ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಮನಗರ

ವಿಕಿಸೋರ್ಸ್ದಿಂದ

ರಾಮನಗರ ಭಾರತದ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಮಾಗಡಿ. ಈಶಾನ್ಯದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕುಗಳೂ ಪೂರ್ವ ಮತ್ತು ಆಗ್ನೇಯದಲ್ಲಿ ಕನಕಪುರ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಚನ್ನಪಟ್ಟಣ ತಾಲ್ಲೂಕುಗಳೂ ವಾಯವ್ಯದ ಸ್ವಲ್ಪ ಭಾಗದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕೂ ಸುತ್ತುವರಿದಿವೆ. ಕೂಟಕಲ್ಲು, ಕೈಲಂಚ, ರಾಮನಗರ ಮತ್ತು ಬಿಡದಿ-ಇವು ತಾಲ್ಲೂಕಿನ ನಾಲ್ಕು ಹೋಬಳಿಗಳು. ಗ್ರಾಮಗಳ ಸಂಖ್ಯೆ 134. ವಿಸ್ತೀರ್ಣ 631.7 ಚಕಿಮೀ. ಜನಸಂಖ್ಯೆ 2,37,078 (2001).

ಈ ತಾಲ್ಲೂಕು ಬಹುತೇಕ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು ಮೈದಾನ ಪ್ರದೇಶ ಕಡಿಮೆ. ಒರಟಾದ ಕಂದುಬಣ್ಣದ ಬೆಣಚುಕಲ್ಲಿನಿಂದ ಕೂಡಿದ ಬೆಟ್ಟಗಳ ಸಾಲು ರಾಮನಗರದ ಮೂಲಕ ಹಾದುಹೋಗಿದೆ. ಕೆಲವು ಕಡೆ ಬೆಟ್ಟದ ತಪ್ಪಲುಗಳಲ್ಲಿ ಕುರುಚಲು ಗಿಡದ ಕಾಡು ವಿಶೇಷವಾಗಿ ಕಂಡುಬರುತ್ತದೆ. ಅರ್ಕಾವತಿ ಈ ತಾಲ್ಲೂಕಿನ ಮುಖ್ಯನದಿ. ಇದು ತಾಲ್ಲೂಕನ್ನು ಉತ್ತರದಲ್ಲಿ ಪ್ರವೇಶಿಸಿ ರಾಮನಗರದವರೆಗೆ ದಕ್ಷಿಣಾಭಿಮುಖವಾಗಿ ಹರಿದು ಅಲ್ಲಿಂದ ಆಗ್ನೇಯಾಭಿಮುಖವಾಗಿ ಕನಕಪುರ ತಾಲ್ಲೂಕನ್ನು ಪ್ರವೇಶಿಸುವುದು. ತಾಲ್ಲೂಕಿನ ಮಧ್ಯದಲ್ಲಿ ಹರಿಯುವ ಈ ನದಿಯ ಎಡ ಮತ್ತು ಬಲದಂಡೆಗಳ ಭೂಪ್ರದೇಶ ವ್ಯವಸಾಯಯೋಗ್ಯವಾಗಿದೆ. ಮಂಚನಬೆಲೆ ಯೋಜನೆಯಿಂದ ಈ ನದಿಯ ನೀರನ್ನು ಹೆಚ್ಚು ಉಪಯುಕ್ತವಾಗಿ ಬಳಸಿಕೊಳ್ಳುವಂತಾಗಿದೆ. ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಸ್ವಲ್ಪದೂರ ಉತ್ತರದಿಂದ ದಕ್ಷಿಣಕ್ಕೆ ಕಣ್ವನದಿ ಹರಿದು ಚನ್ನಪಟ್ಟಣ ತಾಲ್ಲೂಕನ್ನು ಪ್ರವೇಶಿಸುವುದು.

ಈ ತಾಲ್ಲೂಕಿನ ಮುಖ್ಯ ಕಸಬು ವ್ಯವಸಾಯ. ಹೆಚ್ಚಿನ ವ್ಯವಸಾಯ ಮಳೆ ಅವಲಂಬಿತ. ಸರಾಸರಿ ಮಳೆ 800 ಮಿಮೀ. ರಾಗಿ, ಬತ್ತ, ಕಬ್ಬು, ಮುಖ್ಯ ಬೆಳೆಗಳು. ಸ್ವಲ್ಪ ಗೋದಿಯನ್ನೂ ಬೆಳೆಯುತ್ತಾರೆ. ನದೀ ದಂಡೆ ಹಾಗೂ ಮೆಕ್ಕಲು ಮಣ್ಣಿನ ಭೂಪ್ರದೇಶದಲ್ಲಿ ತೆಂಗನ್ನು ಬೆಳೆಯುತ್ತಾರೆ. ಹಿಪ್ಪನೇರಿಳೆ ಈ ತಾಲ್ಲೂಕಿನ ಪ್ರಮುಖ ವಾಣಿಜ್ಯಬೆಳೆ. ಬೀಡಿ ಕಟ್ಟುವುದು, ರೇಷ್ಮೆಹುಳು ಸಾಕಣೆ, ರೇಷ್ಮೆನೂಲು ತೆಗೆಯುವುದು, ಹೆಂಚು ಮತ್ತು ವ್ಯವಸಾಯ ಉಪಕರಣಗಳ ತಯಾರಿಕೆ, ರೇಷ್ಮೆ ಸೀರೆ ನೇಯುವುದು ತಾಲ್ಲೂಕಿನ ಗೃಹಕೈಗಾರಿಕೆಗಳು.

ತಾಲ್ಲೂಕಿನಲ್ಲಿ ಶಿಕ್ಷಣಕ್ಕೆ ಅನುಕೂಲವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳು ಇವೆ. ತಾಲ್ಲೂಕು ಕೇಂದ್ರದಲ್ಲಿ ಪ್ರಸೂತಿ ಮತ್ತು ಶಿಶುಕಲ್ಯಾಣ ಕೇಂದ್ರ ಹಾಗೂ ಆರೋಗ್ಯಕೇಂದ್ರಗಳೂ ಔಷಧಾಲಯಗಳೂ ಇವೆ. ಅಂಚೆ ತಂತಿ ಸೌಲಭ್ಯವಿದೆ.

ಮಾಗಡಿ-ರಾಮನಗರ, ರಾಮನಗರ-ಕನಕಪುರ ಮತ್ತು ಮೈಸೂರು-ಬೆಂಗಳೂರು ಪ್ರಾಂತೀಯ ಹೆದ್ದಾರಿ-ಇವು ತಾಲ್ಲೂಕಿನ ಪ್ರಮುಖ ರಸ್ತೆಮಾರ್ಗಗಳು. ಮೈಸೂರು, ಬೆಂಗಳೂರು ರೈಲುಮಾರ್ಗ ರಾಮನಗರದ ಮೂಲಕ ಹಾದುಹೋಗುತ್ತದೆ.

ರಾಮನಗರ ಈ ತಾಲ್ಲೂಕಿನ ಆಡಳಿತ ಕೇಂದ್ರ, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬೆಂಗಳೂರಿಗೆ ನೈಋತ್ಯದಲ್ಲಿ 48 ಕಿಮೀ ದೂರದಲ್ಲಿ ಅರ್ಕಾವತಿ ನದಿಯ ಎಡದಂಡೆಯ ಮೇಲಿದೆ. ಜನಸಂಖ್ಯೆ 79,365 (2001).

1800ರಲ್ಲಿ ದಿವಾನ್ ಪೂರ್ಣಯ್ಯನವರಿಂದ ಸ್ಥಾಪನೆಯಾದ ಈ ಊರಿಗೆ ಹಿಂದೆ ಕ್ಲೋಸ್‍ಪೇಟೆ ಎಂಬ ಹೆಸರಿದ್ದು ಚನ್ನಪಟ್ಟಣ, ಮಾಗಡಿ ಮತ್ತು ಕಾನಕಾನಹಳ್ಳಿ ತಾಲ್ಲೂಕುಗಳನ್ನೊಳಗೊಂಡ ಬೆಂಗಳೂರು ಜಿಲ್ಲೆಯ ಉಪವಿಭಾಗವಾಗಿತ್ತು. ಹಳೆ ಮೈಸೂರಿನ ರೆಸಿಡೆಂಟ್ ಆಗಿದ್ದ ಸರ್ ಬ್ಯಾರಿಕ್ಲೋಸ್ ಎಂಬವರ ಗೌರವಾರ್ಥ ಕ್ಲೋಸ್‍ಪೇಟೆ ಎಂಬ ಹೆಸರನ್ನು ಇಡಲಾಗಿತ್ತೆಂದು ಕನ್ನಡ-ಪರ್ಷಿಯನ್ ಎರಡೂ ಭಾಷೆಗಳಲ್ಲಿರುವ ಇಲ್ಲಿನ ಶಾಸನವೊಂದರಿಂದ ತಿಳಿದುಬರುತ್ತದೆ. ಹೊಸಪೇಟೆ, ನವಿಪೇಟೆ ಮತ್ತು ರಾಮಗಿರಿ-ಇವು ಈ ಊರಿಗಿದ್ದ ಇತರ ಹೆಸರುಗಳು. ಅರ್ಕಾವತಿ ನದಿಯ ದಡದಲ್ಲಿ ಅಗ್ರಹಾರವೂ ಅರ್ಕೇಶ್ವರ ಹಾಗೂ ರಾಮದೇವರ ದೇವಾಲಯಗಳೂ ಮತ್ತು ಪೂರ್ಣಯ್ಯನವರು ಕಟ್ಟಿಸಿದ ಒಂದು ಛತ್ರವೂ ಇದೆ.

ಈ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು, ಸರ್ಕಾರಿ ಜೂನಿಯರ್ ಕಾಲೇಜು ಮತ್ತು ಒಂದು ಕಲಾ ತರಬೇತಿ ಕೇಂದ್ರ ಹಾಗೂ ಗ್ರಂಥಾಲಯ ಮುಂತಾದವುಗಳಿವೆ. ಸಹಕಾರಿ ಸಂಘಗಳು, ವಾಣಿಜ್ಯಬ್ಯಾಂಕುಗಳು ಇವೆ. ಈ ಪಟ್ಟಣ ಮೈಸೂರು-ಬೆಂಗಳೂರು ಮಾರ್ಗದ ಒಂದು ಮುಖ್ಯ ರೈಲು ನಿಲ್ದಾಣ. ಅಂಚೆ ದೂರವಾಣಿ, ವಿದ್ಯುತ್ ಮುಂತಾದ ಸೌಲಭ್ಯಗಳಿವೆ. ವ್ಯಾಪಾರ ಕೇಂದ್ರವಾದ ಈ ಪಟ್ಟಣ ಪುರಸಭಾಡಳಿತಕ್ಕೆ ಸೇರಿದೆ.

ರಾಮನಗರದ ಉತ್ತರಕ್ಕೆ ಸು. 5 ಕಿಮೀ ದೂರದಲ್ಲಿ ರಾಮಗಿರಿಬೆಟ್ಟವಿದೆ. ಇದನ್ನು ರೇವಣಸಿದ್ಧೇಶ್ವರಬೆಟ್ಟ ಎಂತಲೂ ಕರೆಯುತ್ತಾರೆ. ಈ ಬೆಟ್ಟದ ಮೇಲೆ ಹಿಂದೆ ಇದ್ದ ಕೋಟೆಯ ಅವಶೇಷಗಳಿವೆ. ರಾಮ ಮತ್ತು ರಾಮೇಶ್ವರ ದೇವಸ್ಥಾನಗಳು ಈ ಬೆಟ್ಟದ ಮೇಲಿದ್ದು ಮೊದಲಿನ ದೇವಸ್ಥಾನದ ರಂಗಮಂಟಪ ಪಾಳೆಯಗಾರ ಕೆಂಪೇಗೌಡ ನಿರ್ಮಿತವೆಂದು ತಿಳಿಯುತ್ತದೆ. ಸ್ಥಳಪುರಾಣದ ಪ್ರಕಾರ ಕಾಕಾಸುರನೆಂಬ ರಾಕ್ಷಸನನ್ನು ರಾಮ ಸಂಹರಿಸಿದ್ದರಿಂದ ಈಗಲೂ ಬೆಟ್ಟದ ಮೇಲೆ ಕಾಗೆಗಳು ಹಾರುವುದಿಲ್ಲವೆಂದು ಪ್ರತೀತಿ. ರಾಮೇಶ್ವರ ದೇವಸ್ಥಾನದ ಮುಂದೆ ಇರುವ ಬಂಡೆಯನ್ನು ಮಾರ್ಕಂಡೇಯನೆಂದೂ ದೇವಸ್ಥಾನದ ಎಡಕ್ಕೆ ಇರುವ ಬಂಡೆಗಳನ್ನು ಸಪ್ತಋಷಿಗಳೆಂದೂ ಹೇಳುತ್ತಾರೆ. ಬೆಟ್ಟದ ಮೇಲೊಂದು ದೊಣಿಯಿದೆ. ವರ್ಷಕ್ಕೊಮ್ಮೆ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ರಾಮನಗರಕ್ಕೆ ಸು. 5 ಕಿಮೀ ದೂರದಲ್ಲಿ ಜಲಸಿದ್ಧೇಶ್ವರ ಎಂಬ ಮತ್ತೊಂದು ಬೆಟ್ಟವಿದೆ.