ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಜಯನಗರ

ವಿಕಿಸೋರ್ಸ್ದಿಂದ

ವಿಜಯನಗರ 14-17ನೆಯ ಶತಮಾನದಲ್ಲಿ ಅಸ್ತಿತ್ವದಲ್ಲಿದ್ದ, ಕನ್ನಡ ಸಂಸ್ಕøತಿಯ ಜೊತೆಗೆ ಹಿಂದು ಸಂಸ್ಕøತಿಯನ್ನು ಎತ್ತಿಹಿಡಿದ ಪ್ರಸಿದ್ಧ ಸಾಮ್ರಾಜ್ಯ.

ರಾಜಕೀಯ ಇತಿಹಾಸ: ವಿಜಯನಗರ ಸಾಮ್ರಾಜ್ಯ 1336ರ ವೇಳೆಗೆ ಅಸ್ತಿತ್ವಕ್ಕೆ ಬಂತು. ಸಂಗಮಪುತ್ರರಾದ ಹರಿಹರ ಬುಕ್ಕರು ಈ ಸಾಮ್ರಾಜ್ಯ ವನ್ನು ಸ್ಥಾಪಿಸುವುದರಲ್ಲಿ ವಿಶೇಷವಾದ ಪಾತ್ರ ವಹಿಸಿದರು. ಇವರ ಕಿರಿಯ ಸೋದರರಾದ ಕಂಪಣ, ಮಾರಪ್ಪ ಮತ್ತು ಮುದ್ದಪ್ಪ ಇವರಿಗೆ ಬೆನ್ನೆಲುಬಾಗಿ ನಿಂತು ಸಹಾಯಮಾಡಿದರು. ಈ ಸೋದರರು ಮೂಲತಃ ಆಂಧ್ರ ಪ್ರದೇಶದವರೆಂದೂ ಕಾಕತೀಯ ಪ್ರತಾಪರುದ್ರನ ಅಧಿಕಾರಿಗ ಳಾಗಿದ್ದ ಇವರು, ಆ ರಾಜ್ಯ ಮುಸ್ಲಿಮರ ವಶವಾದ ಅನಂತರ ಹಂಪೆಯ ಪರಿಸರದ ಪ್ರದೇಶಕ್ಕೆ ಬಂದು ಕಂಪಿಲಿಯ ರಾಮನಾಥನ ಅಧಿಕಾರಿಗಳಾದ ರೆಂದೂ ಕಂಪಿಲಿಯೂ ಮುಸ್ಲಿಮರ ಆಘಾತಕ್ಕೆ ಈಡಾದ ಸಂದರ್ಭದಲ್ಲಿ ಸೆರೆಸಿಕ್ಕಿದ ಇವರು ದೆಹಲಿಗೆ ಒಯ್ಯಲ್ಪಟ್ಟರೆಂದೂ ಆದರೆ ಮಹಮ್ಮದ್-ಬಿನ್-ತುಗಲಕನು ಕರ್ನಾಟಕದಲ್ಲಿ ತಲೆಯೆತ್ತಿದ ದಂಗೆಯನ್ನಡಗಿಸಲು ಇವರನ್ನೇ ಇಲ್ಲಿಯ ಪ್ರಾಂತಾಧಿಕಾರಿಗಳಾಗಿ ನೇಮಿಸಿ ಕಳುಹಿಸಿದನೆಂದೂ ಇಲ್ಲಿಗೆ ಹಿಂತಿರುಗಿದ ಇವರು ವಿದ್ಯಾರಣ್ಯರ ಪ್ರಭಾವಕ್ಕೊಳಗಾಗಿ, ಆ ವೇಳೆಗೆ ಮತಾಂತರಗೊಂಡಿದ್ದರೂ ಮತ್ತೊಮ್ಮೆ ಹಿಂದು ಮತವನ್ನೊಪ್ಪಿ ಆ ಗುರುಗಳ ಕೃಪೆಯಿಂದ ಇಲ್ಲಿಯೇ ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದ ರೆಂದೂ ಒಂದು ವಾದವಿದೆ.

ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಗೊಜಲ ವೀಡು ಗ್ರಾಮದಲ್ಲಿ ದೊರೆತ ಶಾಸನವೊಂದನ್ನು (ಶಾಸನ ಕಾಲ 1314 ಎಂದು ನೆಲ್ಲೂರು ಜಿಲ್ಲೆಯ ಶಾಸನ ಸಂಪುಟಗಳ ಎರಡನೆಯ ಭಾಗದಲ್ಲಿ ಪ್ರಕಟವಾಗಿದೆ) ಆಧರಿಸಿ ಈ ಶಾಸನೋಕ್ತ ಬುಕ್ಕನು ಮೊದಲನೆಯ ಬುಕ್ಕನೆಂದೂ ಈತ ಕಾಕತೀಯ ಪ್ರತಾಪರುದ್ರನ ಸಾಮಂತನಾಗಿದ್ದನೆಂದೂ ಕೆಲವರು ವಾದಿಸಿದ್ದಾರೆ. ಆದರೆ ವಾಸ್ತವವಾಗಿ ಶಾಸನದ ಮೂಲವನ್ನು ಪರೀಕ್ಷಿಸಿ, ಅದರ ಪ್ರತಿಯನ್ನು ಪರಿಶೀಲಿಸಿದಾಗ ಶಾಸನದ ಕಾಲ ಶಕವರ್ಷ 1296, 1236 ಅಲ್ಲ ಎಂಬುದು ಸ್ಪಷ್ಟವಾಗಿದೆ. 1373-74ರಲ್ಲಿ ಈ ಅರಸ ಸ್ವತಂತ್ರವಾಗಿ ಆಳುತ್ತಿದ್ದುದು ಕಂಡುಬರುತ್ತದೆಯಾಗಿ ಈ ಶಾಸನದಿಂದ ವಿಜಯನಗರ ಸಾಮ್ರಾಜ್ಯದ ಮೂಲಪುರುಷರು ಆಂಧ್ರರೆಂಬ ವಾದಕ್ಕೆ ಇದು ಪುಷ್ಟಿನೀಡುವುದಿಲ್ಲ ಎಂಬುದು ಖಚಿತವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಈ ಸೋದರರು ಆರಂಭದಿಂದಲೂ ಕನ್ನಡಿಗರೆಂದೂ ಹಂಪೆಯ ಪರಿಸರದಲ್ಲಿ ರಾಜ್ಯಾಡಳಿತ ನಡೆಸುತ್ತಿದ್ದ ಇವರು ಹೊಯ್ಸಳ ಮುಮ್ಮಡಿ ವೀರಬಲ್ಲಾಳನ ಮಾಂಡಲಿಕರಾಗಿದ್ದುದಲ್ಲದೆ ಆ ಅರಸನೊಡನೆ, ಆತನ ಬಂಧುಗಳು ಮತ್ತು ಅಧಿಕಾರ ವರ್ಗದವರೊಡನೆ ರಕ್ತ ಸಂಬಂಧ ಬೆಳೆಸಿದ್ದರೆಂದೂ ಮುಮ್ಮಡಿ ಬಲ್ಲಾಳನೆ ಈ ಸೋದರರಿಗೆ ಪ್ರೋತ್ಸಾಹ ನೀಡಿ ದೇಶಕ್ಕೆ ಮಹಮದೀಯ ರಿಂದ ಒದಗಿದ್ದ ಕುತ್ತನ್ನು ಪರಿಹರಿಸಲು ಇವರಿಗೆ ಎಲ್ಲ ಬೆಂಬಲವನ್ನು ನೀಡಿದನೆಂದೂ ಸ್ವತಂತ್ರವಾಗಿ ಆಳತೊಡಗಿದರೂ ವಿಧೇಯತೆಯ ಕುರುಹಾಗಿ ಮೊದಲ ಇಬ್ಬರು ಸೋದರರು ಮಂಡಲೇಶ್ವರರೆಂಬ ಬಿರುದನ್ನು ಮುಂದುವರಿಸಿಕೊಂಡು ಬಂದರೆಂದೂ ವಿದ್ಯಾರಣ್ಯರ ಸಂಪರ್ಕ ಇವರಿಗೆ ಬಂದುದು ಅನಂತರದ ದಶಕಗಳಲ್ಲೆಂದೂ ಇನ್ನೊಂದು ವಾದವಿದೆ. ಮೊದಲನೆಯ ವಾದಕ್ಕೆ ಶತಮಾನಗಳ ಅನಂತರದ ವಿದ್ಯಾರಣ್ಯ ಕಾಲಜ್ಞಾನ ಮುಂತಾದ ಸಾಹಿತ್ಯ ಕೃತಿಗಳು, ಫೆರಿಸ್ತರಂಥ ಪರಕೀಯರ ಬರೆವಣಿಗೆಗಳೂ ಆಧಾರವಾಗಿದ್ದರೆ, ಎರಡನೆಯ ವಾದ ಸಮಕಾಲೀನ ಶಾಸನಗಳನ್ನು ಆಧರಿಸಿದೆ. ಇವು ಹೇಗೇ ಇದ್ದರು ಈ ಸೋದರರು, ಅನಂತರ ಬಂದವರು ಹಂಪೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ಅಲ್ಲಿಯ ವಿರೂಪಾಕ್ಷನನ್ನು ಕುಲದೈವವಾಗಿ ಪರಿಗಣಿಸಿ ಆ ದೈವದ ಪ್ರತಿನಿಧಿಗಳಾಗಿ ರಾಜ್ಯವಾಳುತ್ತಿದ್ದರೆಂದು ತೋರಿಸಲು ತಮ್ಮ ಶಾಸನಗಳಲ್ಲಿ ಶ್ರೀವಿರೂಪಾಕ್ಷ ಎಂಬ ಅಂಕಿತಗಳನ್ನು ಹಾಕುತ್ತಿದ್ದುದನ್ನೆಲ್ಲ ಕಂಡಾಗ ಇವರಿಗೆ ಕನ್ನಡ ನಾಡು ನುಡಿ ಸಂಸ್ಕøತಿಗಳ ಬಗೆಗೆ ವಿಶೇಷವಾದ ಪ್ರೀತಿ ಆದರಗಳಿದ್ದುವೆಂಬುದು ಸ್ಪಷ್ಟವಾಗುತ್ತದೆ. ಇವರು ಕನ್ನಡಿಗರೇ ಆಗಿದ್ದರೆನ್ನಲು ಹಿಂಜರಿಯಬೇಕಾದ ಅಂಶಗಳಾವುವೂ ಇಲ್ಲ.

ಹರಿಹರ ಸೋದರರು 1336ರಲ್ಲಿ ರಾಜ್ಯವನ್ನು ಸ್ಥಾಪಿಸಿದರು. 1342ರಲ್ಲಿ ಮುಮ್ಮಡಿ ಬಲ್ಲಾಳ ಕೊಲ್ಲಲ್ಪಟ್ಟ. ಈ ಆರುವರ್ಷಗಳಲ್ಲಿ ರಾಜ್ಯವನ್ನು ಬಲಪಡಿಸುವ ಕಾರ್ಯದಲ್ಲಿ ಹರಿಹರ ನಿರತನಾಗಿದ್ದ. 1346ರಲ್ಲಿ ಸೋದರರೊಡನೆ ಶೃಂಗೇರಿಗೆ ಹೋಗಿ ಅಲ್ಲಿನ ಗುರುಗಳಾದ ವಿದ್ಯಾತೀರ್ಥಶ್ರೀಪಾದಂಗಳಿಗೆ ಗೌರವ ಸಲ್ಲಿಸಿದ. ರಾಜ್ಯಾಡಳಿತದಲ್ಲಿ ತನ್ನ ಸಹೋದರರಾದ ಬುಕ್ಕ, ಕಂಪಣ, ಮಾರಪ್ಪ ಮತ್ತು ಮುದ್ದಪ್ಪರ ನೆರವನ್ನು ಪಡೆದ. ಬುಕ್ಕ ಯುವರಾಜಪದವಿಯಲ್ಲಿದ್ದು ರಾಜ್ಯದ ಮಧ್ಯಭಾ ಗವಾದ ದೋರಸಮುದ್ರದ ಸುತ್ತಲಿನ ಪ್ರದೇಶವನ್ನು ಆಳುತ್ತಿದ್ದ. ಕಂಪಣ ಉದಯಗಿರಿ ರಾಜ್ಯದಲ್ಲೂ ಮಾರಪ್ಪ ಪಶ್ಚಿಮತೀರದ ಮಲೆರಾಜ್ಯ ದಲ್ಲೂ ಮುದ್ದಪ್ಪ ಮುಳಬಾಗಲಿನ ಸುತ್ತಲ ಪ್ರದೇಶದಲ್ಲಿಯೂ ಅಧಿಕಾರ ದಲ್ಲಿದ್ದರು. 1347ರಲ್ಲಿ ಗುಲ್ಬರ್ಗದಲ್ಲಿ ಬಹಮನೀ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಅಲಾಉದ್ದಿನ್ ಬಹಮನ್ ಷಾ ಎಂದು ಬಿರುದಾಂಕಿತನಾದ ಹಸನ್ ಅಥವಾ ಜಾಫರ್‍ಖಾನ್ ಇದರ ಸಂಸ್ಥಾಪಕ. ಇದೊಂದು ವಿಶೇಷವಾದ ಘಟನೆ. ಈ ರಾಜ್ಯ ಅನಂತರದ ಶತಮಾನಗಳಲ್ಲಿ ನೆರೆಯ ವಿಜಯನಗರ ರಾಜ್ಯದೊಡನೆ ಸತತವಾಗಿ ಕದನಗಳಲ್ಲಿ ತೊಡಗಿತ್ತು.

1347ರ ಸುಮಾರಿಗೆ ಅಸ್ತಿತ್ವಕ್ಕೆ ಬಂದ ಬಹಮನೀ ರಾಜ್ಯದ ಸುಲ್ತಾನರು ವಿಜಯನಗರದ ಪ್ರತಿಸ್ಪರ್ಧಿಗಳಾಗಿದ್ದರು. ದಕ್ಷಿಣದಲ್ಲಿ ಮಧುರೆಯ ಸುಲ್ತಾನರು ಕಂಟಕಪ್ರಾಯರಾಗಿದ್ದರು. ಇವರನ್ನು ಹೊರತು ಪಡಿಸಿ, ಇತರ ಮಾಂಡಲಿಕರು, ಸಾಮಂತರು ಹರಿಹರನ ಸಾರ್ವಭೌಮತ್ವವನ್ನು ಒಪ್ಪಿದರು. 1356ರಲ್ಲಿ ಹರಿಹರನ ಸೋದರನಾದ ಬುಕ್ಕ ಪಟ್ಟಾಭಿಷಿಕ್ತನಾದ. ಆವರೆವಿಗೂ ಹಿರಿಯನಿಗೆ ಆಡಳಿತದಲ್ಲಿ ನೆರವಾಗಿ ರಾಜ್ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಈತ ಸಿಂಹಾಸನಾರೂಢನಾದ ಅನಂತರ ಎರಡು ದಶಕಗಳ ಕಾಲ ಅಧಿಕಾರದಲ್ಲಿ ಮುಂದುವರಿದು ರಾಜ್ಯವನ್ನು ವಿಸ್ತರಿಸಿ ಬಲಪಡಿಸಿದ. ತಮಿಳುನಾಡಿನ ಚೆಂಗಲ್ಪೇಟ್ ಮತ್ತು ಆರ್ಕಾಟ್ ಜಿಲ್ಲೆಗಳನ್ನೊಳಗೊಂಡ ಭಾಗ ಆಗ ರಾಜಗಂಭೀರ ರಾಜ್ಯವೆನಿಸಿತ್ತು. ಅಲ್ಲಿ ಶಂಬುವರಾಯ ಮನೆತನದ ರಾಜಗಂಭೀರ ರಾಜನಾರಾಯಣನೂ ಸ್ವತಂತ್ರವಾಗಿ ಆಳಿ ವಿಜಯನಗರದ ಸಾರ್ವಭೌಮತ್ವವನ್ನು ಅಲ್ಲಗಳೆದಿದ್ದ. ಅವನ ವಿರುದ್ಧ ಸೈನ್ಯಾಚರಣೆ ನಡೆಸಲು ಬುಕ್ಕ ತನ್ನ ಸೋದರನಾದ ಕಂಪಣನನ್ನು ನಿಯೋಜಿಸಿದ. ರಾಜಗಂಭೀರನ್‍ಮಲೈ ಎನಿಸಿದ್ದ ಈಗಿನ ಉತ್ತರ ಆರ್ಕಾಟ್ ಜಿಲ್ಲೆಯ ಪಡೈವೀಡನ್ನು ಕಂಪಣ ಮುತ್ತಿ ಶಂಬುವರಾಯನನ್ನು ಸೆರೆಹಿಡಿದ. ಶಂಬುವರಾಯ ಅನಂತರ ಬುಕ್ಕನ ಮಾಂಡಲಿಕತ್ವವನ್ನು ಒಪ್ಪಿದ. ಇಲ್ಲಿಂದ ಕಂಪಣ ದಕ್ಷಿಣದ ಕಡೆ ದಿಗ್ವಿಜಯ ಯಾತ್ರೆಗೆ ತೆರಳಿ ಮಧುರೆಯ ಸುಲ್ತಾನನ ಮೇಲೆರಗಿ ಅಲ್ಲಿಯ ಸುಲ್ತಾನನೊಬ್ಬನನ್ನು ಕೊಂದ(1371). ಕಂಚಿಯ ರಾಜ ಸಿಂಹೇಶ್ವರಾಲಯದಲ್ಲಿ, ಶ್ರೀರಂಗದ ರಂಗನಾಥಾಲಯದಲ್ಲಿ ದೇವರ ವಿಗ್ರಹಗಳನ್ನು ಪುನಃ ಪ್ರತಿಷ್ಠಾಪಿಸಿದ. ಆದರೂ ಮಧುರೆಯ ಸುಲ್ತಾನನೆನಿಸಿಕೊಂಡ ಅಲಾಉದ್ದೀನ್ ಸಿಕಂದರ್ 1377ರ ತನಕ ಅಲ್ಲಲ್ಲಿ ತಲೆಮರೆಸಿ ಕೊಂಡಿದ್ದ. ಈ ದಿಗ್ವಿಜಯಗಳಲ್ಲಿ ಕಂಪಣನ ಸೇನಾನಿಗಳಾದ ಗೋಪಣ ಮತ್ತು ಸಾಳುವ ಮಂಗು ವಿಶಿಷ್ಟ ಪಾತ್ರ ವಹಿಸಿದ್ದರು. ಕಂಪಣನ ಪತ್ನಿಯಾದ ಗಂಗಾದೇವಿ ರಾಜಕುಮಾರನ ಸಾಧನೆಗಳನ್ನು ಮಧುರಾವಿಜಯಂ ಅಥವಾ ವೀರಕಂಪಣರಾಯ ಚರಿತೆ ಎಂಬ ಸಂಸ್ಕøತ ಐತಿಹಾಸಿಕ ಕಾವ್ಯದಲ್ಲಿ ಚಿತ್ರಿಸಿದ್ದಾಳೆ.

ಚಿತ್ರ-ವಿಜಯನಗರದ-ಅರಸರ-ವಂಶಾವಳಿ

ಚಿತ್ರ-ಅರಸರ-ವಂಶಾವಳಿ

ಬುಕ್ಕರಾಯನ ಕಾಲದಲ್ಲಿ ಬಹಮನೀ ರಾಜ್ಯದೊಡನೆ ಕದನಗಳು ಆರಂಭವಾಗಿ ತೀವ್ರಸ್ವರೂಪವನ್ನು ತಾಳಿದುವು. ಭಿನ್ನಧರ್ಮಗಳಿಗೆ ಸೇರಿದ ಈ ರಾಜ್ಯಗಳ ನಡುವಣ ಕಲಹಗಳು ಕೇವಲ ಧಾರ್ಮಿಕವಾಗಿರದೆ ತುಂಗಭದ್ರಾ-ಕೃಷ್ಣಾನದಿಗಳ ನಡುವಣ ಫಲವತ್ತಾದ ಪ್ರದೇಶವನ್ನು ಆಕ್ರಮಿಸುವ ಹೋರಾಟವೂ ಆಗಿತ್ತು. ಎರಡು ಕಡೆಯವರೂ ರಾಯಚೂರು ದೋಅಬ್‍ನ ಕೆಲವು ಭಾಗಗಳನ್ನು ತಮ್ಮದಾಗಿ ಮಾಡಿಕೊಂಡಿದ್ದರೂ ಅಲ್ಲಿಯ ಎಲ್ಲ ಪ್ರದೇಶವನ್ನು ಆಕ್ರಮಿಸಬೇಕೆಂಬ ಆಸೆ ಅವರೀರ್ವರೂ ನಿರಂತರ ಕದನಗಳಲ್ಲಿ ತೊಡಗುವಂತೆ ಮಾಡಿತು. ಈ ಸಂದರ್ಭಗಳಲ್ಲಿ ಫೆರಿಸ್ತನ ಹೇಳಿಕೆಗಳು ಉತ್ಪ್ರೇಕ್ಷೆಯಿಂದ ಕೂಡಿದ್ದು ಕಟ್ಟುಕಥೆಗಳನ್ನೊಳ ಗೊಂಡಿವೆ ಎಂಬುದನ್ನು ಮರೆಯುವಂತಿಲ್ಲ. ಬಹಮನಿಯ ಮಹಮ್ಮದ್‍ಷಾ ಬುಕ್ಕನನ್ನು ಕಾಡುಮೇಡುಗಳಲ್ಲಿ ಆರು ತಿಂಗಳುಗಳ ಕಾಲ ಬೆನ್ನಟ್ಟಿ ಆತ ರಾಮೇಶ್ವರದವರೆಗೂ ಅಲೆಯುವಂತೆ ಮಾಡಿದನೆಂಬುದು ಇಂಥ ಒಂದು ಹೇಳಿಕೆ. ವಾಸ್ತವವಾಗಿ ಬಹಮನೀ ಅರಸರಾಗಲೀ ವಿಜಯನ ಗರದ ಅರಸರಾಗಲೀ ಖಚಿತವಾದ ಅಂತಿಮವೆನಿಸಬಹುದಾದ ಜಯವನ್ನು ಪಡೆಯಲೇ ಇಲ್ಲ. ಅಂಥ ಘಟನೆ ನಡೆದುದು ಎರಡು ಶತಮಾನಗಳ ಅನಂತರ ನಡೆದ ರಕ್ಕಸಗಿ-ತಂಗಡಗಿ ಕದನದಲ್ಲಿ ಮಾತ್ರ. ಈ ಹೋರಾಟ ಧಾರ್ಮಿಕವಾಗಿರಲಿಲ್ಲವೆಂಬ ವಾದವನ್ನು ಸಹ ಒಪ್ಪಲಾಗದು. ವಾಸ್ತವ ವಾಗಿ ಮಹಮದೀಯ ಅರಸರು ಹಿಂದು ಧರ್ಮವನ್ನು ಅಲ್ಲಗಳೆದು ತಮ್ಮ ಮತವನ್ನು ಬಲವಂತವಾಗಿ ಪ್ರಜೆಗಳ ಮೇಲೆ ಹೇರುವ ಯತ್ನ ಮಾಡಿದರು. ಉತ್ತರ ಭಾರತದಲ್ಲಿ ಅವರ ಈ ಯತ್ನಗಳನ್ನು ತಡೆಗಟ್ಟಲು ಸರಿಸಮವಾದ ಬಲ ಯಾವ ರಾಜನಿಗೂ ಇರಲಿಲ್ಲ. ದಕ್ಷಿಣದಲ್ಲಿ ತಡವಾಗಿಯಾದರೂ ತಮ್ಮ ಧರ್ಮಕ್ಕೆ ಚ್ಯುತಿಬಂದಿದೆ ಎಂಬುದನ್ನು ಮನಗಂಡ ಅರಸರು, ಸಾಮಂತರು, ಪ್ರಜೆಗಳು ದೃಢಮನಸ್ಸಿನಿಂದ ಒಗ್ಗಟ್ಟಾಗಿ ಅದನ್ನು ತಡೆಯುವ, ಧರ್ಮರಕ್ಷಣೆ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದರು. ಎಂತಲೇ ಈ ಕಾಲದಲ್ಲಿ ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪಗಳಲ್ಲಿ ಧರ್ಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಯಿತು. ಬುಕ್ಕನು ಸಾಯಣಾಚಾರ್ಯ ಮತ್ತು ಮಾಧವಾಚಾರ್ಯರ ನೇತೃತ್ವದಲ್ಲಿ ವೇದಗಳಿಗೆ ಭಾಷ್ಯಗಳನ್ನು ಬರೆಸುವ ಯೋಜನೆಯನ್ನು 1360ರಲ್ಲಿ ಕಾರ್ಯಗತ ಮಾಡಿದುದು ಇಂಥ ಮನೋಭಾವದಿಂದಲೇ.

ಈ ದೃಷ್ಟಿಯಿಂದ ಬುಕ್ಕನು ಕಾಕತೀಯ ಪ್ರತಾಪರುದ್ರನ ಮೊಮ್ಮಗ ನಾದ ವಿನಾಯಕದೇವನೊಡನೆ ಸ್ನೇಹಸಂಬಂಧಗಳನ್ನು ಬೆಳೆಸಿದ. ಇಬ್ಬರೂ ಕೂಡಿ ದೆಹಲಿ ಸುಲ್ತಾನನಾಗಿದ್ದ ಫಿರೋಜನ ಆಸ್ಥಾನಕ್ಕೆ ಪ್ರತಿನಿಧಿಗಳನ್ನು ಕಳಿಸಿದರು. ಆದರೆ ಸ್ವತಃ ಸುಲ್ತಾನನೇ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದ ಕಾರಣ ಈ ನಿಯೋಗ ಏನೂ ಸಾಧಿಸಲಿಲ್ಲ. ಮಹಮ್ಮದ್ ಓರಂಗಲ್ಲನ್ನು ಮುತ್ತಿ ವಿನಾಯಕದೇವನನ್ನು ಕೊಂದ. ಇನ್ನೊಮ್ಮೆ ಗೋಲ್ಕೊಂಡವನ್ನು ಆಕ್ರಮಿಸಿದ. ಆಂಧ್ರದ ಪ್ರೋಲಯ ನಾಯಕ, ಕಾಪಯ ನಾಯಕ ಮುಂತಾದ ನಾಯಕರು ಕೆಲಕಾಲ ಧೈರ್ಯದಿಂದ ಶತ್ರುವನ್ನು ಎದುರಿಸಿ ಸ್ವತಂತ್ರರಾದರು. ಆದರೆ ಕ್ರಮೇಣ ಆಂತರಿಕ ಕಲಹಗಳು ತಲೆಯೆತ್ತಿ ಅವರ ಬಲ ಕುಗ್ಗಿತು. ಓರಂಗಲ್ಲಿನ ಸುತ್ತಲು ವೇಲಮರು ಪ್ರಬಲರಾಗಿ ವಿಜಯನಗರದ ವಿರುದ್ಧ ಕಾದಿದರು. ಗೋದಾವರಿ, ಕೃಷ್ಣಾನದಿಗಳ ಪ್ರದೇಶದಲ್ಲಿ ರೆಡ್ಡಿ ವಂಶಸ್ಥರು ರಾಜಮಹೇಂದ್ರಿ ಮತ್ತು ಕೊಂಡವೀಡುಗಳನ್ನು ನೆಲೆವೀಡಾಗಿ ಮಾಡಿಕೊಂಡು ಆಳುತ್ತಿದ್ದರು. ಮಹಮ್ಮದ್ ಓರಂಗಲ್ಲಿನಲ್ಲಿ ಜಯಗಳಿಸಿದ ಅನಂತರ ಎರಡು ಬಾರಿ ಬುಕ್ಕನನ್ನು ರಣರಂಗದಲ್ಲಿ ಎದುರಿಸಿದ. ಸಮಾನಬಲದ ಈರ್ವರಲ್ಲಿ ಯಾರೊಬ್ಬರಿಗೂ ಜಯ ಲಭಿಸಲಿಲ್ಲ. ಬುಕ್ಕನ ಸೋದರನಾದ ಮಾದಪ್ಪನ ಮಂತ್ರಿ ಚಾವುಂಡನ ಮಗ ಮಾಧವ ಕೊಂಕಣ ಪ್ರಾಂತದಲ್ಲಿ ದಂಡೆತ್ತಿ ಗೋವೆಯನ್ನು ವಶಪಡಿಸಿಕೊಂಡ. ಅಂದಿನಿಂದ ಸುಮಾರು ಒಂದು ಶತಮಾನದ ಕಾಲ ಗೋವೆ ವಿಜಯನಗರದ ಅಧೀನದಲ್ಲಿತ್ತು.

ರಾಜ್ಯವನ್ನು ಬಲಪಡಿಸಲು ಬುಕ್ಕ ಹಲವಾರು ಕ್ರಮಗಳನ್ನು ಕೈಗೊಂಡ. ರಾಜಧಾನಿಯಾದ ಹಂಪೆಯ ಸುತ್ತಲೂ ಕೋಟೆಯನ್ನು ಕಟ್ಟಿಸಿ ಪ್ರಜೆಗಳ ವಾಸಕ್ಕೆ ಹೆಚ್ಚು ಅನುಕೂಲಗಳನ್ನು ಕಲ್ಪಿಸಿದ. ವ್ಯವಸಾಯ, ವ್ಯಾಪಾರಗಳಿಗೆ ಉತ್ತೇಜನ ನೀಡಿದ. ಸಿಂಹಳದ ಅರಸರು, ಮಲಬಾರಿನ ನಾಯಕರು ಅರಸನ ಆಸ್ಥಾನಕ್ಕೆ ರಾಜಪ್ರತಿನಿಧಿಗಳನ್ನು ಕಳಿಸಿದರು. ದೂರದ ಚೀನ ದೇಶದಲ್ಲಿ ಆಳುತ್ತಿದ್ದ ಮಿಂಗ್ ವಂಶದ ಅರಸನ ಆಸ್ಥಾನಕ್ಕೆ ಬುಕ್ಕ 1374ರಲ್ಲಿ ರಾಯಭಾರಿಗಳನ್ನು ಕಳಿಸಿದ. ಬುಕ್ಕನ ಮಕ್ಕಳಾದ ವಿರೂಪಾಕ್ಷ ಮತ್ತು ಭಾಸ್ಕರರು ಆರಗ ಮತ್ತು ಮುಳುವಾಯಿ (ಮುಳಬಾಗಲು) ಪ್ರಾಂತಾಧಿಕಾರಿಗಳಾದರು. ಸೋದರನಾದ ಕಂಪಣ್ಣ ತಮಿಳುದೇಶದಲ್ಲಿ ಅಧಿಕಾರ ವಹಿಸಿದ. ರಾಷ್ಟ್ರದ ಹಿತಕ್ಕಾಗಿ ಪ್ರಜೆಗಳು ತಮ್ಮ ತಮ್ಮ ಜಾತಿಮತಗಳ ವೈಷಮ್ಯಗಳನ್ನು ತೊಡೆದು ಶಾಂತಿಯುತ ಸಹಜೀವನ ನಡೆಸುವುದು ಆವಶ್ಯಕವಾಗಿತ್ತು. ಎಂತಲೇ ಒಮ್ಮೆ ಶ್ರವಣಬೆಳಗೊಳದಲ್ಲಿ ಜೈನರಿಗೂ ಶ್ರೀವೈಷ್ಣವರಿಗೂ ಕಲಹವಾದಾಗ ಅರಸನು ಅವರನ್ನು ಸಮಾಧಾನಗೊಳಿಸಿ ಎಲ್ಲ ಧರ್ಮಗಳೂ ಒಂದೇ, ಯಾವುದನ್ನೂ ತೆಗಳ ಲಾಗದು ಎಂದು ಅವರಿಗೆ ಉಪದೇಶ ನೀಡಿ ಅವರನ್ನು ಸಾಂತ್ವನ ಗೊಳಿಸಿದ. ಇದು ಅಂದಿನ ಅರಸರ ಧಾರ್ಮಿಕ ನೀತಿಗೆ ಸಾಕ್ಷಿಯಾಗಿದೆ. 1377ರಲ್ಲಿ ಇಮ್ಮಡಿ ಹರಿಹರ ತಂದೆಯ ಉತ್ತಾಧಿಕಾರಿಯಾಗಿ ಆಡಳಿತ ಸೂತ್ರ ವಹಿಸಿದ. 1374ರಲ್ಲಿ ಕಂಪಣ ನಿಧನನಾದ ಬಳಿಕ ತಮಿಳುನಾಡಿನಲ್ಲಿ ತುಂಡೀರ, ಚೋಳ ಮತ್ತು ಪಾಂಡ್ಯ ದೇಶಗಳ ಮಾಂಡಲಿಕರು ದಂಗೆ ಎದ್ದಿದ್ದರು. ಈ ಬಾರಿ ಹರಿಹರನ ಸೋದರನಾದ ವಿರೂಪಾಕ್ಷ ಅಲ್ಲಿಗೆ ಹೋಗಿ ದಂಗೆಗಳನ್ನು ಅಡಗಿಸಿ, ಅಂತಿಮವಾಗಿ ಮಧುರೆಯ ಸುಲ್ತಾನನ್ನು ಸೋಲಿಸಿ ಹೊರದೂಡಿ, ಸಿಂಹಳ ದ್ವೀಪದವರೆಗೂ ಹೋಗಿ ಅಲ್ಲಿಯ ಅರಸನಾದ ಭುವನೈಕಬಾಹುವಿನಿಂದ ಕಪ್ಪವನ್ನು ವಸೂಲಿಮಾಡಿದ. 1391ರಲ್ಲಿ ಉತ್ತರದಲ್ಲಿ ಚೌಲ್, ದಭೋಲ್ ಮತ್ತು ಖಾರೇಪಟ್ಟಣಗಳು ವಿಜಯನಗರದ ವಶವಾದುವು. ಇದರ ಫಲವಾಗಿ ಸಾಮ್ರಾಜ್ಯ ಕೃಷ್ಣಾ ತೀರದವರೆಗೂ ವಿಸ್ತರಿಸಿದಂತಾಯಿತು. ಬಹಮನಿಯ ಫಿರೋಜ್ ಷಾ ಕದನ ಹೂಡಿದನಾದರೂ ಫಲಿತಾಂಶ ಶೂನ್ಯ. ಇದರಲ್ಲಿ ಗುಂಡ ದಂಡಾಧಿನಾಥ ವಿಶಿಷ್ಟವಾದ ಪಾತ್ರವಹಿಸಿದ. ಉದಯಗಿರಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಯುವರಾಜನಾದ ದೇವರಾಯ, ವೇಲಮ ಹಾಗೂ ಅವರ ಸಹಾಯಕ್ಕೆ ಬಂದ ಬಹಮನೀ ಸುಲ್ತಾನನನ್ನು ಸೋಲಿಸಿ ಮೆಹಬೂಬ್‍ನಗರ ಜಿಲ್ಲೆಯ ಪನಗಲ್ ಕೋಟೆಯನ್ನು ವಶಪಡಿಸಿಕೊಂಡ. ಅರಸ ರಾಜ್ಯದ ಆರ್ಥಿಕಾಭಿವೃದ್ಧಿಗಾಗಿ ಹಲವಾರು ನೀರಾವರಿ ಯೋಜನೆಗಳನ್ನು ಕೈಗೊಂಡು ನದಿಗಳಿಗೆ ಅಣೆಕಟ್ಟು ಕಟ್ಟಿ, ಕಾಲುವೆಗಳನ್ನು ತೋಡಿಸಿದ. ಅಂದಿನ ಖ್ಯಾತ ವಾಸ್ತುಶಿಲ್ಪಿ ಸಿಂಗಮಭಟ್ಟ ಪೆನುಗೊಂಡೆಗೆ ನೀರನ್ನು ಒದಗಿಸಲು ಹೊನ್ನೆ ನದಿಯಿಂದ ಕಾಲುವೆ ಯೊಂದನ್ನು ತೋಡಿಸಿದ. ಬುಕ್ಕ ಆರಂಭಿಸಿದ್ದ ವೇದಗಳಿಗೆ ಭಾಷ್ಯವನ್ನು ಬರೆಯಿಸುವ ಯೋಜನೆ ಹರಿಹರನ ಕಾಲದಲ್ಲಿ ಪೂರ್ಣಗೊಂಡಿತು. ಅರಸನು ವೈದಿಕಮಾರ್ಗ ಸ್ಥಾಪನಾಚಾರ್ಯನೆನಿಸಿದ. ಕನ್ನಡ ಮತ್ತು ಸಂಸ್ಕøತ ಭಾಷೆ-ಸಾಹಿತ್ಯಗಳಿಗೆ ಈತ ವಿಶೇಷವಾದ ಪ್ರೋತ್ಸಾಹ ನೀಡಿ ಕರ್ನಾಟಕ ವಿದ್ಯಾವಿಲಾಸನೆನಿಸಿಕೊಂಡ. ಜೈನ ಹಾಗೂ ವೀರಶೈವ ಕೃತಿಗಳು ಆಗ ಬೆಳಕಿಗೆ ಬಂದುವು.

1404ರಲ್ಲಿ ಹರಿಹರ ಮಡಿದ. ಸಿಂಹಾಸನಕ್ಕಾಗಿ ಬುಕ್ಕ (II) ಮತ್ತು ವಿರೂಪಾಕ್ಷರ ನಡುವೆ ಸ್ಪರ್ಧೆ ಏರ್ಪಟ್ಟಿತು. ಬುಕ್ಕ ಜಯಶಾಲಿಯಾ ದರೂ ಬಹುಕಾಲ ಬಾಳಲಿಲ್ಲ. 1406ರಲ್ಲಿ ಅವನ ಕಿರಿಯ ಸೋದರ ದೇವರಾಯ ರಾಜ್ಯಸೂತ್ರಗಳನ್ನು ವಹಿಸಿದ. ಈತ ಬಹುಮನೀ ಸುಲ್ತಾನ ನಾದ ಫಿರೋಜನೊಡನೆ ಸತತವಾಗಿ ಕಾದಬೇಕಾಯಿತು. ಮುದಗಲ್ಲಿನ ಅಕ್ಕಸಾಲಿಗನೊಬ್ಬನ ಮಗಳಲ್ಲಿ ಈತ ಅನುರಕ್ತನಾದನೆಂದೂ ಆಕೆಯ ರಕ್ಷಣೆಗಾಗಿ ಫಿರೋಜ್ ವಿಜಯನಗರವನ್ನು ಮುತ್ತಿದನೆಂದೂ ಫಿರೋಜನ ಮಗ ದೇವರಾಯನ ಮಗಳನ್ನು ಮದುವೆಯಾದನೆಂದೂ ಫೆರಿಸ್ತನ ಹೇಳಿಕೆ. ಇದು ಕಟ್ಟುಕತೆ ಎಂಬುದು ಸ್ಪಷ್ಟ. ಕೊಂಡವೀಡಿನ ರೆಡ್ಡಿ ಮನೆತನದ ಪೆದಕೋಮಟಿ ವೇಮನ ಉದಯಗಿರಿಯನ್ನು ಮುತ್ತಿದ ನಾದರೂ ದೇವರಾಯ ಅವನನ್ನು ಅಲ್ಲಿಂದ ಹೊರದೂಡಿದ. ಅನಂತರ ವೇಮನ ರಾಜಮಹೇಂದ್ರಿಯ ಕಾಟಯವೇಮನ ವಿರುದ್ಧ ದಂಡೆತ್ತಿದ. ಕಾಟಯನು ದೇವರಾಯನ ಮೈದುನ. ಎಂತಲೇ ದೇವರಾಯ ಅವನ ನೆರವಿಗೆ ಧಾವಿಸಿದ. ಆದರೆ ಸ್ವಲ್ಪಕಾಲದ ಅನಂತರ ಬಹಮನೀ ಸುಲ್ತಾನನ ನೆರವಿನಿಂದ ಪೆದಕೋಮಟಿ ಕಾಟಯವೇಮನನ್ನು ಸೋಲಿಸಿ ಕೊಂದನಾದರೂ ಕಾಟಯನ ಮಂತ್ರಿಯಾದ ಅಲ್ಲಾಡ 1415ರ ಸುಮಾರಿನಲ್ಲಿ ಶತ್ರುವನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾದ. ಇವುಗಳ ಪರಿಣಾಮವಾಗಿ ಒರಿಸ್ಸದಲ್ಲಿ ಆಳುತ್ತಿದ್ದ ಗಜಪತಿ ವಂಶದ ಭಾನುದೇವ ದೇವರಾಯನ ಶತ್ರುವಾದ. ತನ್ನ ದಕ್ಷಿಣ ದಿಗ್ವಿಜಯಗಳಿಗೆ ದೇವರಾಯನಿಂದ ಅಡಚಣೆಯುಂಟಾಗುವುದೆಂಬುದೊಂದು ಇದಕ್ಕೆ ಕಾರಣ.

ದೇವರಾಯ ಸಹ ತನ್ನ ತಂದೆಯಂತೆ ನೀರಾವರಿ ಯೋಜನೆಗಳನ್ನು ಹಾಕಿಕೊಂಡು ತುಂಗಭದ್ರೆಯಿಂದ ರಾಜಧಾನಿಗೆ ಎತ್ತರವಾದ ಕಲ್ಲಿನ ಕಾಲುವೆಯನ್ನು ಕಟ್ಟಿಸಿದನಲ್ಲದೆ ಅಣೆಕಟ್ಟೊಂದನ್ನು ಸಹ ನಿರ್ಮಿಸಿದ. ಹರಿಹರದ ಸಮೀಪದ ಹರಿದ್ರಾ ನದಿಗೂ ನೀರಾವರಿ ಕಟ್ಟನ್ನು ಕಟ್ಟಿಸಿದ. ಸಾಹಿತ್ಯ, ಕಲೆಗಳಿಗೆ ಪ್ರೋತ್ಸಾಹ ನೀಡಿದ. ಶೃಂಗೇರಿಯ ಚಂದ್ರಶೇಖರ ಭಾರತಿಗಳು ಈತನ ಗುರುಗಳಾಗಿದ್ದರು. 1422ರಲ್ಲಿ ದೇವರಾಯ ದಿವಂಗತನಾದ. 1424ರಲ್ಲಿ ಆತನ ಮೊಮ್ಮಗ ಇಮ್ಮಡಿ ದೇವರಾಯ ಪಟ್ಟಕ್ಕೆ ಬಂದ. ಪ್ರೌಢದೇವರಾಯ, ಪ್ರತಾಪದೇವರಾಯ, ಅಭಿನವ ವೀರದೇವರಾಯ ಎಂಬವು ಈತನ ಇತರ ಹೆಸರುಗಳು. ಗಜಬೇಂಟೆಕಾರ ಎಂಬುದು ವಿಶಿಷ್ಟವಾದ ಬಿರುದು. ಈತನ ಕಾಲದಲ್ಲಿ ವೇಲಮ ರೊಡಗೂಡಿ ಭಾನುದೇವ ರಾಜಮಹೇಂದ್ರಿಯ ರೆಡ್ಡಿಯನ್ನು ಸೋಲಿಸಿ ಕೊಂಡವೀಡನ್ನು ಹಿಂದಕ್ಕೆ ಆಕ್ರಮಿಸಿದ. ದೇವರಾಯ ಎಚ್ಚೆತ್ತು ಭಾನುದೇವನನ್ನು ಸೋಲಿಸಿ ಕೊಂಡವೀಡನ್ನು ಪಡೆದುಕೊಂಡ. ರಾಜಮಹೇಂದ್ರಿಯ ರೆಡ್ಡಿ ಪುನಃ ಪ್ರತಿಷ್ಠಾಪಿಸಲ್ಪಟ್ಟ. 1436ರಲ್ಲಿ ಭಾನುದೇವನ ಉತ್ತರಾಧಿಕಾರಿಯಾದ ಕಪಿಲೇಂದ್ರ ಇನ್ನೊಮ್ಮೆ ದಾಳಿಮಾಡಿದನಾದರೂ ಹಿಮ್ಮೆಟ್ಟ ಬೇಕಾಯಿತು. ಸೇನಾನಿಯಾದ ಮಲ್ಲಪ್ಪ ಒಡೆಯ ಶತ್ರುವಿನೊಡನೆ ಶೌರ್ಯದಿಂದ ಕಾದಿದ. ಬಹಮನೀ ಸುಲ್ತಾನ ಅಹಮದ್ ಷಾ 1422-23ರಲ್ಲಿ ವಿಜಯನಗರದ ವಿರುದ್ಧ ದಂಡೆತ್ತಿದಾಗ ರಾಜ್ಯಾಡಳಿತದಲ್ಲಿ ಪಾತ್ರವಹಿಸಿದ್ದ ಯುವರಾಜನಾದ ದೇವರಾಯನಿಂದ ಸೋಲಿಸಲ್ಪಟ್ಟ. ಶತ್ರುವಿನಿಂದ ದೂರವಿರಲೆಂಬಂತೆ ರಾಜಧಾನಿಯನ್ನು ಗುಲ್ಬರ್ಗದಿಂದ ಬಿದರೆಗೆ ಬದಲಿಸಿದ. 1435-36ರಲ್ಲಿ ಸುಲ್ತಾನ್ ಅಲಾಉದ್ದೀನ ಮುದಗಲ್ಲಿನ ಕೋಟೆಯನ್ನಾಕ್ರಮಿಸಲು ಯತ್ನಿಸಿದ. ಮುದಗಲ್ಲು ಅವನ ವಶವಾಯಿತೆಂದು ಫೆರಿಸ್ತ ತಿಳಿಸುತ್ತಾನಾದರೂ ಅದೇ ಕಾಲದ ಶಾಸನದಲ್ಲಿ ದೇವರಾಯನ ಅಧಿಕಾರಿಯಾದ ವರದಣ್ಣ ನಾಯಕ ಅಲ್ಲಿ ಆಳುತ್ತಿದ್ದ ಕಾರಣ ಅಲಾಉದ್ದೀನನ ಯತ್ನ ಫಲಿಸಲಿಲ್ಲವೆನ್ನಬೇಕು. ಲಕ್ಕಣ್ಣ ದಂಡನಾಯಕ ಸಿಂಹಳದ ಅರಸರ ವಿರುದ್ಧ ನೌಕಾಬಲವೊಂದನ್ನು ಒಯ್ದು, ಅಲ್ಲಿಯ ಅರಸನಿಂದ ಕಪ್ಪಕಾಣಿಕೆಗಳನ್ನು ಪಡೆದ. ಈತನ ಕಾಲದಲ್ಲಿ ರಾಜ್ಯ ವಿಸ್ತರಿಸಿ ಉತ್ತರದಲ್ಲಿ ಕೃಷ್ಣಾತೀರದವರೆಗೂ ಹಬ್ಬಿತು. (ಬಿ.ಆರ್.ಜಿ.)

ಕೇರಳ, ಸಿಂಹಳ, ಪುಲಿಕಾಡು, ಪೆಗು ಮತ್ತು ಬರ್ಮದ ಅರಸರು ಈತನಿಗೆ ಕಪ್ಪವನ್ನು ಸಲ್ಲಿಸಿದರೆಂದು ಈತನ ಕಾಲದಲ್ಲಿ ಪರ್ಷಿಯದಿಂದ ಬಂದ ರಾಯಭಾರಿಯಾದ ಅಬ್ದುಲ್ ರಜಾಕ್(1443) ಬರೆದಿಟ್ಟಿದ್ದಾನೆ. ಇಟಲಿಯಿಂದ ಬಂದ ನಿಕೊಲೊ ಡಿ ಕೊಂಟೆ (1420-21) ಇನ್ನೊಬ್ಬ ಯಾತ್ರಿಕ. ಈತ ವೆನಿಸ್ ನಗರದ ಗಣ್ಯ ಮನೆತನಕ್ಕೆ ಸೇರಿದ್ದ, ಡಮಾಸ್ಕಸ್ ನಲ್ಲಿ ನೆಲಸಿದ ವರ್ತಕ. ಅರಬ್ಬೀ ಭಾಷೆ ಕಲಿತ ಈತ ಆರುನೂರು ವರ್ತಕರ ತಂಡದೊಡನೆ ಪ್ರವಾಸ ಹೊರಟು ಭಾರತಕ್ಕೂ ಬಂದಿದ್ದ. ಇಲ್ಲಿದ್ದಾಗ ವಿಜಯನಗರಕ್ಕೆ ಬಂದಿದ್ದ. ಆಗ ಆಳುತ್ತಿದ್ದ ಅರಸ ಇಮ್ಮಡಿ ದೇವರಾಯ. ಕೊಂಟೆ ಸು. 1440ರಲ್ಲಿ ವೆನಿಸ್‍ಗೆ ಹಿಂದಿರುಗಿದ ಅನಂತರ ಇಟಲಿಯ ಪೋಪನ ಆದೇಶದ ಮೇರೆಗೆ ತನ್ನ ಪ್ರವಾಸವನ್ನು ಪೋಪನ ಕಾರ್ಯದರ್ಶಿ ಪೊಡ್ಜಿಯೋ ಬ್ರಟ್ಟೆಯೋಲಿನಿ ಎಂಬಾತನಿಗೆ ಹೇಳಿದ. ಆತ ಇದನ್ನು ಲ್ಯಾಟಿನ್ ಭಾಷೆಯಲ್ಲಿ ಬರೆದುಕೊಂಡ. ಆ ಬಳಿಕ ಅದು ಪೋರ್ಚುಗೀಸ್ ಭಾಷೆಗೂ ದುಮೇಸಿಯೋ ಎಂಬವರಿಂದ ಇಟಾಲಿಯನ್ ಭಾಷೆಗೂ ಕೊನೆಗೆ ಮೇಜರ್ ಎಂಬಾತನಿಂದ ಆಂಗ್ಲ ಭಾಷೆಗೂ ಭಾಷಾಂತರಗೊಂಡಿತು.

ಈತನ ಮಾತಿನಲ್ಲಿ ವಿಜಯನಗರ ಬಿಜೆನೆಗಾಲಿಯ ಎಂದಾಗಿದೆ. ನಗರದ ಸುತ್ತಳತೆ ಅರವತ್ತು ಮೈಲುಗಳು. ಸುತ್ತ ಕಟ್ಟಿರುವ ಕೋಟೆ ಪರ್ವತಗಳಷ್ಟು ಎತ್ತರವಾಗಿದೆ. ತೊಂಬತ್ತುಸಾವಿರ ಶಸ್ತ್ರಾಸ್ತ್ರಪ್ರವೀಣರು ಇಲ್ಲಿದ್ದಾರೆ. ಭಾರತದ ಎಲ್ಲ ರಾಜರಿಗಿಂತ ಬಲಾಢ್ಯನಾದ ಇಲ್ಲಿಯ ರಾಜನಿಗೆ 12,000 ಜನ ಹೆಂಡತಿಯರಿದ್ದಾರೆ. ಇವರಲ್ಲಿ 4,000 ಜನ ಅರಸ ಹೋದಲೆಲ್ಲ ಕಾಲ್ನಡಿಗೆಯಲ್ಲಿ, ಇನ್ನು 4,000 ಜನ ಕುದುರೆಗಳ ಮೇಲೂ ಇತರರು ಪಲ್ಲಕ್ಕಿಗಳಲ್ಲೂ ಹೋಗುತ್ತಾರೆ. ಇವರಲ್ಲಿ ಎರಡು-ಮೂರು ಸಾವಿರ ಜನ ಅರಸ ಸತ್ತಾಗ ಆತ್ಮಸಂತೋಷದಿಂದ ಪ್ರಾಣತ್ಯಾಗ ಮಾಡುತ್ತಾರೆ. ರಾಜಧಾನಿಯಲ್ಲಿ ಮೂರು ದೊಡ್ಡ ಹಬ್ಬಗಳನ್ನು (ಬಹುಶಃ ಯುಗಾದಿ, ದೀಪಾವಳಿ ಮತ್ತು ನವರಾತ್ರಿ) ಆಚರಿಸುತ್ತಾರೆ. ಮದುವೆ ಗಳನ್ನು ಬಹಳ ವೈಭವದಿಂದ ಮಾಡುತ್ತಾರೆ ಎಂದೆಲ್ಲ ಬರೆದಿಟ್ಟಿದ್ದಾನೆ.

ಅಬ್ದುಲ್ ರಜಾಕ್ ಎಂಬಾತ ಇದೇ ಸುಮಾರಿನಲ್ಲಿ ಭಾರತದಲ್ಲಿ ಪ್ರವಾಸಮಾಡಿದ ಪರ್ಷಿಯ ದೇಶದ ಯಾತ್ರಿಕ. ಈತ 1441ರಲ್ಲಿ ಹಖ್‍ಷಾನ ರಾಯಭಾರಿಯಾಗಿ ವಿಜಯನಗರಕ್ಕೆ ಬಂದ. ಕಲ್ಲಿಕೋಟೆಯಲ್ಲಿ ಇಳಿದು ಅಲ್ಲಿನ ಜಾಮೊರಿನ್‍ನನ್ನು ಕಂಡು ಅನಂತರ ಮಂಗಳೂರು ಮಾರ್ಗವಾಗಿ ವಿಜಯನಗರಕ್ಕೆ ಬಂದ. ಈತ ಭಾರತದಲ್ಲಿ ಸುಮಾರು ಎರಡು ವರ್ಷಗಳ ಕಾಲ ಇದ್ದು 1443ರಲ್ಲಿ ಹೊನ್ನಾವರದಲ್ಲಿ ಹಡಗನ್ನು ಹತ್ತಿ ಓರ್ಮುಜ್‍ಗೆ ಹಿಂದಿರುಗಿದ. ಈತ ತನ್ನ ಪ್ರವಾಸಕಥನ ಮತ್ಲ ಅಸ್ ಸದೈನ್ ಎಂಬ ಗ್ರಂಥದಲ್ಲಿ ವಿಜಯನಗರದ ಬಗೆಗೆ ಹೀಗೆ ಬರೆದಿದ್ದಾನೆ:

ಬಿಜನಗರ ಬಹಳ ದೊಡ್ಡ ಜನಸಂಖ್ಯೆಯ ಊರು. ರಾಜ್ಯ ಸೆರೆನ್ ದಿಬ್‍ದ (ಸಿಂಹಳ) ಗಡಿಯಿಂದ ಕಲ್ಬೆರ್ಗದ ಕೊಟ್ಟಕೊನೆಯವರೆಗೆ, ಬಂಗಾಲದಿಂದ ಮಲಬಾರ್ ಕೊನೆಯವರೆಗೆ ಸಾವಿರ ಫರೆಲಾಂಗ್‍ಗಳಷ್ಟು ವಿಸ್ತರಿಸಿದೆ. ಮುನ್ನೂರು ಬಂದರುಗಳಿವೆ. ಸೈನ್ಯದಲ್ಲಿ 11ಲಕ್ಷ ಯೋಧರಿದ್ದಾರೆ. ಸಾವಿರಕ್ಕೂ ಹೆಚ್ಚಿನ ಪೆಡಂಭೂತಗಳಂತಹ ಆನೆಗಳಿವೆ. ಈ ರಾಯನಂತಹ ಶ್ರೇಷ್ಠ ದೊರೆ ಹಿಂದುಸ್ಥಾನದಲ್ಲಿ ಎಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ಬಿಜನಗರದಂತಹ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ; ಈ ನಗರವನ್ನು ಏಳು ದುರ್ಗಗಳೂ ಏಳುಕೋಟೆಗಳೂ ಒಂದನ್ನೊಂದು ಆವರಿಸಿಕೊಂಡಿವೆ. ಅಂಗಡಿಬೀದಿಗಳು ಬಹು ಉದ್ದ ವಾಗಿಯೂ ಅಗಲವಾಗಿಯೂ ಇವೆ. ಬೀದಿಗಳಲ್ಲೆಲ್ಲ ಗುಲಾಬಿ ಹೂವಿನ ವಾಸನೆ. ಈ ಜನಗಳು ಗುಲಾಬಿ ಹೂಗಳಿಲ್ಲದೆ ಬದುಕುವಂತೆಯೇ ಇಲ್ಲ. ರತ್ನಪಡಿ ವ್ಯಾಪಾರಿಗಳು ಅಂಗಡಿಬೀದಿಗಳಲ್ಲಿ ಬಹಿರಂಗವಾಗಿ ವಜ್ರವೈಡೂರ್ಯಗಳನ್ನೂ ಮುತ್ತುಗಳನ್ನೂ ಮಾರುತ್ತಾರೆ. ರಾಜನನ್ನು ಸ್ವತಃ ಕಂಡ ರಜಾಕ್ ಆತನ ವರ್ಣನೆಯನ್ನು ಮಾಡಿದ್ದಾನೆ. ಆಗ ಅರಮನೆಯಲ್ಲಿ ಅರಸನ ಹತ್ಯೆಗಾಗಿ ನಡೆಯಿತೆನ್ನಲಾದ ಘಟನೆಯ ವಿವರಗಳನ್ನೂ ನೀಡಿದ್ದಾನೆ. ಮಹಾನವಮಿಯ ದಿನ ರಾಜನ ದರ್ಬಾರಿನ ವರ್ಣನೆಯೂ ಇದೆ. (ಜಿ.ಆರ್.ಆರ್.;ಸಿ.ಕೆ.ಎನ್.)

ದೇವರಾಯನ ಅನಂತರ ಆಳಿದ ಮಲ್ಲಿಕಾರ್ಜುನ ಮತ್ತು ವಿರೂಪಾಕ್ಷರು ದಕ್ಷರಾಗಿರಲಿಲ್ಲ. ಅರಮನೆಯಲ್ಲಿ ಸೋದರಸಂಬಂಧಿಗಳಲ್ಲಿ ವೈಮನಸ್ಯ ಗಳೂ ಕಲಹಗಳೂ ಕಾಣಿಸಿಕೊಂಡವು. ಗಜಪತಿ ಕಪಿಲೇಂದ್ರ ರಾಜಮಹೇಂದ್ರಿಯ ರೆಡ್ಡಿಯನ್ನು ಸೋಲಿಸಿ ಕೊಂಡವೀಡು, ಪೆನುಕೊಂಡೆ ಕೋಟೆಗಳನ್ನು ವಶಪಡಿಸಿಕೊಂಡ (1454). 1463ರಲ್ಲಿ ಕಪಿಲೇಂದ್ರನ ಮಗ ಹಮ್ಮೀರ ಕಾವೇರಿ ನದಿಯವರೆಗೂ ದಂಡೆತ್ತಿ ಹೋಗಿ ಉದಯಗಿರಿ, ಚಂದ್ರಗಿರಿ ಮುಂತಾದ ನಗರಗಳನ್ನು ಆಕ್ರಮಿಸಿದ. ಬಹಮನಿಯ ಮಹಮದ್‍ನ (III) ಪ್ರಧಾನಿಯಾಗಿದ್ದ ಮಹ್ಮೂದ್ ಗವಾನನು ಪಶ್ಚಿಮ ಕರಾವಳಿಯ ಮೇಲೆ ದಾಳಿಮಾಡಿ ಕೊಂಕಣ, ಗೋವೆಗಳನ್ನು ಆಕ್ರಮಿಸಿದ. ಬೆಳಗಾಂವಿ ಸಹ ಆತನ ವಶವಾಯಿತು. ಇಷ್ಟರಲ್ಲಿ ವಿರೂಪಾಕ್ಷನ ಅಧಿಕಾರವರ್ಗದಲ್ಲಿದ್ದ ಚಂದ್ರಗಿರಿಯ ಮಹಾಮಂಡಲೇಶ್ವರನಾಗಿದ್ದ ಸಾಳುವ ವಂಶದ ನರಸಿಂಹ ರಾಜ್ಯಕ್ಕೆ ಒದಗಿದ್ದ ಕುತ್ತನ್ನು ಪರಿಹರಿಸಲು ದಂಡನಾಯಕನಾಗಿದ್ದ ತುಳುವವಂಶದ ನರಸನಾಯಕನೊಡಗೂಡಿ ಶತ್ರುಗಳನ್ನು ಹಿಮ್ಮೆಟ್ಟಿಸುವುದರಲ್ಲಿ ನಿರತನಾದ. ಅಂತಃಪುರದ ಕಲಹಗಳ ಪರಿಣಾಮವಾಗಿ ವಿರೂಪಾಕ್ಷ ಕೊಲ್ಲಲ್ಪಟ್ಟಾಗ (1485) ಚಂದ್ರಗಿರಿಯಿಂದ ರಾಜಧಾನಿಗೆ ಧಾವಿಸಿದ ನರಸಿಂಹ ಅಲ್ಲಿಯ ಪರಿಸ್ಥಿತಿಗಳನ್ನು ಹತೋಟಿಗೆ ತಂದು ಅಂತಿಮವಾಗಿ ಸಿಂಹಾಸನಾರೂಢನಾದ (1485).

ನರಸಿಂಹನಿಂದ ವಿಜಯನಗರದ ಎರಡನೆಯ ವಂಶದ ಆಳಿಕೆ ಆರಂಭವಾಯಿತು. ಈತನ ತಂದೆ ಸಾಳುವ ಗುಂಡ. 1452ರಿಂದಲೇ ಅರಸನ ನೆಚ್ಚಿನ ಅಧಿಕಾರಿಗಳಲ್ಲೊಬ್ಬನಾಗಿದ್ದ ನರಸಿಂಹ ಅಂದಿನ ರಾಜಕೀಯ ಪರಿಸ್ಥಿತಿಗಳನ್ನು ಮನಗಂಡು ರಾಜ್ಯದ ಹಿತಕ್ಕೆಂತಲೇ ಪದವಿಯನ್ನು ಬಲವಂತವಾಗಿ ಕಸಿದುಕೊಳ್ಳಬೇಕಾಯಿತು. 1463ರ ಸುಮಾರಿನಲ್ಲಿಯೇ ಹಮ್ಮೀರನನ್ನು ಹಿಂದಕ್ಕೆ ದೂಡಿದ ನರಸಿಂಹನು ಅನಂತರ ದಕ್ಷಿಣದ ಮಧುರೆಯಲ್ಲಿ ದಂಗೆ ಎದ್ದಿದ್ದ ಸಮರ ಕೋಲಾಹಲನೆಂಬ ನಾಯಕನನ್ನು ಅಡಗಿಸಿದ. ಅರಸನಾದ ಬಳಿಕ ಕೇವಲ ಆರು ವರ್ಷಗಳ ಕಾಲ ಆಳಿದ ನರಸಿಂಹ ಶಾಂತಿಯುತ ವಾತಾವರಣವನ್ನು ಕಲ್ಪಿಸಿದ. ಆದರೂ ಕಪಿಲೇಂದ್ರನ ಮಗ ಪುರುಷೋತ್ತಮ ಗಜಪತಿ ಮತ್ತೊಮ್ಮೆ ದಂಡೆತ್ತಿ ಗುಂಟೂರುವರೆಗಿನ ಪೂರ್ವತೀರಪ್ರದೇಶಗಳನ್ನೂ ಉದಯಗಿರಿ ಕೋಟೆಯನ್ನೂ ಆಕ್ರಮಿಸಿದ. ದೈಹಿಕವಾಗಿ ಬಲಗುಂದುತ್ತಿದ್ದ ನರಸಿಂಹ ಶತ್ರುಗಳನ್ನು ಹಿಮ್ಮೆಟ್ಟಿಸುವ ಜವಾಬ್ದಾರಿಯನ್ನು ತನ್ನ ಸೇನಾನಿಯಾದ ನರಸನಾಯಕನಿಗೆ ಒಪ್ಪಿಸಿದ. 1491ರಲ್ಲಿ ನರಸಿಂಹ ಸತ್ತ ಬಳಿಕ ನರಸನಾಯಕ ಆತನ ಅಪ್ರಾಪ್ತವಯಸ್ಕರಾದ ಮಕ್ಕಳ ಪ್ರತಿನಿಧಿಯಾಗಿ ಆಡಳಿತಸೂತ್ರವನ್ನು ವಹಿಸಿಕೊಂಡು ನರಸಿಂಹನ ಹಿರಿಯ ಮಗ ತಿಮ್ಮನನ್ನು ಸಿಂಹಾಸನದ ಮೇಲೆ ಕೂರಿಸಿದ. ಆದರೆ ಆತ ಕುತಂತ್ರಗಳಿಗೆ ಬಲಿಯಾಗಿ ಕೊಲ್ಲಲ್ಪಟ್ಟ. ಅನಂತರದ ಸರದಿ ಎರಡನೆಯ ಮಗನಾದ ಎರಡನೆಯ ನರಸಿಂಹನದು. ಅನಿರೀಕ್ಷಿತವಾಗಿ ಈತ ನರಸನಾಯಕನನ್ನು ವಿರೋಧಿಸಿದ. ಪರಿಣಾಮವಾಗಿ ಈತನನ್ನು ಪೆನುಕೊಂಡೆಗೆ ಸಾಗಿಸಿ ಅಲ್ಲಿ ಸೆರೆಮನೆಯಲ್ಲಿಡಲಾಯಿತು.

ಸರ್ವಾಧಿಕಾರಿಯಾದ ನರಸನಾಯಕ ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳ ದಂಗೆಕೋರರನ್ನು ಅಡಗಿಸಿದ. ಈ ವೇಳೆಗಾಗಲೇ ಬಹಮನಿ ಯಲ್ಲಿ ಆಂತರಿಕ ಕಲಹಗಳುಂಟಾಗಿದ್ದವು. ಅವುಗಳ ಪ್ರಯೋಜನ ಪಡೆದು ರಾಯಚೂರು, ಮುದಗಲ್ಲು ಕೋಟೆಗಳನ್ನು ಆಕ್ರಮಿಸಿದ. ಗಜಪತಿ ಪ್ರತಾಪರುದ್ರನನ್ನು ಸೋಲಿಸಿ ಹಿಂದಕ್ಕೆ ಓಡಿಸಿದ. ಇವನಿಗೆ ರಾಜ್ಯವನ್ನು ಬಲವಂತವಾಗಿ ಕಸಿದುಕೊಂಡನೆಂಬ ಅಪಖ್ಯಾತಿ ಬಂದರೂ ವಾಸ್ತವಿಕವಾಗಿ ಈತ ರಾಜ್ಯಕ್ಕೆ ಒಳಿತನ್ನು ಮಾಡಿದ. ಮೊದಲಿನ ಸ್ಥೈರ್ಯ ಈಗ ಮತ್ತೊಮ್ಮೆ ಕಾಣಿಸಿಕೊಂಡಿತು. ಖ್ಯಾತಿ ಹೆಚ್ಚಿತು.

ನರಸನಾಯಕ 1503ರಲ್ಲಿ ಮಡಿದ. ಇವನ ಮಗ ವೀರನರಸಿಂಹ ತಂದೆಯ ಅಧಿಕಾರಗಳನ್ನು ಪಡೆದ. ಸಾಳುವ ಇಮ್ಮಡಿ ನರಸಿಂಹ ಸ್ವತಃ ಆಳಬಲ್ಲವನಾಗಿದ್ದರೂ ವೀರನರಸಿಂಹ ಅವನನ್ನು ಹಿಂದಕ್ಕೆ ಸರಿಸಿ 1505ರಲ್ಲಿ ಆತನನ್ನು ಕೊಲ್ಲಿಸಿದ. ಅಂದಿನಿಂದ ತುಳುವ ಮನೆತನದ ಆಳಿಕೆ ಆರಂಭವಾಯಿತು. 1505ರಿಂದ 1509ರ ವರೆಗೆ ವೀರನರಸಿಂಹ ಆಳಿದ. ರಾಜ್ಯದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡ ಅನಿಶ್ಚಿತ ಘಟನೆಗಳು ಶೈಥಿಲ್ಯಕ್ಕೆ ಎಡೆಗೊಟ್ಟವು. ಬಹಮನಿಯ ಯೂಸುಫ್ ಆದಿಲ್‍ಖಾನನು ರಾಯಚೂರು ಮುದಗಲ್ಲುಗಳನ್ನು ಪುನಃ ಪಡೆದುಕೊಂಡನಾದರೂ ವೀರನರಸಿಂಹ ಅವುಗಳನ್ನು ಮತ್ತೊಮ್ಮೆ ಸಾಧಿಸಿಕೊಂಡ. ಪೋರ್ಚುಗೀಸರ ಸ್ನೇಹ ಸಂಪಾದಿಸಿ ಉತ್ತಮವಾದ ಅಶ್ವಗಳನ್ನು ಅವರಿಂದ ಖರೀದಿಸಿದ. ಸೈನಿಕರಿಗೆ ಯುದ್ಧಕಲೆಯಲ್ಲಿ ವಿಶಿಷ್ಟ ತರಬೇತಿ ನೀಡಿದ. 1509ರಲ್ಲಿ ವೀರನರಸಿಂಹ ಮರಣಹೊಂದಿದ. ಆತನ ಮಲಸೋದರ ಕೃಷ್ಣದೇವರಾಯ ಪಟ್ಟಕ್ಕೆ ಬಂದ. ವಿಜಯನಗರದ ಅರಸರಲ್ಲಿ ಅತಿಶ್ರೇಷ್ಠನೂ ಭಾರತದ ಇತಿಹಾಸದಲ್ಲಿಯೇ ಖ್ಯಾತಿವೆತ್ತವನೂ ಆದ ಈತ ಕೇವಲ 20 ವರ್ಷಗಳ ಕಾಲ ಆಳಿದರೂ ಆ ಅಲ್ಪಕಾಲದಲ್ಲಿಯೇ ಸಾಮ್ರಾಜ್ಯದ ಕೀರ್ತಿ ದೇಶಾದ್ಯಂತ ಹರಡಲು ಕಾರಣನಾದ. ಪಟ್ಟಕ್ಕೆ ಬಂದಾಗ ರಾಜ್ಯದ ವಾತಾವರಣ ಉತ್ತೇಜಕವಾಗಿರಲಿಲ್ಲ. ನಿರಂತರ ಕದನಗಳಲ್ಲಿ ತೊಡಗಿದ್ದ ಅರಸರು ಪ್ರಜೆಗಳಿಂದ ಅನೇಕ ಕರಗಳನ್ನು ಪಡೆಯುತ್ತಿದ್ದರು. ಶ್ರೀರಂಗಪಟ್ಟಣದ ಸುತ್ತಲಿನ ಪ್ರದೇಶದಲ್ಲಿ ಅಧಿಕಾರ ದಲ್ಲಿದ್ದ ಉಮ್ಮತ್ತೂರಿನ ಪಾಳೆಯಗಾರರು ದಂಗೆ ಎದ್ದಿದ್ದರು. ಬಹುಮನೀ ರಾಜ್ಯದಲ್ಲಿ ಈ ವೇಳೆಗೆ ಒಡಕು ಕಂಡುಬಂದು ಅಂತಿಮವಾಗಿ ಅದು ಐದು ಸ್ವತಂತ್ರ ಪಾಳೆಯಪಟ್ಟುಗಳಾಗಿ ಒಡೆದರೂ ಬಿಜಾಪುರದ ಯೂಸುಫ್ ಆದಿಲ್‍ಖಾನನು ವಿಜಯನಗರದ ಮೇಲೇರಿ ಬರಲು ಕಾದಿದ್ದ. ಗಜಪತಿಯಂತೂ ಉದಯಗಿರಿ ಮುಂತಾದ ಈಶಾನ್ಯಭಾಗದ ಕೋಟೆಗಳನ್ನು ಆಕ್ರಮಿಸಿಕೊಂಡೇ ಇದ್ದ. ಪಶ್ಚಿಮತೀರದಲ್ಲಿ ಪೋರ್ಚುಗೀಸರು ಪ್ರಬಲರಾಗಿದ್ದರು.

ಇಂತಹ ಸಂದರ್ಭದಲ್ಲಿ ರಾಜ್ಯಸೂತ್ರಗಳನ್ನು ಹಿಡಿದ ಅರಸ ಚಾಕಚಕ್ಯತೆಯಿಂದ ತನ್ನ ನೀತಿಯನ್ನು ರೂಪಿಸಿಕೊಂಡ. ಪ್ರಜೆಗಳ ಕರಭಾರವನ್ನು ಕಡಿಮೆ ಮಾಡಲೆಂದು ರಾಜ್ಯಾದ್ಯಂತ ಮದುವೆಯ ಮೇಲೆ ವಿಧಿಸಲಾಗಿದ್ದ ತೆರಿಗೆಯನ್ನು, ಇತರ ಕೆಲವು ತೆರಿಗೆಗಳನ್ನು ತೆಗೆದುಹಾಕಿದ. ಪ್ರಾಂತಾಧಿಕಾರಿಗಳು, ಸಾಮಂತನಾಯಕರು ನಿಶ್ಚಿತಗೊಳಿಸಿದ ಸಂಖ್ಯೆಯ ಸೈನಿಕ ಬಲವನ್ನು ಕೇಂದ್ರಕ್ಕೆ ಒದಗಿಸಿಕೊಡುವಂತೆ ಕಡ್ಡಾಯಮಾಡಿದ. ಬೀಳುಬಿದ್ದಿದ್ದ ಭೂಮಿಗಳನ್ನೆಲ್ಲ ಸಾಗುವಳಿಗೆ ಅಣಿಗೊಳಿಸಿ ಪ್ರಜೆಗಳ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವಂತಹ ಕಾರ್ಯಕ್ರಮಗಳನ್ನು ಕೈಗೊಂಡ. ಪೋರ್ಚುಗೀಸ ರೊಡನೆ ಸ್ನೇಹ ಬೆಳೆಸಿದ. ಇದರಿಂದ ಆತ ತೀರಪ್ರದೇಶದ ಕೆಲವು ಭಾಗಗಳನ್ನು ಅವರು ವಶಪಡಿಸಿಕೊಳ್ಳುವುದನ್ನು ನಿಸ್ಸಹಾಯಕವಾಗಿ ನೋಡುತ್ತಿರಬೇಕಾಯಿತಾದರೂ ಹೊರಗಿನ ಶತ್ರುಗಳ ದಮನಕ್ಕೆ ಪೋರ್ಚು ಗೀಸರಿಂದ ಸರಬರಾಜಾಗುತ್ತಿದ್ದ ಅಶ್ವಬಲ ಹೆಚ್ಚು ಆವಶ್ಯಕವಾಯಿತು. ಪೋರ್ಚುಗೀಸರು ಬಿಜಾಪುರದ ಸುಲ್ತಾನನ ವಿರುದ್ಧ ಹೋರಾಡಿ ಅಂತಿಮವಾಗಿ ಗೋವೆಯನ್ನು ಸ್ವಾಧೀನಪಡಿಸಿಕೊಂಡರು. ಕೃಷ್ಣದೇವರಾಯ ಉಮ್ಮತ್ತೂರಿನ ಪಾಳೆಯಗಾರರನ್ನು ಸೋಲಿಸಿ ಶ್ರೀರಂಗಪಟ್ಟಣ, ಶಿವಸಮುದ್ರಗಳನ್ನು ಆಕ್ರಮಿಸಿ, ಅಲ್ಲಿನ ಆಡಳಿತವನ್ನು ನೆಚ್ಚಿನ ಅಧಿಕಾರಿಗಳಿಗೆ ವಹಿಸಿದ. ಬಹಮನೀ ಸುಲ್ತಾನನಾದ ಮಹಮೂದ್ I ದುರ್ಬಲಗೊಳ್ಳುತ್ತಿದ್ದ ರಾಜ್ಯವನ್ನು ಉಳಿಸಿಕೊಳ್ಳಲು ಜೇಹಾದ್‍ನ ನೆಪದಲ್ಲಿ ವಿಜಯನಗರದ ವಿರುದ್ಧ ದಂಡೆತ್ತಿದ. ಬಿಜಾಪುರದ ಯೂಸುಫ್ ಆದಿಲ್‍ಖಾನನು ಇವನೊಡಗೂಡಿದ. ಆದರೆ ಬಹಮನೀ ಸೈನ್ಯವನ್ನು ಎರಡು ಬಾರಿ ಸೋಲಿಸಿದ ರಾಯ ಅವನನ್ನು ಬೆನ್ನತ್ತಿದ. ಯೂಸುಫ್ ಕದನದಲ್ಲಿ ಅಸುನೀಗಿದ (1510). 1523ರಲ್ಲಿ ಇನ್ನೊಮ್ಮೆ ರಾಯ ಗುಲ್ಬರ್ಗದ ವರೆಗೂ ಹೋಗಿ ಅಲ್ಲಿ ಮಹಮೂದನ ಮೂವರು ಮಕ್ಕಳನ್ನು ಸೆರೆ ಯಿಂದ ಬಿಡಿಸಿ, ಹಿರಿಯನನ್ನು ಸುಲ್ತಾನನ ಪಟ್ಟಕ್ಕೇರಿಸಿ, ಇನ್ನಿಬ್ಬರನ್ನು ತನ್ನೊಡನೆ ರಾಜಧಾನಿಗೆ ಕರೆತಂದು ಅವರನ್ನು ಪ್ರೀತಿ ಗೌರವಗಳಿಂದ ಕಂಡ. ಯವನರಾಜ್ಯಸ್ಥಾಪನಾಚಾರ್ಯನೆಂಬ ಬಿರುದನ್ನು ಪಡೆದ. ಬಿಜಾಪುರದಲ್ಲಿ ಯೂಸುಫ್‍ನ ಮಗ ಇಸ್ಮಾಯಿಲ್ ಅಧಿಕಾರಕ್ಕೆ ಬಂದ. ರಾಯಚೂರು-ಮುದಗಲ್ಲು ಕೋಟೆಗಳು ಈತನ ವಶದಲ್ಲಿದ್ದವು. ಅದನ್ನು ಮರಳಿ ಪಡೆಯಲು ರಾಯ 1520ರಲ್ಲಿ ರಾಯಚೂರನ್ನು ಮುತ್ತಿದ. ಭೀಕರ ಕದನದಲ್ಲಿ ಪೋರ್ಚುಗೀಸರ ತುಪಾಕಿಗಳ ನೆರವಿನಿಂದ ಕೋಟೆಯನ್ನು ವಶಪಡಿಸಿಕೊಂಡ. ಇನ್ನೂ ಎರಡು ಬಾರಿ ಈ ಶತ್ರುಗಳು ಕದನ ಹೂಡಿದರು. 1523ರಲ್ಲಿ ಸಾಗರದಲ್ಲಿ ನಡೆದ ಅಂತಿಮ ಕದನದಲ್ಲಿ ಇಸ್ಮಾಯಿಲ್ ಸೋತ.

ರಾಯ ಹೂಡಿದ ಕದನಗಳಲ್ಲಿ ವಿಶಿಷ್ಟವಾದುದು ಆತನ ಒರಿಸ್ಸದ ದಂಡಯಾತ್ರೆ. ಅಲ್ಲಿಯ ಗಜಪತಿ ಅರಸರು ವಿಜಯನಗರದ ವಿರುದ್ಧ ಸೆಣಸುತ್ತಿದ್ದರು. ದೇಶದ ಸ್ವಾತಂತ್ರ್ಯ, ಧರ್ಮ, ಸಂಸ್ಕøತಿಗಳಿಗೆ ಧಕ್ಕೆಯುಂ ಟಾಗಿದ್ದ ಸಂದರ್ಭದಲ್ಲಿ ಹಿಂದುವೇ ಆಗಿದ್ದ ಗಜಪತಿ, ಮಿತ್ರರಾಗಿರುವ ಬದಲು ಶತ್ರುತ್ವವನ್ನು ಬೆಳಸಿದುದು ನಾಡಿಗೆ ಹಿತಕರವಾಗಿರಲಿಲ್ಲ. ಎಂತಲೇ ಅವರಿಗೆ ಪಾಠ ಕಲಿಸಲೆಂದೇ ಕೃಷ್ಣದೇವರಾಯ ತನ್ನ ದಂಡಯಾ ತ್ರೆಗೆ ಸಕಲ ಸನ್ನಾಹಗಳನ್ನೂ ಮಾಡಿಕೊಂಡು, ಅಚ್ಚುಕಟ್ಟಾದ ರೀತಿಯಲ್ಲಿ ಐದು ಘಟ್ಟಗಳಲ್ಲಿ ಗಜಪತಿಯನ್ನು ಸೋಲಿಸಿದ. 1513ರಲ್ಲಿ ಉದಯಗಿರಿ, 1517ರಲ್ಲಿ ಕೊಂಡವೀಡು, ಕಂದುಕೂರು, ವಿನುಕೊಂಡ, ನಾಗಾರ್ಜುನ ಕೊಂಡ, 1517ರಲ್ಲಿ ವಿಜಯವಾಡ ಮತ್ತು ಕೊಂಡಪಲ್ಲಿಗಳನ್ನು ಗೆದ್ದು ಸಿಂಹಾಚಲಕ್ಕೆ ಹೋಗಿ, ಪೋತನೂರಿನಲ್ಲಿ ವಿಜಯಸ್ತಂಭವನ್ನು ನೆಟ್ಟು ಅಂತಿಮವಾಗಿ ಗಜಪತಿಯ ರಾಜಧಾನಿಯಾದ ಕಟಕ್ ನಗರವನ್ನು ಮುತ್ತಿ ಪ್ರತಾಪರುದ್ರನನ್ನು ಸಂಪೂರ್ಣವಾಗಿ ಸೋಲಿಸಿದ. ಆತನ ಮಗಳಾದ ಜಗನ್ಮೋಹಿನಿಯನ್ನು ಮದುವೆಯಾದ. ಪ್ರತಾಪರುದ್ರ ಮಿತ್ರನಾಗಿರುವುದು ಹಿತವೆಂದು ಆತನಿಗೆ ಬೋಧಿಸಿ ಆತನ ರಾಜ್ಯವನ್ನು ಆತನಿಗೇ ಉದಾರವಾಗಿ ಹಿಂದಿರುಗಿಸಿದ. ಗೋಲ್ಕೊಂಡದ ಕುತುಬ್ ಷಾಹಿ ಸುಲ್ತಾನನು ಈ ಸಂದರ್ಭದ ಪ್ರಯೋಜನ ಪಡೆದು ಒರಿಸ್ಸದ ಮೇಲೆ ದಾಳಿ ನಡೆಸಿದಾಗ ಆತನನ್ನು ಸೋಲಿಸಿ ಹಿಂದಕ್ಕೆ ಅಟ್ಟಿದ. ದಕ್ಷಿಣದಲ್ಲಿ ಸಿಂಹಳ ದ್ವೀಪದಲ್ಲಿ ಎದ್ದಿದ್ದ ದಂಗೆಯನ್ನಡಗಿಸಿ ವಿಜಯ ಬಾಹುವಿನ ಮಗನಾದ ಭುವನೈಕಬಾಹುವನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಿದ.

ಈ ಅರಸನ ಅಂತಿಮ ದಿನಗಳು ದುಃಖದಾಯಕವಾಗಿದ್ದುವು. ಆರು ವರ್ಷದ ಮಗ ತಿರುಮಲನಿಗೆ ಯುವರಾಜ ಪದವಿ ನೀಡಿದ್ದ. ಆದರೆ ಆತ ಒಂದು ವರ್ಷದೊಳಗೇ ಮಡಿದ. ರಾಯನ ನೆಚ್ಚಿನ ಸೇನಾನಿಯಾದ ಅಮಾತ್ಯ ಸಾಳುವ ತಿಮ್ಮರಸನ ಮಗ ತಿಮ್ಮ ದಂಡನಾಯಕ ಗುತ್ತಿಯ ಕೋಟೆಯಲ್ಲಿ ಕುತಂತ್ರಕ್ಕೊಳಗಾಗಿ ಬಂಧಿಸಲ್ಪಟ್ಟ. ಅಲ್ಲಿಂದ ಆತ ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲನಾದ. ಕುಪಿತಗೊಂಡ ಅರಸ ತಂದೆಮಕ್ಕಳಿಬ್ಬರ ಕಣ್ಣುಗಳನ್ನು ಕೀಳಿಸಿದ ಎಂಬುದು ನ್ಯೂನಿಜ್‍ನ ಹೇಳಿಕೆ. ಇದರ ಸತ್ಯಾಸತ್ಯತೆಯನ್ನು ಕುರಿತು ವಾದಗಳಿವೆ. ಹೇಗೇ ಇದ್ದರೂ ಇತಂಹ ಒಂದು ಘಟನೆ ಅರಸನನ್ನು ಘಾಸಿಗೊಳಿಸಿತು. ಆತ ಸ್ವಾಸ್ಥ್ಯಕಳೆದುಕೊಂಡು 1529 ನವಂಬರ್‍ನಲ್ಲಿ ಮರಣಹೊಂದಿದ. (ಜಿ.ಬಿ.ಆರ್.)

ಈ ಅರಸನ ಕಾಲದಲ್ಲಿ ಅನೇಕರು ಯಾತ್ರಾರ್ಥಿಗಳಾಗಿ ವಿಜಯನಗರಕ್ಕೆ ಬಂದಿದ್ದರು. ಅವರಲ್ಲಿ ಪೋರ್ಚುಗೀಸರಾದ ಬಾರ್ಬೋಸ ಮತ್ತು ಡೊಮಿಂಗೊ ಪೇಯಿಸ್ ಪ್ರಮುಖರು. ಬಾರ್ಬೋಸ ಬಹುಮಟ್ಟಿಗೆ ಪೀಡ್ರೋ ಅಲ್ವಾರಿಸ್ ಕಾಟ್ರರ್ಲ್ ನೌಕಾಪಡೆಯೊಡನೆ ಸು. 1500ರಲ್ಲಿ ಭಾರತಕ್ಕೆ ಬಂದಂತೆ ತೋರುತ್ತದೆ. ಇಲ್ಲಿ ಮಲಯಾಳ ಭಾಷೆಯನ್ನು ಚೆನ್ನಾಗಿ ಕಲಿತ ಈತ ಆಲ್ಬುಕರ್ಕ್‍ನ ದುಭಾಷಿಯಾಗಿ ಕಣ್ಣಾನೂರು ಮತ್ತು ಕೊಚ್ಚಿನ್‍ಗಳ ಅರಸರೊಡನೆ ಮಾತುಕತೆ ನಡೆಸಿದ್ದ. ಇಲ್ಲಿ ಈತನಿಗೆ ಕೆಲಸದಲ್ಲಿ ಬಡ್ತಿ ಸಿಕ್ಕದ ಕಾರಣ ನಿರಾಶನಾಗಿ 1519ರಲ್ಲಿ ಮರುಪ್ರಯಾಣ ಮಾಡಿದ. ಈತ 1521ರಲ್ಲಿ ಫಿಲಿಪೀನ್ಸ್‍ನ ಸೆಬುದ್ವೀಪಕ್ಕೆ ಬಂದಾಗ ಅಲ್ಲಿಯ ರಾಜನಿಂದ ಕೊಲ್ಲಿಸಲ್ಪಟ್ಟ. ಸು. 1515ರ ವೇಳೆಗೆ ಈತ ಪೋರ್ಚುಗೀಸ್ ಭಾಷೆಯಲ್ಲಿ ಬರೆದಿಟ್ಟ ಪ್ರವಾಸಕಥನವನ್ನು 1563ರಲ್ಲಿ ರಾಮುಸ್ಸಿಬೋ ಇಟಲಿ ಭಾಷೆಗೆ ಅನುವಾದಿಸಿದ. ಈ ಶತಮಾನದ ಆರಂಭದಲ್ಲಿ ಮಾನ್ಸೆಲ್ ಲಾಂಗ್‍ವರ್ತ್ ಡೇಮ್ಸ್ ಎಂಬಾತ ನೂ 1867ರಲ್ಲಿ ಹೆನ್ರಿ ಸ್ಟಾನ್ಲಿ ಎಂಬಾತನೂ ನೇರವಾಗಿ ಆಂಗ್ಲಭಾಷೆಗೆ ಅನುವಾದಿಸಿ ಪ್ರಕಟಿಸಿದರು. ಈತ ಹಿಂದುಗಳನ್ನು ಜಂಟೈಲ್‍ಗಳೆಂದೂ ಮಹಮ್ಮದೀಯರನ್ನು ಮೂರ್‍ರೆಂದೂ ಕರೆದಿದ್ದಾನೆ. ವಿಜಯನಗರವನ್ನು ನರಸಿಂಗ ಮಹಾರಾಜ್ಯ ಎಂದೂ ಹೆಸರಿಸಿದ. ಈತ ಈ ರಾಜ್ಯ ಶ್ರೀಮಂತಿಕೆ ಯಿಂದ ಕೂಡಿದ್ದು ಧನಧಾನ್ಯಗಳಿಂದ ಕೂಡಿದ ನಗರಗಳೂ ಪಟ್ಟಣಗಳೂ ಇಲ್ಲಿವೆ; ಬೇಕಾದಷ್ಟು ವ್ಯಾಪಾರ, ರಫ್ತು ಆಮದುಗಳೂ ಇಲ್ಲಿ ನಡೆಯುತ್ತವೆ ಎಂದಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಮಿರ್ಜಾನ್, ಭಟ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಮಯಮೂರು (ಬೈಂದೂರು), ಬಾರಕೂರು, ಬಸರೂರು ಮುಂತಾದ ಊರುಗಳ ವರ್ಣನೆಯನ್ನು ಇವನ ಬರೆಹದಲ್ಲಿ ಕಾಣಬಹುದು. ಬಿಜನಗರ್ ರಾಜ್ಯದ ಒಳನಾಡಿನ ದೊಡ್ಡ ನಗರ. ರಾಜ ಇಲ್ಲಿ ವಾಸಿಸುತ್ತಾನೆ. ಇವನನ್ನು ರಾಹೆನಿ (ರಾಯ) ಎಂದು ಕರೆಯುತ್ತಾರೆ. ಇಲ್ಲಿಗೆ ತಾಮ್ರ, ಪಾದರಸ, ಸಿಂಧೂರ, ಕೇಸರಿ, ಗುಲಾಬಿ, ಅತ್ತರು, ಅಫೀಮು ಇತ್ಯಾದಿಗಳು ಬರುತ್ತವೆ. ಅಗಾಧವಾಗಿ ಮೆಣಸನ್ನು ಉಪಯೋಗಿಸುತ್ತಾರೆ. ಪರ್ದೊ (ಪ್ರತಾಪ?) ಎಂಬ ನಾಣ್ಯ ಚಲಾವಣೆಯಲ್ಲಿದೆ. ರಾಜ ಆಡಳಿತವನ್ನು ರಾಜ್ಯಪಾಲಕರುಗಳಿಗೆ ವಹಿಸಿ ತಾನು ರಾಜಧಾನಿಯಲ್ಲಿ ಸುಖವಾಗಿರುತ್ತಾನೆ. ಅರಮನೆಯ ಊಳಿಗಕ್ಕೆ ರಾಜ್ಯದಲ್ಲೆಲ್ಲ ಆರಿಸಿದ ರೂಪವತಿಯರನ್ನು ನೇಮಿಸಿಕೊಳ್ಳುತ್ತಾರೆ. ರಾಜನ ಅಶ್ವದಳ, ಕಾಲುದಳಗಳಿಗೆ ಹತ್ತು ಲಕ್ಷ ಜನರಿದ್ದಾರೆ. ಯುದ್ಧಕ್ಕೆ ಹೋದಾಗ ಸೈನಿಕರ ಸಂಖ್ಯೆಗನುಗುಣವಾಗಿ ಸ್ತ್ರೀಯರನ್ನು ಕಳಿಸುತ್ತಾರೆ. ಬ್ರಾಹ್ಮಣರನ್ನು ಜನ ಗೌರವಿಸುತ್ತಾರೆ, ಇವೇ ಮುಂತಾದ ಅಂದಿನ ಸಮಾಜದ ವಿವರಗಳು ಈತನ ಬರೆವಣಿಗೆಗಳಿಂದ ಲಭಿಸುತ್ತವೆ.

ಡೊಮಿಂಗೊ ಪೇಯಿಸ್ ಕೃಷ್ಣದೇವರಾಯನ ಕಾಲದಲ್ಲಿ(1520) ವಿಜಯನಗರಕ್ಕೆ ಬಂದಿದ್ದ. ಇವನ ಬರೆಹಗಳು ವಿಜಯನಗರ ಸಾಮ್ರಾಜ್ಯದ ಇತಿಹಾಸಕ್ಕೆ ಬಹಳ ಉಪಯುಕ್ತವಾಗಿವೆ. ಈತನೂ ಅನಂತರ ಬಂದ ನ್ಯೂನಿಜನೂ ಪೋರ್ಚುಗೀಸರೇ. ಈ ಇಬ್ಬರೂ ಬರೆದಿಟ್ಟಿದ್ದನ್ನು ಡೇವಿಟ್ ಲೋಪ್ 1897ರಲ್ಲಿ ಡೋಸ್ ರೈಸ್-ದೆ-ಬಿಸ್ನಾಗ ಎಂಬ ಪುಸ್ತಕದಲ್ಲಿ ಪ್ರಕಟಿಸಿದ. ಇವರು ಬರೆದ ವೃತ್ತಾಂತಗಳನ್ನು ಗೋವಾದಿಂದ ಪೋರ್ಚು ಗಲ್‍ಗೆ ಕಳುಹಿಸಿದಾತನ ಹೆಸರು ಗೊತ್ತಿಲ್ಲ. ಆತ ಅದನ್ನು ಲಿಸ್ಬನ್‍ನ ಪ್ರಸಿದ್ಧ ಇತಿಹಾಸಕಾರನಾದ ಬರೂಷನಿಗೆ ಕಳಿಸಿದ. ಪೇಯಿಸ್ ಸಹ ವಿಜಯನಗರವನ್ನು ನರಸಿಂಗನ ರಾಜ್ಯವೆಂದು ಕರೆದಿದ್ದಾನೆ. ಇತರರಂತೆ ಈತನೂ ಇಲ್ಲಿಯ ರೇವುಪಟ್ಟಣಗಳಾದ ಅಂಕೋಲ, ಮಿರ್ಜಾನ್, ಹೊನ್ನಾವರ, ಭಟ್ಕಳ, ಮಂಗಳೂರು, ಬಸರೂರು, ಬಾರಕೂರುಗಳ ಪ್ರಸ್ತಾಪ ಮಾಡಿದ್ದಾನೆ. ಬಿಸ್ನಗರದ (ವಿಜಯನಗರ) ವರ್ಣನೆ ಇವನ ಬರೆಹದಲ್ಲಿದೆ. ರಾಜ ತನ್ನ ಮಡದಿಯ ಹೆಸರಿನಲ್ಲಿ ಹೊಸ ನಗರವನ್ನು (ನಾಗಲಾಪುರ) ಕಟ್ಟಿಸಿದುದನ್ನು ತಿಳಿಸಿದ್ದಾನೆ. ಅರಸನನ್ನು ಸ್ವತಃ ಕಂಡಿದ್ದ ಈತ ಅವನನ್ನು ಸುಮಾರು ಎತ್ತರವಾಗಿದ್ದು ಲಕ್ಷಣವಾಗಿದ್ದಾನೆ; ಮೈ ಸ್ಥೂಲವಾಗಿದೆ ಎಂದು ಹೇಳಬಹುದು. ಮುಖದ ಮೇಲೆ ಸಿಡುಬಿನ ಕಲೆಗಳಿರುವಂತೆ ಕಾಣುತ್ತವೆ. ಹಸನ್ಮುಖನಾಗಿ ಉಲ್ಲಾಸದಿಂದಿರುತ್ತಾನೆ. ದೊರೆಯನ್ನು ಕಿಸ್ನರಾವ್ ಮಕಾಗಾವ್ (ಕೃಷ್ಣರಾಯ ಮಹಾರಾಯ) ರಾಜಾಧಿರಾಜ, ಮಹಾಮಂಡಲೇಶ್ವರ, ಮೂರು ಸಮುದ್ರಗಳಿಗೊಡೆಯ ಇತ್ಯಾದಿಯಾಗಿ ಹೊಗಳುತ್ತಾರೆ ಎಂದೆಲ್ಲ ವರ್ಣಿಸಿದ್ದಾನೆ. ಈ ನಗರದ ಜನಸಂಖ್ಯೆ ಹೇಳಲಸಾಧ್ಯವಾದುದೆಂದೂ ಆತ ನೋಡಿದಷ್ಟು ಭಾಗವೇ ರೋಮ್ ನಗರದಷ್ಟಿತ್ತೆಂದೂ ಹೇಳಿದ್ದಾನೆ. ಮಾರುಕಟ್ಟೆಯಲ್ಲಿ ಸಿಗುವ ಆಹಾರ ಸಾಮಗ್ರಿ, ತರಕಾರಿ ಹಾಗೂ ಮಾಂಸಗಳಿಗೆ ಅತಿ ಕಡಿಮೆ ಬೆಲೆಗಳನ್ನು ಸೂಚಿಸಿದ್ದಾನೆ. ದಸರ ಹಬ್ಬದ ಒಂಬತ್ತು ದಿನಗಳಲ್ಲಿ ನಡೆಯುವ ವೈಭವಗಳನ್ನು ವಿವರಿಸಿದ್ದಾನೆ. ದಸರೆಯ ಹಬ್ಬವನ್ನು ಅರಸನೂ ಪ್ರಜೆಗಳೂ ಸಂಭ್ರಮದಿಂದ ಆಚರಿಸುತ್ತಿದ್ದರು. ಅಂದು ಸಾಮಂತರು, ಅಧಿಕಾರಿಗಳು, ರಾಯಭಾರಿಗಳು, ಅರಸನಿಗೆ ಗೌರವ ಸಲ್ಲಿಸಿ ನಿಷ್ಠೆಯನ್ನು ತೋರಿಸುತ್ತಿದ್ದರು.

ಒರಿಸ್ಸದ ವಿಜಯವನ್ನು ಸೂಚಿಸಲೆಂಬಂತೆ ಮಹಾನವಮಿ ದಿಬ್ಬವನ್ನು ಕಟ್ಟಿಸಿದ ಅನಂತರ ನವರಾತ್ರಿಯ ಉತ್ಸವಗಳೂ ವಿಶೇಷ ಸಮಾರಂಭಗಳೂ ಇಲ್ಲಿಯೇ ನೆರವೇರುತ್ತಿದ್ದುವು. ಅರಸ ರಾಜ್ಯದ ತೀರ್ಥಕ್ಷೇತ್ರಗಳಿಗೆ ಅಪರಿಮಿತವಾದ ದಾನಗಳನ್ನು ಮಾಡಿದ. ರಾಜಧಾನಿಯಲ್ಲೂ ಹೊರಗಡೆಯೂ ನೂತನ ದೇವಾಲಯಗಳನ್ನು ಕಟ್ಟಿಸಿದುದಲ್ಲದೆ, ಮೊದಲಿನ ದೇವಾಲಯಗಳಲ್ಲಿ ನೂತನ ಸಭಾಮಂಟಪ, ನೃತ್ಯಮಂಟಪ ಮುಂತಾದವುಗಳನ್ನು ಸೇರಿಸಿ, ಚೋಳರ ದೇವಾಲಯಗಳಲ್ಲಿ ಆ ಮೊದಲು ಕಂಡುಬಂದಂತಹ ಗೋಪುರಗಳನ್ನು ದೇವಾಲಯದ ದ್ವಾರದಲ್ಲಿ ಹೆಚ್ಚು ಕಲಾತ್ಮಕವಾಗಿ, ಭವ್ಯವಾಗಿ, ಉನ್ನತವಾಗಿ ಕಟ್ಟಿಸಿದ. ಇಂತಹ ಗೋಪುರ ಗಳು ಅನಂತರ ರಾಯಗೋಪುರಗಳೆಂದೇ ಹೆಸರಾದುವು. ಕಲೆ, ಸಾಹಿತ್ಯ ಗಳಿಗೂ ಈತ ಹೆಚ್ಚಿನ ಪ್ರೋತ್ಸಾಹ ನೀಡಿದ. ಅಷ್ಟದಿಗ್ಗಜರು ಈತನ ಆಸ್ಥಾನವನ್ನು ಅಲಂಕರಿಸಿದ್ದರು. ಸಂಸ್ಕøತ, ಕನ್ನಡ, ತೆಲುಗು, ತಮಿಳು ಭಾಷೆಗಳಿಗೆ ಸಮಾನವಾದ ಸ್ಥಾನಮಾನಗಳನ್ನು ನೀಡಿದ್ದ ಈತ ಸ್ವತಃ ಕವಿ. ಆಮುಕ್ತಮಾಲ್ಯದಾ ಎಂಬ ತೆಲುಗು ಕೃತಿ ಈತನಿಂದ ರಚಿತವಾದದ್ದೆಂಬ ಹೇಳಿಕೆ ಇದೆ. ಆಂಧ್ರಕವಿತಾ ಪಿತಾಮಹನೆನಿಸಿದ ಅಲ್ಲಸಾನಿ ಪೆದ್ದನ, ನಂದಿ ತಿಮ್ಮಯ್ಯ, ತಿಮ್ಮಣ್ಣ ಕವಿ, ಗುಬ್ಬಿಯ ಮಲ್ಲಣ್ಣ, ವಿರುಪರಾಜ, ನಂಜುಂಡ, ಓದುವ ಗಿರಿಯ, ಚೇರಮಾಂಕ ಮುಂತಾದವರು ಈತನ ಕಾಲದ ತೆಲುಗು ಕನ್ನಡ ಕವಿಗಳು. ಅರಸನು ಮದಾಲಸಚರಿತೆ, ರಸಮಂಜರೀ ಮುಂತಾದ ಸಂಸ್ಕøತ ಗ್ರಂಥಗಳನ್ನು ರಚಿಸಿದ್ದಾನೆಂದು ಆಮುಕ್ತಮಾಲ್ಯದಾ ಕೃತಿಯಲ್ಲಿ ಹೇಳಿದೆ.

(ಸಿ.ಕೆ.ಎನ್.)

ಕೃಷ್ಣದೇವರಾಯನ ಮಲಸೋದರ ಅಚ್ಯುತರಾಯ. ಈತ 1529ರಲ್ಲಿ ಸಿಂಹಾಸನವನ್ನೇರಿದನಾದರೂ ದಾಯಾದಿಗಳ ವಿರೋಧವನ್ನು ಎದುರಿಸ ಬೇಕಾಯಿತು. ಕೃಷ್ಣದೇವರಾಯನ ಇನ್ನೊಬ್ಬ ಮಗನಿಗೆ ಆಗಿನ್ನೂ ಒಂದೂವರೆ ವರ್ಷ. ಆ ಮಗುವಿನ ಪರವಾಗಿ ಸೋದರಮಾವನಾದ ಹುಚ್ಚ ತಿರುಮಲ, ಅಳಿಯನಾದ ರಾಮರಾಯ ಈತನ ಪ್ರತಿಸ್ಪರ್ಧಿಗಳು. ಇವರ ಅಂತಃಕಲಹಗಳ ಸಮಯದಲ್ಲಿ ಬಿಜಾಪುರದ ಇಸ್ಮಾಯಿಲ್ ಎರಡು ಬಾರಿ ರಾಜಧಾನಿಯನ್ನು ಮುತ್ತಿದ. ಮೊದಲ ಬಾರಿ ರಾಯಚೂರು, ಮುದಗಲ್ಲು ಕೋಟೆಗಳು ಅವನ ವಶವಾದವು. ಆದರೆ ಕೊನೆಗೊಮ್ಮೆ ಅಚ್ಯುತರಾಯ ಅವನನ್ನು ಯಶಸ್ವಿಯಾಗಿ ಸೋಲಿಸಿದ. ಮತ್ತೊಮ್ಮೆ ಅಲ್ಲಲ್ಲಿ ದಂಗೆಗಳು ಕಾಣಿಸಿಕೊಂಡವು. ಕೃಷ್ಣದೇವರಾಯನ ಶಕ್ತಿ ಸಾಮಥ್ರ್ಯಗಳು ಈತನಿಗಿರಲಿಲ್ಲ. ಹೇಗೋ 1542ರ ವರೆಗೆ ಆಳಿದ. ಆನಂದನಿಧಿ ಎಂಬ ದತ್ತಿಯನ್ನು ಸ್ಥಾಪಿಸಿ ದಾನಧರ್ಮಗಳನ್ನು ಮಾಡಿದ ಯಶಸ್ಸು ಈತನದು.

ಅಚ್ಯುತರಾಯನ ಕಾಲದಲ್ಲಿ ವಿಜಯನಗರಕ್ಕೆ ಬಂದ ಇನ್ನೊಬ್ಬ ಪೋರ್ಚುಗೀಸ್ ಯಾತ್ರಿಕ ನ್ಯೂನಿಜ್. ಈತ ವಿಜಯನಗರಕ್ಕೆ ಬಂದುದು ಸು. 1536-37ರಲ್ಲಿ. ವಿಜಯನಗರದ ಪೂರ್ವೇತಿಹಾಸವನ್ನು ತಿಳಿಸಿರುವುದು ಈತನ ಬರೆವಣಿಗೆಯ ವೈಶಿಷ್ಟ್ಯ. ಈತನ ಬರೆವಣಿಗೆ ಸಹ ಗೋವಾದ ಒಬ್ಬ ಅನಾಮಿಕನಿಂದ ಲಿಸ್ಬನ್ನಿನ ಬರ್ರೂಷನಿಗೆ ತಲುಪಿತು. ಆದರೆ ಆ ಅನಾಮಿಕ ಇದನ್ನು ಲಿಸ್ಬನ್ನಿಗೆ ಕಳುಹಿಸುವಾಗ ಕುದುರೆ ವ್ಯಾಪಾರಕೋಸ್ಕರ ವಿಜಯನಗರಕ್ಕೆ (ಬಿಸ್ನಗ) ಹೋಗಿದ್ದು ಮೂರು ವರ್ಷಗಳ ಕಾಲ ಅಲ್ಲಿದ್ದ ಫರ್ನಾಂವ್ ನ್ಯೂನಿಜನಿಂದ ಆತ ಬರೆದಿಟ್ಟಿದುದನ್ನು ಪಡೆದುಕೊಂಡು ಕಳಿಸುತ್ತಿರುವುದಾಗಿ ಬರೆದಿದ್ದಾನೆ. ನ್ಯೂನಿಜನಿಗೆ ಕುದುರೆ ವ್ಯಾಪಾರದಿಂದ ಏನೂ ಗಿಟ್ಟಲಿಲ್ಲವಂತೆ.

ವಿಜಯನಗರದ ಅರಸರ ಹೆಸರುಗಳನ್ನು, ಇತರ ವಿವರಗಳನ್ನು ಕೊಡುವಲ್ಲಿ ನ್ಯೂನಿಜ್ ಎಡವಿದ್ದಾನೆ. ವಿಜಯನಗರದ ಮೊದಲ ಅರಸನನ್ನು ದೆಹೋರಾವ್ ಎಂದು ಕರೆದಿದ್ದಾನೆ. ವೈದಿಯಜುಗ (ವಿದ್ಯಾರಣ್ಯ) ಸ್ವಾಮಿಗಳು ಕಾಲವಾದ ಮೇಲೆ ಒಂದು ದೇವಸ್ಥಾನವನ್ನು ಆತ ಕಟ್ಟಿಸಿದ್ದಾನೆಂದಿದ್ದಾನೆ. ಅನಂತರ ಪಟ್ಟಕ್ಕೆ ಬಂದ ಬುಕರಾವ್ ಕೈ ತಪ್ಪಿಹೋಗಿದ್ದ ರಾಜ್ಯಗಳನ್ನು ಗೆದ್ದುದಲ್ಲದೆ ಒರಿಯ ರಾಜ್ಯವನ್ನು ಗೆದ್ದನಂತೆ, ಬುಕರಾವ್‍ನ ಮಗ ಅಜರಾವ್ ಎಂದಿದ್ದಾನೆ. ಇವೆಲ್ಲ ಗೊಂದಲಮಯವಾದ ಬರೆಹಗಳು. ಆದರೆ ಸಮಕಾಲೀನ ಮತ್ತು ಅದಕ್ಕೆ ಸ್ವಲ್ಪ ಹಿಂದಿನ ಘಟನೆಗಳನ್ನು ಕುರಿತು ಬರೆಯುವಲ್ಲಿ ಈತ ಹೆಚ್ಚು ನಂಬಿಕೆಗೆ ಅರ್ಹನಾಗಿದ್ದಾನೆ. ಸಾಳುವ ನರಸಿಂಹನನ್ನು ನರಸಿಂಗುವಾ ಎಂದು ಕರೆದು ಬಿಸ್ನಾಗರ ರಾಜ್ಯವನ್ನು ನರಸಿಂಗುವಾ ರಾಜ್ಯವೆಂದಿದ್ದಾನೆ. ಕೃಷ್ಣದೇವರಾಯನ ದಂಡಯಾತ್ರೆಗಳ ವಿವರಗಳನ್ನು ನೀಡಿದ್ದಾನೆ. ಅಚ್ಯುತರಾಯ ಅನೀತಿ ಮತ್ತು ದಬ್ಬಾಳಿಕೆಗಳಿಗೆ ಕೈಹಾಕಿದನು, ಪ್ರಾಮಾಣಿಕತೆ ಎನ್ನುವುದೇ ಇರಲಿಲ್ಲ. ಈತನ ನಡತೆಯ ಬಗ್ಗೆ ಯಾರಿಗೂ ಗೌರವವಿಲ್ಲ. ತನ್ನ ರಾಜ್ಯಭಾರದ ವಿಚಾರದಲ್ಲಿ ಈತನಿಗೆ ಕಿಂಚಿತ್ತೂ ಆಸಕ್ತಿಯಿಲ್ಲ ಎಂದೂ ಹೇಳಿದ್ದಾನೆ. ಜೊತೆಗೆ ರಾಜ್ಯದಲ್ಲಿ ಪ್ರಜೆಗಳ ಆಚಾರ ವ್ಯವಹಾರಗಳು, ಸಾಮಾಜಿಕ ಪದ್ಧತಿಗಳು ಇತ್ಯಾದಿ ವಿಷಯಗಳನ್ನು ಸಹ ಬರೆದಿದ್ದಾನೆ.

ಅಚ್ಯುತರಾಯನ ಮರಣಾನಂತರ ಮತ್ತೊಮ್ಮೆ ಕಲಹಗಳುಂಟಾದುವು. ಅಂತಿಮವಾಗಿ ಅಳಿಯ ರಾಮರಾಯ ಮೇಲುಗೈಪಡೆದ. ಈ ಬಾರಿ ರಾಮರಾಯ ಅಚ್ಯುತನ ಸೋದರನಾದ ರಂಗನ ಮಗ ಸದಾಶಿವನ ಹಕ್ಕನ್ನು ಎತ್ತಿಹಿಡಿದ. ಆದರೆ ಸದಾಶಿವರಾಯನನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡು ಅವನ ಹೆಸರಿನಲ್ಲಿ ತಾನೇ ಸರ್ವಾಧಿಕಾರಿಯಾದ. ಪ್ರಾಪ್ತವಯಸ್ಕನಾದ ಸದಾಶಿವ 1550ರ ಸುಮಾರಿನಲ್ಲಿ ಸ್ವತಃ ಆಳಲು ಯತ್ನಿಸಿದಾಗ ಆತನನ್ನು ಸೆರೆಯಲ್ಲಿಟ್ಟು ತನ್ನ ಸೋದರನಾದ ತಿರುಮಲ ಮತ್ತು ವೆಂಕಟಾದ್ರಿಗಳನ್ನು ಮಂತ್ರಿ ಸೇನಾಪತಿ ಪದವಿಗಳಲ್ಲಿ ನೇಮಿಸಿ ಅವರ ನೆರವಿನಿಂದ ರಾಜ್ಯವನ್ನು ಆಳಿದ. ಆದರೆ ಸದಾಶಿವರಾಯನ ಹೆಸರನ್ನು ಬಳಸಲು ಮರೆಯಲಿಲ್ಲ.

ರಾಮರಾಯ ದಕ್ಷ ಸೇನಾನಿ, ನುರಿತ ರಾಜನೀತಿಜ್ಞ. ಅಧಿಕಾರ ವಹಿಸಿಕೊಂಡ ಕೂಡಲೇ ಆಯಕಟ್ಟಿನ ಸ್ಥಾನಗಳಲ್ಲಿ ನಿಷ್ಠಾವಂತರನ್ನು, ಸಂಬಂಧಿಕರನ್ನು ನೇಮಿಸಿ, ಸೈನ್ಯವನ್ನು ಬಲಗೊಳಿಸಿ, ಅವರಲ್ಲಿ ಪರಿಣತರಾದ ಮಹಮದೀಯರಿಗೆ ಉನ್ನತ ಸ್ಥಾನಗಳನ್ನಿತ್ತು, ಆಡಳಿತವನ್ನು ಬಿಗಿಗೊಳಿಸಿದ. ಪ್ರಜೆಗಳ ವಿಶ್ವಾಸ ಗಳಿಸಲು ನಾವಿದರ ಮೇಲಿನ ತೆರಿಗೆ ಮುಂತಾದ ಕರಗಳನ್ನು ಮನ್ನಾಮಾಡಿದ. ಆ ವೇಳೆಗೆ ಐದು ಭಾಗಗಳಾಗಿ ಒಡೆದಿದ್ದ ಬಹಮನೀರಾಜ್ಯದ ಐವರು ಸುಲ್ತಾನರು ಪರಸ್ಪರ ಕಲಹಗಳಲ್ಲಿ ತೊಡಗುವಂತೆ ಮಾಡಿ, ಅವರ ರಾಜಕೀಯದಲ್ಲಿ ಪ್ರವೇಶಿಸಿ, ಅವರಿಗೆ ಸಹಾಯ ಮಾಡುವಂತೆ ತೋರಿಸಿಕೊಂಡು, ಅವರ ಬಲವನ್ನು ಕುಗ್ಗಿಸಿದ. ರಾಜ್ಯವನ್ನು ವಿಸ್ತರಿಸಿದ. ಕೃಷ್ಣದೇವರಾಯನ ಅನಂತರ ಮತ್ತೊಮ್ಮೆ ಶತ್ರುಗಳ ವಶವಾಗಿದ್ದ ಕೋಟೆಗಳನ್ನು ವಶಪಡಿಸಿಕೊಂಡು ದಲ್ಲದೆ, ಕಲ್ಯಾಣ, ಕೋವಿಲ್ಕೊಂಡ, ಘಂಪುರ, ಯಾದಗೀರ್ ಮುಂತಾದ ಇತರ ಕೋಟೆಗಳನ್ನೂ ಆಕ್ರಮಿಸಿದ. ಇವನ ಈ ಆಕ್ರಮಣ ನೀತಿ ಹೊಸದಾಗಿತ್ತು. ಸಾಮಾನ್ಯವಾಗಿ ರಕ್ಷಣಾ ನೀತಿಯನ್ನು ಈವರೆಗೆ ಅವಲಂಬಿಸಿದ್ದ ರಾಜ್ಯ ಈಗ ಇಂತಹ ನೀತಿಯನ್ನು ಪಾಲಿಸಿದುದರ ಪರಿಣಾಮವಾಗಿ ವಿಜಯನಗರದ ಬಲ ಹೆಚ್ಚಿತಾದರೂ ಅದು ಶತ್ರುಗಳ ಕಣ್ಣು ತೆರೆಸಿತು. ಆಗ ಐವರು ಸುಲ್ತಾನರು ತಮ್ಮ ನೈಜಪರಿಸ್ಥಿತಿಯನ್ನು ಅರಿತು ಒಟ್ಟುಗೂಡಲು ಸನ್ನದ್ಧರಾದರು. ಅಹಮದ್‍ನಗರದ ಹುಸೇನ್ ನಿಜಾಮ್‍ಷಾ ತನ್ನ ಮಗಳಾದ ಚಾಂದಬೀಬಿಯನ್ನು ಬಿಜಾಪುರದ ಅಲಿ ಆದಿಲ್ ಷಾನಿಗೆ ಮದುವೆ ಮಾಡಿಕೊಟ್ಟು, ಆತನ ಸೋದರಿಯನ್ನು ರಾಜಕುಮಾರ ಮುರ್ತಾಜನಿಗೆ ತಂದುಕೊಂಡ. ಈ ಐವರಲ್ಲಿ ಬೀರಾರಿನ ಸುಲ್ತಾನನನ್ನು ಹೊರತುಪಡಿಸಿ ಇತರರು ತಮ್ಮ ಸೈನ್ಯಗಳನ್ನು ಒಟ್ಟುಗೂಡಿಸಿ ರಾಮರಾಯನ ವಿರುದ್ಧ ದಂಡೆತ್ತಿದರು. ಬಿಜಾಪುರದ ಸುಲ್ತಾನನಾದ ಅಲಿಯನ್ನು ರಾಮರಾಯ ತನ್ನ ಸ್ವಂತ ಮಗನಂತೆಯೇ ಕಾಣುತ್ತಿದ್ದ. ಎಂತಲೇ ಆರಂಭದಲ್ಲಿ ಈ ಸುಲ್ತಾನ ಇತರರನ್ನು ಸೇರಲು ಒಪ್ಪಲಿಲ್ಲ. ಆದರೆ ಕೊನೆಯ ಘಳಿಗೆಯಲ್ಲಿ ತನ್ನ ನಿರ್ಧಾರವನ್ನು ಬದಲಾಯಿಸಿದ. ಕೃಷ್ಣಾನದಿಯ ಉತ್ತರತೀರದ ತಾಳೀಕೋಟೆ ಸಮೀಪದ ರಕ್ಕಸಗಿ-ತಂಗಡಗಿ ಎಂಬ ಎರಡು ಗ್ರಾಮಗಳ ನಡುವಣ ಬಯಲಿನಲ್ಲಿ ಶತ್ರುಸೈನ್ಯ ಸೇರಿತು. 1565 ಜನವರಿ 23ರಂದು ನಡೆದ ತೀವ್ರವಾದ ಕದನದಲ್ಲಿ ರಾಮರಾಯನ ಇಬ್ಬರು ಮಹಮದೀಯ ಸೇನಾಪತಿಗಳು ಒಮ್ಮೆಲೇ ಪಕ್ಷಾಂತರ ಮಾಡಿ ಶತ್ರುವನ್ನು ಸೇರಿದರು. ಇದು ಕದನದ ಸ್ವರೂಪವನ್ನೇ ಬದಲಾಯಿಸಿತು. ಮಿತ್ರರೇ ಆಗಿದ್ದವರ ಆಕಸ್ಮಿಕ ದಾಳಿ ಸೈನ್ಯದಲ್ಲಿ ಕೋಲಾಹಲವನ್ನುಂಟು ಮಾಡಿತು. ಈ ವೇಳೆಗೆ ಆಕಸ್ಮಿಕವಾಗಿ ರಾಮರಾಯ ಶತ್ರುವಿನ ಕೈಸೆರೆಯಾದ. ಹುಸೇನ್ ನಿಜಾಮ್ ಷಾ ಆತನ ಶಿರಶ್ಛೇದನ ಮಾಡಿಸಿ ಪ್ರದರ್ಶಿಸಿದ. ಸೈನ್ಯದಲ್ಲಿ ಹಾಹಾಕಾರವೆದ್ದಿತು. ವಿಜಯನಗರದ ಸೈನ್ಯ ಹಿಮ್ಮೆಟ್ಟಿತು. ತಿರುಮಲ ತೀವ್ರಗತಿಯಲ್ಲಿ ರಾಜಧಾನಿಗೆ ಹಿಂತಿರುಗಿ ಅರಮನೆಯಲ್ಲಿದ್ದ ಸ್ತ್ರೀಯರನ್ನು, ಸಂಬಂಧಿಕರನ್ನು ಮತ್ತು ಸಾಧ್ಯವಿದ್ದಷ್ಟು ಸಂಪತ್ತನ್ನು ಸು. 1550 ಆನೆಗಳ ಮೇಲೆ ಹೇರಿಸಿ ಚಂದ್ರಗಿರಿಗೆ ಸಾಗಿಸಿದ. ರಾಜನೆನಿಸಿದ್ದ ಸದಾಶಿವನನ್ನು ಒಯ್ಯಲಾಯಿತು. ಇವರ ಬೆನ್ನಟ್ಟಿಬಂದ ಶತ್ರುಸೈನ್ಯ ರಾಜಧಾನಿಯಲ್ಲಿ ಐದು ತಿಂಗಳ ಕಾಲ ನೆಲಸಿ, ಅಲ್ಲಿ ಪ್ರಜೆಗಳನ್ನು ತುಂಡರಿಸಿ, ಆಸ್ತಿಪಾಸ್ತಿ ಗಳನ್ನು ಲೂಟಿ ಮಾಡಿ, ದೇವಾಲಯ, ಅರಮನೆ, ವಿಗ್ರಹಗಳನ್ನು ಛೇದಿಸಿದರು. ಬೆಂಕಿಯಿಂದ, ಕತ್ತಿಗಳಿಂದ, ಹಾರೆಗುದ್ದಲಿಗಳಿಂದ ಒಂದೊಂದು ದಿನವೂ ಅವರು ವಿನಾಶಕಾರ್ಯವನ್ನು ಮುಂದುವರಿಸಿ ಕೊಂಡು ಬಂದರು. ಪ್ರಪಂಚ ಇತಿಹಾಸದಲ್ಲಿ ಈ ಬಗೆಯ ಭವ್ಯವಾದ ನಗರದಲ್ಲಿ ಇಂತಹ ಅತ್ಯಾಚಾರ ಬೇರಾವ ಕಡೆಯೂ ನಡೆದಂತಿಲ್ಲ. (ಜಿ.ಬಿ.ಆರ್.)

ಈ ಕದನವನ್ನು ತಪ್ಪು ತಿಳಿವಳಿಕೆಯಿಂದ ತಾಳಿಕೋಟೆಯುದ್ಧ ಎಂದು ಕರೆಯಲಾಗಿತ್ತು. ಸುಲ್ತಾನರ ಸಂಘಟಿತ ಸೇನೆ ಮೂರುಲಕ್ಷ ಪ್ರಮಾಣದ್ದು. ಇದು ಬಿಜಾಪುರದಿಂದ 1564 ಡಿಸೆಂಬರ್ 25ರಂದು ವಿಜಯನಗರದತ್ತ ಸಾಗಿತು. ದಾರಿಯಲ್ಲಿ ತಾಳಿಕೋಟೆಯಲ್ಲಿ ಶಿಬಿರ ಹೂಡಿ ವಿಶ್ರಮಿಸಿತು. ಅಲ್ಲಿಂದ ದಕ್ಷಿಣಕ್ಕೆ ಸು. 40 ಕಿಮೀ ದೂರದಲ್ಲಿರುವ ಕೃಷ್ಣಾನದಿಯನ್ನು ದಾಟಿ ವಿಜಯನಗರ ಪ್ರದೇಶವನ್ನು ಪ್ರವೇಶಿಸುವ ಉದ್ದೇಶ ಅದಕ್ಕಿತ್ತು. ಆದರೆ ವಿಜಯನಗರದ ಆರು ಲಕ್ಷ ಸೈನ್ಯ ರಾಮರಾಯನ ನೇತೃತ್ವದಲ್ಲಿ ನದಿಯ ದಕ್ಷಿಣ ತೀರದುದ್ದಕ್ಕೂ ಗೋಡೆ ಯನ್ನೆಬ್ಬಿಸಿ ಕಾವಲುಭಟರನ್ನು ಇರಿಸಿ ಸೈನ್ಯದ ಮುಖ್ಯಭಾಗ ಹೊಳೆಯನ್ನು ದಾಟಿ ಉತ್ತರದಲ್ಲಿದ್ದ ಶತ್ರುಸೈನ್ಯವನ್ನೆದುರಿಸಿತು. ಇದು ನಡೆದುದು ರಕ್ಕಸಗಿ-ತಂಗಡಗಿ ಎಂಬ ಎರಡು ಊರುಗಳ ನೆರೆಯಲ್ಲಿ. ರಾಮರಾಯನ ಬಖೈರ್ ಎಂಬ ಗ್ರಂಥದಲ್ಲಿ ಇದನ್ನು ರಾಕ್ಷಸತಂಗಡಿ ಎಂದು ನಿರ್ದೇಶಿಸಿದೆ. ಭಾರತದ ಇತಿಹಾಸದಲ್ಲಿ ರುದ್ರಭಯಾನಕವಾದ ಈ ಯುದ್ಧ ಇತಿಹಾಸದ ಗತಿಯನ್ನೇ ಬದಲಿಸಿತು. (ಪಿ.ಬಿ.ಡಿ.)

ಈ ಕದನದೊಂದಿಗೆ ವಿಜಯನಗರ ಕಣ್ಮರೆಯಾಯಿತು. ಹಂಪೆ ಕೊಂಪೆಯಾಯಿತು. ದಕ್ಷಿಣ ಭಾರತದಲ್ಲೆಲ್ಲ ಪಾಳೆಯಗಾರರು, ನಾಯಕರು ತಲೆ ಎತ್ತಿ ಮತ್ತೊಮ್ಮೆ ಪ್ರಬಲರಾದರು. ಆದರೆ ಚಂದ್ರಗಿರಿಗೆ ಓಡಿಹೋದ ತಿರುಮಲ ಮತ್ತೊಮ್ಮೆ ರಾಜ್ಯ ಕಟ್ಟಲು ಯತ್ನಿಸಿದ. ಈತ ಆರವೀಡು ಮನೆತನಕ್ಕೆ ಸೇರಿದಾತ. ಕರ್ನೂಲು ಜಿಲ್ಲೆಯ ಆರವೀಡು ಎಂಬ ಗ್ರಾಮ ದಿಂದ ಬಂದ ಇವರು ತಮ್ಮ ಊರಿನ ಹೆಸರನ್ನೇ ವಂಶಕ್ಕೂ ಬಳಸಿದರು. ತಿರುಮಲನ ಸೋದರನಾದ ರಾಮರಾಯನು ಕೃಷ್ಣದೇವರಾಯನ ಅಳಿಯ. ಅಳಿಯ ರಾಮರಾಯನೆಂದೇ ಪ್ರಸಿದ್ಧನಾದ. ಸದಾಶಿವನನ್ನು ಚಂದ್ರಗಿರಿಯ ಸೆರೆಯಲ್ಲಿಟ್ಟು ತಿರುಮಲ ತನ್ನ ಹೆಸರಿನಲ್ಲೇ ಆಳತೊಡಗಿದ. ಎರಡು ವರ್ಷಗಳ ಬಳಿಕ ರಾಜಧಾನಿಯನ್ನು ಪೆನುಗೊಂಡೆಗೆ ಬದಲಾಯಿಸಿದ. ವಿಜಯನಗರಕ್ಕೆ ಹಿಂದಿರುಗುವ ಯೋಜನೆಯನ್ನೂ ಬಿಟ್ಟುಬಿಟ್ಟ. 1570ರಲ್ಲಿ ಸದಾಶಿವನನ್ನು ಕೊಲ್ಲಿಸಿದ. ಹೆಚ್ಚು ಕಡಿಮೆ ಭಾಷೆಯ ಆಧಾರದ ಮೇಲೆ ಅಳಿದುಳಿದ ರಾಜ್ಯವನ್ನು ಆಡಳಿತಕ್ಕಾಗಿ ವಿಂಗಡಿಸಿ, ತೆಲುಗಿನ ಪ್ರದೇಶಕ್ಕೆ ಹಿರಿಯ ಮಗ ಶ್ರೀರಂಗನನ್ನೂ ಕನ್ನಡ ಪ್ರದೇಶಕ್ಕೆ ಎರಡನೆಯ ಮಗನಾದ ರಾಮರಾಯನನ್ನೂ ತಮಿಳು ಪ್ರದೇಶಕ್ಕೆ ವೆಂಕಟಪತಿಯನ್ನೂ ನೇಮಿಸಿದ. ರಾಮರಾಯ ಶ್ರೀರಂಗಪಟ್ಟಣದಿಂದ ಆಳತೊಡಗಿದ. ಆದರೆ ಈ ವ್ಯವಸ್ಥೆ ಆಂತರಿಕ ಕಲಹಗಳಿಗೆ ಇಂಬುಗೊಟ್ಟು, ಶತ್ರುಗಳು ದಾಳಿಮಾಡಲು ಪ್ರೋತ್ಸಾಹಿಸಿತು.

1578ರಲ್ಲಿ ತಿರುಮಲನ ಮಗ ಶ್ರೀರಂಗ (II) ಪಟ್ಟಕ್ಕೆ ಬಂದು ಸು.8 ವರ್ಷಗಳ ಕಾಲ ಆಳಿದ. ಅನಂತರ 1586ರಿಂದ ವೆಂಕಟಪತಿ ಆಳತೊಡಗಿದ. ತಿರುಮಲ ಅಲಿ ಆದಿಲ್ ಷಾನ ದಾಳಿಯನ್ನು ಎದುರಿಸಲು ಗೋಲ್ಕೊಂಡೆಯ ಕುತುಬ್ ಷಾನ ಸಹಾಯ ಪಡೆದ. ಆದರೂ ಎರಡನೆಯ ಬಾರಿ ಆದಿಲ್ ಷಾ ತಿರುಮಲನ ರಾಜ್ಯವನ್ನು ಮುತ್ತಿ ಅರಸನನ್ನು ಸೋಲಿಸಿದ. ಪೆನುಗೊಂಡೆಯ ಉತ್ತರಭಾಗ ಶತ್ರುವಶವಾಯಿತು. ಬಂದಿಯಾಗಿದ್ದ ಶ್ರೀರಂಗ ಅಪಾರವಾದ ಧನವನ್ನು ದಂಡವಾಗಿ ಕೊಟ್ಟು ಪೆನುಗೊಂಡೆಗೆ ಹಿಂತಿರುಗಿದ. ಅನಂತರ ಇನ್ನೊಮ್ಮೆ ಆದಿಲ್ ಷಾ ದಂಡೆತ್ತಿ ಬಂದಾಗ ಮಾತ್ರ ಶ್ರೀರಂಗನ ಬಂಧುವಾದ ಜಗದೇವರಾಯ ಆತನನ್ನು ಸೋಲಿಸಿದ. ಆದರೆ ಅವನಿಗೆ ಬಾರಾಮಹಲಿನಿಂದ ಪಶ್ಚಿಮಘ ಟ್ಟಗಳವರೆಗೆ ವಿಸ್ತಾರವಾದ ಪ್ರದೇಶವನ್ನು ಬಹುಮಾನವಾಗಿ ಕೊಡಬೇಕಾಯಿತು. ಗೋಲ್ಕೊಂಡದ ಸುಲ್ತಾನ, ಶ್ರೀರಂಗನಿಂದ ವಿನುಕೊಂಡ, ಬೆಲ್ಲಂಕೊಂಡ, ಕೊಂಡವೀಡು, ಉದಯಗಿರಿಗಳನ್ನು ಕಸಿದುಕೊಂಡ. ಆಂತರಿಕ ದಂಗೆಗಳು ರಾಜ್ಯದ ಬಲವನ್ನು ಇನ್ನಷ್ಟು ಕುಗ್ಗಿಸಿದುವು. ವೆಂಕಟಪತಿಯೂ ಗೋಲ್ಕೊಂಡ ಮತ್ತು ಬಿಜಾಪುರದ ಷಾಹಿಗಳನ್ನು ಎದುರಿಸಬೇಕಾಯಿತು. ಉತ್ತರ ಭಾರತದಲ್ಲಿ ಆಗ ಆಳುತ್ತಿದ್ದ ಮುಗಲ್ ಮನೆತನದ ಅಕ್ಬರ್ 1600ರಲ್ಲಿ ಅಹಮದ್ ನಗರವನ್ನು ಗೆದ್ದುಕೊಂಡು, ಅನಂತರ ಎರಡು ಬಾರಿ ವೆಂಕಟಪತಿಯ ರಾಜ್ಯಕ್ಕೆ ರಾಯಭಾರಿಗಳನ್ನು ಕಳಿಸಿದ. ಆದರೆ ಇದು ಮುಂದಿನ ಆಕ್ರಮಣಗಳಿಗೆ ನಾಂದಿಯಾಗಬಹುದೆಂದು ಭಾವಿಸಿದ. ವೆಂಕಟಪತಿ ಅಕ್ಬರನೊಡನೆ ಹೆಚ್ಚಿನ ಸಂಬಂಧಗಳನ್ನು ಇಟ್ಟುಕೊಳ್ಳಲಿಲ್ಲ. ಶ್ರೀರಂಗಪಟ್ಟಣದಲ್ಲಿದ್ದ ರಾಮರಾಯನ ಮಗ ತಿರುಮಲ ವೆಂಕಟಪತಿಯನ್ನು ಗೌರವದಿಂದ ಕಾಣಲಿಲ್ಲ. ಮೈಸೂರಿನ ರಾಜ ಒಡೆಯ ಈ ಸಂದರ್ಭವನ್ನುಪಯೋಗಿಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ. ವೆಂಕಟಪತಿ ರಾಜ ಒಡೆಯನನ್ನು ಕ್ಷಮಿಸಿದುದೇ ಅಲ್ಲದೆ, ಶ್ರೀರಂಗಪಟ್ಟಣ ಹಾಗೂ ಉಮ್ಮತ್ತೂರುಗಳನ್ನು ಆತನಿಗೆ ಬಿಟ್ಟುಕೊಟ್ಟ. ಸಾಹಿತ್ಯ ಕಲೆಗಳಿಗೆ ವೆಂಕಟಪತಿ ಪ್ರೋತ್ಸಾಹ ನೀಡಿದ. ಸುಮಾರು ಮೂರು ದಶಕಗಳ ಕಾಲ ಆಳಿದ ಈತ ರಾಜ್ಯದ ಗತವೈಭವವನ್ನು ಪುನರುಜ್ಜೀವಗೊಳಿಸಿದ ನಾದರೂ ಇದು ಬಹುಕಾಲ ಬಾಳಲಿಲ್ಲ.

ವೆಂಕಟಪತಿಯ ಅನಂತರ ಅಧಿಕಾರಕ್ಕಾಗಿ ಅಂತಃಕಲಹಗಳು ಏರ್ಪಟ್ಟವು. ಆತನಿಗೆ ಗಂಡುಮಕ್ಕಳಿಲ್ಲದ ಕಾರಣ ರಾಜ್ಯ ಆತನ ಸೋದರನಾದ ರಾಮರಾಯನ ಮಗ ಮುಮ್ಮಡಿ ಶ್ರೀರಂಗನ ವಶವಾಯಿತು. ಆದರೆ ಜಗರಾಯನೆಂಬ ವೆಂಕಟಪತಿಯ ಭಾವಮೈದುನನು ವೆಂಕಟಪತಿಯ ಮಗನೆಂದು ಹೇಳಲಾದ ಚಿಕ್ಕರಾಯನ ಪರವಾಗಿ ನಿರಾಧಾರವಾದ ಹಕ್ಕನ್ನು ಸ್ಥಾಪಿಸಲು ಯತ್ನಿಸಿದ. ಪೆಲುಗೋಡಿನ ಎಚ್ಚಮನಾಯಕನೂ ತಂಜಾವೂರು ಹಾಗೂ ಇತರ ಪಾಳೆಯಪಟ್ಟುಗಳ ನಾಯಕರೂ ಚೋಪುರು ಎಂಬಲ್ಲಿ ನಡೆದ ಕದನದಲ್ಲಿ ಜಗರಾಯನನ್ನೂ ಆತನ ಬೆಂಬಲಿಗರಾದ ಮಧುರೆ, ಜಿಂಜಿ ಮುಂತಾದ ಸ್ಥಳಗಳ ನಾಯಕರನ್ನೂ ಸೋಲಿಸಿದರು. ಆ ಬಳಿಕ ರಾಜ್ಯದಲ್ಲಿ 12-13 ವರ್ಷಗಳ ಬಾಲಕನಾದ ರಾಮದೇವನನ್ನು ಕುಳ್ಳಿರಿಸಲಾಯಿತು. ಈತ 1617ರಿಂದ 1632ರ ವರೆಗೆ ಆಳಿದ. ಅನಂತರ ಅಳಿಯ ರಾಮರಾಯನ ಮೊಮ್ಮಗ ಇಮ್ಮಡಿ ವೆಂಕಟಪತಿ ಯುವರಾಜನಾದ. ಇವರಾರೂ ರಾಜ್ಯದ ಶಕ್ತಿಯನ್ನು ವರ್ಧಿಸಲಿಲ್ಲ. ಬಿಜಾಪುರ, ಗೋಲ್ಕೊಂಡಗಳ ಸುಲ್ತಾನರು ಹಲಕೆಲವು ಕೋಟೆಗಳನ್ನು ಗೆದ್ದುಕೊಂಡರು. ಅಂತಿಮವಾಗಿ ಕೊನೆಯ ಅರಸನಾದ ಮುಮ್ಮಡಿ ಶ್ರೀರಂಗ ಮೊದಲು ಬಿದನೂರಿಗೂ ಅನಂತರ ಮೈಸೂರಿಗೂ ಹೋಗಿ ಅಲ್ಲಿ ಹಿಂದೆ ತಮ್ಮ ಸಾಮಂತರಾಗಿದ್ದು ಈಗ ಪ್ರಬಲರಾಗಿದ್ದವರ ಆಶ್ರಯಪಡೆದ (1646). ಅಧಿಕಾರವನ್ನು ಮರಳಿ ಪಡೆಯಲು ಆಗಿಂದಾಗ್ಗೆ ಯತ್ನಿಸಿ ವಿಫಲನಾಗಿ 1681ರಲ್ಲಿ ನಿಧನನಾದ.

 (ಜಿ.ಬಿ.ಆರ್.; ಎ.ವಿ.ವಿ.)   

ಆಡಳಿತ ವ್ಯವಸ್ಥೆ: ವಿಜಯನಗರ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವವಿತ್ತು. ಕೇಂದ್ರೀಯ ಆಡಳಿತ ರಾಜನಲ್ಲಿ ಕೇಂದ್ರೀಕೃತವಾಗಿತ್ತು. ಪಟ್ಟಾಭಿಷೇಕ ಮಹೋತ್ಸವ ಮಹತ್ತ್ವದ್ದಾಗಿದ್ದು ರಾಜನಿಗೆ ರಾಜ್ಯವಾಳಲು ನ್ಯಾಯಯುತವಾದ ಹಕ್ಕನ್ನು ನೀಡುತ್ತಿತ್ತು. ಇದಕ್ಕೆ ಅಧೀನರಾಜರು ಮತ್ತು ಜನಸಾಮಾನ್ಯರ ಮುಖಂಡರು ಹಾಜರಿದ್ದು ಆ ಸಮಯದಲ್ಲಿ ಕಪ್ಪಕಾಣಿಕೆಗಳನ್ನು ಒಪ್ಪಿಸಿ ತಮ್ಮ ನಿಷ್ಠೆಯನ್ನು ತೋರ್ಪಡಿಸುತ್ತಿದ್ದರು.

ವಿಜಯನಗರ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವವಿದ್ದರೂ ನಿರಂಕುಶ ಪ್ರಭುತ್ವ ಇರಲಿಲ್ಲ. ರಾಜನ ಕರ್ತವ್ಯ ಧರ್ಮವನ್ನು ರಕ್ಷಿಸುವುದಾಗಿತ್ತು. ರಾಜತ್ವವು ಧರ್ಮದ ಆಳಿಕೆಗೆ ಒಳಪಟ್ಟಿತ್ತು. ಸ್ವಧರ್ಮವನ್ನು ಪಾಲಿಸಲು ರಾಜ ಸಮಯಾಚಾರ್ಯರೆಂಬ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳು ತ್ತಿದ್ದ. ಸಂಪ್ರದಾಯ ಮತ್ತು ಸಾರ್ವಜನಿಕ ಅಭಿಪ್ರಾಯ ರಾಜನ ನಿರಂಕುಶ ಪ್ರಭುತ್ವಕ್ಕೆ ತಡೆಯಾಗಿತ್ತು. ತೆರಿಗೆಗಳನ್ನು ಸಂಪ್ರದಾಯಬದ್ಧವಾಗಿ ವಿಧಿಸ ಲಾಗುತ್ತಿತ್ತು. ಅಲ್ಲದೆ ವ್ಯವಸ್ಥೆ ಗೊಂಡಿದ್ದ ಸಂಘಗಳು ಮತ್ತು ಶ್ರೇಣಿಗಳು ನಿರಂಕುಶತ್ವಕ್ಕೆ ತಡೆಯಾಗಿದ್ದವು. ಕೇಂದ್ರಸರ್ಕಾರ ಅವುಗಳ ಮೇಲ್ವಿಚಾರಣೆ ಹೊಂದಿದ್ದು ಆವಶ್ಯಕವಾದರೆ ಸಾಮರಸ್ಯ ಸ್ಥಾಪಿಸಲು ಮಧ್ಯ ಪ್ರವೇಶಿಸುತ್ತಿತ್ತು. ರಾಜನ ನಿರಂಕುಶತ್ವಕ್ಕೆ ಮಂತ್ರಿಮಂಡಲವೂ ಒಂದು ತಡೆಯಾಗಿತ್ತು. ರಾಜನ ಮಂತ್ರಿಮಂಡಲ ಅವನು ನೇಮಿಸಿದ ಮಂತ್ರಿಗಳು ಮತ್ತು ಶ್ರೀಮಂತರನ್ನೊಳಗೊಂಡಿತ್ತು. ರಾಜ್ಯ ವ್ಯವಹಾರದಲ್ಲಿ ರಾಜನು ಮಂತ್ರಿ ಮಂಡಲದ ಸಲಹೆಯನ್ನು ತೆಗದುಕೊಳ್ಳುತ್ತಿದ್ದ.

ರಾಜರು ಮಠಗಳಿಗೆ ದ್ರವ್ಯಸಹಾಯ ಮಾಡಿ ಅವನ್ನು ಉಳಿಸಿಕೊಂಡು ಬರುತ್ತಿದ್ದರು. ವ್ಯವಸಾಯಕ್ಕೆ ಪ್ರೋತ್ಸಾಹ ಕೊಡಲು ಕಾಡುಗಳನ್ನು ಕಡಿದು, ಹೊಸ ಹಳ್ಳಿಗಳನ್ನು ಸ್ಥಾಪಿಸುತ್ತಿದ್ದರು. ದೇಶದ ಆರ್ಥಿಕ ಅಭಿವೃದ್ಧಿ ಸಾಮಾಜಿಕ ಶಾಂತಿ ಮತ್ತು ನ್ಯಾಯದ ಪಾಲನೆ ರಾಜನ ಕರ್ತವ್ಯವಾಗಿತ್ತು. ರಾಜನೇ ಶ್ರೇಷ್ಠ ನ್ಯಾಯಾಧೀಶನಾಗಿದ್ದ. ವಿದ್ಯೆ ಮತ್ತು ಸಂಸ್ಕøತಿಯ ಪೋಷಣೆಯಲ್ಲಿ ರಾಜ ಅಧ್ವರ್ಯುವಾಗಿರುತ್ತಿದ್ದ.

ರಾಜ ಸಾಮಾನ್ಯವಾಗಿ ತನ್ನ ಉತ್ತರಾಧಿಕಾರಿಯನ್ನು ನಿರ್ಧರಿಸಿ, ಆತನಿಗೆ ಯುವರಾಜ ಪಟ್ಟಕಟ್ಟುತ್ತಿದ್ದ. ರಾಜನ ಹಿರಿಯ ಮಗನೇ ಹಕ್ಕುದಾರನಾಗಿರುತ್ತಿದ್ದರೂ ಇದು ಸಂದರ್ಭವಶಾತ್ ಬದಲಾಗುತ್ತಿತ್ತು. ಉತ್ತರಾಧಿಕಾರಿಯ ಆಯ್ಕೆ ಬಹುಮಟ್ಟಿಗೆ ಮಂತ್ರಿಗಳು ಮತ್ತು ಶ್ರೀಮಂತರ ಸಮ್ಮುಖದಲ್ಲಿ ನಡೆಯುತ್ತಿತ್ತು. ರಾಜನು ಯುವರಾಜ ಮತ್ತು ಇತರ ರಾಜಕುಮಾರರನ್ನು ಪ್ರಾಂತಾಧಿಕಾರಿಗಳನ್ನಾಗಿ ನೇಮಿಸುತ್ತಿದ್ದ. ಇದರಿಂದ ಉತ್ತರಾಧಿಕಾರಿಗಳಿಗೆ ಆಡಳಿತದಲ್ಲಿ ತರಬೇತು ಸಿಗುತ್ತಿತ್ತು. ಉತ್ತರಾಧಿಕಾರಿ ಚಿಕ್ಕವನಾಗಿದ್ದರೆ, ಅವನು ವಯಸ್ಸಿಗೆ ಬರುವವರೆಗೆ ದೇಶವನ್ನಾಳಲು ರಾಜಪ್ರತಿನಿಧಿಯನ್ನು ನೇಮಿಸುತ್ತಿದ್ದರು. ವಿಜಯನಗರದ ಚರಿತ್ರೆಯಲ್ಲಿ ರಾಜಪ್ರತಿನಿಧಿ ಆ ಪದವಿಯನ್ನು ದುರುಪಯೋಗಪಡಿಸಿಕೊಂಡ ದೃಷ್ಟಾಂತಗಳೂ ಇವೆ.

ಬೃಹತ್ ಸೈನ್ಯವನ್ನು ರಾಜ ಸ್ವಂತವಾಗಿ ಇಟ್ಟುಕೊಳ್ಳುತ್ತಿದ್ದುದಲ್ಲದೆ, ಅದಕ್ಕೆ ಉತ್ತಮ ತರಬೇತಿ ಮತ್ತು ಸಲಕರಣೆಗಳನ್ನು ಒದಗಿಸಿ ಶಿಸ್ತಿನಲ್ಲಿ ಇಟ್ಟು, ಒಳ ಹೊರ ಶತ್ರುಗಳ ನಿಗ್ರಹಕ್ಕಾಗಿ ಬಳಸುತ್ತಿದ್ದ. ಹಲವಾರು ದಂಡನಾಯಕರು ವಿವಿಧ ವಿಭಾಗಗಳ ಮತ್ತು ತುಕಡಿಗಳ ನೇತೃತ್ವವನ್ನು ವಹಿಸುತ್ತಿದ್ದರು. ಅಲ್ಲದೆ ಪ್ರಾಂತಾಧಿಕಾರಿಗಳೂ ಸಾಮಂತರೂ ಅವಶ್ಯ ವಿದ್ದಾಗ ರಾಜನಿಗೆ ಸೈನ್ಯವನ್ನು ಒದಗಿಸಿ ತಾವೂ ಯುದ್ಧಗಳಲ್ಲಿ ಪಾಲ್ಗೊಳ್ಳಬೇಕಾಗಿತ್ತು.

ಆಡಳಿತದ ಅನುಕೂಲಕ್ಕಾಗಿ ವಿಜಯನಗರ ಸಾಮ್ರಾಜ್ಯವನ್ನು ರಾಜ್ಯ, ಮಂಡಳ ಮತ್ತು ನಾಡುಗಳಾಗಿ ವಿಂಗಡಿಸಲಾಗಿತ್ತು. ರಾಜ್ಯಗಳ ಸಂಖ್ಯೆ ಕಾಲಾನುಗುಣವಾಗಿ ಬದಲಾಗುತ್ತಿತ್ತು. ಆಡಳಿತ ದೃಷ್ಟಿಯಿಂದ ಹೊಸ ರಾಜ್ಯಗಳು ಸ್ಥಾಪನೆಯಾಗುತ್ತಿದ್ದವು. ಉದಾಹರಣೆಗೆ ತುಳುವ ನಾಡಿನಲ್ಲಿ ಎರಡು ರಾಜ್ಯಗಳಿದ್ದವು. ಉತ್ತರ ತುಳು ರಾಜ್ಯಕ್ಕೆ ಬಾರಕೂರು ರಾಜಧಾನಿ ಯಾಗಿತ್ತು; ದಕ್ಷಿಣ ತುಳು ರಾಜ್ಯಕ್ಕೆ ಮಂಗಳೂರು ರಾಜಧಾನಿಯಾಗಿತ್ತು. ಇವಲ್ಲದೆ ಉದಯಗಿರಿ ರಾಜ್ಯ, ಪೆನುಕೊಂಡೆ ರಾಜ್ಯ, ಮುಳುವಾಯಿ ರಾಜ್ಯ ಮತ್ತು ರಾಜಗಂಭೀರ ರಾಜ್ಯಗಳಿದ್ದವು. ರಾಜಗಂಭೀರ ರಾಜ್ಯದ ದಕ್ಷಿಣಕ್ಕೆ ತಿರುವಡಿಗೈ ರಾಜ್ಯ ಮತ್ತು ಮಧುರಾ ರಾಜ್ಯಗಳಿದ್ದವು. ಪ್ರತಿ ಪ್ರಾಂತಕ್ಕೂ ಒಬ್ಬ ಪ್ರಾಂತಾಧಿಕಾರಿಯಿದ್ದ. ಇವರು ಸಾಮಾನ್ಯವಾಗಿ ರಾಜಮನೆತನಕ್ಕೆ ಸೇರಿದವರಾಗಿದ್ದರು. ಸಂಗಮ ವಂಶದ ರಾಜಕುಮಾರರು ಪ್ರಾಂತಾಧಿಕಾರಿಗಳಾಗಿ ನೇಮಕವಾದ ಅನಂತರ ಒಡೆಯ ಅಥವಾ ಒಡೆಯರ್ ಎಂಬ ಬಿರುದನ್ನು ಧರಿಸುತ್ತಿದ್ದರು. ಹೀಗೆ ರಾಜಮನೆತನದಿಂದ ನೇಮಕಗೊಂಡ ಪ್ರಾಂತಾಧಿಕಾರಿಗಳನ್ನು ಮಹಾಮಂಡಲೇಶ್ವರರೆಂದೂ ಕರೆಯುತ್ತಿದ್ದರು. ಎರಡನೆಯ ದೇವರಾಯನ ಕಾಲದಿಂದ ಪ್ರಾಂತಾಧಿಕಾರಿಗಳ ನೇಮಕದ ರೀತಿಯಲ್ಲಿ ಸ್ವಲ್ಪ ಬದಲಾವಣೆಯಾಯಿತು. ರಾಜಮನೆತನದವರಲ್ಲದೆ ಸಾಮಂತ ರಾಜರ ಮನೆತನಗಳಿಗೆ ಮತ್ತು ಶ್ರೀಮಂತ ಮನೆತನಗಳಿಗೆ ಸೇರಿದವರು ನೇಮಕಗೊಳ್ಳುತ್ತಿದ್ದರು. ಇದಕ್ಕೆ ಹಲವು ಕಾರಣಗಳಿದ್ದವು. ರಾಜಮನೆತನದಲ್ಲಿ ಶಕ್ತಿಸಾಮಥ್ರ್ಯವುಳ್ಳವರು ಸಾಕಷ್ಟು ಸಿಗುತ್ತಿರಲಿಲ್ಲ. ಅಲ್ಲದೆ ಸಾಮ್ರಾಜ್ಯ ವಿಸ್ತರಿಸಿದಂತೆ ಹೆಚ್ಚು ಪ್ರಾಂತಗಳಾಗಿ ಹೆಚ್ಚಿನ ಪ್ರಾಂತಾಧಿಕಾರಿಗಳ ಆವಶ್ಯಕತೆ ಇತ್ತು. ಹೀಗೆ ನೇಮಕಗೊಂಡ ಪ್ರಾಂತಾಧಿಕಾರಿಗಳು ದಳಪತಿಯಾಗಿಯೂ ಮತ್ತು ಮಂತ್ರಿಯಾಗಿಯೂ ಇರುತ್ತಿದ್ದರು. ಹೀಗೆ ನೇಮಕಗೊಂಡವರನ್ನು ದಂಡನಾಯಕರೆಂದು ಕರೆಯುತ್ತಿದ್ದರು. ಇವರಿಗೆ ಸಾಕಷ್ಟು ಸ್ವಾಯತ್ತತೆ ಇತ್ತು. ಇವರು ತಮ್ಮದೇ ಆದ ನ್ಯಾಯಾಸ್ಥಾನಗಳನ್ನು ಹೊಂದಿದ್ದರು ಮತ್ತು ಸೈನ್ಯವನ್ನಿಟ್ಟುಕೊಂಡಿದ್ದರು. ಇವರ ಮುಖ್ಯ ಕರ್ತವ್ಯ ಶತ್ರುಗಳಿಂದ ಪ್ರಾಂತ ರಕ್ಷಣೆ. ಇವರು ಪ್ರಾಂತದ ಕಂದಾಯ ವಸೂಲಿಯ ಅಧಿಕಾರಿಯಾಗಿಯೂ ಮತ್ತು ಶ್ರೇಷ್ಠ ನ್ಯಾಯಾಧೀಶರಾಗಿಯೂ ಇದ್ದರು. ಪ್ರಾಂತದಲ್ಲಿ ಶಾಂತಿಪರಿಪಾಲನೆ ಇವರ ಕರ್ತವ್ಯವಾಗಿತ್ತು. ಇವರು ಹೊಸ ತೆರಿಗೆಗಳನ್ನು ವಿಧಿಸಬಹುದಾಗಿತ್ತು ಮತ್ತು ಹಳೆಯ ತೆರಿಗೆಗಳನ್ನು ರದ್ದುಮಾಡಬಹುದಾಗಿತ್ತು. ಪ್ರಾಂತಗಳಲ್ಲಿ ಆಡಳಿತ ಹದಗೆಟ್ಟರೆ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸುತ್ತಿತ್ತು.

ಅರಸರು ತಮ್ಮ ಆಕ್ರಮಣಕಾಲದಲ್ಲಿ ಅನೇಕ ರಾಜ್ಯಗಳನ್ನು ಗೆದ್ದರೂ ಹಲವಾರು ಸಂದರ್ಭಗಳಲ್ಲಿ ಆಯಾ ರಾಜರುಗಳಿಗೆ ಅವರ ರಾಜ್ಯಗಳನ್ನು ಹಿಂದಿರುಗಿಸುತ್ತಿದ್ದರು. ಇವರು ವಿಜಯನಗರದ ಸಾಮ್ರಾಟನಿಗೆ ಪೊಗದಿ ಕೊಡುವ ಸಾಮಂತರಾಗಿದ್ದರು. ಇದಕ್ಕೆ ನಾಯಂಕರ ಪದ್ಧತಿ ಎಂದೂ ಕರೆಯುತ್ತಿದ್ದರು. ಈ ನಾಯಕರು ವಿಜಯನಗರ ಸಾಮ್ರಾಟನಿಗೆ ಪಟ್ಟಾಭಿಷೇಕ ಸಮಯದಲ್ಲಿ ರಾಜಕುಮಾರ ಅಥವಾ ರಾಜಕುಮಾರಿ ಹುಟ್ಟಿದ ಸಂದರ್ಭದಲ್ಲಿ, ರಾಜನ ವರ್ಧಂತಿಯಲ್ಲಿ ಮತ್ತು ಮಹಾನವಮಿ ಉತ್ಸವದಲ್ಲಿ ಆಸ್ಥಾನದಲ್ಲಿ ಹಾಜರಿದ್ದು ಕಾಣಿಕೆಗಳನ್ನು ಸಲ್ಲಿಸಬೇಕಾಗಿತ್ತು. ನೂತನ ವರ್ಷದ ದಿನ ರಾಜನಿಗೆ ಬಹುಮಾನಗಳನ್ನು ನೀಡಬೇಕಾಗಿತ್ತು. ಸಾಮಂತರು ಕರ್ತವ್ಯಪರಿಪಾಲನೆ ಮಾಡದಿದ್ದರೆ ಶಿಕ್ಷೆಗೆ ಗುರಿಯಾಗು ತ್ತಿದ್ದರು. ಪ್ರಾಂತಾಧಿಕಾರಿಗಳು ವರ್ಗಾಯಿಸಲ್ಪಡುತ್ತಿದ್ದರಾದರೆ ಸಾಮಾನ್ಯವಾಗಿ ನಾಯಕರನ್ನು ವರ್ಗ ಮಾಡುತ್ತಿರಲಿಲ್ಲ. ಪ್ರಾರಂಭದಲ್ಲಿ ನಾಯಕತನ ವೈಯಕ್ತಿಕವಾಗಿತ್ತು. ಆದರೆ ಕ್ರಮೇಣ ಕೇಂದ್ರ ಸರ್ಕಾರದ ದುರ್ಬಲತೆಯಿಂದ ವಂಶಪಾರಂಪರ್ಯವಾಯಿತು. ನಾಯಕರು ರಾಜಾಸ್ಥಾನದಲ್ಲಿ ಇಬ್ಬರು ಅಧಿಕಾರಿಗಳನ್ನು ಇಟ್ಟುಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬ ಅಧಿಕಾರಿ ರಾಜಧಾನಿಯಲ್ಲಿದ್ದ ನಾಯಕನ ಸೈನ್ಯದ ಹೊಣೆಗಾರಿಕೆ ಹೊತ್ತಿದ್ದ. ಮತ್ತೊಬ್ಬ ಅಧಿಕಾರಿ ಸ್ಥಾನಪತಿ ಎಂದು ಕರೆಯಲ್ಪಟ್ಟು ರಾಜಧಾನಿಯಲ್ಲಿ ತನ್ನ ನಾಯಕನ ಹಿತಪರಿಪಾಲನೆ ಮಾಡುತ್ತಿದ್ದ. ಕೇಂದ್ರ ಸರ್ಕಾರದಲ್ಲಿ ಸಾಮಂತಾಧಿಕಾರಿ ಮತ್ತು ಮಹಾನಾಯಕಾಚಾರ್ಯರೆಂಬ ಅಧಿಕಾರಿಗಳು ಸಾಮಂತರಾಜರ ಇಲಾಖೆಯ ಮೇಲ್ವಿಚಾರಣೆ ಹೊಂದಿದ್ದರು.

ವಿಜಯನಗರ ಕಾಲದಲ್ಲಿ ಅನೇಕ ಬಗೆಯ ಸ್ಥಳೀಯ ಸಂಸ್ಥೆಗಳು ಕಾಣಬರುತ್ತವೆ. ಆ ಕಾಲದಲ್ಲಿ ಗ್ರಾಮಸಭೆಗಳು, ಮಹಾಜನ ಸಭೆಗಳು, ಮಹಾನಾಡು ಮತ್ತು ನಾಡುಸಭೆಗಳು, ಪೌರಸಭೆಗಳು ಮತ್ತು ಅನೇಕ ಶ್ರೇಣಿಗಳ ವ್ಯವಸ್ಥೆ ಇದ್ದಿತೆಂದು ತಿಳಿದುಬರುತ್ತದೆ. ಗ್ರಾಮಸಭೆಗೆ ಊರು, ಒಕ್ಕಲು, ಪ್ರಜೆ, ಹಲರು, ಜಗತ್ತು ಮುಂತಾದ ಹೆಸರುಗಳಿದ್ದವು. ಅಗ್ರಹಾರಗಳಲ್ಲಿ ಮಹಾಜನರ ಸಭೆ ಇದ್ದಿತು. ನಾಡು ವಿಭಾಗದಲ್ಲಿ ನಾಡುಸಭೆ ಇತ್ತು. ಈ ಸಭೆಗಳು ಭೂಮಿಯನ್ನು ಸಾರ್ವಜನಿಕ ಉಪಯೋಗಕ್ಕೆ ಅಥವಾ ದಾನಧರ್ಮಕ್ಕೆ ಪಡೆಯುತ್ತಿತ್ತು ಮತ್ತು ಕ್ರಯಮಾಡುತ್ತಿತ್ತು. ಈ ಸ್ಥಳೀಯ ಸಂಸ್ಥೆಗಳು ಸಾಮಾನ್ಯ ಪ್ರಜೆಯ ಸೌಕರ್ಯಗಳಿಗೆ ಗಮನವೀಯುತ್ತಿದ್ದವು; ಜನರ ಏಳಿಗೆಗಾಗಿ ಕೆಲಸ ಮಾಡುತ್ತಿದ್ದವು. ಇವು ಆಧುನಿಕ ಸರ್ಕಾರಗಳು ಮಾಡುವ ಕಾರ್ಯನಿರ್ವಾ ಹಕ ಶಾಖೆ, ಶಾಸನರಚನೆ ಮತ್ತು ನ್ಯಾಯನಿರ್ವಹಣೆ ಕೆಲಸಗಳನ್ನು ಮಾಡುತ್ತಿದ್ದವು. ತೆರಿಗೆಗಳನ್ನು ವಸೂಲು ಮಾಡುವ, ಮಾಫಿ ಮಾಡುವ ಮತ್ತು ಹೊಸ ತೆರಿಗೆಗಳನ್ನು ವಿಧಿಸುವ ಅಧಿಕಾರವನ್ನು ಪಡೆದಿದ್ದವು. ಹಲವು ಸಂದರ್ಭಗಳಲ್ಲಿ ನ್ಯಾಯ ವಿತರಣೆ ಮಾಡುತ್ತಿತ್ತು. ಇವುಗಳ ವ್ಯಾಪ್ತಿಗೊಳಪಟ್ಟ ದೇವಸ್ಥಾನಗಳ ಹತೋಟಿ ಹೊಂದಿದ್ದವು. ಇದೂ ಅಲ್ಲದೆ ಅನೇಕ ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದವು. ಜನರ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಜೀವನಕ್ಕೆ ಸಂಬಂಧಿಸಿ ದಂತೆ ಕಾನೂನುಮಾಡಿ ಹತೋಟಿ ಹೊಂದಿದ್ದವು. ಇವು ಪೌರಕರ್ತವ್ಯಗಳನ್ನು ಮಾಡಿ ಸಾಮಾನ್ಯ ಆಡಳಿತಕ್ಕೆ ಸಹಾಯ ಮಾಡುತ್ತಿದ್ದವು. ನಗರ ಅಥವಾ ಪೌರಸಭೆಯಲ್ಲಿ ಶ್ರೇಣಿಗಳು ಪ್ರಮುಖ ಪಾತ್ರವಹಿಸುತ್ತಿದ್ದವು. ಈ ಎಲ್ಲ ಸ್ಥಳೀಯ ಸಂಸ್ಥೆಗಳ ಚಟುವಟಿಕೆಗಳ ಅಧ್ಯಯನದಿಂದ ಇವು ಸ್ವಾಯತ್ತತೆಯನ್ನು ಹೊಂದಿದ್ದವೆಂದು ನಿಸ್ಸಂಶಯವಾಗಿ ಹೇಳಬಹುದು. ಗ್ರಾಮಸಭೆಗಳಲ್ಲಿ ಗ್ರಾಮದ ಗೌಡರು ಅಥವಾ ಒಕ್ಕಲು ಅಥವಾ ಸಮಸ್ತ ಪ್ರಜೆಗಳು ಸದಸ್ಯರಾಗಿದ್ದರು. ಗೌಡಿಕೆ ಅಥವಾ ಗ್ರಾಮದ ಮುಖಂಡತ್ವವು ಬಹಳ ಆಕರ್ಷಣೀಯವಾದ ಹುದ್ದೆಯಾಗಿತ್ತು. ಗ್ರಾಮದ ಮುಖಂಡ ಗ್ರಾಮಸಭೆಯ ಮುಖ್ಯ ಅಧಿಕಾರಿಯಾಗಿದ್ದ. ಅಗ್ರಹಾರಗಳಲ್ಲಿದ್ದ ಮಹಾಜನ ಸಭೆಯಲ್ಲಿ ವೃತ್ತಿಕಾರರು ಸದಸ್ಯರಾಗಿದ್ದರು. ಅವರ ಮುಖಂಡರನ್ನು ಬುದ್ಧಿವಂತರು, ಗ್ರಾಮ ಹೆಬ್ಬಾರುವ, ಪ್ರಭು, ಒಡೆಯ, ಮೂಲಿಗ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು. ನಾಡಿನ ಸಭೆಯಲ್ಲಿ ನಾಡಿಗೆ ಸೇರಿದ ಗ್ರಾಮಗಳ ಮುಖಂಡರು, ನಾಡಿನ ಜನರ ಪ್ರತಿನಿಧಿಗಳು ಮತ್ತು ಹಲವು ಸಂದರ್ಭಗಳಲ್ಲಿ ವ್ಯಾಪಾರ ಶ್ರೇಣಿಗಳ ಪ್ರತಿನಿಧಿಗಳು ಇದ್ದರು. ಶ್ರೇಣಿಗಳು ಪೌರ ಕರ್ತವ್ಯಗಳನ್ನು ಮಾಡುತ್ತಿದ್ದವು. ಶ್ರೇಣಿಯ ಅಧ್ಯಕ್ಷನನ್ನು ಪಟ್ಟಣಸ್ವಾಮಿ ಎಂದು ಕರೆಯುತ್ತಿದ್ದರು. ಅನೇಕ ವೇಳೆ ಪಟ್ಟಣಸ್ವಾಮಿ ಪೌರಸಭಾಧ್ಯಕ್ಷನಾಗುತ್ತಿದ್ದ. ಈ ಸ್ಥಳೀಯ ಸಂಸ್ಥೆಗಳಲ್ಲಿ ತೀರ್ಮಾನಗಳನ್ನು ಒಮ್ಮತದಿಂದ ತೆಗೆದುಕೊಳ್ಳುತ್ತಿದ್ದರು. ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ಇದ್ದಿತು. (ಎ.ವಿ.ವಿ.)

ಆರ್ಥಿಕ ಸಾಮಾಜಿಕ ಸ್ಥಿತಿ: ಧರ್ಮರಕ್ಷಣೆಗಾಗಿ ನಿರಂತರವಾಗಿ ಕದನ ಗಳಲ್ಲಿ ಭಾಗವಹಿಸಬೇಕಾಗಿದ್ದುದರಿಂದ ಸಾಮ್ರಾಜ್ಯಕ್ಕೆ ವಿಶೇಷವಾಗಿ ಧನಬೇಕಾಗಿತ್ತು. ಅರಸರಿಗೆ ಯುದ್ಧಕ್ಕೆ ಬೇಕಾದ ಕುದುರೆಗಳ ಆವಶ್ಯಕತೆ ಹೆಚ್ಚಾಗಿದ್ದು ಆ ಕಾರಣದಿಂದಲೇ ಅರಸರು ಪೋರ್ಚುಗೀಸರೊಡನೆ ಹಾರ್ದಿಕ ಸಂಬಂಧಗಳನ್ನಿಟ್ಟುಕೊಂಡು ಅವರಿಂದ ಕುದುರೆಗಳನ್ನು ಪಡೆಯುತ್ತಿದ್ದರು. ಈ ಅಶ್ವಪಡೆಗೆ ವಿಶೇಷವಾದ ಧನವ್ಯಯವಾಗುತ್ತಿತ್ತು. ಧನಸಂಗ್ರಹಕ್ಕಾಗಿ ಉತ್ಪನ್ನಮೂಲಗಳನ್ನು ರೂಪಿಸಿಕೊಳ್ಳಬೇಕಾಗಿತ್ತು. ಆದುದರಿಂದಲೇ ಅರಸರೂ ಅಧಿಕಾರಿಗಳೂ ರಾಜ್ಯದ ಆರ್ಥಿಕಾಭಿವೃದ್ಧಿ ಗಾಗಿ ಶ್ರಮಿಸಿದರು. ಬೀಳು ಬಿದ್ದಿದ್ದ ಸಾವಿರಾರು ಎಕರೆ ಭೂಮಿಯನ್ನು ಸಾಗುವಳಿಗೆ ತರಲಾಯಿತು. ಕಾಡುಗಳನ್ನು ಕಡಿದು ಹೆಚ್ಚಿನ ಭೂಮಿಯನ್ನು ವ್ಯವಸಾಯಕ್ಕೆ ಒಳಪಡಿಸಲಾಯಿತು. ಅದಕ್ಕೆಂದೇ ಆ ಹೊಸ ಪ್ರದೇಶ ಗಳಲ್ಲಿ ನೆಲಸಿದವರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿ ತೆರಿಗೆಗಳಲ್ಲಿ ರಿಯಾಯಿತಿಗಳನ್ನು ತೋರಿಸಲಾಗಿತ್ತು. ಅನೇಕ ಗ್ರಾಮಗಳನ್ನು ನಗರ ಗಳಾಗಿ ಪರಿವರ್ತಿಸಿ ಅಲ್ಲಿ ವ್ಯವಸಾಯೋತ್ಪನ್ನಗಳನ್ನು ಮಾರಲು ಸಂತೆಗಳನ್ನು ಏರ್ಪಡಿಸಲಾಯಿತು.

ರಾಜ್ಯದಲ್ಲಿ - ಹೆಚ್ಚಿನ ಮಟ್ಟಿಗೆ ಅನಂತಪುರ ಮತ್ತು ಕರ್ನೂಲು ಜಿಲ್ಲೆಗಳಲ್ಲಿ- ರತ್ನದ ವಜ್ರದ ಗಣಿಗಳಿದ್ದುವು. ರಾಜ್ಯದಲ್ಲಿ ನೂರಾರು ದೊಡ್ಡ ಸಣ್ಣ ರೇವುಗಳಿದ್ದವು. ರಾಜ್ಯ ಮಲಯ, ಬರ್ಮಾ, ಚೀನ, ಅರೇಬಿಯ, ಪರ್ಷಿಯ, ದಕ್ಷಿಣ ಆಫ್ರಿಕ, ಅಬಿಸೀನಿಯ ಮತ್ತು ಪೋರ್ಚುಗಲ್ ದೇಶಗಳೊಡನೆ ವ್ಯಾಪಾರ ಸಂಬಂಧ ಹೊಂದಿತ್ತು. ಬಟ್ಟೆ, ಅಕ್ಕಿ, ಕಬ್ಬಿಣದ ಅದಿರು, ಮರ, ಸಂಬಾರ ಪದಾರ್ಥಗಳು, ಸಕ್ಕರೆ ಇವು ರಫ್ತುಸಾಮಗ್ರಿಗಳು. ಹೀಗೆ ಭೂಮಿಯಿಂದ ಬರುವ ವಿಪುಲ ಆದಾಯ, ದೇಶಾಂತರಗಳ ವ್ಯಾಪಾರೋದ್ಯಮ ಸಾಧನೆಗಳಿಂದ ಹರಿದುಬರುವ ಧನಪ್ರವಾಹದಿಂದ ಸಾಮ್ರಾಜ್ಯ ಸಮೃದ್ಧವೂ ಧನಾಢ್ಯವೂ ಆಗಿತ್ತು. ಇಷ್ಟೆಲ್ಲ ಆದರೂ ವಿವಿಧ ರೀತಿಯ ತೆರಿಗೆಗಳಿಂದ ಜನರು ಕೆಲವೊಮ್ಮೆ ಸಹನಶಕ್ತಿಯನ್ನೇ ಕಳೆದುಕೊಂಡಂತೆ ತೋರುತ್ತದೆ. ನಾವಿದರೆಲ್ಲ ಒಟ್ಟುಗೂಡಿ ಸದಾಶಿವರಾಯನಿಗೆ ನಾವಿದವಾರಿಯನ್ನು ತೆಗೆಯಬೇಕೆಂದು ಪ್ರಾರ್ಥನೆ ಮಾಡುವ ಅಂಶ ನೂರಾರು ಶಾಸನಗಳಿಂದ ತಿಳಿದಿದೆ. ಅಂತೆಯೇ ರಾಜ್ಯಾದ್ಯಂತ ಮದುವೆಯ ಸುಂಕವನ್ನು ಕೃಷ್ಣದೇವರಾಯ ಮನ್ನಾ ಮಾಡಿದ ವಿಷಯವೂ ತಿಳಿದಿದೆ.

ಪ್ರಾಚೀನ ಕಾಲದಿಂದಲೂ ನಡೆದುಬಂದ ವರ್ಣಾಶ್ರಮಗಳನ್ನು ನಡೆಸಿ ಕೊಂಡು ಬರುವುದು ತಮ್ಮ ಕರ್ತವ್ಯವೆಂದು ಅರಸರು ಭಾವಿಸಿದ್ದರು. ಪರಕೀಯರಿಂದ ದೇಶಕ್ಕೆ ಉಂಟಾಗಿದ್ದ ಕುತ್ತಿನಿಂದ ಪಾರಾಗಲು ಪ್ರಜೆಗಳೆಲ್ಲರೂ ಒಟ್ಟಾಗಿ ಧರ್ಮದಿಂದ ಬಾಳಬೇಕೆಂದು ಅರಸರೂ ಅವರಂತೆಯೇ ಪ್ರಜೆಗಳೂ ತಿಳಿದಿದ್ದರು. ಬ್ರಾಹ್ಮಣರಲ್ಲಿ ಕೆಲವರು ದೇವಾಲಯದಲ್ಲಿ ಪೂಜಾರಿ ಕಾರ್ಯಗಳನ್ನು ಮಾಡುತ್ತಿದ್ದರು. ಇನ್ನು ಕೆಲವರು ರಾಜಕೀಯದಲ್ಲಿ ಪ್ರಮುಖ ಸ್ಥಾನ ಪಡೆದಿದ್ದರು. ಅಧಿಕಾರವರ್ಗಗಳಲ್ಲಿದ್ದವರು ಈ ಕಾಲದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ವಿಶೇಷವಾದ ಪಾಂಡಿತ್ಯ ಪಡೆದಿದ್ದರು. ಆದರೆ ಎಲ್ಲರೂ ಹೆಚ್ಚಿನ ಗೌರವಕ್ಕೆ ಪಾತ್ರರಾಗಿದ್ದರೆಂದು ಹೇಳಲಾಗುವುದಿಲ್ಲ. ಅಂದಿನ ಸಮಾಜದಲ್ಲಿ ವಿಶಿಷ್ಟವಾಗಿ ಕಂಡುಬರುವವರು ವಿಪ್ರವಿನೋದಿ, ಪಾಂಚಾಳ, ಕೈಕೊಳ, ಡೊಂಬ, ನಾವಿದ ಮುಂತಾದ ಕುಶಲಕರ್ಮಿ ಹಾಗೂ ಇತರ ಕಸಬುಗಳವರು. ಇವರೆಲ್ಲ ಆಗ ತಮ್ಮ ಹಕ್ಕುಬಾಧ್ಯತೆಗಳಿಗಾಗಿ ತಮ್ಮದೇ ಆದ ಸಂಘಗಳನ್ನು ರಚಿಸಿಕೊಂಡಿದ್ದರು. ಇದು ಅಂದಿನ ಸಮಾಜ ಜಾಗೃತವಾಗಿತ್ತೆನ್ನಲು ಒಂದು ಉದಾಹರಣೆಯಾಗಿದೆ. ವಿಜಯ ನಗರ ಸಾಮ್ರಾಜ್ಯ ಸಮಗ್ರ ದಕ್ಷಿಣ ಭಾರತಕ್ಕೂ ವಿಸ್ತರಿಸಿದ್ದರಿಂದ ಭಿನ್ನಭಾಷೆಗಳಿಗೆ ಸೇರಿದ ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆಹೋಗುತ್ತಿದ್ದುದೂ ಸಾಮಾಜಿಕ ಸಂಘರ್ಷಗಳಿಗೆ ಕಾರಣವಾಗಿತ್ತು.

ಸಾಂಘಿಕ ಜೀವನ ಜಾಗೃತವಾಗಿದ್ದ ಕಾರಣ ಪ್ರಜೆಗಳು ಸರ್ಕಾರದ ನೆರವಿಗಾಗಿ ಕಾಯದೆ ತಮ್ಮ ತಮ್ಮ ಆವಶ್ಯಕತೆಗಳನ್ನು ನೆರವೇರಿಸಿಕೊಳ್ಳು ತ್ತಿದ್ದರು. ಅನೂಚಾನವಾಗಿ ನಡೆದುಬಂದಿದ್ದ ನಗರಗಳ ಹಾಗೂ ಗ್ರಾಮೀಣ ಸ್ವಯಮಾಡಳಿತ ಸಂಸ್ಥೆಗಳು ತಮ್ಮ ಕಾರ್ಯಗಳನ್ನು ಹೆಚ್ಚು ಜವಾಬ್ದಾರಿ ಯುತವಾಗಿ ನಿರ್ವಹಿಸುತ್ತಿದ್ದವು.

ಸಮಾಜದಲ್ಲಿ ಸ್ತ್ರೀ ಬಹು ಗಣ್ಯಸ್ಥಾನ ಪಡೆದಿದ್ದಳೆಂಬುದು ನಿಜವಾದರೂ ಬಹುಪಾಲು ಸ್ತ್ರೀಯರು ವಿಶೇಷವಾಗಿ ಸಮಾಜದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲವೆಂದೇ ಹೇಳಬೇಕು. ಯಾತ್ರಿಕ ಪೇಯಿಸ್ ಸ್ತ್ರೀಯರನ್ನು ತಾನು ಹೊರಗೆ ಕಂಡುದೇ ಇಲ್ಲವೆಂದಿದ್ದಾನೆ. ಆದರೆ ಅರಸರ ಅಂತಃಪುರದಲ್ಲಿ ಅನೇಕ ಸ್ತ್ರೀಯರಿದ್ದರು. ರಾಣೀವಾಸದವರ ಸೇವೆಗೆಂದೇ ನೂರಾರು ದಾಸಿಯರು ನಿಯಮಿತ ರಾಗಿದ್ದರು. ಇಂತಹವರು ನ್ಯಾಯವಿಧಾನ, ರಕ್ಷಣಾ ವಿಧಾನ, ಗಣಿತ, ಲೇಖನಕಲೆ, ಕಾವ್ಯ, ಸಂಗೀತ, ನೃತ್ಯ, ವಾದನ ಇತ್ಯಾದಿಗಳಲ್ಲಿ ಪರಿಣತರಾಗಿದ್ದರು. ಕೃಷ್ಣದೇವರಾಯನ ಆಸ್ಥಾನದಲ್ಲಿ 400 ಜನ ಇಂತಹ ಸ್ತ್ರೀಸೇವಕಿಯರಿದ್ದರು. ಹೊನ್ನಮ್ಮ ಎಂಬಾಕೆ ಪ್ರೌಢದೇವರಾಯನ ಆಸ್ಥಾನದಲ್ಲಿ ವರದಿಗಾರಳಾಗಿದ್ದಳು. ಓದುವ ತಿರುಮಲಾಂಬೆ ಅಚ್ಯುತರಾಯನ ಕಾಲದಲ್ಲಿ ಬಹುಶಃ ಇಂತಹುದೇ ಪದವಿಯನ್ನಲಂಕರಿಸಿ ದ್ದಳು. ಗ್ರಾಮಗಳಲ್ಲಿ ಸ್ತ್ರೀಯರು ಬೇಸಾಯದಲ್ಲಿ ಸಹಕರಿಸಿ ಬತ್ತದ ಮಡಿಗಳನ್ನು ಕಾಯುವ, ಹಕ್ಕಿ ಬೆದರಿಸುವ ಕೆಲಸಗಳಲ್ಲಿ ನಿರತರಾಗಿದ್ದರು. ಕನಕದಾಸರ ಪದವೊಂದರಲ್ಲಿ ಸ್ತ್ರೀವ್ಯಾಪಾರಿಗಳ ವರ್ಣನೆಯಿದೆ. ನಟ ತಿಮ್ಮಯ್ಯನ ಮಗಳಾದ ಪಾತ್ರಿ ಎಂಬಾಕೆ ನಟಿಯಾಗಿ ತಾಯಿಕುಂದ ನಾಟಕದಲ್ಲಿ ಪಾತ್ರವಹಿಸಿದ್ದಳೆಂದು ಒಂದು ಶಾಸನದಿಂದ ತಿಳಿದಿದೆ. ದೇವಾಲಯಗಳಲ್ಲಿ ಹಲವಾರು ಸ್ತ್ರೀಯರು ವಿಭಿನ್ನಕಾರ್ಯಗಳಲ್ಲಿ ತೊಡಗಿದ್ದರು. ವೇಶ್ಯಾವೃತ್ತಿ ಹಾಗೂ ದೇವದಾಸಿ ಪದ್ಧತಿ ಈ ಕಾಲದಲ್ಲಿ ಹೆಚ್ಚಿತ್ತು. ಅನೇಕ ವೇಶ್ಯೆಯರು ವೈಭವೋಪೇತ ಜೀವನ ನಡೆಸುತ್ತಿದ್ದರೆಂದೂ ಶ್ರೀಮಂತರಾಗಿದ್ದರೆಂದೂ ಬಾರ್ಬೋಸ ತಿಳಿಸಿದ್ದಾನೆ. ದೇವಾಲಯದಲ್ಲಿ ನಡೆದ ಉತ್ಸವಗಳಲ್ಲಿ, ಶ್ರೀಮಂತರ ಮದುವೆ ಮುಂತಾದ ಇತರ ಸಂದರ್ಭಗಳಲ್ಲಿ ಈ ಸ್ತ್ರೀಯರು ವಿಶೇಷವಾಗಿ ಭಾಗವಹಿಸುತ್ತಿದ್ದರು.

ಜನ ಉತ್ಸವಪ್ರಿಯರಾಗಿದ್ದರು. ಹಬ್ಬಹುಣ್ಣಿಮೆಗಳಲ್ಲಿ, ಆಟಪಾಠಗಳಲ್ಲಿ ತೊಡಗಿ ಸಮುದಾಯಕ್ಕೆ ಸಂತಸವನ್ನೀಯುತ್ತಿದ್ದರು. ಅರಸರೂ ಇದನ್ನು ಪ್ರೋತ್ಸಾಹಿಸಿದ್ದರು. ಈ ಕಾಲದಲ್ಲಿ ಬಹಳ ಪ್ರಾಶಸ್ತ್ಯಪಡೆದ ಹಬ್ಬ ನವರಾತ್ರಿ. ಕೃಷ್ಣದೇವರಾಯನ ಕಾಲದಲ್ಲಿ ಅರಮನೆಯಲ್ಲಿ ಆಚರಿಸಲಾದ ಈ ಹಬ್ಬದ ವೈಭವವನ್ನು ಪೇಯಿಸ್ ವರ್ಣಿಸಿದ್ದಾನೆ. ಈತನ ಹೇಳಿಕೆ ಗಳನ್ನು ಕವಿ ರತ್ನಾಕರವರ್ಣಿಯ ಭರತೇಶವೈಭವದ ನವರಾತ್ರಿಸಂಧಿಯಲ್ಲಿ ಬಣ್ಣಿಸಲಾದ ವಿವರಗಳೊಡನೆ ಹೋಲಿಸಬಹುದು. ಈ ಕಾಲದಲ್ಲಿ ಸಂಗೀತಕ್ಕೆ ಅಮಿತವಾದ ಪ್ರೋತ್ಸಾಹ ದೊರತಿತ್ತು. ಹಲವಾರು ಸಂಗೀತ ಗ್ರಂಥಗಳು ರಚಿತವಾದುವು. ಭಕ್ಷ್ಯಭೋಜ್ಯಗಳನ್ನು ತಯಾರಿಸುವುದರಲ್ಲಿ ಉತ್ತಮ ಅಭಿರುಚಿಯನ್ನು ಅಂದಿನ ಜನ ವ್ಯಕ್ತಗೊಳಿಸುತ್ತಿದ್ದರು. ಮಂಗರಸನ ಸೂಪಶಾಸ್ತ್ರ ಈ ಕಾಲದ ಒಂದು ಗ್ರಂಥ.

ಲಲಿತಕಲೆ-ಸಾಹಿತ್ಯ: ವಿಜಯನಗರದ ಅರಸರ ಆಳಿಕೆ ಕರ್ನಾಟಕ ಸಂಸ್ಕøತಿಯ ಉಚ್ಛ್ರಾಯಕಾಲ; ಕಲೆ ಸಾಹಿತ್ಯಗಳು ಪುನರುಜ್ಜೀವನಗೊಂಡ ಕಾಲ. ವಿಜಯನಗರದ ಅರಸರು ಎಲ್ಲ ರೀತಿಯ ಕಲೆಗಳಿಗೂ ಅಮಿತ ಪ್ರೋತ್ಸಾಹ ನೀಡಿದರು. ಈ ಕಾಲದಲ್ಲಿ ಕಲೆಗೆ ಹೊಸ ತಿರುವು, ಹೊಸ ಉತ್ಸಾಹ ಮೂಡಿತು. ರಾಜಮನೆತನಗಳ ಪ್ರೋತ್ಸಾಹವಷ್ಟಕ್ಕೇ ಸೀಮಿತವಾಗದೆ ಹಲವು ಕಾರಣಗಳಿಂದಾಗಿ ಜನಸಾಮಾನ್ಯರಲ್ಲೂ ಕಲಾಪ್ರಜ್ಞೆ ಮೂಡಿ ಪ್ರೌಢವಾದ ವಿದ್ವತ್ಕಲೆ ಮತ್ತು ಜನಪದ ಕಲೆಗಳ ಸಮ್ಮಿಳನವಾಗಿ ಪಂಡಿತಪಾಮರರಿಬ್ಬರನ್ನೂ ರಂಜಿಸಬಲ್ಲ ನೂತನ ವಿಸ್ತಾರವನ್ನು ಕಲೆಗಳು ಕಂಡುಕೊಂಡವು.

ವಿಜಯನಗರ ಕಾಲದ ಚಿತ್ರಕಲೆ ಈಗ ಉಳಿದು ಬಂದಿರುವುದು ಬಹಳ ಕಡಿಮೆ. ಆದರೆ ಆ ಕಾಲದಲ್ಲಿ ಚಿತ್ರಕಲೆಗೆ ವಿಜಯನಗರದ ಅರಸರು ಅದರಲ್ಲಿಯೂ ಕೃಷ್ಣದೇವರಾಯ, ಅಚ್ಯುತರಾಯರು ಕೊಟ್ಟ ಪ್ರೋತ್ಸಾಹ, ಚಿತ್ರಕಾರರಲ್ಲಿ ಆಗ ಇದ್ದ ಉತ್ಸಾಹಗಳನ್ನು ಹೊರದೇಶದ ಪ್ರವಾಸಿಗಳು ಬರೆದಿಟ್ಟಿರುವ ಭವ್ಯವಾದ ವರ್ಣನೆಯಿಂದ ತಿಳಿಯಲವಕಾಶ ವಿದೆ. ಇವರ ಕಾಲದ ಚಿತ್ರಗಳು ಹಂಪೆಯ ವಿರೂಪಾಕ್ಷ ದೇವಾಲಯ, ಆನೆಗೊಂದಿಯ ಒಂದು ಮಂಟಪ, ಲೇಪಾಕ್ಷಿ, ಸೋಂಡಲ್ಲೆ ತಾಪಪತ್ರಿಗಳ ದೇವಾಲಯಗಳಲ್ಲಿ, ಕಂಚಿ ವರದರಾಜ ದೇವಾಲಯ, ತಂಜಾವೂರಿನ ಬೃಹದೀಶ್ವರ ದೇವಾಲಯಗಳಲ್ಲಿ, ಚಂದ್ರಗಿರಿಯಲ್ಲಿ ಉಳಿದುಬಂದಿವೆ. ಆ ಕಾಲದ ಸಾಹಿತ್ಯದಲ್ಲಿ ಬರುವ ವರ್ಣನೆಗಳಿಂದ ಆ ರಾಜ್ಯದಲ್ಲಿದ್ದ ಶ್ರೀಮಂತರು ತಮ್ಮ ಮನೆಗಳನ್ನು ವರ್ಣಚಿತ್ರಗಳಿಂದ ಅಲಂಕರಿಸುತ್ತಿದ್ದ ಪದ್ಧತಿ ಇದ್ದಂತೆ ತೋರುತ್ತದೆ. ಇವು ಪೌರಾಣಿಕ ವಸ್ತುಗಳನ್ನಾಧರಿ ಸಿದ್ದುವು; ಸಮುದ್ರಮಥನ, ಕಾಮಸಂಹಾರಮೂರ್ತಿ, ಗಿರಿಜಾಕಲ್ಯಾಣ, ನಳದಮಯಂತಿ, ಪ್ರಾಣಿಪಕ್ಷಿಗಳ ಆಕೃತಿಗಳು ಇತ್ಯಾದಿ. ಇವಲ್ಲದೆ ಜನಸಾಮಾನ್ಯರೂ ತಮ್ಮ ಮನೆಗಳ ಮುಂದೆ, ಗೋಡೆಗಳ ತಳಭಾಗದಲ್ಲಿ ಗಿಡ ಗಿಣಿಗಳ ಆಕೃತಿಗಳು ರಂಗವಲ್ಲಿಯ ಬಗೆಬಗೆಯ ಆಕಾರಗಳನ್ನು ಬಿಡಿಸುವುದರಲ್ಲಿ ಆಸಕ್ತಿ ತೋರುತ್ತಿದ್ದುದು ಕಂಡುಬರುತ್ತದೆ.

ಕೃಷ್ಣದೇವರಾಯನ ಆಳಿಕೆಯಲ್ಲಿ ಅವನ ಅರಮನೆಯನ್ನು ಸಂದರ್ಶಿಸಿದ್ದ ಪೋರ್ಚುಗೀಸ್ ಪ್ರವಾಸಿ ಡೊಮಿಂಗೊ ಪೇಯಿಸನು ಅರಮನೆಯ ವಿವಿಧ ಭಾಗಗಳಲ್ಲಿ ಕಂಡುಬಂದ ಚಿತ್ರಗಳ ಬಗೆಗೆ, ಅಲ್ಲಿ ಚಿತ್ರಿಸುತ್ತಿದ್ದ ಚಿತ್ರಕಾರರ ಉತ್ಸಾಹದ ಬಗೆಗೆ ವಿಸ್ತಾರವಾಗಿ ವರ್ಣಿಸಿದ್ದಾನೆ. ಅರಮನೆಯ ಪ್ರವೇಶದ್ವಾರದ ಬಳಿ ಎರಡು ಕಡೆಯೂ ಗೋಡೆಗಳ ಮೇಲೆ ಕೃಷ್ಣದೇವ ರಾಯ ಮತ್ತು ಅವನ ತಂದೆಯ ಆಳೆತ್ತರದ ಆಕೃತಿಗಳನ್ನು ಚಿತ್ರಿಸಿದ್ದರು. ರಾಜರ ಪೋಷಾಕುಗಳು, ಆಭರಣಗಳು, ರಾಜಯೋಗ್ಯವಾದ ಅವರ ನಿಲುವು ಗಾಂಭೀರ್ಯಗಳನ್ನು ಅತ್ಯಂತ ಸ್ವಾಭಾವಿಕವಾಗಿ ಚಿತ್ರಿಸಿದ್ದಂತೆ ತಿಳಿಸಿದ್ದಾನೆ. ಇದೇ ರೀತಿ ದಂತಶಾಲೆಯಲ್ಲಿ ಬೇರೆ ಬೇರೆ ದೇಶಗಳ ಜನರ ಉಡುಪು, ರೀತಿನೀತಿಗಳು, ನಡವಳಿಕೆಗಳನ್ನೆಲ್ಲ ಯಥಾವತ್ತಾಗಿ ಚಿತ್ರಿಸಿದ್ದು ಅವುಗಳಲ್ಲಿ ಪೋರ್ಚುಗೀಸರನ್ನು ಚಿತ್ರಿಸಿರುವುದನ್ನೂ ಪೇಯಿಸ್ ಗುರುತಿಸಿದ್ದಾನೆ. ಅರಮನೆಯ ಮೇಲಂತಸ್ತಿನ ಒಂದು ಕೋಣೆಯ ಎಲ್ಲ ಭಾಗಗಳೂ ಚಿತ್ರಿತವಾಗಿದ್ದುವು. ಇಲ್ಲಿ ಶಿಲ್ಪಭಾಗಗಳನ್ನು ಕೂಡ ಬಣ್ಣದಿಂದ ಚಿತ್ರಿಸಿದ್ದರು. ರಾಜಸಭಾಭವನವೂ ಇದೇ ರೀತಿ ಚಿತ್ರಿತವಾಗಿತ್ತು. ನೃತ್ಯಶಾಲೆಯಲ್ಲಿ ಅದರ ಹಿಂಭಾಗದಲ್ಲೆ ನೃತ್ಯಗಾತಿಯರು ವಿರಮಿಸಿ ಕೈಕಾಲುಗಳನ್ನು ಚಾಚಿ ಸಡಿಲಗೊಳಿಸುತ್ತಿದ್ದ ಅಂಗಣದಲ್ಲಿಯೂ ಸುತ್ತಲೂ ನಾಟ್ಯಭಂಗಿಯ ಬಗೆಬಗೆಯ ಚಿತ್ರಗಳಿದ್ದುವು. ಅರಮನೆಯ ಆನೆಗಳಿಗೂ ಅವುಗಳ ತಲೆಯ ಮುಂಭಾಗದಲ್ಲಿ ಹಲವು ಬಗೆಯ ರಾಕ್ಷಸಾಕೃತಿಗಳನ್ನೂ ಮೃಗಗಳ ಆಕೃತಿಗಳನ್ನೂ ಚಿತ್ರಿಸಿದ್ದುದನ್ನು ಪೇಯಿಸ್ ಕಂಡಿದ್ದಾನೆ. ಇವನ ವರದಿಯಂತೆ ಕೃಷ್ಣದೇವರಾಯನ ಅರಮನೆಯಲ್ಲಿಯ ಚಿತ್ರಗಳು ಉನ್ನತಮಟ್ಟದವಾಗಿದ್ದುವು; ಯಥಾರ್ಥವಾದ ಆಕಾರಗಳನ್ನು, ಅನುರೂಪವಾದ ಬಣ್ಣಗಳನ್ನು ಬಳಸುವಲ್ಲಿ ಆ ಚಿತ್ರಕಾರರು ನಿಷ್ಣಾತರಾಗಿದ್ದರು.

ಇಮ್ಮಡಿ ವೆಂಕಟನ ಕಾಲದಲ್ಲಿ ಸಂದರ್ಶಿಸಿದ್ದ ಜೆರಿಕ್ ಚಂದ್ರಗಿರಿಯಲ್ಲಿ ಅನೇಕ ಚಿತ್ರಗಾರರಿದ್ದುದಾಗಿ ತಿಳಿಸಿದ್ದಾನೆ. ಯುರೋಪಿನಿಂದ ಬಂದ ಪ್ರವಾಸಿಗಳು ರಾಜನಿಗೆ ಚಿತ್ರಗಳನ್ನು ಕಾಣಿಕೆ ಕೊಡುತ್ತಿದ್ದುದಾಗಿಯೂ ಅವುಗಳ ಮಟ್ಟಕ್ಕೆ ದೇಶಿಯ ಚಿತ್ರಗಳು ಬರುತ್ತಿರಲಿಲ್ಲವೆಂದೂ ಅವನ ಅಭಿಪ್ರಾಯ.

ಈಗ ಉಳಿದುಬಂದಿರುವ ಚಿತ್ರಗಳಲ್ಲಿ ಬಹುಶಃ ಆನೆಗೊಂದಿಯ ಹುಚ್ಚುಮಲ್ಲಪ್ಪನ ಮಠ ಎಂದು ಈಗ ಕರೆಯಲ್ಪಡುವ ಒಂದು ದೊಡ್ಡ ಮಂಟಪ ಗಮನಾರ್ಹ. ಇದರ ಚಾವಣಿಯಲ್ಲಿಯ ಚಿತ್ರಗಳೆಲ್ಲ ಬಹು ಮಟ್ಟಿಗೆ ನಾಶವಾಗಿದ್ದು ಚಿತ್ರಗಳಿದ್ದ ಕುರುಹುಗಳು ಮಾತ್ರ ಈಗ ಉಳಿದಿವೆ. ಹಂಪೆಯ ವಿರೂಪಾಕ್ಷ ದೇವಾಲಯದ ಮುಂದಿನ ವಿಶಾಲವಾದ ಭವ್ಯವಾದ ರಂಗಮಂಟಪದ ಚಾವಣಿ, ತೊಲೆಗಳ ಮೇಲಿನ ಚಿತ್ರಗಳು ಅನಂತರದ ಕಾಲದ್ದು. ಈ ಮಂಟಪವನ್ನು 1509-10ರಲ್ಲಿ ಕೃಷ್ಣದೇವರಾಯ ತನ್ನ ಕಿರೀಟಧಾರಣಾ ಮಹೋತ್ಸವದ ಅಂಗವಾಗಿ ಕಟ್ಟಿಸಿದ. ಆಗಲೇ ಈ ಚಿತ್ರಗಳನ್ನೂ ರಚಿಸಿರಬೇಕು. ಇವುಗಳಲ್ಲಿ ಒಂದು ಸಾಲಿನಲ್ಲಿ ಉಮಾಮಹೇಶ್ವರ, ಲಕ್ಷ್ಮೀನಾರಾಯಣ, ಬ್ರಹ್ಮಸರಸ್ವತಿಯರ ಚಿತ್ರಗಳೂ ಎರಡನೆಯದರಲ್ಲಿ ಎಡಬಲಗಳಲ್ಲಿ ಬ್ರಹ್ಮ, ವಿಷ್ಣು, ತುಂಬುರುನಾರದರು, ಪರಿವಾರದೇವತೆಗಳೂ ನಿಂತಿರುವಂತೆ ವಿಸ್ತಾರವಾಗಿ ಚಿತ್ರಿಸಿರುವ ಗಿರಿಜಾಕ ಲ್ಯಾಣ, ಮತ್ತೊಂದು ಅಷ್ಟದಿಕ್ಪಾಲಕರ ಸಾಲು, ಹಾಗೆಯೇ ಇನ್ನೊಂದರಲ್ಲಿ ಶಿವನ ತಪೋಭಂಗ, ತ್ರಿಪುರದಹನಗಳೂ ಕೊನೆಯ ಸಾಲಿನಲ್ಲಿ ವಿಷ್ಣುವಿನ ದಶಾವತಾರಗಳೂ ಚಿತ್ರಿತವಾಗಿವೆ. ಮುಂಭಾಗದ ತೊಲೆಯೊಂದರ ಮೇಲಿನ ಪಲ್ಲಕ್ಕಿಯೊಂದರಲ್ಲಿ ಕುಳಿತ ಸಂನ್ಯಾಸಿಯೊಬ್ಬನ ಮೆರವಣಿಗೆಯನ್ನು ವಿದ್ಯಾರಣ್ಯರೆಂದೋ ವ್ಯಾಸರಾಯರೆಂದೋ ಗುರುತಿಸುತ್ತಾರೆ. ಆದರೆ ಇವುಗಳಿಗೆ ಅನಂತರದ ಕಾಲದಲ್ಲಿ ಪುನಃ ಬಣ್ಣ ಹಾಕಿರುವುದರಿಂದ ಅವುಗಳ ಮೂಲಸ್ವರೂಪದ ಸ್ಪಷ್ಟ ಅರಿವು ಸಾಧ್ಯವಾಗದು. ಈ ದೃಷ್ಟಿಯಿಂದ ಅಚ್ಯುತರಾಯನ ಕಾಲದಲ್ಲಿ ಲೇಪಾಕ್ಷಿಯಲ್ಲಿ ನಿರ್ಮಿತವಾದ ವೀರಭದ್ರ ದೇವಾಲಯದ ವ್ಯಾಪಕವಾದ ಚಿತ್ರಸಮೂಹ ಅಮೂಲ್ಯ ವಾದುದು. ಈ ತ್ರಿಕೂಟಾಚಲದ ಮಧ್ಯದ ನಾಟ್ಯಮಂಟಪ, ಅರ್ಧಮಂಟಪಗಳ ಚಾವಣಿಗಳು, ಗೋಡೆಗಳು, ಸುತ್ತಲೂ ಇರುವ ಕೈಸಾಲೆಯ ಚಾವಣಿಗಳ ಮೇಲೆಲ್ಲ ಚಿತ್ರಗಳು ತುಂಬಿವೆ. ಕೈಸಾಲೆಯ ಚಿತ್ರಗಳು ಖಿಲವಾಗಿದ್ದರೂ ದೇವಾಲಯದ ಒಳಗಿನ ಚಿತ್ರಗಳು ಉಳಿದು ಬಂದಿದ್ದು ಇಲ್ಲಿನ ಹಲವು ಚಿತ್ರಗಳು ಕಲೆಗಾರನ ನೈಪುಣ್ಯವನ್ನು ಪ್ರದರ್ಶಿಸುತ್ತವೆ. ನಾಟ್ಯಮಂಟಪದಲ್ಲಿ ಗಿರಿಜಾಕಲ್ಯಾಣ, ದಕ್ಷಿಣಾಮೂರ್ತಿ, ಶ್ರೀರಾಮಪಟ್ಟಾಭಿಷೇಕ, ವಟಪತ್ರಶಾಯಿ, ಕಿರಾತಾರ್ಜುನೀಯ, ಶಿವಪಾರ್ವತಿಯರ ಪಗಡೆಯಾಟ ಇತ್ಯಾದಿ ಚಿತ್ರಗಳಿದ್ದು ಮಧ್ಯದಲ್ಲಿ ಬೃಹದಾಕಾರದಲ್ಲಿ ಚಿತ್ರಿತವಾದ ವೀರಭದ್ರನ ಮೂರ್ತಿಯ ಮುಂದೆ ಆ ದೇವಾಲಯವನ್ನು ಕಟ್ಟಿಸಿದ ವಿರುಪಣ್ಣ, ವೀರಪ್ಪ ಮತ್ತು ಅವರ ಪರಿವಾರಗಳು ಪ್ರಸಾದ ಸ್ವೀಕರಿಸುತ್ತಿರುವುದನ್ನು ವಿಸ್ತಾರವಾಗಿ ಚಿತ್ರಿಸಲಾಗಿದೆ. ಅರ್ಧಮಂಟಪದಲ್ಲಿ ಹಲವು ಬಗೆಯ ಶಿವಲೀಲಾಮೂರ್ತಿ ಗಳಿದ್ದು ಕೆಲವು ಅವುಗಳ ರಚನಾಕೌಶಲ್ಯಕ್ಕೆ ಹೆಸರಾಗಿವೆ. ಇವುಗಳಲ್ಲಿ ರಾಕ್ಷಸನ ಮೇಲೆ ನರ್ತಿಸುತ್ತಿರುವ ಶಿವನ ಭವ್ಯವಾದ ನಾಟ್ಯಭಂಗಿ ಅದ್ಭುತವಾದ ಚಿತ್ರ. ಶಿವನ ಸುಂದರವಾದ ಭಂಗಿ, ನೀಳಕಾಯದ ಸೊಬಗು, ಚಲನೆಯ ಸಾಮರಸ್ಯ, ಅತ್ಯಂತ ಅನುರೂಪವಾದ ನಿಲವು, ಪ್ರಶಾಂತ ಮುಖಮುದ್ರೆಗಳು ನುರಿತ ಚಿತ್ರಗಾರನೊಬ್ಬನ ಕೃತಿ ಇದೆಂದು ವ್ಯಕ್ತಪಡಿಸುತ್ತವೆ. ಇಲ್ಲಿನ ಮತ್ತೊಂದು ಅತಿ ಸುಂದರ ಚಿತ್ರವೆಂದರೆ ಗಂಗಾಧರನಾದ ಶಿವ ಗೌರಿಯನ್ನು ಸಾಂತ್ವನಗೊಳಿಸುತ್ತಿರುವುದು. ಅತ್ಯಂತ ನವುರಾದ ಭಾವನೆಯನ್ನು ಅಷ್ಟೇ ನವುರಾಗಿ ಬಿಡಿಸಿರುವ ಇಲ್ಲಿನ ಕಲೆ ಅಮೋಘವಾದುದು. ಜಟೆಯಲ್ಲಿ ಅಡಗಿಸಿಟ್ಟುಕೊಂಡಿದ್ದ ತನ್ನ ಹೊಸ ಹೆಣ್ಣು ಗಂಗೆಯ ಭಗೀರಥನ ಬೇಡಿಕೆಗೆ ಓಗೊಟ್ಟು ದುಮ್ಮಿಕ್ಕಿದುದನ್ನು ಕಂಡ ಪಾರ್ವತಿಯ ಅಸಹನೆ, ಶಿವನ ಪೇಚು, ಆದರೂ ಮುಖತಿರುಹಿದ ಆ ಕೋಪದ ಮುಂದೆ ಶಾಂತ ಭಾವದಿಂದ ಗಲ್ಲಕ್ಕೆ ಕೈಚಾಚಿ ರಮಿಸಲೆತ್ನಿಸುತ್ತಿರುವ ಆ ಭಂಗಿ-ಎಲ್ಲವೂ ಸೂಕ್ಷ್ಮ. ಪಾದದಿಂದ ಕಟಿಯವರೆಗೆ ಹಿಂದಕ್ಕೆ ಚಾಚಿಕೊಂಡಂತಿದ್ದು ಅಲ್ಲಿಂದ ಮೇಲೆ ನೇರ ನಿಲುವಿರುವುದು ಇಲ್ಲಿ ನಿಂತಿರುವ ಸಾಲುಚಿತ್ರಗಳ ವೈಶಿಷ್ಟ್ಯ. ವಿಜಯನಗರದ ಕಡೆಯ ಕಾಲಕ್ಕೆ ಸೇರಬಹುದಾದ ಬೃಹದೀಶ್ವರ ದೇವಾಲಯದ ಚಿತ್ರಗಳಲ್ಲಿ ಒರಟುತನ, ಅಸಹಜತೆ ಕಂಡುಬಂದು ಚಿತ್ರಕಲೆ ಅವನತಿಹೊಂದುತ್ತಿದ್ದುದನ್ನು ಸೂಚಿಸುತ್ತವೆ. ಒಟ್ಟಿನಲ್ಲಿ ವಿಜಯನಗರದ ಉಚ್ಛ್ರಾಯಕಾಲದ ಚಿತ್ರಗಳು ಅತ್ಯಂತ ನವುರಾದ ಸುಂದರವಾದ ಭಾವಭಂಗಿಗಳನ್ನು ಸೆರೆಹಿಡಿಯುವಲ್ಲಿ, ಆಯಾ ಸಂದರ್ಭಕ್ಕೆ ತಕ್ಕಂತೆ ಮನದ ಇಂಗಿತವನ್ನು ಹೊಮ್ಮಿಸುವಲ್ಲಿ, ಅನುರೂಪವಾದ ವರ್ಣಸಂಯೋಜನೆಯಲ್ಲಿ, ಗೆರೆಗಳಲ್ಲಿ ನಿಶ್ಚಿತವಾದ ಆಕೃತಿಗಳನ್ನು ಮೂಡಿಸುವಲ್ಲಿ, ಬಾಗುಬಳಕುಗಳನ್ನು ತರುವಲ್ಲಿ ಆ ಕಾಲದ ಚಿತ್ರಕಾರರು ನಿಷ್ಣಾತರಾಗಿದ್ದರೆಂಬುದನ್ನು ತೋರಿಸುತ್ತವೆ.

ಸಂಗೀತ, ನೃತ್ಯಕಲೆಗಳಿಗೆ ವಿಜಯನಗರದ ಅರಸರು ಕೊಟ್ಟ ಪ್ರೋತ್ಸಾ ಹದಿಂದ ಅವು ಹಲವು ಬಗೆಯಲ್ಲಿ ಅಭಿವೃದ್ಧಿಹೊಂದಿದುವು. ದಾಕ್ಷಿಣಾತ್ಯ ಸಂಗೀತ ಪದ್ಧತಿಗೆ ಕರ್ಣಾಟಕ ಸಂಗೀತ ಎಂಬ ಹೆಸರು ಚಾಳುಕ್ಯ ಸೋಮೇಶ್ವರನ ಕಾಲದಲ್ಲಿಯೇ ಬಂದಿತೆಂದು ಹೇಳಲಾಗಿದ್ದರೂ ಅದು ಪ್ರಚಲಿತವಾದದ್ದು ವಿಜಯನಗರ ಕಾಲದಲ್ಲಿಯೆ. ಈ ಕಾಲದಲ್ಲಿ ಲಕ್ಷ್ಯವಿಭಾಗಗಳು ಬಹುವಾಗಿ ಅಭಿವೃದ್ಧಿ ಹೊಂದಿದುವು. ವಿಜಯನಗರ ಸಾಮ್ರಾಜ್ಯಸ್ಥಾಪನೆಗೆ ಮೂಲಕಾರಣರೆಂದು ಲಕ್ಷಣಗ್ರಂಥವನ್ನು ರಚಿಸಿದ್ದು ದಾಗಿ ತಿಳಿದುಬರುತ್ತದೆ. ಈ ಮೂಲಗ್ರಂಥ ದೊರೆತಿಲ್ಲವಾದರೂ ತಂಜಾವೂರಿನ ರಾಜ ರಘುನಾಥ ನಾಯಕನ ಹೆಸರಿನಲ್ಲಿ ರಚಿತವಾದ ಗೋವಿಂದ ದೀಕ್ಷಿತನ ಸಂಗೀತಸುಧಾ ಎಂಬ ಲಕ್ಷಣಗ್ರಂಥದಲ್ಲಿ ವಿದ್ಯಾರಣ್ಯರ ಸಂಗೀತ ಸಾರವನ್ನು ಅನುಸರಿಸಿ ಈ ಗ್ರಂಥವನ್ನು ರಚಿಸಿದುದಾಗಿ ಕೃತಿಕಾರ ಹೇಳಿಕೊಂಡಿದ್ದಾನೆ. ಅದರಲ್ಲಿ ರಾಗ ಅಥವಾ ಆಲಾಪದ ಬಗೆಗೆ ವಿವರಗಳನ್ನು ಕೊಡುತ್ತ ಅವುಗಳನ್ನು ವಿದ್ಯಾರಣ್ಯರ ಸಂಗೀತಸಾರದಲ್ಲಿಯ ರಾಗಾಧ್ಯಾಯದಿಂದ ನೇರವಾಗಿ ಎತ್ತಿಕೊಂಡು ದಾಗಿಯೂ 15 ಮೇಳಗಳಿಂದ ಕೂಡಿದ ಅವರ ಮೇಳಪದ್ಧತಿಯೇ ಬಹುಪ್ರಾಚೀನವೆಂದೂ ತಿಳಿಸಿದ್ದಾನೆ. ಇಮ್ಮಡಿ ಪ್ರೌಢದೇವರಾಯನ ಆಸ್ಥಾನದಲ್ಲಿದ್ದ ಅಭಿನವಭರತಾಚಾರ್ಯ, ರಾಯವಾಗ್ಗೇಯಕಾರ ಮುಂತಾದ ಬಿರುದುಗಳನ್ನು ಹೊಂದಿದ್ದ ಕಲ್ಲಪ್ಪ ದೇಶಿಕ ಅಥವಾ ಚತುರ ಕಲ್ಲಿನಾಥ ಶಾಙ್ರ್ಗದೇವನ ಸಂಗೀತರತ್ನಾಕರಕ್ಕೆ ಕಲಾನಿಧಿ ಎಂಬ ವಿದ್ವತ್‍ಪೂರ್ಣವಾದ ವ್ಯಾಖ್ಯಾನವನ್ನು ರಚಿಸಿದ. ಅದರಲ್ಲಿ ಅಲ್ಲಿಯವರೆಗೆ ಸಂಗೀತಶಾಸ್ತ್ರದ ಬಗೆಗೆ ಬೆಳೆದು ಬಂದಿದ್ದ ಸಾಹಿತ್ಯವನ್ನು ಕೂಲಂಕಷವಾಗಿ ವಿಚಾರಮಾಡಿದ್ದಾನೆ. ಇದು ಸಂಗೀತ ಶಾಸ್ತ್ರದ ವಿಕಾಸಕ್ಕೆ ಮುಂದೆ ಮಾರ್ಗದರ್ಶಕವಾಯಿತು. ಅವನ ಈ ಗ್ರಂಥ ಸಂಗೀತದ ಬಗೆಗೆ ಒಂದು ಕಿರುವಿಶ್ವಕೋಶವೆನ್ನಬಹುದು. ಅದು ಮುಂದಿನ ಲಕ್ಷಣಕಾರರ ಮೇಲೂ ತನ್ನ ಪ್ರಭಾವ ಬೀರಿತು. ಅಲ್ಲದೆ ಕಲ್ಲಿನಾಥಮತವೆಂಬ ಒಂದು ವಿಶಿಷ್ಟ ಸಂಪ್ರದಾಯವೇ ಪ್ರಚಲಿತವಾಯಿತು. ಗಾಂಧರ್ವ ಗುಣಗಂಭೀರನಾಗಿದ್ದ ಪ್ರೌಢದೇವರಾಯನಿಂದ ಈತನಿಗೆ ಅಪಾರ ಪ್ರೋತ್ಸಾಹ ದೊರೆಯಿತೆಂದು ತಿಳಿಯುತ್ತದೆ.

ಕೃಷ್ಣದೇವರಾಯ ಸಂಗೀತದಲ್ಲಿ ಕುಶಲಿಯಾಗಿದ್ದ. ಸಂಗೀತದಲ್ಲಿ ಆತನನ್ನು ಮೀರಿಸುವವರೇ ಇರಲಿಲ್ಲವೆಂದು ಶಾಸನವೊಂದು ತಿಳಿಸುತ್ತದೆ. ಕಲ್ಲಿನಾಥನಿಂದೀಚೆಗೆ ಸಂಗೀತಶಾಸ್ತ್ರ ವಿಪುಲವಾಗಿ ಬೆಳೆದುದಲ್ಲದೆ ಸಂಗೀತ ಕಲೆಯೂ ಅಪಾರವಾಗಿ ಬೆಳೆದು ಮನೆಮನೆಯಲ್ಲಿಯೂ ಒಂದು ಆವಶ್ಯಕ ಕಲೆಯಾಗಿ ಪರಿಗಣಿಸಲ್ಪಟ್ಟಿತು.

1500-50 ಅವಧಿಯಲ್ಲಿ ಹಲವರು ಸಂಗೀತದ ಬಗೆಗೆ ಉದ್ಗ್ರಂಥ ಗಳನ್ನು ಬರೆದರು. ಈ ಕಾಲದ ಲಕ್ಷಣಗ್ರಂಥಗಳೆಂದರೆ ದೇವಣಭಟ್ಟನ ಸಂಗೀತ ಮುಕ್ತಾವಳಿ, ಲಕ್ಷ್ಮಣಭಟ್ಟ ಅಥವಾ ಲಕ್ಷ್ಮೀಧರ ರಚಿಸಿದ ಸಂಗೀತಸೂರ್ಯೋದಯ, ಗೋಪೇಂದ್ರ ತಿಪ್ಪಭೂಪಾಲನ ತಾಳದೀಪಿಕೆ, ಕಾಮದೇವಿ ಬರೆದ ಸಂಗೀತ ಮತ್ತು ನಾಟ್ಯವನ್ನು ವಿವರಿಸುವ ಸಂಗೀತಯುಗದರ್ಪಣ ಮತ್ತು ಸಂಗೀತವಿದ್ಯಾವಿನೋದ ಮುಂತಾದುವು. ಇದೇ ಕಾಲದಲ್ಲಿದ್ದ ಕರ್ನಾಟಕದವನೇ ಆಗಿದ್ದ ಪುಂಡರೀಕವಿಠಲ ಉತ್ತರದ ಮುಸ್ಲಿಮ್ ದೊರೆಗಳ ಆಶ್ರಯದಲ್ಲಿದ್ದು ಸದ್ರಾಗಚಂದ್ರೋದಯ, ರಾಗಮಂಜರಿ, ರಾಗಮಾಲಾ ಮತ್ತು ನರ್ತನ ನಿರ್ಣಯ ಎಂಬ ನಾಲ್ಕು ಶಾಸ್ತ್ರಗ್ರಂಥಗಳನ್ನು ರಚಿಸಿದ.

ಕೃಷ್ಣದೇವರಾಯನ ಅಳಿಯ ರಾಮರಾಯನಿಗಂತೂ ಸಂಗೀತದಲ್ಲಿ ಅಪಾರ ಆಸಕ್ತಿ. ಆತನ ಇಚ್ಛೆಯ ಮೇರೆಗೆ ರಾಮಾಮಾತ್ಯ ಸ್ವರಮೇಳ ಕಲಾನಿಧಿ ಎಂಬ ಗ್ರಂಥವನ್ನು ರಚಿಸಿದ. ಈ ರಾಮಾಮಾತ್ಯ ತಾನು ಕಲ್ಲಿನಾಥನ ಮೊಮ್ಮಗನೆಂದು ಹೇಳಿಕೊಂಡಿದ್ದಾನೆ. ವಿಜಯನಗರದ ಕಡೆಯ ಕಾಲದಲ್ಲಿ ಕರ್ನಾಟಕದಿಂದ ತಂಜಾವೂರಿಗೆ ಹೋಗಿ ಅಲ್ಲಿ ರಘುನಾಥಭೂಪಾಲನ ಮಂತ್ರಿಯಾಗಿದ್ದ ಗೋವಿಂದ ದೀಕ್ಷಿತನ ಕೃತಿ ಸಂಗೀತಸುಧಾ ಮತ್ತು ಅವನ ಮಗ ವೆಂಕಟಮಖಿಯ ಚತುರ್ದಂಡಿ ಪ್ರಕಾಶಿಕಾ ಸಂಗೀತಶಾಸ್ತ್ರದಲ್ಲಿ ಮೈಲುಗಲ್ಲುಗಳಾಗಿವೆ.

ವಿಜಯನಗರದ ಕಾಲದಲ್ಲಿ ಸಂಗೀತ ಸಾಮಾಜಿಕ, ಧಾರ್ಮಿಕ, ತಾತ್ತ್ವಿಕ ರಂಗಗಳಲ್ಲಿ ಜನಮನವನ್ನು ಉನ್ನತಮಟ್ಟಕ್ಕೊಯ್ಯುವ ಸಾಧನ ವಾಯಿತು. ಆಸ್ಥಾನದಲ್ಲಿ ಪ್ರೌಢಾವಸ್ಥೆ ಪಡೆದ ಸಂಗೀತ, ಆಸ್ಥಾನದ ಹೊರಗೂ ಭಕ್ತಿಪಂಥದ ಸಾಧುಸಂತರ ಮೂಲಕ ಹೊಸದಿಕ್ಕುಗಳನ್ನು ಹಿಡಿದು ಬೆಳೆಯಿತು. ಸಾಮಾನ್ಯ ಜನತೆಯನ್ನು ಸಂಗೀತಮಾಧ್ಯಮದಿಂದ ಭಕ್ತಿಮಾ ರ್ಗಕ್ಕೊಯ್ಯುವ ಈ ಹೊಸ ಪಂಥ ದಾಸಪಂಥ ಎನ್ನಿಸಿ ಕೊಂಡಿತು. ಈ ಪಂಥ ಶ್ರೀಪಾದರಾಜರು, ನರಹರಿತೀರ್ಥರು ಮತ್ತು ವ್ಯಾಸರಾಯರಿಂದ ಪ್ರಚಾರಕ್ಕೆ ಬಂದಿತು. ವ್ಯಾಸರಾಯರ ನೇತೃತ್ವದಲ್ಲಿ ಅವರ ಹಲವಾರು ಶಿಷ್ಯರು ಅಸಂಖ್ಯಾತ ಕೃತಿಗಳನ್ನು ರಚಿಸಿ ಜನತೆಯಲ್ಲಿ ಹರಡಿದರು; ಸಂಗೀತಕಲೆಗೆ ಒಂದು ಜೀವಂತಸ್ವರೂಪ ವನ್ನು ಕೊಟ್ಟರು. ಇವರಲ್ಲಿ ಪುರಂದರದಾಸರು ಮತ್ತು ಕನಕದಾಸರು ಪ್ರಮುಖರು. ಪುರಂದರದಾಸರು ಈಗ ಪ್ರಚಾರದಲ್ಲಿರುವ ಸಂಗೀತಕಲೆಗೆ ಆದ್ಯಪ್ರವರ್ತಕರಾಗಿ ಕರ್ಣಾಟಕ ಸಂಗೀತಪಿತಾಮಹರೆನ್ನಿಸಿಕೊಂಡಿದ್ದಾರೆ. ಇವರು ಲಕ್ಷಾವಧಿ ಕೀರ್ತನೆಗಳನ್ನು ರಚಿಸಿದ್ದರೆನ್ನಲಾಗಿದೆ. ಅನೇಕ ಜನಪದ ಮಟ್ಟುಗಳಿಗೆ ಶಾಸ್ತ್ರೀಯವಾದ ಸಂಗೀತ ರಾಗಗಳ ಸ್ವರೂಪ ಕೊಟ್ಟುದೂ ಸಾಮಾನ್ಯ ಜನತೆ ಸುಲಭವಾಗಿ ಗ್ರಹಿಸಬಲ್ಲಂತೆ ಸಾಹಿತ್ಯವಿದ್ದುದೂ ಮತ್ತು ಭಕ್ತಿಮಾರ್ಗದ ಮೂಲಕ ಭಗವತಾರಾಧನೆ ಯೆಂಬ ಸಂದೇಶಕ್ಕೆ ವಾಹಕವಾದದ್ದೂ ಕೀರ್ತನೆಗಳು ಜನಪ್ರಿಯವಾಗಲು ಕಾರಣವಾದುವು. ಶಿವಶರಣರಲ್ಲಿ ನಿಜಗುಣಶಿವಯೋಗಿ ಪ್ರಮುಖ. ಈತನ ವಿವೇಕಚಿಂತಾಮಣಿಯಲ್ಲಿ ಸಂಗೀತಕಲೆಯನ್ನು ಕುರಿತ ಒಂದು ಭಾಗವಿದೆ. ಶ್ರುತಿ, ಸ್ವರ, ಅಲಂಕಾರ, ರಾಗ ಮತ್ತು ವಾದ್ಯಗಳನ್ನು ಇವನು ವಿವರಿಸಿದ್ದಾನೆ. ತ್ರಿಪದಿ ಸಾಂಗತ್ಯ ಮುಂತಾದ ಛಂದಸ್ಸಿನಲ್ಲಿ ಗಾನಯೋಗ್ಯ ಕೃತಿಗಳನ್ನು ಕೈವಲ್ಯಪದ್ಧತಿಯ ಹಾಡುಗಳು ಎಂಬ ಹೆಸರಿನಲ್ಲಿ ಈತನು ರಚಿಸಿದ್ದಾನೆ. ವಿಜಯನಗರ ಕಾಲದ ಕಡೆಯ ದಿನಗಳಲ್ಲಿದ್ದ ರತ್ನಾಕರವರ್ಣಿ ತನ್ನ ಭರತೇಶ ವೈಭವದಲ್ಲಿ ಸಂಗೀತ ಮತ್ತು ನೃತ್ಯಗಳ ವಿಷಯವಾಗಿ ಅಲ್ಲಲ್ಲಿ ತಿಳಿಸುವ ಚಿತ್ರವತ್ತಾದ ವರ್ಣನೆಗಳು ಸ್ವಾರಸ್ಯಕರವೂ ಕುತೂಹಲ ಕರವೂ ಆಗಿವೆ. ಭರತನ ಆಸ್ಥಾನದ ಸಂಗೀತಮೇಳಗಳನ್ನು ವಿವರಿಸುತ್ತ ನಾನಾ ರಾಗಭೇದಗಳನ್ನೂ ಗಾಯಕದೋಷಗಳನ್ನೂ ತಿಳಿಸಿರುತ್ತಾನೆ. ಧ್ವನಿ, ಲಯ, ಮೇಳ, ಜತಿ, ಜಾತಿ, ಕಟ್ಟಣಿ, ಗಮಕ, ಆಲಾಪಗಳನ್ನು ಹೆಸರಿಸಿ ವಿವರಿಸಿರುವುದಲ್ಲದೆ ವೀಣೆ, ಚೆಂಗು, ಉಪಾಂಗ, ರಿಂಚೆಯ, ಚಿನುಚಿಂಪೆ, ತುಡುಮು, ದಂಡಿಗೆ, ಸ್ವರಮಂಡಲ, ಕಿನ್ನರಿ ಮುಂತಾದ ಹಲವು ವಾದ್ಯಗಳನ್ನೂ ಹೆಸರಿಸಿದ್ದಾನೆ.

ನೃತ್ಯದ ಬಗೆಗೆ ಹೇಳುವುದಾದರೆ ವಿಜಯನಗರದ ಆಸ್ಥಾನದಲ್ಲಿ ಅದಕ್ಕೆ ಅತಿ ಹೆಚ್ಚಿನ ಮನ್ನಣೆ ದೊರೆತಿತ್ತು. ಅಂತಃಪುರ ಸ್ತ್ರೀಯರು ನಿತ್ಯವೂ ನೃತ್ಯವನ್ನು ಅಭ್ಯಾಸಮಾಡುತ್ತಿದುದನ್ನು ಡೊಮಿಂಗೊ ಪೇಯಿಸ್ ವರ್ಣಿಸಿದ್ದಾನೆ. ಕೃಷ್ಣದೇವರಾಯನ ಅರಮನೆಯಲ್ಲಿ ನೃತ್ಯಸಭಾಗೃಹ ವೊಂದಿತ್ತು. ವಿಸ್ತಾರವಾದ ಆ ಸಭಾಗೃಹದಲ್ಲಿ ಅವುಗಳ ಕಂಬಗಳ ಹಾಗೂ ಗೋಡೆಗಳ ಮೇಲೆಲ್ಲ ನಾಟ್ಯಭಂಗಿಗಳನ್ನು ಚಿತ್ರಿಸಿದ್ದು ಅವು ಒಂದೊಂದೂ ನಾಟ್ಯದ ಅಂತಃಸ್ಥಿತಿಯನ್ನು ಸೂಚಿಸುವಂತಿದ್ದು ನಾಟ್ಯ ಕಲಿಯುವವರಿಗೆ ಮುಕ್ತಾಯದ ಹಂತದಲ್ಲಿ ಹೇಗೆ ನಿಲ್ಲಿಸಬೇಕೆಂಬುದರ ಕಲ್ಪನೆಯನ್ನು ಮಾಡಿಕೊಡುತ್ತಿದ್ದುವೆಂದೂ ನರ್ತಕಿಯರು ತಮ್ಮ ದೇಹ ಸೌಷ್ಠವವನ್ನು ಕಾಪಾಡಿಕೊಳ್ಳಲು ಮೈಚಾಚಿ ಕೈಕಾಲು ಸಡಿಲಿಸಿಕೊಳ್ಳುವ ಬಗೆಯನ್ನು ಕೂಡ ಮತ್ತೊಂದೆಡೆ ತೋರಿಸಿಕೊಡಲಾಗುತ್ತಿತ್ತೆಂದೂ ಪೇಯಿಸ್ ತಿಳಿಸಿದ್ದಾನೆ. ಆದರೆ ಈಗ ಆ ನಾಟ್ಯಮಂದಿರವಾಗಲಿ ನೃತ್ಯಭಂಗಿಗಳ ಚಿತ್ರ, ಶಿಲ್ಪಗಳಾಗಲಿ ಉಳಿದುಬಂದಿಲ್ಲ.

ದೇವಾಲಯಗಳಲ್ಲಿ ದೇವರ ಪೂಜಾಸಮಯದಲ್ಲಿ, ಉತ್ಸವದ ಕಾಲಗಳಲ್ಲಿ ನೃತ್ಯಸೇವೆ ಒಂದು ಅಗತ್ಯವಾದ ಅಂಗವಾಗಿ ಈ ಕಾಲದಲ್ಲಿ ಬೆಳೆದು ಬಂದಿತ್ತು. ಅದಕ್ಕಾಗಿ ವಿಶಾಲವಾದ ನೃತ್ಯಮಂಟಪಗಳ ನಿರ್ಮಾಣ ವಾಗಿತ್ತು. ಇಂಥ ನಾಟ್ಯ ಸೇವೆಗಾಗಿಯೇ ದೇವದಾಸಿಯರಿರುತ್ತಿದ್ದರು. ಇವರಲ್ಲದೆ ವೇಶ್ಯೆಯರೂ ನಾಟ್ಯಕಲೆಯಲ್ಲಿ ಪರಿಣತಿಯನ್ನು ಪಡೆದು ದೇವಾಲಯಗಳಲ್ಲಿ ವಿಶೇಷ ಉತ್ಸವಾದಿಗಳಲ್ಲಿ ತಮ್ಮ ನೃತ್ಯವೈಖರಿಯನ್ನು ಪ್ರದರ್ಶಿಸುತ್ತಿದ್ದರು. ಇದಲ್ಲದೆ ಸಮಾಜದ ಗಣ್ಯ ವರ್ಗದ, ಶ್ರೀಮಂತ ವರ್ಗದ ಮನೋರಂಜನೆಗಾಗಿಯೂ ಇವರು ನಾಟ್ಯಪ್ರದರ್ಶನಗಳನ್ನು ನಡೆಸುತ್ತಿದ್ದರು. ನಾಟ್ಯಕಲೆಯಲ್ಲಿ ನಿಷ್ಣಾತರಾಗಿದ್ದ ವೇಶ್ಯೆಯರಿಗೆ ಸಮಾಜದಲ್ಲಿ ಗೌರವದ ಸ್ಥಾನವಿತ್ತು. ರಾಜರಂತೆ ಅವರ ಸಾಮಂತರು, ಅಧಿಕಾರಿಗಳು, ಇತರ ಪ್ರತಿಷ್ಠಿತರು ಇವರಿಗೆ ಹೇರಳವಾಗಿ ಪ್ರೋತ್ಸಾಹ ಕೊಟ್ಟಿದ್ದರಿಂದ ಈ ಕಲೆಗಳು ಅವರಲ್ಲಿ ಮನೆಮಾಡಿಕೊಂಡುವು. ಇಂಥ ವೇಶ್ಯಾವಾಟಿಕೆಗಳ ವರ್ಣನೆಗಳು ಆ ಕಾಲದ ಕಾವ್ಯಗಳಲ್ಲಿ ಕಂಡು ಬರುತ್ತವೆ. ಆದರೆ ಆ ಕಾಲದ ನಾಟ್ಯದ ಪೂರ್ಣಸ್ವರೂಪ, ಅವರು ಪಡೆದಿದ್ದ ಪರಿಣತಿಯ ರೀತಿಯನ್ನು ಈಗ ಅರಿಯುವುದು ಅಸಾಧ್ಯವಾದರೂ ದೇವಾಲಯಗಳ ಗೋಡೆ, ಗೋಪುರಗಳ ಮೇಲಿರುವ ನೃತ್ಯಭಂಗಿಗಳು ಆ ಕಾಲದ ನಾಟ್ಯವಿದ್ಯೆಯ ತಜ್ಞತೆಯನ್ನು ಸೂಚಿಸುತ್ತವೆ. ಚಿದಂಬರದ ಗೋಪುರದ ಮೇಲೆ ವಿಜಯನಗರ ಕಾಲದ ಇಂಥ ನೂರೆಂಟು ನೃತ್ಯಭಂಗಿಗಳನ್ನು ನೋಡಬಹುದು. ಇವುಗಳೊಂದಿಗೆ ಜನಪದ ನೃತ್ಯ, ಜನಪದ ಮೇಳಗಳ ಅಭಿವೃದ್ಧಿಯೂ ಸಾಕಷ್ಟು ಆಗಿರಬೇಕು. ಮಹಾನವಮಿ ದಿಬ್ಬ, ಹಜಾರ ರಾಮಸ್ವಾಮಿ ದೇವಾಲಯ ಮೊದಲಾದವುಗಳ ಮೇಲಿರುವ ಕೋಲಾಟ, ಯಕ್ಷಗಾನ ಮೇಳ ಮುಂತಾದ ಸುಂದರ ಶಿಲ್ಪಗಳಿಂದ ಇದನ್ನರಿಯಬಹುದು.

(ಎಮ್.ಎಚ್.)

ವಿಜಯನಗರದ ಕಾಲದಲ್ಲಿ ಪಂಡಿತರಿಗೆ. ಕವಿಗಳಿಗೆ ರಾಜಾಶ್ರಯ, ಹೆಚ್ಚು ಮನ್ನಣೆ, ಪ್ರೋತ್ಸಾಹ ದೊರೆತುದರ ಫಲವಾಗಿ ಸಾಹಿತ್ಯಕೃಷಿ ವಿಪುಲವಾಗಿ ನಡೆಯಿತು. ಈ ಕಾಲದಲ್ಲಿ ಕನ್ನಡ, ಸಂಸ್ಕøತ ಹಾಗೂ ತೆಲುಗು ಭಾಷೆಗಳ ಕೃತಿಗಳು ರಚಿತವಾದುವು. ಸ್ವತಂತ್ರ ಕೃತಿಗಳ ರಚನೆ ಸಂಖ್ಯಾದೃಷ್ಟಿಯಿಂದ ಕಡಿಮೆ ಎಂದು ಹೇಳಬಹುದಾದರೂ ವ್ಯಾಖ್ಯಾನಗ್ರಂಥಗಳು ಗಣನೀಯ ಸಂಖ್ಯೆಯಲ್ಲಿ ಕಂಡುಬರುತ್ತವೆ. ಮೌಲ್ಯದ ದೃಷ್ಟಿಯಿಂದ ಹೆಚ್ಚಿನ ಪುರಸ್ಕಾರ ಸಲ್ಲದಿದ್ದರೂ ಸಾಹಿತ್ಯ ಬೆಳೆವಣಿಗೆಯ ದೃಷ್ಟಿಯಿಂದ ಗಮನಾರ್ಹ ಸಾಧನೆ ಈ ಕಾಲದಲ್ಲಾಗಿದೆ ಎನ್ನಬಹುದು.

ಬಾಹುಬಲಿ (ಸು. 1352) ಮತ್ತು ಮಧುರ (ಸು. 1385) - ಈ ಕವಿಗಳು 15ನೆಯ ತೀರ್ಥಂಕರನಾದ ಧರ್ಮನಾಥನ ಜೀವನವನ್ನು ಕುರಿತಂತೆ ಸಾಂಪ್ರದಾಯಿಕ ಚಂಪೂ ಶೈಲಿಯಲ್ಲಿ ಕಾವ್ಯವನ್ನು ರಚಿಸಿದ್ದಾರೆ. ಮಂಗರಸ (ಸು. 1508) ನೇಮಿಜಿನೇಶ ಸಂಗತಿ ಮುಂತಾದ ಐದು ಕೃತಿಗಳನ್ನು ರಚಿಸಿದ್ದಾನೆ. ಪಿರಿಯಾಪಟ್ಟಣದ ದೊಡ್ಡಯ್ಯ (ಸು. 1550) ಚಂದ್ರಪ್ರಭಚರಿತೆ ಎಂಬ ಕಾವ್ಯವನ್ನು ರಚಿಸಿದ್ದಾನೆ. ರತ್ನಾಕರವರ್ಣಿ (ಸು. 1557) ಈ ಕಾಲದ ದೊಡ್ಡ ಕವಿ. ಈತನ ಭರತೇಶವೈಭವ ಎಂಬತ್ತು ಸಂಧಿಗಳನ್ನೂ ಹತ್ತುಸಾವಿರ ಸಾಂಗತ್ಯ ಪದ್ಯಗಳನ್ನೂ ಉಳ್ಳ ದೀರ್ಘಕಾವ್ಯ. ಸಾಳ್ವ (ಸು. 1550) ಎಂಬ ಕವಿ ಬರೆದ ಭಾರತ ಸಾಳ್ವಭಾರತ ಎಂದೇ ಹೆಸರಾಗಿದೆ. ರಸರತ್ನಾಕರ, ವೈದ್ಯಸಾಂಗತ್ಯ, ಶಾರದಾವಿಲಾಸಗಳು ಈತನ ಇತರೆ ಕೃತಿಗಳು. ಈ ಕಾಲದ ಮೂವರು ಕವಿಗಳು ಜೀವಂಧರಚರಿತೆಯನ್ನು ಕಾವ್ಯಕ್ಕಾಗಿ ಬಳಸಿಕೊಂಡಿದ್ದಾರೆ. ಭಾಸ್ಕರ (ಸು. 1424) ರಚಿಸಿರುವ ಜೀವಂಧರಚರಿತೆ ಈ ಸಾಲಿನಲ್ಲಿ ಗಮನಾರ್ಹ ಕೃತಿ. ತೆರಕಣಾಂಬಿ ಬೊಮ್ಮರಸ (ಸು. 1485). ಕೋಟೇಶ್ವರ (ಸು. 1500) ಎಂಬ ಕವಿಗಳು ಕ್ರಮವಾಗಿ ಜೀವಂಧರಸಾಂಗತ್ಯ, ಜೀವಂಧರಷಟ್ಪದಿ ಎಂಬ ಕಾವ್ಯಗಳನ್ನು ರಚಿಸಿದ್ದಾರೆ. ಕಲ್ಯಾಣಕೀರ್ತಿಯ (ಸು. 1439) ಜ್ಞಾನಚಂದ್ರಾಭ್ಯುದಯ ಮತ್ತು ಕಾಮನ ಕಥೆ ಗಮನಾರ್ಹ ವಾದವು. ತೆರಕಣಾಂಬಿ ಬೊಮ್ಮರಸನ ಸನತ್ಕುಮಾರನ ಕಥೆ ಮತ್ತು ಬಾಹುಬಲಿಯ (ಸು. 1560) ನಾಗಕುಮಾರನ ಕಥೆ, ಶ್ರುತಕೀರ್ತಿಯ (ಸು. 1567) ವಿಜಯಕುಮಾರಿಯ ಕಥೆ-ಇವು ಹಳೆಯ ಮಾದರಿಗಳನ್ನು ಅನುಸರಿಸಿ ರಚಿತವಾದ ಕೃತಿಗಳು.

ವ್ಯಾಖ್ಯಾನ ಕೃತಿಗಳು ಕನ್ನಡದಲ್ಲಿ ವಿರಳವಾದರೂ 1359ರಲ್ಲಿ ಕೇಶವರ್ಣಿಯು (ಸು. 1359) ನೇಮಿಚಂದ್ರನ ಗೊಮ್ಮಟಸಾರದ ಮೇಲೂ ಅಮಿತಗತಿಯ ಶ್ರಾವಕಾಚಾರದ ಮೇಲೂ ಬರೆದ ವಿವರಣಾತ್ಮಕ ಟೀಕೆಗಳು ಗಮನಾರ್ಹವಾದುವು. ವಿದ್ಯಾನಾಥ (ಸು. 1455) ತನ್ನ ಸಂಸ್ಕøತ ಗ್ರಂಥವಾದ ಪ್ರಾಯಶ್ಚಿತ್ತಕ್ಕೆ ತಾನೇ ಟೀಕೆಯನ್ನು ರಚಿಸಿದ್ದಾನೆ. ಧರ್ಮಶರ್ಮಾಭ್ಯುದಯದ ಟೀಕೆಯನ್ನು ಬರೆದ ಯಶಃಕೀರ್ತಿಯನ್ನೂ (ಸು. 1500) ಇಲ್ಲಿ ಹೆಸರಿಸಬಹುದು.

ಯಾವ ನಿರ್ದಿಷ್ಟವಾದ ಕಥನಮೌಲ್ಯವನ್ನೂ ಹೊಂದದೆ ಕೇವಲ ತತ್ತ್ವ ಮತ್ತು ಜೈನ ನೀತಿನಿಯಮಗಳನ್ನು ಪ್ರತಿಪಾದಿಸುವ ಮಿಶ್ರಕಾವ್ಯಗ ಳೆಂದು ಗುರುತಿಸಬಹುದಾದ ಕೃತಿಗಳಲ್ಲಿ ಆಯತವರ್ಮನ (ಸು. 1400) ರತ್ನಕರಂಡಕ, ಚಂದ್ರಕೀರ್ತಿಯ (ಸು. 1400) ಪರಮಾಗಮಸಾರ, ಕಲ್ಯಾಣಕೀರ್ತಿ ಮತ್ತು ವಿಜಯಣ್ಣರ ಅನುಪ್ರೇಕ್ಷೆ, ನೇಮಣ್ಣನ (ಸು. 1559) ಜ್ಞಾನಭಾಸ್ಕರಚರಿತ್ರೆ ಇವುಗಳನ್ನು ಹೆಸರಿಸಬಹುದು. ಮಧುರನ ಗೊಮ್ಮಟಸ್ತುತಿ, ಕಲ್ಯಾಣ ಕೀರ್ತಿಯ ಜಿನಸ್ತುತಿ ಇವು ಭಕ್ತಿಪರವಾದ ಜಿನಸ್ತುತಿಗಳಾಗಿವೆ.

ಈ ಕಾಲದಲ್ಲಿ ವೀರಶೈವ ಪುರಾಣಗಳ ಕೃಷಿ ವಿಪುಲವಾಗಿ ನಡೆದಿದೆ. ಇದಕ್ಕೆ ಜಕ್ಕಣಾಚಾರ್ಯ ಹಾಗೂ ಲಕ್ಕಣದಂಡೇಶರಂಥ ಕೆಲವು ಸೇನಾಧಿ ಪತಿಗಳ ಪೋಷಣೆ, ಅಲ್ಲದೆ ತೋಂಟದ ಸಿದ್ಧಲಿಂಗಯತಿಗಳ ಮಾರ್ಗದ ರ್ಶನವೂ ಕಾರಣವೆನ್ನಬಹುದು. ವೀರಶೈವ ಪುರಾಣ ಸಾಹಿತ್ಯವನ್ನು ಅರವತ್ತುಮೂರು ಪುರಾತನರ, ಬಸವಾದಿ ತತ್ಸಮಕಾಲೀನರಾದ ನೂತನ ಪುರಾತನರ, ಆಧುನಿಕ ಶರಣರ ಮತ್ತು ವೀರಶೈವ ಧರ್ಮಕ್ಕೆ ಸಂಬಂಧಿ üಸಿದ ವಿವಿಧ ಕಥೆಗಳ ಸಾರಸಂಗ್ರಹಗಳೆಂದು ವಿಂಗಡಿಸಬಹುದು.

ನಂಜುಂಡನ (ಸು. 1525) ಕುಮಾರರಾಮಸಾಂಗತ್ಯ ಕಲ್ಪಿತ ಹಾಗೂ ಸಾಹಸ ಕಥನಗಳೊಡನೆ ಬೆರೆತ ಮಹತ್ತ್ವದ ಐತಿಹಾಸಿಕ ಕೃತಿಯಾಗಿದ್ದು ಸಾಂಗತ್ಯಗ್ರಂಥಗಳಲ್ಲಿ ಉನ್ನತ ಸ್ಥಾನ ಪಡೆದಿದೆ. ಓದುವಗಿರಿಯ (ಸು. 1525) ಮತ್ತು ಬೊಂಬೆಯ ಲಕ್ಕ (ಸು. 1538) ಈ ಇಬ್ಬರೂ ರಾಘ ವಾಂಕ ನಿರೂಪಿಸಿದ್ದ ಹರಿಶ್ಚಂದ್ರನ ಕಥೆಯನ್ನು ವಸ್ತುವನ್ನಾಗಿಟ್ಟುಕೊಂಡು ಹಾಡುಗಬ್ಬವಾದ ಸಾಂಗತ್ಯದಲ್ಲಿ ಕೃತಿಗಳನ್ನು ರಚಿಸಿದರು. ಓದುವಗಿರಿಯ ಸಾನಂದಗಣೇಶಸಾಂಗತ್ಯ ಎಂಬ ಇನ್ನೊಂದು ಕೃತಿಯನ್ನು ರಚಿಸಿದ್ದಾನೆ. ರಾಮರಸ ವಿರೂಪಾಕ್ಷ (ಸು.1538) ಹರಿಶ್ಚಂದ್ರಸಾಂಗತ್ಯ ಎಂಬ ಕೃತಿಯನ್ನು ರಚಿಸಿದ್ದಾನೆ. ವೀರಭದ್ರರಾಜನ (ಸು. 1530) ವೀರಭದ್ರ ವಿಜಯ, ಗುರುಲಿಂಗವಿಭುವಿನ (ಸು. 1550) ಭಿಕ್ಷಾಟನಚರಿತೆ, ಬಸವಪುರಾಣದಲ್ಲಿ ಉಕ್ತವಾಗಿದ್ದ ಕಥೆಯನ್ನಾಧರಿಸಿ ರಚಿತವಾದ ಮಲ್ಲಿಕಾರ್ಜನನ (ಸು. 1485) ಶ್ವೇತನ ಸಾಂಗತ್ಯ-ಇವು ಹೆಸರಿಸತಕ್ಕವು. ಅರವತ್ತುಮೂರು ಪುರಾತನರಲ್ಲಿ ಒಬ್ಬನಾದ ಸುಂದರನಂಬಿಯ ಕಥೆಯನ್ನು (ನಂಬಿಯಣ್ಣನ ರಗಳೆ) ಮೊಟ್ಟಮೊದಲಿಗೆ ತಿಳಿಯಾದ ಹಾಗೂ ನಯವಾದ ಹಾಸ್ಯದಿಂದ ಕನ್ನಡದಲ್ಲಿ ಹೇಳಿದವನು ಹರಿಹರ. ಇದೇ ಕಥೆಯನ್ನು ಬೊಮ್ಮರಸ (ಸು. 1450) ಮತ್ತೆ ಹೊಸದಾಗಿ ರಚಿಸಿ ಅದನ್ನು ಸೌಂದರಪುರಾಣವೆಂದು ಕರೆದಿದ್ದಾನೆ. ಸುರಂಗಕವಿ (1500) ತ್ರಿಷಷ್ಟಿಪುರಾತನರ ಚರಿತ್ರೆಯನ್ನು ಚಂಪೂವಿನಲ್ಲಿ ಬರೆದಿದ್ದಾನೆ. ಇದೇ ವಸ್ತುವನ್ನು ಬಳಸಿಕೊಂಡಿರುವ ಕೃತಿಗಳೆಂದರೆ ಗುಬ್ಬಿಯ ಮಲ್ಲಣಾರ್ಯನ (ಸು. 1513) ಭಾವಚಿಂತಾರತ್ನ ಮತ್ತು ಲಿಂಗಕವಿಯ ಚೋಳರಾಜ ಸಾಂಗತ್ಯ. ಮೊದಲನೆಯದು ತಮಿಳಿನ ಅಕ್ಷರವೊಂದರಿಂದ ಸ್ಫೂರ್ತಿಪಡೆದದ್ದು. ಪಂಚಾಕ್ಷರೀ ಮಹಿಮೆಯನ್ನು ಮೆರೆಯುವುದೇ ಕಥೆಯ ಮುಖ್ಯ ಆಶಯ. ವಿರುಪರಾಜ (ಸು. 1519) ಮತ್ತು ಚೇರಮ (ಸು. 1526) ಇಬ್ಬರೂ ಅರವತ್ತುಮೂರು ಪುರಾತನ ರಲ್ಲಿ ಒಬ್ಬನಾದ ಚೇರಮನ ಕಥೆಯನ್ನು ಕಾವ್ಯದ ವಸ್ತುವನ್ನಾಗಿ ಆರಿಸಿ ಕೊಂಡಿದ್ದಾರೆ.

ಬಸವಣ್ಣನವರ ಜೀವನವನ್ನು ಕುರಿತಂತೆ ರಚಿತವಾದ ಗ್ರಂಥಗಳಲ್ಲಿ ಭೀಮಕವಿಯ (ಸು. 1369) ಬಸವಪುರಾಣ ಬಹುಮುಖ್ಯವಾದದ್ದು. ಇದರಲ್ಲಿ ಬಸವಚಾರಿತ್ರದ ಜೊತೆಗೆ ಶೈವಪುರಾತನರ ಹಾಗೂ ಬಸವೇಶ್ವರರ ಸಮಕಾಲೀನರ ಕಥೆಗಳಿವೆ. ಲಕ್ಕಣ್ಣದಂಡೇಶನ (ಸು. 1428) ಶಿವತತ್ತ್ವಚಿಂತಾಮಣಿ, ಇವನ ಅನುಯಾಯಿ ಸಿಂಗಿರಾಜನ (ಸು. 1510) ಅಮಲಬಸವಚಾರಿತ್ರ (ಸಿಂಗರಾಜ ಪುರಾಣ), ಕೆರೆಯ ಪದ್ಮರಸನಿಗೆ ಸಂಬಂಧಿಸಿದ ಪದ್ಮಣಾಂಕನ (ಸು. 1385) ಪದ್ಮರಾಜಪುರಾಣ, ಅಲ್ಲಮಪ್ರಭುವಿಗೆ ಸಂಬಂಧಿಸಿದ ಚಾಮರಸನ (ಸು. 1430) ಪ್ರಭುಲಿಂಗಲೀಲೆ, ವಿರಕ್ತ ತೋಂಟದಾರ್ಯನ (ಸು. 1560) ಪಾಲ್ಕುರಿಕೆ ಸೋಮೇಶ್ವರನ ಪುರಾಣ-ಇವು ಶಿವಶರಣರಿಗೆ ಸಂಬಂಧಿಸಿದ ಕೃತಿಗಳು.

ಹರಿಹರನ ಅನಂತರ ಅಕ್ಕಮಹಾದೇವಿಯ ಜೀವನಚರಿತ್ರೆಯನ್ನು ಬರೆದ ಚೆನ್ನಬಸವಾಂಕನ (ಸು. 1550) ಮಹಾದೇವಿಯಕ್ಕಪುರಾಣ, ತೋಂಟದ ಸಿದ್ಧಲಿಂಗಯತಿಯ ಮಹಾಮಹಿಮೆಗಳನ್ನು ಪ್ರಶಂಸಿಸುವ ಸಿದ್ಧೇಶ್ವರಪುರಾಣ ಮತ್ತು ತೋಂಟದ ಸಿದ್ಧೇಶ್ವರ ಪುರಾಣವೆಂದು ಅಂಕಿತವಾದ ಶಾಂತೇಶನ (ಸು. 1561) ಕೃತಿಗಳು, ಗುಬ್ಬಿಯ ಮಲ್ಲಣಾ ರ್ಯನ (ಸು. 1513) ವೀರಶೈವಾಮೃತ ಮಹಾಪುರಾಣ ಷಟ್ಪದಿ ಛಂದಸ್ಸಿನಲ್ಲಿರುವ ಕೃತಿಗಳು ಈ ಕಾಲದಲ್ಲಿ ಬೆಳಕು ಕಂಡವು. ವಚನಕಾರ ರಲ್ಲಿ ತೋಂಟದ ಸಿದ್ಧಲಿಂಗಯತಿ, ಜಕ್ಕಣಾರ್ಯ ಮೊದಲಾದವರು ಕೃತಿಗಳ ಜೊತೆಗೆ ಕೆಲವು ವಚನಗಳನ್ನು ಬರೆದಿದ್ದಾರೆ. ಈ ದಿಸೆಯಲ್ಲಿ ಶೂನ್ಯಸಂಪಾದನೆಯನ್ನು ಶ್ರೇಷ್ಠಗ್ರಂಥವೆಂದು ಪರಿಗಣಿಸಬಹುದು.

ಈ ಕಾಲದಲ್ಲಿ ಕೆಲವರು ಸಂಸ್ಕøತ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಬರೆದಿರುವುದಲ್ಲದೆ ಕನ್ನಡ ಕೃತಿಗಳಿಗೂ ವ್ಯಾಖ್ಯಾನಗಳನ್ನು ರಚಿಸಿರುವು ದುಂಟು. ಅವುಗಳಲ್ಲಿ ಗುರುದೇವನಿಂದ (ಸು. 1530) ವ್ಯಾಖ್ಯಾನಿತವಾದ ಸಂಸ್ಕøತಸ್ತೋತ್ರ, ಭಟ್ಟಭಾಸ್ಕರನ ಯಜುರ್ವೇದ ಭಾಷ್ಯದ ಮೇಲಿನ ಗುರುನಂಜನ (ಸು. 1500) ಕನ್ನಡ ವ್ಯಾಖ್ಯಾನ, ಸಾರಸ್ವತ ವ್ಯಾಕರಣಕ್ಕೆ ಬರೆದ ಚನ್ನವೀರನ ವ್ಯಾಖ್ಯಾನ ಇವುಗಳ ಜೊತೆಗೆ ಶ್ರೀಧರಾಂಕ (ಸು. 1550) ಮತ್ತು ಸಾನಂದ ಶಿವಯೋಗಿ (ಸು. 1480) ಇವರ ಬೃಹದ್ವ್ಯಾಖ್ಯಾನಗಳು ಪ್ರಮುಖವಾದವು. ಮಗ್ಗೆಯ ಮಾಯಿದೇವನ ಶತಕತ್ರಯಕ್ಕೆ ವಿರಕ್ತತೋಂಟದಾರ್ಯ ವ್ಯಾಖ್ಯಾನ ರಚಿಸಿದ್ದಾನೆ.

ವಿಜಯನಗರದ ರಾಜ ಮನೆತನಕ್ಕೆ ಸೇರಿದ ದೇಪರಾಜ (ಸು. 1410) ಸೊಬಗಿನ ಸೋನೆ ಮತ್ತು ಅಮರುಕ ಎಂಬೆರಡು ಕೃತಿಗಳನ್ನು ರಚಿಸಿದ್ದಾನೆ. ಸೊಬಗಿನ ಸೋನೆ ಮೊತ್ತಮೊದಲ ಸಾಂಗತ್ಯಕೃತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಮರುಕ ಸಂಸ್ಕøತ ಗ್ರಂಥದ ಅನುವಾದ.

ಈ ಕಾಲದಲ್ಲಿ ವೈಷ್ಣವಧರ್ಮ ಜನಸಾಮಾನ್ಯರ ಮೇಲೆ ಪ್ರಭಾವ ಬೀರಿತು. ಈವರೆಗೂ ದೇವಭಾಷೆ ಎಂದು ತಿಳಿದಿದ್ದ ಸಂಸ್ಕøತದಲ್ಲಿಯೆ ಕೃತಿಗಳನ್ನು ರಚಿಸುತ್ತಿದ್ದ ಬ್ರಾಹ್ಮಣ ಕವಿಗಳು ದೇಶೀಸಾಹಿತ್ಯದ ಕೃಷಿಗೆ ಕೈಹಾಕಿದರು. ಪವಿತ್ರಗ್ರಂಥಗಳೆನಿಸಿದ ಮಹಾಭಾರತ, ರಾಮಾಯಣ ಮತ್ತು ಭಾಗವತಗಳನ್ನು ದೇಶಭಾಷೆಗಳಿಗೆ ಅನುವಾದ ಮಾಡುವುದರಲ್ಲಿ ನಿರತರಾದರು.

ಈ ಕಾಲದ ಮಹತ್ತ್ವದ ಕವಿಗಳಲ್ಲಿ ಕುಮಾರವ್ಯಾಸನದು (ಸು. 1430) ದೊಡ್ಡ ಹೆಸರು. ಈತ ಮಹಾಭಾರತದ ಕಥೆಯನ್ನು ಬಳಸಿ ಕೊಂಡು ಜನಸಾಮಾನ್ಯರಿಗೆ ಮೆಚ್ಚಿಗೆಯಾಗುವಂತೆ ಸರಳವಾಗಿ ಭಾಮಿನೀ ಷಟ್ಪದಿಯಲ್ಲಿ ಕರ್ಣಾಟ ಭಾರತ ಕಥಾಮಂಜರಿ ಎಂಬ ಮಹಾಕಾವ್ಯವನ್ನು ರಚಿಸಿದ. ಇದು ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂಬ ಹೆಸರುಗಳಲ್ಲಿ ಪ್ರಸಿದ್ಧವಾಗಿದೆ. ಮಹಾಭಾರತದ ಕೊನೆಯ ಎಂಟು ಪರ್ವಗಳ ಕಥೆಯನ್ನು ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತಿಮ್ಮಣ್ಣ ಎಂಬ ಕವಿ ಕನ್ನಡಕ್ಕೆ ತಂದಿದ್ದಾನೆ. ಚಾಯಣ ಎಂಬ ಹೆಸರಿನಿಂದ ಸುಕುಮಾರಭಾರತಿ (ಸು. 1550) ರಚಿಸಿದ ಮಹಾಭಾರತದ ಅನುವಾದ ವೊಂದಿದ್ದು ಅದು ಪೂರ್ಣವಾಗಿ ಲಭ್ಯವಾಗಿಲ್ಲ. ರಾಮಾಯಣಕ್ಕೆ ಸಂಬಂಧಿ ಸಿದ ಕೃತಿಗಳಲ್ಲಿ ಕುಮಾರವಾಲ್ಮೀಕಿಯ (ಸು. 1550) ತೊರವೆ ರಾಮಾಯಣ ಬಹುಪ್ರಖ್ಯಾತವಾದುದು. ಇದೇ ಕಾಲದಲ್ಲಿ ಬತ್ತಲೇಶ್ವರನಿಂದ ರಚಿತವಾದ ಕೌಶಿಕರಾಮಾಯಣವೂ ಗಮನಾರ್ಹವಾದ ಕೃತಿ.

ಈ ಕಾಲದ ಅನೇಕ ಕವಿಗಳು ಭಾಗವತವನ್ನು ಕನ್ನಡಕ್ಕೆ ತಂದರು. ನಾರಾಯಣ (ಸು. 1450) ಭಾಗವತವನ್ನು ಗದ್ಯಕ್ಕೆ ಭಾವಾನುವಾದ ಮಾಡಿರುವಂತೆ ತಿಳಿದುಬರುತ್ತದೆಯಾದರೂ ಕೃತಿ ಲಭ್ಯವಿಲ್ಲ. ನಿತ್ಯಾತ್ಮಶುಕ ನೆಂದು ಪ್ರಸಿದ್ಧನಾದ ಸದಾನಂದಯೋಗಿ (ಸು. 1530) ಭಾಗವತವನ್ನು ಪದ್ಯದಲ್ಲಿ ರಚಿಸಿದ್ದಾನೆ. ಈ ಕೃತಿಯಲ್ಲಿ ಅನೇಕ ಪ್ರಕ್ಷೇಪಗಳಿವೆ ಎಂಬುದು ವಿದ್ವಾಂಸರ ಅಭಿಮತ.

ಈ ಕಾಲದ ಹರಿದಾಸರಲ್ಲಿ ಕನಕದಾಸರದು ದೊಡ್ಡ ಹೆಸರು. ಇವರು ಪದಗಳ ಜೊತೆಗೆ ನಳಚರಿತ್ರೆ, ಮೋಹನತರಂಗಿಣಿ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ ಎಂಬ ಕೃತಿಗಳನ್ನು ರಚಿಸಿದ್ದಾರೆ. ಕನಕದಾಸರಲ್ಲದೆ ಶ್ರೀಪಾದರಾಯರು (ಸು. 1500), ವ್ಯಾಸರಾಯರು (ಸು. 1520) ಮತ್ತು ಪುರಂದರದಾಸರು (ಸು. 1540) ಮೊದಲಾದವರು ಹರಿಸರ್ವೋ ತ್ತಮತ್ವವನ್ನೂ ವಿಷ್ಣುಮಹಿಮೆಯನ್ನೂ ಕುರಿತಂತೆ ಕೀರ್ತನೆಗಳನ್ನು ರಚಿಸಿದ್ದಾರೆ. ಇವು ದಾಸರ ಪದಗಳೆಂದೇ ಪ್ರಸಿದ್ಧವಾಗಿವೆ.

ಈ ಕಾಲದ ಅನೇಕ ಶತಕಗ್ರಂಥಗಳು ರಚಿತವಾದವು. ಮಗ್ಗೆಯ ಮಾಯಿದೇವ (ಸು. 1430) ಪ್ರಾರಂಭದ ಶತಕಕಾರ. ಚಂದ್ರ (ಸು. 1430), ಗುಮ್ಮಟಾರ್ಯ (ಸು. 1500), ಸಿರಿನಾಮಧೇಯ (ಸು. 1560), ಚನ್ನಮಲ್ಲಿಕಾರ್ಜುನ (ಸು. 1560) ಮೊದಲಾದವರು ಶತಕಗಳನ್ನು ರಚಿಸಿದ್ದಾರೆ.

ಲೌಕಿಕ ವಿದ್ಯಾಶಾಸ್ತ್ರಗಳಾದ, ಪಶುವೈದ್ಯ, ಅಶ್ವವೈದ್ಯ, ಅಲಂಕಾರ, ನಿಘಂಟು ಜ್ಯೋತಿಷ, ಕಾಮಶಾಸ್ತ್ರ, ಪಾಕಶಾಸ್ತ್ರಗಳಿಗೆ ಸಂಬಂಧಿಸಿದ ಅನೇಕ ಗ್ರಂಥಗಳೂ ಈ ಕಾಲದಲ್ಲಿ ರಚಿತವಾಗಿವೆ. ಶ್ರೀಧರದೇವನ (ಸು. 1500) ವೈದ್ಯಾಮೃತ, ಸಾಳ್ವನ (ಸು. 1550) ವೈದ್ಯಸಾಂಗತ್ಯ, ಮಂಗರಾಜನ (ಸು. 1360) ಖಗೇಂದ್ರ ಮಣಿದರ್ಪಣ ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳು. ಅಭಿನವ ಚಂದ್ರ (ಸು. 1400) ಮತ್ತು ಬಾಚರಸ (ಸು. 1500) ಅಶ್ವಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳನ್ನು ರಚಿಸಿದ್ದಾರೆ.

ಅಲಂಕಾರಶಾಸ್ತ್ರವನ್ನು ಕುರಿತಂತೆ ಸಾಳ್ವನ ರಸರತ್ನಾಕರ ಮತ್ತು ಶಾರದಾವಿಲಾಸ, ಈಶ್ವರಕವಿಯ (ಸು. 1550) ಕವಿಜಿಹ್ವಾಬಂಧನ, ದಂಡಿಯ ಕಾವ್ಯಾದರ್ಶದ ಅಕ್ಷರಶಃ ಭಾಷಾಂತರವಾದ ಮಾಧವನ (ಸು. 1500) ಮಾಧವಾಲಂಕಾರಗಳು ಪ್ರಮುಖವಾದುವು. ಅಭಿನವ ಮಂಗರಾಜನ (ಸು. 1308) ಮಂಗಾಭಿಧಾನ, ಬೊಮ್ಮರಸನ (ಸು. 1450) ಚತುರಾಸ್ಯನಿಘಂಟು, ಲಿಂಗಮಂತ್ರಿಯ (ಸು. 1530) ಕಬ್ಬಿಗರ ಕೈಪಿಡಿ, ವಿರಕ್ತತೋಂಟದಾರ್ಯನ (ಸು. 1560) ಕರ್ಣಾಟಕಶಬ್ದಮಂಜ ರಿ-ಇವು ನಿಘಂಟುಗಳು. ಶುಭಚಂದ್ರನ ನರಪಿಂಗಲಿ, ಲಕ್ಷ್ಮಣಾಂಕನ ಶಕುನಸಾರ, ಚಾಕರಾಜನ ಶಕುನಪ್ರಪಂಚ, ಗಂಗಾಧರನ (ಸು. 1550) ರಟ್ಟಜಾತಕಗಳು ಜ್ಯೋತಿಷ ಹಾಗೂ ಶಕುನಗಳನ್ನು ಕುರಿತ ಗ್ರಂಥಗಳು. ಕಲ್ಲರಸನ (ಸು. 1450) ಜನವಶ್ಯ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಕೃತಿ. ಮೂರನೆಯ ಮಂಗರಸನ (ಸು. 1508) ಸೂಪಶಾಸ್ತ್ರ ಪಾಕಶಾಸ್ತ್ರಕ್ಕೆ ಸಂಬಂಧಿಸಿದ ಪ್ರಸಿದ್ಧ ಕೃತಿ.

ಸಂಸ್ಕøತ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಈ ಕಾಲದ ಉತ್ತಮ ಕೃತಿ ಎಂದರೆ ವೇದಾರ್ಥ ಪ್ರಕಾಶ. ವೇದಗಳಿಗೆ ಸ್ಪಷ್ಟವಾದ ಸರಳವಾದ ವ್ಯಾಖ್ಯಾನ ಬರೆಯುವ ಕಾರ್ಯವನ್ನು ಸಾಯಣರಿಗೆ ವಹಿಸಲಾಯಿತು. ಅವರು ಪಂಚಾಗ್ನಿಮಾಧವ, ನರಹರಿ ಸೋಮಯಾಜಿ, ನಾರಾಯಣ ವಾಜಪೇಯಿ, ನಾಗಾಭರಣ, ವಾಮನಭಟ್ಟ ಮೊದಲಾದವರ ನೆರವಿನಿಂದ ವೇದಗಳಿಗೆ ಭಾಷ್ಯಗಳನ್ನು ರಚಿಸಿದರು. ಯಜ್ಞಗಳಲ್ಲಿ ನಡೆಸುವ ಕರ್ಮಕ್ರಮಗಳನ್ನು ವಿವರಿಸುವ ಯಜ್ಞತಂತ್ರಸುಧಾನಿಧಿ ಎಂಬ ಕೈಪಿಡಿ ಇಮ್ಮಡಿ ಹರಿಹರನ ಕಾಲದಲ್ಲಿ ರಚಿತವಾಯಿತು. ಅದೇ ರೀತಿ ಚೌಂಡಪಾರ್ಯ (ಸು. 1404) ವೈದಿಕ ಕರ್ಮತಂತ್ರಗಳಿಗೆ ಸಂಬಂಧಿಸಿದಂತೆ ಪ್ರಯೋಗರತ್ನಮಾಲಾ ಅಥವಾ ಆಪಸ್ತಂಭ ಅಧ್ವರ ತಂತ್ರವ್ಯಾಖ್ಯಾ ಎಂಬ ಕೃತಿಯನ್ನು ರಚಿಸಿದ. ಪರಾಶರಮಾಧವೀಯವು ಪರಾಶರಸ್ಮøತಿಗೆ ವಿದ್ಯಾರಣ್ಯರು ರಚಿಸಿದ ವ್ಯಾಖ್ಯಾನ. ಬುಕ್ಕರಾಜನ ಅಪೇಕ್ಷೆಯ ಪ್ರಕಾರ ಸಾಯಣರು ಪುರುಷಾರ್ಥ ಸುಧಾನಿಧಿಯನ್ನು ರಚಿಸಿದರು. ದೇವಣಭಟ್ಟ (ಸು. 1445) ಧರ್ಮಶಾಸ್ತ್ರಕ್ಕೆ ಸ್ಮøತಿಚಂದ್ರಿಕೆಯನ್ನು ಬರೆದ. ಅಂಥದೇ ಇನ್ನೊಂದು ಗ್ರಂಥ ಸ್ಮøತಿಕೌಸ್ತುಭ. ಇದರ ಕರ್ತೃ ನರಹರಿ. ಮಾಧವ ಮಂತ್ರಿ ಸೂತಸಂಹಿತೆಯ ವ್ಯಾಖ್ಯಾನವನ್ನು ರಚಿಸಿ ಅದನ್ನು ತಾತ್ಪರ್ಯ ದೀಪಿಕಾ ಎಂದು ಕರೆದ. ಕೃಷ್ಣದೇವರಾಯನ ಪ್ರೇರಣೆಯಿಂದ ಈಶ್ವರದೀಕ್ಷಿತ ರಾಮಾಯಣದ ಮೇಲೆ ಎರಡು ವ್ಯಾಖ್ಯಾನಗಳನ್ನು ಬರೆದ.

ವ್ಯಾಸರಾಯರ ಸಮಕಾಲೀನನಾದ ವರದರಾಜಾಚಾರ್ಯ ಆನಂದತೀ ರ್ಥರ ಮಹಾಭಾರತ ತಾತ್ಪರ್ಯನಿರ್ಣಯಕ್ಕೆ ವರದರಾಜೀಯ ಎಂಬ ವ್ಯಾಖ್ಯಾನವನ್ನು ಬರೆದಿದ್ದಾನೆ. ಉಡುಪಿಯ ಪೇಜಾವರ ಮಠಾಧಿಪತಿ ಯಾದ ವಿಜಯಧ್ವಜತೀರ್ಥರು (1378-1439) ಭಾಗವತಕ್ಕೆ ವ್ಯಾಖ್ಯಾನವನ್ನು ರಚಿಸಿದರು. ಶಂಕರವಿಜಯ ಮತ್ತು ರಾಜಕಾಲನಿರ್ಣಯ ಎಂಬೆರಡು ಗ್ರಂಥಗಳನ್ನೂ ವಿದ್ಯಾರಣ್ಯರು ರಚಿಸಿರುವರೆಂಬ ಅಭಿಪ್ರಾಯವಿದೆ. ಇವು ಕ್ರಮವಾಗಿ ಅದ್ವೈತಾಚಾರ್ಯರಾದ ಶಂಕರರ ಜೀವನ ಚರಿತ್ರೆಯನ್ನೂ ವಿಜಯನಗರ ಚರಿತ್ರೆಯನ್ನೂ ನಿರೂಪಿಸುತ್ತವೆ. ಸಾಯಣರ ಸೋದರರಲ್ಲೊಬ್ಬನಾದ ಭೋಗನಾಥ ಉದಾಹರಣಮಾಲಾ, ರಾಮೋಲ್ಲಾಸ, ತ್ರಿಪುರವಿಜಯ, ಶೃಂಗಾರಮಂಜರಿ, ಮಹಾಗಣಪತಿಸ್ತವ ಮತ್ತು ಗೌರೀನಾಥಾಷ್ಟಕಗಳೆಂಬ ಆರು ಕೃತಿಗಳನ್ನು ರಚಿಸಿರುವುದಾಗಿ ತಿಳಿದುಬರುತ್ತದೆ. ಆದರೆ ಕೃತಿಗಳು ಉಪಲಬ್ಧವಿಲ್ಲ.

ಗಂಗಾದೇವಿ, ಕಾಮಾಕ್ಷಿ, ತಿರುಮಲಾಂಬಾ ಎಂಬ ಸ್ತ್ರೀಯರು ಸಂಸ್ಕøತ ಸಾಹಿತ್ಯಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ. ಗಂಗಾದೇವಿಯ ಮಧುರಾ ವಿಜಯಮ್ ಅಥವಾ ವೀರಕಂಪಣರಾಯಚರಿತೆ ಎಂಬ ಕಾವ್ಯ ಆಕೆಯ ಪತಿಯಾದ ಕಂಪಣರಾಯನ ವಿಜಯಯಾತ್ರೆಯನ್ನು ಸರಳ ಸುಂದರ ಶೈಲಿಯಲ್ಲಿ ನಿರೂಪಿಸಿದೆ. ವೇದಾಂತದೇಶಿಕರೆನಿಸಿದ ವೆಂಕಟನಾಥರ ಹಂಸಸಂದೇಶ, ಪಾದುಕಾಸಹಸ್ರಗಳು, ಮಾಧವನ ನರಕಾಸುರವಿಜಯ, ಗಂಗಾಧರನ ಗಂಗದಾಸಪ್ರತಾಪವಿಲಾಸ, ಸಾಳುವ ನರಸಿಂಹ ರಚಿಸಿದನೆನ್ನ ಲಾದ ರಾಮಾಭ್ಯುದಯ, ಕೃಷ್ಣದೇವರಾಯ ಸ್ವತಃ ರಚಿಸಿದನೆನ್ನಲಾದ ಸತ್ಯವಧೂಪ್ರೀಣನ, ಸಕಲಕಥಾಸಾರಸಂಗ್ರಹ, ರಸಮಂಜರಿ ಮತ್ತು ಜ್ಞಾನಚಿಂತಾಮಣಿ ಎಂಬ ಕಾವ್ಯಗಳು, ಇವನ ಆಸ್ಥಾನದಲ್ಲಿದ್ದ ದಿವಾಕರನ ಭಾರತಾಮೃತ, ಅಭಿನವಕಾಮಾಕ್ಷಿಯ ಅಭಿನವರಾಮಾಭ್ಯುದಯ, ತಿರುಮಲಾಂಬೆಯ ವರದಾಂಬಿಕಾ ಪರಿಣಯ ಎಂಬ ಚಂಪೂಕಾವ್ಯ, ಸ್ವಯಂಭೂವಿನ ಮಗನೂ ಎರಡನೆಯ ರಾಜನಾಥನ ಸೋದರಪುತ್ರನೂ ಆದ ಶಿವಸೂರ್ಯನ ಪಾಂಡವಾಭ್ಯುದಯ, ಡಿಂಡಿಮ ವಂಶದ ಮೂರನೆಯ ರಾಜನಾಥನ ಅಚ್ಯುತರಾಯಾಭ್ಯುದಯ, ಎರಡನೆಯ ಅರುಣಗಿರಿನಾಥನ ಸೋದರ ಪುತ್ರನಾದ ಸ್ವಯಂಭೂನಾಥನ ಕೃಷ್ಣವಿಲಾಸ ಮೊದಲಾದ ಕೃತಿಗಳು ಇಲ್ಲಿ ಉಲ್ಲೇಖನೀಯ.

ಸೋದೆಮಠದ ಪೀಠಾಧಿಪತಿಗಳಾಗಿದ್ದ ವಾದಿರಾಜರು 16ನೆಯ ಶತಮಾನದ ಕಡೆಯ ಭಾಗದಲ್ಲಿ ರುಕ್ಮಿಣೀಶವಿಜಯ, ತೀರ್ಥಪ್ರಬಂಧ ಎಂಬ ಗ್ರಂಥಗಳನ್ನು ರಚಿಸಿದ್ದಾರೆ. ವಾದಿರಾಜರ ಶಿಷ್ಯನಾದ ನರಹರಿ, ಶ್ರೀಹರ್ಷನ ನೈಷಧ ಮಹಾಕಾವ್ಯದ ವ್ಯಾಖ್ಯಾನವಾಗಿ ನೈಷಧದೀಪಿಕೆಯನ್ನು ಬರೆದಿದ್ದಾನೆ. ಶಂಕರಾಚಾರ್ಯರ ಸೌಂದರ್ಯಲಹರಿಗೆ ಅರುಣಗಿರಿನಾಥ ಬರೆದಿರುವ ವ್ಯಾಖ್ಯಾನ ಸಹ ಸ್ಮರಣೀಯ.

ಅನಂತಭಟ್ಟ (ಸು. 1500) ಭಾರತಚಂಪೂ ಕಾವ್ಯದ ಕರ್ತೃ. ಆತನ ಸೋದರ ಪುತ್ರನಾದ ಸೋಮನಾಥನ ವ್ಯಾಸಯೋಗೀಚರಿತವೆಂಬ ಚಂಪೂ ಗ್ರಂಥದಲ್ಲಿ ವ್ಯಾಸರಾಯರ ಜೀವನಚರಿತ್ರೆಯನ್ನು ನಿರೂಪಿಸಿದ್ದಾನೆ. ಮುಮ್ಮಡಿ ರಾಜನಾಥನು ಶ್ರೀಕೃಷ್ಣನ ಚರಿತ್ರೆಯನ್ನು ನಿರೂಪಿಸುವ ಭಾಗವತಚಂಪೂವನ್ನು ರಚಿಸಿ ದೊರೆ ಅಚ್ಯುತರಾಯನಿಗೆ ಅರ್ಪಿಸಿದ್ದಾನೆ. ಸ್ವಯಂಭೂನಾಥ ಶಂಕರಾನಂದ ಚಂಪೂವನ್ನು ರಚಿಸಿದ್ದಾನೆ. ಅವನ ಸೋದರ ಗುರುರಾಮ ಹರಿಶ್ಚಂದ್ರ ಚಂಪೂವಿನ (ಸು. 1610) ಕರ್ತೃ.

ಮಹಾನಾಟಕ ಸುಧಾನಿಧಿ ಎಂಬುದು ದೊರೆ ಪ್ರೌಢದೇವರಾಯನ (1424-46) ಕೃತಿ. ಈ ಕೃತಿಯ ಕರ್ತೃತ್ವದ ವಿಚಾರದಲ್ಲಿಯೂ ಭಿನ್ನಾಭಿ ಪ್ರಾಯವಿದೆ. ಕೃಷ್ಣದೇವರಾಯನ ಮಂತ್ರಿ ಸಾಳುವ ತಿಮ್ಮ ಅಗಸ್ತ್ಯರಚಿತ ಚಂಪೂ ಭಾರತಕ್ಕೆ ಮನೋಹರ ಎಂಬ ವ್ಯಾಖ್ಯಾನವನ್ನು ರಚಿಸಿದ. ಈ ಅಗಸ್ತ್ಯ ಓರಂಗಲ್ಲಿನ ಪ್ರತಾಪರುದ್ರನ ಆಸ್ಥಾನಕವಿಯಾಗಿದ್ದ ನೆಂದು ತಿಳಿದುಬರುತ್ತದೆ.

ವಾಮನಭಟ್ಟ ಬಾಣನು ಶೃಂಗಾರಭೂಷಣಬಾಣ ಎಂಬ ಲಘುನಾಟಕವನ್ನು ವಿರೂಪಾಕ್ಷನ ಉತ್ಸವಕಾಲದಲ್ಲಿ ಬರೆದ. ಇದು ಸಭಿಕರ ಮನರಂಜನೆಗೆ, ಪ್ರದರ್ಶಿಸುವುದಕ್ಕಾಗಿ ರಚಿಸಿದಂತೆ ತಿಳಿದುಬರುತ್ತದೆ. ಕೃಷ್ಣಮಿಶ್ರನ ಪ್ರಬೋಧಚಂದ್ರೋದಯದ ಮಾದರಿಯಲ್ಲಿ ವೆಂಕಟನಾಥ ಸಂಕಲ್ಪ ಸೂರ್ಯೋದಯವೆಂಬ ತಾತ್ತ್ವಿಕ ನಾಟಕವನ್ನು ರಚಿಸಿದ್ದಾನೆ.

ದೊರೆ ಕೃಷ್ಣದೇವರಾಯನ ಜಾಂಬವತೀಪರಿಣಯ ಮತ್ತು ಉಷಾಪರಿ ಣಯಗಳು, ಮಲ್ಲಿಕಾರ್ಜುನನ ಸತ್ಯಭಾಮಾಪರಿಣಯ, ಗುರುರಾಯನ ಸುಭದ್ರಾಧನಂಜಯ ಮತ್ತು ರತ್ನೇಶ್ವರಪ್ರಸಾದ ಇವು ನಾಟಕಗಳು. ನಾದಿಂಡ್ಳಗೋಪನು ಪ್ರಬೋಧಚಂದ್ರೋದಯ ಎಂಬ ನಾಟಕಕ್ಕೆ ವ್ಯಾಖ್ಯಾನವನ್ನು ಬರೆದಿದ್ದಾನೆ.

ಅಲಂಕಾರ, ಸಂಗೀತ ಮತ್ತು ಇತರ ಶಾಸ್ತ್ರ ಗ್ರಂಥಗಳು ಈ ಕಾಲ ದಲ್ಲಿ ವಿಪುಲವಾಗಿ ರಚನೆಗೊಂಡವು. ಸಾಯಣರ ಅಲಂಕಾರಸುಧಾನಿಧಿಯ ಸಂಪೂರ್ಣ ಹಸ್ತಪ್ರತಿ ದೊರೆತಿಲ್ಲ. ಹತ್ತು ಉನ್ವೇಷ(ಅಧ್ಯಾಯ)ಗಳಿದ್ದಂತೆ ತೋರುವ ಇದರಲ್ಲಿ ಉತ್ತಮವಾಗಿರುವ ಉದಾಹರಣಾ ಪದ್ಯಗಳೆಲ್ಲವೂ ಭೋಗನಾಥನ ಉದಾಹರಣಮೂಲದಿಂದ ತೆಗೆದುಕೊಳ್ಳಲಾಗಿದ್ದು ಅವೆಲ್ಲವೂ ಸಾಯಣರ ಪ್ರಶಂಸಾಪರವಾದವೇ ಆಗಿವೆ. ಅಲಂಕಾರಶಾಸ್ತ್ರಕ್ಕೆ ಸಂಬಂಧಿಸಿದ ಇನ್ನೊಂದು ಗ್ರಂಥ ರಸಮಂಜರಿ ಕೃಷ್ಣದೇವರಾಯನದೆಂಬ ಪ್ರತೀತಿ ಇದೆ. ನರಹರಿಯೂ ಕಾವ್ಯಪ್ರಕಾಶಕ್ಕೆ ಒಂದು ವ್ಯಾಖ್ಯಾನವನ್ನು ಬರೆದಿದ್ದಾನೆ. ಸಾಳುವ ಗೋಪತಿಪ್ಪಭೂಪಾಲನು ವಾಮನನ ಕಾವ್ಯಾಲಂಕಾ ರಸೂತ್ರವೃತ್ತಿಗೆ ಕಾಮಧೇನು ಎಂಬ ವ್ಯಾಖ್ಯಾನವನ್ನು ಬರೆದಿದ್ದಾನೆ. ಈ ಕೃತಿ ಅಲಂಕಾರಶಾಸ್ತ್ರಕ್ಕೊಂದು ಪ್ರಮುಖ ಕೊಡುಗೆ.

ಸಂಗೀತಕ್ಕೆ ಸಂಬಂಧಿಸಿದ ವಿದ್ಯಾರಣ್ಯರೇ ರಚಿಸಿದರೆಂದು ಹೇಳುವ ಸಂಗೀತಸಾರ ಎಂಬ ಕೃತಿ, ಗೋಪತಿಪ್ಪಭೂಪಾಲನ ತಾಳದೀಪಿಕಾ ಮತ್ತು ದೇವಣ್ಣಭಟ್ಟನ (ಸು. 1445) ಸಂಗೀತಮುಕ್ತಾವಳೀ ಇವು ಸಂಗೀತಶಾಸ್ತ್ರಗ್ರಂಥಗಳು. ಕೃಷ್ಣದೇವರಾಯನ ಆಸ್ಥಾನದಲ್ಲಿ ನಾಟ್ಯಾ ಚಾರ್ಯನಾಗಿದ್ದು ಅಭಿನವಭರತನೆಂದು ಪ್ರಸಿದ್ಧಿಯನ್ನು ಪಡೆದಿದ್ದ ಲಕ್ಷ್ಮೀನಾರಾಯಣನು ಸಂಗೀತ ಸೂರ್ಯೋದಯವನ್ನೂ ಕಲ್ಲರಸನು ಶಾಙ್ರ್ಗದೇವನ ಸಂಗೀತರತ್ನಾಕರಕ್ಕೆ ಕಲಾನಿಧಿ ಎಂಬ ವ್ಯಾಖ್ಯಾನವನ್ನೂ ರಚಿಸಿದ್ದಾರೆ.

ಇಮ್ಮಡಿ ದೇವರಾಯನಿಂದ ರಚಿತವಾದ ರತಿರತ್ನಪ್ರದೀಪಿಕಾ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಕೃತಿ. ಇದರಲ್ಲಿ ಏಳು ಅಧ್ಯಾಯಗಳಿವೆ. ಕಾಮಶಾಸ್ತ್ರ ಮತ್ತು ಕಾಮಕಲೆ ಇದರ ವಸ್ತು. ಆಯುರ್ವೇದಸುಧಾನಿಧಿ ಸಾಯಣ ರಚಿತವಾದ ಒಂದು ವೈದ್ಯಗ್ರಂಥ. ಲಕ್ಷ್ಮಣಪಂಡಿತನೂ ವೈದ್ಯರಾಜವಲ್ಲಭ ಎಂಬ ವೈದ್ಯ ಗ್ರಂಥವನ್ನು ರಚಿಸಿದ್ದಾನೆ.

ಸಾಯಣರ ಧಾತುವೃತ್ತಿ ವ್ಯಾಕರಣಕ್ಕೆ ಸಂಬಂಧಿಸಿದ ಒಂದು ಗಮನಾರ್ಹ ಗ್ರಂಥ. ಇದು ಪಾಣಿನಿಯ ಧಾತುಪಾಠದ ಮೇಲಿನ ಒಂದು ವ್ಯಾಖ್ಯಾನ. ವಿದ್ಯಾರಣ್ಯರ ಕಾಲಮಾಧವ ಎಂಬ ಕೃತಿ ಕಾಲ, ಅದರ ಸ್ವಭಾವ, ಅದರ ವಿಭಾಗಗಳನ್ನು ಕುರಿತಂತೆ ವಿವರಣೆ ನೀಡುತ್ತದೆ. ವಿದ್ಯಾಮಾಧವಸೂರಿ (14ನೆಯ ಶತಮಾನ) ಎಂಬ ಖಗೋಳಶಾಸ್ತ್ರಜ್ಞ ಮುಹೂರ್ತದರ್ಶನ ಎಂಬ ಗ್ರಂಥದ ಕರ್ತೃ. ಇದೊಂದು ಜ್ಯೋತಿಷ ಗ್ರಂಥ. ಇದಕ್ಕೆ ವಿದ್ಯಾಮಾಧವೀಯ ಎಂಬ ಹೆಸರೂ ಇದೆ. ಇವನ ಮಗ ವಿಷ್ಣುಸೂರಿ (ಸು. 1363) ವಿದ್ಯಾಮಾಧವೀಯಕ್ಕೆ ಮುಹೂರ್ತ ದೀಪಿಕಾ ಎಂಬ ವಾಖ್ಯಾನವನ್ನು ಬರೆದಿದ್ದಾನೆ. ಲೊಲ್ಲ ಲಕ್ಷ್ಮೀಧರ ಜ್ಯೋತಿಷ ದರ್ಪಣದ ಒಂದು ಭಾಗವನ್ನು ರಚಿಸಿದ್ದಾನೆ. ಇದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ವಿಶ್ವಕೋಶ ಮಾದರಿಯ ಗ್ರಂಥವಾಗಿ. ಸರ್ವದರ್ಶನ ಸಂಗ್ರಹ ಎಂಬ ಕೃತಿಯ ಕರ್ತೃತ್ವದ ಬಗೆಗೆ ಭಿನ್ನಾಭಿಪ್ರಾಯವಿದ್ದರೂ ಇದು ವೇದಾಂತಕ್ಕೆ ಸಂಬಂಧಿಸಿದ ಉತ್ತಮ ಕೃತಿಯಾಗಿದ್ದು ಬಹುಶಃ ಸಾಯಣಕೃತ ಇರಬಹುದೆಂದು ನಂಬಲಾಗಿದೆ.

ವಿದ್ಯಾರಣ್ಯರ ಗುರು ಭಾರತೀತೀರ್ಥರು ಬ್ರಹ್ಮಸೂತ್ರಗಳನ್ನು ಸಂಗ್ರಹಿಸಿ, ವೈಯಾಸಿಕ ನ್ಯಾಯಮಾಲಾ ಎಂಬ ಕೃತಿಯನ್ನೂ ಅದಕ್ಕೆ ಗದ್ಯದಲ್ಲಿ ವಿಸ್ತಾರ ಎಂಬ ವ್ಯಾಖ್ಯಾನವನ್ನೂ ರಚಿಸಿದ್ದಾರೆ. ಸರಳವಾದ ಶ್ಲೋಕಗಳಲ್ಲಿ ಪ್ರತಿಯೊಂದು ಅಧಿಕರಣದಲ್ಲಿ ಅಡಕವಾಗಿರುವ ವಿಷಯಗಳನ್ನು ಸಂಗ್ರಹಿಸಿರುವುದಲ್ಲದೆ, ವಿದ್ಯಾರಣ್ಯರು ಜೀವನ್ಮುಕ್ತಿವಿವೇಕ ಎಂಬ ಕೃತಿಯ ಕರ್ತೃ. ಭಾರತೀತೀರ್ಥರು ಹಾಗೂ ವಿದ್ಯಾರಣ್ಯರಿಬ್ಬರೂ ಸೇರಿ ಬರೆದಿರು ವಂತೆ ತೋರುವ ಪಂಚದಶಿ ಎಂಬ ಕೃತಿಯಲ್ಲಿ ಅದ್ವೈತವೇದಾಂತದ ಸಿದ್ಧಾಂತಗಳಿವೆ. ಜೀವನ್ಮುಕ್ತಿವಿವೇಕದಲ್ಲಿ ಜೀವನ್ಮುಕ್ತಿಯನ್ನು ಕುರಿತು ವಿವೇಚನೆ ಇದೆ. ಅದರೊಂದಿಗೆ ಪ್ರಾಸಂಗಿಕವಾಗಿ ಸಂನ್ಯಾಸ ಮತ್ತು ವಿದೇಹಮುಕ್ತಿಗಳ ವಿಷಯದ ಚರ್ಚೆಯನ್ನೂ ಮಾಡಲಾಗಿದೆ. ಅನುಭೂತಿ ಪ್ರಕಾಶದಲ್ಲಿ ವಿದ್ಯಾರಣ್ಯರು ಉಪನಿಷತ್ತುಗಳ ಉಪದೇಶವನ್ನು ಸಂಗ್ರಹವಾಗಿ ಹೇಳಿದ್ದಾರೆ. ವಿವರಣಪ್ರಮೇಯ ಸಂಗ್ರಹ ಕೂಡ ವಿದ್ಯಾರಣ್ಯರಚಿತ ಮತ್ತೊಂದು ಕೃತಿ. ಇದು ಪ್ರಕಾಶಾತ್ಮರ ಪಂಚಪಾದಿಕಾ ವಿವರಣದ ಸಂಗ್ರಹ ನಿರೂಪಣೆ. ಇಮ್ಮಡಿ ದೇವರಾಯನು ಬ್ರಹ್ಮಸೂತ್ರದ ಮೇಲೆ ಒಂದು ವೃತ್ತಿಯನ್ನೂ ನಾದಿಂಡ್ಳಗೋಪನು ಪ್ರಬೋಧ ಚಂದ್ರೋದಯಕ್ಕೆ ಚಂದ್ರಿಕಾ ಎಂಬ ವ್ಯಾಖ್ಯಾನವನ್ನೂ ಬರೆದಿದ್ದಾನೆ. ಸೇಶ್ವರಮೀಮಾಂಸಾ, ನ್ಯಾಯಸಿದ್ಧಾಂಜನ, ತತ್ತ್ವಮುಕುಟ ಕಲಾಪ, ತಾಳವಾಲಿಕ, ತಾತ್ಪರ್ಯ ಚಂದ್ರಿಕಾ-ಇವು ರಾಮಾನುಜರ ಶ್ರೀಭಾಷ್ಯ ಮತ್ತು ಗೀತಭಾಷ್ಯಗಳ ಮೇಲೆ ಶ್ರೀವೇದಾಂತದೇಶಿಕರು ರಚಿಸಿದ ವ್ಯಾಖ್ಯಾನಗಳು. ದ್ವೈತವೇದಾಂತಕ್ಕೆ ಸಂಬಂಧಿಸಿದಂತೆ ಅಕ್ಷೋಭ್ಯತೀರ್ಥರ ಮಧ್ವತತ್ತ್ವಸಾರಸಂಗ್ರಹ ಟೀಕಾಚಾರ್ಯರೆಂದು ಪ್ರಸಿದ್ಧರಾಗಿರುವ ಜಯತೀರ್ಥರ ಪ್ರಮಾಣಪದ್ಧತಿ, ದ್ವೈತದರ್ಶನದಲ್ಲಿ ಜ್ಞಾನಮೂಲಗಳೆಂದು ಅಂಗೀಕರಿಸಿರುವ ಪ್ರತ್ಯಕ್ಷ, ಅನುಮಾನ, ಆಗಮ ಎಂಬ ಪ್ರಮಾಣ ತ್ರಯಗಳನ್ನು ಕುರಿತಂತೆ ಕೃತಿಯನ್ನು ರಚಿಸಲಾಗಿದೆ. ವಾದಾವಳಿ ಮತ್ತು ಅಧ್ಯಾತ್ಮತರಂಗಿಣಿ ಇವುಗಳು, ಅವರದೇ ಆದ ಭಗವದ್ಗೀತೆಯ ಮೇಲಿನ ತತ್ತ್ವಪ್ರಕಾಶಿಕಾ, ಪ್ರಮೇಯ ದೀಪಿಕಾ ಮತ್ತು ಋಗ್ಭಾಷ್ಯಟೀಕಾಗಳು ಪ್ರಮುಖವಾದವು. ರಘೋತ್ತಮನ (ಸು. 1500) ಭಾವಬೋಧ ಎಂಬ ಕೃತಿ ಆನಂದತೀರ್ಥರ ನ್ಯಾಯವಿವರಣ ವಾಗ್ವಜ್ರದ ವ್ಯಾಖ್ಯಾನ. ಶ್ರೀಪಾದನು ವಾಗ್ವಜ್ರ ಎಂಬ ಕೃತಿಯನ್ನು ರಚಿಸಿದ್ದನೆಂಬ ಪ್ರತೀತಿ ಇದೆ.

ವ್ಯಾಸರಾಯರು (ಸು. 1447-1539) ತಾತ್ಪರ್ಯಚಂದ್ರಿಕಾ, ನ್ಯಾಯಾಮೃತ, ತರ್ಕತಾಂಡವ ಎಂಬ ಕೃತಿಗಳ ಕರ್ತೃ. ಜಯತೀರ್ಥರ ತತ್ತ್ವಪ್ರಕಾಶವೆಂಬ ಪ್ರಸಿದ್ಧ ವ್ಯಾಖ್ಯಾನದ ವ್ಯಾಖ್ಯಾನವಾದ ತಾತ್ಪರ್ಯ ಚಂದ್ರಿಕಾ. ತರ್ಕತಾಂಡವ ಎಂಬ ಕೃತಿ ನ್ಯಾಯ ವಾದಗಳಿಗೆ ಸಂಬಂಧಿ ಸಿದ್ದು. ವ್ಯಾಸರಾಯರ ಮತ್ತೊಂದು ಸ್ವತಂತ್ರ ಕೃತಿ ಭೇದೋಜ್ಜೀವನ.

ಮಾಧವಮಂತ್ರಿಯು ಶೈವಸಿದ್ಧಾಂತಕ್ಕೆ ಸಂಬಂಧಿಸಿದ ಶೈವಾಮ್ನಾಯ ಸಾರವೆಂದ ಸಂಕನಲ ಕೃತಿಯನ್ನು ಬರೆದಿದ್ದಾನೆ. ಸೋಸಲೆ ವೀರಣಾರಾಧ್ಯನ (15ನೆಯ ಶತಮಾನ) ಪಂಚರತ್ನ ಎಂಬ ಕೃತಿಗೆ ರೇವಣಾರಾಧ್ಯನು ವ್ಯಾಖ್ಯಾನ ಬರೆದಿದ್ದಾನೆ. ಪಾಲ್ಕುರಿಕೆ ಸೋಮನಾಥನು ಸೋಮನಾಥಭಾಷ್ಯ (ಬಸವರಾಜೀಯ) ಎಂಬ ಕೃತಿಯನ್ನು ರಚಿಸಿದ್ದಾನೆ. ಇದಲ್ಲದೆ ರುದ್ರಭಾಷ್ಯ ಅಷ್ಟಕ, ಪಂಚಕ, ನಮಸ್ಕಾರಗದ್ಯ, ಅಕ್ಷರಾಂಕಗದ್ಯ, ಬಸವೋದಾಹರಣ, ಚತುರ್ವೇದ ತಾತ್ಪರ್ಯಸಂಗ್ರಹ ಎಂಬ ಕೃತಿಗಳನ್ನೂ ರಚಿಸಿದ್ದಾನೆ. ಶಕ್ತಿವಿಶಿಷ್ಟಾದ್ವೈತಕ್ಕೆ ಸಂಬಂಧಿಸಿದ ಬ್ರಹ್ಮಸೂತ್ರಗಳನ್ನು ಕುರಿತು ಶ್ರೀಪತಿಪಂಡಿತನು ರಚಿಸಿರುವ ಶ್ರೀಕರಭಾಷ್ಯ ಅಪೂರ್ವ ಕೃತಿಗಳಲ್ಲೊಂದೆನಿಸಿದೆ. ಮಾಧವ ಸಂಕಲಿಸಿದ ಏಕಾಕ್ಷರ ರತ್ನಮಾಲಾ, ಇರುಗಪ್ಪದಂಡಾಧಿನಾಥನ ನಾನಾರ್ಥರತ್ನಮಾಲಾ, ವಾದಿರಾಜರ ಲಕ್ಷಾಭರಣ-ಇವು ಈ ಕಾಲದ ಕೆಲವು ನಿಘಂಟುಗಳು.

ಈ ಕಾಲದ ಕನ್ನಡ ಹಾಗೂ ಸಂಸ್ಕøತ ಸಾಹಿತ್ಯಾಭಿವೃದ್ಧಿಯನ್ನು ಗಮನಿಸಿದಾಗ ತೆಲುಗು ಸಾಹಿತ್ಯಿಕ ಕೃತಿಗಳು ಕಡಿಮೆಯೆಂದೇ ಹೇಳ ಬಹುದು. ಆದರೂ ಕೆಲವು ಗಮನಾರ್ಹ ಕೃತಿಗಳೂ ಈ ಕಾಲದಲ್ಲಿ ರಚಿತವಾಗಿವೆ. ವ್ಯಾಸಭಾರತವನ್ನು ತೆಲುಗಿಗೆ ಅನುವಾದಿಸಿದ ಕವಿತ್ರಯರಲ್ಲಿ ಒಬ್ಬನಾದ ತಿಕ್ಕನನು ಹರಿಹರ ಅದ್ವೈತ ಮತ್ತು ಉತ್ತರ ರಾಮಾಯಣಗಳನ್ನು ರಚಿಸಿದ. ತೆಲುಗು ಭಾಷೆಯನ್ನು ಈತ ತನ್ನ ಕಾವ್ಯದಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ತೆಲುಗು ಸಾಹಿತ್ಯದಲ್ಲಿ ಮಹಾಕವಿ ಎಂದು ಗಣಿಸಲ್ಪಟ್ಟಿದ್ದಾನೆ. ಕವಿತ್ರಯರಲ್ಲಿ ಎರ್ರನ ಕಡೆಯವನು (ಸು. 14ನೆಯ ಶತಮಾನ). ಈತ ಮಹಾಭಾರತದ ಅರಣ್ಯಪರ್ವವನ್ನು ಪಾಂಡಿತ್ಯಪೂರ್ಣವಾಗಿ ಅನುವಾದಿಸಿ ಮಹಾಭಾರತ ಕಥೆಯನ್ನು ಪೂರ್ಣಗೊಳಿಸಿದ್ದಾನೆ. ಹರಿವಂಶಮು, ನೃಸಿಂಹ ಪುರಾಣಮು ಎಂಬ ಇನ್ನೆರಡು ಕೃತಿಗಳನ್ನೂ ಈತ ರಚಿಸಿದ್ದಾನೆ. ಪಾಲ್ಕುರಿಕೆ ಸೋಮನಾಥ ಕನ್ನಡಾಂಧ್ರಕವಿ ಎಂದು ಪ್ರಸಿದ್ಧನಾಗಿದ್ದಾನೆ. ಬಸವಪುರಾಣಮು ಮತ್ತು ಪಂಡಿತಾರಾಧ್ಯ ಚರಿತಮು ಎಂಬೆರಡು ಕೃತಿಗಳನ್ನೂ ದ್ವಿಪದಿ ಛಂದಸ್ಸಿನಲ್ಲಿ ರಚಿಸಿದ್ದಾನೆ. ಈತನ ಕೃತಿಗಳು ಕನ್ನಡ, ಸಂಸ್ಕøತ, ತಮಿಳು ಭಾಷೆಗಳಿಗೆ ಅನುವಾದವಾಗಿವೆ.

ಶ್ರೀನಾಥ ಮತ್ತು ಪೋತನರ ಕಾಲವನ್ನು ತೆಲುಗು ಸಾಹಿತ್ಯದ ಪೌರಾಣಿಕ ಹಾಗೂ ಪ್ರಬಂಧ ಯುಗಗಳ ಸಂಧಿಕಾಲವೆಂದು ಗುರುತಿಸ ಬಹುದು. ಪ್ರಬಂಧವೆಂಬ ಹೊಸಕಾವ್ಯಪ್ರಕಾರ ಕೃಷ್ಣದೇವರಾಯನ ಕಾಲದಲ್ಲಿ ರೂಪುಗೊಂಡಿತು. ಈ ಕಾವ್ಯಪ್ರಕಾರಕ್ಕೆ ಅಸ್ತಿಭಾರವನ್ನು ಹಾಕಿದವರಲ್ಲಿ ಶ್ರೀನಾಥ ಮೊದಲಿಗ. ಶೃಂಗಾರನೈಷಧಂ ಎಂಬ ಹೆಸರುಳ್ಳ ಈತನ ಕೃತಿ ಹರ್ಷನ ನೈಷಧೀಯಚರಿತಂ ಎಂಬ ಕೃತಿಯ ಭಾಷಾಂತರ. ಭೀಮಕಂಡಮು ಮತ್ತು ಕಾಶೀಖಂಡಮು ಎಂಬೆರಡು ಕೃತಿಗಳು ತೀರ್ಥಕ್ಷೇತ್ರಗಳ ಸ್ಥಳಪುರಾಣ ಕಥೆಗಳನ್ನೊಳಗೊಂಡಿದೆ. ಕ್ರೀಡಾಭಿರಾಮ್ ಎಂಬ ನಾಟಕದ ಕರ್ತೃವೂ (ವೀಧಿನಾಟಕ) ಈತನೇ ಇರಬೇಕೆಂಬ ಅಭಿಪ್ರಾಯವಿದೆ. ಈತನ ಹರವಿಲಾಸಮು ಎಂಬ ಕೃತಿಯಲ್ಲಿ ಶಿವನಿಗೆ ಸಂಬಂಧಿಸಿದ ಅನೇಕ ಕಥೆಗಳಿವೆ. ಇದೇ ಕವಿಯ ಗಾಥಾಸಪ್ತಶತಿಯು ಪ್ರಾಕೃಕದ ಅನುವಾದಿತ ಕೃತಿಯಾಗಿದ್ದು ಉಪಲಬ್ಧವಿಲ್ಲ. ಈತನ ಪದ್ಯಗಳನ್ನು ತೆಲುಗಿನಲ್ಲಿ ಚಾಟುಪದ್ಯಗಳೆಂದು ಕರೆಯುತ್ತಾರೆ. ಪೋತನ ಶ್ರೀನಾಥನ ಸಮಕಾಲೀನ. ಈತನ ಭಾಗವತ ಚಿತ್ತಾಕರ್ಷಕವಾದ ಉಪಕಥೆ ಗಳಿಂದ ಕೂಡಿದೆ. ಈತನ ಗಜೇಂದ್ರಮೋಕ್ಷ, ಧ್ರುವಚರಿತ್ರೆ, ಪ್ರಹ್ಲಾದ ಕಥಾ ಹಾಗೂ ರುಕ್ಮಿಣೀಕಲ್ಯಾಣಗಳು ಪ್ರಸಿದ್ಧವಾದ ಉಪಾಖ್ಯಾನಗಳಾಗಿವೆ.

ಗೌರನ, ಜಕ್ಕನ, ಅನಂತಾಮಾತ್ಯ ಹಾಗೂ ಪಿನವೀರನ ಇವರು ಶ್ರೀನಾಥ ಹಾಗೂ ಪೋತನರ ಸಮಕಾಲೀನರಾದ ಇತರ ಕವಿಗಳು. ಕೃಷ್ಣದೇವರಾಯನ ಆಸ್ಥಾನದಲ್ಲಿ ಅಷ್ಟದಿಗ್ಗಜಗಳೆಂದು ಪ್ರಸಿದ್ಧರಾಗಿದ್ದ ಎಂಟು ಜನ ಕವಿಗಳಿದ್ದ ವಿಷಯ ಪ್ರಖ್ಯಾತವಾದುದು. ಈ ಕವಿಗಳ ಹೆಸರಿನ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೃಷ್ಣದೇವರಾಯನ ಆಮುಕ್ತಮೌಲ್ಯದಾ ತೆಲುಗು ಪಂಚಮಹಾಕಾವ್ಯಗಳಲ್ಲಿ ಒಂದೆನಿಸಿದೆ. ಇದರಲ್ಲಿ ಗೋದಾದೇವಿ ಮತ್ತು ಶ್ರೀರಂಗನಾಥರಿಗೆ ಸಂಬಂಧಿಸಿದ ಕಥೆಯ ವರ್ಣನೆ ಇದೆ. ಕೃಷ್ಣದೇವರಾಯನ ಆಸ್ಥಾನಕವಿಗಳಲ್ಲೊಬ್ಬನಾದ ಪೆದ್ದನನ ಮನುಚರಿತಮು ಎಂಬ ಕೃತಿ, ಕೃಷ್ಣದೇವರಾಯನಿಗೆ ಅರ್ಪಿಸಲಾದ ನಂದಿ ತಿಮ್ಮಣ್ಣನ ಪಾರಿಜಾತಾಪಹರಣ, ಶಿವಭಕ್ತನೂ ಕೃಷ್ಣದೇವರಾಯನ ಆಸ್ಥಾನಕವಿಯೂ ಆಗಿದ್ದ ಧೂರ್ಜಟಿಯ ಶ್ರೀಕಾಳಹಸ್ತಿ ಮಾಹಾತ್ಮ್ಯಮು, ಕಾಳಹಸ್ತೀಶ್ವರಶತಕಮು ಎಂಬೆರಡು ಕೃತಿಗಳು, ಪಿಂಗಳಿ ಸೂರಣನ ಕಳಾಪೂರ್ಣೋದಯಮು, ಪ್ರಭಾವತೀ ಪ್ರದ್ಯುಮ್ನವು, ರಾಮರಾಜ ಭೂಪಣನ ಗೇಯಕಾವ್ಯವಾದ ವಸುಚರಿತ್ರ-ಇವು ತೆಲುಗು ಸಾಹಿತ್ಯಕ್ಕೆ ಈ ಕಾಲದ ಅಪೂರ್ವ ಕೊಡುಗೆಗಳು. ಹಾಸ್ಯಕವಿ ಎಂದು ಪ್ರಸಿದ್ಧನಾದ ತೆನಾಲಿ ರಾಮಕೃಷ್ಣನು ಪಾಂಡುರಂಗಮಾಹಾತ್ಮ್ಯಮು ಎಂಬ ಪಾಂಡಿತ್ಯ ಪೂರ್ಣ ಮಹಾಕಾವ್ಯವನ್ನು ರಚಿಸಿದ್ದಾನೆ. ಕೃಷ್ಣದೇವರಾಯನ ಕಾಲದಲ್ಲಿ ರಚಿತವಾದ ಕೃತಿಗಳಲ್ಲೆಲ್ಲ ಇದು ಉತ್ತಮ ಕೃತಿ ಎನಿಸಿದೆ. ಅಯ್ಯಲರಾಜು, ರಾಮಭದ್ರ, ಮಲ್ಲನ, ರಾಧಾ ಮಾಧವಕವಿ, ಕಂದುಕೂರಿ ರುದ್ರಕವಿ-ಇವರು ಈ ಕಾಲದ ಇನ್ನಿತರ ಕವಿಗಳು. ಆಟವೆಲದಿ ಎಂಬ ದೇಸೀ ಛಂದಸ್ಸಿನಲ್ಲಿ ರಚಿತವಾಗಿರುವ ವೇಮನನ ಪದ್ಯಗಳು ವಿಚಾರಪರಿಪ್ಲುತವಾಗಿವೆ. ನವುರಾದ ಭಾಷೆಯಲ್ಲಿ ಸಮಾಜವನ್ನು ವಿಡಂಬಿಸಿದ್ದಾನೆ. ಇವು ಸರ್ವಜ್ಞನ ತ್ರಿಪದಿಗಳನ್ನು ಹೋಲುತ್ತವೆ. (ನೋಡಿ- ಕನ್ನಡ-ಸಾಹಿತ್ಯ) (ಕೆ.)

ವಾಸ್ತುಶಿಲ್ಪ : ವಿಜಯನಗರದ ಆಶ್ರಯದಲ್ಲಿ, ಹಿಂದು ಸಂಸ್ಕøತಿಯ ಪುನರುಜ್ಜೀವನದ ಅನಂತರ ದ್ರಾವಿಡ ವಾಸ್ತುಶಿಲ್ಪ ಒಂದು ಹೊಸ ತಿರುವು ಹೊಂದಿತು. ಸುಮಾರು ಇದೇ ವಿಜಯನಗರ ಕಾಲದ ಹೊತ್ತಿಗಿನ ದಕ್ಷಿಣ ಭಾರತೀಯ, ಬಹುತೇಕ ಬದುಕುಳಿದ ದೇವಾಲಯಗಳ ಗೋಪುರಗಳು, ವಿಜಯ ನಗರದ ಅರಸರ ವಾಸ್ತುಶಿಲ್ಪದ ಮಹತ್ವಾ ಕಾಂಕ್ಷೆಗೆ ಚಿರಋಣಿಯಾಗಿವೆ.

ಕೃಷ್ಣದೇವರಾಯ ಹಾಗೂ ಅಚ್ಯುತರಾಯರ ಆಳಿಕೆಯಲ್ಲಿ, ದ್ರಾವಿಡ ಶೈಲಿ ಒಂದು ಅತ್ಯುನ್ನತ ಮಟ್ಟವನ್ನು ತಲುಪಿತು. ವಿಜಯನಗರದ ಭವ್ಯ ದೇವಾಲಯಗಳು ಈ ಕಾಲದಲ್ಲಿಯೇ ನಿರ್ಮಾಣಗೊಂಡವೆಂದು ಹೇಳಬಹುದು. ವಿಜಯನಗರ ಕಾಲದ ದ್ರಾವಿಡ ಶೈಲಿಯ ದೇವಾಲಯ ಗಳು ದಕ್ಷಿಣ ಭಾರತದ ಕೆಲವು ಸ್ಥಳಗಳಲ್ಲಿ ನಿರ್ಮಾಣಗೊಂಡಿವೆ; ಹಾಗೂ ಜೀರ್ಣಹೊಂದಿದ ಹಳೆಯ ದೇವಾಲಯಗಳು ಜೀರ್ಣೋದ್ಧಾರ ಹೊಂದಿವೆ. ಜೀರ್ಣವಾಗಿ ಶಿಥಿಲಗೊಂಡ ಬೇಲೂರು ದೇವಾಲಯವನ್ನು ಗುಂಡಪ್ಪ ದಂಡನಾಯಕನೆಂಬುವನು ಜೀರ್ಣೋದ್ದಾರ ಮಾಡಿಸಿದ. ಮೇಲುಕೋಟೆಯ ಲಕ್ಷ್ಮೀ ದೇವಾಲಯದ ಮುಂದಿನ ಅಂಗಳದಲ್ಲಿರುವ ಮಂಟಪವನ್ನು ಪ್ರೌಢದೇವರಾಯನ ಮಂತ್ರಿ ತಿಮ್ಮದಂಡನಾಯಕನ ಧರ್ಮಪತ್ನಿ ರಂಗನಾಯಕಿ 1458ರಲ್ಲಿ ಕಟ್ಟಿಸಿದಳೆಂದು ಒಂದು ಶಾಸನದಿಂದ ತಿಳಿಯುತ್ತದೆ.

ಕಂಬಗಳಿಂದ ಕೂಡಿದ ಮಂಟಪಗಳು ಹಾಗೂ ಕಂಬಸಾಲುಗಳಿಂದ ಕೂಡಿದ ದೇವಾಲಯಗಳೇ ವಿಜಯನಗರ ವಾಸ್ತುಶಿಲ್ಪದ ವೈಶಿಷ್ಟ್ಯ. ವೈವಿಧ್ಯಮಯವಾದ ಹಾಗೂ ಸೂಕ್ಷ್ಮ ಕೆತ್ತನೆಯ ಕಲಾಕೃತಿಗಳುಳ್ಳ ಕಂಬ ರಚನೆ ವಿಜಯನಗರ ದೇವಾಲಯಗಳ ಮುಖ್ಯ ಲಕ್ಷಣ. ಒಂದೊಂದು ದೇವಾಲಯವೂ ಭವ್ಯ ಕಂಬಗಳಿಂದ ಕಟ್ಟಲ್ಪಟ್ಟಿದೆ. ವಿಜಯನಗರದ ದೇವಾಲಯಗಳು ಕಂಬಗಳಿಂದಲೇ ಸೌಂದರ್ಯ, ಸಂಕೀರ್ಣತೆಯನ್ನೂ ಪಡೆದಿವೆ. ಇಲ್ಲಿಯ ಕೆಲ ಕಂಬಗಳು ಚೌಕವಾಗಿದ್ದು, ಅದರ ಸುತ್ತಲೂ ಅಷ್ಟಮುಖಗಳ, ಅಷ್ಟಕೋನಾಕೃತಿಯ ಚಿಕ್ಕಚಿಕ್ಕ ಕಂಬಗಳನ್ನು ಹೊಂದಿರುತ್ತವೆ. ಇವೆಲ್ಲ ಕಂಬಗಳು ಒಂದೇ ಕಲ್ಲಿನಲ್ಲಿ ಕೊರೆದವಾಗಿವೆ. ಕೆಲ ಕಂಬಗಳ ಸುತ್ತಲೂ ಮೂರ್ತಿಶಿಲ್ಪ ಕೊರೆಯಲ್ಪಟ್ಟಿರುತ್ತದೆ. ಕಂಬಗಳ ಮೇಲೆ ಕಲಾತ್ಮಕ ಕೆತ್ತನೆಯ ಕೆಲಸ ಮಾಡಿದೆ.

ವಿಜಯನಗರ ಶೈಲಿಯ ವಾಸ್ತುಶಿಲ್ಪದ ಕಟ್ಟಡಗಳು ದಕ್ಷಿಣಭಾರತದ ಎಲ್ಲ ಭಾಗಗಳಲ್ಲಿ ನಿರ್ಮಾಣಗೊಂಡವು. ಉದಾಹರಣೆಯಾಗಿ, ವೆಲ್ಲೂರು, ಕುಂಭಕೋಣಂ, ಕಾಂಚೀವರಂ, ತಾಡಪತ್ರಿ, ವಿರಿನ್‍ಜಿಪುರಂ, ಶ್ರೀರಂಗಂ, ಮಧುರೆ, ಚಿದಂಬರಂ. ಇವುಗಳಲ್ಲಿ ವೆಲ್ಲೂರು ಕೋಟೆಯ ದೇವಸ್ಥಾನ ಅತಿ ಶ್ರೇಷ್ಠವಾದುದು.

ಕೃಷ್ಣದೇವರಾಯ ಚಿದಂಬರದ ದೇವಾಲಯಕ್ಕೆ ಪುನಃ ಕೆಲವು ಹೊಸ ಭಾಗಗಳನ್ನು ಸೇರಿಸಿ, ಆ ದೇವಾಲಯಕ್ಕೆ ಒಂದು ಗೋಪುರ ಕಟ್ಟಿಸಿದ. ಮಧುರೆಯಲ್ಲಿ ಪುದುಮಂಟಪ ಅಥವಾ ವಸಂತಮಂಟಪವನ್ನು ಕಟ್ಟಿಸಿದವನೂ ಇವನೇ.


ವಿಜಯನಗರದ ದೇವಾಲಯದ ಮಂಟಪಗಳು ಪತ್ರಾಕೃತಿಯ ಕಮಾನುಗಳನ್ನು ಹೊಂದಿವೆ. ಈ ಕಮಾನುಗಳು ಮುಂದೆ ಸುರುಳಿಸುರುಳಿ ಯಾದ ಅಲಂಕಾರವನ್ನು ಹೊಂದಿವೆ. ಕಲಶಗಳೂ ಕಮಾನಿನ ಆಕೃತಿ ಪಡೆದಿವೆ. ಕಮಾನುಗಳು ವಿಜಯನಗರ ಕಾಲದಲ್ಲಿಯೂ ಕಟ್ಟಲ್ಪಡುತ್ತಿದ್ದವು. ಕಾವಲುಗಾರರ ವಸತಿಗಳು, ಗಜಶಾಲೆ, ಕಮಲ ಮಹಲ್ (ಲೋಟಸ್ ಮಹಲ್) ಮುಂತಾದ ಕಟ್ಟಡಗಳು ವಿಜಯನಗರ ಕಾಲದ ಕಮಾನುಗಳುಳ್ಳ ಕಟ್ಟಡಗಳಿಗೆ ನಿದರ್ಶನಗಳಾಗಿವೆ.

ಪಾಂಡ್ಯರ ಕಾಲದ ಗೋಪುರಗಳು ವಿಜಯನಗರ ಕಾಲದಲ್ಲಿಯೂ ಮುಂದುವರಿದವು. ಈ ಗೋಪುರಗಳ ಮಾದರಿಗಳು ದ್ರಾವಿಡ ಶೈಲಿಯ ಪ್ರಾಧಾನ್ಯವನ್ನು ಹೊಂದಿರುತ್ತವೆ. ವಿಜಯನಗರದ ಅರಸರು ಉತ್ತುಂಗ ಗೋಪುರ ನಿರ್ಮಿಸುವುದರಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಈ ಗೋಪುರಗಳು ದಕ್ಷಿಣ ಭಾರತದಲ್ಲೆಲ್ಲ ರಾಯಗೋಪುರಗಳೆಂದು ಪ್ರಸಿದ್ಧ ವಾಗಿವೆ. ವಿಜಯನಗರದ ಪತನಾನಂತರವೂ ತಂಜಾವೂರು ಹಾಗೂ ಮಧುರೆಯ ನಾಯಕರು ಈ ಗೋಪುರನಿರ್ಮಾಣ ಶೈಲಿಯ ವೈಖರಿಯನ್ನು ಮುಂದುವರೆಸಿದರು. ಗೋಪುರಗಳು ಅತಿ ಎತ್ತರವಾಗಿದ್ದು, ಅನೇಕ ಶಿಲ್ಪಕಲಾಕೃತಿಗಳನ್ನು ಹೊಂದಿ ಸುಂದರ ಕೃತಿಗಳಾಗಿವೆ. ಗೋಪುರ, ಪ್ರವೇಶದ್ವಾರ ಹೊಂದಿದ್ದು ಮಧ್ಯದಲ್ಲಿ ಪತ್ರತೋರಣ ಇರುತ್ತದೆ; ಹೊಸ್ತಿಲಲ್ಲಿ ವೃಶ್ಚಿಕ ಚಿಹ್ನೆ ಕಂಡುಬರುತ್ತದೆ. ಗೋಪುರದ ಅಡಿಭಾಗ ಭವ್ಯವಾದ ಶಿಲ್ಪಕಲಾಕೃತಿಗಳನ್ನು ಒಳಗೊಂಡಿದ್ದು, ದೇವತೆಗಳ ವಿವಿಧ ಮೋಹಕ ನೃತ್ಯಭಂಗಿಗಳನ್ನು ಸೊಗಸಾಗಿ ಕೆತ್ತಲಾಗಿದೆ.

ಮುಖ್ಯ ದೇವಾಲಯಕ್ಕೆ ಸಂಕಲನವಾಗಿ ದೇವಾಲಯದ ಮಧ್ಯದಲ್ಲಿ ಬೇರೆ ಕೆಲವು ಪರಿವಾರ ಗುಡಿಗಳು, ಕಂಬಗಳುಳ್ಳ ದೊಡ್ಡ ಪಡಸಾಲೆ, ಹಜಾರಗಳು, ರಂಗಮಂಟಪಗಳು ಈ ಕಾಲದ ದೇವಾಲಯಗಳ ನಿರ್ಮಾಣದಲ್ಲಿ ಕಟ್ಟಲ್ಪಡುತ್ತಿದ್ದವು. ಇಂಥ ಪ್ರತಿಯೊಂದು ಮಂಟಪ, ಹಜಾರಕ್ಕೆ ಅದಕ್ಕೆ ತಕ್ಕಂತೆ ಪ್ರತ್ಯೇಕ ಉದ್ದೇಶ ಹಾಗೂ ಉಪಯೋಗ ಇರುತ್ತಿತ್ತು.

ಮತ್ತೊಂದು ಮುಖ್ಯ ಕಟ್ಟಡವೆಂದರೆ ಕಲ್ಯಾಣಮಂಟಪ ಅಥವಾ ವಸಂತ ಮಂಟಪ. ದೇವಾಲಯದ ಸಂಕೀರ್ಣ ಭಾಗವೆಂದು ಈ ಕಲ್ಯಾಣಮಂಟಪ ಕಟ್ಟಲ್ಪಡುತ್ತಿತ್ತು. ಮುಖ್ಯ ದೇವಾಲಯದ ಎಡಭಾಗ ಹಾಗೂ ಪೂರ್ವದಿಕ್ಕಿನ ಪ್ರವೇಶದ್ವಾರದ ಮುಂದಿನ ಪ್ರದೇಶದಲ್ಲಿಯೇ ಈ ಮಂಟಪವನ್ನು ಕಟ್ಟಲಾಗುತ್ತಿತ್ತು. ಇದು ಚಾವಣಿ ಇಲ್ಲದೇ ಇರುವ, ತೆರೆದ ಕಂಬಗಳ ರಂಗಮಂಟಪವಾಗಿರುತ್ತಿತ್ತು.

ಹಂಪೆಯ ಹಳೆಯ ಮಹಾದ್ವಾರದ ಪ್ರವೇಶಮಾರ್ಗದ ಹತ್ತಿರವಿದ್ದ ಹನುಮಾನ್ ದೇವಾಲಯದಲ್ಲಿ ಎರಡು ಶಾಸನಗಳು ಕೆತ್ತಲ್ಪಟ್ಟಿವೆ. ಮಹಾದ್ವಾರದ ಎರಡು ಬದಿಗೂ ಒಂದು ಶಾಸನ ಕೆತ್ತಲ್ಪಟ್ಟಿದೆ. ಈ ಶಾಸನದ ಮೇಲೆಯೇ ಎರಡು ಮಾನವ ಆಕೃತಿಯ ಮೂರ್ತಿಗಳಿವೆ. ಈ ಎರಡು ಮೂರ್ತಿಗಳಲ್ಲಿ ಒಂದು ಪ್ರೌಢದೇವರಾಯನ ಮಗ ಮಲ್ಲಿಕಾರ್ಜುನ ಮೂರ್ತಿ ಎಂದು ಈ ಶಾಸನ ತಿಳಿಸುತ್ತದೆ. ಇದುವರೆಗೆ ಕಂಡುಬಂದಿರುವ, ಸಂಗಮ ವಂಶದ ಅರಸರಲ್ಲೊಬ್ಬನನ್ನು ಪ್ರತಿನಿಧಿಸುವ ಮೂರ್ತಿಶಿಲ್ಪ ಇದೊಂದೇ.

ವಿಠಲ ದೇವಾಲಯದ ಹತ್ತಿರವಿರುವ ಕೃಷ್ಣದೇವರಾಯನ ತುಲಾಭಾರ ಮಂಟಪದ ಎಡಗಡೆಯ ಕಂಬದ ಕೆಳಭಾಗದ ಅಡಿಯಲ್ಲಿ ಒಬ್ಬ ಅರಸನ ಮೂರ್ತಿ ಶಿಲ್ಪವಿದ್ದು ಈ ಅರಸನ ಪಕ್ಕದಲ್ಲಿ ಇಬ್ಬರು ರಾಣಿಯರು ಗೋಚರಿಸುತ್ತಾರೆ. ಈ ಮೂರ್ತಿಶಿಲ್ಪ ಯಾವುದೇ ಗುರುತಿನ ಪಟ್ಟಿಯನ್ನೂ ಹೊಂದಿಲ್ಲ. ಆದರೆ ಈ ಮೂರ್ತಿಶಿಲ್ಪ ಕೃಷ್ಣದೇವರಾಯ ಹಾಗೂ ಆತನ ಇಬ್ಬರು ರಾಣಿಯರು ಎಂದು ಊಹಿಸಬಹುದು.

ವಿಜಯನಗರದ ಪಟ್ಟಣದ ತುಂಬೆಲ್ಲ ಆಚೀಚೆ, ಎಲ್ಲೆಲ್ಲಿಯೂ ಪಾಳುಬಿದ್ದ ದೇವಾಲಯಗಳೂ ಮಂಟಪಗಳೂ ಭವ್ಯ ವಿಗ್ರಹಗಳೂ ಗೋಚರಿಸುತ್ತವೆ. 1528ರಲ್ಲಿ, ಕೃಷ್ಣದೇವರಾಯನ ಆಳಿಕೆಯಲ್ಲಿ 22 ಅಡಿ ಎತ್ತರದ, ಪದ್ಮಾಸನಸ್ಥ ಏಕಶಿಲಾ ನಾರಸಿಂಹ ವಿಗ್ರಹ ಕೊರೆಯಲ್ಪಟ್ಟಿತು. ನಾರಸಿಂಹ ವಿಗ್ರಹದ ತೊಡೆಯ ಮೇಲೆ ಕುಳಿತಿರುವ ಲಕ್ಷ್ಮೀ ವಿಗ್ರಹ ಭಗ್ನವಾಗಿದೆ. 12 ಅಡಿಗಿಂತ ಎತ್ತರವಿರುವ ಸಾಸಿವೆಕಾಳು ಹಾಗೂ ಕಡಲೆಕಾಳು ಗಣೇಶ ವಿಗ್ರಹಗಳು ಇಲ್ಲಿವೆ. ಇವು ಅಖಂಡ ಶಿಲೆಯಲ್ಲಿ ಕೊರೆಯಲ್ಪಟ್ಟ ಬೃಹದ್ ವಿಗ್ರಹಗಳು.

1513ರಲ್ಲಿ ಕೃಷ್ಣದೇವರಾಯನು ಒರಿಸ್ಸದ ಅರಸರನ್ನು ಗೆದ್ದ ಜ್ಞಾಪಕಾ ರ್ಥವಾಗಿ ಹಂಪೆಯಲ್ಲಿ ಮಹಾನವಮಿ ದಿಬ್ಬವನ್ನು ನಿರ್ಮಾಣ ಮಾಡಿಸಿದ. ಈ ದಿಬ್ಬ ಸಿಂಹಾಸನದ ಜಗತಿಯಾಗಿತ್ತು; ಇದರ ಅಡಿಭಾಗದಲ್ಲಿ ಮೂರ್ತಿಶಿಲ್ಪಗಳನ್ನು ಕೆತ್ತಲಾಗಿದೆ. ಇದರ ವೇದಿಕೆಯ ಪೀಠದ ಮೇಲೆ ಮೋಹಕ ನೃತ್ಯವಿನ್ಯಾಸಗಳು, ಬೇಟೆಯ ದೃಶ್ಯಗಳು ಗೋಚರಿಸುತ್ತವೆ. ದಿಬ್ಬದ ಮೇಲೆ ಕೊರೆಯಲ್ಪಟ್ಟ ಶಿಲ್ಪಗಳು ಸಮಕಾಲೀನ ಜೀವನವನ್ನು ಪ್ರತಿಬಿಂಬಿಸುತ್ತವೆ. ರಾಜನು ನವರಾತ್ರಿ ಉತ್ಸವವನ್ನು ಈ ದಿಬ್ಬದ ಮೇಲೆಯೇ ಆಚರಿಸುತ್ತಿದ್ದ. ಹಂಪೆಯ ಪಂಪಾವತಿ ಅಥವಾ ವಿರೂಪಾಕ್ಷ ದೇವಾಲಯ ತುಂಬಾ ಪ್ರಸಿದ್ಧವಾದುದು. ವಿಜಯನಗರದ ದೇವಾಲಯಗಳಲ್ಲೆಲ್ಲ ಇದು ಅತ್ಯಂತ ಪುರಾತನವಾದುದು. ಅಂದರೆ ಇದು ಹೊಯ್ಸಳರ ಕಾಲದ್ದು. ಗುರು ವಿದ್ಯಾರಣ್ಯರ ಸಲುವಾಗಿ ಒಂದನೆಯ ಹರಿಹರ ಈ ದೇವಾಲಯದ ಕೆಲ ಭಾಗಗಳನ್ನು ಕಟ್ಟಿಸಿದನೆಂದು ಲಾಂಗ್ ಹಸ್ರ್ಟ್ ಅಭಿಪ್ರಾಯ ಪಡುತ್ತಾರೆ. ಅಲಂಕೃತ ಮೇಲ್ಛಾವಣಿ, ಸೊಗಸಾಗಿ ಕೆತ್ತಿದ ಕಂಬಗಳು, ಸುಂದರ ಕೆತ್ತನೆಯ ಬಾಗಿಲುಗಳನ್ನು ಈ ದೇವಾಲಯ ಹೊಂದಿದೆ. ಮುಖಮಂಟಪಗಳು, ಕೈಸಾಲೆಗಳು, ವರಾಂಡಗಳನ್ನು ವಿಜಯನಗರದ ರಾಜರುಗಳು ನಿರ್ಮಿಸಿದರು. 1509-10ರಲ್ಲಿ ಕೃಷ್ಣದೇವರಾಯ ತನ್ನ ಪಟ್ಟಾಭಿಷೇಕಮಹೋತ್ಸವದ ಸ್ಮಾರಕವಾಗಿ ಈ ದೇವಾಲಯದ ಮುಂದೆ ರಂಗಮಂಟಪವನ್ನು ಕಟ್ಟಿಸಿದನೆಂದು ಇಲ್ಲಿರುವ ಶಾಸನ ಉಲ್ಲೇಖಿಸುತ್ತದೆ. ಈ ದೇವಾಲಯ ಉನ್ನತವಾದ ಮಹಾದ್ವಾರವನ್ನು ಹೊಂದಿದ್ದು, ಅದರ ಮೇಲೆ ಭವ್ಯಗೋಪುರವಿದೆ. ಬಹುಶಃ ಈ ಗೋಪುರ ಕೃಷ್ಣದೇವರಾಯನ ಅನಂತರದ ಕಾಲದ್ದಿರಬೇಕು.

ವಾಸ್ತುಶಿಲ್ಪದ ದೃಷ್ಟಿಯಿಂದ, ಹಂಪೆಯ ವಿಠ್ಠಲ ಹಾಗೂ ಹಜಾರರಾ ಮಸ್ವಾಮಿ ದೇವಾಲಯಗಳು ಪ್ರಮುಖವಾದವುಗಳು. ವಿಠ್ಠಲ ದೇವಾಲಯ ಪ್ರೌಢದೇವರಾಯನ ಕಾಲದಲ್ಲಿಯೇ ನಿರ್ಮಿತವಾಯಿತು. 1513ರಲ್ಲಿ ಕೃಷ್ಣದೇವರಾಯ ಈ ದೇವಾಲಯದ ಕಟ್ಟಡ ಕಾರ್ಯದ ಉಳಿದ ಭಾಗದ ನಿರ್ಮಾಣಕಾರ್ಯವನ್ನು ಮುಂದುವರಿಸಿದ. ಈ ಕಾರ್ಯ ಅಚ್ಯುತರಾಯನ (1529-42) ಕಾಲದಲ್ಲಿಯೂ ಮುಂದುವರಿಯಿತು. ಆಗಲೂ ದೇವಾಲಯದ ಕಾರ್ಯ ಮುಕ್ತಾಯಗೊಳ್ಳಲಿಲ್ಲ. 1513ರಲ್ಲಿ ತನ್ನ ದಿಗ್ವಿಜಯದ ಅನಂತರ ಕೃಷ್ಣದೇವರಾಯ ಈ ದೇವಾಲಯಕ್ಕೆ ಕಲಾತ್ಮಕವಾದ ಮುಂಭಾಗ ಹಾಗೂ ಫಲಪೂಜಾ ಹಾಗೂ ಕಲ್ಯಾಣ ಮಂಟಪಗಳೆರಡನ್ನೂ ನಿರ್ಮಿಸಿ ಸೇರಿಸಿದ. ಸಂಪೂರ್ಣ ಒಂದೇ ಒಂದು ಬೆಣಚುಗಲ್ಲಿನಲ್ಲಿ ಈ ದೇವಾಲಯ ನಿರ್ಮಿತವಾಗಿದೆ. ಬಹುಕೋನಗಳುಳ್ಳ ಮೇಲುಪಾಯದ ಮೇಲೆ ನಿರ್ಮಾಣವಾದ ಈ ಬೃಹದ್ ಯೋಜನೆಯ ಸಂಯುಕ್ತ ಕಂಬಗಳು ಅತ್ಯಂತ ಸೂಕ್ಷ್ಮವಾಗಿ, ಒಂದೇ ಶಿಲೆಯಿಂದ ಕೊರೆಯಲ್ಪಟ್ಟು ಒಂದೇ ಪಂಕ್ತಿಯಲ್ಲಿವೆ. ಬಳ್ಳಿ, ಪಕ್ಷಿ, ಪ್ರಾಣಿಗಳ ಸುಂದರ ಚಿತ್ರಗಳು ಈ ಕಂಬಗಳ ಮೇಲೆ ಕೆತ್ತಲ್ಪಟ್ಟಿವೆ. ಈ ಕಂಬಗಳ ಅಡಿಪಾಯದ ಅಡ್ಡಪಟ್ಟಿಕೆಗಳೂ ಕುಸುರಿನ ಕೆತ್ತನೆಯನ್ನು ಪ್ರದರ್ಶಿಸುತ್ತವೆ. ಈ ದೇವಾಲಯ ಸು. 538 ಅಡಿ ಉದ್ದ 310 ಅಡಿ ಅಗಲದ ಅಂಗಳದ ಮಧ್ಯಭಾಗದಲ್ಲಿದೆ. ಈ ದೇವಾಲಯವನ್ನು ಪ್ರವೇಶಿಸಲು ಮೂರು ದಿಕ್ಕಿನಲ್ಲಿಯೂ ಗೋಪುರದ್ವಾರಗಳಿವೆ. 230 ಅಡಿ ಉದ್ದ ಹಾಗೂ 25 ಅಡಿ ಎತ್ತರವಾಗಿರುವ ಗರ್ಭಗೃಹ ಈ ದೇವಾಲಯಕ್ಕೆ ಇದೆ. ಪೂರ್ವ ದಿಕ್ಕಿನ ಪ್ರವೇಶದ್ವಾರದ ಹೊರಗೆ ಒಂದು ಭವ್ಯವಾದ ದೀಪಸ್ತಂಭವಿದ್ದು ಹೊರ ಆವರಣದಲ್ಲಿ ಸೊಗಸಾದ ಕೆತ್ತನೆಯುಳ್ಳ ಎರಡು ರಂಗಮಂಟಪಗಳಿವೆ. ಕಲ್ಲುಕಂಬಗಳ ಆರು ಮಂಟಪಗಳು ಇಲ್ಲಿಯ ಆವರಣದಲ್ಲಿವೆ. 12 ಅಡಿ ಎತ್ತರವಿರುವ 56 ಕಂಬಗಳು ಮುಖಮಂಟಪವನ್ನು ಹೊತ್ತು ನಿಂತಿವೆ. ಇದರ ಪ್ರತಿಯೊಂದು ಕಂಬವೂ ಸೊಗಸಾದ ಕೆತ್ತನೆಯ ಕೆಲಸ ಹಾಗೂ ಮೂರ್ತಿಶಿಲ್ಪದಿಂದ ಕೂಡಿದೆ. ದೇವಾಲಯದ ಆವರಣದ ಮುಖಮಂಟಪದ ಎದುರಿಗೆ ಇರುವ ಕಲ್ಲಿನ ರಥ ಗಮನಾರ್ಹವಾದುದು. ಈ ಕಲ್ಲು ರಥದ ಮೇಲಿನ ಚಿತ್ರಪಟ್ಟಿಕೆಗಳಲ್ಲಿ ಸೈನಿಕರ, ಸವಾರರ, ಬೇಟೆಗಾರರ ಚಿತ್ರಗಳನ್ನು ಕೊರೆಯಲಾಗಿದೆ. ಸಂಗೀತದ ಸಪ್ತಸ್ವರಗಳನ್ನು ಈ ದೇವಾಲಯದ ಕಂಬಗಳಿಂದ ನುಡಿಸಬಹುದು. ದ್ರಾವಿಡ ಶೈಲಿಯ ಸೊಗಸಾದ, ಅಪ್ರತಿಮ ಶಿಲ್ಪಕಲೆಯಿಂದ ಈ ದೇವಾಲಯ ಉತ್ಕøಷ್ಟವಾಗಿದೆ.

ಹಂಪೆಯ ಕೋಟೆಯೊಳಗಣ ಹಜಾರ ರಾಮಸ್ವಾಮಿ ದೇವಾಲ ಯವನ್ನು 1513ರಲ್ಲಿ ಕೃಷ್ಣದೇವರಾಯ ಕಟ್ಟಿಸಿದ. ಈ ದೇವಾಲಯ ರಾಜಮನೆತನದವರ ಪೂಜೆಗಾಗಿ ಮೀಸಲಾಗಿತ್ತು. ಈ ದೇವಾಲಯದ ಮುಂದಿನ ಅಂಗಳದಲ್ಲಿಯೇ ಸೊಗಸಾಗಿ ಕೊರೆದ ಕಂಬಗಳು ಹಾಗೂ ಚಪ್ಪಟೆ ಆಕಾರದ ಮೇಲ್ಛಾವಣಿಗಳಿಂದ ಕೂಡಿದ ಒಂದು ದ್ವಾರಮಂಟಪ ಇದೆ. ಇದರ ಮುಂದೆ ದೊಡ್ಡ ದೊಡ್ಡ ಕಂಬಗಳ ಒಂದು ರಂಗಮಂಟಪವಿದೆ. ಕಂಬಗಳು ಕೆತ್ತಲ್ಪಟು, ದ್ರಾವಿಡ ಶೈಲಿಯಲ್ಲಿವೆ. ಈ ಮಂಟಪಕ್ಕೆ ಉತ್ತರ-ದಕ್ಷಿಣ ದಿಕ್ಕುಗಳಿಂದಲೂ ಬಾಗಿಲುಗಳಿವೆ. ಈ ಬಾಗಿಲುಗಳು ದ್ವಾರಮಂಟಪಗಳಾಗಿವೆ. ದೇವಾಲಯದ ಗರ್ಭಗೃಹದ ಮೇಲಿನ ವಿಮಾನ ಚಿಕ್ಕದಾಗಿದ್ದರೂ ಸೊಗಸಾಗಿದೆ. ದೇವಾಲಯದ ಗೋಡೆಗಳ ಮೇಲೆಲ್ಲ ಚಿತ್ರ ಪಟ್ಟಿಕೆಗಳಿವೆ. ವೈಷ್ಣವ ದೇವತೆಗಳು ರಾಮಾಯಣ ಹಾಗೂ ಮಹಾಭಾರತದ ಕೆಲ ದೃಶ್ಯಗಳು ಈ ಗೋಡೆಗಳ ಮೇಲೆ ಕಂಗೊಳಿಸುತ್ತಿವೆ.

ಹೊಯ್ಸಳ ಹಾಗೂ ದ್ರಾವಿಡ ವಾಸ್ತುಶಿಲ್ಪದ ಶೈಲಿಯನ್ನು ಅನುಸರಿಸಿ, 1356-58ರಲ್ಲೇ ಶೃಂಗೇರಿಯಲ್ಲಿ ನಿರ್ಮಾಣಗೊಂಡ ವಿದ್ಯಾಶಂಕರ ದೇವಾಲಯ ಅತ್ಯುತ್ತಮವಾದುದು. ತುಂಗಾನದಿಯ ದಡದ ಮೇಲಿರುವ ಈ ದೇವಾಲಯ ಎತ್ತರವಾದ ವೇದಿಕೆಯ ಮೇಲೆ ನಿಂತಿದೆ. ಮೂರ್ತಿಶಿಲ್ಪ ದೇವಾಲಯದ ತುಂಬೆಲ್ಲ ಅಲಂಕೃತಗೊಂಡಿದೆ. ಶಂಕರಾಚಾರ್ಯರ ವಿಗ್ರಹಗಳು, ಶೈವಪ್ರತಿಮೆಗಳು ಈ ದೇವಾಲಯದ ಭಿತ್ತಿವಿಗ್ರಹಗಳಾಗಿವೆ. ಗರ್ಭಗುಡಿಯ ಮೇಲೆ ಗೋಪುರವಿದೆ.

ಕೃಷ್ಣದೇವರಾಯ 1513ರಲ್ಲಿ ಕೃಷ್ಣಸ್ವಾಮಿ ದೇವಾಲಯವನ್ನು ಕಟ್ಟಿಸಿದ. ಆತನ ಸಹೋದರ ಅಚ್ಯುತರಾಯ 1539ರಲ್ಲಿ ಅಚ್ಯುತರಾಯ ದೇವಾಲಯವನ್ನು ಕಟ್ಟಿಸಿದ. ಇವೆರಡೂ ದೇವಾಲಯಗಳು ದ್ರಾವಿಡ ಶೈಲಿಯಲ್ಲಿದ್ದು ಇವುಗಳ ಕಲ್ಯಾಣಮಂಟಪಗಳು, ವಿಠ್ಠಲಸ್ವಾಮಿ ದೇವಾಲ ಯದಲ್ಲಿರುವ ಕಲ್ಯಾಣಮಂಟಪದ ಪ್ರತಿಬಿಂಬಗಳಂತಿವೆ. ಇಲ್ಲಿಯೂ ಏಕಶಿಲೆಯಲ್ಲಿ ನಿರ್ಮಿತವಾದ ಕಂಬಗಳ ಮೇಲೆ ಕೆತ್ತಿದ ಪೌರಾಣಿಕ ಚಿತ್ರಕಥೆಗಳು ಗಮನಾರ್ಹವಾದವು.

ವಿಜಯನಗರದಲ್ಲಿನ ಇತರ ಕಟ್ಟಡಗಳೆಂದರೆ ಅಷ್ಟಕೋನಾಕೃತಿಯ ರಂಗಮಂಟಪಗಳು. ಅಷ್ಟಕೋನಾಕೃತಿಯ ಸ್ನಾನಗೃಹಗಳು (ರಾಣಿಯರ), ಶಿಲಾದ್ವಾರ, ರಾಜನ ದರ್ಬಾರು, ನೆಲಮನೆಯ ದೇವಾಲಯ, ವಿಷ್ಣುವಿನ ಚಿಕ್ಕ ದೇವಾಲಯ, ಜೈನ ದೇವಾಲಯಗಳು, ಹಂಪೆಯ ಪೇಟೆ, ಕೋದಂಡರಾಮ ದೇವಾಲಯ, ಸೂಳೆ ಬಜಾರ್, ವರಾಹ ದೇವಾಲಯ, ರಾಜನ ತುಲಾಭಾರ, ಮಾಲ್ಯವಂತ ರಘುನಾಥ ದೇವಾಲಯ, ಗಾಣಿಗಿತ್ತಿ ಜೈನ ದೇವಾಲಯ, ಚಂದ್ರಶೇಖರ ದೇವಾಲಯ, ಪಟ್ಟಾಭಿರಾಮ ದೇವಾಲಯ ಮೊದಲಾದುವೂ ಪ್ರಸಿದ್ಧಿ ಪಡೆದಿವೆ.

ಇಂಡೊ-ಮುಸ್ಲಿಮ್ (ಸರಸೆನಿಕ್) ಶೈಲಿಯು ವಿಜಯನಗರ ವಾಸ್ತುಶಿಲ್ಪದ ಮೇಲೆ ಅಪಾರ ಪ್ರಭಾವ ಬೀರಿದೆ. ಈ ಮಾದರಿಯ ದೇವಾಲಯಗಳ ನಿರ್ಮಾಣವನ್ನೂ ಕೈಗೊಳ್ಳಲಾಯಿತು. ರಾಣಿಯರ ಸ್ನಾನಗೃಹ, ಅಷ್ಟಕೋನಾಕಾರದ ಮಂಟಪ, ರಾಣಿಯ ಅರಮನೆ, ಕಾವಲುಗೋಪುರಗಳು, ಕಮಲ ಮಹಲ್, ಗಜಶಾಲೆ, ರಕ್ಷಣಾ ಸ್ಥಳ ಅಥವಾ ಕಾವಲುಕೋಣೆ, ಮುಸ್ಲಿಮ್ ಕಾವಲುಬುರುಜು ಮೊದಲಾದವುಗಳು ಇಂಡೊ-ಮುಸ್ಲಿಮ್ ಶೈಲಿಗೆ ಸೇರಿದವುಗಳು. ಹಂಪೆಯ ಶಿಲಾಮಯ ಪರ್ವತ ಪ್ರದೇಶ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ಕಟ್ಟಡ ಕಾರ್ಯಕ್ಕೆ ತುಂಬಾ ಸಹಾಯಕವಾಯಿತು. ವಿಜಯನಗರದ ಅರಸರಿಗೆ ಸೃಷ್ಟಿ ನೈಸರ್ಗಿಕವಾಗಿತ್ತ ಕೊಡುಗೆ ಇದು. ವಿಜಯನಗರದ ವಾಸ್ತುಶಿಲ್ಪವು ಚಾಳುಕ್ಯ, ಹೊಯ್ಸಳ ಹಾಗೂ ದ್ರಾವಿಡ ವಾಸ್ತುಶಿಲ್ಪದ ಮಾದರಿಯ ತ್ರಿವೇಣಿಸಂಗಮವಾಗಿದೆ. ವಿಜಯನಗರ ಸಾಮ್ರಾಜ್ಯದ ಹಿಂದು ದೇವಾಲಯಗಳು ಸಾಂಸ್ಕøತಿಕ ಕೇಂದ್ರಗಳಾಗಿದ್ದುವು. ವಾಸ್ತುಶಿಲ್ಪದ ಸೃಷ್ಟಿಯಲ್ಲಿ ವಿಜಯನಗರದ ದೇವಾಲಯಗಳು ಒಂದು ಹೊಸ ಯುಗವನ್ನು ಪ್ರಾರಂಭಿಸಿದವು.

   	(ಎಸ್.ಜೆ.)

ಶಾಸನಗಳು : ದಕ್ಷಿಣ ಭಾರತದಲ್ಲಿ ದೊರೆತಿರುವ ಹಲವಾರು ಮನೆತನಗಳ ಶಾಸನಗಳಲ್ಲಿ ಬಹುಶಃ ವಿಜಯನಗರದ ಅರಸರದೇ ಅತ್ಯಧಿಕ ಸಂಖ್ಯೆಯ ಶಾಸನಗಳು. ಈ ಸಾಮ್ರಾಜ್ಯ ಸಮಗ್ರ ದಕ್ಷಿಣ ಭಾರತದ ವ್ಯಾಪ್ತಿಯನ್ನು ಪಡೆದಿದ್ದುದರಿಂದ ಸಂಸ್ಕøತ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಶಾಸನಗಳು ದೊರೆತಿವೆ. ಸು. 9,000 ಶಾಸನಗಳು ಈವರೆಗೆ ಗಮನಕ್ಕೆ ಬಂದಿವೆ. ಅವುಗಳಲ್ಲಿ ಅತಿಸ್ವಲ್ಪ ಭಾಗ ಪ್ರಕಟವಾಗಿವೆ. ಇವರ ಶಾಸನಗಳಲ್ಲಿನ ಲಿಪಿಗಳನ್ನು ಕುರಿತು ಒಂದೆರಡು ಅಂಶಗಳನ್ನು ಗಮನಿಸಬಹುದು. ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ಈವರೆಗೆ ಬಹಳಷ್ಟು ಶಾಸನಗಳು ಕಪ್ಪು ಬಳಪದ ಶಿಲೆಯ ಮೇಲೆ ಬರೆದವುಗಳಾಗಿದ್ದುವು. ಎಂತಲೇ ಅಕ್ಷರಗಳನ್ನು ಮುದ್ದಾಗಿ, ನಾಜೂಕಾಗಿ ಕೆತ್ತುವುದು ಒಂದು ವಿಶಿಷ್ಟ ಕಲೆಯಾಗಿ ಪರಿಗಣಿತವಾಗಿತ್ತು. ಆದರೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಶಾಸನ ಬರೆಯಲು ಬಳಸಿದುದು ಗಟ್ಟಿಯಾದ ಗ್ರಾನೈಟ್ ಶಿಲೆ. ಇದರಲ್ಲಿ ಸಣ್ಣ ಪ್ರಮಾಣದ ಅಕ್ಷರಗಳನ್ನು ಕೆತ್ತುವುದು ಸುಲಭವಾಗಿರಲಿಲ್ಲ. ಅಲ್ಲದೆ ಆ ಸಾಮ್ರಾಜ್ಯ ಅಸ್ತಿತ್ವದಲ್ಲಿದ್ದ ಸುಮಾರು ಮೂರು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಪ್ರಕ್ಷುಬ್ದ ವಾತಾವರಣವಿದ್ದು ಯಾವಾಗಲೂ ನೆರೆಯ ಶತ್ರುಗಳೊಡನೆ ಕದನದಲ್ಲಿ ತೊಡಗಿರಬೇಕಾದ ಪರಿಸ್ಥಿತಿಯಿತ್ತು. ಹೀಗಾಗಿ ಜನತೆ ರಾಜ್ಯದ ರಕ್ಷಣೆಗಾಗಿ ಸದಾ ಉದ್ಯೋಗಗಳಲ್ಲಿ ನಿರತ ವಾಗಿದ್ದು ಶಾಂತಿ ತೃಪ್ತಿಗಳು ಅಪರೂಪವಾಗಿದ್ದಾಗ ಶಾಸನಗಳನ್ನು ಸ್ಪಷ್ಟವಾಗಿ, ನಾಜೂಕಾಗಿ ಬರೆಯುವ, ಬರೆಸುವ ವ್ಯವಧಾನವಿರಲಿಲ್ಲವೆನ್ನ ಬಹುದು. ಅಲ್ಲದೆ ಅಸಂಖ್ಯಾತ ಶಾಸನಗಳನ್ನು ಬರೆದಿಡಬೇಕಾದಾಗ ಪ್ರತಿಯೊಂದಕ್ಕೂ ಉತ್ತಮವಾದ ಶಿಲೆಯನ್ನು ಆರಿಸಿ ತರುವುದೂ ಸುಲಭವಾಗಿರಲಿಲ್ಲ. ಈ ಕಾರಣಗಳಿಂದ ಶಾಸನಗಳ ಅಕ್ಷರಗಳು ಸುಂದರವಾಗಿರದೆ ದಪ್ಪವಾಗಿ, ಮನಬಂದಂತೆ ಕೆತ್ತಿದವುಗಳಾಗಿದ್ದುವು. ಈ ದೃಷ್ಟಿಯಿಂದ ಒಂದು ವಿಧದಲ್ಲಿ ಶಾಸನಕಲೆಯಲ್ಲಿ ಪ್ರತಿಭೆ ಇಳಿಮುಖವಾಗಿತ್ತು. ಭಾಷೆಯ ವಿಷಯದಲ್ಲೂ ಇವೇ ಮಾತುಗಳನ್ನು ಹೇಳಬಹುದು. ಈ ಕಾಲದ ಶಾಸನಗಳಲ್ಲಿ ಸಾಹಿತ್ಯಕ ಅಂಶ ಬಹಳ ಕಡಿಮೆ. ಅರಸರು ತಮ್ಮ ಆಸ್ಥಾನ ಕವಿಗಳಿಂದ ಬರೆಸಿದ ಶಾಸನಗಳನ್ನು ಹೊರತುಪಡಿಸಿದರೆ, ಇತರ ಶಾಸನಗಳು ವಿಷಯಕ್ಕೆ ನೇರಾಗಿ ಸಂಬಂಧಿಸಿದ್ದವುಗಳಾಗಿದ್ದವು. ಸಮಕಾಲೀನ ಸಾಹಿತ್ಯದಲ್ಲಿದ್ದಂತೆ ಶಾಸನಗಳಲ್ಲೂ ಸಂಖ್ಯೆ ಅಪಾರವಾದರೂ ಪ್ರೌಢಿಮೆ ಲಾಲಿತ್ಯಗಳಲ್ಲಿ ಹಿಂದಿನ ಶತಮಾನಗಳಲ್ಲಿ ಬೆಳಕು ಕಂಡ ಶಾಸನಸಾಹಿತ್ಯಕ್ಕೆ ಇವು ಸಾಟಿಯಲ್ಲವೆಂಬುದು ಕಟುಸತ್ಯ. ಲೌಕಿಕದ ತುದಿಯನ್ನು ಮುಟ್ಟಿತೆಂಬಂತೆ ಅದರಲ್ಲಿ ಬರುವ ಶಾಪಭಾಗಗಳಲ್ಲಿ ಅನೇಕವೇಳೆ ಅಶ್ಲೀಲ, ಅವಾಚ್ಯ ಶಬ್ದಗಳ ಪ್ರಯೋಗವನ್ನು ಕಾಣುತ್ತೇವೆ.

ಈ ಅರಸರ ನೂರಾರು ತಾಮ್ರಶಾಸನಗಳು ಲಭಿಸಿವೆ. ಇವುಗಳ ಭಾಷೆ ಸಂಸ್ಕøತ. ಬಹುಮಟ್ಟಿಗೆ ಲಿಪಿ ನಂದಿನಾಗರೀ ಎನಿಸಿಕೊಳ್ಳುವ ನಾಗರೀಲಿಪಿ. ಈ ತಾಮ್ರಶಾಸನಗಳು ಸಾಮಾನ್ಯವಾಗಿ ಹಿರಿಯ ಆಕಾರ-ಗಾತ್ರಗಳದ್ದಾಗಿದ್ದು, ಅನೇಕ ಶಾಸನಗಳಲ್ಲಿ ಅರಸರ ವಂಶಾವಳಿಗಳನ್ನು ನೀಡಿದೆ. ಈ ವಿಷಯಕ್ಕೆ ಸಂಬಂಧಿಸಿದ ಭಾಗದ ಶಾಸನಪಾಠಗಳು ಬಹುಮಟ್ಟಿಗೆ ಒಂದೇ ಪಡಿಯಚ್ಚಿನವು. ಪ್ರತಿಯೊಬ್ಬ ಅರಸನ ಗಣನೀಯ ವೆನ್ನಬಹುದಾದ ಸಾಧನೆಗಳ ಉಲ್ಲೇಖಗಳನ್ನು ಇವುಗಳಲ್ಲಿ ಕಾಣುತ್ತೇವೆ. ಅರಸರು ಬದಲಾದಂತೆಲ್ಲ ಹಿಂದಿನ ಅರಸರಿಗೆ ಸಂಬಂಧಿಸಿದ ಅದೇ ಶಾಸನಪಾಠಗಳನ್ನಿರಿಸಿಕೊಂಡು ಅನಂತರದ ಅರಸರಿಗೆ ಸಂಬಂಧಿಸಿದ ಹೊಸ ವಿವರಗಳನ್ನು ಕಾಣುತ್ತೇವೆ. ಬಹುಮಟ್ಟಿಗೆ ಇವು ಅರಮನೆಯ ಶಾಸನಾಧಿಕಾರಿಯಿಂದ ರಚಿತವಾದ ಕಾರಣ ಆತ ಮೂಲತಃ ಹಿಂದಿನ ದಾಖಲೆಯನ್ನು ಆಧರಿಸಿ ಕರಡುಪ್ರತಿಗಳನ್ನು ತಯಾರಿಸಿರುತ್ತಾನೆ. ಅನಂತರದ ಅಧಿಕಾರಿಗಳೂ ಅದೇ ದಾಖಲೆಯನ್ನು ಬಳಸಿ ಅದಕ್ಕೆ ಹೊಸ ವಿಷಯಗಳನ್ನು ಸೇರಿಸುತ್ತ ಹೋಗುವುದರಿಂದ ಈ ಶಾಸನಗಳು ಒಂದೇ ರೂಪದಲ್ಲಿರುವುದು ಸಹಜ. ಅಲ್ಲದೆ ಈ ಶಾಸನಗಳನ್ನು ರಚಿಸಿದ ಕವಿಗಳಲ್ಲಿ ಕೆಲವರು ವಂಶಪಾರಂಪರ್ಯವಾಗಿ ಆಸ್ಥಾನ ಕವಿಗಳಾಗಿದ್ದು, ತಮ್ಮ ಹಿರಿಯರು ಬರೆದಿಟ್ಟಿದ್ದುದರ ಮುಂದಿನ ಭಾಗ ಗಳನ್ನು ತಾವೂ ರಚಿಸಿದ್ದಾರೆಂಬುದು ಸ್ಪಷ್ಟ. ತಾಮ್ರಶಾಸನಗಳ ಕೊನೆಯ ಭಾಗದಲ್ಲಿ ವೃತ್ತಿಗಳನ್ನು ಪಡೆದವರ ಹೆಸರುಗಳೂ ದತ್ತಿ ಬಿಟ್ಟ ಗ್ರಾಮ ಅಥವಾ ಭೂಮಿಯ ಮೇರೆಗಳೂ ಅನೇಕ ಸಂದರ್ಭಗಳಲ್ಲಿ ಕನ್ನಡ ಭಾಷೆಯಲ್ಲಿರುತ್ತವೆ. ಪ್ರಾದೇಶಿಕ ಭಾಷೆಗಳ ವೈಲಕ್ಷಣ್ಯಗಳನ್ನೂ ಜನಪದ ಭಾಷೆಯನ್ನೂ ಈ ಶಾಸನಗಳಲ್ಲಿ ಕಾಣಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಶಾಸನಗಳ ಭಾಷೆ ಒಳನಾಡಿನ ಸಮಕಾಲೀನ ಭಾಷೆಗಿಂತ ಭಿನ್ನವಾಗಿದ್ದು ತನ್ನ ಪ್ರಾದೇಶಿಕ ವೈಶಿಷ್ಟ್ಯವನ್ನುಳಿಸಿಕೊಂಡು ಬಂದಿದೆ ಎಂಬುದನ್ನು ಗಮನಿಸಬಹುದು.

ಅಂದಿನ ಆರ್ಥಿಕ-ಸಾಮಾಜಿಕ ಸ್ಥಿತಿಗೆ ಅನುಗುಣವಾಗಿ ಈ ಕಾಲದ ಶಾಸನಗಳಲ್ಲಿ ಹಳ್ಳಿಗಳನ್ನು, ಪಟ್ಟಣಗಳನ್ನು ಪರಿವರ್ತಿಸಿದಾಗ, ಬೀಡು ಬಿಟ್ಟಿದ್ದ ಭೂಮಿಗಳನ್ನು ಸಾಗುವಳಿಗೆ ತಂದಾಗ, ಅಧಿಕಾರವರ್ಗದವರು ಹೊಸದಾಗಿ ಅಲ್ಲಿ ನೆಲೆಸಿದ ಜನತೆ ನೀಡುವ ಸೌಲಭ್ಯಗಳನ್ನು ಕುರಿತಾದ ಒಪ್ಪಂದಗಳು, ಅಧಿಕಾರಿಗಳ ಶೋಷಣೆಯ ವಿರುದ್ಧ ಜನತೆ ಅರಸನಲ್ಲಿ ಅಥವಾ ಸಾಮಂತನಲ್ಲಿ ನೀಡಿದ ದೂರುಗಳು ಹಾಗೂ ಅವುಗಳ ಪರಿಣಾಮವಾಗಿ ಜನತೆಗೆ ನೀಡಿದ ಆಶ್ವಾಸನೆಗಳು, ಭಾರವಾಗಿದ್ದ ಕಸಬುದಾರರನ್ನು ಮುಕ್ತಗೊಳಿಸುವುದು-ಇವೇ ಮುಂತಾದ ವಿಷಯಗಳನ್ನು ಕಾಣಬಹುದಾಗಿದೆ. ಧರ್ಮರಕ್ಷಣೆಗಾಗಿಯೇ ಸಾಮ್ರಾಜ್ಯ ಮೈವೆತ್ತಿತ್ತು ಎಂಬುದನ್ನು ಗಮನಿಸಿದಾಗ ಬುಕ್ಕ, ಇಮ್ಮಡಿ ದೇವರಾಯ, ಕೃಷ್ಣದೇವರಾಯ ಮುಂತಾದ ಪ್ರಮುಖ ಅರಸರು ದೇವಾಲಯಗಳಿಗೆ ವಿಶೇಷವಾಗಿ ನೀಡಿದ ಅಪಾರ ದತ್ತಿಗಳ ಹಿನ್ನೆಲೆ ಅರ್ಥವಾಗುತ್ತದೆ. (ಜಿ.ಬಿ.ಆರ್.)

ನಾಣ್ಯಗಳು : ವಿಜಯನಗರ ಕಾಲದಲ್ಲಿ ನಾಣ್ಯ ಪದ್ಧತಿ ವಿಶೇಷವಾಗಿ ಸುಧಾರಿತವಾಯಿತು. ಇಮ್ಮಡಿ ದೇವರಾಯನ ಕಾಲದಲ್ಲಿ ಜಾರಿಗೆ ಬಂದ ಆಡಳಿತ ಸುಧಾರಣೆಗಳಲ್ಲಿ ಮುಖ್ಯವಾದದ್ದು ನಾಣ್ಯಗಳಿಗೆ ಸಂಬಂಧಿಸಿದುದು. ತೆರಿಗೆಗಳನ್ನು ಧಾನ್ಯರೂಪದ ಬದಲು ಚಿನ್ನದ ನಾಣ್ಯಗಳಲ್ಲಿ ಕೊಡಬೇಕೆಂದು ಇವನು ಮಾಡಿದ ಆಜ್ಞೆಯ ಫಲವಾಗಿ ಹೊಸ ನಮೂನೆಯ ನಾಣ್ಯಗಳು ಬಳಕೆಗೆ ಬಂದವು. ಚಿನ್ನದ ನಾಣ್ಯಗಳ ತೂಕ ಮತ್ತು ಶುದ್ಧತೆಯನ್ನು ಪರೀಕ್ಷಿಸಲು ಒಂದು ಶಾಖೆಯೇ ಇದ್ದಿತೆಂದು ಕೆಲವು ಸಮಕಾಲೀನ ಇತಿಹಾಸಕಾರರಿಂದ ತಿಳಿಯುತ್ತದೆ. ಚಿನ್ನದ ನಾಣ್ಯಗಳೇ ವಿಜಯನಗರ ಕಾಲದಲ್ಲಿ ವಿಶೇಷವಾಗಿ ಬಳಕೆಯಲ್ಲಿದ್ದರೂ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳೂ ಅಚ್ಚಾಗುತ್ತಿದ್ದುವು. ವರಹ (ಗದ್ಯಾಣ, ಪೊನ್, ಪಗೋಡ), ಪಣ, ಹಾಗ ಎಂಬುವು ಚಿನ್ನದ ನಾಣ್ಯಗಳು. ತಾರ ಎನ್ನುವುದು ಬೆಳ್ಳಿಯ ನಾಣ್ಯ. ಪಣ, ಚಿತಲ್ ಮತ್ತು ಕಾಸು ತಾಮ್ರದ ನಾಣ್ಯಗಳು, ವರಹ ಸುಮಾರು 52 ಗ್ರೇನ್ ತೂಕದ್ದು. ಸುಮಾರು 250 ಗ್ರೇನ್ ತೂಕದಿಂದ ಪ್ರಾರಂಭವಾಗಿ 15 ಗ್ರೇನ್ ತೂಕದವರೆಗಿನ ತಾಮ್ರದ ನಾಣ್ಯಗಳು ಬೆಳಕಿಗೆ ಬಂದಿವೆ. ಶಾಸನಗಳಲ್ಲಿ ದೊರಕುವ ಮಾಹಿತಿಗಳಿಂದ ಮತ್ತು ಸಮಕಾಲೀನ ವಿದೇಶಿಯ ಇತಿಹಾಸಕಾರರ ಬರೆವಣಿಗೆಯಿಂದ ವಿಜಯನಗರ ಕಾಲದಲ್ಲಿದ್ದ ನಾಣ್ಯಗಳ ಕೋಷ್ಟಕವನ್ನು ಈ ರೀತಿ ತೋರಿಸಬಹುದು ;

1 ದೊಡ್ಡ ವರಹ = 2 ವರಹ, 1 ವರಹ = 2 ಪ್ರತಾಪ, 1 ಪ್ರತಾಪ = 2 ಕಾಟಿ, 1 ಪಣ = 1/10 ವರಹ, 1 ಚಿನ್ನ = 1/8 ವರಹ, 1 ಪಣ = 4 ಹಾಗ, 1 ಹಾಗ = 2 ಬೇಳೆ.

ಹನುಮಂತ, ಗರುಡ, ವೆಂಕಟೇಶ್ವರ, ಬಾಲಕೃಷ್ಣ, ಲಕ್ಷ್ಮೀನಾರಾಯಣ, ಶ್ರೀರಾಮ, ಶಂಖ-ಚಕ್ರ, ದುರ್ಗಿ, ಗಂಡಭೇರುಂಡ, ವರಾಹ, ಆನೆ, ಉಮಾಮಹೇಶ್ವರ, ನಂದಿ ಮುಂತಾದವುಗಳು ವಿಜಯನಗರದ ನಾಣ್ಯಗಳ ಮುಮ್ಮಖದಲ್ಲಿರುತ್ತವೆ. ಹಿಮ್ಮುಖದಲ್ಲಿ ಸಾಮಾನ್ಯವಾಗಿ ಬರೆಹವಿರುತ್ತದೆ. ಈ ಬರೆಹ ಕನ್ನಡ, ನಾಗರೀ ಅಥವಾ ತೆಲುಗು ಲಿಪಿಯಲ್ಲಿರುತ್ತದೆ. ವಿಜಯನಗರದ ಸ್ಥಾಪಕರು ಕನ್ನಡ ಲಿಪಿಯನ್ನೇ ತಮ್ಮ ನಾಣ್ಯಗಳಲ್ಲಿ ಬಳಸಿದ್ದರು ಎಂಬುದು ಗಮನಿಸಬೇಕಾದ ಅಂಶ. ಅನಂತರದ ರಾಜರು ನಾಗರೀ ಮತ್ತು ಕನ್ನಡ ಲಿಪಿಯ ಬರೆಹಗಳನ್ನು ಅಚ್ಚುಹಾಕಿಸಿದರು. ಆದರೆ ಕೊನೆಯ ರಾಜರ ಬರೆಹಗಳು ತೆಲುಗಿನಲ್ಲಿವೆ. ಸಾಮಾನ್ಯವಾಗಿ ಬರೆಹಗಳು ರಾಜರ ಹೆಸರು ಮತ್ತು ಅವರ ಬಿರುದುಗಳನ್ನು ತಿಳಿಸುತ್ತವೆ.

ತಾಂತ್ರಿಕ ದೃಷ್ಟಿಯಿಂದ ವಿಜಯನಗರ ನಾಣ್ಯಗಳು ಗಮನಾರ್ಹ ವಾದವು. ಸರಿಯಾದ ಅಚ್ಚುಗಳನ್ನು ಮಾಡಿ ಅವುಗಳಿಂದ ನಾಣ್ಯಗಳನ್ನು ತಯಾರಿಸುತ್ತಿದ್ದರು. ತೂಕ ಮತ್ತು ಆಕಾರಗಳಲ್ಲಿ ಖಚಿತತೆ ಕಾಣ ಬರುತ್ತದೆ. ಅವುಗಳ ಮೇಲಿನ ಚಿತ್ರಗಳು ಕಲಾತ್ಮಕ, ಬರೆವಣಿಗೆ ಸ್ಫುಟ.

ಮೊದಲನೆಯ ಹರಿಹರನ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ದೊರಕಿವೆ. ಇವನ ನಾಣ್ಯಗಳಲ್ಲಿ ಹನುಮಂತ ಅಥವಾ ಗರುಡನ ಚಿತ್ರವುಳ್ಳ ಮುಮ್ಮುಖ ಮತ್ತು ಶ್ರೀ ವೀರ ಹರಿಹರ ಎಂಬ ಕನ್ನಡ ಬರೆವಣಿಗೆ ಕಾಣಬರುತ್ತದೆ. ಮೊದಲನೆಯ ಬುಕ್ಕನ ಚಿನ್ನ ಮತ್ತು ತಾಮ್ರದ ನಾಣ್ಯಗಳ ಮುಮ್ಮುಖದಲ್ಲಿ ಹನುಮಂತನ ಚಿತ್ರ, ಒಮ್ಮುಖದಲ್ಲಿ ಶ್ರೀ ವೀರಬುಕ್ಕರಾಯ ಎಂಬ ಬರೆಹ ಕನ್ನಡ ಅಥವಾ ನಾಗರೀಲಿಪಿಯಲ್ಲಿ ಕಾಣಬರುತ್ತದೆ. ಇಮ್ಮಡಿ ಹರಿಹರ ವೀರ ಎನ್ನುವ ಬಿರುದಿಗೆ ಬದಲಾಗಿ ಪ್ರತಾಪ ಎನ್ನುವ ಪದವನ್ನು ತನ್ನ ನಾಣ್ಯಗಳ ಮೇಲೆ ಅಚ್ಚುಹಾಕಿಸಿದ. ಇವನ ನಾಣ್ಯಗಳ ಮೇಲೆ ಉಮಾಮಹೇಶ್ವರ, ಲಕ್ಷ್ಮೀನಾರಾಯಣ, ಲಕ್ಷ್ಮೀನರಸಿಂಹ, ಸರಸ್ವತಿ, ಬ್ರಹ್ಮ ಮತ್ತು ನಂದಿಯ ಚಿತ್ರಗಳಿರುತ್ತವೆ. ತಾಂತ್ರಿಕ ದೃಷ್ಟಿಯಿಂದಲೂ ಇಮ್ಮಡಿ ಹರಿಹರನ ನಾಣ್ಯಗಳು ಬಹಳ ಉತ್ತಮವಾದವು. ಇವನ ಅನಂತರ ಬಂದ ಅನೇಕ ರಾಜರು ಇವನ ನಾಣ್ಯಗಳನ್ನೇ ವಿಶೇಷವಾಗಿ ಅನುಕರಿಸಿದರು. ಇವನ ಒಂದೆರಡು ಮುಖ್ಯ ನಮೂನೆಗಳನ್ನು ಗಮನಿಸಬಹುದು. ಮುಮ್ಮುಖದಲ್ಲಿ ಶಿವನೊಡನೆ ಕುಳಿತಿರುವ ಪಾರ್ವತಿ, ಇಬ್ಬರೂ ಕಿರೀಟಧಾರಿಗಳಾಗಿದ್ದಾರೆ; ಶಿವನು ಡಮರು ಮತ್ತು ತ್ರಿಶೂಲಧಾರಿಯಾಗಿದ್ದಾನೆ; ಶಿವನ ತಲೆಯ ಮೇಲೆ ಸೂರ್ಯ ಮತ್ತು ಚಂದ್ರರು ಇದ್ದಾರೆ. ಹಿಮ್ಮುಖದಲ್ಲಿ ಶ್ರೀ ಪ್ರತಾಪ ಹರಿಹರ ಎಂಬ ಮೂರು ಸಾಲುಗಳ ನಾಗರೀ ಬರೆವಣಿಗೆ ಇದೆ. ಮತ್ತೊಂದು ಚಿನ್ನದ ನಾಣ್ಯದಲ್ಲಿ ಮುಮ್ಮುಖದಲ್ಲಿ ಪದ್ಮಾಸನದಲ್ಲಿರುವ ಬ್ರಹ್ಮ ಮತ್ತು ಸರಸ್ವತಿ; ಬ್ರಹ್ಮನ ಒಂದು ಕೈ ಅಭಯ ಮುದ್ರೆಯಲ್ಲಿಯೂ ಇತರ ಕೈಗಳಲ್ಲಿ ಪುಸ್ತಕ ಇತ್ಯಾದಿಗಳಿವೆ. ಸರಸ್ವತಿ ವೀಣೆಯನ್ನು ಹಿಡಿದಿದ್ದಾಳೆ. ಹಿಮ್ಮುಖದಲ್ಲಿ ನಾಗರೀಲಿಪಿಯ ಶ್ರೀ ಪ್ರತಾಪ ಹರಿಹರ ಎಂಬ ಬರೆಹ ಇದೆ. ಇನ್ನೊಂದರಲ್ಲಿ ಲಕ್ಷ್ಮೀ ಮತ್ತು ನಾರಾಯಣ ಕುಳಿತಿದ್ದಾರೆ. ನಾರಾಯಣನ ಕೈಗಳಲ್ಲಿ ಶಂಖ ಮತ್ತು ಚಕ್ರಗಳಿವೆ. ಮತ್ತೊಂದು ಕೈಯಲ್ಲಿ ಲಕ್ಷ್ಮಿಯನ್ನು ಬಳಸಿದ್ದಾನೆ. ಇನ್ನೊಂದು ಕೈ ಅಭಯ ಮುದ್ರೆಯಲ್ಲಿದೆ. ಇವನ ತಾಮ್ರದ ನಾಣ್ಯದ ಮುಮ್ಮುಖದಲ್ಲಿ ಚುಕ್ಕೆಗಳಿಂದ ಮಾಡಿದ ವೃತ್ತಾಕಾರದಲ್ಲಿ ಎಡಕ್ಕೆ ಹೋಗುತ್ತಿರುವ, ಘಂಟೆಗಳಿಂದ ಅಲಂಕೃತವಾದ ನಂದಿಯ ಚಿತ್ರ; ಅದರ ಮುಂದೆ ಖಡ್ಗ; ಮೇಲೆ ಚಂದ್ರ ಇವೆ. ಹಿಮ್ಮುಖದಲ್ಲಿ ಪ್ರತಾಪ ಹರಿಹರ ಎಂಬ ಎರಡು ಸಾಲುಗಳ ನಾಗರೀ ಬರೆವಣಿಗೆಯಿದೆ.

ಎರಡನೆಯ ಬುಕ್ಕನ ತಾಮ್ರನಾಣ್ಯ ನಂದಿ ನಮೂನೆಗೆ ಸೇರಿದ್ದು, ಇಮ್ಮಡಿ ಹರಿಹರನ ನಾಣ್ಯದಂತೆಯೇ ಇದೆ. ಮೊದಲನೆಯ ಮತ್ತು ಎರಡನೆಯ ದೇವರಾಯರ ನಾಣ್ಯಗಳನ್ನು ಬೇರ್ಪಡಿಸುವುದು ಕಷ್ಟ. ಎರಡನೆಯ ದೇವರಾಯ ವೀರಶೈವಧರ್ಮಕ್ಕೆ ಪ್ರೋತ್ಸಾಹ ಕೊಟ್ಟನೆಂತಲೂ ಮತ್ತು ಅವನು ಆನೆಗಳ ಬೇಟೆಯಲ್ಲಿ ವಿಶೇಷ ಆಸಕ್ತಿವಹಿಸಿದ್ದನೆಂದೂ ಊಹಿಸಿ ಶೈವಧರ್ಮಕ್ಕೆ ಸಂಬಂಧಪಟ್ಟ ಆನೆಯ ಚಿತ್ರವನ್ನು ಹೊಂದಿರುವ ನಾಣ್ಯಗಳು ಎರಡನೆಯ ದೇವರಾಯನಿಗೆ ಸೇರಿದ್ದೆಂದು ವಿದ್ವಾಂಸರ ಭಾವನೆ. ಮೊದಲನೆಯ ದೇವರಾಯನ ಐದು ವಿಧವಾದ ಚಿನ್ನದ ನಾಣ್ಯಗಳು ಬೆಳಕಿಗೆ ಬಂದಿವೆ. ಇವುಗಳ ಮುಮ್ಮುಖದಲ್ಲಿ ಲಕ್ಷ್ಮೀನಾರಾ ಯಣ, ಉಮಾಮಹೇಶ್ವರ ದೇವತೆಗಳೂ ಹಿಮ್ಮುಖದಲ್ಲಿ ಶ್ರೀಪ್ರತಾಪದೇ ವರಾಯ ಎಂಬ ನಾಗರೀ ಬರೆಹವೂ ಕಾಣಬರುತ್ತದೆ. ಇವನ ತಾಮ್ರದ ನಾಣ್ಯಗಳ ಮೇಲೆ ನಂದಿಯ ಚಿತ್ರ ಮತ್ತು ಹಿಮ್ಮುಖದಲ್ಲಿ ಶ್ರೀ ದೇವರಾಯ ಎಂಬ ಕನ್ನಡ ಅಥವಾ ನಾಗರೀ ಬರೆಹವಿದೆ.

ಕೆಲವು ನಾಣ್ಯಗಳ ಹಿಮ್ಮುಖದಲ್ಲಿ ರಾಯ ಗಜಗಂಡಭೇರುಂಡ, ಶ್ರೀದೇವರಾಯ, ಗಜವೇಂಟೆಕಾರ ಎಂಬ ಬರೆವಣಿಗೆಯಿದೆ. ಎರಡನೆಯ ವಿಜಯರಾಯನ ನಾಣ್ಯಗಳಲ್ಲಿ ಮುಮ್ಮುಖದಲ್ಲಿ ಆನೆ, ಹಿಮ್ಮುಖದಲ್ಲಿ ವಿಜಯರಾಯ ಎಂಬ ಕನ್ನಡ ಬರೆಹವಿದೆ. ಮಲ್ಲಿಕಾರ್ಜುನನ ತಾಮ್ರದ ನಾಣ್ಯದ ಮೇಲೂ ಆನೆ ಮತ್ತು ಮಲ್ಲಿಕಾರ್ಜುನರಾಯರು ಎಂಬ ಕನ್ನಡ ಬರೆಹವಿದೆ.

ಕೃಷ್ಣದೇವರಾಯ ಹಳೆಯ ನಾಣ್ಯ ನಮೂನೆಗಳನ್ನು ಮುಂದುವರಿಸಿ ದುದಲ್ಲದೆ ಹೊಸ ನಮೂನೆಗಳನ್ನು ಬಳಕೆಗೆ ತಂದ. ಸುಮಾರು 117 ಗ್ರೇನ್ ತೂಕದ ಚಿನ್ನದ ನಾಣ್ಯಗಳು ಗಮನಾರ್ಹವಾದವು. ಈ ನಾಣ್ಯಗಳ ಮೇಲೆ ಅಲಂಕೃತನಾದ ತಿರುಪತಿ ವೆಂಕಟೇಶ್ವರನ ಚಿತ್ರವಿದೆ. ಈ ನಾಣ್ಯಗಳನ್ನು ಕೃಷ್ಣದೇವರಾಯ ತನ್ನ ಒರಿಸ್ಸ ವಿಜಯದ ಜ್ಞಾಪಕಾರ್ಥ ವಾಗಿ, ತಿರುಪತಿಯ ವೆಂಕಟೇಶ್ವರನಿಗೆ ಕನಕಾಭಿಷೇಕ ಮಾಡಿಸಿದ ಸಮಯದಲ್ಲಿ ಅಚ್ಚು ಹಾಕಿಸಿರಬಹುದೆಂದು ಊಹೆ. ಇವನ ವರಹ ಮೌಲ್ಯದ ಚಿನ್ನದ ನಾಣ್ಯಗಳ ಮೇಲೆ ಬಾಲಕೃಷ್ಣನ ಚಿತ್ರವಿದೆ.

ಹಿಮ್ಮುಖದಲ್ಲಿ ಶ್ರೀ ಪ್ರತಾಪ ಕೃಷ್ಣರಾಯ ಎಂಬ ಮೂರು ಸಾಲುಗಳ ಬರೆಹವಿದೆ. ಇವನ ಉಮಾಮಹೇಶ್ವರ ನಮೂನೆಯ ನಾಣ್ಯಗಳು ಹಿಂದಿನ ನಾಣ್ಯಗಳಂತೆಯೇ ಇವೆ. ಇವನ ತಾಮ್ರದ ನಾಣ್ಯಗಳಲ್ಲಿ ಗರುಡ ಮತ್ತು ನಂದಿ ನಮೂನೆಗಳು ಮುಖ್ಯವಾದುವು. ಇವು 247 ಗ್ರೇನ್‍ನಿಂದ 15 ಗ್ರೇನ್ ತೂಕದವರೆಗೂ ದೊರೆಯುತ್ತವೆ.

ಅಚ್ಯುತರಾಯನ ನಾಣ್ಯಗಳಲ್ಲಿ ಮುಖ್ಯವಾದುದು ಗಂಡಭೇರುಂಡ ನಮೂನೆಯ ಚಿನ್ನದ ನಾಣ್ಯ. ಇದರ ಮುಮ್ಮುಖದಲ್ಲಿ ಹಾರುತ್ತಿರುವ ಅಲಂಕೃತ ಗಂಡಭೇರುಂಡ; ಅದರ ಎರಡು ಕೊಕ್ಕುಗಳಲ್ಲಿ ಆನೆಯನ್ನು ಹಿಡಿದಿರುವ ಚಿತ್ರವಿದೆ. ಹಿಮ್ಮುಖದಲ್ಲಿ ಶ್ರೀ ಪ್ರತಾಪಾಚ್ಯುತರಾಯ ಎಂಬ ಬರೆಹವಿದೆ. ಸದಾಶಿವರಾಯನ ನಾಣ್ಯಗಳಲ್ಲಿ ಲಕ್ಷ್ಮೀನಾರಾಯಣ, ಉಮಾಮಹೇಶ್ವರ ಮತ್ತು ಗರುಡ ನಮೂನೆ ಮುಖ್ಯವಾದವು. ಇವುಗಳು ಹಿಂದಿನ ನಾಣ್ಯಗಳಂತೆಯೇ ಇವೆ. ಒಂದನೆಯ ತಿರುಮಲರಾಯನು ರಾಮ, ಲಕ್ಷ್ಮಣ ಮತ್ತು ಸೀತೆ ಇರುವ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದ. ಇವುಗಳ ಹಿಂಭಾಗದಲ್ಲಿ ತಿರುಮಲರಾಯಲು ಎಂಬ ಬರೆಹವಿದೆ. ಇವೇ ರಾಮಟಂಕಿ ನಾಣ್ಯಗಳಿಗೆ ನಾಂದಿಯಾದವು. ಇವನ ತಾಮ್ರದ ನಾಣ್ಯಗಳಲ್ಲಿ ಗರುಡನ ಚಿತ್ರವಿದೆ. ರಾಮರಾಯ ವೆಂಕಟಾದ್ರಿ ಎಂಬ ಬರೆಹವುಳ್ಳ ತಾಮ್ರದ ನಾಣ್ಯಗಳು ವೆಂಕಟಾದ್ರಿಯದೆಂದು ಹೇಳಬಹುದು.

ಇಮ್ಮಡಿ ಶ್ರೀರಂಗರಾಯ ವೆಂಕಟೇಶ್ವರ ನಮೂನೆಯ ನಾಣ್ಯಗಳನ್ನು ಮತ್ತೆ ಬಳಕೆಗೆ ತಂದ. ಇಮ್ಮಡಿ ವೆಂಕಟಪತಿರಾಯ ಇದೇ ನಮೂನೆಯ ನಾಣ್ಯಗಳನ್ನು ಮುಂದುವರಿಸಿದ. ಇವನ ತಾಮ್ರದ ನಾಣ್ಯಗಳಲ್ಲಿ ಗರುಡ ಮತ್ತು ಹನುಮಂತನ ಚಿತ್ರ; ಹಿಮ್ಮುಖದಲ್ಲಿ ಶ್ರೀವೆಂಕಟರಾಯ ಎಂಬ ನಾಗರೀ ಬರೆಹವಿದೆ. ನಾಲ್ಕನೆಯ ಶ್ರೀರಂಗರಾಯ ವೆಂಕಟೇಶ್ವರ ನಮೂನೆಯ ನಾಣ್ಯಗಳನ್ನು ಮುಂದುವರಿಸಿದ. ಇವುಗಳ ಮುಮ್ಮಖದಲ್ಲಿ ವೆಂಕಟೇಶ್ವರನ ಚಿತ್ರ; ಹಿಮ್ಮುಖದಲ್ಲಿ ಶ್ರೀವೆಂಕಟೇಶ್ವರಾಯ ನಮಃ ಎಂಬ ನಾಗರೀ ಬರೆಹವಿದೆ. (ಎ.ವಿ.ಎನ್.)

  *