ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರತ್ನಾಕರವರ್ಣಿ

ವಿಕಿಸೋರ್ಸ್ದಿಂದ

ರತ್ನಾಕರವರ್ಣಿ:- 16ನೆಯ ಶತಮಾನದ ಜೈನಕವಿ. ಕನ್ನಡದ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯನಾದವ. ಭರತೇಶವೈಭವ, ತ್ರಿಲೋಕಶತಕ, ರತ್ನಾಕರಾಧೀಶ್ವರ ಶತಕ, ಅಪರಾಜಿತೇಶ್ವರಶತಕ ಎಂಬ ಗ್ರಂಥಗಳ ಕರ್ತೃ. ಇವನಿಗೆ ರತ್ನಾಕರ. ರತ್ನಾಕರಅಣ್ಣ, ರತ್ನಾಕರಸಿದ್ಧ ಎಂಬ ಹೆಸರುಗಳೂ ಇದ್ದು ತನಗೆ ರತ್ನಾಕರಸಿದ್ಧ ಎಂಬ ಹೆಸರು ಅತ್ಯಂತ ಮೆಚ್ಚುಗೆಯಾದುದೆಂದು ಹೇಳಿಕೊಂಡಿದ್ದಾನೆ. ಚಾರುಕೀರ್ತಿ ಆಚಾರ್ಯ ಇವನ ದೀಕ್ಷಾಗುರು. ಹಂಸನಾಥ ಮೋಕ್ಷಗುರು.

ರತ್ನಾಕರವರ್ಣಿ ತನ್ನ ಕಾವ್ಯಗಳಲ್ಲಿ ಸ್ವಂತ ಜೀವಿತಕ್ಕೆ ಸಂಬಂಧಿಸಿದ ಯಾವ ವಿವರಗಳನ್ನೂ ಹೇಳಿಲ್ಲ. ಇವನನ್ನು ಕುರಿತು ಕೆಲವು ಬಾಹ್ಯವಿವರಗಳು ದೊರೆತಿವೆ. ಆದರೆ ಅವು ಎಷ್ಟು ವಿಶ್ವಾಸನೀಯವೆಂದು ಸರಿಯಾಗಿ ಹೇಳಬರುವಂತಿಲ್ಲ. ದೇವ ಚಂದ್ರ (1770-1841) ತನ್ನ ರಾಜಾವಳೀಕಥೆಯಲ್ಲಿ ರತ್ನಾಕರವರ್ಣಿಯ ಬಗ್ಗೆ ಕೆಲವು ವಿವರಗಳನ್ನು ಕೊಟ್ಟಿದ್ದಾನೆ. ಆತನ ಹೇಳಿಕೆಯ ಪ್ರಕಾರ ರತ್ನಾಕರವರ್ಣಿ ಸೂರ್ಯವಂಶಕ್ಕೆ ಸೇರಿದವನು. ಕ್ಷತ್ರೀಯ ಕುಲದವನು. ತುಳುನಾಡಿನವನು, ಮೂಡುಬಿದರೆಯವನು, ದೇವರಾಜನ ಮಗ, ರತ್ನಾಕರಾಧೀಶನೆಂದು ಹೆಸರು. ಬಾಲ್ಯದಲ್ಲಿ ಜೈನಾಗಮಗಳ ಶಿಕ್ಷಣವನ್ನು ಪಡೆದಿದ್ದ. ಕವಿಯಾದ ಮೇಲೆ ತೌಳವ ದೇಶದ ಭೈರರಸ ಒಡೆಯರ ಆಸ್ಥಾನ ಕವಿಯಾಗಿ ಶೃಂಗಾರಕವಿಯೆಂಬ ಪ್ರಶಸ್ತಿ ಪಡೆದ. ಇವನು ಯೋಗಶಾಸ್ತ್ರದಲ್ಲೂ ಕಾವ್ಯಶಾಸ್ತ್ರದಷ್ಟೇ ಪ್ರವೇಶ ಪಡೆದಿದ್ದ. ಈತನೂ ವಿಜಯಣ್ಣನೂ ಸಮಕಾಲೀನರು. ವಿಜಯಣ್ಣನ ಕಾವ್ಯವಾದ ದ್ವಾದಶಾನು ಪ್ರೇಕ್ಷೆಗೆ ದೊರೆತ ಮರ್ಯಾದೆ-ಪ್ರಭಾವನೆ ಕಂಡು ತಾನೂ ಭರತೇಶ್ವರ ಚರಿತೆಯೆಂಬ ಕಾವ್ಯ ಬರೆದು ಭಿನ್ನಾಭಿಪ್ರಾಯ ಬಂದ ಕಾರಣದಿಂದ ಬೇಸರಿಸಿ ವೀರ ಶೈವಧರ್ಮ ಸ್ವೀಕರಿಸಿ ಬಸವಪುರಾಣ ಮೊದಲಾದ ಕೃತಿಗಳನ್ನು ರಚಿಸಿದ. ಕಡೆಗೆ ಕೋಪ ಉಪಶಮನವಾದ ಮೇಲೆ ಮತ್ತೆ ಜೈನಧರ್ಮಕ್ಕೆ ಹಿಂತಿರುಗಿ ಶತಕವನ್ನೂ ಆಧ್ಯಾತ್ಮ ಗೀತೆಗಳನ್ನೂ ಬರೆದ.

ದೇವಚಂದ್ರನ ಈ ನಿರೂಪಣೆಯಲ್ಲಿ ವಸ್ತುಸ್ಥಿತಿಯ ಜೊತೆಗೆ ಉತ್ಪ್ರೇಕ್ಷೆಗಳೂ ವಿಸಂಗತಿಗಳೂ ಸೇರಿವೆ. ರತ್ನಾಕರ ತುಳುದೇಶದ ಕವಿಯೆಂದು ಸ್ಥಾಪಿತ ಸತ್ಯ. ಆತ ತುಳು ಭಾಷೆಯ ಪರಿಣಿತನೂ ಆಗಿದ್ದ. ಅಲ್ಲದೆ ಜೈನಮತದಿಂದ ಮತಾಂತರಮಾಡಿದ ಕಾಲದಲ್ಲಿ ತೆಲಗು ಭಾಷಾ ಪ್ರದೇಶಗಳನ್ನು ಸುತ್ತಿರಬೇಕು. ಆದ್ದರಿಂದಲೇ ಆತನಿಗೆ "ಅಯ್ಯಯ್ಯಾ ಚೆನ್ನಾದುದೆನೆ ಕನ್ನಡಿಗರು, ರಯ್ಯ ಮಂಚಿದೆಯೆನೆ ತೆಲುಗಾ ಅಯ್ಯಯ್ಯ ಎಂಚಪೋರ್ಲಾಂಡೆಂದು ತುಳುವರು ಮೆಯ್ಯುಬ್ಬಿ ಕೇಳ ಬೇಕಣ್ಣಾ" ಎಂಬ ಮೂರು ಭಾಷೆಗಳನ್ನು ಪ್ರಸ್ತಾಪಿಸುವುದು ಸಾಧ್ಯವಾಯಿತೆಂದು ತೋರುತ್ತದೆ. ರತ್ನಾಕರ ಜೈನಧರ್ಮದಿಂದ ವೀರಶೈವಧರ್ಮಕ್ಕೆ `ತಜ್ಜಾತಿಯನುತ್ತರೋತ್ತರಗೊಳಿಸಿ ನೆಗಳ್ಚಿದ್ದೂ ನಡೆದ ನನ್ನಿಯೆಂಬುದಕ್ಕೆ ಬೇರೆ ಆಧಾರಗಳೂ ಇವೆ. ರತ್ನಾಕರ ಕೀರ್ತನೆಯೊಂದರಲ್ಲಿ `ಕರ್ಮವೇ ಬಲ್ಲಿತಲ್ಲ ಜಿನ ಧರ್ಮವನುಳಿದೆನ್ನನೀಪರಿ ಹುಚ್ಚುಮಾಡಿತಲ್ಲ ಕರ್ಮವಶದಿ ಕಾರ್ಗತ್ತಲೆ ಕವಿದೆನ್ನ ಚರ್ಮಕ್ಕೆ ಲಿಂಗವು ಬಿತ್ತಲ್ಲ ನಿರ್ಮಲ ಶ್ರೀಜಿನಧರ್ಮದೊಳಿದ್ದೆನ್ನ ಈ ಮೈ ಹುಚ್ಚು ಮಾಡಿತಲ್ಲ ಎಂಬ ಹೇಳಿಕೆ ಬರುತ್ತದೆ. ಇದೇ ಅಭಿಪ್ರಾಯವನ್ನು ಅನುರಣಿಸುವ ಸಾಲುಗಳು ರತ್ನಾಕರನ ಶತಕಗಳಲ್ಲಿಯೂ ಬರುತ್ತವೆ. ದೇವ ಚಂದ್ರನ ವಿವರಣೆಯಲ್ಲಿ ಸಂದೇಹದ ಭಾಗವೂ ಇದೆ. ರತ್ನಾಕರ ವಿಜಯಣ್ಣನ (ಸು.1448) ಸಮಕಾಲೀನೆಂಬುದು ಬಸವಪುರಾಣವನ್ನು ಬರೆದನೆಂಬುದೂ ಈ ಸಂದೇಹ ಭಾಗ, ರತ್ನಾಕರನಿಗೆ ದೇವಚಂದ್ರ ಶಕ 1479 (ಸು.1557) ಎಂದು ಕಾಲವನ್ನು ಹೇಳಿದ್ದಾನೆ. ವಿಜಯಣ್ಣ ಕಾವ್ಯವನ್ನು ಪೂರೈಸಿದ್ದೇ 1448 ರಲ್ಲಿ. ಆದ್ದರಿಂದ ಇವರಿಬ್ಬರೂ ಸಮಕಾಲೀನರಲ್ಲ. ಬಸವಪುರಾಣವನ್ನು ರತ್ನಾಕರ ಬರೆದುದಲ್ಲವೆಂಬುದಕ್ಕೆ ಆಧಾರಗಳಿರುವಂತೆ ಬರೆದನೆಂಬುದಕ್ಕೆ ಇಲ್ಲ. ರತ್ನಾಕರನೇ ಈ ಮತಾಂತರ ಕಾಲದಲ್ಲಿ ಸೋಮೇಶ್ವರ ಶತಕವನ್ನು ಬರೆದನೆಂಬ ಹೇಳಿಕೆಯಿರುವ ಪದ್ಯವೊಂದು ಪ್ರಾಚೀನ ಹಸ್ತಪ್ರತಿಯೊಂದರಲ್ಲಿದೆ. ಇದನ್ನು ಪ್ರಮಾಣವೆಂದು ಸ್ವೀಕರಿಸಲು ಬಾಧಕಗಳಿವೆ. ರತ್ನಾಕರನ ಸುತ್ತ ಇಂಥ ಕಾಲ್ಪನಿಕ ಸಂಗತಿಗಳು ಇನ್ನೂ ಕೆಲವು ಹಬ್ಬಿವೆ. ಯೋಗದ ಮೂಲಕ ಈತ ಭೈರರಸನ ಮಗಳ ಕನ್ನೆಮಾಡಕ್ಕೆ ಹೋಗಿಬರುತ್ತಿದ್ದು ಇವರಿಬ್ಬರಿಗೂ ಸ್ನೇಹ ವೇರ್ಪಟ್ಟು ದೊರೆಯ ಆಗ್ರಹಕ್ಕೆ ಪಾತ್ರನಾಗಿ ಸಂನ್ಯಾಸ ಸ್ವೀಕರಿಸಿದನೆಂದು ಒಂದು ಹೇಳಿಕೆಯಿದೆ. ಗಟ್ಟಿಪಾತಳಿಯ ಮೇಲೆ ನಿಲ್ಲದ ಇಂಥ ಹೇಳಿಕೆಗಳನ್ನು ನಂಬುವಂತಿಲ್ಲ.

ರತ್ನಾಕರ ಸಂಪ್ರದಾಯಗಳಿಗೆ ಶರಣಾದವನಲ್ಲ; ಸಂಸಾರ ಸುಖವನ್ನು ನಿರಾಕರಿಸಬೇಕೆಂದವನಲ್ಲ; ಉಂಡರೇನು ಉಟ್ಟರೇನು ಅಬಲೆಯರೊಡನೆ ಕೂಡಿದರೇನು-ಎಂದು ನೇರವಾಗಿ ಕೇಳಿದವನು; ಯಾವುದರಲ್ಲೂ ಒಂದು ಇತಿಮಿತಿ ಇರಬೇಕೆಂದವನು. ವಸ್ತುವಿನ ಆಯ್ಕೆಯಲ್ಲಿ, ನಿರ್ವಹಣೆಯಲ್ಲಿ, ಛಂದಸ್ಸಿನಲ್ಲಿ, ನಿರೂಪಣೆಯಲ್ಲಿ ಯಾದೃಚ್ಚಿಕವಾಗಿ ನಡೆದವನು. ರೂಢಿ ನೀತಿ ರಿವಾಜುಗಳಲ್ಲಿ ಅರ್ಥಹೀನತೆಯಿದ್ದಾಗ ಮುಲಾಜಿಲ್ಲದೆ ಕಿತ್ತೆಸೆದು ಸರಿಕಂಡ ದಾರಿಯಲ್ಲಿ ಧೀಮಂತನಂತೆ ಹೆಜ್ಜೆ ಹಾಕಿದವನು. ಜೈನ ಸಾಂಪ್ರದಾಯಿಕ ಕಾವ್ಯಪದ್ಧತಿಗೆ ಪೂರ್ಣ ತಿಲಾಂಜಲಿಯಿತ್ತು `ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ ನಿನ್ನನಾದಿಯ ಮಾಡಿಕೊಂಡು ಕನ್ನಡದೊಳಗೊಂದು ಸುಕಥೆಯ ಪೇಳುವೆ ಎಂದು ಹೇಳಲು ತೊಡಗಿದ್ದಾನೆ. ಅಷ್ಟದಶವರ್ಣನೆಗಳಲ್ಲೂ ಎಷ್ಟು ಬೇಕೊ ಅಷ್ಟಕ್ಕೆ ಮಾತ್ರ ಉಚಿತಕ್ಕೆ ತಕ್ಕಷ್ಟು ಪ್ರವೇಶ ಪಡೆದಿದೆ. `ಸಕಲ ಲಕ್ಷಣವು ವಸ್ತುಕಕೆ ವರ್ಣಕಕಿಷ್ಟು ವಿಕಳವಾದರೂ ದೋಷವಿಲ್ಲ ಸಕಲ ಲಕ್ಷಣಕ್ಕಾಗಿ ಬಿರುಸು ಮಾಡಿದರೆ ಪುಸ್ತಕದ ಬದನೆಕಾಯಾಗಬಹುದು ಎಂಬುದು ಕವಿಯ ದೋರಣೆ. ಆದ್ದರಿಂದ ರಳಕುಳಶಿಥಿಲಸಮಾಸಗಳ ಕೋಟಲೆ ಹಾಡುವ ಕಾವ್ಯದಲ್ಲಿ ಬೇಡವೆಂಬುದು ಕವಿಯ ಆಶಯ.

ಭರತೇಶವೈಭವ 80 ಸಂಧಿಗಳು ಹಾಗೂ 10,000 ಪದ್ಯರಾಶಿಯನ್ನುಳ್ಳ ಸಾಂಗತ್ಯ ಕಾವ್ಯ. ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ, ಮೋಕ್ಷವಿಜಯ ಎಂಬ ಪಂಚಮಿವಿಜಯಗಳಾಗಿ ಕಾವ್ಯ ವಿಭಾಗಗೊಂಡಿದೆ.

ಭರತೇಶ ಪ್ರಥಮ ತೀರ್ಥೇಶನ ಹಿರಿಯ ಮಗ. ಮೊದಲ ಚಕ್ರಿ. ಇಡೀ ಕಾವ್ಯ ಆತನ ನಿತ್ಯಜೀವನದ ದಿನಚರಿಯಂತದ್ದು, ಅವನ ಒಟ್ಟು ಬದುಕಿನ ವಿಸ್ತಾರ ವೈವಿಧ್ಯ ವಿಲಾಸ ವೈಭವಗಳ ಮಹೋನ್ನತಿಯನ್ನು ತುಂಬ ಕಲಾತ್ಮಕವಾಗಿ ಕನ್ನಡಿಸಿದೆ. ಆತನ ಬಹಿರಂಗದ ಭೋಗದ ಬದುಕಿನಂತೆ ಯೋಗದ ಅಂತರಂಗದ ಜೀವನವನ್ನೂ ಕವಿ ಬಣ್ಣಕಟ್ಟಿ ಕುಸುರಿ ಕೆಲಸದಂತೆ ನಯವಾಗಿ ಬಿಡಿಸಿದ್ದಾನೆ. ಈ ವಿಚಾರದಲ್ಲಿ ರತ್ನಾಕರವರ್ಣಿ ಜಿನಸೇನರ ಪೂರ್ಣಪುರಾಣ ಹಾಗೂ ಪಂಪನ ಆದಿಪುರಾಣಕ್ಕೆ ಋಣೀಯಾಗಿದ್ದರೂ ಮುಂದಿನ ಕವಿಗಳಿಗೆ ತಾನೇ ಆದರ್ಶದ ಗಣಿಯಾಗಿದ್ದಾನೆ. ಮಹಾಕವಿಯೆಂಬ ಹೆಸರಿಗೆ ಪೂರ್ಣವಾಗಿ ಪಾತ್ರನಾಗಿದ್ದಾನೆ.

ಭರತೇಶನ ಚರಿತ್ರೆಯೇ ಭರತೇಶ ವೈಭವ. ಇದರ ಗತಿ ಮತಿ ಆಯು ಉಸಿರು ಹೆಸರು ಎಲ್ಲ ಅವನೆ. ಭರತನ ಸಾರ್ಥಕ ಜೀವನದ ಹಲವು ಪ್ರಮುಖ ಮಜಲುಗಳನ್ನು ಕುರಿತು ಮಾಡಿದ ಕಲಾತ್ಮಕವಾದ ಪಕ್ವವಿಮರ್ಶೆಯಂತೆ ಈ ಕೃತಿ ಮೈಪಡೆದಿದೆ. ಇದರಲ್ಲಿ ಕವಿಯ ಸಮೃದ್ಧವಾದ ಅನುಭವ ಹಾಗೂ ವಿಕಸನಶೀಲವಾದ ವೈಚಾರಿಕತೆ ಒಂದೇ ಲೋಹವಾಗಿ ಕರಗಿ ಬಂದಿದೆ. ಪುರಾಣವಾದುದನ್ನು ಕಾವ್ಯವನ್ನಾಗಿಸುವಲ್ಲಿ ಕವಿ ಅಪರೂಪ ಸಿದ್ಧಿಪಡೆದಿದ್ದಾನೆ. ಹಳೆಯ ವಸ್ತುವಿಗೆ ಹೊಸ ಕಸಿ ಎಸಗಿದ್ದಾನೆ. ಜೈನವಸ್ತುವನ್ನೂ ವೈದಿಕ ಕಾವ್ಯವಿನ್ಯಾಸದ ಜತೆಗೆ ಜಾನಪದ ಸತ್ತ್ವದ ಉತ್ತಮ ಅಂಶಗಳನ್ನೂ ತೆಕ್ಕೆಹಾಕಿದ್ದಾನೆ. ಜಾನಪದ ಪ್ರತಿಭೆಯ ಸಮುದಾಯಿಕ ಮನಸ್ಸಿನ ಪ್ರತ್ಯಕ್ಷ ಫಲಗಳಾದ ಕಥೆಗಳು, ಕ್ರಿಯೆಗಳು, ಆಶಯಗಳು, ಕ್ರಿಯಾತ್ಮಕವಾದ ಮಾನವ ಜನ್ಮದಲ್ಲಿ ಏನೇನು ರೂಪಾಂತರ ಪಡೆಯಬಹುದೆಂಬುದಕ್ಕೆ ಭರತೇಶ ವೈಭವ ಲಕ್ಷ್ಯದಂತಿದೆ.

ರತ್ನಾಕರನಿಗೆ ಶಬ್ಧದಾರಿದ್ರ್ಯವಿಲ್ಲ. ಕನ್ನಡ ಶಬ್ದಭಂಡಾರ ಕವಿಗೆ ಅಂಗೈ ಮೇಲಣ ನೆಲ್ಲಿಕಾಯಿ, ಶಬ್ದಗಳು, ಅವುಗಳಿಗಿರುವ ಅರ್ಥ-ಭಾವ-ನಾದ-ಧ್ವನಿಕೋಶಗಳ ಬೆಡಗಿನಿಂದ ಅಡೆತಡೆಯಿಲ್ಲದೆ ನಿರರ್ಗಳವಾಗಿ ಪುಟಿಯುತ್ತವೆ. ಹಾಗೆಯೇ ಸಾಂಗತ್ಯದ ಸೀಮಾಪುರಷನೂ ಆಗಿದ್ದಾನೆ. ಸಾಂಗತ್ಯದ ವಿಲಾಸಮಯ ಸರಳ ಸುಂದರ ಲವಲವಿಕೆಯ ಶೈಲಿ, ದೃಶ್ಯಚಿತ್ರಗಳಿಂದ ಹೃದ್ಯವಾಗಿದೆ. ಒಮ್ಮೊಮ್ಮೆ ಒಂದೊಂದು ಪದ್ಯದಲ್ಲಿ ಒಂದೊಂದು ಉಜ್ವಲಚಿತ್ರ ಮೂಡುತ್ತ, ಅವೆಲ್ಲ ಒಟ್ಟಾಗಿ ಕೂಡುತ್ತ, ಒಂದು ಅನುಭವಕೇಂದ್ರವನ್ನು ಕಟ್ಟಿಕೊಡುತ್ತವೆ. ಈ ಚಿತ್ರಗಳಿವೆ ಕವಿಕೊಡುವ ಮಾನವೀಯ ಸ್ವರ್ಗದಿಂದಾಗಿ ಭರತೇಶವೈಭವ ಚಿತ್ರಗಳು ಚಿರಂತನವಾಗಿವೆ.

ಕವಿ ಎಂಥ ಗಮನವಾದ ವಿಚಾರಗಳನ್ನೂ ನಿರಾಯಾಸವಾಗಿ ಸಂವಹನಿಸುತ್ತಾನೆ. ಆವರಣದ ಸೃಷ್ಟಿಯಲ್ಲಿ ಈತ ಸಾಧಿಸಿರುವ ಯಶಸ್ಸು ಅದ್ಭುತ. ನಾಟಕೀಯ ಸನ್ನಿವೇಶಗಳು ಅನುಭವಗಳನ್ನು ಇಂದ್ರಿಯಗಮ್ಯವನ್ನಾಗಿಸುತ್ತವೆ. ಈ ಗುಣಗಳಿಂದ ಕಾವ್ಯಕ್ಕೆ ಹೆಚ್ಚಿನ ಎತ್ತರ ನಿಲುಕುವಂತೆ ಕವಿ ಸಾಧಿಸಿ ತೋರಿಸಿದ್ದಾನೆ. ಕಾವ್ಯದಲ್ಲಿ ನೆನಪಿನ ನಾಲಗೆಯ ಮೇಲೆ ಬಹುಕಾಲ ರಸ ಒಸರಿಸುವ ಪರಿಭಾವ್ಯ ಪದ್ಯಗಳು, ಪ್ರಸಂಗಗಳು ಸೂರೆಹೋಗಿವೆ. ಭೋಗವಿಜಯ ಸಂಧಿಗಳು ಭಾವಗೀತೆಗಳಾಗಿ ಮೆಚ್ಚುಗೆಗೆ ಪಾತ್ರವಾಗುತ್ತವೆ. ಜೇನ ಸೋನೆಯನ್ನು ಸುರಿದಮತೆ ಹಾಡಿದ ಗಾಯಕಿಯರ ಗಾನಕಲೆ ಇಲ್ಲಿ ಕಾವ್ಯಕಲೆಯಾಗಿ ಅವತರಿಸಿದೆ. ಇಂತ ರೂಪಕಸಿಂಚಿತ ಭಾಷಾ ವಿಲಾಸ, ಚಿತ್ರಶಕ್ತಿ ಈ ಕಾವ್ಯದಲ್ಲಿ ಹೆಕ್ಕಿದಲ್ಲಿ ಸಿಕ್ಕುತ್ತದೆ. ನಾಟ್ಯರಂಗದ ತೆರೆ ಸುರಿಯುತ್ತಿದ್ದಂತೆ ಸುಂದರಿಯರು ಸಮ್ಮೋಹನಸಾಗರದ ಸುಳಿಗಳಾಗಿ `ಬಲಕೆಡಕೊಲಿದುಹರಿವೆಳವಿಸಿಲಲ್ಲಿಯೆಳನಾಗಹರಿವಂತೆ ಮೈಯುರಿದು ಸುಳಿಯುತ್ತಾರೆ. ಲಲಿತ ಶೃಂಗಾರಾದಿ ಕೋಮಲ ಭಾವಗಳು ತಮ್ಮ ಸೂಕ್ಷ್ಮ ಪದರಗಳನ್ನು ಕವಿಯಪಾರದರ್ಶಕ ಶೈಲಿಯಲ್ಲಿ ಸ್ಪುಟವಾಗಿ ತೋರಿಸುತ್ತವೆ. ಅಟ್ಟುವ ತೆರೆ ಓಡುವ ತೆರೆಗಳನ್ನು ಸೆರೆಹಿಡಿದು ಕಡಲ ಬಣ್ಣನೆ, ಸೂರ್ಯೋದಯ, ಮಕ್ಕಳಾಟದ ವರ್ಣನೆ ಮೊದಲಾದವು ವಾಸ್ತವತೆಯಲ್ಲಿ ಅದ್ದಿ ತೆಗೆದಂತಿವೆ.

ಕಲಾಪೂರ್ಣವಾದ ಭೋಗವಿಜಯದಲ್ಲಿ ಭರತನ ಮೂರು ದಿನಗಳ ರಾಗರಸಿಕತೆ ಸಂಜೆಗತ್ತಲಿನಲ್ಲಿ ಚಂದ್ರನಕಾಂತಿಯಲ್ಲಿ ರಂಜಿಸುವ ನಕ್ಷತ್ರಮಂಡಲದಂತಿವೆ. ಕವಿ ಗಮಕಿ ಗಾಯಕ ನರ್ತಕ ಸಮುದಾಯ ಭರತನ ಕಾಮನಬಿಲ್ಲಾಗಿ ನಿಲ್ಲುತ್ತಾರೆ. ಆತನದು ಅಪಾರ ಸಂಸಾರ, ಸಾವಿರಾರು ಮಡದಿಯರ ಶೃಂಗಾರ ಸಾಗರ, ಆತ ತನ್ನ ಹೆಂಡತಿಯರು ಅವರ ತವರೂರನ್ನು ಮರೆಯುವಂತೆ ನೋಡಿಕೊಂಡ ಪ್ರಿಯಕರ ಯಾವುದೇ ಸಾಹಿತ್ಯದಲ್ಲಿ ಇಂಥ ದಾಂಪತ್ಯ ಚಿತ್ರಣ ಅಪರೂಪ. ಇದು ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆ. ರತ್ನಾಕರನ ಯಶಸ್ಸು ಸಂಸಾರ ಚಿತ್ರಗಳಲ್ಲಿದೆ. ಇಷ್ಟಿದ್ದೂ ಇಲ್ಲಿನ ಶೃಂಗಾರ ಉನ್ನತವಾದುದು. ಇದು ಒಲಿದವರಿಗೆ ಕೂಟವನ್ನು ಅಕುಟಿಲವಾಗಿ ಬಿಡಿಸಿದೆ. ಕುಸುಮಾಜಿಯೊಡನೆ ಭರತ ಪ್ರೇಮದಿಂದ ಪುಳಿಕಿತವಾಗಿ ಕಳೆಯುವ ಇರುಳಿನ ಅನುಭವ ಶುದ್ಧಕಾವ್ಯವಾಗಿ ಹರಳುಗೊಂಡಿದೆ. ಲೈಗಿಂಕಾನುಭವ ಹೇಯವೆಂದು ಮರೆಮಾಡುವ ಮರ್ಯಾದೆಗಳಿಂದ ಪಾರಾದ ಇಲ್ಲಿನ ಮುಕ್ತವಾತಾವರಣ ಸ್ವಚ್ಛವಾಗಿ ಅನಶ್ಲೀಲವಾಗಿ ಅಪೂರ್ವ ಶುಚಿತ್ವ ಪಡೆದಿದೆ. ಅಲ್ಲದೆ ಅಂತಃಪುರದ ಚಿತ್ರಕ್ಕೆ ತಿಳಿಹಾಸ್ಯದ ಗೆರೆಯೊಂದು ಅಂಚು ಹೆಣೆದು ಮಿಂಚುತ್ತದೆ.

ಭರತೇಶವೈಭವ ಇಂಗ್ಲಿಷ್, ಹಿಂದಿ, ಗುಜರಾತಿ ಮತ್ತು ಮರಾಠಿ ಭಾಷೆಗಳಿಗೆ ಅನುವಾದಗೊಂಡಿರುವುದು ಈ ಕಾವ್ಯದ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ. ರತ್ನಾಕರನ ಹಾಡುಗಳಲ್ಲಿ ಕಾವ್ಯಕ್ಕಿಂತ ಜಿನಭಕ್ತಿಯದೆ ಮೇಲುಗೈ. ತ್ರಿಲೋಕ ಶತಕ ಜೈನಧರ್ಮಾನುಸಾರವಾಗಿ ಲೋಕಾಕೃತಿಯನ್ನು ತಿಳಿಸುವ ತೀರ ಸಪ್ಪೆಯಾದ ಕೃತಿ. ಅಪರಾಜಿತ ಶತಕ ಮತ್ತು ರತ್ನಾಕರ ಶತಕಗಳು ಭಾವಗೀತಾತ್ಮಕವಾದ ಖಂಡಕಾವ್ಯಗಳು. ಅಚ್ಚಗನ್ನಡದ ಸೊಬಗು ಲಾಲಿತ್ಯಗಳಿಂದ ಭಾವಗೀತೆಯಾಗಿ ಹರಿದ ಇವನ ವೃತ್ತಗಳು ಹೃದಯಸ್ಪರ್ಶೀಯಾಗಿವೆ. ಆರಂಭದಲ್ಲಿ ಸಾಧಕನ ಆರ್ತಧ್ವನಿಯೂ ಕಡೆಗೆ ಸಿದ್ಧನ ಸಂತೃಪ್ತಿಯ ಸೊಲ್ಲೂ ಕೇಳುತ್ತದೆ. ಸಂಶಯ ಶ್ರದ್ಧೆ ಕಳಚಿ ಅಖಂಡಶ್ರದ್ಧೆ ಮೂಡುತ್ತದೆ. ಅಳಲಕೊಳನ್ನೂದಿದ ಕವಿಯೇ ಆನಂದದ ಉದ್ಗಾರಗಳನ್ನು ಚಿಮ್ಮಿಸುತ್ತಾನೆ. ರತ್ನಾಕರ ಶತಕದಲ್ಲಿ 228 ಪದ್ಯಗಳಿದ್ದು ವೈರಾಗ್ಯ, ನೀತಿ, ಆಧ್ಯಾತ್ಮ ವಿಚಾರಗಳು ಬೋಧಪ್ರದವಾಗಿ ಪ್ರತಿಪಾದಿತವಾಗಿವೆ. ಧರ್ಮಪಥಭ್ರಷ್ಟನಾದೆನಲ್ಲ ಎಂದು ಕೊರಗಿ ಕರಗಿಹರಿದ ಕವಿಯ ಮನಸ್ಸನ್ನು ಕನ್ನಡಿಸುವ ಪದ್ಯಗಳು ಪ್ರಿಯವಾಗುತ್ತವೆ. ಯಾವ ಮುಚ್ಚುಮರೆಯೂ ಇಲ್ಲದೆ ಬಿಚ್ಚುಮನಸ್ಸಿನಿಂದ ತನ್ನ ನಡೆನುಡಿಗಳ ನಡಾವಳಿಯನ್ನು ನಿರ್ದಾಕ್ಷಿಣ್ಯವಾಗಿ ತಾನೇ ಪರಾಂಬರಿಸಿ ಹುಳುಕುಗಳನ್ನು ಹೊರಗೆಳೆಯುತ್ತಾನೆ. ನಾನಾಗರ್ಭದಿ ಪುಟ್ಟಿ, ಸ್ತ್ರೀಯಂ ಮಕ್ಕಳಂತಗಲ್ವೆ, ಎತ್ತೆತ್ತ ಲತಾಂಗಿಯರ್ಸುಳೀದರತ್ತತ್ತಾಡುಗಂ-ಎಂಬಂಥ ಪದ್ಯಗಳು ಇದಕ್ಕೆ ಉದಾಹರಣೆಗಳು. ಮತ್ತೆ ಕೆಲವು ಪದ್ಯಗಳಲ್ಲಿ ಅಟ್ಟಹಾಸ ಅಹಂಕಾರ ಭೋಗಗಳಿಂದ ಬೀಗುವ ಮನುಷ್ಯ ಮದ ಕರಗುತ್ತ ಸಾಗಿ ಸ್ವಂತ ವ್ಯಥೆಯ ಒಳದನಿಯೊಂದು ಕೇಳಿಸುತ್ತದೆ. ಕವಿ ಅಂತರ್ಮುಖೀಯಾಗುತ್ತಿರುವ ಬೆಳವಣಿಗೆಯನ್ನು ಕಾಣಿಸುತ್ತದೆ. ಇಲ್ಲೆಲ್ಲ ಕವಿಜೀವನದ ಉದ್ಗಾರಗಳು, ಉಸಿರಾಟ ಕೂಡ ಕೇಳುವಷ್ಟು ಭಾವಸ್ಪರ್ಶಿಯಾಗಿವೆ. ಇಲ್ಲಿಯೂ ಸ್ಪಷ್ಟನಿಲುವಿನ ಎಳೆಗಳನ್ನು ನೇಯುತ್ತಿರುವ, ಒಂದು ಆರೋಗ್ಯಕರ ಜೀವನದೃಷ್ಟಿಯನ್ನು ಮೂಡಿಸಲು ಸಮರ್ಥವಾಗುವ ವ್ಯವಸ್ಥೆ ಕಂಡುಬರುತ್ತದೆ. ಮಲಗಿದ ಅನುಭವಗಳ ಅಸ್ಫುಟ ಆಕೃತಿಗಳನ್ನು ಮಾತಿನ ಬೆಳಕಿನಿಂದ ಎಚ್ಚರಕ್ಕೆ ತೆರೆಯುತ್ತ ಹೋಗುವ ಕಾಂತಿಮಯ ಭಾಗಗಳು ಇಲ್ಲಿವೆ.

ಅಪರಾಜಿತ ಶತಕದಲ್ಲಿ 128 ಪದ್ಯಗಳಿವೆ. ಇದರಲ್ಲಿ ಕವಿಯ ಅಂತರಂಗದಲ್ಲಿ ಸ್ಫುರಿಸಿದ ಭಾವತರಂಗಗಳು ಒಂದರ ಹಿಂದೆ ಒಂದು ಎಂಬಂತೆ ವೀಚಿಗತಿಯಲ್ಲಿ ತೇಲಿಬರುತ್ತವೆ. ಇಲ್ಲಿನ ಲಲಿತವಾದ ಪದಗುಂಫನ ಶ್ರುತಿಮಧುರವಾಗಿದೆ. ವಿಷಯ ನಿರೂಪಣೆ ಸ್ಪುಟವಾಗಿದ್ದು ಅರ್ಥಪೂರ್ಣವಾಗಿದೆ. ರತ್ನಾಕರ ಶತಕದ ಹಳವಂಡ, ಭಾವಪೂರದ ಅಬ್ಬರಗಳು ಇಲ್ಲಿಲ್ಲ. ಇಲ್ಲಿ ಪ್ರವಾಹ ತಗ್ಗಿದ ಮೇಲಿನ ಪ್ರಶಾಂತತೆ ಇದೆ. `ಅರಸುವೆನೆನ್ನ ದೇಹದೊಳಗೆನ್ನನೆ ಕಾಣೆನಮೂರ್ತ ಸಿದ್ಧನಂ ಪೊರೆಗೊಳ ಗೆಲ್ಲಮಂ ತೊಳೆದು ತಿಂಗಳ ಪುತ್ಥಳಿಮಾಡಿ ನೋಡವೆ ಎಂಬಲ್ಲಿ ಹೊಸ ಅರಿವಿನ ಹೊಂಬೆಳಗಿನಲ್ಲಿ ಹೊಸ ಹಾದಿ ಹಿಡಿದು ಹೊರಟ ಧೃತಗತಿಯ ಲಯವಿದೆ. ಇಲ್ಲಿನ ಬಹುಪಾಲು ಜೀವನವಿವೇಕದ ಮಾತುಗಳು ತನಗೆ ತಾನೆ ಹೇಳಿಕೊಂಡ ಸ್ವಗತಗಳಾಗಿವೆ. `ಅವನುಮಕ್ಕೆ ನಿನ್ನಡಿಗಳಂ ನೆನೆವಾತನೆ ನನ್ನ ಬಂಧು, ರಂಭಯೇ ಬಂದು ತಾಂ ಕೊರಲನಪ್ಪಿದೊಡಂ ಪುಳಕಂಗಳಾಗದೇ..... ಬುದ್ಧಿ ಕಲಂಕದೇ ಶಿಲಾಸ್ತಾಂಭವೆನಲ್ಕೆಯೆನ್ನೊಳಗೆ ನಿಲ್ವೆನಪರಾಜಿತೇಶ್ವರಾ ಎಂಬಲ್ಲಿ ಚಿತ್ತಚಾಂಚಲ್ಯಗಳು ಬತ್ತಿ ಆತ್ಮವಿಶ್ವಾಸ ಪ್ರಾಪ್ತವಾಗಿರುವುದು ನಿಚ್ಚಳವಾಗಿ ವ್ಯಕ್ತವಾಗಿದೆ.

ಈ ಎರಡು ಶತಕಗಳು ಜೀವಂತವಾದ ಒಂದು ವ್ಯಕ್ತಿತ್ವ ಹಂತ ಹಂತವಾಗಿ ಬೆಳೆದ ಕ್ರಮವನ್ನು ಪರಿಚಯಿಸುವ ಹೆಜ್ಜೆಗುರುತುಗಳಾಗಿ ನಿಲ್ಲುತ್ತವೆ. ಆತ್ಮಕಥನದ ವೈಹಾಳಿಗತಿಯಲ್ಲಿ ಬಿಚ್ಚಿಕೊಳ್ಳುವ ಈ ಬರವಣಿಗೆ ಅತ್ಯಂತ ಆತ್ಮೀಯ ರೀತಿಯಲ್ಲಿ ಜೀವನದ ಸಮೀಕ್ಷೆಯನ್ನು ನಡೆಸಿದಂತಿದ್ದು ಕವಿಸ್ವಭಾವದ ಸಂಕೀರ್ಣ ಪದರಗಳನ್ನು ತೆರೆದಿರಿಸಿದಂತಿದೆ. ಮತೀಯ ಮಿತಿಗಳನ್ನು ಕತ್ತರಿಸಿ ಸರ್ವಜನ ಗ್ರಾಹ್ಯವಾಗುವ ಈ ಪ್ರಾಂಜಲ ನಿರೂಪಣೆ ಪರಿಭಾವನಾರ್ಹವಾಗಿದೆ.