ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಧುರಕವಿ

ವಿಕಿಸೋರ್ಸ್ ಇಂದ
Jump to navigation Jump to search

ಮಧುರಕವಿ : - ಜೈನಕವಿ. ಧರ್ಮನಾಥಪುರಾಣ ಎಂಬ ಕಾವ್ಯದ ಕರ್ತೃ. ಗೊಮ್ಮಟಸ್ತುತಿಯಷ್ಠಕ ಇವನ ಇನ್ನೊಂದು ಕೃತಿ. ಈತನ ತಂದೆ ವಿಷ್ಣು. ತಾಯಿ ನಾಗಾಂಬಿಕೆ. ಹರಿಹರರಾಯನ ಪ್ರಧಾನಿ ಮುದ್ದದಂಡೇಶ ಇವನ ಪೋಷಕ. ಭೂನಾಥಾಸ್ಥಾನಚೂಡಾಮಣಿ ಎಂಬುದರಿಂದ ಈತ ಎರಡನೆಯ ಹರಿಹರನ (1337-1404) ಆಸ್ಥಾನಕವಿಯಾಗಿದ್ದಂತೆ ಕಂಡು ಬರುತ್ತದೆ. ಕವಿಗೆ ಮಧುರ ಮಾಧವ, ಸರಸಕವಿರಸಾಲವಸಂತ, ಭಾರತೀಮಾನಸಕೇಳೀರಾಜಹಂಸ ಮೊದಲಾದ ಬಿರುದುಗಳಿದ್ದಂತೆ ತಿಳಿಯುತ್ತದೆ. ಪೂರ್ವಕವಿಗಳಲ್ಲಿ ಪಂಪ, ಪೊನ್ನ, ರನ್ನ, ನಾಗಚಂದ್ರ ನೇವಿಚಂದ್ರ, ಜನ್ನ-ಇವರನ್ನು ಸ್ತುತಿಸಿದ್ದಾನೆ, ಪುಷ್ಪದಂತ, ಗಜಾಂಕುಶ, ಮನಸಿಜ, ಶ್ರೀವಿಜಯ, ಸುಜನೋತ್ತಂಸ ಮೊದಲಾದವರನ್ನು ಪರೋಕ್ಷವಾಗಿ ಸ್ಮರಿಸಿದ್ದಾನೆ. ಇವನನ್ನು 3ನೆಯ ಮಂಗರಸ (ಸು. 1508) ಮೊದಲಾದ ಕವಿಗಳು ಸ್ತುತಿಸಿದ್ದಾರೆ. ಕವಿ ತನ್ನನ್ನು `ತನ್ನಾಣೆಗೋಸಣೆ ಸಲ್ಗುಂಸುಕವೀಂದ್ರ ವೃಂದ ಸಭೆಯೊಳ್ ತಾನೆಂದೊಡಮ್ಮಮ್ಮ ಧಾರುಣಿಯೊಳ್ ಕೇಳ್ದರಿಯಾ ಜಡಾಮಧುರನಂ ನಿರ್ಣೀತಕರ್ಣಾಟ ಲಕ್ಷಣಭಾಷಾಕವಿರಾಜನಂಪ್ರವಿಲಸದ್ವಾಣೀ ಮುಖಾಂಭೋಜನಂ ಎಂದು ಅತಿಶಯವಾಗಿ ಹೊಗಳಿಕೊಂಡಿದ್ದಾನೆ.

  • ಧರ್ಮನಾಥಪುರಾಣ ಹದಿನೈದನೆಯ ತೀರ್ಥಂಕರ ಧರ್ಮನಾಥನ ಚರಿತ್ರೆಯನ್ನೊಳಗೊಂಡ ಚಂಪೂಕಾವ್ಯ. ಕೃತಿ ಅಸಮಗ್ರವಾಗಿದ್ದು ಐದು ಆಶ್ವಾಸಗಳು ಮಾತ್ರ ಲಭ್ಯವಾಗಿವೆ. ಪಂಡಿತರುಂ ವಿವಿಧಕಳಾ ಮಂಡಿತರುಂ ಕೇಳುತಕ್ಕ ಕೃತಿಯಂ ಕ್ಷಿತಿಯೊಳ್ ಕಂಡರ್ ಕೇಳ್ವದೆ ಗೊರವರ ಡುಂಡುಚಿಯೆ ಬೀದಿವರಿಯೆ ಬೀರನಕಥೆಯೇ ಎಂದು ತನ್ನ ಕೃತಿಯ ಹಿರಿಮೆಯನ್ನು ಸಾರಿಕೊಂಡಿದ್ದಾನೆ. ಕಥಾ ನಿರೂಪಣೆಯಲ್ಲಿ ನವೀನತೆಯೇನೂ ಇಲ್ಲ. ಎಷ್ಟೋ ವೇಳೆ ಕವಿ ಕಥೆಯನ್ನೇ ಕೈಬಿಟ್ಟು ವರ್ಣನೆಯಲ್ಲಿ ತೊಡುಗುತ್ತಾನೆ. ಆದರೆ ಈ ವರ್ಣನೆಗಳು ಕೆಲವು ವೇಳೆ ಸಹಜವಾಗಿಯೂ ವಾಸ್ತವಿಕವಾಗಿಯೂ ಇರುವುದು ಗಮನಿಸಬೇಕಾದ ಸಂಗತಿ. ಧರ್ಮನಾಥ ತೀರ್ಥಂಕರನ ತಾಯಿಯಾಗಲಿರುವ ಸುವ್ರತೆ ತಾನು ಮಗನನ್ನು ಪಡೆಯುವೆನೊ ಇಲ್ಲವೊ ಎಂಬ ಸಂದೇಹದಿಂದ ಕೊರಗುವ ಭಾಗ ರಸದ ಮಡುವಾಗಿದೆ. ಈ ಕೃತಿಯಿಂದ ಆಯ್ದ ಕೆಲವು ಪದ್ಯಗಳನ್ನು ಅಭಿನವವಾದಿ ವಿದ್ಯಾನಂದನೂ ಭಟ್ಟಾಕಳಂಕನೂ ತಮ್ಮ ಗ್ರಂಥಗಳಲ್ಲಿ ಉದ್ಧರಿಸಿದ್ದಾರೆ.
  • ಗೊಮ್ಮಟಸ್ತುತಿಯಷ್ಠಕ ಶ್ರವಣಬೆಳಗೊಳದ ಗೊಮ್ಮಟೇಶ್ವರನ ದರ್ಶನದಿಂದ ಸ್ಫೂರ್ತಿ ಹೊಂದಿ ಆತನನ್ನು ಭಾವಪೂರ್ಣವಾಗಿ ಸ್ತುತಿಸಿರುವ ಅಷ್ಟಕ. ಇದರಲ್ಲಿ 9 ವೃತ್ತಗಳಿವೆ. ಪ್ರತಿ ಪದ್ಯವೂ ಗೊಮ್ಮಟೇಶಾ ಎಂದು ಅಂತ್ಯವಾಗುತ್ತದೆ. ಬೊಪ್ಪಣ ಪಂಡಿತನನ್ನು ಬಿಟ್ಟರೆ ಗೊಮ್ಮಟೇಶ್ವರನನ್ನು ಕುರಿತು ಹಾಡಿರುವ ಕವಿಗಳಲ್ಲಿ ಇವನು ಪ್ರಮುಖನಾದವ. ಈ ಪದ್ಯಗಳು ನಿಜವಾಗಿಯೂ ಹೃದಯವನ್ನು ಆದ್ರ್ರಗೊಳಿಸಿ ಮನಸ್ಸಿಗೆ ಸಂತಸವನ್ನುಂಟುಮಾಡುತ್ತವೆ.

ಹಂಪಿಯ ಕೃಷ್ಣದೇವಸ್ಥಾನದ ಬಳಿ ಇರುವ 1ನೆಯ ದೇವರಾಯನ ಆಳ್ವಿಕೆಯಲ್ಲಿ, 1410ರಲ್ಲಿ ಹುಟ್ಟಿದ ಒಂದು ಶಾಸನವನ್ನು ಈತನೇ ಬರೆದಂತೆ ಆ ಶಾಸನದ ಕೊನೆಯ ಪದ್ಯದಿಂದ ತಿಳಿಯುತ್ತದೆ. ಶಾಸನದಲ್ಲಿ ಮಂತ್ರಿ ಲಕ್ಷ್ಮೀಧರ ಮಾಲ್ಯವತ್ ಪರ್ವತದ ಬಳಿ ಗಣೇಶ ಪ್ರತಿಷ್ಠೆ ಮಾಡಿದಂತೆ ಹೇಳಿದೆ. ಅಲ್ಲದೆ, ಕವಿಗೆ ಮಂತ್ರಿಯಿಂದ ಸಹಾಯ ದೊರೆತ ವಿಷಯ. ದೊರೆಗೆ ಪ್ರಾಣಾಪಾಯ ಉಂಟಾದಾಗ ತನ್ನ ಸಾಹಸದಿಂದ ಕವಿ ರಾಜನನ್ನು ಉಳಿಸಿದ ವಿಷಯ-ಇವೂ ಶಾಸನದಿಂದ ವಿದಿತವಾಗುತ್ತವೆ. (ಬಿ.ಜಿ.)