ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೋಟಗಾನಹಳ್ಳಿ, ರಾಮಶೇಷಶಾಸ್ತ್ರೀ
ಮೋಟಗಾನಹಳ್ಳಿ, ರಾಮಶೇಷಶಾಸ್ತ್ರೀ 1867-1934. ಸುಪ್ರಸಿದ್ಧ ಸಂಸ್ಕøತ-ಕನ್ನಡ ಪಂಡಿತರು. ವಿದ್ವಾಂಸರಾಗಿದ್ದ ಮೋಟಗಾನಹಳ್ಳಿ ಶಂಕರಶಾಸ್ತ್ರೀ (ನೋಡಿ- ಮೋಟಗಾನಹಳ್ಳಿ ಶಂಕರಶಾಸ್ತ್ರೀ) ಇವರ ಅಣ್ಣಂದಿರು. ಬೆಂಗಳೂರು ಜಿಲ್ಲೆ ಮಾಗಡಿ ತಾಲ್ಲೂಕು ಮೋಟಗಾನಹಳ್ಳಿಯಲ್ಲಿ ಮುಲಕನಾಡು ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ಇವರ ಹೆಚ್ಚಿನ ವಿದ್ಯಾಭ್ಯಾಸವೆಲ್ಲ ಮಾಗಡಿಯಲ್ಲಿ ಕರಣಿಕರು ನಡೆಸುತ್ತಿದ್ದ ಗುರುಕುಲ ಪದ್ಧತಿಯ ಪಾಠಶಾಲೆಯಲ್ಲಿ ನಡೆಯಿತು (ಮಾಗಡಿ ಕರಣಿಕರ ವೇದಪಾಠಶಾಲೆಯೊಂದು ಬೆಂಗಳೂರಿನಲ್ಲಿ ಈಗಲೂ ಇದೆ.) ಅನಂತರ ಬೆಂಗಳೂರಿಗೆ ಬಂದು ನೆಲಸಿದ ಶಾಸ್ತ್ರೀಗಳು ಅಲ್ಲಿಯ ಆರ್ಯಬಾಲಿಕಾ ಪಾಠಶಾಲೆ, ನಾರ್ಮಲ್ ಸ್ಕೂಲ್, ಮಹಾರಾಣಿ ಕಾಲೇಜು-ಈ ಸಂಸ್ಥೆಗಳಲ್ಲಿ ಕನ್ನಡ ಮತ್ತು ಸಂಸ್ಕøತ ಭಾಷೆಗಳ ಬೋಧಕರಾಗಿದ್ದರು. ಬೆಂಗಳೂರಿನ ಕೆಲವು ಪ್ರಮುಖ ವರ್ತಕರು ಕೋರಿಕೆಯಂತೆ ಅಣ್ಣಂದಿರಾದ ಮೋಟಗಾನಹಳ್ಳಿ ಶಂಕರಶಾಸ್ತ್ರೀಗಳ ವ್ಯಾಖ್ಯಾನದೊಂದಿಗೆ ಅನೇಕ ವರ್ಷಕಾಲ ಇವರು ಮಹಾಭಾರತವನ್ನು ವಾಚನಮಾಡಿದರು. ಇವರ ಮಹಾಭಾರತ ವಾಚನ ತುಂಬ ಜನಪ್ರಿಯವಾಗಿತ್ತು. ಮೈಸೂರು ಅರಮನೆಯಲ್ಲಿ ಇವರು ಜಯಚಾಮರಾಜ ಒಡೆಯರಿಗೆ ಅಕ್ಷರ ಅಭ್ಯಾಸ ಮೊದಲಗೊಂಡು ಎಸ್.ಎಸ್.ಎಲ್.ಸಿ. ವರೆಗೆ ಸಂಸ್ಕøತ ಭಾಷಾ ಶಿಕ್ಷಕರಾಗಿದ್ದರು.
ರಾಮಶೇಷಶಾಸ್ತ್ರೀಗಳ ಹೆಸರು ಚಿರಸ್ಥಾಯಿಯಾಗಿರುವುದು ಪ್ರತಿಪದಾರ್ಥ, ತಾತ್ಪರ್ಯ ಮತ್ತು ಟಿಪ್ಪಣೆ ಸಮೇತ ಅನುವಾದ ಮಾಡಿರುವ ಶ್ರೀಮದ್ ಭಾಗವತ ಮಹಾಪುರಾಣದಿಂದ. ಈ ಮಹತ್ ಕಾರ್ಯವನ್ನು ಇವರು 1909ರಲ್ಲಿ ಪ್ರಾರಂಭಮಾಡಿ 1924ರಲ್ಲಿ ಮುಗಿಸಿದರು. ಗ್ರಂಥದ ಪ್ರಕಟಣೆ 1911ರಲ್ಲಿ ಆರಂಭವಾಗಿ 1932ರಲ್ಲಿ ಮುಗಿಯಿತು. ಭಾಗವತದ ಶೈಲಿ, ರಾಮಾಯಣ ಭಾರತಗಳ ಶೈಲಿಗಿಂತ ಕ್ಲಿಷ್ಟ ಮತ್ತು ಪ್ರೌಢ. ಶಾಸ್ತ್ರೀಯಗಳ ಸರ್ವಸಮರ್ಪಕವಾದ ಅನುವಾದ ಇವರ ಉಭಯಭಾಷಾಪಾಂಡಿತ್ಯಕ್ಕೂ ವೇದಾಗಮಾದಿ ಶಾಸ್ತ್ರ ಸಂಪನ್ನತೆಗೂ ನಿದರ್ಶನವಾಗಿದೆ. ಇವರು ಸಂಸ್ಕøತದಿಂದ ಅನುವಾದ ಮಾಡಿರುವ ಇತರ ಕೃತಿಗಳಿವು : ವಿಶಾಖದತ್ತನ ಮುದ್ರಾರಾಕ್ಷಸ ನಾಟಕ (ದ್ವಿತೀಯ ಮುದ್ರಣ, 1931), ಮುಕುಂದಾನಂದಬಾಣ (1935) ಮತ್ತು ಹಿತೋಪದೇಶ. ಅಮರಕೋಶವನ್ನು ಟೀಕೆಟಿಪ್ಪಣೆಗಳೊಂದಿಗೆ ಪರಿಷ್ಕರಿಸಿ ಮುದ್ರಣಕ್ಕೆ ಸಿದ್ಧಪಡಿಸಿದ್ದರೆಂದು ಹೇಳಲಾಗಿದೆ.
ಶಾಸ್ತ್ರೀಗಳ ಭಾಷಾಪಾಂಡಿತ್ಯವನ್ನು ಮತ್ತು ಅರಮನೆಯ ಸೇವೆಯನ್ನು ಗಮನಿಸಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಇವರಿಗೆ ಆಸ್ಥಾನ ಮಹಾವಿದ್ವಾನ್ ಪದವಿ ನೀಡಿ ಗೌರವಿಸಿದ್ದರು. ಶೃಂಗೇರಿ, ಶಿವಗಂಗೆ, ಕೂಡಲಿ, ಶ್ರೀಮಠಗಳಿಂದಲೂ ಶಾಸ್ತ್ರೀಗಳು ಸನ್ಮಾನಿತರಾಗಿದ್ದರು.