ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಮಣ ಮಹರ್ಷಿ

ವಿಕಿಸೋರ್ಸ್ದಿಂದ

ರಮಣ ಮಹರ್ಷಿ 1879-1950. ಭಗವಾನ್ ರಮಣ ಮಹರ್ಷಿ ಎಂದೂ ಮೌನಮುನಿ ಎಂದೂ ಖ್ಯಾತರಾದ ಭಾರತದ ಒಬ್ಬ ಅವಧೂತ; ಸಂನ್ಯಾಸಿ; ಮಹಾಜ್ಞಾನಿ. ಶಂಕರರ ಅದ್ವೈತ ತತ್ತ್ವವನ್ನು ಸಾರಿದ, ಯಾವುದೇ ಬಾಹ್ಯ ವಿಷಯವಸ್ತುವಿನ ಸಂಪರ್ಕವಿಲ್ಲದೆ ನಿರುಪಮವಾದ ಆನಂದದಿಂದ ಇರುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ದ್ರಷ್ಟಾರ.

ರಮಣರು 1879ರಲ್ಲಿ ಡಿಸೆಂಬರ್ 30 ರಂದು ತಮಿಳುನಾಡಿನ ಮಧುರೆಯ ತಿರುಚ್ಚುಳಿ ಗ್ರಾಮದಲ್ಲಿ ಜನ್ಮ ತಳೆದರು (ಪುನರ್ವಸು ನಕ್ಷತ್ರ). ತಂದೆ ಸುಂದರಮ್ ಅಯ್ಯರ್. ತಾಯಿ ಅಳಗಮ್ಮಾಳ್. ಈ ದಂಪತಿಗಳ ಎರಡನೆಯ ಮಗನಾಗಿ ಹುಟ್ಟಿದ ಇವರಿಗೆ ತಂದೆತಾಯಿಗಳು ಇಟ್ಟ ಹೆಸರು ವೆಂಕಟರಾಮನ್. ಈ ಮಗು ಹುಟ್ಟಿದ ದಿನ ಶಿವನು ನಟರಾಜನ ರೂಪದಲ್ಲಿ ಪತಂಜಲಿ ಮುನಿಗಳಿಗೆ ದರ್ಶನವಿತ್ತ ಸುದಿನವೂ ಶಿವಭಕ್ತರು `ಆದ್ರ್ರಾದರ್ಶನ ದಿನವೆಂದು ವಿಶೇಷವಾಗಿ ಪ್ರಾರ್ಥನೆ, ಪೂಜೆಗಳನ್ನು ಆಚರಿಸುವ ದಿನವೂ ಆಗಿತ್ತು. ವೆಂಕಟರಾಮನ್‍ಗೆ ಹದಿನಾರನೆಯ ವರ್ಷ ನಡೆಯುತ್ತಿದ್ದಾಗ 1895ರಲ್ಲಿ ಒಂದು ಘಟನೆ ನಡೆಯಿತು. ಇವರ ಸಂಬಂಧಿಯೊಬ್ಬರು ಮನೆಗೆ ಬಂದಿದ್ದಾಗ `ನೀವು ಎಲ್ಲಿಂದ ಬಂದಿರಿ? ಎಂದು ಹುಡುಗ ಅವರನ್ನು ಪ್ರಶ್ನಿಸಿದ. ಅವರು `ಅರುಣಾಚಲದಿಂದ ಎಂದು ನುಡಿದರು. ಆ ಹೆಸರನ್ನು ಕೇಳಿದ ಕೂಡಲೇ ಹುಡುಗನಿಗೆ ರೋಮಾಂಚನವಾಯಿತೆಂದೂ ತಾನೂ ಒಂದಲ್ಲ ಒಂದು ದಿನ ಅಲ್ಲಿಗೆ ಹೋಗಲೇಬೇಕೆಂದು ಅವನ ಒಳಮನ ನುಡಿಯಿತೆಂದೂ ತಿಳಿದುಬರುತ್ತದೆ.

ವೆಂಕಟರಾಮನ್ ಮಧುರೆಯ ಚಿಕ್ಕಪ್ಪನ ಮನೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ (1896) ಸದಾ ಮೃತ್ಯುವಿನ ಬಗ್ಗೆ ಚಿಂತನೆ ಮಾಡುತ್ತಿದ್ದ. ಜುಲೈ 17ನೆಯ ತಾರೀಖು ಇದ್ದಕ್ಕಿದ್ದ ಹಾಗೆ ತಾನು ಸತ್ತಹಾಗೆ, ಶರೀರಕ್ಕಿಂತ ತಾನು ಬೇರೆ ಇರುವ ಹಾಗೆ ಅನುಭವವಾಯಿತು. ಬಾಲಕ ವೆಂಕಟರಾಮನ್ ವಿಚಾರ ಮಾಡಲಾರಂಭಿಸಿದ. ದೇಹ ಸಾಯುತ್ತದೆ. ಅದನ್ನು ಸುಟ್ಟು ಬೂದಿ ಮಾಡುತ್ತಾರೆ; ಆದರೆ ದೇಹದಿಂದ ಹೊರಗಿರುವ `ನಾನು ನಾಶ ಹೊಂದಿದಂತೆ ಆಯಿತೇನು? ಆದ್ದರಿಂದ ಈ ದೇಹ ನಾನಲ್ಲ, ಏಕೆಂದರೆ ಸತ್ತ ದೇಹ ಚಲಿಸುತ್ತಿಲ್ಲ, ಮಾತನಾಡುತ್ತಿಲ್ಲ, ಜಡವಸ್ತುವಿನಂತೆ ಬಿದ್ದಿದೆ. ಆದರೆ ನನ್ನ ವ್ಯಕ್ತಿತ್ವದ ಸಂಪೂರ್ಣ ಅರಿವು ನನಗಾಗುತ್ತಿದೆ, ಈ ನಾನು ಎಂಬ ತಿಳಿವನ್ನು ಅಂತರಾಳದಲ್ಲಿ ಸ್ಪಷ್ಟವಾಗಿ ಅನುಭವಿಸುತ್ತಿದ್ದೇನೆ. ಆದ್ದರಿಂದ ಮೃತ್ಯುವನ್ನು ಮೀರಿದ ಅವಿನಾಶಿ ಆತ್ಮ ಚೈತನ್ಯ ನಾನು ಎಂಬುದರ ಅರಿವುಂಟಾಗಿ ಪುನರ್ಜನ್ಮ ಪಡೆದಂತಾಯಿತು. ಈ ದಿವ್ಯ ಅನುಭವದಿಂದ ಆನಂದ ಉಕ್ಕಿಹರಿದು ಮತ್ತೆ ಮತ್ತೆ ಅದರ ಅನುಭವಕ್ಕಾಗಿ ಮನಸ್ಸು ಹಾತೊರೆಯುವಂತಾಯಿತು. ವ್ಯಾಸಂಗ ಬಿಟ್ಟರು. ತಮ್ಮ ಶಾಶ್ವತ ನೆಲೆ ಅರುಣಾಚಲವೆಂದು ನಿರ್ಧರಿಸಿ 1896ರ ಆಗಸ್ಟ್ 29ರಂದು ಮನೆಬಿಟ್ಟು ಹೊರಟರು. ಮನೆ ಬಿಡುವ ಮೊದಲು ಅಣ್ಣನಿಗೆ ಪತ್ರವೊಂದನ್ನು ಬರೆದಿಟ್ಟರು. ತಂದೆಯನ್ನು ಹುಡುಕಿಕೊಂಡು ದೈವದ ಆದೇಶದಂತೆ ಹೊರಟಿರುವುದಾಗಿಯೂ ತಮ್ಮ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲವೆಂಬುದು ಆ ಕಾಗದದ ಸಾರಾಂಶವಾಗಿತ್ತು. ಗಿರಿಯನ್ನು ತಲಪಿದ ಮೇಲೆ ಪೂರ್ಣ ವೈರಾಗ್ಯವನ್ನು ತಳೆದ ರಮಣರು ತಲೆಬೋಳಿಸಿ, ಕೌಪೀನ ತೊಟ್ಟು ಅರುಣಾಚಲದ ಶಿವನ ಆಶ್ರಯದಲ್ಲಿ ನಿಂತರು. ಬೆಟ್ಟದ ಮೇಲಿರುವ ಗುಹೆಯಲ್ಲಿಯೂ ಪಾತಾಳಲಿಂಗೇಶ್ವರನ ದೇವಾಲಯದಲ್ಲಿಯೂ ತಪಸ್ಸು ಮಾಡಿ ದಿವ್ಯಾನುಭವ ಪಡೆದರು. ಊರ ಜನ ಇವರನ್ನು ಬ್ರಾಹ್ಮಣಸ್ವಾಮಿ, ಮೌನಿಸ್ವಾಮಿ ಎಂದು ಸಂಬೋಧಿಸುತ್ತಿದ್ದರಂತೆ.

ಸಂಸ್ಕøತದಲ್ಲಿ ಮಹಾಪಂಡಿತರಾಗಿದ್ದ ಗಣಪತಿ ಎಂಬವರು ಕಾವ್ಯಕಂಠರೆಂದೆ ಹೆಸರಾಗಿದ್ದವರು. ಸರ್ವ ವೇದಾಂತಶಾಸ್ತ್ರಗಳಲ್ಲಿ ಪಾರಂಗತರಾಗಿದ್ದವರಾಗಿದ್ದರೂ ಅವರಿಗೆ ಆತ್ಮತೃಪ್ತಿಯೆಂಬುದಿರಲಿಲ್ಲ. ಅವರು ಅರುಣಾಚಲಕ್ಕೆ ಬಂದು ಈ ಮೌನಿಮುನಿಯ ಮೊರೆಹೊಕ್ಕು `ನಾನು ಎಂಬುದರ ಮೂಲಕ್ಕೆ ಹೋಗು ಎಂಬ ಉಪದೇಶದ ಒಂದೇ ವಾಕ್ಯದಿಂದ ಪ್ರಭಾವಿತರಾಗಿ 1907ರಲ್ಲಿ ರಮಣರ ಶಿಷ್ಯರಾಗಿ ರಮಣರನ್ನು ಗುರುವೆಂದು ಒಪ್ಪಿಕೊಂಡರು. ರಮಣರ ಆಧ್ಯಾತ್ಮಿಕ ಔನ್ನತ್ಯಕ್ಕೆ ಮಾರುಹೋಗಿ ಅವರನ್ನು ರಮಣ ಮಹರ್ಷಿಗಳೆಂದೂ ಭಗವಾನರೆಂದೂ ಭಗವದವತಾರವೆಂದೂ ಘೋಷಿಸಿದರು.

ಆತ್ಮಸಾಕ್ಷಾತ್ಕಾರವನ್ನು ಹೊಂದಿದ್ದ ರಮಣರು ತಮ್ಮ ಜೀವನದ ಬಹುಭಾಗವನ್ನು ಮೌನದಲ್ಲಿ ಕಳೆದರು. ತಮ್ಮೊಳಗೆ ತಾವು ಆನಂದವನ್ನು ಅನುಭವಿಸುತ್ತ, ಮನಸ್ಸನ್ನು ಆತ್ಮನಲ್ಲಿ ನೆಲೆಗೊಳಿಸಿ, ಶಾಂತಿಯಿಂದ ಇರುವುದಷ್ಟೇ ಈಜೀವನ್ಮುಕ್ತರ ರೀತಿಯಾಗಿತ್ತು. ಇವರ ಸಾನ್ನಿಧ್ಯಕ್ಕೆ ಬಂದವರಿಗೂ ಈ ಬಗೆಯ ಶಾಂತಿ ಲಭಿಸುತ್ತಿತ್ತು. ಇದರಿಂದಾಗಿ ಜನರು ತಂಡೋಪತಂಡವಾಗಿ ಅರುಣಾಚಲದತ್ತ ಬರಲಾರಂಭಿಸಿದರು.

ರಮಣರ ಮೌನದಲ್ಲಿ, ನೋಟದಲ್ಲಿ ಅದ್ಭುತ ಶಕ್ತಿ ಅಡಗಿತ್ತು. ಇವರ ನಿರ್ಲಿಪ್ತ, ನಿಷ್ಕಪಟ ಮುಖಭಾವ ಇತರರನ್ನು ಪಾರದರ್ಶಕಗೊಳಿಸುತ್ತಿತ್ತು. ಕವಿ ಪು.ತಿ.ನ. ಅವರ ಮಾತಿನಲ್ಲಿ ಹೇಳುವುದಾದರೆ `ವದನೋತ್ಪುಲ್ಲಾರವಿಂದಂ ದರ್ಶನ ದೀಪ್ತಂ. ಅಶಾಂತಿ, ಅತೃಪ್ತಿ ಗೊಂದಲಗಳಿಂದ ಇವರ ಬಳಿ ಬಂದವರು, ಶಾಂತಿ, ತೃಪ್ತಿ, ಸಮಾಧಾನಗಳಿಂದ ಹಿಂದಿರುಗುತ್ತಿದ್ದರು, ಇದಕ್ಕಾಗಿ ರಮಣರು ಯಾವ ಪವಾಡವನ್ನೂ ಮಾಡುತ್ತಿರಲಿಲ್ಲ. ಕೇವಲ ಒಂದು ಮಾತು, ಒಂದು ನೋಟ, ಒಂದು ಮಂದಹಾಸ-ಇಷ್ಟರಿಂದಲೇ ಬಂದವರಲ್ಲಿ ಮನಃಪರಿವರ್ತನೆಯಾಗುತ್ತಿತ್ತು. ರಮಣರನ್ನು ಇಪ್ಪತ್ತನೆಯ ಶತಮಾನದ ದಕ್ಷಿಣಾಮೂರ್ತಿ ಎಂದೂ ಸಾಧಕರು ಕೊಂಡಾಡಿದ್ದಾರೆ. ರಾಷ್ಟ್ರೀಯ ಅಂತಾರಾಷ್ಟ್ರೀಯ ಗಣ್ಯವ್ಯಕ್ತಿಗಳು ಇವರಿಂದ ಪ್ರಭಾವಿತರಾಗಿದ್ದಾರೆ. ಅವರಲ್ಲಿ ಪಾಲ್‍ಬ್ರಂಟನ್, ಸಾಮರ್‍ಸೆಟ್ ಮಾಮ್, ಆರ್ಥರ್ ಆಸ್‍ಬಾರ್ನ್ ಮೊದಲಾದವರು ರಮಣರ ಕೃಪೆಗೆ ಪಾತ್ರರಾಗಿ ತಮ್ಮ ಅನುಭವಗಳನ್ನು ಬರೆಹಗಳಲ್ಲಿ ಕಾಣಿಸಲು ಪ್ರಯತ್ನಿಸಿದ್ದಾರೆ. ಜಿಜ್ಞಾಸು ಬ್ರಂಟನ್ ರಮಣರ ಸಾನ್ನಿಧ್ಯದಲ್ಲಿ ಪಡೆದ ಅಂತರಂಗದ ಶಾಂತಿ ಮತ್ತು ಅಭಯದ ಭಾವನೆಯನ್ನೂ ರಮಣರಿಂದ ಹೊರಹೊಮ್ಮುತ್ತಿದ್ದ ಆಧ್ಯಾತ್ಮ ತರಂಗಗಳು ತಮ್ಮ ಹೃದಯ ತುಂಬುತ್ತಿದ್ದ ರೀತಿಯನ್ನೂ ಅದುವರೆಗೂ ತಿಳಿಯದಿದ್ದ ಮಹೋನ್ನತ ಸತ್ಯವೊಂದನ್ನು ಅರಿಯಲು ಸಾಧ್ಯವಾದ ರೀತಿಯನ್ನೂ ಶಬ್ದಗಳಲ್ಲಿ ಹಿಡಿದಿಡಲು ತಾವು ಅಸಮರ್ಥರೆಂದು ಹೇಳಿಕೊಂಡಿದ್ದಾರೆ. ಮಹರ್ಷಿಗಳ ಉಪದೇಶವನ್ನು ಶೀಘ್ರಲಿಪಿಯಲ್ಲಿ ಬರೆದುಕೊಂಡು, ಅದನ್ನು ಅಚ್ಚು ಹಾಕಿಸಿದ್ದರೂ ತಮಗಾದ ಸಂಪೂರ್ಣ ಅನುಭವವನ್ನು ಅಭಿವ್ಯಕ್ತಿಸಲು ಮತ್ತು ಅವರ ಸನ್ನಿಧಿಯಲ್ಲಿ ತಾವು ಕಂಡ ಸತ್ಯದ ಸಾಕ್ಷಾತ್ಕಾರ, ದೈವಿಕತೆಯ ಅನುಭವವನ್ನು ವಿವರಿಸಲು ಅಸಾಧ್ಯವೆಂದಿದ್ದಾರೆ. ಪಾಲ್ ಬ್ರಂಟನ್ ಬರೆದ `ಮೈ ಸರ್ಚ್ ಇನ್ ಸೀಕ್ರೆಟ್ ಇಂಡಿಯ ಗ್ರಂಥ ರಮಣ ಮಹರ್ಷಿಗಳ ವಿಚಾರದತ್ತ ಪಾಶ್ಚಿಮಾತ್ಯರ ಗಮನ ಸೆಳೆಯಿತು.

ಮುಂದೆ ಸ್ವಾಮಿ ಚಿನ್ಮಯಾನಂದರೆಂದು ಪ್ರಸಿದ್ಧರಾದ ಬಾಲಕೃಷ್ಣ ಮೆನನ್ ಒಮ್ಮೆ ರಮಣರನ್ನು ಭೇಟಿಯಾಗಿದ್ದರು. ಆಗ ಹಜಾರದಲ್ಲಿ ಮೌನವಾಗಿ ಕುಳಿತಿದ್ದ ಮಂದಿಯೆಲ್ಲ ಊಟದ ಗಂಟೆ ಬಾರಿಸಿದಾಗ ಹೊರಗೆ ಹೋದರು. ಅಲ್ಲಿ ಒಬ್ಬರೇ ಉಳಿದ ಮೆನನ್ ಕೇಳಿದ ಪ್ರಶ್ನೆಗೆ ರಮಣರು ನೀಡಿದ ಉತ್ತರವಿದು: `ಸ್ವಾಮಿ, ಎಲ್ಲರೂ ಹೋದರು, ಈಗ ನಾನೊಬ್ಬನೇ ಇರುವೆ, ಏನಾದರೂ ಸ್ವಲ್ಪ ಹೇಳಿ, ಅಂದಾಗ ರಮಣರು `ಅದೂ ಕೂಡ ಹೋಗಲಿ ಎಂದರಂತೆ. ಹೀಗೆ ರಮಣರ ಬಾಯಿಂದ ಬರುತ್ತಿದ್ದ ಕೆಲವೇ ನುಡಿಗಳು ಅರ್ಥಗರ್ಭಿತವಾಗಿ ಜನರ ಹೃದಯಾಂತರಾಳವನ್ನು ತಟ್ಟುತ್ತಿದ್ದುವು.

ಮಾನವ ಜನಾಂಗಕ್ಕೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳಿಗೂ ಇವರು ತೋರುತ್ತಿದ್ದ ಪ್ರೀತಿ ವಾತ್ಸಲ್ಯ ಇವರ ಸಮದರ್ಶಿತ್ವಕ್ಕೆ ಸಾಕ್ಷಿ. ನಾಯಿ, ಹಸು, ನವಿಲು, ಅಳಿಲು, ಮೇಕೆ, ಕೋತಿ ಎಲ್ಲವೂ ಇವರ ದೃಷ್ಟಿಯಲ್ಲಿ ಒಂದೇ. ಕಾಯದಲ್ಲಿ ವೈವಿಧ್ಯ, ಆತ್ಮದಲ್ಲಿ ಏಕತ್ವವನ್ನು ಕಾಣುವ ಇವರ ನಿಲುವು ಅನ್ಯಾದೃಶವಾದುದು.

ರಮಣ ಮಹರ್ಷಿಗಳು ಸಾಧಕರಿಗೆ ಕರುಣಿಸಿದ ಎರಡು ಮಹಾನ್ ಗ್ರಂಥಗಳಿವು: ಉಪದೇಶಸಾರ ಮತ್ತು ಸದ್ದರ್ಶನ. ಸದ್ದರ್ಶನ ಎಂಬುದು ವೇದಾಂತದ ಸಾರಸರ್ವಸ್ವವನ್ನು ಒಳಗೊಂಡ ಕೃತಿ. ಭಗವಾನರು ತಮಿಳಿನಲ್ಲಿ ಬರೆದ `ಉಳ್ಳದು-ನಾರ್ಪದು ಎಂಬ ನಲವತ್ತು ಶ್ಲೋಕಗಳ ಸಂಸ್ಕøತಶಾನುವಾದವೇ ಈ ಸದ್ದರ್ಶನ. ಇದನ್ನು ಅನುವಾದಿಸಿದವರು ಪಂಡಿತ ಕಾವ್ಯಕಂಠ ಗಣಪತಿಯವರು. ಈ ನಲವತ್ತು ಶ್ಲೋಕಗಳಲ್ಲಿ ಭಗವಾನರ ಬ್ರಹ್ಮಾನುಭವವನ್ನು, ಜ್ಞಾನ ನಿಷ್ಠೆಯನ್ನು, ಸರ್ವಜ್ಞತ್ವವನ್ನು ಜ್ಞಾನಿಗಳು ಗುರುತಿಸಿದ್ದಾರೆ. ಈ ಗ್ರಂಥವನ್ನು ನಟರಾಜ್ ಎಂಬವರು ಸಂಸ್ಕøತದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಇದೇ ಗ್ರಂಥವನ್ನು ಕನ್ನಡಕ್ಕೆ ಬಿ. ಎಸ್. ಕೃಷ್ಣಮೂರ್ತಿ ಎಂಬವರು ಭಾಷಾಂತರ ಮಾಡಿದ್ದಾರೆ. ಈ ಗ್ರಂಥ ಇತರ ಅನೇಕ ಭಾರತೀಯ ಭಾಷೆಗಳಲ್ಲಿ ಭಾಷಾಂತರಗೊಂಡಿದೆ.

ಕರ್ನಾಟಕದಲ್ಲಿ ಅನೇಕ ಕಡೆ ರಮಣ ಮಹರ್ಷಿ ಕೇಂದ್ರಗಳು ಸ್ಥಾಪನೆಗೊಂಡು ಆತ್ಮಜ್ಞಾನ ನೀಡುವಲ್ಲಿ ಸಹಕಾರಿಯಾಗಿವೆ. ಬೆಂಗಳೂರಿನ ಲೋವರ್ ಪ್ಯಾಲೇಸ್ ಆರ್ಚಡ್ರ್ಸ್‍ನಲ್ಲಿರುವ ರಮಣ ಮಹರ್ಷಿ ಸೆಂಟರ್ ಫಾರ್ ಲರ್ನಿಂಗ್, ಜಯನಗರದ ರಮಣ ಮಹರ್ಷಿ ಸತ್ಸಂಗ ಟ್ರಸ್ಟ್, ರಾಜಾರಾಮ ಮೋಹನ ರಾಯ್ ರಸ್ತೆಯಲ್ಲಿರುವ ರಮಣಶ್ರೀ ಗ್ರೂಪ್, ಮೈಸೂರಿನ ಕುವೆಂಪುನಗರದ ರಮಣ ಜ್ಞಾನ ಕೇಂದ್ರ, ಬೆಳಗಾಂವಿಯ ರಮಣ ಮಹರ್ಷಿ ಸತ್ಸಂಗ ಟ್ರಸ್ಟ್-ಇವು ಮುಖ್ಯ ಕೇಂದ್ರಗಳು.

ರಮಣ ಮಹರ್ಷಿಗಳನ್ನು ಕುರಿತಂತೆ ಅನೇಕ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಅವುಗಳಲ್ಲಿ ರಮಣಗೀತಾ, ರಮಣಪ್ರಭ, ರಮಣತಾತ, ರಮಣ ಮಹರ್ಷಿ ಮತ್ತು ಅವರ ಸಂದೇಶ, ಆತ್ಮದ ಅನ್ವೇಷಣೆ-ರಮಣ ಮಾರ್ಗ, ರಮಣರ ಸನ್ನಿಧಿಯಲ್ಲಿ ನಡೆದ ಘಟನೆಗಳ ವಿವರಣೆ, ರಮಣ ಮಹರ್ಷಿಗಳ ದೃಷ್ಟಾಂಟ ಕಥೆಗಳು, ಆತ್ಮ ಸಾಕ್ಷಾತ್ಕಾರ-ಈ ಮೊದಲಾದವುಗಳನ್ನು ಹೆಸರಿಸಬಹುದು.

ಭಗವದ್ಗೀತೆಯ `ಆತ್ಮನ್ಯೇವಾತ್ಮನಾ ತುಷ್ಟ ಎಂಬ ವಾಕ್ಯದಂತಿದ್ದ ರಮಣರು ಸದಾ ಆತ್ಮಾನಂದಲ್ಲಿಯೇ ಇರುತ್ತಿದ್ದರು. ದಿನನಿತ್ಯದ ಜೀವನದಲ್ಲಿ ಸಹಜವಾಗಿ, ಸಾಮಾನ್ಯವಾಗಿ ಇರುತ್ತಿದ್ದರು. ಆಶ್ರಮದ ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚುವುದರಿಂದ ಹಿಡಿದು ರುಬ್ಬುವುದು, ಬಡಿಸುವುದು, ಕಸಮುಸುರೆ ಕೆಲಸದವರೆಗೂ ಮಾಡುತ್ತಿದ್ದರು. ಇವರ ಎಡಮೊಣಕೈಯಲ್ಲಿ ಕಾಣಿಸಿಕೊಂಡ ಕ್ಯಾನ್ಸರ್ ಗಂಟಿನಿಂದಾಗಿ ಇವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆಗ ಅರಿವಳಿಕೆಯ ಸಹಾಯವಿಲ್ಲದೆ, ದೇಹಭಾಗವನ್ನು ಇಲ್ಲದಾಗಿಸಿಕೊಂಡ ಸ್ವಾಮಿಗಳೀಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರು. ಸ್ವಲ್ಪಕಾಲದ ಅನಂತರ ಮತ್ತೆ ಅದೇ ಸ್ಥಳದಲ್ಲಿ ಕಾಣಿಸಿಕೊಂಡ ಗಂಟು ರೇಡಿಯಂ ಚಿಕಿತ್ಸೆಗೂ ಬಗ್ಗದೆ, ನಾಲ್ಕು ಬಾರಿ ನಡೆದ ಶಸ್ತ್ರಚಿಕೆತ್ಸೆ ವಿಫಲವಾಗಿ ರಮಣರು ತಮ್ಮ 71 ನೆಯ ವಯಸ್ಸಿನಲ್ಲಿ 1950 ಏಪ್ರಿಲ್ 14 ರಂದು ನಿಧನರಾದರು. (ಟಿ.ಎಂ.ಎಸ್.)