ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಲ್ಲಿಕಾರ್ಜುನ ಮನಸೂರ

ವಿಕಿಸೋರ್ಸ್ದಿಂದ
ಮಲ್ಲಿಕಾರ್ಜುನ ಮನಸೂರ

1911, ಶ್ರೇಷ್ಠ ಹಿಂದೂಸ್ಥಾನಿ ಗಾಯಕ. ಜಯಪುರ ಘರಾಣಾದ ಅತ್ಯಂತ ಪ್ರತಿಭಾನ್ವಿತ ಕಲಾವಿದ. ಧಾರವಾಡದಿಂದ ಸುಮಾರು 8 ಕಿ.ಮೀ ದೂರವಿರುವ ಮನಸೂರ ಗ್ರಾಮದಲ್ಲಿ 1911 ಡಿಸೆಂಬರ 31 ರಂದು ಜನನ. ತಂದೆ ಭೀಮರಾಯಪ್ಪ, ತಾಯಿ ನೀಲಮ್ಮ. ಭೀಮರಾಯಪ್ಪನವರು ಮನಸೂರ ಗ್ರಾಮದ ಗೌಡರಾಗಿದ್ದು ಸಂಗೀತದಲ್ಲಿ ವಿಶೇಷ ಆಸ್ಥೆಯುಳ್ಳವರಾಗಿದ್ದರು. ಜನಸಾಮಾನ್ಯರಿಗೆ ಅಂದು ಸಂಗೀತಾಭ್ಯಾಸಕ್ಕೆ ಅವಕಾಶವಿರದಿದ್ದರೂ ಮಲ್ಲಿಕಾರ್ಜುನರಿಗೆ ಅದು ಲಭಿಸಿತ್ತು. ಆಗಿನ ಕಾಲಕ್ಕೆ ಕರ್ನಾಟಕ ಸಂಗೀತದಲ್ಲಿ ವಿದ್ವತ್ತು ಪಡೆದಿದ್ದ ವಿಜಾಪುರ ಜಿಲ್ಲೆಯ ರಬಕವಿ ಗ್ರಾಮದ ಅಪ್ಪಯ್ಯಸ್ವಾಮಿಗಳಿಂದ ಮೊದಲ ಪಾಠ. ನಿಸರ್ಗ ದತ್ತ ಸುಶ್ರಾವ್ಯ ಕಂಠದಿಂದ ಹೊರಡುತ್ತಿದ್ದ ಈತನ ಸಂಗೀತ ಮೆಚ್ಚಿದ ಕನ್ನಡ ನಾಟಕ ಕಂಪೆನಿಯ ವಾಮನರಾವ ಮಾಸ್ತರರ ವಿಶ್ವಗುಣಾದರ್ಶ ಮಂಡಳಿಯಲ್ಲಿ ಈತನಿಗೆ ಸುಲಭ ಪ್ರವೇಶ ದೊರೆಯಿತು. ಭಕ್ತಪ್ರಹ್ಲಾದ ಧ್ರುವ ಇತ್ಯಾದಿ ನಾಟಕಗಳಲ್ಲಿ ಪ್ರಮುಖ ಪಾತ್ರ ದೊರೆಯುತ್ತಿತ್ತು. ಈ ವಿಷಯ ಮಿರಜ ಗ್ರಾಮದ ನೀಲಕಂಠಬುವಾ ಆಲೂರಮಠರ ಲಕ್ಷಕ್ಕೆ ಬಂದಾಗ ಅವರು ಇವನ ಸಂಗೀತದ ಭವ್ಯ ಭವಿಷ್ಯತ್ತಿಗೆ ನಾಂದಿ ಹಾಕಲು ತಮ್ಮ ಶಿಷ್ಯನಾಗಿ ಮಾಡಿಕೊಂಡು ನಾಟಕ ಕಂಪನಿಯಿಂದ ಬಿಡುಗಡೆ ಮಾಡಿಸಿದರು. ಹುಬ್ಬಳ್ಳಿಯ ಜಗದ್ಗುರು ಸಿದ್ಧಾರೂಢ ಮಹಾಸ್ವಾಮಿಗಳ ಎದುರಿಗೆ ಈತ ಹಾಡಿದಾಗ ಆನಂದಭರಿತರಾದ ಶ್ರೀಗಳು ಇವನಿಗೆ ಹಾರ್ದಿಕಾಶೀರ್ವಾದ ಮಾಡಿದರಲ್ಲದೆ ಆಲೂರಮಠರ ಗುರುತ್ವಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನೂ ನೀಡಿದರು. ಹನ್ನೊಂದು ವರ್ಷದ ಮಲ್ಲಿಕಾರ್ಜುನನಿಗೆ ಸ್ವರ, ಅಲಂಕಾರ, ಲಯ ಇತ್ಯಾದಿಗಳ ಸಂಪೂರ್ಣ ಪ್ರಭುತ್ವ ಸಿದ್ಧಿಸಿದ ಮೇಲೆಯೇ ಚೀಜುಗಳನ್ನು (ಕೃತಿಗಳು) ಹಾಡಿಸುವ ಪರಿಪಾಠ ಗುರುಗಳದು. ಬಾಲಕ ಮಲ್ಲಿಕಾರ್ಜುನ ಬೆಳಗಿನಜಾವ ನಾಲ್ಕು ಗಂಟೆಗೆ ಎದ್ದು ತಂಬೂರಿ ಶ್ರುತಿಗೆ ಸ್ವರ ಹೊಂದಿಸಿಕೊಂಡು ಗಂಟೆಗಟ್ಟಳೆ ರಿಯಾಝು ಮಾಡಿ ಸ್ಥಿರ ಖರಜವನ್ನು ಆತ್ಮಸಾತ್ ಮಾಡಿಕೊಳ್ಳುತ್ತಿದ್ದ. ಪಂಡಿತ ಮನಸೂರರ ಅಭಿಪ್ರಾಯದಂತೆ `ತಂಬೂರಿ ಸಂಗೀತ ಕಥನ ಬೋಧಿವೃಕ್ಷ. ಅದರಡಿಯಲ್ಲಿ ಕುಳಿತು ಧ್ಯಾನ ಮಾಡದೇ ಸ್ವರ ಸಾಕ್ಷಾತ್ಕಾರ ಅಸಂಭವ. `ಸಾ`ದ ಧ್ಯಾನವೇ ಸಾಧನೆ.` ನೀಲಕಂಠಬುವಾರ ಮಾರ್ಗದರ್ಶನದಲ್ಲಿ ಮಲ್ಲಿಕಾರ್ಜುನರು ಅನೇಕ ರಾಗಗಳನ್ನು -ಭೂಪ, ಮಾಲಕಂಸ, ಬಿಹಾರ, ತೋಡಿ, ಹಮೀರ, ಕಾಮೋದ, ಅಲೈಯಾ, ಬಿಲಾವಲ್ ಇತ್ಯಾದಿಗಳನ್ನು ಅಭ್ಯಸಿಸಿದರು.

ಮಿರಜ ಮತ್ತು ಸಾಂಗಲಿ ಗ್ರಾಮಗಳಲ್ಲಿ ಕೇಳಿದ ಸಂಗೀತ ಸಿಂಹರುಗಳಾದ ಕಿರಾನಾಘರಾಣಾದ ಅಬ್ದುಲ್ ಕರೀಮಖಾನ ಸಾಹೇಬ ಮತ್ತು ಜೈಪುರಅತ್ರೌಲಿ ಘರಾಣಾದ ಅಲ್ಲಾದಿಯಾಖಾನ ಸಾಹೇಬರ ಅಮೋಘ ಸಂಗೀತ ಮನಸೂರರ ಮೇಲೆ ಪ್ರಭಾವ ಬೀರಿದವು.

ಮಲ್ಲಿಕಾರ್ಜುನರಿಗೆ ಯೌವನಕಾಲ ಪ್ರವೇಶದಲ್ಲಿ ನಿಸರ್ಗತಃ ಸಂಭವಿಸಿದ ಬದಲಾವಣೆಗಳಿಂದ ಒಡೆದ ಶಾರೀರಕ್ಕೆ ಸ್ಥೈರ್ಯತರುವ ದೃಷ್ಟಿಯಿಂದ ಇರುಳು 10 ಗಂಟೆಯಿಂದ ಮುಂಜಾನೆ 6 ಗಂಟೆ ತನಕ ರಿಯಾಝು ಮಾಡದೇ ಗತ್ಯಂತರ ಇರಲಿಲ್ಲ. ತತ್ಪರಿಣಾಮವಾಗಿ ಯುವಕನ ಧ್ವನಿಗೆ ಒಂದು ತರಹದ ಮೆರಗು ಆಕರ್ಷಣೆ, ಸ್ಥೈರ್ಯ ಒದಗಿ ಅವರು ಹಾಡಿದ ಎಲ್ಲ ರಾಗಗಳಿಗೂ ವಿಶೇಷ ಮಾದಕತೆ ಲಭಿಸಿತು. ಇದೇ ವೇಳೆ ಈರಾಶಿ ಭರಮಪ್ಪ ಕಂಚಿನ ಕಂಠದ ಈ ಹದಿಹರೆಯದ ಮಲ್ಲಿಕಾರ್ಜುನನನ್ನು ತಮ್ಮ ವಾಣೀ ವಿಲಾಸ ನಾಟಕ ಮಂಡಳಿಯಲ್ಲಿ ಸೇರ್ಪಡೆ ಮಾಡಿಕೊಂಡರು. ಆಗ ಮಲ್ಲಿಕಾರ್ಜುನರ ಜೊತೆಗೆ ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಪ್ರಮುಖರೆಂದರೆ ಬಸವರಾಜ ಮನಸೂರ (ಮಲ್ಲಿಕಾರ್ಜುನರ ಅಣ್ಣ) ಮತ್ತು ಗಾಯನ ಕೋಕಿಲ ಗೋಹರಬಾಯಿ ಕರ್ನಾಟಕೀ. ಮುಂದೇ ಕೆಲವೇ ವರ್ಷಗಳಲ್ಲಿ ಈ ನಾಟಕ ಕಂಪನಿ ಆರ್ಥಿಕ ಮುಗ್ಗಟ್ಟಿಗೆ ಸಿಕ್ಕಿ ಮುಚ್ಚಿಹೋದಾಗ ಮಲ್ಲಿಕಾರ್ಜುನ ಮನಸೂರರು ನಾಟಕರಂಗಕ್ಕೆ ಕೊನೆಯ ವಿದಾಯ ಹೇಳಿ ಶಾಸ್ತ್ರೀಯ ಸಂಗೀತಕ್ಕೆ ತಮ್ಮನ್ನು ಮುಡಿಪಾಗಿಸಿಕೊಂಡು ಧಾರವಾಡಕ್ಕೆ ಮರಳಿದರು.

ಆಗ ಧಾರವಾಡದಲ್ಲಿ ಹಿಂದೂಸ್ಥಾನೀ ಸಂಗೀತದ ಉತ್ಕರ್ಷ ಕಾಲ. ಗ್ವಾಲ್ಲಿಯರ್ ಘರಾಣೆಯ ಸುಪ್ರಸಿದ್ದ ಗಾಯಕ ಪಂಡಿತ ಭಾಸ್ಕರಬುವಾ ಬಖಲೆ ಸ್ಥಳೀಯ ಟ್ರೇನಿಂಗ್ ಕಾಲೇಜಿನಲ್ಲಿ ಹಿಂದುಸ್ಥಾನೀ ಸಂಗೀತ ಕಲಿಸುತ್ತಿದ್ದರು. ಅವರ ಜೊತೆಗೆ ಅವರ ಗುರುಗಳಾದ ಉಸ್ತಾದ ಅಬ್ದುಲ್ ನತ್ಥನ್‍ಖಾನ್ ಸಾಹೇಬರೂ ಧಾರವಾಡದ ಜನತೆಗೆ ಆಗಾಗ್ಗೆ ತಮ್ಮ ಸಂಗೀತದ ಔತಣ ಉಣಬಡಿಸುತ್ತಿದ್ದರು. ಇದಲ್ಲದೆ ಕಿರಾನಾ ಘರಾಣಾದ ಉಸ್ತಾದ್ ಅಬ್ದುಲ್ ಕರೀಮಖಾನರೂ ಪ್ರಸಿದ್ಧ ಭೀನಕಾರ್ (ವೈಣಿಕ) ಮುಠಾಖಾನ ಸಾಹೇಬರೂ ಆಗ್ರಾ ಘರಾಣಾದ ಫೈಯಾಜಖಾನರೂ ಧಾರವಾಡದಲ್ಲಿ ಮೇಲಿಂದ ಮೇಲೆ ಸಂಗೀತಕಛೇರಿಗಳನ್ನು ನಡೆಸಿಕೊಟ್ಟು ಜನರಲ್ಲಿ ಅಭಿಜಾತ ಸಂಗೀತದ ರುಚಿಯನ್ನು ಬೇರೂರಿಸಿದ್ದರು. ಯುವಕ ಮಲ್ಲಿಕಾರ್ಜುನರ ಮನಸ್ಸಿನಲ್ಲಿ ಈ ವಿವಿಧ ಸ್ವರ ಸಂಪರ್ಕಗಳು ಅದ್ವಿತೀಯ ಅಭಿರುಚಿಯನ್ನು ಪ್ರೇರಿಸಿ ಅವರನ್ನು ಶಾಸ್ತ್ರೀಯ ಸಂಗೀತದ ಕಡೆಗೆ ಸಂಪೂರ್ಣ ಸೆಳೆದುಕೊಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಹೀಗೆ ಬೇರೆ ಬೇರೆ ಘರಾಣೆಗಳ ಸಂಗೀತ ಸಾರವನ್ನು ಗ್ರಹಿಸಿದ ಮಲ್ಲಿಕಾರ್ಜುನರ ಸಂಗೀತ ಕಛೇರಿಗಳು ಅತ್ಯಂತ ಜನಪ್ರಿಯವಾಗತೊಡಗಿದವು. ಇದೇ ವೇಳೆ ಗದುಗಿನಲ್ಲಿ ವಿರಾಟ ಸಂಗೀತ ಸಭೆಯೊಂದರಲ್ಲಿ ನಡೆದ ಇವರ ಯಶಸ್ವಿ ಸಂಗೀತ ಕಾರ್ಯಕ್ರಮಕ್ಕೆ ಮನಸೋತು ಅಲ್ಲಿಯ ನಾಗರಿಕರು ಇಪ್ಪತ್ತರ ಹರೆಯದ ಮಲ್ಲಿಕಾರ್ಜುನರಿಗೆ ಸಂಗೀತರತ್ನ ಎಂಬ ಬಿರುದುಕೊಟ್ಟು ಸನ್ಮಾನಿಸಿದರು.

1933ರಲ್ಲಿ ಮಲ್ಲಿಕಾರ್ಜುನರು ಹಿಸ್ ಮಾಸ್ಟರ್ಸ ವಾಯ್ಸ ಗ್ರಾಮೊಫೋನ್ ಕಂಪನಿಯಲ್ಲಿ ಗಾನಮುದ್ರಿಕೆಗಳನ್ನು ಕೊಡಲು ಆರಂಭಿಸಿದರು. ಅವರು ಹಾಡಿದ ರಾಗಗಳಾದ ಗೌಡಮಲ್ಹಾರ, ಅಡಾಣಾ, ಕಂಕಣ, ಮಾಲಕಂಸ, ಗೌರಿ, ತೋಡಿ ಮುಂತಾದ ಮುದ್ರಿಕೆಗಳು ಅಧಿಕ ಜನಪ್ರಿಯತೆ ಗಳಿಸಿದವು.

ಈ ಸುಮಾರಿಗೆ ಇವರಿಗೆ ಮುಂಬಯಿನಲ್ಲಿ ಜೈಪುರ ಘರಾಣೆಯ ಉಸ್ತಾದ್ ಅಲ್ಲಾದಿಯಾಖಾನರ ಪುತ್ರ ಉಸ್ತಾದ್ ಮಂಜೀಖಾನ್ ಸಾಹೇಬರ ಪರಿಚಯವಾಯಿತು. ಆ ಹಿರಿಯರು ಇವರನ್ನು ಶಿಷ್ಯರಾಗಿ ಅಂಗೀಕರಿಸಿದರು. (1935). ಮಲ್ಲಿಕಾರ್ಜುನರ ಸ್ವರಸೌಷ್ಠವ, ಲಯಕಾರಿ ಮತ್ತು ಅವರಲ್ಲಿಯ ಸುಪ್ತ ಸಂಗೀತ ಶಕ್ತಿಯನ್ನು ಗುರುತಿಸಿದ ಮಂಜೀಖಾನರು ಇವರಿಗೆ ಜೈಪುರ ಘರಾಣೆಯ ವೈಶಿಷ್ಟ್ಯಪೂರ್ಣ ಸ್ವರಲಯ ವಿನ್ಯಾಸಗಳನ್ನು ಪರಿಚಯಿಸಿಕೊಟ್ಟರು. ಎರಡು ವರ್ಷಗಳ ಈ ಅವಧಿಯಲ್ಲಿ ಉಸ್ತಾದರು ಇವರಿಗೆ ಅಸಾವರೀ, ತೋಡಿ, ಭೈರವ ಶಿವಮತಭೈರವ, ದೇಸಕಾರ, ಗೌಡಸಾರಂಗ, ನಂದ, ಬಿಹಾಗಡಾ, ಪುರಿಯಾ, ಮಾಲಕಂಸ, ಸಾವನೀ, ಜಯಂತಕಲ್ಯಾಣ ಇತ್ಯಾದಿ ಪ್ರಮುಖ ರಾಗಗಳಲ್ಲಿ ಬಡಾಖ್ಯಾಲ ಛೋಟಾಖ್ಯಾಲಗಳನ್ನು ಪಾಠಮಾಡಿದರು. 1935-37ರ ಅವಧಿಯಲ್ಲಿ ದೊರೆತ ಸಂಗೀತ ಸಂಸ್ಕಾರ ಮುಂದಿನ ಹನ್ನೆರಡು ವರ್ಷಪರ್ಯಂತ ಮನಸೂರರ ಮನದಲ್ಲಿ ಮಾರ್ದನಿಗೈಯುತ್ತಿತ್ತು.

1937ರಲ್ಲಿ ಮಂಜೀಖಾನರ ಅಕಾಲ ಮರಣದ ಬಳಿಕ ಇನ್ನೂ ಶೇಷವಾಗಿ ಉಳಿದಿದ್ದ ಜೈಪುರ ಘರಾಣೆಯ ಗಾಯನ ಶೈಲಿಯನ್ನು ಪೂರ್ತಿಗೊಳಿಸಲು ಮನಸೂರರು ಉಸ್ತಾದರ ತಮ್ಮಂದಿರಾದ ಬುರ್ಜೀಖಾನ ಸಾಹೇಬರ ಶಿಷ್ಯರಾಗಿ ತಮ್ಮ ಸಂಗೀತ ಸಾಧನೆಯನ್ನು ಕೊಲ್ಲಾಪುರ ಪಟ್ಟಣದಲ್ಲಿ 1950ರ ತನಕ ಮುಂದುವರೆಸಿದರು. ಮನಸೂರರ ಮನಸೂರೆಗೊಳ್ಳುವ ಕಂಠ, ಶ್ರುತಿಶುದ್ಧತೆಯಿಂದ ಹಾಡುವ ರಾಗವಿಸ್ತಾರಗಳನ್ನು ಗುರುತಿಸಿದ ಬುರ್ಜೀಖಾನರು ಇವರಿಗೆ ಖೋಕರ, ಬಸಂತಿ ಕಾನಡಾ, ಬಸಂತಿ ಕೇದಾರ, ಬಿಹಾರೀ, ಶುದ್ಧ ನಟ ಇತ್ಯಾದಿ ಜೈಪುರ ಘರಾಣೆಯ ವೈಶಿಷ್ಟ್ಯಪೂರ್ಣ ರಾಗಗಳನ್ನು ಹೇಳಿಕೊಟ್ಟರು.

1960-69ರ ಅವಧಿಯಲ್ಲಿ ಮನಸೂರರು ಆಕಾಶವಾಣಿಯ ಸಂಗೀತ ಸಲಹಾಗಾರರಾಗಿ ಕೆಲಸಮಾಡಿದ್ದಲ್ಲದೆ ಆಕಾಶವಾಣಿಯ ಸಂಗ್ರಹಕ್ಕಾಗಿ ಹಾಗೂ ಮುಂದಿನ ಪೀಳಿಗೆಯ ಸಂಗೀತಾಭ್ಯಾಸಿಗಳಿಗಾಗಿ ಎಷ್ಟೋ ಅಪ್ರಚಲಿತ ರಾಗಗಳನ್ನು ಹಾಡಿ ನೂರಾರು ಗಂಟೆಗಳ ಧ್ವನಿಮುದ್ರಣವನ್ನು ನಿಃಶುಲ್ಕವಾಗಿ ಮಾಡಿಕೊಟ್ಟಿದ್ದಾರೆ. ಮನಸೂರರ ಸಂಗೀತ ಪ್ರತಿಭೆಯನ್ನು ಮೆಚ್ಚಿ ಕೇಂದ್ರ ಸರ್ಕಾರ 1970ರಲ್ಲಿ ಪದ್ಮಶ್ರೀ ಬಿರುದು ಕೊಟ್ಟಿದೆ. ಇದಕ್ಕೂ ಮುಂಚೆ 1962ರಲ್ಲಿ ಕರ್ನಾಟಕ ರಾಜ್ಯ ಅಕಾಡೆಮಿಯಿಂದ ಪ್ರಶಸ್ತಿ ಪಡೆದಿದ್ದರು. 1968ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಾರ್ವಜನಿಕ ಸೇವಾ ಪ್ರಶಸ್ತಿ ದೊರೆತಿದೆ. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮನಸೂರರ ಗೌರವಾರ್ಥ ಸಂಗೀತರತ್ನ ಎಂಬ ಅಭಿನಂದನ ಗ್ರಂಥವನ್ನು ಪ್ರಕಟಿಸಿರುವುದಲ್ಲದೆ ಇವರಿಗೆ ಡಿ. ಲಿಟ್. ಪದವಿಯನ್ನು ಕೊಟ್ಟು ಗೌರವಿಸಿದೆ. 1976ರಲ್ಲಿ ರಾಷ್ಟ್ರಪತಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಇವರ ಸಂಗೀತ ಸೇವೆಯನ್ನು ಪ್ರಶಂಸಿಸಿದ್ದಾರೆ. ಇವೆಲ್ಲ ಪ್ರಶಸ್ತಿ ಪುರಸ್ಕಾರಗಳಿಗೆ ಶಿಖರವಿಟ್ಟಂತೆ ಮನಸೂರರ ಸಂಗೀತ ಕ್ಷೇತ್ರದಲ್ಲಿಯ ದೀರ್ಘಸಾಧನೆ, ಅನನ್ಯ ಸೃಜನಾತ್ಮಕತೆ ಹಾಗೂ ಸಂಗೀತದಲ್ಲಿಯ ಉತ್ಕøಷ್ಟತೆಗಾಗಿ ಮಧ್ಯಪ್ರದೇಶ ಸರ್ಕಾರ 1981ರಲ್ಲಿ ಕಾಲಿದಾಸ ಪ್ರಶಸ್ತಿಯನ್ನು ಸಲ್ಲಿಸಿ ಅವರ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದೆ. ಕಲ್ಬುರ್ಗಿ ವಿಶ್ವವಿದ್ಯಾಲಯ 1985ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನಿಸಿದೆ. (ಎಸ್.ಬಿ.ಎಚ್.ಯು.)