ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯಕ್ಷಗಾನ
ಯಕ್ಷಗಾನ- ಕರ್ನಾಟಕ ಸಂಸ್ಕøತಿಯ ಒಂದು ಪ್ರಮುಖ ಅಂಗವಾಗಿ ಬೆಳೆದು ಬಂದಿರುವ ಜನಪದ ರಂಗಸಂಪ್ರದಾಯ. ಇದು ಇಂದು ವಿವಿಧ ಪ್ರಭೇದಗಳೊಡನೆ ಕರ್ನಾಟಕದ ಅನೇಕ ಭಾಗಗಳಲ್ಲಿ ಪ್ರಚಲಿತವಾಗಿದೆ. ಪ್ರಮುಖ ಪ್ರಬೇದಗಳನ್ನು ಹೀಗೆ ಗುರುತಿಸಬಹುದು.
1. ಯಕ್ಷಗಾನ ಬಯಲಾಟ
ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು, ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಗರ್ಭ ಪ್ರದೇಶ.
ಅ) ಪಡುವಲಪಾಯ (ಬಡಗತಿಟ್ಟು, ತೆಂಕತಿಟ್ಟು) ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಪ್ರದೇಶ
ಆ) ಮೂಡಲಪಾಯ (ದೊಡ್ಡಾಟ, ಅಟ್ಟದಾಡ, ಯಕ್ಷಗಾನ ಬಯಲ್ಗತೆ)
ಇ) ಘಟ್ಟದ ಕೋರೆ
2. ತಾಳಮದ್ದಲೆ (ನೋಡಿ- ತಾಳಮದ್ದಳೆ)
3. ಬೊಂಬೆಯಾಟಗಳು.
ಅ) ಸೂತ್ರದ ಬೊಂಬೆಯಾಟ (ನೋಡಿ- ಸೂತ್ರದ-ಬೊಂಬೆಯಾಟ)
ಆ) ತೊಗಲು ಬೊಂಬೆಯಾಟ (ನೋಡಿ- ತೊಗಲುಗೊಂಬೆಯಾಟ)
ಪ್ರಾಚೀನತೆ : ಯಕ್ಷಗಾನದ ಪ್ರಾಚೀನತೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರಕುವುದಿಲ್ಲವಾದರೂ ಭರತಮುನಿಯ ನಾಟ್ಯಶಾಸ್ತ್ರದಲ್ಲಿ ಅಲ್ಲಲ್ಲಿ ತೋರಿ ಬರುವ ಕೆಲವು ಆಧಾರಗಳಿಂದ ಈ ಕಲೆ ಬಹಳ ಹಿಂದಿನಿಂದಲೂ ಇತ್ತೆಂಬುದು ಸ್ಪಷ್ಟವಾಗುತ್ತದೆ. ಕನ್ನಡದ ಪ್ರಾಚೀನ ಕಾವ್ಯಗಳಲ್ಲಿ ಯಕ್ಷಗಾನ ಎಂಬ ಹೆಸರಿನ ಉಲ್ಲೇಖ ಕಂಡುಬರುತ್ತದೆ. ಕರ್ನಾಟಕದಲ್ಲು ಸುಮಾರು 12ನೆಯ ಶತಮಾನದಲ್ಲಿ ಒಂದು ಗಾನ ಸಂಪ್ರದಾಯ ಯಕ್ಷಗಾನ ಎಂಬ ಹೆಸರಿನಿಂದ ಬಳಕೆಯಲ್ಲಿತ್ತು. ಮುಂದೆ ಅದು ನಾಟಕ ರೂಪದಲ್ಲಿ ಪರಿವರ್ತನೆಗೊಂಡಾಗ ಬಯಲಾಟ, ದಶಾವತಾರ ಆಟ, ದೊಡ್ಡಾಟ, ಪಾರಿಜಾತ ಎಂಬ ಹೆಸರುಗಳಿಂದ 15ನೆಯ ಶತಮಾನದ ಹೊತ್ತಿಗೆ ರೂಢಿಗೆ ಬಂದಂತೆ ಕಾಣುತ್ತದೆ. ಈ ಬಯಲಾಟದ ಇನ್ನೊಂದು ರೂಪ ತಾಳಮದ್ದಲೆ ಅಥವಾ ಯಕ್ಷಗಾನ ಕೂಟ. ಇದು 16ನೆಯ ಶತಮಾನದಲ್ಲಿ ರೂಢಿಯಾಗಿದ್ದಂತೆ ತಿಳಿದುಬರುತ್ತದೆ.
ಸ್ವರೂಪ : ಯಕ್ಷಗಾನ ನಾಲ್ಕು ಕಲಾಮಾಧ್ಯಮಗಳಿಂದ ಮೈಗೂಡಿನಿಂತ ಒಂದು ಸಮ್ಮಿಶ್ರ ಕಲೆ. ಇದರಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರ _ ಈ ನಾಲ್ಕು ಕಲೆಗಳ ಔಚಿತ್ಯಪೂರ್ಣವಾದ ಸಾಮರಸ್ಯವಿದೆ. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯದಕ್ಕೆ ಪೂರ್ವರಂಗ ಅಥವಾ ಸಭಾಲಕ್ಷಣ ಎನ್ನುವರು. ಎರಡನೆಯದು ಆರಿಸಿಕೊಂಡ ಕಥಾಭಾಗ.
ಪಡುವಲಪಾಯ: ಈ ಪ್ರಭೇದದಲ್ಲಿ ಂiÀಕ್ಷಗಾನ ಪ್ರದರ್ಶನಕ್ಕೆ ಅವಶ್ಯಕವಾದ ರಂಗಸ್ಥಳವನ್ನು ಹದಿನೈದು ಅಡಿ ಚಚ್ಚೌಕಾರದಲ್ಲಿ ನಾಲ್ಕು ಮೂಲೆಗಳಲ್ಲಿ ನಾಲ್ಕಾರು ಬಿದಿರು ಕಂಬಗಳನ್ನು ನೆಟ್ಟು ಸಿದ್ಧಪಡಿಸುವರು. ರಂಗಸ್ಥಳಕ್ಕಿಂತ ಸ್ವಲ್ಪ ದೂರದಲ್ಲಿ ಚೌಕಿಯನ್ನು (ನಟರು ವೇಷ ಹಾಕಿಕೊಳ್ಳುವ ಸ್ಥಳ) ಕಟ್ಟುವರು. ಆಟದ ಪ್ರಾರಂಭ ನೇಪಥ್ಯಗೃಹವಾದ ಈ ಚೌಕಿಯಿಂದಲೇ. ಅಲ್ಲಿ ಮೊದಲಿಗೆ ವಿನಾಯಕನನ್ನು ಸ್ತುತಿಸಿ, ದೇವರ ಮುಂದೆ ಕಿರೀಟ, ಗೆಜ್ಜೆ, ಹಣ್ಣುಕಾಯಿ ಇಟ್ಟು ಹನುಮನಾಯಕ (ಹಾಸ್ಯಗಾರ) ಆರತಿ ಎತ್ತುತ್ತಾನೆ. ದೇವರಿಗೆ ಎತ್ತಿದ ಆರತಿಯನ್ನೇ ವಾದ್ಯಗಳಿಗೂ ಎನ್ನುತ್ತಾರೆ. ಅನಂತರ ಹನುಮನಾಯಕನಿಂದ ವೀಳೆಯ ಪಡೆದ ಭಾಗವತರು ದೇವರಿಗೆ ಎತ್ತಿದ ಆರತಿಯೊಂದಿಗೆ ಮದ್ದಲೆಗಾರರು ಕೋಡಂಗಿಗಳೊಂದಿಗೆ ದೇವತಾಸ್ತುತಿ ಮಾಡುತ್ತ ರಂಗಸ್ಥಳ ಪ್ರವೇಶಿಸುತ್ತಾರೆ.
ಯಕ್ಷಗಾನ ಆಟದಲ್ಲಿ ಭಾಗವತನೇ ಪ್ರಥಮ ಪಾತ್ರಧಾರಿ. ಎರಡನೆಯ ವೇಷ ಧಾರಿಯೇ ಕಥಾನಾಯಕ. ಭಾಗವತನು ಸೂತ್ರಧಾರಿಯಾಗಿ ಕಾರ್ಯ ನಿರ್ವಹಿಸುತ್ತಾನೆ. ರಾಕ್ಷಸ ಪಾತ್ರ ನಿರ್ವಹಿಸುವವರು ಬಣ್ಣದ ವೇಷದವರು, ಆಟದ ಆರಂಭದಿಂದ ಕೊನೆಯ ಮಂಗಳದ ತನಕ, ದೇವರನ್ನು ಚೌಕಿಗೆ ಮುಟ್ಟಿಸುವ ತನಕವೂ ಭಾಗವತನಿಗಿರಬೇಕು.
ಭಾಗವತರ ಪರಿವಾರ ರಂಗಸ್ಥಳಕ್ಕೆ ಬಂದೊಡನೆ ಚಂಡೆ, ಮದ್ದಲೆ (ಮೃದಂಗ) ಜಾಗಟೆ ಮತ್ತು ಚಕ್ರತಾಳಗಳನ್ನು ಬಾರಿಸುವ ಪದ್ಧತಿಯಿದ್ದು ಇದನ್ನು `ಕೇಳಿ, ಕೇಳಿ ಹೊಡೆಯುವುದು ಎನ್ನುತ್ತಾರೆ. ಹೀಗೆ ಬಡಿಯುವುದರ ಉದ್ದೇಶ ಊರಿನ ಜನಕ್ಕೆ ಆಟದ ಆರಂಭದ ಅರಿವಾಗಲಿ ಎಂಬುದೊಂದಾದರೆ ದೇವರ ಲೀಲೆಯನ್ನು ಆಡುವ ರಂಗಸ್ಥಳದಲ್ಲಿನ ಭೂತಾಸುರರ ಉಚ್ಚಾಟನೆ ಮತ್ತು ವಿಘ್ನಶಾಂತಿ ಆಗಲಿ ಎಂಬುದು ಇನ್ನೊಂದು.
ರಂಗಸ್ಥಳದಲ್ಲಿ ಮೊದಲು ಗಣಪತಿ ಪೂಜೆ, ಅನಂತರ ಇತರ ದೇವರುಗಳ ಸ್ತುತಿ ನಡೆಯುತ್ತದೆ. ಇವಕ್ಕೆಲ್ಲ ತಕ್ಕ ಪದಗಳು ರಾಗತಾಳಸಹಿತ ಇವೆ. ಈ ಹಾಡುಗಳ ಜೊತೆಗೆ ಮದ್ದಲೆಯ ಗತ್ತುಗಳನ್ನು ಹೇಳುತ್ತಾರೆ. ಜೊತೆಯಲ್ಲಿ ಸ್ವಲ್ಪ ಕುಣಿತವೂ ನಡೆಯುತ್ತದೆ. ರಂಗಸ್ಥಳಕ್ಕೆ ಬರುವ ವೇಷಧಾರಿಗಳೆಲ್ಲರೂ ಭಾಗವತರಿಗೂ ರಂಗಸ್ಥಳಕ್ಕೂ ವಂದಿಸುತ್ತಾರೆ.
ಇಷ್ಟೆಲ್ಲ ಮುಗಿದ ಮೇಲೆ ರಂಗಸ್ಥಳಕ್ಕೆ ಮೊದಲನೆಯ ಪ್ರವೇಶದ ಹನುಮನಾಯಕ ಮತ್ತು ಅವನ ಪರಿವಾರದ ಕೋಡಂಗಿಗಳದ್ದು. ಇವರ ವೇಷಭೂಷಣ ವಿಚಿತ್ರ ರೀತಿಯದಾಗಿದ್ದು ತಲೆಯ ಮುಂಡಾಸಿಗೆ ಮಾವಿನ ಸೊಪ್ಪು ಮತ್ತು ನೆಕ್ಕಿ ಸೊಪ್ಪುಗಳನ್ನು ಸಿಕ್ಕಿಸಿಕೊಂಡಿರುತ್ತಾರೆ. ಹಿಮ್ಮೇಳದಲ್ಲಿ ಜಾಗಟೆ, ಮದ್ದಲೆ, ಚಂಡೆ, ಚಕ್ರತಾಳಗಳ ಗತ್ತಿಗೆ ಅನುಗುಣವಾಗಿ ಕುಣಿಯುತ್ತಾರೆ. ಂiÀಕ್ಷಗಾನದಲ್ಲಿ ನೃತ್ಯಪ್ರಾರಂಭವಾಗುವುದು ಇಲ್ಲಿಂದಲೇ. ಕೋಡಂಗಿ ಮತ್ತು ಹನುಮನಾಯಕರಿಗೆ ಸಭಾಲಕ್ಷಣದಲ್ಲಿ ಅಧಿಕವಾದ ಸ್ವಾತಂತ್ರ್ಯವಿದೆ. ಸಭಾಲಕ್ಷಣ ಕಾಲಕ್ಷೇಪ ಇದರಿಂದಾಗಿ ವಿಸ್ತರಿಸುತ್ತದೆ. ಅನಂತರ ಭಾಗವತರು ಸಭಾಪತಿಯ ಲಕ್ಷಣ, ಸಭಿಕರ ಲಕ್ಷಣ, ರಂಗಸ್ಥಳದ ವಿವರ, ಆಟ ಆಡಿಸುವವರು ಹೇಗಿರಬೇಕು, ನೋಡುವ ಭಕ್ತರು ಎಂತಿರಬೇಕು, ಭಾಗವತ ಎಂದರೆ ಯಾರು, ಸಂಗೀತಗಾರ ಎಂದರೆ ಯಾರು ಮೊದಲಾದವನ್ನು ವಿವರಿಸುವರು. ಭಾಗವತರು ಮತ್ತು ಕೋಡಂಗಿಗಳ ನಡುವೆ ಸ್ವಲ್ಪ ಮಟ್ಟಿನ ಸರಸ ಸಂವಾದ ನಡೆದ ಅನಂತರ ಬಾಲ ಗೋಪಾಲರ ನೃತ್ಯ ಆರಂಭವಾಗುತ್ತದೆ. ಸುಂದರವಾದ ಕೇದಗೆಮುಂತಲೆ ಧರಿಸಿ, ಭುಜಕೀರ್ತಿ, ಎದೆಕಟ್ಟು, ಉಡ್ಯಾಣ, ವೀರಕಸೆ ಮುಂತಾದವುಗಳನ್ನು ಧರಿಸಿದ ಸುಂದರ ವೇಷದ ಇಬ್ಬರು ಬಾಲಕರು ನರ್ತಿಸಿ ನಿರ್ಗಮಿಸುವರು. ಅನಂತರ ಭಾಗವತರು ಮುಂದಿನಿಂದ ತೆರೆವಲ್ಲಿ ಎಂಬ ಹೆಸರಿನ ಪರದೆಯನ್ನು ಹಿಡಿದಿದ್ದಾಗ ಒಬ್ಬ ಸ್ತ್ರೀ ವೇಷಧಾರಿ ಅದರೊಳಗೆ ಬಂದು ನಿಲ್ಲುವನು. ಆಗ ಭಾಗವತರು ಹಾಡಿನ ಚರಣವೊಂದನ್ನು ಹಾಡಿ ಜಾಗಟೆಯನ್ನು ಎತ್ತಿ ಹಿಡಿದು ಬಾರಿಸಿದೊಡನೆಯೇ ಮದ್ದಲೆಯವನು ಠೀವಿಯಿಂದ ಅನೇಕ ರೀತಿಯ ನಡೆಗಳನ್ನು (ಪೆಟ್ಟು) ಬಾರಿಸುವನು. ಇದನ್ನು ಬಿಡಿತ ಅಥವಾ ಬಿಡಿತಿಗೆ ಎನ್ನುತ್ತಾರೆ. ಈ ಬಿಡಿತಿಗೆಯ ಗತ್ತಿಗೆ ಸ್ತ್ರೀವೇಷಧಾರಿ ತನ್ನ ಹೆಜ್ಜೆಗಾರಿಕೆಯನ್ನು ತೋರಿಸುತ್ತಾ ರಂಗದ ಮುಂಭಾಗಕ್ಕೆ ಬರುವನು. ಅನಂತರ ಭಾಗವತರೇ ಮೂರು ಪೆಟ್ಟುಗಳಿಂದ ಕೂಡಿದ ಏಕತಾಳವನ್ನು ಜಾಗಟೆಯಲ್ಲಿ ಬಾರಿಸುವನು. ಆಗ ಆ ತಾಳಕ್ಕೆ ಹೊಂದಿಕೊಂಡಂತೆ ಮದ್ದಲೆಗಾರ ಮದ್ದಲೆಯನ್ನು ನುಡಿಸುವನು. ಭಾಗವತನು ಜಾಗಟೆ ಬಾರಿಸುತ್ತಲೇ ತಾದಿಮಿತ ಧಿಮೆತೈ | ದಿಕಿಟ ದಿಂದತೈ | ತತ್ತೊಂದಿಕುತಕುತೈ | ಕಿಟತಕ | ತರಕಿಟ ಕಿಟತಕತೈ ಎಂಬಿತ್ಯಾದಿ ತಾಳಗತಿಯನ್ನು ನುಡಿಸುವನು. ಇದನ್ನು ಬಾಯಿತಾಳ ಎನ್ನುತ್ತಾರೆ. ಈ ಬಾಯಿ ತಾಳದ ನುಡಿಗಳಿಗೆ ತಕ್ಕಂತೆ ಸ್ತ್ರೀವೇಷಧಾರಿ ನರ್ತಿಸುತ್ತಾನೆ.
ಆಮೇಲೆ ಸುಬ್ರಹ್ಮಣ್ಯ, ಅರ್ಧನಾರೀಶ್ವರ ಎಂಬ ವೇಷಗಳು ಪ್ರವೇಶಿಸಿದಾಗ ಸಂಗಿತಗಾರನು ಆಯಾ ದೈವಗಳಿಗೆ ಸಂಬಂಧಿಸಿದ ಸ್ತುತಿ ಪದ್ಯಗಳನ್ನು ಹಾಡುವನು. ವೇಷಧಾರಿಗಳು ಸ್ವಲ್ಪ ಹೊತ್ತು ಕುಣಿದು ನಿಷ್ಕ್ರಮಿಸುವರು. ಇದಾದ ಅನಂತರ ಸ್ತ್ರೀವೇಷದ ನರ್ತನ. ಇಲ್ಲಿ ಒಂದೇ ತಾಳಕ್ಕೆ ಬೇರೆ ಬೇರೆ ಹೆಜ್ಜೆಗಳನ್ನಿಟ್ಟುಕೊಂಡು ಕುಣಿಯುವ ವೈವಿಧ್ಯವನ್ನು ಕಾಣಬಹುದು. ಈ ಸಮಯದಲ್ಲಿ ಇಲ್ಲಿಗೆ ಮುಖ್ಯ ಹಾಸ್ಯಗಾರ ಪ್ರವೇಶಿಸಿ ದೈವ ದೇವರುಗಳ ಹೊಗಳಿಕೆ ನಡೆಸುವನು. ಸ್ವಲ್ಪ ಹೊತ್ತು ಕುಣಿದ ಸ್ತ್ರೀವೇಷ ಮತ್ತು ಹಾಸ್ಯವೇಷದ ನಿರ್ಗಮನದೊಂದಿಗೆ ಯಕ್ಷಗಾನ ಬಯಲಾಟದ ಪೂರ್ವಭಾಗ ಕೊನೆಗೊಳ್ಳುವುದು. ಸಭಾಲಕ್ಷಣದ ಸಂಪ್ರದಾಯ, ಅಲ್ಲಿನ ನೃತ್ಯ, ಹಾಡುಗಾರಿಕೆ, ಹಾಸ್ಯ ಎಲ್ಲ ರಂಗ ಸ್ಥಳಕ್ಕಾಗಿಯೇ ರೂಪಗೊಂಡದ್ದು. ಇದು ಒಂದು ರೀತಿಯಲ್ಲಿ ಕಿರಿಯ ಕಲಾವಿದರ ತರಬೇತಿ ಕೇಂದ್ರವೆನ್ನಬಹುದು.
ಸಭಾಲಕ್ಷಣ ಮುಗಿದ ಅನಂತರ ಆಡಲು ನಿರ್ಧರಿಸಿದ ಪ್ರಸಂಗ ಆರಂಭವಾಗುತ್ತದೆ. ಇದನ್ನು ಉತ್ತರರಂಗ ಎನ್ನಲಾಗುತ್ತದೆ. ಪ್ರಾರಂಭದಲ್ಲಿ ಭಾಗವತ ಸೂಕ್ಷ್ಮವಾಗಿ ಅಂದಿನ ಕಥಾಪರಿಚಯ ಮಾಡುವನು. ಇದಕ್ಕೆ ಕಥಾನುಸಾರವೆಂದು ಹೆಸರು. ಅನಂತರ ಯಾವುದೇ ಪ್ರಸಂಗವನ್ನು ಆಡುವ ಮುನ್ನ ಒಡ್ಡೋಲಗ ಎಂಬ ಒಂದು ಸಂಪ್ರದಾಯವಿದ್ದು ಇದರ ಮುಖ್ಯ ಉದ್ದೇಶವೆಂದರೆ ಪಾತ್ರಗಳನ್ನು ಸಭೆಗೆ ಪರಿಚಯಿಸುವುದು. ಭಾಗವತರ ಎಡಭಾಗದಲ್ಲಿ ಹಿಡಿದ ತೆರೆಯ ಹಿಂದೆ ಅಂದಿನ ಕಥೆಯ ಪೀಠಿಕಾ ವೇಷದವರು ಒಬ್ಬೊಬ್ಬರಾಗಿ ಕುಣಿಯುವುದನ್ನು ತೆರೆಕಲಾಸು ಎನ್ನುವರು. ಆಮೇಲೆ ರಂಗದಲ್ಲಿ ತೆರೆ ಹಿಡಿದು ವೇಷದವರು ಒಂದೇ ತಾಳಕ್ಕೆ ಬೇರೆ ಬೇರೆ ಕ್ರಮದ ತೆರೆಕುಣಿತವನ್ನು ತೋರಿಸುವರು. ಭಾಗವತನು ಆ ವೇಷದೊಡನೆ ಸಂಭಾಷಿಸಿ, ಸೂಕ್ಷ್ಮವಾಗಿ ವೇಷದ ಪರಿಚಯ ಮಾಡಿಸುವನು. ಆಮೇಲೆ ಪ್ರಸಂಗದ ಹಾಡುಗಳನ್ನು ಹಾಡುವನು. ವೇಷಧಾರಿಗಳು ತಾಳಕ್ಕೆ ತಕ್ಕಂತೆ ಕುಣಿಯುತ್ತ ಭಾವಕ್ಕೆ ತಕ್ಕಂತೆ ಅಭಿನಯಿಸುವರು. ಹಾಡು, ಕುಣಿತ ನಿಲ್ಲಿಸಿದ ಮೇಲೆ ಪಾತ್ರಧಾರಿಯು ಪದಕ್ಕೆ ಸರಿಯಾಗಿ ಅರ್ಥ ವಿವರಿಸುವನು. ಇಲ್ಲಿ ಅವನು ತನ್ನ ಪ್ರತಿಭಾ ಶಕ್ತಿ ಸಾಹಿತ್ಯಾನುಭವಗಳಿಂದ ಔಚಿತ್ಯವರಿತು ರಸವತ್ತಾಗಿ ಅರ್ಥವಿಸ್ತಾರ ಗೈಯಲು ಸ್ವತಂತ್ರನಾಗಿರುವನು. ಬೇರೆ ಬೇರೆ ವೇಷಗಳ ರಂಗ ಪ್ರವೇಶ ವಿಧಾನದಲ್ಲಿಯೂ ವೈವಿಧ್ಯವಿದೆ. ಪೀಠಿಕಾ ವೇಷದ ಅನಂತರ ಬರುವ ಅಭಿಮನ್ಯು, ಕರ್ಣ, ಅರ್ಜುನ ಇತ್ಯಾದಿ ವೇಷಗಳು ಚಂಡೆಯ ಪೆಟ್ಟಿಗೆ ತಕ್ಕಂತೆ ವೀರಗತಿಯಲ್ಲಿ ರಂಗವನ್ನು ಪ್ರವೇಶಿಸಿ ಕುಣಿಯುತ್ತವೆ. ರಾವಣ ಇತ್ಯಾದಿ ಬಣ್ಣದ ವೇಷಗಳು ಚೌಕಿಯಿಂದಲೇ ಅಟ್ಟಹಾಸಗೈಯುತ್ತ ರಂಗ ಪ್ರವೇಶಿಸಿ ತೆರೆಯಲ್ಲಿ ಕುಣಿಯುತ್ತವೆ.
ಯಕ್ಷಗಾನ ಹೆಚ್ಚಾಗಿ ಪುರಾಣ ಕಥೆಗಳ ದೃಶ್ಯರೂಪ. ಇದರಲ್ಲಿ ಬರುವ ದೇವದಾನವ, ಮಾನವ ಗಂಧರ್ವರೆಲ್ಲರೂ ಅತಿಮಾನವರೇ. ಈ ಅತಿಮಾನವತೆಯನ್ನು ತೋರುವುದಕ್ಕೆ ಅನುಕೂಲಕರವಾಗಿ ಯಕ್ಷಗಾನದ ವೇಷಭೂಷಣ, ಮುಖವರ್ಣಿಕೆ, ಹಿನ್ನೆಲೆ, ಹಿಮ್ಮೇಳ, ಬೆಳಕು ಎಲ್ಲವೂ ಯೋಜಿಸಲ್ಪಟ್ಟಿವೆ. ಯಕ್ಷಗಾನದ ಕಲ್ಪಕತೆಯನ್ನು ಪೋಷಿಸಿ, ಅತೀವ ಶೋಭೆಯನ್ನೀವ ಅಂಗವೆಂದರೆ ಅವರ ವೇಷಭೂಷಣಗಳು ಹಾಗೂ ಮುಖವರ್ಣಿಕೆಗಳು. ಇಲ್ಲಿನ ವೇಷಭೂಷಣ ವೈವಿಧ್ಯಮಯವಾದುದು. ಅವುಗಳಲ್ಲಿ ಪಟ್ಟೀಸ್, ಗೆಜ್ಜೆ, ಕಾಲ್ಕಡಕ, ಕಾಲು ಮುಳ್ಳುಗಳು, ಗೆಜ್ಜಡ್ಡಿಗೆ, ಭುಜಕೀರ್ತಿ, ತೋಳ್ಕಟ್ಟು, ಕೈಸರ, ಕರ್ಣಪಾತ್ರ, ಸೋಗೊಲ್ಲಿ, ಕೆನ್ನೆಪ್ಪು, ಚಿನ್ನೆಪ್ಪು, ಕಿರೀಟ, ಕೇಶವೇರಿತಟ್ಟಿ, ದಗಲೆ, ಬಾಲ್ಮುಂಡು, ತ್ರಿಶೂಲ, ವಜ್ರಾಯುಧ, ಯಮದಂಡ, ಗದೆ, ಕತ್ತಿ, ಸಬಳ, ಧನುಸ್ಸು, ಮೀಸೆ, ಸೊಂಟದ ಡಾಬುಗಳು, ಮಾರ್‍ಮಾಲೆಗಳು, ಕೊರಳಾರ, ಗೆಜ್ಜೆಟಕ್ಕಿ, ಕಾಲ್ಚಂಗು, ದರಚಿ, ಕಸೆ, ಕೇಸರಿ, ಮೊದಲಾದವು ಮುಖ್ಯವಾದವು. ಈ ಅನೇಕ ವಸ್ತ್ರಾಭರಣ ವಿಶೇಷಗಳನ್ನು ತಯಾರಿಸಲು ಹೆಚ್ಚಾಗಿ ಬಣ್ಣಬಣ್ಣದ ಬಟ್ಟೆ, ಕಾಗದ, ಬೇಗಡೆಗಳನ್ನೂ ಮೆದುಮರ, ಬಿದಿರು, ಮೊದಲಾದವುಗಳನ್ನೂ ಬಳಸುತ್ತಾರೆ.
ಯಾವ ವೇಷಕ್ಕೂ ಮುಖವಾಡವಿಲ್ಲದಿರುವುದು ಯಕ್ಷಗಾನದ ವೈಶಿಷ್ಟ್ಯ. ಅಶ್ವಮೇಧದ ಕುದುರೆ ಮೊದಲಾದ ಪ್ರಾಣಿಗಳನ್ನು ಸಾಂಕೇತಿಕವಾಗಿ ತೋರಿಸಬೇಕಾಗಿ ಬಂದಾಗ ಮಾತ್ರ ಒಮ್ಮೊಮ್ಮೆ ಮುಖವಾಡವನ್ನು ಬಳಸುವುದುಂಟು. ಆಟದ ಪಾತ್ರವೇ ಆಗಿರುವ ಸಿಂಹದಂಥ ಪಾತ್ರಗಳನ್ನು ಮುಖವರ್ಣಿಕೆಯಿಂದಲೇ ಮಾಡುತ್ತಾರೆ. ವೇಷದ ಸ್ವಭಾಕ್ಕನುಸರಿಸಿ ಬಣ್ಣಗಾರಿಕೆಯಲ್ಲಿಯು ವೈವಿಧ್ಯವಿದೆ. ಶೃಂಗಾರ ಲಲಿತ ಪಾತ್ರಗಳ ಬಣ್ಣ ಶ್ಯಾಮಲ, ರೌದ್ರ ಪಾತ್ರಗಳ ಮುಖ ವರ್ಣ ಕೆಂಪು. ಗೌರವರ್ಣ ವೀರರಸವನ್ನು ಅಭಿವ್ಯಂಜಿಸುತ್ತದೆ. ಭಯಾನಕ ರಸವನ್ನು ಸೂಚಿಸಲು ಮುಖವನ್ನು ಕಪ್ಪು - ಕೆಂಪು ರೇಖೆಗಳಿಂದಲೂ ಬಿಳಿ ಚಿಟ್ಟೆ (ಚುಟ್ಟೆ)ಗಳಿಂದಲೂ ಚಿತ್ರಿಸುವರು. ಹೆಣ್ಣು ಬಣ್ಣದವರು ಬೀಭತ್ಸ ರಸಾಭಿವ್ಯಕ್ತಿಗೆ ಕಡುನೀಲ ವರ್ಣವನ್ನು ಪ್ರಧಾನವಾಗಿ ಉಪಯೋಗಿಸುವರು. ಹೀಗೆ ಮುಖ್ಯವಾಗಿ ಒಂದೊಂದು ಬಣ್ಣಕ್ಕೆ ಪ್ರಾಧಾನ್ಯವಿತ್ತರೂ ಸೂಕ್ಷಭಾವಗಳ ಅಭಿವ್ಯಕ್ತಿಗಾಗಿ ವಿವಿಧ ವರ್ಣ ವಿನ್ಯಾಸಗಳಿಂದಲೂ ಮುಖರಂಜನೆ ಮಾಡುವರು. ಪಾತ್ರಗಳು ಧರಿಸುವ ಶಿರೋಭೂಷಣದಿಂದ ಒಡವೆ ವಸ್ತುಗಳಿಂದ ಪ್ರೇಕ್ಷಕ ಸಮೂಹಕ್ಕೆ ಪಾತ್ರಗಳನ್ನು ಪರಿಚಯ ಮಾಡಿಸುವ ವ್ಯವಸ್ಥೆ ಇರುವುದು ಯಕ್ಷಗಾನದ ಇನ್ನೊಂದು ವೈಶಿಷ್ಟ್ಯವೆನ್ನಬಹುದು.
ಯಕ್ಷಗಾನದ ನೃತ್ಯ (ಕುಣಿತ) ತರಂಗಿತತೆಯನ್ನು ತನ್ನ ಮುಖ್ಯ ಗುಣವಾಗಿ ಬಳಸಿಕೊಂಡಿದೆ. ಇಲ್ಲಿ ಸಂಜ್ಞೆ, ಸಂಕೇತಗಳು ಗೌಣ. ಈ ನೃತ್ಯಕ್ಕೆ ಹಿಮ್ಮೇಳದ ತಾಳ, ಮದ್ದಲೆ, ಚಂಡೆಗಳು, ವಿಶೇಷ ಸಹಕಾರಿಯಾಗಿ ಬರುತ್ತವೆ. ಸ್ತ್ರೀಪಾತ್ರಗಳಲ್ಲಿ ಲಾಸ್ಯ, ಲಘುಪಾತ್ರಗಳಲ್ಲಿ ಹಾಸ್ಯ ಮತ್ತು ಬೇರೆಲ್ಲೂ ಕಾಣಸಿಗದ ಈ ಕಲೆಗೆ ವಿಶಿಷ್ಟವಾಗಿರುವ ವೀರ. ರೌದ್ರರಸ ಸಮನ್ವಿತವಾದ ನೃತ್ಯಗಳನ್ನು ಪ್ರಧಾನ ಪುರುಷ ಪಾತ್ರಗಳಲ್ಲಿ ಕಾಣಬಹುದು. ವಿಶೇಷ ಉತ್ಸಾಹವನ್ನು ತೋರಿಸುವ ಜಿಗಿತಗಳು (ದಿಗಿಣ), ಮಂಡಿಯೂರಿ ನೆಲದ ಮೇಲೆ ಬುಗುರಿಯಂತೆ ವೃತ್ತಾಕಾರದಲ್ಲಿ ತಿರುಗುವ ಮಂಡಿಗಳೂ ಈ ನೃತ್ಯದ ಅಂಗವಾಗಿ ಬಂದಿವೆ. ಕುಣಿತದ ಕೂಡೆನಿಲವುಗಳು (ಗತ್ತು) ಕೂಡ ಯಕ್ಷಗಾನದ ಪ್ರಮುಖ ವೈಶಿಷ್ಟ್ಯ. ಇದೇ `ಭಂಗಿ', ಇದರಲ್ಲಿ ಸಮಭಂಗ, ಅಭಂಗ, ದ್ವಿಭಂಗ, ತ್ರಿಭಂಗ ಮೊದಲಾದ ನಿಲವುಗಳಿವೆ. ವೇಷಗಳು ಧರಿಸುವ ಆಯುಧ, ಸಂಕೇತರೂಪದ ಸಾಧನಗಳು ಸಹ ಈ ಅಂಗಭಂಗಿ ಹಾಗೂ ನಿಲವುಗಳಿಗೆ ಮೋಹಕತೆಯನ್ನು ನೀಡಿ ಪೋಷಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಹಾರಾಡಿ ರಾಮ, ಅಳಿಕೆ ರಾಮಣ್ಣ ರೈ, ವೀರಭದ್ರನಾಯಕ ಮೊದಲಾದ ಕಲಾವಿದರು ತಮ್ಮ ಅಮೋಘ ಯಕ್ಷಗಾನ ನೃತ್ಯದಿಂದ ಜನಮನವನ್ನು ಸೂರೆಗೊಂಡಿದ್ದಾರೆ.
ಯಕ್ಷಗಾನದ ಗಾನ ಅಥವಾ ಹಾಡುಗಾರಿಕೆಯು (ಭಾಗವತಿಕೆ) ಶ್ರುತಿ, ರಾಗ, ತಾಳ, ಲಯಗಳಿಂದ ರೂಪುಗೊಂಡಿರುವ ಕರ್ನಾಟಕ ಹಾಗೂ ಹಿಂದುಸ್ಥಾನೀ ಮಾರ್ಗ ಸಂಪ್ರದಾಯಗಳಿಗಿಂತ ಭಿನ್ನವಾಗಿರುವ ಒಂದು ದೇಸೀ ಗೀತ ಸಂಪ್ರದಾಯವಾಗಿದೆ. ಗೀತಕ್ಕೆ ಹಿಮ್ಮೇಳವಾಗಿ ಶ್ರುತಿವಾದ್ಯ, ತಾಳ, ಮದ್ದಲೆ ಮತ್ತು ಚಂಡೆಗಳನ್ನು ಬಳಸಲಾಗುತ್ತದೆ. ಸೋರೆ ಬುರುಡೆಯಿಂದ ಮಾಡಿದ ಪುಂಗಿಯನ್ನು ಹಿಂದೆ ಶ್ರುತಿ ವಾದ್ಯವಾಗಿ ಬಳಸುತ್ತಿದ್ದರೆ, ಇತ್ತೀಚೆಗೆ ಹಾರ್ಮೋನಿಯಮ್ ಪುಂಗಿಯ ಸ್ಥಾನವನ್ನು ಆಕ್ರಮಿಸಿದೆ. ಇಲ್ಲಿ ರಾಗಗಳಿಗಿಂತ ಧಾಟಿಗಳಿಗೆ (ಮಟ್ಟು) ಪ್ರಾಶಸ್ತ್ಯ ಹೆಚ್ಚು. ಸುಮಾರು 80ರಷ್ಟು ಯಕ್ಷಗಾನ ರಾಗಗಳು ಉಪಲಬ್ಧವಿದ್ದು ಇವುಗಳ ಧಾಟಿಗಳು ನೃತ್ಯಗೀತೆಗಳೆರಡರ ತರಂಗಿತತೆಗೆ ಆಧಾರಭೂತವಾಗಿದೆ. ಇಲ್ಲಿ ಮುಖ್ಯ ಹಾಡುಗಾರಿಕೆ ಭಾಗವತನದಾದರೂ ಸಂಭಾಷಣೆಗೆ ಸಂದರ್ಭ ಒದಗಿದಾಗ, ಅವನಗಿಂತ ಮುಂಚೆ ಅಥವಾ ಜೊತೆಯಾಗಿ ಪಾತ್ರಧಾರಿಗಳೂ ಧ್ವನಿಗೂಡಿಸಿ ಹಾಡುವ ಕ್ರಮವಿದೆ. ಯಕ್ಷಗಾನ ಪ್ರಸಂಗದಲ್ಲಿನ ಪದ್ಯಮಾತ್ರ ಕವಿರಚಿತವಾದದ್ದು. ಆದರೆ ನಡುವೆ ಬರುವ ಮಾತು ಅಥವಾ ಸಂಭಾಷಣೆ ಪಾತ್ರಧಾರಿಗಳ (ಅರ್ಥಧಾರಿಗಳ) ಆಶು ಗದ್ಯ ಸಾಹಿತ್ಯವೆಂದೇ ಹೇಳಬೇಕು. ವೇಷಧಾರಿಗಳ ಬಾಯಲ್ಲಿ ಸಮಯ ಸ್ಫೂರ್ತಿಯಿಂದ ಪಾತ್ರ, ಸಂದರ್ಭ ಸನ್ನಿವೇಶಗಳಿಗೆ ಅನುಸಾರವಾಗಿ ಬರುವ ಈ ಮಾತುಗಳಲ್ಲಿ ಭಾವತಲ್ಲಿನತೆಯೇ ಮುಖ್ಯ ಗುಣವಾಗಿರುತ್ತದೆ. ಹೀಗೆ ಯಕ್ಷಗಾನದಲ್ಲಿ ಪ್ರಸಂಗ, ಸಾಹಿತ್ಯದ ಪದ್ಯವೂ, ಮಾತುಗಾರಿಕೆಯ ಗದ್ಯವೂ ಏಕಶರೀರವಾಗಿ ಹೊಂದಾಣಿಕೆಯಾಗಿದ್ದುಕೊಂಡು ರಸಪ್ರತಿಪಾದನೆಗೆ ಕುಮ್ಮಕ್ಕು ನೀಡುತ್ತವೆ.
ರಾಮಾಯಣ, ಭಾರತ, ಭಾಗವತಾದಿಗಳಿಂದ ಆರಿಸಿಕೊಂಡ ಕಥಾನಕಗಳ ಆಧಾರದ ಮೇಲೆ, ಯಕ್ಷಗಾನಕ್ಕಾಗಿಯೇ ಪದ್ಯದಲ್ಲಿ ರಚಿತವಾದ ಕಥಾನಕಕ್ಕೆ ಪ್ರಸಂಗ ಎಂದು ಹೆಸರು. ಕನ್ನಡದಲ್ಲಿ ಮೂನ್ನೂರಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳು ದೊರೆತಿವೆ. ಐರಾವತ, ಭೀಷ್ಮವಿಜಯ, ಕನಕಾಂಗಿ, ನಳದಮಯಂತಿ, ಉತ್ತರಗೋಗ್ರಹಣ, ಅಭಿಮನ್ಯುವಧೆ, ಪಂಚವಟಿ, ಅಂಗದ ಸಂಧಾನ, ಮೈರಾವಣ ಕಾಳಗ, ಲವಕುಶ, ಪ್ರಹ್ಲಾದ ಚರಿತ್ರೆ, ರತಿಕಲ್ಯಾಣ, ಬಾಣಾಸುರಕಾಳಗ, ಕುಮಾರ ವಿಜಯ ಮೊದಲಾದವು ಪ್ರಸಿದ್ಧ ಯಕ್ಷಗಾನ ಪ್ರಸಂಗಗಳಲ್ಲಿ ಕೆಲವು. ಇಂಥ ಪ್ರಸಂಗ ಕರ್ತೃಗಳಲ್ಲಿ ವಿಷ್ಣು, ನಗಿರೆಯ ಸುಬ್ರಹ್ಮಣ್ಯ, ದೇವದಾಸ, ಪಾಂಡೇಶ್ವರ ವೆಂಕಟ, ಧ್ವಜಪುರದ ನಾಗಪ್ಪಯ್ಯ, ಹಳೆಮಕ್ಕಿರಾಮ, ನಿತ್ಯಾನಂದ ಅವಧೂತ, ಹಟ್ಟಿಯಂಗಡಿ ರಾಮಭಟ್ಟ್, ಪಾರ್ತಿಸುಬ್ಬ, ಮುದ್ದಣ, ಗೇರಸೊಪ್ಪೆ, ಶಾಂತಪ್ಪಯ್ಯ, ಬೋರಾಡಿ ವೆಂಕಟರಮಣಯ್ಯ, ಹಲಸಿನ ಹಳ್ಳಿ ನರಸಿಂಹಶಾಸ್ತ್ರೀ ಮೊದಲಾದ ಕೆಲವು ಪ್ರಮುಖರನ್ನು ಹೆಸರಿಸಬಹುದು. ಭಾಗವತಿಕೆಯಲ್ಲಿ ಇತ್ತೀಚೆಗೆ ಕುಂಜಾರು ಶೇಷಗಿರಿ ಭಾಗವತ, ಬಲಿಪ ನಾರಾಯಣ ಭಾಗವತ ಕಡತೋಕ ಮಂಜುನಾಥ ಭಾಗವತ, ಕಾಳಿಂಗ ನಾವಡ, ನೆಬ್ಬೂರು ನಾರಾಯಣ ಹೆಗಡೆ ಮುಂತಾದವರು ಪ್ರಸಿದ್ಧರಾದವರು.
ಮೂಡಲಪಾಯ: ಈ ಪ್ರಭೇದದ ರಂಗಸ್ಥಳ ಕೆಲವು ಅಂಶಗಳಲ್ಲಿ ಕರ್ನಾಟಕದ ಇನ್ನಿತರ ಭಾಗಗಳ ರಂಗಸ್ಥಳದಂತೆಯೇ ರೂಪುಗೊಂಡರೂ ಒಂದಂಶದಲ್ಲಿ ಮಾತ್ರ ಪಡುವಲಪಾಯದಿಂದ ಭಿನ್ನವಾಗಿದೆ. ನಾಲ್ಕು ಕಂಬಗಳ ಮಧ್ಯೆ ಕಾದಿರಿಸಿದ ಜಾಗವೇ ರಂಗಸ್ಥಳವೆನಿಸಿದರೂ ಇಲ್ಲಿ ಭೂಮಿಯಿಂದ ಒಂದು ಅಥವಾ ಒಂದೂವರೆ ಅಡಿ ಎತ್ತರಕ್ಕಾದಂತೆ ಹಲಗೆಗಳನ್ನು ಹಾಸಿ ವಿಶೇಷವಾಗಿ ನಿರ್ಮಿಸಿದ ಅಟ್ಟದ ಮೇಲೆ ಆಟ ನಡೆಯುತ್ತದೆ. ಈ ಕಾರಣಕ್ಕಾಗಿಯೇ ಮೂಡಲಪಾಯಕ್ಕೆ ಅಟ್ಟದಾಟ ಎಂಬ ಹೆಸರೂ ರೂಢಿಯಲ್ಲಿದೆ.
ರಂಗಸಜ್ಜಿಕೆಯಲ್ಲಿ ಪಾತ್ರಗಳ ಪ್ರವೇಶಕ್ಕನುಗುಣವಾಗಿ ವ್ಯವಸ್ಥೆ ಇರುತ್ತದೆ. ರಾಮಾಯಣದಂಥ ಆಂಜನೇಯನ ಪಾತ್ರ ಬರುವ ಆಟವನ್ನು ಆಡುವಾಗ ರಂಗ ಸಜ್ಜಿಕೆ ವಿಶೇಷ ರೀತಿಯಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಆಂಜನೇಯನಂಥ ಪಾತ್ರಗಳು ಮೊದಲ ಬಾರಿಗೆ ರಂಗದ ಮೇಲೆ ಕಾಣಿಸಿಕೊಳ್ಳುವಾಗ ಗಂಭೀರ ಪಾತ್ರಗಳಂತೆ ರಂಗದ ಒಳಭಾಗದಿಂದಾಗಲಿ ಅಥವಾ ರಾಕ್ಷಸ ಪಾತ್ರಗಳಂತೆ ರಂಗದ ಮುಂಭಾಗದಿಂದಾಗಲಿ ಕಾಣಿಸಿಕೊಳ್ಳದೇ ಆಕಾಶದಿಂದ ಅಥವಾ ಮರದ ಮೇಲಿಂದ ಧರೆಗೆ ಇಳಿದು ಬಂದಂತೆ ವ್ಯವಸ್ಥೆಗೊಳಿಸುವುದು ಇಲ್ಲಿನ ವಿಶೇಷ. ಇಲ್ಲಿ ಪಾತ್ರಗಳಿಗೆ ಬಣ್ಣ ಹಾಕುವವನೇ ಬೇರೆ ಇರುತ್ತಾನೆ. ಅವನನ್ನು ಬಣ್ಣದವನು ಎಂದೇ ಕರೆಯುತ್ತಾರೆ.
ಮೂಡಲಪಾಯದ ರಂಗಸಂಪ್ರದಾಯ ಹಲವು ದೃಷ್ಟಿಯಿಂದ ಕುತೂಹಲಕಾರಿಯಾದುದು. ಪ್ರಸಂಗದ ಆರಂಭ ರಂಗದ ಮೇಲೆಯೇ ಆಗುತ್ತದೆಯಾದರೂ ನಾಂದಿ ಭಾಗಕ್ಕೆ ಸಂಬಂಧಿಸಿದ ಕೆಲವು ಸಂಪ್ರದಾಯ, ಆಚರಣೆ ನೇಪಥ್ಯ ಗೃಹದಿಂದಲೇ ಆರಂಭವಾಗುತ್ತದೆ. ಪಾತ್ರಧಾರಿಗಳು ವೇಷ ಧರಿಸುವುದಕ್ಕೆ ಮುನ್ನವೇ ಆಭರಣ ವಿಶೇಷ ಹಾಗೂ ವಾದ್ಯ ವಿಶೇಷಗಳನ್ನೆಲ್ಲ ಒಂದೆಡೆ ಇಟ್ಟು ಪೂಜಿಸುತ್ತಾರೆ. ಅನಂತರ ಪಾತ್ರಧಾರಿಗಳು ಭಾಗವತರಿಗೆ ವಂದಿಸಿ ಅವರಿಂದ ಆಶೀರ್ವಾದ ಪಡೆದು, ವೇಷ ಧರಿಸಲು ತೊಡಗುತ್ತಾರೆ. ಆಮೇಲೆ ಭಾಗವತರು ಮತ್ತು ಹಿಮ್ಮೇಳದವರು ನೇಪಥ್ಯಗೃಹದಿಂದಲೇ ಭಜನೆಯನ್ನು ಆರಂಭಿಸಿ ರಂಗಪೂಜೆ ಮುಗಿದ ಮೇಲೆ ರಂಗ ಪ್ರವೇಶ ಮಾಡುತ್ತಾರೆ. ಭಾಗವತರು ಹಾಗೂ ಹಿಮ್ಮೇಳದವರು ರಂಗದ ಬಲಭಾಗದಲ್ಲಿ ನಿಲ್ಲುತ್ತಾರೆ. ಆಟ ಮುಗಿಯುವವರೆಗೆ ಇವರು ಇಲ್ಲೆ ನಿಂತಿರುತ್ತಾರೆ. ರಂಗದ ಮೇಲೆ ಮೊದಲು ಗಣಪತಿಯ ಪೂಜೆ ಆಗುತ್ತದೆ. ಇಲ್ಲಿ ಭಾಗವತ ಪೂಜಾರಿಯನ್ನು ಬರಮಾಡಿಕೊಳ್ಳುವ ರೀತಿ ಹಾಗೂ ಅವರಿಬ್ಬರಿಗೂ ನಡೆಯುವ ಸಂಭಾಷಣೆ ಸ್ವಾರಸ್ಯವಾಗಿರುತ್ತದೆ.
ವಿನಾಯಕನ ಪೂಜೆಯ ಅನಂತರ ಭಾಗವತರು ವಿನಾಯಕ, ಪಾರ್ವತಿ, ಪರಮೇಶ್ವರ, ನಂದೀಶ, ಭೃಂಗಿ, ವೀರಭದ್ರ ಮೊದಲಾದ ಶಿವಗಣಗಳನ್ನೂ ಸ್ಮರಿಸಿ ಶಾರದಾ ಸ್ತುತಿಯನ್ನು ಮಾಡುತ್ತಿರುವಂತೆಯೇ ರಂಗದ ಮೇಲೆ ಹನುಮ ನಾಯಕನ ಪ್ರವೇಶವಾಗುತ್ತದೆ. ಇಲ್ಲಿಂದ ಸಂಪೂರ್ಣವಾಗಿ ಆಟ ಮುಗಿಯುವವರೆಗೆ ಹನುಮನಾಯಕ ರಂಗದ ಮೇಲೆ ಇರುತ್ತಾನೆ. ಎಲ್ಲ ರಾಜರುಗಳ ಸಾರಥಿಯೂ ಅವನೇ. ರಂಗದ ಮೇಲೆ ಬರುವ ಎಲ್ಲ ಪಾತ್ರಗಳನ್ನು ವಿಚಾರಿಸುವ ಜವಾಬ್ದಾರಿಯೂ ಆತನದೇ. ಅನಂತರ ಬಾಲಗೋಪಾಲರು ಪ್ರವೇಶಿಸುತ್ತಾರೆ. ಹೀಗೆ ಇವರೆಲ್ಲರೂ ಬಂದು ಮುಂದೆ ನಡೆಯಲಿರುವ ಆಟಕ್ಕೆ ಶುಭವನ್ನು ಹಾರೈಸಿ ಹೋದ ಮೇಲೆ ಭಾಗವತರು ಸಭಿಕರನ್ನುದ್ದೇಶಿಸಿ `ನಾನು ಕಥೆಯನ್ನು ಯಕ್ಷಗಾನದಲ್ಲಿ ಹಾಡುವೆನು. ಅದರಲ್ಲಿ ಏನಾದರೂ ತಪ್ಪುಗಳು ಕಂಡು ಬಂದರೆ ಕುಚ್ಚಿತೋಕ್ತಿಗಳಿಂದ ಕುಹಕವಂಗೈಯದೆ ನೀರುಕ್ಷೀರವಂ ವಿಂಗಡಿಸುವ ಹಂಸದೋಪಾದಿಯಲ್ಲಿ ಏನು ಅಬದ್ಧವಿದ್ದರೂ ಬಾಲ ಭಾಷಾ ವಿಶೇಷೋಜ್ವಲವೆಂದೆಣಿಸಿ ಬುದ್ಧಿವಂತರು ಸದ್ದು ಮಾಡದೇ ಸಾವಧಾನದಿಂದಾಲಿಸಿ ಕೇಳಿ ಸಂತೋಷಯುಕ್ತರಾಗಬೇಕು ' ಎಂದು ವಿಜ್ಞಾಪಿಸಿಕೊಂಡು ಆಟವನ್ನು ಆರಂಭಿಸುತ್ತಾನೆ.
ಪಾತ್ರಗಳು ರಂಗ ಪ್ರವೇಶಿಸುವ ಕ್ರಮದಲ್ಲಿ ಒಂದೊಂದು ವರ್ಗದ ಪಾತ್ರಗಳಿಗೂ ವ್ಯತ್ಯಾಸವಿರುತ್ತದೆ. ಈ ದೃಷ್ಟಿಯಿಂದ ಘೋರ ಪಾತ್ರಗಳ ಪ್ರವೇಶ ಕ್ರಮ ಅದ್ಭುತವಾಗಿರುತ್ತದೆ. ಅಂಥ ಪಾತ್ರಗಳ ಸ್ವರೂಪವನ್ನು ಮತ್ತಷ್ಟು ಎತ್ತಿ ತೋರಿಸುವುದಕ್ಕಾಗಿ, ಸಹಜ ವಾತಾವರಣವನ್ನು ನಿರ್ಮಿಸಿ ಪ್ರೇಕ್ಷಕರ ಮಧ್ಯಭಾಗದಿಂದ ಕೇಕೆ ಹಾಕುತ್ತ ಆರ್ಭಟಿಸಿಕೊಂಡು ಬರುವ ವ್ಯವಸ್ಥೆ ಇರುತ್ತವೆ. ಜೊತೆಯಲ್ಲಿ ಪಂಜನ್ನು ಹಿಡಿದ ಇಬ್ಬರು ವ್ಯಕ್ತಿಗಳು ಹಾಗೂ ಅದಕ್ಕೆ ಗುಗ್ಗುಳದ ಪುಡಿಯನ್ನು ಎರಚುವ ಒಬ್ಬ ವ್ಯಕ್ತಿ, ಜೊತೆಗೆ ತಮಟೆಯವರು ಇರುತ್ತಾರೆ. ಉಳಿದ ಪಾತ್ರಗಳೆಲ್ಲ ರಂಗದ ಹಿಂಭಾಗದಿಂದಲೇ ರಂಗ ಪ್ರವೇಶ ಮಾಡುತ್ತವೆ. ಆಟದ ಮುಕ್ತಾಯ ಧ್ವನಿಪೂರ್ಣವಾಗಿರುತ್ತದೆ. ಕೊನೆಯ ದೃಶ್ಯ ಮುಗಿದ ಮೇಲೆ ಮಂಗಳಾರತಿಯಾಗುತ್ತದೆ. ಎಲ್ಲ ಪಾತ್ರಧಾರಿಗಳೂ ಆಗ ರಂಗದ ಮೇಲೆ ಮಂಗಳಾರತಿಯಾಗುತ್ತದೆ. ಎಲ್ಲ ಪಾತ್ರಧಾರಿಗಳೂ ಆಗ ರಂಗದ ಮೇಲೆ ಬಂದು ಭಜನೆಯಲ್ಲಿ ಭಾಗವಹಿಸುತ್ತಾರೆ. ಅನಂತರ ಹತ್ತಿರದ ದೇವಸ್ಥಾನಕ್ಕೆ ಹಾಗೆಯೇ ತೆರಳಿ ಮತ್ತೆ ಭಜನೆಯೊಂದಿಗೆ ಬಣ್ಣದ ಮನೆಯನ್ನು ಸೇರಿಕೊಳ್ಳುತ್ತಾರೆ.
ಮೂಡಲಪಾಯದಲ್ಲಿ ಪ್ರಧಾನವಾಗಿ ಆಯ್ದುಕೊಳ್ಳುವ ಕಥಾಭಾಗವೆಲ್ಲ ವೀರರಸ ಪ್ರಧಾನವಾದುದು. ಉಳಿದ ರಸಗಳ ಪ್ರತಿಪಾದನೆಗೆ ಅವಕಾಶವಿದ್ದರೂ ವೀರರಸಕ್ಕೆ ಅಗ್ರಸ್ಥಾನ. ಇಲ್ಲಿ ಪ್ರಸಂಗ ಸಾಹಿತ್ಯ ರಚನೆ ಗದ್ಯ - ಪದ್ಯಗಳೆರಡರಿಂದಲೂ ಕೂಡಿರುತ್ತದೆ; ಎರಡೂ ಕವಿನಿರ್ಮಿತವೇ. ಪಾತ್ರಧಾರಿ ಪದ್ಯವನ್ನೆಂತು ಕಂಠ ಪಾಠಮಾಡಿ ಹಾಡಬೇಕೋ ಗದ್ಯವನ್ನೂ ಅಂತೆಯೇ ಕಂಠ ಪಾಠ ಮಾಡಿ ಮಾತನಾಡಬೇಕು. ಇಲ್ಲಿ ಪಾತ್ರಧಾರಿಗಳಿಗೆ ಅಭಿನಯದ ಹೊರತು ಇನ್ನಾವುದೇ ಬಗೆಯ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ. ಪಡುವಲಪಾಯ ಈ ದೃಷ್ಟಿಯಿಂದ ಸಂಪೂರ್ಣ ಭಿನ್ನವಾಗಿದೆ.
ಮೂಡಲಪಾಯದಲ್ಲಿ ಬಳಸುವ ವಾದ್ಯವಿಶೇಷಗಳೆಂದರೆ ತಾಳ, ಮೃದಂಗ (ಮದ್ದಲೆ), ಮುಖವೀಣೆ ಹಾಗೂ ಶ್ರುತಿಗಾಗಿ ಮೊದಲು ಬಳಸಲಾಗುತ್ತಿದ್ದ ಪುಂಗಿಗೆ ಬದಲಾಗಿ ಈಗ ಹಾರ್ಮೋನಿಯಂ ಬಳಸುತ್ತಾರೆ. ಇಲ್ಲಿ ಇಷ್ಟೇ ವಾದ್ಯಗಳಲ್ಲಿ ತೋರುವ ವೈವಿಧ್ಯ, ಮಾಡುವ ಚಮತ್ಕಾರ ಅದ್ಭುತವಾದುದು. ಕುಣಿತ ಹಾಗೂ ಹಾಡಿಗೆ ಹೊಂದಿಕೊಂಡಂತೆ ತಾಳ ಹಾಗೂ ಮೃದಂಗ ಅಪೂರ್ವ ಮೆರಗನ್ನು ಕೊಟ್ಟರೆ ಹಿಮ್ಮೇಳದೊಂದಿಗೆ ಮುಖವೀಣೆ ಅತ್ಯಂತ ಪರಿಣಾಮಕಾರಿ ಆಗಿರುತ್ತದೆ.
ಸಾಮೂಹಿಕ ಹಿಮ್ಮೇಳ ಮೂಡಲಪಾಯದ ಒಂದು ಆಕರ್ಷಕ ಅಂಗ. ಭಾಗವತರು ಆಡಿದುದನ್ನು ಮುಖವೀಣೆಯೊಡನೆ ಆಲಾಪನೆ ಮಾಡುವ ರೀತಿ ಇಲ್ಲಿ ಅಪೂರ್ವವಾಗಿರುತ್ತದೆ.
ಇಲ್ಲಿನ ಮತ್ತೊಂದು ಆಕರ್ಷಕ ಅಂಗ ವೇಷಭೂಷಣ. ಈ ವೇಷ ಭೂಷಣಗಳನ್ನು ಆಭರಣ ವಿಶೇಷಣಗಳನ್ನು ಸಿದ್ಧಗೊಳಿಸಲು ಬಳಸುವ ಸಾಮಾನ್ಯ ವಸ್ತುಗಳೆಂದರೆ ಬೆಂಡು, ಜೀರುಂಬೆ ರೆಕ್ಕೆ, ಗಾಜಿನ ಚೂರು, ಬಣ್ಣದ ಬಟ್ಟೆ ಮುಂತಾದವು. ಜನಪದರ ಅಪ್ರತಿಮ ಕಲ್ಪನಾಶಕ್ತಿ, ಪ್ರತಿಭಾಶಕ್ತಿ ಹಾಗೂ ಕಲಾಶಕ್ತಿಯನ್ನು ಇಲ್ಲಿ ದಟ್ಟವಾಗಿ ಕಾಣಬಹುದಾಗಿದೆ. ಮೂಡಲಪಾಯ ಇಂದಿಗೂ ಹಳ್ಳಿಗಾಡಿನಲ್ಲಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದೆ.
ಘಟ್ಟದಕೋರೆ: ಮಲೆನಾಡು ಮತ್ತು ಬಯಲು ನಾಡುಗಳ ಸೆರಗಿನಲ್ಲಿ ಮೂಡಲಪಾಯ ಮತ್ತು ಪಡುವಲಪಾಯಗಳೆರಡರ ಸಾರವನ್ನೂ ಗರ್ಭೀಕರಿಸಿಕೊಂಡ ಒಂದು ಹೊಸ ಯಕ್ಷಗಾನ ಸಂಪ್ರದಾಯ; ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ರೂಪುಗೊಂಡಂತೆ ತೋರುತ್ತದೆ. ಮೈಸೂರು ಜಿಲ್ಲೆಯ ಕೋಳಗಾಲ ಮತ್ತು ಮಂಡ್ಯ ಜಿಲ್ಲೆಯ ಹೊಸಹೊಳಲು ಈ ಸಂಪ್ರದಾಯದ ಎರಡು ಕೇಂದ್ರಗಳಾಗಿ ಬೆಳೆದು ಇಂದಿಗೂ ಈ ಕಲೆ ಇಲ್ಲಿ ಜೀವಂತವಾಗಿ ಉಳಿದಿದೆ. ಘಟ್ಟದ ಮೇಲಿನ ಜನ ವ್ಯಾಪಾರೋದ್ಯಮಗಳ ಕಾರಣವಾಗಿ ಗಟ್ಟದ ಕೆಳಗಿನ ಪ್ರದೇಶಗಳಿಗೆ ಹೋಗಿ ಬರುತ್ತಿದ್ದ ಕಾಲವೊಂದಿತ್ತು. ಎತ್ತುಗಳ ಮೇಲೆ ಕತ್ತೆಗಳ ಮೇಲೆ ತಮ್ಮ ವಸ್ತುಗಳನ್ನು ಸಾಗಿಸಿ ಅಲ್ಲಿ ವ್ಯಾಪಾರ ಮಾಡಿ ಹಿಂದಿರುಗುವಾಗ ಅಲ್ಲಿನ ವಸ್ತುಗಳನ್ನು ಇಲ್ಲಿಗೆ ತರುತ್ತಿದ್ದವರನ್ನು `ಘಟ್ಟದ ವ್ಯಾಪಾರಕ್ಕೆ ಹೋಗುವವರು ಎಂದೇ ಕರೆಯಲಾಗುತ್ತಿತ್ತು. ಜನಪದ ಕಥೆಗಳಲ್ಲಿ, ಕಾವ್ಯಗಳಲ್ಲಿ ಇಂಥ ವ್ಯಾಪಾರಿಗಳ ಪ್ರಸ್ತಾಪ ವಿಶೇಷವಾಗಿ ಕಂಡುಬರುತ್ತದೆ. ಹೊಸಹೊಳಲಿನ ದೇವಾಂಗವರ್ಗಕ್ಕೆ ಸೇರಿದ ಜನರಲ್ಲಿ ಗೌರಿ ಹಬ್ಬದ ವಿಶೇಷ ಕಾಣಿಕೆಯಾಗಿ ಪ್ರತಿ ವರ್ಷ ನಡೆಯುವ ಯಕ್ಷಗಾನ ಪ್ರದರ್ಶನ ವ್ಯಾಪಾರೀ ಜನಾಂಗದ ಹಿನ್ನೆಲೆಯನ್ನು ಸೂಚಿಸುತ್ತದೆ. ಕೋಳಗಾಲದ ಯಕ್ಷಗಾನ ಅರಸು ಜನಾಂಗ ಮೂಲಕ್ಕೆ ಸೇರುತ್ತವೆ. ಅರಸುಗಳು, ಕ್ಷತ್ರಿಯರು ಯಾವುದೋ ದಂಡಯಾತ್ರೆಯ ಸಂದರ್ಭದಲ್ಲಿ ಮೈಸೂರು ಸೇನೆಯೊಡನೆ ಘಟ್ಟಗಳನ್ನು ಇಳಿದು ಸಾಗಿದ್ದ ಅರಸು ನಾಂಗದ ಬಸವರಾಜ ಅರಸು ಎಂಬುವರು ಅನೇಕ ಯಕ್ಷಗಾನದ ಪ್ರತಿಗಳನ್ನು ಅಲ್ಲಿಂದ ತಂದರೆಂದು ಅವರ ವಂಶಸ್ಥರು ಹೇಳುತ್ತಾರೆ. ಪ್ರತಿಗಳನ್ನು ತಂದದ್ದರ ಜೊತೆಗೆ ಭಾಗವತಿಕೆಯನ್ನೂ ಅವರು ಅಭ್ಯಾಸ ಮಾಡಿಕೊಂಡು ಬಂದರು. ಕ್ರಿ. ಶ. 1778ರ ಸುಮಾರಿನಲ್ಲಿ ಅವರು ಘಟ್ಟದ ಕೆಳಗಿನಿಂದ ಮರಳಿ ಕೋಳಗಾಲಕ್ಕೆ ಬಂದರು. ಅವರು ತಂದ ಯಕ್ಷಗಾನ ಪ್ರತಿಗಳು ಈಗಲೂ ಉಳಿದುಬಂದಿವೆ (ಅವೆಲ್ಲ ಬಹುಮಟ್ಟಿಗೆ ಪಾರ್ತಿಸುಬ್ಬನ ಯಕ್ಷಗಾನಗಳೇ. ಭಾಗವತ ಬಸವರಾಜ ಅರಸಿನವರ ಕಾಲವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ ಪಾರ್ತಿಸುಬ್ಬನ ಕಾಲ 1778ಕ್ಕೂ ಹಿಂದೆ ಹೋಗುತ್ತದೆ).
ಭಾಗವತ ಬಸವರಾಜ ಅರಸಿನವರು ಕೋಳಗಾಲಕ್ಕೆ ಬರುವ ಮುನ್ನ ಈ ಭಾಗದಲ್ಲಿ ಮೂಡಲಪಾಯ ಯಕ್ಷಗಾನ ಪ್ರಚಲಿತವಾಗಿತ್ತು. ಅಲ್ಲಿನ ವೇಷಭೂಷಣ, ವಾದ್ಯ ವಿಶೇಷಗಳನ್ನು ಇವರು ಉಳಿಸಿಕೊಂಡರು. ಮೂಡಲಪಾಯದ ಕಿರೀಟ, ಭುಜಕೀರ್ತಿ, ಎದೆಹಾರ, ವೀರಗಾಸೆಗಳೆಲ್ಲ ಉಳಿದವು. ಮುಖವೀಣೆ ಉಳಿಯಿತು. ಮೂಡಲಪಾಯದ ವಿಶೇಷ ಕೊಡುಗೆಯಾದ `ಮೇಳ ಉಳಿಯಿತು. ಹೊಂಗೆಯ ಚಪ್ಪರ ಉಳಿದರೂ ಅದು ಮೇಳದವರು ಮಾತ್ರ ನಿಲ್ಲುವ ಎಡೆಯಾಯಿತು. ಪಾತ್ರಗಳು ಚಪ್ಪರದ ಹೊರಗೆ ಬಂದು ಅಭಿನಯ ನೀಡುವ ಸಂಪ್ರದಾಯ ಬೆಳೆಯಿತು.
ಯಕ್ಷಗಾನ ಬಯಲಾಟಗಳಲ್ಲಿ, ಮೂಡಲಪಾಯವನ್ನು ಬಿಟ್ಟರೆ ಕಟ್ಟಲನ್ನು (ಚಪ್ಪರ) ಕಟ್ಟುವ ಸಂಪ್ರದಾಯ ಮೊದಲಿಗೆ ಇರಲಿಲ್ಲ. ತೆರೆದ ಬಯಲಲ್ಲಿ ಚಚ್ಚೌಕವಾಗಿ ನಾಲ್ಕು ದಡಿಗಳನ್ನು ನಟ್ಟು ಈ ಚೌಕಟ್ಟಿನಲ್ಲಿ ಪ್ರದರ್ಶನ ನೀಡುವ ಸಂಪ್ರದಾಯವಿತ್ತ. ಈಗಲೂ ಕರಾವಳಿಯ ಭಾಗದಲ್ಲಿ ಅಲ್ಲಲ್ಲಿ ಈ ಸಂಪ್ರದಾಯ ಉಳಿದಿದೆ. ಈ ಚೌಕಟ್ಟಿನ ಮೂರು ಕಡೆಗಳಲ್ಲಿ ಪ್ರೇಕ್ಷಕರು ಕುಳಿತರೆ ಹಿಂಬದಿ ಭಾಗವತಾದಿಗಳಿಗೂ ಪಾತ್ರಗಳ ಪ್ರವೇಶಕ್ಕೂ ಮೀಸಲಾಗಿರುತ್ತಿತ್ತು. ಇದರ ಪ್ರಭಾವ ಕೋಳಗಾಲದಲ್ಲಿ, ಹೊಸಹೊಳಲಿನಲ್ಲಿ ಇಂದಿಗೂ ಉಳಿದುಬಂದಿದೆ.
ಘಟ್ಟದ ಕೋರೆಯ ರಂಗಮಂದಿರ ಒಂದು ಹೊಂಗೆಯ ಚಪ್ಪರ; ಅದರ ಮೂರು ಬದಿಗಳಿಗೆ ತಡಿಕೆಗಳನ್ನು ಅಳವಡಿಸುತ್ತಾರೆ. ಇದನ್ನು ನಿರ್ಮಿಸಿವವರು ಹರಿಜನರು (ಹರಿಜನರಿಗೆ ಈ ಮೇಳದಲ್ಲಿ ವಿಶೇಷ ಸ್ಥಾನ. ಪ್ರೇಕ್ಷಕರ ಸಾಲಿನಲ್ಲಿ ಮೊದಲು ಕೂರುವವರೇ ಅವರು). ಈ ಚಪ್ಪರದ ಚಾವಣಿಗೆ ಊರಿನ ಮಡಿವಾಳ ಶುಭ್ರವಸ್ತ್ರವನ್ನು ಕಟ್ಟುತ್ತಾನೆ. ಈಶಾನ್ಯ ಮೂಲೆಯಲ್ಲಿ ಕಂಬವನ್ನು ನೆಡುವಾಗ ಪೂಜೆಮಾಡಿ ನೆಡುವರು. ಚಪ್ಪರಕ್ಕೆ ಒಂದು ತೆಂಗಿನಕಾಯಿ ಮಂತ್ರಿಸಿ ಕಟ್ಟುವರು. ಘಟ್ಟದ ಕೋರೆಯಲ್ಲಿ ಯಾವ ಪಾತ್ರವೂ ರಂಗದ ಮುಂಬದಿಯಿಂದ ಬರುವುದಿಲ್ಲ. ಚಪ್ಪರದ ಹಿಂಭಾಗದಲ್ಲಿ ಎಡಭಾಗ ತೆರವಾಗಿರುತ್ತದೆ. ಬಣ್ಣದ ಮನೆಯಿಂದ ಪಾತ್ರಧಾರಿಗಳು ಚಪ್ಪರದ ಹಿಂಬದಿಗೆ ಬಂದು ದ್ವಾರದಿಂದ ಒಳಗೆ ಪ್ರವೇಶಿಸಿ ಅದನ್ನು ದಾಟಿ ಚಪ್ಪರದ ಮುಂಭಾಗದ ಎರಡು ಮೂಲೆಗಳಲ್ಲಿ ಅಗ್ಗಿಷ್ಟಿಕೆಯನ್ನು ಸ್ಥಾಪಿಸಿ ಬೆಳಕನ್ನು ಮಾಡಲಾಗುತ್ತಿತ್ತು. ಸುಮಾರು ಮೂರು ಅಡಿ ಎತ್ತರದ ಭೂತಾಳೆ ಗಡ್ಡೆಯನ್ನು ತಂದು ಎರಡು ಕಡೆಯೂ ನೆಡಲಾಗುತ್ತಿತ್ತು. ಅದರ ಮೇಲೆ ಸಗಣಿಯನ್ನು ಹಾಕಿ ಕಾಶಿ ಗಿಡದ (ಪರತದ ಗಿಡ) ತಿರುಳನ್ನೋ ಅಥವಾ ಕುಟ್ಟಿದ ಹರಳು ಬೀಜವನ್ನೋ ಹಾಕಿ ಊರಿಸಲಾಗುತ್ತಿತ್ತು. ಬೆಳಕು ಪಾತ್ರಧಾರಿಗಳ ಸಮೀಪದಲ್ಲಿ ಉರಿದು ಅವರು ಮೈಮೇಲೆ ಧರಿಸಿದ ಆಭರಣಗಳ ಕಾಂತಿಯನ್ನು ಹೆಚ್ಚಿಸಿ ವಿಶೇಷ ಆಕರ್ಷಣೆಯನ್ನು ತರುತ್ತಿತ್ತು. ಈಗ ವಿದ್ಯುದ್ದೀಪ ಮತ್ತು ಗ್ಯಾಸ್‍ಲೈಟ್‍ಗಳು ಆ ಸ್ಥಾನವನ್ನು ಆಕ್ರಮಿಸಿದೆ.
ಈ ಸಂಪ್ರದಾಯದಲ್ಲಿ ಬಣ್ಣದ ಮನೆ ಎಂದರೆ ದೇವಸ್ಥಾನ ಅಥವಾ ರಾಮಮಂದಿರ. ಇದು ಪ್ರದರ್ಶನದ ಸ್ಥಳದಿಂದ ಸಾಕಷ್ಟು ದೂರವೇ ಇರುತ್ತದೆ. ಅಲ್ಲಿ ಕಿರೀಟಗಳನ್ನೂ ಇತರ ಒಡವೆಗಳನ್ನೂ ಸಾಲಾಗಿ ಜೋಡಿಸಿ ಮೇಳದವರೂ ಪಾತ್ರ ವರ್ಗದವರೂ ಸೇರಿ ಪೂಜೆ ಸಲ್ಲಿಸಬೇಕು. ಅನಂತರ ಬಣ್ಣ ಹಚ್ಚಿಕೊಳ್ಳುವ ಕಾರ್ಯ. ಮೊದಲಿಗೆ ಪಡುವಲಪಾಯದಂತೆ ತಮ್ಮ ತಮ್ಮ ಬಣ್ಣಗಳನ್ನು ಆಯಾ ಪಾತ್ರಧಾರಿಗಳೇ ಹಚ್ಚಿಕೊಳ್ಳುತ್ತಿದ್ದರು. ಈಗ ಬಣ್ಣದವನ ನೆರವು ಬೇಕು. ಮೊದಲಿಗೆ ರಾಜ ಪಾತ್ರಧಾರಿಗಳು ಹರಿದಾಳವನ್ನು ತೇದು ಅದರ ಬಣ್ಣ ಲೇಪನವನ್ನು ಮಾಡಿಕೊಳ್ಳುತ್ತಿದ್ದರು. ಕೆಂಪು ಮತ್ತು ಕಪ್ಪು ಬಣ್ಣಗಳು ಘೋರ ಪಾತ್ರಗಳಿಗೆ ವಿಶೇಷವಾಗಿ ಬಳಕೆಯಾಗುತ್ತದೆ. ಪಾಪಸ್ಸುಕಳ್ಳಿಯ ಹಣ್ಣನ್ನು ಕೆಂಪು ಬಣ್ಣಕ್ಕೆ ಬಳಸಲಾಗುತ್ತಿತ್ತು. ಅಂಟುವಾಳದ ಕಾಯನ್ನು ಮೀಸೆ ಮುಂತಾದವನ್ನು ಅಂಟಿಸಲು ಉಪಯೋಗಿಸುತ್ತಿದ್ದರು. ಈಗ ಎಲ್ಲ ಬದಲಾಗಿದೆ. ಮಾರುಕಟ್ಟೆಯ ಬಣ್ಣಗಳು ಬಂದಿವೆ. ಹಳದಿಗೆ ಬದಲಾಗಿ ಈಗ ಗುಲಾಬಿಯ ವರ್ಣ ರಾಜ ಪಾತ್ರಗಳಿಗೆ, ಸ್ತ್ರೀಪಾತ್ರಗಳಿಗೆ ಬಳಕೆಯಾಗುತ್ತಿದೆ.
ಬಣ್ಣದ ಮನೆಯ ಪೂಜೆಯಾಗಿ ವೇಷಗಳು ಸಿದ್ಧವಾದ ಮೇಲೆ ಭಾಗವತಾದಿ ಮೇಳದವರು, ವಾದ್ಯ ವೃಂದದೊಡನೆ ದಿಗಣ ಹಾಕಿ
ದ್ವಿರದಾನನ ಪಾಲಿಸೊ - ಕರುಣದೊಳೆಮ್ಮ
ದ್ವಿರದಾರನ ಪಾಲಿಸೊ
ಎಂಬ ಹಾಡಿನೊಡನೆ ಸಾಗಿಬರುವರು. ರಂಗದ ಹಿಂಬದಿಯಿಂದಲೇ ಪ್ರವೇಶಿಸುವರು. ಮೇಳದವರೂ ಭಾಗವತರೂ ಸೇರಿ 8-10 ಮಂದಿ ಇರುತ್ತಾರೆ. ಶ್ರುತಿ, ಮುಖ ವೀಣೆ, ಮದ್ದಲೆಗಳ ಜೊತೆಗೆ ನಾಲ್ಕಾರು ಮಂದಿ ತಾಳ ಹಿಡಿದಿರುತ್ತಾರೆ. ಒಬ್ಬೊಬ್ಬ ವಾದ್ಯದವನಿಗೂ ಗೊತ್ತಾದ ಸ್ಥಳಗಳಿರುತ್ತವೆ. ಮದ್ದಲೆಯ ಗಾತ್ರ ದೊಡ್ಡದಾದುದರಿಂದ ಒಂದು ಕವೆಯನ್ನು ನೆಟ್ಟು ಅದರ ಮೇಲೆ ಮದ್ದಲೆಯನ್ನು ಇಟ್ಟಿರುತ್ತಾರೆ. ಇಲ್ಲಿನ ಮದ್ದಲೆ ಎರಡು ಅಡಿ ಉದ್ದವಿದ್ದು ಒಳ್ಳೆಯ ನಾದವನ್ನು ಕೊಡುತ್ತದೆ.
ಭಾಗವತರು ಸಭಾವಂದನೆಗೆ ಮೊದಲು `ಜ್ಞಾನಾಂದಮಯಂ ದೇವಂ' ಎಂಬ ಗಣೇಶ ಸ್ತುತಿಯನ್ನು `ಗುರುಬ್ರಹ್ಮ ಗುರುವಿಷ್ಣು ಎಂಬ ಗುರುಸ್ತುತಿಯನ್ನು ಶಾರದೆ, ಆಕಾಶ ದೇವತೆ, ಭೂಮಿ ದೇವತೆ, ಅಷ್ಟದಿಕ್ಪಾಲಕರು ಮೊದಲಾದವರಿಗೆ ವಂದನೆಯನ್ನು ಸಲ್ಲಿಸಿ, ನೆರೆದ ಸಭೆಗೆ ವಂದಿಸಿ ತಮ್ಮ ಪ್ರದರ್ಶನದಲ್ಲಿ ದೋಷಗಳು ಕಂಡುಬಂದರೆ `ಹಂಸಕ್ಷೀರ ನ್ಯಾಯ ದಲ್ಲಿ ಸ್ವೀಕರಿಸಬೇಕೆಂದು ಹೇಳಿ ಮುಂದೆ ಕಥೆಗೆ ನಾಂದಿಯನ್ನು ಹಾಡುವರು.
ಘಟ್ಟದಕೋರೆಯಲ್ಲಿ ಹನುಮನಾಯಕ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆರಂಭದಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ಪಾತ್ರವನ್ನು ಕೋಡಂಗಿ ಎಂದೇ ಕರೆಯುವರು. ಇವನ ವೇಷ ಒಂದು ಚೂಪಾದ ಕಾಗದದ ಕುಲಾವಿ, ಸೆಣಬಿನ ಗಡ್ಡಮೀಸೆ, ಕಚ್ಚೆ, ನಿಲುವಂಗಿ ನಡುವಿನ ವಸ್ತ್ರಗಳಿಂದ ಕೂಡಿರುತ್ತದೆ. ಆರಂಭದಲ್ಲಿ ಇಬ್ಬರು ಹಿಡಿದ ತೆರೆಯ ಹಿಂದೆ ಇವನು ಕಾಣಿಸಿಕೊಂಡು ಆರೋರಮಣ ಗೋವಿಂದ -ಅಚ್ಚುತರಮಣ ಗೋವಿಂದ - ಕುಂಬಳಕಾಯಿ ಗೋವಿಂದ - ಪಡವಲಕಾಯಿ ಗೋವಿಂದ - ಹೀಗೆ ಸಾಗುವ ಒಂದು ವಿನೋದಾತ್ಮಕ ಗೀತೆಗೆ ನರ್ತಿಸಿ ನಿಲ್ಲುವನು. ಭಾಗವತರು ಮತ್ತು ಕೋಡಂಗಿಯ ನಡುವೆ ಸ್ವಾರಸ್ಯ ಸಂಭಾಷಣೆಯಿರುತ್ತದೆ. ಅನಂತರ ಗಣೇಶನ ಪೂಜೆ, ಗಣೇಶನ ಮುಖವಾಡ ಹಿಡಿದ ಬಾಲಕ ಅರ್ಚಕರ ಪ್ರವೇಶ. ಈತನೂ ವಕ್ರವಾಗಿಯೇ ಇರಬೇಕು. ಒಂದು ಕಣ್ಣು ಕುರುಡು, ಒಂದು ಕಾಲು ಕುಂಟು, ಪುಳುಜುಟ್ಟು, ಆ ಜುಟ್ಟಿಗೆ ಮುಡಿದ ಹೂವು, ನೀರನ್ನು ನೆಲಕ್ಕೆ ಚಿಮುಕಿಸುತ್ತ ಮಡಿ ಮಡಿ ಎಂದೇ ಇವನು ಪ್ರವೇಶಿಸುವನು. ಕೋಡಂಗಿ ಮತ್ತು ಅರ್ಚಕರ ನಡುವಿನ ಹಾಸ್ಯದ ಚಟಾಕಿಯ ಅನಂತರ ವಿಘ್ನೇಶ್ವರನ ಪೂಜೆ ನಡೆದು ಪೂರ್ವರಂಗ ಮುಗಿಯುವುದು.
ಘಟ್ಟದಕೋರೆಯ ನೃತ್ಯ ಮೋಹಕವಾದುದು ಲಲಿತವಾದುದು. ರಾಜಸ ಪಾತ್ರಗಳು ಮಾತ್ರ ತೀವ್ರವಾಗಿ ಕುಣಿಯುವುದನ್ನು ಕಾಣಬಯಹುದು. ಕುಣಿತವನ್ನು `ನಡೆ ಎನ್ನಲಾಗುವುದು ಸ್ತ್ರೀ ಪಾತ್ರ, ಋಷಿಯ ಪಾತ್ರ, ನಾರದ ಇಂಥ ಪಾತ್ರಗಳಿಗೆ ಕುಣಿತವಿಲ್ಲ. ರಾಮ, ಲಕ್ಷ್ಮಣ, ಸೀತೆಯರು ರಂಗವನ್ನು ಪ್ರವೇಶಿಸಿದಾಗ ರಾಮ ಲಕ್ಷ್ಮಣರು ಮಾತ್ರ ಕುಣಿಯುತ್ತಾರೆ. ಸೀತೆಯದು ಭಾವಾಭಿನಯ ಮಾತ್ರ. ಬಬ್ರುವಾಹನ ಪ್ರಸಂಗದಲ್ಲಿ ಮಾತ್ರ ಪ್ರಮೀಳೆ ಕಚ್ಚೆಹಾಕಿ ಕುಣಿಯುವ ಸಂದರ್ಭ ಕಂಡುಬರುತ್ತದೆ. ಕ್ಷತ್ರಿಯ ವೀರರಲ್ಲಿ, ದೇವತೆಗಳಲ್ಲಿ, ವಾನರರಲ್ಲಿ, ರಾಕ್ಷಸರಲ್ಲಿ ಮಾತ್ರ ಕುಣಿತವನ್ನು ಅಳವಡಿಸಿರುವುದು ಇಲ್ಲಿನ ಒಂದು ಗಮನಾರ್ಹ ಅಂಶ. ಪುರುಷರ ಕುಣಿತದಲ್ಲಿ `ತ್ರಿಪುಟಿ'ಯಲ್ಲಿ ಥಾ ಥೈ ಥಕ ಥೈ ಎಂದು ಬೇರೆ ಬೇರೆ ಕಾಲಗಳಲ್ಲಿ ಕುಣಿಸಿದರೆ ಆದಿತಾಳದಲ್ಲಿ `ತಾನನಾನಾ -ನಾನಾನ್ನಾನ್ನ - ದೇವ | ದೇವ| ದೇವಾಧಿದೇವ ಹೀಗೆ ಕುಣಿತದ ನಡೆ ಸಾಗುತ್ತದೆ. ಹೆಜ್ಜೆಯ ಗತ್ತಿನ ಜೊತೆಗೆ ಕೈಯ ಒನಪೂ ಇಲ್ಲಿ ಮೋಹಕ. ಇಲ್ಲಿ ಒರಟಾದ ಕುಣಿತ ಎಲ್ಲಿಯೂ ಕಾಣುವುದಿಲ್ಲ. ಎಲ್ಲವೂ ನಯ, ಎಲ್ಲವೂ ನಾಜೂಕು, ಎಲ್ಲವೂ ಆಪ್ಯಾಯಮಾನ. ಒಟ್ಟಿನಲ್ಲಿ ಘಟ್ಟದ ಕೋರೆಯ ಪಾತ್ರಗಳು ಎಲ್ಲ ತಾಳಗಳಿಗೂ ನರ್ತಿಸುತ್ತವೆ. 5-6 ಬಗೆಯ ನೃತ್ಯ ವೈವಿಧ್ಯ ಇಲ್ಲಿ ಕಂಡುಬರುತ್ತದೆ.
ದೈತ್ಯ ಪಾತ್ರಗಳು, ವಾಲಿ, ಸುಗ್ರೀವ ಇಂಥ ಉಗ್ರಪಾತ್ರಧಾರಿಗಳು ರಂಗವನ್ನು ಪ್ರವೇಶಿಸುವ ಮುನ್ನ ದಿಗಣ ಹಾಕುತ್ತಾರೆ :
ಧೀನ್ ಧೀನ್ ಧೀನ್ ಧೀನ್
ಧತ್ತಿನ್ನತ್ತ ತಗ ತಗ ತಗ ತಗ
ಥೋದಿನ್ನ ತಾಂ ಥಾಂ ಥಾಂಥೈ
ಧಿನತೋಂ ಧಿನತೋಂ ಧಿನತೋಂ ಧಿನತೋಂ
ಎಂದು ಮೂರು ಕಾಲಗಳಲ್ಲಿ ಬೀಳುವ ಮದ್ದಲೆಯ ನಾದಕ್ಕೆ ತಕ್ಕಂತೆ ವೀರಾವೇಶದಿಂದ ಪಾತ್ರಗಳು ಕುಣಿಯುವುವು. ಮೂಡಲಪಾಯದಲ್ಲಿನಂತೆ `ಭಲಿರೇ ಶಹಭಾಶ್ .....' ಎಂಬ ಉದ್ಗಾರಗಳನ್ನು, ಕುಣಿತದ ಸಂದರ್ಭದಲ್ಲಿ ಇಲ್ಲಿ ಕಾಣುವುದಿಲ್ಲ. ರಾವಣನ ಪಾತ್ರ ರಂಗದ ಮೇಲೆ ತೆರೆಯ ಹಿಂದೆ ನಿಂತಾಗ ಪಡುವಲಪಾಯದಂತೆ ಶಿವಪೂಜೆ ಉಂಟು. ಇದಕ್ಕೆ ಮೊದಲು ಮೇಳದವರು ಹೋಗಿ ಆ ಪಾತ್ರವನ್ನು ಕುಣಿಸಿ ಕರೆತರಬೆಕು. ಇಲ್ಲಿ ಪಂಜನ್ನು ಬೇರೆಯವರು ಹಿಡಿಯುತ್ತಾರೆ. ಗುಗ್ಗಳ ಹಾಕುವುದುಂಟು. ಶೂರ್ಪನಖಿ ಮಾತ್ರ ತಾನೇ ಪಂಜನ್ನು ಹಿಡಿದು ಬರುವ ವಾಡಿಕೆ. ಮೂಡಲಪಾಯದಲ್ಲಿ ಈ ದೈತ್ಯ ಪಾತ್ರಗಳು ಪ್ರೇಕ್ಷಕರ ನಡುವೆ ರಂಗಕ್ಕೆ ಅಭಿಮುಖವಾಗಿ ಆರ್ಭಟಿಸಿಕೊಂಡು ವೇಗವಾಗಿ ಬಂದರೆ ಇಲ್ಲಿನ ಪಾತ್ರಗಳು ರಂಗದ ಹಿಂಬದಿಯಿಂದಲೇ ನಿಧಾನವಾಗಿ ಕುಣಿಯುತ್ತ ಬರುತ್ತವೆ. ಪೂರ್ವಾಭಿಮುಖವಾಗಿ ನಿಂತು ರಂಗಕ್ಕೆ ಬೆನ್ನು ಮಾಡಿ ಪಂಜಿನ ಸೇವೆ (ಪಂಜಿನ ನಮಸ್ಕಾರ) ಮಾಡಿ ಅನಂತರ ಇತ್ತ ತಿರುಗುತ್ತಾರೆ. ತಮ್ಮಟೆ ಇಲ್ಲಿಯೂ ಉಂಟು.
ಘಟ್ಟದಕೋರೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದ ಕಥೆಗಳೇ ಹೆಚ್ಚು. ಶಿವಕಥೆಗಳಾಗಲಿ, ಕರಿಭಂಟ, ಸಾರಂಗಧರ ಮೊದಲಾದ ಲೌಕಿಕ ಸ್ವರೂಪದ ಕಥೆಗಳಾಗಲೀ ಇಲ್ಲಿ ಇಲ್ಲ. ಆದರೆ `ಬಂಡಿಗಾಲಿಯ ಕಥೆ;' ಎಂಬ ಜನಪದ ಮೂಲದ ಕಥೆಯೊಂದು ಈ ಯಕ್ಷಗಾನಗಳ ಗುಂಪಿನಲ್ಲಿದೆ. ಈ ಸಂಪ್ರದಾಯದ ಪ್ರಸಂಗಗಳು ಹೀಗಿವೆ: ರಾಮಾಯಣ - ಪಟ್ಟಾಭಿಷೇಕ, ಪಂಚವಟಿ, ಸುಗ್ರೀವ ಸಖ್ಯ, ಚೂಡಾಮಣಿ, ಸೇತುಬಂಧ, ಲವಕುಶರ ಕಥೆ. ಮಹಾಭಾರತ - ಐರಾವತ, ಇಂದ್ರಕೀಲ, ಕೃಷ್ರ್ಣಾರ್ಜುನ ಕಾಳಗ, ಸುಧನ್ವ ಕಾಳಗ, ಬಭ್ರುವಾಹನ ಕಾಳಗ, ಹರಿಶ್ಚಂದ್ರ, ಪ್ರಹ್ಲಾದ ಚರಿತೆ ಮೊದಲಾದ ಕೆಲವು ಪ್ರಸಂಗಗಳೂ ಸಾಕಷ್ಟು ಜನಪ್ರಿಯವಾಗಿವೆ. ಪಾರ್ತಿಸುಬ್ಬನ ರಚನೆಗಳೆಂದು ಪ್ರಸಿದ್ಧವಾಗಿರುವ ಎಲ್ಲಾ ಯಕ್ಷಗಾನಗಳು ಘಟ್ಟದ ಕೋರೆಯಲ್ಲಿವೆ. 3-4 ಬೇರೆ ಯಕ್ಷಗಾನಗಳು ಸೇರಿಕೊಂಡಿವೆ.
ಇತರ ಯಕ್ಷಗಾನ ಸಂಪ್ರದಾಯದಂತೆ ಇಲ್ಲಿಯೂ ಸಂಗೀತದ ಪ್ರಮುಖ ರಾಗಗಳು ಕಂಡುಬರುತ್ತವೆ. ಸ್ವರ ಸಂಯೋಜನೆ ಒಂದೇ ಆದರೂ `ದುರ್ತದಲ್ಲಿ ತೀವ್ರ ನಡೆಯಲ್ಲಿ ಇವುಗಳನ್ನು ಹಾಡಲಾಗುವುದು. ಜಂಪೆ, ಅಟ್ಟತಾಳ, ಆದಿತಾಳ, ಏಕತಾಳ, ತ್ರಿಪುಟಿ, ಮಟ್ಟತಾಳ, ರೂಪಕತಾಳ, ಮುಂತಾದ ತಾಳಗಳ ಜೊತೆಗೆ ನಾಟಿರಾಗ, ಸೌರಾಷ್ಟ್ರ, ರೇಗುಪ್ತಿ, ಶಂಕರಾಭರಣ, ಕಾಂಬೋಧಿ, ಭೈರವಿ, ಆನಂದ ಭೈರವಿ, ನೀಲಾಂಬರಿ, ಗೌಳ, ಕೇದಾರ ಗೌಳ, ಆರಭೀ, ಮಧ್ಯಮಾವತಿ, ಹರಿಕಾಂಬೋಧಿ, ಕಲಹರಪ್ರಿಯ, ಸಾವೇರಿ ಮೊದಲಾದ ರಾಗ ವೈವಿಧ್ಯಗಳು ಕಾಣಬರುತ್ತವೆ. ಅಲ್ಲದೆ ಸಾಂಗತ್ಯ, ದ್ವಿಪದ ಮೊದಲಾದ ಮಟ್ಟುಗಳೂ ಇರುತ್ತವೆ. ಇಲ್ಲಿಯ ಭಾಗವತ ಸಂಗೀತ ಜ್ಞಾನವುಳ್ಳ ಒಳ್ಳೆಯ ತಜ್ಞ. ಹಿಂದಿನ ಕಥಾ ಪರಿಚಯ ಮುಂದಿನ ಕಥಾಪರಿಚಯ ಈ ಸಂದರ್ಭದಲ್ಲಿ ವಾರ್ಧಕಗಳನ್ನು, ಭಾಮಿನಿಗಳನ್ನು, ವೃತ್ತ, ಕಂದಗಳನ್ನು ಭಾಗವತನೊಬ್ಬನೇ ಮುಖವೀಣೆಯ ವಿದ್ವಾಂಸನ (ಸಾಮಾನ್ಯವಾಗಿ ಹರಿಜನ) ನೆರವಿನಿಂದ ಹಾಡುತ್ತಾನೆ. ಇಂಥ ಸಂದರ್ಭಗಳಲ್ಲಿ ಹಿಮ್ಮೇಳ ಭಾಗವಹಿಸುವುದಿಲ್ಲ `ನಡೆ ಯ ಸಂದರ್ಭದಲ್ಲಿ ಮಟ್ಟುಗಳು ಬಂದಾಗ, ಕೆಲವು ವಿಶಿಷ್ಟ ರಾಗಗಳು ಬಂದಾಗ ಮಾತ್ರ ಹಿಮ್ಮೇಳದವರು ದನಿ ಸೇರಿಸುತ್ತಾರೆ. ಕುಣಿತಕ್ಕೂ ರಾಗಗಳ ಬಳಕೆ ಆಗುತ್ತದೆ. ವೀರ ಸನ್ನಿವೇಶದಲ್ಲಿ ನಾಟಿ, ಮೋಹನ, ಭೈರವಿ ರಾಗಗಳು ಕಾಣಬರುತ್ತವೆ. ಶೋಕದ ಸಂದರ್ಭದಲ್ಲಿ ಕಾನಡ, ಭೈರವಿಗಳನ್ನು ಶೃಂಗಾರದಲ್ಲಿ ಕಾಂಬೋಧಿಯನ್ನೂ ಬಳಸಲಾಗುವುದು.
ಮೂಡಲಪಾಯದಂತೆ ಘಟ್ಟದ ಕೋರೆಯಲ್ಲಿ ಸಂಭಾಷಣೆಯಲ್ಲಿ ಅಂತ್ಯಪ್ರಾಸದ ಚಮತ್ಕಾರವಿಲ್ಲ. `ಸಾರಥಿ - ಸನ್ಮೂರೆತಿ, `ರಾಜ ರವಿಸಮತೇಜ', `ತಾಯೆ - ನೀನೆನ್ನಕಾಯೆ, `ದೇವಿ - ಮಹಮ್ಮಾಯಿ ಇಂಥ ಮಾತುಗಳು ಇಲ್ಲಿ ಇಲ್ಲವೇ ಇಲ್ಲ. ಮೂಲ ಪ್ರತಿಯಲ್ಲಿ ಮಾತುಗಳು ಇಲ್ಲ. ಭಾಗವತರು ಕೆಲವೊಮ್ಮೆ ಮಾತುಗಳನ್ನು ಬರೆದುಕೊಟ್ಟುದುಂಟು. ಮೂಲಪದ್ಯದ ಸಾರಾಂಶವೇ ಪಾತ್ರಗಳ ಮಾತುಗಾರಿಕೆಯಲ್ಲಿ ಕಂಡುಬರುತ್ತದೆ. ಈ ಮಾತುಗಳು ಇಲ್ಲಿನ ಸಾಮಾನ್ಯ ಜನರಿಗೂ ತಿಳಿದಿರುತ್ತದೆ. ಒಬ್ಬ ಪಾತ್ರಧಾರಿ ಯಾವುದಾದರೂ ಸಂದರ್ಭದ ಮಾತನ್ನು ಮರೆತುಬಿಟ್ಟರೆ `ಈ ಮಾತನ್ನು ಬಿಟ್ಟ ಎಂದು ಮಾತನಾಡಿಕೊಳ್ಳುವ ಮಟ್ಟಕ್ಕೆ ಇಲ್ಲಿನ ಜನ ಯಕ್ಷಗಾನಾಸಕ್ತರು. ಜೊತೆಗೆ ಕೋಳಗಾಲ ಮತ್ತು ಸುತ್ತಮುತ್ತಣ ಗ್ರಾಮದಲ್ಲಿ ವಾರಕ್ಕೊಮ್ಮೆ ಯಕ್ಷಗಾನಗಳು ನಡೆದ ನಿದರ್ಶನವೂ ಉಂಟು.
ಘಟ್ಟದಕೋರೆ ಯಕ್ಷಗಾನದ ಇನ್ನೂ ಕೆಲವು ವೈಶಿಷ್ಟ್ಯಗಳನ್ನು ಗಮನಿಸಬಹುದು. ಭಾಗವತರು ಕೆಲವೊಮ್ಮೆ ವಚನದಲ್ಲಿಯೇ `ಕೇಳಿರೈ ಸಭಾಜನರೇ ಈ ಪ್ರಕಾರವಾಗಿ ತಾಮ ಲಕ್ಷ್ಮಣರು ಮತ್ತೊಂದು ಮೃಗವನ್ನು ನಿರ್ಮಿಸಿಕೊಂಡು ಜಾನಕಿಗೆ ಕೊಡಬೇಕೆಂದು ಬರುವಂಥ ಪ್ರಕಾರ ಅದೆಂತೆಂದೆನೇ .................' ಎಂದು ಕಥಾಭಾಗವನ್ನು ಕೂಡಿಸಿಕೊಳ್ಳಬಹುದು. ಪ್ರೇಕ್ಷಕರು ಭಾಗವತಿಕೆಯನ್ನು ಮೆಚ್ಚಿ ಪ್ರದರ್ಶನದ ನಡುವೆಯೇ ಕಾಣಿಕೆಗಳನ್ನು ಅರ್ಪಿಸುವುದುಂಟು. ಆಗ ಭಾಗವತ ಒಂದು ಕ್ಷಣ ಮೇಳವನ್ನು ನಿಲ್ಲಿಸಿ ಕಾಣಿಕೆ ಕೊಟ್ಟವರನ್ನು ಹೊಗಳುವ ರೀತಿ ವಿಶಿಷ್ಟವಾದುದು :
ಗಗನೇ ರವಿರತ್ನೇ ಕವಿರತ್ನಾನಿ ಬಾಲಕಃ
ಪ್ರದ್ಯುಮ್ನೇ ಮೀನಕೇತನಃ
ಎನ್ನುವಂಥ ನಮ್ಮ ಭಾಗವತಮೇಳವನ್ನು ನೋಡಿ
........ಅವರು ಮೆಚ್ಚಿಕೊಟ್ಟಂಥ
ಘಟ್ಟಿ ಹತ್ತು ವರಾಹ.....................
ಧೀನ್ ಧೀನ್ ಧೀನ್ ಧೀನ್
ದತ್ತಿಂದ ದತ್ತಿಂದ ...........
ಅಥವಾ
ಶಯನೇ ಶ್ರೀರತ್ನೋ - ಸಭಾರತ್ನೋ ಪುಂಡಲೀಕಾ ಃ
ಎನ್ನುವಂಥ ಕೋಳಗಾಲದ ನಮ್ಮ ಯಕ್ಷಗಾನ ಮೇಳವನ್ನು ನೋಡಿ .. ಎಂದು ಹೇಳಿ ನಾಣ್ಯವನ್ನು (ಈಗ ನೋಟು) ಜೇಬಿಗೆ ಇಳಿಬಿಡುತ್ತಾರೆ. ಕಲಾವಿದರನ್ನು ಮೆಚ್ಚಿ ಪ್ರೇಕ್ಷಕರು ನೀಡುತ್ತಿದ್ದ ಪ್ರೋತ್ಸಾಹಕ್ಕೆ ಇದು ಒಳ್ಳೆಯ ನಿದರ್ಶನವಾಗಿದೆ. ಮೇಳನಾಯಕನಾದ ಭಾಗವತ ಮಾತ್ರ ಈ ಹಣವನ್ನು ಸ್ವೀಕರಿಸುತ್ತಾನೆ. (ಜೆ.ಎಸ್.ಪಿ.)
ಉಪಸಂಹಾರ: ಕರ್ನಾಟಕದ ಯಕ್ಷಗಾನವನ್ನು ಹೋಲುವ ನೃತ್ಯ ನಾಟಕಗಳ ಪರಂಪರೆ ನೆರೆಯ ಆಂಧ್ರ ಮತ್ತು ತಮಿಳುನಾಡುಗಳಲ್ಲಿದೆ. ಆಂಧ್ರ ಪ್ರದೇಶದ ಕೂಚುಪುಡಿ ಎಂಬಲ್ಲಿ ಉಳಿದುಕೊಂಡಿರುವ ಭಾಮಾಕಲಾಪಂ ವೀಧಿ ನಾಟಕವೆನ್ನುವ ನೃತ್ಯನಾಟಕ ಯಕ್ಷಗಾನದಿಂದ ಪ್ರೇರಿತವಾಗಿ ಸೃಷ್ಟಿಯಾಗಿದೆ ಎಂಬುದು ವಿದ್ವಾಂಸರ ಅಭಿಮತ. ಈ ನಾಟಕದಲ್ಲಿ ವೈಷ್ಣವಭಕ್ತಿ ಪ್ರಧಾನವಾದ ಕಥಾವಸ್ತುವಿರುವುದು ಮಾತ್ರವಲ್ಲದೆ ಯಕ್ಷಗಾನದಲ್ಲಿರುವ ಇತರ ಅಂಶಗಳೂ ಕಂಡುಬರುವುದರಿಂದ ಈ ಹೇಳಿಕೆ ಸಾಧುವಾಗಿರಲು ಸಾಧ್ಯವಿದೆ.
ತಮಿಳುನಾಡಿನ ಭಾಗವತ ಮೇಳಗಳು ಯಕ್ಷಗಾನದಂತಿವೆ. ಹಲವು ಹಳ್ಳಿಗಳಲ್ಲಿ ಪ್ರಚಲಿತವಿದ್ದರೂ ಮೇಲತ್ತೂರಿನ ಸಂಪ್ರದಾಯವೇ ಪ್ರಸಿದ್ಧವಾದುದು. ಈ ಕಲೆಯೂ ಪರೋಕ್ಷವಾಗಿ ಯಕ್ಷಗಾನ ಕಲೆಗೆ ಋಣಿಯಾಗಿದೆ. ಭಾಮಾಕಲಾಪಂ ವೀಧಿ ನಾಟಕದಲ್ಲಿ ಪ್ರಾವೀಣ್ಯವನ್ನು ಪಡೆದ ಮಹನೀಯರೇ ತಮಿಳುನಾಡಿನಲ್ಲಿ ಈ ಕಲೆಯನ್ನು ಬಳಕೆಯಲ್ಲಿ ತಂದರೆಂದು ತಿಳಿದುಬರುತ್ತದೆ. ತಂಜಾವೂರಿನ ನಾಯಕರ ಪ್ರೋತ್ಸಾಹದಿಂದ ಬೆಳಗಿದ ಭಾಗವತ ಮೇಳಗಳಿಗೆ ತೀರ್ಥ ನಾರಾಯಣಯತಿಯೆಂಬವರು ತೆಲುಗಿನಲ್ಲಿ ಪ್ರಸಂಗಗಳನ್ನು ರಚಿಸಿಕೊಟ್ಟಿದ್ದಾರೆ. ಇಲ್ಲಿ ಪ್ರಹ್ಲಾದ ಚರಿತ್ರೆಯನ್ನೇ ಮುಖ್ಯವಾಗಿ ಪ್ರದರ್ಶಿಸುತ್ತಾರೆ. ಇದೆ ಮಾದರಿಯ ಇನ್ನೊಂದು ಗ್ರಾಮೀಣ ನೃತ್ಯ ನಾಟಕವೆಂದರೆ ತೆರುಕ್ಕೊತು; ಇದನ್ನು ನಮ್ಮ ನಾಡಿನ ದೊಡ್ಡಾಟಕ್ಕೆ ಹೋಲಿಸಬಹುದೇ ಹೊರತು ಯಕ್ಷಗಾನಕ್ಕಲ್ಲ. ಯಕ್ಷಗಾನದ ಮುಖವರ್ಣಿಕೆ, ವೇಷಭೂಷಣ, ನೃತ್ಯಾಭಿನಯಗಳ ವೈಭವ ಕಲಾವಿಲಾಸಗಳನ್ನು ತಮಿಳುನಾಡಿನ ಸಾಮಾನ್ಯ ಮಟ್ಟದ ನೃತ್ಯ ನಾಟಕಗಳು ಪಡೆದಿಲ್ಲ. ಯಕ್ಷಗಾನ ಕಲಾವಿದರು ಕಲಾ ವ್ಯವಸಾಯವನ್ನು ಒಂದು ಉದ್ಯೋಗವನ್ನಾಗಿ ಮಾಡಿಕೊಂಡು ಬಾಳಿನುದ್ದಕ್ಕೂ ಆ ಕ್ಷೇತ್ರದಲ್ಲಿ ದುಡಿಯುತ್ತಾರೆ. ಆಂಧ್ರದಲ್ಲಿ ಅದು ಬಹು ಮಟ್ಟಿಗೆ ಹವ್ಯಾಸವಾಗಿದ್ದರೆ, ತಮಿಳುನಾಡಿನಲ್ಲಿ ವರ್ಷದಲ್ಲೊಮ್ಮೆ ಮಾತ್ರ ಪ್ರದರ್ಶಿಸುವ ಕಲೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಂಡಿದೆ. ಈ ಕಲೆಯನ್ನು ಶಿವರಾಮ ಕಾರಂತರಂಥ ಉದ್ದಾಮ ವಿದ್ವಾಂಸರು ಅನೇಕ ರೀತಿಯಲ್ಲಿ ಪರಿಷ್ಕರಿಸಿ ಪ್ರಚುರಪಡಿಸಿರುವುದುಂಡು. ಈ ಅಮೂಲ್ಯ ಕಲೆಯನ್ನು ಉಳಿಸಿ, ಬೆಳೆಸುವ ಸಲುವಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಆಶ್ರಯದಲ್ಲಿ ಶಿವರಾಮ ಕಾರಂತರ ನೇತೃತ್ವದಲ್ಲಿ, ಗುರು ವೀರಭದ್ರ ನಾಯಕರ ಹಿರಿತನದಲ್ಲಿ ಉಡುಪಿಯಲ್ಲೊಂದು ಯಕ್ಷಗಾನ ಕೇಂದ್ರ ಸ್ಥಾಪನೆಗೊಂಡು (1971) ಯಕ್ಷಗಾನದ ಶಾಸ್ತ್ರೀಯ ಹಾಗೂ ಕ್ರಮಬದ್ಧ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಯಕ್ಷಗಾನ ಕಲೆಯನ್ನು ಕುರಿತಂತೆ ಅನೇಕ ಗ್ರಂಥಗಳು ರಚಿತವಾಗಿದ್ದು ಅವುಗಳಲ್ಲಿ ಶಿವರಾಮ ಕಾರಂತರ ಯಕ್ಷಗಾನ ಬಯಲಾಟ ಎಂಬ ಮಹಾಪ್ರಬಂಧ ಒಂದು ಮಹತ್ತ್ವ ಕೃತಿಯಾಗಿದೆ.