ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೊಮ್ಯಾಂಟಿಕ್ ಸಾಹಿತ್ಯ
- ಇಂಗ್ಲಿಷ್‍ನಲ್ಲಿ ರೊಮ್ಯಾಂಟಿಕ್ ಸಾಹಿತ್ಯ : - ಇಂಗ್ಲಿಷ್‍ನಲ್ಲಿ ಭಾವಪ್ರಧಾನ ಸಾಹಿತ್ಯ.
- ರೊಮ್ಯಾಂಟಿಕ್ ಸಾಹಿತ್ಯವು ವಿಭಾವನೆಗೆ (ಇಮ್ಯಾಜಿನೇಶನ್‍ಗೆ) ಪ್ರಾಧಾನ್ಯವನ್ನು ನೀಡಿತು. ಹಿಂದಿನ ಯುಗದಲ್ಲಿ ಕವಿಯು ಸಮುದಾಯದ ವಾಣಿಯಾಗಿದ್ದ, ಈ ಯುಗದಲ್ಲಿ ಕವಿಯು ಸಮುದಾಯದ ಕಣ್ಣಾದ. ಬದುಕನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ಅದಕ್ಕೆ ಕಾವ್ಯದಲ್ಲಿ ರೂಪನೀಡಿದ. ಬದುಕನ್ನು ವಿಚಾರ ಶಕ್ತಿಯಿಂದ ಮಾತ್ರ ಗ್ರಹಿಸಬಹುದೆಂಬ ಭಾವನೆ ಹೋಗಿ ಇಂದ್ರಿಯಾನುಭವಗಳ ಮೂಲಕ ಗ್ರಹಿಸಿ, ವಿಭಾವನೆಯಿಂದ ಅದರ ಒಳ ಸ್ವರೂಪಕಟ್ಟಿ ಗ್ರಹಿಸಬಹುದೆಂಬ ಭಾವನೆ ಬೆಳೆಯಿತು. ಇದರಿಂದ ಕವಿಯ ವಿಶಿಷ್ಟ ದರ್ಶನಕ್ಕೆ ಪ್ರಾಧಾನ್ಯ ಲಭ್ಯವಾಯಿತು. ವಿಡಂಬನೆಯ ಬದಲು ಭಾವಗೀತಾತ್ಮಕತೆ ಚೈತನ್ಯಶೀಲವಾಯಿತು. ನಿಸರ್ಗವು ಜೀವಂತವಾದದ್ದು, ಮಾನವ-ನಿಸರ್ಗಗಳ ನಡುವೆ ಒಂದು ವಿಶಿಷ್ಟ ಸಂಬಂಧವಿದೆ ಎನ್ನುವ ಮನೋಧರ್ಮವನ್ನು ಈ ಯುಗದಲ್ಲಿ ಕಾಣುತ್ತೇವೆ. ಸಾಹಿತ್ಯವೂ ಒಂದು ಬಗೆಯ ತಿಳಿವಳಿಕೆ, ಬದುಕನ್ನು ಅರ್ಥಮಾಡಿಕೊಳ್ಳುವ ಸಾಧನ ಆಯಿತು. ಹಿಂದಿನ ಯುಗದಲ್ಲಿ ಕವಿಯು ಭಾಷೆಯನ್ನು `ಸರಿ’ಯಾಗಿ ಬಳಸಬೇಕೆಂಬ ಭಾವನೆ ಇತ್ತು. ಕವಿಯು ಭಾಷೆಯನ್ನು ತನ್ನ ಅನುಭವದ, ಪ್ರತಿಭೆಯ ಅಗತ್ಯಗಳಿಗೆ ಅನುಗುಣವಾಗಿ ಪುನಾರೂಪಿಸಿಕೊಳ್ಳುತ್ತಾನೆ ಎಂದು ಕವಿ-ಭಾಷೆಯ ಸಂಬಂಧ ಹೊಸ ಸ್ವರೂಪವನ್ನು ಪಡೆಯಿತು. ಈ ಸಾಹಿತ್ಯದ ಬುನಾದಿ ಸರ್ವಸಮತಾಭಾವ, ಯಾರಿಗೇ ಆಗಲಿ ಹುಟ್ಟು, ಅಧಿಕಾರ, ಅಂತಸ್ತುಗಳಿಗೆ ಸಂಬಂಧವಿಲ್ಲದೆ ಅವರು ಮನುಷ್ಯರೆಂದೇ ಗೌರವ ಸಲ್ಲಬೇಕೆಂಬ ತತ್ತ್ವ. ಇದರಿಂದ ಗ್ರಾಮಜೀವನ, ರೈತರು-ಗೊಲ್ಲರು ಮುಂತಾದ ಸಮುದಾಯಗಳು ಇವರ ಬದುಕೂ ಸಾಹಿತ್ಯದಲ್ಲಿ ಬರುವಂತಾಯಿತು.
ಫ್ರಾನ್ಸಿನ ಮಹಾಕ್ರಾಂತಿಯೂ ಈ ಭಾವನೆಗೆ ಪ್ರೇರಕವಾಯಿತು. ವಡ್ರ್ಸ್ವರ್ತ್ ಮತ್ತು ಕೋಲರಿಜ್ ಈ ಯುಗದ ಪ್ರಮುಖರು. ಇವರಿಬ್ಬರೂ 1798ರಲ್ಲಿ ಪ್ರಕಟಿಸಿದ ದಿ ಲಿರಿಕಲ್ ಬ್ಯಾಲೆಡ್ಸ್ ಎಂಬ ಕವನ ಸಂಕಲನವೂ ಆ ಸಂಕಲನಕ್ಕೆ ವಡ್ರ್ಸ್ವರ್ತ್ ಬರೆದ ಪ್ರಸಿದ್ಧ ಪೀಠಿಕೆಯೂ ಈ ನವಯುಗದ ಸಾಹಿತ್ಯವನ್ನು ಅಧಿಕೃತವಾಗಿ ಪ್ರಚಾರಕ್ಕೆ ತಂದವು ಎನ್ನಬಹುದು. ವಡ್ರ್ಸ್ವರ್ತ್ ಇಂಗ್ಲಿಷಿನ ಪ್ರಕೃತಿಕಾವ್ಯಲೇಖಕರಲ್ಲಿ ಅತ್ಯಂತ ಹೆಸರಾಂತನಾದವ. ಪ್ರಕೃತಿಯೊಂದೇ ಅಲ್ಲದೆ ಹಳ್ಳಿಯ ಜನ ಮತ್ತು ಅವರ ಜೀವನಗಳೂ ಅವನ ಕಾವ್ಯದ ಮುಖ್ಯ ವಸ್ತುಗಳಾಗಿದ್ದುವು. ಸರಳತೆ, ಸಹಜತೆಗಳು ಅವನ ಕಾವ್ಯದ ಹಿರಿಯ ಕುರುಹುಗಳು. ಅವನ ಟಿಂಟರ್ನ್ ಅಬೆ, ಡ್ಯಾಫೊಡಿಲ್ಸ್(ಡೆಫೋಡೈಲ್ಸ್), ಸಾಲಿಟರಿ ರೀಪರ್ ಮೊದಲಾದ ಸಣ್ಣ ಕವನಗಳೂ ಪ್ರಿಲ್ಯೂಡ್ ಎಂಬ ಆತ್ಮಕಥಾನಿರೂಪಕವಾದ ದೀರ್ಘಕವನವೂ ಸರ್ವಜನಪ್ರಿಯವಾಗಿವೆ. ಕೋಲರಿಜ್ ಇಂದ್ರಿಯಗೋಚರವಲ್ಲದ, ಬುದ್ಧಿಶಕ್ತಿಗೆ ಅತೀತವಾದ ಘಟನೆಗಳನ್ನು ಅವು ದಿನದಿನದ ಸಹಜ ಘಟನೆಗಳೋ ಎನ್ನುವಂತೆ ವರ್ಣಿಸುವುದರಲ್ಲಿ ನಿಪುಣ. ದಿ ರೈಮ್ ಆಫ್ ದಿ ಏನ್ಷಂಟ್ ಮ್ಯಾರಿನರ್, ಕುಬ್ಲಾಖಾನ್ ಮೊದಲಾದ ಅವನ ಸುಂದರ ಕವನಗಳು ಚಿತ್ತಾಕರ್ಷಕವಾಗಿವೆ. ಕೋಲರಿಜ್ ಇಂಗ್ಲಿಷ್ ವಿಮರ್ಶಕರಲ್ಲೂ ಹಿರಿಯ ಸ್ಥಾನ ಗಳಿಸಿದ್ದಾನೆ. ಅವನ ಬಯಗ್ರಾಫಿಯಾ ರಿಲಿಟೆರೇರಿಯ ಗ್ರಂಥವಿಮರ್ಶೆ ಮತ್ತು ಕಾವ್ಯಮೀಮಾಂಸೆಯ ಚರಿತ್ರೆಯಲ್ಲಿ ಖ್ಯಾತಿಗಳಿಸಿದೆ. ಇವನು ಗಣ್ಯಶಾಸ್ತ್ರಜ್ಞನು ತಾತ್ತ್ವಿಕನೂ ಆಗಿದ್ದ. ಇವರ ಒಡನಾಡಿಗಳಾದ ರಾಬರ್ಟ್ ಸದೆ, ಲೇಹಂಟ್, ಕ್ಯಾಂಪ್ಬೆಲ್, ಸರ್ ವಾಲ್ಟರ್ ಸ್ಕಾಟ್ ಮೊದಲಾದವರೂ ಜನಪ್ರಿಯ ಕವಿಗಳಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ರೊಮ್ಯಾಂಟಿಕ್ ಸಾಹಿತ್ಯದ ಲಕ್ಷಣಗಳನ್ನು ತಮ್ಮ ಕೃತಿಗಳಲ್ಲಿ ತೋರಿಸಿದ್ದಾರೆ. ಇವರಿಗಿಂತಲೂ ಕಿರಿಯರಾದ ಬೈರನ್, ಷೆಲ್ಲಿ, ಕೀಟ್ಸ್ ಕವಿಗಳೂ ರೊಮ್ಯಾಂಟಿಕ್ ಯುಗದ ಪ್ರಖರ ದೀಪಗಳು. ಇವರು ಒಬ್ಬೊಬ್ಬರೂ ಒಂದೊಂದು ರೀತಿಯ ಕಾವ್ಯಲಕ್ಷಣಕ್ಕೆ, ಕಾವ್ಯಶೈಲಿಗೆ, ವಸ್ತು ವೈಶಿಷ್ಟ್ಯಕ್ಕೆ ಪ್ರಸಿದ್ಧರು. ಬೈರನ್ ವೈಯಕ್ತಿಕ ಸ್ವಾತಂತ್ರ್ಯ ಕಲ್ಪನಾವೈಭವಗಳಿಗೂ ಷೆಲ್ಲಿ ಉನ್ನತಾದರ್ಶಗಳಿಗೂ ಕೀಟ್ಸ್ ಸೌಂದರ್ಯೋಪಾಸನೆಗೂ ಹೆಸರಾಗಿದ್ದಾರೆ. ಬೈರನ್ನಿನ ಚೈಲ್ಡ್ ಹೆರಾಲ್ಡ್ಸ್ ಪಿಲ್ಗ್ರಿಮೇಜ್ ಮೊದಲಾದ ಕವಿತೆಗಳೂ ಷೆಲ್ಲಿಯ ಓಡ್ ಟು ವೆಸ್ಟ್ ವಿಂಡ್, ಸ್ಕೈಲಾರ್ಕ್ ಮೊದಲಾದ ಭಾವಗೀತೆಗಳೂ ಪ್ರೊಮಿಥ್ಯೂಸ್ ಆನ್ ಬೌಂಡ್ ನಾಟಕವೂ ಅವರ ಆಲೋಚನೆಗೆ, ಕಾವ್ಯಸೌಂದರ್ಯಕ್ಕೆ ದ್ಯೋತಕಗಳಾಗಿವೆ. ಷೆಲ್ಲಿಯ ಡಿಫೆನ್ಸ್ ಆಫ್ ಪೊಯಟ್ರಿ ಇಂಗ್ಲಿಷ್ ವಿಮರ್ಶೆಯ ಕ್ಷೇತ್ರದಲ್ಲಿ ಗಣ್ಯ ಕೃತಿಯಾಗಿದೆ. ಕೀಟ್ಸ್ನ ಕವನಗಳಲ್ಲಿ ಮಾಲೆಮಾಲೆಯಾಗಿ ಕಂಡುಬರುವ ಚಿತ್ರಗಳ ಪರಂಪರೆ ಅಪೂರ್ವವಾದುದು. ಸುಂದರಕಾವ್ಯ, ಉನ್ನತವಿಚಾರದೋಹನ, ಆದರ್ಶದ ಪ್ರತಿಪಾದನೆ ಇವಕ್ಕೆ ಇವರ ಕಾವ್ಯ ಪ್ರಸಿದ್ಧವಾಗಿದೆ. ಎಲಿಜ಼ಬೆತ್ ಯುಗದ ಕಾವ್ಯದಲ್ಲಿರುವಂತೆಯೇ ಈ ಯುಗದ ಕಾವ್ಯದಲ್ಲೂ ಭಾವೋತ್ಕರ್ಷತೆ ಮತ್ತು ಕಲ್ಪನಾವೈಭವಗಳು ಎದ್ದು ಕಾಣುತ್ತವೆ. ಮನೋಭಾವವೂ ಮಾನವಪ್ರೇಮವೂ ಈ ಕವಿಗಳ ಲಕ್ಷಣಗಳು. ಈ ಯುಗದಲ್ಲಿ ಒಳ್ಳೆಯ ನಾಟಕಗಳು ಬರಲಿಲ್ಲ. ಷೆಲ್ಲಿಯ ಚೆಂಚಿಯೊಂದೇ ಹೇಳಬಹುದಾದಂಥ ನಾಟಕ.
- ರೊಮ್ಯಾಂಟಿಕ್ ಯುಗದಲ್ಲಿ ಗದ್ಯವೂ ವಿವಿಧ ರೀತಿಯಲ್ಲಿ ಬರಹಗಾರರನ್ನು ಆಕರ್ಷಿಸಿತು. ಛಾರ್ಲ್ಸ ಲ್ಯಾಂಬ್, ವಿಲಿಯಂ ಹ್ಯಾಜ್ಲಿಟ್ ಲೇಹಂಟ್, ಥಾಮಸ್ ಡಿಕ್ವಿನ್ಸಿ ಇವರ ಪ್ರಬಂಧಗಳು ಯಾವ ಸಾಹಿತ್ಯಕ್ಕಾದರೂ ಭೂಷಣಪ್ರಾಯವಾಗಿರುವಂಥವು. ಇವರೆಲ್ಲರೂ ಇಂಗ್ಲಿಷಿನಲ್ಲಿ ಪ್ರಬಂಧ ಸಾಹಿತ್ಯದ ಮುನ್ನಡೆಗೆ ಬಹುಮಟ್ಟಿಗೆ ಕಾರಣರಾದವರು. ಲ್ಯಾಂಬ್ನ ಪ್ರಬಂಧಗಳು ಅವನ ಸ್ವಂತ ಜೀವನದ ಘಟನೆಗಳಿಗೆ ಮತ್ತು ಅವನ ಬಂಧುಮಿತ್ರರಿಗೆ ಸಂಬಂಧಪಟ್ಟವು. ತತ್ಕಾರಣ ಅವು ಇಂಗ್ಲಿಷಿನ ಪ್ರಬಂಧಗಳಲ್ಲಿ ವೈಯಕ್ತಿಕತೆಗೆ, ಬರೆಹಗಾರನ ಜೀವನಪ್ರದರ್ಶನಕ್ಕೆ ಪ್ರಸಿದ್ಧವಾಗಿವೆ. ದಿ ಪರ್ಸನಲ್ ಎಸ್ಸೆ ಎನ್ನಿಸಿಕೊಳ್ಳುವ ಈ ಜಾತಿಯ ಪ್ರಬಂಧಗಳಿಗೆ ಮಾದರಿಗಳಾಗಿವೆ. ಲ್ಯಾಂಬ್ನ ಲಘುಹಾಸ್ಯ ಆಪ್ಯಾಯಮಾನವಾದುದು ಹ್ಯಾಜ್ಲಿಟ್, ಲೇಹಂಟ್ ಮತ್ತು ಡಿಕ್ವಿನ್ಸಿಯವರ ಪ್ರಬಂಧಗಳೂ ಅವರ ವ್ಯಕ್ತಿತ್ವಗಳನ್ನು ತೆರೆದು ತೋರುವುದಲ್ಲದೆ ವಿಚಾರಗರ್ಭಿತವಾಗಿಯೂ ಇವೆ. ಹ್ಯಾಜ್ಲಿಟ್ ವಿಮರ್ಶಕನೂ ಆಗಿದ್ದ. ಷೇಕ್ಸ್ಪಿಯರ್ ಮತ್ತು ಎಲಿಜ಼ಬೆತ್ ಯುಗದ ಇತರ ನಾಟಕಕಾರರ ಮೇಲೆ ಆತ ಬರೆದಿರುವ ವಿಮರ್ಶೆ ಇಂದೂ ಮನ್ನಣೆ ಪಡೆದಿದೆ. ಇವರ ಕೃತಿಗಳೂ ಅಲ್ಲದೆ, ಸರ್ ವಾಲ್ಟರ್ ಸ್ಕಾಟ್ನ ಪ್ರಸಿದ್ಧ ಕಾದಂಬರಿಗಳೂ ಜೇನ್ ಆಸ್ಟೆನಳ ಪ್ರೈಡ್ ಅಂಡ್ ಪ್ರಿಜುಡಿಸ್, ಎಮ್ಮ ಮೊದಲಾದ ಕಾದಂಬರಿಗಳೂ ಇಂಗ್ಲಿಷ್ ಸಾಹಿತ್ಯಪ್ರೇಮಿಗಳಿಗೆ ಚಿರಪರಿಚಿತವಾಗಿವೆ. ಐತಿಹಾಸಿಕ ಕಾದಂಬರಿ ಸ್ಕಾಟನ ವಿಶಿಷ್ಟ ಕೊಡುಗೆ. ಚರಿತ್ರೆಯ ಶಕ್ತಿಗಳ ಅರಿವು, ವ್ಯಕ್ತಿಗೂ ಅವನ ಸಮುದಾಯದ ಗತಕಾಲಕ್ಕೂ ಇರುವ ಸಂಕೀರ್ಣ ಸಂಬಂಧದ ಅರಿವು ಇವನಿಗಿತ್ತು. ಇವನ ಸ್ಕಾಟಿಷ್ ಕಾದಂಬರಿಗಳೆಲ್ಲ ಸೇರಿ ಒಂದು ಮಹಾಕಾವ್ಯವಾಗುತ್ತದೆ ಎಂದು ಹೇಳುವುದುಂಟು. ಜೇನ್ ಆಸ್ಟಿನ್ ಐರನಿ ಮತ್ತು ಹಾಸ್ಯಗಳನ್ನು ಪಾತ್ರಗಳು ನೈತಿಕವಾಗಿ ಗಟ್ಟಿಯೇ ಟೊಳ್ಳೇ ಎಂಬ ಶೋಧನೆಗೆ ಬಳಸಿದಳು. ಇಂಗ್ಲಿಷ್ ಕಾದಂಬರಿ `ರೂಪ ಪ್ರಜ್ಞೆ’ಯನ್ನು `ಸೆನ್ಸ್ ಆಫ್ ಫಾರಂ’ ಅನ್ನು ಬಲಗೊಳಿಸಿದಳು.
ಈ ಯುಗಕ್ಕೇ ಸೇರಬೇಕಾದ ಲೇಖಕರ ಹೆಸರುಗಳು ಇನ್ನೂ ಅನೇಕವಿವೆ. ಒಟ್ಟಿನ ಮೇಲೆ ಈ ಯುಗ ಇಂಗ್ಲಿಷ್ ಸಾಹಿತ್ಯದ ಅತ್ಯಂತ ರಸಮಯವಾದ ವೈವಿಧ್ಯಪುರ್ಣವಾದ ವೈಭವೋಪೇತವಾದ ಯುಗಗಳಲ್ಲಿ ಒಂದು.
19ನೆಯ ಶತಮಾನದ ದ್ವಿತೀಯಾರ್ಧ ಇಂಗ್ಲಿಷ್ ಸಾಹಿತ್ಯದ ಚರಿತ್ರೆಯಲ್ಲಿ ವಿಜ್ಞಾನದ ಯುಗ. ಇದನ್ನು ವಿಕ್ಟೋರಿಯ ಯುಗ ಎಂದೂ ಕರೆಯುತ್ತಾರೆ. ಈ ಯುಗ ಇಂಗ್ಲಿಷ್ ಪ್ರಜಾಪ್ರಭುತ್ವದ ವಿಸ್ತರಣಕ್ಕೂ ವ್ಯಾಪಾರದ ಉತ್ಕರ್ಷಕ್ಕೂ ವಿಜ್ಞಾನದ ಬೆಳೆವಣಿಗೆಗೂ ಹೆಸರಾದುದು. ಇವೆಲ್ಲವುಗಳ ಪರಿಣಾಮ ಸಾಹಿತ್ಯದ ಮೇಲೆ ಆದುದನ್ನು ಕಾಣಬಹುದು. ಸಾಮಾನ್ಯರ ಪ್ರಾಶಸ್ತ್ಯ ಹೆಚ್ಚಿದ್ದರಿಂದ ಅವರಿಗೆ ತಕ್ಕ ಸಾಹಿತ್ಯದ ಸೃಷ್ಟಿಯಾಗಬೇಕಾಯಿತು. ವಾರ್ತಾಪತ್ರಿಕೆಗಳೂ ಮಾಸಪತ್ರಿಕೆ ಮೊದಲಾದವುಗಳೂ ಈ ಸಾಹಿತ್ಯವನ್ನು ಒದಗಿಸಿದುವು. ಕಥೆ, ಕಾದಂಬರಿ ಮೊದಲಾದವನ್ನು ಪ್ರಕಟಿಸಿ ಕಾದಂಬರಿಗಳ ಯುಗವನ್ನೇ ಸ್ಥಾಪಿಸಿದವು. ಸುದೀರ್ಘವಾದ ಸಮಾಜದ ನಾನಾ ಮುಖಗಳನ್ನು ಪ್ರತಿಬಿಂಬಿಸುವ ಕಾದಂಬರಿಗಳು ಮೇಲಿಂದ ಮೇಲೆ ಬಂದವು. ಚಾರಲ್್ಸ ಡಿಕನ್್ಸ, ವಿಲಿಯಮ್ ಮೇಕ್ಪೀಸ್ ಥ್ಯಾಕರೆ, ಜಾರ್ಜ್ ಎಲಿಯಟ್, ಜಾರ್ಜ್ ಮೆರಿಡಿತ್, ಚಾರಲ್್ಸ ರೀಡ್, ರಾಬರ್ಟ್ ಲೂಯಿ ಸ್ಟೀವನ್ಸನ್, ಥಾಮಸ್ ಹಾರ್ಡಿ ಮೊದಲಾದ ಉನ್ನತಮಟ್ಟದ ಕಾದಂಬರಿಕಾರರು ತಮ್ಮ ಕೃತಿಗಳಿಂದ ಇಂಗ್ಲಿಷ್ ಕಾದಂಬರಿ ಪ್ರಪಂಚವನ್ನು ಐಶ್ವರ್ಯಯುತವಾಗಿ ಮಾಡಿದರು. ಆ ಕಾಲದ ಜನರ ಮನೋಧರ್ಮ, ಆರ್ಥಿಕ ಜೀವನ, ಸಂಸ್ಕೃತಿ ಮೊದಲಾದವನ್ನು ಕುರಿತು ಥಾಮಸ್ ಕಾರ್ಲೈಲ್, ಜಾನ್ ರಸ್ಕಿನ್ ಮತ್ತು ಮ್ಯಾಥ್ಯೂ ಆರ್ನಾಲ್್ಡ ಮೊದಲಾದವರು ಬರೆದರು. ಥ್ಯಾಕರೆಯ ವ್ಯಾನಿಟಿ ಫೇರ್, ಡಿಕನ್ಸ್ನ ಪಿಕ್ವಿಕ್ ಪೇಪರ್ಸ್, ಡೇವಿಡ್ ಕಾಪರ್ಫೀಲ್ಡ್, ಆಲಿವರ್ ಟ್ವಿಸ್ಟ್ ಮುಂತಾದ ಕೃತಿಗಳೂ ಜಾರ್ಜ್ ಎಲಿಯಟ್ಟಳ ರೋಮೋಲಾ, ಸೈಲಾಸ್ ಮಾರ್ನರ್, ಮೆರಿಡಿತ್ನ ದಿ ಈಗೊಯಿಸ್್ಟ ಮತ್ತು ಇವಾನ್ ಹ್ಯಾರಿಂಗ್ಟನ್, ಸ್ಟೀವನ್ಸನ್ನಿನ ದಿ ಟ್ರಿಷರ್ ಐಲೆಂಡ್ ಮತ್ತು ಕಿಡ್ನ್ಯಾಪ್್ಡ, ಹಾರ್ಡಿಯ ಟೆಸ್ ಆಫ್ ದಿ ಡಿ ಅರ್ಬರ್ವಿಲಿಸ್, ದಿ ರಿಟರ್ನ್ ಆಫ್ ದಿ ನೇಟಿವ್ ಮೊದಲಾದ ಕಾದಂಬರಿಗಳೂ ಜಗತ್ತಿನ ಶ್ರೇಷ್ಠ ಕೃತಿಗಳ ಶ್ರೇಣಿಯಲ್ಲಿ ರಾರಾಜಿಸುತ್ತಿವೆ. ವಿಕ್ಟೋರಿಯಾ ಕಾಲದ ಕಾವ್ಯವೂ ಅತ್ಯುನ್ನತ ಮಟ್ಟದ್ದಲ್ಲದಿದ್ದರೂ ಮಹತ್ತರವಾದುದೇ. ಆಲ್ಫ್ರೆಡ್ ಟೆನಿಸನ್, ರಾಬರ್ಟ್ ಬ್ರೌನಿಂಗ್ ಮತ್ತು ಮ್ಯಾಥ್ಯೂ ಆರ್ನಾಲ್ಡ್ ಈ ಯುಗದ ಮೂರು ಮುಖ್ಯ ಕವಿಗಳು. ಇವರೆಲ್ಲರ ಕಾವ್ಯದಲ್ಲೂ ನೂತನ ವೈಜ್ಞಾನಿಕ ಸಂಶೋಧನೆಗಳಿಂದ (ಅದರಲ್ಲೂ ಡಾರ್ವಿನ್ನನ ವಿಕಾಸವಾದದಿಂದ) ವಿಚಾರಪರರ ಮನಸ್ಸಿನಲ್ಲಿ ಉಂಟಾದ ಜಿಜ್ಞಾಸೆ ಚೆನ್ನಾಗಿ ವ್ಯಕ್ತವಾಗಿದೆ. ತತ್ಫಲವಾಗಿ ಅವರ ಕಾವ್ಯ ಆಲೋಚನಾಮಯವಾಗಿದೆ. ಟೆನಿಸನ್ನಿನ ಕೃತಿಗಳು ಸುಂದರ ಚಿತ್ರಗಳ ವರ್ಣನೆಗೆ, ಇಂಪಾದ ಛಂದೋರಚನೆಗೆ ಪ್ರಸಿದ್ಧವಾಗಿವೆ. ಬ್ರೌನಿಂಗ್ ಸಚೇತಕವಾದ ಆಶಾವಾದಿತ್ವಕ್ಕೆ ಹೆಸರಾಗಿದ್ದಾನೆ. ಅರ್ನಾಲ್ಡ್ ಸೂಕ್ಷ್ಮರುಚಿಯ ಸೂಕ್ಷ್ಮ ಮನಸ್ಸಿನ ಸಂವೇದನಾಶೀಲನಾದ ಕವಿ. ಆ ಕಾಲದ ಜನರ ಮನದಲ್ಲಿದ್ದ ತುಮುಲ ಅವನ ಕಾವ್ಯದಲ್ಲಿ ಚೆನ್ನಾಗಿ ಪ್ರತಿಬಿಂಬಿತವಾಗಿದೆ. ಅವನು ಪ್ರಸಿದ್ಧ ವಿಮರ್ಶಕನೂ ಆಗಿದ್ದ. ಆಲೋಚನೆಗೆ ಕಾವ್ಯದಲ್ಲಿ ಸ್ಥಾನವಿಲ್ಲ, ಅದು ಗಮನ ಕೊಡಬೇಕಾದುದು ಸೌಂದರ್ಯಕ್ಕೆ ಎಂದು ವಾದಿಸಿ ಈ ಅಭಿಪ್ರಾಯಕ್ಕೆ ಅನುಗುಣವಾಗಿ ಕಾವ್ಯ, ಲೇಖನ ಮಾಡಿದವರು ಪ್ರಿ ರ್ಯಾಫೇಲೈಟ್ಸ್ ಎಂಬ ಗುಂಪಿಗೆ ಸೇರಿದ ವಿಲಿಯಂ ಮಾರಿಸ್, ಡಾಂಟೆ ಗೇಬ್ರಿಯಲ್ ರಾಸೆಟಿ, ಮತ್ತು ಛಾರಲ್ಸ್ ಸ್ವಿನ್ಬರ್ನ್, ಮಾರಿಸ್ ಮತ್ತು ರಾಸೆಟಿಯವರ ಕವನಗಳು ಚಿತ್ರಮಯ ವರ್ಣನೆಗಳಿಗೂ ಸ್ವಿನ್ಬರ್ನನ ಕವನಗಳು ನಾದಮಾಧುರ್ಯಕ್ಕೂ ಗಮನಾರ್ಹವಾಗಿವೆ. ಮಿಸೆಸ್ ಎಲಿಜ಼ಬೆತ್ ಬ್ಯಾರೆಟ್ ಬ್ರೌನಿಂಗ್ ಮತ್ತು ಕ್ರಿಸ್ಟಿನ ರಾಸೆಟಿ ಈ ಕಾಲದ ಗಣ್ಯ ಕವಿಯಿತ್ರಿಯರು. ಎಮಿಲಿ ಬ್ರಾಂಟೆಯೂ ಅಲ್ಪಸ್ವಲ್ಪ ಕವಿತೆಗಳನ್ನು ರಚಿಸಿದಳು. ಅವಳೂ ಅವಳ ಸೋದರಿಯರೂ ಕಾದಂಬರಿಗಳನ್ನೂ ಬರೆದಿದ್ದಾರೆ. ಇವರಲ್ಲದೆ ಈ ಶತಮಾನದ ಕೊನೆಯ ವೇಳೆಗೆ ಆಸ್ಕರ್ ವೈಲ್್ಡ, ರಡ್ಯಾರ್ಡ್ ಕಿಪ್ಲಿಂಗ್, ಜಾರ್ಜ್ ಗಿಸ್ಸಿಂಗ್, ಫ್ರಾನ್ಸಿಸ್ ಥಾಂಪ್ಸನ್ ಮೊದಲಾದ ಕವಿಗಳೂ ಬಂದರು. ಹಾರ್ಡಿಯೂ ಕವಿತೆ ಬರೆದ. ಇದರಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯ ಸಾಹಿತ್ಯ ಪ್ರವೃತ್ತಿಗಳಿಗೆ ಪ್ರತಿನಿಧಿಗಳು. 20ನೆಯ ಶತಮಾನದ ಕಾವ್ಯದ ಗುಣಗಳಲ್ಲಿ ಕೆಲವನ್ನು 19ನೆಯ ಶತಮಾನದಲ್ಲೇ ಅನುಷ್ಠಾನಕ್ಕೆ ತಂದ ಜೆರಾರ್ಡ್ ಮ್ಯಾನ್ಲಿ ಹಾಪ್ಕಿನ್ಸ್ ಇದೇ ಕಾಲದವ. ಅವನ ಕವನಗಳು ಅವನ ಜೀವಿತಕಾಲದಲ್ಲೇ ಪ್ರಕಟವಾಗದಿದ್ದ ಕಾರಣ ಆತ ತನ್ನ ಸಮಕಾಲೀನರ ಮೇಲೆ ಪ್ರಭಾವ ಬೀರಲಾಗಲಿಲ್ಲ.
18ನೆಯ ಶತಮಾನದ ಮಧ್ಯಭಾಗದಿಂದ ಕೈಗಾರಿಕಾ ಕ್ರಾಂತಿಯು ತೀವ್ರಗೊಂಡು, 19ನೆಯ ಶತಮಾನದಲ್ಲಿ ಕೈಗಾರಿಕೆಗಳು ಬೆಳೆಯುತ್ತ ಹೋದವು. ಬ್ರಿಟಿಷ್ ಸಾಮ್ರಾಜ್ಯವೂ ವಿಸ್ತಾರವಾಯಿತು, ಭದ್ರವಾಯಿತು. ದೇಶದ ವ್ಯಾಪಾರವಾಣಿಜ್ಯಗಳು ವೇಗವಾಗಿ ಬೆಳೆದವು. ಕೈಗಾರಿಕೆಗಳ ಮೇಲೂ ನಿಯಂತ್ರಣವಿಲ್ಲದುದರಿಂದ ಮತ್ತು ಸಂಪತ್ತಿನ ನ್ಯಾಯವಾದ ವಿತರಣೆಗೆ ಗಮನ ನೀಡದಿದ್ದುದರಿಂದ ಹಲವಾರು ಸಮಸ್ಯೆಗಳು ತಲೆದೋರಿದ್ದವು. ಕಾರ್ಮಿಕರ ಸ್ಥಿತಿ ದಯನೀಯವಾಯಿತು. ಸಾಮಾಜಿಕ ಕ್ಷೋಭೆ ತಲೆದೋರಿತು. ಸಾಮಾಜಿಕ ಮತ್ತು ನೈತಿಕ ಬದುಕುಗಳಿಗೆ ಸಂಬಂಧಿಸಿದಂತೆ ತೀಕ್ಷ್ಣ ಸಂದಿಗ್ಧಗಳೂ ಸಮಸ್ಯೆಗಳೂ ಕಾಣಿಸಿ ಕೊಂಡವು. ಅಸಾಧಾರಣ ಪ್ರತಿಭೆಯ ಕಾದಂಬರಿಕಾರ ಡಿಕನ್್ಸ, ಇವನ ಸಮಕಾಲೀನರಾದ ಜಾರ್ಜ್ ಎಲಿಯೆಟ್ ಮೊದಲಾದವರ ಕಾದಂಬರಿಗಳಿಗೆ ಈ ಹಿನ್ನೆಲೆ ಇದೆ. ಡಿಕನ್ಸ್, ಷೇಕ್ಸ್ಪಿಯರನಿಗೆ ಸಮನಲ್ಲದಿದ್ದರೂ, ಅವನಂತೆ ಒಂದು ವೈವಿಧ್ಯಮಯ ಪಾತ್ರಗಳ ಜಗತ್ತನ್ನೇ ಸೃಷ್ಟಿಸಿದ. ದುಷ್ಟತನದ ಸಮಸ್ಯೆಯನ್ನು ಕಣ್ಣಿಗೆ ಮನಸ್ಸನ್ನು ತಲ್ಲಣಗೊಳಿಸುವಂತೆ ನಿರೂಪಿಸಿದ ಡಿಕನ್ಸನ್ನ ಹಾಸ್ಯಪ್ರಜ್ಞೆ, ವಿಡಂಬನೆ ಇವು ಸಮರ್ಥ ಶಸ್ತ್ರಗಳು. ಜಾರ್ಜ್ ಎಲಿಯೆಟ್ ಎಂಬ ಹೆಸರಿನಲ್ಲಿ ಬರೆದ ಮೇರಿ ಆ್ಯನ್ ಈವನ್ಸ್ಳಲ್ಲಿ ನೈತಿಕ ಶ್ರದ್ಧೆ, ಗತಕಾಲ-ವರ್ತಮಾನ ಕಾಲಗಳ ಸಂಬಂಧದ ಶೋಧನೆ ಕಾಣುತ್ತದೆ. ಜಾರ್ಜ್ ಮೆರಿಡಿತ್ ಮಾನಸಿಕ ಪದರಗಳನ್ನು ಶೋಧಿಸುತ್ತಾನೆ. ಈ ವಿಕ್ಟೊರಿಯನ್ ಯುಗದ ಅಂತ್ಯದಲ್ಲಿ ಬರುವ ಈತನೂ ಥಾಮಸ್ ಹಾರ್ಡಿಯೂ ವಿಕ್ಟೋರಿಯನ್ ಯುಗ, ಆಧುನಿಕ ಯುಗಗಳ ನಡುವಣ ಸೇತುವೆ. ಕ್ರೈಸ್ತ ಧರ್ಮವನ್ನು ನಿರಾಕರಿಸಿ ಬರೆದ ಮೊದಲನೆಯ ಕಾದಂಬರಿಕಾರ ಹಾರ್ಡಿ. ಮಾನವ ಜಗತ್ತನ್ನು ಮೀರಿದ ಅದೃಶ್ಯ ಶಕ್ತಿಯುಂಟು, ಅದು ಧರ್ಮ-ನ್ಯಾಯಗಳ ಪರವಲ್ಲ. ಅದರದೇ ವಿಶಿಷ್ಟ ಗುರಿಯತ್ತ ಅದು ಸಾಗುತ್ತದೆ, ಅದರ ಮುನ್ನಡೆಗೆ ಅಡ್ಡಿ ಬರುವವರು ಒಳ್ಳೆಯವರಾಗಲಿ ಕೆಟ್ಟವರಾಗಿರಲಿ ಅವರನ್ನು ತುಳಿಯುತ್ತದೆ ಎಂಬುದು ಇವನ ದೃಷ್ಟಿ. ಶ್ರೇಷ್ಠ ದುರಂತ ಕಾದಂಬರಿಗಳನ್ನು ಇವನು ರಚಿಸಿದ.
20ನೆಯ ಶತಮಾನದ ಇಂಗ್ಲಿಷ್ ಸಾಹಿತ್ಯ ಶ್ರೀಮಂತವಾಗಿದೆ, ವೈವಿಧ್ಯಮಯವಾಗಿದೆ. ಈ ಸಾಹಿತ್ಯ ಹಲವು ರಾಜಕೀಯ, ಸಾಮಾಜಿಕ ಮತ್ತು ಸಾಹಿತ್ಯಕ ಪ್ರಭಾವಗಳಿಗೆ ಒಳಗಾಯಿತು. ಈ ಶತಮಾನದ ಪೂರ್ವಾರ್ಧವು ಎರಡು ಜಾಗತಿಕ ಸಮರಗಳನ್ನು ಕಂಡಿತು. ಕೈಗಾರಿಕಾ ಕ್ರಾಂತಿಯಿಂದ ಅಭೂತಪೂರ್ವ ಆರ್ಥಿಕ ಕ್ರಾಂತಿಯನ್ನು, ಸಮೃದ್ಧಿಯನ್ನು ತಂದಿದ್ದ ವಿಜ್ಞಾನ, ತಂತ್ರಜ್ಞಾನಗಳು ಯುದ್ಧಕ್ಕೆ ಕಾಣಿಕೆ ನೀಡಿ ಹಿಂದೆ ಎಂದೂ ಇಲ್ಲದಷ್ಟು ಯುದ್ಧಗಳು ಕ್ರೂರವೂ ವಿನಾಶಕವೂ ಆಗುವಂತೆ ಮಾಡಿದವು. ವಿಜ್ಞಾನ-ತಂತ್ರಜ್ಞಾನಗಳ ಕ್ರೂರ ಮುಖದ ಅನಾವರಣವಾಯಿತು. ಈ ಅವಧಿಯಲ್ಲೇ ಕಾರ್ಲ್ ಮಾಕ್ರ್ಸ್ನ ಸಿದ್ಧಾಂತಗಳು ಹಬ್ಬಿ ಕಾರ್ಮಿಕರ ಚಳವಳಿಗಳು ಬಲವಾದವು. ಕಾರ್ಮಿಕ ಘರ್ಷಣೆಗಳೂ ಪ್ರಾರಂಭವಾದವು. ಫ್ರಾಯ್ಡ್ನ ಮನಶಾಸ್ತ್ರದಲ್ಲಿ ರೂಪಿಸಿದ ಸಿದ್ಧಾಂತಗಳು ಮನುಷ್ಯರನ್ನು ಬೆಚ್ಚಿ ಬೀಳಿಸಿದವು. ಮನುಷ್ಯನು ಮನುಷ್ಯನನ್ನು ಅರ್ಥಮಾಡಿಕೊಳ್ಳಲು ಹೊಸ ವಿಧಾನಗಳನ್ನು ಅನುಸರಿಸಿದ. ವಿದ್ಯುಚ್ಛಕ್ತಿ, ಚಲನಚಿತ್ರಗಳು ಬದುಕಿನಲ್ಲಿ ಕ್ರಾಂತಿಯನ್ನುಂಟುಮಾಡಿದವು. ಕಾಲ-ದೇಶಗಳ ಮೇಲಿನ ವಿಜಯ ಇನ್ನೂ ವ್ಯಾಪಕವಾಯಿತು. ದೇಶದ ಒಳಗಡೆ ಸ್ವಯಂಚಾಲಿತ ವಾಹನಗಳ ವೇಗ, ಬಳಕೆ ಹೆಚ್ಚಾದವು. ಜನತೆಯ ಶಿಕ್ಷಣವೂ ಸರ್ಕಾರದ ಹೊಣೆ ಎಂಬ ಅರಿವು ಮೂಡಿತು. 1919ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಪ್ರಾಪ್ತವಾಯಿತು. ಕಾರ್ಮಿಕನಿಗೂ ಈ ಹಕ್ಕು ಲಭ್ಯವಾಯಿತು. 1928ರಲ್ಲಿ 21 ವರ್ಷವಾದವರಿಗೆಲ್ಲ ಮತದಾನದ ಹಕ್ಕನ್ನು ಕೊಡಲಾಯಿತು. ಇಂಗ್ಲೆಂಡ್ ಮುಕ್ತ ವ್ಯಾಪಾರ (ಫ್ರೀ ಟ್ರೇಡ್)ದಿಂದ ರಕ್ಷಣಾನೀತಿ (ಪ್ರೊಟೆಕ್ಷನಿಸ್ಟ್)ಗೆ ವಾಲಿತು. ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಬಲವಾಯಿತು. ದಕ್ಷಿಣ ಆಫ್ರಿಕದಲ್ಲಿ ಬೋಯರ್ ಯುದ್ಧ ನಡೆಯಿತು. ಬ್ರಿಟಿಷ್ ಸಾಮ್ರಾಜ್ಯಷಾಹಿಗೆ ಸವಾಲುಗಳು ಬಂದವು.
ಈ ಶತಮಾನದ ಉತ್ತರಾರ್ಧದಲ್ಲಿ ಬಾಂಬ್ನ ಭಯಂಕರ ಶಕ್ತಿಯಿಂದ ಜಗತ್ತು ಇನ್ನೂ ತಲ್ಲಣಿಸುತ್ತಿತ್ತು. ಬ್ರಿಟಿಷ್ ಸಾಮ್ರಾಜ್ಯವು ಕರಗಿ ಹೋಗಿ ಅದರ ರಾಜಕೀಯ ಪ್ರಾಬಲ್ಯ ಕುಗ್ಗಿತ್ತು. ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬಿದ್ದಿತು. ವಿಜ್ಞಾನ-ತಂತ್ರಜ್ಞಾನಗಳು ಬೆಳೆದು ಕಾಲ, ದೇಶಗಳ ಮೇಲೆ ಪ್ರಭುತ್ವ ಹೆಚ್ಚಾಯಿತು. ಕಂಪ್ಯುಟರ್ ಬದುಕನ್ನೇ ಕ್ರಾಂತಿಗೊಳಿಸಿತು. ಜಗತ್ತಿನಲ್ಲಿ ಎರಡು ಬಣಗಳ ಸ್ಪರ್ಧೆ ತೀವ್ರವಾಗಿ ಘರ್ಷಣೆಗಳೂ ಶೀತಲಸಮರವೂ ತೀಕ್ಷ್ಣವಾದವು. ಆದರೆ ಇದ್ದಕ್ಕಿದಂತೆ ಸೋವಿಯೆಟ್ ರಷ್ಯ ಕರಗಿಹೋಗಿ, ರಾಜಕೀಯ ಸಮೀಕರಣಗಳು ಬದಲಾದವು. ಇಂಗ್ಲೆಂಡ್, ಜಪಾನ್ನಂತಹ ದೇಶಗಳಿಂದ ಆರ್ಥಿಕವಾಗಿ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಯಿತು. ಜಗತ್ತಿನ ಇತರ ಭಾಗಗಳ ಚಿಂತನೆಗಳು ಮತ್ತು ಸಾಹಿತ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾದವು. ಐನ್ಸ್ಟೈನನ ಸಾಪೇಕ್ಷ ಸಿದ್ಧಾಂತವೂ ಅನಂತರದ ವೈಜ್ಞಾನಿಕ ಬೆಳವಣಿಗೆಗಳೂ ಜಗತ್ತಿನ ಚಿಂತನೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಿದವು.
ಈ ಶತಮಾನದ ಪ್ರಾರಂಭದ ವರ್ಷಗಳಲ್ಲಿ ಕಾವ್ಯರಚನೆ ಮಾಡಿದ ಕವಿಗಳನ್ನು `ಜಾರ್ಜಿಯನ್ ಕವಿಗಳು’ ಎಂದು ಕರೆಯುತ್ತಾರೆ. ಇವರಲ್ಲಿ ಬಹು ಜನಪ್ರಿಯತೆಗಳಿಸಿದವನು ರೂಪರ್ಟ್ ಬ್ವುಕ್ (1893-1918). ಈ ಕವಿಗಳು ನೇರವಾಗಿ ಮಹಾಯುದ್ಧದಲ್ಲಿ ಭಾಗವಹಿಸಿದವರು. ಇವರಲ್ಲಿ ಬಹು ಮಂದಿ ಚಿಕ್ಕ ವಯಸ್ಸಿನಲ್ಲಿ ಯುದ್ಧಕ್ಕೆ ಬಲಿಯಾದರು. ಇವರು ಯುದ್ಧದ ನೋವು, ದೇಶಾಭಿಮಾನ ಇವುಗಳಿಗೆ ದನಿಕೊಡುತ್ತಾರೆ. ವಾಲ್ಟರ್ ಡಿ.ಟಿ.ಮೇಕ್, ಡಿ.ಎಚ್.ಲಾರೆನ್ಸ್, ಡಬ್ಲ್ಯು ಬಿ ಯೇಟ್ಸ್, ಟಿ.ಎಸ್.ಎಲಿಯಟ್, ಡಬ್ಲ್ಯು. ಬಿ.ಆಡನ್ ಶತಮಾನದ ಪೂರ್ವಾರ್ಧದ ಪ್ರಮುಖ ಕವಿಗಳು. ಯೇಟ್ಸ್ನ ಕವನಗಳು ಬದುಕಿನ ಎಲ್ಲ ಅನುಭವಗಳನ್ನು ಸ್ವೀಕರಿಸಿ, ತನ್ನೊಳಗಿನ ತಳಮಳ-ನಿರಾಸೆ-ಭರವಸೆ ಯಾವುದನ್ನೂ ಮುಚ್ಚಿಡದೆ, ಶಕ್ತವಾದ ವ್ಯಕ್ತಿತ್ವದಿಂದ ಮೂಡಿದ ಕನವಗಳು. ಎಲಿಯೆಟ್ ಮೊದಲ ಮಹಾಯುದ್ಧದ ನಂತರ ಮೂಡಿದ ನಿರಾಸೆ, ಆಧ್ಯಾತ್ಮಿಕ ಶೂನ್ಯ ಇವುಗಳಿಗೆ ಅಭಿವ್ಯಕ್ತಿ ನೀಡಿದ. ಈ ಅಭಿವ್ಯಕ್ತಿಯ ರೀತಿ ಹಿಂದಿನ ಕಾವ್ಯಕ್ಕಿಂತ ತೀರ ಭಿನ್ನವಾಗಿದ್ದು ಹೊಸ ಯುಗಕ್ಕೆ ನಾಂದಿಯಾಯಿತು. ಅನಂತರದ ವರ್ಷಗಳಲ್ಲಿ ಸಮಾಧಾನವನ್ನು ಕಂಡುಕೊಂಡ ಎಲಿಯಟ್ ಬರೆದ `ದ ಫೋರ್ ಕ್ವಾರ್ಟೆಟ್ಸ್’ ಶತಮಾನದ ಅತ್ಯಂತ ಮಹತ್ವದ ಚಿಂತನೆಯ ಕಾವ್ಯವಾಯಿತು. ಉತ್ತರಾರ್ಧದಲ್ಲಿ ಫಿಲಿಪ್ ಲಾರ್ಕಿನ್, ಟೆಡ್ ಹ್ಯೂಸ್, ಇವನ ಹೆಂಡತಿ ಸಿಲ್ವಿಯ ಪ್ಲಾವ್, ಪೀಟರ್ ಪೋರ್ಟರ್ ಮೊದಲಾದವರು ಪ್ರಮುಖ ಕವಿಗಳು.
ರೊಮ್ಯಾಂಟಿಕ್ ಯುಗ ಮತ್ತು ವಿಕ್ಟೋರಿಯನ್ ಯುಗಗಳಲ್ಲಿ ಗಮನಾರ್ಹ ನಾಟಕ ಕಾರರು ಬರಲಿಲ್ಲ. 20ನೆಯ ಶತಮಾನದ ಪೂರ್ವಾರ್ಧದಲ್ಲಿ ಪ್ರಾರಂಭದಲ್ಲಿ ನಾಟಕಕ್ಕೆ ಸ್ವಲ್ಪ ಜೀವಕಳೆ ನೀಡಿದವರು ಆರ್ಥರ್ ಹೆನ್ರಿ ಜೋನ್ಸ್ ಮತ್ತು ಆರ್ಥರ್ ವಿಂಗ್ ಪಿನಿಡೊ. ಆದರೆ, ನಾಟಕ ಮಂದಿರಕ್ಕೆ ಹೊಸ ಜೀವ, ಚೈತನ್ಯ ನೀಡಿದವನು ಜಾರ್ಜ್ ಬರ್ನಾರ್ಡ್ ಷಾ. ನಾಟಕಮಂದಿರವನ್ನು ಚಿಂತನೆಯ ಮಂದಿರವನ್ನಾಗಿ, ಸಾಮಾಜಿಕ ಕ್ರಾಂತಿಯ ರಂಗವನ್ನಾಗಿ ಮಾಡಬಯಸಿದ. ಇವನ ಮಾತಿನ ಚಮತ್ಕಾರ ಅದ್ಭುತವಾದದ್ದು. ವಾದ ವಿವಾದಗಳೆಂದರೆ ಉತ್ಸಾಹ. ನಾಟಕಗಳನ್ನು ಪ್ರಕಟಿಸುವಾಗ ಸುದೀರ್ಘ ಮುನ್ನುಡಿಗಳನ್ನು ಬರೆದ. ಮನುಷ್ಯ ಸ್ವಭಾವವನ್ನು ಆಳವಾಗಿ ಗ್ರಹಿಸದಿದ್ದರೂ ರಂಗಮಂದಿರದಲ್ಲಿ ಮಾತಿನ ಮಿಂಚಿನಿಂದ, ಮೋಡಿಯಿಂದ, ಐರನಿಯಿಂದ ಅತ್ಯಂತ ಪರಿಣಾಮಕಾರಿ ನಾಟಕಕಾರನಾದ. ಈಗ ಆತನ ನಾಟಕಗಳ ಹೊಳಪು ಮಾಸಿದೆ. ಜಾನ್ ಗಾಲ್ಸ್ವರ್ದಿ, ಸೀನ್ ಒಡೇಸಿ, ಟೆರೆನ್ಸ್ ರ್ಯಾಟಿಗನ್ ಗಮನಿಸಬೇಕಾದ ಇತರ ನಾಟಕಕಾರರು. ಯೇಟ್ಸ್ ಮತ್ತು ಎಲಿಯೆಟ್ ಕಾವ್ಯರೂಪಕ (ಪೊಯಟಿಕ್ ಡ್ರಾಮ)ಕ್ಕೆ ಮತ್ತೆ ಜೀವ ನೀಡಿದರು. ಕ್ರಿಸ್ಟಫರ್ ಫ್ರೈ, ಜೆ.ಬಿ.ಪ್ರೀಸ್ಸ್ಲಿ, ಆ್ಯಡನ್, ಕ್ರಿಸ್ಟಫರ್ ಇಷರ್ವುಡ್ ಇವರು ಇದೇ ಕಾಲದ ನಾಟಕಕಾರರು. ಜೆ.ಎಂ.ಸಿಂಗ್, ಸಾಮರ್ಸೆಟ್ ಮಾಮ್, ನೊಯೆಲ್ ಕಾರ್ಡ್ ವೈನೋದಿಕಗಳನ್ನು ಬರೆದರು.
1956 ಮೇ 8ರಂದು ಜಾನ್ ಅಸ್ಬಾರ್ನ್ನ ಲುಕ್ ಬ್ಯಾಕ್ ಇನ್ ಆ್ಯಂಗರ್ ಎನ್ನುವ ನಾಟಕವು ಪ್ರದರ್ಶಿತವಾಯಿತು. ಇದರೊಂದಿಗೆ ಇಂಗ್ಲಿಷ್ ನಾಟಕ ಹೊಸ ಯುಗಕ್ಕೆ ಕಾಲಿಟ್ಟಿತು. ದಿ ಆ್ಯಂಗ್ರಿ ಯಂಗ್ ಮ್ಯಾನ್ ಥಿಯೇಟರ್ ಜನ್ಮತಾಳಿತು. ಎರಡನೆಯ ಮಹಾಯುದ್ಧದ ಅನಂತರ ತರುಣ ಜನಾಂಗದಲ್ಲಿ ಮೊಳಕೆ ಇಟ್ಟ ಅಸಮಾಧಾನ, ಕ್ರೋಧ ನಿರಾಸೆ ಎಲ್ಲ ಈ ಬಗೆಯ ನಾಟಕಗಳಲ್ಲಿ ಪ್ರಕಟವಾದವು. ಒಂದು ವರ್ಷದ ಅನಂತರ ಪ್ರದರ್ಶಿತವಾದ ಸ್ಯಾಮ್ಯುಎಲ್ ಬೆಕೆಟನ ನಾಟಕ ವೆಯ್ಟಿಂಗ್ ಫಾರ್ ಗೋಡೋ ಮನುಷ್ಯನನ್ನು ಅವನ ಮೂಲಸ್ಥಿತಿಗೆ, ಅತ್ಯಂತ ನಿಸ್ಸಹಾಯಕ ಮತ್ತು ಅನಿಶ್ಚಿತತೆಗಳ ಸ್ಥಿತಿಗೆ ಇಳಿಸಿ, ಯಾವುದೇ ಆಸೆ-ಭರವಸೆಗಳ ಕನ್ನಡಕವಿಲ್ಲದೆ ಬದುಕಿನ ವಾಸ್ತವಿಕತೆಯನ್ನು ಕಾಣುವ ಪ್ರಯತ್ನ. ಇದರೊಂದಿಗೆ ಅಬ್ಸರ್ಡ್ ಥಿಯೇಟರ್ ಪ್ರಾರಂಭವಾಯಿತು. ಈ ಕಾಲದ ಇತರ ಗಮನಾರ್ಹ ನಾಟಕಕಾರರು ಆರ್ನಲ್ಡ್ ವೆಸ್ಕರ್, ಜಾನ್ ಆರ್ಡನ್, ಎಡ್ವರ್ಡ್ ಬಾಂಡ್ ಮೊದಲಾದವರು, ವೈನೋದಿಕ ಪ್ರಕಾರದಲ್ಲಿ ಹೆರಾಲ್ಡ್ ಪಿಂಟರ್, ಟಾಮ್ ಸ್ಟಾಫರ್ಡ್, (ಶ್ರೀಮತಿ) ಕಾವಿಟ್ ಚರ್ಚಿಲ್ ಮೊದಲಾದವರು.
ಈ ಅವಧಿಯಲ್ಲಿ ಇಂಗ್ಲಿಷ್ ನಾಟಕವು ಹಲವು ಆಂದೋಲನಗಳನ್ನು ಕಂಡಿತು. ಇವುಗಳಲ್ಲಿ ಪ್ರಮುಖವಾದವು ವರ್ಕರ್ಸ್ ಥಿಯೇಟರ್ ಮೂವ್ಮೆಂಟ್, ಫೆಮಿನಿಸ್ಟ್ ಥಿಯೇಟರ್, ಐರಿಷ್ ಥಿಯೇಟರ್.
ಕಾದಂಬರಿ ಪ್ರಕಾರದಲ್ಲಿ 1900-20ರವರೆಗೆ ಮಧ್ಯಂತರ ಅವಧಿ, ವಿಕ್ಟೋರಿಯ, ಯುಗದಿಂದ ಆಧುನಿಕ ಯುಗಕ್ಕೆ ಸೇತುವೆ. 1920ರ ದಶಕದಲ್ಲಿ ಜೇಮ್ಸ್ ಜಾಯ್ಸ್ನ ಯೂಲಿಸಿಸ್(1922), ವರ್ಜೀನಿಯ ವುಲ್ಫಳ ಮಿಸೆಸ್ ಡಾಲೊನೆಟ್ (1925) ಮತ್ತು ಡಿ.ಎಚ್.ಲಾರೆನ್ಸನ ಕಾದಂಬರಿಗಳು ಹೊಸ ಯುಗದ ಉದಯವನ್ನು ಸ್ಪಷ್ಟವಾಗಿ ಸಾರಿದವು. ಹಾರ್ಡಿಯ ಕಾದಂಬರಿಗಳಲ್ಲಿಯೂ ಕಥಾವಸ್ತುವಿಗೆ ಪ್ರಾಧಾನ್ಯ. ಕಥಾವಸ್ತುವು ಹಲವು ಘಟನಾವಳಿಗಳ ಸರಪಳಿ. ಆದರೆ ಕ್ರಮೇಣ ಕಥಾವಸ್ತುವಿನ ಪ್ರಾಧಾನ್ಯ ಕಡಿಮೆಯಾಯಿತು. ಓಪನ್ ಎಂಡೆಡ್ ಕಾದಂಬರಿಗಳು (ಪಾತ್ರಗಳ ಪ್ರಾಪಂಚಿಕ ಸ್ಥಿತಿಯನ್ನು ಒಂದು ಸ್ಪಷ್ಟ ಘಟ್ಟಕ್ಕೆ ತಂದು ನಿಲ್ಲಿಸದಿರುವ ಕಾದಂಬರಿಗಳು) ಹೆಚ್ಚಾದವು. ಕಾದಂಬರಿಯಲ್ಲಿ ನೈತಿಕ ನಿಲುವು, ಮನುಷ್ಯನ ಬದುಕಿನ ದರ್ಶನ ಇವು ಮೈದಾಳಿದವು. ಕಾಲ (ಟೈಂ)ದ ಸ್ವರೂಪದಲ್ಲಿ ಆಸಕ್ತಿ ಬೆಳೆಯಿತು. ಭಾಷೆಯ ಸಂವಹನ ಸ್ವರೂಪದಲ್ಲಿ ಆಸಕ್ತಿ ಉಂಟಾಯಿತು.
ಇಂಗ್ಲಿಷ್ ಕಾದಂಬರಿಯ ಚರಿತ್ರೆಯಲ್ಲಿ ಹೆನ್ರಿ ಜೇಮ್ಸ್ನ ಸ್ಥಾನದ ಬಗ್ಗೆ ವಿವಾದ ಉಂಟು. ಅವನು ಹುಟ್ಟಿದುದು ಅಮೆರಿಕದಲ್ಲಿ. 33ನೇ ವರ್ಷದಲ್ಲಿ ಇಂಗ್ಲೆಂಡಿಗೆ ಬಂದು ನೆಲಸಿದ. ಇವನು ಪಾತ್ರಗಳ ಮನಸ್ಸಿನಲ್ಲಿಳಿದು ಅನುಭವವನ್ನು ಅವರ ಪ್ರಜ್ಞೆಯೊಳಗಿಂದ ಕಾಣುತ್ತಾನೆ. ಈತನ ಗುರಿ ಸಂಪೂರ್ಣ ಮನುಷ್ಯನನ್ನು ಆತನ ಆವರಣದಲ್ಲಿ ಚಿತ್ರಿಸುವುದು.
ಇವನಿಗೆ ಮುಖ್ಯವಾಗಿದ್ದುದು ಒಂದು ದೃಷ್ಟಿಕೋನ. ದೃಷ್ಟಿಕೋನವೇ ಕಾದಂಬರಿಯ ಆಧಾರ. ಮುಖ್ಯ ಪಾತ್ರದ ಮನಸ್ಸಿನೊಳಗೆ ಇಳಿದು ಅದರೊಳಗಿಂದ ಇವನ ಪಾತ್ರಗಳನ್ನು ಕಾಣುತ್ತಾನೆ. ಇವನು ಕಾದಂಬರಿಯ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ. ಜಾನ್ ಗಾಲ್ಸ್ವರ್ದಿಯ ದ ಫಾರ್ಸೈಟ್ ಸಾಗ; ಶ್ರೀಮಂತವರ್ಗದ ವಿಡಂಬನೆ. ಎಚ್.ಜಿ.ವೆಲ್ಸ್ ಸೈಂಟಿಫಿಕ್ ಫಿಕ್ಷನ್ ಅಥವಾ ವೈಜ್ಞಾನಿಕ ಕಾಲ್ಪನಿಕ (ಕಾದಂಬರಿ) ರೂಪವನ್ನು ಬಲಗೊಳಿಸಿದವನು. ದ ಟೈಮ್ ಮೆಷೀನ್ ದ ವಾರ್ ಆಫ್ ದ ವಲ್ಡ್ರ್ಸ್ ಮುಂತಾದ ಕಾದಂಬರಿಗಳಲ್ಲಿ ವಿಜ್ಞಾನವು ಗೆದ್ದುಕೊಂಡ ಜ್ಞಾನಕ್ಕೆ ಕಲ್ಪನೆಯ ರೆಕ್ಕೆಗಳನ್ನು ಕೊಡುತ್ತಾನೆ. ಥಾಮಸ್ ಹಾರ್ಡಿ ನಿರಾಶಾವಾದಿ. ಕ್ರೈಸ್ತಮತದ ಕರುಣಾಮಯ ದೇವನ ಪರಿಕಲ್ಪನೆಯನ್ನು ತಿರಸ್ಕರಿಸಿ, ಮನುಷ್ಯನ ಗುಣ, ಯೋಗ್ಯತೆಗಳಿಗೆ ಲಕ್ಷ್ಯಕೊಡದ, ತನ್ನದೇ ಗುರಿ ಇರುವ ಒಂದು ಪ್ರಬಲ ಅದೃಶ್ಯ ಶಕ್ತಿಯನ್ನು ಕಂಡ ಶ್ರೇಷ್ಠ ಟ್ರ್ಯಾಜಿಕ್ ಕಾದಂಬರಿಗಳನ್ನು ಬರೆದ. ಈ ಕಾದಂಬರಿಗಳಲ್ಲಿ ಮಾನವ ಕುಲವನ್ನು ನಿಗೂಢ ವಿಶ್ವದ ಹಿನ್ನೆಲೆಯಲ್ಲಿ ಕಾಣುತ್ತೇವೆ. ಇವನು ಆಧುನಿಕ ಕಾದಂಬರಿಗೆ ಸಿದ್ಧತೆ ಮಾಡಿದವನು. ಡಿ.ಎಚ್.ಲಾರೆನ್್ಸ, ತನ್ನ ಕಾಲದಲ್ಲಿ ಅಶ್ಲೀಲ ಬರಹಗಾರ ಎನ್ನುವ ಆಪಾದನೆಯನ್ನು ಎದುರಿಸಿದ. ಬದುಕನ್ನು ಒಪ್ಪಿಕೊಳ್ಳಬೇಕು, ಸಹಜವಾಗಿ ಅನುಭವಿಸಬೇಕು ಎನ್ನುವುದು ಆತನ ನಿಲುವು. ಜೋಸೆಫ್ ಕಾನ್ರಾಡ್ ಮಾಂಟಾಜ್ ಪರಿಣಾಮವನ್ನು ಸಾಧಿಸುತ್ತಾನೆ. ಅನುಭವದ ಸಂಕೀರ್ಣತೆಯನ್ನು ಮನದಟ್ಟು ಮಾಡಿಕೊಡುತ್ತಾನೆ. ಜಾರ್ಜ್ ಆರ್ವೆಲ್ (ಎತಿಕ್ ಬ್ಲೇರ್) ಎರಡು ರಾಜಕೀಯ ಕಾದಂಬರಿಗಳನ್ನು ಬರೆದ, ಎರಡೂ (ಅನಿಮಲ್ ಫಾರ್ಮ್, ನೈನ್ಟೀನ್ ಎಯ್ಟಿಫೋರ್) ವಾಮಪಂಥದ ಸಿದ್ಧ ಪದವೃಂದಗಳನ್ನು ಬಳಸುತ್ತಲೇ ಅದಕ್ಕೆ ದ್ರೋಹ ಮಾಡುವುದು ಎಷ್ಟು ಸುಲಭ ಎನ್ನುವುದನ್ನೂ ತೋರಿಸುತ್ತವೆ. ಜೇಮ್ಸ್ ಜಾಯ್ಸ್ನ ಹಲವು ಕಾದಂಬರಿಗಳಲ್ಲಿ ಯೂಲಿಸಿಸ್ ಅತ್ಯಂತ ಪ್ರಸಿದ್ಧವಾದದ್ದು. ಈ ಬೃಹತ್ ಕಾದಂಬರಿ ಇಪ್ಪತ್ತನಾಲ್ಕು ಗಂಟೆಗಳಲ್ಲಿ ನಡೆಯುವ ಕ್ರಿಯೆಯನ್ನು ನಿರೂಪಿಸುತ್ತದೆ. ಕಾದಂಬರಿಯು ಸಂಕೇತಗಳಿಂದ ತುಂಬಿಹೋಗಿದೆ. ಭಾಷೆಗೆ ಅಸಾಧಾರಣ ಗಮನಕೊಟ್ಟು, ಪದಪದಕ್ಕೂ, ವಾಕ್ಯವಾಕ್ಯಕ್ಕೂ ವಾಕ್ಯದ ಲಯಕ್ಕೆ ಗಮನಕೊಟ್ಟು ಜಾಯ್ಸ್ ಬರೆದ. ಇವನು ಸ್ಟೀಮ್ ಆಫ್ ಕಾನ್ಷಸ್ನೆಸ್ ತಂತ್ರವನ್ನು ಬಳಸಿದ. ವರ್ಜಿನಿಯ ವುಲ್ಫ್ ಸಹ ಇದೇ ತಂತ್ರವನ್ನು ಬಳಸಿದಳು. ಇ.ಎಂ.ಫಾರ್ಸ್ಟರ್, ಐ.ವಿ.ಕಾಂಪ್ಟನ್-ಬರ್ನೆಟ್, ಆಲ್ಡಸ್ ಹಕ್ಸ್ಲಿ ಈ ಕಾಲದ ಇತರ ಗಮನಾರ್ಹ ಕಾದಂಬರಿಕಾರರು.
ಅನಂತರದ ಅವಧಿಯ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬ ಗ್ರಹಾಂ ಗ್ರೀನ್. ಕಷ್ಟವಾದ ನೈತಿಕ ಆಯ್ಕೆಗಳನ್ನು ಎದುರಿಸುವ ಮನುಷ್ಯ ಇವನ ವಸ್ತು. ಭಗವಂತನ ಗ್ರೇಸ್ (ಕೃಪೆ)ಗೆ ಇವನು ಮಹತ್ವ ನೀಡುತ್ತಾನೆ. ಆರ್ಥರ್ ಕೊಯ್ಸ್ಲರ್ನ ಬದುಕೇ ಅಸಾಧಾರಣ ಘಟನೆಗಳಿಂದ, ಅನುಭವಗಳಿಂದ ತುಂಬಿಹೋದದ್ದು. ಸ್ವಾತಂತ್ರ್ಯದ ಬಯಕೆ ಇವನ ಕಾದಂಬರಿಗಳಲ್ಲಿ ತೀವ್ರವಾಗಿದೆ. ವಿಲಿಯಂ ಗೋಲ್ಡಿಂಗನೂ ಸಮಾಜದ ಪರಂಪರೆ ಮತ್ತು ಕಟ್ಟುಪಾಡುಗಳಿಂದ ದೂರವಿರುವ ಮನುಷ್ಯರು ಕಷ್ಟವಾದ ನೈತಿಕ ಆಯ್ಕೆಗಳನ್ನು ಮಾಡುವುದನ್ನು ನಿರೂಪಿಸುತ್ತಾನೆ.
2ನೆಯ ಮಹಾಯುದ್ಧದ ಅನಂತರದ ಕಾಲ ನಿರಾಸೆ, ಗೊಂದಲಗಳ ಕಾಲ. ಬದುಕಿನ ಸ್ವರೂಪ-ಮೌಲ್ಯಗಳ, ಮತ್ತೊಂದು ಅನ್ವೇಷಣೆಯ ಕಾಲ. ಫಿಲಿಪ್ ಲಾರ್ಕಿನ್, ವಿಲಿಯಂ ಕೂಪರ್, ಜಾನ್ ವೇಯ್ನ್ ಮೊದಲಾದವರ ಕಾದಂಬರಿಗಳಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ (ಕ್ಷುದ್ರ ತರುಣ)ನ ಮನಃಸ್ಥಿತಿಯನ್ನು ಕಾಣುತ್ತೇವೆ. ಡೇವಿಡ್ ಸ್ಕೋಂ, ಆ್ಯಂಗಸ್ ವಿಲ್ಸನ್ ಮೊದಲಾದವರ ಕಾದಂಬರಿಗಳಲ್ಲಿ `ಸೋಷಿಯಲ್ ರಿಯಲಿಸಂ’ (ಸಾಮಾಜಿಕ ವಾಸ್ತವತೆ, ಕಾಣುತ್ತದೆ. ಎರಡನೆಯ ಮಹಾಯುದ್ಧದ ಅನಂತರದ ಒತ್ತಡಗಳಿಂದ ತಪ್ಪಿಸಿಕೊಳ್ಳುವ`ಫ್ಯಾಂಟಸಿ ಗಳೂ ಕಾಣಿಸಿಕೊಂಡವು. ಜೇಮ್ಸ್ ಬಾಂಡ್ನ ಕಥೆಗಳನ್ನು ಐಯಾನ್ ಫ್ಲೆಮಿಂಗ್ ಬರೆದ. ಹ್ಯಾಡ್ಲಿ ಛೇಸ್ ಇಂಥವೇ ಪಲಾಯನ ಕಾದಂಬರಿಗಳನ್ನು ಬರೆದ. ಇವುಗಳಲ್ಲಿ ನೈತಿಕತೆಯ ಸುಳಿವೇ ಇಲ್ಲ. ಪಾಲ್ ಸ್ಕಾಟ್ನಂಥವರು ನಷ್ಟವಾದ ಸಾಮ್ರಾಜ್ಯವನ್ನು ವಸ್ತುವಾಗಿ ಆರಿಸಿಕೊಂಡರು. ಈ ಅವಧಿಯಲ್ಲಿ ಜೇನ್ರಿಸ್, ಅನಿತ ಬ್ಯುಕ್ನರ್ ಮೊದಲಾದ ಹಲವರು ಮಹಿಳೆಯರು ಕಾದಂಬರಿಗಳನ್ನು ಬರೆದರು.
20ನೆಯ ಶತಮಾನದಲ್ಲಿ ಕಾದಂಬರಿಕಾರನು ತತ್ತರಿಸುವ ಅನುಭವಗಳಿಗೆ ಒಳಗಾದ. ಕಾದಂಬರಿಯು ವಸ್ತುಗಳನ್ನು ಆರಿಸಿಕೊಂಡಿತು. ಇದಕ್ಕೆ ಅನುಗುಣವಾಗಿ ರೂಪದಲ್ಲಿ ಪ್ರಯೋಗಗಳಾದವು. ನಿಯತಕಾಲಿಕಗಳ ಮೇಲೆ ಕಾದಂಬರಿಕಾರನ ಅವಲಂಬನೆ ಕಡಿಮೆಯಾ ದುದರಿಂದ ಹಲವು ರೀತಿಗಳಲ್ಲಿ ಆತನ ಸ್ವಾತಂತ್ರ್ಯ ವಿಸ್ತಾರವಾಯಿತು.