ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಮಕೃಷ್ಣ ಪರಮಹಂಸ

ವಿಕಿಸೋರ್ಸ್ದಿಂದ

ರಾಮಕೃಷ್ಣ ಪರಮಹಂಸ - 1836-86. ಭಾರತದ ಮಹಾe್ಞÁನಿ. ಸರ್ವಧರ್ಮ ಸಮನ್ವಯ ಸಾಧಕ. ಬಂಗಾಲದ ಹೂಗ್ಲಿ ಜಿಲ್ಲೆಯ ಕಾಮಾರಪುಕುರ (ಕಮರ್‍ಪುಕುರ್) ಎಂಬ ಸಣ್ಣಹಳ್ಳಿಯಲ್ಲಿ 1836 ಫೆಬ್ರವರಿ 18ರಂದು ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದಲ್ಲಿ ಜನಿಸಿದರು. ತಂದೆ ಖುದಿರಾಮ ಚಟ್ಟೋಪಾಧ್ಯಾಯ. ತಾಯಿ ಚಂದ್ರಮಣಿದೇವಿ. ಈ ದಂಪತಿಗಳಿಗೆ ರಾಮಕುಮಾರ, ರಾಮೇಶ್ವರ, ಕಾತ್ಯಾಯಿನಿ, ಗದಾಧರ ಮತ್ತು ಸರ್ವಮಂಗಳೆ ಎಂಬ ಐವರು ಮಕ್ಕಳಿದ್ದರು. ಗದಾಧರ ಚಟ್ಟೋಪಾಧ್ಯಾರು ಎಂಬುದು ರಾಮಕೃಷ್ಣರ ಪೂರ್ವದ ಪೂರ್ಣ ಹೆಸರು. ಶ್ರೀರಾಮ ಇವರ ಮನೆದೇವರು. ಆದಕಾರಣ ಇವರ ತಂದೆ ತಮ್ಮ ಗಂಡುಮಕ್ಕಳಿಗೆ ರಾಮನಾಮ ಸೇರಿಸಿ ಕರೆಯುತ್ತಿದ್ದರು. ಹಾಗಾಗಿ ಗದಾಧರನನ್ನು ರಾಮಕೃಷ್ಣ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ಗದಾಧರ ಮುಂದೆ ರಾಮಕೃಷ್ಣರೆಂದೇ ಲೋಕವಿಖ್ಯಾತರಾದರು.

ಐದುವರ್ಷದ ಗದಾಧರನನ್ನು ಕಾಮಾರಪುಕುರದ ಶಾಲೆಗೆ ಹಾಕಿದರು. ನೆರೆ ಹೊರೆಯುವರು ಇವನ ಜಾಣ್ಮೆಗೆ ಮೆಚ್ಚಿ ಪುರಾಣಕಥೆ, ಸ್ತೋತ್ರಪಾಠಗಳನ್ನು ಹೇಳಿಕೊಡುತ್ತಿದ್ದರು. ಅದನ್ನು ಬಹುಬೇಗ ಕಲಿತುಕೊಳ್ಳುತ್ತಿದ್ದ. ಬಂಗಾಲಿಯಲ್ಲಿ ಓದುಬರೆಹ ಕಲಿತಿದ್ದರೂ ಇಂಗ್ಲಿಷ್, ಸಂಸ್ಕøತಗಳ ಪರಿಚಯವಿತ್ತು. ಗಣಿತ ಮಾತ್ರ ಇವನ ತಲೆಗೆ ಹತ್ತಲಿಲ್ಲವೆನ್ನುವರು. ಅಭಿನಯಕಲೆ, ಶಿಲ್ಪಕಲೆಯಲ್ಲೂ ಗದಾಧರನಿಗೆ ಪರಿಶ್ರಮವಿದ್ದು ಮಾವಿನ ತೋಪಿನಲ್ಲಿ ಬಯಲಾಟಗಳನ್ನಾಡುವುದು, ದೇವದೇವಿಯರ ಮಣ್ಣುಗೊಂಬೆ ಮಾಡುವುದು ಇವೆ ಮೊದಲಾದ ಆಟಗಳಿಂದ ತನ್ನ ಓರಿಗೆಯವರಿಗೆಲ್ಲ ಅಚ್ಚುಮೆಚ್ಚಿನವನಾಗಿದ್ದ. ಗದಾಧರ ಏಳು ವರ್ಷದವನಾಗಿದ್ದಾಗ ತಂದೆ ಖುದಿರಾಮ ತೀರಿಕೊಂಡರು. ಒಂಬತ್ತನೆಯ ವರ್ಷದಲ್ಲಿ ಗದಾಧರನಿಗೆ ಉಪನಯನವಾಯಿತು. ಇವನು ಹುಟ್ಟಿದ ದಿನದಿಂದಲೂ ಎತ್ತಿ ಆಡಿಸಿ ಸಲಹಿದ ಧನಿ ಎಂಬಾಕೆ ಉಪನಯನಕ್ಕೆ ತಾನೇ ಪ್ರಥಮ ಭಿಕ್ಷಾಮಾತೆಯಾಗಬೇಕೆಂದು ಗದಾಧರನನ್ನು ಕೇಳಿಕೊಂಡದ್ದಳು. ಆಕೆ ಶೂದ್ರ ಸ್ತ್ರೀಯಾಗಿದ್ದುದರಿಂದ ಅಣ್ಣ ರಾಮಕುಮಾರ ಸಮ್ಮತಿಸಲಿಲ್ಲ. ಗದಾಧರ ಹಠಹಿಡಿದಾಗ ಅಣ್ಣ ಸಮ್ಮತಿಸಿದ. ಧನಿ ಪ್ರಥಮ ಭಿಕ್ಷಾಮಾತೆಯಾಗಿ ತನ್ನ ಆಸೆಯನ್ನು ಪೂರೈಸಿಕೊಂಡಳು.

ಹಿರಿಯಣ್ಣ ರಾಮಕುಮಾರ ಸಂಸ್ಕøತದಲ್ಲಿ ಸಾಹಿತ್ಯ, ವ್ಯಾಕರಣ, ಸ್ಮøತಿ, ಶಾಸ್ತ್ರಗಳನ್ನು ಅಧ್ಯಯನಮಾಡಿ ಪಾಂಡಿತ್ಯಗಳಿಸಿದ್ದ, ಇವನ ಹೆಂಡತಿ ಒಂದು ಮಗುವನ್ನು ಹೆತ್ತು ತೀರಿಕೊಂಡಳು. ಸಂಸಾರ ದೊಡ್ಡದಾಯಿತು. ಎಲ್ಲರನ್ನು ಸಾಕಲು ಸಾಲವೂ ಆಯಿತು. ಮಿತ್ರರ ಸಲಹೆಯಂತೆ ರಾಮಕುಮಾರ ಸಂಸಾರ ನಿರ್ವಹಣೆಗಾಗಿ, ಕಲ್ಕತ್ತೆಗೆ ಹೋಗಿ ಒಂದು ಪಾಠಶಾಲೆ ತೆರೆದ. ಶಾಲೆಗೆ ಬರುವ ಹುಡುಗರ ಸಂಖ್ಯೆ ಹೆಚ್ಚಿ ಪಾಠಶಾಲೆ ಅಭಿವೃದ್ಧಿಹೊಂದಿತು. ಅಕ್ಷರ ವಿದ್ಯೆಯಲ್ಲಿ ಪ್ರೀತಿಹುಟ್ಟಿಸುವ ಆಕಾಂಕ್ಷೆಯಿಂದ ರಾಮಕುಮಾರ ಕಿರಿಯ ಗದಾಧರನನ್ನು ಕಲ್ಕತ್ತಕ್ಕೆ ಕರೆಸಿಕೊಂಡ. ಆದರೆ ಗದಾಧರನಿಗೆ ಅಕ್ಷರ ವಿದ್ಯೆಯ ಮೇಲೆ ಅಕ್ಕರೆ ಮೂಡಲಿಲ್ಲ. ವಿದ್ಯೆ ಕಲಿಯದೆ ಉದಾಸೀನ ಮಾಡಿದರೆ ಮುಂದೆ ನಿನ್ನ ಗತಿ ಏನು ಎಂದು ಗದರಿಸಿ ಕೇಳಿದ ಅಣ್ಣನಿಗೆ "ಮೂರು ಕಾಸಿನ ರೊಟ್ಟಿಕೊಟ್ಟು ಹೊಟ್ಟೆ ಹೊರೆಯುವ ವಿದ್ಯೆಯಿಂದ ನನಗಾಗಬೇಕಾದುದೇನು? ನನಗೆ ಬೇಕಾದುದು ಎದೆಗೆ ಕಾಂತಿಯನ್ನೂ ಬಗೆಗೆ ಶಾಂತಿಯನ್ನೂ ಕೊಡುವ ಬ್ರಹ್ಮವಿದ್ಯೆ" ಎಂದು ಗದಾಧರ ಹೇಳಿದನಂತೆ.

ರಾಯರಾಜಚಂದ್ರಹಾಸನೆಂಬ ಜಮೀನ್ದಾರನು ಸ್ವರ್ಗಸ್ಥನಾದ ಮೇಲೆ ಆತನ ಧರ್ಮಪತ್ನಿ ರಾಣಿ ರಾಸಮಣಿ ದಕ್ಷಿಣೇಶ್ವರದಲ್ಲಿ ಕಾಳಿಕಾದೇವಾಲಯವನ್ನು ಕಟ್ಟಿಸಿದಳು. ರಾಸಮಣಿ ಬೆಸ್ತರವಳಾದರೂ ಶ್ರೀವಂತಿಕೆ, ಔದಾರ್ಯ ಮತ್ತು ಈಶ್ವರ ಭಕ್ತಿಗಳಿಂದ ಆಕೆಗೆ ರಾಣಿ ಎಂಬ ಬಿರುದು ಸಿಕ್ಕಿತ್ತು. ಆದರೆ ಶೂದ್ರಳು ಕಟ್ಟಿಸಿದ ಕಾಳಿಕಾದೇವಾಲಯಕ್ಕೆ ಬ್ರಾಹ್ಮಣ ಪೂಜಾರಿ ದೊರಕುವುದು ಕಷ್ಟವಾಯಿತು. ಕೊನೆಗೆ ರಾಮಕುಮಾರ ಕಾಳಿದೇವಿಯ ಪ್ರತಿಷ್ಠಾಪನೆಯ ಪುಣ್ಯಕಾರ್ಯಕ್ಕೆ ಸಮ್ಮತಿಸಿ ಆ ದೇವಿಯ ಅರ್ಚಕನಾಗಿ ಅಲ್ಲಿಯೇ ಉಳಿದ. ಗದಾಧರನೂ ಅಣ್ಣನೊಡನೆ ಉಳಿಯಬೇಕಾಯಿತು. ಮುಂದೆ ಗದಾಧರನ ಸೋದರಮಾವನೂ ರಾಸಮಣಿಯ ಅಳಿಯನಾದ ಮಥುರನಾಥರ ಬಾಲ್ಯಸ್ನೇಹಿತನೂ ಆದ ಹೃದಯ ರಾಮ ಚಟ್ಟೋಪಾಧ್ಯಾಯನ ಒತ್ತಾಸೆಯಿಂದ ಕಾಳಿಕದೇವಾಲಯದ ಸಮುಚ್ಚಯದಲ್ಲೇ ಇದ್ದ ರಾಧಾಗೋವಿಂದ ಮಂದಿರದ ಶ್ರೀಕೃಷ್ಣನ ಪೂಜಾ ಭಾರ ಗದಾಧರನ ಮೇಲೆ ಬಿತ್ತು.

ರಾಮಕುಮಾರ ಮಹಾಶಕ್ತಿಸಾಧಕನಾದ ಕೇನರಾಮಭಟ್ಟಾಚಾರ್ಯನಿಂದ ಗದಾಧರನಿಗೆ ಮಂತ್ರೋಪದೇಶ ಮಾಡಿಸಿದ. ರಾಮಕುಮಾರನಿಗೆ ಆರೋಗ್ಯವಿರದೆ ವಿಶ್ರಾಂತಿಗಾಗಿ ಕಾಮಾರಪುಕರಕ್ಕೆ ಹೋಗಿ ಅಲ್ಲೆ ಕಾಲನಾದ. ಅಣ್ಣನ ಮರಣ ವಾರ್ತೆ ಗದಾಧರನ ಎದೆನಡುಗಿಸಿತು. ತಂದೆ ಸತ್ತಮೇಲೆ ಅಣ್ಣನೇ ಸರ್ವಸ್ವವಾಗಿದ್ದ. ಗದಾಧರನಿಗೆ ಲೋಕದ ನಶ್ವರತೆಯಲ್ಲಿದ್ದ ನಂಬುಗೆ ದೃಢವಾಯಿತು; ಹಾಗೆಯೇ ಈಶ್ವರಪರವಾದ ಹಂಬಲ, ಚಿಂತೆ ಅಧಿಕವಾಯಿತು. ವಿಕ್ಷುಬ್ಧ ಸಂಸಾರ ಸಮುದ್ರವನ್ನು ದಾಟಬೇಕೆಂದು ಮಹಾಯಾತ್ರೆಗೆ ಸಿದ್ಧನಾದ. ಕೆಲವು ದಿನಗಳ ಅನಂತರ ಕಾಳಿಕಾದೇವಿಯ ಅರ್ಚಕನಾಗಿ ಮುಂದುವರೆಯುವಂತೆ ಇವನನ್ನು ಒಪ್ಪಿಸಲಾಯಿತು. 1855ರಲ್ಲಿ ದಕ್ಷಿಣೇಶ್ವರದ ಭವತಾರಿಣಿ ಅರ್ಚಕರಾಗಿನಿಂತ ಮೇಲೆ ರಾಮಕೃಷ್ಣರ ಆಧ್ಯಾತ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಸದಾ ವಿಗ್ರಹದ ಎದುರು ಧ್ಯಾನಸ್ಥರಾಗಿ ಕುಳಿತಿರುತ್ತಿದ್ದ ಇವರು ಹಗಲು ರಾತ್ರಿ ಎನ್ನದೆ ಧ್ಯಾನಮಾಡಲು ಪಂಚವಟಿಗೆ ಹೋಗುತ್ತಿದ್ದರು. ಸಂಪೂರ್ಣ ನಗ್ನರಾಗಿ ನಿಷ್ಪಂದ ಧ್ಯಾನಮೂರ್ತಿಯಾಗಿ ಕುಳಿತಿರುತ್ತಿದ್ದ ಗದಾಧರರನ್ನು ಕದ್ದು ನೋಡಿದ ಹೃದಯರಾಮನು ಮಾವನಿಗೆ ಹುಚ್ಚು ಹಿಡಿದಿರಬಹುದೆಂದು ನಿರ್ಧರಿಸಿದ. ಜಗನ್ಮಾತೆಯ ದರ್ಶನೋತ್ಸುಕತೆಯಿಂದ ಗದಾಧರರು ನಿದ್ರಾಹಾರಗಳನ್ನು ತ್ಯಜಿಸಿದರು. ಹೆತ್ತವ್ವನನ್ನು ಕಾಣದ ಕಂದನಂತೆ ರೋದಿಸುತ್ತ ದೇವಿಯ ದರ್ಶನಾ ಕಾಂಕ್ಷೆಗಾಗಿ ಕಣ್ಣೀರು ಸುರಿಸುತ್ತಿದ್ದರು. ದೇವರ ಹುಚ್ಚು ಹೆಚ್ಚಿದಂತೆ ದೇವರ ಪೂಜೆಯನ್ನು ಮಾಡುವ ಹುಚ್ಚೂ ಹೆಚ್ಚಿತು. ಗದಾಧರರು ಒಂದು ದಿನ ದರ್ಶನಾಕಾಂಕ್ಷೆಯ ಉನ್ಮಾದ ಮಿತಿಮೀರಿ ಮೃತ್ಯು ಅಥವಾ ಸತ್ಯದರ್ಶನ ಎಂದು ಸಂಕಲ್ಪಮಾಡಿ ದೇವಿಯ ಖಡ್ಗಕ್ಕೆ ಕೈಹಾಕಲು, ಹಠಾತ್ತಾಗಿ ಎಲ್ಲವೂ ಎಲ್ಲಿಯೋ ಕಣ್ಮರೆಯಾದಂತೆ, ಅನಂತ ಜ್ಯೋತಿಯ ಸಮುದ್ರ ಇವರನ್ನು ನುಂಗಿನೊಣೆದಂತೆ ಅತೀಂದ್ರಿಯ ಅನುಭವವಾಗಿ ಮೈಮರೆತು ಉರುಳಿಬಿದ್ದರು. ತಮಗಾದ ಈ ಅನುಭವವನ್ನು ರಾಮಕೃಷ್ಣರೇ ಅನಂತರ ಹೇಳಿಕೊಂಡಿದ್ದಾರೆ.

ಶಾಸ್ತ್ರಗಳು ಸಾರುವಂತೆ ಶಾಂತಭಾವ, ದಾಸ್ಯಭಾವ, ಸಖ್ಯಭಾವ, ವಾತ್ಸಲ್ಯಭಾವ ಮತ್ತು ಮಧುರಭಾವ ಎಂಬ ಐದು ಬಗೆಯ ಭಾವಸಾಧನೆಗಳನ್ನು ರಾಮಕೃಷ್ಣರು ಸಾಧಿಸಿದರು. ಇವರು ಸಾಧಿಸಿದ ದಾಸ್ಯಭಾವದ ಪರಿ ಹೀಗಿದೆ; ರಘುವೀರದು ರಾಮಕೃಷ್ಣರ ಮನೆದೇವರು. ಅವನಲ್ಲಿ ಮಹಾಭಕ್ತಿಯನ್ನಿಟ್ಟು, ಅವನನ್ನು ಹೊಂದಬೇಕಾದರೆ ಮಹಾವೀರ ಹನುಮಂತನಾಗಬೇಕೆಂದು ನಿರ್ಧರಿಸಿ, ಹನುಮಂತನ ದಾಸ್ಯಭಾವವನ್ನು ತಮ್ಮೊಳಗೆ ಆರೋಪಿಕೊಂಡರು. ಪ್ರತಿದಿನ ಹನುಮಂತನಂತೆ ವರ್ತಿಸಿತೊಡಗಿದರು. ಮರಗಳನ್ನೇರಿ ಕುಳಿತು "ರಘುವೀರ! ರಘುವೀರ ! " ಎಂದು ನೆನೆಯುತ್ತ ಬಹಳ ಹೊತ್ತನ್ನು ಕಳೆಯುತ್ತಿದ್ದರು. ಇವರು ಪಂಚವಟಿಯಲ್ಲಿ ಕುಳಿತಿರುವಾಗ ಸೀತಾದೇವಿಯ ಪಾದಗಳೆಡೆ ಹನುಮಂತ ಕೈಮುಗಿದು ಕುಳಿತಿರುವಂತೆ ಅನುಭವ ಪಡೆದರು. ಹೀಗೆ ರಾಮಕೃಷ್ಣರು ತದೇಕ ಧ್ಯಾನಸ್ಥರಾಗಿರುತ್ತಿದ್ದರಿಂದ ಕಾಳಿಕಾದೇವಿಯ ಪೂಜೆಯನ್ನು ನಿತ್ಯಪದ್ಧತಿಯಂತೆ ಮಾಡಲು ಆಗುತ್ತಿರಲಿಲ್ಲ. ಕಠಿಣ ಸಾಧನೆಗಳಿಂದ ಬರುಬರುತ್ತ ಇವರ ದೇಹ ಕುಶವಾಗತೊಡಗಿತು. ಯಾವುದೋ ಜಾಡ್ಯ, ಕಾಡುತ್ತಿರಬಹುದೆಂದು ಮಥುರನಾಥ ಕಲ್ಕತ್ತದಿಂದ ವೈದ್ಯರನ್ನು ಕರೆಸಿ ಔಷಧೋಪಚಾರ ಮಾಡಿಸಿದ.

ತಾಯಿ ಚಂದ್ರ ಮಣಿದೇವಿ ರಾಮಕೃಷ್ಣರಿಗೆ ಹುಚ್ಚು ಬಿಡಿಸುವ ನೆಪದಲ್ಲಿ ಕಾಮಾರಪುಕರಕ್ಕೆ ಕರೆಸಿಕೊಂಡು ಮದುವೆಮಾಡಲು ನಿಶ್ಚಯಿಸಿದರು. ಜಯರಾಮ ಬಾಟಿಯದ ರಾಮಚಂದ್ರ ಮುಖ್ಯೋಪಾಧ್ಯಾಯರ ಮಗಳು ಐದು ವರ್ಷದ ಶಾರದಾ ಮಣಿದೇವಿಯೊಂದಿಗೆ ಇಪ್ಪತ್ಮೂರು ವರ್ಷದ ರಾಮಕೃಷ್ಣರ ವಿವಾಹವಾಯಿತು. ಹೆಣ್ಣಿನ ಮೈಮೇಲಿದ್ದ ಒಡವೆಗಳು ಕಣ್ಮರೆಯಾದುದನ್ನು ಕಂಡ ವಧುವಿನ ತಂದೆ ಕಡೆಯವರು ಹುಡುಗಿಯನ್ನೇ ಎತ್ತಿಕೊಂಡು ತಮ್ಮ ಮನೆಗೆ ಹೊರಟಹೋದರಂತೆ ನನ್ನ ಹೆಂಡತಿಯನ್ನು ಅವರು ಹೊತ್ತುಕೊಂಡು ಹೋದರೆ ಏನಾಯಿತು. ಆಗಿರುವ ಮದುವೆಯನ್ನು ರದ್ದು ಮಾಡಲಾಗುವುದೇ ಎಂದು ರಾಮಕೃಷ್ಣರು ತಾಯಿಗೆ ತಮಾಷೆ ಮಾಡಿ ಸಮಾಧಾನಪಡಿಸಿದರಂತೆ, ಇದಾದಮೇಲೆ ಒಂದೂವರೆ ವರ್ಷ ಕಾಮಾರಪುಕರದಲ್ಲಿ ಇದ್ದ ರಾಮಕೃಷ್ಣರು ಅನಂತರ ದಕ್ಷಿಣೇಶ್ವರಕ್ಕೆ ಬಂದರು.

1861ರಲ್ಲಿ ರಾಣಿ ರಾಸಮಣಿ ಸ್ವರ್ಗಸ್ಥಳಾದಳು. ಅವಳ ಅಳಿಯನಾದ ಮಥುರ ನಾಥನು ತನ್ನ ಸಂಪತ್ತನ್ನು ರಾಮಕೃಷ್ಣರ ಸಿದ್ಧಿಸಾಧನೆಗೆ ಸದ್ವಿನಿಯೋಗ ಮಾಡಿದ. ಎರಡು ವರ್ಷಗಳು ಕಳೆದುಹೋದವು. ಒಂದು ದಿನ ಪ್ರಾತಃಕಾಲ ಯಶೋಹರ ಜಿಲ್ಲೆಯ ಕುಲೀನ ಬ್ರಾಹಣ ವಂಶದ ಭೈರವಿ ಬ್ರಾಹಣಿ ಎಂಬ ನಲವತ್ತು ವರ್ಷದ ಸಂನ್ಯಾಸಿನಿ ರಾಮಕೃಷ್ಣರ ಬಳಿಗೆ ಬಂದಳು. ಆಕೆ ವಿದ್ವಾಂಸೆ, ವೈಷ್ಣವ ಸಂಪ್ರದಾಯಕ್ಕೆ ಸೇರಿದವಳು. ಭಕ್ತಿಶಾಸ್ತ್ರದಲ್ಲಿ ಅತಿಶಯವಾದ ಪಾಂಡಿತ್ಯ ಸಂಪಾದಿಸಿದ್ದಳು. ರಾಮಕೃಷ್ಣರ ಭಾವಾವೇಶದ ಮೈಉರಿಯನ್ನು ಗಂಧಲೇಪನದಿಂದ ಉಪಚರಿಸಿ, ಇವರಿಗೆ ವೈಷ್ಣವ ಮತ್ತು ತಾಂತ್ರಿಕ ಸಾಧನೆಗಳನ್ನು ಉಪದೇಶಿಸಿದಳು. ಸಂಪೂರ್ಣ ಇಂದ್ರಿಯ ನಿಗ್ರಹವೇ ತಾಂತ್ರಿಕ ಸಾಧನೆಯ ಪರಮಗುರಿ. ಆತ್ಮನನ್ನು ಬ್ರಹ್ಮದಲ್ಲಿ ಐಕ್ಯಗೊಳಿಸುವುದೇ ಮೋಕ್ಷ. ಇದರಿಂದ ಅಣಿಮಾದಿ ಅಷ್ಟಸಿದ್ಧಿಗಳೂ ರಾಮಕೃಷ್ಣರ ಸ್ವಾಧೀನವಾದುವು.

ಶ್ರೀರಾಮಚಂದ್ರನ ಪರಮಭಕ್ತ ಜಟಾಧಾರಿ ಸಂನ್ಯಾಸಿಯೊಬ್ಬನ ಬಳಿ ಬಾಲರಾಮಚಂದ್ರನ ವಿಗ್ರಹವಿತ್ತು. ಅದನ್ನು `ರಾಮಲಾಲ(ಬಾಲರಾಮ) ಎಂದು ಕೊಂಡಾಡುತ್ತ ಆತ ಪೂಜಿಸುತ್ತಿದ್ದ. ಇಂಥ ವಾತ್ಸಲ್ಯಭಾವಸಾಧಕನಾದ ಜಟಾಧಾರಿಗೆ ಶಿಶುರಾಮ ಪ್ರತ್ಯಕ್ಷನಾಗಿದ್ದನಂತೆ. ಅವನು ದಕ್ಷಿಣೇಶ್ವರಕ್ಕೆ ಬಂದಾಗ (1864) ರಾಮಕೃಷ್ಣರು ಸಖ್ಯ ಬೆಳೆಸಿ ರಾಮಲಾಲನ ದರ್ಶನಾನುಭವ ಪಡೆದರಂತೆ. ಜಟಾಧಾರಿ ದಕ್ಷಿಣೇಶ್ವರದಿಂದ ಹೊರಡುವಾಗ `ರಾಮಲಾಲ ವಿಗ್ರಹವನ್ನು ರಾಮಕೃಷ್ಣರಿಗೆ ಕೊಟ್ಟು ಹೋದನಂತೆ.

ನಿರ್ಗುಣ ನಿರಾಕಾರನಾದ ಬ್ರಹ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡ ಮಹಾಅದ್ವೈತ ಸಂನ್ಯಾಸಿ ತೋತಾಪುರಿ 1865ರಲ್ಲಿ ದಕ್ಷಿಣೇಶ್ವರಕ್ಕೆ ಬಂದು ರಾಮಕೃಷ್ಣರನ್ನು ಕಂಡು ಅದ್ವೈತವನ್ನು ಬೋಧಿಸಲೆ ಎಂದು ಕೇಳಿದನಂತೆ. ತನಗೆ ಮದುವೆಯಾಗಿದೆಯೆಂದು ರಾಮಕೃಷ್ಣ ಹೇಳಿದಾಗ ತೋತಾಪುರಿ ಚಿಂತೆಯಿಲ್ಲ ಎಂದು ಹೇಳಿದ. ರಾಮಕೃಷ್ಣರು ಜಗನ್ಮಾತೆಯ ಅಪ್ಪಣೆ ಪಡೆದು, ಪಂಚವಟಿಯ ಸಾದನಿನಾ ಕುಟೀರದಲ್ಲಿ ಹೋಮಾಗ್ನಿಯ ಮುಂದೆ ಕುಳಿತು, ಜುಟ್ಟು ಜನಿವಾರಗಳನ್ನು ಅಗ್ನಿಗೆ ಸಮರ್ಪಿಸಿ, ಅದ್ವೈತ ಮಂತ್ರೋಪದೇಶದೊಂದಿಗೆ ಕೌಪೀನ ಕಾವಿಗಳನ್ನು ಸ್ವೀಕರಿಸಿ ಸಂನ್ಯಾಸಿಯಾದರು. `ಮಾಯಾ ಪ್ರಪಂಚದಲ್ಲಿರುವುದೆಲ್ಲ ಅಸತ್ಯ, ಅದನ್ನು ತ್ಯಜಿಸು, e್ಞÁನಗದೆಯಿಂದ ನಾಮರೂಪಗಳ ಸೆರೆಮನೆಯನ್ನು ಹೊಡೆದು ಸಿಂಹದಂತೆ ಹೊರಕ್ಕೆ ಬಾ, ಪರಬ್ರಹ್ಮನಲ್ಲಿ ನೆಲೆಸಿ ಸ್ಥಿರನಾಗು, ಸಮಾಧಿಯಲ್ಲಿರುವಾಗ ನಾಮರೂಪ ಜಗತ್ತು ಮಾಯವಾಗುವುದು, ಸಚ್ಚಿದಾನಂದವಾದ ಕೇವಲ ಬ್ರಹ್ಮವೇ ನೀನು, ತತ್ತ್ವಮಸಿ. ಎಂದು ಉಪದೇಶಿಸಿದ ಮಂತ್ರಕ್ಕೆ ರಾಮಕೃಷ್ಣರ ದೇಹ ನಿಷ್ಪಂದವಾಗಿ ಮೂರುದಿನಗಳವರೆಗೆ ಶಿಲಾಮೂರ್ತಿಯಂತೆ ಇದ್ದರಂತೆ. ತೋತಾಪುರಿ ಶಿವೋಹಂ ಮಂತ್ರ ಹೇಳಿ ದ್ವೈತಸ್ಥಿತಿಗೆ ತಂದನಂತೆ. ಅಂದಿನಿಂದ ರಾಮಕೃಷ್ಣರು ಅದ್ವೈತ ಸಾಧಕರಾದರು. ಇದರಿಂದ ಇವರ ದೃಷ್ಟಿ ಹೆಚ್ಚು ಉದಾರವಾಯಿತು. ಸಮದರ್ಶಿತ್ವ ಇವರಲ್ಲಿ ನೆಲೆಯೂರಿತು. ಮುಂದೆ ಇವರು ಅನ್ಯಮತ ಸಾಧನೆಗೂ ಕೈಹಾಕಿದರು. 1866ರಲ್ಲಿ ಗೋವಿಂದರಾಯ ಎಂಬ ಮುಸಲ್ಮಾನ ಫಕೀರನಿಂದ ಇಸ್ಲಾಂ ದೀಕ್ಷೆಯನ್ನು ಕೈಕೊಂಡರು. ಸದಾ `ಅಲ್ಲಾ ಮಂತ್ರವನ್ನು ಜಪಿಸುತ್ತ ಮಹಮದೀಯ ಅಚಾರ ವಿಚಾರಗಳನ್ನೆಲ್ಲ ಅನುಸರಿಸಿದರು. 1874ರಲ್ಲಿ ರಾಮಕೃಷ್ಣರು ಶಂಭುಚಂದ್ರಮಲ್ಲಿಕ್ ಎಂಬ ಕ್ರೈಸ್ತಧರ್ಮೀಯನಿಂದ ಬೈಬಲನ್ನು ಓದಿಸಿ ಕೇಳಿದರು. ಹಲವು ದಿನಗಳ ಅನಂತರ ಇವರಿಗೆ ಯೇಸುವಿನ ದರ್ಶನವಾದ ಅನುಭವವುಂಟಾಯಿತಂತೆ. ಸಾಧನೆಯ ಕಠಿಣ ಪರಿಶ್ರಮದಿಂದ ರಾಮಕೃಷ್ಣರ ದೇಹಸ್ಥಿತಿ ದಿನೇದಿನೇ ಹದಗೆಡುತ್ತಿತ್ತು. ಹವೆ ಬದಲಾವಣೆಯಾದರೆ ಆರೋಗ್ಯ ಸುಧಾರಿಸಬಹುದೆಂದು ಮಥುರನಾಥ ಇವರನ್ನು ಕಾಮಾರಪುಕರಕ್ಕೆ ಕಳುಹಿಸಿದ. ಎಂಟುವರ್ಷಗಳಿಂದ ರಾಮಕೃಷ್ಣರ ಉನ್ಮತ್ತ ಭಕ್ತಿಪೂಜೆಯ ವಿಚಿತ್ರ ನಡವಳಿಕೆಯ ಕಥೆ ಕೇಳಿ ಹಳ್ಳಿಯ ಜನ ವಿಸ್ಮಿತರಾಗಿದ್ದರು.

ಹದಿನಾಲ್ಕು ವರ್ಷದ ಕುಮಾರಿ ಶಾರದಾಮಣಿದೇವಿ ಪತಿಯ ಚಿತ್ರವಿಚಿತ್ರ ಕಥೆ ಕೇಳಿ, ತಂದೆ ಮನೆಯಿಂದ ಕಾಮಾರಪುಕುರಕ್ಕೆ ಬಂದಳು. ರಾಮಕೃಷ್ಣರು ಶಾರದಾಮಣಿ ದೇವಿಯನ್ನು ಆದರದಿಂದ ಬರಮಾಡಿಕೊಂಡರು. ಸಂನ್ಯಾಸಗ್ರಹಣ ಮಾಡಿದ್ದರೂ ಆಜನ್ಮ ಬ್ರಹ್ಮಚರ್ಯ ವ್ರತವನ್ನು ಕೈಗೊಂಡಿದ್ದರೂ ರಾಮಕೃಷ್ಣರು ಪತ್ನಿ ಶಾರದಾಮಣಿಯನ್ನು ಕೈಬಿಡಲಿಲ್ಲ. ``ನಾನು ಎಲ್ಲ ಸ್ತ್ರೀಯರನ್ನು ಜಗನ್ಮಾತಾ ಸ್ವರೂಪಿಣಿಯೆಂದು ನೋಡಲು ಕಲಿತಿದ್ದೇನೆ. ನಿನ್ನಲ್ಲಿಯೂ ನಾನು ಅದನ್ನೇ ನೋಡುತ್ತೆನೆ. ಆದರೆ ನೀನು ನನ್ನನ್ನು ಲೌಕಿಕಕ್ಕೆ(ಮಾಯೆಗೆ) ಎಳೆಯಲಾಶಿಸಿದರೆ ವಿವಾಹಧರ್ಮಕ್ಕೆ ಅನುಗುಣವಾಗಿ ನಿನ್ನಿಚ್ಛೆಯಂತೆ ನಡೆಯಲು ಸಿದ್ಧನಿದ್ದೇನೆ ಎಂದ ರಾಮಕೃಷ್ಣರ ಮಾತಿಗೆ ``ನಾನು ನಿಮ್ಮ ಸಹಧರ್ಮಿಣಿ. ನಿಮ್ಮನ್ನು ಸಂಸಾರಕ್ಕೆಳೆಯಲು ನಾನೆಂದೂ ಬಯಸೆನು. ನಿಮ್ಮ ಸೇವೆಯೇ ನನ್ನ ಜೀವನದ ಪೂಜೆಯಾಗಿರಲಿ ಎಂದು ಶಾರದಾಮಣಿ ಹೇಳಿದರು. ಪರಮಹಂಸರಿಗೆ ಪರಮಾನಂದವಾಯಿತು. ಸ್ವಗ್ರಾಮದಲ್ಲಿ ಆರುತಿಂಗಳು ಕಳೆಯುವ ವೇಳೆಗೆ ರಾಮಕೃಷ್ಣರ ಆರೋಗ್ಯ ಸುಧಾರಿಸಿತು, ದಕ್ಷಿಣೇಶ್ವರಕ್ಕೆ ಹಿಂತಿರುಗಿದರು.

ಮಥುರಾನಾಥನು ರಾಮಕೃಷ್ಣ ಪರಮಹಂಸರ ಜೊತೆಗೂಡಿ ಕಾಶಿ, ಪ್ರಯಾಗ, ಬೃಂದಾವನ ಮುಂತಾದ ಪವಿತ್ರಕ್ಷೇತ್ರಗಳಿಗೆ ತೀರ್ಥಯಾತ್ರೆಗೆ ಹೋಗಿಬಂದ. ಪರಮಹಂಸರು ದರಿದ್ರ ನಾರಾಯಣರ ಸೇವೆಯನ್ನು ಮಾಡಿದ ಪ್ರಸಂಗಗಳು ಜರುಗಿದವು. 1871ರಲ್ಲಿ ಮಥುರನಾಥ ತೀರಿಕೊಂಡ. ಪರಮಹಂಸರ ನೆರಳಿನಂತಿದ್ದ ಆಪ್ತಜೀವವೊಂದು ಕಣ್ಮರೆಯಾಯಿತು.

1872ರಲ್ಲಿ ದಕ್ಷಿಣೇಶ್ವರಕ್ಕೆ ಬಂದ ಶಾರದಾಮಣಿದೇವಿಗೆ ಪರಮಹಂಸರು ಅಕ್ಕರೆಯಿಂದ ವಿದ್ಯಾಬುದ್ಧಿಗಳನ್ನು ಹೇಳತೊಡಗಿದರು. ಅದೇ ವರ್ಷ ಒಂದು ದಿನ ಅಮಾವಾಸ್ಯೆಯ ರಾತ್ರಿ ಶುಭ ಸಮಯದಲ್ಲಿ, ಪರಮಹಂಸರು ಪೂಜೆಗೆ ಸಾಮಾಗ್ರಿಗಳನ್ನೆಲ್ಲ ತಮ್ಮ ಕೊಠಡಿಯಲ್ಲಿ ಅಣಿಗೊಳಿಸಿ ಪತ್ನಿ ಶಾರದಾಮಣಿ ದೇವಿಯನ್ನು ಅಲಂಕೃತಪೀಠದ ಮೇಲೆ ಕುಳ್ಳಿರಿಸಿ, ಜಗನ್ಮಾತೆಯಾದ ಕಾಳಿಕಾ ದೇವಿಯನ್ನು ಅರ್ಚಿಸುವಂತೆ ಷೋಡಶೋಪಚಾರಗಳಿಂದ ಮಂತ್ರ ಪಠಿಸುತ್ತ ಪೂಜೆಮಾಡಿ ಸಮಾಧಿಮಗ್ನರಾದರು. ಇದು ತಮ್ಮ ತಪಸ್ಸಿನ ಫಲವನ್ನೆಲ್ಲ ಅರ್ಪಿಸಿದ ಪರಮಹಂಸರ ಭಕ್ತಿ ಸಾಧನೆಯ ತುತ್ತತುದಿಯ ಸ್ಥಿತಿ ಎಂದು ಹೇಳುವುದುಂಟು. ಪರಮಹಂಸರಿಂದ ಪೂಜಿತಳಾದ ಶಾರದಾದೇವಿ ಲೋಕಕ್ಕೆಲ್ಲ `ಮಹಾಮಾತೆಯಾದರು. ರಾಮಕೃಷ್ಣರ ಪ್ರಥಮ ಶಿಷ್ಯೆ ಕೂಡ ಆದರು.

ರಾಮಕೃಷ್ಣ ಪರಮಹಂಸರ ಆಧ್ಯಾತ್ಮಜೀವನದಲ್ಲಿ ಮುಮುಕ್ಷುಗುಳ, ಸುಧಾರಕರು, ಶಿಷ್ಯೋತ್ತಮರು ಸೇರಿದ್ದಾರೆ. ಪರಮಹಂಸರೇ ಕೆಲವರನ್ನು ಹೋಗಿ ಕಂಡರೆ, ಕೆಲವರು ಈ ಗುರುದೇವನಿದ್ದೆಡೆಗೆ ಬಂದು ದೀಕ್ಷೆ ಪಡೆದಿದ್ದಾರೆ. ರಾಮಕೃಷ್ಣರು ಈಶ್ವರನ ಅಸಂಖ್ಯ ಕಿರಣಗಳಲ್ಲಿ ತಮಗೆ ಕಾಣದುದು ಬೇರೆಯವರಿಗೆ ಕಂಡಿರಬಹುದೆಂಬ ಭಾವನೆಯಿಂದ ಸಮಕಾಲೀನರನ್ನು ಸಂದರ್ಶಿಸಿದ್ದಾರೆ. ಒಬ್ಬಿಬ್ಬರನ್ನು ಪರೀಕ್ಷೆಗೂ ಗುರಿಮಾಡಿದ್ದಾರೆ. ಒರೆಗಲ್ಲಿಗೆ ಹಚ್ಚಿ ನೋಡದೆ ಇವರು ಯಾವುದನ್ನು ಚಿನ್ನವೆಂದು ಒಪ್ಪುತ್ತಿರಲಿಲ್ಲ. ಶ್ರೀಮಂತನೂ ಶಿಷ್ಟಾಚಾರಿಯೂ ಆದ ಮಹರ್ಷಿ ದೇವೇಂದ್ರನಾಥ ಟಾಗೂರ್, ಮಹಾವ್ಯಕ್ತಿ ದಯಾನಂದ ಸರಸ್ವತಿ, ಮಹಾಪಂಡಿತ ಈಶ್ವರಚಂದ್ರ ವಿದ್ಯಾಸಾಗರ, ಪ್ರಸಿದ್ಧ ಕಾದಂಬರಿಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ, ವಿಚಕ್ಷಣಪಂಡಿತ ಶಶಿಧರ ಮೊದಲಾದವರು ಪರಮಹಂಸರ ಉಪದೇಶಾವೃತವನ್ನು ಸವಿದವರು. ರಾಮಚಂದ್ರದತ್ತ, ಮನೋಹರಮಿತ್ರ, ಸುರೇಂದ್ರಮಿತ್ರ, ಪ್ರಸಿದ್ಧ ನಾಟಕಕಾರ ಗಿರೀಶಚಂದ್ರ, ದುರ್ಗಾಚರಣನಾಗ ಮೊದಲಾದವರು ಗುರುದೇವ ಸಂಸಾರಿಶಿಷ್ಯರಲ್ಲಿ ಅದ್ವಿತೀಯರು. ಕಲ್ಕತ್ತದ ವಿದ್ಯಾಸಾಗರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನೂ ಬ್ರಹ್ಮಸಮಾಜದ ಸದಸ್ಯನೂ ಆದ ಮಹೇಂದ್ರನಾಥಗುಪ್ತ ಅಗ್ರಮಾನ್ಯ ಶಿಷ್ಯ. ಆತನ ದಿನಚರಿಯ ಬರೆಹ ಇಲ್ಲದಿದ್ದರೆ ಪರಮಹಂಸರ ಜೀವನ ಸಮುದ್ರದ ಅಮೂಲ್ಯ ರತ್ನರಾಶಿಯ ಬಹುಭಾಗ ಲೋಕಕ್ಕೆ ತಿಳಿಯದೆ ಹೋಗುತ್ತಿತ್ತು. ಸ್ವಾಮಿ ಅದ್ಭುತಾನಂದ(ಲಾಟು), ಬ್ರಹ್ಮಾನಂದ(ರಾಖಾಲ), ಸ್ವಾಮಿ ಅದ್ವೈತಾನಂದ(ಗೋಪಾಲದಾಸ), ಸ್ವಾಮಿ ಅಖಂಡಾನಂದ(ಗಂಗಾಧರ), ಸ್ವಾಮಿ ಸುಬೋಧಾನಂದ(ಸುಬೋಧ ಘೋಷ್), ತ್ರಿಗುಣಾತೀತಾನಂದ (ಶಾರದಾ ಪ್ರಸನ್ನಮಿತ್ರ), ಸ್ವಾಮಿ ನಿರಂಜನಾನಂದ(ನಿತ್ಯನಿರಂಜನಸೇನ), ಸ್ವಾಮಿ ಪ್ರೇಮಾನಂದ(ಬಾಬುರಾಂ ಘೋಷ್), ಸ್ವಾಮಿ ನಿರ್ಮಲಾನಂದ(ತುಲಸೀಚರಣದತ್ತ) ಹಾಗೂ 1881ರಲ್ಲಿ ಮಹಾಜ್ಯೋತಿಯ ಬಳಿಗೆ ಮತ್ತೊಂದು ದಿವ್ಯಜ್ಯೋತಿ ಆಗಮಿಸಿದಂತೆ ಬಂದ ಸ್ವಾಮಿ ವಿವೇಕಾನಂದ(ನರೇಂದ್ರನಾಥ)-ಇವರು ರಾಮಕೃಷ್ಣ ಪರಮಹಂಸರ ಸಂನ್ಯಾಸಿ ಶಿಷ್ಯರಲ್ಲಿ ಅಗ್ರಮಾನ್ಯರಾದವರು.

ಪರಮಹಂಸರಿಂದ ಮಂತ್ರದೀಕ್ಷೆ ಕೈಕೊಂಡು ಶಾರದಾದೇವಿಯ ಅನವರತ ಸಂಗಿನಿಯಾಗಿ, ಸ್ತ್ರೀಯರಿಗೆ ವಿದ್ಯಾಸಂಸ್ಥೆ ಸ್ಥಾಪಿಸಿದ ಜೋಗಿನ್‍ಮಾ, ಗೋಲಾಸ್‍ಮಾ ಗೌರಿದಾಸಿ, ಅಘೋರಮಣಿದೇವಿ(ಗೋಪಾಲನ ತಾಯಿ)-ಇವರು ಅನುಗ್ರಹಿತ ಸ್ತ್ರೀಭಕ್ತೆಯರು.

ದಕ್ಷಿಣೇಶ್ವರದಲ್ಲಿ ಗುರುದೇವ ರಾಮಕೃಷ್ಣ ಪರಮಹಂಸರು ಧರ್ಮಪಿಪಾಸುಗಳ ಹೃದಯತೃಷ್ಣೆಯನ್ನು ತಮ್ಮ ವಚನಾಮೃತದಿಂದ ನೀಗಲು ಅನವರತ ದುಡಿದರು. ಸಾಮತಿ, ಕಥೆ, ಹಾಸ್ಯ ಮತ್ತು ತತ್ತ್ವಬೋಧೆಗಳಿಂದ ಶಿಷ್ಯರಿಗೆ ದರ್ಶಕರಿಗೆ ಹೃದಯಭಾರವಾಗದಂತೆ ತತ್ತ್ವೋಪದೇಶ ಮಾಡಿದರು. ಶ್ರೀರಾಮಕೃಷ್ಣರು ಶಿಷ್ಯರ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿದ್ದರು. ಅವರೆಡೆಗೆ ಬಂದ ಶಿಷ್ಯರಲ್ಲಿ ವಿವೇಕಾನಂದ ಮುಂತಾದವರು ಗುರುಗಳ ಸಮಾಧಿ ಮುಂತಾದ ವಿಚಾರ ತಿಳಿದುಕೊಳ್ಳಲು ಆಗದೆ ಇದ್ದರೂ ಅವರ ಪ್ರೇಮದ ಸವಿಯನ್ನುಂಡವರು. ವಿವೇಕಾನಂದರು ತಾವು ಪರಮಹಂಸರ ಪ್ರೇಮದಾಸ ಎಂದು ಹೇಳಿಕೊಂಡಿದ್ದಾರೆ. ರಾಮಕೃಷ್ಣರು ವಿಮರ್ಶಾತ್ಮಕ ಬುದ್ಧಿಯನ್ನು ಚೆನ್ನಾಗಿ ರೂಢಿಸಿಕೊಳ್ಳಬೇಕೆಂದೂ ಹೇಳುತ್ತಿದ್ದರು. ಅನ್ಯಜೀವಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕಜೀವನದಲ್ಲಿ ಮೋಸ ಹೆಚ್ಚು. ಅಲ್ಲಿ ಯೋಗ್ಯವಾದುದನ್ನು ಗೊತ್ತು ಹಚ್ಚುವುದು ಬಹಳ ಕಷ್ಟ, ಒಬ್ಬರನ್ನು ಸ್ವೀಕರಿಸುವುದಕ್ಕಿಂತ ಮುಂಚೆ ಅವರನ್ನು ಚೆನ್ನಾಗಿ ಪರೀಕ್ಷೆಮಾಡಿ ಅನಂತರ ಸ್ವೀಕರಿಸಿ ಎಂದೂ ಶಿಷ್ಯರಿಗೆ ಹೇಳುತ್ತಿದ್ದರು. ಭಕ್ತಿ, ವೈರಾಗ್ಯ ಇವುಗಳ ನೆಪದಲ್ಲಿ ಅಜಾಗರೂಕತೆ, ಅಸಡ್ಡೆ, ಅವಿವೇಕಗಳು ಕಂಡರೆ ಖಂಡಿಸುತ್ತಿದ್ದರು. ಪವಾಡದ ಮೇಲೆ ಸ್ವಲ್ಪವೂ ಮನಸ್ಸು ಹೋಗಕೂಡದೆಂದು ಎಚ್ಚರಿಸುತ್ತಿದ್ದರು. ಮೂರು ಕಾಸಿಗೆ ನದಿದಾಟಿಸುವ ದೋಣಿಯವನಿರುವಾಗ ನದಿಯ ಮೇಲೆ ನಡೆದುಹೋಗಲು ಹನ್ನೆರಡು ವರ್ಷದ ತಪಸ್ಸಾಧನೆ ಏಕೆ ಬೇಕೆಂದು ನೀತಿ ಹೇಳಿದ್ದಾರೆ. ಕೋಪವನ್ನು ನಟಿಸು, ಆದರೆ ಪ್ರತೀಕಾರ ಮಾಡಬೇಡ ಎಂಬ ನೀತಿಗೆ ಸರ್ಪ ಮತ್ತು ಸಾಧುವಿನ ಕಥೆ ಹೇಳಿದ್ದಾರೆ. ಸ್ವಾನುಭವ ಸಿದ್ದವಾದ e್ಞÁನವೇ ಸರ್ವಶ್ರೇಷ್ಠವಾದುದು, ಉಳಿದುದೆಲ್ಲವೂ ಜಳ್ಳು ಎಂದಿದ್ದಾರೆ. ``ನಾನು ಹಿಂದೂ ಕ್ರೈಸ್ತ ಇಸ್ಲಾಂ ಧರ್ಮಗಳನ್ನೂ ಇನ್ನುಳಿದ ಅನೇಕ ವಿಧವಿಧವಾದ ಪಂಥಗಳನ್ನೂ ಸಾಧಿಸಿದ್ದೇನೆ. ಭಿನ್ನ ಭಿನ್ನ ಮಾರ್ಗಗಳಿಂದ ಸರ್ವರೂ ಏಕಮಾತ್ರ ಸತ್ಯದೆಡೆಗೆ ಹೋಗುತ್ತಿದ್ದಾರೆ. ನೀವು ಎಲ್ಲ ಮತಗಳನ್ನೂ ಪರೀಕ್ಷಿಸಬೇಕು. ಒಂದುಸಾರಿಯಾದರೂ ಎಲ್ಲ ಹಾದಿಗಳಲ್ಲಿಯೂ ತಿರುಗಾಡಿ ಬರಬೇಕು. ಹಿಂದೂಗಳು, ಮುಸಲ್ಮಾನರು, ಬ್ರಾಹ್ಮಸಮಾಜಗಳು, ವೈಷ್ಣವ ಪಂಥಿಗಳು ಎಲ್ಲರೂ ಸುಮ್ಮನೆ ಕಚ್ಚಾಡುತ್ತಿದ್ದಾರೆ. ಯಾವನು ಕೃಷ್ಣನೋ ಅವನೇ ಶಿವನು; ಅದೇ ಕಾಳಿ, ಆದಿಶಕ್ತಿ; ಆತನೇ ಯೇಸು, ಆತನೇ ಅಲ್ಲಾ. ಒಬ್ಬ ರಾಮನಿಗೆ ನೂರು ನಾಮಗಳು. ಸರೋವರಕ್ಕೆ ಅನೇಕ ಘಟ್ಟಗಳಿವೆ ಒಂದು ಘಟ್ಟದಲ್ಲಿ ಹಿಂದೂಗಳು ಕಲಶಗಳಲ್ಲಿ ನೀರು ಮೊಗೆದು ಅದನ್ನು `ಜಲ ಎಂದು ಕರೆಯುತ್ತಾರೆ; ಮತ್ತೊಂದರಲ್ಲಿ ಮುಸಲ್ಮಾನರು ಪಕಾಲಿಗಳಲ್ಲಿ ನೀರು ತುಂಬಿಕೊಂಡು `ಪಾನಿಎಂದು ಕರೆಯುತ್ತಾರೆ. ಮೂರನೆಯದರಲ್ಲಿ ಕ್ರೈಸ್ತರು `ವಾಟರ್ ಎಂದು ಕರೆಯುತ್ತಾರೆ. ಬೇರೆ ಬೇರೆ ಹೆಸರುಗಳಿದ್ದರೂ ವಸ್ತುವೊಂದೇ; ಆ ಒಂದೇ ವಸ್ತುವನ್ನೇ ಎಲ್ಲರೂ ಅರಸುತ್ತಿರುವುದು. ಭೇದವೆಂಬುದೆಲ್ಲ ಹೆಸರಿನಲ್ಲಿ, ರುಚಿಯಲ್ಲಿ. ಭಾವದಲ್ಲಿ ಒಬ್ಬೊಬ್ಬನೂ ಅವನವನ ದಾರಿಯನ್ನೇ ಹಿಡಿದು ನಡೆಯಲಿ. ಈಶ್ವರನನ್ನು ಸಂದರ್ಶಿಸಬೇಕೆಂಬ ನೈಜವ್ಯಾಕುಲತೆ ತ್ರೀವವಾಗಿದ್ದರೆ ಆತನೇ ಧನ್ಯ; ಅಂಥವನಿಗೆ ಈಶ್ವರ ಸಾಕ್ಷಾತ್ಕಾರ ಕಟ್ಟಿಟ್ಟ ಬುತ್ತಿ. ಪರಮಹಂಸರ ದೃಷ್ಟಿಯಲ್ಲಿ ದ್ವೈತ ವಿಶಿಷ್ಟಾದ್ವೈತ ಅದ್ವೈತಗಳು ಪರಸ್ಪರ ವಿರೋಧವಾಗಿರಲಿಲ್ಲ, ಒಂದು ಇನ್ನೊಂದಕ್ಕೆ ಮೆಟ್ಟಿಲಾಗಿತ್ತು. ಬ್ರಹ್ಮವೇ ಶಕ್ತಿ, ಶಕ್ತಿಯೇ ಬ್ರಹ್ಮ. `ನೇತಿ ನೇತಿ'ಎಂದು ಹೇಳಿದಂತೆಯೇ `ಇತಿ ಇತಿ' ಎಂದೂ ಸಾರಿದರು. ಅದ್ವೈತವು ಸಾಧನೆಯ ಕಟ್ಟಕಡೆಯ ಮಾತು ಅಥವಾ ಮೌನ. ಅದನ್ನು ಸಮಾಧಿಯಲ್ಲಿ ಅನುಭವಿಸಬೇಕು. ಏಕೆಂದರೆ ಅದು ಮನಸ್ಸಿಗೂ ಮಾತಿಗೂ ಮೀರಿದ್ದು; ಮನಸ್ಸು ಬುದ್ಧಿಗಳಿಗೆ ವಿಶಿಷ್ಟಾದ್ವೈತವೇ ತುತ್ತತುದಿಯ ಸಿದ್ದಿ; ಸಿದ್ಧಿ ಸಾಧಕನ ಪರಮಧ್ಯೇಯ ಹೊನ್ನು, ಹೆಣ್ಣು, ಮಣ್ಣುಗಳ ತ್ಯಾಗ. ಕಾಮಿನಿಯ ತ್ಯಾಗವೆಂದರೆ ಸ್ತ್ರೀದ್ವೇಷ ಅಥವಾ ತಿರಸ್ಕಾರ ಎಂದಲ್ಲ. ಕಾಮಿನೀತ್ಯಾಗವೆಂದರೆ ಕಾಮತ್ಯಾಗ ಅಥವಾ ಇಂದ್ರಿಯ ನಿಗ್ರಹ. ಪುರುಷರಿಗೆ ಕಾಮಿನೀತ್ಯಾಗವನ್ನು ಬೋಧಿಸಿದರೆ ಸ್ತ್ರೀಯರಿಗೆ ಪುರುಷತ್ಯಾಗವನ್ನು ಬೋಧಿಸಿರುವರು. ಹೊನ್ನಿನ ತ್ಯಾಗವೆಂದರೆ ದಾರಿದ್ರ್ಯಲೋಲುಪತೆ ಎಂದಲ್ಲ; ಐಶ್ವರ್ಯವನ್ನು ಸನ್ಮಾರ್ಗದಿಂದ ಆರ್ಜಿಸಿ ಸದುಪಯೋಗಪಡಿಸಬೇಕು. ದೇವರು ಕೊಟ್ಟ ಧನವನ್ನು ದೇವರ ಸೇವೆಗೆ ಉಪಯೋಗಿಸಬೇಕು. ದು:ಖಿಗಳ ಸೇವೆಯೂ ದೇವರ ಸೇವೆಯೇ. ಹೀಗೆ ದರಿದ್ರ ನಾರಾಯಣನ ಸೇವೆ ಪರಮಹಂಸರ ಬೋಧನೆಯಲ್ಲಿ ಮುಖ್ಯವಾದುದಾಗಿತ್ತು.

ತಮ್ಮ ಇಡೀ ಬದುಕನ್ನು ಲೋಕಕಲ್ಯಾಣದ ಆಧ್ಯಾತ್ಮಸಾಧನೆಯಲ್ಲಿ ತೊಡಗಿಸಿಕೊಂಡ ಪರಮಹಂಸರು ಗಂಟಲ ಬೇನೆಗೆ ತುತ್ತಾಗಿ 1886 ಆಗಸ್ಟ್ 16ರಂದು ಇಹಲೋಕವನ್ನು ತ್ಯಜಿಸಿದರು. (ಎಲ್.ಆರ್.)