ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಗಡಿ

ವಿಕಿಸೋರ್ಸ್ದಿಂದ

ಮಾಗಡಿ ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ಒಂದು ತಾಲ್ಲೂಕು ಮತ್ತು ಪಟ್ಟಣ. ದಕ್ಷಿಣದಲ್ಲಿ ರಾಮನಗರ. ಪೂರ್ವದಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ನೆಲಮಂಗಲ ತಾಲ್ಲೂಕುಗಳೂ ಉತ್ತರದಲ್ಲಿ ತುಮಕೂರು ಪಶ್ಚಿಮದಲ್ಲಿ ಕುಣಿಗಲು ತಾಲ್ಲೂಕುಗಳೂ ಸುತ್ತುವರಿದಿವೆ. ಹೋಬಳಿಗಳು 6 ಗ್ರಾಮಗಳು 335. ವಿಸ್ತೀರ್ಣ 913.3 ಚಕಿಮೀ. ಜನಸಂಖ್ಯೆ 2,00,962 (2001).

ನೆಲಮಂಗಲದ ಪಶ್ಚಿಮ ದಿಕ್ಕಿನಿಂದ ಹಬ್ಬಿರುವ ಬೆಟ್ಟಗಳು ಈ ತಾಲ್ಲೂಕನ್ನು ಹಾಯ್ದು, ರಾಮನಗರದ ಕಡೆ ಮುಂದುವರಿದಿವೆ. ಉತ್ತರದಲ್ಲಿ ಶಿವಗಂಗೆ ಮತ್ತು ದಕ್ಷಿಣದಲ್ಲಿ ಸಾವನದುರ್ಗ ಬೆಟ್ಟ ಸಾಲುಗಳ ನಡುವೆ ಹರಡಿರುವ ಈ ಪ್ರದೇಶ ಹೆಚ್ಚು ಏರುತಗ್ಗುಗಳಿಂದ ಕೂಡಿದೆ. ಉತ್ತರ ಭಾಗದಲ್ಲಿ ವಿರಳ ಬೆಟ್ಟಗಳಿದ್ದರೆ. ದಕ್ಷಿಣಕ್ಕೆ ಸಾವನದುರ್ಗದತ್ತ ಬರುತ್ತಿದ್ದಂತೆ ಆ ಪ್ರದೇಶ ಕ್ರಮೇಣ ಹೆಚ್ಚು ಪರ್ವತಮಯವಾಗುತ್ತದೆ. ಸಿದ್ದೇಶ್ವರ ಬೆಟ್ಟ ಮತ್ತು ಸಾವನದುರ್ಗ ಪ್ರದೇಶಗಳಲ್ಲಿ ಬಿದಿರು ಮಳೆಗಳಿರುವ ಅರಣ್ಯವಿದೆ. ಉಳಿದೆಡೆ ಕುರುಚಲು ಕಾಡುಗಳಿವೆ. ಕಣ್ವ ಮತ್ತು ಅರ್ಕಾವತಿ ಇಲ್ಲಿಯ ಹೆಸರಿಸಬಹುದಾದ ನದಿಗಳು. ಕಣ್ವ ನದಿ ತಾಲ್ಲೂಕಿನ ಪಶ್ಚಿಮದಲ್ಲಿ ಶ್ರೀಪತಿಹಳ್ಳಿಯ ಬಳಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿಯುವುದು. ತಾಲ್ಲೂಕಿನ ಪೂರ್ವಭಾಗ ಅರ್ಕಾವತಿ ನದಿಯ ಕಣಿವೆ ಪ್ರದೇಶ. ಪಶ್ಚಿಮ ಮತ್ತು ವಾಯವ್ಯ ಭಾಗದಲ್ಲಿ ಸಣ್ಣ ಪುಟ್ಟ ತೊರೆಗಳಿದ್ದು ಅವೆಲ್ಲ ಕುಣಿಗಲು ತಾಲ್ಲೂಕಿನೆಡೆಗೆ ಹರಿಯುತ್ತವೆ. ವಾರ್ಷಿಕ ಸರಾಸರಿ ಮಳೆ 779.30ಮಿಮೀ.

ರಾಗಿ ಇಲ್ಲಿಯ ಮುಖ್ಯ ಬೆಳೆ. ಅವರೆ, ತೊಗರಿ ಮತ್ತು ಕೆಲವು ಎಣ್ಣೆ ಬೀಜಗಳನ್ನೂ ಸ್ವಲ್ಪಮಟ್ಟಿಗೆ ಬತ್ತ ಮತ್ತು ಕಬ್ಬನ್ನೂ ಬೆಳೆಸುತ್ತಾರೆ. ಮಾಗಡಿ ತಾಲ್ಲೂಕಿನಲ್ಲಿ ರೇಷ್ಮೆ ನೂಲಿನ ತಯಾರಿಕೆ ಇದ್ದು ಅದು ಇಲ್ಲಿಯ ಮುಖ್ಯ ರಫ್ತು ವಸ್ತು ಕೂಡ. ಮಾಗಡಿಯಿಂದ ನೆಲಮಂಗಲ, ಕುಣಿಗಲು ಮತ್ತು ರಾಮನಗರಕ್ಕೆ ಹೋಗುವ ರಸ್ತೆಗಳು ತಾಲ್ಲೂಕಿನ ಮುಖ್ಯ ಹಾದಿಗಳು. ಬೆಂಗಳೂರು-ಮಂಗಳೂರು ಹೆದ್ದಾರಿ ತಾಲ್ಲೂಕಿನ ಉತ್ತರ ಭಾಗದಲ್ಲಿ ಹಾದು ಹೋಗುತ್ತದೆ. ತಾಲ್ಲೂಕಿನಲ್ಲಿ ಕೃಷಿ ಮತ್ತು ಕೃಷಿಯೇತರ ಸಹಕಾರಿ ಬ್ಯಾಂಕುಗಳು, ವಿದ್ಯುತ್, ಅಂಚೆ ತಂತಿ ಮತ್ತು ದೂರವಾಣಿ ಸೌಲಭ್ಯಗಳು, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳು, ಆಸ್ಪತ್ರೆ, ಆರೋಗ್ಯ ಕೇಂದ್ರ ಮತ್ತು ಔಷಧಾಲಯಗಳು ಇವೆ.

ಮಾಗಡಿ ತಾಲ್ಲೂಕಿನ ಮುಖ್ಯ ಗ್ರಾಮಗಳಲ್ಲಿ, ಕಲ್ಯ ಮತ್ತು ಸಾವನದುರ್ಗ ಐತಿಹಾಸಿಕ ಪ್ರಾಮುಖ್ಯವುಳ್ಳ ಸ್ಥಳಗಳು. ಮಾಗಡಿ-ಕುಣಿಗಲು ಮಾರ್ಗದಲ್ಲಿ ಮಾಗಡಿಯ ನೈಋತ್ಯಕ್ಕೆ 5 ಕಿಮೀ ದೂರದಲ್ಲಿರುವ ಕೆಂಪಸಾಗರ ಗ್ರಾಮದಲ್ಲಿ ಒಂದು ವೀರಶೈವ ಮಠವಿದೆ. ಇದರ ನವರಂಗದ ಒಂದು ಕಂಬದ ಮೇಲೆ ಒಂದು ಲಿಂಗ ಮಡಕೆಯಿಂದ ಹೊರಬರುತ್ತಿರುವಂತೆ ಕೆತ್ತಿದ್ದು ಅದನ್ನು ಸುರಭಾಂಡೇಶ್ವರ ಎಂದು ಕರೆಯುತ್ತಾರೆ. ಮುಂದುಗಡೆಯ ಒಂದು ಕಂಬದಲ್ಲಿ ಸುಮಾರು 45 ಸೆಂಟಿಮೀಟರ್ ಎತ್ತರವಿರುವ ಕೆಂಪೇಗೌಡ ವಿಗ್ರಹವನ್ನು ಕೆತ್ತಲಾಗಿದೆ. ಈ ಮಥವನ್ನು ಕೆಂಪೇಗೌಡನ್ನೇ ಕಟ್ಟಿಸಿದನೆಂದು ಪ್ರತೀತಿ. ತಾಲ್ಲೂಕಿನ ಉತ್ತರದಲ್ಲಿ ಮಾಗಡಿಗೆ ವಾಯವ್ಯದಲ್ಲಿರುವ ಹುಲಿಕಲ್ಲಿನಲ್ಲಿ ಅನೇಕ ಶಿಥಿಲ ದೇವಾಲಯಗಳೂ ಮಂಟಪಗಳೂ ಶಾಸನಗಳೂ ಕೆಲವು ವೀರಗಲ್ಲುಗಳೂ ಇವೆ. ಗ್ರಾಮದ ಹತ್ತಿರವಿರುವ ರಾಮಲಿಂಗ ಬೆಟ್ಟದ ಬುಡದಲ್ಲಿ ಒಬ್ಬ ಯತಿ ಇದ್ದನೆಂದೂ ಅವನ ಹಸುವನ್ನು ಹುಲಿಯೊಂದು ಕೊಂದುಹಾಕಿತೆಂದೂ ಇದನ್ನು ತಿಳಿದ ಹೊಯ್ಸಳ ದೊರೆ ಬೆಟ್ಟದಲ್ಲಿ ಕೋಟೆ ಕಟ್ಟಿಸಿ (1319) ಹುಲಿಕೊಲ್ಲು ಎಂದು ಹೆಸರಿಟ್ಟನೆಂದೂ ಕ್ರಮೇಣ ಅದು ಹುಲಿಕಲ್ಲು ಆಯಿತೆಂದೂ ಹೇಳುವರು. ಅನಂತರ ಈ ಕೋಟೆ ಕೊರಟಗೆರೆಯ ಬೈಚೇಗೌಡನಿಗೆ ಸೇರಿತ್ತು. ತಾಲ್ಲೂಕಿನ ಉತ್ತರದ ಗಡಿಯಲ್ಲಿ ಮಾಗಡಿಯ ವಾಯವ್ಯಕ್ಕೆ ಇರುವ ಸುಗ್ಗನಹಳ್ಳಿಯಲ್ಲಿ ದ್ರಾವಿಡ ಶೈಲಿಯ ನರಸಿಂಹ ದೇವಾಲಯವಿದೆ. ಮುಖ್ಯ ಪೂಜಾ ವಿಗ್ರಹ ಗರುಡ. ಇಲ್ಲಿ ವಾರ್ಷಿಕ ರಥೋತ್ಸವ ಮತ್ತು ದನದ ಜಾತ್ರೆ ನಡೆಯುವುವು. ಮಾಗಡಿಯ ವಾಯವ್ಯಕ್ಕಿರುವ ಸಂಕಿಘಟ್ಟ ಗ್ರಾಮದಲ್ಲಿ ಒಂದು ಜೈನಬಸದಿ ಇದೆ.

ಮಾಗಡಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣ. ಬೆಂಗಳೂರಿನ ಪಶ್ಚಿಮಕ್ಕೆ 51 ಕಿಮೀ ದೂರದಲ್ಲೂ ರಾಮನಗರದ ಉತ್ತರಕ್ಕೆ 33 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 25,000 (2001).

ಮಾಗಡಿ ಸುತ್ತಲ ಗ್ರಾಮಗಳಿಗೆ ಮುಖ್ಯ ವ್ಯಾಪಾರ ಕೆಂದ್ರ. ಇಲ್ಲಿ ಕೈಗಾರಿಕಾ ಬ್ಯಾಂಕ್, ಪಶುವೈದ್ಯಾಲಯ, ಪ್ರೌಢಶಾಲೆಗಳು, ಆಸ್ಪತ್ರೆ, ಅಂಚೆ, ವಿದ್ಯುತ್ ಮತ್ತು ದೂರವಾನಿಯ ಸೌಲಭ್ಯಗಳಿವೆ. ಮಾಗಡಿಯಿಂದ ಬೆಂಗಳೂರು. ರಾಮನಗರ, ನೆಲಮಂಗಲ ಮತ್ತು ಕುಣಿಗಲುಗಳಿಗೆ ಉತ್ತಮ ಮಾರ್ಗಗಳಿವೆ. ಈ ಪಟ್ಟಣದಲ್ಲಿ ಪುರಸಭಾಡಳಿತವಿದೆ.

ಮಾಗಡಿ ಸುಮಾರು 1139ರಲ್ಲಿ ಚೋಳರಾಜನೊಬ್ಬನಿಂದ ಸ್ಥಾಪಿತವಾಯಿತೆಂಬ ಐತಿಹ್ಯವಿದೆ. ಮುಂದೆ ಇರು ಹೊಯ್ಸಳರ ವಶವಾಗಿ ಮತ್ತೆ ವಿಜಯನಗರದ ಅರಸರ ಕೈಸೇರಿತು. ಅಚ್ಯುತರಾಯ ತನ್ನ ಕಾಲದಲ್ಲಿ ಈ ಪ್ರಾಂತ್ಯಕ್ಕೆ ಸಾವಂತರಾಯನನ್ನು ಪ್ರಾಂತ್ಯಾಧಿಕಾರಿಯಾಗಿ ನೇಮಿಸಿದ. ಸಾವಂತರಾಯ ನಗರವನ್ನು ವಿಸ್ತರಿಸಿ ಸಾವನದುರ್ಗದ ಗೋಡೆ ಎತ್ತರಿಸಿ ಭದ್ರಪಡಿಸಿದ. ಮುಂದೆ ಸಾವಂತರಾಯನಿಗೆ ಈ ಭಾಗ ಜಹಗೀರಿಯಾಗಿ ದೊರೆತು 1543 ರಿಂದ 1571ರ ತನಕ ಆತ ಮಾಗಡಿಯನ್ನು ಆಳಿದ. ಅವನ ಮಗ ಸಂಪಾಜರಾಜ 17 ವರ್ಷ ಆಳಿ ತಿರುಮಲೆಯ ರಂಗಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧರ ಮಾಡಿದ. ಇವನ ಮಗ ಚಿಕ್ಕರಾಯ (ಮೂಲಕರಾಯ) 16 ವರ್ಷ ಆಳಿದ. ಇವನಿಗೆ ಮಕ್ಕಳಿರಲಿಲ್ಲವಾಗಿ ವಿಜಯ ನಗರದರಸ ತನ್ನ ಪ್ರತಿನಿಧಿಯೊಬ್ಬನನ್ನಿರಿಸಿದ. ಈತ ಸುತ್ತ ಮುತ್ತಣ ಸಾಮಂತ ಪಾಳೆಯಗಾರರಿಂದ ಇಪ್ಪ ಸಂಗ್ರಹಿಸಿ ವಿಜಯನಗರಕ್ಕೆ ಕಳುಹಿಸುತ್ತಿದ್ದ. 1623ರಲ್ಲಿ ಗಂಗಪ್ಪನಾಯಕನೆಂಬ ಪಾಳೆಯಗಾರ ದುರ್ಗದ ಮೇಲೇರಿ ಹೋಗಿ, ವಿಜಯನಗರದ ರಾಯಭಾರಿಯನ್ನು ಸದೆಬಡಿದು ಮಾಗಡಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದ. ಗಂಗಪ್ಪನ ಅತಿವರ್ತನೆಯ ಸುದ್ದಿ ವಿಜಯನಗರಕ್ಕೆ ತಲುಪಿತು. ಗಂಗನನ್ನು ಬಡಿದಟ್ಟಿ ಮಾಗಡಿಯನ್ನೂ ಸಾವನದುರ್ಗವನ್ನೂ ತನ್ನ ರಾಜ್ಯಕ್ಕೆ ಸೇರಿಸಿಕೊಳ್ಳುವಂತೆ ಇಮ್ಮಡಿ ಕೆಂಪೇಗೌಡನಿಗೆ ವಿಜಯನಗರದಿಂದ ನಿರೂಪ ಹೋಯಿತು. ಗಂಗ ಕೇಂಪೇಗೌಡನಿಗೆ ಒಲಿಸಿಕೊಂಡು ಅವನ ನೆರವಿನಿಂದ ಸಾವನದುರ್ಗವನ್ನು ವಶಪಡಿಸಿಕೊಂಡು, ಪ್ರತಿಯಾಗಿ ಮಾಗಡಿಯನ್ನು ಅವನಿಗೆ ಅವನಿಗೆ ಒಪ್ಪಿಸುವುದಾಗಿ ಆಸೆ ತೋರಿಸಿ, ಕೊನೆಗೆ ದುರ್ಗ ವಶವಾದಮೇಲೆ ಗೌಡನ ಮೇಲೆ ತಿರುಗಿಬಿದ್ದು ಅವನನ್ನು ಜಯಿಸುವ ಹಂಚಿಕೆ ಹೂಡಿದ. ಆದರೆ ಸ್ವಾಮಿನಿಷ್ಠನಾದ ಇಮ್ಮಡಿ ಕೆಂಪೇಗೌಡ ಆ ಪ್ರಲೋಭಕ್ಕೆ ಬಲಿಯಾಗದೆ, ಗಂಗನನ್ನು ಕೊಂದು ಮಾಗಡಿಯನ್ನೂ ಸಾವನದುರ್ಗವನ್ನೂ ವಶಪಡಿಸಿಕೊಂಡು, ಅಲ್ಲಿ ತನ್ನ ಪ್ರತಿನಿಧಿಯೊಬ್ಬನನ್ನಿರಿಸಿ, ವಿಜಯನಗರಕ್ಕೆ ವಿಜಯವಾರ್ತೆ ತಿಳಿಸಿದ. ಇಮ್ಮಡಿ ಕೆಂಪೇಗೌಡ 14 ವರ್ಷಕಾಲ ಇವೆರಡೂ ಊರುಗಳನ್ನು ಬೆಂಗಳೂರಿನಿಂದಲೇ ಆಳಿದ. ಮಾಗಡಿಯಲಲ್ಲಿ ಬಲವಾದ ಕೋಟೆಕಟ್ಟಿಸಿ ಕಂದಕಗಳನ್ನು ತೋಡಿಸಿದ. ದೇಗುಲಗಳನ್ನೂ ಕೆರೆಕಟ್ಟೆಗಳನ್ನೂ, ನಿರ್ಮಿಸಿ, ಅಲ್ಲಿಗೆ ಹೊರಗಡೆಯ ಜನ ಬಂದು ನೆಲಸಲು ಅನುಕೂಲ ಮಾಡಿಕೊಟ್ಟ. ಸುಮಾರು 1638ರಲ್ಲಿ ಬಿಜಾಪುರದ ಸೇನಾಪತಿ ರಣದುಲ್ಲಾಖಾನ್ ಬೆಂಗಳೂರನ್ನು ಆಕ್ರಮಿಸಿದ. ಅಪಾರ ಸೈನ್ಯದೊಡನೆ ಬಂದು ಖಾನನನ್ನು ಎದುರಿಸುವುದು ದುಸ್ತರವೆಂದೂ ಅಲ್ಲದೆ ವ್ಯರ್ಥ ಪ್ರಾಣಹಾನಿಗೆ ಕಾರಣವೆಂದೂ ಮನಗಂಡ ಇಮ್ಮಡಿ ಕೆಂಪೇಗೌಡ ವರ್ಷಂಪ್ರತಿ ಪೊಗದಿ ಕೊಡುವುದಾಗಿ ವಾಗ್ದಾನಮಾಡಿ, ಸೆರೆ ಬಿಡಿಸಿಕೊಂಡ. ತಾನು ಬೆಂಗಳೂರಿನಲ್ಲಿಯೇ ನೆಲಸುವ ಪಕ್ಷಕ್ಕೆ ಇಂಥ ಆಕ್ರಮಣವನ್ನು ಮುಂದೆಯೂ ಎದುರಿಸಬೇಕಾಗುವುದೆಂದು ಶಂಕಿಸಿದ ಕೆಂಪೇಗೌಡ 1638ರಲ್ಲಿ ರಾಜಧಾನಿಯನ್ನೇ ಮಾಗಡಿಗೆ ಸ್ಥಳಾಂತರಿಸಿದ. ಮಾಗಡಿ, ಸಾವನದುರ್ಗಗಳನ್ನು ಮತ್ತಷ್ಟು ಬಲಪಡಿಸಿಕೊಂಡ. ಹದಿನೆಂಟು ವರ್ಷಕಾಲ ಮಾಗಡಿಯಿಂದ ಆಳಿದ. ಅಂದು ಮೊದಲುಗೊಂಡು ಅವನೂ ಅವನ ವಂಶಜರೂ ಮಾಗಡಿ ಕೆಂಪೇಗೌರೆಂಬ ಹೆಸರಿನಿಂದ ಪ್ರಸಿದ್ಧರಾದರು. ಸಾವನದುರ್ಗ 1728ರ ತನಕ ಇಮ್ಮಡಿ ಕೆಂಪೇಗೌಡನ ವಂಶಜರ ಅಧೀನವಾಗಿತ್ತು ಅನಂತರ ಮೈಸೂರಿನ ದಳವಾಯಿ ದೇವರಾಜ ಸಾವನದುರ್ಗವನ್ನು ವಶಪಡಿಸಿಕೊಂಡು, ಆಗ ಅರಸನಾಗಿದ್ದ ಮುಮ್ಮಡಿ ಕೆಂಪೇಗೌಡನನ್ನು ಶ್ರೀರಂಗಪಟ್ಟಣಕ್ಕೆ ಬಂದಿಯಾಗಿ ಕರೆದೊಯ್ದ. ಕೆಂಪೇಗೌಡ ಅಲ್ಲೆ ಮೃತನಾದ. 1791ರಲ್ಲಿ ದುರ್ಗ ಬ್ರಿಟಿಷರ ವಶವಾಯಿತು.

ಪುರಾಣಯುಗದಲ್ಲಿ ಮಾಗಡಿ ಮಾಂಡವ್ಯಮುನಿಗಳ ಪುಣ್ಯಸ್ಥಳವಾಗಿತ್ತೆಂದು ಕೇಳಿ ಇಮ್ಮಡಿ ಕೆಂಪೇಗೌಡ ಅಲ್ಲಿಯ ರಂಗನಾಥಸ್ವಾಮಿಯ ಗುಡಿಯನ್ನು ಜೀರ್ಣೋದ್ಧಾರ ಮಾಡಿಸಿದ. ದೇವಾಲಯಗಳಲ್ಲಿ ನಿತ್ಯ ನೈಮಿತ್ತಿಕ ಪೂಜಾದಿಗಳನ್ನು ನಿರ್ವಹಿಸುವ ಬ್ರಾಹ್ಮಣರಿಗೆ ಗ್ರಾಮಗಳನ್ನು ಉಂಬಳಿ ನೀಡಿ ಇವನು ಬರೆಸಿದ ಶಾಸನಗಳು ಮಾಗಡಿಯ ಸುತ್ತಮುತ್ತಣ ಊರುಗಳಲ್ಲಿ ಲಭಿಸಿವೆ. ಮಾಗಡಿಯಲ್ಲಿ ಕೆಂಪೇಗೌಡ ಕಟ್ಟಿದುದೆಂದು ಹೇಳುವ ಒಂದು ಕೋಟೆ ಜೀರ್ಣಾವಸ್ಥೆಯಲ್ಲಿದೆ. ದುರ್ಗದಲ್ಲಿ ಮಾಗಡಿ ಪಾಳೆಯಗಾರರ ಕುಲದೈವವಾದ ರಾಮೇಶ್ವರ ದೇವರ ಗುಡಿಯಿದೆ. ಗೌಡನ ಅರಮನೆಯ ಅವಶೇಷ ಈ ಗುಡಿಯ ನೈಋತ್ಯಕ್ಕಿದೆ.

(ಕೆ.ಆರ್.)