ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಾಣಿಜ್ಯ ಕ್ರಾಂತಿ

ವಿಕಿಸೋರ್ಸ್ದಿಂದ

16, 17 ಮತ್ತು 18ನೆಯ ಶತಮಾನಗಳಲ್ಲಿ ಇಂಗ್ಲೆಂಡಿನ ಅಂತಾರಾಷ್ಟ್ರೀಯ ವ್ಯಾಪಾರದಲ್ಲೂ ಅಗಾಧ ಬದಲಾವಣೆಗಳಾದವು. ಈ ಕ್ರಾಂತಿಯಿಂದ ಮಧ್ಯಯುಗದ ಅಂತಾರರಾಷ್ಟ್ರೀಯ ವ್ಯಾಪಾರ ಆಧುನಿಕ ಯುಗದ ವ್ಯಾಪಾರದ ಕ್ರಮಕ್ಕೆ ಬದಲಾವಣೆ ಹೊಂದಿತು. 15 ಮತ್ತು 16ನೆಯ ಶತಮಾನಗಳಲ್ಲಿ ಹೊಸ ನೆಲಗಳನ್ನು ಕಂಡುಹಿಡಿದಾಗ ಇಂಗ್ಲೆಂಡಿನ ವ್ಯಾಪಾರದ ಪ್ರಗತಿ ಹೆಚ್ಚಿತು. ಭಾರತ ಮತ್ತು ಚೀನ ಇಂಗ್ಲೆಂಡಿನ ವಸ್ತುಗಳಿಗೆ ಒಳ್ಳೆಯ ಮಾರುಕಟ್ಟೆಗಳಾದುವು. ಭಾರತ ಮತ್ತು ಉತ್ತರ ಅಮೆರಿಕದ ಮೇಲೆ ಇಂಗ್ಲೆಂಡ್ ಸಂಪೂರ್ಣ ಅಧಿಕಾರ ಪಡೆದುಕೊಂಡದ್ದರಿಂದ ಅತ್ಯಂತ ವಿಶಾಲವಾದ ಮಾರುಕಟ್ಟೆ ಅದರ ವಸ್ತುಗಳಿಗೆ ದೊರಕಿದಂತಾಯಿತು. 16 ಮತ್ತು 17ನೆಯ ಶತಮಾನಗಳಲ್ಲಿ ಏಕಸ್ವಾಮ್ಯ ಪಡೆದ ಅನೇಕ ವ್ಯಾಪಾರ ಕಂಪೆನಿಗಳು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸಹಾಯ ಮಾಡಿದವು. ಇವು ಪಡೆದ ವ್ಯಾಪಾರಲಾಭ ಔದ್ಯೋಗಿಕ ಕ್ರಾಂತಿಗೆ ಬಹಳ ಸಹಾಯಕವಾಯಿತು. ತನಗಿದ್ದ ನೌಕಾಸಾಮಥರ್ಯ್ವನ್ನು ಇಂಗ್ಲೆಂಡ್ ವ್ಯಾಪಾರದ ಅನುಕೂಲಕ್ಕಾಗಿ ಚೆನ್ನಾಗಿ ಉಪಯೋಗಿಸಿಕೊಂಡಿತು.

ಅಂತರ್ದೇಶಿಯ ವ್ಯಾಪಾರ ಕ್ರಮಕ್ರಮವಾಗಿ ಅಭಿವೃದ್ಧಿಹೊಂದಿತು. 17ನೆಯ ಶತಮಾನದ ಅಂತ್ಯದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸಿನ ಆಯಾತ ನಿರ್ಯಾತ ಹೆಚ್ಚು ಕಡಿಮೆ ರಾಷ್ಟ್ರೀಯ ಆದಾಯದ ಶೇ.15 ರಷ್ಟಿತ್ತು. 18ನೆಯ ಶತಮಾನದ ಅಂತ್ಯದ ವೇಳೆಗೆ ಇದು ದ್ವಿಗುಣಗೊಂಡಿತ್ತು. 1870ರ ವೇಳೆಗೆ ರಾಷ್ಟ್ರೀಯ ಆದಾಯದ ಸುಮಾರು ಶೇ.50-60ರಷ್ಟು ವಿದೇಶೀ ವ್ಯಾಪಾರದಿಂದಲೇ ಬರುತ್ತಿತ್ತು. 1870ರ ಅನಂತರ ದೇಶದ ನಿರ್ಯಾತ ರಾಷ್ಟ್ರೀಯ ಆದಾಯದ ಸರಾಸರಿಯ ಶೇ.16-ಶೇ.20ಕ್ಕೆ ಮುಂದುವರಿಯಿತು. 18ನೆಯ ಶತಮಾನದ ಉದ್ದಕ್ಕೂ ಇದರ ವಿದೇಶೀವ್ಯಾಪಾರ ರಾಷ್ಟ್ರೀಯ ಆದಾಯಕ್ಕಿಂತ ವೇಗವಾಗಿ ಬೆಳೆಯಿತು.

16-18ನೆಯ ಶತಮಾನದವರೆಗೆ ವಿದೇಶೀ ವ್ಯಾಪಾರವನ್ನು ಕಂಪನಿಗಳು ನಡೆಸುತ್ತಿದ್ದವು; ಇವುಗಳಿಗೆ ಏಕಸ್ವಾಮ್ಯವಿತ್ತು. ಈ ಕಂಪೆನಿಗಳು ಎರಡು ರೀತಿಯದಾಗಿರುತ್ತಿದ್ದವು: ನಿಯಂತ್ರಿತ ಮತ್ತು ಕೂಡುಬಂಡವಾಳ ಕಂಪನಿಗಳು. ನಿಯಂತ್ರಿತ ಕಂಪನಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ ವ್ಯಾಪಾರದಲ್ಲಿ ತೊಡಗುತ್ತಿದ್ದ. ಆತ ಕಂಪನಿಯ ನಿಯಮಗಳನ್ನು ಅನುಸರಿಸು ತ್ತಿದ್ದ. ಕೂಡುಬಂಡವಾಳ ಕಂಪನಿಯಲ್ಲಿ ಅನೇಕ ಬಂಡವಾಳಗಾರರು ಹಣ ಹೂಡುತ್ತಿದ್ದರು. ಬಂದ ಲಾಭವನ್ನು ಇವರು (ಷೇರುದಾರರು) ಹಂಚಿಕೊಳ್ಳುತ್ತಿದ್ದರು. ಹೊಸ ವ್ಯಾಪಾರಗಾರರು ಕೂಡುಬಂಡವಾಳ ಕಂಪನಿಗೆ ಪ್ರವೇಶಿಸುವುದು ಸುಲಭವಾಗಿತ್ತು (ಕೂಡು-ಬಂಡವಾಳ-ಕಂಪನಿ).

ಈ ಕಂಪನಿಗಳಲ್ಲಿ ಬಹಳ ಪ್ರಸಿದ್ಧವಾಗಿದ್ದದ್ದು ಈಸ್ಟ್ ಇಂಡಿಯ ಕಂಪನಿ. ಇದು 1600ರಲ್ಲಿ ಸ್ಥಾಪಿತವಾಗಿ ಇಂಡಿಯ ಮತ್ತು ಚೀನದೊಂದಿಗೆ ವ್ಯಾಪಾರದಲ್ಲಿ ನೇರ ಸಂಬಂಧ ಬೆಳೆಸಿಕೊಂಡಿತ್ತು. 1657ರಲ್ಲಿ ಇದು ಕೂಡುಬಂಡವಾಳ ಕಂಪನಿಯಾಗಿ ಪರಿವರ್ತಿತವಾಗಿ ವ್ಯಾಪಾರ ಮುಂದುವರಿಸಿತು. ಇಡೀ ಏಷ್ಯದ ದೇಶಗಳೊಡನೆ ವ್ಯಾಪಾರದಲ್ಲಿ ಇದು ಏಕಸ್ವಾಮ್ಯ ಪಡೆದಿತ್ತು. ಆಮದಿನಲ್ಲಿ ಏಕಸ್ವಾಮ್ಯ ಪಡೆದಿದ್ದ ಈ ಕಂಪನಿ ತನಗಿಷ್ಟ ಬಂದಷ್ಟು ಬೆಲೆಗಳನ್ನು ನಿಗದಿಮಾಡಿ ಅತ್ಯಧಿಕ ಲಾಭ ಪಡೆಯುತ್ತಿತ್ತು. ಮುಂದೆ ಇದು ರಾಜಕೀಯದಲ್ಲೂ ಪ್ರವೇಶಿಸಿ ಭಾರತವನ್ನು ಗೆದ್ದಿತು. 1813ರಲ್ಲಿ ಇದು ಭಾರತದೊಡನೆ ವ್ಯಾಪಾರದಲ್ಲಿನ ಏಕಸ್ವಾಮ್ಯವನ್ನು ಕಳೆದುಕೊಂಡಿತು. ಇತರ ಕಂಪನಿಗಳಲ್ಲಿ ಮುಖ್ಯವಾದುವೆಂದರೆ ಹಡ್ಸನ್ ಬೇ ಕಂಪನಿ ಮತ್ತು ಸೌತ್ ಸೀ ಕಂಪನಿ. ಈ ಕಂಪನಿಗಳು ಇಂಗ್ಲೆಂಡಿನ ಪ್ರಗತಿಗೆ ಬಹಳ ಮಟ್ಟಿಗೆ ಸಹಾಯ ಮಾಡಿದುವೆಂದು ಹೇಳಬಹುದು.

ಇಂಗ್ಲೆಂಡಿನ ವಾಣಿಜ್ಯಕ್ರಾಂತಿಯ ಮೂರು ಮುಖ್ಯ ಮುಖಗಳೆಂದರೆ ಮಾರುಕಟ್ಟೆಯ ವಿಸ್ತರಣೆ, ವಸ್ತುಗಳ ತಯಾರಿಕೆಯಲ್ಲಿ ಹೆಚ್ಚಿನ ಪರಿಣತಿ ಮತ್ತು ವ್ಯಾಪಾರದಲ್ಲಿನ ಸಂಯೋಜನೆ. ಈ ಮೂರರಿಂದಾಗಿ ಇಂಗ್ಲೆಂಡಿನ ವಿದೇಶೀ ವ್ಯಾಪಾರ ಅದ್ಭುತ ಪ್ರಗತಿ ಸಾಧಿಸಿತು. ಕೈಗಾರಿಕೀಕರಣದ ಅನಂತರ ಇಂಗ್ಲೆಂಡಿನ ವಾಣಿಜ್ಯ ಶೀಘ್ರವಾಗಿ ಪ್ರಗತಿ ಹೊಂದುವುದಕ್ಕೆ ಪ್ರಾರಂಭಿಸಿತು. ಇಂಗ್ಲೆಂಡ್ 19ನೆಯ ಶತಮಾನದ ಮಧ್ಯಭಾಗದ ಅನಂತರ ಮುಖ್ಯವಾಗಿ ಕಾರ್ಖಾನೆಯ ಸಿದ್ಧವಸ್ತುಗಳನ್ನು ರಫ್ತು ಮಾಡುತ್ತಿತ್ತು. ಆಹಾರವಸ್ತುಗಳನ್ನು ಮತ್ತು ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ರಫ್ತಿನಲ್ಲಿ ಮುಖ್ಯವಾಗಿದ್ದವೆಂದರೆ ಜವಳಿ, ಯಂತ್ರಗಳು, ಕಲ್ಲಿದ್ದಲು ಮತ್ತು ರಾಸಾಯನಿಕ ವಸ್ತುಗಳು.

1900-14ರ ವರೆಗೆ ಇಂಗ್ಲೆಂಡಿನ ವಿದೇಶೀ ವ್ಯಾಪಾರ ಇನ್ನೂ ಹೆಚ್ಚು ವೇಗವಾಗಿ ಬೆಳೆಯಿತು. ಇತರ ರಾಷ್ಟ್ರಗಳೂ ಕೈಗಾರಿಕಾಭಿವೃದ್ಧಿಯತ್ತ ಹೆಚ್ಚು ಹೆಚ್ಚು ಗಮನಗೊಡುತ್ತಿದ್ದವು. ಇದಕ್ಕೆ ಕಾರಣ ಇಂಗ್ಲೆಂಡ್ ಅವಕ್ಕೆ ಅಗತ್ಯವಾದ ವಸ್ತುಗಳನ್ನು ಸರಬರಾಜು ಮಾಡುವುದರಲ್ಲಿ ಅತ್ಯಂತ ಸಮರ್ಥವಾಗಿತ್ತು. ಹೀಗಾಗಿ ವಾಣಿಜ್ಯ ಪ್ರಗತಿ ವೇಗವಾಗಿ ಬೆಳೆಯಿತು. 1913ರಲ್ಲಿ ಇಂಗ್ಲೆಂಡಿನ ವಾಣಿಜ್ಯ ಸಿದ್ಧಿಗೆ ಸಹಾಯಕವಾಗಿದ್ದುವೆಂದರೆ ಇಂಗ್ಲೆಂಡಿನ ಬ್ಯಾಂಕುಗಳು, ವಿಮೆ ಹಾಗೂ ನೌಕಾವ್ಯವಸ್ಥೆ. 1844ರ ಅನಂತರ ಇಂಗ್ಲೆಂಡಿನ ಬ್ಯಾಂಕುಗಳು ವ್ಯಾಪಾರಕ್ಕೆ ಹಣ ಒದಗಿಸುವುದರ ಮೂಲಕ ಸಹಾಯ ಮಾಡಿದುವು. ವ್ಯವಸ್ಥಿತವಾದ ಹುಂಡಿ ಪೇಟೆ ಸ್ಥಾಪಿಸುವುದಕ್ಕೆ ಇಂಗ್ಲೆಂಡಿಗೆ ಸಾಧ್ಯವಾದದ್ದರಿಂದ ವಾಣಿಜ್ಯ ಪ್ರಗತಿ ವೇಗವಾಗಿ ಸಾಧ್ಯವಾಯಿತು. 1846ರ ಅನಂತರ ಸರ್ಕಾರದ ವಾಣಿಜ್ಯ ನೀತಿಯೂ ಇದಕ್ಕೆ ಸಹಾಯಕವಾಗಿತ್ತು. ರಕ್ಷಿತ ವ್ಯಾಪಾರಕ್ಕಿಂತ ಮುಕ್ತ ವ್ಯಾಪಾರದಿಂದಲೇ ತನಗೆ ಲಾಭವಿದೆ ಎಂಬುದನ್ನು ಅರಿತ ಸರಕಾರ ಇದಕ್ಕೆ ಸಹಾಯಕವಾದ ಕಾಯಿದೆ ರಚಿಸಿ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಿತು. 1932ರವರೆಗೆ ಅನೇಕ ಅಡ್ಡಿಗಳಿದ್ದರೂ ಮುಕ್ತವ್ಯಾಪಾರ ನೀತಿ ಮುಂದುವರಿಯಿತು. 19ನೆಯ ಶತಮಾನದ ಪ್ರಾರಂಭದಲ್ಲಿ ಇಂಗ್ಲೆಂಡ್ ತನ್ನ ರಫ್ತಿನ ಶೇ.55 ರಷ್ಟನ್ನು ಯುರೋಪಿನ ರಾಷ್ಟ್ರಗಳಿಗೆ ಕಳುಹಿಸುತ್ತಿತ್ತು. ಆದರೆ 1920ರ ವೇಳೆಗೆ ಈ ರಾಷ್ಟ್ರಗಳಿಗೆ ಅದರ ರಫ್ತಿನ ಶೇಕಡ 20 ರಷ್ಟು ಮಾತ್ರ ಹೋಗುತ್ತಿತ್ತು. ಭಾರತ ಮತ್ತು ಇತರ ರಾಷ್ಟ್ರಗಳಿಗೆ ರಫ್ತು ಹೆಚ್ಚಾಯಿತು.

ಪ್ರಥಮ ಮಹಾಯುದ್ಧದ ಅವಧಿಯಲ್ಲಿ ಇಂಗ್ಲೆಂಡಿನ ವಿದೇಶೀ ವ್ಯಾಪಾರ ಬಹಳ ಕಷ್ಟಕ್ಕೀಡಾಯಿತು. ಜಪಾನು ಜವಳಿ ಕೈಗಾರಿಕೆಯಲ್ಲಿ ಪರಿಣತಿ ಪಡೆದುಕೊಂಡು ಇಂಗ್ಲೆಂಡಿನ ಅನೇಕ ಮಾರುಕಟ್ಟೆಗಳನ್ನು ಹಿಡಿದುಕೊಂಡಿತು. ಕೆನಡ, ಆಸ್ಟ್ರೇಲಿಯ, ಅಮೆರಿಕಗಳಲ್ಲೂ ಕೈಗಾರಿಕೆಗಳು ಬೆಳೆದುವು. ಎಲ್ಲ ರಾಷ್ಟ್ರಗಳಿಗೂ ಸ್ವಾವಲಂಬಿಗಳಾಗುವುದರತ್ತ ಗಮನಕೊಡಲಾ ರಂಭಿಸಿದುವು. ಇಂಗ್ಲೆಂಡಿನ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಸಹ ವಾಣಿಜ್ಯ ಅಡ್ಡಿಯನ್ನುಂಟು ಮಾಡಿತು. 1920-33ರ ಆರ್ಥಿಕ ಕುಸಿತ ವಾಣಿಜ್ಯಕ್ಕೆ ಭಾರಿ ಕೊಡಲಿ ಪೆಟ್ಟು ಕೊಟ್ಟಿತು. ವಾಣಿಜ್ಯದ ಗತಿಯನ್ನೇ ಬಹಳ ಮಟ್ಟಿಗೆ ಕುಸಿಯುವಂತೆ ಮಾಡಿತು. ದೇಶಗಳ ಮುಕ್ತ ವ್ಯಾಪಾರದ ಬದಲಿಗೆ ವ್ಯಾಪಾರದ ಒಪ್ಪಂದಗಳಾದುವು.

ಇಂಗ್ಲೆಂಡಿನ ವ್ಯಾಪಾರ ಈ ಅವಧಿಯಲ್ಲಿ ತೀರ ನಿರಾಶಾದಾಯಕವಾಗಿತ್ತು. ಇತರ ದೇಶಗಳ ರಫ್ತಿಗೆ ಹೋಲಿಸಿದರೆ ಇಂಗ್ಲೆಂಡಿನ ರಫ್ತು ಅತ್ಯಂತ ಶೋಚನೀಯ ಸ್ಥಿತಿ ಮುಟ್ಟಿತೆಂದು ಹೇಳಬಹುದು. 1913ರಲ್ಲಿ ಪ್ರಪಂಚದ ಒಟ್ಟು ರಫ್ತಿನ 13.11%ರಷ್ಟು ಇಂಗ್ಲೆಂಡಿನದಾಗಿತ್ತು. 1927ರಲ್ಲಿ ಇದು 11.10ಕ್ಕೂ 1932ರಲ್ಲಿ 9.82ಕ್ಕೂ ಇಳಿಯಿತು. 1950ರವರೆಗೆ ಇಂಗ್ಲೆಂಡಿನ ರಫ್ತು 1914ರ ಮಟ್ಟವನ್ನು ತಲುಪಲೇ ಇಲ್ಲ. ರಫ್ತು ಒಂದು ಕಡೆ ಇಷ್ಟು ಕಡಿಮೆ ಮಟ್ಟ ಮುಟ್ಟಿದರೆ, ಆಮದು ಇದೇ ಸಮಯದಲ್ಲಿ ವೃದ್ಧಿ ಹೊಂದಿತು. 1924ರಲ್ಲಿ ಅದು 1913ರ ಮಟ್ಟವನ್ನು ಮೀರಿತು. 1930ರಲ್ಲಿ ಇದು ಕಡಿಮೆ ಮಟ್ಟವನ್ನು ಸೂಚಿಸಿದರೂ 1936ರ ಅನಂತರ 1929ರ ಮಟ್ಟಕ್ಕಿಂತ ಹೆಚ್ಚಾಯಿತು. ಮೊದಲನೆಯ ಮಹಾಯುದ್ಧದ ಅನಂತರ ಆಮದಿನ ನೀತಿ ಹೆಚ್ಚು ಕಡಿಮೆ 10ನೆಯ ಶತಮಾನದ ಕೊನೆಯ ಭಾಗದ ಆಮದು ನೀತಿಯನ್ನು ಹೋಲುತ್ತಿತ್ತು. ಸಿದ್ಧಪಡಿಸಿದ ವಸ್ತುಗಳನ್ನು ಆಮದುಮಾಡಿಕೊಳ್ಳಲಾಗುತ್ತಿತ್ತು. ಮಾಂಸ ಮತ್ತು ಹೈನು ವಸ್ತುಗಳ ಆಮದು ಶೇ.4.35ರಷ್ಟಿತ್ತು. ಶೇ.30ರಷ್ಟು ಕಚ್ಚಾ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಉಳಿದ ಆಮದು ಸಿದ್ಧ ವಸ್ತುಗಳಿಂದ ಕೂಡಿರುತ್ತಿತ್ತು. ಇಂಗ್ಲೆಂಡಿನ ಆಮದಿನ ಹೆಚ್ಚಳದಿಂದ ಅದರ ಅಂತಾರಾಷ್ಟ್ರೀಯ ಪಾವತಿ ಶುಲ್ಕ ಪ್ರತಿಕೂಲದ್ದಾಗಿತ್ತು.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಇಂಗ್ಲೆಂಡ್ ತನ್ನ ವಿದೇಶೀ ನಿವೇಶನದ ಹಣವನ್ನು ಕಡಿಮೆ ಮಾಡಿಕೊಳ್ಳಬೇಕಾಯಿತು. 1945ರಿಂದೀಚೆಗೆ, ವಿದೇಶೀ ವ್ಯಾಪಾರಕ್ಕೆ ಸರ್ಕಾರ ಎಲ್ಲ ರೀತಿಯಲ್ಲೂ ಸಹಾಯ ಮಾಡುತ್ತ ಬಂತು. ಸರ್ಕಾರ ಕಚ್ಚಾ ಮಾಲನ್ನು ರಫ್ತು ಮಾಡುವುದಕ್ಕೆ ಆದ್ಯತೆ, ರಫ್ತಿಗೆ ಸಾಲದ ಭರವಸೆ, ಹೊಸ ಮಾರುಕಟ್ಟೆಗಳನ್ನು ಕಂಡುಹಿಡಿಯುವುದಕ್ಕೆ ಸಹಾಯ ಇವನ್ನೊದಗಿಸಿ ವಿದೇಶೀ ವ್ಯಾಪಾರಕ್ಕೆ ಸಹಾಯ ಮಾಡಿತು. ಇವೆಲ್ಲದರಿಂದಾಗಿ ಅದರ ರಫ್ತು 1957ರಲ್ಲಿ 1948ರ ಬೆಲೆಗಳಿಗೆ ಹೋಲಿಸಿದಂತೆ ಶೇ.60 ರಷ್ಟು ವಿಸ್ತಾರಗೊಂಡಿತು. ಆದರೆ ಜವಳಿಯ ರಫ್ತು ಕಡಿಮೆಯಾಗುತ್ತಲೇ ಬಂತು. ಕಲ್ಲಿದ್ದಲಿನ ರಫ್ತು ನಿಂತೇಹೋಯಿತು. ಆದರೆ ಹೊಸ ಉದ್ಯಮಗಳ ರಫ್ತು ವೃದ್ಧಿಯಾಯಿತು. ಇವುಗಳಲ್ಲಿ ಮುಖ್ಯವಾದುವೆಂದರೆ ಮೋಟರು ಮತ್ತು ವಿಮಾನಯಾನದ ಸಾಮಾನುಗಳು. 1950ರಲ್ಲಿ ಇವು ಒಟ್ಟು ರಫ್ತಿನಲ್ಲಿ ಶೇ.12 ರಷ್ಟಿದ್ದವು. ಸೈನಿಕ ವಿಮಾನ ಸಾಮಗ್ರಿ ಇವುಗಳಲ್ಲಿ ಪ್ರಧಾನವಾಗಿತ್ತು.