ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಮರಾವ್, ಬಿ

ವಿಕಿಸೋರ್ಸ್ದಿಂದ

ರಾಮರಾವ್, ಬಿ 1890-1970. ಭಾರತದ ಪ್ರಸಿದ್ಧ ಭೂವಿಜ್ಞಾನಿ. ಪೂರ್ಣ ಹೆಸರು ಬೆಳ್ಳೂರು ರಾಮರಾವ್. ಆಗಿನ ಮೈಸೂರು ರಾಜ್ಯದ ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದರು. 1890 ನವೆಂಬರ್ 20ರಂದು ಚಿತ್ರದುರ್ಗದಲ್ಲಿ ಜನಿಸಿದರು. ತಂದೆ ವೆಂಕಟೇಶಯ್ಯ, ರಾಮರಾಯರು ತಮ್ಮ ವಿದ್ಯಾರ್ಥಿ ಜೀವನದುದ್ದಕ್ಕೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಸರ್ಕಾರಿ ನೌಕರರಾಗಿದ್ದ ಇವರ ತಂದೆಯವರ ವರ್ಗಾವಣೆಗಳಿಂದಾಗಿ ವಿವಿಧ ಪ್ರದೇಶಗಳ ಪ್ರಕೃತಿದತ್ತ ರಮಣೀಯ ಸ್ಥಳಗಳು ಬಾಲಕ ರಾಮರಾವ್ ಮುಂದಿನ ಜೀವನವಿಡೀ ನಿಸರ್ಗಪ್ರೇಮಿಯಾಗಿರಲು ಅನುವು ಮಾಡಿಕೊಟ್ಟಿತು. ಎಲ್ಲ ಪರೀಕ್ಷೆಗಳಲ್ಲೂ ಪ್ರಥಮಸ್ಥಾನ ಗಳಿಸಿದ್ದರಿಂದ ಸರ್ಕಾರದಿಂದ ವಿದ್ಯಾರ್ಥಿವೇತನವೂ ದೊರೆಯಿತು. ಮುಂದೆ ತಮಗೆ ಪ್ರಿಯವೆನಿಸಿದ ಭೂವಿಜ್ಞಾನ ವಿಷಯವನ್ನೇ ಆರಿಸಿಕೊಂಡು ಮದರಾಸು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಅನಂತರ ಇವರು ಸಿವಿಲ್ ಪರೀಕ್ಷೆಗೆ ಕುಳಿತರಾದರೂ ರ್ಯಾಂಕ್ ಗಳಿಸಲು ವಿಫಲರಾದರು. ಅದೇ ಸಮಯಕ್ಕೆ ರಾಬರ್ಟ್ ಬ್ರೂಸ್ ಫೂಟ್ ಎಂಬ ಭೂವಿಜ್ಞಾನಿಯ ಮಾರ್ಗದರ್ಶನದಲ್ಲಿ ಮೈಸೂರು ರಾಜ್ಯದಲ್ಲಿ ಭೂವಿಜ್ಞಾನ ಇಲಾಖೆ ಸ್ಥಾಪನೆಗೊಂಡಿತು (1894). ನೂತನವಾಗಿ ಆರಂಭವಾದ ಆ ಇಲಾಖೆಗೆ, ಮೈಸೂರು ಸರ್ಕಾರ ಭೂವಿಜ್ಞಾನ ವಿಷಯದಲ್ಲಿ ಅಭ್ಯರ್ಥಿಗಳಿಗಾಗಿ ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು 1914ರಲ್ಲಿ ಏರ್ಪಡಿಸಿತ್ತು. ಆ ಪರೀಕ್ಷೆಗೆ ಕುಳಿತಿದ್ದ ಮೂವತ್ತು ಅಭ್ಯರ್ಥಿಗಳ ಪೈಕಿ ರಾಮರಾವ್ ಪ್ರಥಮ ಸ್ಥಾನಗಳಿಸಿದರು. ತೇರ್ಗಡೆಯಾದ ಇತರರೆಂದರೆ ಟಿ,ಪಿ. ಕೈಲಾಸಂ ಹಾಗೂ ವೇಣುಗೋಪಾಲ್. ಕೈಲಾಸಂ ಅವರು ನಾಟಕ ಮತ್ತು ಹಾಸ್ಯಕಲೆಗಳಲ್ಲಿ ಆಸಕ್ತಿ ವಹಿಸಿದ್ದರಿಂದ ಭೂವಿಜ್ಞಾನ ಇಲಾಖೆಯನ್ನು ಸೇರಿದ ನಾಲ್ಕುವರೆ ವರ್ಷಗಳಲ್ಲಿ ಸೇವೆಗೆ ರಾಜೀನಾಮೆ ಇತ್ತರು. ಹೀಗಾಗಿ ರಾಮರಾವ್ ಮೈಸೂರು ಭೂವಿಜ್ಞಾನ ಇಲಾಖೆಯಲ್ಲಿ 14 ವರ್ಷಗಳ ಕಾಲ ನಿರ್ದೇಶಕರಾಗಿ ಒಟ್ಟು 33 ವರ್ಷಗಳ ಸುದೀರ್ಘ ಸೇವೆಯಿಂದ 1948ರಲ್ಲಿ ನಿವೃತ್ತಿ ಹೊಂದಿದರು. ಅದೇ ವರ್ಷ ಕೇಂದ್ರ ಸರ್ಕಾರ ಸ್ಥಾಪಿಸಿದ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಸಂಸ್ಥೆಯ ಪ್ರಥಮ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿ 1951 ರಲ್ಲಿ ನಿವೃತ್ತಿಹೊಂದಿದರು.

ರಾಮರಾವ್ ಅವರ ಸೇವಾವಧಿಯಲ್ಲಿ ರಾಜ್ಯದ ಭೂವಿಜ್ಞಾನ ಇಲಾಖೆ ಸರ್ವತೋಮುಖವಾದ ಅಭಿವೃದ್ಧಿಯನ್ನು ಸಾಧಿಸಿತು. ಇವರು ತಮ್ಮ ಕ್ಷೇತ್ರದಲ್ಲಿ ಉಚ್ಚಶಿಕ್ಷಣಕ್ಕಾಗಿ ಲಂಡನ್ನಿಗೆ ಪ್ರಯಾಣ ಮಾಡಿದರು (1932). ವಾಷಿಂಗ್‍ಟನ್ನಿನಲ್ಲಿ ನಡೆದ ಅಂತಾರಾಷ್ಟ್ರೀಯ ಭೂವಿಜ್ಞಾನ ಸಂಕಿರಣದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದರು (1933). ಸ್ವದೇಶಕ್ಕೆ ಮರಳಿದ ಬಳಿಕ ಆಗಲೇ ನಡೆಸಿದ್ದ ರಾಜ್ಯದ ಪ್ರಾಥಮಿಕ ಸರ್ವೇಕ್ಷಣೆ ಮುಗಿದಿತ್ತಾದರೂ ಕೆಲವು ಅತಿ ಮುಖ್ಯವಾದ ಪ್ರದೇಶಗಳ ಪುನರ್‍ಸರ್ವೇಕ್ಷಣಾ ಕಾರ್ಯ ಇವರ ಪಾಲಿಗೆ ಬಂತು. ಮೊದಲ ಸಮೀಕ್ಷೆಗಳನ್ನು ಪೂರೈಸಿದ ಸ್ಮಿತ್, ಸಂಪತ್ ಐಯಂಗಾರ್ ಮತ್ತು ಜಯರಾಮ್ ಎಂಬವರು ಆ ಪ್ರದೇಶದ ಶಿಲೆಗಳೆಲ್ಲ ಅಗ್ನಿಶಿಲಾ ಮೂಲದವೆಂದು ಅಭಿಪ್ರಾಯಪಟ್ಟಿದ್ದರು. ಅದರೆ ರಾಮರಾಯರ ಹೊಳೆನರಸೀಪುರ ಮತ್ತು ಚಿತ್ರದುರ್ಗ ಪ್ರದೇಶಗಳ ಮರುಸಮೀಕ್ಷೆಗಳಿಂದಾಗಿ ಅವು ಜಲಜಶಿಲಾ ಸಂಚಯಗಳಿಂದ ಆದುವೆಂಬುದು ಸ್ಪಷ್ಟಪಟ್ಟಿತು. ಅಲ್ಲದೆ, ಕರ್ನಾಟಕ ಶಿಲಾಸ್ತೋಮಗಳು ಪ್ರಥಮವಾಗಿ ವಿಶಿಷ್ಟ ಮಾದರಿಯವೆಂಬುದನ್ನು ರಾಮರಾಯರು ಪ್ರಥಮವಾಗಿ ಶ್ರುತಪಡಿಸಿದರು. ಪೈರಾಕ್ಸೀನ್ ಗ್ರಾನುಲೈಟುಗಳು ಅಗ್ನಿಶಿಲಾ ಅಂತಸ್ಸರಣದಿಂದ ಆದುವಲ್ಲವೆಂದೂ ಅವರು ನಿಖರವಾಗಿ ನಿರೂಪಿಸಿದರು. ಮೈಸೂರು ಸರ್ಕಾರದ ವತಿಯಿಂದ ಗುಜರಾತ್ ರಾಜ್ಯದ ಬೇರಿಯ ಪ್ರದೇಶದ ಭೂವೈಜ್ಞಾನಿಕ ಸರ್ವೇಕ್ಷಣೆಗಾಗಿ ರಾಮರಾವ್ ಅವರ ಸೇವೆಯನ್ನು ಎರವಲು ನೀಡಿದ್ದರ ಸಲುವಾಗಿ ಆ ರಾಜ್ಯದ ಖನಿಜ ಮತ್ತು ಶಿಲೆಗಳ ನಿಖರ ಸಮೀಕ್ಷೆ ಸಾಧ್ಯವಾಯಿತು.

ರಾಮರಾವ್, ಅಮೆರಿಕದ ಸಂಯುಕ್ತಸಂಸ್ಥಾನಗಳು ಮತ್ತು ಯುರೋಪ್‍ಗಳ ಪ್ರವಾಸವನ್ನು ಮುಗಿಸಿ ಸ್ವದೇಶಕ್ಕೆ ಬರುವ ವೇಳೆಗೆ ಹಲವಾರು ಶುಭಸಮಾಚಾರಗಳು ಇವರಿಗಾಗಿ ಕಾದಿದ್ದವು. ಭಾರತೀಯ ವಿಜ್ಞಾನ ಕಾಂಗ್ರೆಸ್‍ನ (1935) ಭೂವಿಜ್ಞಾನ ವಿಭಾಗೀಯ ಅಧ್ಯಕ್ಷರಾಗಿ ಆಯ್ಕೆಯಾದದ್ದು ಮತ್ತು ನ್ಯಾಷನಲ್ ಇನ್‍ಸ್ಟಿಟೂಟ್ ಆಫ್ ಸೈನ್ಸ್ ಮತ್ತು ಇಂಡಿಯನ್ ಅಕಾಡಮಿ ಆಫ್ ಸೈನ್ಸ್ ಸಂಸ್ಥೆಗಳು ತಮ್ಮ ಸದಸ್ಯತ್ವ ನೀಡಿ ಗೌರವಿಸಿದ್ದು- ಇವು ರಾಮರಾಯರಿಗೆ ಸಂದ ಗೌರವಗಳು. ಎಲ್ಲಕ್ಕಿಂತ ಮಿಗಿಲಾಗಿ ಮೈಸೂರು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿ ಬಡ್ತಿಯೂ ಲಭಿಸಿತು (1935). ಅದೇ ವರ್ಷ ರಾಮರಾವ್ ಅವರು ಧಾರವಾಡ ಶಿಲಾಸ್ತೋಮದ ವರ್ಗೀಕರಣವನ್ನು ಪ್ರಕಟಿಸಿದರು. ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭೂವಿಜ್ಞಾನ ಮಂಡಲಿಗಳು ಇಂದಿಗೂ ಅನುಸರಿಸುತ್ತಿರುವ ವರ್ಗೀಕರಣ ಹಾಗೂ ಸಮದೂಗುವಿಕೆಯ ಸೂತ್ರವಾಗಿ ಉಳಿದುಬಂದಿದೆ. ಇವರು ನಿರ್ದೇಶಕರಾಗಿದ್ದ 14 ವರ್ಷಗಳ ಅವಧಿಯಲ್ಲಿ ಇಲಾಖೆ ಗಮನಾರ್ಹ ಸಾಧನೆ ಅಭಿವೃದ್ಧಿಗಳನ್ನು ಕಂಡದ್ದೇ ಅಲ್ಲದೆ ಅಂತಾರಾಷ್ಟ್ರೀಯ ಖ್ಯಾತಿಯ ಭೂವಿಜ್ಞಾನಿಗಳನ್ನು ಆಕರ್ಷಿಸಿತು.

ರಾಮರಾವ್ ಅವರದು ಸುಲಲಿತ ಬರೆವಣಿಗೆ. 1953ರಲ್ಲಿ ತಮ್ಮ ಆತ್ಮ ಚರಿತ್ರೆಯನ್ನು 'ರಿಕಲೆಕ್ಷನ್ಸ್ ಆಫ್ ಎನ್ ಇಂಡಿಯನ್ ಜಿಯೊಲಾಜಿಸ್ಟ್ (ಭಾರತೀಯ ಭೂವಿಜ್ಞಾನಿಯೋರ್ವನ ಸವಿನೆನಪುಗಳು) ಎಂಬ ಗ್ರಂಥವನ್ನು ಬರೆದರು. ಆ ಗ್ರಂಥದಲ್ಲಿ ಭೂವಿಜ್ಞಾನಿಗೆ ಎದುರಾಗುವ ಸಮಸ್ಯೆಗಳು, ಹಾಸ್ಯಪ್ರಸಂಗಗಳು, ದಿನಚರಿಗಳಲ್ಲದೆ ನದಿ, ಪರ್ವತ, ಜಲಪಾತಗಳ ಹಾಗೂ ನಿಸರ್ಗವರ್ಣನೆಯನ್ನೂ ಸುಂದರವಾಗಿ ಚಿತ್ರಿಸಿದ್ದಾರೆ. ತಮ್ಮ ವಿಶ್ರಾಂತಜೀವನದ ಸಮಯದಲ್ಲಿ ರಾಮರಾವ್ ಭಾರತೀಯ ಭೂವಿಜ್ಞಾನ ಸಂಘದ (ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯ) ಆಜೀವ ಸದಸ್ಯರಾಗಿ, ಆ ಸಂಘಕ್ಕೆ ಎರಡು ಬಾರಿ (1964,1967) ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆ ಸಂಘದ ಏಳಿಗೆಗಾಗಿ ಕೊನೆಯ ತನಕ ಶ್ರಮಿಸಿದರು.

ರಾಮರಾವ್, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಒಟ್ಟು 90ಕ್ಕೂ ಮಿಕ್ಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವರ ಇಂಗ್ಲಿಷ್ ಬರೆವಣಿಗೆಗಳು ಪ್ರಬುದ್ಧ ಹಾಗೂ ಕಾವ್ಯಮಯವಾಗಿವೆ. ಇವರ 'ಕರ್ನಾಟಕದ ಖನಿಜ ನಿಕ್ಷೇಪಗಳು ಎಂಬ ಪುಸ್ತಕ 1959ರಲ್ಲಿ ಪ್ರಕಟವಾಯಿತು. ರಾಮಾರಾವ್ ಅವರಿಗೆ ಛಾಯಾಚಿತ್ರಕಲೆಯಲ್ಲೂ ಆಸಕ್ತಿ ಇತ್ತು. ಇಂಗ್ಲಿಷ್ ಭಾಷೆಯಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ಮೈಸೂರು ಭೂವಿಜ್ಞಾನ ಇಲಾಖೆಯಲ್ಲಿ ಇವರ ಆರಂಭದ ವರ್ಷಗಳಲ್ಲಿ ನಡೆಸಿದ ಸಮೀಕ್ಷಾ ವಿವರಣೆ, ಶಿಲೆ, ಖನಿಜ ಮತ್ತು ಅವುಗಳ ರಚನಾವಿನ್ಯಾಸಗಳ ನಕ್ಷೆ ಹಾಗೂ ಭೂಇತಿಹಾಸ ಸಂಘಟನಾ ನಿರೂಪಣೆಗಳು ಇಂದಿಗೂ ಪ್ರಸ್ತುತವೆನಿಸಿವೆ. ರಾಮರಾವ್ ತಮ್ಮ 80ನೆಯ ವಯಸ್ಸಿನಲ್ಲಿ 1970 ಫೆಬ್ರುವರಿ 15 ರಂದು ನಿಧನರಾದರು.