ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಮಣಿ, ಎನ್

ವಿಕಿಸೋರ್ಸ್ದಿಂದ

ರಮಣಿ, ಎನ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಡಾ|| ಎನ್.ರಮಣಿಯವರದು ಕೇವಲ ಒಂದು ಹೆಸರಲ್ಲ ಅದೊಂದು ಪ್ರಜ್ವಲಿಸುವ ತಾರೆ. ರಮಣಿಯವರ ಮುರಳಿನಾದ ಸಹೃದಯ ರಸಿಕರಿಗೆ ಅಮೃತ ಧಾರೆ. ಅಷ್ಟರಂಧ್ರಗಳ ಹೊಸ ಮಾದರಿಯ ಕೊಳಲು ವಾದನವೊಂದನ್ನು ಸೃಜಿಸಿ, ಬೆರಳುಗಳ ಮೂಲಕ ವಿಶಿಷ್ಟ ರೀತಿಯಲ್ಲಿ ನಿಯಂತ್ರಿಸುತ್ತಾ ಉತ್ತಮೋತ್ತಮ ನಾದ ಮಾಧುರ್ಯವನ್ನು ಸೃಜಿಸುವ ಡಾ|| ರಮಣಿಯವರ ಕೈಹಿಡಿ ಕೊಳಲು ಬರಿಯ ಬಿದರು ಕಡ್ಡಿಯಲ್ಲ. ಅದು ಕೃಷ್ಣನ ಕ್ಯಯಲ್ಲಿಯ `ವೇಣು. ಅದರ ವಾದನ `ವೇಣುವಾದನ.

ಡಾ|| ರಮಣಿಯವರು ತಿರುವಾರೂರ್‍ನಲ್ಲಿ 1934ರಲ್ಲಿ ಜನಿಸಿದರು. ಅಂದಿನ ಖ್ಯಾತ ವೇಣುವಾದಕ ಶ್ರೀ ಅಜೈಯಾರ್ ನಾರಾಯಣಸ್ವಾಮಿ ಅಯ್ಯರ್ ಅವರಲ್ಲಿ ಐದನೇ ವರ್ಷದಲ್ಲೇ ಸಂಗೀತದ ಮೊದಲ ಪಾಠ.

ಕೊಳಲು ವಾದನದ ಮಾಂತ್ರಿಕ, ಮೋಡಿಗಾರ ಟಿ.ಆರ್.ಮಹಾಲಿಂಗಂ ಅವರು ರಮಣಿಯವರ ಸೋದರ ಮಾವ. ರಮಣಿಯವರು ತಮ್ಮ ಎಂಟನೇ ವಯಸ್ಸಿಗೇ ಚಕ್ಕಲಿಯ ಶೃಂಗಾರ ವೇಲನ್ ದೇವಾಲಯಲ್ಲಿ ರಂಗ ಪ್ರವೇಶ (ಅರಂಗೇಟ್ರಂ) ಅನ್ನು ಕೈಗೊಳ್ಳುವಂತಾಯಿತು. ಕುಟುಂಬ ಸಂಬಂಧಕ್ಕಿಂತ ಹೆಚ್ಚಾಗಿ ಸಾಕ್ಷಾತ್ ಗುರುವಾಗಿದ್ದ `ಮಾಲಿ (ಟಿ.ಆರ್.ಮಹಾಲಿಂಗಂ) ಯವರಲ್ಲಿ ಕಲಿತು, ತಮ್ಮ ಹನ್ನೊಂದರ ಹರೆಯದಲ್ಲೇ ಚೆನ್ನೈನ ಆರ್.ಆರ್.ಸಭಾಮಂದಿರದಲ್ಲಿ ಗುರುವಿನೊಂದಿಗೇ ಸಾಥಿಯಾಗಿ ವಾದ್ಯ ನುಡಿಸಿದ ಭಾಗ್ಯಶಾಲಿ ಡಾ|| ರಮಣಿ.

ಶಾಲಾ ದಿನಗಳಿಂದಲೇ ಆಕಾಶವಾಣಿ ಹಾಗೂ ಇನ್ನಿತರ ಸಭೆ ಸಮಾರಂಭಗಳಲ್ಲಿ ವಾದ್ಯ ನುಡಿಸುತ್ತಿದ್ದ ಈ ಪ್ರತಿಭಾಶಾಲಿ ಚೆನ್ನೈನ ಸಂಗೀತ ಅಕಾಡೆಮಿಯಲ್ಲಿ 1956ರಲ್ಲಿ ಮೊದಲ ಬಾರಿಗೆ ತನಿಯಾಗಿ ಕಾರ್ಯಕ್ರಮ ನೀಡಿದರು. ಮುಂದೆ ಕೆಲ ವರ್ಷಗಳಲ್ಲೇ ಅನೇಕ ಏಕವ್ಯಕ್ತಿ ವೇಣುವಾದನ ಕಛೇರಿಗಳನ್ನು ನಡೆಸಿ ಬೆಳಕಿಗೆ ಬಂದರು. ಅರವತ್ತರ ದಶಕದಲ್ಲಿ ಅನೇಕ ಪ್ರಸಿದ್ಧ ಸಂಗೀತ ಕಲಾವಿದರು ಡಾ|| ರಮಣಿಯವರ ಪ್ರತಿಭೆಯನ್ನು ಗುರುತಿಸಿ ತಮ್ಮೊಂದಿಗೆ ವೇಣುವಾದನಕ್ಕೆ ಸಾಥಿಯಾಗಿ ಆರಿಸಿಕೊಂಡಿದ್ದು ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಅಲ್ಲದೆ-ವೀಣೆ-ವೇಣು-ವಯೋಲಿನ ವಾದನ ಮೇಳಗಳಲ್ಲಿ ಜುಗಲ ಬಂದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಡಾ|| ರಮಣಿಯವರ ಹೆಸರು ಜನಜನಿತವಾಗುವಂತಾಯಿತು.

ಮೊದಲಿಗೆ ಆಕಾಶವಾಣಿ ಅನಂತರ ದೂರದರ್ಶನದ ಕಲಾವಿದರಾಗಿ ಆಯ್ಕೆಯಾದ ಮೇಲೆ ದಿನ ನಿತ್ಯವೆಂಬಂತೆ ಈ ಎರಡೂ ಮಾಧ್ಯಮಗಳಲ್ಲಿ ಒಂದಲ್ಲ ಒಂದೆಡೆಯಲ್ಲಿ ಡಾ|| ರಮಣಿಯವರ ಕೊಳಲು ವಾದನ ಮೊಳಗುತ್ತಿತ್ತು. ದೂರದರ್ಶನದ ಆರಂಭ ಕಾಲದಿಂದಲೇ ಚೆನ್ನೈ ನಿಲಯದಿಂದ ನಿರಂತರವಾಗಿ ಕಾರ್ಯಕ್ರಮ ನೀಡುತ್ತಿರುವುದಲ್ಲದೆ ನಿಲಯದ ಕಲಾವಿದರ ಆಯ್ಕೆ ಸಮಿತಿಯಲ್ಲಿದ್ದು ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬರಲು ರಮಣಿ ಕಾರಣರಾಗಿದ್ದಾರೆ.

ಡಾ|| ರಮಣಿಯವರಿಗೆ ಸಂದ ಸನ್ಮಾನ-ಪ್ರಶಸ್ತಿಗಳು, ಅನೇಕ. ಮುಖ್ಯವಾದುವೆಂದರೆ 1962ರಲ್ಲಿ ಚೆನ್ನೈನಲ್ಲಿ ದ್ವಾರಂ ವೆಂಕಟಸ್ವಾಮಿ ನಾಯ್ಡು ಅವರಿಂದ ಹಾಗೂ 1972ರಲ್ಲಿ ಟಿ.ಆರ್.ಮಹಾಲಿಂಗಂ ಅವರಿಂದ ಸನ್ಮಾನ. 1973ರಲ್ಲಿ ತಮಿಳುನಾಡಿನ ಸರ್ಕಾರದ ಸಂಗೀತ ನಾಟಕ ಸಂಘದಿಂದ `ಕಲೈಮಾಮಣಿ ಪ್ರಶಸ್ತಿ. 1974ರಲ್ಲಿ ನ್ಯೂಯಾರ್ಕ್‍ನಲ್ಲಿ ಹ್ಯಾಮಲ್ಟನ್ ವಿಶ್ವವಿದ್ಯಾಲಯದಿಂದ `ಆದರ್ಶ ವೇಣುವಾದನ ಶಿಕ್ಷಕ ಗೌರವ, 1980ರಲ್ಲಿ ಪಾರ್ಥಸಾರಥಿ ಗಾನ ಸಭೆಯಿಂದ ಅಭಿಜಾತ ಸಂಗೀತ ನೃತ್ಯ ಸಂಸ್ಥೆಯಿಂದ ಸನ್ಮಾನ. 1996ರಲ್ಲಿ ಅರಿಜೊನಾದ ಲಲಿತಕಲಾ ಸಂಘದಿಂದ `ಮಹೋನ್ನತ ಕರ್ನಾಟಕ ಸಂಗೀತಗಾರ ಇವು ಕೆಲವು. ಅಮೆರಿಕೆಯ ಅರಿಜೋನ್‍ದ ವಲ್ರ್ಡ್ ವಿಶ್ವವಿದ್ಯಾಲಯದಿಂದ 1980ರಲ್ಲಿ ಗೌರವ ಡಾಕ್ಟರೇಟ್ ಪದವಿ. ಭಾರತ ಸರ್ಕಾರದಿಂದ 1987ರಲ್ಲಿ ಪದ್ಮಶ್ರೀ ಪ್ರಶಸ್ತಿ. 1996ರಲ್ಲಿ ಸಂಗೀತ ರತ್ನ ಮೈಸೂರು ಟಿ.ಚೌಡಯ್ಯ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ. 2004ರಲ್ಲಿ ಅಖಿಲ ಭಾರತ ಆಕಾಶವಾಣಿಯಿಂದ ರಾಷ್ಟ್ರೀಯ ಪ್ರಶಸ್ತಿ ಇವೇ ಮುಂತಾದ ಕೆಲವು ಪ್ರಶಸ್ತಿಗಳಲ್ಲದೆ ವಿವಿಧ ಸಂಘ ಸಂಸ್ಥೆಗಳು ನೀಡಿರುವ ಪ್ರಶಸ್ತಿಗಳು ಅಸಂಖ್ಯ.

ಡಾ|| ರಮಣಿಯವರು ತಮ್ಮ ಹೆಸರಿನಲ್ಲಿ ಚೆನ್ನೈನಲ್ಲಿ ಕೊಳಲುವಾದನ ಅಕಾಡಮಿ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ವೇಣುವಾದಕರಾಗಿ ಅನನ್ಯ ಸೇವೆ ಸಲ್ಲಿಸಿರುವ ಡಾ|| ಎನ್ ರಮಣಿ ಅವರಿಗೆ ಕರ್ನಾಟಕ ಸರ್ಕಾರ ರಾಷ್ಟ್ರಮಟ್ಟದಲ್ಲಿ ನೀಡಲಾಗುವ 'ಚೌಡಯ್ಯ ಪ್ರಶಸ್ತಿ (2004) ನೀಡಿ ಗೌರವಿಸಿದೆ.