ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೇವಣಸಿದ್ಧ

ವಿಕಿಸೋರ್ಸ್ದಿಂದ

ರೇವಣಸಿದ್ಧ ಸು.10-12ನೆಯ ಶತಮಾನದಲ್ಲಿ ಕಲ್ಯಾಣದ ಪರಿಸರದಲ್ಲಿ ಜನ್ಮವೆತ್ತಿ ವಿಭೂತಿಪುರಷರಾಗಿ ಮೆರೆದು ಸಮಾಜಸೇವೆ ಸಲ್ಲಿಸಿ ಬಯಲಾದರೆನ್ನಲಾದ ಪ್ರಸಿದ್ಧ ವೀರಶೈವ ಆಚಾರ್ಯರು. ಇವರ ಜೀವನದ ಚಾರಿತ್ರಿಕ ಅಂಶಗಳು ಪೌರಾಣಿಕಾಂಶಗಳೊಂದಿಗೆ ಬೆರೆತು ಮಸುಕಾಗಿವೆ. ಸಂಪ್ರದಾಯದ ಪ್ರಕಾರ ರೇವಣಸಿದ್ಧರು ವೀರಶೈವ ಪಂಚಾಚಾರ್ಯರಲ್ಲೊಬ್ಬರು. ಸು. 12ನೆಯ ಶತಮಾನದ ಸಿರಿವಾಳ ಶಾಸನದಲ್ಲಿ ಸಿದ್ಧರೇವಣ, ರೇವಣಾಚಾರ್ಯರನ್ನು (ರೇಣಕಾಚಾರ್ಯ) ಮಹಾನ್ ಸಿದ್ಧಪುರುಷರೆಂದು ಉಲ್ಲೇಖಿಸಲಾಗಿದೆ. ಇವರನ್ನು ಕೈಲಾಸದ ಪ್ರಮಥ ರೇಣುಕನೊಂದಿಗೆ ಹೋಲಿಸಲಾಗಿದೆ. ಬಸವಾದಿಗಳಿಗೆ ಸಮಕಾಲೀನರಾಗಿದ್ದು ಧರ್ಮಗುರು ವೆನಿಸಿದ್ದ ರೇವಣಸಿದ್ಧರೇ ಈ ಸಿದ್ಧರೇವಣ್ಣ. ಆದರೆ ಸಿದ್ಧರಾಮ, ಆದಯ್ಯ ಇವರ ವಚನಗಳಲ್ಲಿ ರೇವಣಸಿದ್ಧರ ಉಲ್ಲೇಖವಿದೆ. ಶಿವತತ್ತ್ವರತ್ನಾಕರದ ಕರ್ತೃ ಬಸವಭೂಪಲನು ರೇವಣಸಿದ್ಧೇಶ್ವರರು ಶೃಂಗೇರಿಯ ಪ್ರಸಿದ್ಧ ಚಂದ್ರಮೌಳೀಶ್ವರ ಲಿಂಗದ ದಾತೃವೆಂದು ಉಲ್ಲೇಖಿಸಿದ್ದಾನೆ.

ಹರಿಹರಾದಿಗಳು ತಿಳಿಸುವಂತೆ ರಾಜೇಂದ್ರ ಚೋಳ ರೇವಣಸಿದ್ಧರ ಸಮಕಾಲೀನ. ಈತ ರೇವಣಸಿದ್ಧಗಿರಿಯಿಂದ ಶಿವರಾತ್ರಿ ಶಿವಯೋಗಿಗಳನ್ನು ಕರೆದೊಯ್ದು ಕಪಿಲಾ ನದೀ ತೀರದಲ್ಲಿ ಸುತ್ತೂರು ಮಠವನ್ನು ಸ್ಥಾಪಿಸಿದ. ಶಿವರಾತ್ರೀಶ್ವರ ಗದ್ದುಗೆ ಇಲ್ಲಿರುವುದೇ ಇದಕ್ಕೆ ಸಾಕ್ಷಿ. ಮಾಯಾಕೋಲಾ ಹಲ ಮಲೆಯ ಮಾದೇಶ್ವರರೂ ಈ ಮಠದಲ್ಲಿ ಸ್ವಲ್ಪಕಾಲ ಇದ್ದರಂತೆ.

ಬಸವಣ್ಣನವರ ಅನಂತರ ವೀರಶೈವಧರ್ಮದ ಪುನರುಜ್ಜೀವನವನ್ನು ಕೈಗೊಳ್ಳಲು ಧಾರ್ಮಿಕ ಕ್ರಾಂತಿಯನ್ನು ಮುಂದುವರಿಸಲು ವೀರಶೈವರು ರುದ್ರಮುನಿಯನ್ನು ನಾಯಕನನ್ನಾಗಿ ಆರಿಸಿದರಂತೆ. ಆ ರುದ್ರಮುನಿ ರೇವಣಸಿದ್ಧರ ಔರಸಪುತ್ರ. ಈ ಸಂಗತಿ ಚಾರಿತ್ರಿಕವಾದ್ದು. ಕಲ್ಯಾಣದ ಬಿಲ್ವವನದ ಮಧ್ಯೆ ಈಗಲೂ ಇರುವ ರುದ್ರಮುನಿ ಗುದ್ದುಗೆ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಕಲ್ಯಾಣದ ಸಮೀಪದಲ್ಲಿ ಸಿದ್ಧಗಿರಿಯೆಂದು ಹೆಸರಾದ ತಾಣ ಈ ರೇವಣಸಿದ್ಧರ ತಪೋಭೂಮಿ ಎನ್ನಲಾಗಿದೆ. ಇವಲ್ಲದೆ ರೇವಣಸಿದ್ಧ ಗದ್ದುಗೆ, ರುದ್ರಮುನಿಗದ್ದುಗೆ ಎಂಬ ತೋರು ಗದ್ದುಗೆಗಳು ಕರ್ನಾಟಕದಲ್ಲಿ ಅನೇಕವಿವೆ. ಬೆಂಗಳೂರು ತಾಲ್ಲೂಕಿನ ರಾಮನಗರದ ಬಳಿ ಇರುವ ರೇವಣಸಿದ್ಧೇಶ್ವರ ಬೆಟ್ಟ ಆ ಭಾಗದಲ್ಲಿ ಪವಿತ್ರ ಕ್ಷೇತ್ರವಾಗಿ ಇಂದಿಗೂ ಪ್ರಸಿದ್ಧವಿದೆ. ರೇವಣಸಿದ್ಧರಿಂದ ರಚಿತವಾದ ಗ್ರಂಥಗಳ ಬಗ್ಗೆಯಾಗಲೀ ಅವರ ವೈಯಕ್ತಿಕ ಜೀವನದ ಹೆಚ್ಚಿನ ವಿವರಗಳಾಗಲೀ ತಿಳಿದುಬಂದಿಲ್ಲ.

   (ಜಿ.ಎಮ್.)