ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಮಾಯಣ

ವಿಕಿಸೋರ್ಸ್ದಿಂದ

ರಾಮಾಯಣ ಭಾರತದ ರಾಷ್ಟ್ರೀಯ ಮಹಾಕಾವ್ಯಗಳಲ್ಲೊಂದು. ಇನ್ನೊಂದು ಮಹಾಭಾರತದ (ನೋಡಿ- ಮಹಾಭಾರತ) ರಾಮಾಯಣ ಭಾರತದ ಜನಜೀವನ ಹಾಗೂ ಸಂಸ್ಕøತಿಗಳ ಮೇಲೆ ಅಪಾರ ಪ್ರಭಾವ ಬೀರಿದೆ. ಏಷ್ಯದ ಹಾಗೂ ಇತರ ದೇಶಗಳ ಮೇಲೂ ಇದರ ಪ್ರಭಾವವಿರುವುದನ್ನು ನೋಡಬಹುದು. ವೇದಗಳ ಅನಂತರ ಆರ್ಯ ಸಂಸ್ಕøತಿಯ ಚಿತ್ರವನ್ನು ಮೂಡಿಸುವ ರಾಷ್ಟ್ರೀಯ ಇತಿಹಾಸವಿದು. ಪರಿಪೂರ್ಣ ಮಾನವನನ್ನು, ವಿಶ್ವಸನೀಯ ಸೇವಕನನ್ನು, ನಿಜವಾದ ಪ್ರತಿನಾಯಕನನ್ನು ಚಿತ್ರಿಸಿರುವುದು ರಾಮಾಯಣದ ವೈಶಿಷ್ಟ್ಯ.

ರಾಮಾಯಣದ ಕಥೆ ವಾಲ್ಮೀಕಿಗಿಂತಲೂ ಮೊದಲೇ ಜನಪದ ಸಂಪ್ರದಾಯದಲ್ಲಿ ಜೀವಂತವಾಗಿತ್ತು ಎನಿಸುತ್ತದೆ. ಅದನ್ನು ಶಿಷ್ಟಕಾವ್ಯವನ್ನಾಗಿ ಮೂಡಿಸಿ ಭಾರತದ ಕಾವ್ಯಪರಂಪರೆಯಲ್ಲಿ ಅತ್ಯುತ್ತಮ ಮಟ್ಟಕ್ಕೆ ತಂದವನು ವಾಲ್ಮೀಕಿ ರಾಮಾಯಣ ಒಂದು ಐತಿಹಾಸಿಕ ಸತ್ಯವೆಂದೇ ಭಾರತೀಯರ ನಂಬಿಕೆ. ಅಯೋಧ್ಯೆ, ಮಿಥಿಲೆ, ಚಿತ್ರಕೂಟ, ಗೋಮತಿ, ತಮಸಾನದಿ, ದಂಡಕಾರಣ್ಯ, ಕಿಷ್ಕಿಂಧೆ ಮುಂತಾದ ಸ್ಥಳಗಳು, ಕಾಡು ಕಣಿವೆ ಮತ್ತು ನದಿಗಳು ಇಂದಿಗೂ ಪ್ರಸಿದ್ಧವಾಗಿದೆ. ಆದರೆ ಅವುಗಳಿಗೂ ರಾಮಾಯಣಕ್ಕೂ ಇರುವ ಸಂಬಂಧವನ್ನು ಖಚಿತಪಡಿಸಲು ಹೆಚ್ಚಿನ ಆಧಾರಗಳು ಬೇಕಿದೆ. ಇಕ್ಷ್ವಾಕು ವಂಶದ ದಶರಥ ಮತ್ತು ರಾಮ ಪ್ರಸಿದ್ಧ ರಾಜರೆಂದು ಋಗ್ವೇದದಲ್ಲಿ ಉಲ್ಲೇಖಗೊಂಡಿದ್ದಾರೆ. ಆದರೆ ಅವರು ರಾಮಾಯಣದ ವ್ಯಕ್ತಿಗಳೇ ಎಂಬುದು ಸಂದೇಹ, ರಾಮಾಯಣದ ಭೌಗೋಳಿಕ ವಲಯ ಭಾರತದ ಉತ್ತರದ ತುದಿಯಿಂದ ಶ್ರೀಲಂಕಾದವರೆಗೂ ಹರಡಿದೆ. ರಾಮಕಥೆ ಅಲ್ಪ ಸ್ವಲ್ಪ ವ್ಯತ್ಯಾಸಗಳೊಡನೆ ಕ್ರಿಸ್ತಪೂರ್ವ ಅನೇಕ ಶತಮಾನಗಳ ಹಿಂದಿನ ದಶರಥ ಜಾತಕ ಮುಂತಾದವುಗಳಲ್ಲಿ ಮೂಡಿಬಂದಿದೆ. ಇವುಗಳಲ್ಲಿ ಯಾವುದು ಎಂದು ನಿರ್ಧರಿಸುವುದು ಸಾಧ್ಯವಿಲ್ಲ. ಮಹಾಭಾರತದ ವನಪರ್ವದಲ್ಲೂ ರಾಮಾಯಣದ ಕಥೆ ಇರುವುದರಿಂದ ಕೆಲವರು ಅದೇ ವಾಲ್ಮೀಕಿ ರಾಮಾಯಣದ ಮೂಲ ಎಂದು ಭಾವಿಸಿದ್ದಾರೆ. ಆದರೆ ಬಹುಜನ ಸಮ್ಮತವಾದ ಅಭಿಪ್ರಾಯದಂತೆ ಮಹಾಭಾರತಕ್ಕಿಂತ ಮೊದಲೇ ರಾಮಾಯಣ ವಾಲ್ಮೀಕಿಯಿಂದ ರಚಿತವಾಯಿತು. ರಾಮಾಯಣ ರಚಿತವಾದ ಕಾಲ ಕ್ರಿ.ಪೂ. 2000 ವರ್ಷಗಳೆಂದೂ ಕ್ರಿ.ಶ. 2ನೆಯ ಶತಮಾನವೆಂದೂ ಅಭಿಪ್ರಾಯವಿದೆ. ಮಹಾಭಾರತ ಮತ್ತು ರಾಮಾಯಣಗಳ ಆಧಾರದಿಂದ ಬಂದಿರುವ ಇತರ ಸಾಹಿತ್ಯ ಕೃತಿಗಳನ್ನು ಗಮನಿಸಿದರೆ ಕ್ರಿ.ಪೂ. 7-8 ಶತಮಾನಗಳ ಹಿಂದೆ ರಾಮಾಯಣ ರಚಿತವಾಯಿತೆಂದು ಹೇಳಬಹುದು.

ವಾಲ್ಮೀಕಿಯ ಜೀವನ ಸಾಧನೆ ಮತ್ತು ಮಹಾಕಾವ್ಯ ರಚನೆಯ ಬಗ್ಗೆ ಅನೇಕ ದಂತಕಥೆಗಳಿವೆ. ಲೌಕಿಕ ಸಂಸ್ಕøತ ಸಾಹಿತ್ಯದ ಆದಿಕವಿ ಎಂಬ ಎಲ್ಲ ಕೀರ್ತಿಗೆ ಪಾತ್ರನಾಗಿರುವನು ಮಹಾಕವಿ ವಾಲ್ಮೀಕಿ. ಒಟ್ಟು ಭಾರತೀಯ ಸಾಹಿತ್ಯದ ಮೇಲೆ ವಾಲ್ಮೀಕಿ ಬೀರಿದ ಪ್ರಭಾವ ಇಡೀ ಭಾರತದ ಕಾವ್ಯ ನಾಟಕಾದಿಗಳ ಮೇಲೆ ಮಾತ್ರವಲ್ಲದೆ ಒಟ್ಟು ಜನಜೀವನದ ಮೇಲೂ ಸಂಸ್ಕøತಿಯ ಮೇಲೂ ಆಗಿದೆ. ಶಿಷ್ಟ ಹಾಗೂ ಜನಪದ ಸಂಪ್ರದಾಯದಲ್ಲಿ ರಾಮಾಯಣದ ಕಥೆಗಳು ವಾಲ್ಮೀಕಿಯನ್ನು ಅನುಸರಿಸಿಯೊ ಇಲ್ಲವೆ ವಾಲ್ಮೀಕಿಗಿಂತ ಭಿನ್ನವಾಗಿಯೊ ವಿಕಾಸಗೊಂಡಿವೆ.

ವಾಲ್ಮೀಕಿಯ ಕಾಲದೇಶಗಳನ್ನು ಖಚಿತವಾಗಿ ಹೇಳಲು ಆಧಾರಗಳಿಲ್ಲ. ಆದರೆ ವಾಲ್ಮೀಕಿ ರಾಮಾಯಣದ ಸಂದೇಶ ಮಾತ್ರ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಪ್ರತಿಧ್ವನಿಸುತ್ತಿದೆ. ರಾಮಾಯಣ ಚಿರಂತನವಾದುದೆಂಬುದು ಭಾರತೀಯರ ನಂಬಿಕೆ. ಸುಸಂಸ್ಕøತ ಜೀವನದ ಆದರ್ಶಗಳನ್ನು ತನ್ನ ಪಾತ್ರಗಳ ಮೂಲಕ ಸಮರ್ಥವಾಗಿ ನಿರೂಪಿಸಿದ ಮಹಾಕವಿ ವಾಲ್ಮೀಕಿ. ರಾಮ ಸೌಶೀಲ್ಯದ ಪ್ರತೀಕ. ಸೀತೆ, ಲಕ್ಷ್ಮಣ, ಭರತ, ಆಂಜನೇಯ ಮುಂತಾದ ಪಾತ್ರಗಳು ಆದರ್ಶವ್ಯಕ್ತಿಗಳನ್ನು ಪ್ರತಿನಿಧಿಸುವ ಪಾತ್ರಗಳು. ಭಾರತದ ಹಲವು ಭಾಷೆಗಳಲ್ಲಿ ಸಾವಿರಾರು ರಾಮಾಯಣಗಳು ಮೂಡಿಬಂದರೂ ವಾಲ್ಮೀಕಿ ರಾಮಾಯಣ ನೇರವಾಗಿ ಇತರ ಸಾಹಿತ್ಯ ಕೇಂದ್ರಬಿಂದುವಿನಂತಿದೆ. ವಾಲ್ಮೀಕಿ ರಾಮಾಯಣ ನೇರವಾಗಿ ಇತರ ಸಾಹಿತ್ಯ ಕೃತಿಗಳ ಮೇಲೆ ಪ್ರಭಾವ ಬೀರಿರುವುದಲ್ಲದೆ ಪರೋಕ್ಷವಾಗಿ ಜನಪದ ಸಾಹಿತ್ಯದ ಮೇಲೆ ಹಾಗೂ ವಿಭಿನ್ನ ಸಂಪ್ರದಾಯಗಳಿಗೆ ಸೇರಿದ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ. (ಆರ್.ವಿ.ಎಸ್.ಎಸ್.)

ವಾಲ್ಮೀಕಿ ರಾಮಾಯಣದ ಕಥೆ ಸ್ಥೂಲವಾಗಿ ಹೀಗಿದೆ: ಸರಯೂ ನದಿಯ ತೀರದಲ್ಲಿ ಪ್ರಸಿದ್ಧವಾದ ಕೋಸಲರಾಜ್ಯದ ರಾಜಧಾನಿ ಅಯೋಧ್ಯೆ. ಇಕ್ಷ್ವಾಕುವಂಶದ ಪ್ರಸಿದ್ಧದೊರೆ ದಶರಥ ಅಯೋಧ್ಯೆಯ ರಾಜ. ಇವನಿಗೆ ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂವರು ಮಡದಿಯರು. ಗುಣಶಾಲಿಗಳೂ ರಾಜಕಾರ್ಯಾಧ್ಯಕ್ಷರೂ ಆದ ಎಂಟು ಜನ ಅಮಾತ್ಯರು ರಾಜ-ಪ್ರಜೆಗಳ ಸಂಬಂಧವನ್ನು ಅನ್ಯೋನ್ಯವಾಗಿಬಿಟ್ಟಿದ್ದರು. ಸಮೃದ್ಧವಾದ ಅಯೋಧ್ಯೆಯಲ್ಲಿ ಮಹಾರಾಜ ದಶರಥನಿಗೆ ಮಕ್ಕಳಿಲ್ಲದಿರುವುದು ಒಂದುದೊಡ್ಡ ಚಿಂತೆಯಾಗಿತ್ತು. ದಶರಥ ಪುತ್ರಪ್ರಾಪ್ತಿಗಾಗಿ ಹಂಬಲಿಸಿ ಅಶ್ವಮೇಧಯಾಗವನ್ನು ನಡೆಸಲು ಇಚ್ಛಿಸಿದ. ಈ ಬಗ್ಗೆ ತನ್ನ ಮಂತ್ರಿಯೂ ಸಾರಥಿಯೂ ಆಪ್ತನೂ ಆದ ಸಮಂತ್ರನೊಡನೆ ಸಮಾಲೋಚಿಸಿದ. ರಾಜ್ಯದ ಗುರುಹಿರಿಯರನ್ನು ಆಮಂತ್ರಿಸಿ ಅವರ ಅಭಿಪ್ರಾಯ ಪಡೆದು ಸರಯೂ ನದಿಯ ಉತ್ತರ ತೀರದಲ್ಲಿ ಯಾಗವನ್ನು ನಡೆಸುವ ಸಿದ್ಧತೆಗಳು ನಡೆದವು. ಯಾಗದ ಋತ್ವಿಜನಾಗಿ ಋಷ್ಯಶೃಂಗನೂ ಅಧ್ವರ್ಯುವಾಗಿ ವಸಿಷ್ಠನೂ ಕಾರ್ಯನಿರ್ವಹಿಸಿದರು. ಸುಯಜ್ಞ, ವಾಮದೇವ, ಜಾಬಾಲಿ ಮತ್ತು ಕಾಶ್ಯಪ ಮುನಿಗಳು ಯಾಗದಲ್ಲಿ ಪಾಲ್ಗೊಂಡರು. ಯಾಗದ ತರುವಾಯ ದಶರಥನಿಗೆ ಪುತ್ರೋತ್ಪತ್ತಿಯ ಸಲುವಾಗಿ ಋಷ್ಯಶೃಂಗ ಪುತ್ರಕಾಮೇಷ್ಟಿಯನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿ ದಶರಥನಿಗೆ ದಿವ್ಯ ಪಾಯಸವನ್ನು ನೀಡಿದ. ಪಾಯಸ ಪಡೆದು ಅಂತಃಪುರಕ್ಕೆ ತೆರಳಿದ ದಶರಥ `ನಿನಗೆ ಪುತ್ರನನ್ನು ಕೊಡುವ ಈ ಪಾಯಸವನ್ನು ಸ್ವೀಕರಿಸು, ಎನ್ನುತ್ತ ಆ ಪಾಯಸದಲ್ಲಿ ಅರ್ಧಭಾಗವನ್ನು ಕೌಸಲ್ಯೆಗೆ ಕೊಟ್ಟ. ಉಳಿದುದನ್ನು ಸುಮಿತ್ರೆಗೂ ಕೈಕೇಯಿಗೂ ನೀಡಿದ. ಚೈತ್ರಮಾಸ ಶುಕ್ಲಪಕ್ಷದ ನವಮೀ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ ಪುಷ್ಯನಕ್ಷತ್ರ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ ಅದೇ ದಿನ ಅಶ್ಲೇಷಣಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ ಶತ್ರುಘ್ನರು ಸುಮಿತ್ರೆಗೂ ಪುತ್ರರಾಗಿ ಜನಿಸಿದರು. ಅಯೋಧ್ಯಾನಗರ ಸಂಭ್ರಮಿಸಿತು.

ದಶರಥ ಮಕ್ಕಳನ್ನು ಅಪಾರ ಪ್ರೀತಿಯಿಂದ ಸಲಹತೊಡಗಿದ. ಹಿರಯನಾದ ರಾಮನಲ್ಲಿ ದಶರಥನಿಗೆ ವಿಶೇಷ ಅಕ್ಕರೆ. ವಸಿಷ್ಠಾಧಿ ಗುರುಗಳಿಂದ ಮಕ್ಕಳಿಗೆ ಧನುರ್ವಿದ್ಯಾದಿಗಳನ್ನು ಕಲಿಸಿದ. ವಿಶ್ವಾಮಿತ್ರನ ಮಾರ್ಗದರ್ಶನದಲ್ಲಿ ವಿಶೇಷವಾಗಿ ರಾಮಲಕ್ಷ್ಮಣರು ಸಕಲ ವಿದ್ಯಾಪಾರಂಗತರಾದರು. ವಿಶ್ವಾಮಿತ್ರನ ಸಲಹೆಯಂತೆ ತಾಟಕಿಯನ್ನು ಮಾರೀಚ ಸುಬಾಹು ರಾಕ್ಷಸದ್ವಯರನ್ನೂ ರಾಮ ಸಂಹರಿಸಿದ. ರಾಮಲಕ್ಷ್ಮಣರ ಕಲಿಕೆಯ ಶ್ರದ್ಧಾಸಕ್ತಿಗಳನ್ನು ಗಮನಿಸಿದ ವಿಶ್ವಾಮಿತ್ರ ಅವರಿಗೆ ಅನೇಕ ದಿವ್ಯಾಸ್ತ್ರಗಳನ್ನೂ ಅವುಗಳ ಪ್ರಯೋಜನಗಳನ್ನೂ ಕಲಿಸಿದ. ರಾಮಲಕ್ಷ್ಮಣರು ಧನುರ್ವಿದ್ಯಾ ಪಾರಂಗತರೂ ಆದರು. ಜೊತೆಗೆ ಕಾಡಿನ ದಾರಿಯಲ್ಲಿ ಸಾಗುವಾಗ ಅನೇಕ ನದಿ ವನಗಳ, ಸ್ಥಳಗಳ, ನಾನಾ ಪ್ರಕಾರದ ಪಕ್ಷಿ ಪ್ರಾಣಿಗಳ ಪರಿಚಯವನ್ನೂ ವಿಶ್ವಾಮಿತ್ರರಿಂದ ಮಾಡಿಕೊಂಡರು. ರಾಮಾಶ್ರಮ ವಿಶಾಲಾನಗರ ದರ್ಶನ, ಅಹಲ್ಯಾಶಾಪವಿಮೋಚನೆ ಇವರ ಪ್ರಯಾಣ ಕಾಲದಲ್ಲಿ ನಡೆದವು.

ಈ ಕಡೆ ಮಿಥಿಲಾನಗರದ ಸೀರಧ್ವಜ ಜನಕ ತನಗೆ ದೊರಕಿದ ಕನ್ಯೆಗೆ ಸೀತೆ ಎಂದು ನಾಮಕರಣ ಮಾಡಿದ್ದ. ಬೆಳೆದು ದೊಡ್ಡವಳಾದ ಮಗಳಿಗೆ ವಿವಾಹ ಮಾಡಲು ಬಯಸಿದ. ಆಕೆಯನ್ನು ವಿವಾಹವಾಗ ಬಯಸಿದವರು ಶಿವನಿಂದ ನ್ಯಾಸವಾಗಿ ಬಂದಿದ್ದ ಶಿವಧನುಸ್ಸನ್ನು ಹೆದೆ ಏರಿಸಬೇಕಾಗಿತ್ತು. ಈ ವಿಚಾರ ತಿಳಿದ ವಿಶ್ವಾಮಿತ್ರ ರಾಮಲಕ್ಷ್ಮಣರೊಡನೆ ಮಿಥಿಲಾನಗರಕ್ಕೆ ಬಂದು ರಾಮನಿಗೆ ಶಿವಧನುಸ್ಸನ್ನು ಹೆದೆ ಏರಿಸಲು ಆಜ್ಞಾಪಿಸಿದ. ರಾಮ ಅನಾಯಾಸವಾಗಿ ಧನಸ್ಸನ್ನು ಹೆದೆ ಏರಿಸುವಾಗ ಧನಸ್ಸು ಮುರಿಯಿತು. ಜನಕ ತನ್ನ ಮಗಳಾದ ಸೀತೆಯನ್ನು ರಾಮನಿಗೆ ವಿವಾಹ ಮಾಡಿಕೊಡಲು ಒಪ್ಪಿದ. ಅಯೋಧ್ಯೆಗೆ ವಿಷಯ ತಿಳಿದು ದಶರಥ ಮಹಾರಾಜನ ಸಕಲ ಪರಿವಾರವೂ ಮಿಥಿಲೆಗೆ ಆಗಮಿಸಿತು. ರಾಮನಿಗೆ ಸೀತೆಯನ್ನೂ ಲಕ್ಷ್ಮಣನಿಗೆ ಜನಕನ ಔರಸ ಪುತ್ರಿ ಊರ್ಮಿಳೆಯನ್ನೂ ಕೊಟ್ಟು ವಿವಾಹ ಮಾಡಲಾಯಿತು. ಇದೇ ಮುಹೂರ್ತದಲ್ಲಿ ಜನಕನ ತಮ್ಮನಾದ ಕುಶಧ್ವಜನ ಇಬ್ಬರು ಹೆಣ್ಣು ಮಕ್ಕಳಾದ ಮಾಂಡವಿ ಮತ್ತು ಶ್ರುತಕೀರ್ತಿಯರನ್ನು ಕ್ರಮವಾಗಿ ಭರತ ಶತ್ರುಘ್ನರಿಗೆ ಕೊಟ್ಟು ವಿವಾಹ ಮಾಡಲಾಯಿತು. ವಿವಾಹದ ತರುವಾಯ ತನ್ನ ಕರ್ತವ್ಯ ಮುಗಿಯಿತೆಂದು ತಿಳಿಸಿದ ವಿಶ್ವಾಮಿತ್ರ ಎಲ್ಲರನ್ನೂ ಆಶೀರ್ವದಿಸಿ ತಪಸ್ಸಿಗೆ ಹೋದ. ದಶರಥ ಪರಿವಾರ ಸಮೇತ ಅಯೋಧ್ಯೆಗೆ ಹಿಂತಿರುಗಿದ.

ದಶರಥನಿಗೆ ರಾಮನಲ್ಲಿ ಅತೀವ ಪ್ರೀತಿ ಅಕ್ಕರೆ, ರಾಮನೂ ಅಯೋಧ್ಯೆಯ ಪ್ರಜೆಗಳಿಗೆ ಅತ್ಯಂತ ಪ್ರೀತಿಯ ವ್ಯಕ್ತಿ. ರಾಮನಿಗೆ ಯುವರಾಜ ಪದವಿಯನ್ನು ಕೊಟ್ಟು ಪಟ್ಟಾಭಿಷೇಕ ಮಾಡಲು ದಶರಥ ಅಪೇಕ್ಷಿಸಿದ. ಪಟ್ಟಾಭಿಷೇಕಕ್ಕೆ ಅಯೋಧ್ಯೆಯಲ್ಲಿ ಸಿದ್ಧತೆಗಳಾಗುತ್ತಿರುವ ಸಂಗತಿಯನ್ನು ತನ್ನ ದಾಸಿ ಮಂಥರೆಯಿಂದ ಕೈಕೇಯಿ ತಿಳಿದುಕೊಂಡಳು. ಕೈಕೇಯಿ ದಶರಥನ ಪ್ರೀತಿಯ ಕಿರಿಯ ರಾಣಿ. ಹಿಂದೊಮ್ಮೆ ಇಂದ್ರನನ್ನು ಅಸುರ ತಿಮಿಧ್ವಜ ಪೀಡಿಸುತ್ತಿರಲು ದಶರಥನ ಸಹಾಯ ಪಡೆದ ಇಂದ್ರ ತಿಮಿಧ್ವಜನ ಸಂಹಾರಮಾಡಿದ್ದ. ಆ ಸಂದರ್ಭದಲ್ಲಿ ದಶರಥನ ಜೊತೆಗಿದ್ದ ಕೈಕೀಯಿ ದಶರಥನ ರಕ್ಷಣೆ ಮಾಡಿದ್ದಳು. ಇದರಿಂದ ಪ್ರಸನ್ನನಾದ ದಶರಥ ಎರಡು ವರಗಳನ್ನು ಕೇಳವಂತೆ ಹೇಳಿದ್ದ. ಈ ವರಗಳನ್ನು ಸಂದರ್ಭದಲ್ಲಿ ಪಡೆಯುವುದಾಗಿ ಹೇಳಿದ್ದ ಕೈಕೇಯಿ ರಾಮನ ಪಟ್ಟಾಭಿಷೇಕದ ಸಮಯವೇ ವರಕೇಳಲು ಸೂಕ್ತವೆಂದು ತಿಳಿದಳು. ರಾಮನನ್ನು ವನವಾಸಕ್ಕೆ ಕಳಿಸಬೇಕೆಂದೂ ತನ್ನ ಮಗ ಭರತನಿಗೆ ಪಟ್ಟಾಭಿಷೇಕ ಮಾಡಬೇಕೆಂದೂ ಎರಡು ವರಗಳನ್ನು ಕೇಳಿದಳು. ಇದರಿಂದ ದಶರಥ ಆಘಾತಗೊಂಡರೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪರ್ಯಾಯ ವರ ಕೇಳಲು ಬೇಡಿದ. ಆದರೆ ಕೈಕೇಯಿ ಹಠ ಬಿಡಲಿಲ್ಲ. ಪರಿಸ್ಥಿತಿಯನ್ನರಿತ ರಾಮ ತಂದೆಯ ವಚನ ಪಾಲನೆಗಾಗಿ ಹಾಗೂ ಚಿಕ್ಕಮ್ಮನ ಆನಂದಕ್ಕಾಗಿ ವನವಾಸಕ್ಕೆ ಹೊರಟ. ಅವನೊಂದಿಗೆ ಲಕ್ಷ್ಮಣನೂ ಪತ್ನಿಯಾದ ಸೀತೆಯೂ ಹೊರಟರು. ಆ ಮೂವರನ್ನೂ ಇಡೀ ಅಯೋಧ್ಯೆ ಕಣ್ಣೀರಿಡುತ್ತ ಬೀಳ್ಕೊಟ್ಟಿತು. ಶೃಂಗವೇರುಪುರವನ್ನು ತಲುಪಿದ ರಾಮಸೂತನಾಗಿ ಬಂದಿದ್ದ ಸುಮಂತ್ರನನ್ನು ಗಂಗಾತೀರದಲ್ಲಿ ಹಿಂದಕ್ಕೆ ಕಳುಹಿಸಿದ. ಅಲ್ಲಿ ರಾಮಲಕ್ಷ್ಮಣ ಸೀತೆಯರಿಗೆ ರಾಮನ ಮಿತ್ರನೂ ನಿಷಾದರಾಜನೂ ಆದ ಗುಹನ ದರ್ಶನವಾಯಿತು. ರಾಮ ಸೀತೆ ಲಕ್ಷ್ಮಣ-ಈ ಮೂವರೂ ಅನಂತರ ಅನೇಕ ಅಡವಿಗಳನ್ನೂ ನದಿಗಳನ್ನೂ ದಾಟುತ್ತ ಭರದ್ವಾಜ ಮುನಿಗಳ ಸೂಚನೆಯಂತೆ ಚಿತ್ರಕೂಟಕ್ಕೆ ತೆರಳಿ ಪರ್ಣಶಾಲೆಯನ್ನು ರಚಿಸಿಕೊಂಡು ವಾಸಿಸತೊಡಗಿದರು.

ರಾಮನ ನಿರ್ಗಮನದ ಅನಂತರ ದಶರಥಮಹಾರಾಜ ಪುತ್ರಶೋಕದಿಂದ ಕೊರಗುತ್ತ ರಾಮನನ್ನೇ ಹಂಬಲಿಸುತ್ತ ಮರಣಹೊಂದಿದ. ಆಗ ವಸಿಷ್ಠಾದಿ ಹಿರಿಯರು ಭರತನಿಗೆ ರಾಜನಾಗುವಂತೆ ಸೂಚಿಸಿದರು. ಅವರ ಸಲಹೆಗೆ ಭರತ ಒಪ್ಪಲಿಲ್ಲ. ಅರಣ್ಯಕ್ಕೆ ರಾಮನಿದ್ದಲ್ಲಿಗೆ ತೆರಳಿ ಹಿಂತಿರುಗಬೇಕೆಂದು ಅಣ್ಣನನ್ನು ವಿನಯದಿಂದ ಬೇಡಿಕೊಂಡ. ತಂದೆಯ ಮಾತಿಗೆ ವಿಧೇಯನಾದ ರಾಮ ಹದಿನಾಲ್ಕು ವರ್ಷಗಳವರೆಗೆ ರಾಜ್ಯಕ್ಕೆ ಹಿಂದಿರುಗಲು ಸಾಧ್ಯವಿಲ್ಲವೆಂದು ಹೇಳಿ ತನ್ನ ಪಾದುಕೆಗಳನ್ನು ಪ್ರತಿನಿಧಿಯಾಗಿ ಭರತನಿಗೆ ನೀಡಿದ. ಭರತ ಹಿಂದಿರುಗಿ ಬಂದು ನಂದಿಗ್ರಾಮದಲ್ಲಿ ರಾಮನ ಆಗಮನವನ್ನು ಪ್ರತೀಕ್ಷೆಮಾಡುತ್ತ ರಾಜ್ಯಭಾರ ಮಾಡತೊಡಗಿದ. ಭರತನ ಇಷ್ಟ ನೆರವೇರದಿರುವುದರಿಂದ ಪುರಜನರು ಮತ್ತೆ ಬಂದು ತನ್ನನ್ನು ಕಾಡಬಹುದೆಂದು ಯೋಚಿಸಿದ ರಾಮ ದಂಡಕಾರಣ್ಯವನ್ನು ಪ್ರವೇಶಿಸಿದ. ದಂಡಕಾರಣ್ಯದಲ್ಲಿ ರಾಮ ಶರಭಂಗ, ಸುಶೀಷ್ಣ, ಅಗಸ್ತ್ಯ ಮತ್ತು ಅಗಸ್ತು ಸೋದರನ್ನು ಭೇಟಿಯಾದ. ಅಗಸ್ತ್ಯ ನೀಡಿದ ಇಂದ್ರಧನುಸ್ಸನ್ನೂ ಖಡ್ಗವನ್ನೂ ಅಕ್ಷಯಾಸ್ತ್ರಗಳಿರುವ ಎರಡು ಬತ್ತಳಿಕೆಗಳನ್ನೂ ಪಡೆದ. ದಂಡಕಾರಣ್ಯದಲ್ಲಿ ಕಾಮರೂಪಿಣಿಯಾದ ಶೂರ್ಪಣಖಿಯನ್ನು ವಿರೂಪಗೊಳಿಸಿದ. ಅವಮಾನಿತಳಾದ ಆಕೆ ಖರ, ದೂಷಣ ಮತ್ತು ತ್ರಿಶಿರ ಎಂಬ ರಾಕ್ಷಸರನ್ನು ರಾಮನ ಸಂಹಾರಕ್ಕಾಗಿ ಕಳುಹಿಸಿದಳು. ಆ ರಾಕ್ಷರನ್ನೂ ಅವರೊಡನೆ ಬಂದ ಹದಿನಾಲ್ಕುಸಾವಿರ ರಾಕ್ಷಸ ಸೈನ್ಯವನ್ನೂ ರಾಮಲಕ್ಷ್ಮಣರು ಸಂಹರಿಸಿದರು. ತನ್ನ ತಂಗಿಗಾದ ಅವಮಾನವನ್ನೂ ತನ್ನ ಬಂಧುಗಳ ವಧೆಯನ್ನೂ ತಿಳಿದ ರಾವಣ ಕೋಪದಿಂದ ಸಿಡಿದೆದ್ದ. ರಾಮನನ್ನು ವಂಚಿಸುವುದಕ್ಕಾಗಿ ಮಾವ ಮಾರೀಚನ ಸಹಾಯ ಬೇಡಿದ. ಆದರೆ ಮಾರೀಚ ಬಲಿಷ್ಠ ರಾಮನೊಡನೆ ವಿರೋಧ ಸಲ್ಲದೆಂದು ಪರಿಪರಿಯಾಗಿ ತಿಳಿಹೇಳಿದ. ಈ ಬುದ್ಧಿಮಾತನ್ನು ಲೆಕ್ಕಿಸದ ರಾವಣ ಬಲಾತ್ಕಾರದಿಂದ ಮಾರೀಚನ ಸಹಾಯ ಪಡೆದ. ರಾಮನ ಆಶ್ರಮಕ್ಕೆ ಬಂದ ಇಬ್ಬರೂ ರಾಮಲಕ್ಷ್ಮಣ ಸೀತೆಯರನ್ನು ವಂಚಿಸಲು ಸಂಚು ಹೂಡಿದರು. ಮಾಯಾವಿ ಮಾರೀಚ ಚಿನ್ನ ಜಿಂಕೆಯಾಗಿ ಸುಳಿದಾಡತೊಡಗಿದ. ಆಕರ್ಷಣೆಗೆ ಬಲಿಯಾದ ಸೀತೆ ಆ ಜಿಂಕೆಯನ್ನು ಬಯಸಿದಳು. ಜಿಂಕೆಯನ್ನು ಹಿಡಿಯಲು ಬೆನ್ನಟ್ಟಿದ ರಾಮನ ಬಾಣಕ್ಕೆ ಬಲಿಯಾದ ಮಾರಿಚ `ಹಾ ಲಕ್ಷ್ಮಣಾ ಹಾ ಸೀತೆ ಎಂದು ಕೂಗಿ ಪ್ರಾಣಬಿಟ್ಟ. ಈ ಆರ್ತನಾದವನ್ನು ಆಲಿಸಿದ ಸೀತೆ ರಾಮನಿಗೆ ಅಪಾಯವೊದಗಿರಬೇಕೆಂದು ತಿಳಿದು ಲಕ್ಷ್ಮಣನನ್ನು ಆ ದಿಕ್ಕಿಗೆ ಕಳುಹಿಸಿದಳು. ಸಮಯಕಾಯುತ್ತಿದ್ದ ರಾವಣ ಉಪಾಯದಿಂದ ಸೀತೆಯನ್ನು ಅಪಹರಿಸಿದ. ದಾರಿಯಲ್ಲಿ ಅಡ್ಡಬಂದ ಜಟಾಯುವೆಂಬ ಪಕ್ಷಿಯನ್ನು ತೀವ್ರವಾಗಿ ಗಾಯಗೊಳಿಸಿದ.

ಸೀತಾವಿರಹದಿಂದ ದುಃಖಿತನಾದ ರಾಮ ಆಕೆ ಅಪಹೃತಳಾದ ವಿಷಯವನ್ನು ಮರಣೋನ್ಮುಖವಾದ ಜಟಾಯುವಿನಿಂದ ತಿಳಿದ. ಸೀತೆಯನ್ನು ಅರಸುತ್ತ ಅಲೆಯುತ್ತಿರುವಾಗ ಪೀಡಿಸಿದ ಕಬಂಧ ರಾಕ್ಷಸನನ್ನು ವಧಿಸಿದ. ಆ ರಾಕ್ಷಸ ಶಾಪಗ್ರಸ್ಥನಾಗಿದ್ದ ಗಂಧರ್ವ. ರಾಮದರ್ಶನದಿಂದ ಶಾಪಮುಕ್ತನಾದ ಆತ ಶಬರಿ ಎಂಬ ತಾಪಸಿಯ ಬಗ್ಗೆ ರಾಮನಿಗೆ ವಿವರಿಸಿದ. ಶಬರಿ ರಾಮನನ್ನು ಸತ್ಕರಿಸಿದಳು. ಮುಂದುವರೆದ ರಾಮಲಕ್ಷ್ಮಣರಿಗೆ ಪಂಪಾಸರೋವರ ತೀರದಲ್ಲಿ ಹನುಮಂತನ ಭೇಟಿಯಾಯಿತು. ಹನುಮಂತನ ಮಾತಿನಂತೆ ರಾಮಲಕ್ಷ್ಮಣರು ಸುಗ್ರೀವನನ್ನು ಕಂಡರು. ತಮ್ಮ ವಿಷಯವನ್ನೂ ಸೀತಾಪಹರಣವನ್ನೂ ಅರುಹಿದರು. ಅಗ್ನಿಸಾಕ್ಷಿಯಾಗಿ ರಾಮ ಸುಗ್ರೀವರು ಸಖ್ಯಮಾಡಿಕೊಂಡರು. ತರುವಾಯ ತನ್ನ ಅಣ್ಣನಾದ ವಾಲಿಗೂ ತನಗೂ ಇರುವ ವೈರತ್ವದ ವಿಚಾರವನ್ನು ರಾಮನಿಗೆ ತಿಳಿಸಿ ಅವನ ಸಹಾಯಕೋರಿದ. ಆಗ ರಾಮ ವಾಲಿಯನ್ನು ವಧಿಸಲು ಪ್ರತಿಜ್ಞೆಮಾಡಿದ. ಸುಗ್ರೀವ ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದ. ಆಗ ರಾಮ ಬಾಣ ಪ್ರಯೋಗಿಸಿ ವಾಲಿಯನ್ನು ಸಂಹರಿಸಿದ. ತರುವಾಯ ಕಿಷ್ಕಿಂಧಾ ರಾಜ್ಯದಲ್ಲಿ ಸುಗ್ರೀವನನ್ನು ರಾಜನನ್ನಾಗಿ ಮಾಡಿದ. ವಾನರ ರಾಜನಾದ ಸುಗ್ರೀವ ಸೀತೆಯನ್ನು ಹುಡುಕುವುದಕ್ಕಾಗಿ ದಿಕ್ಕುದಿಕ್ಕುಗಳಿಗೆ ವಾನರರನ್ನು ಕಳುಹಿಸಿದ. ಸಂಪಾತಿ ಎಂಬ ಪಕ್ಷಿಯಿಂದ ಸೀತೆ ಲಂಕೆಯಲ್ಲಿರುವಳೆಂದು ತಿಳಿದ ಹನುಮಂತ ಶತಯೋಜನ ವಿಸ್ತಾರವಾದ ಮಹಾಸಾಗರವನ್ನು ಲಂಘಿಸಿದ. ರಾವಣನ ರಕ್ಷಣೆಗೊಳಪಟ್ಟ ಲಂಕಾನಗರವನ್ನು ಸೇರಿದ ಹನುಮಂತ ಅಶೋಕವನದಲ್ಲಿ ಶಿಂಶುಪಾ ವೃಕ್ಷದ ಕೆಳಗೆ ರಾಮನನ್ನೇ ಧ್ಯಾನಿಸುತ್ತ ಕುಳಿತಿದ್ದ ಸೀತೆಯನ್ನು ಕಂಡ. ಹನುಮಂತ ಅವಳಿಗೆ ರಾಮನ ವೃತ್ತಾಂತವನ್ನು ನಿವೇದಿಸಿ, ರಾಮನ ಉಂಗುರವನ್ನು ನೀಡಿದ. ಅನಂತರ ಹನುಮಂತ ಅಶೋಕವನದ ಬಹಿದ್ರ್ವಾರವನ್ನು ಮುರಿದು ಯುದ್ಧಕ್ಕೆ ಬಂದ ಐವರು ಸೇನಾಪತಿಗಳನ್ನೂ ಏಳುಜನ ಮಂತ್ರಿಪುತ್ರರನ್ನೂ ಕೊಂದು ಶೂರನಾದ ಅಕ್ಷಕುಮಾರನನ್ನು ಸಂಹರಿಸಿದ. ತರುವಾಯ ಇಂದ್ರಜಿತುವಿನ ಬ್ರಹ್ಮಾಸ್ತ್ರಕ್ಕೆ ಸೆರೆಸಿಕ್ಕಿದ. ಬ್ರಹ್ಮನ ವರಬಲದಿಂದ ಹನುಮಂತ ತಾನು ಬ್ರಹ್ಮಾಸ್ತ್ರಕ್ಕೆ ಬದ್ಧನಲ್ಲವೆಂದು ತಿಳಿದಿದ್ದರೂ ತನ್ನನ್ನು ಎಳೆದುಕೊಂಡೊಯ್ಯುತ್ತಿದ್ದ ರಾಕ್ಷಸರೊಂದಿಗೆ ತಾಳ್ಮೆಯಿಂದಿದ್ದ. ತರುವಾಯ ತ್ರಿಜಟೆಯ ಆಶ್ರಯದಲ್ಲಿದ್ದ ಸೀತೆಯನ್ನುಳಿದು ಇಡೀ ಲಂಕಾನಗರವನ್ನು ಸುಟ್ಟು ರಾಮನಿಗೆ ವಿಷಯತಿಳಿಸಲು ಹಿಂತಿರುಗಿದ. ಸೀತೆಯನ್ನು ರಾಮನಿಗೆ ಒಪ್ಪಿಸಿ ಶರಣಾಗತನಾಗಲು ಮಂಡೋದರಿ ರಾವಣನಿಗೆ ತಿಳಿಯಹೇಳಿದಳು. ವಿಭೀಷಣನೂ ಅಣ್ಣ ರಾವಣನಿಗೆ ಬುದ್ಧಿವಾದ ಹೇಳಿದ; ಆದರೆ ರಾವಣ ಯಾರ ಮಾತನ್ನೂ ಕೇಳದೆ ರಾಮನನ್ನು ನಿಗ್ರಹಿಸುವುದಾಗಿ ಶಪಥತೊಟ್ಟು ಯುದ್ಧಸಾರಿದ.

ಹನುಮಂತನಿಂದ ವಿಷಯ ತಿಳಿದ ರಾಮ ನಳನಿಂದ ಸಮುದ್ರಕ್ಕೆ ಸೇತುವೆ ನಿರ್ಮಿಸಿದ. ಆ ಮಾರ್ಗದ ಮೂಲಕ ಲಂಕೆಯನ್ನು ಸೇರಿದ ರಾಮ ರಾವಣನನ್ನು ಸಂಹರಿಸಿದ. ಅನಂತರ ಸೀತೆಯನ್ನು ರಾಮ ಸ್ವೀಕಾರಮಾಡಿದರೂ ಜನರ ಮಾತಿಗೆ ಅಂಜಿ ಸೀತೆಯನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಿದ. ಅಗ್ನಿದೇವನ ನುಡಿಯಿಂದ ಸೀತೆ ಸರ್ವಥಾ ನಿರ್ದೋಷಿಯೆಂದು ಅರಿತ ರಾಮ ಸೀತೆಯನ್ನು ಸ್ವೀಕರಿಸಿದ. ವಿಭೀಷಣನನ್ನು ಲಂಕೆಯಲ್ಲಿ ರಾಕ್ಷಸೇಶ್ವರನೆಂದು ಪಟ್ಟಾಭಿಷೇಕ ಮಾಡಿಸಿ ಅಯೋಧ್ಯೆಗೆ ಹಿಂದಿರುಗಿದ. ಮಾರ್ಗದಲ್ಲಿ ಭಾರದ್ವಾಜಾಶ್ರಮದಲ್ಲಿಳಿದು ಅಲ್ಲಿಂದ ಹನುಮಂತನನ್ನು ಭರತನ ಬಳಿಗೆ ಕಳುಹಿಸಿದ. ನಂದಿಗ್ರಾಮದಲ್ಲಿ ತನ್ನ ತಮ್ಮಂದಿರೊಡನೆ ತಾನೂ ಜಟೆಯನ್ನು ತೆಗೆಯಿಸಿದ. ಅನಂತರ ಅಯೋಧ್ಯೆಯಲ್ಲಿ ಸೀತೆಯೊಡನೆ ಪಟ್ಟಾಭಿಷಿಕ್ತನಾದ. ರಾಮಾಯಣ ಮಹಾಕಾವ್ಯದಲ್ಲಿ ಅನೇಕ ಪಾತ್ರಗಳು, ಸನ್ನಿವೇಶಗಳು ಬರುತ್ತವೆ. ಅದರಲ್ಲೂ ಸುಂದರಕಾಂಡ ಮತ್ತು ಯುದ್ಧಕಾಂಡಗಳು ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ಹೊಂದಿವೆ. ಹನುಮಂತನ ಸಾಗರೋಲ್ಲಂಘನೆ, ಲಂಕಾಪ್ರವೇಶ, ಧ್ವಂಸ, ಕುಂಭಕರ್ಣನ ವೈಶಿಷ್ಟ್ಯ, ಇಂದ್ರಜಿತು ಕಾಳಗ, ಲಕ್ಷ್ಮಣನ ಚೇತರಿಕೆಗಾಗಿ ಹನುಮಂತ ಸಂಜೀವಿನಿಯನ್ನು ಹೊತ್ತುತರುವುದು ಇತ್ಯಾದಿ ಭಾಗಗಳು ಕಾವ್ಯವನ್ನು ಶಕ್ತಿಪೂರ್ಣವಾಗಿಸಿವೆ. ರಾಮ, ಲಕ್ಷ್ಮಣ, ಭರತ, ಹನುಮಂತ, ವಿಭೀಷಣ, ಸೀತೆ, ಊರ್ಮಿಳೆ, ಮಂಡೋದರಿಯಂಥ ಪಾತ್ರಗಳು ಭಾರತೀಯ ಸಾಂಸ್ಕøತಿಕ ಪರಂಪರೆಯಲ್ಲಿ ಮೌಲ್ಯಗಳಾಗಿ ನಿಂತಿವೆ. (ಎಸ್.ಆರ್.ಐ.ಬಿ.)

ರಾಮಾಯಣಕ್ಕೆ ಅಸಂಖ್ಯಾತ ಪಾಠಾಂತರಗಳಿವೆ. ಭಾರತದ ಮತ್ತು ಇತರ ದೇಶದ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ರಾಮಾಯಣದ ಕಥೆ ಮೂಡಿಬಂದಿದೆ. ಒಬ್ಬೊಬ್ಬ ಲೇಖಕನೂ ರಾಮಾಯಣಕ್ಕೆ ತನ್ನದೇ ಆದ ವ್ಯಾಖ್ಯಾನವನ್ನು ನೀಡಿದ್ದಾನೆ. ತನ್ನದೇ ಅಭಿಪ್ರಾಯಗಳನ್ನು ಅಳವಡಿಸಿದ್ದಾನೆ. ಬೇರೆ ಬೇರೆ ಸಂಸ್ಕøತಿ ಸಂಪ್ರದಾಯಗಳಿಗೆ ಅನುಸಾರವಾಗಿ ರಾಮಾಯಣದ ಕಥೆಯಲ್ಲಿ ಬದಲಾವಣೆಗಳುಂಟಾಗಿವೆ. ಮುಂದೆ ಸ್ಥೂಲವಾಗಿ ಆ ವಿಚಾರಗಳನ್ನು ಸಮೀಕ್ಷಿಸಲಾಗಿದೆ.

ಸಂಸ್ಕøತ ರಾಮಾಯಣಗಳು : ಮಹಾಭಾರತ ಮತ್ತು ಪುರಾಣಗಳು ರಾಮಾಯಣದ ಕಥೆಯನ್ನು ಸಂಕ್ಷಿಪ್ತವಾಗಿ ಹೇಳುವ ಸಂದರ್ಭಗಳು ಹಲವಿವೆ. ಮಹಾಭಾರತದಲ್ಲೇ ರಾಮಾಯಣದ ಕಥೆ ನಾಲ್ಕು ಸಂದರ್ಭಗಳಲ್ಲಿ ಬರುತ್ತದೆ. ಸುಮಾರು ಐವತ್ತು ಕಡೆ ರಾಮಾಯಣದ ಉಲ್ಲೇಖವಿದೆ. ಮಹಾಭಾರತದ ವನಪರ್ವದಲ್ಲಿರುವ ರಾಮಾಯಣದ ಕಥೆಯಲ್ಲಿ ಸೀತೆ ಜನಕನ ಸಹಜ ಪುತ್ರಿ. ಅಲ್ಲಿ ಸೀತೆಯ ಅಗ್ನಿಪ್ರವೇಶದ ಪ್ರಸಂಗವಿಲ್ಲ.

ಪುರಾಣಗಳಲ್ಲಿ ರಾಮಾಯಣದ ಕಥೆ ಅನೇಕ ಬದಲಾವಣೆಗಳನ್ನು ಹೊಂದಿದೆ. ಪದ್ಮಪುರಾಣದಲ್ಲಿ ರಾಮಾಯಣದ ಸಮಗ್ರ ಪಾಠಾಂತರವಿದೆ. ಸೀತೆಯ ಸ್ವಯಂವರಕ್ಕೆ ಇಂದ್ರ ಮತ್ತು ರಾವಣ ಬಂದು ಶಿವಧನುಸ್ಸನ್ನು ಎತ್ತಲು ವಿಫಲ ಪ್ರಯತ್ನ ಮಾಡುತ್ತಾರೆ. ಸೀತೆಯನ್ನು ರಾಮ ತ್ಯಜಿಸಲು ಒಬ್ಬ ರಜಕನ ಮಾತುಗಳು ಕಾರಣವೆಂಬ ಜನಪ್ರಿಯ ಪ್ರಸಂಗವೂ ಪದ್ಮಪುರಾಣದಲ್ಲಿದೆ. ಅಗ್ನಿಪುರಾಣದ ಪ್ರಕಾರ ರಾಮನ ವನವಾಸಕ್ಕೆ ಕಾರಣ ಅವನು ಮಂಥರೆಯ ಬಗೆಗೆ ತೋರಿದ ಕ್ರೌರ್ಯ. ಶಿವಪುರಾಣದಲ್ಲಿ ಶಿವನೇ ರಾಮಾವತಾರಕ್ಕೆ ಕಾರಣನೆಂದು ಹೇಳಲಾಗಿದೆ. ವಿಷ್ಣುಪುರಾಣ, ದೇವಿಭಾಗವತ, ಕೂರ್ಮಪುರಾಣ, ನೃಸಿಂಹಪುರಾಣ ಮುಂತಾದವು ರಾಮಾಯಣದ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿವೆ. ಸ್ಕಂದ ಪುರಾಣದ ಪ್ರಕಾರ ಆಂಜನೇಯ ರುದ್ರನ ಅವತಾರ. ಈ ಪುರಾಣದಲ್ಲಿ ರಾಮ ತೀರ್ಥಯಾತ್ರೆ ಕೈಗೊಂಡು ರಾಮೇಶ್ವರ ಮುಂತಾದ ಪ್ರದೇಶಗಳಲ್ಲಿ ಶಿವಲಿಂಗಗಳನ್ನು ಪತಿಷ್ಠಾಪನೆ ಮಾಡುತ್ತಾನೆ.

ಕೆಲವು ಪುರಾಣಗಳ ಪ್ರಕಾರ ರಾವಣ ಬಲಾತ್ಕಾರದಿಂದ ಕರೆದುಕೊಂಡು ಹೋದ ಸೀತೆ ಜನಕನ ಮಗಳಲ್ಲ. ಮಾಯಾಸೀತೆಯನ್ನು ಅಗ್ನಿದೇವ ಸೃಷ್ಟಿಸಿದಾಗ ಆಕೆ ಲಂಕಾನಗರಕ್ಕೆ ಹೋದಳೆಂದು ಬ್ರಹ್ಮವೈವರ್ತ ಪುರಾಣದಲ್ಲಿದೆ. ಕೂರ್ಮ ಪುರಾಣದಲ್ಲೂ ಮಾಯಾ ಸೀತೆಯ ಬಗ್ಗೆ ಹೇಳಲಾಗಿದೆ. ಬ್ರಹ್ಮಾಂಡ ಪುರಾಣದಲ್ಲಿ ರಾಮಾಯಣಕ್ಕೆ ತಾತ್ತ್ವಿಕ ಅರ್ಥವನ್ನು ಕೊಡಲಾಗಿದೆ. ಇದನ್ನೇ ಆಧ್ಯಾತ್ಮ ರಾಮಾಯಣವೆನ್ನುತ್ತಾರೆ. ಇದೊಂದು ಪ್ರತ್ಯೇಕ ಕಾವ್ಯವಾಗಿ ಬೆಳೆದು ರಾಮಾಯಣ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ. ಆಧ್ಯಾತ್ಮ ರಾಮಾಯಣದ ಪ್ರಕಾರ ಮಾಯಾಸೀತೆಯನ್ನು ರಾವಣ ಲಂಕೆಗೆ ಒಯ್ದದ್ದು ಮೋಕ್ಷಪ್ರಾಪ್ತಿಗಾಗಿ. ರಾವಣ ಬ್ರಹ್ಮನ ಹೊಕ್ಕುಳಲ್ಲಿ ಅಮೃತ ಭಾಂಡವಿತ್ತು. ಲಕ್ಷ್ಮಣ ವನವಾಸದ ಕಾಲದಲ್ಲಿ ಉಪವಾಸವ್ರತ ಕೈಗೊಂಡಿದ್ದು.

ವಾಲ್ಮೀಕಿ ರಾಮಾಯಣಕ್ಕೆ ಭಿನ್ನವಾದ ವಸ್ತುವನ್ನೊಳಗೊಂಡ ಇನ್ನೂ ಅನೇಕ ರಾಮಾಯಣಗಳು ಸಂಸ್ಕøತದಲ್ಲಿವೆ. ಅದ್ಭುತ ರಾಮಾಯಣದಲ್ಲಿ ಸೀತೆ ಮಂಡೋದರಿಯ ಮಗಳು. ಅವಾಲ್ಮೀಕಾಂಶಗಳಿರುವ ಇನ್ನೂ ಕೆಲವು ರಾಮಾಯಣಗಳೆಂದರೆ ಆನಂದ ರಾಮಾಯಣ, ಅಗಸ್ತ್ಯ ರಾಮಾಯಣ, ಸ್ವಯಂಭೂ ರಾಮಾಯಣ ಮುಂತಾದವು.

ಸಂಸ್ಕøತ ಸಾಹಿತ್ಯದ ಅನೇಕ ಕಾವ್ಯಗಳು ಮತ್ತು ನಾಟಕಗಳು ರಾಮಾಯಣದ ಕಥಾವಸ್ತುವನ್ನು ಬಳಸಿಕೊಂಡಿವೆ. ಸಂಸ್ಕøತ ಪಂಚ ಮಹಾಕಾವ್ಯಗಳಲ್ಲಿ ಪ್ರಧಾನವಾದುದಾದ `ರಘುವಂಶದದಲ್ಲಿ ಒಂಬತ್ತನೆಯ ಸರ್ಗದಿಂದ ಹದಿನೈದನೆಯ ಸರ್ಗದ ವರೆಗೆ ರಾಮಾಯಣ ಮತ್ತು ಉತ್ತರ ರಾಮಾಯಣ ಕಥೆಗಳು ನಿರೂಪಣೆಗೊಂಡಿವೆ. ರಾಮಾಯಣದ ಕಥೆಯನ್ನೊಳಗೊಂಡ ಮುಖ್ಯಕಾವ್ಯಗಳಲ್ಲಿ `ಸೇತುಬಂಧ ಮಹಾಕಾವ್ಯವೂ ಒಂದು.

ಕುಮಾರವ್ಯಾಸನ `ಜಾನಕೀಹರಣ' ವಾಲ್ಮೀಕಿ ರಾಮಾಯಣಕ್ಕೆ ಭಿನ್ನವಾದ ಪ್ರಸಂಗಗಳನ್ನೊಳಗೊಂಡಿದೆ. ಈ ಕಾವ್ಯದಲ್ಲಿ ವಿಶ್ವಾಮಿತ್ರ ಕೇಳಿದ ತಕ್ಷಣ ಎರಡನೆಯ ಮಾತಿಲ್ಲದೆ ದಶರಥ ರಾಮಲಕ್ಷ್ಮಣರನ್ನು ಕಳುಹಿಸುತ್ತಾನೆ. ಮುಖ್ಯವಾದ ಇನ್ನೊಂದು ಪ್ರಸಂಗವೆಂದರೆ ರಾಮ ಮತ್ತು ಸೀತೆಮದುವೆಗೆ ಮುಂಚೆಯೇ ಭೇಟಿಯಾಗುವುದು. ಕ್ಷೇಮೇಂದ್ರನ `ದಶಾವತಾರ ಚರಿತದಲ್ಲಿ ಕೂಡ ಅವಾಲ್ಮೀಕಾಂಶಗಳಿವೆ. ಇದರಲ್ಲಿ ಸೀತೆ ಲಕ್ಷ್ಮಿಯ ಅವತಾರ. ಆಕೆಯನ್ನು ರಾವಣ ಮಗಳನ್ನಾಗಿ ಪಡೆಯುತ್ತಾನೆ. ಈ ಕಾವ್ಯದಲ್ಲಿ ರಾವಣನಿಗೆ ಹೆಚ್ಚಿನ ಪ್ರಾಧಾನ್ಯ ಕೊಡಲಾಗಿದೆ. ಕ್ಷೇಮೇಂದ್ರನ `ರಾಮಾಯಣ ಮಂಜರಿ' ವಾಲ್ಮೀಕಿ ರಾಮಾಯಣದ ಸಂಕ್ಷಿಪ್ತ ರೂಪವೆಂದು ಭಾವಿಸಲಾಗಿದೆ. 11ನೆಯ ಶತಮಾನದಲ್ಲಿ ವಾಲ್ಮೀಕಿ ರಾಮಾಯಣದ ಕಥೆ ಯಾವ ರೂಪದಲ್ಲಿತ್ತು ಎಂಬುದನ್ನು `ರಾಮಾಯಣ ಮಂಜರಿ' ತಿಳಿಸುತ್ತದೆ.

ಹದಿನೇಳನೆಯ ಶತಮಾನದ ರಾಮಲಿಂಗಾಮೃತ ಎಂಬ ಕಾವ್ಯದಲ್ಲಿ ವಾಲ್ಮೀಕಿ ರಾಮಾಯಣದಲ್ಲಿಲ್ಲದ ಅನೇಕ ವಿಷಯಗಳಿವೆ. ಈ ಕಾವ್ಯದಲ್ಲಿ ವಿಷ್ಣುವಿನ ದ್ವಾರ ಪಾಲಕರಾದ ಜಯವಿಜಯರು ರಾವಣ ಮತ್ತು ಕುಂಭಕರ್ಣರಾಗಿ ಜನಿಸಿದರು. ಪ್ರಹ್ಲಾದನೇ ವಿಭೀಷಣನಾಗಿ ಜನಿಸಿದ. ಅಹಲ್ಯೆ ಶಿಲೆಯಾಗಿ ಬಿದ್ದಿರುವುದು. ಅಂಬಿಗನಾದ ಗುಹನು ರಾಮ ತನ್ನ ದೋಣಿಯನ್ನು ಹತ್ತುವಾಗ ಕಾಲು ತೊಳೆದುಕೊಂಡು ಬರಬೇಕೆನ್ನುವುದು ಮುಂತಾದ ಪ್ರಸಂಗಗಳು ಈ ಕಾವ್ಯದಲ್ಲಿವೆ. ಅಹಿರಾವಣ ಮತ್ತು ಮಹಿರಾವಣ ಎಂಬವರು ರಾಮಲಕ್ಷ್ಮಣರನ್ನು ಪಾತಳಲೋಕಕ್ಕೆ ಕೊಂಡೊಯ್ಯುವ ಕಥೆ ಕೂಡ ಈ ಕಾವ್ಯದಲ್ಲಿದೆ. ರಾಮನನ್ನು ವನಕ್ಕೆ ಕೈಕೇಯಿ ಕಳುಹಿಸಿದ್ದಕ್ಕೆ ಇಂದ್ರನ ಬೇಡಿಕೆಯೇ ಕಾರಣವೆಂದು ಹೇಳಲಾಗಿದೆ. ಈ ಕಾವ್ಯದಲ್ಲಿ ಸೀತೆಯ ಅಗ್ನಿ ಪ್ರವೇಶ ಪ್ರಸಂಗವಿಲ್ಲ. ಶ್ರೀರಾಮ ಮತ್ತು ಸೀತೆಯನ್ನು ಕಾಡಿಗೆ ಕಳುಹಿಸುವ ಪ್ರಸಂಗವೂ ಇದರಲ್ಲಿಲ್ಲ.

ರಾಮಾಯಣದ ಕಥೆಯನ್ನು ಸಂಸ್ಕøತ ನಾಟಕಕಾರರು ವಿಸ್ತøತವಾಗಿ ಬಳಸಿಕೊಂಡಿದ್ದಾರೆ. ಬಹುಶಃ ರಾಮಾಯಣದ ಕಥೆಯನ್ನು ನಾಟಕಕ್ಕೆ ಅಳವಡಿಸಿಕೊಂಡಿರುವವರಲ್ಲಿ ಭಾಸನೇ ಮೊದಲಿಗನೆನ್ನಬಹುದು. `ಪ್ರತಿಮಾ ನಾಟಕ ಮತ್ತು `ಅಭಿಷೇಕ ನಾಟಕಗಳಲ್ಲಿ ವಾಲ್ಮೀಕಿ ರಾಮಾಯಣಕ್ಕೆ ಭಿನ್ನವಾದ ಅನೇಕ ವಿಷಯಗಳಿವೆ. ಪಂಚವಟಿಯಲ್ಲಿಯೇ ರಾಮಪಟ್ಟಾಭಿಷೇಕ ನಡೆಯಿತೆಂದು `ಪ್ರತಿಮಾನಾಟಕದಲ್ಲಿದೆ. `ಅಭಿಷೇಕ ನಾಟಕದಲ್ಲಿ ಲಂಕೆಗೆ ಹೋಗಲು ಸಮುದ್ರ ತನಗೆ ತಾನೇ ದಾರಿಮಾಡಿಕೊಡುತ್ತದೆ ಎಂಬ ವಿಚಾರ ಬರುತ್ತದೆ. ರಾಮಾಯಣದ ಕಥೆಯನ್ನು ಅತ್ಯುತ್ತಮವಾಗಿ ನಾಟಕ ರೂಪದಲ್ಲಿ ಬರೆದವರಲ್ಲಿ ಭವಭೂತಿ ಪ್ರಮುಖ. ಇವನ ಮಹಾವೀರ ಚರಿತ ಮತ್ತು ಉತ್ತರ ರಾಮಚರಿತ ಪ್ರಸಿದ್ಧ ನಾಟಕಗಳು. ಮಹಾವೀರ ಚರಿತದಲ್ಲಿ ರಾಮಲಕ್ಷ್ಮಣರು ಸೀತೆ ಮತ್ತು ಊರ್ಮಿಳೆಯರನ್ನು ವಿಶ್ವಾಮಿತ್ರನ ಆಶ್ರಮದಲ್ಲೇ ನೋಡಿದರೆಂದು ಬರೆಯಲಾಗಿದೆ. ವಾಲಿಯನ್ನು ರಾಮ ನೇರವಾದ ಯುದ್ಧದಲ್ಲೇ ಕೊಲ್ಲುತ್ತಾನೆ. ಭವಭೂತಿಯ `ಉತ್ತರ ರಾಮಚರಿತ ಉತ್ತರ ರಾಮಾಯಣ ಕಥೆಯ ಇನ್ನೊಂದು ಪಾಠವೆನ್ನಬಹುದು. ರಾಮಾಯಣದಂತಲ್ಲದೆ ಈ ನಾಟಕದಲ್ಲಿ ಸೀತೆ ಮತ್ತು ರಾಮ ಕೊನೆಗೆ ಒಂದಾಗಿ ಸುಖವಾಗಿರುತ್ತಾರೆ.

ದೆಙ್ನÁಂಗನ ಕುಂದಮಾಲಾ ನಾಟಕವೂ ಅನೇಕ ಹೊಸ ವಿಷಯಗಳಿಗೆ ಆಕರವಾಗಿದೆ. ಈ ನಾಟಕದಲ್ಲಿ ಸೀತೆ ಅದೃಶ್ಯ ರೂಪದಲ್ಲಿ ರಾಮನನ್ನು ಭೇಟಿಯಾಗುತ್ತಾಳೆ. ಆಕೆಯ ಪ್ರತಿರೂಪವನ್ನು ನೀರಿನಲ್ಲಿ ನೋಡಿದ ರಾಮ ಪ್ರಜ್ಞಾಹೀನನಾದಾಗ ಭೂಮಾತೆ ಬಂದು ಸೀತಾರಾಮರನ್ನು ಒಂದುಗೂಡಿಸುತ್ತಾಳೆ.

ಮುರಾರಿಯ `ಅನರ್ಘ ರಾಘವ ಭವಭೂತಿಯ `ಮಹಾವೀರ ಚರಿತವನ್ನು ಅನುಸರಿಸಿದೆ. ರಾಜಶೇಖರನ `ಬಾಲರಾಮಾಯಣ' ರಾಮಾಯಣದ ನಾಟಕಗಳಲ್ಲಿ ಬಹಳ ದೀರ್ಘವಾದುದೆನ್ನಬಹುದು. ಮಹಾನಾಟಕ, ಆಶ್ವರ್ಯ ಚೂಡಾಮಣಿ, ಜಾನಕೀ ಪರಿಣಯ ಮುಂತಾದ ನಾಟಕಗಳೂ ರಾಮಾಯಣದ ಕಥೆಯನ್ನು ತಮ್ಮದೇ ಆದ ರೀತಿಯಲ್ಲಿ ನಿರೂಪಿಸಿವೆ. ಇವು ಪುರಾಣಗಳಿಂದ ರಾಮಾಯಣದ ಕೆಲವು ಪ್ರಸಂಗಗಳನ್ನು ಸ್ವೀಕರಿಸಿರೆಬಹುದು; ಕೆಲವು ನಾಟಕಗಳು ಜನಜನಿತ ಕಥೆಗಳನ್ನು ಸ್ವೀಕರಿಸಿದ್ದರೆ, ಇನ್ನು ಕೆಲವು ಹೊಸ ಕಲ್ಪನೆಗಳನ್ನೊಳಗೊಂಡಿವೆ. ಜೈನ ಮತ್ತು ಬೌದ್ಧ ರಾಮಾಯಣಗಳು : ರಾಮಾಯಣದ ಕಥೆಯನ್ನು ವಾಲ್ಮೀಕಿ ವೈದಿಕಪರವಾಗಿ ಬರೆದಂತನಿಸುತ್ತದೆ. ಆದರೆ ಅದರಲ್ಲಿರುವ ಸಾರ್ವತ್ರಿಕ ಅಂಶಗಳು ಎಲ್ಲಾ ಧರ್ಮದ ಲೇಖಕರನ್ನೂ ಆಕರ್ಷಿಸಿವೆ. ರಾಮಾಯಣದ ಪಾತ್ರಗಳನ್ನು ವಿಭಿನ್ನ ಮತಗಳಿಗೆ ಸಂಬಂಧಿಸಿದ ಲೇಖಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿ ಚಿತ್ರಿಸಿದ್ದಾರೆ. ಕೆಲವೊಮ್ಮೆ ಅವರ ಚಿತ್ರಿಸುವಿಕೆ ವಾಲ್ಮೀಕಿ ರಾಮಾಯಣದ ಪಾತ್ರಗಳಿಗೆ ಸಂಪೂರ್ಣ ಭಿನ್ನವಾಗಿದೆ. ಜೈನ ಮತ್ತು ಬೌದ್ಧ ಪರಂಪರೆಯ ರಾಮಾಯಣಗಳು ಭಾರತದಿಂದ ಬೇರೆ ದೇಶಗಳಿಗೂ ಪ್ರಯಾಣಮಾಡಿವೆ. ಜೈನ ರಾಮಾಯಣಗಳಲ್ಲಿ ಮುಖ್ಯವಾಗಿ ಎರಡು ಪಾಠಗಳಿವೆ. ಒಂದು `ಪಉಮಚರಿಯ, ಇನ್ನೊಂದು `ಉತ್ತರ ಪುರಾಣ', ವಿಮಲ ಸೂರಿಯ `ಪಉಮಚರಿಯದಲ್ಲಿ ವಾಲ್ಮೀಕಿ ರಾಮಾಯಣಕ್ಕೆ ಭಿನ್ನವಾದ ಅನೇಕ ಅಂಶಗಳಿವೆ. ಇದರಲ್ಲಿ ದಶರಥನಿಗೆ ನಾಲ್ವರು ಪತ್ನಿಯರು. ನಾಲ್ಕನೆಯ ಪತ್ನಿ ಸುಪ್ರಭೆಯ ಮಗ ಶತೃಘ್ನ. ಈ ಕಾವ್ಯದಲ್ಲಿ ಇಂದ್ರ, ಯಮ, ವರುಣ ಮನುಷ್ಯರಂತೆಯೇ ವರ್ತಿಸುತ್ತಾರೆ. ಈ ಕೃತಿಯಲ್ಲಿ ಆಂಜನೇಯ ರಾಮನ ಭಕ್ತ ಮಾತ್ರವಲ್ಲ; ರಾವಣನ ಸ್ನೇಹಿತ ಕೂಡ. ರಾವಣನ ಸೋದರಿಯ ಮಗಳಾದ ಚಂದ್ರನಖಿಯನ್ನೇ ಆಂಜನೇಯ ಮದುವೆಯಾದ ವನವಾಸದ ಅನಂತರ ರಾಮ ಇನ್ನೂ ಮೂವರನ್ನು ಮದುವೆಯಾದ. ಲಕ್ಷ್ಮಣ ಹನ್ನೊಂದು ಜನರನ್ನು ಮದುವೆಯಾದ.

`ಪಉಮ ಚರಿಯದಲ್ಲಿ ಶಂಬೂಕನ ವಧೆಯ ಪ್ರಸಂಗವಿದೆ. ಆದರೆ ಲಕ್ಷ್ಮಣ ಬಿದಿರನ್ನು ಕೊಯ್ಯುವಾಗ ಅನಿರೀಕ್ಷಿತವಾಗಿ ಶಂಬೂಕನ ತಲೆಯನ್ನು ಕತ್ತರಿಸುತ್ತಾನೆ. ಈ ಕಾವ್ಯದಲ್ಲಿ ಮಾರೀಚನ ಬದಲಾಗಿ ರಾವಣನೇ ಸಿಂಹದಂತೆ ಗರ್ಜಿಸಿ ಆಮೇಲೆ ಸೀತೆಯನ್ನು ಅಪಹರಿಸುತ್ತಾನೆ. ಈ ಕಾವ್ಯದಲ್ಲಿರುವ ಅತಿಮುಖ್ಯ ಅಂಶವೆಂದೆರೆ ಲಕ್ಷ್ಮಣನೇ ರಾವಣನನ್ನು ಸಂಹರಿಸುವುದು. ಇದರಿಂದ ಲಕ್ಷ್ಮಣ ನರಕಕ್ಕೆ ಹೋಗುತ್ತಾನೆ. ರಾಮ ತಪಸ್ಸಿನಿಂದ ಪುನೀತನಾಗಿ ಸ್ವರ್ಗಕ್ಕೆ ಹೋಗುತ್ತಾನೆ.

`ಉತ್ತರ ಪುರಾಣ'ದಲ್ಲೂ ಅನೇಕ ಅವಾಲ್ಮೀಕ ಅಂಶಗಳಿವೆ. ಇವುಗಳಲ್ಲಿ ಮುಖ್ಯವಾದುದೆಂದರೆ ರಾವಣ ಮಂಡೋದರಿಯರ ಮಗಳು ಸೀತೆ. ಆಕೆಯಿಂದ ತನಗೆ ಮರಣ ಪ್ರಾಪ್ತವಾಗುವುದೆಂದು ತಿಳಿದ ರಾವಣ ಸೀತೆಯನ್ನು ದೂರದಲ್ಲಿ ಬಿಟ್ಟುಬರಬೇಕೆಂದು ಮಾರೀಚನಿಗೆ ಹೇಳುತ್ತಾನೆ. ಅನಂತರ ಸೀತೆ ಜನಕನಿಗೆ ಸಿಕ್ಕುತ್ತಾಳೆ. ಈ ಕಾವ್ಯದಲ್ಲಿ ಇನ್ನೂ ಅನೇಕ ವಿಷಯಗಳು ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾಗಿವೆ. ರಾಮ ಸೀತೆಯನ್ನು ಮತ್ತು ಏಳು ಜನರನ್ನು ಮದುವೆಯಾಗುತ್ತಾನೆ. ಅವನಿಗೆ ಒಟ್ಟು ಎಂಟು ಸಾವಿರ ಜನ ಪತ್ನಿಯರು. ಲಕ್ಷ್ಮಣನಿಗೆ ಹತ್ತು ಸಾವಿರ ಜನ ಪತ್ನಿಯರು. ವಾಲಿಯನ್ನು ಮತ್ತು ರಾವಣನನ್ನು ಸಂಹರಿಸಿದ್ದು ಲಕ್ಷ್ಮಣನೇ ಹೊರತು ರಾಮನಲ್ಲ. ಸೀತೆಗೆ ಎಂಟು ಜನ ಮಕ್ಕಳು. ಈ ಕಾವ್ಯದಲ್ಲಿ ರಾಮ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸುವ ಪ್ರಸಂಗವಿಲ್ಲ. ರಾಮ ಜೈನಧರ್ಮವನ್ನು ಸ್ವೀಕರಿಸಿ ಮುಕ್ತಿ ಪಡೆಯುತ್ತಾನೆ. ಭಾರತದ ರಾಮಾಯಣ ಪರಂಪರೆಗೆ ಜೈನಧರ್ಮ ತನ್ನದೇ ಆದ ಕೊಡುಗೆಯನ್ನು ನೀಡಿದೆ. ವಾಲ್ಮೀಕಿಯ ರಾಮಾಯಣ ಪಾತ್ರಗಳಿಗೆ ಜೈನ ಕವಿಗಳು ಹೊಸ ವ್ಯಾಖ್ಯಾನ ನೀಡಿದ್ದಾರೆ. ಪಾತ್ರಗಳನ್ನು ಜೈನಧರ್ಮಕ್ಕೆ ಅನುಸಾರವಾಗಿ ಚಿತ್ರಿಸಿದ್ದಾರೆ.

ಭಾರತದ ಪ್ರಾಚೀನ ಮತವಾದ ಬೌದ್ಧಮತವೂ ರಾಮಾಯಣದ ವಸ್ತುವಿನಲ್ಲಿ ಹಲವು ಮಾರ್ಪಾಡುಗಳಿಗೆ ಕಾರಣವಾಗಿದೆ. ನಮ್ಮ ದೇಶದ ಅತ್ಯಂತ ಪ್ರಾಚೀನ ಕಥಾ ಪರಂಪರೆಗೆ ಸೇರಿದ ಜಾತಕಕಥೆಗಳಲ್ಲಿ ರಾಮಾಯಣದ ಕಥೆ ಮೂಡಿಬಂದಿದೆ. ನಾಲ್ಕು ಜಾತಕ ಕಥೆಗಳು ರಾಮಾಯಣ ಕಥೆಯನ್ನೊಳಗೊಂಡಿವೆ. ಕ್ರಿ.ಪೂ. 5ನೆಯ ಶತಮಾನಕ್ಕೆ ಸೇರಿದ ದಶರಥ ಜಾತಕದ ಪ್ರಕಾರ ದಶರಥ ವಾರಾಣಸಿಯ ರಾಜ. ಅವನ ಮೂರು ಜನ ಮಕ್ಕಳೆಂದರೆ ರಾಮಪಂಡಿತ, ಲಕ್ಷ್ಮಣಕುಮಾರ, ಮತ್ತು ಸೀತಾದೇವಿ. ಹಿಮಾಲಯಗಳಿಗೆ ತಪಸ್ಸಿಗಾಗಿ ಹೋದ ದಶರಥನ ಮಕ್ಕಳು ವಾರಾಣಸಿಗೆ ಹಿಂದಿರುಗಿ ಬಂದ ಅನಂತರ ರಾಮ ಸೀತೆಯನ್ನು ತನ್ನ ರಾಣಿಯನ್ನಾಗಿ ಮಾಡಿಕೊಳ್ಳುತ್ತಾನೆ. ಎಂದರೆ ರಾಮ ತನ್ನ ಸೋದರಿಯನ್ನೇ ಮದುವೆಯಾಗುತ್ತಾನೆ. ಅನಾಮಕ ಜಾತಕದಲ್ಲಿ ಪಾತ್ರಗಳಿಗೆ ಹೆಸರುಗಳಿಲ್ಲ. ಈ ಕಥೆಯಲ್ಲಿ ಸಮುದ್ರ ಸರ್ಪವೊಂದು ಋಷಿಯ ರೂಪದಲ್ಲಿ ಬಂದು ರಾಣಿಯನ್ನು ಕೊಂಡೊಯ್ಯುತ್ತದೆ. ಬೋಧಿಸತ್ವನು ತನ್ನ ರಾಣಿಯನ್ನು ಹುಡುಕಿಕೊಂಡು ಹೋದಾಗ ದೊಡ್ಡವಾನರ (ಸುಗ್ರೀವ) ಸಿಕ್ಕುತ್ತಾನೆ. ಸಮುದ್ರ ಸರ್ಪದೊಂದಿಗೆ ಯುದ್ಧಮಾಡಿ ಬೋಧಿಸತ್ವ ತನ್ನ ರಾಣಿಯನ್ನು ಕರೆತರುತ್ತಾನೆ. ಜಾತಕ ಕಥೆಗಳಲ್ಲಿ ಇರುವ ರಾಮಾಯಣದ ಕಥೆಯನ್ನು ಪರಿಶೀಲಿಸಿದರೆ ಬುದ್ಧನಕಾಲದಲ್ಲೇ ಈ ಕಥೆ ಜನಪ್ರಿಯವಾಗಿತ್ತೆಂಬುದು ವಿದಿತವಾಗುತ್ತದೆ.

ಉತ್ತರ ಭಾರತದ ರಾಮಾಯಣಗಳು : ಉತ್ತರ ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲೂ ರಾಮಾಯಣ ರಚಿತವಾಗಿದೆ. ಹಿಂದೀ ಸಾಹಿತ್ಯದಲ್ಲಿ ತುಲಸೀದಾಸರ `ರಾಮಚರಿತ ಮಾನಸ ಅತ್ಯಂತ ಪ್ರಸಿದ್ಧವಾದುದು. ಏಳು ಅಧ್ಯಾಯಗಳಲ್ಲಿ ಮೂಡಿಬಂದಿರುವ ಈ ಕಾವ್ಯ ರಾಮಾಯಣದ ಎಲ್ಲ ಮುಖ್ಯಾಂಶಗಳನ್ನು ನಿರೂಪಿಸಿದ ಮಹಾಕಾವ್ಯ. ಹಿಂದೀ, ಮೈಥಿಲೀ, ಅವಧಿ ಮುಂತಾದ ವಿವಿಧ ಭಾಷೆ ಮತ್ತು ಉಪಭಾಷೆಗಳಲ್ಲಿ 50ಕ್ಕೂ ಹೆಚ್ಚು ರಾಮಾಯಣಗಳಿವೆ. ಆಧುನಿಕ ಕಾಲದಲ್ಲಿ ಮೈಥಿಲೀ ಶರಣಗುಪ್ತ ಅವರು ಹಿಂದೀಯಲ್ಲಿ ಬರೆದ `ಸಾಕೇತ್ ಸಾಹಿತ್ಯ ಪ್ರಿಯರ ಪ್ರಶಂಸೆಗಳಿಸಿದೆ. ಕಾಶ್ಮೀರಿ, ಬಿಹಾರಿ, ಬಂಗಾಲಿ, ಒರಿಯ, ಮರಾಠಿ, ಗುಜರಾತಿ, ಅಸ್ಸಾಮಿ, ಪಂಜಾಬಿ ಮುಂತಾದ ಭಾಷೆಗಳಲ್ಲಿ ನೂರಾರು ರಾಮಾಯಣಗಳು ರಚಿತವಾಗಿವೆ. ಇವುಗಳಲ್ಲಿ ಕೆಲವು ಜೈನ ರಾಮಾಯಣಗಳನ್ನೂ ಬೌದ್ಧ ರಾಮಾಯಣಗಳನ್ನೂ ಅನುಸರಿಸಿವೆ. ಕೆಲವಲ್ಲಿ ಸೀತೆ ರಾವಣನ ಮಗಳಾಗಿದ್ದಾಳೆ. ಬಿಹಾರಿ ರಾಮಾಯಣದಲ್ಲಿ ಆಂಜನೇಯ ಗಿಳಿಯ ರೂಪದಲ್ಲಿ ಲಂಕೆ ಪ್ರವೇಶಿಸುತ್ತಾನೆ.

ಉತ್ತರ ಭಾರತದ ರಾಮಾಯಣಗಳು ಸಾಮಾನ್ಯವಾಗಿ ಸಂಸ್ಕøತ ಪ್ರಾಕೃತ ರಾಮಾಯಣಗಳನ್ನು ಅನುಸರಿಸಿವೆ. ಆದರೆ ಪ್ರಾದೇಶಿಕವಾಗಿ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗೆ ಬಂಗಾಲಿ ರಾಮಾಯಣಗಳಲ್ಲಿ ಸೀತೆಯನ್ನು ಕಾಳಿಯ ಅವತಾರವೆಂದು ನಿರೂಪಿಸಲಾಗಿದೆ. ಈಶ್ವರಚಂದ್ರ ವಿದ್ಯಾಸಾಗರರ ಸೀತಾ ವನವಾಸ, ಉತ್ತರರಾಮ ಚರಿತ, ರವೀಂದ್ರನಾಥ ಟಾಗೂರರ ವಾಲ್ಮೀಕಿ ಪ್ರತಿಭಾ ಎಂಬ ನಾಟಕ ಗಮನಾರ್ಹವಾದುವು. ಸರಳಾದಾಸ ಒರಿಯ ಭಾಷೆಯಲ್ಲಿ ಬರೆದ ರಾಮಾಯಣದಲ್ಲಿ ರಾವಣನಿಗೆ ಸಾವಿರ ತಲೆಗಳು. ಅವನನ್ನು ಸಂಹರಿಸಲು ಸೀತೆ ಯುದ್ಧರಂಗಕ್ಕೆ ಬರುತ್ತಾಳೆ. ಒರಿಯದಲ್ಲೇ ರಚಿತವಾದ `ವಿಚಿತ್ರ ರಾಮಾಯಣ'ದಲ್ಲಿ ಅನೇಕ ವಿಚಿತ್ರ ವಿಷಯಗಳಿವೆ. ಸೀತೆ ವೇದವತಿಯ ಶವದಿಂದ ಹುಟ್ಟುತ್ತಾಳೆ. ರಾವಣ ವೇದವತಿಯ ಶವವನ್ನು ಬೇಯಿಸಿ ಬಡಿಸಬೇಕೆಂದು ಕೋರುತ್ತಾನೆ. ಮರಾಠಿಯಲ್ಲಿ ಏಕನಾಥನ `ಭಾವಾರ್ಥ ರಾಮಾಯಣ' ಮೋರೋಪಂತರ `ಮಿತ್ರ ರಾಮಾಯಣ' ಮತ್ತು `ಪದ್ಮ ರಾಮಾಯಣ' ಜನಪ್ರಿಯವಾಗಿವೆ. ಅಸ್ಸಾಮಿಯಲ್ಲೂ ಅನೇಕ ಕಾವ್ಯಗಳು ಮತ್ತು ನಾಟಕಗಳು ರಾಮಾಯಣ ಕಥಾ ವಸ್ತುವನ್ನು ಬಳಸಿಕೊಂಡಿವೆ. ಪಂಜಾಬಿಯಲ್ಲಿ ಗುರುಗೋವಿಂದ ಸಿಂಗ್ ಬರೆದ `ರಾಮಾವತಾರ ಬಹಳ ಪ್ರಸಿದ್ಧವಾಗಿದೆ. ಇದರಲ್ಲಿ 864 ಅಧ್ಯಾಯಗಳಿವೆ; 71 ಬಗೆಯ ಛಂದಸ್ಸುಗಳಿವೆ.

ವಿದೇಶಿ ರಾಮಾಯಣಗಳು : ಭಾರತವನ್ನುಳಿದು ಇತರ ದೇಶಗಳಲ್ಲೂ ರಾಮಾಯಣದ ಕಥೆ ಜನಪ್ರಿಯವಾಗಿದೆ. ಮುಖ್ಯವಾಗಿ ಟಿಬೆಟ್, ಚೀನ, ಜಪಾನ್, ಇಂಡೋನೇಷ್ಯ, ಜಾವ, ಥಾಯ್‍ಲ್ಯಾಂಡ್, ಮಲೇಸಿಯ ಮುಂತಾದ ದೇಶಗಳಲ್ಲಿ ರಾಮಾಯಣ ಕಥೆ ಹಲವು ಪ್ರಕಾರಗಳಲ್ಲಿ ಮೂಡಿಬಂದಿದೆ. ಈ ರಾಮಾಯಣಗಳಿಗೆ ಪ್ರಧಾನವಾಗಿ ಜೈನ ಮತ್ತು ಬೌದ್ಧ ರಾಮಾಯಣಗಳ ಪರಂಪರೆ ಸ್ಫೂರ್ತಿಯಾಗಿರಬಹುದು. 12ನೆಯ ಶತಮಾನಕ್ಕೆ ಸೇರಿದ ಯೋಸೀಶ್ವರ ಕಕವಿನ್ ರಾಮಾಯಣ ಇಂಡೋನೇಷ್ಯದಲ್ಲಿ ಜನಪ್ರಿಯವಾಗಿದೆ. ಟಿಬೆಟ್‍ನ ರಾಮಾಯಣದಲ್ಲಿ ದಶರಥನಿಗೆ ಇಬ್ಬರೇ ಹೆಂಡತಿಯರು. ಸೀತೆ ರಾವಣನ ಮಗಳು. ರಾವಣನ ಜೀವನ ಕೇಂದ್ರಬಿಂದು ಅವನ ಹೆಬ್ಬೆರಳಿನಲ್ಲಿತ್ತೆಂದು ಹೇಳಲಾಗಿದೆ. ಜಾವದ ರಾಮಾಯಣಗಳನ್ನು ಶೈವರು ಬರೆದಿದ್ದಾರೆ. `ಹಿಕಾಯತ್ ಸೇರಿ ರಾಮ ಎಂಬ ವಿಚಿತ್ರ ರಾಮಾಯಣದಲ್ಲಿ ಮಂಡೋದರಿ ದಶರಥನ ಹೆಂಡತಿ. ರಾವಣ ಮಾಯಾ ಮಂಡೋದರಿಯನ್ನು ಲಂಕೆಗೆ ಕರೆದುಕೊಂಡು ಬರುತ್ತಾನೆ. ಆಕೆಗೆ ಸೀತೆ ಹುಟ್ಟುತ್ತಾಳೆ. ರಾವಣ ಅವಳನ್ನು ಸಮುದ್ರದಲ್ಲಿ ತಳ್ಳುತ್ತಾನೆ. ಈ ರಾಮಾಯಣದಲ್ಲಿ ರಾಮ ಮತ್ತು ಆಂಜನೆಯರಿಗೆ ಹುಟ್ಟಿದ ಮಗ ಆಂಜನೇಯ. ಸೀತೆ ರಾವಣನ ಚಿತ್ರವನ್ನು ಬಿಡಿಸುತ್ತಿರುವಾಗ ರಾಮ ನೋಡಿದ್ದರಿಂದಲೇ ಆಕೆಯನ್ನು ಕಾಡಿಗೆ ಕಳುಹಿಸಿದ. ತುರ್ಕಿಯ ಕೊತವಿ ರಾಮಾಯಣದಲ್ಲೂ ಸೀತೆ ರಾವಣನ ಮಗಳು. ಆಕೆ ರಾಮಲಕ್ಷ್ಮಣರಿಬ್ಬರನ್ನೂ ಮದುವೆಯಾಗುತ್ತಾಳೆ. ನೇಪಾಲದ ಅನೇಕ ರಾಮಾಯಣಗಳಿಗೆ ಆಧ್ಯಾತ್ಮ ರಾಮಾಯಣವೇ ಮೂಲವಾಗಿದೆ.

ದಕ್ಷಿಣ ಭಾರತದ ರಾಮಾಯಣಗಳು : ದಕ್ಷಿಣ ಭಾರತದ ಭಾಷೆಗಳಲ್ಲಿ ನೂರಾರು ರಾಮಾಯಣಗಳು ರಚಿತವಾಗಿವೆ. ಇನ್ನೂ ರೂಪುಗೊಳ್ಳುತ್ತಲೇ ಇವೆ. ತಮಿಳಿನ ಸಂಗಕಾಲದಲ್ಲೇ ರಾಮಾಯಣದ ಕಥೆ ಜನರಿಗೆ ಪರಿಚಿತವಾಗಿತ್ತು. `ಪುರನಾನೂರು ಮತ್ತು `ಅಗ ನಾನೂರುಗಳಲ್ಲಿ ರಾಮಾಯಣದ ಉಲ್ಲೇಖಗಳಿವೆ. ತಮಿಳಿನಲ್ಲಿ ಪ್ರಾಚೀನ ಕಾಲದಲ್ಲಿ ವೆಣ್ಬಾ ಛಂದಸ್ಸಿನ ರಾಮಾಯಣವೊಂದು ರಚಿತವಾಗಿತ್ತೆಂದು ತಿಳಿದುಬರುತ್ತದೆ. ಶಿಲಪ್ಪದಿಕಾರಂ ಮತ್ತು ಮಣಿಮೇಕಲೈ ಈ ಕೃತಿಗಳಲ್ಲಿ ರಾಮಾಯಣದ ಉಲ್ಲೇಖವಿದೆ.

ತಮಿಳುನಾಡಿನ ಅತ್ಯಂತ ಪ್ರಸಿದ್ಧ ಕಾವ್ಯಗಳಲ್ಲಿ ಮಹಾಕವಿ ಕಂಬನ `ಕಂಬ ರಾಮಾಯಣ' ಒಂದು. ಇದು ಅನೇಕ ವಿಷಯಗಳಲ್ಲಿ ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾಗಿದೆ. ಇದರಲ್ಲಿ ರಾಮನನ್ನು ಮಾನವ ಮಾತ್ರನೆಂದು ಭಾವಿಸದೆ ವಿಷ್ಣುವಿನ ಅವತಾರವೆಂದೇ ತಿಳಿದು ಚಿತ್ರಿಸಲಾಗಿದೆ. ಸೀತಾರಾಮರು ಮದುವೆಗೆ ಮುಂಚೆಯೇ ಭೇಟಿಯಾಗಿ ತಮ್ಮ ಪ್ರೀತಿಯನ್ನು ಪರಸ್ಪರ ವ್ಯಕ್ತಮಾಡಿದರೆಂಬುದಾಗಿ ವರ್ಣಿಸಲಾಗಿದೆ. ತಮಿಳುನಾಡಿನ ರಾಮಾಯಣ ಸಂಪ್ರದಾಯದ ಮೇಲೆ ಕಂಬ ರಾಮಾಯಣ ಬೀರಿದ ಪ್ರಭಾವ ಗಮನಿಸತಕ್ಕುದ್ದು.

ಕನ್ನಡದಲ್ಲಿ ರಾಮಾಯಣ ಸಾಹಿತ್ಯ ಸಮೃದ್ಧವಾಗಿದೆ. ಕುಮಾರವ್ಯಾಸನ ಕಾಲಕ್ಕೆ ಕನ್ನಡದಲ್ಲಿ ಹಲವು ರಾಮಾಯಣಗಳು ರಚಿತವಾಗಿದ್ದವು. ಜೈನ ರಾಮಾಯಣ ಪರಂಪರೆ ಮತ್ತು ವೈದಿಕ ರಾಮಾಯಣ ಪರಂಪರೆ ಕನ್ನಡದಲ್ಲಿ ಅತ್ಯುತ್ತಮ ಕಾವ್ಯರೂಪ ಪಡೆದುವು. ಪೊನ್ನನ `ಭುವನೈಕ ರಾಮಾಭ್ಯುದಯ ಅಲಭ್ಯವಾಗಿರುವುದರಿಂದ ಅದರ ಶ್ರೇಷ್ಠತೆಯನ್ನು ಗುರುತಿಸುವುದು ಸಾಧ್ಯವಾಗಿಲ್ಲ. ನಾಗಚಂದ್ರನ `ಪಂಪ ರಾಮಾಯಣ' ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದ್ದು ವಿಮಲಸೂರಿಯ `ಪಉಮ ಚರಿಯವನ್ನು ಅನುಸರಿಸಿದೆ. ಗುಣಭದ್ರನ `ಉತ್ತರ ಪುರಾಣ'ದ ಪರಂಪರೆಯನ್ನು ಅನುಸರಿಸಿದ `ಚಾವುಂಡರಾಯ ಪುರಾಣ'ದಲ್ಲೂ ರಾಮಾಯಣದ ಕಥೆ ಇದೆ. ವೈದಿಕ ಪರಂಪರೆಯನ್ನು ಅನುಸರಿಸುವ ರಾಮಾಯಣಗಳಲ್ಲಿ ನರಹರಿಯ `ತೊರವೆ ರಾಮಾಯಣ' ಮುಖ್ಯವಾದುದು. ವಾಲ್ಮೀಕಿ ರಾಮಾಯಣವನ್ನು ಅನೇಕರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಕನ್ನಡ ಕವಿ ಮುದ್ದಣನು `ರಾಮಪಟ್ಟಾಭಿಷೇಕ, `ರಾಮಾಶ್ವಮೇಧ ಮುಂತಾದ ಕೃತಿಗಳ ಮೂಲಕ ರಾಮಾಯಣಕ್ಕೆ ಹೊಸ ಅರ್ಥವನ್ನು ನೀಡಿದ್ದಾನೆ. ಇವೆಲ್ಲಕ್ಕೂ ಮಕುಟಪ್ರಾಯವಾಗಿ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ' ಆಧುನಿಕ ಕಾಲದ ಮಹಾಕಾವ್ಯಗಳ ಸಾಲಿನಲ್ಲಿ ಭವ್ಯವಾಗಿ ಮೂಡಿ ಬಂದಿದೆ. ರಾಮಾಯಣದ ಪುನಃ ಸೃಷ್ಟಿಯಾಗಿ, ವಿನೂತನ ವ್ಯಾಖ್ಯಾನವಾಗಿ ರಾಮಾಯಣದರ್ಶನಂ ಮಹಾಕಾವ್ಯ ರೂಪುಗೊಂಡಿದೆ.

ತೆಲುಗಿನಲ್ಲಿ ರಾಮಾಯಣಗಳು ವಿಪುಲವಾಗಿವೆ. ತೆಲುಗಿನ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ರಾಮಾಯಣಗಳು ರಚಿತವಾಗಿವೆ. ಚಂಪೂ, ದ್ವಿಪದಿ, ಯಕ್ಷಗಾನ, ಕೀರ್ತನೆ, ಗದ್ಯಮುಂತಾದ ಮಾಧ್ಯಮಗಳಲ್ಲಿ 12ನೆಯ ಶತಮಾನದಿಂದಲೇ ತೆಲುಗು ರಾಮಾಯಣಗಳು ರಚಿತವಾಗಿವೆ. ಆಧುನಿಕ ಕಾಲದಲ್ಲಿ ನೂರಕ್ಕಿಂತ ಹೆಚ್ಚು ರಾಮಾಯಣಗಳು ರಚಿತವಾಗಿವೆ. ದ್ವಿಪದಿ ಛಂದಸ್ಸಿನ `ರಂಗನಾಥ ರಾಮಾಯಣ', ಚಂಪೂ ಶೈಲಿಯ `ಭಾಸ್ಕರರಾಮಾಯಣ' `ರಾಮಾಯಣ', `ಮೊಲ್ಲ ರಾಮಾಯಣ' ಮತ್ತು ಅನೇಕ ಇತರ ರಾಮಾಯಣಗಳು, ತಿಕ್ಕನನ `ನಿರ್ವಚನೋತ್ತರರಾಮಾಯಣ', ರಾಮಭದ್ರನ `ರಾಮಾಭ್ಯುದಯ ಎಂಬ ಪ್ರಬಂಧ. ಕಂದುಕೂರಿ ರುದ್ರಕವಿಯ `ಸುಗ್ರೀವ ವಿಜಯ ಮುಂತಾದವನ್ನು ಹೆಸರಿಸಬಹುದು. ಈ ಎಲ್ಲ ರಾಮಾಯಣಗಳಲ್ಲೂ ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾದ ಕೆಲವು ವಿಷಯಗಳಿವೆ. ಜನಜನಿತ ಕಥೆಗಳಿಂದ ವಸ್ತುವನ್ನು ಸ್ವೀಕರಿಸಲಾಗಿದೆ. ಆಧುನಿಕ ಕಾಲದ ರಾಮಾಯಣಗಳಲ್ಲಿ ವಿಶ್ವನಾಥ ಸತ್ಯನಾರಾಯಣ ಅವರ `ಶ್ರೀಮದ್ರಾಮಾಯಣ ಕಲ್ಪವೃಕ್ಷ ಚಂಪೂ ಶೈಲಿಯಲ್ಲಿ ಮೂಡಿ ಬಂದಿರುವ ಮಹಾಕಾವ್ಯ. ಇದಲ್ಲದೆ ನಾರಾಯಣಾಚಾರ್ಯರ `ಜನಪ್ರಿಯ ರಾಮಾಯಣ', ರಂಗನಾಯಕಮ್ಮ ಅವರ ರಾಮಾಯಣ ವಿಷವೃಕ್ಷ, ಉಷ ಶ್ರೀರಾಮಾಯಣ ಮುಂತಾದವು 20ನೆಯ ಶತಮಾನದಲ್ಲಿ ರಚಿತವಾಗಿವೆ.

ಮಲಯಾಳ ಭಾಷೆಯಲ್ಲಿ ಚೀರಾಮನ `ರಾಮಚರಿತಂ' ಆದಿಕಾವ್ಯವೆಂಬ ಹೆಸರನ್ನು ಪಡೆದಿದೆ. ಇದರಲ್ಲಿ 1800 ಪಾಟ್ಟುಗಳಿವೆ. ಈ ಕಾವ್ಯ ರಾಮರಾವಣ ಯುದ್ಧವನ್ನು ವರ್ಣಿಸುತ್ತಾ ನಡುವೆ ರಾಮಾಯಣದ ಉಳಿದ ಕಥೆಯನ್ನು ನಿರೂಪಿಸುತ್ತದೆ. 15ನೆಯ ಶತಮಾನದ ಕಣ್ಣಶ ಪಣಿಕ್ಕರ ಉತ್ತರ ರಾಮಾಯಣವೂ ಒಳಗೊಂಡಂತೆ ಒಂದು ರಾಮಾಯಣವನ್ನು ಬರೆದ. ಮಲಯಾಳ ಭಾಷೆಯ ಮಹಾನ್ ಲೇಖಕನೆನಿಸಿದ ಎಳುತ್ತಚ್ಚನ್ `ಅಧ್ಯಾತ್ಮ ರಾಮಾಯಣ'ವನ್ನು ಬರೆದ. ಅಟ್ಟಕಥೆಗಳ ಪಿತಾಮಹನೆನಿಸಿದ ಕೊಟ್ಟಾರಕರ ತಂಬುರಾನ್ ಬರೆದ `ರಾಮನಾಟ್ಟಂ' ಕಥಕಳಿಯಲ್ಲಿ ಬಳಕೆಯಾಗುತ್ತಿದೆ. ಆಧುನಿಕ ಕಾಲದಲ್ಲಿ ಕುಮಾರನ್ ಆಶಾನ್‍ರಂಥ ಅನೇಕ ಲೇಖಕರು ರಾಮಾಯಣದ ವಸ್ತುವನ್ನು ಸ್ವೀಕರಿಸಿದ್ದಾರೆ.

ಜನಪದ ರಾಮಾಯಣಗಳು : ರಾಮಾಯಣ ಕಾವ್ಯ ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ ಜನಪ್ರಿಯವಾಗಲು ಜನಪದ ರಾಮಾಯಣ ಪರಂಪರೆ ಕಾರಣವಾಗಿದೆ. ಜನಪದ ರಾಮಾಯಣಗಳು ವಾಲ್ಮೀಕಿ ರಾಮಾಯಣಕ್ಕಿಂತ ಹಿಂದೆಯೇ ಅಸ್ತಿತ್ವದಲ್ಲಿದ್ದುವು ಎಂದು ಭಾವಿಸಲು ಸಾಧ್ಯ. ಏಕೆಂದರೆ ರಾಮಾಯಣದಲ್ಲಿ ಹಲವಾರು ಜನಪದ ಆಶಯಗಳನ್ನು ನೋಡಬಹುದು. ಪ್ರಪಂಚದ ಜನಪದ ಕಥೆಗಳಲ್ಲಿ ಪ್ರಧಾನವಾಗಿರುವ ಅನೇಕ ರಾಮಾಯಣಗಳಲ್ಲಿ ಕಂಡುಬರುವ ಕಥಾಭಾಗಗಳು ಜನಪದ ರಾಮಾಯಣಗಳಲ್ಲಿವೆ. ಆಯಾ ಭಾಷೆಯ ಕವಿಗಳು ತಮ್ಮ ಪ್ರದೇಶದ ಜನಪದ ರಾಮಾಯಣಗಳಿಂದ ಅಂಥ ವಸ್ತುಗಳನ್ನು ಸ್ವೀಕರಿಸಬಹುದು.

ಕನ್ನಡ ಜನಪದ ರಾಮಾಯಣಗಳಲ್ಲಿ ಇಂಥ ಅನೇಕ ಪ್ರಸಂಗಗಳನ್ನು ನೋಡಬಹುದು. ಜಾನಪದರಲ್ಲಿ `ಕಿಂಚಿತ್ ರಾಮಾಯಣಗಳು ಇರವಂತೆಯೇ `ಸಂಪೂರ್ಣ ರಾಮಾಯಣ'ಗಳೂ ಇವೆ. ಕಿಂಚಿತ್ ರಾಮಾಯಣದಲ್ಲಿ ಇಡೀ ಬಾಲಕಾಂಡದ ಕಥೆಹತ್ತು ಪದ್ಯಗಳಲ್ಲಿದೆ. ಈ ರಾಮಾಯಣ ವಾಲ್ಮೀಕಿ ರಾಮಾಯಣವನ್ನೇ ಅನುಸರಿಸುತ್ತದೆ.

ಜನಪದ ರಾಮಾಯಣಗಳಲ್ಲಿ ಜನಪ್ರಿಯ ಕಥೆಗಳು ಸ್ಥಾನ ಪಡೆದಿವೆ. `ಪುತ್ರಕಾಮೇಷ್ಟಿ ಎಂಬ ಹೆಸರಿನ ವಿಸ್ತಾರವಾದ ಕಾವ್ಯಗಳಲ್ಲಿ ಸೀತಾಸ್ವಯಂವರಕ್ಕೆ ಬಂದವರಲ್ಲಿ ಕಾಳಿಂಗರಾಯ, ಮಿಧುಲರಾಯ ಮತ್ತು ರಾವಣ ಸೇರಿದ್ದಾರೆ. ರಾವಣ ಶಿವಧನುಸ್ಸನ್ನು ಮುರಿಯಲು ಪ್ರಯತ್ನಿಸಿ ವಿಫಲಗೊಳ್ಳುತ್ತಾನೆ. ಭಾಗವತರಾಮಾಯಣ ಎಂಬ ವಿಚಿತ್ರಗೀತೆಯಲ್ಲಿ ಪ್ರತಿ ಪದ್ಯದ ಮೊದಲ ಎರಡು ಸಾಲುಗಳು ಭಾಗವತದ ಕಥೆಯನ್ನು ಹೇಳುತ್ತವೆ. ಕನ್ನಡದ `ಸಂಪೂರ್ಣ ರಾಮಾಯಣ' ಮುಂತಾದವಲ್ಲಿ ಸೀತೆ ರಾವಣನ ಮಗಳೆಂದು ಹೇಳಲಾಗಿದೆ. ರಾವಣನಿಗೆ ಶಿವ ಒಂದು ಮಾವಿನ ಹಣ್ಣನ್ನು ಕೊಡುತ್ತಾನೆ. ರಾವಣ ಅದನ್ನು ಮಂಡೋದರಿಗೆ ಕೊಡದೆ ತಾನೇ ತಿನ್ನುತ್ತಾನೆ. ಇದರಿಂದ ಅವನೇ ಗರ್ಭಧರಿಸುತ್ತಾನೆ. ಸೀತೆಯಿಂದ ಅಶುಭವಾಗುವುದೆಂದು ತಿಳಿದು ರಾವಣ ಆಕೆಯನ್ನು ಒಂದು ನದಿಯಲ್ಲಿ ಬಿಡುತ್ತಾನೆ. ಸೀತೆಜನಕನ ಬಳಿ ಸೇರುತ್ತಾಳೆ. ಸೀತಾಸ್ವಯಂವರದ ಕಥೆ ಈ ಜನಪದರಾಮಾಯಣಗಳಲ್ಲಿ ಭಿನ್ನವಾಗಿದೆ. ರಾಮಲಕ್ಷ್ಮಣರು ಮಾತ್ರ ವನವಾಸಕ್ಕೆ ಹೋಗುವುದು, ಅಲ್ಲಿಂದಲೇ ಸೀತಾ ಸ್ವಯಂವರಕ್ಕೆ ಬರುವುದು. ಸೀತೆಯೊಂದಿಗೆ ಬಿಲ್ಲು ಬಾಣಗಳನ್ನು ಪಡೆಯುವುದು ಮುಂತಾದವುಗಳನ್ನು ಈ ರಾಮಾಯಣಗಳಲ್ಲಿ ನೋಡಬಹುದು. ಇವುಗಳಲ್ಲಿ ಅನೇಕ ಜನಪದ ಆಶಯಗಳಿರುತ್ತವೆ. ಸೀತೆ ಒಂದು ಕಮಲದಲ್ಲಿರುತ್ತಾಳೆ. ಅದನ್ನು ರಾವಣ ಮೂಸಿ ನೋಡಿದಾಗ ಆಕೆ ಅವನ ಮೂಗಿನಲ್ಲಿ ಪ್ರವೇಶಿಸುತ್ತಾಳೆ. ಇನ್ನು ಕೆಲವಲ್ಲಿ ಸೀತೆ ಚಿಕ್ಕ ಮಗುವಾಗಿರುವಾಗಲೇ ಜನಕ ಆಕೆಯನ್ನು ಗಂಡನ ಹೆಸರು ಹೇಳಲೇಬೇಕೆಂದು ಕೇಳಿದಾಗ ಆಕೆ ರಾಮನನ್ನೇ ಮದುವೆಯಾಗುವುದಾಗಿ ಹೇಳುತ್ತಾಳೆ.

ತೆಲುಗಿನ ಜನಪದ ರಾಮಾಯಣಗಳಲ್ಲೂ ಇಂಥ ಹಲವು ಪ್ರಸಂಗಗಳಿವೆ. `ಸಂಕ್ಷೇಪ ರಾಮಾಯಣ'ದಲ್ಲಿ ವಾಲ್ಮೀಕಿ ರಾಮಾಯಣವನ್ನೇ ಸಂಕ್ಷಿಪ್ತವಾಗಿ ಹೇಳಲಾಗಿದೆ. ಆದರೆ `ಶಾಂತ ಗೋವಿಂದ ನಾಮಗಳು ಮುಂತಾದವುಗಳಲ್ಲಿ ಜನಜನಿತ ಪ್ರಸಂಗಗಳು ಕಂಡುಬರುತ್ತವೆ. ಆದಿಲಕ್ಷ್ಮಿ ಒಂದು ಕೊಳದಲ್ಲಿ ಕಮಲದೊಳಗೆ ಇರುತ್ತಾಳೆ. ರಾವಣನಿಗೆ ಈ ಕಮಲದ ಬಗೆಗೆ ತಿಳಿದುಬರುತ್ತದೆ. ರಾವಣ ಹೋಗಿ ಮಗುವನ್ನು ನೋಡಿದಾಗ ಅದು ಅವನನ್ನು ಸಾಯಿಸುವುದಾಗಿ ಹೇಳುತ್ತದೆ. ರಾವಣ ಮಗುವನ್ನು ಸಮುದ್ರದಲ್ಲಿ ಬಿಡುತ್ತಾನೆ. ಆ ಮಗು ಸಮುದ್ರದಲ್ಲೇ ಮೂರು ವರ್ಷಗಳಿದ್ದು ಹಾಲ್ಗಡಲಿನಲ್ಲಿ ಮೂರು ವರ್ಷ ಮೂರು ತಿಂಗಳಿದ್ದು ಕೊನೆಗೆ ಜನಕನನ್ನು ಸೇರುತ್ತದೆ. ಇನ್ನೊಂದು ಜನಪದ ರಾಮಾಯಣದಲ್ಲಿ ಮದುವೆಗೆ ಮುಂಚೆಯೇ ಸೀತೆ ರಾಮನನ್ನು ಪ್ರೀತಿಸುತ್ತಾಳೆ. ಇದರಲ್ಲಿರುವ ಇರುವ ಒಂದು ವಿಚಿತ್ರ ಪ್ರಸಂಗವೆಂದರೆ, ಲಕ್ಷ್ಮಣ ಸೀತೆಯನ್ನು ನೋಡಿ ಆಕೆಯ ಸೌಂದರ್ಯವನ್ನು ರಾಮನಿಗೆ ವರ್ಣಿಸಿ ಹೇಳುವುದು. ಸೀತೆ ಲಂಕೆಯಲ್ಲಿ ಕಮಲದಲ್ಲಿ ಹುಟ್ಟಿದ ಪ್ರಸಂಗ ಇನ್ನೂ ಅನೇಕ ಗೀತೆಗಳಲ್ಲಿ ಕಂಡುಬರುತ್ತದೆ.

ಭಾರತದ ಇತರ ಭಾಷೆಗಳಲ್ಲೂ ಜನಪದ ರಾಮಾಯಣ ವಾಹಿನಿ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಂಡಿದೆ. ಬಂಗಾಲಿ ಭಾಷೆಯ ಜನಪದ ರಾಮಾಯಣವನ್ನು ಹಾಡುವ ವೃತ್ತಿಗಾಯಕರು ನೂರಾರು ವರ್ಷಗಳಿಂದ ಈ ಕಥೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಜನಪದ ರಾಮಾಯಣ ಜನಪದ ಗೀತೆಯ ವಿವಿಧ ಪ್ರಕಾರಗಳಾದ ಮದುವೆ ಹಾಡು, ರಾಮಲೀಲಾ, ಜುಮರ್ ಮತ್ತು ಆಚರಾತ್ಮಕ ಗೀತೆಗಳ ರೂಪದಲ್ಲೂ ಜನಪದ ನಾಟಕರೂಪದಲ್ಲೂ ಮೂಡಿ ಬಂದಿದೆ. ಜನಪದ ನಾಟಕ ರೂಪದಲ್ಲಿ ರಾಮಾಯಣದ ವಸ್ತು ಪ್ರಚಾರ ಪಡೆದಿದೆ. `ರಾಮಯಾತ್ರಾ ಎಂಬ ಜನಪದ ನಾಟಕ ಪ್ರಕಾರಗಳಲ್ಲಿ ರಾಮ ರಾವಣನೊಂದಿಗೆ ಯುದ್ಧ ಮಾಡುವ ಮುಂಚೆ ಚಂಡೀಪೂಜೆ ಮಾಡುತ್ತಾನೆ. `ಚಂದ್ರಾವತಿ ರಾಮಾಯಣ' ಎಂಬುದನ್ನು ಬಂಗಾಲದ ಪೂರ್ವಪ್ರದೇಶಗಳಲ್ಲಿ ಹೆಂಗಸರು ನಾಮಕರಣ, ಮುಂಜಿ, ಮದುವೆ ಮುಂತಾದ ಸಂದರ್ಭಗಳಲ್ಲಿ ಹಾಡುತ್ತಾರೆ. ಈ ರಾಮಾಯಣದಲ್ಲಿ ರಾಮನ ತಂಗಿಯಾದ ಕಕುಯ ಸೀತೆಯನ್ನು ಕಾಡಿಗೆ ಕಳುಹಿಸುವಂತೆ ಪ್ರಚೋದಿಸುತ್ತಾಳೆ. `ಮುಂಡಾ ರಾಮಾಯಣ' ಬಂಗಾಲದ ಬುಡಕಟ್ಟುಗಳಲ್ಲಿ ಜನಪ್ರಿಯವಾಗಿದೆ. ಕೇಂದ್ರ ಎಂಬ ತಂತ್ರೀ ವಾದ್ಯವನ್ನು ನುಡಿಸುತ್ತಾ ಈ ಕಥನಗೀತೆಯನ್ನು ಹಾಡುತ್ತಾರೆ. ತಮಿಳು ಮುಂತಾದ ಭಾಷೆಗಳಲ್ಲಿರುವ ಜನಪದ ರಾಮಾಯಣಗಳನ್ನು ತೌಲನಿಕವಾಗಿ ಪರಿಶೀಲಿಸುವುದು ಅಗತ್ಯ. ತಮಿಳು ಭಾಷೆಯಲ್ಲಿ ಅಮ್ಮಾನೈ, ಕುಮ್ಮಿ, ಕಾವಡಿ, ಚಿಂದು ಮುಂತಾದ ಪ್ರಕಾರಗಳಲ್ಲಿ ರಾಮಾಯಣ ಕಥೆ ಮೂಡಿ ಬಂದಿದೆ. ಈ ರಾಮಾಯಣಗಳಲ್ಲಿ ವಾಲ್ಮೀಕಿ ರಾಮಾಯಣದಲ್ಲಿಲ್ಲದ ಅನೇಕ ಪ್ರಸಂಗಗಳಿವೆ. ಸೀತೆ ರಾವಣನ ಚಿತ್ರ ಬರೆಯುವುದು, ಅಳಿಲು ರಾಮನಿಗೆ ಸಹಾಯ ಮಾಡುವುದು, ಮಹಿರಾವಣ ಮತ್ತು ಮಾಯೆಲ್ ರಾವಣನ ಕಥೆಗಳು ಜನಪದ ರಾಮಾಯಣಗಳಲ್ಲಿವೆ.

ಮಹಾಭಾರತಕ್ಕೆ ಹೋಲಿಸಿದಾಗ ರಾಮಾಯಣದ ಕಥೆ ಬಹಳ ಸರಳವಾದುದು. ಇದು ಏಕನಾಯಕನಿಂದ ಕೂಡಿದ್ದು ಆದರ್ಶ ಪಾತ್ರಗಳನ್ನು, ಶಿಷ್ಟ ಮತ್ತು ದುಷ್ಟ ಪಾತ್ರಗಳ ಪ್ರತೀಕಗಳನ್ನು ಒಳಗೊಂಡಿದೆ. ಇಷ್ಟು ಸರಳವಾದ ಕಥೆಯೊಂದು ಸಾವಿರಾರು ರೂಪಗಳನ್ನು ಪಡೆದದ್ದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಸದ್ಯಕ್ಕೆ ವಾಲ್ಮೀಕಿ ರಾಮಾಯಣ ಸಂಸ್ಕøತದ ಆದಿಕಾವ್ಯ ಎನಿಸಿಕೊಂಡಿದೆ. ಆದರೆ ಆ ರಾಮಾಯಣಕ್ಕೂ ಮೂಲವೆನ್ನಬಹುದಾದ ಜನಪದ ರಾಮಾಯಣಗಳಿದ್ದಿರಬಹುದು. ವಾಲ್ಮೀಕಿ ಮಹಾಕವಿ ರಾಮಾಯಣಕ್ಕೆ ರಾಷ್ಟ್ರೀಯ ಮಟ್ಟದ ಗೌರವವನ್ನು ತಂದುಕೊಟ್ಟಿದ್ದಾನೆ. ರಾಮಾಯಣದ ರಚನೆಯಿಂದ ಭಾರತದ ವಿವಿಧ ಭಾಷೆಗಳಿಗೆ ಸೇರಿದ ಕವಿಗಳು ಮಹಾಕವಿಗಳೆನಿಸಿಕೊಂಡಿದ್ದಾರೆ. ರಾಮಾಯಣಕ್ಕೆ ತಮ್ಮ ಮಹಾಕಾವ್ಯಗಳಿಂದ ಹೊಸ ವ್ಯಾಖ್ಯಾನವನ್ನು ನೀಡಿದ್ದಾರೆ. ಇಂಥ ಮಹಾಕಾವ್ಯಗಳ ನಡುವೆ ಜನಪದರು ತಮ್ಮದೇ ಆದ ರೀತಿಯಲ್ಲಿ ರಾಮಾಯಣವನ್ನು ಕಥೆಯ ರೂಪದಲ್ಲಿ, ಕಥನ ಗೀತೆಗಳ ರೂಪದಲ್ಲಿ ಮತ್ತು ನಾಟಕದ ರೂಪದಲ್ಲಿ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಇವುಗಳ ತೌಲನಿಕ ಅಧ್ಯಯನದಿಂದ ರಾಮಾಯಣ ಸಂಸ್ಕøತಿಯ ವಿಸ್ತಾರ ಮತ್ತು ವೈವಿಧ್ಯ ತಿಳಿದುಬರುತ್ತದೆ. (ಆರ್.ವಿ.ಎಸ್.ಎಸ್.)