ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಣಿಕಪ್ರಭು

ವಿಕಿಸೋರ್ಸ್ದಿಂದ

ಮಾಣಿಕಪ್ರಭು 1817-65. ಕರ್ನಾಟಕದಲ್ಲಿ ಬಾಳಿದ ಈತ ಸಕಲ ಮತ ಸಂಪ್ರದಾಯ ಮತದ ಪ್ರವರ್ತಕ. ಬೀದರ ಜಿಲ್ಲೆಯ ಲಾಡ(ಜ)ವಂತಿ ಗ್ರಾಮದಲ್ಲಿ ಹುಟ್ಟಿದ್ದು; ತಂದೆ ಮನೋಹರ ನಾಯಕ ಹರಕುಡೆ ಮತ್ತು ತಾಯಿ ಬಾಯಮ್ಮ ದೇವಿ. ಈತ ದೇಶಸ್ಥ ದತ್ತಸಂಪ್ರದಾಯದ ಬ್ರಾಹ್ಮಣರ ಮನೆತನದ ಋಗ್ವೇದೀ ಅಶ್ವಲಾಯನ ಶಾಖೆಯ ಶ್ರೀವತ್ಸಗೋತ್ರದವ. ಬಾಲ್ಯದಿಂದಲೇ ಪ್ರಾಸಾದಿಕ ವ್ಯಕ್ತಿಯೆಂದು ಪ್ರಕಾಶಕ್ಕೆ ಬಂದ ಈತ ಅನೇಕ ಚಮತ್ಕಾರಗಳನ್ನು ಮಾಡಿ ತೋರಿಸಿದ. 1845ರಲ್ಲಿ ಹುಮ್ನಾಬಾದದ ಬಳಿ ನಿರ್ಜನಸ್ಥಳವೊಂದರಲ್ಲಿ ನೆಲೆನಿಂತ. ಅದೇ ಈಗ ಮಾಣಿಕನಗರವೆಂದು ಪ್ರಸಿದ್ಧವಾಗಿರುವುದು. ಈತನಿಗೆ ಅನೇಕ ಮಂದಿ ಭಕ್ತರಾದರು. ತನ್ನ ಮತವನ್ನು `ಸಕಲಮತ ಸಂಪ್ರದಾಯ ಎಂದೇ ಕರೆದ. ಈ ಪಂಥದ ಉಪಾಸ್ಯದೇವತೆ ಚೈತನ್ಯದೇವ, ಎಂದರೆ ಮಾನವನ ಅಂತರ್ಯಾಮಿಯಾದ ಚೈತನ್ಯವೇ ಅದು. ಮಧುಮತೀನಾಮಕ ಶಕ್ತಿದೇವತೆ ಹಾಗೂ ದತ್ತಾತ್ರೇಯ ಮೂರ್ತಿಗಳು ಇವರು ಪೂಜಿಸುವ ವಿಗ್ರಹಗಳು. ಸರ್ವಧರ್ಮ ಸಮನ್ವಯದಂತೆ ಇರುವ ಈ ಮತಕ್ಕೆ ಮುಸಲ್ಮಾನ್, ಪಾರಸೀ, ಜೈನ, ಬೌದ್ಧ, ಲಿಂಗಾಯತ ಮುಂತಾದ ಅನೇಕ ಕೋಮಿನವರು ಅನುಯಾಯಿಗಳಾಗಿದ್ದಾರೆ. ಶಿವರಾತ್ರಿ, ಮೊಹರಮ್ ದತ್ತಜಯಂತಿ ಇವು ಇಲ್ಲಿ ಆಚರಿಸಲಾಗುವ ವಿಶೇಷಹಬ್ಬಗಳು. ಶಾಲಿವಾಹನ ಶಕೆ 1787 ಮಾರ್ಗಶಿರ ಶುದ್ಧ 11ರಂದು ಮಾಣಿಕಪ್ರಭು ಸಜೀವ ಸಮಾಧಿಹೊಂದಿದ. ಈತ ಹಿಂದಿ, ಮರಾಠಿ, ಕನ್ನಡ ಮೂರೂ ಭಾಷೆಗಳಲ್ಲಿಯೂ ಪದ್ಯರಚನೆ ಮಾಡಿದುದಾಗಿ ತಿಳಿದು ಬರುತ್ತದೆ. ಆ ಪದ್ಯಗಳಲ್ಲಿ ಮೀರಾಬಾಯಿಯ ಪದ್ಯಗಳ ಮಾಧುರ್ಯವಿದೆ. ಈಗ ಈ ಮಾಣಿಕನಗರವನ್ನು ಮಾಣಿಕಪ್ರಭೂ ಸಂಸ್ಥಾನ ಎಂದೇ ಕರೆಯಲಾಗುತ್ತಿದೆ.

(ಎಸ್.ಎಸ್.ಜೆಎ.)