ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೋಮನ್ನರ ಆಕ್ರಮಣ
ಜೂಲಿಯಸ್ ಸೀಸರ್ ಇಲ್ಲಿಗೆ ಬಂದ ಮೊದಲ ಮುಖ್ಯ ಆಕ್ರಮಣಕಾರ. ರೋಮನ್ ಆಕ್ರಮಣಕಾರಿಗಳು ತಮ್ಮ ಧರ್ಮ ಮತ್ತು ನಾಗರಿಕತೆಯನ್ನು ಇಲ್ಲಿ ಹರಡಿದರು; ಆದರೆ ಅಪೇಕ್ಷಿತ ಪ್ರಭಾವ ಉಂಟುಮಾಡಲಾಗಲಿಲ್ಲ. ಸೀಸರ್ನ ಅನಂತರದ ಚಕ್ರವರ್ತಿ ಕ್ಲಾಡಿಯಸ್ ಆರು ಸಾವಿರ ಸೈನಿಕರನ್ನು ಬ್ರಿಟನ್ನಿನ ಮೇಲೆ ಕಳುಹಿಸಿದ. ಕೆಲಭಾಗ ಆತನ ವಶವಾಯಿತು. ಕ್ಯಾರಕ್ಟಕಸ್ ಎಂಬುವನ ನೇತೃತ್ವದಲ್ಲಿ ಬ್ರಿಟನ್ ರೋಮನ್ನರನ್ನು ಎದುರಿಸಿತು. ಸೆರೆ ಸಿಕ್ಕಿದ ಕ್ಯಾರಕ್ಟಕಸ್ ರೋಮಿಗೆ ಹೋಗಬೇಕಾಯಿತು. 78-85ರಲ್ಲಿ ಬ್ರಿಟನ್ ರೋಮ್ ಆಡಳಿತವನ್ನೊಪ್ಪಿತು. ಇಲ್ಲಿನ ಜನ ಲ್ಯಾಟಿನ್ ಭಾಷೆಗೆ ಮಾರುಹೋದರು. ಇದು ರೋಮ್ ದೇಶದ ಒಂದು ಪ್ರಾಂತ್ಯವಾಯಿತು. ಕೆಲವರು ರೋಮಿನೊಂದಿಗೆ ವ್ಯಾಪಾರ ಪ್ರಾರಂಭಿಸಿ ಎರಡು ದೇಶಗಳ ನಡುವೆ ಬೆಸುಗೆ ಹಾಕಿದರು.
ಆ್ಯಂಗ್ಲೊ-ಸ್ಯಾಕ್ಸನರು: ರೋಮ್ ಸಾಮ್ರಾಜ್ಯದೊಳಗಿನ ಜನರು ದೇಶದ ಭದ್ರತೆಗೆ ಬಿಕ್ಕಟ್ಟನ್ನು ತರಲು ಪ್ರಯತ್ನಿಸಿದರು. ಆ್ಯಂಗಲ್ ಮತ್ತು ಸ್ಯಾಕ್ಸನ್ ಬುಡಕಟ್ಟಿನವರು ಆಗಾಗ್ಗೆ ಬ್ರಟಿಷ್ ದ್ವೀಪಗಳ ಮೇಲೆ ನುಗ್ಗಿ ಲೂಟಿಮಾಡಲು ಬರುತ್ತಿದ್ದರು; ಕೊನೆಗೆ ಅಲ್ಲಿಯೇ ನೆಲೆಸಿದರು. ಇಂದಿನ ಬ್ರಿಟನ್ ಸಂಸ್ಕೃತಿ ಮತ್ತು ಆಂಗ್ಲಭಾಷೆ ಆ್ಯಂಗ್ಲೊ-ಸ್ಯಾಕ್ಸನರ ಕೊಡುಗೆ. 9ನೆಯ ಶತಮಾನದಲ್ಲಿ ಎಗ್ಬರ್ಟ್ ರಾಜನಾದ. ಆತ ಬ್ರಿಟನ್ನಿನ ಮೊದಲ ದೊರೆ. ಕೆಂಟ್, ಮರ್ಸಿಯ, ನಾರ್ಥಂಬ್ರಿಯ, ಎಸೆಕ್ಸ್ ಪ್ರಸಿದ್ಧ ನಗರಗಳು. ಡೇನರು ಅವುಗಳ ಮೇಲೆ ಸತತ ದಾಳಿ ಮಾಡುತ್ತಿದ್ದರು. ಇಂಗ್ಲೆಡನ್ನು ರಕ್ಷಿಸುವ ಕಾರ್ಯವನ್ನು ಎಗ್ಬರ್ಟ್ ಮಾಡಿದ. ಎಥೆಲ್ ಬರ್ಟ್ ರಾಜನ ಕಾಲದಲ್ಲಿ ರೋಮಿನಿಂದ ಪಾದ್ರಿಗಳ ಗುಂಪೊಂದು ಪೋಪ್ ಗ್ರೆಗರಿಯ ಆದೇಶಾನುಸಾರವಾಗಿ ಇಂಗ್ಲೆಂಡಿಗೆ ಬಂತು. (ಇಂಗ್ಲೆಂಡಿನ-ಚರ್ಚು). ಆಗಸ್ಟೈನ್ ಎಂಬ ಪಾದ್ರಿ ಈ ಗುಂಪಿನ ನಾಯಕ. ಮೊದಲ ಬಾರಿಗೆ ಇಂಗ್ಲೆಂಡ್ ಜನರು ಹೆಚ್ಚು ಸಂಖ್ಯೆಯಲ್ಲಿ ಕ್ರೈಸ್ತ ಮತವನ್ನು ಅವಲಂಬಿಸಿದರು.
ಆ್ಯಂಗ್ಲೊ-ಸ್ಯಾಕ್ಸನರ ಸಾಧನೆಯೆಂದರೆ ಅವರ ಗ್ರಾಮಜೀವನ. ಗ್ರಾಮಗಳ ಸ್ವಯಂ ಆಡಳಿತ ಅವರ ವೈಶಿಷ್ಟ್ಯ. ಹಂಡ್ರೆಡ್ ಮೂಟ್, ಷೈರ್ ಮೂಟ್, ವಿಲೇಜ್ ಮೂಟ್ ಮುಂತಾದ ಸಭೆಗಳು ಜಾರಿಯಲ್ಲಿದ್ದವು.