ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಧೆ

ವಿಕಿಸೋರ್ಸ್ದಿಂದ

ಜ್ಞಾಕೃಷ್ಣನ ಪ್ರಿಯ ಸಖಿ. ಈಕೆಯ ತಂದೆ ವೃಷಭಾನು, ತಾಯಿ ಕಳಾವತಿ. ಕೃಷ್ಣನನ್ನು ಭಕ್ತಿಯಿಂದ ಒಲಿಸಿಕೊಂಡ ಇವಳ ಹುಟ್ಟಿನ ಬಗ್ಗೆ ಹಲವು ಕಥೆಗಳಿವೆ. ಕೃಷ್ಣನ ಮತ್ತು ಈಕೆಯ ಸಂಬಂಧವನ್ನು ಭಕ್ತಿಪರಾಕಾಷ್ಠತೆಯ ಪವಿತ್ರ ಸಂಬಂಧವೆಂದು ಪುರಾಣಗಳಲ್ಲಿ ನಿರೂಪಿಸಲಾಗಿದೆ. ಅಯಾನ ಎಂಬಾತನೊಡನೆ ಮದುವೆಯಾದ ರಾಧೆಯು ಕೃಷ್ಣನೊಂದಿಗೆ ಬೆಳೆಸಿದ ಸಂಬಂಧ ನೈತಿಕವೇ ಅನೈತಿಕವೇ ಎಂಬ ಜಿಜ್ಞಾಸೆ ಎಂದಿನಿಂದಲೂ ನಡೆದಿದೆ. ಒಂದು ಪುರಾಣದ ಪ್ರಕಾರ ರಾಧೆ ಪೂರ್ವಜನ್ಮದಲ್ಲಿ ಸುಗಣಿ ಎಂಬ ರಾಮನ ದಾಸಿಯಾಗಿದ್ದಳು. ಆಗ ಶ್ರೀರಾಮನ ಬಾಯ್ದಂಬುಲಕ್ಕೆ ಕೈನೀಡಿದುದರಿಂದ ಮೆಚ್ಚಿದ ರಾಮ ಒಂದು ವರ ಕೇಳು ಎಂದ. ಆಗ ಆಕೆ ರಾಮನ ಅಂಗಸುಖವನ್ನು ಅಪೇಕ್ಷಿಸಿದಳು. ಮುಂದಿನ ಜನ್ಮದಲ್ಲಿ ನೀನು ರಾಧೆಯಾಗಿ ಹುಟ್ಟು, ನಾನು ಕೃಷ್ಣನಾಗಿ ನಿನ್ನನ್ನು ಸಂತೋಷಪಡಿಸುತ್ತೇನೆ ಎಂದು ರಾಮ ಹೇಳಿದ. ಬ್ರಹ್ಮವೈವರ್ತ ಪುರಾಣದಲ್ಲಿ ರಾಧೆ ದೇವಿಯ ಸ್ಥಾನದಲ್ಲಿದ್ದಾಳೆ. ಈ ಪುರಾಣದ ಪ್ರಕಾರ ಕೃಷ್ಣ ತಾನೇ ಇಬ್ಬಾಗವಾಗಿ ಒಂದು ಭಾಗ ಹೆಣ್ಣಾಗಿಯೂ ಮತ್ತೊಂದು ಗಂಡಾಗಿಯೂ ರೂಪಗೊಂಡು ಬಹಳ ವರ್ಷಕಾಲ ದಾಂಪತ್ಯ ನಡೆಸಿದ. ಹೆಣ್ಣಿನ ದೇಹದಿಂದ ಬಂದ ಬೆವರು ಗಾಳಿಯಾಗಿ, ಸಮುದ್ರವಾಗಿ ಸೃಷ್ಟಿಯಾಯಿತು. ಆಕೆ ಒಂದು ಚಿನ್ನದ ಮೊಟ್ಟೆಯಿಟ್ಟಳು; ಇದೇ ಬ್ರಹ್ಮಾಂಡ. ಬಹಳ ವರ್ಷಗಳ ಕಾಲ ಇದು ನೀರಿನಲ್ಲಿ ತೇಲುತ್ತಿತ್ತು. ಅನಂತರ ಮೊಟ್ಟೆ ಒಡೆದು ಅದರಿಂದ ವಿಷ್ಣು ಹೊರಬಂದ. ಹೀಗಾಗಿ ಈಕೆ ವಿಷ್ಣುವಿನ ತಾಯಿ(ಮಹಾವಿಷ್ಣುಮಾತೃ, ಮಹಾವಿಷ್ಣುಧಾತೃ). ಪ್ರಪಂಚಕ್ಕೆ ತಾಯಿ (ಜಗನ್ಮಾತೃ, ಜಗದಾಂಬಿಕೆ) ಮತ್ತು ಎಲ್ಲರ ತಾಯಿ(ಸರ್ವಮಾತೃ) ಎಂದು ಖ್ಯಾತಳಾಗಿದ್ದಾಳೆ. ಈ ಪುರಾಣದ ಪ್ರಕಾರ ರಾಧಾಕೃಷ್ಣ ಗಂಡ-ಹೆಂಡತಿ ಅಥವಾ ದೇವ ಮತ್ತು ದೇವಿಯಾಗಿದ್ದಾರೆ. ವೃಷಭಾನು ಯಜ್ಞವೊಂದಕ್ಕೆ ಭೂಮಿಯನ್ನು ಸಜ್ಜುಗೊಳಿಸುತ್ತಿದ್ದಾಗ ರಾಧೆ ಭೂಮಿಕನ್ಯೆಯಾಗಿ ದೊರೆತಳು. ಮಹಾವಿಷ್ಣು ಕೃಷ್ಣನಾಗಿ ಹುಟ್ಟುವಾಗ ತನ್ನ ಸೇವಕರನ್ನು ಭೂಮಿಯ ಮೇಲೆ ಹುಟ್ಟುವಂತೆ ಹೇಳಿದ. ಆಗ ಕೃಷ್ಣನ ಪ್ರೀತಿಪಾತ್ರಳಾದ ರಾಧೆ ಭಾದ್ರಪದ ಮಾಸದ, ಜ್ಯೇಷ್ಠನಕ್ಷತ್ರದಲ್ಲಿ ಶುಕ್ಲಾಷ್ಟಮಿಯ ಬೆಳಗ್ಗೆ ಗೋಕುಲದಲ್ಲಿ ಹುಟ್ಟಿದಳು. ಹೀಗೆ ವಿವಿಧ ರೀತಿಯ ವ್ಯಾಖ್ಯಾನಗಳು ಈಕೆಯ ಹುಟ್ಟಿನ ಬಗ್ಗೆ ದೊರೆಯುತ್ತವೆ.

ಭಾಗವತದ ಪ್ರಕಾರ ಕೃಷ್ಣನೊಂದಿಗೆ ಸ್ನೇಹದಿಂದ ಇದ್ದ ಗೋಕುಲದ ಸ್ತ್ರೀಯರಲ್ಲಿ ರಾಧೆಯೂ ಒಬ್ಬಳು. ಹನ್ನೆರಡನೆಯ ಶತಮಾನದ ಕವಿ ಜಯದೇವ ತನ್ನ ಗೀತಗೋವಿಂದದಲ್ಲಿ ರಾಧಕೃಷ್ಣರ ಸಂಬಂಧವನ್ನು ವಿಶೇಷವಾಗಿ ಚಿತ್ರಿಸಿದ್ದಾನೆ. ಈ ಕಾವ್ಯದ ಅನಂತರದಲ್ಲಿ ಇವರಿಬ್ಬರ ವಿಚಾರ ಹೆಚ್ಚು ಜನಪ್ರಿಯವಾಯಿತೆಂದು ಕಾಣುತ್ತದೆ. ಕೃಷ್ಣ ಹದಿಹರೆಯದವನಾಗಿದ್ದಾಗ ಆತನಿಗೆ ರಾಧೆಯೊಂದಿಗೆ ಸಂಬಂಧ ಬೆಳೆಯುತ್ತದೆ. ಗೀತಗೋವಿಂದದಲ್ಲಿ ರಾಧೆಯ ಸ್ವಂತವಿಚಾರಗಳು ತಿಳಿದುಬರುವುದಿಲ್ಲ. ಆದರೆ ಈಕೆಗೆ ಬೇರೊಬ್ಬನೊಂದಿಗೆ ಮದುವೆಯಾಗಿತ್ತು ಎಂಬ ವಿಚಾರ ತಿಳಿಯುತ್ತದೆ.

ವಿದ್ಯಾಪತಿ, ಚಂಡಿದಾಸರ ಕಾವ್ಯಗಳಲ್ಲಿ ರಾಧೆಗೆ ಮದುವೆಯಾಗಿದ್ದ, ಕೃಷ್ಣನೊಂದಿಗೆ ಸಂಬಂಧ ಹೊಂದಿದ್ದ ವಿವರಗಳು ದೊರೆಯುತ್ತವೆ. ವಿದ್ಯಾಪತಿ ಚಿತ್ರಿಸಿರುವ ರಾಧೆ ಶ್ರೀಮಂತಳು, ಗೌರವಸ್ಥ ಕುಟುಂಬಕ್ಕೆ ಸೇರಿದವಳು; ಕೃಷ್ಣ ಸಾಮಾನ್ಯ ಗೋಕುಲವಾಸಿ. ಕೃಷ್ಣನ ಪ್ರೀತಿಗಾಗಿ ಈಕೆ ತನ್ನ ಅಂತಸ್ತು ಮತ್ತು ಗೌರವಗಳನ್ನು ತ್ಯಜಿಸುವಳು. ಚಂಡಿದಾಸನ ಪದ್ಯಗಳಲ್ಲಿ ಈಕೆ ಅಯಾನ ಎಂಬಾತನ ಹೆಂಡತಿಯಾಗಿದ್ದಳು; ಕೃಷ್ಣನೊಂದಿಗೆ ಪ್ರೇಮದಲ್ಲಿ ತೊಡಗಿದ್ದಳು ಎಂಬ ವರ್ಣನೆ ಬರುತ್ತದೆ.

16ನೆಯ ಶತಮಾನದಲ್ಲಿ ಬಂಗಾಲದಲ್ಲಿ ವೈಷ್ಣವ ಪಂಥ, ಚೈತನ್ಯ ಪಂಥಗಳು ಪ್ರಾರಂಭವಾದವು. ಚೈತನ್ಯ ಪಂಥದ ಮುಖ್ಯವ್ಯಕ್ತಿ ಚೈತನ್ಯ. ಈತನ ಪದ್ಯಗಳಲ್ಲಿ ಭಕ್ತನೇ ರಾಧೆಯಾಗಿ ಕೃಷ್ಣನಲ್ಲಿ ತನ್ನನ್ನು ಅರ್ಪಿಸಿಕೊಳ್ಳುವನು. ಈ ತತ್ತ್ವದ ಪ್ರಕಾರ ಒಬ್ಬ ಭಕ್ತ ದೇವನಲ್ಲಿ ಇಡುವ ಭಕ್ತಿ ಮತ್ತು ಶ್ರದ್ಧೆ ವಿವಿಧ ರೀತಿಗಳದ್ದಾಗಿರುತ್ತದೆ. ಭಕ್ತನಿಗೆ ಭಗವಂತ ಪೋಷಕನಾಗಿ, ಗುರುವಾಗಿ ಮತ್ತು ಪ್ರೇಮಿಯಾಗಿ ಕಂಡುಬರುವನು. ಆದರೆ ಪ್ರೇಮಿಯಾಗಿ ಕಾಣುವ ಭಾವವೇ ಹೆಚ್ಚು ಆಪ್ತವಾದದ್ದು. ಹೀಗಾಗಿ ಚೈತನ್ಯ ಪಂಥದ ಧೋರಣೆಗಳ ಹಿನ್ನೆಲೆಯಲ್ಲಿ ರಚಿತವಾದ ಪದ್ಯ, ಸಾಹಿತ್ಯ ಎಲ್ಲದರಲ್ಲೂ ರಾಧೆಯ ಪಾತ್ರಮುಖ್ಯವಾಗಿ ಕಂಡು ಬರುತ್ತದೆ. ಈ ಪಂಥದಲ್ಲಿ ರಾಧೆ ಭಕ್ತಿಗೆ ಪ್ರತಿಮೆಯಾಗಿದ್ದಾಳೆ. ಮಹಾಭಾರತದಲ್ಲಿ ಬರುವ ಕರ್ಣನ ಸಾಕುತಾಯಿಯ ಹೆಸರೂ ರಾಧೆ. ಕರ್ಣನನ್ನು ರಾಧೇಯಾ ಎಂದು ಕರೆಯುವುದುಂಟು. ಈಕೆಯ ಬಗ್ಗೆ ಹೆಚ್ಚಿನ ವಿವರಗಳು ದೊರೆಯುವುದಿಲ್ಲ.