ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಹದೇಶ್ವರ ಬೆಟ್ಟ

ವಿಕಿಸೋರ್ಸ್ದಿಂದ

ಮಹದೇಶ್ವರ ಬೆಟ್ಟ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿರುವ ಒಂದು ಬೆಟ್ಟ ಹಾಗೂ ಪ್ರಸಿದ್ಧ ಯಾತ್ರಾಸ್ಥಳ ಕೊಳ್ಳೇಗಾಲದ ಪೂರ್ವಕ್ಕೆ ಸುಮಾರು 80 ಕಿಮೀ ದೂರದಲ್ಲಿದೆ. ಈ ಬೆಟ್ಟವನ್ನು ಮಹದೇಶ್ವರ ಗಿರಿ. ಮಹದೇಶ್ವರ ಬೆಟ್ಟ ಎಂದೂ ಕರೆಯುತ್ತಾರೆ. ಬೆಟ್ಟ ಹತ್ತಲು ಸರ್ಪನದಾರಿ. ಬಸವನದಾರಿ ಎಂಬ ಎರಡು ದಾರಿಗಳಿವೆ. ಸರ್ಪನದಾರಿ, ಬಸವನದಾರಿ ಸುಗಮ. ಬೆಟ್ಟದ ಮೇಲೆ ದೇವಸ್ಥಾನದವರೆಗೂ ಬಸ್ಸು ಕಾರುಗಳು ಹೋಗಲು ಅವಕಾಶವಿದೆ. ಸ್ಥಳ ಪುರಾಣದ ಪ್ರಕಾರ ಈ ಬೆಟ್ಟಕ್ಕೆ ಸೇರಿದಂತೆ ಆನೆಮಲೆ, ಜೇನುಮಲೆ, ಕಾನುಮಲೆ, ಪಷ್ಷೆಮಲೆ, ಪವಳಮಲೆ, ಪೊನ್ನಾಚಿಮಲೆ, ಕೊಂಗುಮಲೆ ಮೊದಲಾಗಿ 77 ಮಲೆಗಳಿವೆ. ಮಹದೇಶ್ವರ ಬೆಟ್ಟ, ಪೊನ್ನಾಚಿ ಬೆಟ್ಟ ಮೊದಲಾದ ಬೆಟ್ಟಗಳಲ್ಲಿ ಗಂಧದ ಮರಗಳು ಬೆಳೆದಿವೆ.

ಮಾದೇಶ್ವರ ಬಹುಶಃ ಐತಿಹಾಸಿಕ ವ್ಯಕ್ತಿ. ಇವರನ್ನು ಕುರಿತ ಕೆಲವು ಸಮಗ್ರ ಚರಿತ್ರೆಯನ್ನು ಹೇಳುವ ಜನಪದ ಕಾವ್ಯಮೊಂದು ಮೌಖಿಕ ಸಂಪ್ರದಾಯದಲ್ಲಿ ಉಳಿದು ಬಂದಿದೆ. ಜನಪದ ಕಾವ್ಯವೊಂದನ್ನು ಹೊರತು ಉಳಿದ ಆಧಾರಗಳೆಲ್ಲ ಇನ್ನೂರು ಮುನ್ನೂರು ಈಚಿನವು.

ಮಾದೇಶ್ವರರನ್ನು ಕುರಿತ ವಿವರಗಳಿಗೆ ಸಂಬಂಧಿಸಿದಂತೆ ಇತರ ಆಧಾರಗಳಿಗಿಂತ ಜನಪದ ಕಾವ್ಯ ಹೆಚ್ಚು ಮಾಹಿತಿಗಳನ್ನು ಒದಗಿಸುತ್ತದೆ. ಈ ಜನಪದ ಕಾವ್ಯವನ್ನು ಪರಂಪರಾಗತವಾಗಿ ಹಾಡಿಕÉೂಂಡು ಬಂದವರು ಮಾದೇಶ್ವರ ಸಂಪ್ರದಾಯಕ್ಕೆ ಸೇರಿದ ದೇವರಗುಡ್ಡರು (ನೋಡಿ) ಎಂಬ ಒಂದು ವರ್ಗದ ಧಾರ್ಮಿಕ ವೃತ್ತಿ ಗಾಯಕರು. ಸದ್ಯಕ್ಕೆ ಅವರು ಹಾಡಿರುವ ಜನಪದ ಕಾವ್ಯದ ಪ್ರಕಾರ ಮಾದೇಶ್ವರರಿಗೆ ಸಂಬಂಧಿಸಿದ ಕೆಲವು ಪ್ರಮುಖ ಘಟನೆಗಳನ್ನು ಹೀಗೆ ಪಟ್ಟಿ ಮಾಡಬಹುದು :

ಬೇವಿನ ಕೊಲ್ಲಿಯಲ್ಲಿ ಮಾದೇಶ್ವರರು ಕಾಣಿಸಿಕೊಂಡು ಹಾಲುಮತಸ್ಥ ಹಲಗೇಗೌಡ ಮಹಾದೇವಮ್ಮ ದಂಪತಿಗಳನ್ನು ಹರಸಿದ್ದು, ಮೂಲಂಗಿಯ ಬಳಿಯಲ್ಲಿ ಮಕ್ಕಳಾಟಿಕೆ ಮಾರಯ್ಯನಾದುದು: ಉತ್ತರ ದೇಶಕ್ಕೆ ಹೋಗಿ ಚಂದ್ರಶೇಖರಮೂರ್ತಿ ಮತ್ತು ಉತ್ತರಾಜಮ್ಮ ಎಂಬ ತಂದೆತಾಯಿಯರನ್ನು ಪಡೆದು ಬಂದದ್ದು. ದÀಕ್ಷಿಣಾಭಿಮುಖವಾಗಿ ಹೊರಟು ಸುತ್ತೂರು, ಕುಂತೂರು ಮಠಗಳಲ್ಲಿ ಪವಾಡಗಳನ್ನೆಸಗಿ ಏಳುಮಲೆಗಳ ನಡುವೆ ನೆಲಸಿದ್ದು.

ದೇವತೆಗಳನ್ನೆಲ್ಲ ಸೆರೆಯಲ್ಲಿಟ್ಟು ಸೊಕ್ಕಿನಿಂದ ಮೆರೆಯುತ್ತಿದ್ದ ಶ್ರವಣನನ್ನು ನರÀಚಮ್ಮಾವುಗೆಯ ಪ್ರಸಂಗದಲ್ಲಿ ಕೊಂದು ದೇವತೆಗಳ ಸೆರೆ ಬಿಡಿಸಿದ್ದು.

ಆಲಂಬಾಡಿಯ ಹಾಲುಮತಸ್ಥ ಕುರುಬಗೌಡ ಪಾಳೇಗಾರ ಜುಂಜೇಗೌಡನನ್ನು ತನ್ನ ಪವಾಡಗಳಿಂದ ಗೆದ್ದು ಭಕ್ತನಾಗಿ ಮಾಡಿಕೊಂಡು ಮಾದೇಶ್ವರ ಕ್ಷೇತ್ರದಲ್ಲಿ ತನಗೆ ಬೇಕಾದ ಗುಡಿಗೋಪುರಗಳನ್ನು ಕಟ್ಟಿಸಿದ್ದ.

ಪೂರ್ವಘಟ್ಟಗಳ ಶ್ರೇಣಿಯಲ್ಲಿ ವಾಸವಾಗಿರುವ ಆದಿವಾಸಿ ಜನರ ಕಾಡುಕುರುಬರ ಶಂಕಮ್ಮನಿಗೆ ಒಲಿದು ಅವಳ ಗಂಡ ನೀಲೇಗೌಡ ಒಡ್ಡದ ಕಷ್ಟಗಳಿಂದ ಬಿಡುಗಡೆಯನ್ನು ದೊರಕಿಸಿದ್ದು, ಅವಳಿಗೆ ಕಾರಯ್ಯ ಮತ್ತು ಬಿಲ್ಲಯ್ಯ ಎಂಬ ಮಕ್ಕಳನ್ನು ನೀಡಿತನ್ನ ಶಿಷ್ಯರಾಗಿ ಮಾಡಿಕÉೂಂಡದ್ದು.

ಎಲ್ಲರಿಗೂ ವಿಷದ ಕಜ್ಜಾಯವಿಕ್ಕಿ ಕೊಲ್ಲುತ್ತಿದ್ದ ಇಕ್ಕೇರಿ ದೇವಮ್ಮ ಎಂಬವಳ ಮನೆಗೆ ಹೋಗಿ, ವಿಷದ ಕಜ್ಜಾಯದಿಂದ ಅವಳ ಮಗನನ್ನೇ ಕೊಂದು ಅವಳಿಗೆ ಬುದ್ಧಿ ಕಲಿಸಿದ್ದು.

ತನ್ನ ವರದಿಂದಲೇ ಸಿರಿಸಂಪತ್ತನ್ನು ಪಡೆದು ಕೃಪಣಳಾಗಿ, ದರ್ಪ, ಅಟ್ಟ ಹಾಸದಿಂದ ಮೆರೆಯುತ್ತಿದ್ದ ಬೇವಿನ ಕಾಳಿ ಎಂಬವಳನ್ನು ಪರೀಕ್ಷಿಸಿ ಅವಳ ಐಶ್ವರ್ಯವನ್ನೆಲ್ಲ ಮಣ್ಣುಗೂಡಿಸಿದ್ದು.

ಸರಗೂರಿನ ರಾಮವ್ವೆಯ ಮಗ ಮೂಗಪ್ಪ ಎಂಬವನನ್ನು ತನ್ನ ಪವಾಡಗಳಿಂದ ಗೆದ್ದು ತನ್ನ ಎಣ್ಣೆ ಮಜ್ಜನದ ಸೇವೆಗೆ ಶಿಷ್ಯನಾಗಿ ಮಾಡಿಕೊಂಡದ್ದು.

ಏಳುಮಲೆ ಮಾದೇಶ್ವರರ ಕಾರ್ಯದಲ್ಲಿ ಹೀಗೆ ಏಳು ಕವಲುಗಳು ಕಂಡು ಬರುತ್ತವೆ. ಬೇಎಡರ ಕಣ್ಣಪ್ಪ ಮುಂತಾದ ಸಣ್ಣಪುಟ್ಟ ಪ್ರಸಂಗಗಳೂ ಈ ಕಾವ್ಯದಲ್ಲಿ ಅಲ್ಲಲ್ಲಿ ಬಂದರೂ ಮುಖ್ಯ ಭಾಗಗಳು ಈ ಏಳು ಮಾತ್ರ. ಇಲ್ಲಿ ಬೇವಿನ ಕೊಲ್ಲಿ, ಸುತ್ತೂರು, ಕುಂತೂತು ಮುಂತಾದ ಕ್ಷೇತ್ರಗಳ ಪ್ರಸ್ತಾಪ ಬರುತ್ತದೆ. ಹಲಗೇಗೌಡ , ಜುಂಜೇಗೌಡ, ಶ್ರವಣದೊರೆ, ಸರಗೂರು ಮೂಗಪ್ಪ, ಬೇವಿನ ಕಾಳೀ, ಶಂಕಮ್ಮ, ಕಾರಯ್ಯ, ಬಿಲ್ಲಯ್ಯ, ಬೇಡರ ಕಣ್ಣಪ್ಪ, ಇಕ್ಕೇರಿ ದೇವಮ್ಮ ಮುಂತಾದವರ ಪ್ರಸ್ತಾಪ ಬರುತ್ತದೆ. ಮಾದೇಶ್ವರರು ಏಳುಮಲೆಗಳ ದಿಕ್ಕಿನಲ್ಲಿ ಹೊರಟಾಗ, ಅನಂತರ ಏಳುಮಲೆಗಳ ಸಾಲಿನಲ್ಲಿ ತಾವು ನೆಲಸಿ, ಆ ಭಾಗದಲ್ಲೆಲ್ಲ ಸಂಚರಿಸುವಾಗ ಎಸಗಿದ ಪ್ರಮುಖ ಕಾರ್ಯಗಳ ಪ್ರಸ್ತಾಪ ಮಾತ್ರ ಈ ಕಾವ್ಯದ ಒಂದೊಂದು ಭಾಗದಲ್ಲಿ ಉಳಿದುಬಂದಂತೆ ತೋರುತ್ತದೆ.

ಮಲೆಯ ಮಾದೇಶ್ವರ ಜನಪದ ಕಾವ್ಯದಲ್ಲಿ ತಂದೆತಾಯಿಯರನ್ನು ಪಡೆದ ಪ್ರಸಂಗ ಮತ್ತು ಬಸವಣ್ಣ ನೀಲಮ್ಮ ಇವರ ದೃಢವನ್ನು ಪರೀಕ್ಷಿಸಿದ ಪ್ರಸಂಗಗಳು ಕಾವ್ಯದ ಮುಖ್ಯ ಪರಿಸರದ ಹೊರಗೆ ಘಟಿಸುತ್ತವೆ. ಉತ್ತರಾಜಮ್ಮನ ಪ್ರಸಂಗವನ್ನು ಬಿಟ್ಟರೆ, ಕಲ್ಯಾಣದಲ್ಲಿ ಬಸವೇಶ್ವರ, ನೀಲಮ್ಮ ಇವರಿಗೆ ಮಾದೇಶ್ವರ ಕಾಣಿಸಿಕೊಳ್ಳುವ ಭಾಗ ಪ್ರಕ್ಷಿಪ್ತವೆನಿಸುತ್ತದೆ. ಏಕೆಂದರೆ ಮಂಡೇಸ್ವಾಮಿ ಕಾವ್ಯದೊಡನೆ ಸಾವಯವ ಸಂಬಂಧ ಪಡೆದಿರುವುದರಿಂದ ಮಾದೇಶ್ವರರಿಗೆ ಕಲ್ಯಾಣದ ಸಂಬಂಧವನ್ನು ಕಲ್ಪಿಸಲಾಗಿಯೇ ಕಲಾವಿದರು ಸೇರಿಸಿಕೊಂಡ ಭಾಗ ಇದು ಎನ್ನಬಹುದು.

ಕಾರಯ್ಯ ಮತ್ತು ಬಿಲ್ಲಯ್ಯ ಸೋಲಿಗರ ಶಂಕಮ್ಮನ ಮಕ್ಕಳೆಂದು ಜನಪದ ಕಾವ್ಯ ಚಿತ್ರಿಸಿದರೆ. ಕೆಲವರ ಅಭಿಪ್ರಾಯದ ಪ್ರಕಾರ ಕಾರಯ್ಯನೊಬ್ಬನೇ ಸೋಲಿಗೆ ಭಕ್ತ. ಬಿಲ್ಲಯ್ಯ ಕುರುಬ ಜಾತಿಗೆ ಸೇರಿದವ. ಬಿಲ್ಲಯ್ಯನಿಗೆ ಕಂತೂರು ಮಠದಲ್ಲಿ ದೀಕ್ಷೆಯಾಗುತ್ತದೆ. ಅಮನು ಮಹದೇಶ್ವರ ಕ್ಷೇತ್ರದಲ್ಲಿರುವ ತಮಡಿಗಳ ಮೂಲಪುರುಷನೆಂದು ಹೇಳಲಾಗುತ್ತದೆ. ಮಾದೇಶ್ವರರ ಜೊತೆಯಲ್ಲಿ ಬಂದ ಸಂಸಾತಿ ಸಂಗಪ್ಪ ಮಾದೇಶ್ವರ ಗಿರಿಯ ಮೇಲೆ ಒಂದು ಮಠ ಸ್ಥಾಪಿಸಿದ . ಇದಕ್ಕೆ ಸಾಲೂರು ಮಠ ಎಂದು ಹೆಸರು ಬಂದಿತು. ಈ ಕಾಸೋಹ ಮಠ ದೇವರ ಗುಡ್ಡರಿಗೆ ದೀಕ್ಷೆಯನ್ನು ಕೊಡುವ ಮೂಲಮಠ ಎನಿಸಿದೆ.

ಮಾದೇಶ್ವರ ಕಾವ್ಯದ ಶ್ರವಣದ ಪ್ರಸಂಗ ಮಾದೇಶ್ವರರ ಚರಿತ್ರೆಯಮೇಲೆ ಸಾಕಷ್ಟು ಬೆಳಕು ಚೆಲ್ಲುತ್ತದೆ. ದೇಮಚಂದ್ರನ ರಾಜಾವಳೀ ಕಥೆಯಲ್ಲಿ (1838) ಮಾದೇಶ್ವರರು ಭಾನುಕೀರ್ತಿ ಎಂಬ ಜಿನಮುನಿಯನ್ನು ಲಾಕ್ಷವ ಪಾದುಕಂ ತೊಡಿಸಿ ಕಾದ ಅತೆಯಮೇಲೆ ಕೊಂದು ಕುಂತೂರು ಮಠದ ಜೋಳಿಗೆಯೊಡೆಯರಿಗೆ ರಾಜ್ಯವನ್ನು ಕೊಡಿಸುವ ಪ್ರಸ್ತಾಪ ಬರುತ್ತದೆ. ಜೈನ ಮತ್ತು ಶೈವ ಮತೀಯರ ಸಂಘರ್ಷದ ಮುನ್ನೆಲೆಯಲ್ಲಿ ಈ ಪ್ರಸಂಗ ಪ್ರಸ್ತಾವಿಸಲ್ಪಟ್ಟಿದೆ. ಮಾದೇಶ್ವರ ಕಾವ್ಯದ ಶ್ರವಣ ದೊರೆಯಸಾಲಿನೊಡನೆ ಈ ಪ್ರಸಂಗೆ ಹೋಲಿಗೆ ಸ್ಪಷ್ಟವಾಗಿ ತೋರುತ್ತದೆ. ಮದೇಶ್ವರರು ಈ ಭಾಗಕ್ಕಿ ಆಗಮಿಸಿದ ಮೇಲೆ ಇಲ್ಲಿ ಪ್ರಾಬಲ್ಯದಲ್ಲಿದ್ದ ಜೈನಧರ್ಮ ಅವನತಿಗೊಂಡು, ಶೈರ್ವಧರ್ಮದ ಪುನರುತ್ಥನವಾದಂತೆ ತೋರುತ್ತದೆ.ಈ ದಿಕ್ಕಿನಲ್ಲಿ ಸಂಶೋಧನೆಯನ್ನು ಕೈಗೊಳ್ಳುವುದರ ಮೂಲಕ ಮಾದೇಶ್ವರರ ಕಾಲವನ್ನು ಖಚಿತವಾಗಿ ನಿರ್ಧಗಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಖಚಿತ ಆಧಾರಗಳು ದೊರೆಯುವ ತನಕ ಮಾದೇಶ್ವರ ಶೈವ ಮೂಲಕ್ಕೆ ಸಂಬಂಧ ಪಡುವ ಒಬ್ಬ ಮಹಿಮಾಪುರುಷ ಎಂದಷ್ಟೇ ಇಟ್ಟುಕೊಳ್ಳಬಹುದು.

ಮಲೆಯ ಮಾದೇಶ್ವರ ಜನಪದ ಕಾವ್ಯ ಅನೇಕ ಪೌರಾಣಿಕ ಆಂಶಗಳನ್ನು ತನ್ನಲ್ಲಿ ಅಂತರ್ಗರಗೊಳಿಸಿಕÉೂಂಡಿದ್ದರೂ ಮಾದೇಶ್ವರರ ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯ ಭಾಗದಲ್ಲೆಲ್ಲೂ ಜನ್ಮವೆತ್ತಿ. ಅಸಾಮಾನ್ಯ ಅಲೌಕಿಕ ಶಕ್ತಿ ಗಳಿಸಿಕೊಂಡು, ಬಾಲಜಂಗಮರಾಗಿಮೊರೆಯುತ್ತ, ಬೇವಿನಕೊಲ್ಲಿಯ ಪವಾಡದಿಂದ ಬೆಳಕಿಗೆ ಬಂದಿರಬೇಕು. ಅಲ್ಲಿಂದ ಮುಂದೆ ಇವರು ಚರಮೂರ್ತಿಯಾಗಿ ಅನೇಕ ನೆಲೆಗಳಲ್ಲಿ ಸಂಚರಿ ಸುತ್ತ. ಅನೇಕ ವೀರಶೈವ ಮಠಗಳಿಗೂ ಸಂದರ್ಶನ ನೀಡಿ, ಎಲ್ಲಿಯೂ ನಿಲ್ಲದೆ ಏಳು ಮಲೆಗಳ ನಡುವೆ ಹೋಗಿ ನೆಲೆಸಿರಬಹುದೆ, ತಮ್ಮ ಮಹಿಮೆಯಿಂದ, ಪವಾಡ ಶಕ್ತಿಯಿಂದ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ಸಂರಕ್ಷಿಸಿ ಜನಪ್ರಿಯತೆ ಗಳಿಸಿ ಭಕ್ತರನ್ನು ಆಕರ್ಷಿಸಿರಬಹುದು.

1345ರಲ್ಲಿ ರಚಿತವಾದ್ದೆದನ್ನೆಲಾದ ಹರದನಹಳ್ಳಿಯ ಶಾಸನದಲ್ಲಿ ಮಾದೇಶ್ವರರ ಪ್ರಸ್ತಾಪವಿದೆಯಾದರೂ ಅದರ ಕಾಲ ಸಂದೇಹಾಸ್ಪದ. ಹೈದರಲಿಯ 1761ರ ಒಂದು ಶಾಸನದಲ್ಲಿ ಮಾದೇಶ್ವರರ ಬಗ್ಗೆ ಹೆಚ್ಚು ವಿವರಗಳು ಬಂದಿವೆ. ಆದರೆ ಅವರ ಮೂಲದ ಬಗ್ಗೆ ಅದರಲ್ಲಿ ಪ್ರಸ್ತಾಪವಿಲ್ಲ. ಸಂಗಪ್ಪ ಶಾಸ್ತ್ರಿಗಳ ಸುತ್ತೂರು ಸಿಂಹಾಸನದ ಗುರು ಪರಂಪತೆ (1933) ಎಂಬ ಗ್ರಂಥದ ಪ್ರಕಾರ ಸಿದ್ಧನಂಜ ದೇಶಿಕರ ಕಾಲದಲ್ಲಿ (1170-1240) ಮಾದೇಶ್ವರರು ಸುತ್ತೂರಿಗೆ ಬಂದಿದ್ದರು. ಆದರೆ ಈ ಎಲ್ಲ ಮಾಹಿತಿಗಳೂ ಸಂದಿಗ್ಧವಾಗಿವೆ. ಮಾದೇಶ್ವರರ ಮೂಲ ಅಸ್ಪಷ್ಟವಾಗಿರುವಂತೆಯೇ ಅವರ ಕಾಲವನ್ನೂ ನಿರ್ದಿಷ್ಟವಾಗಿ ಹೇಳಲು ಖಚಿತ ಆಧಾರಗಳು ಸಾಲದಾಗಿವೆ.

ಮಾದೇಶ್ವರರಿಗೆ ಸಂಬಂಧಿದಂತೆ ಪಿ.ಕೆ.ರಾಜಶೇಖರ ಅವರು ಮಲೆಯ ಮಾದೇಶ್ವರ ಎಂಬ ಜನಪದ ಮಹಾಕಾವ್ಯವೂಂದನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ.

ಈತ ಕಲ್ಯಾಣದ ಶೂನ್ಯಸಿಂಹಾಸನದ ಪರಂಪರಯಲ್ಲಿ ಬಂದ ಆರನೆಯವ. ಈತನ ಹೆಸರು ನಿರ್ಮಾಯ ಗಣೇಶ್ವರ , ಕನ್ನಡದ ರೂಪ ಮಾದೇಶ್ವರ ಈತ ಸುಮಾರು 14ನೆಯ ಶತಮಾನದಲ್ಲಿ ಆಗಿ ಹೋದವ ಎನ್ನಲಾಗಿದೆ. ಈತನ ವಿಷಯಗಳು ಸಪ್ಪಷ್ಟವಾಗಿ ತಿಳಿದು ಬಂದಿಲ್ಲ. ಈತ ಮೈಸೂರು ಜಿಲ್ಲೆ ಸುತ್ತೂರು, ಪ್ರಭುಲಿಂಗನ ಬೆಟ್ಟಗಳಲ್ಲಿ ಸ್ವಲ್ಪಕಾಲವಾಸಿಸಿದ್ದು ಅನೇಕ ಪವಾಡಗಳನ್ನು ಮೆರೆದಂತೆ ಗುರುಸಿದ್ಧಕವಿಯ ಮಾದೇಶ್ವರ ಸಾಂಗತ್ಯದಲ್ಲಿ ಹೇಳಿದೆ. ಈತನ ಶಿವಯೋಗ ಸಮಾಧಿ ಪೂರ್ವ ಘಟ್ಟಗಳಲ್ಲಿ ಕೊಳ್ಳೇಗಾಲಕ್ಕೆ 80 ಕಿಮೀ ದೂರದಲ್ಲಿ ಕಾವೇರಿ ತೀರದಲ್ಲಿ ನಡುಮಲೆ ಎಂಬಲ್ಲಿದೆ. ಈತನನ್ನು ಕುರಿತು ಗುರುಸಿದ್ದಪ್ಪ ಕವಿ (1850) ಮಾದೇಶ್ವರ ಸಾಂಗತ್ಯ ಎಂಬ ಗ್ರಂಥ ರಚಿಸಿದ್ದಾನೆ. ನವಾಬ್ ಹೈದರಲಿಖಾನ್ ಈ ದೇವಾಲಯಕ್ಕೆ ಒಂದು ತಾಮ್ರಶಾಸನಕೊಟ್ಟಿದ್ದಾನೆ. ನಿರಂಜನ ರತ್ನಾಕಾಲದಲ್ಲಿ ಇದನ್ನು ಕುರಿತು ಉಲ್ಲೇಖವಿದೆ. ಕೊಳ್ಳೇಗಾಲದ ಜನಪದ ಸಾಹಿತ್ಯದಲ್ಲಿ ಈತನ ಬಗ್ಗೆ ಅಪಾರವಾದ ಸಾಹಿತ್ಯಕ ವಿಷಯವಿದೆ. ಸಮಾಧಿ ಮೇಲೆ ದಿವ್ಯವಾದ ದೇವಾಲಯ ರಚನೆಯಾಗಿದೆ. ವರ್ಷಕ್ಕೆ ನಾಲ್ಕು ಸಾರಿ ಜಾತ್ರೆ ನಡೆಯುತ್ತದೆ. (ಬಿ.ಎಸ್)