ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಸಂತ ಕನಕಾಪುರ
ವಸಂತ ಕನಕಾಪುರ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಕಾಶಿ ಎಂದು ಪ್ರಸಿದ್ಧವಾಗಿರುವ ಧಾರವಾಡದ ಹಿರಿಯ ಪ್ರತಿಭಾನ್ವಿತ ಹಾರ್ಮೋನಿಯಂ ವಾದಕ/ಸಂಯೋಜಕ ಪಂಡಿತ್ ವಸಂತ ಕನಕಾಪುರ. 1937ರ ನವೆಂಬರ್ ಒಂಬತ್ತರಂದು ಹುಬ್ಬಳ್ಳಿಯಲ್ಲಿ ಜನಿಸಿದ ಪಂಡಿತ ವಸಂತ ಕನಕಾಪುರ ಅವರ ತಂದೆ ಭೀಮರಾವ್ ಕನಕಾಪುರ ಸಿತಾರ್ ವಾದಕರಾದರೆ, ತಾಯಿ ಭಾರತೀಬಾಯಿ ಹಾರ್ಮೋನಿಯಂ ವಾದಕರು. ಪೂರ್ವಿಕರು ವೀಣಾವಾದಕರು ಎಂದ ಮೇಲೆ ವಸಂತ ಕನಕಾಪುರರವರೂ ಸಹಜವಾಗಿಯೇ ಸಂಗೀತವನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಆರಿಸಿಕೊಂಡರು. ಹಿರಿಯರಿಂದಲೇ ಪ್ರಾರಂಭಿಕ ಶಿಕ್ಷಣವನ್ನು ಪಡೆದದ್ದು ಮುಂದೆ ಆರ್.ಬಿ.ದೇಸಾಯಿ ಹಾಗೂ ಗೋಪಾಲರಾವ್ ದೇಸಾಯಿ ಅವರಲ್ಲಿ ಕ್ರಮಬದ್ಧ ಶಿಕ್ಷಣ ಆರಂಭಿಸಿದರು. ನಂತರ ಧಾರವಾಡದ ಖ್ಯಾತ ಸಂಗೀತಗಾರ ಹನುಮಂತರಾವ್ ಮಾಳ್ವೇಕರ ಹಾಗೂ ವಿಠಲ ಸಾಕಬಾಡಿ ಅವರುಗಳಲ್ಲಿ ಹೆಚ್ಚಿನ ಮಾರ್ಗದರ್ಶನ ಪಡೆದರು. ಹನ್ನೊಂದು ವರ್ಷದ ಬಾಲಕ ಗದುಗಿನಲ್ಲಿ ನಡೆದ ಒಂದು ಸಂಗೀತ ಕಾರ್ಯಕ್ರಮದಲ್ಲಿ ಸುರಶ್ರೀ ಕೇಸರಬಾಯಿ ಕೇರಕರರಿಗೆ ಹಾರ್ಮೋನಿಯಂ ಸಾಥಿ ನುಡಿಸಿದ್ದು ವಸಂತ ಕನಕಾಪುರ ಅವರ ಪ್ರತಿಭೆಗೆ ಸಾಕ್ಷಿ.
ಗಂಧರ್ವ ಮಹಾ ವಿದ್ಯಾಲಯದಿಂದ ಸಂಗೀತ ವಿಶಾರದ ಪದವಿ ಪಡೆದದ್ದಲ್ಲದೆ ಪಾಶ್ಚಿಮಾತ್ಯ ಸಂಗೀತದಲ್ಲೂ ಪರಿಶ್ರಮ ಪಡೆದರು. 1956-58ರ ವೇಳೆಯಲ್ಲಿ ಮುಂಬಯಿಯಲ್ಲಿದ್ದಾಗಲೇ ಕೇಸರಿಬಾಯಿ ಕೇರಕರರೂ ಸೇರಿದಂತೆ, ಅಮೀರ್ ಖಾನ್, ಅಝಮತ್ ಹುಸೇನ್ ಖಾನ್, ಭೀಮಸೇನ್ ಜೋಶಿ, ಏ.ಕಾನನ್ ಮುಂತಾದ ಖ್ಯಾತ ಗಾಯಕ, ಗಾಯಕಿಯರಿಗೆ ಹಾರ್ಮೋನಿಯಂ ಸಾಥ್ ನುಡಿಸಿ ಸಂಗೀತ ಕ್ಷೇತ್ರದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದರು.
ಕಳೆದ ನಾಲ್ಕೈದು ದಶಕಗಳಲ್ಲಿ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್ಲ, ಪರವೀನ್ ಸುಲ್ತಾನ್, ಪ್ರಭಾ ಅತ್ರೆ, ರೀಟಾಗಂಗೂಲಿ, ಹಫಿಜ ಅಹ್ಮದಖಾನ್, ರಾಜನ್-ಸಾಜನ್ ಮಿಶ್ರ, ಸಿಂಗ್ ಬಂಧುಗಳು, ಮುಂತಾದ ಅನೇಕ ಶ್ರೇಷ್ಠ ಕಲಾವಿದರಿಗೆ ಹಾರ್ಮೋನಿಯಂ ಸಾಥಿ ನುಡಿಸಿ ಕಲಾಕಾರರ ಹಾಗೂ ಸಹೃದಯ ಶ್ರೋತೃವೃಂದದಿಂದ ಮೆಚ್ಚುಗೆ ಪ್ರಶಂಸೆಗಳಿಸಿದ್ದಾರೆ. 1975ರಲ್ಲಿ ಧಾರವಾಡದ ಆಕಾಶವಾಣಿಯಲ್ಲಿ ಸಂಯೋಜಕರಾಗಿ ಆಯ್ಕೆಯಾದ ಮೇಲೆ ಅನೇಕ ಖ್ಯಾತ ನಾಮರಿಗೆ ಆಕಾಶವಾಣಿ ಸಂಗೀತ ಸಮ್ಮೇಳನಗಳಲ್ಲಿ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹಾರ್ಮೋನಿಯಂ ನುಡಿಸಿ ನಿಲಯಕ್ಕೆ ಕೀರ್ತಿಯನ್ನು ತಂದು ಕೊಟ್ಟಿದ್ದಾರೆ. ಅಲ್ಲದೆ ಉತ್ತಮ ಸಂಗೀತ ಸಂಯೋಜಕರೆಂದು ಪ್ರಶಸ್ತಿ ದೊರಕಿದೆ. ಕನಕ ಪುರಂದರ ಮುಂತಾದ ದಾಸವಾಣಿಗಳಿಗೆ ಶರಣರ ವಚನ ಸಾಹಿತ್ಯಗಳಲ್ಲದೆ ಭಕ್ತಿಗೀತೆ, ಭಾವಗೀತೆಗಳಿಗೂ ಸಂಗೀತ ಸಂಯೋಜನೆ ಮಾಡಿ ಪ್ರಸಿದ್ಧಿಯನ್ನು ಪಡೆದಿದ್ದಾರೆ.
ಸಂಗೀತ ಕ್ಷೇತ್ರದ ಕೊಡುಗೆಗಾಗಿ ವಸಂತ ಕನಕಾಪುರ ಅವರಿಗೆ ಹಲವಾರು ಸನ್ಮಾನಗಳು ಗೌರವಗಳು ದೊರಕಿವೆ. ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಸಾಧಿಸಿದ ಸಾಧನೆಗಾಗಿ ಅ.ನ.ಕೃಷ್ಣರಾಯರು `ವಾದ್ಯವಾದನ ನಿಪುಣ' ಎಂದು ಪರಿಚಯ ಲೇಖನ ಬರೆದು ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ `ಮಂಜುಷಾ ರತ್ನ ಹಾಗೂ ಗಾನಗಂಧರ್ವ ಎಂಬ ಬಿರುದು ನೀಡಿ ಸನ್ಮಾನಿಸಿದೆ. 1989-90ರಲ್ಲಿ ರಾಜ್ಯ ಸಂಗೀತ-ನೃತ್ಯ ಅಕಾಡಮಿಯವರು `ಕರ್ನಾಟಕ ಕಲಾತಿಲಕ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನ ಕರ್ನಾಟಕ ಕಲಾಕಾರ ಮಂಡಳಿಯವರು `ನಾದಶ್ರೀ ಹಾಗೂ `ಪಂಡಿತ್ ಬಿರುದು ನೀಡಿದ್ದಾರೆ. ಸರ್ಕಾರ 1991ರಲ್ಲಿ ರಾಜ್ಯೋತ್ಸವದ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಪಂಡಿತ್ ವಸಂತ ಕನಕಾಪುರ ಅವರು ಭಾರತಾದ್ಯಂತ ಕಾರ್ಯಕ್ರಮ ನೀಡಿರುವುದಲ್ಲದೆ, 1997ರಲ್ಲಿ ಅಮೆರಿಕೆಯ ಐ.ಡಿ.ಆರ್.ಎಫ್ ರವರ ಆಮಂತ್ರಣದ ಮೇರೆಗೆ ಮೂರು ತಿಂಗಳ ಕಾಲ ಅಮೆರಿಕದಾದ್ಯಂತ ಕಾರ್ಯಕ್ರಮ ನೀಡಿದ್ದಾರೆ.
ಹಾರ್ಮೋನಿಯಂವಾದನ ಕಲೆಯ ಮಾಂತ್ರಿಕನೆಂದೇ ಪ್ರಸಿದ್ಧಿ ಪಡೆದಿರುವ ಪಂಡಿತ್ ವಸಂತ ಕನಕಾಪುರ ಅವರಿಗೆ ಸಂಗೀತ ಕ್ಷೇತ್ರದಲ್ಲಿನ ಅಪೂರ್ವ ಸಾಧನೆ ನಿಧಿಗಾಗಿ ಕರ್ನಾಟಕ ಸರಕಾರ 2004ನೆ ಸಾಲಿನ ಕನಕಪುರಂದರ ಪ್ರಶಸ್ತಿ ನೀಡಿ ಗೌರವಿಸಿದೆ.