ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೆಸೊಪೊಟೇಮಿಯ 1

ವಿಕಿಸೋರ್ಸ್ದಿಂದ

ಮೆಸೊಪೊಟೇಮಿಯ 1 -

ಮಧ್ಯಪ್ರಾಚ್ಯದ ಯೂಫ್ರಟೀಸ್ ಮತ್ತು ಟೈಗ್ರೀಸ್ ನದಿಗಳ ನಡುವಣ ಪ್ರದೇಶವನ್ನು ಮೆಸೊಪೊಟೇಮಿಯ (ನದಿಗಳ ನಡುವಣ ನಾಡು) ಎಂದು ಕರೆಯಲಾಗಿದೆ. ಆಗ್ನೇಯಕ್ಕೆ ಪರ್ಷಿಯನ್ ಖಾರಿ, ಪೂರ್ವ ಮತ್ತು ಉತ್ತರಕ್ಕೆ ಇರಾನ್, ಪಶ್ಚಿಮ ಹಾಗೂ ದಕ್ಷಿಣಕ್ಕೆ ಜಾರ್ಡನ್ ಆಚೆಗಿನ ಪ್ರದೇಶ ಮತ್ತು ಸೌದಿಅರೇಬಿಯದ ಮರುಭೂಮಿ ಇವುಗಳಿಂದ ಆವೃತವಾದ ವಾಸಯೋಗ್ಯ ಪ್ರದೇಶವಿದು. ಇಲ್ಲಿಯ ಎರಡು ಪ್ರಮುಖ ಭೌಗೋಳಿಕ ವಿಭಾಗಗಳೆಂದರೆ ಉತ್ತರದ ಪ್ರಸ್ಥಭೂಮಿ ಮತ್ತು ದಕ್ಷಿಣದ ಬಯಲುಪ್ರದೇಶ. ಪ್ರಾಚೀನ ಕಾಲದಲ್ಲಿ ಬ್ಯಾಬಿಲೋನಿಯ ಮತ್ತು ಅಸ್ಸೀರಿಯಗಳನ್ನು ಒಳಗೊಂಡಿದ್ದ ಮೆಸೊಪೊಟೇಮಿಯ ಈಗ ಸ್ವತಂತ್ರ ಅರಬ್ಬೀ ರಾಜ್ಯವಾದ ಇರಾಕ್ ಆಗಿದೆ.

ಇತಿಹಾಸ : ಮೆಸೊಪೊಟೇಮಿಯದ ಪ್ರಸ್ಥಭೂಮಿಯಲ್ಲಿ ನೂತನ ಶಿಲಾಯುಗದಷ್ಟು ಹಿಂದೆಯೇ ಮಾನವವಸತಿ ಆರಂಭವಾಯಿತೆಂದು ಹೇಳಬಹುದು. ಆದರೆ ಇಲ್ಲಿಯ ಬಯಲುಪ್ರದೇಶ ಕ್ರಿ. ಪೂ. 5 - 4 ನೆಯ ಸಹಸ್ರಮಾನದ ತನಕ ಶಿಲಾಯುಗ ಸಂಸ್ಕøತಿಯೂ ಪ್ರವೇಶಿಸದ ಜವುಗು ಪ್ರದೇಶವಾಗಿ ಉಳಿದಿತ್ತು. ಹಾಗಿದ್ದರೂ ಮೊದಲ ಮಹಾನಾಗರಿಕತೆಗಳು ಹುಟ್ಟಿ ಬೆಳೆದುದು ಈ ಬಯಲು ಪ್ರದೇಶದಲ್ಲಿಯೇ. ಮೆಸೊಪೊಟೇಮಿಯದ ಇತಿಹಾಸವನ್ನು ಪ್ರಾಚೀನ ಕಾಲ, ಮಧ್ಯಕಾಲ ಮತ್ತು ಆಧುನಿಕ ಕಾಲ ಎಂದು ಮೂರು ಪ್ರಧಾನ ಭಾಗಗಳಾಗಿ ವಿಂಗಡಿಸಬಹುದು. ಈ ಭಾಗಗಳು ಸಾಮ್ರಾಜ್ಯ, ವಂಶ ಅಥವಾ ಅಧಿಕಾರದಲ್ಲಿ ಉಂಟಾದ ಏರುಪೇರುಗಳಿಗೆ ಅನುಗುಣವಾಗಿ ಪುನವಿಂಗಡಣೆಯಾಗುತ್ತವೆ. ಈ `ನದಿಗಳ ನಡುವಣ ಭೂಮಿಯಲ್ಲಿ ಸಾಮ್ರಾಜ್ಯಗಳು ಹುಟ್ಟಿಬೆಳೆದು, ಯಶಸ್ಸಿನ ಶಿಖರವೇರಿ, ಕಳೆಗುಂದಿ ಅವನತಿ ಹೊಂದಿ ನಿರ್ನಾಮವಾಗಿದೆ.

ಮೆಸೊಪೊಟೇಮಿಯ ಇತಿಹಾಸದ ಕಾಲಾನುಪೂರ್ವ ಸೂಚಿ ಕ್ರಿ. ಪೂ. ಕ್ರಿ. ಶ. ಪ್ರಾಚೀನಕಾಲ 4000 637 ಸುಮೇರಿಯನ್ - ಅಕ್ಕಾಡಿಯನ್ 4000 - 2000 ಪ್ರಾಚೀನ ಬ್ಯಾಬಿಲೋನಿಯನ್ 2000 - 1600 ಮಿಟಾನಿಯನ್ - ಕ್ಯಾಸೈಟ್ 1600 - 1200 ಮಧ್ಯ ಬ್ಯಾಬಿಲೋನಿಯನ್ 1200 - 745 ಅಸ್ಸೀರಿಯನ್ 745 - 612 ನವಬ್ಯಾಬಿಲೋನಿಯನ್ (ಕಾಲ್ಡೀಯನ್) 612 - 538 ಪರ್ಷಿಯನ್ 538 - 323 ಸಿಲ್ಯೂಕಿಡ್ 323 - 140 ಪಾರ್ಥಿಯನ್ 140 227 ಸಸ್ಸಾನಿಯನ್ 227 - 637 ಮಧ್ಯಕಾಲ 637 - 1534 ಕಲೀಫೇಟರು 637 - 1258 ಆರ್ಥೋಡಾಕ್ಸ್ 637 - 661 ಉಮಾಯದ್ 661 - 750 ಅಬ್ಬಾಸಿದ್ (ಅನಂತರ ಸೆಲ್‍ಜುಕ್‍ತುರ್ಕರು) 750 - 1253 ಮಂಗೋಲಿಯನ್ 1258 - 1509 ಪರ್ಷಿಯನ್ 1509 - 34 ಆಧುನಿಕ ಕಾಲ ಆಟೋಮನ್ ತುರ್ಕರು 1534 - 1917 ಇರಾಕ್ ರಾಜ್ಯ 1921 ರಿಂದ

ಪ್ರಾಚೀನ ಕಾಲ (ಕ್ರಿ. ಪೂ. 4000 - ಕ್ರಿ. ಶ. 637)

ಸುಮೇರಿಯನ್- ಅಕ್ಕಾಡಿಯನ್ (ಕ್ರಿ. ಪೂ. 4000 - 1900) : ಈ ಕಾಲದಲ್ಲಿ ಪ್ರಸ್ಥಭೂಮಿಯಲ್ಲಿ ನೂತನ ಶಿಲಾಯುಗದ ಜನಸಮುದಾಯವೊಂದು ನೆಲಸಿದರೆ ಈಶಾನ್ಯದ ಯಾವುದೋ ಮೂಲದಿಂದ ಸುಮೇರಿಯನ್ನರು ಮತ್ತು ಮರುಭೂಮಿ ಸೆಮೈಟರು ಬಯಲು ಪ್ರದೇಶಕ್ಕೆ ಬಂದು ವಾಸಿಸಿದರು. ಇಲ್ಲಿಯ ಜವುಗು ಭೂಮಿಯಿಂದ ಹೆಚ್ಚಿನ ತೇವಾಂಶವನ್ನು ತೆಗೆದುಹಾಕಿದ ಸುಮೇರಿಯತನ್ನರು ಶಾಶ್ವತ ತಳಹದಿಯ ಮೇಲೆ ವ್ಯವಸಾಯ ಆರಂಭಿಸಿದರು. ಶೀಘ್ರ ಕಾಲದಲ್ಲಿಯೇ ಈ ಜನರಿಂದ ನವನಾಗರಿಕತೆಯೊಂದು ಉದಿಸಿತು. ವಾಸ್ತುಶಿಲ್ಪ, ಲೋಹಶಿಲೆಗಾರಿಕೆ, ಕ್ಯೂನಿಫಾರಮ್ ಅಥವಾ ಕೋನಾಕೃತಿಯ ಬರೆವಣಿಗೆ, ಸಾಹಿತ್ಯ, ಪಂಚಾಂಗದ ಉದ್ದೇಶಕ್ಕಾಗಿ ರೂಪುಗೊಂಡ ಖಗೋಳಶಾಸ್ತ್ರ, ಗುಲಾಮಗಿರಿ ಮುಂತಾದ ಹಲವು ಲಕ್ಷಣಗಳಿಂದ ಕೂಡಿದ ನಾಗರಿಕತೆ ಇವರದು.

ದಕ್ಷಿಣ ಬಯಲು ಪ್ರದೇಶದಲ್ಲಿ ಪರ್ಷಿಯನ್ ಖಾರಿಯ ಮೇಲ್ಭಾಗದಲ್ಲಿ ಸುಮೇರಿಯನ್ನರು ನಗರರಾಜ್ಯಗಳು ಹುಟ್ಟಿ ಹರಡಿದವು. ಪುರೋಹಿತ ಪ್ರಾಬಲ್ಯವಿರುವ ದೇವಪ್ರಭುತ್ವದ ತಳಹದಿಯ ಮೇಲೆ ವ್ಯವಸ್ಥೆಗೊಂಡ ಈ ರಾಜ್ಯಗಳಿಗೆ ರಾಜಕೀಯ ಸ್ವಾತಂತ್ರ್ಯವಿತ್ತು. ಈ ರಾಜ್ಯಗಳನ್ನು 'ಪೆಟಿಸಿ ಎಂಬ ರಾಜರು ಆಳುತ್ತಿದ್ದರು. ಪ್ರಸಿದ್ಧ ಸುಮೇರಿಯನ್ ನಗರರಾಜ್ಯಗಳೆಂದರೆ ಆರ್, ಎರಿಡು, ಉಮ್ಮ, ಎರೆಕ್, ಹಾಗೂ ನಿಪ್ಪುರ್ ಇವು ಪರಸ್ಪರ ವ್ಯಾಪಾರ ವ್ಯವಹಾರ ನಡೆಸಿದವು; ಅಂತೆಯೇ ಪರಸ್ಪರ ಕಾದಾಡಿದ ನಿದರ್ಶನಗಳೂ ಉಂಟು. ಉತ್ತರದಲ್ಲಿ ಮುಂದೆ ಬ್ಯಾಬಿಲಾನ್ ಎಂದು ಹರಿಚಿತವಾದ ಭೂಭಾಗದಲ್ಲಿ ಸೆಮೆಟಿಕ್ ಬುಡಕಟ್ಟಿನ ಜನ ಕಾಲಕ್ರಮೇಣ ಸುಮೇರಿಯನ್ ಸಂಸ್ಕøತಿಯನ್ನು ಸ್ವೀಕರಿಸಿ ಅಂತರ್ಗತ ಮಾಡಿಕೊಳ್ಳುತ್ತ ನಾಗರಿಕರಾಗುತ್ತಿದ್ದರು. ಅಕ್ಕಾಡ್‍ನ ಎಂದು ಕರೆಯಲಾದ ಪ್ರಮುಖ್ಯ ಸೆಮೆಟಿಕ್ ಪ್ರದೇಶ ಪ್ರಬಲವಾಗಿ ಸುಮೇರಿಯನ್ ನಗರಗಳ ಮೇಲೆ ರಾಜಕೀಯ ಅಧಿಕಾರವನ್ನು ಸ್ಥಾಪಿಸಿತು. ಅಕ್ಕಾಡ್‍ನ ಮೊದಲನೆಯ ಸಾರಗಾನ್ (ಕ್ರಿ.ಪೂ.ಸು.2637-1582) ಪ್ರಸಿದ್ಧ ದೊರೆ. ಈತ ಪರ್ಷಿಯನ್ ಖಾರಿಯಿಂದ ಮೆಡಿಟರೇನಿಯನ್ ಸಮುದ್ರದವರೆಗಿನ ಪ್ರದೇಶಗಳನ್ನು ಗೆದ್ದು ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸಿದ. ಸ್ವಲ್ಪಕಾಲ ಸೆಮೈಟರು ಬಯಲು ಪ್ರದೇಶದಲ್ಲಿ ಏಕತೆಯನ್ನು ಸ್ಥಾಪಿಸುವಲ್ಲಿ ಸಫಲರಾದರು. ಆದರೆ ಕ್ರಿ.ಪೂ. 2200ರಲ್ಲಿ ಅಕ್ಕಾಡಿಯನ್ನರು ಅವನತಿ ಹೊಂದಿದ ತರುವಾಯ ಅಧಿಕಾರದಲ್ಲಿ ಹೊಸ ಬಗೆಯ ವಿಕೇಂದ್ರಿಕರಣ ಉಂಟಾಯಿತು. ಸುಮೇರಿಯನ್ನರು ಮತ್ತೆ ಅಧಿಕಾರಕ್ಕೆ ಬಂದರು. 1900ರ ತನಕ ಅರ್. ಇಸಿನ್ ಮತ್ತು ಲಾರ್ಸಾ ರಾಜ್ಯಗಳು ಸುಮೇರಿಯನ್ನರವಾದವು. ಕೆಲವೊಮ್ಮೆ ಬಯಲು ಪ್ರದೇಶದ ಪ್ರಭಾವ ಅಸ್ಸೀರಿಯನ್ ಪ್ರಸ್ಥಭೂಮಿಯವರೆಗೂ ವಿಸ್ತರಿಸಿತು. ಇದರಿಂದಾಗಿ ಸುಮೇರಿಯನ್ ನಾಗರಿಕತೆ ಉತ್ತರದೆಡೆಗೆ ಹರಡಲು ಅನುಕೂಲವಾಯಿತು. ಈ ಸಂಸ್ಕøತಿ ಗುಡ್ಡಗಾಡು ಜನರ ದಾಳಿಗೀಡಾಗಿ ನಾಶವಾಯಿತು.

ಪ್ರಾಚೀನ ಬ್ಯಾಬಿಲೋನಿಯನ್ (ಕ್ರಿ.ಪೂ. 2000-1600) : ಪ್ರಧಾನವಾಗಿ ಪಶ್ಚಿಮದ ಕಡೆಯಿಂದ ಸಂಭವಿಸಿದ ನವಸೆಮೆಟಿಕ್ ಆಕ್ರಮಣದ ಫಲವಾಗಿ ಪ್ರಾಚೀನ ಬ್ಯಾಬಿಲೋನಿಯನ್ ರಾಜ್ಯ ಸ್ಥಾಪಿತವಾಯಿತು. ಮತ್ತೊಮ್ಮೆ ಬಯಲು ಪ್ರದೇಶ ಒಂದುಗೊಡಿತು. ಬ್ಯಾಬಿಲಾನ್ ನಗರ ಈ ರಾಜ್ಯದ ರಾಜಧಾನಿಯಾಯಿತು. ಬ್ಯಾಬಿಲೋನಿಯನ್ನರು ಆಮೊರರೈಟ್ ಪಂಗಡಕ್ಕೆ ಸೇರಿದವರು. ನವಸೆಮೆಟಿಕ್ ವಂಶದ ಆರನೆಯ ಅರಸ ಹಮ್ಮೂರಬಿ (ಕ್ರಿ.ಪೂ.ಸು.1935-13) ಶ್ರೇಷ್ಠ ಆಡಳಿತಗಾರ. ಈತ ಜಾರಿಗೆ ತಂದ ಕಾನೂನು ನಿಯಮಗಳಿಂದ ಪ್ರಸಿದ್ದನಾದ. ಪುರಾತನ ನಿಯಮ ಮತ್ತು ಸಂಪ್ರದಾಯಗಳನ್ನು ವಿಶ್ಲೇಷಿಸಿ ಕ್ರೋಢೀಕರಿಸಿ ಸಂಕ್ಷಿಪ್ತರೀತಿಯಲ್ಲಿ ಪ್ರಕಟಿಸಿದುದು ಈತನ ಮಹಾಸಾಧನೆ. ಜನ ಸಾಮಾನ್ಯರ ಅರಿವಿಗಾಗಿ ಎಂಟು ಅಡಿ ಎತ್ತರದ ಶಿಲೆಯ ಮೇಲೆ ತನ್ನ ಕಾನೂನುಗಳನ್ನು ಸೂರ್ಯನಿಂದ ಪಡೆಯುತ್ತಿರುವ ದೃಶ್ಯಗಳನ್ನು ಶಾಸನಸ್ತಂಭಗಳ ಮೇಲ್ಭಾಗದಲ್ಲಿ ಕೆತ್ತಲಾಗಿದೆ. ಈತನ ಕಾನೂನು ನಿಯಮಗಳು ಮುಯ್ಯಿಗೆ ಮುಯ್ಯಿ ಎನ್ನುವ ತತ್ತ್ವದ ಆಧಾರದ ಮೇಲೆ ರೂಪಿತವಾಗಿದ್ದವು. ಉದಾಹರಣೆಗೆ ಜಗಳದಲ್ಲಿ ಒಬ್ಬ ಕಣ್ಣು ಕಳೆದುಕೊಂಡರೆ ಅದಕ್ಕೆ ಕಾರಣವಾದ ಇನ್ನೊಬ್ಬನ ಕಣ್ಣನ್ನೂ ಕೀಳಲಾಗುತ್ತಿತ್ತು. ಮರಣದಂಡನೆ ಸಾಮಾನ್ಯ ಶಿಕ್ಷೆಯಾಗಿತ್ತು.

 	ಸುಮೇರಿಯನ್ ನಾಗರಿಕತೆಯ ಅಡಿಪಾಯದ ಮೇಲೆ ಪ್ರಾಚೀನ ಬ್ಯಾಬಿಲೋನಿಯನ್ ನಾಗರಿಕತೆ ಸ್ಥಾಪಿತವಾಯಿತು. ಆದರೆ ಪ್ರಾಚೀನ ಸುಮೇರಿಯನ್ ಭಾಷೆಗೆ ಬದಲಾಗಿ ಆಳರಸರ ಸೆಮೆಟಿಕ್ ಭಾಷೆ ಜಾರಿಗೆ ಬಂತು. ಹೊಸ ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಗಳು ರೂಪುಗೊಂಡವು. ಆರ್ಥಿಕವಾಗಿ ಮಹತ್ತರ ಬದಲಾವಣೆಗಳುಂಟಾದವು. ಹಳೆಯ ಪದಾರ್ಥ ಅಥವಾ ಸೇವಾ ವಿನಿಮಯ ಆರ್ಥಿಕ ಪದ್ಧತಿ ಬದಲಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಪ್ರಮುಖ ವಿನಿಮಯ ಮಾಧ್ಯಮವಾದವು. ಬ್ಯಾಬಿಲೋನಿಯ ಹಾಗೂ ಆಸ್ಸೀರಿಯಗಳ ನಾಗರಿತೆಯ ಪ್ರಧಾನ ಲಕ್ಷಣಗಳ ಪೈಕಿ ಸೆಮೆಟಿಕ್ ಅಂಶವೂ ಒಂದು.
 	ಮಿಟಾನಿಯನ್ ಮತ್ತು ಕ್ಯಾಸೈಟ್ (ಕ್ರಿ.ಪೂ. 1600-1200) : ಈ ಕಾಲದಲ್ಲಿ ಸೆಮೈಟರ್ ಅಧಿಕಾರಕ್ಕೆ ತಾತ್ಕಾಲಿಕ ಗ್ರಹಣ ಹಿಡಿಯಿತು. ಕ್ರಿ.ಪೂ.1600ರ ಸುಮಾರಿಗೆ ಬ್ಯಾಬಿಲೋನಿಯದಲ್ಲಿ ಮತ್ತು ಅದಕ್ಕಿಂತ ಒಂದು ಶತಕ ಮೊದಲೆ ಅಸ್ಸೀರಿಯದಲ್ಲಿ ಹೊಸ ಜನಸಮುದಾಯಗಳು ಪ್ರಾಧಾನ್ಯಕ್ಕೆ ಬಂದು ಉತ್ತರದ ಬೆಟ್ಟಸಾಲುಗಳೆಡೆಯಿಂದ ಬಂದ ಹರಿಯನ್ನರು ಸುಮೇರಿಯನ್ ಅಥವಾ ಸೆಮೆಟಿಕ ಭಾಷೆಯಿಂದ ಸಾಕಷ್ಟು ಭಿನ್ನವಾದ ಭಾಷೆಯೊಂದನ್ನು ಆಡುತ್ತಿದ್ದರು ಈ ಜನರು ಅಸ್ಸೀರಿಯದಲ್ಲಿ ಎಲ್ಲೆಡೆ ಹರಡಿ ಮಿಟಾನಿಯನ್ ರಾಜ್ಯದ ಜನಸಂಖ್ಯೆಯ ಅತಿದೊಡ್ಡ ಭಾಗವಾದರು. ಮಿಟಾನಿಯನ್ ರಾಜ್ಯ ಪೂರ್ವದ ಪರ್ವತ ಪ್ರದೇಶ ಮತ್ತು ಮೇಲಣ ಯೂಫ್ರಟೀಸ್ ನಡುವಣ ಪ್ರಸ್ಥಭೂಮಿಯಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿತ್ತು. (ಸುಮಾರು 1450-1350). ಆದರೆ ಈ ಕಾಲದಲ್ಲಿ ಮೆಸೊಪೊಟೇಮಿಯದ ಮೇಲೆ ಆಕ್ರಮಣ ನಡೆಸಿದವರಲ್ಲಿ ರಾಜಕೀಯ ಅಧಿಕಾರ ಇನ್ನೊಂದು ಪ್ರಾಯಶಃ ಅತಿಸಣ್ಣದಾದ-ಹೊಸ ಗುಂಪಿನ ಕೈಯಲ್ಲಿ ಕೇಂದ್ರಿಕೃತವಾಗಿತ್ತು. ಇವರು ಇಂಡೋ-ಯುರೋಪಿಯನ್ ಭಾಷೆಗಳನ್ನಾಡುತ್ತಿದ್ದರು. ಇದು ಭಾರತವನ್ನು ಆಕ್ರಮಿಸಿದ ಆರ್ಯರಾಡುತ್ತಿದ್ದ ಭಾಷೆಗೆ ಸಮಬಂಧಿಸಿದ್ದೆಂದು ತೋರುತ್ತದೆ. ಮಿಟಾನಿಯ ಪ್ರಭುಗಳು ಮತ್ತು ಬ್ಯಾಬಿಲೋನಿಯದ ಕ್ಯಾಸ್ಯಟ್ ದೊರೆಗಳು ಈ ಸಮುದಾಯದ ಪ್ರಧಾನ ಪ್ರತಿನಿಧಿಗಳಾಗಿದ್ದರು. ಕ್ರಿ.ಪೂ. 1600ರ ಸುಮಾರಿಗೆ ಪ್ರಾಚೀನ ಬ್ಯಾಬಿಲೋನಿಯನ್ ವಂಶದ ಅಧಿಕಾರವನ್ನು ಕಿತ್ತೊಗೆದ ಕ್ಯಾಸೈಟರು ಕ್ರಿ.ಪೂ.ಸು.1200ರ ತನಕ ಅಧಿಕಾರದಲ್ಲಿ ಉಳಿದರು. ಇವರ ಆಡಳಿತದಲ್ಲಿ ಗಣ್ಯಶ್ರೀಮಂತರಿಗೆ ಸ್ಥಾನವಿತ್ತು. ಆದರೆ ಅವರ ಸಂಖ್ಯೆ ಅತ್ಯಲ್ಪವಾಗಿತ್ತು. ಕ್ಯಾಸೈಟ್ ಅರಸರು ಈಜಿಪ್ಟಿನ ಫಾರೊ ಮತ್ತು ಹಿಟೈಟ್ ಮಹಾರಾಜರೊಂದಿಗೆ ಸರಿಸಮಾನ ಗೌರವಾದರದಿಂದ ವ್ಯಾಪಾರ ವ್ಯವಹಾರ ನಡೆಸುತ್ತಿದ್ದರು ಆದರೆ ಕ್ಯಾಸೈಟ್ ಅರಸರ ಸಾಂಸ್ಕøತಿಕ ಕೊಡುಗೆ ಅತಿಗೌಣವಾದುದು ಬಯಲು ಪ್ರದೇಶದ ಅಧಿಕೃತ ಭಾಷೆಯಾಗಿ ಸೆಮೆಟಿಕ್ ಮುಂದುವರಿಯಿತು. ಬ್ಯಾಬಿಲೋನಿಯನ್ ನಾಗರಿಕತೆಯ ಪ್ರಧಾನ ಗುಣಲಕ್ಷಣಗಳು ಬದಲಾವಣೆ ಆಗದ ಉಳಿದುಬಂದವು.
 	ಪುನಶ್ಚೇತನಗೊಂಡ ಸೆಮೆಟಿಕ್‍ರಿಂದಾಗಿ ಮಿಟಾನಿಯನ್ ಹಾಗೂ ಕ್ಯಾಸೈಟ್ ರಾಜ್ಯಗಳು ಪತನ ಹೊಂದಿದವು. ಕ್ರಿ.ಪೂ.14ನೆಯ ಶತಮಾನದಲ್ಲಿ ಅಸ್ಸೀರಿಯದಲ್ಲಿ ಸೆಮೆಟಿಕ್ ರಾಜ್ಯವೊಂದು ಸ್ಥಾಪಿತವಾದಾಗ, ಮಿಟಾನಿಯನ್ನರು ಪಶ್ಚಿಮದ ಮೇಲಣ ಯೂಫ್ರಟೀಸ್ ಪ್ರದೇಶದೆಡೆಗೆ ಸಾಗಬೇಕಾಯಿತು. ಕ್ರಿ.ಪೂ.1350ರ ತರುವಾಯ ಅಸ್ಸೀರಿಯನ್ನರ ಮತ್ತು ಹಿಟೈಟರ ನಿರಂತರ ಒತ್ತಡದಿಂದಾಗಿ ಮಿಟಾನಿಯನ್ ರಾಜ್ಯ ನಿರ್ನಾಮವಾಯಿತು ಅಂದಿನಿಂದ ಪ್ರಸ್ಥಭೂಮಿ ಅಸ್ಸೀರನ್ನರ ಅಧೀನಕ್ಕೊಳಪಟ್ಟಿತು. ಕ್ರಿ.ಪೂ.ಸು.1300-1100 ಮತ್ತು 885-763 ಈ ಕಾಲಗಳಲ್ಲಿ ಅಸ್ಸೀರಿಯನ್ನರು ರಾಜಕೀಯ ಉನ್ನತಿ ಸಾಧಿಸಿದರು. ಕೊನೆಗೆ ಇವರು ಕ್ರಿ.ಪೂ.745ರ ಬಳಿಕ ಮಧ್ಯ ಪ್ರಾಚ್ಯದಲ್ಲಿ ತಮ್ಮ ಮಹಾಸಾಮ್ರಾಜ್ಯವನ್ನು ಸ್ಥಾಪಿಸುವುದಕ್ಕಾಗಿ ಮುನ್ನೆಡೆದರು.
 	ಮಧ್ಯ ಬ್ಯಾಬಿಲೋನಿಯನ್ (ಕ್ರಿ.ಪೂ.1200-745) : ಈ ಮಧ್ಯೆ ಬಯಲು ಪ್ರದೇಶದ ಸೆಮೈಟರು, ಕ್ಯಾಸೈಟರ್ ಅಧಿಕಾರವನ್ನು ಕಿತ್ತೊಗೆದಿದ್ದರು. ಮಧ್ಯೆ ಬ್ಯಾಬಿಲೋನಿಯನ್ ಕಾಲದಲ್ಲಿ ಬ್ಯಾಬಿಲೋನಿಯನ್ನರಿಗೂ ಅಸ್ಸೀರಿಯನ್ನರಿಗೂ ಹೋರಾಟ ಉಂಟಾಗಿ ಕೊನೆಗೆ ಎಲಾಮಿನ ಗಿರಿಜನ ಮತ್ತು ಮರುಭೂಮಿಯ ಬುಡಕಟ್ಟಿನ ಜನ ಅಸ್ಸೀರಿಯನ್ ಸಾಮ್ರಾಜ್ಯಷಾಹೀಯ ಅಧೀನಕ್ಕೊಳಪಟ್ಟರು. 689ರಲ್ಲಿ ಸೆನ್ನೆಚಿರಬ್ ಎಂಬಾತ ಬ್ಯಾಬಿಲಾನನ್ನು ಲೂಟಿಹೊಡೆದ. ಕ್ರಿ.ಪೂ.7ನೆಯ ಶತಮಾನದ ಕೊನೆಯ ದಶಕಗಳ ತನಕ-ಬಂಡಾಯದ ಕೆಲವು ಸಂಕ್ಷಿಪ್ತ ಅವಧಿಗಳನ್ನು ಹೊರತುಪಡಿಸಿ-ಬ್ಯಾಬಿಲಾನ್ ಅಸ್ಸೀರಿಯದ ಪ್ರಾಂತ್ಯವಾಗಿ ಉಳಿಯಿತು.
 	ಅಸ್ಸೀರಿಯನ್ (ಕ್ರಿ.ಪೂ..745-612) : ಹಳೆಯ ಒಡಂಬಡಿಕೆಯ ಇತಿಹಾಸದಲ್ಲಿ ವಹಿಸಿದ ಪಾತ್ರದಿಂದಾಗಿ ಪರಿಚಿತರಾದ ಕೆಲವು ಅರಸರು ಅಸ್ಸೀರಿಯನ್ ಸಿಂಹಾಸನಾಧೀಶರು : ಇಮ್ಮಡಿ ಸಾರಗಾನ್ ಸೆನ್ನೆಚಿರಬ್, ಈಜಿಪ್ಟನ್ನು ಗೆದ್ದ ಎಸರ್ ಹಡನ್ ಹಾಗೂ ಬ್ಯಾಬಿಲೋನಿಯನ್ ಸಾಹಿತ್ಯಸಂಪತ್ತನ್ನು ತನ್ನ ಸುಸಜ್ಜಿತ ಗ್ರಂಥಾಲಯದಲ್ಲಿ ಸಂಗ್ರಹಿಸಿದ ಅಸುರ್‍ಬನಿಯಲ್, ಅಸ್ಸೀರಿಯನ್ನರ ಆಡಳಿತದಲ್ಲಿ ಮೆಸೊಪೊಟೇಮಿಯ ಪ್ರದೇಶ ಸಿರಿಯ, ಪ್ಯಾಲಸ್ತೀನ್ ಮತ್ತು ಈಜಿಪ್ಟ್‍ಗಳನ್ನೊಳಗೊಂಡ ಮಹಾ ಸಾಮ್ರಾಜ್ಯದ ಒಂದು ಭಾಗವಾಗಿತ್ತು.
 	ಅಸುರ್‍ಬನಿಪಾಲನ ಆಳ್ವಿಕೆ ಅಸ್ಸೀರಿನ್ ಸಾಮ್ರಾಜ್ಯದ ಸುವರ್ಣಯುಗ, ಈತ ಮಹಾ ದಿಗ್ವಿಜಯಿ ಹಾಗೂ ಉತ್ತಮ ವಿದ್ವಾಂಸನೆಂದು ಪ್ರಸಿದ್ದನಾದ. ಅತ್ಯಂತ ಶ್ರೇಷ್ಠ ಗ್ರಂಥಭಂಡಾರವನ್ನು ನಿರ್ಮಿಸಿದ. ಕ್ರಿ.ಪೂ626ರಲ್ಲಿ ಈತ ಮೃತನಾದ ತರುವಾಯ ಅಸ್ಸೀರಿಯನ್ ಸಾಮ್ರಾಜ್ಯ ಶೀಘ್ರಗತಿಯಲ್ಲಿ ಛಿದ್ರವಾಗತೊಡಗಿದು. 625ರಲ್ಲಿ ಬ್ಯಾಬಿಲೋನಿಯನ್ನರು ದಂಗೆ ಎದ್ದರು : ಮಾತ್ರವಲ್ಲದೆ ಇರಾನಿನ ಪ್ರಸ್ಥಭೂಮಿಯಿಂದ ಬಂದ ಮೀಡ ಜನರೊಂದಿಗೆ ಮೈತ್ರಿ ಏರ್ಪಡಿಸಿಕೊಂಡರು. ಇವರ ಒಗ್ಗಟ್ಟಿನಿಂದ ಆದ ದಾಳಿಯಿಂದಾಗಿ ಕ್ರಿ.ಪೂ. 612-538 : ನೆಬೊಪೊಲಸ್ಸರ್ ಮತ್ತು ಆತನ ಉತ್ತರಾಧಿಕಾರಿ ನೆಟು ಕಡ್ನಸರ್ ಎಂಬವರ ಕಾಲದಲ್ಲಿ ನವಬ್ಯಾಬಿಲೋನಿಯನ್ ರಾಜ್ಯ ಉದಯವಾಯಿತು. ಬಯಲುಪ್ರದೇಶಕ್ಕೆ ಮತ್ತೊಮ್ಮೆ ಪ್ರಾಮುಖ್ಯ ಲಭಿಸಿತು. ಇವರ ಆಡಳಿತ ಮೆಸೊಪೊಟೇಮಿಯ ದಾಚೆಗೆ ಹರಡಿ ಪ್ಯಾಲಸ್ತೀನ್ ಮತ್ತು ಸಿರಿಯ ಪ್ರದೇಶಗಳನ್ನೊಳಗೊಂಡಿತು. ಜೆರುಸಲಡಮ್ ಮೇಲಿನ ಅಕ್ರಮಣ ಮತ್ತು ಕ್ರಿ.ಪೂ 597ರಲ್ಲಿ ಆರಂಭವಾದ ಯಹೂದಿಗಳ ಬಂಧನ ಇವನ ಕಾಲದ ಮುಖ್ಯ ಘಟನೆಗಳು, ಈತ ಬ್ಯಾಬಿಲಾನ್ ನಗರವನ್ನು ಜೀರ್ಣೋದ್ಧಾರಗೊಳಿಸಿದ. ಪ್ರಪಂಚದ ಅದ್ಭುತಗಳಲ್ಲಿ ಒಂದೆನಿಸಿದ 'ತೂಗಾಡುವ ತೋಟಗಳು ಈ ಅರಸನ ನಿರ್ಮಾಣ. ಸೈರಸನ ನಾಯಕತ್ವದಲ್ಲಿ ನಡೆದ ಪರ್ಷಿನ್ ಆಕ್ರಮಣಗಳಿಂದಾಗಿ ಕಾಲ್ಡಿಯನ್ನರ ಆಳ್ವಿಕೆ ಕೊನೆಗೊಂಡಿತು. ಸೈರಸ್‍ನಿಂದ ಪರಾಜಿತರಾದ ನೆಬೊನೀಡಸ್ ಮತ್ತು ಅವನ ಮಗ ಬೆಲ್‍ಷಜರ್ ಸಹ ಹಳೆಯ ಒಡಂಬಡಿಕೆಯಲ್ಲಿ ಪ್ರಧಾನವಾಗಿ ಉಲ್ಲೇಖಿತರಾಗಿದ್ದಾರೆ. 

	ಈ ಪ್ರದೇಶ ಕ್ರಿ.ಪೂ. 539ರಲ್ಲಿ ಪರ್ಷಿಯನ್ನರ ವಶವಾದರೂ ಕ್ರಿ.ಶ.1 ನೆಯ ಶತಮಾನದಲ್ಲಿ ಮಂಗೋಲರ ದಾಳಿಯಾಗುವ ತನಕ ಇಲ್ಲಿಯ ಆರ್ಥಿಕ ಮತ್ತು ಸಾಂಸ್ಕøತಿಕ ಪ್ರಾಮುಖ್ಯ ಕ್ಷೀಣಿಸಲಿಲ್ಲ. ಯಾವುದೇ ಗುಂಪು ಅಧಿಕಾರದಲ್ಲಿದ್ದರೂ ಸುತ್ತಮುತ್ತಣ ಪ್ರದೇಶದ ಆಡಳಿತಕೇಂದ್ರವಾಗಿ ಬ್ಯಾಬಿಲೋನಿಯ ಮೆರೆಯಿತು. ಈ ನಗರ ಹಾಗೂ ಸಿಲ್ಯುಕಿಯ. ಜೆಸಿಪೋನ್ ಮತ್ತು ಬಾಗ್‍ದಾದ್ ಪಟ್ಟಣಗಳು ಪರಸ್ಪರ ಅತ್ಯಂತ ಸನಿಹದಲ್ಲಿದ್ದವು ವ್ಯವಸಾಯ ಉತ್ಪಾದನೆಯ ಸಾಧ್ಯತೆಗಳಿಂದಾಗಿ ಮತ್ತು ವ್ಯಾಪಾರ ವ್ಯವಹಾರಗಳಿಗೆ ಅನುಕೂಲಕರವಾದ ಸನ್ನಿವೇಶದಿಂದಾಗಿ ಮತ್ತು ವ್ಯಾಪಾರ ವ್ಯವಹಾರಗಳಿಗೆ ಅನುಕೂಲಕರವಾದ ಸನ್ನಿವೇಶದಿಂದಾಗಿ ಬಯಲು ಪ್ರದೇಶವು ಶ್ರೀಮಂತ ಹಾಗೂ ಜನಸಾಂದ್ರತೆಯ ಪ್ರಾಂತವಾಯಿತು. ಇತರ ಪ್ರದೇಶಗಳ ಆರ್ಥಿಕ ಸಂಪತ್ತಿನಲ್ಲಿ ಏರಿಳಿತಗಳುಂಟಾದರೂ ಬ್ಯಾಬಿಲೋನಿಯ ಮಾತ್ರ ಆರ್ಥಿಕ ಸ್ಥಿರತೆ ಹೊಂದಿದ್ದರಿಂದ ಸಮತೋಲನ ಸಾಧ್ಯವಾಯಿತು. ಅಲ್ಲದೆ ಮಧ್ಯಪ್ರಾಚ್ಯ ಗ್ರೀಕ್ ಮತ್ತು ರೋಮನ್ ನಾಗರಿಕತೆಗಳಿಗೆ ಒಂದು ಪ್ರಧಾನ ಸಹಾಯಕ ಕೇಂದ್ರವಾಗಿ ಬ್ಯಾಬಿಲೋನಿಯ ಪ್ರಾಚೀನಕಾಲದುದ್ದಕ್ಕೂ ಸಾಂಸ್ಕøತಿಕ ಪ್ರಸರಣದ ಮೂಲ ಕೇಂದ್ರಗಳಲ್ಲೊಂದಾಗಿ ಉಳಿಯಿತು.
 	ಪರ್ಷಿಯನ್ (ಕ್ರಿ.ಪೂ.538-323) : ಮೆಸೊಪೊಟೇಮಿಯದ ಇತಿಹಾಸದಲ್ಲಿ ಸೈರಸ್ ಮಹಾಶಯನ ನೇತೃತ್ವದಲ್ಲಿ ಪರ್ಷಿಯನ್ನರ ಆಗಮನ ಒಂದು ಮಹತ್ತ್ವದ ಘಟನೆ. ಯೂಫ್ರಟೀಸ್-ಟೈಗ್ರಿಸ್ ಕಣಿವೆ ಪ್ರದೇಶ ಕಾಲ್ಡೀಯ ಮತ್ತು ಅಸ್ಸೀರಿಯ ಎಂದು ಎರಡು 'ಸತ್ರಪಿಗಳಾಗಿ ವಿಭಜಿತವಾಯಿತು ಮೊದಲನೆಯ ಸತ್ರಪಿಯಲ್ಲಿ ಬಯಲುಪ್ರದೇಶವು ಎರಡನೆಯದರಲ್ಲಿ ಪ್ರಸ್ಥಭೂಮಿಯೂ ಸೇರಿದ್ದವು ಸಿಂಧೂವಿನಿಂದ ನೈಲ್‍ವರೆಗೆ ವಿಸ್ತøತವಾಗಿದ್ದು ವಿಶಾಲ ಪರ್ಷಿಯನ್ ಸಾಮ್ರಾಜ್ಯದ ನಾಲ್ಕು ಪ್ರಧಾನ ಆಡಳಿತ ಕೇಂದ್ರಗಳಲ್ಲಿ ಬ್ಯಾಬಿಲಾನ್ ಒಂದಾಗಿತ್ತೆಂಬುದರಿಂದಲೇ ಅದರ ಪ್ರಾಮುಖ್ಯವನ್ನು ಗುರುತಿಸಬಹದು. ಮೆಸೊಪೊಟೇಮಿಯದಲ್ಲಿ ಬಹುಸಂಖ್ಯಾತರು ಸೆಮೆಟಿಕ್ ಜನ ಪರ್ಷಿಯದ ಸಾರ್ವಭೌಮರು ಈ ಪ್ರದೇಶದಲ್ಲಿ ಪ್ರಚಲಿತವಿದ್ದ ಅರಾಮೆಯಿಕ್ ಭಾಷೆಯನ್ನೇ ಜನಸಂಪರ್ಕ ಭಾಷೆಯಾಗಿ ಬಳಸಬೇಕಾಯಿತು. ಕ್ಯೂನಿಫಾರಂನ ಸುಧಾರಿತ ರೂಪವನ್ನು ಆಧರಿಸಿದ ಲಿಪಿವ್ಯವಸ್ಥೆಯೊಂದನ್ನು ಪರ್ಷಿಯನ್ನರು ಅಳವಡಿಸಿಕೊಂಡರು ಎನ್ನುವ ಅಂಶವೂ ಈ ಪ್ರಾಚೀನ ಸಂಸ್ಕøತಿ ದೊರೆತ ಇನ್ನೊಂದು ವಿಜಯವಾಗಿದೆ.

ಅಲೆಕ್ಸಾಂಡರ್‍ನ ನೇತೃತ್ವದಲ್ಲಿ ಗ್ರೀಕ್ ಮತ್ತು ಮ್ಯಾಸಿಡೋನಿಯನ್ನರ ಆಕ್ರಮಣದಿಂದ ನಾಶವಾಗುವ ತನಕ ಪರ್ಷಿಯನ್ ಸಾಮ್ರಾಜ್ಯ ಉಳಿದುಕೊಂಡು ಬಂತು. ಕ್ರಿ.ಪೂ.335ರಲ್ಲಿ ಅಲೆಕ್ಸಾಂಡರನ ದಂಡಯಾತ್ರೆ ಆರಂಭವಾಯಿತು. ಕ್ರಿ.ಪೂ.331ರಲ್ಲಿ ಆತ ಬ್ಯಾಬಿಲಾನಿಗೆ ಬಂದ; ಕ್ರಿ.ಪೂ.325ರಲ್ಲಿ ಆತ ಪೌರ್ವಾತ್ಯ ವಿಜಯಗಳಿಂದ ಹಿಂದಿರುಗಿದಾಗ ಬ್ಯಾಬಿಲಾನಿನಲ್ಲಿ ತನ್ನ ಪ್ರಧಾನ ಆಡಳಿತ ಕೇಂದ್ರವನ್ನು ಸ್ಥಾಪಿಸಿದ; ಈ ನಗರದಲ್ಲಿಯೇ 323ರಲ್ಲಿ ಮೃತನಾದ. ಆತನ ಸಾಮ್ರಾಜ್ಯದ ಪತನಾನಂತರ ಮೆಸೊಪೊಟೇಮಿಯ ಮತ್ತು ಈಜಿಪ್ಟನ್ನು ಹೊರತುಪಡಿಸಿ ಪ್ರಾಚೀನ ಪರ್ಷಿಯನ್ ಸಾಮ್ರಾಜ್ಯದ ಬಹುಭಾಗ ಅಲೆಕ್ಸಾಂಡರನ ಸೇನಾನಿಗಳಲ್ಲೊಬ್ಬನಾದ ಸಿಲ್ಯೂಕಸನ ಅಧೀನವಾಯಿತು.

ಸಿಲ್ಯೂಕಿಡ್(ಕ್ರಿ.ಪೂ.323 - 140) ಃ ಸಿಲ್ಯೂಕಸ್ ಸ್ಥಾಪಿಸಿದ ವಂಶ ಮಧ್ಯೆ ಪ್ರಾಚ್ಯ ಪ್ರದೇಶವನ್ನು ಮುಂದಿನ ಎರಡು ಶತಮಾನಗಳ ಕಾಲ ಆಳಿತು. ಹೊಸ ರಾಜಧಾನಿಗೆ ಸಿಲ್ಯೂಕಿಯ ಎಂಬ ಹೆಸರು ಬಂತು. ಇದು ಬಾಗ್‍ದಾದಿನ ದಕ್ಷಿಣಕ್ಕೆ ಸುಮಾರು 30ಕಿಮೀ ದೂರದಲ್ಲಿ ಟೈಗ್ರಿಸ್ ನದಿದಂಡೆಯ ಮೇಲಿದೆ. ತನ್ನ ವೈಭವದ ಕಾಲದಲ್ಲಿ ಈ ಸಾಮ್ರಾಜ್ಯ ಪೂರ್ವದಲ್ಲಿ ಸಿಂಧೂನದಿ ಪ್ರದೇಶದವರಿಗೆ ಹಬ್ಬಿತ್ತು; ಇರಾನಿನ ಹಳೆಯ ಪ್ರದೇಶವನ್ನೊಳಗೊಂಡಿತ್ತು. ಕ್ರಿ.ಪೂ. 3ನೆಯ ಶತಮಾನದ ಮಧ್ಯಭಾಗದಲ್ಲಿ ಕ್ಯಾಸ್ಟಿಯನ್ ಸಮುದ್ರಕ್ಕೆ ದಕ್ಷಿಣದಲ್ಲಿರುವ ಈ ಭಾಗದಲ್ಲಿ ಇರಾನ್ ರಾಷ್ಟ್ರೀಯತೆಯ ಹೆಸರಿನಲ್ಲಿ ಹೊಸ ಚಳವಳಿಯೊಂದು ಹುಟ್ಟಿತು; ತಮ್ಮನ್ನು ಪರ್ಷಿಯನ್ನರ ಉತ್ತರಾಧಿಕಾರಿಗಳೆಂದು ಘೋಷಿಸಿಕೊಂಡ ಪಾರ್ಥಿಯನ್ನರು ವಿದೇಶಿ ಗ್ರೀಕ್ ಮತ್ತು ಮ್ಯಾಸಿಡೋನಿಯನ್ ಜನರ ವಿರುದ್ಧ ಇರಾನಿನ ಎಲ್ಲ ಪಂಗಡದವರೂ ಒಂದುಗೂಡಲು ಕರೆನೀಡಿದರು. ಇದಕ್ಕೆ ವ್ಯಾಪಕ ಬೆಂಬಲ, ಚಾಲನೆ ದೊರೆತು. ಸಿಲ್ಯೂಕಿಡ್ ವಿರೋಧಿ ಬಂಡಾಯದಿಂದ 3ನೆಯ ಶತಮಾನಾಂತ್ಯದಲ್ಲಿ ಇರಾನಿನ ಸ್ವಾತಂತ್ರ್ಯ ಪುನಃ ಸ್ಥಾಪಿತವಾಯಿತು. ಪಾರ್ಥಿಯನ್ ಪ್ರಭುಗಳು ಪಶ್ಚಿಮದ ಮೆಸೊಪೊಟೇಮಿಯದತ್ತ ದೃಷ್ಟಿ ಹಾಯಿಸಿದರು. ಪ್ರಖ್ಯಾತ ದೊರೆ ಒಂದನೆಯ ಮಿಥ್ರಡೇಟ್ಸ್‍ನ ನೇತೃತ್ವದಲ್ಲಿ ಇರಾನಿನ ಗುಂಪೊಂದು ಟೈಗ್ರಿಸ್ ಯೂಫ್ರಟೀಸ್ ಪ್ರದೇಶದಿಂದ ಸಿಲ್ಯೂಕಿಡ್‍ರನ್ನು ಹೊರದೂಡಿತು. ಪಾರ್ಥಿಯನ್ನರು ಮೆಸೊಪೊಟೇಮಿಯದ ಒಡೆಯರಾದರು.

ಪಾರ್ಥಿಯನ್(ಕ್ರಿ.ಪೂ.140--ಕ್ರಿ.ಶ.227)ಃ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಪಾರ್ಥಿಯನ್ನರು ರೋಮನ್ನರ ಪ್ರಬಲ ವಿರೋಧಿಗಳಾಗಿ ಕ್ರಾಸಸ್ ಮತ್ತು ಕರ್ತ ಪ್ರದೇಶಗಳನ್ನು ಗೆದ್ದರು. ಕ್ರಿ.ಶ.114--16ರಲ್ಲಿ ರೋಮಿನ ಸಾಮ್ರಾಟ ಟ್ರಾಜನ್ ಪರ್ಷಿಯನ್ ಖಾರಿಯವರೆಗೂ ತನ್ನ ಆಳ್ವಿಕೆಯನ್ನು ವಿಸ್ತರಿಸಿದಾಗ ಇವರು ಅತನ ದಾಳಿಗಳಿಗೆ ಬಲಿಯಾದರು. ಪರ್ಷಿಯನ್ ಸಾಮ್ರಾಜ್ಯದಲ್ಲಿ ಹೇಗೋ ಹಾಗೆಯೇ ಪಾರ್ಥಿಯನ್ನರ ಕೈಕೆಳಗೂ ಮೆಸೊಪೊಟೇಮಿಯ ಒಂದು ಅತಿ ಮುಖ್ಯ ಪ್ರದೇಶವೂ ಆಡಳಿತ ಕೇಂದ್ರವೂ ಆಯಿತು. ಹಾಗಿದ್ದರೂ ಕ್ರಿ.ಪೂ.ಒಂದನೆಯ ಶತಮಾನದಲ್ಲಿ ಟೈಗ್ರಿಸ್ ದಂಡೆಯ ಮೇಲಿದ್ದ ಸಿಲ್ಯೂಕಿಯ ತನ್ನ ರಾಜಧಾನಿ ಪಟ್ಟಣವನ್ನೂ ಅದೇ ನದಿಯ ಇನ್ನೊಂದು ತೀರದಲ್ಲಿದ್ದ ಜೊಸಿಫೊನ್‍ಗೆ ಬಿಟ್ಟುಕೊಡಬೇಕಾಯಿತು.

ಟ್ರಾಜಾನಿನ ದಂಡಯಾತ್ರೆಗಳನ್ನು ಪಾರ್ಥಿಯನ್ ಸಾಮ್ರಾಜ್ಯ ಎದುರಿಸಿ ಉಳಿದುಕೊಂಡಿತು; ತಾತ್ಕಾಲಿಕವಾಗಿ ರೋಮನ್ನರ ಕೈವಶವಾಗಿದ್ದ ಪ್ರದೇಶವನ್ನು ಮತ್ತೆ ಪಡೆದುಕೊಂಡಿತು. ಮಾರ್ಕಸ್ ಅರೆಲಿಯಸ್‍ನ ಕಾಲದ ದಾಳಿಗಳೂ ಪ್ಲೇಗ್ ಪೀಡೆಯಿಂದಾಗಿ ಪರಿಣಾಮಶೂನ್ಯವಾದುವು. ಮುಂದೆ ಸೆಪ್ಟಿಮಸ್ ಸೆವೆರಸ್ ಹಾಗೂ ಕರಕಲ್ಲರ ಆಕ್ರಮಣಗಳಿಂದಾಗಿ ದುರ್ಬಲಗೊಂಡ ಪಾರ್ಥಿಯನ್ನರು ಇರಾನಿನ ಹೊಸ ಒತ್ತಡವೊಂದಕ್ಕೆ ಸಿಲುಕಿ ಪತನಹೊಂದಬೇಕಾಯಿತು. ಮೊದಲ ಪರ್ಷಿಯನ್ ಸಾಮ್ರಾಜ್ಯದ ಸ್ಥಾಪಕರಾದ ಅಬೆಮಿನಿಡರಿಂದ ತಮ್ಮ ಅರಸರು ಬಂದವರೆಂದು ಹೇಳಿಕೊಳ್ಳುವ ಸಸ್ಸಾನಿಯನ್ ಪರ್ಷಿಯನ್ನರು ಕ್ರಿ.ಶ,224ರಲ್ಲಿ ಪಾರ್ಥಿಯನ್ ಸಾಮ್ರಾಜ್ಯ ತನ್ನ ಅಸ್ತಿತ್ವ ಕಳೆದುಕೊಂಡಿತು; ಮೆಸೊಪೊಟೇಮಿಯ ಸಸ್ಸಾನಿಯನ್ನರ ಅಧೀನಕ್ಕೊಳಪಟ್ಟಿತು.

ಸಸ್ಸಾನಿಯನ್ (ಕ್ರಿ.ಶ.227--637)ಃ ಪಾರ್ಥಿಯನ್ನರ ಬದಲಾಗಿ ಸಸ್ಸಾನಿಯನ್ನರು ರೋಮನರ ವಿರೋಧಿಗಳಾದಾಗ ದ್ವಿತೀಯ ಪರ್ಷಿಯನ್ ಸಾಮ್ರಾಜ್ಯ ಎಂದು ಕರೆಯಬಹುದಾದ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂತು. ಇವರ ಕಾಲದಲ್ಲಿಯೂ ಪೂರ್ವ - ಪಶ್ಚಿಮಗಳ ನಡುವಣ ಸಂಘರ್ಷ ಮುಂದುವರಿಯಿತು. ಒಮ್ಮೆ ಪೂರ್ವ ಮೇಲುಗೈ ಪಡೆದರೆ ಮತ್ತೊಮ್ಮೆ ಪಶ್ಚಿಮ ಮೇಲುಗೈ ಪಡೆಯುತ್ತಿತ್ತು. ಕ್ರಿ.ಶ.3ನೆಯ ಶತಮಾನದ ಮಧ್ಯಭಾಗದಲ್ಲಿ ರೋಮನ್ ಸಾಮ್ರಾಟ ವಲೇರಿಯನ್‍ನ ಬಂಧನ, ಕ್ರಾಸಸ್ ಮೇಲಿನ ವಿಜಯ ಪಾರ್ಥಿಯನ್ನರದಾದರೆ, ಡಯೊಕ್ಲೆಶಿಯನ್‍ನ ವಿಜಯಗಳು ಮತ್ತು ಜೂಲಿಯನ್‍ದ ಅಪೊಸ್ಟೇಟ್‍ನ ಮೊದಲ ಯಶಸ್ಸು ಇವುಗಳಿಂದ ರೋಮನರು ಮೇಲುಗೈ ಸಾಧಿಸಿದರು. ಬಿಜಾಂಟೀಯನ್ ಕಾಲದಲ್ಲಿ ಕಾನ್‍ಸ್ಟ್ಯಾಂಟಿನೋಪಲ್‍ನಲ್ಲಿ ಸಸ್ಸಾನಿಯನ್ ವಿರುದ್ಧ ಪೂರ್ವಪ್ರದೇಶದ ಸಾಮ್ರಾಟರು ಹೋರಾಡಿದರೂ ಯಾವ ಮಹತ್ವದ ವಿಜಯವೂ ದೊರೆಯಲಿಲ್ಲ.

ಕೊನೆಗೆ ಅರಬರೆಂಬ ಹೊಸ ಸಮುದಾಯದ ಉದಯದಿಂದಾಗಿ ಸಸ್ಸಾನಿಯನ್ನರು ನಾಶವಾದರು. ಪ್ರಾಚೀನ ಕಾಲದ ಇತಿಹಾಸ ಕೊನೆಗೊಂಡಿತು. ಕ್ರಿ.ಶ.632ರಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್‍ನ ಮರಣಾನಂತರ ಅರಬರು ತಮ್ಮ ನಾಡಿನ ಹೊರಗೂ ವಿಸ್ತರಿಸಲಾರಂಭಿಸಿದರು. ಇಸ್ಲಾಮಿನ ನವಸ್ಫೂರ್ತಿಯಿಂದ ಅತ್ಯಂತ ಆವೇಶಭರಿತರಾಗಿದ್ದ ಅವರನ್ನು ಯಾರಿಗೂ ತಡೆಯುವುದು ಅಸಾಧ್ಯವಾಗಿತ್ತು. ಸಿರಿಯ, ಪ್ಯಾಲಸ್ತೀನ್‍ಗಳನ್ನು ಜಯಿಸಲಾಯಿತು. ಕ್ರಿ.ಶ.637ರಲ್ಲಿ ಮೆಸೊಪೊಟೇಮಿಯ ಅವಸಾನ ಹೊಂದಿತ್ತು.

ಮಧ್ಯಯುಗ (ಕ್ರಿ.ಶ.637--1534)

ಕಲೀಫೇಟರು (637--1258) ಃ ಆರ್ಥೊಡಾಕ್ಸ್ ಉಮಾಯದ್ ಮತ್ತು ಅಬ್ಬಾಸಿದ್ ಕಲೀಫರ ಕೈಕೆಳಗೆ ಮೆಸೊಪೊಟೇಮಿಯ ತನ್ನ ಪ್ರಾಚೀನ ಆಡಳಿತಾತ್ಮಕ ಆರ್ಥಿಕ ಹಾಗೂ ಸಾಮಾಜಿಕ ಪ್ರಾಧಾನ್ಯವನ್ನು ಮುಂದುವರಿಸಿಕೊಂಡು ಬಂದಿತು. ಕ್ರಿ.ಶ.762ರಲ್ಲಿ ಅಬ್ಬಾಸಿದ್ ಕಲೀಫನಾದ ಅಲ್-ಮನ್ಸೂರ್ ಬಾಗ್‍ದಾದ್ ನಗರ ನಿರ್ಮಿಸುವ ತನಕ ಜೆಸಿಫೊನ್ ಬದಲಾಗಿ ಯೂಫ್ರಟೀಸ್ ತೀರದ ಕುಫಾ ರಾಜಧಾನಿಯಾಗಿ ಮುಂದುವರಿಯಿತು. ಪ್ರಸಿದ್ಧ ಕಲೀಫನಾದ ಹಾರೂನ್ ಅಲ್ ರಷೀದನ ತವರೂರಾದ ಮತ್ತು ಅರೇಬಿಯನ್ ನೆಟ್ಸ್‍ನ ಕಥೆಗಳ ಕೇಂದ್ರಸ್ಥಳವಾದ ಬಾಗ್‍ದಾದ್ ಈಗಲೂ ಮೆಸೊಪೊಟೇಮಿಯದ ಎಂದರೆ ಈಗಿನ ಇರಾಕಿನ ರಾಜಧಾನಿಯಾಗಿದೆ. ಅದರೆ ಆಧುನಿಕ ನಗರದ ಚಟುವಟಿಕೆಯ ಕೇಂದ್ರ ನದಿಯ ಇನ್ನೊಂದು ತೀರದಲ್ಲಿರುವ, ಅಲ್-ಮನ್ಸೂರ್ ಸ್ಥಾಪಿಸಿದ `ವೃತ್ತನಗರ. ಕ್ರಿ.ಶ.8ನೆಯ ಶತಮಾನದಲ್ಲಿ ಬಾಗ್‍ದಾದ್ ಕೇವಲ ಪ್ರಾಂತೀಯ ರಾಜಧಾನಿಯಾಗಿರಲಿಲ್ಲ; ಕುಫಾನಗರ ಉಮಾಯದ್ದರ ಅಧೀನದಲ್ಲಿದ್ದುದರಿಂದ ಬಾಗ್‍ದಾದ್ ಹೊಸ ಅಬ್ಬಾಸಿದ್ ವಂಶದ ಸಾಮ್ರಾಜ್ಯದ ಆಡಳಿತ ಕೇಂದ್ರವೂ ಆಗಿತ್ತು. ಉಮಾಯದ್ದರ ಕಾಲದಲ್ಲಿ ಡಮಾಸ್ಕಸ್ ನಗರ ಮುಸ್ಲಿಮ್ ಜಗತ್ತಿನ ರಾಜಕೀಯ ಕೇಂದ್ರವಾಗಿತ್ತು. ಡಮಾಸ್ಕಸ್‍ನಿಂದ ಬಾಗ್‍ದಾದಿಗೆ ಉಂಟಾದ ಈ ವರ್ಗಾವಣೆ ಅರಬ್ ಅರಸರ ಪರ್ಷಿಯನೀಕರಣವನ್ನು ಉತ್ತೇಜಿಸುವ ಪರಿಣಾಮ ಬೀರಿತೆಂದು ಹೇಳಲಾಗಿದೆ. ಅರಬ್ ಅರಸರ ರಾಜಕೀಯ ಚಿಂತನೆಗಳು ಮತ್ತು ಸಾಮಾಜಿಕ ವಿಧಿವಿಧಾನಗಳು ಅಳಿದುಳಿದ ಸಸ್ಸಾನಿಯನ್ ಪ್ರಭಾವಗಳಿಂದಾಗಿ ಮಾರ್ಪಾಟು ಹೊಂದಿದವು.

ಕ್ರಿ.ಶ. 8-9ನೆಯ ಶತಮಾನಗಳಲ್ಲಿ ಪರಾಕಾಷ್ಠೆ ತಲುಪಿದ ಅಬ್ಬಾಸಿದರ ಚೈತನ್ಯೋತ್ಸಾಹ, ಕಾರ್ಯಶ್ರದ್ಧೆ ಕ್ರಮೇಣ ನಶಿಸಿಹೋಯಿತು. ಕ್ರಿ.ಶ.11ನೆಯ ಶತಮಾನದ ಹೊತ್ತಿಗೆ ಸೆಲ್‍ಜುಕ್ ತುರ್ಕರು ತಮ್ಮ ಆಳ್ವಿಕೆಯನ್ನು ದಕ್ಷಿಣದ ಮೆಸೊಪೊಟೇಮಿಯಕ್ಕೆ ವಿಸ್ತರಿಸಿದರು. ಕ್ರಿ.ಶ.1055 ಮತ್ತು 1194ರ ಅವಧಿಯಲ್ಲಿ ಸೆಲ್‍ಜುಕ್ ಸುಲ್ತಾನನೊಬ್ಬ ಬಾಗ್‍ದಾದಿನಲ್ಲಿ ರಾಜ್ಯಭಾರ ನಿರ್ವಹಿಸಿದ.

ಮಂಗೋಲಿಯನ್ (ಕ್ರಿ.ಶ.1253--1509) ಃ ಕ್ರಿ.ಶ.1218 ಮತ್ತು 1222ರ ನಡುವೆ ಚೆಂಗೇಸ್‍ಖಾನನ ಮುಂದಾಳತ್ವದಲ್ಲಿ ಮಂಗೋಲರು ಪರ್ಷಿಯವನ್ನು ಆಕ್ರಮಿಸಿ ಮೆಸೊಪೊಟೇಮಿಯಕ್ಕೆ ಸಾಗಿಬಂದರೂ ಅದನ್ನು ದಮನಮಾಡಿ ಸ್ವಾಧೀನ ಪಡಿಸಿಕೊಂಡಾತ ಚೆಂಗೇಸ್‍ಖಾನನ ಮೊಮ್ಮಗನೂ ಕುಬ್ಲೈಖಾನನ ಸೋದರನೂ ಆದ ಹುಲಗು. ಬಾಗ್‍ದಾದಿಗೆ ಮುತ್ತಿಗೆ ಹಾಕಿದ ಈತ ಹೋರಾಟ ನಡೆಸಿ ಸುಮಾರು ಎಂಟು ಲಕ್ಷ ಜನರನ್ನು ಕೊಂದುಹಾಕಿ ಆ ನಗರವನ್ನು ಕೈವಶಮಾಡಿಕೊಂಡ. ಮುಂದಿನ ಎಂಬತ್ತು ವರ್ಷಗಳ ಕಾಲ ಮೆಸೊಪೊಟೇಮಿಯ ಮಂಗೋಲ್ ಸಾಮ್ರಾಜ್ಯದ ಒಂದು ಪ್ರಾಂತವಾಯಿತು. ಅನಂತರದ ಎಪ್ಪತ್ತು ವರ್ಷಗಳ ಕಾಲ ಇದು ಮಂಗೋಲ್ ಪ್ರಾಂತದ ಅಧೀನದಲ್ಲಿಯೇ ಉಳಿಯಿತು.

ಕ್ರಿ.ಶ.1393ರಲ್ಲಿ ಭಯಂಕರನೆನಿಸಿದ ತೈಮೂರ್‍ಲಂಗ್‍ನ ಯುದ್ಧಗಳ ಮತ್ತು ದೌರ್ಜನ್ಯ ಕೃತ್ಯಗಳ ಪರಿಣಾಮವಾಗಿ ಈ ಪ್ರದೇಶದ ಬಹುಮಂದಿ ಹತರಾದರು. ಬಾಗ್‍ದಾದ್ ನಾಶಹೊಂದಿತು. ಮತ್ತೆ 1480ರಲ್ಲಿ ಟರ್ಕೊಮನ್ ಮತ್ತು ಬಿದೂಯಿನ್ ಪರ್ವತವಾಸಿಗಳು ಧಾಳಿನಡೆಸಿ ಮತ್ತಷ್ಟು ಹಾನಿಗೆ ಕಾರಣರಾದರು.

ಪರ್ಷಿಯನ್ : (ಕ್ರಿ.ಶ.1509--34) ಃ ಮಧ್ಯಯುಗದ ಅಂತ್ಯದ ವೇಳೆಗೆ ಪುನಶ್ಚೇತನ ಪಡೆದ ಪರ್ಷಿಯ ಮತ್ತೊಮ್ಮೆ ಟೈಗ್ರಿಸ್-ಯೂಫ್ರಟೀಸ್ ಕಣಿವೆ ಪ್ರದೇಶವನ್ನು ಜಯಿಸಿ ಕೆಲವು ವರ್ಷಗಳ ಕಾಲ ತನ್ನ ಅಧೀನದಲ್ಲಿಟ್ಟುಕೊಂಡಿತು. ಆದರೆ ಕ್ರಿ.ಶ.16ನೆಯ ಶತಮಾನದ ಹೊತ್ತಿಗೆ ಮೆಸೊಪೊಟೇಮಿಯ ಪಾಳುಬಿದ್ದಿತು. ವ್ಯವಸಾಯಕ್ಕೆ ಹೆಚ್ಚಿನ ಗಮನಹರಿಸಿ ಅಭಿವೃದ್ಧಿಗೆ ಅತ್ಯಗತ್ಯವಾದ ನೀರಾವರಿ ವ್ಯವಸ್ಥೆಯಂತೂ ಮಂಗೋಲರ ಕಾಲದಲ್ಲಿ ಸಂಪೂರ್ಣವಾಗಿ ನಾಶವಾಗಿತ್ತು; ಕೃಷಿ ಭೂಮಿಯ ಬಹುಭಾಗ ಬೆಂಗಾಡಾಯಿತು. ಜನಸಂಖ್ಯೆಯಲ್ಲಿ ಕೂಡ ಅಗಾಧ ಇಳಿತ ಉಂಟಾಗಿದ್ದು ಇಂದಿಗೂ ಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.

ಆಧುನಿಕ ಯುಗ

ಆಟೋಮನ್ ತುರ್ಕರು (ಕ್ರಿ.ಶ.1534--1917) ಃ ಆಟೋಮನ್ ಸಾಮ್ರಾಟನಾದ ಸುಲ್ತಾನ್ ಸುಲೈಮಾನನ ಸೇನೆ ಪರ್ಷಿಯನ್ನರನ್ನು ಮೆಸೊಪೊಟೇಮಿಯದಿಂದ 1534ರಲ್ಲಿ ಹೊರದಬ್ಬಿತು. ಈ ಕಾಲದಿಂದ 20ನೆಯ ಶತಮಾನದ ತನಕ ಮೆಸೊಪೊಟೇಮಿಯ - ಅರೆಬರೆ ಸ್ವಾತಂತ್ರ್ಯದ ಕೆಲವು ಅವಧಿಗಳಿದ್ದರೂ ಅಥವಾ ಪರ್ಷಿಯನ್ನರು ತಾತ್ಕಾಲಿಕವಾಗಿ ಪ್ರಭಾವ ಬೀರಿದ ಅವಧಿಗಳಿದ್ದರೂ - ತುರ್ಕರ ಅಧೀನದಲ್ಲಿಯೇ ಇತ್ತೆಂದು ಸಾಮಾನ್ಯವಾಗಿ ಪರಿಗಣಿಸಬಹುದು. ಇವರ ಆಳ್ವಿಕೆಯಲ್ಲಿ 19ನೆಯ ಶತಮಾನದ ಉತ್ತರಾರ್ಧವನ್ನು ಪ್ರಗತಿಯ ಕಾಲ ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ.

ಇರಾಕ್ ರಾಜ್ಯ : 1914ರಲ್ಲಿ ಒಂದನೆಯ ಮಹಾಯುದ್ಧದ ಆರಂಭಕಾಲದಲ್ಲಿ ಬ್ರಿಟಿಷರು ಬಸ್ರಾ ನಗರಕ್ಕೆ ಬಂದಿಳಿದರು. 1917ರಲ್ಲಿ ಬಾಗ್‍ದಾದ್ ಅವರ ವಶವಾಯಿತು. ದೇಶಕ್ಕೆ ಸ್ವಾತಂತ್ರ್ಯ ನೀಡುವುದಾಗಿ ಅವರು ಇತ್ತ ಭರವಸೆ 1921ರಲ್ಲಿ ದೊರೆ ಒಂದನೆಯ ಫೈಸಲ್ ಹೊಸ ದೇಶವಾದ ಇರಾಕ್‍ನ ಸಿಂಹಾಸನವನ್ನೇರಿದಾಗ ಈಡೇರಿದಂತಾಯಿತು. (ನೋಡಿ- ಇರಾಕ್)

                               (ಎಚ್.ಎಂ.ಎನ್.ಆರ್.)