ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತೀಯ ಮೂರ್ತಿಶಿಲ್ಪ

ವಿಕಿಸೋರ್ಸ್ದಿಂದ

ಭಾರತೀಯ ಮೂರ್ತಿಶಿಲ್ಪ ಭಾರತದಲ್ಲಿ ದೇವಾಲಯ ಮತ್ತು ವಿಗ್ರಹಾರಾಧನೆಗಳ ಕಲ್ಪನೆ ಮೂಡಿದ ಮೇಲೆ ಶಿಲ್ಪಕಲೆಗೆ ವಿಶೇಷ ಪ್ರೋತ್ಸಾಹ, ಉತ್ತೇಜನ ದೊರೆತವು. ಇಲ್ಲಿಯ ಎಲ್ಲ ಕಲೆಗಳ ಅಡಿಪಾಯವೂ ಮೂಲತಃ ಧರ್ಮವೇ, ವಾಸ್ತುವಿದ್ಯೆಯನ್ನು ಸಾಮಾನ್ಯವಾಗಿ ಮೂರು ವಿಭಾಗಮಾಡುವ ರೂಢಿಯಿದೆ-ವಾಸ್ತು, ಶಿಲ್ಪ ಹಾಗೂ ಚಿತ್ರಸೂತ್ರ. ನೆಲೆಯ ಆಯ್ಕೆ, ಅದರ ಶುದ್ಧೀಕರಣ, ಸಾಮಗ್ರಿಸಂಚಯ ಮುಂತಾದ ವಿಷಯಗಳಿಗೆ ಸಂಬಂಧಿಸಿದುದು ವಾಸ್ತುಶಾಸ್ತ್ರ. ದೇವಾಲಯದ ಗೋಡೆಗಳ ಮೇಲೆ ವರ್ಣಚಿತ್ರಗಳನ್ನು ಬಿಡಿಸುವ ಕಲೆಯನ್ನು ಕುರಿತದ್ದು ಚಿತ್ರಸೂತ್ರ. ದೇವಾಲಯಗಳಲ್ಲಿ ಪೂಜೆಗೆ ಇರಿಸಬೇಕಾದ ಮೂರ್ತಿ, ಇತರೆಡೆಗಳಲ್ಲಿ ಕಡೆದಿರಸಬೇಕಾದ ಶಿಲ್ಪವಿವರಗಳನ್ನು ಕುರಿತದ್ದು ಶಿಲ್ಪಶಾಸ್ತ್ರ. ವರಾಹಮಿಹಿರನ ಬೃಹತ್‍ಸಂಹಿತೆ, ಶುಕ್ರನೀತಿ ಮತ್ಸ, ಅಗ್ನಿ ಹಾಗೂ ವಿಷ್ಣುಧರ್ಮೋತ್ತರ ಪುರಾಣಗಳು. ಮಾರ್ಕಂಡೇಯ ಮತವಾಸ್ತುಶಾಸ್ತ್ರ, ಮಯವಾಸ್ತು ಪ್ರತಿಮಾನಲಕ್ಷಣ, ಆಗಮಗಳು, ತಂತ್ರ ಗ್ರಂಥಗಳು ಮುಂತಾದವು ಭಾರತೀಯ ಶಿಲ್ಪಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ಕೃತಿಗಳು. ಅಷ್ಟೇನೂ ಪ್ರಾಚೀನಕೃತಿಯಲ್ಲವಾದರೂ ಯಾಜುಷಾಥರ್ವಣವೆಂದು ಪ್ರಸಿದ್ಧವಾಗಿರುವ ಮಹಾಶಿಲ್ಪೋಪನಿಷತ್ತು ಈಚಿನ ಸಾಂಪ್ರದಾಯಿಕ ಶಿಲ್ಪಿಗಳಿಗೆ ವೇದಸಮಾನವೆನಿಸಿದೆ.

ಭಾರತೀಯ ಶಿಲ್ಪ ಸಂಪತ್ತಿನ ಅಧಿಕ ಭಾಗವನ್ನು ಒಂದೆಡೆಯಲ್ಲಿ ನೋಡುವುದು ಸಾಧ್ಯವಿಲ್ಲ. ಕೆಲವು ಶಿಲ್ಪಗಳನ್ನು ದೇವಾಲಯ ಮಂದಿರಗಳಲ್ಲಿ. ಕೆಲವು ಶಿಲ್ಪಗಳನ್ನು ದೇಶೀಯ, ವಿದೇಶೀಯ ಸರ್ಕಾರಿ, ಅರೆಸರ್ಕಾರಿ, ಇಲ್ಲವೇ ಖಾಸಗಿ ವ್ಯಕ್ತಿಗಳ ಸಂಗ್ರಹಾಲಯಗಳಲ್ಲಿ ಕಾಣಬಹುದು. ಆದ್ದರಿಂದ ಭಾರತೀಯ ಶಿಲ್ಪಗಳ ಸಮಗ್ರ ಅಧ್ಯಯನ ಬಲು ಕಷ್ಟಸಾಧ್ಯವಾಗಿರುವುದರಿಂದ ಶಿಲ್ಪೇತಿಹಾಸದ ಒಂದು ಸ್ಧೂಲ ಸಮೀಕ್ಷೆಯನ್ನು ಕೊಡಲು, ಕಾಲಾನುಕ್ರಮದಲ್ಲಿ ಮತ್ತು ವಂಶಾನು ಕ್ರಮದಲ್ಲಿ ಶಿಲ್ಪಬೆಳೆವಣಿಗೆಯ ಪ್ರಮುಖ ಹಂತಗಳನ್ನು ಗುರುತಿಸಲು ಈ ಲೇಖನದಲ್ಲಿ ಪ್ರಯತ್ನಿಸಿದೆ. ಕ್ರಿ.ಪೂ. ಮೂರನೆಯ ಸಹಸ್ರಮಾನವ ಸೈಂಧವ ಸಂಸ್ಕøತಿಗೆ ಸೇರಿದ ಶಿಲ್ಪಗಳನ್ನು ಭಾರತದ ಅತಿಪ್ರಾಚೀನಶಿಲ್ಪಗಳೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚೆಗೆ ಎಚ್.ಡಿ. ಸಂಕಾಲಿಯಾ ಮತ್ತು ಎಂ.ಕೆ. ಧವಳಿ ಕರ್ ಎಂಬ ವಿದ್ವಾಂಸರು ಕುಲ್ಲಿ ಮತ್ತು ಝೋಬ್ ಎಂಬಲ್ಲಿ ಕಂಡು ಬಂದ ಪ್ರಾಗೈತಿಹಾಸಿಕ ಸಂಸ್ಕøತಿಗೆ ಸೇರಿದ ಮೃಣ್ಮಯ ಶಿಲ್ಪಗಳು ಇನ್ನೂ ಹಿಂದಿನವೆಂದು ಮತ್ತು ಈ ಶಿಲ್ಪಶೈಲಿಯನ್ನು ಸಿಂಧೂಜನರು ಇನ್ನಷ್ಟು ಉತ್ತಮಪಡಿಸಿದರೆಂದು ಅಭಿಪ್ರಾಯಪಟ್ಟಿದ್ದಾರೆ. ಸೈಂಧವ ಸಂಸ್ಕøತಿಯ ಶಿಲ್ಪಗಳು ಕಲೆಯ ಉಗಮದ ಹಂತವನ್ನು ಸೂಚಿಸದೆ ಪ್ರೌಢಹಂತವೊಂದನ್ನು ಪ್ರತಿನಿಧಿಸುವುದರಿಂದ ಹೀಗೆ ಅಭಿಪ್ರಾಯಪಡಲಾಗಿದೆ. ಹರಪ್ಪ ಮತ್ತು ಮೊಹೆಂಜೊದಾರೊಗಳಲ್ಲಿ ನಡೆಸಿದ ಉತ್ಖನನಗಳಲ್ಲಿ ದೊರೆತ ಶಿಲ್ಪವಸ್ತುಗಳ ಸಂಖ್ಯೆ ಹಾಗೂ ವೈವಿಧ್ಯ ಕಡಿಮೆ; ಸಿಂಧೂ ಜನರ ಭಾವಜೀವನವನ್ನು ಅರಿಯಲು ಈ ಸಾಕ್ಷ್ಯಗಳು ಸಾಕಾಗುವುದಿಲ್ಲ. ಈಗ ದೊರೆತಿರುವ ಮಾನವ ಮತ್ತು ಪ್ರಾಣಿಶಿಲ್ಪಗಳು ನಯಗಾರಿಕೆಯಲ್ಲಿ ಉನ್ನತಮಟ್ಟ ಸಾಧಿಸಿವೆ. ದೇಹದ ಸಪ್ರಮಾಣ, ಚಲನೆಯ ಪರಿಣಾಮಕಾರಿಭಂಗಿ ಇಲ್ಲಿಯ ಶಿಲ್ಪಗಳಲ್ಲಿ ಕಂಡುಬರುತ್ತದೆ. ಮೊಹೆಂಜೊದಾರೊದಲ್ಲಿ ದೊರೆತ ಎದೆಮಟ್ಟದ 'ಪುರೋಹಿತ ಶಿಲ್ಪ ಗಮನಾರ್ಹವಾದುದು, ಬಾಚಿದ ತಲೆ, ಕೊರೆದು ಗೆರೆಗೆರೆಯಾಗಿ ಬಿಡಿದಿದ ಗಡ್ಡಮೀಸೆ, ಮೂರೆಲೆ ಚಿತ್ತಾರದ ಉತ್ತರಿಯವುಳ್ಳ ಈ ಶಿಲ್ಪ ಎದ್ದು ಕಾಣುವಂಥದು. ಹರಪ್ಪದಲ್ಲಿ ದೊರೆತ ಶಿರರಹಿತ ಶಿಲ್ಪದಿಂದ ಆ ಕಾಲದ ಶಿಲ್ಪಿಗೆ ಮಾನವ ಶರೀರದ ಚೆಲುವು. ದೇಹರಚನೆಯ ಪ್ರಾಥಮಿಕ ಸಿದ್ಧಾಂತಗಳ ಪರಿಚಯವಿತ್ತೆನ್ನುವುದು ಸ್ಪಷ್ಟಪಡುತ್ತದೆ. ಬೂದು ಬಣ್ಣದ ಸುಣ್ಣಕಲ್ಲಿನಲ್ಲಿ ಕಡೆದ ನರ್ತನಶಿಲ್ಪದ ಬಾಗುಬಳುಕು ಸೊಗಸಾದ ನೃತ್ಯಭಂಗಿಯೊಂದನ್ನು ಸೂಚಿಸುತ್ತದೆ. ಪ್ರಾಣಿಶಿಲ್ಪಗಳಲ್ಲಿ ಬಿಡಿಸಿದ ದೇಹಲಕ್ಷಣಗಳನ್ನು ಗಮನಿಸಿದಾಗ ಮೆಚ್ಚುಗೆ ಮೂಡುತ್ತದೆ. ಕಂಬವೇರುತ್ತಿರುವ ಕೋತಿ, ಕಾಳುತಿನ್ನುತ್ತಿರುವ ಅಳಿಲು, ಗೂಳಿ, ಎಮ್ಮೆ, ನಾಯಿ, ಖಡ್ಗಮೃಗ, ಮೊಸಳೆ ಮುಂತಾದ ಪ್ರಾಣಿಶಿಲ್ಪಗಳಿಂದ ಸಿಂಧೂಜನರಿಗೆ ಪ್ರಾಣಿಗಳ ಗುಣಸ್ವಭಾವಗಳು ಸುಪರಿಚಿತವಾಗಿದ್ದುವೆಂದು ಗೊತ್ತಾಗುತ್ತದೆ. ಹಾಗೆಯೇ ಸಿಂಧೂಜನರ ಸುಡಾವೆ ಮಣ್ಣಿನ ಮುದ್ರೆಗಳ ಮೇಲಿನ ಕೆತ್ತನೆಗಳಿಂದ ಅವರಿಗೆ ಅಶ್ವತ್ಥವೃಕ್ಷ. ಪಶುಪತಿ, ವನದೆ ವತೆ ಹುಲಿ ಮುಂತಾದವುಗಳ ಬಗ್ಗೆ ವಿಶೇಷ ಗೌರವಾದರಗಳಿದ್ದುವೆಂದು ತಿಳಿಯುತ್ತದೆ. ಲಿಂಗಾಕಾರದ ಶಿಲೆಗಳು ಸಿಕ್ಕಿರುವುದರಿಂದ ಈ ಕಾಲದಲ್ಲಿ ಶಿವಲಿಂಗ ಆರಾಧನೆ ಇದ್ದಿರಬಹುದೆಂದು ಊಹಿಸಿದೆ. ಆಂತೆಯೇ ಮಾತೃದೇವತೆಯ ಆರಾಧನೆಯೂ ಇದ್ದಿರಬೇಕು. ಲೋಹ ಕರಗಿಸಿ ಎರಕಹೊಯ್ದು ಪ್ರತಿಮೆಮಾಡುವ ಕಲೆಯೂ ಸಿಂಧೂಜನರಿಗೆ ತಿಳಿದಿತ್ತು. ಇದಕ್ಕೆ ಸಾಕ್ಷಿಯಾಗಿ ಕಂಚಿನ ಕೆಲವು ಶಿಲ್ಪಗಳು ದೊರೆತಿವೆ. ಸುಮಾರು 168 ಸೆಂಮೀ ಎತ್ತರದ ಕಂಚಿನ ನರ್ತಕಿಶಿಲ ಸುಂದರವಾದುದು. ಕೃಶಾಂಗಿಯೊಬ್ಬಳ ನಗ್ನರೂಪದ ಶಿಲ್ಪವಿದು; ದೇಹಭಂಗಿ ಮೋಹಕವಾಗಿದೆ. ಸಿಂಧೂನಾಗರಿಕತೆಗೆ ಸಂಬಂಧಿಸಿದ ಶಿಲ್ಪವಸ್ತುಗಳು ಈಗ ವಿಶೇಷಾಗಿ ಭಾರತ, ಪಾಕಿಸ್ತಾನಗಳಲ್ಲಿಯ ವಸ್ತು ಸಂಗ್ರಹಾಲಯಗಳಲ್ಲಿವೆ.

ಆರ್ಯರು ನಿಸರ್ಗದ ಆರಾಧಕರು. ಅವರ ಸಾಹಿತ್ಯ, ಶಾಸ್ತ್ರ ಅಥವಾ ತತ್ತ್ವಜ್ಞಾನ ಉಳಿದುಬಂದಂತೆ ಶಿಲ್ಪ ಉಳಿದು ಬಂದಿಲ್ಲ. ವೇದವಾಙ್ಮಯದಲ್ಲಿ ಪ್ರತಿಮಾಪೂಜೆಯ ಉಲ್ಲೇಖವಿಲ್ಲ. ಆರ್ಯರ ಮಾನಸಿಕ ಸಂಸ್ಕಾರಕ್ಕೆ ಕಾರಣವಾದ ಮತಧರ್ಮಗಳು ಯಜ್ಞಯಾಗಾದಿ ಕರ್ಮಗಳಿಗೆ ಸೀಮಿತವಾದುದರಿಂದ ದೇಗುಲ ಮೂರ್ತಿಗಳ ಅವಶ್ಯಕತೆ ಅವರಿಗೆ ಉಂಟಾಗಲಿಲ್ಲವೇನೋ. ಒಂದು ವೇಳೆ ಅವರು ಶಿಲ್ಪ ನಿರ್ಮಿಸಿದ್ದರೂ ಶಿಲ್ಪ ಮಾಧ್ಯಮ ಬಹುಶಃ ಬೇಗ ನಶಿಸಿಹೋಗುವಂಥ ಮರಮಟ್ಟು ಆಗಿದ್ದಿರಬಹುದು. ಕ್ರಿ.ಪೂ. 7-8ನೆಯ ಶತಮಾನದ ಪ್ರಾಣಿನಿ ತನ್ನ 'ಅಷ್ಟಾಧ್ಯಾಯೀಯಲ್ಲಿ ವಿಕ್ರಯನಿಷಿದ್ಧ ದೇವತಾಪ್ರತಿಕೃತಿಗಳನ್ನು ಉಲ್ಲೇಖಿಸಿರುವುದು ಗಮನಾರ್ಹ, ಕ್ರಿ.ಪೂ. 2ನೆಯ ಶತಮಾನದ ಪತಂಜಲಿ ಶಿವ, ಸ್ಕಂದ ಮುಂತಾದ ಪ್ರತಿಕೃತಿಗಳನ್ನು ಉಲ್ಲೇಖಿಸಿದ್ದಾನೆ.

ಭಾರತೀಯ ಶಿಲ್ಪೇತಿಹಾಸದಲ್ಲಿ ಮೌರ್ಯಕಾಲ ಒಂದು ಹೊಸ ಅಧ್ಯಾಯ ಆರಂಭಿಸಿತು. ಇತಿಹಾಸೋದಯದ ತರುವಾಯ ದೊರೆತ ಪ್ರಾಚೀನತಮ ಶಿಲ್ಪಗಳು ಈ ಕಾಲದವು. ಅಶೋಕಪೂರ್ವಕಾಲದಲ್ಲಿ ಕಟ್ಟಡ ಮತ್ತು ಶಿಲ್ಪರಚನೆಗೆ ಮರ ಮುಂತಾದ ಬೇಗ ನಶಿಸಿಹೋಗುವ ಸಾಮಗ್ರಿಗಳನ್ನು ಬಳಸುತ್ತಿದ್ದರು. ಅಶೋಕ ಶೀಲಾಮಾಧ್ಯಮಕ್ಕೆ ಆದ್ಯತೆ ನೀಡಿದುದು ಗಮನಾರ್ಹ ಸಂಗತಿ. ಇವನ ಕಾಲದ ಮೂವತ್ತಕ್ಕೂ ಹೆಚ್ಚಿನ ಸ್ತಂಭಗಳಲ್ಲಿ ಹತ್ತಕ್ಕೂ ಹೆಚ್ಚಿನವು ಸುರಕ್ಷಿತ ಸ್ಥಿತಿಯಲ್ಲಿದ್ದು ಆ ಕಾಲದ ತಂತ್ರಜ್ಞರ ಹಾಗೂ ಶಿಲ್ಪಿಗಳ ಮಹಾನ್ ಪ್ರತಿಭೆ ಕೌಶಲಗಳಿಗೆ ಸಾಕ್ಷಿಯಾಗಿವೆ. ಇವುಗಳ ನುಣುಪು, ಹೊಳಪು ವಿಶಿಷ್ಟವಾಗಿದ್ದು ಲೋಹದ ಸ್ತಂಭಗಳೋ ಎನ್ನುವ ಭ್ರಮೆಮೂಡಿಸುತ್ತವೆ. ಫಾಹಿಯಾನ್ ಮತ್ತಿತರು ಸಾರನಾಥದ ಸ್ತಂಭವನ್ನು ದೇವನಿರ್ಮಿತವೆಂದು ಭಾವಿಸಿದ್ದರು. ನುಣುಪುಗೊಳಿಸುವ ಕಲೆಯನ್ನು ಭಾರತೀಯರು ಪರ್ಷಿಯನ್ನರಿಂದ ಕಲಿತರೆಂಬ ಅಭಿಪ್ರಾಯವಿದೆ. ಈ ಸ್ತಂಭಗಳನ್ನು ದಿಂಡು ಮತ್ತು ಬೋದಿಗೆಗಳೆಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಬೋದಿಗೆಯನ್ನು ಮೂರು ಉಪವಿಭಾಗಗಳಾಗಿ ವಿಂಗಡಿಸಬಹುದು : ಮೇಲ್ಭಾಗದ ಪ್ರಾಣಿಶಿಲ್ಪ-ಸಿಂಹ, ವೃಷಭ, ಕುದುರೆ ಅಥವಾ ಆನೆ; ಅದರ ಕೆಳಗಿನ ವರ್ತುಲ ಇಲ್ಲವೆ ಚತುರಸ್ರ ಆಕಾರದ, ಪ್ರಾಣಿಶಿಲ್ಪ ಅಥವಾ ಲತಾವಿನ್ಯಾಸಗಳಿಂದ ಅಲಂಕೃತವಾದ ಕಲ್ಲು; ಅದರ ಕೆಳಗೆ ತಲೆಕೆಳಗಾಗಿ ನಿಲ್ಲಿಸಿದ ಘಂಟಾಕೃತಿಯ ಪೀಠ. ಮೌರ್ಯ ಸ್ತಂಭಗಳ ಮೇಲಿನ ಶಿಲ್ಪಗಳೇ ಆ ಕಾಲದ ಮುಖ್ಯ ಶಿಲ್ಪಾವಿಶೇಷಗಳು. ಬಸ್ರಾಬಖಿರಾ ಸ್ತಂಭದ ಮೇಲಿನ ಸಿಂಹ, ರಾಮಪೂರ್ವ ಸ್ತಂಭದ ವೃಷಭ, ಲೌರಿಯ ನಂದನಗಢ ಸ್ತಂಭದ ಸಿಂಹ ಮುಂತಾದವು ಆ ಕಾಲದ ಆರಂಭದ ಮಾದರಿಗಳಾದರೆ ರಾಮಪೂರ್ವ, ಸಾರನಾಥ ಮತ್ತು ಸಾಂಚಿ ಸ್ತಂಭಗಳ ಮೇಲಿನ ಸಿಂಹಗಳು ಮುಂದಿನ ವಿಕಾಸದ ಹಂತವನ್ನು ಪ್ರತಿನಿಧಿಸುತ್ತವೆ. ಈ ಶಿಲ್ಪಗಳ ಕೆತ್ತನೆಯಲ್ಲಿಯ ಜೀವಂತಿಕೆ, ಸಹಜ ಸೂಕ್ಷ್ಮತೆಗಳು ಗಮನಾರ್ಹ.

ಮೌರ್ಯಕಾಲದಲ್ಲಿ ಶಿಲ್ಪಕಲೆಗೆ ರಾಜಾಶ್ರಯದಂತೆ ಜನಾಶ್ರಯವೂ ಇತ್ತೆನ್ನಲು ಹಲವು ಯಕ್ಷಯಕ್ಷಿಯರ ಮೂರ್ತಿಗಳು ಸಾಕ್ಷಿಯಾಗಿವೆ. ಸಾರನಾಥದಲ್ಲಿ ದೊರೆತ ಶಿರಶಿಲ್ಪಗಳು, ಪಟ್ಟಣ ವಸ್ತುಸಂಗ್ರಹಾಲಯದಲ್ಲಿರುವ ಯಕ್ಷಶಿಲ್ಪಗಳು, ಕಲ್ಕತ್ತದ ಭಾರತೀಯ ವಸ್ತುಸಂಗ್ರಹಾಲಯದಲ್ಲಿರುವ ಬೆಸನಗರದ ಯಕ್ಷಿ. ಮಥುರಾ ವಸ್ತುಸಂಗ್ರಹಾಲಯದಲ್ಲಿರುವ ಪರ್ಖಮ್ ಯಕ್ಷ ಮುಂತಾದವು ಸೊಗಸಾಗಿವೆ. ತುಂಬು ಎದೆ, ಕೃಶ ನಡು ಮತ್ತು ವಿಶಾಲ ಜಘನದಿಂದ ಕೂಡಿದ ದೀದರ್‍ಗಂಜಿನ ಚಾಮರಧಾರಣಿ ಸ್ತ್ರೀ ಸೌಂದರ್ಯದ ಲಾವಣ್ಯಮಾಧುರ್ಯಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಏಕಶಿಲಾಮೂರ್ತಿ. ಧೌಲಿಯ ಬಂಡೆಯಮೇಲೆ ಬಿಡಿಸಿದ ಆನೆಯ ಉಬ್ಬುಶಿಲ್ಪ ಈ ಕಾಲದ ಇನ್ನೊಂದು ರಮಣೀಯ ಶಿಲ್ಪ. ಸಾರನಾಥದ ಶಿರಶಿಲ್ಪ ಉಬ್ಬಿದ ಹಣೆ, ಇಳುಕಲು ಕಪೋಲ ಗಲ್ಲ. ಇಳಿಬಿದ್ದಮೀಸೆಗಳಿಂದ ಕೂಡಿದೆ. ದೇಶೀಯ ಕಲ್ಪನೆಗಳಿಗೆ ವಿದೇಶೀ ಅಂಶಗಳನ್ನು ಬೆರೆಸಲು ಹಿಂಜರಿಯದ ಮೌರ್ಯಶಿಲ್ಪಶೈಲಿ ತರುವಾಯದ ಬೆಳೆವಣಿಗೆಗೆ ಭದ್ರಬುನಾದಿ ಹಾಕಿತು. ಪ್ಯಾರಿಸ್ಸಿನ ಮ್ಯೂಸಿಗಿಮೆಯಲ್ಲಿರುವ ಸುಡಾವೆಮಣ್ಣಿನ ಮಾತೃದೇವತೆಯ ಗೊಂಬೆ ಗಮನಾರ್ಹವಾದುದು. ಮೌರ್ಯ ಸಾಮ್ರಾಜ್ಯದ ಪತನಾನಂತರ ಉತ್ತರದಲ್ಲಿ ಶುಂಗರು ಹಾಗೂ ದಕ್ಷಿಣದಲ್ಲಿ ಸಾತವಾಹನರು ಅಧಿಕಾರಕ್ಕೆ ಬಂದರು. ಇವರ ಅಳ್ವಿಕೆಯ ಕಾಲದಲ್ಲಿ ಶಿಲ್ಪಕಲೆಗೆ ಹೆಚ್ಚಿನ ಉತ್ತೇಜನ ಲಭಿಸಿತು. ಮೌರ್ಯ ಕಲೆಯಲ್ಲಿ ಜನ ಸಾಮಾನ್ಯರ ಸಂಪ್ರದಾಯಗಳಿಗೆ ಪ್ರಾಶಸ್ತ್ಯವಿರಲಿಲ್ಲ. ಆದರೆ ಶುಂಗರಕಾಲದ ಶಿಲ್ಪಿ ಜನಜೀವನವನ್ನು ವಾಸ್ತವಿಕ ರೀತಿಯಲ್ಲಿ ಚಿತ್ರಿಸಿದ. ಬೌದ್ಧಧರ್ಮ ಈ ಕಾಲದ ಕಲೆಗೆ ಜಾಲಕ ಶಕ್ತಿಯಾಗಿತ್ತು. ಅದೇ ಈ ಕಾಲದ ಶಿಲ್ಪಕಲೆಯ ಬಿಣ್ಗುಂಡು (ಷಿಂಟ್ ಅ್ಯಂಕರ್) ಕೂಡ. ಈ ಕಾಲದ ಶಿಲ್ಪಿಯ ಪ್ರಧಾನ ಧ್ಯೇಯ ಬುದ್ಧನ ಜೀವನದ ವಿವಿಧ ಹಂತಗಳನ್ನು ಮತ್ತು ಬೌದ್ಧಧರ್ಮದ ಸಿದ್ಧಾಂತಗಳನ್ನು ಪರಿಚಯಿಸುವುದಾಗಿತ್ತು. ಮಧ್ಯಭಾರತದ ಭಾರ್ಹುತ್ ಸ್ತೂಪದ ಕಟಾಂಜನ ಶಿಲ್ಪಗಳಲ್ಲಿ ಈ ಅಂಶವನ್ನು ಗುರುತಿಸಬಹುದು. ದುರ್ದೈವದಿಂದ ಈ ಸ್ತೂಪ ಪಾಳುಸ್ಥಿತಿಯಲ್ಲಿದೆ. ಇದರ ಕಟಾಂಜನ, ತೋರಣ ದ್ವಾರಗಳ ಅವಶೇಷಗಳನ್ನು ಸಂಗ್ರಹಿಸಿ ಕಲ್ಕತ್ತದ ಭಾರತೀಯ ವಸ್ತುಸಂಗ್ರಹಾಲಯದಲ್ಲಿಡಲಾಗಿದೆ. ಹಲವಾರು ಶಿಲ್ಪಭಾಗಗಳು ಅಮೆರಿಕ ಮತ್ತು ಐರೋಪ್ಯದೇಶಗಳ ವಸ್ತುಸಂಗ್ರಹಾಲಯಗಳನ್ನೂ ಖಾಸಗಿ ಸಂಗ್ರಹಗಳನ್ನೂ ಸೇರಿವೆ. ತೋರಣ ಹಾಗೂ ಕಟಾಂಜನಗಳ ಮೇಲಿನ ಶಿಲ್ಪ ಫಲಕಗಳು ಜೀವನ ವಿಸ್ತಾರದ ಸೊಗಸಾದ ಒಂದು ಪಕ್ಷಿನೋಟವನ್ನು ಒದಗಿಸುತ್ತವೆ. ಫಲಕಗಳ ಕೆಳಗೆ ಕಂಡರಿಸಿದ ಚುಟುಕು ಶಾಸಗಳಿಂದ ಶಿಲ್ಪಸನ್ನಿವೇಶಗಳನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗಿದೆ. ಯಕ್ಷಯಕ್ಷಿ, ನಾಗನಾಗಿಣಿ, ಪಶುಪಕ್ಷಿ. ವನರಾಜ ಶಿಲ್ಪಗಳು ಗಮನಾರ್ಹವಾಗಿವೆ. ಪುಷ್ಪಲತಾವಿನ್ಯಾಸ ಅಲಂಕರಣಗಳು ಸೂಕ್ಷ್ಮವಾಗಿಯೂ ಸಂಕೀರ್ಣವಾಗಿಯೂ ಇವೆ. ಇತರ ಶಿಲ್ಪವಸ್ತುಗಳಲ್ಲಿ ದೋಣಿ, ಅಶ್ವರಥ, ಎತ್ತಿನಗಾಡಿ, ರಾಜಲಾಂಛನ ಧ್ವಜ, ವಾದ್ಯಗಳು ಮುಂತಾದವು ಸೇರಿವೆ. ಪಶುಪಕ್ಷಿಗಳ ಗುಣಸ್ವಭಾವಗಳನ್ನು ಈ ಕಾಲದ ಶಿಲ್ಪಿ ಚೆನ್ನಾಗಿ ಬಲ್ಲವನಾಗಿದ್ದ ಭಾರ್ಹುತ್‍ನ ಶಿಲ್ಪಗಳಲ್ಲಿ ಬೋಧಿಸತ್ತ್ವನ ಸಹನೆ ಅನುಕಂಪಗಳು ಪ್ರಧಾನವಾಗಿ ಬಿಂಬಿತವಾಗಿವೆ. ಆತನನ್ನು ಪ್ರತ್ಯಕ್ಷವಾಗಿ ತೋರಿಸದೆ ಪಾದ, ಪುಣ್ಯವೃಕ್ಷ ಛತ್ರಿ, ಪೀಠ ಮುಂತಾದ ಸಂಕೇತಗಳಿಂದ ಆತನ ಉಪಸ್ಥಿತಿಯ ಅನುಭವ ನೋಡುಗರಿಗೆ ಉಂಟಾಗುವಂತೆ ಮಾಡಿರುವುದು ಇಲ್ಲಿಯ ವೈಶಿಷ್ಟ್ಯ. ಸರಳವಾದರೂ ಪ್ರಭಾವಶಾಲಿಯಾದ ಈ ಶಿಲ್ಪಗಳು ನಯನಾಜೂಕುಗಳಿಂದ ಕೂಡಿದ್ದು ಚೇತೋಹಾರಿಯಾಗಿದೆ. ಶಿಲ್ಪಗಳ ಮೇಲಿನ ಅಲಂಕರಣ ಸೂಕ್ಷ್ಮತೆ ಗುಡಿಗಾರನ ಅಥವಾ ದಂತಕರ್ಮಿಯ ಕುಸುರಿ ಕೆಲಸಕ್ಕೆ ಸಾಟಿಯಾಗಿದೆ. ದ್ರೋಹದಕ್ರಿಯೆ ತೋರುವ ಸ್ತ್ರೀ ಶಿಲ್ಪಗಳು- ಸಾಮಾನ್ಯವಾಗಿ ಶಾಲವೃಕ್ಷವನ್ನು ತಬ್ಬಿನಿಂತಿರುವ ಸ್ತ್ರೀ-ಕಟಾಂಜನದ ಅಲಂಕರಣದಲ್ಲಿ ಕಂಡುಬರುತ್ತದೆ. ಚುಲಕೊರದೇವತೆ ಸಿರಿಮದೇವತೆ ಮುಂತಾದವು ಅಚ್ಚುಕಟ್ಟಾಗಿ ಕಡೆದ ಸಮಪ್ರಮಾಣದ ಶಿಲ್ಪಗಳು. ಬೋದ್‍ಗಯಾ ಅಥವಾ ಬುದ್ಧಗಯಾದ ಶಿಲ್ಪಿತ ಕಟಾಂಜನಗಳು ಶುಂಗ ಶಿಲ್ಪಕಲೆಯ ಮುಂದಿನ ಹಂತವನ್ನು ಸೂಚಿಸುತ್ತವೆ. ಇಲ್ಲಿಯ ಕಟಾಂಜನದ ಒಳಭಾಗ ಆನೆ, ಜಿಂಕೆ, ವೃಷಭ, ಹಾರುವ ಕುದುರೆ, ಮಕರ ಮುಂತಾದ ಶಿಲ್ಪಗಳಿಂದ ಅಲಂಕೃತವಾಗಿದೆ. ನಿತ್ಯಜೀವನಕ್ಕೆ ಸಂಬಂಧಿಸಿದೆ ದೃಶ್ಯಗಳೂ ಇಲ್ಲಿವೆ. ಸೊಗಸಾಗಿ ವಿನ್ಯಾಸಮಾಡಿ ಅಪಾರ ತಾಳ್ಮೆಯಿಂದ ಕಂಡರಿಸಿದ ಸೂಕ್ಷ್ಮ ಕೆತ್ತನೆಗಳಿವು.

ಸಾಂಚಿಯ ಸ್ತೂಪ ಪ್ರಾಚೀನ ಬೌದ್ಧಸ್ಮಾರಕಗಳಲ್ಲೇ ಆತ್ಯುತ್ತಮವಾದುದು. ನಾಲ್ಕುದಿಕ್ಕಿನಲ್ಲೂ ನಿಲ್ಲಿಸಿದ ತೋರಣದ್ವಾರಗಳು ಇಲ್ಲಿಯ ವೈಶಿಷ್ಟ್ಯ. ಇವುಗಳಲ್ಲಿ ಉತ್ತರದ ತೋರಣದ್ವಾರ ಸುರಕ್ಷಿತವಾಗಿದ್ದು ಅಲಂಕೃತ ಶಿಲ್ಪಗಳಲ್ಲಿ ಹಲವನ್ನು ಉಳಿಸಿಕೊಂಡಿದೆ. ಈ ತೋರಣಗಳ ಮೇಲೆ ಸಮೃದ್ಧವಾಗಿ ಮತ್ತು ಸೂಕ್ಷ್ಮವಾಗಿ ಶಿಲ್ಪಿಸಿದೆ; ಜಾತಕ ಕಥೆಗಳು ಹಾಗೂ ಬುದ್ಧನ ಜೀವತಕ್ಕೆ ಸಂಬಂಧಿಸಿದ ಘಟನೆಗಳು ಚಿತ್ರಿತವಾಗಿವೆ. ಭಾರತೀಯ ಜೀವನ ವಿಧಾನ ಹಾಗು ಚಿಂತನೆಗಳು ಸೊಗಸಾದ ರೀತಿಯಲ್ಲಿ ನಿರೂಪಿತವಾಗಿವೆ. ದೇವದೇವತೆ, ಮಾನವ ಮತ್ತು ಪ್ರಾಣಿ ಶಿಲ್ಪಗಳು ತುಂಬು ಓಜಸ್ಸಿನಿಂದ ಮತ್ತು ಮನಮುಟ್ಟುವ ತೀವ್ರತೆಯಿಂದ ಕೂಡಿವೆ. ಸೌಂದರ್ಯ, ಲಾಲಿತ್ಯ ಮತ್ತು ಸುಸಾಂಗತ್ಯದ ದೃಷ್ಟಿಯಿಂದ ಭಾರ್ಹುತ್ ಶಿಲ್ಪಗಳಿಗಿಂತ ಇಲ್ಲಿಯವು ಹೆಚ್ಚು ಪರಿಣಾಮಕಾರಿಯಾಗಿವೆ.

ಇದೇ ಕಾಲದಲ್ಲಿ ಭಾರತದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಕಲಾಚಟುವಟಿಕೆಗಳು ನಡೆದುವು. ಗುಹಾಂತರ್ಗತ ಚೈತ್ಯವಿಹಾರಗಳು ನಿರ್ಮಿತವಾದುವು. ಭಾಜಾ, ನಾನಾಘಾಟ್, ಪಿತಲ್ಖೋರ, ಬೇಡ್ಸಿ, ನಾಸಿಕ, ಕಾರ್ಲಾ, ಕನ್ಹೇರಿ, ಕೊಂಡಾನ್ ಮುಂತಾದವು ಶಿಲ್ಪದೃಷ್ಟಿಯಿಂದ ಗಮನಾರ್ಹ, ಕಳಿಂಗದ ಪ್ರಾಚೀನ ಶಿಲ್ಪಭಂಡಾರವೆನಿಸುವ ಗುಹಾಲಯಗಳು ಖಾಂಡಗಿರಿ ಹಾಗೂ ಉದಯಗಿರಿಗಳಲ್ಲಿವೆ. ಇವುಗಳಲ್ಲಿಯ ಬ್ರಾಹ್ಮಣ, ಬೌದ್ಧ ಹಾಗೂ ಜೈನ ಕಥಾನಕಗಳ ಭಿತ್ತಿಶಿಲ್ಪಗಳು ಮನೋಹರವಾಗಿವೆ. ಆ ಕಾಲದ ಅರಣ್ಯಜೀವನವನನ್ನೂ ಮೃಗಯಾವಿಹಾರದಂಥ ಕ್ರಿಡಾವಿನೋದಗಳನ್ನೂ ಇಲ್ಲಿ ಚಿತ್ರಿಸಿದೆ. ಮುಮ್ಮುಖ, ಹಿಮ್ಮುಖ ಹಾಗೂ ಪಾಶ್ರ್ವಕೆತ್ತನೆಗಳಲ್ಲಿ ಇಲ್ಲಿಯ ಶಿಲ್ಪಿ ಹೆಚ್ಚು ಪ್ರಾವೀಣ್ಯ ಸಾಧಿಸಿದ್ದ. ಸುಲಭ ಸರಳ ಶಿಲ್ಪಭಂಗಿಗಳು ಸೊಬಗಿನಿಂದ ಕೂಡಿವೆ. ದುಃಖ, ನೋವು, ಸಂತೋಷ, ಭಯ ಮುಂತಾದ ರಸಭಾವಗಳು ಪರಿಣಾಮಕಾರಿಯಾಗಿ ನಿರೂಪಿತವಾಗಿವೆ ಖಾಲಿ ಬೋಗುಣಿಯನ್ನು ಎರಡು ಕೈಗಳಿಂದಲೂ ತಲೆಯ ಮೇಲೆತ್ತಿ ಹಿಡಿದಿರುವ, ಸಂಭ್ರಮೋನ್ಮತ್ತ ಪಿತಲ್ಖೋರ ಯಕ್ಷಶಿಲ್ಪ ಸುಪ್ರಸಿದ್ಧವಾದುದು.

ಕುಷಾಣ ಅರಸರ ಕಾಲದಲ್ಲಿ ಮಥುರಾ ಮತ್ತು ಗಾಂಧಾರ ಶೈಲಿಯ ಶಿಲ್ಪಗಳು ರೂಪಿತವಾದುವು. ಮಥುರಾ ಶೈಲಿಯ ಶಿಲ್ಪವನ್ನು ಅದರಲ್ಲಿ ಬಳಸಿದ ಸಾಮಗ್ರಿಯಿಂದಲೇ ಗುರುತಿಸಬಹುದು. ಶಿಲ್ಪಮಾಧ್ಯಮಕ್ಕೆ ಚುಕ್ಕೆಚುಕ್ಕೆಯಿಂದ ಕೂಡಿದ ಕೆಂಪು ಮರಳುಕಲ್ಲು ಬಳಸಲಾಗಿದೆ. ಕಂಕಾಲಿತಿ ಲಾ ಮತ್ತು ಭೂತೇಶ್ವರಗಳಲ್ಲಿದ್ದ ಸ್ತೂಪಗಳು ಈಗ ನಾಶವಾಗಿದ್ದರೂ ಇವುಗಳ ಅನೇಕ ಭಾಗಗಳು ಉಳಿದುಬಂದಿವೆ. ಸ್ತಂಭಗಳ ಮೇಲಿನ ಶಾಲಭಂಜಿಕಾ ಪುತ್ತಳಿಗಳು ಆತ್ಯಂತ ನಾಜೂಕಿನಿಂದ ಕಡೆದ ಶಿಲ್ಪಗಳು. ದೋಹದ ನಿರತ ಯುವತಿ ಹೂ ಕೊಯ್ಯುತ್ತಿರುವ ಬಾಲಿಕೆಯರು. ಪಕ್ಷಿಗಳೊಡನೆ ಆಡುತ್ತಿರುವ ತರುಣಿಯರು (ಉದಾಹರಣೆಗೆ ಶುಕಭಾಷಿಣಿ, ಹಂಸವಿನೋದಿನಿ) ಮುಂತಾದ ಶಿಲ್ಪಗಳು ಬೆಡಗು ಬಿನ್ನಾಣಗಳಿಂದ ಕೂಡಿವೆ. ಸ್ನಾನಮಾಡಿದ ತರುಣಿಯೊಬ್ಬಳು ಒದ್ದೆಕೇಶರಾಶಿಯನ್ನು ಹಿಂಡುತ್ತಿರುವಾಗ ಬೀಳುವ ನೀರನ್ನು ಕುಡಿಯಲು ಬಾಯ್ದೆರದ ಪಕ್ಷಿ ಶಿಲ್ಪ ಆತ್ಯಂತ ಮನೋಹರವಾಗಿದೆ. ಮಥುರಾಶಿಲ್ಪಕ್ಕೆ ಆಧಾರವಾದದ್ದು ಜನಪದ ಕಲೆ; ಮೃಣ್ಮಯ ಮಾದರೆ ಶಿಲ್ಪಗಳೇ ಇದರ ತಯಾರಿಕಾ ತಂತ್ರಕ್ಕೆ ಆಧಾರ. ವೈಯಾರದಿಂದ ಕೂಡಿದ ರಮಣಿಯರು, ಗಂಭೀರ ಭಾವದ ಜೈನತೀರ್ಥಂಕರರು, ಬುದ್ಧಬೋಧಿಸತ್ತ್ವರನ್ನು ಮಥುರಾ ಶಿಲ್ಪಶೈಲಿಯಲ್ಲಿ ಹೆಚ್ಚಾಗಿ ಕಾಣಬಹುದು. ಬ್ರಹ್ಮ, ಸೂರ್ಯ, ವಿಷ್ಣು, ಶಿವ, ಮಹಿಷಾಸುರಮರ್ದಿನಿ ಮೊದಲಾದ ಮೂರ್ತಿಗಳೂ ಈ ಶೈಲಿಯಲ್ಲಿ ನಿರ್ಮಿತವಾಗಿವೆ, ಆಫ್‍ಘಾನಿಸ್ತಾನದ ಬೆಗ್ರಾಮ್ ಹಾಗೂ ಇಟಲಿಯ ಪಾಂಪೆಯಲ್ಲಿ ದೊರೆತ ತಾಮ್ರ ಮತ್ತು ದಂತದ ಕೆತ್ತನೆಯ ಕೃತಿಗಳು ಈ ಶಿಲ್ಪಶೈಲಿಯವೆಂದು ವಿದ್ವಾಂಸರ ಮತ. ಆರಂಭಕಾಲದ ವಿಗ್ರಹಗಳಲ್ಲಿ ಮುಖ್ಯಶಿಲ್ಪವನ್ನು ದೊಡ್ಡ ಆಕಾರದಲ್ಲೂ ಪರಿವಾರದ ಶಿಲ್ಪಗಳನ್ನು ಸಣ್ಣ ಪ್ರಮಾಣದಲ್ಲಿಯೂ ಕಂಡರಿಸುತ್ತಿದ್ದರು. ಮಥುರಾ ಶಿಲ್ಪಿಗಳ ದೊಡ್ಡ ಸಾಧನೆ ಎಂದರೆ ಹೆಚ್ಚು ಭಾರತೀಯವೆನಿಸುವ ಬುದ್ಧ ಬೋಧಿಸತ್ತ್ವ ಪ್ರತಿಮೆಗಳು ಆದರೂ ಈ ಶಿಲ್ಪಗಳಲ್ಲಿರಬೇಕಾಗಿದ್ದ ಸ್ನಿಗ್ದತೆ ಮತ್ತು ದೈವೀ ಭಾವನೆಗಳು ಪೇಲವವಾಗಿವ. ಕುಷಾಣ ಅರಸರ ಪ್ರತಿಮೆಗಳು ಈ ಶೈಲಿಗೆ ಸೇರಿದರೂ ಉಡುಗೆತೊಡುಗೆಗಳ ದೃಷ್ಟಿಯಿಂದ ಮಧ್ಯ ಏಷ್ಯದ ಶಕ ಶಿಲ್ಪಿಗಳ ನಿರ್ಮಾಣವಿರಬೇಕೆಂದು ನಿಹಾರರಂಜನರಾಯ್ ಅಭಿಪ್ರಾಯ ಪಡುತ್ತಾರೆ. ಮಥುರಾ ವಸ್ತು ಸಂಗ್ರಹಾಲಯದಲ್ಲಿರುವ ಕನಿಷ್ಕನ ಶಿರರಹಿತ ಶಿಲ್ಪ ಶಾಸನಸಹಿತವಾಗಿದೆ. ಗಾಂಧಾರ ಕಲಾಸಂಪ್ರದಾಯದ ಶಿಲ್ಪಗಳು ತಕ್ಷಶಿಲೆ, ಹಡ್ಡ, ಜಾರ್ಸದಾ ಮುಂತಾದ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಭಿಸಿವೆ. ವಾಯುವ್ಯ ಭಾರತದಲ್ಲಿಯ ಸಂಸ್ಕøತಿಗಳ ಸಂಕರ ಈ ಶೈಲಿಯ ರೂಪಣೆಯಲ್ಲಿ ಪ್ರಧಾನ ಪಾತ್ರವಹಿಸಿದೆ. ಆದ್ದರಿಂದ ವಸ್ತು ಭಾರತೀಯವಾದರೂ ತಂತ್ರ ವಿದೇಶೀಯವಾಗಿದೆ. ಹೃದಯ ಭಾರತೀಯವಾದರೂ ಶಿಲ್ಪಿಯ ಹಸ್ತ ಗ್ರಿಕೋರೋಮನದು; ಇರಾನಿ ಅಂಶಗಳೂ ಬೆರೆತಿರುವುದುಂಟು. ಗಾಂಧಾರ ಶಿಲ್ಪಗಳಲ್ಲಿ ಹೆಚ್ಚಿನವು ಬುದ್ಧ ಬೋಧಿಸತ್ತ್ವ ಮೂರ್ತಿಗಳು, ಸ್ತೂಪಗಳನ್ನು ಅಲಂಕರಿಸಲು ಬಳಸಿದ ಬುದ್ಧನ ಜೀವಿತ ಕಥೆಗಳು ಹಾಗೂ ಜಾತಕ ಕಥೆಗಳನ್ನು ಕಂಡರಿಸಿದ ಅರೆಯುಬ್ಬು ಶಿಲ್ಪಗಳು. ಧ್ಯಾನಾಸಕ್ತಿ ಅಥವಾ ಅಭಯ ಭಂಗಿಯ ಬುದ್ಧನ ಮುಖಭಾವ, ದೈಹಿಕ ಪ್ರಮಾಣಗಳು ಗ್ರೀಕ್ ಶಿಲ್ಪಗಳನ್ನು ಹೋಲುತ್ತವೆ. ಕೆಲವೊಮ್ಮೆ ಬುದ್ಧ ಮೂರ್ತಿಗಳು ಬಲುಮಟ್ಟಿಗೆ ಗ್ರೀಕ್ ಅಪೋಲೋ ಶಿಲ್ಪವನ್ನು ಹೋಲುವುದೂ ಉಂಟು. ಇಲಿ ಭಾರತೀಯ ಕಲೆಯ ಆದರ್ಶವಾದ ಅಂತಃಶಕ್ತಿಯ ಅಭಿವ್ಯಕ್ತಿಗಿಂತ ಬಾಹ್ಯಸೌಂದರ್ಯಕ್ಕೆ ಆದ್ಯತೆ ಲಭಿಸಿದೆ. ಮೀಸೆ ಇರುವ ಬುದ್ಧ ಶಿಲ್ಪ ಭಾರತೀಯವೆನಿಸಲಾರದು. ಕಥಾನಕಗಳ ಉಬ್ಬು ಕೆತ್ತನೆಗಳಲ್ಲಿ ನಿರೂಪಿತವಾಗಿರುವ ಪಾತ್ರಗಳು ಪರಕೀಯವೆನ್ನಿಸುತ್ತವೆ. ಇಂದ್ರ, ಬ್ರಹ್ಮ, ಮಾಯಾದೇವಿ, ಯಶೋಧರ ಮೊದಲಾದವರೆಲ್ಲ ಗ್ರೀಕ್ ದೇವತೆಗಳ ಪ್ರತಿಕೃತಿಗಳಂತೆ ಕಾಣುತ್ತಾರೆ. ಅಲ್ಲಲ್ಲಿ ಕಂಡು ಬರುವ ನಾನಿ ದೇವತೆ, ರೆಕ್ಕೆಯುಳ್ಳ ಸಿಂಹ, ಬೆನ್ನಿಗೆ ಬೆನ್ನು ಕೂಡಿಸಿದ ಸಿಂಹ ಅಥವಾ ವೃಷಭ ಶಿಲ್ಪ ಇರುವ ಬೋದಿಗೆಯ ಸ್ತಂಭಗಳು, ನರಶಿರಶಿಲ್ಪಗಳು ಮುಂತಾದವು ಇರಾನಿ ಪ್ರಭಾವ ಸೂಚಿಸುತ್ತವೆ. ಆದರೂ ಭಾವತೀವ್ರತೆ, ವಾಸ್ತವಿಕತೆ ಹಾಗೂ ವೈಯಕ್ತಿಕ ವಿಶಿಷ್ಟ ಲಕ್ಷಣಗಳಿಂದ ಕೂಡಿದ ರಮಣೀಯ ಶಿಲ್ಪಗಳು ಹಡ್ಡ ಜೌಲಿಯನ್‍ಗಳಲ್ಲಿ ದೊರೆತಿವೆ. ಬರ್ಲಿನ್ ವಸ್ತು ಸಂಗ್ರಹಾಲಯದಲ್ಲಿರುವ ಬುದ್ಧ, ಪೇಷಾವರ ವಸ್ತುಸಂಗ್ರಹಾಲಯದಲ್ಲಿರುವ ಪತ್ನೀಸಹಿತ ಕುಬೇರ ಹಾಗೂ ಪಂಚಿಕ. ಹಾರೀತಿ ಮತ್ತು ಬೋಧಿಸತ್ತ್ವ ಮೈತ್ರೇಯ, ಇಂದ್ರ-ಬುದ್ಧರ ಭೇಟಿ ಮುಂತಾದ ದೃಶ್ಯಗಳು ಈ ಶೈಲಿಯ ಗಮನಾರ್ಹ ಶಿಲ್ಪಗಳು. ಈ ಕಾಲದ ಶಿಲ್ಪಗಳೆಲ್ಲ ಸಾಮಾನ್ಯವಾಗಿ ಒಂದು ರೀತಿಯ ಕಂದು ಬಣ್ಣದ ಪದರಶಿಲೆಯ ನಿರ್ಮಾಣಗಳು. ಬೌದ್ಧಸಿದ್ಧಾಂತಗಳ ತಿರುಳನ್ನು ಶಿಲ್ಪಮಾಧ್ಯಮದಲ್ಲಿ ಅಭಿವ್ಯಕ್ತಿಸುವಲ್ಲಿ ಗಾಂಧಾರ ಶೈಲಿ ಸಫಲವಾಗಿಲ್ಲ ಎನ್ನುವುದು ಕಲೆ ವಿರ್ಮಕರ ಅಭಿಪ್ರಾಯ. ಈ ಶೈಲಿ ಹೆಚ್ಚು ಕಡಿಮೆ ವಾಯುವ್ಯ ಭಾರತಕ್ಕಷ್ಟೇ ಸೀಮಿತವಾಗಿತ್ತು. ಉಜ್ಜಯಿನಿಯಿಂದ ಆಳುತ್ತಿದ್ದ ಕ್ಷತ್ರಪ ಅರಸರ ಶಿಲ್ಪ ಶೈಲಿಯ ಬಗ್ಗೆ ತಿಳಿದಿರುವ ಅಂಶಗಳು ಅತ್ಯಲ್ಪ. ಅವರ ನಾಣ್ಯಗಳ ಮೇಲಿನ ಕೆತ್ತನೆಗಳ ಕಲಾವಂತಿಕೆ ಗಮನಾರ್ಹ. ಉಪ್ಪನಕೋಟೆ ಮತ್ತು ತಲಾಜಗಳಲ್ಲಿಯ ಗುಹಾಲಯಗಳು ಶಿಲ್ಪರಹಿತ ಸರಳರಚನೆಗಳು ಸೌರಾಷ್ಟ್ರದ ಖಂಬಾಲಿಢಾ ಎಂಬಲ್ಲಿಯ ಐದು ಗುಹೆಗಳಲ್ಲಿ ಸ್ವಲ್ಪ ಮಟ್ಟಿನ ಶಿಲ್ಪಾಲಂಕರಣ ಕಂಡುಬರುತ್ತದೆ. ಆಲಯಗಳನ್ನು ಹೊತ್ತಿರುವಂತೆ ಕುಬ್ಜಶಿಲ್ಪಗಳನ್ನು ಕಡೆಯಲಾಗಿದೆ. ದಕ್ಷಿಣ ಭಾರತದಲ್ಲಿ ಸಾತವಾಹನರ ಆಳ್ವಿಕೆಯ ಕಾಲ ಶಿಲ್ಪಕ್ಷೇತ್ರದಲ್ಲಿ ಹೊಸ ಶಕೆಯೊಂದನ್ನು ಆರಂಭಿಸಿತು. ಜಗ್ಗಯ್ಯಪೇಟ ಎಂಬಲ್ಲಿ ಸಾತವಾಹನ ಶೈಲಿಯ ಪ್ರಾಚೀನತಮ ಶಿಲ್ಪಗಳು ಕಾಣಸಿಕ್ಕಿವೆ. ಅಮರಾವತಿಯಲ್ಲಿ ಈ ಶಿಲ್ಪಶೈಲಿ ಅತ್ಯುನ್ನತಿಯನ್ನು ಸಾಧಿಸಿತು (ನೋಡಿ- ಅಮರಾವತಿ) ಸುಣ್ಣಕಲ್ಲಿನಲ್ಲಿ ನಿರ್ಮಾಣಗೊಂಡ ಇಲ್ಲಿಯ ಶಿಲ್ಪಿತ ಕಟಾಂಜನಗಳು ಅಮೃತಶಿಲೆಯವೋ ಎನ್ನುವ ಭ್ರಮೆ ಮೂಡಿಸುವಷ್ಟು ಸುಂದರವಾಗಿ ಇವೆ. ಇಲ್ಲಿಯ ಸ್ತೂಪ ಹಾಳಾಗಿದ್ದು ಶಿಲ್ಪಾವಶೇಷಗಳಲ್ಲಿ ಕೆಲವು ಲಂಡನ್ನಿನ ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಮತ್ತೆ ಕೆಲವು ಮದರಾಸಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿವೆ. ಶಿಲ್ಪಭರಿತ ಶಟಾಂಜನದ ಪರಿಧಿ ಒಟ್ಟು ಸುಮಾರು 183 ಮೀಟರ್ ಇದೆ ಎನ್ನಲಾಗಿದೆ. ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನು ಇಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದೆ. ಭಾರ್ಹುತ್ ಅಥವಾ ಸಾಂಚಿಯ ಶಿಲ್ಪಗಳಲ್ಲಿ ತೋರಿಸಿದಂತೆ ಬುದ್ಧನ ಉಪಸ್ಥಿತಿಯನ್ನು ಸಂಕೇತಗಳ ಮೂಲಕ ತೋರಿಸಿದೆ. ಮಾನದ ರೂಪದಲ್ಲೆ ತೋರಿಸಿರುವುದು ಒಂದು ಗಮನಾರ್ಹ ಬೆಳೆವಣಿಗೆ. ಮಾನವನ ಚಟುವಟಿಕೆಗಳಿಗೆ ಈ ಶಿಲ್ಪಶೈಲಿಯಲ್ಲಿ ಮೊದಲ ಮನ್ನಣೆ ಸಿಕ್ಕಿದೆ. ಪ್ರಕೃತಿ ಹಾಗೂ ವಾಸ್ತುದೃಶ್ಯಗಳಿಗೆ ಅನಂತರದ ಸ್ಥಾನ ನೀಡಿದೆ. ಇಲ್ಲಿ ದೊರೆತಷ್ಟು ಜಾತಕ ಕಥಾಶಿಲ್ಪಗಳು ಬೇರೆಲ್ಲೂ ದೊರೆತಿಲ್ಲ. ಇಲ್ಲಿಯ ಶಿಲ್ಪಗಳು ಜೀವಂತವಾಗಿವೆ, ವಾಸ್ತವಿಕವಾಗಿದ್ದು, ಓಜೋಭರಿತವಾಗಿವೆ; ತೆಳು, ನೀಳ ಕಾಯದ ಶಿಲ್ಪಗಳು ಕಮನೀಯವಾಗಿದ್ದರೂ ಶೃಂಗಾಂಭಾವಕ್ಕೆ ಎಡೆಮಾಡಿಕೊಡುವುದಿಲ್ಲ. ಆತ್ಯಂತ ಕಷ್ಟಸಾಧ್ಯಭಂಗಿಗಳಲ್ಲೂ ಶಿಲ್ಪಗಳ ಬಾಗುಬಳುಕು ಲಲಿತವಾಗಿದ್ದು ಅದ್ಭುತ ಸ್ಥಿತಿಸ್ಥಾಪಕ ಗುಣದಿಂದ ಕೂಡಿದೆ. ದಂತದ ಕೆತ್ತನೆಯಂಥ ಕುಸುರಿ ಕೆಲಸ ನಯನಮನೋಹರವಾಗಿದೆ. ಪಾದಗಳು ತುಸು ಹೆಚ್ಚೆನಿಸುವಷ್ಟು ತೆಳುವಾಗಿವೆ. ಇಲ್ಲಿಯ ಶಿಲ್ಪಗಳ ಮಾರ್ದವತೆ ಮತ್ತು ಸೌಂದರ್ಯವನ್ನು ಗಮನಿಸಿದ ಆನಂದ ಕುಮಾರಸ್ವಾಮಿಯವರು ಈ ಶಿಲ್ಪಶೈಲಿಯನ್ನು ಭಾರತೀಯ ಶಿಲ್ಪದ ಅತ್ಯಂತ ಉದ್ದೀಪಕ ಮತ್ತು ಅತ್ಯಂತ ಕುಸುಮ ಕೋಮಲವೆಂದು ಬಣ್ಣಿಸಿದ್ದಾರೆ. ಭೀಕರ ಯುದ್ಧ ದೃಶ್ಯಗಳಷ್ಟೇ ವಾಸ್ತವವಾಗಿ ಬುದ್ಧ ಮತ್ತು ಆತನ ಅನುಯಾಯಿಗಳ ಪ್ರಶಾಂತ ಜೀವನದ ದೃಶ್ಯಗಳೂ ಕಂಡರಿಸಲ್ಪಟ್ಟಿವೆ. ಪ್ರಾಣಿಶಿಲ್ಪ ಅತ್ಯಂತ ಸ್ವಾಭಾವಿಕವೆನಿಸುತ್ತದೆ. ನಳಗಿರಿ ಎಂಬ ಉದ್ರಿಕ್ತ ಆನೆ ಜನರಲ್ಲಿ ಭೀತಿಯುಂಟು ಮಾಡಿ, ಬುದ್ಧನನ್ನು ಕಂಡೊಡನೆ ಸೌಮ್ಯವಾಗಿ ಆತನ ಚರಣಗಳಡಿಯಲ್ಲಿ ಮುಂದುರಿನಿಂತಿರುವ ಶಿಲ್ಪ ಒಂದು ಮಹಾನ್ ಸೃಷ್ಟಿಯಾಗಿದೆ. ಅನೇಕ ಉಬ್ಬುಕೆತ್ತೆನೆಗಳಲ್ಲಿ ಶಿಲ್ಪಿಯ ಪ್ರತಿಭೆ, ಪರಿಶ್ರಮ ಮತ್ತು ಔಚಿತ್ಯ ಪ್ರಜ್ಞೆ ವ್ಯಕ್ತವಾಗಿದೆ. ಸ್ತೂಪದ ಮೇಲೆ ಹಾರಾಡುತ್ತಿರುವಂತೆ ಬಿಡಿಸಿದ ವಿದ್ಯಾಧರಶಿಲ್ಪಗಳು ಮೊದಲ ನೋಟಕ್ಕೇ ಮನಸ್ಸನ್ನು ಸೆರೆಹಿಡಿಯುತ್ತವೆ. ಮಾನವ ದೇಹವ್ಯವಸ್ಥೆಯನ್ನು ಚೆನ್ನಾಗಿ ಅರಿತ ಶಿಲ್ಪಿ ಅತ್ಯಪರೂಪವೆನ್ನಿಸುವ ಕಲಾತ್ಮಕ ದೃಷ್ಟಿಯಿಂದ ಈ ಶಿಲ್ಪವನ್ನು ಕಂಡರಿಸಿದ್ದಾನೆ. ಇಂಥ ಭಾವಸಿದ್ಧಿ ಇಲ್ಲಿಯ ಶಿಲ್ಪಗಳಲ್ಲಿ ಕಂಡುಬರುವುದು ಒಂದು ವಿಶೇಷ. ಗುಡಿಮಲ್ಲಮ್ ಶಿವಲಿಂಗ ಸಾತವಾಹನ ಶೈಲಿಯ ಅತ್ಯುತ್ತಮ ಶಿಲ್ಪಗಳಲ್ಲೊಂದು.

ಅಮರಾವತಿ ಶೈಲಿಯ ಕೊನೆಯ ಹಂತವನ್ನು ಇಕ್ಷ್ವಾಕುಗಳ ಆಳ್ವಿಕೆಯಲ್ಲಿ ಕಾಣಬಹುದು. ನಾಗಾರ್ಜುನಕೊಂಡದ ಶಿಲ್ಪಗಳು ಅಮರಾವತಿ ಶೈಲಿಯವೇ. ಆದರೆ ಭಾವಾಭಿವ್ಯಕ್ತಿಯಲ್ಲಿ ಇಲ್ಲಿಯ ಶಿಲ್ಪಿಗಳು ತುಸು ಹೆಚ್ಚು ಸ್ವಾತಂತ್ರ್ಯವಹಿಸಿದ್ದಾರೆ. ಲಾಲಿತ್ಯ ಹಾಗೂ ರೇಖಾನಿರ್ದಿಷ್ಟತೆಗಳಿಂದ ಕೂಡಿದ ಈ ಶಿಲ್ಪಗಳು ಸಮತೋಲನೆ ಮತ್ತು ಸಾಮರಸ್ಯದಿಂದ ಕೂಡಿವೆ. ಮಾನವನ ಭಾವ ಭಾವನೆಗಳಿಗೆ ಕನ್ನಡಿ ಹಿಡಿಯಬಲ್ಲ ಸಾಮಥ್ರ್ಯ ಈ ಕಾಲದ ಶಿಲ್ಪಿಯ ಸಾಧನೆಯನ್ನಬುಹುದು. ಬುದ್ಧನನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೋರಿಸಿರುವುದು ಇಲ್ಲಿಯ ವಿಶೇಷ. ಮಾಯಾದೇವಿಯ ಕನಸಿನ ಅರ್ಥವಿವರಣೆ, ಲುಂಬಿಣಿ ಗ್ರಾಮದಲ್ಲಿ ಸಿದ್ಧಾರ್ಥನ ಜನನವನ್ನು ದಾಖಲಿಸುತ್ತಿರುವುದು. ಆತನ ಅರಮನೆಯ ಜೀವನ. ಸಿದ್ಧಾರ್ಥನ ಅಧಿಕಾರ ತ್ಯಾಗ ಮುಂತಾದ ದೃಶ್ಯಗಳು ಕಣ್ಣಿಗೆ ಕಟ್ಟುದಂತೆ ಶಿಲ್ಪಿತವಾಗಿವೆ. ಇಕ್ಷ್ವಾಕು ಶೈಲಿಯ ಬ್ರಾಹ್ಮಣಶಿಲ್ಪಗಳಿಗೆ ಕಾರ್ತಿಕೇಯ ಮೂರ್ತಿಗಳು, ಸತಿ ಮತ್ತು ದೇವಸೇನರ ಅರೆಯುಬ್ಬುಶಿಲ್ಪಗಳು ಮುಂತಾದವನ್ನು ಉದಾಹರಿಸಬಹುದು. ತಾಂತ್ರಿಕ ಪರಿಣತಿ ಮತ್ತು ಜೀವಂತಿಕೆಯಿಂದ ಕೂಡಿದ ಅಮರಾವತಿ ಶಿಲ್ಪಶೈಲಿಯ ಶಿಲ್ಪಗಳು ಘಂಟಸಾಲು, ಗೋಲಿ, ಭಟ್ಟಿ ಪ್ರೋಲು, ಗುಡಿವಾಡ ಮತ್ತಿತರ ಸ್ಥಳಗಳಲ್ಲಿಯೂ ಆಗ್ನೇಯ ಏಷ್ಯದ ಕೆಲವೆಡೆಗಳಲ್ಲಿಯೂ ಕಂಡುಬಂದಿವೆ. ಕ್ರಿ.ಶ. ನಾಲ್ಕನೆಯ ಶತಮಾನದಿಂದ ಆಳಿದ ಗುಪ್ತರು ಸುವರ್ಣಯುಗವನ್ನು ರೂಪಿಸಿದರು. ಶಾಸ್ತ್ರ, ಸಾಹಿತ್ಯ ಮತ್ತು ಕಲಾಕ್ಷೇತ್ರಗಳಲ್ಲಿ ಹಿಂದೆಂದೂ ಕಾಣದ ಔನ್ನತ್ಯ ವೈಭವ ಸಾಧಿತವಾದ ಕಾಲವಿದು. ಆಕೃತಿಶಿಲ್ಪಕಲೆ (ಮಣ್ಣಿನಶಿಲ್ಪ) ಪೂರ್ಣತೆಯ ಹಂತ ತಲುಪಿತು. ಹಿಂದಿನ ಭಾರತೀಯ ಕಲಾಪರಂಪರೆಗಳನ್ನು ಮೈಗೂಡಿಸಿಕೊಂಡು, ಪರಕೀಯ ಪ್ರಭಾವ ಲಕ್ಷಣಗಳನ್ನು ಪರಿತ್ಯಜಿಸಿ ಇಲ್ಲವೆ ಪರಿಷ್ಕರಿಸಿ, ಒಂದು ವಿಶಿಷ್ಟ ಶಿಲ್ಪಶೈಲಿಯನ್ನು ಗುಪ್ತಯುಗ ರೂಪಿಸಿ ಕೊಂಡಿತು. ಭಾವಾಭಿವ್ಯಕ್ತಿ ಮತ್ತು ಅಲಂಕರಣಗಳನ್ನು ಅತಿಯಾಗಿಸದೆ ಹಿತಮಿತವಾಗಿ ನಿರೂಪಿಸಿರುವುದು ಈ ಕಾಲದ ದೊಡ್ಡ ಸಾಧನೆ. ಉನ್ನತ ಧ್ಯೇಯಾದರ್ಶಗಳಿಂದ ಮಾರ್ಗದರ್ಶಿತನಾದ ಕಲಾಕಾರನ ಶಿಲ್ಪದಲ್ಲಿ ಗಾಂಭೀರ್ಯ, ಭವ್ಯತೆ, ಲಾಲಿತ್ಯ ಹಾಗೂ ರಮಣೀಯಂತೆ ಮೈದಳೆದುವು. ನಿಯಮವೆಂಬಂತೆ ನಗ್ನತೆ ಮಾಯವಾಯಿತು. ಸಪ್ರಮಾಣದ ಅಂಗಾಂಗಗಳು, ಅಲಂಕೃತ ಪ್ರಭಾವಲಯ, ಕಲಾತ್ಮಕ ನಿರಿಗೆಗಳಿಂದ ಕೂಡಿದ ಬಿಗಿಯಾದ ಪಾರದರ್ಶಕ ಉಡುಪು. ವಿಶಿಷ್ಟ ಬಗೆಯ ಕೇಶ ವಿನ್ಯಾಸ, ವೈವಿಧ್ಯಮಯ ಮುದ್ರೆಗಳು, ಕಮಲ ಅಥವಾ ಸಿಂಹಪೀಠ ಮುಂತಾದವು ಗುಪ್ತಶೈಲಿಯ ಕೆಲವು ವಿಶಿಷ್ಟ ಲಕ್ಷಣಗಳಾಗಿದ್ದು ಈ ಕಾಲದ ಶಿಲ್ಪಿಗಳ ಪ್ರತಿಭೆ ಮತ್ತು ಸದಭಿರುಚಿಯ ಪ್ರತೀಕಗಳಾಗಿವೆ. ಶಿಲ್ಪಿಯ ಪ್ರಧಾನ ಆಸಕ್ತಿ ಮಾನವ ರೂಪವೇ; ಆದರೆ ದೇಹಪ್ರಮಾಣಕ್ಕೆ ಗ್ರೀಕರಂತೆ ಜ್ಯಾಮಿತಿಕ ಮಾನದಂಡ ಬಳಸದೆ ತನ್ನ ಪರಿಸರದ ಜೀವಿಗಳನ್ನೇ ಆತ ಆರಿಸಿಕೊಂಡ. ಹೀಗಾಗಿ ಆತನ ಶಿಲ್ಪ ವಾಸ್ತವತೆಗೆ ಹತ್ತಿರವಾಯಿತು; ಬಾಹ್ಯ ಬೆಡಗಿಗಿಂತ ಆಂತರಿಕ ಅಂತಃಸತ್ತ್ವದ ನಿರೂಪಣೆ ಇಲ್ಲಿ ಮುಖ್ಯವಾಯಿತು.

ಬೌದ್ಧ ಮತ್ತು ಹಿಂದೂ ಈ ಎರಡೂ ಶಿಲ್ಪ ಕ್ಷೇತ್ರಗಳಲ್ಲಿ ಈ ಕಾಲ ಸಮಾನ ಸಿದ್ಧಿಗಳಿಸಿತು. ಸಾರನಾಥ ಮತ್ತು ಮಥುರಾ ಬುದ್ಧ ಮೂರ್ತಿಗಳು ಪರಿಪೂರ್ಣ ಶಿಲ್ಪಕ್ಕೆ ಶ್ರೇಷ್ಠ ಉದಾಹರಣೆಗಳು. ವಿರಕ್ತಿ, ಅಂತಃಶುದ್ಧಿ ಹಾಗೂ ಮಾನವ ಕಲಾಣಗುಣಗಳನ್ನು ಸಾರನಾಥಶಿಲ್ಪ ಮನಮುಟ್ಟುವಂತೆ ಬಿಂಬಿಸದೆ. ಸುಲ್ತಾನ ಗಂಜಿನ 229 ಸೆಮೀ. ಎತ್ತರದ ತಾಮ್ರದ ಬುದ್ಧ ಪ್ರತಿಮೆ ಈ ಕಾಲದ ಲೋಹ ಶಿಲ್ಪಕ್ಕೆ ಉದಾಹರಣೆಯಾಗಿದೆ. ಈಗ ಇದು ಬರ್ಮಿಂಗ್‍ಹ್ಯಾಮ್ ವಸ್ತು ಸಂಗ್ರಹಾಲಯದಲ್ಲಿದೆ. ನಾಲಂದಾದಲ್ಲಿ 24.4 ಮೀ. ಎತ್ತರದ ತಾಮ್ರದ ಬುದ್ಧ ಮೂರ್ತಿ ಇತ್ತಂತೆ. ಉದಯಗಿರಿಯಲ್ಲಿ ಬಂಡೆಯಲ್ಲಿ ಕಡೆದ ವರಾಹಶಿಲ್ಪ ಓಜಸ್ಸಿನಿಂದ ಕೂಡಿದೆ. ಮಥುರಾದ ವಿಷ್ಣು, ದೇವಗಡ ದೇಗುಲದ ದ್ವಾರಪಾಲಕರು, ನರನಾರಾಯಣ, ಅನಂತಶಾಯಿವಿಷ್ಣು, ಗಜೇಂದ್ರಮೋಕ್ಷ, ಕೋಹ್‍ನಲ್ಲಿಯ ಏಕಮುಖಲಿಂಗ, ಗ್ವಾಲಿಯರ್‍ನ ಅಪ್ಸರೆ-ಇವು ಈ ಕಾಲದ ಉಲ್ಲೇಖಾರ್ಹ ಶ್ರೇಷ್ಠ ಶಿಲ್ಪಗಳು. ಉದಯಗಿರಿಯಲ್ಲಿಯ ಕೃಷ್ಣಜನ್ಮದ ಬೃಹತ್‍ಉಬ್ಬುಶಿಲ್ಪವನ್ನು ಅತ್ಯುತ್ತಮ ಭಾರತೀಯ ಶಿಲ್ಪಗಳ ಸಾಲಿಗೆ ಸೇರುವಂಥದೆಂದು ಕಲಾವಿಮರ್ಶಕರು ಪರಿಗಣಿಸಿದ್ದಾರೆ. ದೇವಗಡದ ದೇಗುಲದಲ್ಲಿ ರಾಮಾಯಣ ಭಾಗವತಗಳಿಗೆ ಸಂಬಂಧಿಸಿದ ದೃಶ್ಯಚಿತ್ರಣಗಳಿವೆ. ಭೂಮರಾದೇಗುಲದ ಶಿಲ್ಪಗಳು, ಭೀಟಾದ ಶಿವಶಿಲ್ಪ, ಗುರ್ಹ್‍ವಾ ಮತ್ತು ನಾಚ್ನಾದ ಶಿಲ್ಪಗಳು. ಬಕ್ಸಾರದ ತೋರಣದ್ವಾರ ಮೊದಲಾದವು ಸೊಗಸಾಗಿವೆ. ಕ್ರಿ.ಶ. 451ರ ಶಾಸನವಿರುವ ಶಿವಪಾರ್ವತಿ ಶಿಲ್ಪಫಲಕ ಕೋಸಮ್ ಎಂಬಲ್ಲಿ ದೊರೆತಿದೆ. ಗ್ವಾಲಿಯರ್‍ನ ತೇಲುವ ಗಂಧರ್ವ, ಮ್ಯಾಂಡೋರಿನ ಶಿಲ್ಪಾವಶೇಷಗಳು, ಅಸ್ಸಾಮಿನ ದಾಹ್‍ಪರ್ಬತಿಯಾ ದೇಗುಲದ ದ್ವಾರಪಾರ್ಶಗಳಲ್ಲಿರುವ ಗಂಗಾ ಯಮುನಾ ಶಿಲ್ಪಗಳು ಇದೇ ಶೈಲಿಯವು. ಸುಡಾವೆ ಮಣ್ಣಿನ ಶಿಲ್ಪಫಲಕಗಳು, ಭೀಟಾ, ಭೀತರ್‍ಗಾಂವ್, ಅಹಿಚ್ಛತ್ರ, ರಾಜಗೃಹ ಮುಂತಾದೆಡೆಗಳಲ್ಲಿ ಸಿಕ್ಕಿವೆ. ಕಲೆಯ ದೃಷ್ಟಿಯಿಂದ ಗುಪ್ತನಾಣ್ಯಗಳ ಮೇಲಿನ ಕೆತ್ತನೆಗಳೂ ಗಮನಾರ್ಹ, ಗುಪ್ತಕಾಲದ ವೈಶಿಷ್ಟ್ಯವನ್ನು ಬಿಂಬಿಸುವ ಸ್ತಂಭಗಳು ಅಲ್ಲಲ್ಲಿ ಉಪಲಬ್ಧವಾಗಿವೆ. ಇವುಗಳಲ್ಲಿ ಏರಣದ ಶಿಲಾಸ್ತಂಭ ಮತ್ತು ದೆಹಲಿಯ ಕುತುಬ್ ಮಿನಾರಿನ ಬಳಿ ಇರುವ ಕಬ್ಬಿಣದ ಸ್ತಂಭ ಸುಪರಿಚಿತವಾದವು. ರಾಜವೋನಾದ ಸ್ತಂಭಗಳ ಮೇಲೆ ಕಿರಾತಾರ್ಜುನೀಯ ಹಾಗೂ ಗಂಗಾಪರಿಣಯ ದೃಶ್ಯಗಳಿವೆ.


ಉತ್ತರಭಾರತದಲ್ಲಿ ಗುಪ್ತರ ಪತನಾನಂತರ ಹಲವು ಸಣ್ಣಪುಟ್ಟ ರಾಜ್ಯಗಳು ಉದಿಸಿದವು. ಮುಂದೆ ಹರ್ಷವರ್ಧನ ಮತ್ತೊಂದು ಸಾಮ್ರಾಜ್ಯಕಟ್ಟಿದ ಆದರೂ ಈ ಕಾಲದ ಶಿಲ್ಪಶೈಲಿಯನ್ನು ಗುಪ್ತ ಶೈಲಿಯ ಮುಂದುವರಿಕೆ ಎನ್ನಬಹುದು. ಕಾರ್ತಿಕೇಯ, ಶಿವ ಮುಂತಾದ ಪೌರಾಣಿಕ ದೇವ ದೇವತೆಗಳ ಕಂಡರಣೆಯಲ್ಲಿ ಶಿಲ್ಪಿ ಹೆಚ್ಚಿನ ಕಲಾವಂತಿಕೆ ತೋರಿದ್ದಾನೆ. ಕೆಲವು ಶಿಲ್ಪಗಳು ಅಂದವಾಗಿವೆ. (ನೋಡಿ- ಗುಪ್ತರ-ವಾಸ್ತು-ಮತ್ತು-ಶಿಲ್ಪ)

ಗುಪ್ತರ ಸಮಕಾಲೀನರಾದ ವಾಕಾಟಕರ ಶಿಲ್ಪಶೈಲಿ ಗುಪ್ತರ ಶಿಲ್ಪಶೈಲಿಯಿಂದ ಭಿನ್ನವಾಲ್ಲ. ಅಜಂತಾದ ಕೆಲವು ಗುಹಾಲಯಗಳು ವಾಕಾಟಕರ ಆಶ್ರಯದಲ್ಲಿ ನಿರ್ಮಿತವಾದವು. (ನೋಡಿ- ಅಜಂತ) 2ನೆಯ ಗುಹೆಯಲ್ಲಿಯ ಜೀವಂತವೆನಿಸುವ ಹಾರೀತಿ ಸಮೇತನಾದ ಪಂಚಿಕ, ಬುದ್ಧ, 16ನೆಯ ಗುಹೆಯಲ್ಲಿಯ ಮಿಥುನ, ಗಂಗಾಯಮುನಾ ಮುಂತಾದ ಶಿಲ್ಪಗಳು ಸೊಗಸಾಗಿವೆ. 19ನೆಯ ಗುಹೆಯಲ್ಲಿಯ ಆಸೀನ ನಾಗನಾಗಿಣಿ ಶಿಲ್ಪ ತುಂಬ ಕುತೂಹಲಕಾರಿಯಾಗಿದೆ; ನಿರೂಪಣೆಯಲ್ಲಿ ಪ್ರಸನ್ನತೆ ಲಾಲಿತ್ಯಗಳಿವೆ 26ನೆಯ ಗುಹೆಯಲ್ಲಿಯ ಬೌದ್ಧಶಿಲ್ಪಗಳಲ್ಲಿ ಮಾರದರ್ಶನ ದೃಶ್ಯ ಕಣ್ಸೆಳೆಯುತ್ತದೆ. ಎಲಿಫೆಂಟಾ ಗುಹಾಲಯಗಳು ವಾಕಾಟಕ-ಗುಪ್ತಶೈಲಿಗೆ ಸುಪ್ರಸಿದ್ಧವಾಗಿವೆ. ಇಲ್ಲಿಯ ಬೃಹನ್ಮೂರ್ತಿಗಳು ತೇಜಸ್ವಿಯಾಗಿಯೂ ಓಜಸ್ವಿಯಾಗಿಯೂ ಇವೆ. ಗಜಾಂತಕ ಹಾಗೂ ರಾವಣಾನುಗ್ರಹಶಿವ, ವರಾಹ, ನರಸಿಂಹ, ತ್ರಿವಿಕ್ರಮ, ಪದ್ಮನಾಭ, ಅರ್ಧನಾರೀಶ್ವರ, ಶಿವಪಾರ್ವತಿ ಕಲ್ಯಾಣ, ಗಂಗಾವತರಣ ಮುಂತಾದವು ಇಲ್ಲಿಯ ಶಿಲ್ಪವಸ್ತುಗಳು ಎಲ್ಲೋರದ (ನೋಡಿ- ಎಲ್ಲೋರಾ) ರಾಮೇಶ್ವರ ಧುಮರಲೇನಾ ಮತ್ತು ರಾವಣ-ಕಾ-ಖಾಇ ಈ ಕಾಲದ ರಚನೆಗಳು. ಗಂಗಾ ಯಮುನಾ, ಮಹಾಯೋಗಿ ಶಿವ, ಪಾರ್ವತಿಯೊಡನೆ ಪಗಡೆ ಆಡುತ್ತಿರುವ ಶಿವ-ಇವು ಗಮನಾರ್ಹ ಶಿಲ್ಪಗಳು. ಕೈಲಾಸ ಎತ್ತುತ್ತಿರುವ ರಾವಣ ಇನ್ನೊಂದು ಉಲ್ಲೇಖಾರ್ಹ ಶಿಲ್ಪ. ಔರಂಗಾಬಾದಿನ ಗುಹೆಯಲ್ಲಿಯ ಗಾಯನ ವಾದನ ನರ್ತನ ಸ್ತ್ರೀಯರು, ಪರೇಲದ ವೀಣಾಧರ ದಕ್ಷಿಣಾಮೂರ್ತಿ, ಎಲಿಫೆಂಟಾದ ಹಂಸಗಳ ಮೇಲೆ ಕುಳಿತ ಬ್ರಹ್ಮ, ಕಲ್ಯಾಣಸುಂದರ ಮೊದಲಾದವು ಈ ಶೈಲಿಯ ಉತ್ತಮ ರಚನೆಗಳು. ಕ್ರಿ.ಶ. 4-5ನೆಯಶತಮಾನದಲ್ಲಿ ವೇಂಗಿಯಿಂದ ಆಳಿದ ಶಾಲಂಕಾಯನರು ನಿರ್ಮಿಸಿದ ಸೂರ್ಯ ದೇವಾಲಯ ಉಳಿದುಬಂದಿಲ್ಲ. ಪೆದ್ದವೇಂಗಿಯಲ್ಲಿ ದೊರೆತ ಕೆಲವು ಪ್ರಾಚ್ಯವಸ್ತುಗಳಲ್ಲಿ ಭಿನ್ನಗಣೇಶ ಮೂರ್ತಿಯೊಂದಿದ್ದು, ಅದು ಪ್ರಾಚೀನ ಪಲ್ಲವ ಶಿಲ್ಪಶೈಲಿಯ ಲಕ್ಷಣಗಳನ್ನು ತೋರುತ್ತದೆ. ಇದೇ ಶೈಲಿಯ ಗಣೇಶ ಬ್ರಹ್ಮ, ನರಸಿಂಹ, ವಿಷ್ಣು, ಶಿವಲಿಂಗ, ಮಹಿಷಮರ್ದಿನಿ, ಉಮಾಮಹೇಶ್ವರ ಮೂರ್ತಿಗಳು ಪೆದ್ದಮುಡಿಯಮ್ ಎಂಬಲ್ಲಿ ಹಾಗೂ ಸ್ವಲ್ಪ ಅನಂತರ ಕಾಲದ ಕೆಲವು ಮೂರ್ತಿಗಳು ಕಾವೇರಿಪಾಕ್ಕಮ್, ಎನಾಡಿ ಮತ್ತು ಮಾಡುಗುಲಗಳಲ್ಲಿ ಲಭಿಸಿವೆ. ವಿಯವಾಡ ವಸ್ತುಸಂಗ್ರಹಾಲಯದಲ್ಲಿರುವ ವೃಷಭಸಹಿತ ಶಿವಶಿಲ್ಪ ಸಾತವಾಹನ-ಇಕ್ಷ್ವಾಕು ಶೈಲಿಯನ್ನು ಅನುಸರಿಸಿ ಕಂಡರಿಸಲ್ಪಟ್ಟಿದ್ದು, ಬೈರವ ಕೊಂಡ ಶಿಲ್ಪಗಳ ಹಿಂದಿನ ಹಂತವನ್ನು ಪ್ರತಿನಿಧಿಸುತ್ತದೆ. 5-6ನೆಯ ಶತಮಾನದಲ್ಲಿ ವೇಂಗಿಯ ಅಧಿಪರಾಗಿದ್ದ ವಿಷ್ಣುಕುಂಡಿ ಅರಸರು ಇಕ್ಷ್ವಾಕು ಕಲಾಸಂಪ್ರದಾಯವನ್ನು ಮುಂದುವರಿಸಿದರು. ವಿಜಯವಾಡ ಬಳಿಯ ಉಂಡವಲ್ಲಿ ಮತ್ತು ಮೊಗಲರಾಜಪುರದ ಗುಹಾಲಯಗಳು ಈ ಕಾಲದ ಮುಖ್ಯ ರಚನೆಗಳು. ಉಂಡವಲ್ಲಿಯ ಶಿಲ್ಪಸಂಪತ್ತಿನ ಅಧಿಕ ಭಾಗ ಹಾಳಾಗಿದೆ. ಮೊಗಲರಾಜಪುರದ ಗುಹೆಯಲ್ಲಿಯ ಶಿಲ್ಪಗಳಲ್ಲಿ ಶಿಲ್ಪಿಯ ಕೌಶಲವನ್ನು ಕಾಣಬಹುದು. ಭಾಗಶಃ ಹಾಳಾಗಿದ್ದರೂ ಇಲ್ಲಿಯ ಅಷ್ಟಭುಜ ನಾಗರಾಜ ಶ್ರೇಷ್ಠ ಶಿಲ್ಪವೆನ್ನಬಹುದು. ಇದರಲ್ಲಿ ಉತ್ತರ ಮತ್ತು ದಕ್ಷಿಣದ ಶಿಲ್ಪಶೈಲಿಗಳ ಸಂಗಮವನ್ನು ಕಾಣಬಹುದು. ಸ್ತಂಭಗಳ ಮೇಲೆ ಗೋವರ್ಧನಗಿರಿಧಾರಿ, ಭೂರಕ್ಷಕ ವರಾಹ ಹಿರಣ್ಯಕಶಿಪುವನ್ನು ಕೊಲ್ಲುತ್ತಿರುವ ನರಸಿಂಹ. ಲಿಂಗೋದ್ಭವ ಮುಂತಾದ ಶಿಲ್ಪಗಳನ್ನು ಕೆತ್ತಿದೆ. ಗುಪ್ತರ ಶಿಲ್ಪಶೈಲಿಯ ಸ್ಥಳೀಯ ವೈವಿಧ್ಯವೆನ್ನಬಹುದಾದ ಮೈತ್ರಕ ಶಿಲ್ಪ ಶೈಲಿಯ ಉದಾಹರಣೆಗಳನ್ನು ಶಾಮಲಾಜಿ, ಕೋಟ್ಯರ್ಕ, ಕಾರ್ವಣ, ರೋಡಾ ಮುಂತಾದ ಸ್ಥಳಗಳಲ್ಲಿ ಕಾಣಬಹುದು. ಕುಮಾರಗುಪ್ತನ ಕಾಲದಲ್ಲಿಯೇ ದಶಪುರದಲ್ಲಿ ಒಂದು ಸೂರ್ಯದೇವಾಲಯ ನಿರ್ಮಿತವಾದುದಕ್ಕೆ ಶಾಸನದಲ್ಲಿ ಉಲ್ಲೇಖವಿದೆ, ಶಾಮಲಾಜಿಯಲ್ಲಿಯ ನಿಂತಭಂಗಿಯ ದ್ವಿಭುಜಗಣೇಶ, ಮಯೂರ ಸಹಿತ ಕೌಮಾರಿ, ವೃಷಭಸಮೇತನಾದ ಶಿವ ಹಾಗೂ ತಾಯಿಯಮಗುವಿನ ಸಂಬಂಧವನ್ನ ಪ್ರಭಾವಶಾಲಿಯಾಗಿ ತೋರುವ ಕೋಟ್ಯರ್ಕದ ಸ್ಕಂದ-ಉಮಾ-ಇವು ಮೈತ್ರಕ ಶೈಲಿಯ ಶ್ರೇಷ್ಠ ಶಿಲ್ಪಗಳ ಸಾಲಿಗೆ ಸೇರುತ್ತವೆ.

ಕರ್ನಾಟಕದಲ್ಲಿ ಬಾದಾಮಿ ಚಾಳುಕ್ಯರ ಕಾಲದಿಂದ ಮೂರ್ತಿಶಿಲ್ಪ ಒಂದು ನಿರ್ದಿಷ್ಟ ಶೈಲಿಯಾಗಿ ಬೆಳೆಯತೊಡಗಿತು. ಇದಕ್ಕೂ ಹಿಂದಿನಕಾಲದ ಶಿಲ್ಪಗಳು ಅತಿವಿರಳವಾಗಿ ಕಾಣಸಿಗುತ್ತವೆ. ಬನವಾಸಿಯ ನಾಗಶಿಲ್ಪ ಸಾತವಾಹನರ ಕಾಲದ್ದು. ಸನ್ನತಿಯ ಶಿಲ್ಪಫಲಕಗಳೂ ಮೃಣ್ಮೂರ್ತಿಗಳೂ ಕ್ರಿ.ಶ. 2-3ನೆಯ ಶತಮಾನಕ್ಕೆ ಸೇರುತ್ತವೆ. ಜಂಬೆಹಳ್ಳಿಯ ದುರ್ಗಾ ಅಥವಾ ಮಹಿಷಮರ್ದಿನಿಯನ್ನು ಕದಂಬ ಶಾಂತಿವರ್ಮನ ಕಾಳದ ಶಿಲ್ಪ ಎಂದು ಪರಿಗಣಿಸಿದೆ. ಹೈಗುಂದ ಮತ್ತು ಐಹೊಳೆಯ ಬುದ್ಧಮೂರ್ತಿಗಳು, ಗುಡ್ನಾಪುರದ ಯಕ್ಷ. ಗೋಕಾಕ ಜಲಪಾತದ ಬಳಿಯ ತ್ರಿಮೂರ್ತಿ ಮುಂತಾದವು ಕೆಲವು ಪ್ರಚೀನ ಶಿಲ್ಪಗಳು. ಆದರೆ ಹೆಚ್ಚಿನ ಶಿಲ್ಪಗಳು ಕಂಡುಬರುವುದು ಬಾದಾಮಿ ಚಾಳುಕ್ಯರ ಕಾಲದಲ್ಲೇ. ಇವರ ಶಿಲ್ಪಕೃತಿಗಳನ್ನು ಐಹೊಳೆ, ಮಹಾಕೂಟ, ಬಾದಾಮಿ ಹಾಗು ಪಟ್ಟದಕಲ್ಲುಗಳಲ್ಲಿ ಕಾಣುತ್ತೇವೆ. ಕ್ರಿ.ಶ. 4ನೆಯ ಶತಮಾನದಲ್ಲಿಯೇ, ಚಾಳುಕ್ಯಪೂರ್ವಕಾಲದಲ್ಲಿಯೇ ಐಹೊಳೆಯಲ್ಲಿ ವಾಸ್ತುಶಿಲ್ಪ ಚಟುವಟಿಕೆಗಳು ನಡೆದಿರುವುದನ್ನು ಈಚಿನ ಉತ್ಖನನಗಳು ತೋರಿಸಿಕೊಟ್ಟಿವೆ. ಇಲ್ಲಿ ದೊರೆತ ಆಸೀನ ಕುಬೇರ ಶಿಲ್ಪ ಪ್ರಾಚೀನತಮವಾದುದು. ಮೇಗುಟಿ ದೇವಾಲಯದ ಪ್ರಾಕಾರಗೋಡೆಯ ಬಳಿ ಇರುವ ದ್ವಾರಪಾಲಕ ವಿಗ್ರಹ ಚಾಳುಕ್ಯ ಶೈಲಿಯ ಏಕೈಕ ಪೂರ್ಣಶಿಲ್ಪವೆನಿಸಿದೆ. ಆದರೆ ಇದು ತುಂಬ ಸವೆದುಹೋಗಿದೆ. ಉಳಿದವು ಚಾವಣಿ, ಕಂಬ ಮತ್ತು ಗೋಡೆಗಳ ಮೇಲೆ ಕಂಡರಿಸಿದ ಉಬ್ಬು ಶಿಲ್ಪಗಳು. ಇವು 15-20 ಸೆಂಮೀ ನಿಂದ 300 ಸೆಂಮೀ ಎತ್ತರದ ವೈವಿಧ್ಯಮಯ ಶಿಲ್ಪಗಳು. ಇವುಗಳ ರಚನೆಗೆ ಬಳಸಿದ ಸಾಮಗ್ರಿ ಕೆಂಪುಮರಳುಕಲ್ಲು, ಐಹೋಳೆಯ ಲಾಡಖಾನ್, ಕೊಂತಿ ಹಾಗೂ ಹುಚ್ಚಮಲ್ಲಿಗುಡಿಗಳಲ್ಲಿಯ ಶಿಲ್ಪಗಳು ಬಹುಶಃ ಈ ಶೈಲಿಯ ಆರಂಭದ ಉದಾಹರಣೆಗಳು. ಲಾಡಖಾನ್ ಗುಡಿಯಲ್ಲಿಯ ಪೂರ್ಣಕುಂಭ ಮತ್ತು ಮಿಥುನ ಶಿಲ್ಪಾಲಂಕಾರಗಳು ಕೊಂತಿಗುಡಿಯ ಭುವನೇಶ್ವರಿಯ ಮೇಲಿನ ಬ್ರಹ್ಮವಿಷ್ಣುಶಿವ ಶಿಲ್ಪಗಳು ಮತ್ತು ಮಿಥುನ ಕೆತ್ತನೆಗಳು ಸರಳತೆ, ಸಹಜತೆ ಹಾಗೂ ಸೌಂದರ್ಯದಿಂದ ಕೂಡಿವೆ. ಹುಚ್ಚಮಲ್ಲಿಗುಡಿಯ ಕಾರ್ತಿಕೇಯ ಇನ್ನೊಂದು ಉಲ್ಲೇಖಾರ್ಹ ಶಿಲ್ಪ. ನೀಳವಾದ ತೆಳುಶರೀರ, ದೀರ್ಘವೃತ್ತಾಕಾರದ ವದನ, ಹಿತಮಿತ ಅಲಂಕರಣ ಸೊಗಸಾದ ಮಯೂರ ವಾಹನ ಇತ್ಯಾದಿಗಳಿಂದ ಕೂಡಿರುವ, ದೈವೀಕಳೆ ಎದ್ದು ಕಾಣುವ ಈ ಶಿಲ್ಪದಲ್ಲಿ ಗುಪ್ತಶೈಲಿಯ ಪ್ರಭಾವವಿದೆ. ಐಹೊಳೆಯ ದುರ್ಗಾದೇವಾಲಯವಂತೂ ಶಿಲ್ಪಿಗಳ ಪಾಲಿಗೆ ಒಂದು ಪ್ರಯೋಗಶಾಲೆಯಾಗಿ ಪರಿಣಮಿಸಿದೆ. ಭಿನ್ನಭಿನ್ನಶೈಲಿಯ ಶಿಲ್ಪಗಳನ್ನು ಇಲ್ಲಿ ಕಾಣಬಹುದು. ಇಲ್ಲಿರುವ ಶಿವ, ನರಸಿಂಹ ಮಹಿಷಮರ್ದಿನಿ, ವಿಷ್ಣು, ವರಾಹ ಮತ್ತಿತರ ಶಿಲ್ಪಸಾಲುಗಳು ತುಂಬ ಓಜಸ್ವಿಯಾಗಿವೆ. ಭುವನೇಶ್ವರಿಯಲ್ಲಿಯ ಶಿಲ್ಪಗಳೂ ಅಷ್ಟೇ ಪ್ರಭಾವಶಾಲಿಯಾಗಿವೆ. ಬಾದಾಮಿ ಗುಹೆಗಳಲ್ಲಿಯ ಶಿಲ್ಪಗಳಲ್ಲಿ ಗುಪ್ತಶೈಲಿಯ ಪ್ರಭಾವ ಗೋಚರವಾದರೂ ಇಲ್ಲಿಯ ಶಿಲ್ಪಗಳು ಹೆಚ್ಚು ದೇಹ ಪುಷ್ಟಿಯಿಂದ ಕೂಡಿವೆ. ಒಂದೊಂದೂ ಸ್ತಬ್ಧದೃಶ್ಯದಂತೆ ಪರಿಣಾಮ ಬೀರುತ್ತವೆ. ಭುವನೇಶ್ವರಿಯ ವೈವಿಧ್ಯ ಮನಸ್ಸನ್ನು ಸೆರೆಹಿಡಿಯುತ್ತದೆ. ಕಂಬಗಳ ಮೇಲಿನ ಪುತ್ತಳಿಗಳು ಅಂದವಾಗಿವೆ. ನಟರಾಜ, ಅರ್ಧನಾರೀಶ್ವರ, ವರಾಹ, ತ್ರಿವಿಕ್ರಮ, ನರಸಿಂಹ, ತ್ರೈಲೋಕ್ಯವರ್ಧನ ಮುಂತಾದವು ಇಲ್ಲಿಯ ಉಲ್ಲೇಖನೀಯ ಶಿಲ್ಪಗಳು. ಪಟ್ಟದಕಲ್ಲು ಶಿಲ್ಪಕ್ಕಿಂತಲೂ ವಾಸ್ತುವಿನ ದೃಷ್ಟಿಯಿಂದ ಪ್ರಮುಖವಾದುದು. ರಾಮಾಯಣ ಮಹಾಭಾರತ ಕಥೆಗಳ ಸನ್ನಿವೇಶಗಳನ್ನು ಇಲ್ಲಿ ಶಿಲ್ಪಿಸಲಾಗಿದೆ. ಶಿಲ್ಪವಿನ್ಯಾಸ ಮತ್ತು ಭಾವಾಭಿವ್ಯಕ್ತಿಯಲ್ಲಿ ಶಿಲ್ಪಿಗಳು ತೋರಿದ ಪ್ರತಿಭೆ ಸ್ವೋಪಜ್ಞತೆಗಳಿಗೆ ಉತ್ತಮ ನಿದರ್ಶನಗಳು ಐಹೊಳೆಯ ರಾವಣಘಡಿಯಲ್ಲಿವೆ. ಹಾರುವ ಗಂಧರ್ವ (ದೆಹಲಿಯ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿದೆ), ಶೇಷಶಾಯಿ ವಿಷ್ಣು (ಮುಂಬಯಿಯ ಪ್ರಿನ್ಸ್ ಆಫ್‍ವೇಲ್ಸ್ ವಸ್ತುಸಂಗ್ರಹಾಲಯದಲ್ಲಿದೆ), ಶಿವ, ಗೌರಿ, ಬ್ರಹ್ಮ ಮತ್ತು ಐಹೊಳೆಯ ಜಿನಾಲಯದ ಅಂಬಿಕಾ ಶಿಲ್ಪಗಳು ಶ್ರೇಷ್ಠ ಶಿಲ್ಪಗಳ ಸಾಲಿಗೆ ಸೇರುವಂಥವು. ಸಾಮಾನ್ಯವಾಗಿ ದುಂಡುಮುಖ, ತುಂಬುಗಲ್ಲ, ದಪ್ಪ ತುಟಿ, ವಿಶಾಲವಕ್ಷ, ಹಿತಮಿತ ಅಲಂಕರಣ, ಮಂದಹಾಸ ಚಳುಕ್ಯ ಶಿಲ್ಪಶೈಲಿಯ ಕೆಲವು ಲಕ್ಷಣಗಳು.

ವಿಚಿತ್ರ ಚಿತ್ತ ಎಂಬ ಬಿರುದು ಧರಿಸಿದ್ದ ಪಲ್ಲವ ಮಹೇಂದ್ರವರ್ಮ ಬಹುಮುಖ್ಯ ಪ್ರತಿಭೆಯುಳ್ಳ ಪ್ರಯೋಗಶೀಲ ದೊರೆ. ಮಂಡಗಪಟ್ಟುವಿನಲ್ಲಿ, ತಮಿಳುನಾಡಿನಲ್ಲಿ ಮೊತ್ತಮೊದಲಿಗೆ, ಬಂಡೆಯಲ್ಲಿ ಕೊರಸಿ ತ್ರಿಮೂರ್ತಿಗಳಿಗೆ ಆಲಯವನ್ನು ಮಾಡಿಸಿದಾತ. ಬಹುಶಃ ಈತನ ಅಜ್ಜ ವಿಷ್ಣುಕಂಡಿದೊರೆ ವಿಕ್ರಮ ಮಹೇಂದ್ರನಿಂದ ಈತನಿಗೆ ಪ್ರೇರಣೆ ಪ್ರಭಾವ ದೊರೆತಿರಬಹುದು. ತಿರುಚಿರಾಪಳ್ಳಿ, ತಿರುಕ್ಕಳು ಕುನ್ರಮ್, ಕೀಳ್ಮಾವಿಲಂಗೈ ಮತ್ತಿತರ ಸ್ಥಳಗಳಲ್ಲಿ ಇವನ ಕಾಲದ ಉತ್ತಮ ಶಿಲ್ಪಗಳನ್ನು ನೋಡಬಹುದು. ತಿರುಚಿನಾಪಳ್ಳಿಯ ಗಂಗಾಧರ ಶಿಲ್ಪ ಫಲಕ ಅತ್ಯುತ್ತಮ ಕಲಾಕೃತಿ. ಶಿವನು ಗಂಗೆಯ ಗರ್ವವನ್ನು ಒಂದು ರೀತಿಯ ಉಪೇಕ್ಷೆಯಿಂದಲೆ ಭಂಗಿಸಿ ತನ್ನ ಜಟೆಯಲ್ಲಿ ಬಂಧಿಸಿದ್ದಾನೆ. ತಿರುಕ್ಕಳು ಕುನ್ರಮ್‍ನ ರಾಜಪರಿವಾರಶಿಲ್ಪ ತುಂಬ ಆಕರ್ಷಕವಾಗಿದೆ. ಪಲ್ಲವ ನರಸಿಂಹ ವರ್ಮ ಮಾಮಲ್ಲ ಭಾರತೀಯ ವಾಸ್ತುಶಿಲ್ಪಕ್ಕೆ ನೀಡಿದ ಅಮೂಲ್ಯ ಕೊಡುಗೆಗಳೆಂದರೆ ರಥಗಳು (ಏಕಶಿಲಾದೇಗುಲಗಳು). ಈತನ ಶಿಲ್ಪ ಪ್ರತಿಕೃತಿ ಧರ್ಮ ರಾಜರಥದಲ್ಲಿದ್ದು. ಶಿಲ್ಪಿಯ ಪರಿಣತಿಗೆ ಸಾಕ್ಷಿಯಾಗಿದೆ. ಕೆಲವು ಪಲ್ಲವಶಿಲ್ಪಗಳು ಪ್ರಗಲ್ಭವಾಗಿವೆ. ಮಾಮಲ್ಲಪುರದ (ಮಹಾಬಲಿಪುರ) ಗುಹೆಗಳಲ್ಲಿಯ ಗೋವರ್ಧನಗಿರಿಧಾರಿ,ಶೇಷಶಾಯಿ ವಿಷ್ಣು, ಮಹಿಷಮರ್ದಿನಿ, ಗಜಲಕ್ಷ್ಮಿ ಮುಂತಾದವು ಉತ್ಕøಷ್ಟ ಶಿಲ್ಪಗಳಾಗಿದ್ದು ಪಲ್ಲವ ಶೈಲಿಯ ಮೊದಲ ಹಂತದ ಲಕ್ಷಣಗಳನ್ನು ತೋರುತ್ತವೆ. ಪತ್ನಿಸಹಿತರಾದ ಸಿಂಹವಿಷ್ಣು ಮತ್ತು ಮಹೇಂದ್ರವರ್ಮರ ಶಿಲ್ಪ ಫಲಕಗಳನ್ನು ವರಾಹಗುಹೆಯಲ್ಲಿ ನೋಡಬಹುದು. ಸೋಮಸ್ಕಂಧ ಮೇಲಿಂದಮೇಲೆ ಕಂಡುಬರುವ ಶಿಲ್ಪಗಳಲ್ಲೊಂದು. ಬೃಹತ್ ಬಂಡೆಯಮೇಲೆ ಕಂಡರಿಸಿದ. ಅರ್ಜುನನ ತಪಸ್ಸು ಎಂದು ಕರೆಯಲಾಗುವ ಶಿಲ್ಪಸಮುದಾಯ ಒಂದು ಅಪೂರ್ವ ಕಲಾಕೃತಿ. ತರುವಾಯದ ಪಲ್ಲವ ಶಿಲ್ಪಗಳಲ್ಲಿ ಅಲಂಕರಣ ಸ್ವಲ್ಪ ಹೆಚ್ಚಿದೆ. ಕಾಂಚೀಪುರದ ವೈಕುಠಪೆರುಮಾಳ, ಐರಾವತೇಶ್ವರ, ಮುಕ್ತೇಶ್ವರ, ಮತಂಗೇಶ್ವರ ಮತ್ತಿತರ ದೇವಾಲಯಗಳಲ್ಲಿಯ ಶಿಲ್ಪರಾಶಿಯಲ್ಲಿ ಈ ಅಂಶವನ್ನು ಗುರುತಿಸಬಹುದು. ಸತ್ಯಮಂಗಲದ ಸಪ್ತಮಾತೃಕೆಯರು, ಯೋಗದಕ್ಷಿಣಾಮೂರ್ತಿ, ವೀರಭದ್ರ ಮೂರ್ತಿಗಳು (ಈಗ ಮದರಾಸು ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿವೆ), ಕೋಲುಮುಖ ನೀಳಕಾಯಗಳಿಂದ ಕೂಡಿವೆ. ಪಲ್ಲವ ಕಾಲದ ನಾಗರಿಕತೆ, ನಗರಜೀವನ, ಯುದ್ಧ, ಅಶ್ವಮೇಧ, ಅರಸನ ಆಯ್ಕೆ, ಪಟ್ಟಾಭಿಷೇಕ, ದೇವಾಲಯ ಪ್ರತಿಷ್ಠಾಪನೆ ಮುಂತಾದ ಹಲವು ಹತ್ತು ವಿಷಯಗಳಿಗೆ ಸಂಬಂಧಿಸಿದ ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ಕಲ್ಲಿನಲ್ಲಿ ಕಂಡರಿಸಿರುವುದನ್ನು ಕಾಂಚಿಯ ವೈಕುಂಠ ಪೆರುಮಾಳ ದೇವಾಲಯದ ಒಳಗೋಡೆಯ ಮೇಲಿನ ಶಿಲ್ಪ ಸಾಲಿನಲ್ಲಿ ಕಾಣುತ್ತೇವೆ. ಆ ಕಾಲದ ಸಾಂಸ್ಕøತಿಕ ಜೀವನದ ಬಗ್ಗೆ ಇಣುಕು ನೋಟವನ್ನು ಇವು ಒದಗಿಸುತ್ತವೆ. ಪಲ್ಲವ ಮೂರ್ತಿಶಿಲ್ಪಗಳಲ್ಲಿ ವಿಷ್ಣು, ಶಿವ, ದೇವಿ ಇವು ಅಧಿಕ. ಕಾವೇರಿಪಾಕ್ಕಮಿನಲ್ಲಿಯ ಪಲ್ಲವ ಶಿಲ್ಪಗಳು ಇನ್ನೂ ಅನಂತರದ ಕಾಲದವು. ಪಲ್ಲವ ಪ್ರದೇಶದ ಒಂದು ಭಾಗ ರಾಷ್ಟ್ರಕೂಟರ ಅಧೀನವಾಗಿದ್ದುದರಿಂದ, ಆ ಭಾಗದಲ್ಲಿ ಚಾಳುಕ್ಯ-ರಾಷ್ಟ್ರಕೂಟ ಶಿಲ್ಪಶೈಲಿಯ ಅಂಶಗಳು ಪಲ್ಲವ ಶೈಲಿಯಲ್ಲಿ ಬೆರೆತಿರುವುದನ್ನು ಗಮನಿಸಬಹುದಾಗಿದೆ.

ದಕ್ಷಿಣ ಭಾರತದ ತೀರ ದಕ್ಷಿಣದಲ್ಲಿ ಪ್ರಾಚೀನ ಪಾಂಡ್ಯರ ಗುಹಾಲಯಗಳಿದ್ದು ಇವು ಪಲ್ಲವರ ಗುಹೆಗಳನ್ನು ನಿಕಟವಾಗಿ ಹೋಲುತ್ತವೆ. ತಿರುಮಲೈಪುರದ ಗುಹಾಲಯದಲ್ಲಿಯ ಬ್ರಹ್ಮ, ನಾಟ್ಯಶಿವ, ವಿಷ್ಣು, ಗಣೇಶ ಹಾಗೂ ದ್ವಾರಪಾಲಕ ಶಿಲ್ಪಗಳು ಪಲ್ಲವ ಶಿಲ್ಪಗಳಿಗೆ ಸದೃಶವಾಗಿವೆ. ನಟೇಶನ ನೃತ್ಯವನ್ನು ಪ್ರತಿನಿಧಿಸುವ ತಿರುಪ್ಪರನ್ ಕುನ್ರಮಿನ ಮನೋಹರ ಶಿಲ್ಪ ಈ ಕಾಲದ ಆತ್ಯುತ್ತಮ ಹಾಗೂ ಗಮನಾರ್ಹ ಶಿಲ್ಪಗಳಲ್ಲೊಂದು. ವಾದ್ಯವೃಂದದವರು, ಶಿವಗಣ, ನಂದಿ, ಪಾರ್ವತಿ ಎಲ್ಲರೂ ಶಿವನ ನೃತ್ಯನೋಡುವುದರಲ್ಲಿ ಮೈಮರೆತಿದ್ದಾರೆ. ಕಳುಗುಮಲೈನಲ್ಲಿ ಸೊಗಸಾದ ಶಿಲ್ಪಗಳಿಂದ ಕೂಡಿದ ಗುಹಾದೇಗುಲದಲ್ಲಿ ಉಮಾಮಹೇಶ್ವರಮೂರ್ತಿ ಪ್ರತಿಷ್ಠಿತವಾಗಿದೆ. ಮೃದಂಗ ನುಡಿಸುತ್ತಿರುವ ದಕ್ಷಿಣಾಮೂರ್ತಿ ಉಲ್ಲೇಖಾರ್ಹ ಶಿಲ್ಪ. ಇಲ್ಲಿ ಬ್ರಹ್ಮ, ಸ್ಕಂದ ಸೂರ್ಯಚಂದ್ರರ ಶಿಲ್ಪಗಳೂ ಇವೆ. ದೇಗುಲರ ಗೂಡಿಗಂಡಿಗಳಲ್ಲಿ ಸುರಸುಂದರಿಯರು ಸ್ನಾನಾನಂತರ ತಮ್ಮ ಕೇಶರಾಶಿಯನ್ನು ಒಣಗಿಸಲು ನಿಂತಂತೆ ಬಿಡಿಸಿರುವ ರೀತಿ ಕುತೂಹಲಕಾರಿಯಾಗಿದೆ. ಸೆಂದಮರಮ್, ಕುನ್ನಕ್ಕುಡಿ, ಚೊಕ್ಕಂಪಟ್ಟ ಮುಂತಾದೆಡೆ ಈ ಕಾಲದ ಕೆಲವು ಶಿಲ್ಪಗಳು ಕಂಡುಬರುತ್ತವೆ. ರೂಪವಿನ್ಯಾಸದಲ್ಲಾಗಲಿ ಭಾವಭಂಗಿಯಲ್ಲಾಗಲಿ ಪ್ರಾಚೀನ ಚೇರ ಶಿಲ್ಪಗಳು ಪಲ್ಲವ ಪಾಂಡ್ಯ ಶಿಲ್ಪಗಳಿಂದ ಅಷ್ಟೇನು ಭಿನ್ನವಾಗಿಲ್ಲ ಕವಿಯೂರಿನ ದ್ವಾರಪಾಲಕ ಮೂರ್ತಿಗಳೂ ಚೇರು ಪ್ರಾಚೀತಮ ಶಿಲ್ಪಗಳು; ಮುಂದಿನ ಮಜಲು ಕಂಡು ಬರುವುದು ವಿಳಂಜಮ್ ಗುಹಾದೇಗುಲದ ದ್ವಾರದಮೇಲೆ ಕೆತ್ತಿದ ಮೂರ್ತಿಗಳಲ್ಲಿ ಕುರಿತ್ತಿಯರ ಎಂಬಲ್ಲಿರುವ ವಿಷ್ಣುಮೂರ್ತಿಯಲ್ಲಿ ಅಲಂಕರಣೆಗೆ ಹೆಚ್ಚು ಗಮನ ನೀಡಿರುವುದು ಗೋಚರಿಸುತ್ತದೆ. ವಿಳಂಜಮ್ ಎಂಬಲ್ಲಿ ನಡೆಸಿದ ಉತ್ಖನನದಲ್ಲಿ ಲಭಿಸಿದ ದ್ವಾರಪಾಲಕಮೂರ್ತಿ ಪ್ರಾಚೀನ ಚೋಳ ಶೈಲಿಯ ಲಕ್ಷಣಗಳನ್ನು ತೋರುತ್ತದೆ. ತಲಖಾಟ್‍ನ ಭಗ್ನ ವಿಷ್ಣುಶಿಲ್ಪ, ಭರಣಿಕ್ಕಣಿ. ಮುರುದುಕುಲಂಗರೈಗಳಲ್ಲಿಯ ಬುದ್ಧಮೂರ್ತಿಗಳು ಹಾಗೂ ಚಿತರಾಲ್ ಬಂಡೆಯಮೇಲೆ ಕಂಡರಿಸಿದ ಜೀವಮೂರ್ತಿಗಳು ಪ್ರಾಚೀನ ಚೇರ ಕಲೆಯ ಉತ್ತಮ ಉದಾಹರಣೆಗಳು. ತ್ರಿವಿಕ್ರಮ ಮಂಗಲದ ದೇವಾಲಯದ ಕಟಾಂಜನಗಳ ಮೇಲಿನ ಕೂಡಕೂತ್ತು ನೃತ್ಯ, ಗಾನವಾದನದೃಶ್ಯ ಶಿಲ್ಪಗಳು ಅಧ್ಯಯನಯೋಗ್ಯವಾಗಿವೆ. ನಾಮಕ್ಕಲ್ ಗುಹೆಗಳ ರಂಗನಾಥ ಮತ್ತು ಲಕ್ಷ್ಮಿ ನರಸಿಂಹ ಶಿಲ್ಪಗಳು 8ನೆಯ ಶತಮಾನಕ್ಕೆ ಸೇರಿದ್ದು ಮಾಮಲ್ಲಪುರದ ಶೇಷಶಾಯಿ ವಿಷ್ಣುಶಿಲ್ಪವನ್ನು ನೆನಪಿಗೆ ತರುತ್ತವೆ. ವೇಂಗಿಯ ಚಾಳುಕ್ಯ ಮನೆತನ ಬಾದಾಮಿ ಚಾಳುಕ್ಯ ಮನೆತನದ ಒಂದು ಶಾಖೆ. ಶಿಲ್ಪಶೈಲಿಯೂ ಆರಂಭದಲ್ಲಿ ಅಭಿನ್ನವಾದ್ದು. ವಿಜಯವಾಡದಲ್ಲಿ ಲಭಿಸಿದ ಬೃಹತ್ ದ್ವಾರಪಾಲಕ ಮೂರ್ತಿಗಳೂ ಅತಿ ಪ್ರಾಚೀನವೆನ್ನಲಾಗಿದೆ (ಈಗ ಇವು ಮದರಾಸಿನ ವಸ್ತುಸಂಗ್ರಹಾಲಯದಲ್ಲಿವೆ). ಗುಂಡಯನೆಂಬಾತ ಕಡೆದ ಈ ಮೂರ್ತಿಗಳ ಮುಖಭಾವ, ಭಂಗಿ ಮನೋಹರವಾಗಿವೆ. ಬಿಕ್ಕವೋಲಿನಲ್ಲಿರುವ ಬೃಹತ್ ಗಣೇಶಮೂರ್ತಿಯೂ ಏಳನೆಯ ಶತಮಾನಕ್ಕೆ ಸೇರಿದ ಇನ್ನೊಂದು ಸುಂದರಶಿಲ್ಪ, ಜಾಮಿದೊಡ್ಡಿಯಲ್ಲಿಯ ಹಲವು ಸ್ತಂಭಶಿಲ್ಪಗಳು, ಇಂದ್ರಕೀಲಬೆಟ್ಟದ ಕಿರಾತಾಜೂನಿಯ ಕಥೆ ಕೆತ್ತನೆಯ ಸ್ತಂಭ-ಇವು 9ನೆಯ ಶತಮಾನವು. ಬಿಕ್ಕವೋಲಿನ ಗೋಲಿಂಗೇಶ್ವರವಲಯದ ಶಿಲ್ಪಗಳು, ವಿಶೇಷವಾಗಿ ಮಕರತೋರಣ ನಟರಾಜ, ಸ್ಕಂದ, ಬ್ರಹ್ಮ ದ್ವಿಭಾಹುಗಣೇಶ ಗಮನಾರ್ಹವಾಗಿವೆ. ಇಲ್ಲಿಯ ಆಲಿಂಗನ ಚಂದ್ರಶೇಖರಮೂರ್ತಿ ವಿಶಿಷ್ಟವೂ ರಮಣೀಯವೂ ಆದುದು. ಈ ದೇಗುಲದ ಕೆಲವು ಶಿಲ್ಪಗಳಲ್ಲಿ ಕಳಿಂಗಶಿಲ್ಪ ಸಂಪ್ರದಾಯದ ಪ್ರಭಾವ ಗೋಚರಿಸುತ್ತದೆ. ಸಾಮಲಕೋಟೆ, ದ್ರಾಕ್ಷಾರಾಮ ಮತ್ತು ಭೀಮಾರಮಿನ ದೇವಾಲಯಗಳಲ್ಲಿಯ ಲಕುಲಿಗಣೇಶಶಿಲ್ಪಗಳಲ್ಲಿ ಚಾಳುಕ್ಯ, ರಾಷ್ಟ್ರಕೂಟ, ಪಲ್ಲವ, ಚೋಳ ಶಿಲ್ಪಶೈಲಿಗಳ ಸಮ್ಮಿಶ್ರಣ ಕಂಡುಬರುತ್ತದೆ. ಆದರೂ ವಿಭಿನ್ನ ಶೈಲಿಗಳ ಸಹಜ ಮೇಳವಿಕೆಯಿಂದಾಗಿ ಪೂರ್ವ ಚಾಳುಕ್ಯ ಶಿಲ್ಪಗಳು ಆಕರ್ಷಕವಾಗಿಯೇ ಇವೆ. ರಾಷ್ಟ್ರಕೂಟ ಬಾದಾಮಿ ಚಾಳುಕ್ಯರ ಶಿಲ್ಪಶೈಲಿಯನ್ನು ಅಳವಡಿಸಿಕೊಂಡರಾದರೂ ಕೆಲವು ಮಾರ್ಪಾಟುಗಳನ್ನೂ ಮಾಡಿಕೊಂಡರು. ದೇಹವಿನ್ಯಾಸದಲ್ಲಿ ಅಭರಣ ವೈವಿಧ್ಯದಲ್ಲಿ ಇವರ ಸ್ವಂತಿಕೆ ವೈಶಿಷ್ಟ್ಯಗಳನ್ನು ಗಮನಿಸಬಹುದು ವಾಸ್ತು ಶಿಲ್ಪಗಳ ದೃಷ್ಟಿಯಿಂದ ರಾಷ್ಟ್ರಕೂಟರ ಮಹಾಸಾಧನೆಗೆ ಎಲ್ಲೋರದ (ನೋಡಿ- ಎಲ್ಲೋರಾ) ಎಲ್ಲೋರ ಕೈಲಾಸ ದೇವಾಲಯ ಅಮೂಲ್ಯ ಸಾಕ್ಷಿಯಾಗಿದೆ. ಉದಾತ್ತಧ್ಯೇಯ ಸಿದ್ದಿಗಾಗಿ ಮಾನವರ ಬುದ್ಧಿ, ಹೃದಯ ಹಾಗೂ ಹಸ್ತಗಳು ತನ್ಮಯತೆಯಿಂದ ಕೆಲಮಾಡಿರುವುದನ್ನಲ್ಲಿ ಕಾಣಬಹುದೆನ್ನುವುದು ಪರ್ಸಿಬ್ರೌನರ ಅಭಿಪ್ರಾಯ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದೊಂದು ಕಲ್ಲಿನಲ್ಲಿ ಕಂಡರಿಸಿದ ಅದ್ಭುತ ಮಹಾಕಾವ್ಯ ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಅನೇಕ ಸನ್ನಿವೇಶಗಳು ಇಲ್ಲಿ ಶಿಲ್ಪಿತವಾಗಿವೆ. ದಶಕಂಠಗಳನ್ನು ಶಿವನಿಗರ್ಪಿಸುತ್ತಿರುವ ರಾವಣ, ತ್ರಿಪುರಾಂತಕ ಮಹಾಯೋಗಿ, ಗಂಗಾಯಮುನಾ, ಮಹಿಷಾಸುರನನ್ನು ಬೆನ್ನಟ್ಟಿ ಹೋಗುತ್ತಿರುವ ಸಿಂಹವಾಹಿನಿ ದುರ್ಗೆ, ಅನ್ನಪೂರ್ಣೆ ಮುಂತಾದ ಶಿಲ್ಪಗಳು ಅಪೂರ್ವವಾಗಿವೆ. ಎಲ್ಲೋರದ ಹಲವಾರು ಗುಹಾಂತರ್ಗತ ದೇಗುಲಗಳು ರಾಷ್ಟ್ರಕೂಟರ ಕಾಲದವು. ಎಲಿಫೆಂಟಾದ ಬೃಹತ್ ಮಹೇಶಮೂರ್ತಿಯನ್ನು ತ್ರಿಮೂತಿಯೆಂದು ತಪ್ಪಾಗಿ ಭಾವಿಸಲಾಗಿತ್ತು. ಇದು ಮಹಾದೇವನ ಸದೋ ಜಾತ, ಅಘೋರ ಮತ್ತು ತತ್ಫುರುಷ ಸ್ವರೂಪವೆಂದು ಅನಂತರ ಸರಿಯಾಗಿ ಗುರುತಿಸಲಾಯಿತು. ಈ ಮೂರ್ತಿಯ ಚೆಲುವು. ಭವ್ಯತೆ ಮತ್ತು ಗಾಂಭೀರ್ಯ ರೋಮಾಂಚನ ಉಂಟುಮಾಡುತ್ತದೆ. ನಿಡುಗುಂದಿ, ರೋಣ, ಸವಡಿ, ಗದಗ ಮುಂತಾದೆಡೆಗಳಲ್ಲಿ ರಾಷ್ಟ್ರಕೂಟ ಶೈಲಿಯ ಶಿಲ್ಪಗಳನ್ನು ಈಚೆಗೆ ಗುರುತಿಸಲಾಗಿದೆ. ಸಿರಿವಾಳ ದೇವಾಲಯ ಸಮುದಾಯವೊಂದು ಈ ಕಾಲದ್ದು. ಮಾವಳ್ಳಿ. ರೋಣ ಬೆಟಗೇರಿ ಮೊದಲಾದ ಕಡೆಗಳಲ್ಲಿರುವ ಈ ಕಾಲದ ವೀರಗಲ್ಲುಗಳು ಕೂಡ ಕಲೆಯ ದೃಷ್ಟಿಯಿಂದ ಗಮನಾರ್ಹವಾಗಿದೆ.

ಕರ್ನಾಟಕದ ದಕ್ಷಿಣಭಾಗವನ್ನು ಆಳುತ್ತಿದ್ದ ಗಂಗರ ಶಿಲ್ಪಗಳು ಸಂಖ್ಯಾದೃಷ್ಟಿಯಿಂದ ಕಡಿಮೆಯಾದರೂ ಸತ್ತ್ವದಲ್ಲಿ ಗಮನಾರ್ಹವಾಗಿವೆ. ಇವುಗಳಲ್ಲಿ ಪಲ್ಲವ ಶೈಲಿಯ ಪ್ರಭಾವವಿದ್ದರೂ ಸ್ವಂತಿಕೆಯ ಅಂಶವೂ ಕಂಡುಬರುತ್ತದೆ. ಉಬ್ಬುಶಿಲ್ಪದಲ್ಲಾಗಲಿ, ಪೂರ್ಣದುಂಡು ಶಿಲ್ಪದಲ್ಲಾಗಲಿ ಬಿಂಬಿತವಾಗಿರುವ ಸರಳತೆ, ಸಹಜತೆ ಹಾಗೂ ಭಾವಪೂರ್ಣತೆ ಈ ಶೈಲಿಯ ವೈಶಿಷ್ಟ್ಯವಾಗಿದೆ. ಸ್ವಲ್ಪ ಮಟ್ಟಿನ ರೂಕ್ಷತೆ ಕೆಲವು ಶಿಲ್ಪಗಳಲ್ಲಿ ಕಾಣುವುದುಂಟು. ಗರ್ಜಿಯ ಕಲ್ಲೇಶ್ವರ ದೇವಾಲಯದ ಶಿಲ್ಪಗಳು, ನಂದಿಯ ವೀರಭದ್ರ ದೇವಾಲಯದ ಮೆಟ್ಟಲುಗಳ ಪಾಶ್ರ್ಚಗಳಲ್ಲಿ ನಿಲ್ಲಿಸಿರುವ ಕಟಾಂಜನ ಶಿಲ್ಪಗಳು ಸತ್ತ್ವಯುತವಾಗಿದೆ. ತೆಳುವುಬ್ಬು ಶಿಲ್ಪದಲ್ಲಿ ಬಿಡಿಸಿರುವ ಹಲವಾರು ವೀರಗಲ್ಲುಗಳು ಶಿಲ್ಪದೃಷ್ಟಿಯಿಂದ ಅಧ್ಯಯನ ಯೋಗ್ಯವಾಗಿವೆ (ಬೇಗೂರು, ಹಿರೆ ಗುಂಡಗಲ್ಲು). ಬೆಂಗಳೂರು ವಸ್ತು ಸಂಗ್ರಹಾಲಯದಲ್ಲಿರುವ ದೊಡ್ಡಹುಂಡಿ ಶಾಸನದ ಶಿಲ್ಪದಲ್ಲಿ ನೀತಿಮಾರ್ಗನ ಪ್ರತಿಕೃತಿಯಿದೆ. ನಂದಿ, ವರುಣ, ನರಸಮಂಗಲ, ಶ್ರವಣಬೆಳಗೊಳ ಮುಂತಾದೆಡೆ ಗಂಗಶಿಲ್ಪಕ್ಕೆ ಉದಾಹರಣೆಗಳು ದೊರೆಯುತ್ತವೆ. ಶ್ರವಣಬೆಳಗೊಳದ ಗೊಮ್ಮಟೆಶ್ವರ (ನೋಡಿ- ಗೊಮ್ಮಟೇಶ್ವರ) ವಿಗ್ರಹದಲ್ಲಿ ಗಂಗಶಿಲ್ಪದ ಪರಾಕಾಷ್ಠೆಯನ್ನು ನೋಡಬಹುದು. ಸನ್ನಿವೇಶ, ಗಾತ್ರ ರಚನೆ ರೀತಿ ಎಲ್ಲದರದಲ್ಲಿಯೂ ಅನುಪಮವಾದ ಈ ಶಿಲ್ಪದಲ್ಲಿ ತ್ಯಾಗ, ಆತ್ಮಸಂಯಮ, ಕಿರುನಗೆಯಲ್ಲಿಯ ಅನುಕಂಪ ಹಲವು ರಸಭಾವಗಳು ಪರಿಣಾಮಕಾರಿಯಾಗಿ ಬಿಂಬಿತವಾಗಿವೆ. ಈ ಕಾಲದ ಲೋಹಮೂರ್ತಿಗಳು ಅಷ್ಟಾಗಿ ಉಳಿದುಬಂದಿಲ್ಲ. ಶ್ರವಣಬೆಳಗೊಳದ ಜೈನ ಮಠದಲ್ಲಿರುವ ಜೀವಮೂರ್ತಿ ಮಾರಸಿಂಹನ ಅಕ್ಕ ಕುಂದಣಸೋಮಿದೇವಿ ಮಾಡಿಸಿದುದು. (ನೋಡಿ- ಗಂಗರ-ಮೂರ್ತಿಶಿಲ್ಪ,-ತಲಕಾಡಿನ) ಪಲ್ಲವ ಮತ್ತು ಬಾದಾಮಿ ಚಾಳುಕ್ಯ ಶೈಲಿಗಳಿಂದ ಕೆಲವಂಶಗಳನ್ನು ತೆಗೆದುಕೊಂಡ; ತಮ್ಮದೆ ಆದ ವಿಶಿಷ್ಟ ಶೈಲಿಯೊಂದನ್ನು ರೂಪಿಸಿಕೊಂಡ ನೊಳಂಬರು (ನೋಡಿ- ನೊಳಂಬ) ತಮ್ಮ ರಾಜದಾನಿಯಾದ ಹೇಮಾವತಿಯಲ್ಲಿ ಹಲವು ದೇವಾಲಯಗಳನ್ನು ಕಟ್ಟಿಸಿದರು. ಮನಮೋಹಕ ನಿಲವು, ಮುಗ್ದ ಸೌಂದರ್ಯ ಮತ್ತು ಆಕರ್ಷಕ ಅಂಗ ಸೌಷ್ಠವಗಳಿಂದ ಕೂಡಿದ ಉಮಾಮಹೇಶ್ವರ ಶಿಲ್ಪನೊಳಂಬ ಶೈಲಿಗೆ ಉತ್ತಮ ಉದಾಹರಣೆ (ಈಗ ಇದು ಮರಾಸಿನ ವಸ್ತುಸಂಗ್ರಹಾಲಯದಲ್ಲಿದೆ.) ಇದನ್ನು ಸರಿಗಟ್ಟುವಂಥ ಶಿಲ್ಪಗಳು ಅಪರೂಪವೆ. ಈ ಶಿಲ್ಪದಲ್ಲಿ ಅಲಂಕರಣ ಅಪಾರವಾಗಿದ್ದರೂ ಇದು ಅತಿ ಎನ್ನಿಸುವುದಿಲ್ಲ. ದಕ್ಷಿಣಾಮೂರ್ತಿ, ನಟರಾಜ, ಕಾಳಿ, ಸೂರ್ಯ ಮುಂತಾದ ಶಿಲ್ಪಗಳೂ ಗಮನಾರ್ಹವಾಗಿವೆ. ನಂದಿಯ ಶಿಲ್ಪಗಳೂ ಮುಖ್ಯವಾದವು. ಹೇಮಾವತಿ, ಧರ್ಮಪುರಿ, ಆವನಿ ಮುಂತಾದೆಡೆಗಳಲ್ಲಿ ಈ ಶೈಲಿಯ ಜಾಲಂಧ್ರಗಳನ್ನು ಶಿಲ್ಪ ಸಾಲುಗಳನ್ನು ಕಾಣಬಹುದು. ಜಾಲಂಧ್ರಗಳ ನಿರೂಪಣೆಯಲ್ಲಿ ನೊಳಂಬರು ಅದ್ವಿತೀಯರೆನಿಸಿದ್ದರು. ಇವುಗಳ ಸೌಂದರ್ಯಕ್ಕೆ ಮಾರುಹೋದ ಚೋಳರಾಜೇಂದ್ರ ನೊಳಂಬವಾಡಿಯಿಂದ ಹಸುರುಕಲ್ಲಿನ ಜಾಲಂಧ್ರವೊಂದನ್ನು ಕೊಂಡೊಯ್ಡು ತಂಜಾವೂರಿನ ಬೃಹದೀಶ್ವರ ದೇವಾಲಯದಲ್ಲಿಟ್ಟ. ನೊಳಂಬ ಶೈಲಿಯ ಸ್ತಂಭಗಳೂ ಸುಂದರವಾಗಿವೆ. ಈ ಶೈಲಿಯ ಕುಸುರಿ ಕೆತ್ತನೆ ಕಲ್ಯಾಣ ಚಾಳುಕ್ಯ ಮತ್ತು ಹೊಯ್ಸಳರ ಶಿಲ್ಪಿಗಳ ಕೈಯಲ್ಲಿ ಅತಿಯಾಗಿ ಬೆಳೆದದ್ದನ್ನು ಮುಂದೆ ಕಾಣುತ್ತೇವೆ. ಸುಮಾರು 4 ಶತಮಾನಗಳ ಕಾಲ ಆಳಿದ ಚೋಳರನ್ನು ವಾಸ್ತುಶಿಲ್ಪದೃಷ್ಟಿಯಿಂದ 'ದೈತ್ಯ ರೆಂದು ವರ್ಣಿಸಬಹುದು. ಇವರು. ಆರಂಭದಲ್ಲಿ ಪಲ್ಲವ ಶೈಲಿಯನ್ನು ಅಳವಡಿಸಿಕೊಂಡರೂ ಅನಂತರ ಖಚಿತವಾಗಿ ಗುರುತಿಸಬಹುದಾದ ತಮ್ಮದೇ ಶೈಲಿಯೊಂದನ್ನು ರೂಪಿಸಿಕೊಂಡರು. ಬೃಹದ್ಭಾರತದ ಪ್ರದೇಶದಲ್ಲೂ ಇವರ ಶಿಲ್ಪಶೈಲಿಯ ಪ್ರಭಾವವನ್ನು ಕಾಣಬಹುದು. ದೇವಾಲಯದ ಹೊರಗೋಡೆಯ ಮೇಲಿನ ಅಲಂಕೃತ ಅರೆಗಂಬಗಳು ಈ ಶೈಲಿಯ ವೈಶಿಷ್ಟ್ಯಗಳಲ್ಲೊಂದು. ಈ ಶೈಲಿಯ ಮೊದಲ ಉದಾಹರಣೆಗಳನ್ನು ಚಿದಂಬರಮ್ಮಿನ ಶಿವ ದೇವಾಲಯದಲ್ಲಿ ಗಮನಿಸಬಹುದು. ತೆಳು ನೀಳದೇಹ, ಸುಕುಮಾರ ಅಂಗಾಂಗಗಳು, ಬಡನಡು, ಆಕರ್ಷಕ ಬಾಗುಭಂಗಿ, ಬಳ್ಳಿಗೆಲಸದ ಕಿರೀಟ ಹಾಗೂ ಜನಿವಾರ, ಕಂಠಹಾರ, ಸೂಕ್ಷ್ಮ ಸಂಕೀರ್ಣ ಅಲಂಕರಣ, ಬೀಸಣಿಗೆಯಂಥ ಉಡುಪು ಮಡಿಕೆಗಳು (ನಿರಿಗೆ) ಮುಂತಾದವು ಈ ಶೈಲಿಯ ಗಮನಾರ್ಹ ಲಕ್ಷಣಗಳು. ಪಲ್ಲವ ಶಿಲ್ಪಗಳಿಗಿಂತ ಈ ಶಿಲ್ಪಗಳ ಅಂಡಾಕಾರದ ಮೊಗ ಆಕರ್ಷಕವೆನಿಸುತ್ತದೆ. ಕುಂಭಕೋಣದ ನಾಗೇಶ್ವರ ದೇವಾಲಯದ ಗೂಡುಗಂಡಿಗಳಲ್ಲಿರುವ ತೆಳುಮೂರ್ತಿಗಳು, ಕಿಳೈಯೂರಿನ ಶಿವಾಲಯದ ದ್ವಾರಪಾಲಕರು, ಶ್ರೀನಿವಾಸ ನಲ್ಲೂರಿನ ಕುರುಂಗನಾಥೇಶ್ವರ ದೇವಸ್ಥಾನದ ಶಿಲ್ಪಗಳು 10ನೆಯ ಶತಮಾನದ ಚೋಳ ಶಿಲ್ಪಶೈಲಿಯ ಉಲ್ಲೇಖನೀಯ ಉದಾಹರಣೆಗಳು. ಕಾವೇರಿಪಾಕ್ಕಮ್ ಶಿಲ್ಪಗಳಲ್ಲಿ ರಾಷ್ಟ್ರಕೂಟ ಪ್ರಭಾವ ಕಂಡುಬರುತ್ತದೆ. ತಂಜಾವೂರು ಮತ್ತು ಗಂಗೈಕೊಂಡಚೋಳಪುರದ ದೇವಾಲಯಗಳ ಶಿಲ್ಪಗಳು ಚೋಳಶಿಲ್ಪಕಲೆಯ ಭಂಡಾರವೆನ್ನಬಹುದು. ವಿಶೇಷವಾಗಿ ತ್ರಿಪುರಾಂತಕೆ, ಕಾಲಾಂತರ ಕಿರಾತಾನುಗ್ರಹ ಮುಂತಾದ ಶಿವ ರೂಪಗಳಿಗೆ ತಂಜಾವೂರಿನ ದೇವಾಲಯದಲ್ಲಿ, ಗಂಗಾಧರ ರೂಪಕ್ಕೆ ಗಂಗೈಕೊಂಡ ಚೋಳಪುರದ ಆಲಯದಲ್ಲಿ ಮಹತ್ತ್ವ ನೀಡಿದೆ. ವೀರೋಚಿತವಾದ ಬೃಹತ್ ಪ್ರಮಾಣದ ಇಲ್ಲಿಯ ಮೂರ್ತಿಗಳು ಮುದನೀಡುತ್ತವೆ. ಗಂಗೈಕೊಂಡ ಚೋಳಪುರದ ಗಡ್ಡಧಾರಿ ಬ್ರಹ್ಮ ಇತರ ಕಲಾಶೈಲಿಗೆಳಿಂದ ಪ್ರಭಾವಿತವಾಗಿದೆ. ನವಗೃಹ ಶಿಲ್ಪಪಲಕ ಈ ಕಾಲದ ಶಿಲ್ಪಗಳ ಸ್ವೋಪಜ್ಞತೆಗೆ ಸಾಕ್ಷಿಯಾದ ಅದ್ಭುತ ಕಲಾಕೃತಿ ಗ್ರಹದೇವತೆಗಳು ದ್ವಿಭುಜರಾಗಿರುವುದು ಉತ್ತರ ಭಾರತದ ಮೂರ್ತಿಶಿಲ್ಪ ಶೈಲಿಯ ಪ್ರಭಾವವೆನ್ನಬಹುದು. ತೀಕ್ಷ್ಣ ಕಣ್ಣು, ಬಿಲ್ಲಿನಾಕಾರದ ಹುಬ್ಬು. ತರ್ಜನಿಮತ್ತು ವಿಸ್ಮಯದ ಹಸ್ತಮುದ್ರೆ ತ್ರಿಶೂಲ ಗದೆಗಳಿಂದ ಕೂಡಿದ ದ್ವಾರಪಾಲಕ ಮೂರ್ತಿಗಳು ಈ ಕಾಲದವು. ಇವು ದಕ್ಷಿಣ ಭಾರತದಲ್ಲೇ ಅತಿ ಎತ್ತರದ ದ್ವಾರಪಾಲಕ ಶಿಲ್ಪಗಳು ತಿರುವಾಡಿ ಮತ್ತು ಪಶುಪತಿಕೊವಿಲಗಳ ಬ್ರಹ್ಮ, ಕಂಡಿಯೂರಿನ ಶಿವ, ಮಯೂರಮ್ಮಿನ ಆಲಿಂಗನ ಚಂದ್ರಶೇಖರ ಮುಂತಾದ ಮೂರ್ತಿಗಳು, ದಾರಾಶುರಮ್ ದೇಗುಲದ ನಿತ್ಯ ವಿನೋದ ಶಿಲ್ಪಫಲಕ, ಅಶ್ವಚಕ್ರ ಅಲಂಕರಣೆ, ಶೈವಸಂತರ ಶಿಲ್ಪಗಳು, ಚಿದಂಬರ ದೇಗುಲದ ಗೋಪುರದ ಗೂಡುಗಂಡಿಗಳಲ್ಲಿಯ ಶಿಲ್ಪಗಳು, ನಾಟ್ಯ ಸನ್ನಿವೇಶದ ಕೆತ್ತನೆಗಳು ಮುಂತಾದವು ಜೋಳಶೈಲಿಯ ಉತ್ತಮ ಉದಾಹರಣೆಗಳಲ್ಲಿ ಕೆಲವು ಪಟ್ಟೇಶ್ವರಮ್, ತಿರುವಲಂಜುಳಿ, ತಿರುವಿಡೈ ಮರುದೂರು ತಿರುಚಂಗಾಟ್ಟನ್‍ಗುಡಿ ಮತ್ತಿತರ ಕಡೆಗಳಲ್ಲಿ ಚೋಳ ಶಿಲ್ಪಗಳು, ಪ್ರತಿಭಾ ಕೌಶಲ್ಕು ಸಾಕ್ಷಿಯಾಗಿವೆ. ಈ ಕಾಲದಲ್ಲಿ ಲೋಹಶಿಲ್ಪಗಳು ಹೆಚ್ಚು ಸಂಖ್ಯೆಯಲ್ಲಿ ತಯಾರಾದುವು. ನಟರಾಜ ಅತಿ ಜನಪ್ರಿಯ ಶಿಲ್ಪವಸ್ತು. ವಿಶಿಷ್ಟ ಭಂಗಿ, ಅಂಗಾಂಗ ಸಾಮರಸ್ಯ, ಕಲಾತ್ಮಕ ಅಭಿವ್ಯಕ್ತಿಗೆ ಚೋಳಶೈಲಿಯ ಲೋಹ ಮೂರ್ತಿಗಳು ಸುಪ್ರಸಿದ್ಧವಾಗಿವೆ. ಕಾಶ್ಮೀರ ಹಲವು ಸಂಸ್ಕøತಿಗಳ ಸಂಗಮಸ್ಥಾನ. ಇಲ್ಲಿಯ ಕಲೆಯಲ್ಲಿ ಗುಪ್ತಪಾಲ, ಪ್ರತಿಹಾರ ಮತ್ತಿತರ ಕಲಾಸಂಪ್ರದಾಯಗಳು ಬೆರೆತಿವೆ. 8ನೆಯ ಶತಮಾನದಲ್ಲಿ ಕರ್ಕೋಟ ವಂಶದ ಲಲಿತಾದಿತ್ಯ ಮುಕ್ತಾಪೀಡ ಪರಿಹಾಸಪುರದ ಪ್ರಸಿದ್ಧ ಮಾತಾರ್ಂಡ ದೇವಾಲಯವನ್ನೂ ಒಂಬತ್ತನೆಯ ಶತಮಾನದಲ್ಲಿ ಉತ್ಪಲ ವಂಶದ ಅವಂತಿವರ್ಮ ಅವಂತಿಪುರದ ಅವಂತಿಸ್ವಾಮಿ ದೇವಾಲಯಗಳನ್ನೂ ಕಟ್ಟಿಸಿದರು. ಇಲ್ಲಿಯ ಶಿಲ್ಪಗಳಲ್ಲಿ ಪ್ರಧಾನವಾಗಿ ಗುಪ್ತ ಶೈಲಿಯ ಅಂಶಗಳು ಕಂಡು ಬಂದರೂ ಗಾಂಧಾರ ಹಾಗೂ ಮಧ್ಯ ಏಷ್ಯ ಸಂಪ್ರದಾಯಗಳ ಪ್ರಭಾವವನ್ನೂ ಗುರುತಿಸಲು ಸಾಧ್ಯ. ಮಾರ್ತಾಂಡ ದೇವಾಲಯದ ಅಶ್ವಾರೂಢ ಸೂರ್ಯ ಶಿಲ್ಪದ ಕೇಶವಿನ್ಯಾಸ ಗುಪ್ತ ಶೈಲಿಯದು. ಶತಶತಮಾನಗಳ ತರುವಾಯ ಕಾಂಗ್ರಾ ಚಿತ್ರಕಲೆಯಲ್ಲೂ ಇಂಥ ಸೂರ್ಯಚಿತ್ರ ಕಾಣಿಸುತ್ತದೆ. ಇದೇ ದೇವಾಲಯದ ವರುಣ ಹಾಗೂ ಗೂಡುಗಂಡಿಯಲ್ಲಿರುವ ಬಹುಮುಖಿ ಶಿವ ಸೊಗಸಾದ ಶಿಲ್ಪಗಳು. ಅವಂತಿಸ್ವಾಮಿ ದೇವಾಲಯದಲ್ಲಿಯ ರಾಜಪರಿವಾರ ಶಿಲ್ಪಫಲಕ, ಪ್ರೀತಿ ಹಾಗೂ ರತಿ ಸಹಿತನಾದ ಮನ್ಮಥ ಶಿಲ್ಪಗಳು ಎದ್ದು ಕಾಣುತ್ತವೆ. ವಿಷ್ಣು (ಫಿಲಡೆಲ್ಫಿಯಾ ವಸ್ತುಸಂಗ್ರಹಾಲಯದಲ್ಲಿದೆ). ಅರ್ಧನಾರೀಶ್ವರ (ಶ್ರೀನಗರ ವಸ್ತು ಸಂಗ್ರಹಾಲಯದಲ್ಲಿದೆ) ಮತ್ತು ತ್ರಿಮುಖ ವಿಷ್ಣು (ಕ್ರಮವಾಗಿ ವರಾಹ-ನರ-ಸಿಂಹ ಮುಖಗಳು) ಈ ಕಾಲದ ಉಲ್ಲೇಖಾರ್ಹ ಮೂರ್ತಿಗಳು.

ಗೂರ್ಜರ ಪ್ರತೀಹಾರ ಶೈಲಿಯ ಕೆಲವು ಉತ್ತಮ ಶಿಲ್ಪಗಳು ಕನೂಜಿನಲ್ಲಿ ಈಚೆಗೆ ದೊರೆತಿವೆ. ವಿಷ್ಣುವಿನ ವಿಶ್ವರೂಪ ಶಿಲ್ಪ ಈ ಕಾಲದ ಅತ್ಯುತ್ತಮ ಕಲಾಕೃತಿ. ಏಕಾದಶರುದ್ರರು, ದ್ವಾದಶಾದಿತ್ಯರು, ಇಂದ್ರ, ಸರಸ್ವತಿ, ಕಾರ್ತಿಕೆಯ, ದಶಾವತಾರಗಳು ಮುಂತಾದವೆಲ್ಲವನ್ನೂ ಈ ಶಿಲ್ಪದಲ್ಲಿ ಸೊಗಸಾಗಿ ಕಂಡರಿಸಲಾಗಿದೆ. ಕನೂಜಿನ ಶಿವಕಲ್ಯಾಣ ಇನ್ನೊಂದು ಅದ್ಭುತ ಸೃಷ್ಟಿ. ಇದರಲ್ಲಿ ವಾಹನಾರೂಢ ಅಷ್ಟದಿಕ್ಪಾಲಕರು, ಕುಬೇರ, ಸೂರ್ಯ ಇತರ ದೇವತೆಗಳೆಲ್ಲ ನೆರೆದಿದ್ದಾರೆ. ಯಜ್ಞಾಗ್ನಿಜ್ವಾಲೆಗಳನ್ನು ಬ್ರಹ್ಮ ಸರಿಪಡಿಸುತ್ತಿದ್ದಾನೆ. ಎಲಫೆಂಟಾದ ಶಿವಕಲ್ಯಾಣ ಶಿಲ್ಪಕ್ಕೆ ಹೋಲಿಸಿದರೆ ಇದರ ಜೀವಂತಿಕೆ, ಲಾಲಿತ್ಯ, ಓಜಸ್ಸು ಕಡಿಮೆಯೆನಿಸಿದರೂ ಎಲ್ಲ ಮನಸೆಳೆಯುತ್ತದೆ. ಕನೂಜಿನ ಚತುರ್ಮುಖಲಿಂಗ. ಸುರಸುಂದರಿ (ಗ್ವಾಲಿಯರ್ ವಸ್ತುಸಂಗ್ರಹಯಯದಲ್ಲಿದೆ), ನೊರ್ಖಾಸದ ರುಕ್ಮಿಣಿ. ಬೈಜನಾಥದ ಪಾರ್ವತಿ, ಗುಜ್ಜನಖೇರಿಯ ಉಮಾಮಹೇಶ್ವರ ಮುಂತಾದ ಶಿಲ್ಪಗಳು ಉಲ್ಲೇಖವಾಗಿವೆ. ಈ ಕಾಲದಲ್ಲಿ ಕಂಡರಿಸಿದ ಜೈನತೀರ್ಥಂಕರರ ಮತ್ತು ಬುದ್ಧ ಬೋಧಿಸತ್ತ್ವರ ಶಿಲ್ಪಗಳೂ ದೊರಕಿವೆ. ಗೂರ್ಜರ ಪ್ರತಿಹಾರ ಶೈಲಿ ಗುಪ್ತ ಶೈಲಿಯನ್ನು ಅನುಸರಿಸಿದರೂ ಅದು ಅಲಂಕರಣ ಆಡಂಬರತೆಗೆ ಆದ್ಯತೆ ನೀಡಿರುವುದು ಕಂಡುಬರುತ್ತದೆ. ಪ್ರತಿಹಾರ ಸಾಮ್ರಾಜ್ಯ ಪತನಾನಂತರ ಕನೂಜನ್ನು ಆಕ್ರಮಿಸಿದ ಗಾಹದ್ವಾಲರ ಶಿಲ್ಪ ಶೈಲಿಗೆ ಸಮಕಾಲೀನ ಚಂದೇಲ, ಪರಮಾರ, ಚೇದಿ ಅಥವಾ ಹೈಹಯ ಶೈಲಿಗಳೊಡನೆ ಸಾದೃಶ್ಯ ಉಂಟು. ಈ ಕಾಲದಲ್ಲಿ ಶೈಲಿ ಸ್ಥಿರಿ ಕೃತವಾಯಿತು; ಅಲಂಕರಣೆಗೆ ಹೆಚ್ಚು ಗಮನ ಸಂದಿತು. ಆಳವಾಗಿ ಕೊರೆದ ಆಭರಣ ವಿನ್ಯಾಸಗಳು. ಗುಂಗುರು ಗೊಂಚಲುಗಳ (ಭ್ರಮರಕ) ಕೇಶರಾಶಿ ಈ ಶೈಲಿಯ ವೈಶಿಷ್ಟ್ಯ. ಅಮೃತಶಿಲೆಯಲ್ಲಿ ಕಡೆದ ಬಿಕನೀರಿನ ಜೈನ ಸರಸ್ವತಿ ಮೂರ್ತಿ ಇದಕ್ಕೊಂದು ಉತ್ತಮ ಉದಾಹರಣೆ. ಪ್ರಧಾನಶಿಲ್ಪದ ಎಡಬಲಗಳಲ್ಲಿ ಸಖಿಯರು ವೀಣೆ ನುಡಿಸುತ್ತಿದ್ದಾರೆ; ಹಾರುತ್ತಿರುವ ಗಂಧರ್ವರು ದೇವಿಯನ್ನು ಆರಾಧಿಸುತ್ತಿದ್ದಾರೆ; ಕಮಲ, ಪುಸ್ತಕ, ಕಲಶ ಮತ್ತು ಜಪಸರಗಳನ್ನು ಹಿಡಿದಿರುವ ದೇವಿಯ ಅಲಂಕಾರಕ್ಕೆ ಹೆಚ್ಚು ಗಮನ ನೀಡಿದೆ. ಕುತುಬ್‍ಮಿನಾರ್ ಬಳಿ ಈಚೆಗೆ ಅನ್ವೇಷಿತವಾದ ವಿಷ್ಣುಮೂರ್ತಿ ಈ ಮೇಲಿನ ಎಲ್ಲ ಲಕ್ಷಣಗಳನ್ನೂ ತೋರುವ ಇನ್ನೊಂದು ಶಿಲ್ಪ, ಸ್ತ್ರೀಶಿರಶಿಲ್ಪ (ದೆಹಲಿ ವಸ್ತುಸಂಗ್ರಹಾಲಯದಲ್ಲಿದೆ), ತಾರಾ (ಸಾರಾನಾಥ ವಸ್ತುಸಂಹಾಲಯದಲ್ಲಿದೆ), ಕುಬೇರ ಹಾಗೂ ಶಿವಮೂರ್ತಿಗಳು ಈ ಶೈಲಿಯ ಮುಖ್ಯ ಉದಾಹರಣೆಗಳು. ಕ್ರಿ.ಶ. 8-12ನೆಯ ಶತಮಾನದ ಮಧ್ಯಭಾಗದತನಕ ಆಳಿದ ತೋಮರ ಶಿಲ್ಪಗಳು ಈಚೆಗೆ ಲಭಿಸಿವೆ. ರಾಮಾಯಣ ಸನ್ನಿವೇಶದ ಬೃಹತ್ ಶಿಲ್ಪಫಲಕವೊಂದು ಸಿಕ್ಕಿದೆ. ಎರಡು ಅಲಂಕೃತ ಸ್ತಂಭಗಳ ನಡುವೆ ಮತ್ತು ಅಲಂಕೃತ ತೋರಣದ ಕೆಳಗೆ ಕಂಡರಿಸಿದ ವಿಷ್ಣುಮೂರ್ತಿ ಮನೋಹರವಾಗಿದೆ; ಅಲಂಕರಣ ಸ್ವಲ್ಪ ಹೆಚ್ಚೆನಿಸಬಹುದು.

ಕ್ರಿ.ಶ. 12ನೆಯ ಶತಮಾನದಲ್ಲಿ ದೆಹಲಿಯ ಸುತ್ತಮುತ್ತಲಿನ ಪ್ರದೇಶವನ್ನು ಆಳಿದ ಚಾಹಮಾಣ ಅಥವಾ ಚೌಹಾಣರು ಕೆಲವು ದೇಗುಲಗಳನ್ನು ನಿರ್ಮಿಸಿದರು. ದೆಹಲಿ, ಅಜ್ಮೀರ್ ಮತ್ತಿತರ ಸ್ಥಳಗಳಲ್ಲಿಯ ದೇಗುಲಗಳು ದಾಳಿಕಾರದ ಕೈಗೆ ಸಿಲುಕಿ ನಾಶವಾಗಿವೆ. ಸಂಭರ್ ಎಂಬಲ್ಲಿ ಅನ್ವೇಷಿತರಾದ ಶಿಲ್ಪಫಲಕ, ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿರುವ ದುರ್ಗಾ ಮತ್ತು ವಿಷ್ಣು ಮೂರ್ತಿಗಳು ಈ ಕಾಲದವು. ಬಿಕನೀರ್‍ನ ಜೈನಸರಸ್ವತಿ ಹಾಗೂ ಸೂರ್ಯಮೂರ್ತಿಗಳು ಚೌಹಾಣರ ಶಿಲ್ಪಶೈಲಿಯ ಅತ್ಯುತ್ತಮ ಉದಾಹರಣೆಗಳು. ಮಧ್ಯಯುಗದಲ್ಲಿ ಮಹೋಬಾದಿಂದ ಆಳಿದ ಚಂದೇಲರು ಭಾರತೀಯ ವಾಸ್ತುಶಿಲ್ಪ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಬುಂದೇಲ ಖಂಡ ಪ್ರದೇಶ ಚಂದೇಲಶೈಲಿಯ ಶಿಲ್ಪದಿಂದ ಸಂಪದ್ಭರಿತವಾಗಿದೆ. ರೇಖಾಲಾಲಿತ್ಯ ಈ ಶೈಲಿಯ ಶಿಲ್ಪಗಳಲ್ಲಿ ವಿಜೃಂಬಿಸಿದೆ. ಜೈನ, ಬ್ರಾಹ್ಮಣ ಅಥವಾ ಬೌದ್ಧ ಸ್ಮಾರಕಗಳ ಶಿಲ್ಪ ಶ್ರೀಮಂತಿಕೆ ಅಧ್ಯಯನಯೋಗ್ಯವಾಗಿದೆ; ಮಾತ್ರವಲ್ಲ ಕಣ್ಣಿಗೂ ಮನಸ್ಸಿಗೂ ರಸದೂಟವಾಗುತ್ತದೆ. ಚಂದೇಲ ಅರಸರಿಗೆ ಸಂಬಂಧಿಸಿದ ಇತಿಹಾಸ ಸಂಗತಿಗಳನ್ನು ಖಜುರಾಹೊದ ಕಂದರಿಯ ಮಹಾದೇವ ದೇಗುಲದಲ್ಲಿ ಕಾಣುತ್ತೇವೆ (ನೋಡಿ- ಖಜುರಾಹೊ). ಇಲ್ಲಿಯ ಲಕ್ಷ್ಮಣ, ಚಿತ್ರಗುಪ್ತ, ಜಗದಂಬಾ ಮತ್ತಿತರ ದೇಗುಲಗಳ ಅದಿನಾಥ, ಪಾಶ್ರ್ವನಾಥ ಮತ್ತಿತರ ಜೈನ ಮಂದಿರಗಳೂ ದೇವದೇವತೆಗಳ ಶಿಲ್ಪಗಳಿಂದ, ಜೊತೆಗೆ ನಯನ ಮನೋಹರ ಅಲಂಕರಣಗಳಿಂದ ವಿವಿಧ ಮತ್ತು ಅತ್ಯಾಕರ್ಷಕ ಭಂಗಿಯ ಸುರಸುಂದರಿಯರು ಮಾದಕ ಮದನಿಕೆಯರು, ಮಿಥುನ ಶಿಲ್ಪಗಳಿಂದ ಕೂಡಿವೆ. ಇಲ್ಲಿ ಒಂಟಿ ಮೂರ್ತಿಗಳಿವೆ; ಸಮುದಾಯ ಶಿಲ್ಪಗಳಿವೆ. ಮಾನವಾಕೃತಿಗಳನ್ನು ವಿವಿಧ ಭಂಗಿಗಳಲ್ಲಿ, ಅಂಗ ವಿನ್ಯಾಸಗಳಲ್ಲಿ ವೈಯಾರದಲ್ಲಿ, ವಿಲಾಸದಲ್ಲಿ ತೋರಿಸಿರುವುದು ಇಲ್ಲಿಯ ವೈಶಿಷ್ಟ್ಯ. ಖಜುರಾಹೊ ರತಿಶಿಲ್ಪಗಳಿಂದ ಪ್ರಸಿದ್ಧವಾಗಿದೆ. ಕುಮಾನು ಹುಬ್ಬು, ವಿಶಾಲ ನೇತ್ರಗಳು, ಚೂಪುಮೂಗು, ಉಬ್ಬಿದ ಕಪೋಲ, ತುಸುದಪ್ಪ ತುಟಿ ಖಜುರಾಹೊ ಶಿಲ್ಪಗಳ ಕೆಲವು ಮುಖ್ಯ ಲಕ್ಷಣಗಳು. ಸ್ತ್ರೀ ವಿಗ್ರಹಗಳು ಕಲಶಸ್ತನ, ಸಿಂಹಕಟಿ. ಮಧ್ಯಮ ಪ್ರಮಾಣದ ಮೈಕಟ್ಟಿನಿಂದ ಕೂಡಿ ಆಕರ್ಷಕವಾಗಿವೆ. ಬೋಧಿಸತ್ತ್ವ ಸಿಂಹಾನಂದ, ಪದ್ಮಪಾಣಿ, ಅವಲೋಕಿತೇಶ್ವರ, ತಾರಾ, ಬುದ್ಧ ಮುಂತಾದ ಮೂರ್ತಿಗಳು ಮಹೋಬದ ಸುತ್ತಮುತ್ತ ಲಭಿಸಿವೆ. ಖಜುರಾಹೊದ ವರಾಹದೇಗುಲದ ವರಾಹಶಿಲ್ಪ ಗಮನಾರ್ಹ, ಹುಲಿಯೊಡನೆ ಹೋರಾಡುತ್ತಿರುವ ಮಹಾದೇವ ದೇಗುಲದ ರಾಜಕುಮಾರ ಶಿಲ್ಪ ಹೊಯ್ಸಳ ಲಾಂಛನವನ್ನು ನೆನಪಿಗೆ ತರುತ್ತದೆ.

ಪರಮಾರ ದೊರೆ ಭೋಜ ಧಾರಾ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ್ದ ಸರಸ್ವತಿ ಮೂರ್ತಿ (ಸಂಪತ್ 1091) ಈಗ ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿದೆ. ಪ್ರತೀಹಾರ ಶೈಲಿಯನ್ನು ನಿಕಟವಾಗಿ ಹೋಲುವ ಈ ಮೂರ್ತಿ ಒಂದು ಅನುಪಮ ಕೃತಿ. ಉದಯಾದಿತ್ಯ ಉದಯಪುರದಲ್ಲಿ ನಿರ್ಮಿಸಿದ ನೀಲಕಂಠ ಅಥವಾ ಉದಯೇಶ್ವರ ದೇವಾಲಯ ಪರಮಾರ ಶಿಲ್ಪಗಳಿಗೆ ಪ್ರಸಿದ್ಧವಾಗಿದೆ.

ಕ್ರಿ.ಶ. 11ನೆಯ ಶತಮಾನದಲ್ಲಿ ಬುಂದೇಲಖಂಡ ಪ್ರದೇಶದಲ್ಲಿ ಹೈಹಯರು ಪ್ರಬಲರೆನಿಸಿದುರು. ಮಾಳವ, ಗೂರ್ಜರ ಪ್ರತೀಹಾರ, ಚಂದೇಲ ಹಾಗೂ ಚೇದಿ ರಾಜ್ಯಗಳಲ್ಲಿ ಉಂಟಾದ ಪರಸ್ಪರ ಸಾಸ್ಕøತಿಕ ಪ್ರಭಾವ ವಾಸ್ತುಶಿಲ್ಪಗಳಲ್ಲೂ ಕಂಡುಬರುತ್ತದೆ. ಚಂದ್ರೆ ಹಿಯಲ್ಲಿಯ ಗಂಗಾಯಮುನಾ, ಗಣೇಶ, ಲಕ್ಷ್ಮೀ ಮತ್ತು ಸರಸ್ವತಿ ಶಿಲ್ಪಗಳಿಂದ ಕೂಡಿದ ಬಾಗಿಲುವಾಡ, ಸುಹಾಗಪುರದ ವಿರಾಟೇಶ್ವರ ದೇವಾಲಯದ ಸುರಸುಂದರಿ ಶಿಲ್ಪಗಳು, ಮದನಿಕೆ ಮೂರ್ತಿಗಳು ಮನೋಹರವಾಗಿವೆ. ಸುಹಾಗಪುರದ ದೇವಾಲಯದ ಗೂಡುಗಂಡಿಯಲ್ಲಿರುವ ಚತುರ ಭಂಗಿಯ ನಾಟ್ಯಶಿವ ಒಂದು ವಿಶಿಷ್ಟ ಶಿಲ್ಪ. ಅಮರ ಕಂಟಕದಲ್ಲಿ ಕರ್ಣನ ಕಾಲದ ದೇವಾಲಯವೊಂದಿದೆ. ಸುಟ್ನಾ ಮತ್ತು ಬೇಡಾ ಘಟ್-ಇವು ಅರುವತ್ನಾಲ್ಕು ಯೋಗಿನಿಯರ ದೇವಾಲಯಗಳಿಂದ ಪ್ರಸಿದ್ಧವಾಗಿದೆ. ಭೇಡಾಘಾಟಿನ ವೃತ್ತ ದೇವಾಲಯದ ಶಾಸನಸಹಿತ ಶಿಲ್ಪ ಸಾಲುಗಳು ಕುತೂಹಲಕರವಾಗಿವೆ. (ಇಲ್ಲಿ ಘಂಟಾಲಿ, ಥಾಕಿನಿ, ಫಣೀಂದ್ರೀ, ದರ್ಪಹಾರಿ, ಗಾಂಧಾರಿ ಮುಂತಾದ ಹೆಸರುಗಳುಳ್ಳ ಮೂರ್ತಿಶಿಲ್ಪಗಳಿವೆ). ಇಲ್ಲಿಯ ನಾಟ್ಯ ಗಣೇಶ ಗಮನಿಸಬೇಕಾದ ಇನ್ನೊಂದು ಸುಂದರ ಶಿಲ್ಪ. ತೆವಾರದ ಷಣ್ಮುಖ, ಬಿಲ್ಹಾರಿಯ ವರಾಹ, ಸುಹಾಗಪುರದ ಯೋಗನರಸಿಂಹ, ವಿಷ್ಣು ಮತ್ತು ಗುರ್ಗಿ ಎಂಬಲ್ಲಿಯ ತೋರಣದ್ವಾರ ಮುಂತಾದವು ತುಂಬ ಸೊಗಸಾಗಿವೆ. ಕೃಷ್ಣನ ಬಾಲಲೀಲೆಗಳನ್ನು ಚಿತ್ರಿಸುವ ದೀರ್ಘ ಶಿಲ್ಪಸಾಲಿನ ತುಣುಕುಗಳಲ್ಲಿ ಕೆಲವನ್ನು ಸುಹಾಗಪುರದ ಅರಮನೆಯಲ್ಲಿ ಸಂಗ್ರಹಿಸಿಡಲಾಗಿದೆ.

ಗುಜರಾತಿನ ಚೌಳುಕ್ಯರ ಕಾಲದ ಪ್ರಮುಖ ಪ್ರಾಚೀನ ಕಲಾನಿರ್ಮಾಣಗಳೆಂದರೆ ಸಿದ್ಧಪುರದ ರುದ್ರ ಮಹಾಲಯ, ಮೊಧೇರದ ಸೂರ್ಯ ದೇವಾಲಯ ಹಾಗೂ ಅಬುವಿನ ವಿಮಲಾಲಯ. ಸೋಮನಾಥ, ಗುಮ್ಮಿ, ನವ್ಲಖ, ಅಬು ಮತ್ತು ಶತ್ರುಂಜಯಗಳಲ್ಲಿ 12-13ನೆಯ ಶತಮಾನದ ವಿಶಿಷ್ಟ ಕಟ್ಟಡಗಳ್ನನು ಕಾಣಬಹುದು. ವದ್ನಗರ, ಮೊಧೇರ, ಕಪದ್ವಂಜ, ಪಿಲುದ್ರ ಮತ್ತು ಡಭೋಯ್‍ಗಳ ಶಿಲ್ಪಶ್ರೀಮಂತ ತೋರಣಗಳು ಆಕರ್ಷಣೀಯವಾಗಿವೆ. ಚೌಳುಕ್ಯಶಿಲ್ಪಗಳಲ್ಲಿ ನಾಟ್ಯಗಣೇಶ, ನಟರಾಜ, ಲಕುಲೀಶ, ವಿಷ್ಣುರೂಪಗಳು ಅರುಂಧತಿ ಮತ್ತು ಕಾಮಧೇನು ಸಹಿತರಾದ ಸಪ್ತರ್ಷಿಗಳೂ ಮುಂತಾದ ಶಿಲ್ಪಗಳು ಆಕರ್ಷಕವಾಗಿವೆ. ಅಮೃತಮಂಥನ ಸನ್ನಿವೇಶ ಈಕಾಲದ ಶಿಲ್ಪಿಗಳಿಗೆ ತುಂಬ ಪ್ರೀತಿಯವಸ್ತುವೆಂದು ಕಾಣುತ್ತದೆ. ಡಭೊಯ್ ತೋರಣದ ಅಮೃತ ಮಂಥನ ಶಿಲ್ಪ ತುಂಬ ಅಂದವಾಗಿದೆ. ಮೊದೇರದಲ್ಲಿಯ ಮಕರತೋರಣ ಮಿಥುನಶಿಲ್ಪ, ಸುರಸುಂದರಿ, ಕಾದುತ್ತಿರುವ ಆನೆಗಳು, ವಾದ್ಯವೃಂದ ಮುಂತಾದ ಶಿಲ್ಪಗಳು, ಸೋಮನಾಥದ ಕಾಳಿಯಮರ್ದನ, ಅಬುವಿನ ಹಿರಣ್ಯಕಶಿಪು ಸಂಹಾರ ಮೊದಲಾದ ಶಿಲ್ಪಗಳು ಉತ್ಕøಷ್ಟ ಕಲಾಕೃತಿಗಳು. ನಯಗಾರಿಕೆ, ಸೂಕ್ಷ್ಮತೆ, ಅಲಂಕರಣ ಹಾಗೂ ಶ್ರೇಷ್ಠ ಶಿಲ್ಪವಿನ್ಯಾಸಗಳಲ್ಲಿ ಅಬುವಿನ ತೇಜಪಾಲ ದೇವಾಲಯದ ಅದ್ಭುತವಾದುದು. ಇಲ್ಲಿಯ ಬೃಹತ್ ಭುವನೇಶ್ವರಿ ಸಮುದಾಯಗಳು ನಯನಮನೋಹರವಾಗಿವೆ. ಈ ಕಾಲದ ಶಿಲ್ಪಮಾಧ್ಯಮಕ್ಕೆ ಬಳಕೆಯಾದ ಅಮೃತ ಶಿಲೆಯೂ ಶಿಲ್ಪಗಳ ಸೊಬಗನ್ನು ಹೆಚ್ಚಿಸಲು ಸಹಾಯಕವಾಯಿತೆನ್ನಬಹುದು. ಕಂಡರಣೆಯಲ್ಲಿಯ ಮಾರ್ದವತೆ, ತಾಂತ್ರಿಕ ಕೌಶಲ. ರೇಖಾವಿನ್ಯಾಸ ಹಾಗೂ ಬೌದ್ಧಪರಿವಾರ ದೇವತೆಗಳ ಶ್ರೀಮಂತ ಕಲ್ಪನೆ ಪಾಲಶಿಲ್ಪ ಶೈಲಿಯ ಕೆಲವು ಲಕ್ಷಣಗಳು. ನುಣುಪು ಕರಿಪಾಟಿಕಲ್ಲಿನಲ್ಲಿ ಕಡೆದ ಪಾಲಶಿಲ್ಪಗಳು ಮುದ್ದಾಗಿವೆ. ಕಾಶಿಪುರದ ರಥಾರೂಢ ಸೂರ್ಯ (ಅಶುತೋಷ ವಸ್ತುಸಂಗ್ರಹಾಲಯದಲ್ಲಿದೆ.) ಮತ್ತು ಸುಂದರ್ಬನ-ಇವು ಪಾಲರ ಪ್ರಾಚೀನ ಶಿಲ್ಪಗಳು. ದಂಡ ಮತ್ತು ಪಿಂಗಲಸಹಿತನಾದ ಸೂರ್ಯ, ಉಮಾಮಹೇಶ್ವರ, ವಿಷ್ಣು, ಬುದ್ಧ, ಅವಲೋಕಿತೇಶ್ವರ, ತಾರಾ, ಪ್ರಜ್ಞಾಪಾರಮಿತಾವಾಗೀಶ್ವರ ಮುಂತಾದ ಹಲವು ಶಿಲ್ಪಗಳು ಅಧ್ಯಯನ ಯೋಗ್ಯವಾಗಿವೆ. ಗರುಡಾರೂಢ ವಿಷ್ಣು, ಸರಸ್ವತಿ, ತೀರ್ಥಂಕರ ಪಾಶ್ರ್ವನಾಥ-ಇವು ಭವ್ಯವಾಗಿ ಕಡೆದ ಮೂರ್ತಿಗಳು. ಡಾಕಾ ವಸ್ತುಸಂಗ್ರಹಾಲಯಲ್ಲಿರುವ ಭೃಕುಟಿ, ಮಹಾಪ್ರತಿಸರಾ. ಪರ್ಣಶೌರಿ, ಬಸರ್ಪಣ ಮುಂತಾದ ಬೌದ್ಧ ಶಿಲ್ಪಗಳು, ಅರ್ಧನಾರೀಶ್ವರ, ಸದ್ಯೋಜಾತ, ಮಹಾಮಾಯಾ ಮುಂತಾದ ಶೈವಶಿಲ್ಪಗಳು ಪಾಲ ಶೈಲಿಯ ಗಮನಾರ್ಹ ವಿಗ್ರಹಗಳು. ಇಲ್ಲೇ ಇರುವ ಸಂಕರಬಂಧದ ನಂದಿಯ ಮೇಲೆ ನಾಟ್ಯವಾಡುತ್ತಿರುವ ನರ್ತೇಶ್ವರ ಭಾರತದಲ್ಲೇ ವಿಶಿಷ್ಟವಾದ ಮೂರ್ತಿ, ಪಾಲರ ಕಲಾಕೇಂದ್ರವಾದ ನಾಲಂದಾದಲ್ಲಿಯ ಕೆಲವು ಶಿಲ್ಪಗಳು ಸುಂದರವಾಗಿವೆ. ಪಾಲಶೈಲಿಯ ಲೋಹಮೂರ್ತಿಗಳು ಪ್ರಸಿದ್ಧವಾಗಿವೆ. ಚಂಡರ್‍ಗಾಂವ್‍ನ ಚಂಡಿವಿಗ್ರಹ ಪ್ರಾಚೀನತವಾದುದೆನ್ನಲಾಗಿದೆ (8ನೆಯ ಶತಮಾನ). ಕಂಚಿನ ಹೃಷಿಕೇಶ ಮತು ಬಹುಬಾಹುವಿಷ್ಣು ಮೂರ್ತಿಗಳೂ ಉಲ್ಲೇಖನಿಯ ಹರಗೌರಿ ಈ ಶೈಲಿಯ ಜನಪ್ರಯ ಶಿಲ್ಪವಸ್ತು.

ಪಾಲರಶೈಲಿಯಂತೆ ಸೇನಶೈಲಿಯಲ್ಲೂ ಹೆಚ್ಚಿನ ಅಲಂಕರಣ ಕಂಡುಬರುತ್ತದೆ. ಈ ಕಾಲದಲ್ಲಿ ಶೈಲಿ ಒಂದು ರೀತಿಯಲ್ಲಿ ಸ್ಥಿರೀಕೃತವಾದುದನ್ನು ಕಾಣುತ್ತೇವೆ. ಅಲಂಕೃತ ಕಿರೀಟ ತೆಳುವೂ ಪಾರದರ್ಶಕವೂ ಹೆಚ್ಚು ನಿರಿಗೆಗಳಿಂದ ಕೂಡಿದುದೂ ಆದ ಉಡುಪಿನ ವಿನ್ಯಾಸ. ಸುಕುಮಾರ ಅಂಗಾಂಗಗಳು ಈ ಶೈಲಿಯ ಲಕ್ಷಣಗಳು. ಬಂಗಾಲದಲ್ಲಿ ಸದಾಶಿವರೂಪವನ್ನು ಪರಿಚಯಿಸಿದವರು ಸೇನರೇ. ಸದಾಶಿವ ಈ ಶೈಲಿಯ ಒಂದು ಉತ್ತಮಶಿಲ್ಪ (ಇದು ಕಲ್ಕತ್ತದ ಭಾರತೀಯ ವಸ್ತುಸಂಗ್ರಹಾಲಯದಲ್ಲಿದೆ).

ಕಳಿಂಗವನ್ನಾಳಿದ ಪೂರ್ವಗಂಗರು ಕ್ರಿ.ಶ. 8-9ನೆಯ ಶತಮಾನದಲ್ಲಿ ಮುಖಲಿಂಗಮ್ ಸುತ್ತಮುತ್ತ ಕೆಲವು ಗುಡಿಗಳನ್ನು ಕಟ್ಟಿಸಿದರು. ಭುವನೇಶ್ವರದ ಪರಶುರಾಮೇಶ್ವರ ದೇಗುಲ ಇವರ ಪ್ರಾಚೀನತಮ ಕಟ್ಟಡಗಳಲ್ಲೊಂದು. ಇಲ್ಲಿಯ ಸಂಗೀತ ಶಿಲ್ಪಗಳು ಉತ್ತರ ಗುಪ್ತಶೈಲಿಯ ಲಾಲಿತ್ಯವನ್ನು ತೋರುತ್ತವೆ. ಮುಕ್ತೇಶ್ವರ ದೇವಾಲಯದ ರಾಜಪರಿವಾರದ ಶಿಲ್ಪಗಳು ಅಧ್ಯಯನಾರ್ಹ. ಜಾಲಂಧ್ರಗಳ ನಡುವಣ ಪಟ್ಟಿಗಳಲ್ಲಿ ಬಿಡಿಸಿದ ಕಥಾನಕಗಳು. ವಿವಿಧ ಭಂಗಿಯ ನಾಗನಾಗಿಣಿಯರು, ಸುರಸುಂದರಿಯರು ಮುಂತಾದವು ಸುಂದರವಾಗಿವೆ. ಈ ದೇವಾಲಯದ ದೇವಲ-ಜಗಮೋಹನಗಳ ಮೇಲಿನ ಶಿಲ್ಪಗಳು, ಮಕರತೋರಣಗಳು ಚೇತೋಹಾರಿಯಾಗಿವೆ. ಲಿಂಗರಾದೇವಾಲಯದ ಏಕಶಿಲಾಗಣೇಶ, ದೇವಿ ಮತ್ತಿತರ ಮೂರ್ತಿಗಳು, ಮಿಥುನ ಶಿಲ್ಪಗಳು ರಮ್ಯವಾಗಿವೆ. ವೇಷಭೂಷಣಗಳಿಂದ ಅಲಂಕೃತಿಗಳಾಗಿ ತನ್ನ ಪ್ರಿಯಕರನಿಗಾಗಿ ಕಾದುಸಹನೆ ಕಳೆದುಕೊಂಡ ಸ್ತ್ರೀಯೊಬ್ಬಳು ತನ್ನ ಸಖಿಯನ್ನು ವಿಚಾರಿಸುತ್ತಿರುವ ಶಿಲ್ಪ ಉಲ್ಲೇಖನೀಯವಾದುದು. ರಾಜರಾಣಿ ದೇವಾಲಯದ ದಿಕ್ಪಾಲಕ. ಸುರಸುಂದರಿ ಹಾಗೂ ನಾಗಿಣಿಶಿಲ್ಪಗಳು ಸೊಬಗಿನಿಂದ ಕೂಡಿವೆ. ಮಯೂರ ನೃತ್ಯಕ್ಕೆ ಸಿದ್ಧಳಾರಮಣಿ ಮತ್ತು ತನ್ನ ಕಾಲಿನಿಂದ ಮಂಜಿ ರಕ ತೆಗೆಯುತ್ತಿರುವ ಅಪ್ಸರ-ಈ ಶಿಲ್ಪಗಳು ಬೆಡಗುಬಿನ್ನಾಣಭರಿತವಾಗಿವೆ.

ಕೋಣಾರ್ಕದ ಸೂರ್ಯದೇವಾಲಯ ಒರಿಸ್ಸ ವಾಸ್ತುಶಿಲ್ಪದ ಪರಮೋನ್ನತ ಸಾಧನೆ. ಈ ದೇವಾಲಯ ವಿನ್ಯಾಸದ ಕಲ್ಪನೆಯೇ ವಿಶಿಷ್ಟವಾದದು ಹಾಗೂ ಸ್ವೋಪಜ್ಞವಾದುದು. ಕೆತ್ತನೆಗಳಿಲ್ಲದ ಭಾಗವೇ ಈ ದೇವಾಲಯದಲ್ಲಿಲ್ಲ. ಬೃಹತ್ತು ಮಹತ್ತುಗಳಲ್ಲಿ ಪೂರ್ವಚಾಳುಕ್ಯ ಶೈಲಿಯ ಈ ದೇವಾಲಯ ಒಂದು ಅಪೂರ್ವ ಸಿದ್ಧಿ. ಕಂದುಬಣ್ಣದ ಮರಳು ಕಲ್ಲಿನ ಒರಟು ಮೈವಳಿಕೆಯ (ಟೆಕ್ಷ್‍ಚರ್) ಸಂಗೀತ ಶಿಲ್ಪಗಳ ನಡುವೆ ಎದ್ದುಕಾಣುವ ಹಸುರು ಬಣ್ಣದ ಸೂಕ್ಷ್ಮಕೆತ್ತನೆಯ ಶಿಲ್ಪ ಪಟ್ಟಿಕೆಗಳು ನೋಡುಗನಿಗೆ ಮರೆಯಲಾಗದ ಅನುಭವ ಉಂಟುಮಾಡುತ್ತವೆ. ಈ ದೇವಾಲಯ ನಿರ್ಮಾಣಕ್ಕೆ ಕಾರಣನಾದ ನರಸಿಂಹನ ಜೀವನಕ್ಕೆ ಸಂಬಂಧಿಸಿದ ದೃಶ್ಯ ಶಿಲ್ಪಗಳೂ ಇಲ್ಲಿವೆ. ಈ ದೊರೆಯನ್ನು ಮಹಾನ್ ಬಿಲ್ಲುಗಾರನಾಗಿ, ದೈವಭಕ್ತನಾಗಿ, ಕಲೆಸಾಹಿತ್ಯಾಸಕ್ತನಾಗಿ, ಸಂಗಮ ದಾಂಪತ್ಯದ ಅನುಭವಿಯಾಗಿ-ಹೀಗೆ ಹಲವು ಬಗೆಯಲ್ಲಿ ಶಿಲ್ಪಸಿದೆ. ಮಿಥುನ ಶಿಲ್ಪಗಳು, ಪ್ರಾಣಿಶಿಲ್ಪಗಳು. ಲತಾವಿನ್ಯಾಸಗಳು ಮುಂತಾದವು ಗಮನಸೆಳೆಯುತ್ತವೆ. ಈ ದೇವಾಲಯದ ಆ ಕಾಲದ ಒರಿಸ್ಸದ ಸಾಂಸ್ಕøತಿಕ ಭಂಡಾರವೆನ್ನಬಹುದು.

ಒರಿಸ್ಸ ಶಿಲ್ಪಗಳಲ್ಲಿ ಇನ್ನೂ ಕೆಲವು ಇಲ್ಲಿ ಉಲ್ಲೇಖಾರ್ಹ, ಜಾಜಪುರದ ಭುವನೇಶ್ವರಿಗಳು ಅಧ್ಯಯನಯೋಗ್ಯವಾಗಿವೆ. ಒರಿಸ್ಸ ಕಲೆಯ ಪ್ರಾಚೀನತಮ ಮಜಲಿನ ಸೊಗಸಾದ ಮಾತೃಕೆ ಶಿಲ್ಪಗಳನ್ನು ಇಲ್ಲಿ ನೋಡಬಹುದು. ಮಯೂರ್‍ಭಂಜ್ ಪರಿಸರದ ಕಲಾಸಂಪ್ರದಾಯವನ್ನು ಉಲ್ಲೇಖಿಸದೆ ಒರಿಸ್ಸದ ಕಲಾವರ್ಣನೆ ಪೂರ್ಣವಾಗುವುದಿಲ್ಲ. ಕ್ರಿ.ಶ. 9-10ನೆಯ ಶತಮಾನದ ದೇವಾಲಯಗಳಲ್ಲಿ ಕಾಣಸಿಗುವ ಶಿಲ್ಪಗಳು ವಿಶೇಷ ವಿನ್ಯಾಸ ಮತ್ತು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು ಲಲಿತವಾಗಿವೆ. ಭಂಜರು ಈ ಕಲಾಶೈಲಿಯ ಪೋಷಕರು, ಖಚಿಂಗ್‍ನ ವಸ್ತುಸಂಗ್ರಹಾಲಯದಲ್ಲಿ ಈ ಕೆಲ ಉದಾಹರಣೆಗಳಿವೆ. ನಲತಗಿರಿ ಮತ್ತು ಲಲಿತಗಿರಿಯ ಏಕಶಿಲಾಶಿಲ್ಪಗಳು ಸಾಮಾನ್ಯವಾಗಿ ಬೌದ್ಧ ಧರ್ಮಕ್ಕೆ ಸಂಬಂಧಪಟ್ಟವು. ಇಲ್ಲಿಯ ಸೊಗಸಾದ ಅವಲೋಕಿತೇಶ್ವರ ಮತ್ತು ತಾರಾಶಿಲ್ಪಗಳು ಈಗ ಕಲ್ಕತ್ತದ ಭಾರತೀಯ ವಸ್ತುಸಂಗ್ರಹಾಲಯದಲ್ಲಿವೆ. ಇಲ್ಲೇ ಇರುವ ಭೈರವಶಿಲ್ಪ ಕೂಡ ಗಮನಾರ್ಹವಾದುದು. ಕಲ್ಯಾಣ ಚಾಳುಕ್ಯ ಶಿಲ್ಪಶೈಲಿಯಲ್ಲಿ ಕುಸುರಿಕೆಲಸಕ್ಕೆ ಹೆಚ್ಚಿನ ಮನ್ನಣೆ ದೊರೆತಿದೆ. ಕುರುವತ್ತಿ, ಕುಕ್ಕನೂರು, ಹಾವೇರಿ, ಗದಗ, ಬಳ್ಳಿಗಾವೆ ಮುಂತಾದ ಕಡೆಗಳಲ್ಲಿ ಇವರು ಶಿಲ್ಪ ಸಂಪತ್ತು ಅಪಾರವಾಗಿದೆ. ವೇಷಭೂಷಣಗಳಲ್ಲಿ ವಿಶೇಷ ಅಲಂಕಾರ, ಆಳವಾಗಿ ಬಿಡಿಸಿದ ಭುವನೇಶ್ವರಿಗಳು, ಪಶುಪಕ್ಷಿ, ದೇವದೇವತೆ ಶಿಲ್ಪಗಳಿಂದ ಕೂಡಿದ ಹೊರಭಿತ್ತಿ, ಶಿಲ್ಪವಿನ್ಯಾಸಭರಿತವಾದ ಜಾಲಂಧ್ರಗಳು-ಇವು ಈ ಶೈಲಿಯ ಕೆಲವು ಗಮನಾರ್ಹ ಲಕ್ಷಣಗಳು. ಇಟಗಿಯ ಮಹಾದೇವ ದೇವಾಲಯದ ಬಾಗಿಲುವಾಡ, ಭುವನೇಶ್ವರಿಗಳನ್ನು ಗಮನಿಸಿದಾಗ ಈ ದೇವಾಲಯವನ್ನು ಶಾಸನವೊಂದು `ದೇವಾಲಯಚಕ್ರವರ್ತಿ ಎಂದು ಕರೆದಿರುವುದು ಸಮಂಜಸವೆನಿಸುತ್ತದೆ.

ದಖನ್ ಪ್ರದೇಶವನ್ನು ದೇವಗಿರಿಯಿಂದ ಆಳುತ್ತಿದ್ದ ಸೇವುಣರು ಕಟ್ಟಿದ ದೇವಾಲಯ ಶೈಲಿಗೆ ಹೇಮಾಡ್‍ಪಂತಿ (ಹೇಮಾದ್ರಿ ಪಂಥಿ) ಎಂಬ ಹೆಸರಿತ್ತು. ಲೋನಾರ್, ಸತ್‍ಗಾಂವ್, ಮಹಕರ್ ಮತ್ತಿತರ ಸ್ಥಳಗಳಲ್ಲಿಯ ದೇವಾಲಯಗಳು ಈ ಶೈಲಿಯವು. ಈ ಶೈಲಿಯ ಶಿಲ್ಪಗಳ ಸಂಖ್ಯೆ ವಿರಳವಾಗಿದ್ದು ಇವು ಹೆಚ್ಚಾಗಿ ಕಲ್ಯಾಣ ಚಾಳುಕ್ಯ ಹೊಯ್ಸಳ ಹಾಗೂ ಕಾಕತೀಯ ಶಿಲ್ಪಗಳನ್ನೇ ಹೋಲುತ್ತವೆ.

ಚಾಳುಕ್ಯರ ಸಾಮಂತರಾಗಿ ಕ್ರಮೇಣ ಸ್ವತಂತ್ರರಾದ ಹೊಯ್ಸಳರು ಚಾಳುಕ್ಯ ಶಿಲ್ಪ ಶೈಲಿಯನ್ನೇ ಅಳವಡಿಸಿಕೊಂಡರು. ಸೂಕ್ಷ್ಮವಾಗಿ ಕಡೆದ, ಆಭರಣಗಳ ರಾಶಿಯನ್ನೇ ಹೊತ್ತ ಹೊಯ್ಸಳ ಶಿಲ್ಪಗಳು ಕುಬ್ಜಾಕೃತಿಯವು. ಅನೇಕ ಶಿಲ್ಪಗಳ ಪಾದಭಾಗದಲ್ಲಿ ಅದನ್ನು ಕಡೆದ ಶಿಲ್ಪಿಯ ಹೆಸರಿರುವುದು ಭಾರತೀಯ ಕಲೇತಿಹಾಸದಲ್ಲಿ ವಿಶಿಷ್ಟ ಸಂಗತಿ. ಈ ಶೈಲಿಯ ಶೈವ, ವೈಷ್ಣವ ಹಾಗೂ ಜೈನ ಶಿಲ್ಪಗಳು ಅಪಾರಸಂಖ್ಯೆಯಲ್ಲಿ ಕಾಣಸಿಗುತ್ತವೆ. ಬೇಲೂರಿನ ಮದನಿಕೆ ಮೂರ್ತಿಗಳು ಸುಪ್ರಸಿದ್ಧವಾಗಿವೆ. ವಿವಿಧ ಭಂಗಿಯ, ಬೆಡಗಿನ ಈ ಶಿಲ್ಪಗಳಲ್ಲಿ ಸ್ತ್ರೀಸೌಂದರ್ಯದ ಪರಾಕಾಷ್ಠೆ ಇದೆ. ಬೇಲೂರು. ಹಳೇಬೀಡು, ಸೋಮನಾಥಪುರಗಳು ಹೊಯ್ಸಳಶಿಲ್ಪಕ್ಕೆ ಹೆಚ್ಚು ಪ್ರಸಿದ್ಧವಾಗಿವೆ. ಅಷ್ಟಾಗಿ ಪ್ರಸಿದ್ಧಿಗೆ ಭಾರದ ದೊಡ್ಡಗದ್ದವಳ್ಳಿ, ನುಗ್ಗೇಹಳ್ಳಿ, ಆರಸೀಕೆರೆ, ಜಿನನಾಥಪುರ, ಅಮೃತಾಪುರ ಮುಂತಾದ ಸ್ಥಳಗಳಲ್ಲಿಯ ಹೊಯ್ಸಳ ಶಿಲ್ಪಸಂಪತ್ತು ಕೂಡ ಮನಸೂರೆಗೊಳ್ಳುವಂಥದು. ಮಕರ ತೋರಣಗಳು, ದ್ವಾರಪಾಲಕರು, ಕಥಾನಕ ದೃಶ್ಯಗಳು, ಪ್ರಾಣಿಶಿಲ್ಪ ಸಾಲುಗಳು ಕಣ್ಸೆಳೆಯುತ್ತವೆ. ಈ ಶೈಲಿಯಲ್ಲಿ ಹೊರಭಿತ್ತಿಯನ್ನು ಶಿಲ್ಪಿಸದ ಸರಳ ದೇವಾಲಯಗಳಿವೆ; ಅಂತೆಯೇ ಸ್ವಲ್ಪವೂ ಖಾಲಿ ಬಿಡದೆ, ಶಿಲ್ಪರಾಶಿಯಿಂದ ಕೂಡಿದ ಹೊರಭಿತ್ತಿಯ ದೇವಾಲಯ ಗಳೂ ಇವೆ. ಸ್ತಂಭವಿನ್ಯಾಸ ಹೊಯ್ಸಳ ಶಿಲ್ಪದಲ್ಲಿ ಗಮನಿಬೇಕಾದ ಒಂದು ಸಂಗತಿ. ಇವುಗಳ ನುಣುಪು, ಹೊಳಪು ಅನುಪಮವಾದುದು. ಬೇಲೂರಿನ ನರಸಿಂಹ ಸ್ತಂಭ ಸೂಕ್ಷ್ಮ ಶಿಲ್ಪಕೆತ್ತನೆಗಳಿಗೆ ಹೆಸರಾಗಿದೆ. ಬಸ್ತಿಹಳ್ಳಿಯ ನಿಮ್ನೋನ್ನತ ಸ್ತಂಭಗಳು ಬಗೆಬಗೆಯ ಪ್ರತಿಬಿಂಬಗಳನ್ನು ನೀಡಬಲ್ಲ ರೀತಿಯಲ್ಲಿ ರೂಪುಗೊಂಡಿವೆ. ಈ ಕಾಲದ ವೀರಗಲ್ಲು, ಮಾಸ್ತಿಕಲ್ಲುಗಳೂ ಶಿಲ್ಪದೃಷ್ಟಿಯಿಂದ ಗಮನಾರ್ಹವಾಗಿವೆ.

ವಾರಂಗಲ್ಲಿನ ಕಾಕತೀಯ ಶೈಲಿ ಚಾಳುಕ್ಯ ಶೈಲಿಯಿಂದ ಅಷ್ಟೇನೂ ಭಿನ್ನವಾಗಿಲ್ಲ. ಹೊಯ್ಸಳ ಶೈಲಿಗೆ ಹೋಲಿಸಿದರೆ ಅಲಂಕರಣ ತುಸು ಕಡಿಮೆಯೇ. ಕಂಗೊಳಿಸುವ ಕಂಬಗಳು. ಕುತೂಹಲಕರ ನಾಟ್ಯ ಭಂಗಿಯ ಮದನಿಕೆ ಶಿಲ್ಪಗಳು ಚಾಳುಕ್ಯ-ಹೊಯ್ಸಳ ಶೈಲಿಯನ್ನು ನೆನಪಿಸುತ್ತವೆ. ಆದರೆ ಅಲ್ಲಿಯಂತೆ ಪುತ್ತಳಿಗಳು ಕುಬ್ಜವಾಗಿರದೆ ನೀಳವಾಗಿವೆ; ಆಭರಣಗಳು ಹೆಚ್ಚಿಲ್ಲ. ವಾರಂಗಲ್ಲಿನ ಶಿಲ್ಪ ಭರಿತ ಬೃಹತ್ ಬಾಗಿಲುವಾಡ ಈ ಶೈಲಿಯ ಒಂದು ವಿಶಿಷ್ಟ ಉದಾಹರಣೆ. ದೆಹಲಿಯ ರಾಷ್ಡ್ರೀಯ ವಸ್ತುಸಂಗ್ರಹಾಲಯದಲ್ಲಿರುವ ಈ ಬಾಗಿಲುವಾಡದ ಮಕರ ತೋರಣ ಮತ್ತು ನಾಟ್ಯಬ್ರಹ್ಮ, ನಾಟ್ಯವಿಷ್ಣು, ನಟೇಶ ಶಿಲ್ಪಗಳು ತುಂಬ ಸುಂದರವಾಗಿವೆ. ವಾರಂಗಲ್ಲಿನಲ್ಲಿರುವ ಇತರ ತೋರಣಗಳು ಸೊಗಸಾಗಿವೆ. ಪಾಲಂಪೇಟೆ, ಹನುಮಕೊಂಡ, ಪಿಲ್ಲಲಮಟ್ರ, ನಾಗುಲಪಾಡು, ಮಚೆರ್ಲ, ಗುರ್ಜಾಲ ಮತ್ತಿತರ ಸ್ಥಳಗಳಲ್ಲಿಯ ದೇವಾಲಯಗಳು ಶಿಲ್ಪಭರಿತವಾಗಿದ್ದು, ಸೊಗಸಾದ ಸ್ತಂಭ, ಭುವನೇಶ್ವರಿಗಳಿಂದ ಕೂಡಿವೆ. ತ್ರಿಪುರಾಂತಕಮ್ ಎಂಬಲ್ಲಿಯ ಶಿವ ಮತ್ತು ದುರ್ಗಾ ದೇಗುಲಗಳು. ಆ ದೇವಾಲಯದ ಬಳಿಯ ವೀರಗಲ್ಲುಗಳು ಶಿಲ್ಪ ದೃಷ್ಟಿಯಿಂದ ಗಮನಾರ್ಹವಾಗಿವೆ. ಇಲ್ಲಿಯ ಮಹಿಷಮರ್ದಿನಿ ಒಂದು ಅನುಪಮ ಕಲಾಕೃತಿ (ಈಗ ಇದು ಮದರಾಸು ವಸ್ತುಸಂಗ್ರಹಾಲಯದಲ್ಲಿದೆ). ಕಾಕತೀಯ ಶಿಲ್ಪಗಳಲ್ಲಿ ಅಲಂಕೃತ ಭುವನೇಶ್ವರಿಯ ಭಾಗಗಳು, ನವಗ್ರಹ ಶಿಲ್ಪಫಲಕ ಉಲ್ಲೇಖಾರ್ಹವಾಗಿವೆ. (ಇವು ಹೈದರಾಬಾದಿನ ವಸ್ತುಸಂಗ್ರಹಾಲಯದಲ್ಲಿವೆ).

ಕಾಕತೀಯ ಶೈಲಿಯನ್ನು ಹೋಲುವ ರೆಡ್ಡಿ ಶಿಲ್ಪಶೈಲಿ ಕ್ರಿ.ಶ. 14ನೆಯ ಶತಮಾನದಲ್ಲಿ ಪಲ್ನಾಡು, ಗುಂಟೂರು ಪ್ರದೇಶಗಳಲ್ಲಿ ಪ್ರಚಲಿತವಿತ್ತು. ಶ್ರೀಶೈಲದ ಶಿವಾಲಯಗಳನ್ನು ಅನವೇಮರೆಡ್ಡಿ ಜೀರ್ಣೋದ್ಧಾರಗೊಳಿಸಿ, ಹಲವು ಸೇರ್ಪಡೆಗಳನ್ನೂ ಮಾಡಿಸಿದ. ಈ ದೇವಾಲಗಳ ಪ್ರಾಕಾರದುದ್ದಕ್ಕೂ ಇರುವ ಶಿಲ್ಪಗಳು ಶೈವಸಂತರ ಜೀವನಕ್ಕೆ ಸಂಬಂಧಿಸಿದ ಸನ್ನಿವೇಶಗಳನ್ನು ಪ್ರತಿನಿಧಿಸುತ್ತೇವೆ. ಬೃಹದ್ಗಾತ್ರದ ಶಿಲ್ಪಗಳನ್ನು ನಿರ್ಮಿಸಿದ ಉತ್ತರ ಪಾಂಡ್ಯರ ಶೈಲಿಯಲ್ಲಿ ಮೊದಮೊದಲಿದ್ದ ಲಾಲಿತ್ಯ, ಕ್ರಮೇಣ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಸಿಕ್ಕಿ. ಕ್ಷೀಣಿಸಿತು. ಮಧುರೆಯ ನಾಯಕ ಶೈಲಿಯಿಂದ ಭಿನ್ನವಾಗಿ ಕಾಣುವ ಇವರ ಶಿಲ್ಪಗಳನ್ನು ಮದುರೆಯ ಮೀನಾಕ್ಷಿದೇವಾಲಯದಲ್ಲಿ ಕಾಣಬಹುದು. ಶ್ರೀರಂಗ ದೇವಾಲಯದಲ್ಲಿಯ ಕೆಲವು ಕೆತ್ತನೆಗಳು ಸುಂದರ ಪಾಂಡ್ಯನ ಕಾಲದವು.

ಉತ್ತರ ಚೇರ ಶಿಲ್ಪಶೈಲಿ ಸೌಂದರ್ಯ ಮತ್ತು ಅಲಂಕಾರಕ್ಕೆ ಪ್ರಾಧಾನ್ಯ ನೀಡಿತು. ಇವರ ಇಲ್ಲಿನ ಶಿಲ್ಪಗಳಲ್ಲಿ ದಾರುಶಿಲ್ಪಗಳ ಪ್ರತಿರೂಪವನ್ನು ಕಾಣಬಹುದಾಗಿದೆ. ಈ ಶೈಲಿಗೆ ಎತುಮಾಣೂರು, ಸಾತಂಕ ಲಂಗರ, ಪಾಯೂರು ಮತ್ತು ಪದ್ಮನಾಭಪುರದ ಶಿಲ್ಪಗಳನ್ನು ಉದಾಹರಿಸಬಹುದು. ಮೊದಲ ನೋಟಕ್ಕೆ ವೇಷಭೂಷಣಗಳು ಕಥಕ್ಕಳಿ ನೃತ್ಯಗಾರರನ್ನು ನೆನಪಿಸುತ್ತವೆ. ಶುಚೀಂದ್ರ ದೇವಾಲಯದಲ್ಲಿ ಈ ಶೈಲಿಯ ಶಿಲ್ಪಗಳಿವೆ. ವೇಷಭೂಷಣ ವೈವಿಧ್ಯ. ಅಲಂಕರಣ ವಿನ್ಯಾಸಗಳಲ್ಲಿ ಈ ಶೈಲಿಯ ವೈಶಿಷ್ಟ್ಯ ಎದ್ದು ಕಾಣುತ್ತದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ದಕ್ಷಿಣ ಭಾರತದ ರಾಜಕೀಯ ಮತ್ತು ಸಾಂಸ್ಕøತಿಕ ಕ್ಷೇತ್ರಗಳೆರಡರಲ್ಲೂ ಒಂದು ಮಹಾನ್ ಘಟನೆ. ದಕ್ಷಿಣದ ಕಲಾಸಂಪ್ರದಾಯವನ್ನು ಬಲುಮಟ್ಟಿಗೆ ಅನುಸರಿಸಿದ ವಿಜಯನಗರ ಶೈಲಿಯ ಆರಂಭದ ನಿರ್ಮಾಣಗಳಲ್ಲಿ ವಿಶೇಷವಾಗಿ ಕರ್ನಾಟಕ ಮತ್ತು ಆಂಧ್ರದ ಕಟ್ಟಡಗಳಲ್ಲಿ ಚಾಳುಕ್ಯ ಪ್ರಭಾವವನ್ನು ಗುರುತಿಸಬಹುದು. ರಾಜ್ಯ ವಿಸ್ತರಿಸಿದಂತೆ ದಕ್ಷಿಣ ಶೈಲಿಯ ಪ್ರಭಾವ ಸೇರಿ ಎಲ್ಲೆಡೆ ದೇಗುಲಗಳ ಗೋಪುರ, ಮಂಟಪ ಮತ್ತು ವಿಮಾನಗಳು ಒಂದೇ ಬಗೆಯದಾದವು. ಶೃಂಗೇರಿಯ ವಿದ್ಯಾಶಂಕರ ದೇಗುಲವನ್ನು ಪ್ರತಿಮಾಗೃಹವೆಂದೇ ಕರೆಯಬಹುದು. ಚಾಳುಕ್ಯ ದ್ರಾವಿಡ ಶೈಲಿಗಳೆರಡೂ ಬೆರೆತ ಶೈಲಿಯ ಈ ದೇವಾಲಯದ ಹೊರಗೋಡೆಗಳ ಮೇಲಿನ ಕೆತ್ತನೆಗಳು ಮನೋಹರವಾಗಿವೆ. ಗ್ರಾನೈಟ್ ಶಿಲೆಯಲ್ಲಿ ಕಂಡರಿಸಿದ ಶಿಲ್ಪಗಳು, ಸ್ತಂಭ, ಭುವನೇಶ್ವರಿ ಗಮನಾರ್ಹ. ಹಂಪೆಯಲ್ಲಿಯ ಗಣೇಶ ಹಾಗೂ ನರಸಿಂಹ ಶಿಲ್ಪಗಳು ಗಾತ್ರದಲ್ಲಿ ಮಾತ್ರವಲ್ಲ ಪರಿಣಾಮದಲ್ಲೂ ಸೊಗಸಾಗಿವೆ. ತಿರುಪತಿಯ ಚಕ್ರತೀರ್ಥದ ಬಳಿಯ ರಂಗನಾಥ, ತಾಡಪತ್ರಿಯ ರಾಮಸ್ವಾಮಿ ದೇವಾಲಯದ ಗೋಪುರ ಶಿಲ್ಪಗಳು, ಲೇಪಾಕ್ಷಿಯ ಬೃಹತ್ ನಾಟ್ಯಶಿವ ಮುಂತಾದ ಶಿಲ್ಪಗಳು ಉಲ್ಲೇಖಾರ್ಹವಾಗಿವೆ. ಶಿಲ್ಪಿಗೆ ಪ್ರೀತಿಯ ವಸ್ತುವಾದ ರಾಮಾಯಣ ಕಥೆಯ ಸನ್ನಿವೇಶಗಳು ಹಾಗೂ ಕೃಷ್ಣನ ಬಾಲಲೀಲೆಯನ್ನು ಪ್ರತಿನಿಧಿಸುವ ಕೆತ್ತನೆಗಳನ್ನು ಹಂಪೆಯ ಹಜಾರ ರಾಮಸ್ವಾಮಿ ಮತ್ತು ಪೆನುಗೊಂಡೆಯ ವಿಷ್ಣು ದೇವಾಲಯಗಳಲ್ಲಿ ಕಾಣಬಹುದು. ಹಂಪೆಯ ಮತ್ತು ತಾಡಪತ್ರಿಯ ಕಲ್ಲಿನ ರಥಗಳು ಈ ಕಾಲದ ಶಿಲ್ಪಿಗಳ ಪ್ರತಿಭೆಗೆ ಸಾಕ್ಷಿಯಾಗಿವೆ. ಹಂಪೆಯ ಮಂಟಪಗಳ ಅಧಿಷ್ಠಾನದ ಮೇಲೆ ಪ್ರಾಣಿ, ಮಾನವ ಶಿಲ್ಪಗಳು ಸೊಗಸಾಗಿ ಚಿತ್ರಿತವಾಗಿವೆ. ಬೃಹದ್ಗಾತ್ರದ ಸ್ತಂಭ ಶಿಲ್ಪಗಳನ್ನು, ಜೀವಂತವೆನಿಸುವ ಕೋತಿ, ಪಾರಿವಾಳ ಶಿಲ್ಪಗಳನ್ನು ಮತ್ತು ಚಲಿಸಬಲ್ಲ ಕೊಂಡಿಗಳುಳ್ಳ ಕಲ್ಲ ಸರಪಳಿಗಳನ್ನು ಬಿಡಿಸುವಲ್ಲಿ ವಿಜಯನಗರ ಶಿಲ್ಪಿಗಳ ಪ್ರತಿಭೆ ಕೌಶಲ ವ್ಯಕ್ತವಾಗಿದೆ. ವೆಲ್ಲೂರು, ಕಂಚಿ, ಶ್ರೀರಂಗ, ವಿರಿಂಜಪುರ ಮುಂತಾದ ಕಡೆಗಳ ಮಂಟಪಗಳಲ್ಲಿಯ ಶಿಲ್ಪರಾಶಿ ಅಧ್ಯಯನಯೋಗ್ಯವಾಗಿವೆ. ಚಿದಂಬರಮ್ಮಿನ ಗೋಪುರಗಳಲ್ಲೊಂದರಲ್ಲಿರುವ ಕೃಷ್ಣದೇವರಾಯನ ಪ್ರತಿಮೆ ಮತ್ತು ತಿರುಪತಿಯಲ್ಲಿರುವ ಆತನ ಮತ್ತು ಆತನ ಪತ್ನಿಯರ ಪ್ರತಿಮೆಗಳು ಗಮನಾರ್ಹ. ಈ ಕಾಲದಲ್ಲಿ ಉತ್ಸವ ವಿಗ್ರಹಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾದುವು. ಆದರೆ ಲೋಹ ಶಿಲ್ಪದಲ್ಲಿ ಚೋಳ ಕಾಲದ ಸೌಂದರ್ಯ ಇವುಗಳಲ್ಲಿ ಅಷ್ಟಾಗಿ ಕಾಣುವುದಿಲ್ಲ.

ಮಧುರೆಯ ನಾಯಕರ, ಇಕ್ಕೇರಿಯ ನಾಯಕರ ಹಾಗೂ ಮೈಸೂರು ಅರಸರ ಶಿಲ್ಪಶೈಲಿ ವಿಜಯನಗರದ್ದಕ್ಕಿಂತ ಭಿನ್ನವೇನಲ್ಲ. ಇವರ ಕಾಲದಲ್ಲಿ ಸ್ವೋಪಜ್ಞತೆ, ಸಾಹಸಮನೋಭಾವ ಹಾಗೂ ಆಸಕ್ತಿ ಕ್ರಮೇಣ ಮರೆಯಾದವು. ಮುಸ್ಲಿಮ್ ಅರಸರ ಕಾಲದಲ್ಲಿ ಕುಸುರಿಕೆಲಸಕ್ಕಷ್ಟೇ ವಿಶೇಷ ಗಮನ ಸಂದಿತು. ಆಧುನಿಕ ಕಾಲದಲ್ಲಿ ಪ್ರಸಿದ್ಧ ವ್ಯಕ್ತಿಗಳ ಪ್ರತಿಕೃತಿಗಳ ನಿರ್ಮಾಣವಾದವಾದರೂ ಹಿಂದಿನಂತೆ ಧರ್ಮಕಲೆಯ ಬೆನ್ನೆಲುಬಾಗಿ ನಿಲ್ಲಲಿಲ್ಲ. ವಿರಳವಾಗಿ ಅಲ್ಲೊಂದು ಇಲ್ಲೊಂದು ಉದಾಹರಣೆ ದೊರೆಯಬಹುದು. ರಂಜಾಳಗೋಪಾಲಶೆಣೈ ಅವರ ಮಾರ್ಗದರ್ಶನದಲ್ಲಿ ಕಡೆಯಲ್ಪಟ್ಟು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿತವಾಗಿರುವ ಬಾಹುಬಲಿ ಶಿಲ್ಪ ಅಂಥದೊಂದು. ಮೈಸೂರಿನ ಕಾಮಕಾಮೇಶ್ವರಿ ದೇವಸ್ಥಾನದ ಶಿಲ್ಪಗಳು ಸಹ ಈ ದೃಷ್ಟಿಯಿಂದ ಗಮನಾರ್ಹ. ಮರದ ಶಿಲ್ಪಕ್ಕೆ, ಮೈಸೂರಿನ ಜಾನಪದ ವಸ್ರುಸಂಗ್ರಹಾಲಯದಲ್ಲಿರುವ ಮೆಕ್ಕೆಕಟ್ಟೆಯ ಬೃಹತ್ ದಾರುಶಿಲ್ಪಗಳನ್ನು ಉದಾಹರಿಸಬಹುದು. ಬಣ್ಣ ಹಚ್ಚಿದ ಈ ಮೂರ್ತಿಗಳು ಮೂರು ನಾಲ್ಕು ಶತಮಾನಗಳಷ್ಟು ಹಿಂದಿನವು ಎನ್ನಲಾಗಿದೆ.

ಭಾರತೀಯ ಶಿಲ್ಪದಲ್ಲಿ ಭಂಗಿ, ಮುದ್ರೆ ಹಾಗೂ ಆಯುಧ-ಇವು ಪ್ರಧಾನ ಪಾತ್ರವಹಿಸಿವೆ. ಕೆಲವು ದೇವತಾ ಶಿಲ್ಪಗಳಲ್ಲಿ ಅಷ್ಟೇ ಮುಖ್ಯ. ಮೂರ್ತಿಗಳನ್ನು ಸರಿಯಾಗಿ ಗುರುತಿಸಲು ಇವು ಸಹಾಯಕಾರಿಯಾಗಿವೆ. ಭಾರತದ ಶಿಲ್ಪಸಂಪತ್ತು ಅಪಾರವಾಗಿದ್ದರೂ ಶಿಲ್ಪಗಳ ಬಗ್ಗೆ ತಿಳಿದಿರುವುದು ಅತ್ಯಲ್ಪವೇ. ತಮ್ಮ ಹೆಸರಿಗಿಂತ ಕೃತಿ ಮುಖ್ಯ ಎನ್ನುವುದು ಅವರ ಭಾವನೆಯಾಗಿದ್ದಂತೆ ತೋರುತ್ತದೆ. ಆದರೂ ವಿರಳವಾಗಿ ಶಿಲ್ಪಿಗಳು ತಮ್ಮ ಹೆಸರನ್ನು ಕಂಡರಿಸಿದ ನಿದರ್ಶನಗಳುಂಟು. ಶಿಲ್ಪಿಯನ್ನು ಆಕಾರದ ಒಡೆಯ (ಆಕೃತೀಪತಿಃ ಶಿಲ್ಪಾಚಾರ್ಯಃ) ಎಂದು ಕರೆದಿರುವುದು ಆತನ ಪ್ರತಿಭೆ ಕೌಶಲಕ್ಕೆ ತೋರಿದ ಗೌರವವಾಗಿದೆ. ಭಾರತದಲ್ಲಿ ಶಿಲ್ಪಿಯೊಬ್ಬನ ಹೆಸರು ದೊರೆಯುವ ಪ್ರಾಚೀನ ನಿದರ್ಶನವೆಂದರೆ ರಾಮಗಡ ಬೆಟ್ಟದ ಜೋಗಿಮಾರ ಗುಹೆಯಲ್ಲಿರುವ ಕ್ರಿ. ಪೂ. 2ನೆಯ ಶತಮಾನದ ಶಾಸನ. ವಾರಾಣಾಸಿಯ ದೇವದಿನ್ನ ಎಂಬ ಲುಪದಖನು (ರೂಪದಕ್ಷ) ಶುತನುಕಾ ಎಂಬ ದೇವದಾಸಿಯನ್ನು ಪ್ರೀತಿಸಿದ ವಿಷಯವನ್ನು ಇದು ಉಲ್ಲೇಖಿಸುತ್ತದೆ. ಸಾಂಚಿಯ ತೋರಣವನ್ನು ವಿದಿಶದ ದಂತಕರ್ಮಿಗಳು ಮಾಡಿದರಂತೆ (ವಿದಿಸೆಹಿ ದಂತಕಾರೆಹಿ ರೂಪಕಮ್ಮಂ ಕಟು). ಮಥುರಾ ಬಳಿಯ ಪರ್ಖಮ್ ಯಕ್ಷಶಿಲ್ಪವನ್ನು ಕಡೆದವನು ಕುನಿಕನ ಶಿಷ್ಯನಾದ ಗೋಮಿತ್ರ. ಇದೇ ಕುನಿಕನ ಇನ್ನೊಬ್ಬ ಶಿಷ್ಯ ನಕ ಜಿಂಗಾಕಿನಗರದ ಯಕ್ಷಶಿಲ್ಪವನ್ನು ರೂಪಿಸಿದ. ಅಗಿಸಲ ಎಂಬಾತ ಗಾಂಧಾರ ಶೈಲಿಯ ಒಬ್ಬ ಶಿಲ್ಪಿ. ಕಾಸಿಯಾದಲ್ಲಿಯ ಬುದ್ಧನ ಪರಿನಿರ್ವಾಣ ಶಿಲ್ಪವನ್ನು ಕಂಡರಿಸಿದಾತ ಮಥುರೆಯ ದಿನ್ನ. ಪಲ್ಲವಮಹೇಂದ್ರ ಬಹುಮುಖ ಪ್ರತಿಭಾಶಾಲಿ, ಸ್ವತಃ ಶಿಲ್ಪಿ. ಮಹಾಬಲಿಪುರದ ಶೇಷಶಾಯಿ ಶಿಲ್ಪವನ್ನು ಲಲಿತಾಲಯ ಎಂಬಾತ ಕೆತ್ತಿದ. ಸರ್ವಸಿದ್ಧಿ ಆಚಾರ್ಯ ಸಂಘಕ್ಕೆ ಸೇರಿದ ರೇವಡಿ ಓವಜ್ಜ, ಪಟ್ಟದಕಲ್ಲಿನ ವಿರೂಪಾಕ್ಷದೇವವಾಲಯ ಕಟ್ಟಿದ 'ಸೂತ್ರಧಾರಿ' ಗುಂಡ. ಇವರು ಬಾದಾಮಿ ಚಾಳುಕ್ಯ ಶೈಲಿಯ ಶಿಲ್ಪಿಗಳು. ಬೆಜವಾಡದಲ್ಲಿಯ ಪೂರ್ವಚಾಳುಕ್ಯ ಶೈಲಿಯ ದ್ವಾರಪಾಲಕ ಮೂರ್ತಿಗಳನ್ನು ಕಂಡರಿಸಿದಾತ ವೆಂಗಿ ಆಸ್ಥಾನದ ಗುಂಡಯ.

ಶಿಲ್ಪಶಾಸ್ತ್ರ ಪಂಡಿತನಾದ ಮಹಾಶಿಲ್ಪಿ ರವಿ ಒಬ್ಬ ಚೋಳ ರೂಪಕಾರ. ಸೊಗಸಾದ ಅಕ್ಷರಗಳಲ್ಲೇ ಹಂಸರೂಪಗಳನ್ನು ಬಿಡಿಸಿದ ರೂವಾರಿ ಸೋವರಾಶಿ ಇಟಗಿಯ ಮಹಾದೇವ ದೇವಾಲಯದ ಕೆಲವು ಶಿಲ್ಪಗಳನ್ನು ಕಂಡರಿಸಿದಾತ. ಹೊಯ್ಸಳರ ಕಾಲದಲ್ಲಂತೂ ಶಿಲ್ಪಿಗಳ ಹೆಸರು ಹೆಚ್ಚಿನ ಸಂಖ್ಯೆಯಲ್ಲಿ ಲಭಿಸುತ್ತದೆ. ಇವರಲ್ಲಿ ಚಾವಣ, ದಾಸೋಜ, ಮಲ್ಲಿಯಣ, ಪದರಿಮಲ್ಲೋಜ, ಚಿಕ್ಕಹಂಪ, ಕೆಂಜಮಲ್ಲಿಯಣ, ನಾಗೋಜ, ಮಾರಣ, ನಂಜಯ, ಚವುಡಯ, ಮಲ್ಲಿತಮ್ಮ, ಮಸಣಿತಮ್ಮ ಮುಂತಾದವರಿದ್ದಾರೆ. ಕೆಲವು ರೂವಾರಿಗಳ ವಿಶಿಷ್ಟ ಬಿರುದುಗಳನ್ನೂ ಹೇಳಿರುವುದುಂಟು-ಬಿರುದರೂವಾರಿ ಮದನಮಹೇಶ ಚಾವಣ, ರೂವಾರಿಪುಲಿ ಮಲ್ಲಿಯಣ ಇತ್ಯಾದಿ. ಪರಮಾರ ದೊರೆ ಭೋಜ ಪ್ರತಿಷ್ಠಾಪಿಸಿದ್ದ ವಾಗ್ದೇವಿ ಪ್ರತಿಮೆಯನ್ನು ಸಹಿರಸನ ಮಗ ಮನಧಲ ಎಂಬಾತ ಕಡೆದ (ಸೂತ್ರಧಾರ ಸಹಿರಸುತ ಮನಥಲೇನ ಘಟಿತಂ). ಈಗ ಇದು ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲಿದೆ. ಚಂದೇಲ ಶಿಲ್ಪಿಗಳಲ್ಲಿ ಚಿತ್ರಕಾರ ಶ್ರಿಸಾತನ, ಆತನ ಮಗ ಚಿತನಕ ಪ್ರಸಿದ್ಧರು. ಮಹಾನ್ ಕಲಾಕಾರ ಶೂಲಪಾಣಿ ವರೇಂದ್ರ ಎಂಬ ಸ್ಥಳದ ಶಿಲ್ಪಿಗಳ ಗೋಷ್ಠಿಯ ಪ್ರಮುಖನಾಗಿದ್ದ; ಈತನ ತಂದೆ ಬೃಹಸ್ಪತಿ, ಅಜ್ಜ ಮಾನದಾನಿ ಹಾಗೂ ಮುತ್ತಜ್ಜ ಧರ್ಮ.

ಬಂಗಾಳದ ಶಿಲ್ಪಿಗಳಲ್ಲಿ ಸೂತ್ರಧಾರ ವಿಷ್ಣುಭದ್ರ, ಮಹೀಧರ ಕರ್ಣಭದ್ರ, ಮಂಖದಾಸ ಮುಂತಾದವರು ಸೇರಿದ್ದಾರೆ. ಸೋಮೇಶ್ವರ ಮಗಧದ ಒಬ್ಬ ಶಿಲ್ಪಿ (ಶಿಲ್ಪವಿನ್ ಮಾಗಧಃ). ಪಾಲಶೈಲಿಯ ಸೂರ್ಯನನ್ನು, ಇಂದ್ರನೀಲಮಣಿಯ ಶಿಷ್ಯನಾದ ಸುಶಿಲ್ಪಿ ಅಮೃತನೆಂಬಾತ ಕಂಡರಿಸಿದ. ಕಾಶ್ಮೀರದ ಮೇರಿವರ್ಮನ ಆಜ್ಞೆಯ ಮೇರೆಗೆ ಮಹಿಷಮರ್ದಿನಿ, ಶಕ್ತಿ, ಗಣೇಶ ಹಾಗೂ ನಂದಿಯ ಲೋಹ ಶಿಲ್ಪಗಳನ್ನು ತಯಾರಿಸಿದಾತ ಕಮ್ಮೀನಗುಗ್ಗ (ಕರ್ಮಕಾರ). ಅಬುವಿನ ದೇಗುಲ ಶಿಲ್ಪಿಗಳಲ್ಲಿ ಶೋಭನದೇವ ಪ್ರಮುಖನಾಗಿದ್ದ. ಗುಜರಾತಿನಲ್ಲಿ ಚಿತ್ತೋರಿನ ಕುಂಬಸ್ವಾಮಿದೇವಾಲಯದಲ್ಲಿ ಜಯಿತ ಎಂಬ ಶಿಲ್ಪಿ ಹಾಗೂ ಆತನ ಇಬ್ಬರು ಮಕ್ಕಳ ಪ್ರತಿಕೃತಿಗಳಿವೆ. ಶಿಲ್ಪಿಗಳು ಕಂಡರಿಸಲು ಬಳಸಿದ ಉಪಕರಣಗಳನ್ನು ಕೆಲವೊಮ್ಮೆ ತಾಮ್ರಶಾಸನಗಳ ಮೇಲೆ ಬಿಡಿಸಿರುವುದುಂಟು. ಖಜುರಾಹೊದಲ್ಲಿ ಶಿಲ್ಪಿ ಶಿಲ್ಪಕಾರ್ಯದಲ್ಲಿ ತೊಡಗಿರುವ ಶಿಲ್ಪವನ್ನು ಕಾಣಬಹುದಾಗಿದೆ. (ಎಚ್.ಎಂ.ಎನ್.ಆರ್).