ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮರಾಠೀ ಸಾಹಿತ್ಯ
ಮರಾಠೀ ಸಾಹಿತ್ಯ
ಈ ಸಾಹಿತ್ಯದ ಉಗಮ ವಿಕಾಸಕ್ಕೆ ಸಂಬಂಧಿಸಿದಂತೆ ಎರಡು ಮುಖ್ಯ ಕಾರಣಗಳು ಇವೆ; 1 ಹನ್ನೆರಡನೆಯ ಶತಮಾನದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ತಲೆದೋರಿದ ಧರ್ಮಪಂಥಗಳು. ಇವು ಯಾವುದೇ ಜಾತಿ ಮತ ಲಿಂಗ ಭೇದಗಳನ್ನು ಪರಿಗಣಿಸದೆ ಸಕಲರಿಗೂ ಸರ್ವಸಮನಾದ ಹಕ್ಕು ಬಾಧ್ಯತೆಗಳನ್ನು ಕೊಟ್ಟು ಜ್ಞಾನ ಪ್ರಸಾರ ಮಾಡಿವೆ. ಇವುಗಳ ಪೈಕಿ ಮಹಾನುಭಾವ ಪಂಥ ಮತ್ತು ವಾರಕರೀ ಪಂಥ ಮುಖ್ಯವಾದವು. ಇವು ಬೌದ್ಧ ಜೈನಮತಗಳಂತೆ ಹಿಂದೂಮತದಿಂದ ಭಿನ್ನವಾದವಲ್ಲ; ಹಿಂದೂ ಮತದ ಏಳ್ಗೆಗೆ ಶ್ರಮಿಸಿದಂಥವು. ಇವೆರಡಕ್ಕೂ ಸಮಾನವಾದ ಕೆಲವು ಲಕ್ಷಣಗಳು ಇವೆ. ಎರಡೂ ಪಂಥಗಳು ಮಹಾರಾಷ್ಟ್ರದಲ್ಲಿ ಏಕಕಾಲದಲ್ಲಿ ಜನ್ಮತಳೆದುವು. ಧರ್ಮಸಾಧನೆಗೂ ಮೋಕ್ಷಪ್ರಾಪ್ತಿಗೂ ಭಕ್ತಿಪೂರ್ವಕವಾದ ಭಗವಂತನ ನಾಮಸ್ಮರಣೆಯೇ ಪರಮಸಾಧನವೆಂದು ಒತ್ತಿ ಹೇಳಿದವು. ಮಹಾನುಭಾವ ಪಂಥಕ್ಕೆ ದತ್ತಾತ್ರೇಯ ಮತ್ತು ಶ್ರೀಕೃಷ್ಣ ಆರಾಧ್ಯದೈವಗಳು ವಾರಕರೀ ಪಂಥಕ್ಕೆ ಹರಿ ಮತ್ತು ವಿಠಲರು ಉಪಾಸ್ಯ ದೇವತೆಗಳು; ಶ್ರೀಮದ್ಭಾಗವತವೇ ಪ್ರಮಾಣ ಗ್ರಂಥ ಜಾತಿ ಮತ ಲಿಂಗ ಪಕ್ಷಪಾತಗಳಿಲ್ಲದೆ ಎಲ್ಲ ಪಂಗಡಗಳಿಂದಲೂ ತಮ್ಮ ಪಂಥಕ್ಕೆ ಅನುಯಾಯಿಗಳನ್ನು ಇವು ಅರಿಸಿಕೊಂಡವು. ತಮಗೇ ವಿಶಿಷ್ಟವಾದ ಅಚಾರ ವ್ಯವಹಾರಗಳನ್ನೂ ಬಾಹ್ಯ ಸಂಕೇತಗಳನ್ನೂ ರೂಪಿಸಿಕೊಂಡವು. ಸರಳಜೀವನ ಮದ ಮಾಂಸನಿಷೇಧ ಇವೆರಡೂ ಪಂಥಗಳ ಸಮಾನ ಗುಣ; ತತ್ತ್ವ, ವಿಚಾರ, ವ್ಯವಹಾರ ಸಂಕೇತಗಳಲ್ಲಿ ಭಿನ್ನತೆಗಳಿದ್ದರೂ ಸಮಾಜದ ಶ್ರೀಸಾಮಾನ್ಯನಿಗೆ ತಮ್ಮ ಪಂಥದ ತತ್ತ್ವ ಗಳನ್ನು ಸುಗಮವಾಗಿ ಅರ್ಥವತ್ತಾಗಿ ತಿಳಿಸುವ ಸಲುವಾಗಿ ಮರಾಠಿ ಆಡುನುಡಿಯನ್ನೇ ತಮ್ಮ ಸಾಹಿತ್ಯಿಕ ಭಾಷೆಯಾಗಿ ಬಳಸಿಕೊಂಡವು. 2. ಹನ್ನೆರಡನೆಯ ಶತಮಾನದ ಯಾದವ ಅರಸರ ಪ್ರೋತ್ಸಾಹದಿಂದಾಗಿ ಮರಾಠೀ ಭಾಷೆ ಸಾಹಿತ್ಯ ಬೆಳೆವಣಿಗೆ ಹೊಂದಿತು. ಕವಿಗಳು ರಾಜಾಶ್ರಯ ಪಡೆದು ಅನೇಕ ಉತ್ತಮ ಕೃತಿಗಳನ್ನು ಹೊರತಂದರು; ಯಶಸ್ಸು ಪಡೆದರು.
ಮರಾಠೀ ಸಾಹಿತ್ಯ ರಚನೆ ಎಂದಿನಿಂದ ಪ್ರಾರಂಭವಾಯಿತು ಎಂಬುದು ಚರ್ಚಾಸ್ಪದ ವಿಷಯ. ಶ್ರವಣಬೆಳುಗೊಳದ ಗೊಮ್ಮಟೇಶ್ವರ ಮೂರ್ತಿಯ ಪಾದದ ಬಳಿ ಇರುವ ಶಾಸನದಲ್ಲಿ ಉಕ್ತವಾಗಿರುವ ಚಾವುಂಡರಾಜೇಂ ಕರವಿಯಲೇಂ (ಚಾವುಂಡರಾಯಯಂ ಮಾಡಿಸಿದಂ) ಎಂಬ ವಾಕ್ಯವೇ ಮರಾಠೀ ಭಾಷೆಯ ಮೊತ್ತ ಮೊದಲ ಪೂರ್ಣ ವಾಕ್ಯವೆಂದು ತಿಳಿಯಲಾಗಿತ್ತು ಈ ವಾಕ್ಯ ಹನ್ನೆರಡನೆಯ ಶತಮಾನದ್ದೆಂದು ಮರಾಠೀ ಪಂಡಿತರು ನಿರ್ಧರಿಸಿದ್ದಾರೆ. ಅದೇನೇ ಇರಲಿ ಈ ಸಾಹಿತ್ಯಕ್ಕೆ ಒಂದು ಸಾವಿರ ವರ್ಷದ ಇತಿಹಾಸ ಇದೆ ಎಂಬುದಾಗಿ ಹೇಳಬಹುದು. ಇಷ್ಟು ವಿಸ್ತಾರವಾದ ಕಾಲಾವಧಿಯಲ್ಲಿ ಮರಾಠೀ ಸಾಹಿತ್ಯ ವಿವಿಧ ಪರಿಸ್ಥಿತಿಗಳ ಒತ್ತಡಗಳಿಗೂ ರಾಜಕೀಯ ಬದಲಾವಣೆಗಳಿಗೂ ಈಡಾದ್ದರಿಂದ ಅದರ ಸ್ವರೂಪದಲ್ಲಿ ಬೇರೆ ಬೇರೆ ಪ್ರಕಾರಗಳು ಕಾಣಿಸಿಕೊಂಡಿವೆ. ಅಧ್ಯಯನ ಸೌಲಭ್ಯದ ದೃಷ್ಟಿಯಿಂದ, 1800ರ ತನಕದ ಸಾಹಿತ್ಯವನ್ನು ಪ್ರಾಚೀನವೆಂದೂ ತರುವಾಯದ ಸಾಹಿತ್ಯವನ್ನು ಆಧುನಿಕವೆಂದೂ ಸ್ಥೂಲವಾಗಿ ಇಲ್ಲಿ ವರ್ಗೀಕರಿಸಿಕೊಳ್ಳಲಾಗಿದೆ.
ಪ್ರಾಚೀನ ಸಾಹಿತ್ಯ : (ಸು. 1188-1800); ಹತ್ತನೆಯ ಶತಮಾನದ ತರುವಾಯ ಕೆಲವು ಮರಾಠೀ ಶಾಸನಗಳು ಸಿಕ್ಕಿದ್ದರೂ ಮುಕುಂದರಾಜನ ವಿವೇಕ ಸಿಂಧು (ಸು. 1188) ಕೃತಿಗೂ ಮುಂಚೆ ರಚಿತವಾಗಿರಬಹುದಾದ ಯಾವ ಕೃತಿಯೂ ಸಿಕ್ಕಿಲ್ಲ. ಮುಕುಂದರಾಜನ ಮತ್ತು ಅವನ ಸಮಕಾಲೀನ ಕವಿಗಳ ಮರಾಠೀ ಭಾಷಾ ಪË್ರಢಿಮೆಯನ್ನು ಗಮನಿಸಿದರೆ, ಇವರಿಗೂ ಹಿಂದೆ ಎಷ್ಟೋಕಾಲದಿಂದ ಮರಾಠೀ ಭಾಷೆ ವ್ಯವಹಾರ ಭಾಷೆಯಾಗಿತ್ತು ಎಂಬುದನ್ನು ಊಹಿಸಬಹುದು.
ಪ್ರಾಚೀನ ಮರಾಠೀ ಸಾಹಿತ್ಯ ಹೆಚ್ಚಾಗಿ ಪದ್ಯ ರೂಪದಲ್ಲೇ ಇದೆ. ಮುಕುಂದರಾಜ ಮರಾಠಿಯ ಆದ್ಯಕವಿಯೆಂಬುದು ಸಾಂಪ್ರದಾಯಿಕ ತಿಳಿವಳಿಕೆ. ಇವನ್ನು ನಾಥಪಂಥಕ್ಕೆ ಸೇರಿದ ವ್ಯಕ್ತಿ. ವಿವೇಕಸಿಂಧು (1188) ಮತ್ತು ಪರಮಾಮೃತ ಇವನ ಕೃತಿಗಳು. ವಿವೇಕಸಿಂಧು ಮರಾಠೀ ಭಾಷೆಯ ಆದಿಗ್ರಂಥ. ಇದನ್ನು ತನ್ನ ಆಶ್ರಯದಾತನಾದ ಶ್ರೀಮಂತವ್ಯಕ್ತಿ ಜೈತ್ರಪಾಲನಿಗೆ ತತ್ತ್ವ ಬೋಧಿಸಲು ಮುಕುಂದರಾಜ ಬರೆದನಂತೆ. ಈ ಕೃತಿ ಓವೀ ಛಂದಸ್ಸಿನಲ್ಲಿದೆ. ಶಂಕರಾಚಾಂiÀರ್iರ ಅದ್ವೈತವನ್ನು ಜನಸಾಮಾನ್ಯರಿಗೆ ತಿಳಿಸುವುದೇ ಈ ಕೃತಿಯ ಮುಖ್ಯಧ್ಯೇಯ. ಇದರಲ್ಲಿ ಪೂರ್ವಾರ್ಧ ಉತ್ತರಾರ್ಧ ಎಂಬ ಎರಡು ಭಾಗಗಳಿವೆ. ಪೂರ್ವಾರ್ಧದಲ್ಲಿ ಬ್ರಹ್ಮ ಸ್ವರೂಪ ಸಮಾವೇಶ, ಪ್ರಶಂಸಾಕಥನ, ತತ್ತ್ವಸೃಷ್ಟಿಕಥನ, ಈಶ್ವರತನುತ್ರಯಕಥನ, ಲಿಂಗದೇಹನಿರೂಪಣ, ಸ್ಥೂಲದೇಹ, ಸರ್ವಂ ಬ್ರಹ್ಮಮಿತಿವಿವರಣ ಎಂಬ ಏಳು ಪ್ರಕರಣಗಳಿವೆ. ಉತ್ತರಾರ್ಧದಲ್ಲಿ ಸ್ಥೂಲದೇಹ ನಿರಸನ, ಲಿಂಗದೇಹನಿರಸನ, ಕಾರಣದೇಹನಿರಸನ, ಮಹಾಕಾರಣದೇಹ ನಿರಸನ. ಈಶ್ವರತನುತ್ರಯಪೂರ್ವಕ ನಿರಸನ. ಮಹಾಕಾಣಣದೇಹನಿರಸನಪೂರ್ವಕತತ್ತ್ವ ಪದಾರ್ಥಶೋಧನ. ಜೀವಪರಮಾತ್ಮ ತಾದಾತ್ಮ್ಯ ಐಕ್ಯವಿವರಣ, ಭೇದಖಂಡನ ಪೂರ್ವಕ ಅದ್ವೈತ ಪ್ರತಿಪಾದನ, ಮಹಾದ್ವೈತಪ್ರತಿಪಾದನ, ಸಚ್ಚಿದಾನಂದ ಪದತ್ರಯ ವಿವರಣ, ಗುರುಪ್ರಶಂಸಾ ನಿರೂಪಣ ಎಂಬ ಹನ್ನೊಂದು ಪ್ರಕರಣಗಳಿವೆ. ಮರಾಠೀ ಭಾಷೆಯ ವಿಷಯದಲ್ಲಿ ಈತನಿಗೆ ಅಪಾರ ಅಭಿಮಾನ. ಸಂಸ್ಕøತ ಕಲ್ಪತರುವಿನಂತೆ ಇರಬಹುದು. ಆದರೆ ಅದಕ್ಕಿಂತ ಯಾವ ವಿಧದಲ್ಲೂ ಕಡಿಮೆಯಾಗಿರದ ಮರಾಠೀ ಭಾಷೆಯನ್ನು ಪೋಷಿಸಬಾರದೇಕೆ ಎಂದು ಹೇಳಿ ತನ್ನ ಭಾಷಾಪ್ರೇಮ ಮೆರೆದಿದ್ದಾನೆ. ಪರಮಾಮೃತ. ಪವನ ವಿಜಯ, ಮೂಲಸ್ತಂಭ ಮೊದಲಾದವು ಇವನ ಇತರ ಕೃತಿಗಳು. ಇವುಗಳಲ್ಲೆಲ್ಲ ಈತ ಮಹಾನುಭಾವ ಪಂಥದ ಬರೆಹಗಾರರನ್ನು ಅನುಸರಿಸಿದ್ದಾನೆ.
ಮಹಾನುಭಾವ ಪಂಥದ ಅನುಯಾಯಿಗಳು ಮುಖ್ಯವಾಗಿ ಗದ್ಯಸಾಹಿತ್ಯಕ್ಕೆ ಕೈಹಾಕಿ ಅದಕ್ಕೆಜೀವ ತುಂಬಿದವರು. ಈ ಪಂಥದ ಮೂಲಪುರುಷ ಚಕ್ರಧರ (ಹರಪಾಲದೇವ). ಗುರಾತಿನ ನಾಗರ ಮನೆತನಕ್ಕೆ ಸೇರಿದವ. ಇವನ ತಂದೆ ವಿಶಾಲದೇವ ಗುಜರಾತಿನ ಮಂತ್ರಿಯಾಗಿದ್ದ. ಗುಜರಾತಿನ ರಾಜ ಸಂತಾನವಿಲ್ಲದೆ ಸತ್ತಾಗ ತಾನೇ ರಾಜನಾಗಿ ರಾಜ್ಯವಾಳಿದ. ಅವನ ತರುವಾಯ ಅವನ ಮಗ ಹರಪಾಲದೇವ ಕೆಲಕಾಲ ರಾಜ್ಯಭಾರ ಮಾಡಿದ. ಜೀವನದಲ್ಲಿ ಜುಗುಪ್ಸೆಗೊಂಡು ಗೋವಿಂದಪ್ರಭುವೆಂಬ ಗುರುವಿನ ಅನುಗ್ರಹಪಡೆದು ಸಂನ್ಯಾಸಿಯಾಗಿ ಚಕ್ರಧರ ಎಂಬ ನೂತನ ನಾಮಧೇಯ ತಳೆದ. ಗುರುವಿನ ಆಜ್ಞೆಯಂತೆ ಮಹಾನುಭಾವಪಂಥವನ್ನು ಸ್ಥಾಪಿಸಿ, ತನ್ನ ಎಲ್ಲ ಉಪದೇಶಗಳನ್ನು ಮರಾಠೀ ಭಾಷೆಯಲ್ಲೇ ಮಾಡಿದ. ಧರ್ಮೋಪದೇಶ ಮಾಡಲು ಸಂಚಾರ ಕೈಗೊಂಡ (1263-71). ಈ ಕೆಲಸ ಮುಗಿದ ಅನಂತರ ಬರದಿಕಾಶ್ರಮದಲ್ಲಿ ತಪಸ್ಸು ಮಾಡುತ್ತ ಜೀವನ ಕಳೆದ. ಇವನು ಯಾವ ಗ್ರಂಥವನ್ನೂ ರಚಿಸಲಿಲ್ಲ. ಮಹೀಂದ್ರಭಟ್ಟ (ಮಾಹಿಯಿಭಟ್ಟ) ಎಂಬಾತ ಚಕ್ರಧರನ ಉಪದೇಶಗಳನ್ನೆಲ್ಲ ಆಚಾರ್ಯಸೂತ್ರ (ಸಿದ್ಧಾಂತ ಸೂತ್ರಪಾಠ) ಎಂಬ ಹೆಸರಿನಲ್ಲಿ ಸಂಗ್ರಹಿಸಿದ. ಕೇಶವ ರಾಜಸೂರಿ ಎಂಬಾತ ಮಹೀಂದ್ರಭಟ್ಟ ಬರೆದ ಸೂತ್ರಗಳನ್ನು ಕ್ರಮಪಡಿಸಿ ಗ್ರಂಥವಾಗಿ ಪ್ರಚುರಪಡಿಸಿದ. ಇದೇ ಮಹಾನುಭಾವ ಪಂಥದ ಆದಿಗ್ರಂಥವಾಯಿತು. ಇದರ ಒಂದೊಂದು ಸೂತ್ರವೂ (ವಚನ) ಅಮೂಲ್ಯವಾದುದು. ಶುದ್ಧ ಮರಾಠೀ ಭಾಷೆಯಲ್ಲಿ ರಚಿತವಾಗಿರುವುದೇ ಇದರ ಮುಖ್ಯ ವೈಶಿಷ್ಟ್ಯ. ಈ ಪಂಥದ ಅನುಯಾಯಿಗಳು ಈ ಗ್ರಂಥವನ್ನೇ ಅಧಾರವಾಗಿಟ್ಟುಕೊಂಡು ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಮಹೀಂದ್ರ ತನ್ನ ಗುರುವಾದ ಚಕ್ರಧರನ ಜೀವನ ಚರಿತ್ರೆಯನ್ನು ಲೀಲಾಚರಿತ್ರ ಎಂಬ ಹೆಸರಿನಿಂದ ಗದ್ಯದಲ್ಲಿ ಬರೆದಿದ್ದಾನೆ. ಇದು ಮಹಾನುಭಾವ ಪಂಥದ ಆದ್ಯ ಗದ್ಯ ಕೃತಿ. ಚಕ್ರಧರನ ಮತ್ತೊಬ್ಬ ಶಿಷ್ಯ ಭಾಸ್ಕರ. ಇವನು ಬರೆದ ಕಾವಗಳ ಪೈಕಿ `ಶಿಶುಪಾಲವಧೆ (1298) ಉತ್ತಮ ಕಾವ್ಯವೆಂದು ಪರಿಗಣಿಸಲಾಗಿದೆ. ಈ ಕಾವ್ಯ ಶೃಂಗಾರ ರಸಪ್ರಧಾನವಾದುದು. ಇವನದೇ ಆದ ಮತ್ತೊಂದು ಕಾವ್ಯ ಉದ್ಧವಗೀತೆ ಎಂಬುದು. ಇದು ನಿರ್ವೃತ್ತಿಪರ ಕಾವ್ಯ. ಇವನ ಶೈಲಿ ಸರಳ, ಸುಲಭ, ಆಡಂಭರರಹಿತ, ದಾಮೋದರ ಪಂಡಿತನೆಂಬಾತ ವಚ್ಚಹರಣ ಎಂಬ ಕಾವ್ಯ ಬರೆದಿದ್ದಾನೆ. ಭಾಗವತವೇ ಇದಕ್ಕೆ ಮೂಲ ಆಕರ. ರುಕ್ಮಿಣೀ-ಸ್ವಯಂವರ ಎಂಬ ಕಾವ್ಯವನ್ನು ಬರೆದಾತ ನರೇಂದ್ರ. ಚಕ್ರಧರನ ಪರಿಚರ್ಯೆಯರಲ್ಲಿ ಒಬ್ಬಳಾದ ಮಹದಂಬಾ ಎಂಬಾಕೆ ಧವಳಾ (ಶ್ರೀಕೃಷ್ಣನ ಮದುವೆ ಹಾಡುಗಳು) ಎಂಬ ಹೆಸರಿನ ಹಾಡುಗಳನ್ನು ಬರೆದಿದ್ದಾಳೆ.
ಮುಕುಂದರಾಜ ಮರಾಠೀಭಾಷೆಯ ಮೊದಲಕವಿ ಎಂದು ಅಂಗಿಕೃತವಾಗಿದ್ದರೂ ಆ ಸ್ಥಾನಕ್ಕೆ ನಿಜವಾಗಿ ಅರ್ಹನಾದ ಕವಿ ಜ್ಞಾನೇಶ್ವರ(ಜ್ಞಾನದೇವ 1275-96) ಎಂಬುದಾಗಿ ಮರಾಠೀ ಸಾಹಿತ್ಯ ಚರಿತಕಾರರು ಹೇಳುವರು. ಜ್ಞಾನೇಶ್ವರ ಮಹಾನುಭಾವ ಪಂಥದವರಂತೆ, ಪರಂಪರಾಗತವಾದ ಸಂಪ್ರದಾಯಗಳ ವಿರುದ್ಧ ಬಂಡೆದ್ದ. ಸಮಾಜದಲ್ಲಿ ಮೇಲು-ಕೀಳು ಕಲ್ಪನೆತೊಡೆದುಹಾಕಲು ಪ್ರಯತ್ನಪಟ್ಟ. ವರ್ಣಾಶ್ರಮ ಕರ್ಮಗಳಿಗಿಂತ ಸದಾಚರಣೆ ಮುಖ್ಯವಾದ್ದು; ಸಮಾಜದ ಎಲ್ಲ ಜಾತಿಯ ಜನರೂ ಸದಾಚಾರ-ನೀತಿ-ಧರ್ಮಾಚರಣೆಗಳಿಂದ ಭಗವಂತನ ಕೃಪೆಗೆ ಪ್ರಾತರಾಗುವರೆಂದು ಈತ ಬೋಧಿಸಿದ. ಜ್ಞಾನೇಶ್ವರನ ಕೃತಿ `ಭಾವಾರ್ಥ ದೀಪಿಕಾ ರೂಢಿಯಲ್ಲಿ ಜ್ಞಾನೇಶ್ವರಿ ಎಂಬುದಾಗಿಯೇ ಪ್ರಖ್ಯಾತವಾಗಿದೆ. ಭಗವದ್ಗೀತೆಯ ವ್ಯಾಖ್ಯಾನವನ್ನು ಒಳಗೊಂಡಿರುವ ಕೃತಿ ಇದು. ಮಹಾರಾಷ್ಟ್ರದ ಎಲ್ಲರೂ ಈ ಕೃತಿಯನ್ನು ಭಕ್ತಿಗೌರವಗಳಿಂದ ಇಂದಿಗೂ ಓದುವರು. ಈ ಕೃತಿ ಕೇವಲ ತತ್ತ್ವನಿರೂಪಣೆಯಿಂದ ಮಾತ್ರ ಮಹತ್ತ್ವದ ಸ್ಥಾನ ಪಡೆದಿಲ್ಲ. ಸಾಹಿತ್ಯಕ ಗುಣದಿಂದಲೂ ಉನ್ನತ ಸ್ಥಾನ ಪಡೆದಿದೆ. ಅನುಭವಾಮೃತ ಎಂಬುದು ಈತನ ಮತ್ತೊಂದು ಕೃತಿ. ಜ್ಞಾನದೇವನ ಕೃತಿಯಿಂದ. ಉಪದೇಶದ ಪ್ರಭಾವದಿಂದ ಅನೇಕರು ಈತನ ಅನುಯಾಯಿಗಳಾದರು. ಈ ಪೈಕಿ ಮುಖ್ಯನಾದವ ನಾಮದೇವ (1270-1370). ಇವನು ರಚಿಸಿದ ಗಾಥಾಗಳು (ಅಭಂಗಗಳು) ತುಂಬ ಜನಪ್ರಿಯವಾದುವು. ಈ ಗೀತೆಗಳೆಲ್ಲ ಪಂಢರಪುರದ ಯಾತ್ರೆಯ ಮಹಿಮೆಯನ್ನು ಕೊಂಡಾಡುತ್ತಿದ್ದುದೂ ನಾಮದೇವನೇ ಸ್ವತಃ ಮಧುರವಾಗಿ ಹಾಡಿ ಪ್ರಚಾರ ಮಾಡುತ್ತಿದ್ದುದೂ ಇದರ ಕಾರಣ. ನಾಮದೇವನ ತರುವಾಯ ಪ್ರಮುಖನಾದವನೆಂದರೆ ಏಕನಾಥ (1533-99) ಈತ ಚತುಶ್ಲೋಕೀ ಭಾಗವತವೆಂಬ ಕಾವ್ಯಗ್ರಂಥ ರಚಿಸಿದ ಅನಂತರ ಭಾಗವತದ ಏಕಾದಶ ಸ್ಕಂಧಕ್ಕೆ ವ್ಯಾಖ್ಯಾನ ಬರೆದ. ಈ ವ್ಯಾಖ್ಯಾನವೇ ಇಂದು ಪ್ರಸಿದ್ಧವಾಗಿರುವ ಏಕನಾಥೀ ಭಾಗವತ. ಮರಾಠೀ ಸಾಹಿತ್ಯರಾಶಿಯಲ್ಲಿ ಇದೊಂದು ಕಾವ್ಯರತ್ನ. ಈತ ರುಕ್ಮಿಣೀ ಸ್ವಯಂವರವೆಂಬ ಮತ್ತೊಂದು ಕಾವ್ಯವನ್ನು ರಚಿಸಿದ್ದಾನೆ. ಭರುದಗಳೆಂಬ ಕೆಲವು ಸಾಂಕೇತಿಕ ಗೀತೆಗಳನ್ನೂ ಬರೆದಿದ್ದಾನೆ. ಏಕನಾಥನಿಂದ ಪ್ರಾರಂಭವಾದ ಲೌಕಿಕ ಕಾವ್ಯರಚನೆ ಮುಕ್ತೇಶ್ವರನಿಂದ (16ನೆಯ ಶತಮಾನ) ಮುಂದುವರಿಯಿತು. ಈತ ಜ್ಞಾನೇಶ್ವರ, ನಾಮದೇವ, ಏಕನಾಥರ ಕೃತಿಗಳಿಂದ ಪ್ರಭಾವಿತನಾಗಿದ್ದಾನೆ. ಈತನ ಕೃತಿಗಳು ರಾಮಾಯಣ ಮತ್ತು ಮಹಾಭಾರತ. ರಾಮಾಯಣದ ಕಥಾನಿರೂಪಣ ರೀತಿ ಚೆನ್ನಾಗಿದೆ. ಭಾಷೆ ಕ್ಲಿಷ್ಟವಾಗಿದೆ. ಆದರೆ ಮಹಾಭಾರತ ಅನುಭವಪೂರ್ಣ ಗ್ರಂಥ. ಪ್ರಾಚೀನ ಮರಾಠೀ ಸಾಹಿತ್ಯದ ಉತ್ತಮ ಮಟ್ಟದ ಕಥನಕವನ ಇದೆಂದು ಪಂಡಿತರ ಅಭಿಪ್ರಾಯ. ಈತನ ಮಹಾಭಾರತದ ಎಲ್ಲ ಪರ್ವಗಳು ಉಪಲಬ್ಧವಾಗಿಲ್ಲ. ಕೃತಿಗಳನ್ನು ಸಂಸ್ಕøತ ಛಂಧಸ್ಸುಗಳಲ್ಲಿಯೇ ಬರೆದಿದ್ದಾನೆ.
ಪ್ರಾಚೀನ ಮರಾಠೀ ಸಾಹಿತ್ಯದಲ್ಲಿ ತುಕಾರಾಮನಿಗೆ (1598-1649) ವಿಶಿಷ್ಟ ಸ್ಥಾನವಿದೆ. ಈತ ಪ್ರತಿಭಾಶಾಲಿ. ಇವನ ಕಾವ್ಯಗಳೆಲ್ಲ ಸ್ವಯಂಪ್ರೇರಿತವಾದವು. ಈತ ತನ್ನನ್ನೂ ತನ್ನ ಸಮಾಜವನ್ನೂ ಪೂರ್ಣವಾಗಿ ವಿಮರ್ಶಿಸಿ, ಸಾಮಾಜಿಕ ಪಿಡುಗುಗಳನ್ನು ನಿರ್ದಾಕ್ಷಿಣ್ಯವಾಗಿ ಹೊರೆಗೆಡಹಿದ್ದಾನೆ. ನಿರ್ದಾಕ್ಷಿಣ್ಯ ಮನೋಭಾವ, ಸರಳತೆ ಉತ್ಸಾಹಪೂರ್ಣತೆ-ಇವು ತುಕಾರಾಮನ ಕೃತಿಗಳ ಪ್ರಧಾನ ಲಕ್ಷಣಗಳು. ಈತ ತನ್ನ ಭಕ್ತಿಭಾವದಿಂದ ತುಂದಿಲವಾದ ಅಭಂಗಗಳಿಂದ ಪ್ರಸಿದ್ಧನಾಗಿದ್ದಾನೆ. ತುಕಾರಾಮ ವಾರಕರಿ ಪಂಥದ ಶ್ರೇಷ್ಠ ಸಂತ. ಈತನ ತರುವಾಯ ಉದಯಿಸಿದ ಮತ್ತೊಬ್ಬ ಶ್ರೇಷ್ಠ ಸಂತ ಕವಿ ರಾಮದಾಸ (1608-81). ಈತ ರಾಜನೀತಿವಿಶಾರದನೆಂದೂ ಖ್ಯಾತನಾಗಿದ್ದಾನೆ. ಇವನ ದಾಸಬೋಧವೆಂಬ ಗ್ರಂಥ ಜ್ಞಾನಪ್ರಚೋದಕವಾದುದು. ಇದು ಹತ್ತು ಭಾಗಗಳಿಂದ ಕೂಡಿದೆ. ಒಂದೊಂದು ಭಾಗದಲ್ಲೂ ಅನೇಕ ಪ್ರಕರಣಗಳಿವೆ. ಮಾನವ ಜೀವನದ ಸ್ವರೂಪ. ಅದರ ಅಂತ್ಯ. ಮಾನವ ಮತ್ತು ವಿಶ್ವದ ಸಂಬಂಧ, ಸೃಷ್ಟಿ ರಹಸ್ಯ ಮೊದಲಾದ ವಿಷಯಗಳಲ್ಲಿ ರಾಮದಾಸನ ಅಭಿಪ್ರಾಯ ವ್ಯಕ್ತಗೊಂಡಿದೆ. ಗುರು ಮುಖೇಣ ಭಕ್ತಿತ್ಯಾಗಗಳ ಮೂಲಕ ಮುಕ್ತಿ ಪಡೆವ ವಿಧಾನ. ಗೃಹಸ್ಥಧರ್ಮ, ಪರಸ್ಪರ ಸಹಾಯ, ದೀನದಲಿತರ ಸೇವೆ ಮೊದಲಾದ ವಿಷಯಗಳ ಬಗ್ಗೆ ನಿರೂಪಣೆಯಿದೆ. ಈತನ ಅನಂತರ ಪ್ರಮುಖನಾದ ಕವಿ ವಾಮನಪಂಡಿತ (1618-95). ಇವನ ಯಥಾರ್ಥ ದೀಪಿಕಾ ಎಂಬ ಕೃತಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಭಗವದ್ಗೀತೆಯ ವ್ಯಾಖ್ಯಾನವಿದು. ಇದರಲ್ಲಿ ಕವಿಯ ಉಭಯ ಭಾಷಾಪಾಂಡಿತ್ಯ, ವಾದಚಾತುರ್ಯ, ಪ್ರತಿಪಕ್ಷಖಂಡನ ಸಾಮಥ್ರ್ಯ, ಸಿದ್ಧಾಂತ ಸೌಲಭ್ಯ ಮೊದಲಾದವು ವಿಶದವಾಗಿ ಪ್ರತಿಪಾದಿತವಾಗಿದೆ. ಛಾಂದೊಗ್ಯೋಪನಿಷತ್ತಿನ ಆಧಾರದ ಮೇಲೆ ನಿಗಮಸಾರವೆಂಬ ಮತ್ತೊಂದು ಕೃತಿಯನ್ನು ಈತ ರಚಿಸಿದ್ದಾನೆ. ಭರ್ತೃಹರಿಯ ಶತಕತ್ರಯವನ್ನೂ ಜಗನ್ನಾಥನ ಗಂಗಾಲಹರಿಯನ್ನೂ ಮರಾಠೀ ಭಾಷೆಗೆ. ಅನುವಾದಿಸಿದ್ದಾನೆ. ಇವು ಸ್ವತಂತ್ರ ಗ್ರಂಥಗಳೆನ್ನುವಷ್ಟು ಸಹಜವಾಗಿವೆ.
ವಾಮನ ಪಂಡಿತನ ತರುವಾಯ ಹೆಸರಿಸಬಹುದಾದ ಮತ್ತಿಬ್ಬರೆಂದರೆ ಶ್ರೀಧರ (1678-1728) ಮತ್ತು ಅಮೃತರಾಯ (1698-1753). ಶ್ರೀಧರನ ಅನೇಕ ಕೃತಿಗಳ ಪೈಕಿ ಪಾಂಡವ ಪ್ರತಾಪ, ಹರಿವಿಜಯ ಮತ್ತು ರಾಮವಿಜಯ ಎಂಬವು ಪ್ರಸಿದ್ಧ ಕೃತಿಗಳು ಅಮೃತರಾಯ, ಮರಾಠೀ ಸಾಹಿತ್ಯದಲ್ಲಿ `ಕಟಾವ್ ಎಂಬ ನೂತನ ಛಂದಸ್ಸನ್ನು ಬಳಕೆಗೆ ತಂದ. ಗಮಕಿಗಳಿಗೆ ಈ ಛಂದಸ್ಸು ಹೆಚ್ಚು ಹೆಚ್ಚು ಪ್ರಿಯವಾದ್ದು. ದೂರ್ವಾಸಯಾತ್ರೆ, ದ್ರೌಪದೀವಸ್ತ್ರಾಪಹರಣ, ಧ್ರುವಚರಿತ್ರೆ ಎಂಬ ಗ್ರಂಥಗಳನ್ನು ಕಟಾವ್ ಛಂದಸ್ಸಿನಲ್ಲಿಯೇ ಬರೆದಿದ್ದಾನೆ.
ಶ್ರೀಧರ ಮತ್ತು ಅಮೃತರಾಯ ಇವರಿಬ್ಬರಷ್ಟೇ ಕೀರ್ತಿ ಪಡೆದ ಕವಿ ಎಂದರೆ ಮಹೀಪತಿ (1715-90). ಈತನ ಕೃತಿಗಳೆಲ್ಲ ಸಾಧುಸಂತರ ಜೀವನ ಚರಿತ್ರೆಗಳು. ಭಕ್ತವಿಜಯ, ಭಕ್ತಲೀಲಾಮೃತ, ಸಂತವಿಜಯ, ಸಂತಲೀಲಾಮೃತ ಇವು ಈತನ ಮುಖ್ಯ ಕೃತಿಗಳು. ಹೆಚ್ಚು ಐತಿಹಾಸಿಕ ಅಂಶಗಳಿಂದ ಕೂಡಿರುವ ಇವು ಸಾಮಾನ್ಯ ಜನರಿಗೆ ಭಕ್ತರ ಜೀವನ ಚರಿತ್ರೆಯನ್ನು ಅರುಹುವುದರಲ್ಲಿ ಯಶಸ್ವಿಯಾಗಿವೆ. ಈತನ ಕೃತಿಗಳು ಓವಿ ಛಂದಸ್ಸಿನಲ್ಲಿವೆ. ಉಪಮಾನಗಳಿಂದ ತುಂಬಿವೆ.
ಗ್ರಂಥಲೇಖನ ಕೃಷಿಯಲ್ಲಿ ಮಹೀಪತಿಯನ್ನು ಮೀರಿಸಿದವನೆಂದರೆ ಮೊರೆಪಂತ (1729-94). ಈತ ಉದ್ದಾಮಕವಿ. ತನ್ನ ಗ್ರಂಥಗಳಲ್ಲಿ ಆರ್ಯಾವೃತ್ತವನ್ನು ಹೆಚ್ಚಾಗಿ ಬಳಸಿದ್ದಾನೆ. ಪುರಾಣದ ಕಥೆಗಳನ್ನು ಆಧರಿಸಿ ಬರೆದ ಈತನ ಕೃತಿಗಳಲ್ಲಿ ಕೃಷ್ಣವಿಜಯ, ಮಂತ್ರಭಾಗವತ ಎಂಬವು ಪ್ರಸಿದ್ಧವಾಗಿವೆ. ರಾಮಕಥೆಯನ್ನೇ ಈತ ವಿಧ ವಿಧವಾಗಿ ನೂರೆಂಟು ರೀತಿಯಲ್ಲಿ ಬರೆದಿದ್ದಾನೆ. ಆರ್ಯಾಭಾರತ ಎಂಬುದು ದೊಡ್ಡ ಗ್ರಂಥ. ಮಂತ್ರರಾಮಾಯಣ, ಮಂತ್ರಗರ್ಭರಾಮಾಯಣ, ಮಂತ್ರೀ ರಾಮಾಯಣ, ಸಪ್ತರಾಮಾಯಣ, ಸೀತಾರಾಮಾಯಣ ಮೊದಲಾದವುಗಳಲ್ಲಿ ಈತನ ರಾಮಭಕ್ತಿ ಪ್ರಕಟವಾಗಿದೆ. ಕಲ್ಪಕತೆಯೂ ಚಿತ್ರಕವಿತ್ವವೂ ಈತನ ಕೃತಿಗಳಲ್ಲಿ ಹೇರಳವಾಗಿವೆ. ಇವನ ಗಂಗಾ ಪ್ರಾರ್ಥನಾ, ಕಾಶೀಸ್ತುತಿ, ಕೇಕಾವಲೀ, ಸಂಶಯರತ್ನಮಾಲಾ ಎಂಬವು ಭಾವಪ್ರಧಾನ ಕೃತಿಗಳು. ಸಂಸ್ಕøತಭೂಯಿಷ್ಠವಾದ ಶೈಲಿ ಇವನದು.
1794ರಿಂದ ಈಸ್ಟ್ ಇಂಡಿಯಾ ಕಂಪನಿ ಮಹಾರಾಷ್ಟ್ರದ ರಾಜ್ಯಾಧಿಕಾರ ವಹಿಸಿಕೊಂಡತರುವಾಯ ಸಾಹಿತ್ಯದಲ್ಲಿ ಬದಲಾವಣೆ ತಲೆದೋರಿತು. ಕೆಲವರು ಮೊರೊಪಂತನನ್ನು ಅನುಸರಿಸಿ ಗ್ರಂಥ ರಚನೆ ಮಾಡಿದ್ದರೂ ಅವರ ಕೃತಿಗಳು ಪ್ರಸಿದ್ಧಿಯನ್ನು ಪಡೆಯಲಿಲ್ಲ. ಅವುಗಳಲ್ಲಿ ಭಾವಕ್ಕಿಂತ ಬಾಹ್ಯ ಸ್ವರೂಪಕ್ಕೆ ಹೆಚ್ಚು ಪ್ರಾಶಸ್ತ್ಯ ಉಂಟಾದ್ದರಿಂದ ಸಾಹಿತ್ಯದಲ್ಲಿ ಔನ್ನತ್ಯ ಕಾಣಿಸಿಕೊಳ್ಳಲಿಲ್ಲ.
(ಎಸ್.ಜಿ.ಟಿ)
ಆಧುನಿಕ ಸಾಹಿತ್ಯ : ಆಧುನಿಕಮರಾಠೀ ಸಾಹಿತ್ಯದ ಮುಂಬೆಳಗು 19ನೆಯ ಶತಮಾನದ ಆದಿಯಿಂದಲೇ ಪ್ರಾರಂಭವಾಗುತ್ತದೆ. ಈ ನಿಟ್ಟಿನಲ್ಲಿ ಕ್ರೈಸ್ತ ಮಿಷನರಿಗಳು ನಡೆಸಿದ ಮೊದಲ ಯತ್ನಗಳು ಗಮನಾರ್ಹವಾದವು. ಕೇರಿ ಎಂಬಾತ 1805ರಲ್ಲಿ ಮರಾಠೀಭಾಷಾ ವ್ಯಾಕರಣ ಬರೆದ, ಜೊತೆಗೆ ಮತ್ತಾಯನ ಬೈಬಲನು ಕನ್ನಡಕ್ಕೆ ಅನುವಾದಿಸಿದ ಕೂಡ. ಕೇರಿ ಮತ್ತು ಬೈಜನಾಥ್ 1818ರ ಹೊತ್ತಿಗೆ ಹನ್ನೆರಡು ಪುಸ್ತಕಗಳನ್ನು ಈ ಭಾಷೆಯಲ್ಲಿ ಹೊರತಂದಿದ್ದರು. ಮುದ್ರಣಕಿಲೆ ಜಾರಿಗೆ ಬರುತ್ತಿದ್ದಂತೆಯೇ ಗದ್ಯ ಸಾಹಿತ್ಯ ಸ್ಪಷ್ಟವಾಗಿ ಕುಡಿಯೊಡೆಯಲಾರಂಭಿಸಿತು. ಕೇರಿ 1810ರಲ್ಲೂ ಕೆನಡಿ 1824ರಲ್ಲೂ ಮರಾಠಿ-ಇಂಗ್ಲಿಷ್ ಕೋಶಗಳನ್ನು ಪ್ರಕಟಿಸಿದರು. 1836ರಲ್ಲಿ ದಾದೋಬಾ ಪಾಂಡುರಂಗರ ಮರಾಠೀ ವ್ಯಾಕರಣ ಹೊರಬಂದಿತು.
ಮರಾಠೀ ಗದ್ಯದ ಮೊದಲ ಕುರುಹುಗಳು ಕಾಣಿಸಿಕೊಳ್ಳುವುದು ಮಹಾನುಭಾವ ಸಾಹಿತ್ಯದಲ್ಲಿ. ಬ್ರಿಟಿಷರು ಬರುವ ಮುನ್ನವೇ ಬಖೈರುಗಳ ರೂಪದಲ್ಲಿ ಗದ್ಯದ ನಮೂನೆ ದೊರೆಯುತ್ತದೆ. ಈ ಐತಿಹಾಸಿಕ ದಾಖಲೆಗಳಲ್ಲಿ ಪಾರಸಿ ಭಾಷೆಯ ಪ್ರಭಾವ ಹೆಚ್ಚು. ಪೇಶ್ವೆಗಳ ಕಾಲದಲ್ಲಿ ನಡೆದ ಬಹಳಷ್ಟು ಪತ್ರವ್ಯವಹಾರ ಸಹ ಇನ್ನೂ ಅಪ್ರಕಟಿತವಾಗಿದ್ದು ಹದಿನೆಂಟನೆಯ ಶತಮಾನದ ಗದ್ಯಕ್ಕೆ ಮಾದರಿಯಾಗಿ ನಿಲ್ಲುತ್ತದೆ.
ಮುಂಬಯಿ ವಿಶ್ವವಿದ್ಯಾಲಯ ಸ್ಥಾಪನೆಗೊಂಡಂದಿನಿಂದ (1856) ವಿಷ್ಣುಶಾಸ್ತ್ರಿ ಚಿಪಲೂಣಕರರ ನಿಬಂಧಮಾಲಾ ಪ್ರಕಟವಾದ 1874ರ ತನಕ ಕಾಲ ಒಂದು ವಿಧದಲ್ಲಿ ಪ್ರಾಚೀನ ಮತ್ತು ಆಧುನಿಕ ಯುಗಗಳ ಸಂಘರ್ಷಕಾಲ. ವಿಷ್ಣುಶಾಸ್ತ್ರಿ ಚಿಪಲೂಣಕರರು ಆಧುನಿಕ ಮರಾಠೀ ಗದ್ಯಸಾಹಿತ್ಯದ ಯುಗ ಪ್ರವರ್ತಕರು. ಇವರ ತಂದೆ ಕೃಷ್ಣಶಾಸ್ತ್ರಿ ಮಿಷನರಿಗಳ ಧೋರಣೆಯ ವಿರುದ್ಧ ಲೇಖನಿ ಹಿಡಿದವರಾಗಿದ್ದರು. ಅವರು ಅನೇಕ ಅನುವಾದಗಳನ್ನು ಮಾಡಿದರು. ವಿಷ್ಣುಶಾಸ್ತ್ರಿಯವರ ನಿಬಂಧಮಾಲಾ ಜನರಲ್ಲಿ ಸ್ವರಾಜ್ಯ ಮತ್ತು ಸ್ವಾಭಿಮಾನ ಭಾವನೆಗಳನ್ನು ಬಡಿದೆಬ್ಬಿಸಿತು. ಇದಲ್ಲದೆ ಪ್ರಾಚೀನ ಚಾರಿತ್ರಿಕ ಸಾಹಿತ್ಯವನ್ನು ಪ್ರಚುರಪಡಿಸಲು ಶಾಸ್ತ್ರಿಯವರು ಕಾವ್ಯೇತಿಹಾಸ ಸಂಗ್ರಹ ಎಂಬ ಮಾಸಪತ್ರಿಕೆಯನ್ನೂ ಹೊರಡಿಸುತ್ತಿದ್ದರು. ಸ್ವತಃ ಪ್ರಕಾಶಕರೂ ಆಗಿದ್ದ ಇವರು ತಿಲಕ್ ಮತ್ತು ಅಗರ್ಕರ್ ಜೊತೆಯಲ್ಲಿ ಕೇಸರಿ ಮತ್ತು ಮರಾಠಾ ಎಂಬ ಪತ್ರಿಕೆಗಳನ್ನು ಹೊರಡಿಸುವಲ್ಲಿ ಯಶಸ್ವಿಯಾದರು. ಶಾಸ್ತ್ರಿಯವರ ಗದ್ಯಶೈಲಿ ಪË್ರಢವಾದುದು; ರಸವತ್ತಾದದ್ದು; ಓಜಸ್ಸಿನಿಂದ ಕೂಡಿದುದು. ಹೊಸಯುಗಕ್ಕೆ ನಾಂದಿ ಹಾಡಿದ ಈ ಪ್ರತಿಭಾಶಾಲಿ ಬದುಕಿದ್ದದ್ದು 32 ವರ್ಷಗಳು ಮಾತ್ರ.
ಮುಂದೆ ಕೆಲವುಕಾಲ ಪ್ರತಿಕೋದ್ಯಮ ಜನಾಭಿಪ್ರಾಯದ ಮೇಲೆ ಅಳವಾದ ಪರಿಣಾಮ ಬೀರಲಾರಂಭಿಸಿತು. ಸಾಹಿತ್ಯಶ್ರೀ ಪತ್ರಿಕೆಗಳು ಮೂಲಕ ಪ್ರಚಾರವಾಗತೊಡಗಿತು. ವಿಷ್ಣುಶಾಸ್ತ್ರಿ ಚಿಪಲೂಣಕರು ಹಾಕಿ ಕೊಟ್ಟ ಗದ್ಯಶೈಲಿಯಲ್ಲಿ ಮುಂದುವರಿದು ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದವರಲ್ಲಿ ಅಗರ್ಕರ್, ತಿಲಕ್ ಶಿ.ಮ. ಪರಾಂಜಪೆ, ಎಂ. ಬಿ. ಕೊಲಟಕರ ಹಾಗೂ ಅವರ ಅನಂತರ ಬಂದ ಖಾಡಿಲ್ಕರ್, ಲಿಮಯೆ, ಜಿ.ವೈ. ಚಿಟಣೀಸ, ಮಾಡಬೋಲ್ಕರ್, ಗಾಡಗೀಳ ಮುಖ್ಯರು. ದರ್ಶನಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಅರ್ಗಕರ್ ಹಾಗೂ ಶ್ರೇಷ್ಠ ಸಾಹಿತಿ ಮತ್ತು ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರರೆನಿಸಿದ್ದ ತಿಲಕ್ ಇವರಿಬ್ಬರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದವು. ರಾಜಕೀಯ ಚಳವಳಿ ಯಶಸ್ವಿಯಾಗದೆ ಸಾಮಾಜಿಕ ಬದಾಲವಣೆ ಸಾಧ್ಯವಿಲ್ಲವೆಂದು ತಿಲಕರೂ ಪ್ರತಿಪಾದಿಸುತ್ತಿದ್ದರು
ಪ್ರಮುಖರಾದ ಗದ್ಯ ಲೇಖಕರು; ಲೋಕಮಾನ್ಯ ಬಾಲಗಂಗಾಧರ ತಿಲಕರು (1856-1920) ಕಾನೂನುಶಾಸ್ತ್ರದಲ್ಲಿ ಪದವೀದರರಾದರೂ ವಿಷ್ಣುಶಾಸ್ತ್ರಿ ಚಿಪಲೂಣಕರರ ಶಾಲೆಯಲ್ಲಿ ಶಿಕ್ಷಕರಾದರು. ಅನಂತರ ಕೇಸರಿ ಪತ್ರಿಕೆಯ ಸಂಪಾದಕರಾದರು. ಸಾಹಿತಿಯಾಗಿ ಅವರು ರಚಿಸಿದ ಹೆಸರಾಂತ ಗ್ರಂಥವೆಂದರೆ ಗೀತಾರಹಸ್ಯ. ಇಂಗ್ಲಿಷಿನಲ್ಲೂ ಕೃತಿರಚನೆ ಮಾಡಿದ ತಿಲಕರು ಮರಾಠಿಯಲ್ಲಿ ಹಿಂದೂ ಧರ್ಮಾಚಿ ಸ್ವರೂಪ ಲಕ್ಷಣ್ ಅಲ್ಲದೆ ಇನ್ನೂ ಕೆಲವು ಗ್ರಂಥಗಳನ್ನು ರಚಿಸಿದ್ದಾರೆ. ಅವರ ಭಾಷಾಶೈಲಿ ತುಂಬ ಪ್ರೌಢ, ವಿದ್ವತ್ಪೂರ್ಣ ಹಾಗೂ ತೀಕ್ಷ್ಣ ವ್ಯಂಗ್ಯದಿಂದ ಕೂಡಿದ್ದು. ಸಮಾಜ ಸುಧಾರಕರಾದ ಗೋಪಾಲಹರಿದೇಶಮುಖರು (1825-92) ಲೋಕಹಿತವಾದಿ ಎಂಬ ಹೆಸರಿನಲ್ಲಿ ಸಾಹಿತ್ಯ ರಚನೆ ಮಾಡಿದರು. ನ್ಯಾಯಧೀಶರಾಗಿ ಸೇವೆ ಸಲ್ಲಿಸಿದ ಇವರು ಜಾತಿಭೇದ, ಗೀತಾರಹಸ್ಯ, ಆಗಮಗಳು, ಗೃಹ್ಯಸೂತ್ರಗಳು, ಖಾದಿ, ಗ್ರಾಮೋದ್ಧಾರ-ಹೀಗೆ ಹಲವಾರು ವಿಷಯಗಳನ್ನು ಕುರಿತು ಬರೆದಿದ್ದಾರೆ. ಅನೇಕ ಭೂಗೋಳ, ಇತಿಹಾಸ ಗ್ರಂಥಗಳನ್ನು ಬರೆದ ಇವರು ತಮ್ಮ ಸ್ಪಷ್ಟ ವಿಚಾರಧಾರೆಗಳಿಂದಾಗಿ ಜೀವಿತಾವಧಿಯಲ್ಲಿ ತೀವ್ರ ಟೀಕೆಗೊಳಗಾಗಿದ್ದರು. ರಾಮಚಂದ್ರ ವಿನಾಯಕ ಟಿಕೇರ (1862-1907) ಧನುರ್ಧಾರಿ ಎಂಬ ಉಪನಾಮದಲ್ಲಿ ಸೂಕ್ಷ್ಮ ವರ್ಣನೆಗಳಿಂದ ಕೂಡಿದ ನಲವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದರು. ಶಿವರಾಮ ಮಹದೇವ ಪರಾಂಜಪೆ(1864-1929) ವ್ಯಾಜ್ಯೋಕ್ತಿಯಲ್ಲಿ ಎತ್ತಿದ ಕೈ ಎನಿಸಿದ್ದ ಪ್ರತಿಕೋದ್ಯಮಿ. ಗೋಪಾಲ ಗಣೇಶ ಅಗರ್ಕರ್(1856-95) ಪ್ರಜಾಪ್ರಭುತ್ವದ ಮತ್ತು ವ್ಯಕ್ತಿ ಸ್ವಾತಂತ್ರಗಳ ಸಮರ್ಥಕರಾಗಿದ್ದರು. ಪಾಶ್ಚಾತ್ಯ ವಿಚಾರ ವಾಹಿನಿಯನ್ನು ಭಾರತೀಯರು ಸರಿಯಾಗಿ ಸ್ವೀಕರಿಸಬೇಕೆಂಬುದು ಇವರ ನಿಲುವಾಗಿತ್ತು.
ಶ್ರೀಧರ ವೆಂಕಟೇಶ ಕೇತಕರರು ಪಂಡಿತರು. ಹನ್ನೆರಡು ವರ್ಷ ನಿರಂತರವಾಗಿ ಕೆಲಸಮಾಡಿ ಪ್ರತಿಯೊಂದು ಭಾಗವೂ ಐನೂರು ಪುಟಗಳಿಗೂ ಮೀರಿದ, 23ಭಾಗಗಳ ಮಹಾರಾಷ್ಟ್ರ ಜ್ಞಾನಕೋಶ ಸಂಪಾದನೆ-ಲೇಖನ-ಪ್ರಕಾಶನ-ವಿತರಣೆ ಕೆಲಸಗಳನ್ನು ಒಬ್ಬಂಟಿಗರಾಗಿಯೇ ಮಾಡಿದರು. ಅವರು ಕೇವಲ ಸಂಗ್ರಾಹಕರಾಗಿರದೆ ವಿಚಾರ ಪ್ರವರ್ತಕರೂ ಆಗಿದ್ದರು.
ಕಾದಂಬರಿ; ಬಾಬಾ ಪರಮನಜಿ ಎಂಬ ಕ್ರೈಸ್ತ ಲೇಖಕ ಯಮುನಾಪರ್ಯಟನ (1857) ಎಂಬ ಮೊದಲ, ಸಾಮಾಜಿಕ ಹಾಗೂ ಧರ್ಮನಿಂದೆಯ ಕಾದಂಬರಿ ಬರೆದ. ಈ ಭಾಷೆಯ ಮೊದಲ ಕಾದಂಬರಿಗಳು ಮನರಂಜನೆ ಪ್ರಧಾನವಾದ ಕೃತಿಗಳು. 1870ರ ವೇಳೆಗೆ ಐತಿಹಾಸಿಕ ಕಾದಂಬರಿಗಳು ಪ್ರಕಟಗೊಳ್ಳತೊಡಗಿದ್ದುವು. ಹಳಬೆ, ರಿಸ್ ಬೂಡ್ ಎಂಬವರು ರಹಸ್ಯಮಯವಾದ ಕಾದಂಬರಿಗಳನ್ನು ಬರೆದರು. ಸೃಜನಶೀಲ ಪ್ರತಿಭೆಯುಳ್ಳ ಸಹಾನುಭೂತಿಯುಳ್ಳ ಚಾರಿತ್ರಿಕ ದೃಷ್ಟಿಯನ್ನು ತತ್ಕಾಲೀನ ಸಮಾಜದ ಬಗೆಗೆ ಸಮತೋಲನವುಳ್ಳ ನಿಲುವನ್ನು ಹೊಂದಿದ್ದು ಮೊದಲ ಗಮನಾರ್ಹ ಕಾದಂಬರಿಕಾರನೆಂದರೆ ಹರಿನಾರಾಯಣ ಆಪ್ಟೆ (1864-1919) ವಾಸ್ತವವಾಗಿ ಆಪ್ಟೆಯೇ ಮರಾಠೀ ಕಾದಂಬರಿಗಳಿಗೆ ಹುಟ್ಟುಹಾಕಿದಾತ ಎನ್ನಬಹುದು. ಈತ ಸುಮಾರು ಹತ್ತು ಸಾಮಾಜಿಕ ಕಾದಂಬರಿಗಳನ್ನೂ ಹನ್ನೆರಡು ಐತಿಹಾಸಿಕ ಕಾದಂಬರಿಗ¼ನೂ ಬರೆದೆದ್ದಾನೆ. ಸಮಾಜ ಸುಧಾರಣೆ, ಕ್ರಾಂತಿ, ಪರಂಪರೆಯ ನಿರ್ವಹಣೆ ಇವನ ಬರೆವಣಿಗೆಯ ಉದ್ದೇಶವಾಗಿತ್ತು. ಕಾಲ, ಸೂರ್ಯೋದಯ, ಸೂರ್ಯಗ್ರಹಣ, ಗಡಾಆಲಾ ಪಣಸಿಂಹಗೇಲಾ, ವಜ್ರಾಘಾತ ಈತನ ಕೆಲವು ಐತಿಹಾಸಿಕ ಕಾದಂಬರಿಗಳು ಪಣಲಕ್ಷಾಂತ ಕೋಣ ಘತೋ? ಯಶವಂತರಾವ್ ಖರೇ, ಮೀಮಧಲೀ ಸ್ಥಿತಿ ಕೆಲವು ಸಾಮಾಜಿಕ ಕಾದಂಬರಿಗಳು.
ಕಾದಂಬರಿ ಕ್ಷೇತ್ರದಲ್ಲಿ ಎರಡನೆಯ ಯುಗ ವಾಮನ ಮಲ್ಲಾರ ಜೋಶಿಯಿಂದ (1882-1943) ಪ್ರಾರಂಭವಾಗುತ್ತದೆ. ಅವರು ಬರೆದದ್ದು ಕೆಲವೇ ಕಾದಂಬರಿಗಳಾದರೂ ಎಲ್ಲವೂ ವಿಚಾರ ಪ್ರಚೋದಕ. ರಾಗಿಣಿ, ನಳಿನಿ, ಆಶ್ರಮಹರಿಣಿ, ಸುಶೀಲೇಖಾ ದೇವ, ಇಂದುಕಾಳೇ ಅಣಿ ಸರಲಾಬೊಳೆ ಅವರ ಹೆಸರಾಂತ ಕಾದಂಬರಿಗಳು. ಕಲಿತ ಹೆಣ್ಣಿನ ಬೌದ್ಧಿಕ ವಿಕಾಸ, ಕಲೆ ಮತ್ತು ನೀತಿಯ ಕುರಿತ ಸಮಸ್ಯೆಗಳನ್ನು ಅವರು ವಸ್ತುವಾಗಿಸಿಕೊಂಡಿದ್ದಾರೆ. ಕೇತಕರರು ಸಹ ಕೆಲವು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ನಾಥಮಾಧವ, ಹಡಪ, ಶಹಾ ಈ ಕಾಲದಲ್ಲಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದರು. ಮಾಮಾವರೇರಕರು ಬಂಗಾಳೀ ಅನುವಾದಗಳನ್ನೂ ಒಳಗೊಂಡಂತೆ ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದರು.
1926ರ ತರುವಾಯ ಸುಮಾರು ಇಪ್ಪತ್ತು ವರ್ಷಗಳ ಕಾಲ ಕಾದಂಬರಿ ಕ್ಷೇತ್ರದಲ್ಲಿ ಹುಲುಸಾದ ಬೆಳೆ ಬಂತು. ಈ ವೇಳೆಗೆ. ಕಾದಂಬರಿ ಕೇವಲ ಘಟನಾಪ್ರಮಾಣ ಇಲ್ಲವೆ ವಿಚಾರಪ್ರಧಾನವಾಗಿ ಉಳಿಯದೆ ಜನರ ಬದುಕಿನ ಆಕಾಂಕ್ಷೆಗಳನ್ನೂ ಆಶೋತ್ತರಗಳನ್ನೂ ಫಲಿಸತೊಡಗಿತು. ನಾರಾಯಣ ಸೀತಾರಾಮ ಫಡಕೆ ಮತ್ತು ವಿಷ್ಣು ಸಖಾರಾಮ ಖಾಂಡೆಕರರು ಈ ಕಾಲದಲ್ಲಿ ಅಮೋಘ ಕಾದಂಬರಿಗಳನ್ನು ಬರೆದರು. ಮೊದಲಿಗೆ ಕಲೆಗಾಗಿ ಕಲೆಯೆಂದು ಫಡಕೆಯವರೂ ಬದುಕಿಗಾಗಿ ಕಲೆಯೆಂದು ಖಾಂಡೇಕರೆ ಅವರೂ ಪ್ರತಿಪಾದಿಸುತ್ತಿದ್ದರು. ಅನಂತರ ಪರಸ್ಪರ ಚಿಂತನೆ ಧೋರಣೆಗಳ ಬಗ್ಗೆ ಇಬ್ಬರಲ್ಲೂ ಸಹಾನುಭೂತಿಯಿರುವುದನ್ನು ಇಬ್ಬರೂ ಕಂಡುಕೊಂಡರು. ಫಡಕಯವರ ಕೃತಿಗಳು 75ಕ್ಕಿಂತ ಹೆಚ್ಚು. ಖಾಂಡೇಕರರು 40ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದರು. ಫಡಕೆಯವರ ನಿರಂಜನ, ದೌಲತ್, ಉದ್ದಾರ್, ಶಾಕುಂತಲ ಹಾಗೂ ಖಾಂಡೇಕರರ ದೋನ್ ಧ್ರುವ, ಉಲ್ಕಾ, ಅಶ್ರು, ಯಯೌತಿ ಮುಂತಾದವು ಹೆಸರಿಸಬೇಕಾದ ಕಾದಂಬರಿಗಳು. ಇದೇ ಕಾಲದಲ್ಲಿ ಮಾಡಗೂಳಕರ್ ಬರೆದ ಮುಕ್ತಾತ್ಮಾ(1933) ಎಂಬ ಕೃತಿ ರಾಜಕೀಯ ವಸ್ತು ಇರುವ ಕಾದಂಬರಿಗಳಿಗೆ ನಾಂದಿ ಹಾಡಿತು.
1939ರಲ್ಲಿ ವಿಶ್ರಾಮ ಬೆಡೆಕರ್ ಬರೆದ ರಣಾಂಗಣ ಕಾದಂಬರಿಯಿಂದ ಈ ಪ್ರಕಾರಕ್ಕೆ ಒಂದು ಹೊಸ ತಿರುವು ಸಿಕ್ಕಿತು. ಇದರಲ್ಲಿ ಭಾರತ ಮತ್ತು ವಿದೇಶಗಳಿಗೆ ಸಂಬಂಧಪಟ್ಟ ಹಾಗೆ ಕತೆ ಹೆಣೆಯಲಾಗಿದ್ದು ತಂತ್ರ ಮತ್ತು ಸಂವಿಧಾನದ ದೃಷ್ಟಿಯಿಂದ ಹೊಸತನ ಎದ್ದುಕಾಣುತ್ತದೆ. ಪ್ರ.ಯ. ದೇಶಪಾಂಡೆಯವರ ಬಂಧನಾಂಚ್ಯಾ ಪಲೀಕಡೆ ಎಂಬ ಕಾದಂಬರಿ ಮಹಾರಾಷ್ಟ್ರದಲ್ಲಿ ದೊಡ್ಡ ಆಂದೋಲನವನ್ನು ಎಬ್ಬಿಸಿತ್ತು. ಅನಂತರ ಕಾರ್ಯಾತ್ಮಕವಾದ ಆಧ್ಯಾತ್ಮಿಕವಾದ ಕಾದಂಬರಿಗಳನ್ನು ಬರೆಯತೊಡಗಿದರು. ಇವರ ಕೃತಿಗಳಲ್ಲಿ ತೀಕ್ಷ್ಣವಾದ ಮನೋವಿಶ್ಲೇಷಣೆ ಎದ್ದು ಕಾಣುತ್ತದೆ, ಬಾ.ಸೀ.ಮರ್ಡೇಕರರ ರಾತ್ರಿಚಾದಿವಸ್ ಎಂಬ ಕೃತಿ ಪಾಶ್ಚಾತ್ಯಮಾದರಿಯ ನೂತನ ಪ್ರಯೋಗವಾಗಿದ್ದು ವ್ಯಭಿಚಾರಿಕೆಯ ಹೊಸ ದಿಗಂತದತ್ತ ಓದುಗರನ್ನು ಕೊಂಡೊಯ್ಯುತ್ತದೆ, ಹೆಣ್ಣಿನ ಬದುಕು ಹಾಗೂ ಒಡೆಯುತ್ತಿರುವ ಕೌಟುಂಬಿಕ ವ್ಯವಸ್ಥೆಯ ಬಗೆಗೆ ಚಿತ್ರಿಸಿರುವ ವಿಭಾವದಿ ಶಿರೊರ್ ಕರರ ಹಿಂದೋಳ್ಯಾವರ್, ವಿರಲೇಲ ಸ್ವಪ್ನ, ಬಳೀಗಮನಾರ್ಹ ಕಾದಂಬರಿ.
ಮಾಮಾವರೇರ್ಕರ್ ಅಲ್ಲದೇ ಗೀತಾಸಾನೇ, ಕೃಷ್ಣಾಬಾಯಿ ಮೋಟೆ ಅವರು ಚಿತ್ರಿಸಿರುವ ಹೆಣ್ಣಿನ ಚಿತ್ರವನ್ನು ಮರೆಯಲಾಗುವುದಿಲ್ಲ. ಸಾನೇ ಗುರೂಜಿ ಮಕ್ಕಳ ಮನಸ್ಸಿನ ಬೆಳೆವಣಿಗೆ ಕುರಿತಂತೆ ಶಾಮಚಿಆಯೀ ಎಂಬ ಪುಸ್ತಕ ಬರೆದಿದ್ದಾರೆ. ಅಲ್ಲದೆ ಭಾರತೀಯ ಸಂಸೃತಿ ಮತ್ತು ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಆಸ್ತಿಕ, ಕ್ರಾಂತಿ, ಪುನರ್ಜನ್ಮ ಮೊದಲಾದ ಪುಸ್ತಕಗಳನ್ನು ಬರೆದಿದ್ದಾರೆ. ದಿಘೆಯವರ ಪಾಣಕಲಾ ಮತ್ತು ಸರಾಯೀ ಕಾದಂಬರಿಗಳಲ್ಲಿ ಮಹಾರಾಷ್ಟ್ರದ ಹಳ್ಳಿಯೊಂದರ ಬದುಕಿನ ಚಿತ್ರಣವಿದೆ. ಇವೇ ಅಲ್ಲದೆ ನಾ ಪೆಂಡಸೇ ಅವರ ಏಲಗಾರ್ದಿಂದ (1947) ರಥಚಕ್ರ (1961) ತನಕ ರಚಿಸಿದ ಕಾದಂಬರಿಗಳಲ್ಲೂ ಗೋನೀ. ದಾಂಡೇಕರರ ಶಿತು. ಪೂರ್ಣಮಾಯಾಚೀ ಲೇಕರಮ್ ಮೊದಲಾದ ಕಾದಂಬರಿಗಳಲ್ಲೂ ಪ್ರಾದೇಶಿಕತೆಗೆ ಹೆಚ್ಚು ಒತ್ತು ನೀಡಲಾಗಿದೆ. ಬಾಲಚಂದ್ರ ನೇಮಾಡೆ ಅವರ ಕೋಸಲಾ ಹಾಗೂ ಆರತಿ ಪ್ರಭು ಅವರ ಕೋಂಡುರಾ ಎಂಬವು ಅಸ್ತಿತ್ವವಾದಿ ವಿಸಂಗತವಾದಿ ಕಾದಂಬರಿಗಳ ಬೆಳೆವಣಿಗೆಗೆ ದಿಕ್ಸೂಚಿಗಳಾಗಿವೆ. ಜಯವಂತ ದಳವಿಯ ಚಕ್ರ, ಭಾವೂ, ಪಾಥ್ಯೆಯ ವಾಸೂನಕಾ ಎಂಬ ಕಾದಂಬರಿಗಳು ದೀನದಲಿತರ, ಕೊಳಚೆ ಪ್ರದೇಶಗಳ ಬದುಕಿಗೆ ಕನ್ನಡಿ ಹಿಡಿಯುತ್ತವೆ. ಸುಭಾಷ್ ಸಾವರಕರ್, ಮಾಧವ ಕೊಂಡ್ವಿಲಕರ್, ಅಶೋಕ ವಾತ್ಕರ್ ಈಚಿನ ಹೆಸಾರಂತ ಕಾದಂಬರಿಕಾರರು.
ಸಣ್ಣಕತೆ; ಕಾದಂಬರಿ ಲೇಖಕರಾಗಿ ಮೇಲೆ ಹೆಸರಿಸಿದ ಬಹಳಷ್ಟು ಮಂದಿ ಸಣ್ಣಕತೆಗಳನ್ನೂ ಬರೆದಿದ್ದಾರೆ. ದಿವಾಕರ. ಕೃಷ್ಣರ ಅಂಗಣಾತೀಲ್ ಪೋಪೆಟ್ (1920) ಮೊತ್ತಮೊದಲ ಸಣ್ಣಕತೆಯೆಂದು ಹೇಳಲಾಗಿದೆ. ಕುತೂಹಲಕಾರಿ ಅಂತ್ಯ ಇಲ್ಲವೆ, ವಾಸ್ತವ ಬದುಕಿನ ವಿಷಮತೆಯ ಕಟುಚಿತ್ರಗಳಿಗೆ ತೆಕ್ಕಬಿದ್ದಿದ್ದ ಮರಾಠೀ ಕತೆಗಳ ಆಶಯ ಅಭಿವ್ಯಕ್ತಿಗಳು ಬದಲಾಗಿ ಪ್ರಗತಿಶೀಲತೆ ಮೈದೋರಿತು. ವೀ. ಸೀ. ಗುರ್ಜರ ಸಣ್ಣಕತೆಗಳಿಗೆ ಕಲಾತ್ಮಕ ರೂಪ ಕೊಟ್ಟರು. ದಿವಾಕರ ಕೃಷ್ಣರು ಪಾತ್ರ ಚಿತ್ರಣಕ್ಕೆ ಹೆಚ್ಚು ಒತ್ತು ಕೊಟ್ಟರು. ನಾ. ಸೀ. ಫಡಕೆಯವರು ಕತೆಯ ತಂತ್ರ ಮತ್ತು ಭಾಷೆಗಳಲ್ಲಿ ಹೊಸ ಆಯಾಮವನ್ನೇ ತೆರೆದರು. ಖಾಂಡೇಕರರು ಬದುಕಿನ ಬಗೆಗೆ ಚಿಂತನೆಯನ್ನು ಬೆಳೆಸಿದರು. ಯಶವಂತ ಗೋಪಾಲಜ್ಯೋತಿ, ವಿ.ವಿ. ಬೋಕೀಲ ಮೊದಲಾದವರು ಕತೆಯಲ್ಲಿ ಸಾಂಸಾರಿಕ ವಾತಾವರಣವನ್ನು ಅಳವಡಿಸಿ ರೂಢಿಬದ್ಧವಾದ ಕಥಾ ತಂತ್ರವನ್ನು ಬದಲಾಯಿಸಲು ಪ್ರಯತ್ನಿಸಿದರು. ವಾಮನಕೃಷ್ಣ ಚೋರಫಡೆ ಮತ್ತು ಕುಸುಮಾವತೀ ದೇಶಪಾಂಡೆ ಕಾವ್ಯಾತ್ಮಕವಾದ ಸಣ್ಣಕತೆಗಳನ್ನು ಬರೆದರು. ಜೋಶಿ, ಅತ್ರೆ, ಶಾಮರಾವ್ ಓಕ್ ಮೊದಲಾದವರು ಹಾಸ್ಯ ಕತೆಗಳನ್ನು ಬರೆದರು.
ಗಂಗಾಧರ ಗಾಡಗೀಳರು ಹೊಸಕವಿತೆ ಮತ್ತು ಹೊಸಕತೆಗಳ ನಡುವೆ ಇರುವ ದಟ್ಟಸಂಬಂಧವನ್ನು ತಮ್ಮ ಕತೆಗಳಲ್ಲಿ ತೋರಿದ್ದಾರೆ. ಸಣ್ಣಕತೆಗಳ ಕ್ಷೇತ್ರದಲ್ಲಿ ಇವರೇ ಅತ್ಯಂತ ಸಾಹಸ ಮನೋಭಾವ ಉಳ್ಳ ಪ್ರಯೋಗಶೀಲರು ಅರವಿಂದ ಗೋಖಲೆ ಮಾನವ ಮನಸ್ಸಿನ ಒಳತೋಟಿಯನ್ನು ತಮ್ಮ ಕತೆಗಳಲ್ಲಿ ಬಿಚ್ಚಿತೋರಿಸಿದ್ದಾರೆ. ಪರಂಪರಾಗತವಾದ ನೀತಿವಾದಕ್ಕೆ ಭಾವೆ ಬದ್ಧರಾದರೂ ಅವರ ಕತೆಗಳು ವ್ಯಕ್ತಿಪ್ರಧಾನವಾದವು. ಮಾಗಕೋಳಕರರ ಕತೆಗಳಲ್ಲಿ ಹಳ್ಳಿಯ ಚಿತ್ರಣ ಯಥಾವತ್ತಾಗಿದೆ.
ಸಣ್ಣಕತೆಗಳಲ್ಲಿ ಕ್ರಮೇಣ ವಸ್ತುವಿಗಿಂತ ತಂತ್ರ ಪ್ರಧಾನವಾಯಿತು. ಮನೋವೃತ್ತಿಯ ಚಿತ್ರಣ, ಮಾನಸಿಕ ಒಳತೋಟಿ, ಅಂತರ್ಮುಖತೆ, ಸಂಘರ್ಷ ಇವುಗಳಿಗೆ ಪ್ರಾಮುಖ್ಯ ದೊರೆಯಿತು. ಅನಂತರ ಬಂದ ಕತೆಗಾರರಲ್ಲಿ ದಿ.ಬಾ. ಮೊಕಾಶಿ, ಶಂಕರಪಾಟೀಲ, ಮಿರಾಸದಾರ, ವಸುಂಧರಾಪಡವರ್ಧನಾ, ಮಂಗೇಶ್ ಪತಕಿ, ಶ್ರೀ. ಜ. ಜೋಶಿ, ಪಾನವಲಕರ್, ಆನಂದಯಾದವ್, ವಿಜಯಾ `ರಾಜಾಧ್ಯಕ್ಷ, ಜ್ಞಾನೇಶ್ವರಿ ನಾಡಕರ್ಣಿ, ಸದಾನಂದ ರೇಗ, ಆರತಿ ಪ್ರಭು, ದಿಲೀಪ್ ಚಿತ್ರೇ ಮೊದಲಾದವರು ಪ್ರಮುಖರು.
ಕಾವ್ಯ; ಕೃಷ್ಣಾಜಿಕೇಶವ ದಾಮಲೆ(1866-1904)ಮರಾಠಿ ಆಧುನಿಕ ಕಾವ್ಯದ ಮೊದಲ ಕವಿ. ಕೇಶವಸುತ ಎಂಬುದು ಕಾವ್ಯನಾಮ. ಇವರ ಕವನಗಳು ಕ್ರಾಂತಿಕಾರಿಯೆನಿಸಿದ್ದವು. ದೀನದಲಿತರ ಬಗ್ಗೆ ಕಾವ್ಯ ಬರೆಯಲು ಇವರೇ ಮೊದಲು ಲೇಖನಿ ಹಿಡಿದವರು, ರೊಮ್ಯಾಂಟಿಕ್ ಕಾವ್ಯಧಾರೆಗೆ ಸೂತ್ರಧಾರರು.
ರೆವರೆಂಡ್ ನಾರಾಯಣ ವಾಮನ ಟಿಳಕ್, ವಿನಾಯಕ ಜನಾರ್ದನ ಕರಂದೀಕರ್, ರಾಮಗಣೇಶ ಗಡಕರೀ, ತ್ರ್ಯಂಬಕ ಬಾಪೂಜಿ ಠೋಮರೆ, ನಾರಾಯಣ ಮುರಳೀಧರ ಗುಪ್ತ, ಭಾಸ್ಕರ ರಾಮಚಂದ್ರ ತಾಂಬೇ ಮೊದಲಾದವರು ಪ್ರಕೃತಿ, ಪ್ರೇಮ ಮತ್ತು ರಹಸ್ಯಾತ್ಮಕತೆಗಳಿಗೆ ಸಂಬಂಧಪಟ್ಟಂತೆ ಕವನಗಳನ್ನು ರಚಿಸಿದ್ದಾರೆ. ವಿನಾಯಕರ ಕವಿತೆಗಳಲ್ಲಿ ರಾಷ್ಟ್ರೀಯತೆ ಪ್ರಧಾನ ಅಂಶ. ಗಡಕರಿಯವರ ಕವನಗಳಲ್ಲಿ ಸಾಮಾಜಿಕ ಅನ್ಯಾಯದ ಬಗ್ಗೆ ಭಾರಿ ವಿರೋಧ ವ್ಯಕ್ತಪಟ್ಟಿದೆ. ತಾಂಬೆಯವರ ಕಾವ್ಯ ಮಾಧುರ್ಯದಿಂದ ಕೂಡಿದೆ. ಇವರ ಕವನಗಳಲ್ಲಿ ಸುಕುಮಾರ ಭಾವನೆಗಳೊಂದಿಗೆ ಭವ್ಯಗಂಭೀರ ಕಲ್ಪನೆಯ ಮಧುರ ಮಿಲನವೂ ಉಂಟು. ಬರೋಡದ ರಾಜಕವಿ ಚಂದ್ರಶೇಖರರು ಹಳೆಯ ಸಾಂಪ್ರದಾಯಿಕ ರಚನೆಯ ಚೌಕಟ್ಟಿನಲ್ಲೇ ತಮ್ಮ ಕಾವ್ಯವೈಭವವನ್ನು ಮೆರೆದರು. ಸರಸ ರಚನಾ ಕೌಶಲ, ರಮಣೀಯ ಕಲ್ಪನಾವಿಲಾಸಗಳನ್ನು ಹೊಂದಿದ್ದ ನಾರಾಯಣ ಮುರಳೀಧರ ಗುತ್ತಿ(ಬೀ ಎಂಬ ಕಾವ್ಯನಾಮ) ಯಶೋಗಾಮಿಯಾಗಿರಲಿಲ್ಲ. ರವಿಕಿರಣ ಮಂಡಲನೆಂದು ಕರೆಸಿಕೊಂಡಿದ್ದ ಯಶ್ ವಂತ ದಿನಕರ ಪೆಂಡಾರಕರ್, ಮಾಧವ ಜ್ಯೂಲಿಯನ್ ಮತ್ತು ಗಿರೀಶ ಈ ಮೂವರ ಕಾವ್ಯವಸ್ತು ಎಂದರೆ ಸಾಮಾಜಿಕ ವಿಚಾರಗಳು. ಕಾವ್ಯಕಲ್ಪಕ್ಕೆ ಈ ಮೂವರು ಒಂದು ಹೊಸಹಾದಿಯನ್ನು ತೋರಿಸಿಕೊಟ್ಟರು. ಪೆಂಡಾರಕರ್ ಬಂಡಾಯಕವಿ ಈತ ಗ್ರಾಮ್ಯಗೀತೆಗಳನ್ನೂ ಸರಳವಾದ ಪ್ರೇಮಗೀತೆಗಳನ್ನೂ ಮತ್ತು ಉತ್ಕಟವಾದ ರಾಷ್ಟ್ರೀಯ ಗೀತೆಗಳನ್ನೂ ರಚಿಸಿದ್ದಾರೆ. ಜ್ಯೂಲಿಯೆನ್ ಅವರ ರಚನೆಗಳು ಗಜಲುಗಳ ರೀತಿಯಲ್ಲಿವೆ.
ಆಧುನಿಕ ಕಾವ್ಯದಲ್ಲಿ ಎರಡು ಸ್ಪಷ್ಟ ಕಾವ್ಯಧಾರೆಗಳನ್ನು ಕಾಣಬಹುದು. ಮುಕ್ತಛಂದಸ್ಸಿನ ಪ್ರವರ್ತಕರೆನಿಸಿದ ಆತ್ಮರಾಮ ರಾವ್ಜೀ ದೇಶಪಾಂಡೆ, ಅನಿಲ್ ಎಂಬ ಪ್ರಗತಿವಾದಿ ಕಾವ್ಯಕ್ಕೆ ಉಸಿರು ತುಂಬಿದರು. ವಾ. ವಿ. ಶಿರವಾಡಕರ್, ವಾ.ರಾ. ಕಾಂತ್, ಶರಶ್ಚಂದ್ರ ಮುಕ್ತಿಬೋಧ್, ಮನಮೋಹನ ನಾತೂ, ವಿಂದಾ ಕರಂದೀಕರ್ ಇದೇ ಹಾದಿಯಲ್ಲಿ ಹೆಜ್ಜೆಯಿಟ್ಟವರು. ಬೋರಕರ್ ಗೋವಾ ವಿಮುಕ್ತಿ ಕುರಿತಾಗಿ ಕಾವ್ಯ ರಚಿಸಿದ್ದಾರೆ. ಗ.ದಿ. ಮಾಡಗೂಳಕರ್ ಅವರು ತಮ್ಮ ಕವನಗಳಲ್ಲಿ ವಿದೇಶಿ ಆಕ್ರಮಣವನ್ನು ಪ್ರತಿಭಟಿಸಿದ್ದಾರೆ. ಸಾಂಪ್ರದಾಯಿಕ ಕಾವ್ಯದಿಂದ ದೂರಸರಿದು ಮನೋವಿಶ್ಲೇಷಣೆಯ ಮೇಲೆ ಒತ್ತು ಕೊಟ್ಟ ಪ್ರಯೋಗಶೀಲ ಕಾವ್ಯಧಾರೆಯ ನೇತಾರರೆಂದರೆ ಬಾ. ಸೀ. ಮರ್ಡೇಕರ, ಯು.ವಿ. ಭಾವೆ, ಮುಕ್ತಿಬೋಧ್ ಮುಂತಾದವರು. ಸಾಕಷ್ಟು ವಿಮರ್ಶೆ ವಿವಾದಗಳಿಗೆ ಸಿಲುಕಿದ ಮರ್ಡೇಕರರೇ ವನ್ಯಕಾವ್ಯದ ಮೊತ್ತ ಮೊದಲ ಹೆಸರಾಂತ ಕವಿ. ಭಾವೆ, ವಸಂತಬಾಪಟ್, ಮುಂಗೇಶ್ ಪಾಡಗಾಂವಕರ್, ವಿಂದಾ ಕರಂದೀಕರ್, ದಿಲೀಪ್ ಪುರಷೋತ್ತಮ ಚಿತ್ರೆ ಇದೇ ಹಾದಿಯಲ್ಲಿ ಮುಂದೆ ಹೆಜ್ಜೆ ಇಟ್ಟರು. ಆದರೆ ಸಂಜೀವಿನಿ, ಇಂದಿರಾ, ಪದ್ಮಾ, ನಾ, ಘಾ, ದೇಶಪಾಂಡೆ, ಮಧುಕರ ಖೇಚಿ, ರಾಜಾಬಡೇ, ಗ.ದಿ. ಮಾಡಗೂಳಕರ್, ನಾರಾಯಣ ಸರ್ವೆ, ವಸಂತ ಪಾಟಣಕರ್ ಮೊದಲಾದವರು ತಮ್ಮದೇ ಆದ ರೀತಿಯಲ್ಲಿ ಕವನಗಳನ್ನು ಬರೆದರು.
ನಾಟಕ; ಮರಾಠೀ ನಾಟಕದ ಸಮೃದ್ಧ ಮತ್ತು ವಿಸ್ತಾರ ಪರಂಪರೆಗೆ 1843ರಲ್ಲೇ ವಿಷ್ಣುದಾಸ ಭಾವೇ ಬುನಾದಿ ಹಾಕಿದರು. ಅಣ್ಣಾಸಾಹೇಬ ಕಿರ್ಲೋಸ್ಕರ(1843-85) ಸ್ವತಃ ನಾಟಕಕಾರ, ನಟ, ದಿಗ್ದರ್ಶಕ ಆಗಿದ್ದರು. ಈ ಭಾಷೆಯಲ್ಲಿ ಸಂಗೀತಾತ್ಮಕ ನಾಟಕ ಪರಂಪರೆಯನ್ನು ಇವರೇ ಪ್ರಾರಂಭಿಸಿದವರು. ಗೋ. ಬ. ದೇವಲ ಸಂಸ್ಕøತ ಮತ್ತು ಇಂಗ್ಲಿಷಿನಿಂದ ನಾಟಕಗಳನ್ನು ಅನುವಾದಿಸಿದುದೆ ಅಲ್ಲದೆ ಸಾಮಾಜಿಕ ಹಿನ್ನೆಲೆಯಲ್ಲಿ ನಾಟಕಕ್ಕೆ ಅಡಿಪಾಯವನ್ನು ಹಾಕಿಕೊಟ್ಟರು. ಕೃಷ್ಣಾಜಿ ಪ್ರಭಾಕರ ಖಾಡಿಲಕರ್, ಶ್ರೀಪಾದಕೃಷ್ಣ ಕೊಲ್ಹಟಕರ ಮತ್ತು ನರಸಿಂಹ ಚಿಂತಾಮಣಿ ಕೇಳಕರ ಅವರು ನಾಟಕದಲ್ಲಿ ಸಾಹಿತ್ಯ ಸುಧೆ ತುಂಬಿದರು. ಈ ಶತಮಾನದ ಎರಡನೆಯ ಮತ್ತು ಮೂರನೆಯ ದಶಕಗಳಲ್ಲಿ ನಾಟಕಗಳ ಪ್ರವಾಹವೇ ಹರಿಯಿತು. ರಾಮಗಣೇಶ ಗಡಕರಿಯವರ ಏಕಚ ಪ್ಯಾಲಾ ಉಲ್ಲೇಖಾರ್ಹ ನಾಟಕಗಳ ಪೈಕಿ ಒಂದು.
ಭಾರ್ಗವರಾಮ ವಿಟ್ಠಲ (ಮಾಮಾ ವರೇರಕರ್) ಮತ್ತು ಪ್ರಹ್ಲಾದ ಕೇಶವ ಅತ್ರಿ ಮರಾಠ ನಾಟಕ್ಕೆ ಹೊಸ ತಿರುವು ಕೊಟ್ಟರು. ನಾಟಕದಲ್ಲಿ ಸಾಮಾಜಿಕ ಕಳಕಳಿಯನ್ನು ತುಂಬಿ ಸಂಗೀತದ ಮೇಲುಗೈಯನ್ನು ದೂರ ಮಾಡಿದರು. ಆಡುಮಾತನ್ನು ಬಳಸಿದರು. ಮೊ.ಗ.ರಾಂಗಣೇಕರ ಎಂಬವರು ಸಮಸ್ಯಾತ್ಮಕ ನಾಟಕಗಳನ್ನು ರಚಿಸಿದರು. ಪಾಶ್ರ್ವನಾಥ ಅಳತೇಕರ ಮತ್ತು ಕೆ. ನಾರಾಯಣ ಕಾಳೆ ನಾಟಕಕ್ಕೆ ಪ್ರಯೋಗವಾದಿ ತಿರುವನ್ನು ಕೊಟ್ಟರು. ನಾಟ್ಯ ಮನ್ವಂತರ ಮತ್ತು ನಾಟ್ಯ ನಿಕೇತನದಂಥ ಸಂಸ್ಥೆಗಳು ನಾಟಕ ರಚನೆಗೆ ಸಾಕಷ್ಟು ಒತ್ತಾಸೆ ನೀಡಿದವು.
ಸ್ವಾತಂತ್ರ್ಯಾ ನಂತರ ಹವ್ಯಾಸಿ ನಾಟಕಮಂಡಳಿಗಳು ಹೆಚ್ಚಾಗಿವೆ. ಜನಪದ ರಂಗಭೂಮಿಗೂ ಹೊಸ ಹುಟ್ಟು ದೊರೆತಿದೆ. ತಮಾಶಾ ಮುಂತಾದ ನಾಟಕ ಪ್ರಕಾರಗಳಲ್ಲಿ ಹೊಸ ಚೇತನ ಮೂಡಿದೆ. ಹೊಸ ನಾಟಕಕಾರರಲ್ಲಿ ಪು.ಲ. ದೇಶಪಾಂಡೆಯವರ ಹೆಸರು ಉಲ್ಲೇಖಾರ್ಹ. ಹೊಸ ಪರಂಪರೆಯ ಪ್ರಯೋಗವಾದಿ ಹಾಗೂ ಅಸಂಗತ ನಾಟಕಕಾರಲ್ಲಿ ವಸಂತ ಕಾನೇಟಕರ, ವಿಜಯ, ತೆಂಡೂಲಕರ್, ಚಿ.ತ್ರ್ಯಂ ಖಾನೋಲಕರ್, ಪುರುಷೋತ್ತಮ ದಾರಹ್ವೇಕರ್, ಸತೀಶಆಲೇಕರ್, ಜಯವಂತ ದಳವಿ ಇವರನ್ನು ಹೆಸರಿಸಬಹುದು. ವೆಂಕಟೇಶ ವಕೀಲ. ರತ್ನಾಕರ ಮತಕರಿ ಮೊದಲಾದವರು ರೇಡಿಯೊ ಮತ್ತು ಏಕಾಂತ ನಾಟಕ ಕ್ಷೇತ್ರಗಳಲ್ಲಿ ಕೆಲಸಮಾಡಿದ್ದಾರೆ. ವಿಜಯ ತೆಂಡೂಲ್ಕರರ ರೇಡಿಯೊ ನಾಟಕಗಳು ಹೆಚ್ಚು ಜನಪ್ರಿಯವಾಗಿದೆ.
ಪ್ರಬಂಧ, ಶಾಸ್ತ್ರಸಾಹಿತ್ಯ ಇತ್ಯಾದಿ; ಚಿಪಲೂಣಕರರ ಕಾಲದಿಂದಲೇ ಪತ್ರಿಕೋದ್ಯಮ ಹಾಗೂ ಖಂಡನ-ಮಂಡನಾತ್ಮಕ ಶಾಸ್ತ್ರಿಯ ಗದ್ಯಪರಂಪರೆ ಬೆಳೆದುಬಂತು. ಈಗಾಗಲೇ ಉಲ್ಲೇಖಿಸಿರುವಂತೆ ಅಗರಕರ್, ತಿಲಕ್, ರಾಜವಾಡೆ, ಪರಾಂಜಪೆ, ಕೇಳಕರಾ ಕೊಲ್ಹಟಕರ್. ವಿ. ಸಾವರಕರ್, ಶೇಜವನಕಿರ್, ಮಾಟೆ, ನ.ರ.ಘಟಕ್ ಮೊದಲಾದವರು ರಾಜನೀತಿ. ಸಮಾಜ ಸುಧಾರಣೆ, ಇತಿಹಾಸ ಸಂಶೋಧನೆ, ಭಾಷಾವಿಜ್ಞಾನ, ವಿಮರ್ಶೆ ಮುಂತಾದ ವಿಷಯಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ವಾಟವೆ, ಜೋಗ, ಗ.ತ್ರ್ಯಂ. ದೇಶಪಾಂಡೆ, ಕಾವ್ಯಮೀಮಾಂಸೆಯ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ಕೆ. ಕ್ಷೀರಸಾಗರ, ದಿ.ಕೆ. ಬೆಡೇಕರ, ವಾ.ಲ.ಕುಲಕರ್ಣಿ ಮೊದಲಾದವರು ಖ್ಯಾತ ವಿಮರ್ಶಕರೆಸಿಕೊಂಡಿದ್ದಾರೆ.
ಫಡಕೆ, ಖಾಂಡೇಕರ, ದಾಂಡೇಕರ, ಸಂಪ, ದೋಡಕ, ಕಾಣೇಕರ ಮೊದಲಾದವರು ಪ್ರಬಂಧ. ಲಲಿತಪ್ರಬಂಧ. ವ್ಯಕ್ತಿಗತ ಪ್ರಬಂಧ ಕ್ಷೇತ್ರಗಳಲ್ಲಿ ಕಳೆದ ಆರೇಳು ದಶಕಗಳಿಂದ ಕೆಲಸ ಮಾಡಿದ್ದಾರೆ. ಹಾಸ್ಯ ಮತ್ತು ವ್ಯಂಗ್ಯ ಬರೆಹದಲ್ಲಿ ಕೃ. ಕೋಲ್ಹಟಕರ, ರಾ. ಗ. ಗಡಕರೀ ಅತ್ರೆ ಮತ್ತು ಪು. ಲ. ದೇಶಪಾಂಡೆ ಹೆಸರಾಂತ ಬರಹಗಾರರು. ತಿಲಕರ ಕೇಸರಿ. ಅತ್ರೆಯವರ ಮರಾಠಾ ಪತ್ರಿಕೆ, ಶಿ. ಮ. ಪರಾಂಜಪೆಯವರ ಕಾಳ, ಮಾಡಬೋಲಕರ್ ಅವರ ತರುಣ ಭಾರತ ಮೊದಲಾದ ಪತ್ರಿಕೆಗಳೇ ಅಲ್ಲದೆ ಅನೇಕ ದಿನಪತ್ರಿಕೆ ಮತ್ತು ವಾರಪತ್ರಿಕೆಗಳು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಜಾಗೃತಿಯನ್ನು ಉಂಟುಮಾಡುತ್ತಿವೆ.
ಭಂಡಾರಕರ್, ಕಾಣೆ, ಬೆಳವಲಕರ್, ವೇಲಣಕರ್ ಹೆಸರಾಂತ ಸಂಸ್ಕøತ ವಿದ್ವಾಂಸರು. ವಿಶ್ವಕೋಶ ರಚನಾಕಾರರಾದ ಕೇತಕರರ ಹೆಸರನ್ನು ಈಗಾಗಲೇ ಉಲ್ಲೇಖಿಸಲಾಗಿದೆ. ತರ್ಕತೀಥ ಲಕ್ಷ್ಮಣಶಾಸ್ತ್ರಿ ಜೋಶಿ ಧರ್ಮಕೋಶವನ್ನು ಸಂಪಾದಿಸಿದ್ದಾರೆ. ಗುಣೆ, ಉಪಾಧ್ಯೆ, ಕತ್ರೆ. ಕಾಲೇಲಕರ್, ಅಶೋಕ ಕೇಳ್ಕರ್, ಘಾಟಿಗ ಮುಂತಾದವರು ಪ್ರಸಿದ್ಧ ಭಾಷಾವಿಜ್ಞಾನಿಗಳು. ಚಿ.ಗ. ಖರ್ವೆ, ಯ.ರಾ.ದಾತೇ. ಅಪ್ಟೆ. ಭಿಡೆ, ಮಾ, ತ್ರ್ಯಂ, ಪಟವರ್ಧನ್, ಕಾಪಗಡೆ, ಅನಂದರಾವ್ ದಳವಿ ಜ.ವಿ. ಓಕ್. ಪ್ರ. ರಾ.ಪಂಡೆತ, ಕೃ, ಪಾ. ಕುಲಕರ್ಣಿ, ಚಾಂದೋರಕರ್, ಕರಕರೇ, ಮುಜುಮುದಾರ್, ಲಕ್ಷಣಶಾಸ್ತ್ರಿ ಜೋಶಿ-ಇವರು ಕೋಶ ಸಂಪಾದನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಗಣ್ಯರು.
(ಎಸ್.ಎಲ್.ವಿ)