ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭೈರಪ್ಪ, ಎಸ್ ಎಲ್

ವಿಕಿಸೋರ್ಸ್ದಿಂದ

ಭೈರಪ್ಪ, ಎಸ್ ಎಲ್ :- 1934. ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರು. ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ 1934ರಲ್ಲಿ ಜನಿಸಿದರು. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ.

ಭೈರಪ್ಪನವರು ತಮ್ಮ ಹುಟ್ಟೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಪ್ರೌಢಶಾಲೆ ಸೇರಿದರು. ಅನಂತರ ಮಹಾರಾಜ ಕಾಲೇಜು ಸೇರಿ ತತ್ತ್ವಶಾಸ್ತ್ರದಲ್ಲಿ ಬಿ.ಎ. (ಆನರ್ಸ್, 1957) ಪದವಿಯನ್ನೂ, ಎಂ.ಎ. (1958) ಪದವಿಯನ್ನೂ ಪಡೆದರು. ಎಂ.ಎ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೇ ಪ್ರಥಮ ಸ್ಥಾನದೊಂದಿಗೇ ಉತ್ತೀರ್ಣರಾಗಿ ಎರಡು ಸುವರ್ಣ ಪದಕಗಳನ್ನು ಗಳಿಸಿದರು. ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯ ಇವರ ಸತ್ಯ ಮತ್ತು ಸೌಂದರ್ಯ ಎಂಬ ನಿಬಂಧಕ್ಕೆ 1962ರಲ್ಲಿ ಪಿಎಚ್.ಡಿ ಪದವಿ ನೀಡಿದೆ.

ಭೈರಪ್ಪನವರು ಮೊದಲು ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಮತ್ತು ಮನಶ್ಯಾಸ್ತ್ರದ ಅಧ್ಯಾಪಕರಾಗಿ ಎರಡು ವರ್ಷ ಕೆಲಸ ಮಾಡಿದರು (1958-60). ಅನಂತರ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಆರು ವರ್ಷಗಳ ಕಾಲ ತತ್ತ್ವಶಾಸ್ತ್ರದ ಉಪನ್ಯಾಸಕರಾಗಿದ್ದು (1960-66), ಮುಂದೆ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳ ಕಾಲ ಶಿಕ್ಷಣ ಮೀಮಾಂಸೆಯ ರೀಡರಾಗಿದ್ದರು (1967-71). ಸದ್ಯದಲ್ಲಿ ಮೈಸೂರಿನ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರದ ರೀಡರಾಗಿದ್ದಾರೆ.

ಕನ್ನಡದ ಮಹತ್ತ್ವಪೂರ್ಣ ಕಾದಂಬರಿಕಾರರಲ್ಲಿ ಭೈರಪ್ಪನವರೂ ಒಬ್ಬರು. ಧರ್ಮಶ್ರೀ, ದೂರ ಸರಿದರು, ನಾಯಿ ನೆರಳು, ನಿರಾಕಾರಣ, ಜಲಪಾತ ತಬ್ಬಲಿಯು ನೀನಾದೆ ಮಗನೆ, ಗ್ರಹಣ, ಗೃಹಭಂಗ, ಮತದಾನ, ವಂಶವೃಕ್ಷ, ದಾಟು, ಪರ್ವ, ಅನ್ವೇಷಣ, ನೆಲೆ ಮುಂತಾದವು ಇವರ ಮುಖ್ಯ ಕಾದಂಬರಿಗಳು.

ಭೈರಪ್ಪನವರ ಬಹುಪಾಲು ಕಾದಂಬರಿಗಳ ಕೇಂದ್ರ ಕ್ರಿಯೆ ಮೌಲ್ಯಗಳ ಸಂಘರ್ಷ. ಹಳೆಯದು ಹೊಸತರ, ಹಳಬರು ಆಧುನಿಕರ ಭಿನ್ನ ಭಿನ್ನ ನಿಲವುಗಳ ಮೂಲಕ ಪಾತ್ರಗಳ ಅನುಭವದ ಸೀಮಾವಲಯ ತೆರೆದುಕೊಳ್ಳುತ್ತ, ಸನ್ನಿವೇಶಗಳು ರೂಪುಗೊಳ್ಳುತ್ತ, ಕಾದಂಬರಿಗಳು ಬೆಳೆಯುತ್ತ ಹೋಗುತ್ತವೆ. ಹೀಗಾಗಿ ಇವರ ಕಾದಂಬರಿಗಳಲ್ಲಿ ವಿಚಾರವಂತಿಕೆಯ ಹೊಳಹು ಹಿನ್ನೆಲೆಯಾಗಿ ಉದ್ದಕ್ಕೂ ಹರಡಿಕೊಳ್ಳುತ್ತದೆ. ಕಾದಂಬರಿಕಾರರ ನಿಯಂತ್ರಕಪ್ರಜ್ಞೆ ಎಲ್ಲ ಕಾದಂಬರಿಗಳಲ್ಲಿಯೂ ಆರ್ಷೇಯ ತತ್ತ್ವಗಳ ಪರ ನಿಲ್ಲುವುದರಿಂದ ಇವರ ಎಲ್ಲ ಕಾದಂಬರಿಗಳ ಹಿಂದೆಯೂ ಒಂದು ನಿರ್ದಿಷ್ಟ ಚಿಂತನದ ಸುಸಂಬದ್ಧ ಕ್ರಮವಿದೆ.

ಭಾರತೀಯ ಮಾನಸಿಕ ಆವರಣಕ್ಕೆ ಧಾರ್ಮಿಕ ಚೌಕಟ್ಟು ಚರಿತ್ರೆಯುದ್ದಕ್ಕೂ ಬೆಸೆದುಕೊಂಡಿದೆ. ಪಾಶ್ಚಾತ್ಯರಲ್ಲಿ ರೂಪುಗೊಂಡಂತೆ ಧರ್ಮ ಮತ್ತು ಬದುಕು ಭಾರತೀಯನಲ್ಲಿ ಎಂದೂ ಭಿನ್ನವಾಗಿಲ್ಲ. ಭೈರಪ್ಪನವರ ಧರ್ಮಶ್ರೀಯಲ್ಲಿ ಇಂಥ ಸಮಸ್ಯೆಯೊಂದು ಸನ್ನಿವೇಶಗಳ ಹರಹಿನಲ್ಲಿ ಮೂಡಿದೆ. ವೈಯಕ್ತಿಕ ಹಾಗೂ ಸಾಮಾಜಿಕ ಕಾರಣಗಳಿಂದಾಗಿ ಧರ್ಮಾಂತರ ಹೊಂದಿದ ವ್ಯಕ್ತಿಯೊಬ್ಬ ಎದುರಿಸಬೇಕಾದ ಸಾಮಾಜಿಕ ಸಮಸ್ಯೆಗಳು ಮಾತ್ರವಲ್ಲ, ವೈಯಕ್ತಿಕ ದ್ವಂದ್ವವೇನೆಂಬುದನ್ನು ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ನಿರ್ದಿಷ್ಟ ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆದ ವ್ಯಕ್ತಿಗೆ ಅನ್ಯ ಧರ್ಮವೊಂದು ಹೇಗೆ ಪರಕೀಯವಾಗುತ್ತದೆ. ತನ್ಮೂಲಕ ವ್ಯಕ್ತಿ ತನಗೆ ತಾನೇ ಹೇಗೆ ಪರಕೀಯನಾಗುತ್ತಾನೆ ಎಂಬುದನ್ನು ಧರ್ಮಶ್ರೀ ಹಿಡಿದಿರಿಸಿದೆ.

ಜನ್ಮಾಂತರ ಸಮಸ್ಯೆಯೂ ಕೂಡ ಭಾರತೀಯ ತಾತ್ತ್ವಿಕ ವಲಯದಲ್ಲಿ ಅಷ್ಟೇ ಗಹನವಾದದ್ದು. ಆಯಾ ವ್ಯಕ್ತಿಯ ಕರ್ಮವಿಶೇಷಕ್ಕನುಗುಣವಾಗಿ ಹುಟ್ಟು ಸಾವುಗಳ ನಿರಂತರ ಚಕ್ರಗತಿಯಲ್ಲಿ ಜನ್ಮಪುನರ್ಜನ್ಮಗಳನ್ನು ಪಡೆಯುತ್ತ ಹೋಗುತ್ತಾನೆ ಎಂಬುದನ್ನು ಹಿಂದು ಧರ್ಮ ಪ್ರತಿಪಾದಿಸುತ್ತದೆ. ಹಿಂದಿನ ಜನ್ಮದಲ್ಲಿ ವಿಶ್ವೇಶನಾಗಿದ್ದು ಈ ಜನ್ಮದಲ್ಲಿ ಕ್ಷೇತ್ರಪಾಲನಾಗಿ ಹುಟ್ಟಿದ ಮತ್ತು ಪೂರ್ವ ಜನ್ಮದ ನೆನಪನ್ನು ಉಳ್ಳ ಚೇತನವೊಂದು ಉಂಟುಮಾಡುವ ವಿಚಿತ್ರ ಸನ್ನಿವೇಶಗಳನ್ನು ನಾಯಿ ನೆರಳು ಕಾದಂಬರಿ ಚಿತ್ರಿಸುತ್ತದೆ. ಕಾಲಾತೀತವಾದ ಆತ್ಮ, ಕಾಲಕ್ಕೆ ಬದ್ಧವಾದ ದೇಹ ಇವೆರಡರ ಸಮ್ಮಿಲನದ ಮೂಲಕ ಉಂಟಾಗುವ ಪುನರ್ಜನ್ಮ ಸೃಷ್ಟಿಸುವ ಸಂದಿಗ್ಧ ಸನ್ನಿವೇಶಗಳನ್ನೂ ಕಾದಂಬರಿ ಒಳಗೊಳ್ಳುತ್ತದೆ.

ಸಂಸಾರವನ್ನು ನಿರಾಕರಿಸಿ ವ್ಯಕ್ತಿ ಸಮಾಜದ ಎಲ್ಲ ಸಂಬಂಧಗಳನ್ನೂ ಕಳಚಿಕೊಂಡು ಒಂಟಿಯಾಗುವ, ವಿರಕ್ತಜೀವನವನ್ನು ಬೋಧಿಸುವ ಭಾರತೀಯ ತತ್ತ್ವದ ಮುಖವೊಂದನ್ನು ವಿಶ್ಲೇಷಿಸುವ ಯತ್ನ ನಿರಾಕರಣ ಕಾದಂಬರಿಯದು. ಈ ಕಾದಂಬರಿಯ ನಾಯಕ ನರಹರಿಯ ವಾಸ್ತವ ಹಾಗೂ ಅದರ್ಶ ಜೀವನದ ನಿರಂತರ ಭ್ರಮಣೆಯೇ ಇಲ್ಲಿಯ ಕಥಾವಸ್ತು. ವ್ಯಕ್ತಿ ಹಾಗೂ ಸಮಾಜಕ್ಕಿರುವ ಅಭೇದ್ಯ ಸಂಬಂಧವನ್ನು ಕಾದಂಬರಿ ಪ್ರತಿಪಾದಿಸುತ್ತದೆ.

ತಬ್ಬಲಿಯು ನೀನಾದೆ ಮಗನೆ, ಪಾಶ್ಚಾತ್ಯ ಪೌರಸ್ತ್ಯ ಸಂಸ್ಕøತಿಗಳ ಕರ್ಷಣ ಕೇಂದ್ರದಲ್ಲಿ ಒಂಟಿಯಾಗಿ ನಿಲ್ಲುವ ತಪ್ತಚೇನದ ಚಿತ್ರಣ. ಗೋವಿನ ಹಾಡಿನ ಆಶಯದ ಚೌಕಟ್ಟಿನಲ್ಲೇ ಸನ್ನಿವೇಶ, ಪಾತ್ರಗಳನ್ನು ಸೃಷ್ಟಿಸಿಕೊಳ್ಳುತ್ತ ಹೋಗುವ ಈ ಕಾದಂಬರಿಯ ಕಾಳಿಂಗೇಗೌಡ, ಪುಣ್ಯಕೋಟಿ, ಲಿಡಿಯಾ ಮುಂತಾದ ಹೆಸರುಗಳು ಸಾಂಕೇತಿಕವಾಗುತ್ತವೆ.

ವಂಶನಿಷ್ಠೆ ಹಾಗೂ ಅದಕ್ಕೆ ಧಕ್ಕೆಯೊದಗಬಹುದಾದ ಸಂದರ್ಭದಲ್ಲಿಯ ಮಾನಸಿಕ ಆಂದೋಳನ ವಂಶವೃಕ್ಷ ಕಾದಂಬರಿಯ ಕೇಂದ್ರಕ್ರಿಯೆಯಾಗಿದೆ. ವಂಶನಿಷ್ಠೆಯನ್ನು ಪ್ರತಿಪಾದಿಸುವ ಶ್ರೀನಿವಾಸ ಶ್ರೋತ್ರಿ ಕಾದಂಬರಿಯ ಕೇಂದ್ರ ಪಾತ್ರವಾಗುತ್ತಾರೆ.

ಭೈರಪ್ಪನವರ ಬಹುಪಾಲು ಕಾದಂಬರಿಗಳು ತಾತ್ತ್ವಿಕ ಸಮಸ್ಯೆಯೊಂದರ ಗರ್ಭದಿಂದಲೇ ರೂಪು ತಾಳುತ್ತವೆ. ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುತ್ತವೆ. ಬೌದ್ಧಿಕ ಅಳವಡಿಕೆಗಿಂತಲೂ ಜೀವನವನ್ನು ಇದ್ದಂತೆಯೇ ನಿರ್ಲಿಪ್ತವಾಗಿ ಚಿತ್ರಿಸುವ ಕಾದಂಬರಿಗಳಲ್ಲಿ ಮತದಾನ, ಗೃಹಭಂಗ ಮುಖ್ಯವಾಗುತ್ತವೆ. ಗ್ರಾಮೀಣ ಬದುಕಿನ ನೈಜವಿವರಗಳನ್ನು ನಿರುದ್ಧೇಶವೋ ಎನ್ನುವಂತೆ ಸಾವಧಾನವಾಗಿ ಚಿತ್ರಿಸುತ್ತ ಹೋಗುವ ಗೃಹಭಂಗ ಈ ದೃಷ್ಟಿಯಿಂದ ಗಮನಾರ್ಹ. ವಿವರಗಳಿಗೆ ತಕ್ಕಂತೆ ಕಾದಂಬರಿಯ ಚಲನಗತಿಯೂ ನಿಧಾನವಾಗುತ್ತದೆ.

ಗೃಹಭಂಗ ಕಾದಂಬರಿಯ ಉತ್ತರಾರ್ಧವೆನ್ನುವಂತೆ ಆದರೂ ಸ್ವತಂತ್ರವಾಗಿ ನಿಲ್ಲಬಹುದಾದ ಭೈರಪ್ಪನವರ ಇನ್ನೊಂದು ಕಾದಂಬರಿ ಅನ್ವೇಷಣ. ಗೃಹಭಂಗದಲ್ಲಿ ಕೇವಲ ಒಂದು ಪಾತ್ರವಾಗಿ ಬರುವ ವಿಶ್ವನಾಥ ಈ ಕಾದಂಬರಿಯ ನಾಯಕ. ಅವನು ಬಿಟ್ಟು ಹೋದ ಬದುಕಿನ ಹೆಜ್ಜೆಗಳನ್ನು ಹುಡುಕುತ್ತ ಹೊರಡುವ ಕಂಠಿ ಜೋಯಿಸರಾದಿ ಅನೇಕ ಪಾತ್ರಗಳು ಅಂತರಂಗವೀಕ್ಷಣೆಯಲ್ಲಿ ತೊಡಗಿಕೊಳ್ಳುತ್ತ ವಿಶ್ವನಾಥನ ಜೀವನಚಿತ್ರವನ್ನು ರೇಖಿಸುತ್ತವೆ. ಕಾದಂಬರಿಯ ತಾಂತ್ರಿಕ ನಾವೀನ್ಯವೂ ವಿಶ್ವನಾಥನ ಆಗಂತುಕ ಬಗೆಯ ಬದುಕಿಗೆ ಅನುಗುಣವಾಗಿದೆ.

ಸಮಕಾಲೀನ ರಾಜಕೀಯ ಸಮಸ್ಯೆಯನ್ನು ಮತದಾನ ಎಂಬ ಕಾದಂಬರಿ ಕೈಗೆತ್ತಿಕೊಂಡಿದೆ. ಈ ಕಾದಂಬರಿಯ ನಾಯಕ ಡಾಕ್ಟರ್ ಶಿವಪ್ಪ ರಾಜಕೀಯಕ್ಕೆ ಇಳಿದು ಸೋಲನ್ನೊಪ್ಪಿ ಕೊನೆಗೆ ನಿಸ್ಸ್ವಾರ್ಥ ಸೇವೆಯಿಂದ ಹಳ್ಳಿಯ ಬಡಜನತೆಗಾಗಿ ದುಡಿಯುವುದನ್ನು ಕಾದಂಬರಿ ಚಿತ್ರಿಸುತ್ತದೆ. ರಾಜಕೀಯಕ್ಕೂ ಬೌದ್ಧಿಕ ಕ್ಷೇತ್ರಕ್ಕೂ ಇರುವ ಅಂತರವನ್ನು ಈ ಕಾದಂಬರಿ ಗುರುತಿಸುತ್ತದೆ.

ದೂರ ಸರಿದರು ಕಾದಂಬರಿಯಲ್ಲಿ ಭಾವನಾತ್ಮಕವಾಗಿ ಸಮೀಪವರ್ತಿಗಳಾದರೂ ಬೌದ್ಧಿಕ ಅಂತರದಿಂದ ಒಂದಾಗಲಾರದ, ವಾದದಲ್ಲಿ ಕಾದು ಸೋಲನ್ನೊಪ್ಪಿದ ವಿವಾಹಪೂರ್ವ ತರುಣ ತರುಣಿಯರ ಚಿತ್ರಣವಿದ್ದರೆ, ಜಲಪಾತದಲ್ಲಿ ವಿವಾಹಾನಂತರದ ದಾಂಪತ್ಯವೈಷಮ್ಯ, ಗ್ರಾಮೀಣ ಹಾಗೂ ನಾಗರೀಕ ಜೀವನದ ಸಮಸ್ಯೆಗಳು ಹಾಗೂ ಅಂತರಂಗ-ಬಹಿರಂಗ ಬದುಕಿನ ಸಂಘರ್ಷವನ್ನು ಒಬ್ಬ ಚಿತ್ರಕಲಾವಿದ ಹಾಗೂ ಅವನ ಹಾಡುಗಾರ್ತಿ ಪತ್ನಿಯ ಮೂಲಕ ಚಿತ್ರಿಸಿದೆ.

ಗಂಡು-ಹೆಣ್ಣುಗಳ ಪ್ರಾಕೃತಿಕ ಸೆಳೆತದ ಎದುರು ಮಾನವ ಕಲ್ಪಿತ ಸಂಪ್ರದಾಯ, ಆಚಾರವಿಚಾರ, ನಂಬಿಕೆಗಳು ಗ್ರಹಣ ಕಾದಂಬರಿಯಲ್ಲಿ ಮುಖಾಮುಖಿಯಾಗುತ್ತದೆ. ಮಠದ ಸ್ವಾಮಿಗಳೂ ಹಾಗೂ ಊರಿನ ಲೇಡಿ ಡಾಕ್ಟರು-ಇವರ ನಡುವಿನ ಆಕರ್ಷಣೆ-ವಿಕರ್ಷಣೆಗಳ ಕಥೆಯನ್ನು ಇದು ಒಳಗೊಂಡಿದೆ.

ದಾಟು ಮುಖ್ಯವಾಗಿ ಭಾರತದಲ್ಲಿ ನಿತ್ಯನಿರಂತರವಾಗಿ ಹರಿದುಬಂದಿರುವ, ಇಂದಿಗೂ ಪ್ರಖರವಾಗಿ ಕಾಡುತ್ತಿರುವ ಜಾತಿಸಮಸ್ಯೆ ಕುರಿತ ಕಾದಂಬರಿ. ಇದಕ್ಕೆ ಪೂರಕವಾಗಿ ಶ್ರದ್ಧೆ ಸಂಪ್ರದಾಯಗಳು, ಆಚರಣೆಗಳು, ಸಾಮಾಜಿಕ, ಧಾರ್ಮಿಕ, ರಾಜಕೀಯ ಸಮಸ್ಯೆಗಳು, ದೈವಿಕ ನಂಬಿಕೆಗಳು ಕಾದಂಬರಿಯ ಕ್ರಿಯಾವರ್ತುಲದಲ್ಲಿ ಬರುತ್ತವೆ. ಕಾದಂಬರಿಯ ಕೇಂದ್ರ ಪಾತ್ರವಾದ ಸತ್ಯಭಾಮೆಯ ಸುತ್ತ ಉಳಿದ ಪಾತ್ರಗಳು ಅನಾವರಣಗೊಳ್ಳುತ್ತವೆ. ಹರಿಜನ ಸಮಸ್ಯೆ ಈ ಕಾದಂಬರಿಯ ಮುಖ್ಯವಿಷಯ. ಭೈರಪ್ಪನವರು ಕಾದಂಬರಿಕಾರರಷ್ಟೇ ಮಾತ್ರವಲ್ಲ; ಸೌಂದರ್ಯತತ್ತ್ವ ಮೀಮಾಂಸಕರೂ ಆಗಿದ್ದಾರೆ. ಇವರ ಸತ್ಯ ಮತ್ತು ಸೌಂದರ್ಯ, ಸೌಂದರ್ಯ ಮೀಮಾಂಸೆಯ ದೃಷ್ಟಿಯಿಂದ ಒಂದು ಗಮನಾರ್ಹ ಗ್ರಂಥ. ಕಥೆ ಮತ್ತು ಕಥಾವಸ್ತು, ಸಾಹಿತ್ಯ ಮತ್ತು ಪ್ರತೀಕ-ಇವು ಸಾಹಿತ್ಯಿಕ ಸಮಸ್ಯೆಗಳನ್ನು ಕುರಿತು ಚರ್ಚಿಸುವ ಪುಸ್ತಕಗಳು.

ಪರ್ವ ಕಾದಂಬರಿ ಭೈರಪ್ಪನವರ ವಿಶಿಷ್ಟ ಕೃತಿ. ಇದರಲ್ಲಿ ಮಹಾಭಾರತ ಕಥೆಯನ್ನು ಒಂದು ಸಾಮಾಜಿಕ ನೆಲೆಗಟ್ಟಿನಲ್ಲಿ ನೋಡಲಾಗಿದೆ. ಮೂಲದ ಅಲೌಕಿಕತೆ ಇಲ್ಲಿ ಮರೆಯಾಗಿದೆ. ಮಹಾಭಾರತದ ಹಲವು ಅಲಕ್ಷಿತ ಪಾತ್ರಗಳು ಇಲ್ಲಿ ವಿಜೃಂಭಿಸಿವೆ. ಕೃಷ್ಣ ಇಲ್ಲಿ ಬುದ್ಧಿ ವಿವೇಕಗಳ ಸಾಮರಸ್ಯ ಪಡೆದ ವ್ಯಕ್ತಿಯಾಗಿ ಕಂಗೊಳಿಸಿದ್ದಾನೆ. ಇಲ್ಲಿಯ ಶಕ್ತಿಯುತ ಶೈಲಿ ಪರ್ವ ಕಾದಂಬರಿಯ ಉತ್ಕøಷ್ಟತೆಯನ್ನು ಮೆರೆದಿದೆ.

ಭೈರಪ್ಪನವರು ಇಂಗ್ಲಿಷ್‍ನಲ್ಲಿಯೂ ಕೃತಿರಚನೆ ಮಾಡಿದ್ದಾರೆ. ಸತ್ಯ ಮತ್ತು ಸೌಂದರ್ಯ, ಭಾರತೀಯ ಶಿಕ್ಷಣದಲ್ಲಿ ಮೌಲ್ಯಗಳ ಸ್ಥಾನ, ವ್ಯಕ್ತಿತ್ವ ಮತ್ತು ಚಾರಿತ್ರ್ಯದ ವಿಕಾಸದಲ್ಲಿ ತತ್ತ್ವಶಾಸ್ತ್ರ, ವಿದ್ಯಾಭ್ಯಾಸದಲ್ಲಿ ಸಮಾನವಕಾಶ- ಇವು ಇವರ ಇಂಗ್ಲಿಷ್ ಕೃತಿಗಳು. ಇವರ ಹದಿಮೂರು ಸಂಶೋಧನ ಲೇಖನಗಳು ಫಿಲಾಸಫಿಕಲ್ ಕ್ವಾರ್ಟರ್ಲಿ, ದರ್ಶನ, ಮರಾಠಿ ವಿಶ್ವಕೋಶ ಮುಂತಾದ ಕಡೆಗಳಲ್ಲಿ ಪ್ರಕಟವಾಗಿವೆ.

ಭೈರಪ್ಪನವರ ಕೆಲವು ಕಾದಂಬರಿಗಳು ಭಾರತದ ಇತರ ಭಾಷೆಗಳಿಗೆ ಅನುವಾದಗೊಂಡಿವೆ. ವಂಶವೃಕ್ಷ ಹಿಂದಿ ಹಾಗೂ ತೆಲುಗು ಭಾಷೆಗಳಿಗೆ ಅನುವಾದವಾಗಿದೆ. ಇವರ ಗೃಹಭಂಗ ಕಾದಂಬರಿಯನ್ನು ನ್ಯಾಷನಲ್ ಬುಕ್ ಟ್ರಸ್ಟ್‍ನವರು ಭಾರತದ ಎಲ್ಲ ಅಧಿಕೃತ ಭಾಷೆಗಳಲ್ಲಿಯೂ ಅನುವಾದಿಸಿ ಪ್ರಕಟಿಸಿದ್ದಾರೆ. ಇವರ ಸಮಗ್ರ ಕಾದಂಬರಿಗಳನ್ನು ಕುರಿತಂತೆ ಸಹಸ್ಪಂದನ ಎಂಬ ವಿಮರ್ಶಾಲೇಖನಗಳ ಸಂಕಲನವೊಂದು ಪ್ರಕಟವಾಗಿದೆ (1979).

ಭೈರಪ್ಪನವರು ತಾತ್ತ್ವಿಕ ಚಿಂತನೆಗಳನ್ನು ಕಾದಂಬರಿಯಂಥ ಸೃಷ್ಟಾತ್ಮಕ ಪ್ರಕಾರದಲ್ಲಿ ತೊಡಗಿಸಿದ ಆಧುನಿಕ ಲೇಖಕರಲ್ಲಿ ಪ್ರಮುಖರಾದವರು. ಇವರು ಅನೇಕ ವಿಷಯಗಳಲ್ಲಿ ಪಾಂಡಿತ್ಯ ಸಂಪಾದಿಸಿದ್ದಾರೆ. ಇವರಿಗೆ ಅನೇಕ ಸನ್ಮಾನಗಳು ಲಭಿಸಿವೆ. ಇವರ ವಂಶವೃಕ್ಷ ಕಾದಂಬರಿಗೆ 1966ರ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. 1975ರಲ್ಲಿ ದಾಟು ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರಕಿವೆ. 2005ನೇ ಇಸವಿಯ ಪ್ರತಿಷ್ಠಿತ ಪಂಪ ಪ್ರಶಸ್ತಿ ದೊರಕಿದೆ. ಇವರ ಎರಡು ಕಾದಂಬರಿಗಳು, ವಂಶವೃಕ್ಷ ಹಾಗೂ ತಬ್ಬಲಿಯು ನೀನಾದೆ ಮಗನೆ ಚಲನಚಿತ್ರಗಳಾಗಿವೆ.