ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಮೆ

ವಿಕಿಸೋರ್ಸ್ದಿಂದ

ವಿಮೆ ಜೀವ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ, ಆರ್ಥಿಕ ಆಘಾತಗಳಿಗೆ ಸಂರಕ್ಷಣೆಯನ್ನು ಒದಗಿಸುವ ವ್ಯವಹಾರ (ಇನ್ಶೂರನ್ಸ್). ವಿಮೆಯ ವ್ಯವಹಾರ ಬಹು ಪ್ರಾಚೀನವಾದುದು. “ಕೋಡ್ ಆಫ್ ಹಮೂರಬಿ” ಎನ್ನುವ ಮೊದಲನೆಯ ವಿಮೆಯ ಕರಾರು ಪತ್ರ ಬ್ಯಾಬಿಲೋನಿಯನ್ನರ ಕಾಲದಲ್ಲಿ ಕ್ರಿ.ಪೂ. 2100ರಲ್ಲಿ ದಾಖಲಾಗಿದೆ. ¥sóÉೂನೀಷಿಯನ್ನರು ಹಾಗೂ ಗ್ರೀಕರು ಸಹ ಇದೇ ತರಹದ ವಿಮೆ ಕರಾರು ಪತ್ರದ ಸಹಾಯದಿಂದಲೇ ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದರು. ರೋಮನ್ನರೂ ಇದನ್ನೇ ಅನುಸರಿಸುತ್ತಾ ಬಂದರು. 1347ರಲ್ಲಿ ಜಿನೀವ ನಗರದಲ್ಲಿ ಸಹಿಯಾದ ವಿಮೆ ಕರಾರು ಪತ್ರವೇ ಲಭ್ಯವಿರುವ ಮೊದಲ ಐತಿಹಾಸಿಕ ಆಧಾರ. 1688ರಲ್ಲಿ ಮೊತ್ತಮೊದಲ ವಿಮಾ ಸಂಸ್ಥೆ ಲಂಡನ್‍ನಲ್ಲಿ ಪ್ರಾರಂಭವಾಯಿತು. ಇದು ಈಗಲೂ ಲಾಯ್ಡ್‍ಸಿ ಆಫ್ ಲಂಡನ್ ಎಂದು ಸುಪ್ರಸಿದ್ಧವಾಗಿದೆ. 1693ರಲ್ಲಿ ಎಡ್‍ಮೆಂಡ್ ಹ್ಯಾಲಿ ಎಂಬ ಖಗೋಳ ವಿಜ್ಞಾನಿ ತಯಾರಿಸಿದ, ಮಾರ್ಟಲಿಟಿ ಟೇಬಲ್, ಜೀವವಿಮಾ ಕರಾರು ಪತ್ರಗಳಿಗೆ ಮೂಲಾಧಾರವಾಯಿತು. ಇದು ಎಲ್ಲ ವಯಸ್ಸಿನವರಿಗೂ ಅನ್ವಯಿಸುತ್ತಿದ್ದ ಪಟ್ಟಿಯಾಗಿತ್ತು. ಈ ಪಟ್ಟಿಯ ಪರಿಷ್ಕರಣೆ 1756ರಲ್ಲಿ ಜೊಸೆಫ್ ಡಾಡ್‍ಸನ್‍ನಿಂದ ಆಯಿತು. 1787 ಹಾಗೂ 1794ರಲ್ಲಿ ಮೊತ್ತಮೊದಲು ಬೆಂಕಿ ವಿಮಾ ಸಂಸ್ಥೆಗಳು, ನ್ಯೂಯಾರ್ಕ್ ಹಾಗೂ ಫಿಲಡೆಲ್ಫಿಯ ನಗರಗಳಲ್ಲಿ ಪ್ರಾರಂಭಗೊಂಡವು.


  *

1840ರಲ್ಲಿ ಸ್ವಲ್ಪಮಟ್ಟಿಗೆ ಈ ತರಹದ ವಿಮಾ ಸಂಸ್ಥೆಗಳು ಕಡಮೆಯಾದರೂ ಜೀವವಿಮಾ ಸಂಸ್ಥೆಗಳು ಹುಟ್ಟಿಕೊಳ್ಳಲಾರಂಭಿಸಿದವು. 1897ರಲ್ಲಿ ಬ್ರಿಟಿಷ್ ಸರ್ಕಾರ, ತನ್ನ ಎಲ್ಲ ಕೆಲಸಗಾರರಿಗೂ ವಿಮಾ ಯೋಜನೆಯನ್ನು ಕಡ್ಡಾಯ ಮಾಡಿತು. 19ನೆಯ ಶತಮಾನದ ಅನಂತರ ವಿಮಾ ಸಂಸ್ಥೆಗಳು ಜನ ಸಾಮಾನ್ಯರ ಜೀವನ ಹಾಗೂ ಆರೋಗ್ಯದ ಮೇಲೆ ಕೇಂದ್ರೀಕೃತಗೊಂಡು ಇಂದು ಒಂದು ದೊಡ್ಡ ವ್ಯಾವಹಾರಿಕ ಉದ್ಯೋಗವಾಗಿ ಮಾರ್ಪಟ್ಟಿದೆ.

ವಿಮೆಯ ವ್ಯಾಪ್ತಿ ವಿಶಾಲವಾದುದು. ವಿಮೆ ಪಡೆದವನು, ವಿಮೆ ಮಾಡಿಸಿದವನಿಗೆ ಕೊಡುವ ನಿರ್ದಿಷ್ಟ ಹಣ ಪ್ರೀಮಿಯಮ್ ಎನಿಸು ವುದು. ವಿಮೆ ಪಡೆದವನು ತನಗಾದ ಯಾವುದೇ ತರಹದ ಹಾನಿಯನ್ನು, ಆರ್ಥಿಕ ರೂಪದಲ್ಲಿ ವಿಮೆ ಮಾಡಿಸಿದವನಿಂದ ಕೇಳಿ ಪಡೆಯಬಹುದು. ವಿಮಾ ವ್ಯವಹಾರದಲ್ಲಿ, ವಿಮೆ ಪಡೆದವನ ಹಾಗೂ ಕೊಟ್ಟವನ ನಡುವೆ ಮಧ್ಯಸ್ಥಿಕೆ ವಹಿಸುವವನಿಗೆ ವಿಮಾ ದಲ್ಲಾಳಿ (ಇನ್ಶೂರನ್ಸ್ ಬ್ರೋಕರ್ ಅಥವಾ ಏಜೆಂಟ್) ಎನ್ನುವರು. ಹಾನಿಗೊಳಗಾದ ವ್ಯಕ್ತಿಗೆ, ಹಣ ಭರಿಸಲು ಒಪ್ಪಿದ ಸಂಸ್ಥೆಗೆ ಇನ್ಶೂರರ್ ಎನ್ನುವರು. ಸಂಸ್ಥೆ ಹಣಭರಿಸಲು ಒಪ್ಪುವ ಆಪತ್ಕಾಲಿಕ ಸಂಭವಕ್ಕೆ ರಿಸ್ಕ್ ಎನ್ನುವರು. ಸಂರಕ್ಷಿತ ವ್ಯಕ್ತಿ ವಿಮೆ ಪಡೆದವ (ಇನ್ಶೂರ್ಡ್) ಎನಿಸುವನು. ಕರಾರುಗಳನ್ನು ಒಳಪಡಿಸಿದ ನಿರ್ದಿಷ್ಟ ನಮೂನೆಗೆ ಪಾಲಿಸಿ ಅಥವಾ ವಿಮಾ ಕರಾರು ಪತ್ರ ಎನ್ನುವರು. ವಿಮೆಯ ವಿಧಗಳು: (1) ಒಡೆತನ ವಿಮೆ(ಪ್ರಾಪರ್ಟಿ ಇನ್ಶೂರನ್ಸ್):ಸ್ಥಿರ ಆಸ್ತಿಗೆ ಬೆಂಕಿ, ಕಳ್ಳತನ ಅಥವಾ ನೈಸರ್ಗಿಕ ಕಾರಣಗಳಿಂದ ಒದಗುವ ಹಾನಿಗಳಿಗೆ ಸಂರಕ್ಷಣೆ ಕೊಡುವ ವಿಮೆಯೇ ಒಡೆತನ ವಿಮೆ. (2) ಆಕಸ್ಮಿಕ ವಿಮೆ(ಕ್ಯಾಸುಆಲ್ಟಿ ಇನ್ಶೂರನ್ಸ್): ಅನಿರೀಕ್ಷಿತವಾಗಿ ಒದಗುವ ಆಪತ್ತುಗಳಿಂದ ಸಂರಕ್ಷಿಸಲು ಮಾಡುವ ವಿಮೆ. ಇದು ಯಾವುದೇ ಸ್ಥಿರ ಆಸ್ತಿಗೆ ಸಂಬಂಧಿಸದೇ ಇರಬಹುದು. (3) ಹೊಣೆಗಾರಿಕೆಯ ವಿಮೆ(ಲೈಯಬಲಿಟಿ ಇನ್ಶೂರನ್ಸ್): ಕಾನೂನು ಕ್ರಮಗಳಿಂದ ಒದಗಬಹು ದಾದ ನಷ್ಟಗಳಿಂದ ತನ್ನನ್ನು ಸಂರಕ್ಷಿಸಿಕೊಳ್ಳಲು ಪಡೆಯುವ ವಿಮೆ. (4) ಆರ್ಥಿಕ ನಷ್ಟ ವಿಮೆ(ಫೈನಾನ್ಷಿಯಲ್ ಲಾಸ್ ಇನ್ಶೂರನ್ಸ್): ವ್ಯಕ್ತಿಯಾಗಲಿ ಅಥವಾ ಸಂಸ್ಥೆಯಾಗಲಿ ಹಣಕಾಸಿನ ವ್ಯವಹಾರಗಳಿಂದ ಆಗುವ ನಷ್ಟಗಳಿಂದ ಸಂರಕ್ಷಿಸಿಕೊಳ್ಳಲು ಪಡೆಯುವ ವಿಮೆ. (5) ಹಕ್ಕು ವಿಮೆ(ಟೈಟ್ಲ್ ಇನ್ಶೂರನ್ಸ್): ಸ್ಥಿರ ಆಸ್ತಿಯ ಖರೀದಿ, ಮಾರಾಟ, ಅಡಮಾನ ಇತ್ಯಾದಿ ವ್ಯವಹಾರಗಳು, ನಿರ್ದಿಷ್ಟ ಕಾನೂನಿನ ನಿಯಮಗಳಿಗೆ ಅನುಗುಣವಾಗಿ ಆಗದೇ ಸಂಭವಿಸುವ ನಷ್ಟಗಳಿಂದ ಸಂರಕ್ಷಿಸುವ ವಿಮೆ. (6) ಆರೋಗ್ಯ ವಿಮೆ(ಹೆಲ್ತ್ ಇನ್ಶೂರನ್ಸ್): ರೋಗ ರುಜಿನಾದಿಗಳಿಂದ ಸಂಭವಿಸುವ ಆರ್ಥಿಕ ನಷ್ಟಗಳ ಸಂರಕ್ಷಣೆಗಾಗಿ ಪಡೆಯುವ ವಿಮೆಗೆ ಆರೋಗ್ಯ ವಿಮೆ ಎಂದು ಹೆಸರು. ಈ ವಿಮೆ ಬಹುಮಟ್ಟಿಗೆ ಐಚ್ಛಿಕ, ಕೆಲವು ರಾಷ್ಟ್ರಗಳಲ್ಲಿ ಸರ್ಕಾರವೇ ಈ ಯೋಜನೆಯನ್ನು ಜಾರಿಗೆ ತಂದು, ಕಡ್ಡಾಯ ಮಾಡಿದೆ. (7) ಜೀವ ವಿಮೆ(ಲೈಫ್ ಇನ್ಶೂರನ್ಸ್): ವ್ಯಕ್ತಿ ಮರಣ ಹೊಂದಿದಾಗ, ಅವನ ಆದಾಯ ನಿಂತುಹೋಗಿ, ಆಗುವ ನಷ್ಟದಿಂದ ಸಂರಕ್ಷಿಸುವ ವಿಮೆ. ಈ ವಿಮೆಯಿಂದ ಬರುವ ಹಣವನ್ನು ಮರಣಹೊಂದಿದ ವ್ಯಕ್ತಿಯ ಕುಟುಂಬಕ್ಕಾಗಲಿ ಅಥವಾ ಅವನು ಹೆಸರಿಸಿದ ಇನ್ಯಾವುದೇ ವ್ಯಕ್ತಿಗಾಗಲಿ ನೀಡಬಹುದು.

ಭಾರತದಲ್ಲಿ ಜೀವವಿಮೆ ರಾಷ್ಟ್ರೀಕರಣವಾದ ಅನಂತರ, ಕೆಲವು ಖಾಸಗಿ ವಿಮಾ ಕಂಪನಿಗಳು-ವ್ಯಕ್ತಿಗೆ ಸ್ವಂತ ಅಪಘಾತ ಉಂಟಾದಲ್ಲಿ (ಪರ್ಸನಲ್ ಆಕ್ಸಿಡೆಂಟ್) ಹಾಗೂ ನಿರ್ಬಂಧರಹಿತವಾದ ರೋಗಕ್ಕೊಳಗಾ ದಲ್ಲಿ ಅನುಕೂಲಗಳನ್ನು ಕಲ್ಪಿಸಿಕೊಡುವ ಯೋಜನೆಗಳನ್ನು (ಆಪ್ಶನಲ್ ಬೆನಿಫಿಟ್ ಸ್ಕೀಮ್) ರೂಪಿಸಿವೆ. (8) ವರ್ಷಾಸನ ವಿಮೆ (ಆನ್ಯುಟೀಸ್): ವ್ಯಕ್ತಿ ತನ್ನ ಆದಾಯದ ಕಾಲ ಪರಿಮಿತಿಗಿಂತ ಹೆಚ್ಚು ಬಾಳಿದಾಗ, ನಿಯತಕಾಲಿಕವಾಗಿ, ಅವನನ್ನು ಆರ್ಥಿಕವಾಗಿ ಸಂರಕ್ಷಿಸಿಕೊಳ್ಳಲು, ಕೊಡುವ ಹಣಕ್ಕೆ ನಿಯತಕಾಲಿಕ ವಿಮೆ ಅಥವಾ ವರ್ಷಾಸನ ವಿಮೆ ಎನ್ನುವರು. ಜೀವವಿಮೆ ಮರಣಾನಂತರ ಸಿಗುವ ಪರಿಹಾರವಾದರೆ, ವರ್ಷಾಸನ ವಿಮೆ ಜೀವಿಸಿರುವಾಗಲೇ ಸಿಗಬಹುದಾದಂಥ ಹಣವಾಗಿದೆ. (9) ಸಾಲ ವಿಮೆ (ಕ್ರೆಡಿಟ್ ಇನ್ಶೂರನ್ಸ್): ನಿರುದ್ಯೋಗ, ಅಂಗವಿಕಲತೆ ಅಥವಾ ಸಾವು ಪರಿಣಮಿಸಿದಾಗ ಆ ವ್ಯಕ್ತಿ ತೆಗೆದುಕೊಂಡ ಸಾಲದ ಹೊರೆಯನ್ನು ಭರಿಸುವ ವಿಮೆ. (10) ಭಯೋತ್ಪಾದನಾ ಪರಿಹಾರ ವಿಮೆ (ಟೆರರಿಸಮ್ ಇನ್ಶೂರನ್ಸ್): ಭಯೋತ್ಪಾದಕ ಚಟುವಟಿಕೆಗಳಿಂದ ಸ್ಥಿರ ಆಸ್ತಿಗಾಗಲೀ ಅಥವಾ ವ್ಯಕ್ತಿಗಾಗಲಿ ಆಗುವ ನಷ್ಟಗಳನ್ನು ಭರಿಸುವ ವಿಮೆ. (11) ರಾಜಕೀಯ ನಷ್ಟ ಸಂಭವ ವಿಮೆ (ಪೊಲಿಟಿಕಲ್ ರಿಸ್ಕ್ ಇನ್ಶೂರನ್ಸ್): ರಾಜಕೀಯ ಚಟುವಟಿಕೆಗಳಿಂದಾಗಿ ಸಾರ್ವಜನಿಕ ಆಸ್ತಿಗಾಗಲಿ ಅಥವಾ ವ್ಯಕ್ತಿಗಾಗಲಿ ಆಗುವ ನಷ್ಟವನ್ನು ಭರಿಸುವ ವಿಮೆ. (12) ಸಾಮೂಹಿಕ ವಿಮೆ(ಗ್ರೂಪ್ ಇನ್ಶೂರನ್ಸ್): ಅಧಿಕ ಸಂಖ್ಯೆಯ ವ್ಯಕ್ತಿಗಳಿಗೆ, ಅವರ ಒಡೆಯರಾಗಲಿ ಅಥವಾ ಅವರು ಕೆಲಸ ಮಾಡುವ ಸಂಘ ಸಂಸ್ಥೆಗಳಾಗಲಿ, ಕೆಲಸಗಾರರನ್ನು ಆಕಸ್ಮಿಕ ದುರ್ಘಟನೆಗಳಿಂದ ಸಂರಕ್ಷಿಸಲು ಮಾಡಿಸುವ ವಿಮೆ.

ಕೈಗಾರಿಕೆಗಳ ಬೃಹತ್ ಬೆಳೆವಣಿಗೆ ಹಾಗೂ ಬದಲಾಗುತ್ತಿರುವ ನಗರೀಕರಣಗಳಿಂದಾಗಿ ಸಾಮೂಹಿಕ ವಿಮೆ ಅಸ್ತಿತ್ವಕ್ಕೆ ಬಂದಿದೆ. (13) ವಿಮಾನಯಾನ ವಿಮೆ (ಏವಿಯೇಷನ್ ಇನ್ಶೂರನ್ಸ್): ವಿಮಾನಯಾನದಲ್ಲಿ ಮನುಷ್ಯನಿಗೆ ಮತ್ತು ಸ್ವತ್ತುಗಳಿಗೆ ಉಂಟಾಗುವ ಆಕಸ್ಮಿಕ ನಷ್ಟಗಳನ್ನು ಪರಿಹರಿಸಲು, ವಿಮಾನಯಾನ ವಿಮೆ ರೂಪುಗೊಂಡಿದೆ. 1931ರಲ್ಲಿ ಮೊತ್ತಮೊದಲು ಬ್ರಿಟಿಷ್ ವಿಮಾನಯಾನ ವಿಮಾ ಸಂಸ್ಥೆಯೊಂದು ಸ್ಥಾಪಿತವಾಯಿತು. (14) ವ್ಯವಸಾಯ ವಿಮೆ(ಅಗ್ರಿಕಲ್ಚರಲ್ ಇನ್ಶೂರನ್ಸ್): ಮಳೆಯ ಅನಿಶ್ಚಿತತೆಯಿಂದ ವ್ಯವಸಾಯದಲ್ಲಿ ಉಂಟಾಗುವ ನಷ್ಟಗಳನ್ನು ಭರಿಸಲು, ಈ ವಿಮೆ ಅನುಕೂಲಕರವಾಗಿದೆ. (15) ಬ್ಯಾಂಕು ದಿವಾಳಿ ವಿಮೆ(ಬ್ಯಾಂಕ್ ಫೇಲ್ಯೂರ್ ಇನ್ಶೂರನ್ಸ್): ಬ್ಯಾಂಕುಗಳು ದಿವಾಳಿಯಾಗುವುದರಿಂದ ಉಂಟಾಗುವ ನಷ್ಟ ಪರಿಹಾರಕ್ಕಾಗಿ ಇರುವ ವಿಮೆ. ಈ ವಿಧವಾದ ವಿಮೆಯನ್ನು ಭಾರತದಲ್ಲಿ 1961ರಿಂದ ಕಡ್ಡಾಯವಾಗಿ ಜಾರಿಗೆ ತರಲಾಗಿದೆ. (16) ಚಲನಚಿತ್ರ ವಿಮೆ (ಫಿಲ್ಮ್ ಇನ್ಶೂರನ್ಸ್): ಚಲನಚಿತ್ರಗಳ ತಯಾರಿಕೆಯಲ್ಲಿ ಸ್ವತ್ತುಗಳಿಗೆ, ನಟ ನಟಿಯರ ಅಂಗಾಂಗಗಳಿಗೆ, ಆಕಸ್ಮಿಕಗಳಿಂದ ಉಂಟಾಗುವ ನಷ್ಟ ಪರಿಹಾರಕ್ಕಾಗಿ ಈ ವಿಧವಾದ ವಿಮೆ ಸಹಕಾರಿಯಾಗಿದೆ. (17) ನಿರುದ್ಯೋಗ ವಿಮೆ(ಅನ್ ಎಂಪ್ಲಾಯ್‍ಮೆಂಟ್ ಇನ್ಶೂರನ್ಸ್): ವ್ಯಕ್ತಿ ನಿರುದ್ಯೋಗಿಯಾಗಿರುವ ಕಾಲದಲ್ಲಿ, ಜೀವನದ ನಿರ್ವಹಣೆಗಾಗಿ ಪರಿಹಾರ ಕೊಡುವುದಕ್ಕೆ ನಿರುದ್ಯೋಗ ವಿಮೆ ಎನ್ನಲಾಗುವುದು. (18) ಕೆಲಸಗಾರರ ರಾಜ್ಯ ವಿಮಾ ಯೋಜನೆ (ಸ್ಟೇಟ್ ಎಂಪ್ಲಾಯೀಸ್ ಇನ್ಶೂರನ್ಸ್): ಭಾರತದಲ್ಲಿ ಕೆಲಸಗಾರರ ರಾಜ್ಯ ವಿಮಾಯೋಜನೆ ಮಸೂದೆ 1948ರಲ್ಲಿ ಅಂಗೀಕೃತವಾಯಿತು. 1952 ಫೆಬ್ರವರಿಯಿಂದ ಇದನ್ನು ದೇಶದ ನಾನಾ ಕೈಗಾರಿಕಾ ಕ್ಷೇತ್ರಗಳಲ್ಲಿ ಜಾರಿಗೆ ತರಲಾಯಿತು. ಕೆಲಸಗಾರರ ರಾಜ್ಯ ವಿಮಾ ಯೋಜನೆಯು 20 ಅಥವಾ ಹೆಚ್ಚು ಜನರು ಕೆಲಸ ಮಾಡುವ ಎಲ್ಲಾ ಕೈಗಾರಿಕಾ ಕಾರ್ಖಾನೆಗಳಿಗೂ ಅನ್ವಯಿಸುವುದು.

ವಿವಿಧ ಬಗೆಯ ವಿಮಾ ಸಂಸ್ಥೆಗಳು: (1) ಜೀವ ವಿಮಾ ಸಂಸ್ಥೆ (ಲೈಫ್ ಇನ್ಶೂರನ್ಸ್ ಕಂಪನಿ): ಈ ಸಂಸ್ಥೆಗಳು, ವ್ಯಕ್ತಿಗಳ ಜೀವನದಲ್ಲಿ ಸಂಭವಿಸ ಬಹುದಾದಂಥ ಆಕಸ್ಮಿಕಗಳನ್ನು ಪರಿಗಣಿಸಿ, ದೀರ್ಘಕಾಲಿಕ ವಿಮೆಗಳನ್ನು ನಿಯೋಜಿಸುತ್ತವೆ. (2) ಸಾಮಾನ್ಯ ವಿಮಾ ಸಂಸ್ಥೆ (ಜನರಲ್ ಇನ್ಶೂರನ್ಸ್ ಕಂಪನಿ): ಇವು ಸ್ವತ್ತುಗಳಿಗೆ ಸಂಬಂಧಪಟ್ಟ, ಅಲ್ಪ ಕಾಲಿಕ ವಿಮೆಯನ್ನು ನಿಯೋಜಿಸುವುವು. (3) ಸಂಘಟಿತ ವಿಮಾ ಸಂಸ್ಥೆ (ಕಾಂಪೊಸಿಟ್ ಇನ್ಶೂರನ್ಸ್ ಕಂಪನಿ): ಜೀವ ಮತ್ತು ಸಾಮಾನ್ಯ-ಈ ಎರಡೂ ಬಗೆಯ ವಿಮೆಗಳನ್ನು ನಿಯೋಜಿಸುವ ಸಂಸ್ಥೆ. (4) ಪುನರ್ ವಿಮಾ ಸಂಸ್ಥೆ (ರೀ-ಇನ್ಶೂರನ್ಸ್ ಕಂಪನಿ): ವಿಮಾ ಸಂಸ್ಥೆಗಳಿಗೆ ವಿಮೆಯನ್ನು ನಿಯೋಜಿಸುವ ಸಂಸ್ಥೆ.

ಜೀವ ವಿಮೆ ಮತ್ತು ಉಳಿತಾಯ: ವ್ಯಕ್ತಿಯ ಜೀವಿತಾವಧಿಯ ಅನಂತರ ಸಿಗುವ ಪರಿಹಾರ ವಿಮೆ ಒಂದಾದರೆ, ಜೀವಿತದಲ್ಲಿಯೇ ಕೆಲವು ವರ್ಷಗಳ ಅನಂತರ ಸಿಗುವ ವಿಮೆಯ ಹಣ ಇನ್ನೊಂದು (ಇದಕ್ಕೆ ಎಂಡೋಮೆಂಟ್ ಪಾಲಿಸಿ ಎಂದು ಕರೆಯುವರು). ಕೆಲವು ವೇಳೆ ವಿಮೆ ರದ್ದು ಪಡಿಸಿ ಕೊಂಡಾಗಲೂ ಕಟ್ಟಿದ ವಿಮಾ ಹಣ ಮರಳಿ ಸಿಗುವ ಸಂಭವವುಂಟು.

ವಿಮೆಗಳನ್ನು ತೆಗೆದುಕೊಂಡ ಹಣದ ಮೇಲೆ ಕಂದಾಯ ಅಥವಾ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ. ಇದು ಆಕಸ್ಮಿಕಗಳಿಂದಾಗುವ ಘಟನೆ ಗಳಿಗೂ ತಕ್ಷಣ ಪರಿಹಾರಕ್ಕೆ ಅನುಕೂಲಕರ. ಆದ್ದರಿಂದ ಜನಸಾಮಾನ್ಯರು ಹಣವನ್ನು ಜೀವವಿಮಾ ಸಂಸ್ಥೆಗಳಲ್ಲಿ ತೊಡಗಿಸುವುದರ ಮೂಲಕ ಉಳಿತಾಯ ಹಾಗೂ ಲಾಭಗಳಿಗೆ ಪಾತ್ರರಾಗುತ್ತಾರೆ.

ಭಾರತ ಸರ್ಕಾರ ವಿಮಾ ಕಂಪನಿ ಮತ್ತು ಪಾಲಿಸಿದಾರರ ಕ್ಷೇಮಕ್ಕಾಗಿ ಇನ್ಶೂರನ್ಸ್ ರೆಗ್ಯುಲೇಟಿಂಗ್ ಅಂಡ್ ಡೆವಲಪ್‍ಮೆಂಟ್ ಅಥಾರಿಟಿ (ಐಆರ್‍ಡಿಎ) ಸ್ಥಾಪಿಸಿದೆ (2004). (ಎಮ್.ಆರ್.ಎಮ್.)

  *