಹ ಮತ್ತು ಇದರಿಂದ ಜನಿಸಿದ ಮಕ್ಕಳು ನ್ಯಾಯಬಾಹಿರರಾಗಿರಲಿಲ್ಲ. ಆದರೆ ಪ್ರತಿಲೋಮ ವಿವಾಹಕ್ಕೆ (ಮೇಲು ಜಾತಿಯ ವಧು ಮತ್ತು ಕೆಳಜಾತಿಯ ವರ ನಡುವೆ ಜರಗಿದ ವಿವಾಹ) ಮಾನ್ಯತೆ ಇರಲಿಲ್ಲ. ವರ್ಣ, ಗೋತ್ರ ಮುಂತಾದ ನಿಷೇಧಗಳು ಮತತು ಸಪ್ತಪದಿ ಮುಂತಾದ ಸಂಸ್ಕಾರಗಳನ್ನು ವಿವರಿಸಲಾಗಿದೆ. ವಿವಾಹಕ್ಕೆ ಮನ್ನಣೆ ದೊರೆಯಬೇಕಾದರೆ ಸಪ್ತಪದಿ ಸಂಸ್ಕಾರ ಪೂರ್ಣಗೊಂಡಿದೆ ಎಂಬುದನ್ನು ಸಾಬೀತು ಮಾಡಬೇಕಾಗುತ್ತಿತ್ತು.

ವಿವಾಹ ಪೂರ್ವನಿಯೋಜಿತ ದೈವಸಂಕಲ್ಪಿತ, ಜೀವನಪರ್ಯಂತದ ಮತ್ತು ಜನ್ಮ ಜನ್ಮಾಂತರದ ಪವಿತ್ರ ಸಂಬಂಧ ಎಂಬುದು ಹಿಂದೂಧಾರ್ಮಿಕ ಕಲ್ಪನೆ ಆಗಿದ್ದರೂ ವಿವಾಹ ವಿಚ್ಛೇದನ ಮತ್ತು ಪುನರ್ವಿವಾಹಗಳಿಗೆ ಪ್ರಾಚೀನ ನ್ಯಾಯದಲ್ಲಿ ಅವಕಾಶವಿತ್ತು. ಕೌಟಲ್ಯ ಕೂಡ ವಿಧವಾವಿವಾಹಕ್ಕೆ ಸಹಮತ ಸೂಚಿಸಿದ್ದರೂ ವಿಧವೆ ಹಾಗೆ ಮಾಡದೇ ಜಿತೇಂದ್ರಿಯಳಾಗಿ ಜೀವನ ಸಾಗಿಸುವುದು ಶ್ರೇಯಸ್ಕರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ನ್ಯಾಯದ ತಪ್ಪಿಗೆ ಇದ್ದರೂ ವಿವಾಹ ವಿಚ್ಚೇದನ ಮತ್ತು ಪುನರ್ವಿವಾಹಗಳ ಬಗ್ಗೆ ಧರ್ಮ, ನೀತಿ ಹಆಗೂ ಕುಟುಂಬ ಮತ್ತು ಸಾಮಾಜಿಕ ಸ್ವಾಸ್ಥ್ಯಗಳ ದೃಷ್ಟಿಯಿಂದ ಸದಭಿಪ್ರಾಯವಿರಲಿಲ್ಲ. ಎಂದೇ ಕಾಲಕ್ರಮದಲ್ಲಿ ಈ ವಯವಸ್ಥೆಗಳೇ ಇರಲಿಲ್ಲವೆಂಬ ಕಲ್ಪನೆಗಳು ಸಾಮಾನ್ಯವಾಗಿ ರೂಢಿಗತವಾದುವು. ಕೆಳಜಾತಿಗಳಲ್ಲಿ ಈ ಎರಡೂ ಪದ್ಧತಿಗಳು ಆಚರಣೆಯಲ್ಲಿ ಇದ್ದುವು.

ಪ್ರಾಚೀನ ಭಾರತೀಯ ನ್ಯಾಯದಲ್ಲಿ ಸ್ತ್ರೀಗೆ ಸ್ವಾತಂತ್ರ್ಯವಿರಲಿಲ್ಲ. ಆಕೆ ಪತಿಯ ಗುಲಾಮಳು. ಮಗಳಾಗಿ ಹುಟ್ಟಿದರೂ ಮನೆಯಲ್ಲಿ ಸಹೋದರರಿಗೆ ಸರಿಸಮಾನವಾದ ದಾಯಭಾಗದ ಹಕ್ಕು ಪಡೆದಿರಲಿಲ್ಲ. ಆಸ್ತಿಯಮೇಲೆ ಸ್ವಾತಂತ್ರ್ಯ ಮತ್ತು ಸಂಪೂರ್ಣ ಸ್ವರೂಪದ ಸ್ವಾಮಿತ್ವದ ಅಧಿಕಾರ ಹೊಂದಿರಲಿಲ್ಲ. ಅಲ್ಲದೇ ಪತಿ ಮೃತನಾದಾಗ ಸಹಗಮನದ ಬೇಗೆಯಲ್ಲಿ ಬಿದ್ದು ಭಸ್ಮವಾಗಿ ಹೋಗಬೇಕಾಗಿತ್ತು ಎಂಬಿವೇ ಮಂತಾದ ಅಭಿಪ್ರಾಯಗಳಿವೆ. ಈ ಬಗ್ಗೆ ಪೂರ್ಣ ಸ್ವರೂಪದ ಅಧ್ಯಯನ, ಸಂಶೋಧನೆಗಳ ಆವಶ್ಯಕತೆ ಇವೆ. ನ್ಯಾಯ, ಸ್ವಾತಂತ್ರ್ಯ, ಸಾಮಾಜಿಕ ವ್ಯವಸ್ಥೆ ಇವು ಮೂರೂ ಪರಸ್ಪರ ಪೂರಕ ವಿಷಯಗಳು. ಇವನ್ನು ನಿಯಂತ್ರಿಸುವ ಆಡಳಿತದ ಪಾತ್ರವೂ ವಿಶೇಷವಾದದ್ದು. ಪ್ರಾಚೀನಕಾಲದಲ್ಲಿ ವಹಿಸುತ್ತಿದ್ದುವು. ಹೆಚ್ಚು ಕಡಿಮೆ ಎಂಬಂಥ ಪ್ರತಿಪಾದನೆಯ ದೃಷ್ಟಿಯಲ್ಲಿ ಗೋಚರವಾಗುವ ಸ್ವಾತಂತ್ರ್ಯದ ಕಲ್ಪನೆ ವಿಶಿಷ್ಟ ರೂಪದಲ್ಲಿದ್ದು ಇದು ಅರ್ಪಣ ಭಾವದ ನ್ಯಾಯಿಕ ಕಲ್ಪನೆಗಳಿಗೆ ಅನುವರ್ತನ ಶೀಲದ್ದಲ್ಲ. ಸ್ತ್ರೀ ಪುರುಷರ ಸೃಷ್ಟಿ ಉದ್ದೇಶಪೂರಿತ ಎಂಬುದು ಧರ್ಮಸಾಸ್ತ್ರದ ಸಿದ್ಧಾಂತ, ಉತ್ತಮ ಸಂತಾನ ಪಡೆಯುವುದು ವಿವಾಹದ ಮತ್ತು ತನ್ಮೂಲಕ ಸಮಾಜದಪರಮಗುರಿ. ಉತ್ತಮರ ಪ್ರದೇಶವೇ ದೇಶ. ಸಾಧು ಜನ ಬಹುಲೋದೇಶ: ಎಂದಿದ್ದಾನೆ ಕೌಟಲ್ಯ, ಉತ್ತಮ ಸಂತಾನಕ್ಕೆ ಸ್ತ್ರೀ ಗರ್ಭಸ್ವಾಸ್ಥ್ಯ ಅತಿ ಮುಖ್ಯ. ಅಲ್ಲದೇ ವ್ಯಭಿಚಾರ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವುದರಿಂದ ಸ್ತ್ರೀಗೆ ರಕ್ಷಣೆ ಅವಶ್ಯವಾಯಿತು. ಯತ್ರ ನಾರ್ಯಸ್ತು ಪೂಜ್ಯಂತೇರಮಂತೇ ತತ್ರ ದೇವತಾ ಎಂಬ ಪ್ರಜ್ಞ ಒಂದೆಡೆಗೆ. ಹಾಗೆಯೇ ಹೆಂಡತಿ ಕೆಟ್ಟರೆ ಕುಲನಾಶ ಮತ್ತು ಆ ಕಾರಣಗಳಿಂದಾಗಿ ಸರ್ವನಾಶವಾಗುವುದರಿಂದ ಹೆಂಡತಿಯ ರಕ್ಷಣೆಯ ಕರ್ತವ್ಯದ ನ್ಯಾಹಿಕ ಹೊಣೆ ಇನ್ನೂಂದೆಡೆಗೆ.

ಮಾತೃದೇವೋಭವ ಮತ್ತು ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಎಂಬುದು ತಾಯಿಯ ಸ್ಥಾನ. ಜಾಯೇದ್ ಅಸ್ತಮ್ ಎಂದರೆ ಹೆಂಡತಿಯೇ ಮನೆ ಎಂಬುದು ಪುರುಷನೇ ರಚಿಸಿದ ನ್ಯಾಯ. ಸ್ಮøತಿಗಳಲ್ಲಿರುವ ನ್ಯಾಯ ಪತಿತ ತಾಯಿ ಮತ್ತು ಪತಿತ ಪತ್ನಿ. ಒಟ್ಟಾರೆ ಪತಿತ ಸ್ತ್ರೀಯರಿಗೆ ಜೀವನಾಂಶದ ರಕ್ಷಣೆ ಕೊಟ್ಟಿದೆ. ಅದೇ ಪತಿತ ಪುರುಷನಿಗೆ ಅಂಥ ರಕ್ಷಣೆಯಿಲ್ಲ. ವ್ಯಭಿಚಾರದ ಸಂಬಂಧದಲ್ಲಿ ಉಭಯರೂ ಅಪರಾಧಿಗಳಾದ ಸಂದರ್ಭಗಳಲ್ಲಿಯೂ ಸ್ತ್ರೀಗೆ ಸ್ಮøತಿಗಳಲ್ಲಿ ವಿಧಿಸಿರುವ ದಂಡ ಪ್ರಮಾಣ. ಪುರುಷನಿಗೆ ವಿಧಿಸುವ ದಂಡ ಪ್ರಮಾಣಕ್ಕಿಂತ ಕಡಿಮೆ. ವಿವಾಹಿತ ಸ್ತ್ರೀ ಪರಪುರುಷರ ಜೊತೆಗೆ ಸಂಪರ್ಕ ಹೊಂದಿರಬಾರದು ಎಂಬ ನಿಯಮ ಉದ್ಯೋಗಸ್ಥ ವಿವಾಹಿತ ಸ್ತ್ರೀಗೆ ಅನ್ವಯವಾಗುವುದಿಲ್ಲ ಎನ್ನುತ್ತಾನೆ ಮನು. ಗೌತಮ ಧರ್ಮಸೂತ್ರ, ಆಪಸ್ತಂಬ ಧರ್ಮ ಸೂತ್ರ ಮತ್ತು ಗೃಹ್ಯ ಸೂತ್ರಗಳನ್ನು ವಿವೇಚಿಸಿದರೆ ಸ್ಥಾನಮಾನದ ಪ್ರಶ್ನೆ ಉದ್ಭವಿಸುವುದಿಲ್ಲ.

ವಿವಾಹಿತ ಸ್ತ್ರೀ ಅವಿಭಕ್ತ ಕುಟುಂಬದ ಅಂಗವಾಗುತ್ತಾಳೆ. ಹಲವು ತಲೆ ಮಾರುಗಳ ತನಕ ಕುಟುಂಬಗಳು ಅವಿಭಕ್ತವಾಗಿಯೇ ಇರುತ್ತಿದ್ದುವು. ಸ್ತ್ರೀ ಮೂಲಕದ ಆಸ್ತಿ ಅವಿಭಕ್ತ ಕುಟುಂಬಕ್ಕೆ ಸೇರಿದರೆ ಮುಂದೆ ವಿಭಾಗದ ಕಾಲಕ್ಕೆ ತೊಂದರೆ ಆಗಬಹುದು. ಅಂಥ ಆಸ್ತಿಯನ್ನು ಹಾಗೆಯೇ ಇಟ್ಟರೂ ಪಾರುಪತ್ಯದಲ್ಲಿ ತೊಂದರೆ. ಮೇಲಾಗಿ ಕುಟುಂಬದ ಸಂಪ್ರದಾಯಗಳನ್ನ ಮುಂದುವರಿಸುವ ಮತ್ತು ಶ್ರಾದ್ಧ ಮುಂತಾದ ವಿಧಿಗಳನ್ನು ನಡೆಸಿಕೊಂಡು ಹೋಗುವ ದೃಷ್ಟಿಯಿಂದ ಉತ್ತರಾಧಿಕಾರದ ನ್ಯಾಯ ರೂಪಿಸುವಲ್ಲಿ ಮುಖ್ಯವಾಗಿ ಸಪಿಂಡದ ಮಾರ್ಗವನ್ನು ಅನುಸರಿಸಿದುದು ವಿಹಿತವೇ ಸರಿ. ಇನ್ನು ಸಹಗಮನ ಸನಾತನ ಪದ್ಧತಿ ಅಲ್ಲ. ಆದರ್ಶ ಸತಿಯ ಸಮರ್ಪಣ ಸ್ವರೂಪದ ಸಹಗಮನದ ಇತಿಹಾಸ ಮತ್ತು ನ್ಯಾಯದ ಸಮ್ಮತಿಯ ಹಿನ್ನೆಲೆ ವಿಚಿತ್ರವಾಗಿವೆ. ಮನುಸ್ಮøತಿಯ ಕಾಲದಲ್ಲಿ ಸತಿ ಸಹಗಮನದ ಪದ್ಧತಿ ಇರಲಿಲ್ಲ. ಬೃಹಸ್ಪತಿ ಮತ್ತು ಪರಾಶರರು ಸತಿಪದ್ಧತಿಯನ್ನು ಉಲ್ಲೇಖಿಸಿದ್ದಾರೆ. ಆದರೆ ಆಗ ಅದು ಆದರ್ಶವಾಗಿತ್ತೇ ವಿನಾ ಕಡ್ಡಾಯವಾಗಿರಲಿಲ್ಲ. ಕ್ರಿ.ಶ.900ರ ಸುಮಾರಿಗೆ ಇದ್ದ ಮೇಧಾತಿಥಿ ಇದನ್ನು ಆತ್ಮಹತ್ಯೆ ಎಂದಿದ್ದಾನೆ. ವಿಧವಾ ವಿವಾಹಗಳು ಕಡಿಮೆಯಾಗಿದ್ದ ಪ್ರಯುಕ್ತ ವ್ಯಭಿಚಾರ ಹೆಚ್ಚಾಗಬಹುದೆಂಬ ಕಾರಣವೋ ಅಥವಾ ಮಹಮ್ಮದೀಯರ ದಾಳಿಗಳು ಮತ್ತು ಆಗಿನ ವಿಷಮವಾತಾವರಣದಿಂದ ಪಾರಾಗಲು ರೂಢಿಸಿಕೊಂಡ ದಾರಿಯೋ ಅಂತೂ 10ನೆಯ ಶತಮಾನದಿಂದ ಅದು ಕಡ್ಡಾಯ ರೀತಿಯ ಶಾಪವಾಗಿ ಪರಿಣಮಿಸಿತು. 1829ರಲ್ಲಿ ಇದನ್ನು ನಿಷೇಧಿಸಲಾಯಿತು.

ಸ್ತ್ರೀ ಧನದ ಬಗೆಗಿನ ನ್ಯಾಯಿಕ ಕಲ್ಪನೆ ಭಾರತೀಯ ಪ್ರಾಚೀನ ನ್ಯಾಯದ ವಿಶಿಷ್ಟ ಗುಣಗಳಲ್ಲಿ ಒಂದು. ಅದು ಸ್ತ್ರೀಯರಿಗೆ ಪತಿಯ ಮತ್ತು ಕುಟುಂಬದ ರಕ್ಷಣೆಯ ಜೊತೆಗೆ, ಸ್ವಂತದ ಉಪಯೋಗಕ್ಕಾಗಿ, ಅಥವಾ ತನಗಿಷ್ಟಬಂದಂತೆ ಉಪಯೋಗಿಸಿಕೊಳ್ಳಲು ಆಕೆಯ ಒಡೆತನದಲ್ಲಿರುವ ಆಸ್ತಿ. ಇದನ್ನು ಎಚ್ಚರಿಕೆಯಿಂದ ಉಪಯೋಗಿಸಿಕೊಳ್ಳಬೇಕೆಂಬುದು ಮನುವಿನ ಸೂಚನೆ. ಸ್ತ್ರೀಧನದ ಕಲ್ಪನೆ ಅತಿ ಪ್ರಾಚೀನವಾಗಿದ್ದು ಅದರ ಸ್ವರೂಪ ಮತ್ತು ಉತ್ತರಾಧಿಕಾರದ ನಿಯಮಗಳು ಗೌತಮ. ಆಪಸ್ತಂಬ ಮತ್ತು ಬೌಧಾಯನರ ಕಾಲಕ್ಕೆ ಸ್ಪಷ್ಟ ರೂಪತಳೆದಿದ್ದುವು. ವಿವಿಧ ದೇಶಗಳಲ್ಲಿ ಪ್ರಾಚೀನ ನ್ಯಾಯಶಾಸ್ತ್ರಗಳ ಅಧ್ಯಯನದಿಂದ ಸ್ವತ್ತಿನಮೇಲೆ ಸ್ವಾಮಿತ್ವದ ಅಧಿಕಾರ ಸ್ತ್ರೀಯರಿಗೆ ಮೊದಲು ದೊರೆತದ್ದು ಭಾರತದಲ್ಲಿ ಎಂದು ತಿಳಿದುಬರುತ್ತದೆ.. ಮನು ಸ್ತ್ರೀಧನದ ವರ್ಗೀಕರಣ ಮಾಡಿ ಸ್ತ್ರೀಧನದ ಪ್ರಕಾರಗಳು ಆರು ಎಂದಿದ್ದಾನೆ. ಕಾಲ ಕಳೆದಂತೆ ಸ್ತ್ರೀಧನದ ಗಾತ್ರ ಹೆಚ್ಚಾಯಿತು. ಕೊಡುಗೆಗಳು ಬರುವ ರೀತಿಗಳು ಮತ್ತು ಸಂದರ್ಭಗಳು ಹೆಚ್ಚಾದುವು. ವಿವಾಹದಲ್ಲಿ ಪತಿಯಿಂದ ಪಡೆದ ಕೊಡುಗೆಗಳು ಮತ್ತು ಆಪ್ತರಿಂದ ಪಡೆದ ಕೊಡುಗೆಗಳು ಮೊದಲು ಸ್ತ್ರೀಧನವಾಗಿದ್ದರೂ ಅನಂತರದ ಕಾಲದಲ್ಲಿ ವಿವಾಹಪೂರ್ವದಲ್ಲಿ, ವಿವಾಹಸಮಯದಲ್ಲಿ ಮತ್ತು ವಿವಾಹಾನಂತರದಲ್ಲಿ ಕೊಟ್ಟುದ್ದು, ಜೀವನಾಂಶ, ಉತ್ತರಾಧಿಕಾರದ ಮೇರೆಗೆ ದೊರೆತ ತಾಯೀಯ ಸ್ತ್ರೀಧನ ಇತ್ಯಾದಿ ಎಲ್ಲವೂ ಸ್ತ್ರೀಧನವಾದುವು. ಸ್ತ್ರೀಧನವನ್ನು ಪತಿ ಉಪಯೋಗಿಸಿಕೊಂಡಿದ್ದರೂ ಅದನ್ನು ವಾಪಸ್ಸು ಮಾಡಬೇಕಾಗಿತ್ತು. ಸ್ತ್ರೀಧನಕ್ಕೆ ಹೆಣ್ಣು ಮಕ್ಕಳೇ ಉತ್ತರಾಧಿಕಾರಿಗಳು. ಕುಟುಂಬದ ಆಸ್ತಿ ಮತ್ತು ಆಸ್ತಿವಿಭಾತಕ್ಕೂ ಸ್ತ್ರೀಧನಕ್ಕೂ ಸಂಬಂಧವಿರಲಿಲ್ಲ. ಹೆಣ್ಣು ಮಕ್ಕಳಲ್ಲಿ ಮದುವೆ ಆಗಿರದವರಿಗೆ ಮೊದಲಸ್ಥಾನ. ಹೆಣ್ಣುಮಕ್ಕಳು ತೀರಿದ್ದರೆ. ಅವರ ಹೆಣ್ಣು ಮಕ್ಕಳು, ಹೆಣ್ಣು ಮಕ್ಕಳಿಲ್ಲದಿದ್ದರೆ, ಗಂಡುಮಕ್ಕಳು ಹಂಚಿಕೊಳ್ಳಬಹುದು. ಮಿತಾಕ್ಷರ ಮತ್ತು ದಾಯಭಾಗ ಎರಡು ಸಂಪ್ರದಾಯಗಳಲ್ಲಿಯೂ ಸ್ತ್ರೀಧನದ ಉತ್ತರಾಧಿಕಾರದ ವಿವರಗಳು ಇವೆ.

ದಾಯಭಾಗದ ಮೂಲ ಋಗ್ವೇದದ ಮನು: ಪುತ್ರೇಭ್ಯೋದಾಯಂ ವ್ಯಭಜತ್ ಎಂಬ ಉಕ್ತಿಯಲ್ಲಿದೆ. ಆದರೆ ಪುತ್ರಿಕಾ ಪ್ರಕರಣದಿಂದ ಆ ಕಾಲದ ಉತ್ತರಾಧಿಕಾರದ ಬಗೆಗಿನ ವಿವರಗಳು ಸ್ಪಷ್ವವಾಗಿಲ್ಲ. ಮಿತಾಕ್ಷರ ಮತ್ತು ದಾಯಭಾಗ ಎರಡೂ ಸಂಪ್ರದಾಯಗಳಲ್ಲಿ ಸ್ತ್ರೀಧನದ ಉತ್ತರಾಧಿಕಾರದ ವಿಷಯಗಳಲ್ಲಿ ಮತಭೇದಗಳಿವೆ. ಬಂಗಾಲದಲ್ಲಿಯ ದಾಯಭಾಗ ಪದ್ಧತಿಯಲ್ಲಿ ತಂದೆ, ತಾತ, ಮುತ್ತಾತರ ಜೀವಿತಕಾಲದಲ್ಲಿ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುಕೇಳುವ ಅಧಿಕಾರವಿರಲಿಲ್ಲ. ಭಾರತದ ಇತರ ಪ್ರದೇಶಗಳಲ್ಲಿ ಆಚರಣೆಯಲ್ಲಿದ್ದ ಮಿತಾಕ್ಷರದ ಮೇರೆಗೆ ಗಂಡುಮಕ್ಕಳಿಗೆ ಮತ್ತು ಅವರ ಗಂಡು ಮಕ್ಕಳಿಗೆ ಅಂಥ ಅಧಿಕಾರ ಹುಟ್ಟುತ್ತಲೆ ದೊರೆಯುತ್ತಿತ್ತು. ಮಿತಾಕ್ಷರದಲ್ಲಿ ಅಪ್ರತಿಬಂಧ ಮತ್ತು ಸಪ್ರತಿಬಂಧ ಎಂಬ ವರ್ಗೀಕರಣವಿತ್ತು. ಸಹೋದರರಿಗೆ ಸಂತಾನವಿಲ್ಲದಾಗ ಅವರಿಗೆ ಸೇರಿದ್ದ ಸ್ವತ್ತು ದಾಯಾದಿಗಳಿಗೆ ದೊರೆಯುತ್ತಿದ್ದ ವಿಧಾನಕ್ಕೆ ಸಪ್ರತಿಬಂಧ ಎನ್ನಲಾಗುತ್ತಿತ್ತು. ಪಿತೃಗಳಿಂದ ನೇರವಾಗಿ ಪಾಲುಬರುವ ವಿಧಾನ ಅಪ್ರತಿಬಂಧ, ಪಾಲಿನ ವಿಷಯ ಆಸ್ತಿ ಮತ್ತು ಋಣ. ಆಸ್ತಿಯನ್ನು ಹಲವು ರೀತಿಯಿಂದ ಆರ್ಜಿಸಬಹುದು. ಆರ್ಜನೆಯ ಪ್ರಕಾರಗಳನ್ನು ವರ್ಗೀಕರಿಸಲಾಗಿತ್ತು. ಅಂಗವಿಕಲ ಮತ್ತು ಮತಿಭ್ರಷ್ಟ ಮಕ್ಕಳಿಗೆ ಪಾಲಿನ ಅಧಿಕಾರವಿಲ್ಲದಿದ್ದರೂ ಜೀವನಾಂಶದ ಸೌಕರ್ಯವಿತ್ತು. ಪಿತೃದ್ರೋಹಿಗಳಿಗೆ ಪಾಲುಕೊಡಬಾರದೆನ್ನುತ್ತಾನೆ ನಾರದ. ಪತಿತ ಹೆಂಡತಿಗೆ ಜೀವನಾಂಶ ಪಡೆಯುವ ಅಧಿಕಾರವಿತ್ತು.

ಸಂಪತ್ತಿಗೂ ಸದ್ಗತಿಗೂ ಮಕ್ಕಳೇ ಆಧಾರ. ಅಪುತ್ರಸ್ಯಗತಿರ್ನಾಸ್ತಿ ಎಂಬ ಧೋರಣೆಯ ಸಮಾಜದಲ್ಲಿ ಮಕ್ಕಳು ಇಲ್ಲದವರು ನಿಯೋಗ ಪದ್ಧತಿಗೆ ಅನುಸಾರವಾಗಿ ಮಕ್ಕಳನ್ನು ಪಡೆಯುತ್ತಿದ್ದರು. ಇಲ್ಲವೇ ದತ್ತಕ ತೆಗದುಕೊಳ್ಳುತ್ತಿದ್ದರು. ಅನೈತಿಕವಾದ ನಿಯೋಗ ಪದ್ಧತಿಯನ್ನು ನಿಷೇಧಿಸಲಾಯಿತು. ದತ್ತು ಸ್ವೀಕಾರದ ಪ್ರಕರಣಗಳು ಋಗ್ವೇದದಲ್ಲಿವೆ. ಮನಸ್ಸಿನಲ್ಲಿಯೂ ದತ್ತುಪುತ್ರರನ್ನು ನೆನೆಯಬಾರದು ಎಂಬುದು ಶುಕ್ರ ನೀತಿ. ಪಿಂಡೋದಕ ಮತ್ತು ಶ್ರಾದ್ಧಾದಿ ಕರ್ಮಗಳ ಮುಂದುವರಿಕೆ ಮತ್ತು ತಮ್ಮ ಆಸ್ತಿ ತಮಗೆ ಬೇಕಾದವರಿಗೆ ಸೇರಲಿ ಎಂಬ ಪ್ರವೃತ್ತಿ ದತ್ತಕ ವಿಧಾನವನ್ನು ಉಳಿಸಿತು. ತಂದೆತಾಯಿ ತಮ್ಮ ಮಕ್ಕಳಲ್ಲಿ ಒಬ್ಬನನ್ನಾದರೂ ಉಳಿಸಿಕೊಂಡು ದತ್ತಕ ಕೊಡಬಹುದಿತ್ತು. ಒಬ್ಬನೇ ಮಗನಿದ್ದರೆ ದತ್ತಕ ಕೊಡಲು ಅವಕಾಶವಿರಲಿಲ್ಲ. ಆದರೂ ಉಭಯ ಪಿತೃಗಳಿಗೆ ಮಗನಾಗಿರುವ ದ್ವಾಮುಷ್ಯಾಯಣ ಪದ್ಧತಿ ಆಚರಣೆಯಲ್ಲಿ ಬಂದು ಮುಂದೆ ಮಾನ್ಯತೆ ಇಲ್ಲದೆ ಹೋಯಿತು. ದತ್ತಕ ವಯಸ್ಸು, ದತ್ತಕ ವಿಧಾನ, ದತ್ತಕ ಮಗನ ಅಧಿಕಾರಗಳು, ವಿಧವೆ ಎಂಥ ಸಂದರ್ಭಗಳಲ್ಲಿ ದತ್ತು ತೆಗೆದುಕೊಳ್ಳಬಹುದು ಎಂಬ ವಿಷಯಗಳಲ್ಲಿ ದತ್ತಕ ಮೀಮಾಂಸಾ ಮತ್ತು ದತ್ತಕ ಚಂದ್ರಿಕಾ ಗ್ರಂಥಗಳು ಪ್ರಮಾಣ ಗ್ರಂಥಗಳಾಗಿದ್ದುವು.

ಮಕ್ಕಳ ವರ್ಗೀಕರಣ ಕೂಡ ಹಿಂದೂನ್ಯಾಯದ ಒಂದು ವೈಶಿಷ್ಟ್ಯ: ಔರಸ, ಪುತ್ರಿಕಾ ಪುತ್ರ, ಕ್ಷೇತ್ರಜ, ದತ್ತಕ, ಕೃತ್ರಿಮ, ಗೂಢೋತ್ಪನ್ನ, ಅಪವಿದ್ಧ, ಕಾನೀನ, ಸಹೋಢ, ಕ್ರೀತ, ಪುನರ್ಭವ, ಸ್ವಯದತ್ತ ಮತ್ತು ಸೌದ್ರ ಎಂಬ ಹದಿಮೂರು ಪ್ರಕಾರದ ಮಕ್ಕಳನ್ನು ಸ್ಮøತಿಗಳು ಉಲ್ಲೇಖಿಸಿವೆ. ಕೆಲವೊಮ್ಮೆ ಅವುಗಳ ಸಂಖ್ಯೆ ಹದಿನೇಳರವರೆಗೆ ಹೋದದ್ದುಂಟು. ಔರಸ ಪುತ್ರ ಮತ್ತು ಪುತ್ರಿಕಾಪುತ್ರ ಇವರುಗಳ ಉತ್ತರಾಧಿಕಾರದ ಪ್ರಕರಣಗಳೇ ಸಾಮಾನ್ಯವಾದವು. ಉತ್ತರಾಧಿಕಾರದ ಸಂಬಂಧದಲ್ಲಿ ಪುತ್ರರು ಎಂಬ ಪದಕ್ಕೆ ವಿಶಾಲಾರ್ಥವಿದ್ದು ಮೂರು ತಲೆಮಾರಿನ ಗಂಡು ಸಂತತಿ ಎಂದರೆ ಗಂಡುಮಕ್ಕಳು ಅವರ ಗಂಡು ಸಂತಾನ ಇಲ್ಲದಿದ್ದಾಗ ಪುತ್ರಿಕಾ ಪುತ್ರ ಉತ್ತರಾಧಿಕಾರ ಪಡೆಯುತ್ತಾನೆ. ತಾಯಿಯ ತರುವಾಯ ಈ ಅಧಿಕಾರ ಬರುತ್ತಿತ್ತು. ಮಕ್ಕಳಿಲ್ಲದ ಮೃತನ ಆಸ್ತಿಗೆ ತಂದೆ, ತಾಯಿ, ಮೃತನ ಸಹೋದರರು, ಅವರ ಮಕ್ಕಳು, ಸಪಿಂಡರು ಸಮಾನೋದಕರು, ಗೋತ್ರಜರು-ಇವರ ದೊಡ್ಡ ಪಟ್ಟಿಯೇ ಇದೆ. ಇವಲ್ಲದೇ ಆತ್ಮಬಂಧುಗಳು, ಪಿತೃಬಂಧುಗಳು, ಮಾತೃಬಂಧುಗಳು, ಮಾತೃ ಬಂಧುಗಳು ಎಂಬ ವರ್ಗಗಳೂ ಇವೆ. ಪಾಲು ಮಾಡುವಾಗ ಹಿರಿಯ ಮಗನಿಗೆ ಜ್ಯೇಷ್ಠಾಧಿಕಾರದ ನಿಮಿತ್ತ ವಿಶೇಷ ಪಾಲು ದೊರೆಯುವ ಪದ್ಧತಿ ಕೆಲವು ಕಾಲದತನಕ ಇತ್ತು. ಎರಡು ಮೂರು ತಲೆಮಾರುಗಳತನಕ ಪಾಲಾಗದ ಕುಟುಂಬಗಳೂ ಇರುತ್ತಿದ್ದುವು. ಇವು ಅವಿಭಕ್ತ ಕುಟುಂಬಗಳು. ಈ ಕುಟುಂಬಗಳ ಹೊಣೆಗಾರಿಕೆಯಿಂದಾಗಿ ಮರಣ ಶಾಸನ ಮೃತ್ಯಪತ್ರಗಳ ಆವಶ್ಯಕತೆ ಬೀಳಲಿಲ್ಲ. ಕುಟುಂಬದ ಸದಸ್ಯರ ಮತ್ತು ಸೇವಕರ ಸಂಬಂಧದಲ್ಲಿ ಅವಿಭಕ್ರ ಕುಟುಂಬ ಹಲವಾರು ಕರ್ತವ್ಯಗಳನ್ನು ಪಾಲಿಸಬೇಕಾಗಿತ್ತು. ಅಂತೆಯೇ ಪ್ರಾಚೀನಕಾಲದಲ್ಲಿ ಉಯಿಲುಗಳ ಸ್ವರೂಪ ಧಾರ್ಮಿಕ ದಾನ ಪತ್ರಗಳಾಗಿರುತ್ತಿದ್ದುವು. ಅಧ್ಯಾತ್ಮದ ಅತಿರೇಕದಲ್ಲಿ ಕುಟುಂಬದ ಸದಸ್ಯರನ್ನು, ಗುಲಾಮರನ್ನು ಮತ್ತು ಪರಿಚಾರಕರನ್ನು ನಿರ್ಗತಿಕರನ್ನಾಗಿಸುವಂಥ ದಾನಗಳಿಗೆ ಮಾನ್ಯತೆ ಇರಲಿಲ್ಲ, ಅಲ್ಲದೇ ನ್ಯಾಯಾಲಯಗಳ ಮೂಲಕ ಅಂಥ ದಾನಗಳನ್ನು ವಾಪಸ್ಸುಪಡೆಯಬಹುದಿತ್ತು.

ಸ್ಥಾವರ ಆಸ್ತಿಯ ವಿವರಗಳಲ್ಲಿ ಸೀಮಾವಿವರ ಮುಖ್ಯವಾದದ್ದು. ಸೀಮಾಕಲ್ಪನೆ ಮತ್ತು ಸುಖಾಚಾರ ಕಲ್ಪನೆ ಮತ್ತು ಅವುಗಳ ಬಗೆಗಿನ ನಿಯಮಗಳು ವೇದೆಪೂರ್ವ ಕಾಲದಿಂದಲೇ ರೂಪುಗೊಳ್ಳುತ್ತ ಬಂದಿವೆ. ಈ ಬಗೆಗಿನ ವಿವಾದಗಳನ್ನು ವೇದಸಾಹಿತ್ಯದಲ್ಲಿ ಕಾಣಬಹುದಾಗಿದೆ. ಸೀಮಾವಿವಾದಗಳು, ಹೊಲ, ಮನೆ, ಗ್ರಾಮ, ಜನಪದ ಇವುಗಳಿಗೆ ಸಂಬಂಧಿಸಿರುತ್ತಿದ್ದುವು. ಗಡಿ ಗುರುತಿಸುವ ವಿಧಾನ, ಗಡಿಗಳ ವರ್ಗೀಕರಣ, ವಿವಾದಗಳ ವಿಚಾರಣೆ, ಗಡಿ ರಕ್ಷಣೆ ಇವನ್ನು ಕುರಿತ ನಿಯಮಗಳು ಸ್ಮøತಿ ಸಾಹಿತ್ಯದಲ್ಲಿವೆ. ಮನು, ಯಾಜ್ಞವಲ್ಕ್ಯ, ಬ್ಯಹಸ್ಪತಿ, ನಾರದ, ಕಾತ್ಯಾಯನರು ಈ ಬಗ್ಗೆ ದೀರ್ಘವಾಗಿ ವಿರಿಸಿದ್ದಾರೆ. ಈ ಬಗೆಗಿನ ನಿರ್ಣಯಗಳು ಸಾಕ್ಷಿದಾರರ ಹೆಸರುಗಳ ಸಹಿತ ಲಿಖಿತರೂಪದಲ್ಲಿರಬೇಕು ಎನ್ನುತ್ತಾನೆ ಮನ. ಪ್ರಾಚೀನರ ಸಂಪತ್ತಿನಲ್ಲಿ ಪಶುಸಂಪತ್ತು ಮುಖ್ಯವಾಗಿತ್ತು. ಪಶುರಕ್ಷಣೆ, ಪಶುಸಂಗೋಪನೆ, ದನಗಾಹಿಗಳ ಕರ್ತವ್ಯ, ದನ ಮತ್ತು ಇತರ ಸಲಕರಣೆಗಳ ಬಾಡಿಗೆ, ವೇತನ, ಬೆಳೆಗಳ ರಕ್ಷಣೆಗಾಗಿ ಹೊಲಗಳಿಗೆ ಹಾಕಬೇಕಾದ ಬೇಲಿ, ಮನೆಗಳನ್ನು ಕಟ್ಟುವಾಗ ಅಕ್ಕಪಕ್ಕದವರ ಸಂಚಾರ ಮತ್ತು ಗಾಳಿ ಬೆಳಕುಗಳ ಬಗ್ಗೆ ಪಾಲಿಸಬೇಕಾದ ಸುಖಾಚಾರದ ನಿಯಮಗಳು ಇತ್ಯಾದಿ ವಿಷಯಗಳ ಬಗೆಗಿನ ನ್ಯಾಯವನ್ನು ಸ್ಮøತಿಗಳಲ್ಲಿ ಮತ್ತು ವ್ಯಾಖ್ಯಾನಗಳಲ್ಲಿ ವಿವರಿಸಲಾಗಿದೆ.

ಪ್ರಾಚೀನ ಕಾಲದಲ್ಲಿ ಅಪರಾಧ ಪಾತಕದ ಒಂದು ಭಾಗ. ಅಪರಾಧ ಮತ್ತು ಪಾಪಕಾರ್ಯಗಳನ್ನು ತಡೆಯಲು ಧರ್ಮ ಮತ್ತು ನ್ಯಾಯ ಎರಡೂ ಹೆಣಗಾಡಿವೆ. ಪ್ರಾಯಶ್ಚಿತ್ತ ಮತ್ತು ದಂಡಗಳ ಕಲ್ಪನೆ ವೇದಕಾಲದಲ್ಲಿಯೂ ಇತ್ತು. ಅಪರಾಧಗಳನ್ನು ಕುರಿತು ಮನು ಪ್ರತ್ಯೇಕವಾಗಿ ಹೇಳಿಲ್ಲ. ವ್ಯವಹಾರ ಪಾದದ ವಿಷಯಗಳಿಗೆ ಸಂಬಂಧಿಸಿದ ಅಪರಾಧಗಳನ್ನು ಆಯಾ ವಿಷಯಗಳ ಜೊತೆಗೆ ವಿವರಿಸಿದ್ದಾನೆ. ಅವುಗಳ ವಿಚಾರಣೆ ಮತ್ತು ದಂಡಗಳ ಬಗ್ಗೆಯೂ ಹೇಳಿದ್ದಾನೆ. ಇದೇ ವಿಧಾನವನ್ನು ಇತರ ಸ್ಮøತಿಕಾರರು ಸಾಮಾನ್ಯವಾಗಿ ಅನುಕರಿಸಿದ್ದಾರೆ. ಅಪರಾಧಿಕ ವಿವಾದಗಳನ್ನು ಕಂಟಕ ಶೋಧನ ಪ್ರಕರಣದಲ್ಲಿ ಕೌಟಲ್ಯ ವಿವೇಚಿಸಿದ್ದಾನೆ. ಕಂಟಕಗಳು ದೈವನಿರ್ಮಿತವಾಗಿರಬಹುದು ಅಥವಾ ಮಾನವನಿರ್ಮಿತವಾಗಿರಬಹುದು. ಮಾನವ ನಿರ್ಮಿತ ಕಂಟಕಗಳನ್ನು ತಡೆಯುವುದು ಸಮಾಜದ ಮತ್ತು ರಾಜನ ಕರ್ತವ್ಯ. ಅಗ್ನಿ ದಹಃ ಗರದಶ್ಚೈವ ಶಸ್ತ್ರಪಾಣಿ: ಧನ್ಯಾಪಃ ಕ್ಷೇತ್ರದಾರಾಪಹಾರೀತ ಷಡ್ಯೇತೆಹ್ಯಾತತಾಹಿನಃ ಆತತಾಹಿನಮ್ ಅಯಾಂತಂ ಹನ್ಯಾ ದೇವನಸಂಶಯಃ ಅಂದರೆ ಬೆಂಕಿ ಹಚ್ಚುವವನು, ವಿಷಹಾಕುವವನು, ಆಯುಧಗಳನ್ನು ಹೊಂದಿರುವವನು, ಸಂಪತ್ತು ಮತ್ತು ಭೂಮಿ ಅಪಹರಿಸುವವನು ಮತ್ತು ಸ್ತ್ರೀಯರನ್ನು ಕದಿಯುವವನು ಈ ಆರು ಪ್ರಕಾರದ ಕ್ರೂರ ಆತತಾಯಿಗಳನ್ನು (ಘೋರಾಪರಾಧಿಗಳು) ಅವರು ಎಲ್ಲಿ ಅಡಗಿದ್ದರೂ ಶೋಧಮಾಡಿ ಮರಣದಂಡನೆ ವಿಧಿಸಬೇಕೆನ್ನುವುದು ಮನುಪ್ರಣೀತ ನ್ಯಾಯ. ಕಳವು, ಕೊಲೆ, ಕಾಮಜನ್ಯ ಅಪರಾಧಗಳು. ವೃತ್ತಿ ಮೋಸದ ಅಪರಾಧಗಳು. ಅಪಮಾನ, ನಿಂದೆ, ಹಲ್ಲೇ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ, ಜೂಜು, ಸಂದೇಹಾಸ್ಪದ ಚಟುವಟಿಕೆಗಳು, ರಾಜದ್ರೋಹದ ಚಟುವಟಿಕೆಗಳು ಮತ್ತು ಇತರ ಅನೇಕ ರೀತಿಯ ಅಪರಾಧಗಳನ್ನೂ ಅವುಗಳ ವಿಚಾರಣೆಗಳನ್ನೂ ಆ ಸಂಬಂಧದಲ್ಲಿ ಹಾಕಲಾಗುವ ದಂಡಗಳನ್ನೂ ಸ್ಮøತಿಯಕಾರರು ಮತ್ತು ವ್ಯಾಖ್ಯಾನಕಾರರು ವಿವರಿಸಿದ್ದಾರೆ. ಕೌಟಲ್ಯನ ಅರ್ಥಶಾಸ್ತ್ರದಲ್ಲಿ ವಿವಿಧ ರೀತಿಯ ಅಪರಾಧಗಳನ್ನು ಮತ್ತು ಅವುಗಳ ನಿಯಂತ್ರಣದ ಆಡಳಿತವರ್ಗ, ಶೋಧಕವರ್ಗ ದಂಡಗಳ ವಿವರಗಳನ್ನು ಉಲ್ಲೇಖಿಸಲಾಗಿದೆ. ಯಾಜ್ಞವಲ್ಕ್ಯರ ಕಾಲಕ್ಕೇನೇ ಆಸ್ತಿ, ಪ್ರಾಣಿ ಮತ್ತು ಮರಗಳಿಗೆ ಹಾನಿಕಾರಕವಾದ ಅಪರಾಧಗಳಿಗೂ ದಂಡಗಳಿದ್ದುವು. ಬಾಲಾಪರಾಧ ವಿವೇಚನೆಯೂ ಪ್ರಾಚೀನ ನ್ಯಾಯದಲ್ಲಿದೆ.

ಪ್ರಾಚೀನ ನ್ಯಾಯದಲ್ಲಿ ಪ್ರಥಮ ಸಾಹಸ, ಮಧ್ಯಮ ಸಾಹಸ ಮತ್ತು ಉತ್ತಮ ಸಾಹಸ ಎಂಬುದಾಗಿ ದಂಡಗಳ ವರ್ಗೀಕರಣವಿದೆ. ಇದು ಹಣದ ರೂಪದ್ದು. ಇವುಗಳ ಮೊತ್ತದಲ್ಲಿ ಆಗಾಗ್ಗೆ ವ್ಯತ್ಯಾಸವಾಗಿದೆ. ಆಸ್ತಿಯ ಮುಟ್ಟುಗೋಲು, ಗಡೀಪಾರು ಮಾಡುವುದು, ಚಾಟಿ ಏಟು, ಚಿತ್ರಹಿಂಸೆ ಕಾರಾಗೃಹ ದಂಡ, ವಿವಿಧ ರೀತಿಯ ಮರಣ ದಂಡನೆಗಳು ಇತ್ಯಾದಿ ಪ್ರಕಾರದ ದಂಡಗಳನ್ನು ವಿಚಾರಣೆ ಆದ ಮೇಲೆ ಹಾಕಲಾಗುತ್ತಿತ್ತು.

ವಿವಾದಗಳನ್ನು ಬೃಹಸ್ಪತಿ ವ್ಯಾವಹಾರಿಕ ವಿವಾದಗಳು ಮತ್ತು ಅಪರಾಧಿಕ ವಿವಾದಗಳು ಎಂದು ವಿಂಗಡಿಸಿ ಹದಿನಾಲ್ಕು ವ್ಯಾವಹಾರಿಕ ವಿವಾದಗಳನ್ನೂ ನಾಲ್ಕು ಪ್ರಕಾರದ ಅಪರಾಧಿಕ ವಿವಾದಗಳನ್ನೂ ಉಲ್ಲೇಖಿಸಿದ್ದಾನೆ. ಈ ವರ್ಗೀಕರಣದಲ್ಲಿ ಸ್ವಲ್ಪ ವ್ಯತ್ಯಾಸಗಳಾಗಿವೆ. ಮಹತ್ತ್ವದ ವಿವಾದಗಳನ್ನು ಅವಶ್ಯವಿದ್ದಾಗ ರಾಜ ಇತ್ಯರ್ಥ ಮಾಡುತ್ತಿದ್ದ. ಸಾಮಾನ್ಯವಾಗಿ ಕುಲಕಸಬುಗಳ ವೃತ್ತಿ ಸಂಘಗಳು ವಿವಾದಗಳ ವಿಚಾರಣೆ ಮಾಡುತ್ತಿದ್ದುವು. ಪ್ರತಿಷ್ಠಿತ, ಮುದ್ರಿತ ಮತ್ತು ಶಾಶಿತ ಎಂಬ ನ್ಯಾಯಾಲಯಗಳ ವರ್ಗೀಕರಣದ ಜೊತೆಗೆ ಕೌಟಲ್ಯನ ಕಾಲದಿಂದಲೂ ಪ್ರಾದೇಶಿಕ ಅಧಿಕಾರವ್ಯಾಪ್ತಿ ಹೊಂದಿದ್ದ ವಿವಿಧ ಸ್ತರಗಳ ನ್ಯಾಯಾಲಯಗಳೂ ಇದ್ದುವು. ಸ್ವತ: ರಾಜ ನ್ಯಾಯನಿರ್ಣಯ ಮಾಡುವ ನ್ಯಾಯಾಲಯವೇ ಶಾಶಿತ. ಎಂದೇ ಇದು ಪರಮಾಧಿಕಾರದ ನ್ಯಾಯಾಲಯವಾಗಿತ್ತು. ಧರ್ಮಶಾಸ್ತ್ರ ನಿಪುಣರ ಅಭಿಪ್ರಾಯವನ್ನು ರಾಜ ಪಡೆಯುವುದು ನ್ಯಾಯಿಕ ವ್ಯವಸ್ಥೆಯ ಅಂಗವಾಗಿತ್ತು. ವಾದ ಪ್ರತಿವಾದ, ಪ್ರಮಾಣ ಸಾಕ್ಷ್ಯಾಧಾರಗಳ ಮಂಡನೆ ಮತ್ತು ನಿರ್ಣಯ ಇವು ವಿವಾದ ವಿಚಾರಣೆಯ ಹಂತಗಳಾಗಿದ್ದುವು.

ವಾದಪತ್ರ ಮತ್ತು ಪ್ರತಿವಾದಪತ್ರ ಇವು ಲಿಖಿತ ರೂಪದಲ್ಲಿ ಇರಬೇಕಾದುದರ ಜೊತೆಗೆ ನಿರ್ದಿಷ್ಟ, ನಿರ್ದೋಷ ಮತ್ತು ನಿರ್ದಾಯ ಸ್ವರೂಪದವೂ ಆಗಿರಬೇಕಾಗಿತ್ತು. ಪ್ರಮಾಣಗಳ ವರ್ಗೀಕರಣ, ಸಾಕ್ಷಿಗಳ ಅರ್ಹತೆ, ಅನರ್ಹತೆಯ ಬಗ್ಗೆ ಮನು, ನಾರದ, ವಿಷ್ಣು, ಕಾತ್ಯಾಯನರು ವಿವರಿಸಿದ್ದಾರೆ. ಸಾಮಾನ್ಯವಾಗಿ ಅಣೆ ಪ್ರಮಾಣಗಳಂಥ ಶಪಥ ಸ್ವೀಕರಿಸಿ ಸಾಕ್ಷಿ ನುಡಿಯಬೇಕಾಗಿತ್ತು. ಅವಶ್ಯ ಸಂದರ್ಭಗಳಲ್ಲಿ ಸಾಕ್ಷಗಳ ಬಗ್ಗೆ ಸಂದೇಹ ಎತ್ತಬಹುದೇ. ಹಾಗಾದರೆ ಎಂಥ ಸಂದರ್ಭಗಳಲ್ಲಿ ಎತ್ತಬಹುದು, ಸಾಕ್ಷ್ಯಮಂಡನೆ, ಸಾಕ್ಷಿದಾರನ ಹೇಳಿಕೆಯ ಪರೀಕ್ಷೆ, ಪ್ರತಿಪ್ರಶ್ನೆ, ವಿರೋಧಾಭಾಸದ ಹೇಳಿಕೆ ಇವುಗಳ ಬಗ್ಗೆ ಸ್ಮøತಿಗಳಲ್ಲಿ ಹೇಳಲಾಗಿದೆ. ಉಭಯ ಪಕ್ಷದವರೂ ಒಪ್ಪಿದರೆ ವಿವಾದವನ್ನು ನಿರ್ಣಯಿಸಲು ವಿಷಯ ಅರಿತ ಧರ್ಮಿಷ್ಠನಾದ ಒಬ್ಬನೇ ಸಾಕ್ಷಿ ಸಾಕು ಎನ್ನುತ್ತಾನೆ ನಾರದ. ಕೇವಲ ಒಬ್ಬನೇ ಸಾಕ್ಷಿಯನ್ನು ಆಧರಿಸಿ ವಿವಾದ ನಿರ್ಣಯಮಾಡುವುದನ್ನು ವಿಷ್ಣು ಧರ್ಮ ಸೂತ್ರ ಒಪ್ಪುವುದಿಲ್ಲ. ವಿದ್ವಾಂಸರಾಗಿದ್ದರೆ ಇಬ್ಬರು ಇಲ್ಲವಾದಲ್ಲಿ ಮೂರು ಸಾಕ್ಷಿಗಳ ಆವಶ್ಯಕತೆಯನ್ನು ಮನು, ಬೃಹಸ್ಪತಿ, ಮತ್ತು ನಾರದರು ಪ್ರತಿಪಾದಿಸಿದ್ದಾರೆ. ಲಿಖಿತ ಪ್ರಮಾಣಗಳು ನಿರ್ದೋಷಗಳಾಗಿದ್ದ ಪಕ್ಷ ಹೆಚ್ಚಿನ ಮಹತ್ತ್ವದ ಪ್ರಾಮಾಣ್ಯಕ್ಕೆ ಪಾತ್ರವಾಗಿರುತ್ತಿದ್ದವು. ನೇರ ಮತ್ತು ಪರ್ಯಾಯ ಅಥವಾ ಪರಿಸರಾತ್ಮಕ ಸಾಕ್ಷ್ಯಗಳಲ್ಲಿಯ ವ್ಯತ್ಯಾಸ, ಪರಸ್ಪರ ಆದ್ಯತೆ ಮತ್ತು ಅವುಗಳ ಸ್ವೀಕಾರಾರ್ಹತೆಯನ್ನು ಧರ್ಮಶಾಸ್ತ್ರ, ತರ್ಕಶಾಸ್ತ್ರ ಮತ್ತು ಜೈಮಿನಿಯ ಮೀಮಾಂಸೆಗಳ ಸಹಾಯದಿಂದ ವಿವೇಚಿಸಲಾಗುತ್ತಿತ್ತು. ವ್ಯಾವಹಾರಿಕ ವಿವಾದಗಳನ್ನು ನ್ಯಾಯಾಧೀಶನೂ ಅಪರಾಧಿಕ ವಿವಾದಗಳನ್ನು ದಂಡಾಧಿಕಾರಿಯೂ ವಿಚಾರಮಾಡುತ್ತಿದ್ದರು. ನ್ಯಾಯಾಲಯದ ಅಷ್ಟಾಂಗ ಪದ್ಧತಿಯ ಅಧಿಕಾರಿವರ್ಗ, ನ್ಯಾಯವಾದಿಗಳು, ನ್ಯಾಯತಜ್ಞರು ಮತ್ತು ಸಭ್ಯರು ವಿಚಾರಣೆಯ ಕಾರ್ಯಾಚರಣೆಯಲ್ಲಿ ಸಹಾಯಮಾಡುತ್ತಿದ್ದರು. ಈ ಹಿನ್ನೆಲೆಯ ಆಧಾರದ ಮೇಲೆ ವಿವಾದಗಳನ್ನು ಸಹಾಯಕ ಶಾಸ್ತ್ರಗಳಾದ ತರ್ಕ, ವೈಶೇಷಿಕ ಮತ್ತು ವ್ಯವಹಾರ ಆಯುರ್ವೇದಗಳ ಪ್ರಯೋಜನ ಪಡೆದು ಪ್ರಮಾಣ ಸಾಕ್ಷ್ಯಾಧಾರ ಮತ್ತು ಸಮದರ್ಶಿತ್ವ ಹಾಗೂ ಸಮಷ್ಟಿ ಸ್ವರೂಪದ ಆತ್ಮಸಾಕ್ಷಿಗಳ ಮೂಲಕ ಸ್ಥಾಪಿಸಲಾಗುವ ನ್ಯಾಯದನ್ವಯ ನಿರ್ಣಯ ಮಾಡಲಾಗುತ್ತಿತ್ತು. ಇಂಥ ನಿರ್ಣಯಗಳು ಸಮಾಪ್ತಕರಣಂ ನಿಯಮಯೇತ್ ಅಂದರೆ ನಿರ್ಣಯಾತ್ಮಕ ಪ್ರಮಾಣವಿಲ್ಲದೆ ಅಪರಾಧ ತೀರ್ಮಾನವಾಗಬಾರದು; ನಚ ಸಂದೇಹೇ ದಂಡಂ ಕುರ್ಯಾತ್ ಅಂದರೆ ಸಂದೇಹದ ಮೇಲೆ ಶಿಕ್ಷೆ ವಿಧಿಸಕೂಡದು; ದಂಡ್ಯಾದೋಷಾನು ರೂಪಿತ ಅಂದರೆ ಸಂದೇಹದ ಮೇಲೆ ಶಿಕ್ಷೆ ವಿಧಿಸಕೂಡದು; ದಂಡ್ಯಾದೋಷಾನು ರೂಪಿತಳ ಅಂದರೆ ದಂಡನೆ ದೋಷಕ್ಕೆ ಅನುಗುಣವಾಗಿರಬೇಕು; ದಂಡೋಹಿ ವಿಜ್ಞಾನೇ ಪ್ರಣೀಯತೆ ಅಂದರೆ ದಂಡವನ್ನು ತಿಳಿವಳಿಕೆಯಿಂದ ವಿಧಿಸಬೇಕು; ಮತ್ತು ವಿವಾದಂ ಧರ್ಮ ಮನುಸ್ಮರೇತ್ ಅಂದರೆ ವಿವಾದ ನಿರ್ಣಯದಲ್ಲಿ ಸಹಾಯಕವಾದ ಧರ್ಮವನ್ನೇ ಸ್ಮರಿಸಬೇಕು-ಎಂಬ ತತ್ತ್ವಗಳಿಗೆ ಅನುಸಾರವಾಗಿರುತ್ತಿದ್ದುವು. ನಿರ್ಣಯಗಳು ಏಕಪಕ್ಷೀಯವಾಗಿದ್ದರೆ ದೋಷಯುಕ್ತ ಎಂದು ಮೇಲ್ನೋಟಕ್ಕೆ ಕಂಡುಬಂದರೆ ಕಾರಣಾಂತರದಿಂದ ನ್ಯಾಯದಾನ ಸರಿಯಾಗಿ ಆಗಿರದಿದ್ದರೆ ಕೆಲವು ಸಂದರ್ಭಗಳಲ್ಲಿ ಮರುವಿಚಾರಣೆ ಮತ್ತು ಮೇಲು ಮನವಿಗೆ ಅವಕಾಶವಿತ್ತು. ನಿರ್ಣಯಗಳು ಜಯಪತ್ರದ ರೂಪದಲ್ಲಿರುತ್ತಿದ್ದವು. ಜಯಪತ್ರದ ಮೇರೆಗೆ ರಾಜ ಮತ್ತು ರಾಜ್ಯಾಡಳಿತದ ಅಧಿಕಾರಿಗಳು ಮುಂದಿನ ಕ್ರಮವನ್ನು ಕೈಗೊಳ್ಳುತ್ತಿದ್ದರು.

ಭಾರತೀಯ ಪ್ರಾಚೀನ ನ್ಯಾಯ ಸಾಮಾಜಿಕ ಸ್ವಾಸ್ಥವನ್ನೂ ಸಾರ್ವತ್ರಿಕ ಸುಖವನ್ನೂ ನಿಯಂತ್ರಿಸುವ ಪ್ರಗತಿಪರ ನ್ಯಾಯವಾಗಿತ್ತು. ಧರ್ಮ ಸೂತ್ರಗಳು, ಸ್ಮøತಿಗಳು, ರೂಢಿ ಸಂಪ್ರದಾಯಗಳಿಗೆ ಮತ್ತು ಜ್ಞಾನಿಗಳ ಸದ್ವಿವೇಕಕ್ಕೆ ಸಂಪೂರ್ಣ ಬೆಂಬಲವಿತ್ತುದರಿಂದ ವ್ಯಾಖ್ಯಾನಕಾರರು ದೇಶದ ನ್ಯಾಯಶಾಸ್ತ್ರವನ್ನು ಬೆಳೆಸಲು ಸಾಧ್ಯವಾಯಿತು. ಇತರ ಮತೀಯ ನ್ಯಾಯಗಳಿಗಿಂತ ಹಿಂದೂ ನ್ಯಾಯ ಈ ದೃಷ್ಟಿಯಿಂದ ಪ್ರಗತಿಪರವಾದ ಮತ್ತು ಯುಕ್ತಾಯುಕ್ತತೆಯ ಶಾಸ್ತ್ರವೆಂದು ಅನೇಕ ಭಾರತೀಯ ಮತ್ತು ಪಾಶ್ಚಾತ್ಯ ನ್ಯಾಯಶಾಸ್ತ್ರನಿಪುಣರ ಅಭಿಪ್ರಾಯ. ಸರಿಯಾದ ಸಂಶೋಧನೆ ಮತ್ತು ತುಲನಾತ್ಮಕ ವಿವೇಚನೆ ನಡೆದರೆ ಅದರ ಘನತೆ ಇನ್ನೂ ಹೆಚ್ಚುತ್ತದೆ, ಮತ್ತು ಅದರಿಂದ ಹೊಸ ನ್ಯಾಯಿಕ ಕಲ್ಪನೆ ಮತ್ತು ನ್ಯಾಯ ರಚನೆಗಳಿಗೆ ಸಹಾಯ ದೊರೆಯುತ್ತವೆ.

ಭಾರತೀಯ ಪ್ರಾಚೀನ ನ್ಯಾಯ ಹಲವು ಪಂಡಿತರ ಅಭಿಪ್ರಾಯಗಳೇ ಹೊರತು ಆಧುನಿಕ ನ್ಯಾಯಶಾಸ್ತ್ರ ಒಪ್ಪುವಂಥ ನ್ಯಾಯವಾಗಿರಲಿಲ್ಲವೆಂದು ಕೆಲವು ಪಾಶ್ಚಾತ್ಯ ನ್ಯಾಯತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ನಿರಾಧಾರವಾದುದು ಎಂದು ಹೇಳಲು ಐತಿಹಾಸಿಕ ಆಧಾರಗಳು ಸಾಕು. ಸಮಾಜ ಮತ್ತು ರಾಜ್ಯಾಡಳಿತಗಳು ಇದನ್ನು ಒಪ್ಪಿ ಅನೂಚಾನವಾಗಿ ಅನುಸರಿಸಿಕೊಂಡು ಬಂದು ಪ್ರಾಚೀನನ್ಯಾಯ ಪಾಶ್ಚಾತ್ಯ ನ್ಯಾಯಶಾಸ್ತ್ರಜ್ಞರು ಪ್ರಸ್ತಾವಿಸುವ ಮತ್ತು ವ್ಯಾಖ್ಯಿಸುವ ಆಜ್ಞಾಸ್ವರೂಪದ ಮತ್ತು ಶಾಸಕಾಂಗದ ನಿಮಿತ್ತದ ವಿಧಾಯೀ ಸ್ವರೂಪದ ನ್ಯಾಯವಾಗಿರಲಿಲ್ಲವಾದರೂ ಜನತೆ ತನಗೆ ತಾನೇ ಅನ್ವಯಿಸಿಕೊಂಡಂಥ ಮತ್ತು ರಾಜರಿಂದ ಮನ್ನಣೆ ಪಡೆದಂಥ ಹಾಗೂ ಸತತವಾಗಿ ಆಚರಣೆಯಲ್ಲಿ ಇದ್ದಂಥ ನ್ಯಾಯವಾಗಿತ್ತು. ಅನುಭವದಿಂದ ಅನನ್ಯವೂ ಅನುಕರಣೀಯವೂ ಎಂಬುದನ್ನು ಗಮನಿಸಿ ಸಮಾಜ ಸ್ವೀಕರಿಸಿದ ನ್ಯಾಯವಾಗಿತ್ತು. ನ್ಯಾಯದ ಮುಖ್ಯ ಲಕ್ಷಣಗಳಲ್ಲಿ ಕಡ್ಡಾಯತನವೂ ಒಂದು. ಹಾಗೆಯೇ ಅದರ ಜೀವಂತಿಕೆಯ ಲಕ್ಷಣಗಳೆಂದರೆ ನಿರ್ದಿಷ್ಟ ರೂಪದಲ್ಲಿ ಅಸ್ತಿತ್ವ ಮತ್ತು ಅನ್ವಯ. ಈ ಲಕ್ಷಣಗಳನ್ನು ಹೊಂದಿಕೊಂಡು ಭಾರತೀಯ ಪ್ರಾಚೀನ ನ್ಯಾಯ 18ನೆಯ ಶತಮಾನದತನಕವೂ ಆಚರಣೆಯಲ್ಲಿತ್ತು. ಪ್ರಾಚೀನ ನ್ಯಾಯದ ಹಿಂದೂ ನ್ಯಾಯ ಮತ್ತು ಅದರ ಜೊತೆ ಜೊತೆಗೆ ಆಚರಣೆಯಲ್ಲಿ ಬಂದಿದ್ದ ಇಸ್ಲಾಮೀ ನ್ಯಾಯ ಮತ್ತು ಇಂಗ್ಲಿಷರ ನ್ಯಾಯ ಪದ್ಧತಿಗಳು ಭಾರತೀಯ ಆಧುನಿಕ ನ್ಯಾಯಶಾಸ್ತ್ರಕ್ಕೆ ಆಧಾರವಾಗಿವೆ.

ಆಧುನಿಕ ನ್ಯಾಯ: ಭಾರತೀಯ ಜನತೆ ತಮಗೆ ತಾವೇ ಅರ್ಪಿಸಿಕೊಂಡಿರುವ ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ನ್ಯಾಯ ಮತ್ತು ಅದರಿಂದ ಮನ್ನಣೆಪಡೆದಿರುವ ನ್ಯಾಯ ಹಾಗೂ ತದನ್ವಯ ರೂಪುಗೊಂಡು ಆಚರಣೆಯಲ್ಲಿರುವ ನ್ಯಾಯ ಇವುಗಳ ಸಮ್ಯಕ್ ಸ್ವರೂಪದ ನ್ಯಾಯವನ್ನುನ ಭಾರತೀಯ ಆಧುನಿಕ ನ್ಯಾಯ ಎಂದು ವಿವರಿಸಬಹುದು. ರಾಷ್ಟ್ರೀಯ ಘನತೆ, ಸಾಮಾಜಿಕ ಸಮಾನತೆ ಮತ್ತು ದೇಶದ ಸರ್ವಾಂಗೀಣ ಪ್ರಗತಿಗೆ ಸಾಧಕವಾಗುವ ಆರ್ಥಿಕ ವ್ಯವಸ್ಥೆ. ವ್ಯಕ್ತಿಸ್ವಾತಂತ್ರ್ಯಕ್ಕೆ ಜಾತ್ಯತೀತತೆ ಮತ್ತು ನ್ಯಾಯ ಪಾರಮ್ಯ ಮುಂತಾದ ನ್ಯಾಯಿಕ ಮೌಲ್ಯಗಳ ಆಧಾರದ ವ್ಯಕ್ತಿಗತ ಹಕ್ಕುಗಳನ್ನು ಪ್ರತಿಪಾದಿಸುವ ಮತ್ತು ಪ್ರದಾನ ಮಾಡುವ ವ್ಯವಸ್ಥೆಯನ್ನು ಹೊಂದಿರುವ ಭಾರತದ ಸಂವಿಧಾನ ಭಾರತೀಯ ಆಧುನಿಕ ನ್ಯಾಯಕ್ಕೆ ಆಕರ ಮತ್ತು ಆಧಾರವಾಗಿರುವುದರ ಜೊತೆಗೆ ಅದನ್ನು ನಿಯಂತ್ರಿಸುವ ಅಧಿಕಾರವನ್ನು ಕೊಡ ಹೊಂದಿರುತ್ತದೆ. ಭಾರತೀಯ ಆಧುನಿಕ ನ್ಯಾಯದ ಇತಿಹಾಸ, ವಿಷಯ ವೈವಿಧ್ಯ ಮತ್ತು ನ್ಯಾಯಾಡಳಿತ ವ್ಯವಸ್ಥಾರೂಪದ ನ್ಯಾಯ ಇವುಗಳ ಬಗೆಗಿನ ವಿವರಗಳು ಗಣನೀಯ ವಿಸ್ತಾರ ಹೊಂದಿವೆ. ಇಲ್ಲಿ ಇವುಗಳ ಅತಿ ಸಂಕ್ಷಿಪ್ತ ಪರಿಚಯ ಕೊಡಲಾಗಿದೆ. ದಿನಾಂಕ 26-1-1950ಕ್ಕೆ ಮುಂಚೆ ಆಚರಣೆಯಲ್ಲಿದ್ದ ಮತ್ತು ಸಂವಿಧಾನಕ್ಕೆ ವಿರೋಧವಲ್ಲದ ಕಾನೂನುಗಳ ಅನ್ವಯವನ್ನು ಭಾರತೀಯ ಸಂವಿಧಾನ ಮುಂದು ವರಿಸಿದೆ. ಅಂದಿನ ಅನೇಕ ಕಾನೂನುಗಳು ಹಾಗೆಯೇ ಅಥವಾ ಮಾರ್ಪಾಡುಗಳೊಂದಿಗೆ ಇಂದಿಗೂ ಆಚರಣೆಯಲ್ಲಿ ಇವೆ. ಇವು ಭಾರತೀಯ ಆಧುನಿಕ ನ್ಯಾಯದ ರೂಪುರೇಷೆಗಳನ್ನು ಅರಿಯಲು ಅದು ರೂಪುಗೊಂಡು ರೀತಿಯ ಇತಿಹಾಸದ ಪರಿಚಯ ಆವಶ್ಯಕ. ದೇಶದ ಪ್ರಾಚೀನ ನ್ಯಾಯವಾದ ಹಿಂದೂ ನ್ಯಾಯ ಮತ್ತು ಮಹಮ್ಮದೀಯ ರಾಜರ ಆಡಳಿತದ ಕಾಲದಲ್ಲಿ ಆಚರಣೆಯಲ್ಲಿ ಬಂದ ಇಸ್ಲಾಮೀನ್ಯಾಯ ಹಾಗೂ ಬ್ರಿಟಿಷರ ಆಡಳಿತದ ಕಾರಣವಾಗಿ ಆಂಗ್ಲನ್ಯಾಯ ಸೂತ್ರಗಳ ಪರಭಾವದ ಎಲ್ಲರಿಗೂ ಅನ್ವಯಿಸುವ ಸಾರ್ವತ್ರಿಕ ನ್ಯಾಯ ಇವು ಭಾರತೀಯ ಆಧುನಿಕ ನ್ಯಾಯದ ಅಂಗಗಳು. ಹಿಂದೂ ನ್ಯಾಯ ಮತ್ತು ಇಸ್ಲಾಮೀ ನ್ಯಾಯಗಳು ಕೌಟುಂಬಿಕ ಮತ್ತು ಧಾರ್ಮಿಕ ವಿಷಯಗಳಿಗೆ ಸೀಮಿತಗೊಳ್ಳುತ್ತ ನಡೆದುವು. ಈಗ ಅವು ಮತೀಯ ಸ್ವರೂಪದ ವ್ಯಕ್ತಿಗತ ನ್ಯಾಯಗಳಾಗಿ ಪರಿಣಮಿಸಿವೆ.

ತ್ರಿವೇಣೀ ಸಂಗಮ ಸ್ವರೂಪದ ಭಾರತೀಯ ಆಧುನಿಕ ನ್ಯಾಯದ ಇತಿಹಾಸವನ್ನು ಎಲ್ಲಿಂದ ಆರಂಭಿಸಬೇಕೆಂಬ ಬಗ್ಗೆ ಭಿನ್ನಾಭಿಪ್ರಾಯಗಳು ಇವೆ. ಭಾರತೀಯ ನ್ಯಾಯದ ಸಮಗ್ರ ಇತಿಹಾಸ ಮತ್ತು ಅದರ ವರ್ಗೀಕರಣವನ್ನು ಗಣನೆಗೆ ತೆಗೆದುಕೊಂಡು ಕಾಲದ ಈ ಗಡುವನ್ನು ನಿರ್ಧರಿಸಲಾಗುತ್ತದೆ. ಭಾರತೀಯ ನ್ಯಾಯವನ್ನು ಭಾರತೀಯ ಪ್ರಾಚೀನ ನ್ಯಾಯ, ಭಾರತೀಯ ಮಧ್ಯಕಾಲೀನ ನ್ಯಾಯ ಮತ್ತು ಭಾರತೀಯ ಆಧುನಿಕ ನ್ಯಾಯ ಎಂದು ವರ್ಗೀಕರಿಸುವುದುಂಟು. ಮಧ್ಯಕಾಲೀನ ನ್ಯಾಯದ ಅವಧಿಯಲ್ಲಿ ಇಸ್ಲಾಮೀ ಪ್ರಕ್ರಿಯಾ ನ್ಯಾಯ ಮತ್ತು ದಂಡನ್ಯಾಯಗಳು ಜಾರಿಯಲ್ಲಿದ್ದುವು. ಈ ಅವಧಿಯಲ್ಲಿ ನ್ಯಾಯಾಲಯಗಳ ಭಾಷೆ ಪರ್ಶಿಯನ್ ಆಗಿತ್ತು. ಈ ವೈಶಿಷ್ಟ್ಯಗಳ ಆಧಾರದ ಬಗ್ಗೆ ಅಂತೆಯೇ ಮಧ್ಯಕಾಲೀನ ನ್ಯಾಯದ ಅವಧಿ ಮತ್ತು ಪ್ರದೇಶಗಳ ಬಗ್ಗೆ ಭಿನ್ನಾಭಿಪ್ರಯಗಳೂ ಇವೆ. ಅಲ್ಲದೆ ಈ ಅವಧಿಯ್ಲಲಿಯೂ ಭಾರತದ ಅನೇಕ ಪ್ರದೇಶಗಳಲ್ಲಿ ಮತ್ತು ಇಸ್ಲಾಮೀ ನ್ಯಾಯಾಡಳಿತವಿದ್ಧ ಪರದೇಶಗಳಲ್ಲಿ ಕೊಡ ಹಿಂದೂನ್ಯಾಯ ವಿಶೇಷ ಮಾರ್ಪಾಡಿಲ್ಲದೆ ಆಚರಣೆಯಲ್ಲಿದ್ದ ಕಾರಣ, ಭಾರತೀಯ ನ್ಯಾಯದ ಇತಿಹಾಸವನ್ನು ಭಾರತೀಯ ಪ್ರಾಚೀನ ನ್ಯಾಯದ ಕಾಲ ಮತ್ತು ಭಾರತೀಯ ಆಧುನಿಕ ನ್ಯಾಯದ ಕಾಲ ಎಂದು ವಿಂಗಡಿಸುತ್ತಾರೆ.

ಭಾರತೀಯ ಪ್ರಾಚೀನ ನ್ಯಾಯದ ಕಾಲವನ್ನು 18ನೆಯ ಶತಮಾನದ ತನಕ ಎಂದು ಪರಿಗಣಿಸಲಾಗಿದೆ. ಹಿಂದೂ ನ್ಯಾಯ ಈ ಅವಧಿಯ ತನಕ ಬಹು ಜನರಿಗೆ ಅನ್ವಯವಾಗುವುದರ ಜೊತೆಗೆ ತನ್ನ ಹಲವು ನ್ಯಾಯಿಕ ಕಲ್ಪನೆಗಳನ್ನು ಯಥಾರೂಪದಲ್ಲಿ ಕಾಯ್ದುಕೊಂಡು ಬಂದಿತ್ತು ಕೊಡ. ಕ್ರಿ.ಶ. 1600ರಲ್ಲಿ ಆಂಗ್ಲರು ಭಾರತಕ್ಕೆ ಬಂದರು. ಅವರು ಸ್ಥಳೀಯ ರಾಜನಿಂದ ಅನುಮತಿ ಪಡೆದು 1626ರಲ್ಲಿ ಆರಮ್‍ಗಾಂವ್ ಕೋಟೆ ಕಟ್ಟಿದಾಗ ಇಂಗ್ಲಿಷ್ ನ್ಯಾಯ ಭಾರತದೊಳಗೆ ಪಾದಾರ್ಪಣೆ ಮಾಡಿತು. ಕಲ್ಕತ್ತ, ಮುಂಬೈ ಮತ್ತು ಮದ್ರಾಸು ನಗರಗಳಲ್ಲಿ ಅಡ್ಮಿರ್ಯಾಲಿಟಿ ಇತ್ಯಾದಿ ನ್ಯಾಯಾಲಯಗಳು ಅಸ್ತಿತ್ವಕ್ಕೆ ಬಂದು 1661ರ ಸನ್ನದಿನ (ಚಾರ್ಟರ್) ಮೇರೆಗೆ ಕಂಪನಿ ಸರ್ಕಾರದ ನ್ಯಾಯಸೂತ್ರಗಳು ಆಚರಣೆಯಲ್ಲಿ ಬಂದರೂ ಅವುಗಳಿಗೆ ರಾಜಮನ್ನಣೆ ಇರಲಿಲ್ಲ. ರಾಜಾನಂದಕುಮಾರನ ಪ್ರÀಕರಣದಲ್ಲಿ 1726ರ ಸನ್ನದಿನ ವ್ಯಾಪ್ತಿಯನ್ನು ವಿವೇಚಿಸಲಾಗಿದೆ. ಅದರ ಮೇರೆಗೆ ಇಂಗ್ಲಿಷ್ ನ್ಯಾಯದ ಅನ್ವಯಕ್ಕೆ ರಾಜಶಾಸದ ಮನ್ನಣೆ ದೊರೆತಿದೆ. ಈ ಎಲ್ಲ ಕಾರಣಗಳಿಗಾಗಿ ಭಾರತೀಯ ಆಧುನಿಕ ನ್ಯಾಯದ ಇತಿಹಾಸವನ್ನು 18ನೆಯ ಶತಮಾನದ ಆದಿಭಾಗದಿಂದ ಆರಂಭಿಸಲಾಗುತ್ತದೆ.

ವರ್ತಮಾನ ಕಾಲದ ತನಕ ಆಧುನಿಕ ನ್ಯಾಯದ ಇತಿಹಾಸವನ್ನು ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತದ ಕಾಲ, ಬ್ರಿಟಿಷ್ ರಾಜಾಧಿಪತ್ಯದ ಆಡಳಿತದ ಕಾಲ, ಬಿಟಿಷ್ ರಾಜಾಧಿಪತ್ಯದ ಆಡಳಿತದ ಕಾಲ, ಸ್ವಾತಂತ್ರ್ಯಾನಂತರದ ಕಾಲ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿದೆ. ಈ ಮೂರು ಅವಧಿಗಳಲ್ಲಿಯೂ ಇಸ್ಲಾಮೀ ನ್ಯಾಯ, ಹಿಂದೂ ನ್ಯಾಯ ಮತ್ತು ಸಾರ್ವತ್ರಿಕ ನ್ಯಾಯ ಅಸ್ತಿತ್ವದಲ್ಲಿವೆ. ಸಾರ್ವತ್ರಿಕ ನ್ಯಾಯದ ವ್ಯಾಪ್ತಿ ವಿಸ್ತಾರಗೊಳ್ಳುತ್ತ ಬಂದಿದೆ.

ಕಂಪನಿ ಆಡಳಿತದ ಕಾಲದಲ್ಲಿ ಇಸ್ಲಾಮೀ ನ್ಯಾಯದಲ್ಲಿಯ ಧಾರ್ಮಿಕ ಮತ್ತು ವ್ಯಕ್ತಿ ಹಾಗೂ ಕುಟುಂಬ ಇವುಗಳಿಗೆ ಅನ್ವಯಿಸುವ ನ್ಯಾಯ ಸೂತ್ರಗಳಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಆದರೆ ನ್ಯಾಯಾಡಳಿತ ವ್ಯವಸ್ಥೆಯಲ್ಲಿ ಅಂದರೆ ನ್ಯಾಯಾಲಯಗಳ ಸ್ವರೂಪ ಬದಲಾವಣೆಯಲ್ಲಿ ಇಸ್ಲಾಮೀ ಪ್ರಕ್ರಿಯಾ ಮತ್ತು ದಂಡನ್ಯಾಯಗಳನ್ನು ರದ್ದುಮಾಡಿರುವುದರಲ್ಲಿ ಪರ್ಶಿಯನ್ ಭಾಷೆಯ ಬದಲಾಗಿ ಇಂಗ್ಲಿಷನ್ನು ನ್ಯಾಯಾಲಯಗಳ ಭಾಷೆಯಾಗಿ ಘೋಷಿಸಿರುವುರದಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ಮುಂದಿನ ಎರಡು ಅವಧಿಗಳಲ್ಲಿ ಪರಿಮಿತ ವಿಷಯಗಳು ಖಚಿತಗೊಂಡವು. ಆದರೆ ಸೀಮಿತ ವಿಷಯಗಳಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ.

ಹಿಂದೂನ್ಯಾಯ ಹಿಂದೆ ಹೇಳಿದ ಮೂರು ಅವಧಿಗಳಲ್ಲಿಯೂ ಬದಲಾವಣೆ ಹೊಂದುತ್ತ ಬಂದಿದೆ. ಹಿಂದೂ ದಂಡನೀತಿ ಮತ್ತು ತತ್ಸಂಬಂಧದನ್ಯಾಯ ಸೂತ್ರಗಳಲ್ಲಿ ಪರಿವರ್ತನ ಮತ್ತು ಪ್ರಗತಿ ಆಗದಿರುವುದಕ್ಕೆ ರಾಜಕೀಯ ವಾತಾವರಣವೂ ಕಾರಣ. ದಂಡವಿವೇಕ ಮುಂತಾದ ಗ್ರಂಥಗಳು ಪ್ರಾಚೀನ ನ್ಯಾಯಸೂತ್ರಗಳನ್ನು ಪ್ರತಿಬಿಂಬಿಸಿದುವೇ ಹೊರತು ಹೊಸ ಸಮಾಜದ ಹೊಸ ಜೀವನ ಕ್ರಮ ವ್ಯವಸ್ಥೆಗಳಿಗೆ ಹೊಂದಿಕೊಳ್ಳಲು ಅಸಮರ್ಪಕವಾಗಿದ್ದುವು. ಹಿಂದೂ ರಾಜರ ದೌರ್ಬಲ್ಯ ಮತ್ತು ಇತರ ಕಾರಣಗಳಿಗಾಗಿ ಹಿಂದೂದಂಡ ನೀತಿಯಲ್ಲಿ ಮಾರ್ಪಾಡಾದ ಬಗ್ಗೆ ವಿವರಗಳು ದೊರೆತಿಲ್ಲ. 1772ರಲ್ಲಿ ವಾರನ್ ಹೇಸ್ಟಿಂಗ್ಸ್ ಹಿಂದೂ ಮತ್ತು ಮುಸಲ್ಮಾನರ ಪ್ರಕರಣಗಳನ್ನು ಆಯಾ ಮತೀಯ ನ್ಯಾಯಗಳ ಮೇರೆಗೆ ನಿರ್ಧರಿಸುವ ಯೋಜನೆಯನ್ನು ಜಾರಿಗೆ ತಂದ. ಹಿಂದೂ ನ್ಯಾಯಗಳ ಮೇರೆಗೆ ನಿರ್ಧರಿಸುವ ಯೋಜನೆಯನ್ನು ಜಾರಿಗೆ ತಂದ. ಹಿಂದೂ ನ್ಯಾಯ ಸೂತ್ರಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿಸಲಾಯಿತು. ಕೆಲವು ಆಂಗ್ಲ ಪಂಡಿತರು ಮನುಸ್ಮøತಿ ಇತ್ಯಾದಿ ಹಿಂದೂ ಧರ್ಮಶಾಸ್ತ್ರಗಳನ್ನು ಅನುವಾದಿಸಿದರು. ಕಂಪನಿ ಸರ್ಕಾರದ ಆಡಳಿತಗಾರರ ಆಜ್ಞಾನುಸಾರ ಅನೇಕ ಪಂಡಿತರ ಸಹಾಯದಿಂದ ಹಿಂದೂ ನ್ಯಾಯಸೂತ್ರಗಳ ಸಂಹಿತೆಯೊಂದನ್ನು ಸಿದ್ಧಗೊಳಿಸಿ ಅದನ್ನು ಪರ್ಶಿಯನ್ ಭಾಷೆಗೆ ಅನುವಾದಿಸಲಾಯಿತು. 1775ರಲ್ಲಿ ಎನ್.ಬಿ. ಹಲಹದ್ ಅವರಿಂದ ಪರ್ಶಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿ ಜಂತೂಸಂಹಿತೆ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು (1776). ಹಿಂದೂ ನ್ಯಾಯ ಸಂಹಿತೆಯ ರೂಪ ತಳೆಯುವ ಪ್ರಯೋಗದಲ್ಲಿಯ ಮೊದಲ ಹೆಜ್ಚೆ ಇದು. ವಾಕ್ಯವೃಂದ ಪ್ರಕರಣಗಳನ್ನೊಳಗೊಂಡ, 21 ಅಧಿಕರಣಗಳ ಈ ಸಂಹಿತೆಯಲ್ಲಿ ಮೂಲಭೂತನ್ಯಾಯ ಮತ್ತು ಪ್ರಕ್ರಿಯಾ ನ್ಯಾಯ ಸೂತ್ರಗಳನ್ನು ಸಂಗ್ರಹಿಸಲಾಗಿತ್ತು. ಈ ಸಂಹಿತೆ ಅಸಮರ್ಪಕವಾಗಿದ್ದ ಕಾರಣ ಮತ್ತು ನ್ಯಾಯಾಲಯಗಳು ಸಾಮಾಜಿಕ ಮನ್ನಣೆ ಪಡೆದ ಮೂಲ ಸಂಸ್ಕøತ ಗ್ರಂಥಗಳ ಆಧಾರಮೇಲೆ ವಿವಾದಗಳನ್ನು ಇತ್ಯರ್ಥಗೊಳಿಸಲು ಆರಂಭಿಸಿದ ಕಾರಣ ಇದಕ್ಕೆ ಹೆಚ್ಚಿನ ಮನ್ನಣೆ ಮತ್ತು ಸ್ಥಾನಮಾನ ದೊರೆಯಲಿಲ್ಲ.

ಸಮಾಜ ಮತ್ತು ನ್ಯಾಯ ಪರಸ್ಪರ ಪೂರಕಗಳು. ಕಾಲಚಕ್ರದಲ್ಲಿ ಅನೇಕ ರೂಢಿಗಳು ಅಸ್ತಿತ್ವದಲ್ಲಿ ಬರುತ್ತವೆ. ನ್ಯಾಯದ ಅಂಗವಾಗಿಯೂ ಪರಿಣಮಿಸುತ್ತವೆ. ಕ್ರಿ.ಶ. 3ನೆಯ ಶತಮಾನದಿಂದ ಈಚೆಗೆ ಭಾರತೀಯ ಪ್ರಾಚೀನ ನ್ಯಾಯದಲ್ಲಿ ಹಲವು ದೋಷಯುಕ್ತ ರೂಢಿಗಳು ಆಚರಣೆಯಲ್ಲಿ ಬಂದು ಕಡ್ಡಾಯ ಸ್ವರೂಪತಳೆದಿದ್ದುವು. ಅವನ್ನು ವಿರೋಧಿಸುವ ಸಾಮಾಜಿಕ ಸಾಮಾನ್ಯಾಭಿಪ್ರಾಯವೂ ರೂಪುಗೊಂಡಿತ್ತು. ಈ ಹಿನ್ನೆಲೆಯಲ್ಲಿ 1829ರ ಸತಿ ನಿಷೇಧದ ಕಾನೂನು ಮತ್ತು 1856ರಲ್ಲಿ ವಿಧವಾ ಪುನರ್ವಿವಾಹ ಕಾನೂನುಗಳಂಥ ನ್ಯಾಯಿಕ ಬದಲಾವಣೆಗಳು ಆದುವು. ಬದಲಾವಣೆಗಳು ಅತ್ಯಂತ ಪ್ರಾಚೀನ ನ್ಯಾಯಿಕ ಕಲ್ಪನೆಗಳಿಗೆ ಸಂಪೂರ್ಣವಾಗಿ ವಿರೋಧಾತ್ಮಕಳಾಗಿಲ್ಲ. ಸಮಕಾಲೀನ ಅವಶ್ಯಕತೆಯ ಪರಿಣಾಮವಾಗಿ 1980ರ ಜಾತಿ ಅನರ್ಹತಾ ನಿರ್ಮೂಲನಾ ಕಾನೂನು ಬಂತು ಮತ್ತು ಹಿಂದೂ ನ್ಯಾಯವನ್ನು ಮಾರ್ಪಡಿಸಿತು. "ಈ ಅವಧಿಯಲ್ಲಿ ಹಿಂದೂ ಮತ್ತು ಹಿಂದೆ ಹೇಳಿದಂತೆ ಇಸ್ಲಾಮೀ ನ್ಯಾಯಗಳು ಅನ್ವಯವಾಗುವ ವಿಷಯಗಳು ಕಡಿಮೆ ಆದುವು. ಅವುಗಳ ವ್ಯಾಪ್ತಿ ಪಿತ್ರಾರ್ಜಿತ ಆಸ್ತಿಪಾಸ್ತಿ, ಉತ್ತರಾಧಿಕಾರ, ವಿವಾಹ, ಮತೀಯ ಮತ್ತು ಇತರ ಸಂಪ್ರದಾಯಗಳು ಮತ್ತು ಧಾರ್ಮಿಕ ಸಂಸ್ಥೆಗಳು ಇವುಗಳಿಗೆ ಸೀಮಿತಗೊಂಡಿತು. ಸಾರ್ವತ್ರಿಕ ನ್ಯಾಯದ ವ್ಯಾಪ್ತಿ ವಿಸ್ತರಣೆ ಆದರೂ ಅದಕ್ಕೆ ಅನುಗುಣವಾಗಿ ನ್ಯಾಯ ಸೂತ್ರಗಳು ಸ್ವಷ್ಟರೂಪ ತಳೆದಿರಲಿಲ್ಲ. ಈ ಅವಧಿಯಲ್ಲಿ ನ್ಯಾಯಾಡಳಿತ ಮತ್ತು ನ್ಯಾಯ ವಿತರಣೆಗಳಲ್ಲಿ ಅವಶ್ಯಕ ನ್ಯಾಯ ಸೂತ್ರಗಳು ಇಲ್ಲದ ಪ್ರಯುಕ್ತ ಅಸಮರ್ಪಕತೆ ತಲೆದೋರಿತು.

1858-1947 ಅವಧಿಯಲ್ಲಿ ಹಿಂದೂ ನ್ಯಾಯದಲ್ಲಿ ಮಾರ್ಪಾಡುಗಳೂ ಸುಧಾರಣೆಗಳೂ ಆದುವು. ಈ ಅವಧಿಯಲ್ಲಿ ನಿರ್ದಿಷ್ಟ ರೂಪದ ಕಾನೂನುಗಳ ಮೂಲಕ ಸಾರ್ವತ್ರಿಕ ನ್ಯಾಯ ವಿಸ್ತಾರವಾಗಿ ಬೆಳೆಯಿತು. ಎಲ್ಲರಿಗೂ ಅನ್ವಯವಾಗುವ ಏಕರೂಪ ಸಾರ್ವತ್ರಿಕ ನ್ಯಾಯಕ್ಕೆ ಸೇರಿದ ಕಾನೂನುಗಳಲ್ಲಿ ವ್ಯಕ್ತಿಗತವಾದ ಮತೀಯ ನ್ಯಾಯಗಳಿಗೆ ನೇರ ಅಥವಾ ಪರ್ಯಾಯವಾಗಿ ಸಂಬಂಧವಿರುವ ಕಾನೂನುಗಳು ಮತ್ತು ಹಾಗೆ ವಿಶೇಷ ಸಂಬಂಧವಿಲ್ಲದೇ ಸರ್ವರಿಗೂ ಅನ್ವಯವಾಗುವ ಕಾನೂನುಗಳು ಎಂದು ಎರಡು ವಿಧ. ಮೊದಲನೆಯ ವರ್ಗಕ್ಕೆ ಸೇರಿದ ಕಾನೂನುಗಳು ಹಿಂದೂ ಮತ್ತು ಇಸ್ಲಾಮೀ ನ್ಯಾಯಗಳನ್ನು ಮಾರ್ಪಡಿಸುತ್ತವೆ. ಹಿಂದೂನ್ಯಾಯವನ್ನು ಮಾರ್ಪಡಿಸುವ ಕಾನೂನುಗಳನ್ನು ಹಿಂದೂ ನ್ಯಾಯದೊಂದಿಗೆ ವಿವೇಚಿಸಬಹುದಾಗಿದೆ.

ಹಿಂದೂ ನ್ಯಾಯದ ಬದಲಾವಣೆಗೆ ಕಾರಣವಾದ ಕಾನೂನುಗಳಲ್ಲಿ 1860ರ ಭಾರತ ದಂಡಸಂಹಿತೆ. 1861ರ ದಂಡಪ್ರಕ್ರಿಯಾ ಸಂಹಿತೆ, 1863ರ ಧಾರ್ಮಿಕ ದತ್ತಿಗಳ ಕಾನೂನು, 1865ರ ಭಾರತದ ಉತ್ತರಾಧಿಕಾರದ ಬಗೆಗಿನ ಕಾನೂನು, 1866ರ ದೇಶೀಯ ಮತಾಂತರಗಳ ವಿವಾಹ ವಿಘಟನ ಕಾನೂನು, 1867ರ ಸಾರ್ವಜನಿಕ ಜೂಜುಗಳ ಬಗೆಗಿನ ಕಾನೂನು, 1869ರ ವಿವಾಹ ವಿಚ್ಛೇದನ ಕಾನೂನು. 1870ರ ಸ್ತ್ರೀ ಶಿಶುಹತ್ಯೆ ಇಚ್ಛಾಪತ್ರಗಳ ಬಗೆಗಿನ ಕಾನೂನು, 1872ರ ಭಾರತ ಸಾಕ್ಷ್ಯಗಳ ಬಗೆಗಿನ ಕಾನೂನು, 1872ರ ವಿಶೇಷ ವಿವಾಹ ಕಾನೂನು, 1872 ಭಾರತೀಯ ಕರಾರುಗಳ ಬಗೆಗಿನ ಕಾನೂನು, 1875ರ ಭಾರತ ಪ್ರಾಪ್ತ ವಯಸ್ಕತೆಯ ಕಾನೂನು, 1877ರ ನಿರ್ದಿಷ್ಟ ಪರಿಹಾರಗಳ ಬಗೆಗಿನ ಕಾನೂನು, 1881ರ ವರ್ಗಾವಣೆಯ ಲಿಖಿತಗಳ ಕಾನೂನು. 1882ರ ಸ್ವತ್ತುಗಳ ವರ್ಗಾವಣೆಯ ಕಾನೂನು, 1890ರ ಸಂರಕ್ಷಕರ ಮತ್ತು ಪ್ರತಿಪಾದಕರ ಕಾನೂನು, 1908ರ ದಿವಾಣೇ ಪ್ರಕ್ರಿಯಾ ಸಂಹಿತೆ, 1909ರ ಆನಂದ ವಿವಾಹ ಬಗೆಗಿನ ಕಾನೂನು, 1914ರ ಹಿಂದೂ ವರ್ಗಾವಣೆ ಮತ್ತು ಅಂತಿಮ ಇಷ್ಟಪತ್ರಗಳ ಬಗೆಗಿನ ಕಾನೂನು, 1916ರ ಹಿಂದೂ ಸ್ವತ್ತು ಮಾರಾಟ ಕಾನೂನು, ಮಿತಾಕ್ಷಷರದನ್ವಯದ ಉತ್ತರಾಧಿಕಾರವನ್ನು ಮಾರ್ಪಡಿಸುವ 1925ರ ಭಾರತ ಉತ್ತರಾಧಿಕಾರ ಕಾನೂನು, 1927ರ ಹಿಂದೂವಾರಸು (ಅನರ್ಹರಾ ನಿವಾರಣ) ಕಾನೂನು, 1929ರ ಹಿಂದೂ ವಾರಸು (ತಿದ್ದುಪಡಿ) ಕಾನೂನು, 1929ರ ಬಾಲವಿವಾಹ ನಿಷೇಧದ ಕಾನೂನು, ಸಂಯುಕ್ತ ಕುಟುಂಬಗಳ ಮುಂದುವರಿಯುವಿಕೆಗೆ ಆತಂಕಕಾರಿಯಾಗಿ ಪರಿಣಮಿಸಿದ 1930ರ ಹಿಂದೂ ಜ್ಞಾನಾರ್ಜಿತ ಸಂಪಾದನೆಗಳ ಬಗೆಗಿನ ಕಾನೂನು, ಅವಿಭಕ್ತ ಕುಟುಂಬದ ಆಸ್ತಿಗೆ ಹೊಸ ತಿರುವು ತಂದ 1937ರ ಹಿಂದೂ ಮಹಿಳಾ ಸ್ವತ್ತಿನ ಅಧಿಕಾರದ ಬಗೆಗಿನ ಕಾನೂನು, 1940ರ ಹಿಂದೂ ವಿವಾಹ ಮಾನ್ಯತೆ ಕಾನೂನು, 1916ರ ಹಿಂದೂ ವಿವಾಹಿತ ಮಹಿಳೆಯ ಪ್ರತ್ಯೇಕ ನಿವಾಸ ಹಾಗೂ ಪೋಷಣೆಯ ಅಧಿಕಾರದ ಬಗೆಗಿನ ಕಾನೂನು, ಮತ್ತು 1946ರ ಹಿಂದೂ ವಿವಾಹ ಅನರ್ಹತಾ ನಿವಾರಣಾ ಕಾನೂನು-ಇವು ಮತ್ತು ತತ್ಸಂಬಂಧವ ತಿದ್ದುಪಡಿಗಳು ಮುಖ್ಯವಾದ ಕಾನೂನುಗಳಾಗಿವೆ.

1947 ಆಗಸ್ಟ್ 15ರ ಅನಂತರ ಮೂರನೆಯ ಅವಧಿಯಲ್ಲಿ ಹಿಂದೂ ನ್ಯಾಯದ ಸ್ವರೂಪ ಮತ್ತಷ್ಟು ಬದಲಾಗಿದೆ. 1941ರಲ್ಲಿ ನೇಮಕಗೊಂಡ ಹಿಂದೂ ನ್ಯಾಯಸಮಿತಿ ಕೈಗೊಂಡ ಕ್ರೋಡೀಕರಣ ಕಾರ್ಯವನ್ನು 1944ರ ರಾವ್ ಸಮಿತಿ ಮುಂದುವರಿಸಿದೆ. ಸಮಗ್ರ ಸಂಹಿತೆಗೆ ಬದಲಾಗಿ ವಿವಿಧ ವಿಷಯಗಳಿಗೆ ಸಂಬಂಧಿಸಿ ಬೇರೆ ಬೇರೆ ಕಾನೂನುಗಳು 1947ರ ಅನಂತರ ರಚನೆಯಾಗಿ ಜಾರಿಗೆ ಬಂದಿವೆ. 1947ರ ತರುವಾಯ ಜಾರಿಗೆ ಬಂದ ಕಾನೂನುಗಳಿಗೆ ಸುಮಾರು 50 ವರ್ಷಗಳ ಸಾಮಾಜಿಕ ಪರಾಮರ್ಶೆಯ ಹಿನ್ನೆಲೆ ಇದೆ. ಸಂಪ್ರದಾಯವಾದಿಗಳಿಗಿಂತ ಇತರರ ವಾದಕ್ಕೆ ಮತ್ತು ಸಾಮಾನ್ಯರ ಅಭಿಪ್ರಾಯಕ್ಕೆ ಪ್ರಾಚೀನ ಧರ್ಮ ಶಾಸ್ತ್ರಕಾರರಿಂದ ಪುಷ್ಟಿ ದೊರೆತಿದೆ. ಪ್ರಾಚೀನ ಧರ್ಮಶಾಸ್ತ್ರಕಾರರು ಪುರೋಗಾಮಿಗಳೂ ಪ್ರಗತಿಪರರೂ ಆಗಿದ್ದರು ಎನ್ನುವುದಕ್ಕೆ ಅವರ ವ್ಯಾಖ್ಯಾನಗಳಲ್ಲಿ ಆಧಾರವಿದೆ. ಅವರ ಸೂತ್ರಗಳಲ್ಲಿ ಕಾಲದ ಮುನ್ನಡೆ, ರೂಢಿಗಳು, ಪರಿವರ್ತನಶೀಲ ವಿಚಾರ, ಸಮಕಾಲೀನ ಪ್ರಜ್ಞ ಇವುಗಳ ಹೊಂದಾಣಿಕೆಗೆ ಅವಕಾಶವಿದೆ. ಬದಲಾವಣೆಯ ಜಾಡಿನಲ್ಲಿ ಈ ಅವಧಿಯಲ್ಲಿ ಬಂದ ಕಾನೂನುಗಳಲ್ಲಿ ಅಂತರ್ಜಾತೀಯ ವಿವಾಹಗಳನ್ನು ಮಾನ್ಯಮಾಡುವ 1949ರ ಹಿಂದೂ ವಿವಾಹಗಳ ಮಾನ್ಯತಾ ಕಾನೂನು, 1955ರ ಹಿಂದೂ ವಿವಾಹ ಕಾನೂನು, 1956ರ ಹಿಂದೂ ಉತ್ತರಾಧಿಕಾರ ಕಾನೂನು, 1956ರ ಹಿಂದೂ ಅಪ್ರಾಪ್ತ ವಯಸ್ಕತೆ ಮತ್ತು ಸುರಕ್ಷಿತತ್ವ ಕಾನೂನು. 1956ರ ಹಿಂದೂ ದತ್ತಕ ಮತ್ತು ಜೀವನಾಂಶ ಕಾನೂನು. 1957ರ ಹಿಂದೂ ವಿವಾಹಿತ ಮಹಿಳೆಯರ ಸ್ವತ್ತಿನ ಅಧಿಕಾರ (ಪ್ರತ್ಯೇಕ ವಸತಿ ಮತ್ತು ಜೀವನಾಂಶ) ಕಾನೂನು. 1961ರ ವಧೂವರದಕ್ಷಿಣೆ ನಿಷೇಧದ ಬಗೆಗಿನ ಕಾನೂನು ಮತ್ತು ಈ ಕಾನೂನುಗಳಿಗೆ ಮಾಡಲಾಗಿರುವ ತಿದ್ದುಪಡಿ ಕಾನೂನುಗಳು ಮುಖ್ಯವಾದವು. ಆಧುನಿಕ ಮಾರ್ಪಾಡುಗಳು ಪ್ರಾಚೀನ ನ್ಯಾಯದಲ್ಲಿಯ ವಿವಾಹದ ಕಲ್ಪನೆ, ಉತ್ತರಾಧಿಕಾರಕ್ಕೆ ಸಂಬಂಧಿಸಿದ ಸಪಿಂಡತ್ವದ ಕಲ್ಪನೆ. ಆತ್ಮ ಹಾಗೂ ಪಿತೃಬಂಧುಗಳ ಕಲ್ಪನೆಗಳು ಸಂಪೂರ್ಣವಾಗಿ ಪರಿವರ್ತನೆಗೊಂಡಿವೆ.

ಸಾರ್ವತ್ರಿಕ ನ್ಯಾಯ 18ನೆಯ ಶತಮಾನದ ಆದಿಭಾಗದಲ್ಲಿ ರೂಪುಗೊಳ್ಳಲು ಆರಂಭಿಸಿತು ಎಂದು ಹಿಂದೆ ತಿಳಿಸಲಾಗಿದೆ. ಹೊಸ ನ್ಯಾಯಾಡಳಿತ ವ್ಯವಸ್ಥೆಗೆ ವಾರನ್ ಹೇಸ್ಟಿಂಗ್ಸ್ ಬುನಾದಿಹಾಕಿದ. ಮುಂದೆ ಬಂಗಾಳದಲ್ಲಿಯ ಪ್ರತಿಯೊಂದು ಜಿಲ್ಲೆಯಲ್ಲಿಯೂ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳು ಸ್ಥಾಪನೆಗೊಂಡವು. ಸದರ್ ಮತ್ತು ಗ್ರಾಮಾಂತರ ದಿವಾಣೀ ಅದಾಲತುಗಳ ಮಾರ್ಗದರ್ಶನಕ್ಕಾಗಿ ಒಂದು ದಿವಾಣೀ ಪ್ರಕ್ರಿಯಾ ಸಂಹಿತೆಯನ್ನು ಸಿದ್ಧಗೊಳಿಸಲಾಯಿತು. ಹಿಂದೂ ಮತ್ತು ಇಸ್ಲಾಮೀ ನ್ಯಾಯಪಂಡಿತರ ಸಹಾಯಪಡೆದು ವಿವಾದಗಳನ್ನು ನಿರ್ಣಯಿಸಲಾಗುತ್ತಿತ್ತು. ಮೇಲ್ಮನವಿಗೆ ಸದರ್ ದಿವಾಣೀ ಅದಾಲತ್ ಮತ್ತು ಸದರ್ ನಿಜಾಮತ್ ಅದಾಲತ್ ಎಂಬ ಉಚ್ಚ ನ್ಯಾಯಾಲಯಗಳು ಇದ್ದುವು. 1774ರಲ್ಲಿ ಕಲ್ಕತ್ತದಲ್ಲಿ ಸರ್ವೋಚ್ಚ ನ್ಯಾಯಾಲಯ ಅಸ್ತಿತ್ವಕ್ಕೆ ಬಂತು. ಕಾರ್ನ್‍ವಾಲೀಸನ ಕಾಲದಲ್ಲಿ ದಿವಾಣೀ ಅದಾಲತ್ ಮತ್ತು ಫೌಜುದಾರೀ ಅದಾಲತುಗಳು ಇತರ ಪ್ರಾಂತಗಳಲ್ಲಿಯೂ ಸ್ಥಾಪನೆಗೊಂಡವು. ಇದೇ ಕಾಲದಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಪ್ರತ್ಯೇಕತೆಯ ಬಗ್ಗೆ ಚಿಂತನೆ ನಡೆದರೂ ಆ ಬಗ್ಗೆ ಹೆಚ್ಚಿನ ಬದಲಾವಣೆ ಆಗಲಿಲ್ಲ. 1772ರಿಂದ ವ್ಯಕ್ತಿಗತ ಸ್ವರೂಪದ ಧಾರ್ಮಿಕ ನ್ಯಾಯಗಳನ್ನು ನ್ಯಾಯಾಲಯಗಳು ಅನ್ವಯಿಸುತ್ತಿದ್ದರೂ ಆ ಬಗ್ಗೆ ರಾಜಮನ್ನಣೆ ದೊರೆತದ್ದು 1781ರಲ್ಲಿ. 1828ರಿಂದ 35ರ ತನಕ ಅಧಿಕಾರದಲ್ಲಿದ್ದ ವಿಲಿಯಮ್ ಬೆಂಟಿಂಕನ ಕಾಲದಲ್ಲಿ ಮತಾಂತರಿಗಳಿಗೆ ಪಿತ್ರಾರ್ಜಿತ ಆಸ್ತಿ ದೊರೆಯಬೇಕೆಂಬ ಘೋಷಣೆ ಆಚರಣೆಗೆ ಬಂತು. ಇಂಗ್ಲಿಷ್ ಭಾಷೆ ಆಡಳಿತ ಮತ್ತು ನ್ಯಾಯಾಲಯಗಳ ಭಾಷೆಯಾಗಿ ಬಳಕೆಯಲ್ಲಿ ಬರಲಾರಂಭಿಸಿತು.

ಕಂಪನಿಯ ಆಡಳಿತದ ಕಾಲದಲ್ಲಿ ಕ್ರಮೇಣ ಭಾರತದ ಬಲು ಭಾಗವನ್ನು ಆಧಿಪತ್ಯಕ್ಕೆ ಸೇರಿಸಿಕೊಳ್ಳಲಾಯಿತು. ಈ ಅವಧಿಯಲ್ಲಿ ನ್ಯಾಯಾಡಳಿತ ವ್ಯವಸ್ಥೆಯಲ್ಲಿ ಮತ್ತು ನ್ಯಾಯದ ಸ್ವರೂಪದಲ್ಲಿ ಮಹತ್ತ್ವದ ಬದಲಾವಣೆಗಳು ಆಗಲಿಲ್ಲ. ಬ್ರಿಟಿಷ್ ಸರ್ಕಾರ ಇದನ್ನು ಗಮನಿಸಿತು. ಆಗ ಆಚರಣೆಯಲ್ಲಿದ್ದ ನ್ಯಾಯದಲ್ಲಿಯ ಅಸ್ಪಷ್ಟತೆಯ ಜೊತೆಗೆ ಪ್ರಚಲಿತವಾಗಿದ್ದ ಇತ್ತಂಡದ ನ್ಯಾಯಾಲಯಗಳ ಪದ್ಧತಿ-ಎಂದರೆ ಕಂಪನಿಯ ನ್ಯಾಯಾಲಯಗಳು ಮತ್ತು ಬ್ರಿಟಿಷ್ ರಾಜಾಧಿಪತ್ಯದ ನ್ಯಾಯಾಲಯಗಳನ್ನು ಒಳಗೊಂಡ ಉಭಯ ರೀತಿಯ ನ್ಯಾಯಾಲಯಗಳ ನ್ಯಾಯಾಂಗ ಪದ್ಧತಿ-ನ್ಯಾಯಾಡಳಿತ ವ್ಯವಸ್ಥೆಯ ಅಸಮರ್ಪಕತೆಗೆ ಕಾರಣ ಎಂದೂ ಭಾವಿಸಿತು, ಮತ್ತು ಇದರ ಪರಿಣಾಮವಾಗಿ 1833ರ ಸನ್ನದಿನ ಮೇರೆಗೆ ನ್ಯಾಯ ಆಯೋಗದ ರಚನೆಗೆ ಅವಕಾಶವಾಯಿತು. ಆಗ ಆಚರಣೆಯಲ್ಲಿದ್ದ ನ್ಯಾಯಾಸೂತ್ರಗಳ ಪರಿಶೀಲನೆ ಮತ್ತು ನ್ಯಾಯಿಕ ಕಲ್ಪನೆಗಳ ಅಧ್ಯಯನದ ಜೊತೆಗೆ ಆವಶ್ಯಕ ಕಾನೂನುಗಳ ಬಗ್ಗೆ ಶಿಫಾರಸು ಮಾಡುವುದು ಮತ್ತು ಕರಡುಗಳನ್ನು ಸಿದ್ಧಗೊಳಿಸುವುದು ನ್ಯಾಯ ಆಯೋಗದ ಕಾರ್ಯವ್ಯಾಪ್ತಿಗೆ ಸೇರಿತ್ತು. ಆಧುನಿಕ ನ್ಯಾಯದ ಇತಿಹಾಸದಲ್ಲಿ 1833 ಮಹತ್ತ್ವವಾದದ್ದು. ಜನನ, ಜಾತಿ, ಧರ್ಮ, ಸ್ಥಳ ಮತ್ತು ವರ್ಣಗಳ ಆಧಾರದ ಮೇಲೆ ಯಾರನ್ನೂ ಯಾವುದೇ ಹುದ್ದೆಗೆ ಅನರ್ಹನಾಗಿ ಮಾಡಬಾರದೆಂಬ ನ್ಯಾಯಿಕ ಸಿದ್ಧಾಂತ ಜಾರಿಗೆ ಬಂತು. ಈ ಸೂತ್ರಕ್ಕೆ ಭಾರತದ ಸಂವಿಧಾನದಲ್ಲಿಯೂ ಮನ್ನಣೆ ದೊರೆತಿದೆ. ಪ್ರೀವಿ ಕೌನ್ಸಿಲಿನ ನ್ಯಾಯ ಸಮಿತಿ 1833ರ ನ್ಯಾಯಾಂಗ ಸಮಿತಿಯ ಕಾನೂನಿನ ಅನ್ವಯ ಅಸ್ತಿತ್ವಕ್ಕೆ ಬಂತು. ಕಂಪನಿ ಸರ್ಕಾರದ ಆಡಳಿತಕ್ಕೆ ಸೇರಿದ್ದ ಎಲ್ಲ ಪ್ರದೇಶಗಳ ಮೇಲೆ ಶಾಸಕಾಂಗದ ಅಧಿಕಾರ ಹೊಂದಿರುವಂಥ ಒಂದು ವಿಧಾನ ಮಂಡಲದ ಸ್ಥಾಪನೆಗೆ ನ್ಯಾಯಿಕ ಅವಕಾಶ ದೊರೆತದ್ದು ಮತ್ತು ಆಗ ಅಸ್ತಿತ್ವದಲ್ಲಿದ್ದ ಸರ್ವೋಚ್ಚ ನ್ಯಾಯಾಲಯ ಶಾಸಕಾಂಗದ ಕಾನೂನುಗಳಿಗೆ ಹೊಂದಿಕೊಂಡು ಮತ್ತು ಅಂಥ ಕಾನೂನುಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ವ್ಯವಸ್ಥೆ ಆದದ್ದು 1833ರ ಸನ್ನದಿನ ಮೇರೆಗೆ. ಸರ್ವೋಚ್ಚ ನ್ಯಾಯಾಲಯ ಮತ್ತು ಸದರ್ ದಿವಾಣೀ ಅದಾಲತುಗಳನ್ನು ಆಮೇಲೆ ಒಗ್ಗೂಡಿಸಲಾಯಿತು.

ಈ ಮೊದಲನೆಯ ಅವಧಿಯ ಕೊನೆಯ ಹಂತದಲ್ಲಿ ಒಂದನೆಯ ಮತ್ತು ಎರಡನೆಯ ನ್ಯಾಯ ಆಯೋಗಗಳು, ಒಂದರ ಅನಂತರ ಮತ್ತೊಂದು, ಅಸ್ತಿತ್ವಕ್ಕೆ ಬಂದುವು. ಭಾರತದ ಪ್ರಥಮ ನ್ಯಾಯ ಆಯೋಗದಲ್ಲಿ ಪ್ರಮುಖ ಪಾತ್ರವಹಿಸಿದ ಮೆಕಾಲೇ ಭಾರತದ ಆಧುನಿಕ ನ್ಯಾಯದ ಅತಿ ಮುಖ್ಯವಾದ ಕೆಲವು ಕಾನೂನುಗಳಿಗೆ ಅಡಿಪಾಯ ಹಾಕಿಕೊಟ್ಟ. 1837ರಲ್ಲಿ ಸರ್ಕಾರಕ್ಕೆ ಒಪ್ಪಿಸಲಾದ ಭಾರತದ ದಂಡಸಂಹಿತೆಯ ಕರಡನ್ನು ಸಿದ್ಧಗೊಳಿಸಿದ ಸಮರ್ಥ ಶಿಲ್ಪ್ಪಿಯೂ ಆತನೇ. ಕಂಪನಿ ಆಡಳಿತದ ಕಾಲದಲ್ಲಿ ಜಾರಿಗೆ ಬಂದ ಕಾನೂನುಗಳಲ್ಲಿ 1839ರ ಬಡ್ಡಿಗಳ ಕಾನೂನು, 1850ರ ಜಾತಿ ಅನರ್ಹತಾ ನಿವಾರಣಾ ಕಾನೂನು ಮತ್ತು 1850ರ ಲೋಕ ನೌಕರರ (ವಿಚಾರಣಾ) ಕಾನೂನುಗಳು ಮುಖ್ಯವಾದವು. 1873ರ ಸನ್ನಿಧಿನಲ್ಲಿ ಆಡಳಿತ ನಿರ್ವಹಣಾ ಮತ್ತು ಶಾಸಕಾಂಗ ಪರಿಷತ್ತುಗಳ ವ್ಯವಸ್ಥೆಗೆ ಅವಕಾಶವಿತ್ತು. ಈ ಸನ್ನದಿನ ಮೇರೆಗೆ ದ್ವಿತೀಯ ನ್ಯಾಯ ಆಯೋಗ ಅಸ್ತಿತ್ವಕ್ಕೆ ಬಂತು. ಇದು ಮೊದಲು ಆಯೋಗದ ವರದಿಗಳನ್ನು ಸಲ್ಲಿಸಿತು, ಅಲ್ಲದೇ ಮೂರು ವರ್ಷಪರ್ಯಂತ ಕೆಲಸ ಮಾಡಿ ಉಚ್ಚ ನ್ಯಾಯಾಲಯಗಳ ಸ್ಥಾಪನೆ ಬಗ್ಗೆ ಮತ್ತು ದಿವಾಣೀ ಹಾಗೂ ದಂಡ ಸಂಹಿತೆಗಳ ಬಗ್ಗೆ ಶಿಫಾರಸುಮಾಡಿತು. ಈ ಅವಧಿಯ ಕೊನೆಯ ಹಂತದಲ್ಲಿ 1857ರ ಸ್ವಾತಂತ್ರ್ಯ ಸಂಗ್ರಾಮದ ಪ್ರಯುಕ್ತ ನ್ಯಾಯ ವ್ಯವಸ್ಥೆ ಮತ್ತಷ್ಟು ಶಿಥಿಲಗೊಂಡಿತು. 1858 ಸೆಪ್ಟೆಂಬರ್ 1ರಿಂದ ಕಂಪನಿಯ ಆಡಳಿತ ಹೋಗಿ ಬ್ರಿಟಿಷ್ ಸಾಮ್ರಾಜ್ಯದ ಆಡಳಿತ ಆರಂಭವಾಯಿತು. ಈ ಅಧಿಕಾರ ಬದಲಾವಣೆಯ ಸ್ಥಿತ್ಯಂತರವೂ ನ್ಯಾಯಾಂತರ್ಗತ ವಸ್ತುವೇ ಆಗಿದೆ. 1858-1947 ಎರಡನೆಯ ಅವಧಿಯಲ್ಲಿ ಬರುತ್ತದೆ. ಆಧಿಪತ್ಯ ನೆಲೆನಿಂತು ಶಾಂತಿ ಸ್ಥಾಪನೆ ಆದ ಮೇಲೆ ನ್ಯಾಯ ಆಯೋಗ ಸಿದ್ಧಪಡಿಸಿದ್ಧ ಕಾನೂನುಗಳ ಕರಡುಗಳನ್ನು ಪರಿಶೀಲಿಸುವ ಮತ್ತು ಹೊಸ ಕಾನೂನುಗಳನ್ನು ಜಾರಿಗೆ ತರುವ ಕೆಲಸ ಆಗ ಆರಂಭವಾಯಿತು. ಮೂರು ವರ್ಷಗಳಲ್ಲಿ 1859ರ ದಿವಾಣೀ ಪ್ರಕ್ರಿಯಾ ಸಂಹಿತೆ, 1860ರ ದಂಡ ಸಂಹಿತೆ ಮತ್ತು 1861ರ ದಂಡ ಪ್ರಕ್ರಿಯಾ ಸಂಹಿತೆಗಳು ಜಾರಿಗೆ ಬಂದುವು. ಇವುಗಳ ಜೊತೆಗೆ ಅನೇಕ ಕಾನೂನುಗಳು ರಚನೆಗೊಂಡು ಆಚರಣೆಗೆ ಬರತೊಡಗಿದುವು. ಹಿಂದೂ ನ್ಯಾಯಕ್ಕೆ ನೇರವಾಗಿ ಅಥವಾ ಪರ್ಯಾಯವಾಗಿ ಸಂಬಂಧಿಸುವ ಕೆಲವು ಕಾನೂನುಗಳನ್ನು ಹಿಂದೆ ಉಲ್ಲೇಖಿಸಲಾಗಿದೆ ಮತ್ತು ಅವುಗಳಲ್ಲಿ ಕೆಲವು ಕಾನೂನುಗಳು ಈ ಅವಧಿಗೆ ಸಂಬಂಧಿಸಿವೆ. 1859ರ ಕಾಲಪರಿಮಿತಿ ಕಾನೂನು, 1860ರ ಸೊಸೈಟಿಗಳ ನೋಂದಣಿ ಬಗೆಗಿನ ಕಾನೂನು, 1861ರ ಉಚ್ಚ ನ್ಯಾಯಾಲಯಗಳ ಕಾನೂನು, 1861ರ ಪೊಲೀಸ್ ಕಾನೂನು, 1862ರ ಭಾರತ ಮೊಹರುಗಳ (ಸೀಲ್) ಕಾನೂನು, 1864ರ ಸುಂಕಗಳ ಕಾನೂನು, 1866ರ ನೋಂದಣಿ ಕಾನೂನು, 1867ರ ಪತ್ರಿಕಾ ಕಾನೂನು, 1868ರ ದೇಶೀಯ ಭಾಷಾ ಪತ್ರಿಕೆಗಳ ಕಾನೂನು, 1881ರ ಕಾರ್ಖಾನೆಗಳ ಕಾನೂನು, 1882ರ ಅನುಭೋಗಿಗಳ ಕಾನೂನು. 1882ರ ಭಾರತ ನ್ಯಾಸಗಳ ಕಾನೂನು, 1884 ಬೇಸಾಯಗಾರರ ಸಾಲಗಳ ಬಗೆಗಿನ ಕಾನೂನು, 1890ರ ಭಾರತ ರೈಲ್ವೆಗಳ ಕಾನೂನು ಮುಂತಾದವು ಸಂಬಂಧಪಟ್ಟ ಅವಧಿಯಲ್ಲಿಯ ಪ್ರಮುಖ ಕಾನೂನುಗಳು.

ಎರಡನೆಯ ಅವಧಿಯ ಆರಂಭದ ಕಾಲ 1858-90. ಈ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದ ಎಲ್ಲ ಕಾನೂನುಗಳ ಹೆಸರುಗಳನ್ನು ಈ ಲೇಖನದಲ್ಲಿ ಉಲ್ಲೇಖಿಸಿಲ್ಲ. ಮುಂದಿನ ಅವಧಿಯಲ್ಲಿ ದೇಶದಲ್ಲಿ ಆಂತರಿಕ ಯುದ್ಧಗಳು ಕಡಿಮೆ ಆಗುತ್ತ ಬಂದುವು. ಬ್ರಿಟಿಷರ ಆಧಿಪತ್ಯದ ಆಡಳಿತ ಸುಭದ್ರವಾಗುತ್ತ ನಡೆಯಿತು. ಆಡಳಿತಕ್ಕೆ ಆವಶ್ಯಕವಾದ ಕಾನೂನುಗಳು ಹೆಚ್ಚಿನ ಸಂಖ್ಯೆಯಲ್ಲಿ ರೂಪುಗೊಳ್ಳತೊಡಗಿದುವು. ಆ ಪ್ರಯುಕ್ತ 1890-1947 ಅವಧಿಯಲ್ಲಿ ಸಾಮಾನ್ಯ ನ್ಯಾಯಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನುಗಳ ತಿದ್ದುಪಡಿಗಳು ಆಚರಣೆಯಲ್ಲಿ ಬಂದಿವೆ. ಈ ಕಾನೂನುಗಳ ಮೇಲೆ ಇಂಗ್ಲಿಷ್ ನ್ಯಾಯದ ಪ್ರಭಾವ ಹೆಚ್ಚಾಗಿ ಇದೆ.ಕೆಲವು ಕಾನೂನುಗಳನ್ನು ದೇಶೀಯ ಅನುಕೂಲತೆಗೆ ಹೊಂದಿಕೆ ಆಗುವಂತೆ ಇಂಗ್ಲಿಷ್ ನ್ಯಾಯಸೂತ್ರಗಳನ್ನು ಮಾರ್ಪಡಿಸಿ ರಚಿಸಲಾಗಿದೆ. ಈ ಅವಧಿಯಲ್ಲಿ ಸಾಮಾನ್ಯ ನ್ಯಾಯ ವಿಪುಲವಾಗಿ ಬೆಳೆಯಿತು. ವಿಷಯ ವ್ಯಾಪ್ತಿಯ ದೃಷ್ಟಿಯಿಂದ ಮತ್ತು ಕಾನೂನುಗಳ ಸಂಖ್ಯೆಯ ದೃಷ್ಟಿಯಿಂದ ಈ ಅವಧಿಗಳಲ್ಲಿ ಜಾರಿಗೆ ಬಂದ ಎಲ್ಲ ಕಾನೂನುಗಳ ಹೆಸರುಗಳನ್ನು ಮತ್ತು ಅವುಗಳಲ್ಲಿಯ ನ್ಯಾಯದ ರೂಪುರೇಷೆಗಳನ್ನು ಸೂಕ್ಷ್ಮವಾಗಿ ಕೊಡುವುದು ಈ ಲೇಖನದ ವ್ಯಾಪ್ತಿಗೆ ಮೀರಿದ್ದಾಗಿದೆ. 1858ರಿಂದ 1947 ಆಗಸ್ಟ್ 15ರ ತನಕದ ಅವಧಿಯಲ್ಲಿ ಬಂದ ಕಾನೂನುಗಳ ನ್ಯಾಯದ ವ್ಯಾಪ್ತಿ ಜನ ಜೀವನದ ವ್ಯವಹಾರಗಳಿಗೂ ಅನ್ವಯಿಸುವ ಮತ್ತು ನಿಯಂತ್ರಿಸುವ ಸ್ವರೂಪದ್ದಾಗಿದೆ. ಒಟ್ಟಾರೆ ಈ ಅವಧಿಯಲ್ಲಿ ನ್ಯಾಯಾಡಳಿತ ವ್ಯವಸ್ಥೆಗೆ ಸಂಬಂಧಿಸಿದ ನ್ಯಾಯ ಪ್ರಕ್ರಿಯಾ ವಿಧಾನಕ್ಕೆ ಸಂಬಂಧಿಸಿದ ನ್ಯಾಯ ಮತ್ತು ಮೌಲಿಕ ಹಾಗೂ ಪ್ರಾಧಾನ್ಯ ಸ್ವರೂಪದ ನ್ಯಾಯ ಇವುಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯದಲ್ಲಿ ಹೊಸ ಮಾರ್ಪಾಡುಗಳು ಜಾರಿಗೆ ಬಂದಿವೆ.

1947ರಲ್ಲಿ ಭಾರತ ಸ್ವತಂತ್ರವಾಯಿತು. ಸ್ವಾತಂತ್ರ್ಯ ಘೋಷಣೆಯೂ ನ್ಯಾಯಿಕ ಸ್ವರೂಪದ್ದಾಗಿದೆ. 1947ರ ಅನಂತರದ ಅಂದರೆ ಹಿಂದೆ ಹೇಳಿದ ಮೂರನೆಯ ಹಂತದ ಪ್ರಸಕ್ತ ಅವಧಿ ಭಾರತದ ಆಧುನಿಕ ನ್ಯಾಯದ ಅತ್ಯಂತ ಪ್ರಮುಖ ಘಟ್ಟ. ಈ ಅವಧಿಗೆ ಸಂಬಂಧಿಸಿದಂತೆ ಹಿಂದೂ ಮತ್ತು ಇಸ್ಲಾಮೀ ನ್ಯಾಯಗಳನ್ನು ಕುರಿತು ಹಿಂದೆ ವಿವೇಚಿಸಲಾಗಿದೆ. ಈ ನ್ಯಾಯಗಳಲ್ಲಿರುವ ವಿಷಯಗಳಿಗೆ ಪರ್ಯಾಯ ಸ್ವರೂಪದ ಮತ್ತು ಹಿಂದೂ ಮತ್ತು ಇಸ್ಲಾಮೇತರರಿಗೆ ಅನ್ವಯವಾಗುವ ಕಾನೂನುಗಳು ಇವೆ. ಅಂಥ ಕಾನೂನುಗಳಲ್ಲಿ ಭಾರತೀಯ ಕ್ರೈಸ್ತರ ವಿವಾಹ ಕಾನೂನು, ಪಾರಸಿಗಳ ವಿವಾಹ ಕಾನೂನು, ವಿಶೇಷ ವಿವಾಹ ಕಾನೂನು ಮತ್ತು ಭಾರತದ ವಾರಸುದಾರರ ಬಗೆಗಿನ ಕಾನೂನು ಮುಖ್ಯವಾಗಿವೆ. ಇತರ ವಿಷಯಗಳಿಗೆ ಸಂಬಂಧಿಸಿ ಪ್ರಸಕ್ತ ಅವಧಿಯಲ್ಲಿ ಕಾನೂನುಗಳ ಮಹಾಪೂರವೇ ಹರಿದಿದೆ. ಇದಕ್ಕೆ ಅನೇಕ ಕಾರಣಗಳು ಇವೆ. ಕ್ರಿಸ್ತಪೂರ್ವ ಕಾಲದಿಂದ ಆರಂಭಿಸಿ ಸುಮಾರು ಎರಡೂವರೆ ಸಾವಿರ ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ಜೀವನದಲ್ಲಿ ವಿಭಿನ್ನ ವಿಶಿಷ್ಟ ಮತ್ತು ವಿರೋಧಾತ್ಮಕ ಸ್ಥಿತ್ಯಂತರಗಳು ಆಗಿವೆ. ವರ್ಣಾಶ್ರಮದ ಸಮಾಜ ಕರಗಿ ಹೋಗಿದೆ. ಸರಳತೆ ಹಾಗೂ ಆಧ್ಯಾತ್ಮಿಕ ಮೌಲ್ಯದ ಜನಜೀವನ ಹೋಗಿ, ಆರ್ಥಿಕ ನೆಲೆಗಟ್ಟಿನ ಆಸ್ತಿ ಆಡಂಬರಗಳ ಪ್ರಾಧಾನ್ಯದ ಸಮಾಜ ರೂಪುಗೊಂಡಿದೆ. ಅನೇಕ ಜಾತಿಗಳು ಅಸ್ತಿತ್ವಕ್ಕೆ ಬಂದಿವೆ. ವೇದಪೂರ್ವದ ಮತ್ತು ವೇದ ಕಾಲದ ಜೀವನ ಮೌಲ್ಯ ಮತ್ತು ನ್ಯಾಯಿಕ ಕಲ್ಪನೆಗಳು ಸ್ಥಿತ್ಯಂತರಗೊಂಡ ಸಮಾಜಕ್ಕೆ ಸಂದಿಗ್ಧವಾಗಿಯೂ ವಿರೋಧಾತ್ಮಕವಾಗಿಯೂ ಪರಿಣಮಿಸಿರುವುದನ್ನು ಕಾಣಬಹುದಾಗಿದೆ. ಜಾತಿಗಳೇ ಹಿಂದೂ ಸಮಾಜದ ಮೂಲ ಎನ್ನುವಷ್ಟರ ಮಟ್ಟಿಗೆ ಜಾತೀಯವಾದ ಆಳವಾಗಿ ಬೇರುಬಿಟ್ಟರೂ ಸಮಗ್ರ ಮತ್ತು ಸಮರ್ಪಕ ಸ್ವರೂಪದ ನ್ಯಾಯ ಸೂತ್ರಗಳು ರೂಪುಗೊಂಡಿಲ್ಲ. ಕಾಲಕ್ರಮದಲ್ಲಿ ಹಿಂದೂ ಸಮಾಜದಲ್ಲಿ ತಲೆದೋರಿದ್ದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಮತ್ತು ಪೂರೈಸಿಕೊಳ್ಳಲು ಆಗಬೇಕಾಗಿದ್ದ ನ್ಯಾಯಿಕ ಬದಲಾವಣೆಗಳನ್ನು ತರುವುದಕ್ಕೆ ಹಿಂದಿನ ಅವಧಿಗಳಲ್ಲಿ ಯೂವುದೇ ಒಂದು ಸುಸಂಘಟಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿರಲಿಲ್ಲ. ಅದಕ್ಕೆ ರಾಷ್ಟ್ರದಲ್ಲಿದ್ದ ರಾಜಕೀಯ ಅಸ್ಥಿರತೆ, ಆಂತರಿಕ ಯುದ್ಧಗಳು. ಮಹಮ್ಮದೀಯರ ಆಕ್ರಮಣಗಳು ಮತ್ತು ಇಂಗ್ಲಿಷರು ಮಾಡಿದ ಯುದ್ಧಗಳು ಕಾರಣಗಳಾಗಿವೆ. ಇದರ ಜೊತೆಗೆ ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿ ಇತರ ಮತಗಳೂ ಸೇರಿಕೊಂಡಿರುವ ಪರಿವರ್ತಿತ ರಾಷ್ಟ್ರೀಯತೆ ಕಾಲಕ್ರಮದಲ್ಲಿ ರೂಪುಗೊಂಡಿದೆ. ನ್ಯಾಯದ ಬೆಳೆವಣಿಗೆಗೆ ರಾಜಕೀಯ ಶಾಂತತೆ ಮತ್ತು ಸಾಮಾಜಿಕ ಸುಸ್ಥಿರತೆ ಆವಶ್ಯಕ. ಸ್ವಾತಂತ್ರ್ಯಾನಂತರ ರಾಷ್ಟ್ರಕ್ಕೆ ಅಂಥ ಪರ್ವಕಾಲ ದೊರೆತಿದೆ. ಭಾರತೀಯ ಸಮಾಜ ಸಂವಿಧಾನವನ್ನು ಅಂಗೀಕರಿಸಿ ನ್ಯಾಯ ಪಾರಮ್ಯದ ನೆರಳಲ್ಲಿ ಪ್ರಗತಿ ಸಾಧಿಸಲು ಆರಂಭಿಸಿದೆ. ಎಚ್ಚೆತ್ತ ಭಾರತದ ಆವಶ್ಯಕತೆಗಳು ಕಾನೂನುಗಳ ಬಾಹುಳ್ಯಕ್ಕೆ ಕಾರಣವಾಗಿವೆ.

ಭಾರತದ ಶಾಸಕಾಂಗ ನ್ಯಾಯರಚನೆಯಲ್ಲಿ ಹೆಚ್ಚಿನ ಕಾರ್ಯ ಮಾಡಿರುವುದಕ್ಕೆ ಕೇಂದ್ರ ಮತ್ತು ರಾಜ್ಯಗಳ ಅಸಂಖ್ಯಾತ ಕಾನೂನುಗಳೇ ಸಾಕ್ಷಿ. ಭಾರತದ ಆಧುನಿಕ ನ್ಯಾಯದ ಸ್ವರೂಪದ ದೃಷ್ಟಿಯಿಂದ ಹೇಳುವುದಾದರೆ ಅದು ಸಂವಿಧಾನ, ಸಂವಿಧಾನದನ್ವಯ ಆಚರಣೆಯಲ್ಲಿರುವ ಕಾನೂನುಗಳು, ಸಂಸತ್ತು ಮತ್ತು ರಾಜ್ಯ ವಿಧಾನಮಂಡಲಗಳು ರಚನೆ ಮಾಡಿರುವ ಮತ್ತು ಆಚರಣೆಯಲ್ಲಿರುವ ಕಾನೂನುಗಳು, ಕೇಂದ್ರ ಹಾಗೂ ರಾಜ್ಯಗಳು ಪೋಷಿಸಿದ ಅಧ್ಯಾದೇಶಗಳು, ಕಾನೂನಿನ ಪ್ರಭಾವವುಳ್ಳ ಆದೇಶಗಳು, ನಿಯಮಗಳು, ಅಧಿಸೂಚನೆಗಳು, ರೂಢಿಗಳು ಮತ್ತು ಪದ್ಧತಿಗಳು ಇತ್ಯಾದಿ ಸ್ವರೂಪಗಳಲ್ಲಿ ಅಸ್ತಿತ್ವದಲ್ಲಿದೆ. ನ್ಯಾಯಾಲಯದ ನಿರ್ಣಯಗಳಲ್ಲಿಯೂ ನ್ಯಾಯಿಕ ಕಲ್ಪನೆ ಮತ್ತು ನ್ಯಾಯಸೂತ್ರಗಳನ್ನು ಕಾಣಬಹುದಾಗಿದೆ. ಶಾಸಕಾಂಗ ರಚಿಸಿದ ಕಾನೂನುಗಳೇ ಆಧುನಿಕ ನ್ಯಾಯದ ಮುಖ್ಯ ಮತ್ತು ಹೆಚ್ಚಿನ ಭಾಗವಾಗಿವೆ. ಭಾರತೀಯ ಆಧುನಿಕ ನ್ಯಾಯದ ಲಕ್ಷಣ ಮತ್ತು ವಿಷಯ ವೈವಿಧ್ಯೆಯ ಸೂಕ್ಮ ಪರಿಚಯ ಮಾತ್ರ ಇಲ್ಲಿದೆ. ಶಾಸಕಾಂಗ ಸಂವಿಧಾನದ ಚೌಕಟ್ಟಿನಲ್ಲಿಯೇ ಕಾನೂನುಗಳನ್ನು ರಚಿಸಬೇಕಾಗಿದೆ. ಸಂಸತ್ತು ಮತ್ತು ರಾಜ್ಯ ವಿಧಾನಮಂಡಲಗಳ ಅಧಿಕಾರ, ಮತ್ತು ವಿಷಯ ವ್ಯಾಪ್ತಿಗಳನ್ನು ಸಂವಿಧಾನದಲ್ಲಿ ನಿಗದಿಗೊಳಿಸಲಾಗಿದೆ. ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ ಯಾವುದೇ ಕಾನೂನು ಪ್ರಶ್ನಿತವಾದಲ್ಲಿ ಸಂವಿಧಾನವಿರೋಧಿ ಎಂಬ ಕಾರಣಕ್ಕಾಗಿ ನ್ಯಾಯಾಲಯದ ನಿರ್ಣಯದ ಮೂಲಕ ಮಾನ್ಯತೆ ಕಳೆದುಕೊಳ್ಳುತ್ತದೆ. ವಿವಿಧ ಮೂಲ ವಂಶಗಳು, ಮತಗಳು, ಭಾಷೆಗಳು ಬುಡಕಟ್ಟುಗಳು, ಸಾಂಸ್ಕøತಿಕ ವೈಶಿಷ್ಟ್ಯಗಳು, ಅಲ್ಪ ಸಂಖ್ಯಾತರು, ಜಾತೀಯ ಅಸಮಾನತೆಗಳು, ಪ್ರಾದೇಶಿಕ ವೈಶಿಷ್ಟ್ಯಗಳು, ಅಲ್ಪ ಸಂಖ್ಯಾತರು, ಜಾತೀಯ ಅಸಮಾನತೆಗಳು, ಪ್ರಾದೇಶಿಕ ಅಸಮಾನತೆಗಳು ಇತ್ಯಾದಿಗಳನ್ನು ಗಮನದಲ್ಲಿಟುಕೊಂಡು ಶಾಸಕಾಂಗ ಕಾನೂನುಗಳನ್ನು ರಚನೆ ಮಾಡಬೇಕಾಗುತ್ತದೆ. ಕಾನೂನುಗಳು ಪ್ರಗತಿಪರವಾಗಿದ್ದರೆ ಸಾಲದು. ನ್ಯಾಯವಿತರಣೆಯ ದೃಷ್ಟಿಯಿಂದ ಸಂವಿಧಾನ ಸರಿಯಾದ ನ್ಯಾಯಾಡಳಿತ ವ್ಯವಸ್ಥೆಯನ್ನು ಒದಗಿಸಿದೆ. ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಲಯಗಳು ಮತ್ತು ಇತರ ಅಧೀನ ನ್ಯಾಯಾಲಯಗಳ ವ್ಯವಸ್ಥೆ ಇದೆ. ಉಚ್ಚ ನ್ಯಾಯಾಲಯಗಳ ಇತಿಹಾಸವನ್ನು 1861ರ ಭಾರತದ ಉಚ್ಚ ನ್ಯಾಯಾಲಯಗಳ ಕಾನೂನಿಂದ ಆರಂಭಿಸಬಹುದು. 1911ರ ಭಾರತದ ಉಚ್ಚ ನ್ಯಾಯಾಲಯಗಳ ಕಾನೂನು, 1915ರ ಭಾರತ ಸರಕಾರದ ಬಗೆಗಿನ ಕಾನೂನು 1936ರ ಭಾರತ ಸರಕಾರದ ಬಗೆಗಿನ ಕಾನೂನು ಮತ್ತು ಭಾರತದ ಸಂವಿಧಾನದ ಉಪಬಂಧಗಳ ಮೂಲಕ ಉಚ್ಚ ನ್ಯಾಯಾಲಯಗಳ ವ್ಯವಸ್ಥೆಯಲ್ಲಿ ಆಗಾಗ್ಗೆ ಮಾರ್ಪಾಡುಗಳು ಆಗಿವೆ. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಮತ್ತು ಅವುಗಳ ಉಲ್ಲಂಘನೆ ಆದಾಗ ಪರಿಹಾರ ಒದಗಿಸಲು ಸಮರ್ಥವಾಗಿವೆ. ಅಪರಾಧದ ಪ್ರಕರಣಗಳನ್ನು ಮತ್ತು ಇತರ ವಿವಾದಗಳನ್ನು ಇತ್ಯರ್ಥಮಾಡಲು ಅಧಿಕಾರ ಹೊಂದಿವೆ. ಕಾನೂನುಗಳ ಮಾನ್ಯತೆಯನ್ನು ಘೋಷಿಸುವ ಮತ್ತು ಪರತಿಷೇಧ ಮಾಡುವ ಅಧಿಕಾರ ಮತ್ತು ನ್ಯಾಯಿಕ ಪುನರ್ವಿಲೋಕನದ ಅಧಿಕಾರಗಳು ಈ ನ್ಯಾಯಾಲಯಗಳಿಗಿವೆ. ಸಂವಿಧಾನದ ಪರಿಮಿತಿಯೊಳಗಿನ ನ್ಯಾಯಪಾರಮ್ಯ ಭಾರತೀಯ ಆಧುನಿಕ ನ್ಯಾಯದ ಒಂದು ವಿಶಿಷ್ಟ ಲಕ್ಷಣ. (ಎಲ್.ಎಸ್.ಜೆ.)