ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲಾಮಾಪಂಥ

ವಿಕಿಸೋರ್ಸ್ದಿಂದ

ಲಾಮಾಪಂಥ ಟಿಬೆಟ್ಟಿನ ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಧಿಕಾರಯುತವಾಗಿ ಮಾತನಾಡುವ, ಮಾರ್ಗದರ್ಶನ ಮಾಡುವ ಸನ್ಯಾಸಿಗಳ ವರ್ಗ. ಟಿಬೆಟಿ ಭಾಷೆಯಲ್ಲಿ ‘ಲಾಮಾ’ ಎಂದರೆ ಒಡೆಯ, ಆಧ್ಯಾತ್ಮ ಗುರು ಎಂದರ್ಥ. ಇದರಲ್ಲಿ ಮೂರು ಮುಖ್ಯ ವಿಧಗಳಿವೆ:

(1) ತಷಿಲಾಮಾ (ಪಂಚನ್ ರಿಂಪೋಚ್): ಈತ ಅತ್ಯುನ್ನತ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದ. ಈತನನ್ನು ಅಮಿತಾಭನ ಅವತಾರವೆಂದು ಕರೆಯುತ್ತಾರೆ.

(2) ದಲೈಲಾಮ: ಈತನನ್ನು ಅವಲೋಕಿತೇಶ್ವರನ ಅವತಾರವೆಂದು ನಂಬಲಾಗಿದೆ. ಬೌದ್ಧ ದೇವಾಲಯ ಮತ್ತು ರಾಜ್ಯಾಡಳಿತಕ್ಕೆ ಸಂಬಂಧಪಟ್ಟ ಅಧಿಕಾರ ಇವನದಾಗಿರುತ್ತದೆ.

(3) ಬೊಗ್ಡೊಲಾಮ: ಈಗ ಮಂಗೋಲಿಯದಲ್ಲಿರುವ ಬೌದ್ಧಪಂಥ.

ಲಾಮಾ ಪಂಥ ಹೇಗೆ ಉಗಮವಾಯಿತು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. 5ನೆಯ ಶತಮಾನದಲ್ಲಿ, ಒಬ್ಬ ಧಾರ್ಮಿಕ ಗುರು, ಭಾರತದಿಂದ ಹೋಗಿ ಪೋಬಲ್ ಪರ್ವತದ ಮೇಲೆ ನೆಲೆಯೂರಿದ. ಈ ಪರ್ವತದ ಸುತ್ತಲೂ ಲಾಮಾ ಪವಿತ್ರನಗರ ಬೆಳೆಯಿತು. ಈತನನ್ನು ಲಾಮಾ ಪಂಥದ ಸ್ಥಾಪಕನೆಂದು ನಂಬಲಾಗಿದೆ. ಬುದ್ಧ ಇವರ ಆರಾಧ್ಯದೈವ. ಬುದ್ಧ ಸೃಷ್ಟಿಕರ್ತನಲ್ಲ; ಅವನೊಬ್ಬ ಸಂತಶ್ರೇಷ್ಠ. ಬುದ್ಧ ಮತ್ತು ಇತರ ಬೌದ್ಧ ಧಾರ್ಮಿಕ ಗುರುಗಳು ಮತ್ತು ಸಂತರನ್ನು ಲಾಮಾ ಪಂಥದಲ್ಲಿ ಒಪ್ಪಿಕೊಳ್ಳಲಾಗಿದೆ. ಈ ಸಂತರನ್ನಲ್ಲದೆ, ಚೈತನ್ಯಗಳನ್ನು ಈ ಪಂಥದಲ್ಲಿ ಗುರುತಿಸುತ್ತಾರೆ. ಈ ಪಂಥದ ಮೇಲೆ ಶೈವಧರ್ಮದ ಪ್ರಭಾವವನ್ನೂ ಕಾಣಬಹುದಾಗಿದೆ. ಈ ಪಂಥದ ಅನುಯಾಯಿಗಳು ದಿನಕ್ಕೆ ಮೂರುಬಾರಿ ಗಂಟೆಯ ಸಣ್ಣ ಶಬ್ದವನ್ನು ಮಾಡುತ್ತಾ ಪೂಜೆ ಮಾಡುತ್ತಾರೆ. ವರ್ಷದಲ್ಲಿ ಮೂರು ದೊಡ್ಡ ಹಬ್ಬಗಳನ್ನು ಇವರ ಅನುಯಾಯಿಗಳು ಆಚರಿಸುತ್ತಾರೆ. ಮೊದಲನೆಯ ಹಬ್ಬ, ಬೌದ್ಧ ವಿರೋಧಿ ಆರುಜನ ಬುದ್ಧ ವಿದ್ವಾಂಸರನ್ನು ಬುದ್ಧ ಗೆದ್ದುದರದ್ಯೋತಕ. ಎರಡನೆಯ ಹಬ್ಬ, ಬುದ್ಧನ ಅಪಾರ ಕರುಣೆಯನ್ನು ಸ್ಮರಿಸುವ ಬೇಸಿಗೆಯಲ್ಲಿ ನಡೆಯುವ ಹಬ್ಬ. ಇದು ಆಗಸ್ಟ್ ಅಥವಾ ಸೆಪ್ಟೆಂಬರ್‍ನಲ್ಲಿ ಪ್ರಾರಂಭವಾಗುತ್ತದೆ. ಮರಣಾನಂತರ ವ್ಯಕ್ತಿಯ ಆತ್ಮ ಲಾಮಾ ಶಕ್ತಿಕುಂಜದಲ್ಲಿ ಸೇರುತ್ತದೆ ಎಂಬುದು ಇವರ ನಂಬಿಕೆ.

ಈ ಪಂಥದ ಶ್ರೀಮಂತ ಅನುಯಾಯಿಗಳು, ಹಬ್ಬ ಹರಿದಿನಗಳಿಗಾಗಿ, ಧಾರ್ಮಿಕ ಕ್ರಿಯೆಗಳಿಗಾಗಿ ಅಪಾರ ಹಣವನ್ನು ಸ್ವಇಚ್ಛೆಯಿಂದ ವ್ಯಯಮಾ ಡುತ್ತಾರೆ. ಒಂದು ಕಾಲದಲ್ಲಿ ಟಿಬೆಟ್‍ನಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಗುರುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ದುರದೃಷ್ಟವಶಾತ್ 11ನೆಯ ಶತಮಾನದಲ್ಲಿ ಲಾಂಗ್‍ದರ್ಮ ಎಂಬ ದುಷ್ಟದೊರೆ, ಟಿಬೆಟ್ ಧರ್ಮದ ಬಗ್ಗೆ, ಆಧ್ಯಾತ್ಮಿಕ ವಿಷಯಗಳ ಬಗ್ಗೆ ತಿರಸ್ಕಾರವನ್ನು ತೋರಿಸಿದ, ಧರ್ಮಗುರುಗಳು ತಮ್ಮ ವಸ್ತ್ರವನ್ನು ಬದಲಿಸಬೇಕೆಂದು ಕಟ್ಟಪ್ಪಣೆ ಮಾಡಿದ ತರುವಾಯ ಆತ ರಾಜಕೀಯ ಕೊಲೆಗೀಡಾದ. ಆಗ ಧಾರ್ಮಿಕ ಆಚಾರಗಳ ಬಗೆಗೆ ಇದ್ದ ನಿಷೇಧ ಹೋಯಿತು. ಭಾರತದಿಂದ ಬಂದ ಅತಿಶ ಎಂಬ ಅಧ್ಯಾತ್ಮಗುರು ಟೆಬೆಟ್‍ನಲ್ಲಿ ಮತ್ತೆ ಧರ್ಮ, ಧರ್ಮಗುರು ಗಳು ಮರಳುವಂತೆ, ನೆಲೆಯೂರುವಂತೆ ಮಾಡಿದ. ಧರ್ಮದ ಪುನರುಜ್ಜೀ ವನ ಸಂಘಟನೆಗಾಗಿ ಸಂಪ್ರದಾಯವನ್ನು ರೂಪಿಸಿದ. ಅನಂತರ ಸೊಂಕಫ ಎಂಬ ವಿದ್ವಾಂಸ ಹಾಗೂ ಯೋಗಿ ಈ ಸಂಪ್ರದಾಯವನ್ನು ಅತ್ಯುಚ್ಚಮಟ್ಟಕ್ಕೆ ಕೊಂಡೊಯ್ದ. ತ್ಯಾಗ, ಬೋಧಿಚಿತ್ತ ಮತ್ತು ಶೂನ್ಯತತ್ವಗಳಿಗೆ ನೈಜ ಅರ್ಥವಂತಿಕೆಯನ್ನು ನೀಡಿ ತನ್ನದೇ ಆದ ‘ಲೆಮರಿಕ್ ಸಂಪ್ರದಾಯ’ವನ್ನು ರೂಪಿಸಿದ. ಲಾಮಾ ಪಂಥದ ಈಗಿನ ಗುರು ದಲೈಲಾಮ.

(ವಿ.ಎನ್.ಎಸ್.)