ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲವಣ

ವಿಕಿಸೋರ್ಸ್ದಿಂದ

ತಟಸ್ಥೀಕರಣಕ್ಕೆ (ನ್ಯೂಟ್ರಲೈಜೇಶನ್) ಕಾರಣವಾಗಿರುವ ರಾಸಾಯನಿಕ ಕ್ರಿಯೆಯ ಸಂದರ್ಭದಲ್ಲಿ ಉಂಟಾಗುವ ಫಲಿತೋತ್ಪನ್ನಗಳ ಪೈಕಿ ಒಂದು ಸಂಯುಕ್ತ (ಸಾಲ್ಟ್). ಇನ್ನೊಂದು ನೀರು (ವಾಟರ್). ಆಮ್ಲ ಮತ್ತು ಪ್ರತ್ಯಾಮ್ಲಗಳ ವರ್ತನೆಯಿಂದ ಲವಣ ಮತ್ತು ನೀರು ಉಂಟಾಗುತ್ತವೆ. ಈ ಕ್ರಿಯೆಯನ್ನು ಸೂಚಿಸುವ ಸಾಮಾನ್ಯ ರಾಸಾಯನಿಕ ಸಮೀಕರಣ:

H.A + B.OH  AB + H2O

ಆಮ್ಲ ಪ್ರತ್ಯಾಮ್ಲ ಲವಣ ನೀರು

ಫಲಿತ ಲವಣದ A ಭಾಗ ಆಮ್ಲದಿಂದಲೂ B ಭಾಗ ಪ್ರತ್ಯಾಮ್ಲದಿಂದಲೂ ಒದಗುತ್ತವೆ. ಆದ್ದರಿಂದ ಎಲ್ಲ ಲವಣಗಳಲ್ಲೂ ಒಂದು ಆಮ್ಲೀಯ ರ್ಯಾಡಿಕಲ್ ಮತ್ತು ಒಂದು ಪ್ರತ್ಯಾಮ್ಲೀಯ ರ್ಯಾಡಿಕಲ್ ಇರುವುವು. ಹೀಗಾಗಿ ತಟಸ್ಥೀಕರಣದ ಉತ್ಪನ್ನಗಳಲ್ಲಿ ನೀರನ್ನು ಬಿಟ್ಟರೆ ಉಳಿವುದೇ ಲವಣ ಎಂದು ಕೂಡ ವ್ಯಾಖ್ಯಿಸಬಹುದು. ಸಾಮಾನ್ಯವಾಗಿ ಲವಣಗಳು ಹರಳುರೂಪದ ವಸ್ತುಗಳು. ಅನೇಕ ಲವಣಗಳಲ್ಲಿ ಸಂಯೋಜಿ ತಜಲ ಇರುವುದು. ಉದಾಹರಣೆಗೆ ವಾಷಿಂಗ್ ಸೋಡ (Na2Co3. 10H2o), ಕಾಪರ್‍ಸಲ್ಫೇಟ್ (CuSo4. 5H2O), ಜಿಪ್ಸಮ್ (CaSo4. 2H20), ಅನ್ನಭೇದಿ (FeSo4.7H2O), ಎಫ್ಸಮ್ (Mg SO4. 7H2O), ಪಟಿಕ (K2SO4, Al2(SO4)3.24H2O) ಇತ್ಯಾದಿ.

ಪ್ರಭೇದಗಳು.

1. ಆಮ್ಲೀಯ ಲವಣ : ಆಮ್ಲದ ಅಣುವಿನಲ್ಲಿರುವ ಹೈಡ್ರೊಜನ್ ಪರಮಾಣುಗಳು ಲೋಹ ಅಥವಾ ಲೋಹದ ರ್ಯಾಡಿಕಲ್‍ಗಳಿಂದ ಭಾಗಶಃ ಪಲ್ಲಟಿತವಾದಾಗ ದೊರೆಯುವ ಲವಣ. ಇಂಥ ಲವಣದಲ್ಲಿ ಮೂಲ ಆಮ್ಲದ ವೈಶಿಷ್ಟ್ಯ ಎನ್ನಲಾದ ಹೈಡ್ರೊಜನ್ ಇನ್ನೂ ಉಳಿದಿರುವುದರಿಂದಲೇ ಈ ಹೆಸರು. ಉದಾಹರಣೆ: ಸೋಡಿಯಮ್ ಬೈಸಲ್ಫೇಟ್ (NaHSO4.), ಸೋಡಿಯಮ್ ಬೈಕಾರ್ಬೊನೇಟ್ (NaHCO3), ಮಾನೋಸೋಡಿಯಮ್ ಆರ್ಥೊಫಾಸ್ಪೇಟ್ (NaH2 PO4), ಡೈಸೋಡಿಯಮ್ ಆರ್ಥೊಫಾಸ್ಪೇಟ್ (Na2H PO4) ಇತ್ಯಾದಿ.

2. ಪ್ರಸಾಮಾನ್ಯ ಲವಣ (ನಾರ್ಮಲ್) : ಆಮ್ಲದ ಒಂದು ಅಣುವಿನಲ್ಲಿರುವ ಹೈಡ್ರೊಜನ್ ಪರಮಾಣುಗಳು ಲೋಹ ಅಥವಾ ಲೋಹದ ರ್ಯಾಡಿಕಲ್‍ಗಳಿಂದ ಪೂರ್ತಿಯಾಗಿ ಪಲ್ಲಟಿತವಾದಾಗ ದೊರೆಯುವ ಲವಣ. ಉದಾಹರಣೆ: ಸೋಡಿಯಮ್ ಸಲ್ಫೇಟ್ (Na2SO4), ಸೋಡಿಯಮ್ ಕಾರ್ಬೊನೇಟ್ (Na2 CO3), ಟ್ರೈಸೋಡಿಯಮ್ ಆರ್ಥೊಫಾಸ್ಫೇಟ್ (Na3 PO4) ಇತ್ಯಾದಿ.

ಏಕಪ್ರತ್ಯಾಮ್ಲೀಯ (ಮಾನೊಬೇಸಿಕ್) ಆಮ್ಲಗಳಾದ ಹೈಡ್ರೊ ಕ್ಲೋರಿಕ್ ಆಮ್ಲ (HCL), ನೈಟ್ರಿಕ್ ಆಮ್ಲ (HNO3), ಅಸಿಟಿಕ್ ಆಮ್ಲ (CH3. COOH) ಮೊದಲಾದವು ನಾರ್ಮಲ್ ಲವಣಗಳನ್ನು ಮಾತ್ರ ಕೊಡಬಲ್ಲವು. ಅವು ಆಮ್ಲೀಯ ಲವಣಗಳನ್ನು ಕೊಡಲಾರವು. ಇದು ಸ್ವಯಂವೇದ್ಯ. ಪೊಟ್ಯಾಸಿಯಮ್ ಕ್ಲೋರೈಡ್ (KCL), ಸೋಡಿಯಮ್ ನೈಟ್ರೇಟ್ (NaNO3), ಸೋಡಿಯಮ್ ಅಸಿಟೇಟ್ (CH3.CO.ON) ಇತ್ಯಾದಿ ಗಮನಾರ್ಹ.

3. ಪ್ರತ್ಯಾಮ್ಲೀಯ ಲವಣ (ಬೇಸಿಕ್ ಸಾಲ್ಟ್) : ಪ್ರತ್ಯಾಮ್ಲದ ಒಂದು ಅಣುವಿನಲ್ಲಿರುವ ಹೈಡ್ರಾಕ್ಸಿಲ್ ಗುಚ್ಛಗಳು ಆಮ್ಲೀಯ ರ್ಯಾಡಿಕಲ್‍ಗಳಿಂದ ಭಾಗಶಃ ಪಲ್ಲಟಿತವಾದಾಗ ದೊರೆಯುವ ಲವಣ. ಉದಾಹರಣೆ: ಬಿಸ್ಮತ್ ಹೈಡ್ರಾಕ್ಸೈಡ್ ಹೈಡ್ರೊಕ್ಲೋರಿಕ್ ಆಮ್ಲದೊಡನೆ ವರ್ತಿಸಿದಾಗ ಅದರ ಅಣುವಿನಲ್ಲಿದ್ದ ಮೂರು ಹೈಡ್ರಾಕ್ಸಿಲ್ ಗುಚ್ಛಗಳ ಪೈಕಿ ಒಂದು ಮಾತ್ರ ಪಲ್ಲಟಿತವಾಗಿ ಬಿಸ್ಮತ್ ಆಕ್ಸಿಕ್ಲೋರೈಡ್ ಎಂಬ ಪ್ರತ್ಯಾಮ್ಲೀಯ ಲವಣ ಉಂಟಾಗುತ್ತದೆ.

Bi(OH)3 + HCl → BiOCl + 2H2O
ಪ್ರತ್ಯಾಮ್ಲೀಯ ಲವಣ ಇನ್ನಷ್ಟು ಆಮ್ಲದೊಡನೆ ವರ್ತಿಸಿ ನಾರ್ಮಲ್ ಲವಣವನ್ನು ಕೊಡಬಲ್ಲದು.
BiOC1 + 2HC1 → BiCl3 + H2O
ಬಿಸ್ಮತ್ ಟ್ರೈಕ್ಲೋರೈಡ್

ಸೀಸದ ಪ್ರತ್ಯಾಮ್ಲೀಯ ನೈಟ್ರೇಟ್ [Pb(OH)NO3], ಮೆಗ್ನೀಸಿಯಮ್ ಹೈಡ್ರಾಕ್ಸಿ ಕ್ಲೋರೈಡ್ [Mg(OH)Cl], ತಾಮ್ರದ ಪ್ರತ್ಯಾಮ್ಲೀಯ ಕಾರ್ಬೊ ನೇಟ್ [CuCO3.Cu(OH)2] ಇತರ ಉದಾಹರಣೆಗಳು.

ಚಿತ್ರ-ಸೋಡಿಯಮ್-ಕ್ಲೋರೈಡಿನ-ರಚನೆ

4. ಯುಗ್ಮ ಲವಣ (ಡಬ್ಬಲ್ ಸಾಲ್ಟ್) : ಘನಸ್ಥಿತಿಯಲ್ಲಿ ಏಕ ಲವಣ ದಂತಿದ್ದು, ನೀರಿನಲ್ಲಿ ಲೀನಿಸಿದಾಗ ತನ್ನಲ್ಲಿರುವ ಎರಡು ಲವಣಗಳ ಗುಣಗಳನ್ನೂ ಪ್ರದರ್ಶಿಸುವ ಲವಣಜೋಡಿ. ಉದಾಹರಣೆ : ಪಟಿಕ ಅಥವಾ ಪೊಟ್ಯಾಷ್ ಆಲಮ್ [K2SO4Al2(SO4)324H2O], ಮೋರನ ಲವಣ (ಫೆರಸ್ ಅಮೋನಿಯಮ್ ಸಲ್ಫೇಟ್) [FeSO4(NH4)2SO4. 6H2O]. ಪಟಿಕದ ದ್ರಾವಣವನ್ನು ಪೊಟ್ಯಾಸಿಯಮ್ (K+), ಅಲ್ಯೂಮಿನಿಯಮ್ (Al3+) ಮತ್ತು ಸಲ್ಫೇಟ್ (SO4-2) ಅಯಾನ್‍ಗಳನ್ನು ಗುರುತಿಸುವ ಪರೀಕ್ಷಾ ಪ್ರಯೋಗಗಳಿಗೆ ಗುರಿಪಡಿಸಿದರೆ ನಿರೀಕ್ಷಿತ ಫಲಿತಾಂಶಗಳು ದೊರೆಯುತ್ತವೆ. ಇದೇ ರೀತಿ ಮೋರನ ಲವಣದ ದ್ರಾವಣ ಫೆರಸ್ (Fe2+) ಸಲ್ಫೇಟ್ ಮತ್ತು ಅಮೋನಿಯಮ್ (NH4+) ಅಯಾನ್‍ಗಳ ಲಕ್ಷಣಗಳನ್ನು ಪ್ರದರ್ಶಿಸುವುದು.

5. ಸಂಕೀರ್ಣ ಲವಣ (ಕಾಂಪ್ಲೆಕ್ಸ್ ಸಾಲ್ಟ್) : ಎರಡು ಸರಳ ಲವಣಗಳಿಂದಾದುದು. ಆದರೆ ನೀರಿನಲ್ಲಿ ಲೀನಿಸಿದಾಗ ಅವುಗಳಲ್ಲಿಯ ಎಲ್ಲ ಅಯಾನ್‍ಲಕ್ಷಣಗಳನ್ನೂ ಪ್ರದರ್ಶಿಸುವುದಿಲ್ಲ, ಬದಲು ವಿಶಿಷ್ಟ ಗುಣದ ಬೇರೊಂದು ಸಂಕೀರ್ಣ ಅಯಾನ್ ಅಸ್ತಿತ್ವಕ್ಕೆ ಬಂದಿರುತ್ತದೆ. ಉದಾ: ಪೊಟ್ಯಾಸಿಯಮ್ ಫೆರೊಸಯನೈಡ್ ಇಂಥ ಒಂದು ಸಂಕೀರ್ಣಲವಣ. ಪೊಟ್ಯಾಸಿಯಮ್ ಸಯನೈಡ್ (KCN) ಮತ್ತು ಫೆರಸ್ ಸಲ್ಫೇಟ್ (FeSO4) ದ್ರಾವಣಗಳನ್ನು ಪರಸ್ಪರ ಬೆರೆಸಿದಾಗ ಜರಗುವ ಕ್ರಿಯೆಗಳು:

FeSO4 + 2KCN → K2SO4 + Fe(CN)2
                      ಫೆರಸ್ ಸಯನೈಡ್
Fe(CN)2 + 4KCN → K4 [Fe(CN)6]

ದ್ರಾವಣವನ್ನು ಸೋಸಿ ಇಂಗಿಸಿದಾಗ ದೊರೆಯುವ ನಿಂಬೆಹಣ್ಣು ಬಣ್ಣದ ಹರಳುಗಳೇ ಪೊಟ್ಯಾಸಿಯಮ್ ಫೆರೊಸಯನೈಡ್. ಇವನ್ನು ಮತ್ತೆ ನೀರಿನಲ್ಲಿ ಲೀನಿಸಿದಾಗ ಅಯಾನೀಕರಣ ಸಂಭವಿಸುತ್ತದೆ :

K4 [Fe(CN)6] → 4K + [Fe(CN)6]4- ಫೆರೊಸಯನೈಡ್ ಅಯಾನ್

ದ್ರಾವಣದಲ್ಲಿ ಫೆರಸ್ (Fe2+) ಮತ್ತು ಸಯನೈಡ್ (CN-) ಅಯಾನ್‍ಗಳು ಸಂಕೀರ್ಣ ರ್ಯಾಡಿಕಲ್‍ನಲ್ಲಿ ಅಡಗಿಕೊಂಡಿವೆ. ಆದ್ದರಿಂದ ಅವುಗಳ ಗುಣಗಳು ವ್ಯಕ್ತವಾಗುವುದಿಲ್ಲ. ದ್ರಾವಣಕ್ಕೆ ಸ್ವಲ್ಪ ಫೆರಿಕ್ ಕ್ಲೋರೈಡನ್ನು ಸೇರಿಸಿದರೆ ದಟ್ಟ ನೀಲಿಬಣ್ಣ ತಳೆಯುವುದು. ಇದು ಫೆರೊಸಯನೈಡ್ ಅಯಾನ್‍ನ ವೈಶಿಷ್ಟ್ಯ. ಆದ್ದರಿಂದ ಸಂಕೀರ್ಣ ಅಯಾನ್ ರೂಪುಗೊಂಡಿದೆ.

ಕಾಪರ್‍ಸಲ್ಫೇಟ್ ದ್ರಾವಣಕ್ಕೆ ಅಮೋನಿಯಮ್ ಹೈಡ್ರಾಕ್ಸೈಡನ್ನು ಕ್ರಮೇಣ ಸೇರಿಸುತ್ತ ಬಂದರೆ ಮೊದಲು ತಿಳಿ ನೀಲಿ ಬಣ್ಣದ ಕ್ಯುಪ್ರಿಕ್ ಹೈಡ್ರಾಕ್ಸೈಡ್ ಒತ್ತರಿಸುವುದು. ಅನಂತರ ಒತ್ತರ ಲೀನಿಸಿ ಕಡುನೀಲಿ ಬಣ್ಣದ ದ್ರಾವಣ ಉಂಟಾಗುತ್ತದೆ. ಇದರ ಮೇಲೆ ಆಲ್ಕೊಹಾಲನ್ನು ಸುರಿದು ಕೆಲಕಾಲ ಬಿಟ್ಟರೆ ದಟ್ಟ ನೀಲಿ ಬಣ್ಣದ ಕ್ಯುಪ್ರಮೋನಿಯಮ್ ಸಲ್ಫೇಟ್ {[Cu(NH3)4].SO4.4H2O} ಎಂಬ ಸಂಕೀರ್ಣ ಲವಣ ಸ್ಫಟಕೀ ಕರಿಸುತ್ತದೆ. ಇದರ ದ್ರಾವಣದಲ್ಲಿ ಸೆಲ್ಯುಲೋಸ್(ಹತ್ತಿ) ಕಲಿಲಸ್ಥಿತಿಯಲ್ಲಿ ನಿಲಂಬಿತವಾಗುವುದು. ಈ ದ್ರವವನ್ನು 15-20% ಸಲ್ಫ್ಯೂರಿಕ್ ಆಮ್ಲ ಅಥವಾ 5-30% ಕಾಸ್ಟಿಕ್ ಸೋಡ ದ್ರಾವಣದೊಳಕ್ಕೆ ಪಿಚಕಾರಿಗಳ ಮೂಲಕ ಧಾರೆಯ ರೂಪದಲ್ಲಿ ಬಿಟ್ಟರೆ ಸೆಲ್ಯುಲೋಸ್ ಒತ್ತರಿಸುತ್ತದೆ. ಈಚೆಗೆ ಬರುವಾಗ ರೇಷ್ಮೆಯಂತಿರುವ ತಂತುಗಳಾಗಿ ಪುನರವತರಿಸುವುದು. ಇದೇ ಕೃತಕ ರೇಷ್ಮೆ (ರೇಯಾನ್).

ಸೇಕಡಾ 0.15 ಸೋಡಿಯಮ್ ಸಯನೈಡ್ ದ್ರಾವಣದಲ್ಲಿ, ಬೆಳ್ಳಿಯ ಸಲ್ಫೈಡ್ ಲೀನಿಸಿ ಸೋಡಿಯಮ್ ಅರ್ಜೆಂಟೊ ಸಯನೈಡ್ {Na[Ag (CN)2]} ಮತ್ತು ಚಿನ್ನ ವಿಲೀನವಾಗಿ ಸೋಡಿಯಮ್ ಆರೊಸಯನೈಡ್ {Na[Au(CN2)]} ಎಂಬ ಸಂಕೀರ್ಣ ಲವಣಗಳು ಉಂಟಾಗುತ್ತವೆ. ಬೆಳ್ಳಿ ಮತ್ತು ಚಿನ್ನಗಳನ್ನು ಆಯಾ ಅದುರುಗಳಿಂದ ಉದ್ಧರಿಸಲು ಈ ಕ್ರಿಯೆಗಳು ಸಹಾಯಕ.

6. ಮಿಶ್ರಲವಣಗಳು : ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಆಮ್ಲೀಯ ಅಥವಾ ಪ್ರತ್ಯಾಮ್ಲೀಯ ರ್ಯಾಡಿಕಲ್‍ಗಳು ಇರುತ್ತವೆ. ಮಾನವಮೂತ್ರದ ಲ್ಲಿರುವ ಮೈಕ್ರೊಕಾಸ್ಮಿಕ್ ಲವಣ (Na.NH4HPO4)4H2O ಇದಕ್ಕೆ ಉದಾಹರಣೆ. ಛಾಯಾಚಿತ್ರಫಲಕದಲ್ಲಿ (ಫೋಟೊಗ್ರಾಫಿಕ್ ಪ್ಲೇಟ್) ಬೆಳಕಿನ ಪ್ರಭಾವಕ್ಕೆ ಒಳಗಾಗದ ಬೆಳ್ಳಿಯ ಹ್ಯಾಲೈಡ್‍ಗಳು ಇನ್ನೂ ಇರುವುದರಿಂದ ಅವನ್ನು ತೆಗೆದುಹಾಕಿದ ಹೊರತು ಫಲಕವನ್ನು ಹೊರಗೆ ತರುವಂತಿಲ್ಲ. ಇದಕ್ಕಾಗಿ ಫಲಕವನ್ನು ಸೋಡಿಯಮ್ ಥಯೊಸಲ್ಫೇಟ್ ದ್ರಾವಣದಿಂದ ತೊಳೆಯುತ್ತಾರೆ. ಅಳಿದುಳಿದ ಬೆಳ್ಳಿಯ ಹ್ಯಾಲೈಡುಗಳನ್ನು ಇದು ಲೀನಿಸಿಕೊಂಡು ಸೋಡಿಯಮ್ ಅರ್ಜೆಂಟೊ ತಯೊಸಲ್ಫೇಟ್ (Na.AgS2O3) ಎಂಬ ಮಿಶ್ರಲವಣವನ್ನು ಕೊಡುವುದು. ಈ ಕ್ರಮಕ್ಕೆ ಸ್ಥಿರೀಕರಣ (ಫಿಕ್ಸಿಂಗ್) ಎಂದು ಹೆಸರು.

ಲವಣಗಳು ನೀರಿನಲ್ಲಿ ದ್ರಾವ್ಯ ಮತ್ತು ಪ್ರಬಲ ಎಲೆಕ್ಟ್ರೊಲೈಟ್‍ಗಳು ಅಂದರೆ, ದ್ರಾವಣದಲ್ಲಿ (ಜಲೀಯ) ಸಂಪೂರ್ಣವಾಗಿ ಅಯಾನೀಭವಿಸಿರು ತ್ತವೆ. ನೀರು ಸಹ ಅತ್ಯಲ್ಪವಾಗಿ (ಅಂದರೆ 10 ಮಿಲಿಯನ್ ಅಣುಗಳಲ್ಲಿ ಒಂದು) ಅಯಾನೀಕೃತವಾಗಿರುವುದು ವೇದ್ಯ. ಈ ಸಮತೋಲಗಳನ್ನು (ಈಕ್ವಿಲಿಬ್ರಿಯ) ಮುಂದೆ ಸೂಚಿಸಿದೆ.

AB  A- + B+
ಲವಣ ಆನಯಾನ್ ಕೇಟಯಾನ್
H2O  H+ + OH -

ದ್ರಾವಣದಲ್ಲಿರುವ ಲವಣದ ಅಯಾನ್‍ಗಳ ಸಂಖ್ಯೆ ಅತ್ಯಧಿಕ; ನೀರಿನ ಅಯಾನ್‍ಗಳ ಸಂಖ್ಯೆ ಬಲುಕಡಿಮೆ. ವಿರುದ್ಧ ವಿದ್ಯುದಾವೇಶವುಳ್ಳ ಅಯಾನ್‍ಗಳು ಪರಸ್ಪರ ಆಕರ್ಷಿಸುವುದು ಸಹಜ. ಪರಿಣಾಮವಾಗಿ ಲವಣದ ಆನಯಾನ್ (A-) ನೀರಿನ ಹೈಡ್ರೊಜನ್ ಅಯಾನನ್ನು (H+) ಪಡೆದು ಜನಕಾಮ್ಲದ (ಪೇರೆಂಟಲ್ ಆ್ಯಸಿಡ್) HA ಅಣು ವೊಂದನ್ನು ರೂಪಿಸಲು ಯತ್ನಿಸುವುದು. ಹಾಗೆಯೇ ಕೇಟಯಾನ್ (B+) ಹೈಡ್ರಾಕ್ಸಿಲ್ ಅಯಾನ್‍ನ ಒಡಗೂಡಿ ಜನಕ ಪ್ರತ್ಯಾಮ್ಲದ (ಪೇರೆಂಟಲ್ ಬೇಸ್) BOH ಅಣುವೊಂದನ್ನು ರೂಪಿಸಲು ಹವಣಿಸುತ್ತದೆ. ಅಂದರೆ ಲವಣ ರಾಸಾಯನಿಕವಾಗಿ ನೀರಿನೊಂದಿಗೆ ವರ್ತಿಸಿದಂತಾಯಿತು. ಈ ವಿದ್ಯಮಾನಕ್ಕೆ ಜಲವಿಭಜನೆ (ಹೈಡ್ರಾಲಿಸಿಸ್) ಎಂದು ಹೆಸರು. ದ್ರಾವಣದಲ್ಲಿರುವ H+ ಮತ್ತು OH- ಅಯಾನ್‍ಗಳ ಸಂಖ್ಯೆ ಅತ್ಯಲ್ಪವಾದ್ದರಿಂದ ಲವಣದ ಎಲ್ಲ ಅಯಾನ್‍ಗಳಿಗೂ ಜಲವಿಭಜಿಸುವ ಅವಕಾಶವಿಲ್ಲ. ಅಂದರೆ ಸಮತೋಲಸ್ಥಿತಿಯಲ್ಲಿ ಲವಣದ ಕೊಂಚ ಭಾಗ ಮಾತ್ರ ಜಲವಿಭಜನೆ ಯಾಗಿರುವುದು ಎಂದಾಯಿತು. ಇದಕ್ಕೆ ಜಲವಿಭಜನಾಂಶ (ಡಿಗ್ರಿ ಆಫ್ ಹೈಡ್ರಾಲಿಸಿಸ್) ಎಂದು ಹೆಸರು. ಇದರ ಪ್ರತೀಕ h.

ಚಿತ್ರ-ಸೋಡಿಯಮ್-ಬೈಸಲ್ಫೇಟ್

ಜಲವಿಭಜನೆಯ ಫಲವಾಗಿ ದ್ರಾವಣದಲ್ಲಿ ಸೃಷ್ಟಿಯಾಗುವ HA ಮತ್ತು BOHಗಳ ಸ್ವಭಾವಕ್ಕೆ ಅನುಗುಣವಾಗಿ ದ್ರಾವಣಕ್ಕೆ ಆಮ್ಲೀಯ ಅಥವಾ ಪ್ರತ್ಯಾ ಮ್ಲೀಯ ಗುಣ ಒದಗುವುದು. ಉದಾಹರಣೆಗೆ ಜನಕಾಮ್ಲ ಸಾರ (ಕಾನ್ಸೆಂಟ್ರೇಟೆಡ್) ಆಗಿರಲಿ. ಆಗ ಅದು ಸಂಪೂರ್ಣವಾಗಿ ಅಯಾ ನೀಕೃತವಾಗಿರಬೇಕಷ್ಟೆ. ಅಂದರೆ ಅದು ತಾತ್ಕಾಲಿಕವಾಗಿ ಸೃಷ್ಟಿಯಾಗುವುದೆಂದು ಭಾವಿಸಿದರೂ ಪುನಃ ಅಯಾನೀಭವಿಸಿ ತಾನು ನೀರಿನಿಂದ ಪಡೆದಿದ್ದೆಲ್ಲ H+ ಅಯಾನ್‍ಗಳನ್ನು ನೀರಿಗೆ ಹಿಂತಿರುಗಿಸಲೇ ಬೇಕು. ಆದ್ದರಿಂದ HA ಅಣುಗಳ ಸೃಷ್ಟಿಗೆ ಅವಕಾಶವೇ ಇಲ್ಲ ! ಪರಿಣಾಮವಾಗಿ ದ್ರಾವಣದ H+ ಅಯಾನ್ ಸಾರತೆ ಶುದ್ಧ ನೀರಿನಲ್ಲಿ ಇದ್ದಷ್ಟೆ ಇರುವುದು. ಜನಕ ಪ್ರತ್ಯಾಮ್ಲ ಸಾರರಿಕ್ತವಾಗಿರಲಿ. ಜಲ ವಿಭಜನೆಯ ಫಲವಾಗಿ ಉತ್ಪತ್ತಿಯಾದ BOH ಅಣುಗಳು ಆಂಶಿಕವಾಗಿ ಅಯಾನೀಭವಿಸುವುವು. ಅಂದರೆ, B+ ಅಯಾನ್‍ಗಳು ತಾವು ನೀರಿನಿಂದ ಪಡೆದಿದ್ದ ಎಲ್ಲ ಅಯಾನ್‍ಗಳನ್ನೂ ಹಿಂತಿರುಗಿಸುವುದಿಲ್ಲ ಎಂದಾಯಿತು. ಕೆಲವು BOH ಅಣುಸ್ಥಿತಿಯಲ್ಲಿ ಉಳಿದುಬಿಡುತ್ತವೆ. ಇದರಿಂದ ದ್ರಾವಣದ OH- ಅಯಾನ್ ಸಾರತೆ ನೀರಿನಲ್ಲಿ ಇದ್ದುದಕ್ಕಿಂತ ಕಡಿಮೆಯಾಗುವುದು. ಜಲವಿಭಜನೆಗೆ ಮುನ್ನ ಶುದ್ಧ ನೀರಿನಲ್ಲಿ H+ ಅಯಾನ್ ಸಾರತೆ OH- ಅಯಾನ್ ಸಾರತೆಗೆ ಸಮವಾಗಿತ್ತು. ಅಂದರೆ ಅದು ತಟಸ್ಥವಾಗಿತ್ತು. ಈಗ ಲವಣದ ಜಲೀಯದ್ರಾವಣದಲ್ಲಿ ಊ+ ಅಯಾನ್ ಸಾರತೆ ಮಾತ್ರ ಇಳಿದಿದೆ. H+ ಅಯಾನ್ ಆಮ್ಲದ ಪ್ರತೀಕ; OH- ಅಯಾನ್ ಪ್ರತ್ಯಾಮ್ಲದ ಪ್ರತೀಕ. ಆದ್ದರಿಂದ ಯಾವುದೇ ದ್ರಾವಣದಲ್ಲಿ [H+] > [OH-] ಆಗಿದ್ದರೆ ಅಂಥ ದ್ರಾವಣಕ್ಕೆ ಆಮ್ಲೀಯ ಗುಣ ಒದಗಲೇ ಬೇಕು. ಅಂದರೆ ಸಾರ ಆಮ್ಲ ಮತ್ತು ಸಾರರಿಕ್ತ ಪ್ರತ್ಯಾಮ್ಲದಿಂದ ರೂಪುಗೊಂಡ ಒಂದು ಲವಣ ಜಲವಿಭಜನೆಗೊಂಡರೆ, ಅದರ ಜಲೀಯ ದ್ರಾವಣ ಆಮ್ಲೀಯವಾ ಗಿರುವುದು ಎಂಬುದು ಸುಸ್ಪಷ್ಟ. ಫೆರಿಕ್ ಕ್ಲೋರೈಡ್ [FeCl3] ಇದಕ್ಕೊಂದು ನಿದರ್ಶನ. ಇದು ಫೆರಿಕ್ ಹೈಡ್ರಾಕ್ಸೈಡ್ [Fe(OH)3] ಎಂಬ ಸಾರರಿಕ್ತ ಪ್ರತ್ಯಾಮ್ಲ ಮತ್ತು ಹೈಡ್ರೊಕ್ಲೊರಿಕ್ ಆಮ್ಲ ಎಂಬ ಸಾರ ಆಮ್ಲದ ಮಿಲನದಿಂದಾದ ಲವಣ.

ಈ ವಾದ ಸರಣಿಯ ಪ್ರಕಾರ, ಜನಕಾಮ್ಲ ಮತ್ತು ಪ್ರತ್ಯಾಮ್ಲಗಳ ಪೈಕಿ ಯಾವುದು ಸಾರವಾಗಿರುವುದೊ ಅದರ ಗುಣ ಜನ್ಯಲವಣದ ಜಲೀಯ ದ್ರಾವಣಕ್ಕೆ ಒದಗುತ್ತದೆ. ಆದ್ದರಿಂದ ಸೋಡಿಯಮ್ ಕಾರ್ಬೊ ನೇಟ್‍ನ [Na2CO3] ಜಲೀಯ ದ್ರಾವಣ ಪ್ರತ್ಯಾಮ್ಲೀಯ ಗುಣವನ್ನು ಪ್ರದರ್ಶಿಸುವುದು. ಒಂದು ಪಕ್ಷ ಜನಕಾಮ್ಲ ಮತ್ತು ಪ್ರತ್ಯಾಮ್ಲಗಳೆರಡೂ ಸಾರೀಕೃತವಾಗಿದ್ದರೆ ಜನ್ಯಲವಣ ಜಲವಿಭಜನೆಯಾಗುವುದೇ ಇಲ್ಲ! ಇದಕ್ಕೆ ಸೋಡಿಯಮ್ ಕ್ಲೋರೈಡ್ (ಅಡುಗೆ ಉಪ್ಪು) ಉತ್ತಮ ನಿದರ್ಶನ.

ಕೆಲವು ಸಂದರ್ಭಗಳಲ್ಲಿ ಜನಕಾಮ್ಲ ಮತ್ತು ಪ್ರತ್ಯಾಮ್ಲಗಳೆರಡೂ ಸರಿಸಮವಾಗಿ ಸಾರರಿಕ್ತವಾಗಿರುವುದುಂಟು. ಆಗ ಲವಣದ ಜಲೀಯದ್ರಾ ವಣದ H+ ಅಯಾನ್ ಮತ್ತು OH- ಅಯಾನ್ ಸಾರತೆಗಳು ಸರಿಸಮವಾಗಿ ಇಳಿಯುವುವು. ಇದರಿಂದ ದ್ರಾವಣ ತಟಸ್ಥವಾಗಿರುತ್ತದೆ. ಅಮೋನಿಯಮ್ ಅಸಿಟೇಟ್‍ನ [CH3.CO.O.NH4] ಜಲೀಯ ದ್ರಾವಣದಲ್ಲಿ ಈ ಸ್ಥಿತಿ ಇರುವುದು ಕಂಡುಬಂದಿದೆ. ಹಾಗಲ್ಲದೆ ಲವಣ ಅತ್ಯಲ್ಪವಾಗಿ ಅಯಾನೀಕರಿಸುವುದಾದರೆ (ಉದಾ: ಮಕ್ರ್ಯೂರಿಕ್ ಕ್ಲೋರೈಡ್) ಅಥವಾ ಅಲ್ಪದ್ರಾವ್ಯವಾಗಿದ್ದರೆ (ಉದಾ: ಕ್ಯಾಲ್ಸಿಯಮ್ ಕಾರ್ಬೊನೇಟ್) ಆಗಲೂ ದ್ರಾವಣ ತಟಸ್ಥವಾಗಿರುತ್ತದೆ.

ತಟಸ್ಥೀಕರಣ ಕ್ರಿಯೆಯಲ್ಲಿ ಆಮ್ಲ ಮತ್ತು ಪ್ರತ್ಯಾಮ್ಲಗಳ ವರ್ತನೆ ಯಿಂದ ಲವಣ ಮತ್ತು ನೀರು ಉಂಟಾಗುತ್ತವೆ. ಜಲವಿಭಜನೆ ಕ್ರಿಯೆಯಲ್ಲಿ ಲವಣ ಮತ್ತು ನೀರಿನ ವರ್ತನೆಯಿಂದ ಜನಕಾಮ್ಲ ಮತ್ತು ಪ್ರತ್ಯಾಮ್ಲಗಳು ಉಂಟಾಗುತ್ತವೆ. ಆದ್ದರಿಂದ ತಟಸ್ಥೀಕರಣ ಮತ್ತು ಜಲವಿಭಜನೆ ಕ್ರಿಯೆಗಳು ಒಂದಕ್ಕೊಂದು ತದ್ವಿರುದ್ಧ ವಿದ್ಯಮಾನಗಳು. ಇದನ್ನು ಮುಂದೆ ಕಾಣಿಸಿರುವಂತೆ ಸೂಚಿಸಬಹುದು:

ತಟಸ್ಥೀಕರಣ
ಆಮ್ಲ + ಪ್ರತ್ಯಾಮ್ಲ - ಲವಣ + ನೀರು
ಜಲವಿಭಜನೆ

(ಎಚ್.ಜಿ.ಎಸ್.)