ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮರ್ರೆ, ಜಾನ್ ಮಿಡ್ಲ್ಟನ್
ಜಾನ್ ಮಿಡ್ಲ್‍ಟನ್ ಮರ್ರೆ : - 1889-1957. ಇಂಗ್ಲೆಂಡಿನ ಖ್ಯಾತ ವಿಮರ್ಶಕ ಲಂಡನ್ನಿನ ಷೆಕ್‍ಹ್ಯಾಮನಲ್ಲಿ 6-8-1889ರಂದು ಜನಿಸಿದ. ಆರಂಭದ ವಿದ್ಯಾಭ್ಯಾಸ ಕ್ರೆಸ್ಟ್ ಹಾಸ್ಪಿಟಲ್‍ನಲ್ಲಿ, ಅನಂತರ ಆಕ್ಸ್‍ಫರ್ಡ್‍ನ ಬ್ರೇಸ್‍ನೋಸ್ ಕಾಲೇಜಿನಲ್ಲಿ. ಆಕ್ಸ್‍ಫರ್ಡ ನಲ್ಲಿದ್ದಾಗ ರಿದಮ್ ಪತ್ರಿಕೆಯನ್ನು ಸಂಪಾದಿಸಿದ. ವೆಸ್ಟ್‍ಮಿನ್‍ಸ್ಟರ್ ಗೆಜೆಟ್‍ನಲ್ಲಿ 1912-14ರ ತನಕ ಕಲಾವಿಮರ್ಶಕನಾಗಿ ಕೆಲಸ ಮಾಡಿದ. ಮೊದಲ ಮಹಾಯುದ್ಧದ ಸಮಯ ಕಛೇರಿಯಲ್ಲಿ ರಾಜಕೀಯದಲ್ಲಿ ಸುದ್ದಿ ವಿಭಾಗದಲ್ಲಿ ಸೇವೆ ಸಲ್ಲಿಸಿದ. ಅನಂತರ ಅಥೆನಿಯಮ್ (1919-21) ಮತ್ತು ಅಡೆಲ್ಪಿ (1923-48) ಪತ್ರಿಕೆಗಳ ಸಂಪಾದಕನಾಗಿ ನೇಮಕಗೊಂಡು ಅಲ್ಲಿ ತನ್ನ ತೀಕ್ಷ್ಣಬುದ್ಧಿಯನ್ನು ಪ್ರಕಟಿಸಿದ. 1924ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ನೇಮಕಗೂಂಡ.
1918ರಲ್ಲಿ ಕ್ಯಾಥರೀನ್ ಮ್ಯಾನ್ಸ್ ಫೀಲ್ಡ್ ಜೊತೆ ವಿವಾಹವಾದ. ಆಕೆಯಿಂದ ಮತ್ತು ಡಿ.ಎಚ್. ಲಾರೆನ್ಸ್‍ನಿಂದ ಆಳವಾಗಿ ಪ್ರಭಾವಿತನಾಗಿದ್ದ ಮರ್ರೆ ಅವರಿಬ್ಬರ ಬಗೆಗೂ ಅಧ್ಯಯನಪೂರ್ಣ ಲೇಖನಗಳನ್ನು ಬರೆದ. ಈತನ ಬರೆಹಗಳಲ್ಲಿ ನಿರಂತರವಾಗಿ ಸೂಕ್ಷ್ಮವಾಗಿ ದರ್ಶನಗೂಳ್ಳುತ್ತಿದ್ದ ಆಧ್ಯಾತ್ಮ 1923ರಲ್ಲಿ ಈತನ ಹೆಂಡತಿಯ ಮರಣದಿಂದಾಗಿ ದಟ್ಟವಾಗತೊಡಗಿತ್ತು. ಅಲ್ಡ್‍ಸ್ ಹಕ್ಸ್ಲಿಯ ಪಾಯಿಂಟ್ ಕೌಂಟರ್ ಪಾಯಿಂಟ್‍ನಲ್ಲಿ ಬಂದಿರುವ ಡೆಮ್ಸ್ ಬರ್‍ಲಾಫ್ ಪಾತ್ರ ಮರ್ರೆಯ ವ್ಯಕ್ತಿತ್ವವನ್ನೇ ಆಧರಿಸಿದ್ದು ಎಂದು ಹೇಳಲಾಗುತ್ತದೆ.
ಈತನ ಬರಹಗಳು ಬಹುತೇಕ ಸಾಹಿತ್ಯಕ ವಿಮರ್ಶೆಗಳು ಮತ್ತು ಆಗ ಅಸ್ತಿತ್ವದಲ್ಲಿದ್ದ ಸಾಮಾಜಿಕ ಸಂಪ್ರದಾಯಗಳ ವಿಶ್ಲೇಷಣೆಗಳು. ಜೀವನ ಮತ್ತು ಸಾಹಿತ್ಯಕ ಸಮಸ್ಯೆಗಳಿಗೆ ಧಾರ್ಮಿಕವಾಗಿ ಪರಿಹಾರ ಹುಡುಕುವ ಪ್ರಯತ್ನವಿರುವ " ದಿ ಎವಲ್ಯೂಷನ್ ಆಫ್ ಎನ್ ಇಂಟೆಲೆಕ್ಚುಯಲ್ " (1919). ಅಲ್ಲದೆ" ದಿ ಪ್ರಾಬ್ಲಮ್ ಆಫ್ ಸ್ಟೈಲ್ " (1922). " ಸ್ಟಡೀಸ್ ಇನ್ ಕೀಟ್ಸ್ "(1931) ಷೇಕ್ಸ್ ಪಿಯರ್ (1936) ಇವು ಇವನ ಅಸಂಖ್ಯಾತ ವಿಮರ್ಶಾಕೃತಿಗಳಲ್ಲಿ ಮುಖ್ಯವಾದುವು. ಮರ್ರೆಯ ಕೊನೆಯ ಕೃತಿಗಳು ಕ್ರಿಶ್ಚಿಯನ್ ಧರ್ಮದ ಬಗೆಗೆ ಅವನ ಬದಲಾದ ಧೋರಣೆಗಳು, ಕಮ್ಯುನಿಸಮ್ ಮತ್ತು ಶಾಂತಿವಾದಗಳನ್ನು ಒಳಗೊಂಡು ವರ್ಣಮಯವಾಗಿವೆ. ದಿ ನೆಸೆಸಿಟಿ ಆಫ್ ಕಮ್ಯುನಿಸಮ್ (1932) ಅನಂತರ ಬಂದದ್ದು ದಿ ನೆಸೆಸಿಟಿ ಆಫ್ ಪೆಸಿಫಿಸಮ್ (1937).
ಕೊನೆಯ ಮಜಲಿನಲ್ಲಿ, ವಿಮರ್ಶಾತ್ಮಕ ಜೀವನಚರಿತ್ರೆಯಾಗಿ ಜೊನ್ಯಾಥನ್ ಸ್ವಿಫ್ಟ್ (1954) ಬಂತು. ಡಿ.ಎಚ್. ಲಾರೆನ್ಸ್ ಹಾಗೊ ಅಲ್ಬರ್ಟ ಸ್ವಿಟ್ಸರ್ ಅವರನ್ನು ಕುರಿತ ಅಧ್ಯಯನವನ್ನು ಲವ್ ಫ್ರೀಡಮ್ ಅಂಡ್ ಸೊಸೈಟಿ (1957) ಎಂಬ ಹೆಸರಿನಲ್ಲಿ ಪ್ರಕಟಿಸಿದ.
ಆಸ್ಪೆಕ್ಟ್ಸ್ ಆಫ್ ಲಿಟರೇಚರ್ (1920); ದಿ ಥಿಂಗ್ ವಿ ಆರ್ (1922); ಥಿಂಗ್ಸ್ ಟು ಕಮ್ (1928); ಗಾಡ್ (1929); ದಿ ಡಿಫೆನ್ಸ್ ಆಫ್ ಡೆಮಾಕ್ರಸಿ (1939); ದಿ ಬಿಟ್ರೇಯಲ್ ಆಫ್ ಕ್ರಿಸ್ಟ್ ಬೈ ದ ಚರ್ಚಸ್ (1940); ಕ್ರಿಸ್ಟೊಕ್ರಸಿ (1942;); ಆಡಮ್ ಅಂಡ್ ಈವ್ (1944); ಕಂಟ್ರೀಸ್ ಆಫ್ ದಿ ಮೈಂಡ್ (1922, 1931); ಸ್ಟಡೀಸ್ ಆಫ್ ಬ್ಲೇಕ್ (1933); -ಇವು ಈತನ ಅನೇಕ ವಿಮರ್ಶಾಕೃತಿಗಳಲ್ಲಿ ಕೆಲವು. 1919ರಲ್ಲಿ ಈತನ ಸಂಕಲನವೊಂದು ಪ್ರಕಟವಾಗಿದೆ. ಬಿಟ್‍ವೀನ್ ಟೂ ವಲ್ಡ್ರ್ಸ (1934) ಈತನ ಆತ್ಮಚರಿತ್ರೆ. ಟು ದಿ ಅನ್‍ನೋನ್ ಗಾಡ್ (1924); ಮತ್ತು ದಿ ಲೈಫ್ ಆಫ್ ಜೀಸಸ್ (1922) ಸೇರಿದಂತೆ ಅನೇಕ ಧಾರ್ಮಿಕ ಗ್ರಂಥಗಳನ್ನೂ ರಚಿಸಿದ್ದಾನೆ.
ಮರ್ರೆ 31 ಮಾರ್ಚ್ 1957ರಲ್ಲಿ ನಿಧನನಾದ. (ಬಿ.ಎಸ್.ಪಿ.ಎಚ್.)