ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾರ್ಗರೆಟ್, ತ್ಯಾಚರ್
ಮಾರ್ಗರೆಟ್, ತ್ಯಾಚರ್ - 1925. ಬ್ರಿಟನ್ನಿನ ಕನ್ಸರ್ವೆಟಿವ್ ಸರ್ಕಾರದ ಪ್ರಧಾನಿಯಾಗಿದ್ದರು (1979-1992). 1925ರಲ್ಲಿ ಜನಿಸಿದರು. ಗ್ರಂತ್ಯಾಮ್ ಪ್ರೌಢಶಾಲೆಯಲ್ಲೂ ಸ್ಯಾಮರ್ವಿಲ್ ಕಾಲೇಜಿನಲ್ಲೂ ಓದಿ ಮಾಸ್ಟರ್ ಪದವಿ ಪಡೆದು ಸಂಶೋಧಕಿಯಾಗಿ ಕೆಲಸ ಮಾಡಿದರು (1947-51). ಬಿಡುವಿನ ವೇಳೆಯಲ್ಲಿ ಓದು ಮುಂದುವರಿಸಿ ಬ್ಯಾರಿಸ್ಟರ್ ಆದರು.
ಕನ್ಸರ್ವೆಟಿವ್ ಪಕ್ಷದ ಅಭ್ಯರ್ಥಿಯಾಗಿ ಫ್ಲಿಂಚ್ಲೆ ಕ್ಷೇತ್ರದಿಂದ 1959ರ ಚುನಾವಣೆಗಳಲ್ಲಿ ಸ್ಪರ್ಧಿಸಿ ಜಯಗಳಿಸಿ ಪಾರ್ಲಿಮೆಂಟ್ ಸದಸ್ಯೆಯಾದರು. ರಾಜಕೀಯ ಕ್ಷೇತ್ರದಲ್ಲಿ ಕ್ರಮಕ್ರಮವಾಗಿ ಮುನ್ನಡೆದರೂ ಕನ್ಸರ್ವೆಟಿವ್ ಪಕ್ಷದ ಸರ್ಕಾರದ ಪಿಂಚಣಿ ಮತ್ತು ರಾಷ್ಟ್ರೀಯ ವಿಮಾ ಮಂತ್ರಾಲಯದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ಅಧಿಕಾರ ಆರಂಭಿಸಿದ ಇವರು 1969ರ ವೇಳೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಧಿಕಾರಯುತವಾಗಿ ಮಾತಾಡಬಲ್ಲ ಅನುಭವ ಗಳಿಸಿಕೊಂಡಿದ್ದರು. ಕನ್ಸರ್ವೆಟಿವ್ ಪಕ್ಷ ಅಧಿಕಾರದಲ್ಲಿಲ್ಲವಾದಲೆಲ್ಲ ವಿರೋಧ ಪಾಳೆಯದ ಉಗ್ರ ವಕ್ತಾರರಾಗಿ ವಿಶೇಷ ಪ್ರಭಾವ ಬೆಳೆಸಿಕೊಂಡು ಮಾರ್ಗರೇಟ್ ತ್ಯಾಚರ್ 1970ರಲ್ಲಿ ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಾಗ ಶಿಕ್ಷಣ ಮತ್ತು ವಿಜ್ಞಾನ ಖಾತೆಯ ಮಂತ್ರಿಯಾದರು. ಲೇಬರ್ ಪಕ್ಷ ಮತ್ತೆ ಸರ್ಕಾರ ರಚಿಸಿದಾಗ ವಿರೋಧ ಪಕ್ಷದ ನಾಯಕಿಯಾದರು (1975).
1979ರಲ್ಲಿ ಕ್ಯಾಲಹನ್ನರ ಲೇಬರ್ ಸರ್ಕಾರ ವಿಶ್ವಾಸ ಕಳೆದುಕೊಂಡ ಫಲವಾಗಿ ನಡೆದ ಚುನಾವಣೆಯಲ್ಲಿ ಕನ್ಸರ್ವೆಟಿವ್ ಪಕ್ಷ ಅಲ್ಪ ಬಹುಮತದಿಂದ ಜಯಗಳಿಸಿತು. ಮಾರ್ಗರೇಟ್ ತ್ಯಾಚರ್ ತಮ್ಮ ಪಕ್ಷದ ನಾಯಕಿಯಾಗಿ ಬ್ರಿಟನ್ನಿನ ಪ್ರಧಾನಿಯಾದರು. ಪಾಶ್ಚಾತ್ಯ ಪ್ರಜಾಪ್ರಭುತ್ವದ ದೇಶವೊಂದರ ಪ್ರಥಮ ಮಹಿಳೆ ಪ್ರಧಾನಿ ಎಂದು ಹೆಸರಾದರು. ಸರ್ಕಾರದ ವೆಚ್ಚವನ್ನು ತಗ್ಗಿಸಿ, ಹಣದುಬ್ಬರವನ್ನು ತಡೆಗಟ್ಟಿ, ತೆರಿಗೆಗಳನ್ನಿಳಿಸಿ, ಕೈಗಾರಿಕೆಗಳನ್ನು ಪುನರುಜ್ಜೀವನ ಗೊಳಿಸುವ ನೀತಿ ಅನುಸರಿಸಿದ ಇವರ ಅಧಿಕಾರದ ಪ್ರಥಮ ಅವಧಿಯ ಕಾಲದಲ್ಲಿ ಬ್ರಿಟನ್ ಆರ್ಜೆಂಟಿನದೊಂದಿಗೆ ಕಾದಾಟ ನಡೆಸಬೇಕಾಗಿ ಬಂತು. ದಕ್ಷಿಣ ಅಟ್ಲಾಂಟಿಕ್ ಪ್ರದೇಶದಲ್ಲಿ ಬ್ರಿಟನ್ನಿಗೆ ಸೇರಿರುವ ಫಾಕ್ಲೆಂಡ್ ದ್ವೀಪಗಳು ತನಗೆ ಸೇರಬೇಕೆಂದು ಅರ್ಜೆಂಟೀನ ಅದರ ಮೇಲೆ ಆಕ್ರಮಣ ನಡೆಸಿದಾಗ ಬ್ರಿಟನ್ ತನ್ನ ಪಡೆಗಳನ್ನು ಅಲ್ಲಿಗೆ ಕಳಿಸಿ ಅರ್ಜೆಂಟೀನದ ಪಡೆಗಳನ್ನು ಮಣಿಸಿ ಆ ದ್ವೀಪಗಳನ್ನು ಮತ್ತೆ ವಶಪಡಿಸಿಕೊಂಡಿತು.
ಅರ್ಥಿಕವಾಗಿ ಬ್ರಿಟನ್ ಒಳ್ಳೆಯ ಸ್ಥಿತಿಯಲ್ಲಿಲ್ಲದಿದ್ದರೂ ಅರ್ಜೆಂಟೀನದ ಮೇಲಣ ಈ ವಿಜಯದಿಂದಾಗಿ ತ್ಯಾಚರ್ ಸರ್ಕಾರ ಜನಪ್ರಿಯತೆ ಗಳಿಸಿತು. ತ್ಯಾಚರರ ಸರ್ಕಾರದ ಅವಧಿ ಮುಗಿಯಲು ಇನ್ನೂ ಒಂದು ವರ್ಷ ಇದ್ದಾಗಲೇ (1983) ಪಾರ್ಲಿಮೆಂಟ್ ವಿಸರ್ಜಸಿ ಚುನಾವಣೆ ನಡೆಸಿದಾಗ ಇವರ ಪಕ್ಷಕ್ಕೆ ಪ್ರಚಂಡ ಬಹುಮತ ದೊರೆತು ಮುಂದಿನ ಐದು ವರ್ಷಗಳಿಗೆ ಮಾರ್ಗರೆಟ್ ತ್ಯಾಚರ್ ಮತ್ತೆ ಪ್ರಧಾನಿಯಾದರು.
ಮಾರ್ಗರೆಟ್ ತ್ಯಾಚರರ ಪತಿ ಡೆನಿಸ್ ತ್ಯಾಚರ್. ಇವರಿಗೆ ಇಬ್ಬರು ಮಕ್ಕಳಿದ್ದಾರೆ. (ಎಚ್.ಎಸ್.ಕೆ.)