ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೃತ್ತಿಗಾಯಕರು

ವಿಕಿಸೋರ್ಸ್ದಿಂದ

ವೃತ್ತಿಗಾಯಕರು ಹಾಡುವುದನ್ನೇ ಪ್ರಧಾನ ವೃತ್ತಿಯಾಗಿಸಿಕೊಂಡ ಜನಪದ ಕಲಾವಿದರು. ಇವರನ್ನು ಪ್ರಪಂಚಾದ್ಯಂತ ಗುರುತಿಸಬಹುದು. ರಷ್ಯದಲ್ಲಿ ಇವರನ್ನು ಸ್ಕೊಮರಾಕ್ಸಿ ಎನ್ನುತ್ತಾರೆ. ತಂತಿವಾದ್ಯದೊಂದಿಗೆ ಹಾಡುವ ಇವರು ಉಕ್ರೇನ್, ಬಾಲ್ಕನ್, ಸ್ಲಾವಿಕ್ ಪ್ರದೇಶಗಳಲ್ಲಿ ಕಂಡುಬರುತ್ತಾರೆ. ಸ್ಪೇನ್‍ನಲ್ಲಿ ಕಾಂಟಡೋರ್ಸ್‍ರು ಗಿಟಾರ್ ನುಡಿಗೆ ಲಾವಣಿ ಹಾಡುತ್ತಾರೆ. ಯುರೋಪಿನ ವೃತ್ತಿಗಾಯಕರ ಬಗ್ಗೆ ಥಾಮಸ್ ಪೆರ್ಸಿ, ವಾಲ್ಟರ್ ಸ್ಕಾಟ್ ಮೊದಲಾದವರು ವಿಶೇಷ ಸಂಗ್ರಹಮಾಡಿದ್ದಾರೆ. ಇಂಗ್ಲೆಂಡಿನ ದೊರೆ ಆಲ್ಪ್ರೆಡ್ ಸೇನಾ ಶಿಬಿರದಲ್ಲಿ ಉತ್ಸಾಹ ಮೂಡಿಸಲು ವೃತ್ತಿಗಾಯಕರನ್ನು ಬಳಸಿಕೊಂಡ ಬಗ್ಗೆ, 1575ರಲ್ಲಿ ಎಲಿಜಬೆತ್ ರಾಣಿಯ ಸತ್ಕಾರ ಕೂಟದಲ್ಲಿ ವೃತ್ತಿ ಗಾಯಕನೊಬ್ಬ ಹಾಡಿದ ಬಗ್ಗೆ ದಾಖಲೆಗಳಿವೆ. ಹದಿನಾರನೆಯ ಶತಮಾನಾಂತ್ಯದಲ್ಲಿ ಇಂಗ್ಲೆಂಡಿನಲ್ಲಿ ವೃತ್ತಿಗಾಯಕರನ್ನು ಭಿಕ್ಷುಕರು, ಭಿಕಾರಿಗಳೆಂದು ದಂಡನೆಗೊಳಪಡಿಸಲಾಯಿತು. ನೀಗ್ರೋ ವೃತ್ತಿಗಾಯಕರ ವೇಷದಲ್ಲಿ ಯುರೋಪ್ ಚಕ್ರವರ್ತಿಗಳು ಗೂಢಚರ್ಯೆಯನ್ನೂ ನಡೆಸುತ್ತಿದ್ದರು.

ವೃತ್ತಿಗಾಯಕ ಪರಂಪರೆ ಅತ್ಯಂತ ಪ್ರಾಚೀನವಾದುದು. ಹೋಮರ್ ಕಾಲದಲ್ಲಿಯೂ ಬಾಡ್ರ್ಸ್ (ಚಾರಣರು) ಸಂಗೀತಗಾರರಿದ್ದು. ಹೋಮರ್ ಕೂಡ ಇಂಥದ್ದೇ ಪರಂಪರೆಗೆ ಸೇರಿದವನೆಂಬ ವಾದವಿದೆ.

ಭಾರತದಲ್ಲಿ ಇವರ ಪರಂಪರೆ ಶ್ರೀಮಂತವಾಗಿದೆ. ರಾಜಸ್ತಾನದಲ್ಲಿ ಭೋಪಗಾಯಕರು ಕಿನ್ನರಿ ವಾದ್ಯದೊಂದಿಗೆ ಹಾಡು ಹೇಳುತ್ತಾರೆ. ಪಂಜಾಬಿನಲ್ಲಿ ಭಟ್ಟರು, ಧಾದಿಗಳು ಪ್ರಮುಖ ವೃತ್ತಿಗಾಯಕರು. ಅಲ್ಗೊಸ, ಏಕತಾರಿ, ಧಾದ್ ಸಾರಂಗಿ ಅವರ ವಾದ್ಯಗಳು. ಒರಿಸ್ಸದಲ್ಲಿ ಯೋಗಿ, ಬಂಗಾಲದಲ್ಲಿ ಕಥಕರು, ವಾಚಕರು, ಬಾಲುಬ್, ಕಟಿವಾಲರು ಮುಖ್ಯ ಗಾಯಕರು. ಧೋಲ್ ಮತ್ತು ಈಸ್ಸಿ ಕಟಿವಾಲರ ವಾದ್ಯಗಳಾಗಿವೆ. ಅಸ್ಸಾಮಿನ ಬರ್ಗಿಗಳು ಮರದ ತಂತೀವಾದ್ಯವನ್ನು ಗಾಯನಕ್ಕೆ ಬಳಸುತ್ತಾರೆ. ಹೆಳವ, ತಂಬೂರಿ, ದೊಂಬಿದಾಸ, ಚೌಡಿಕೆಯವರು, ಜಂಗಮರು ಆಂಧ್ರದ ಪ್ರಮುಖಗಾಯಕರು. ಕೇರಳ ಮತ್ತು ತಮಿಳುನಾಡಿನಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. *

ಇಂಥ ಕಥೋಪಜೀವಿಗಳ ಹಲವು ಗುಂಪುಗಳನ್ನು ಕರ್ನಾಟಕದಲ್ಲಿ ಗುರುತಿಸಲಾಗಿದೆ. ಇವರಲ್ಲಿ ಪ್ರಮುಖವಾಗಿ ಧಾರ್ಮಿಕ ಕಥೋಪಜೀವಿಗಳು ಹಾಗೂ ಲೌಕಿಕ ಕಥೋಪಜೀವಿಗಳು ಎಂಬ ಎರಡು ಪಂಗಡಗಳನ್ನು ಕಾಣಬಹುದು. ಯಾವುದೋ ಒಂದು ದೈವದ ಆರಾಧಕ ರಾಗಿ, ಅದಕ್ಕೇ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡು ಆ ದೇವರ ಮಹಿಮಾತಿಶ ಯಗಳನ್ನು ಬಣ್ಣಿಸುತ್ತ, ಭಕ್ತರಲ್ಲಿ ಭಕ್ತಿಭಾವದ ಹಸಿವನ್ನು ತುಂಬುವ ಶ್ರೇಷ್ಠವೃತ್ತಿಯನ್ನು ಕೈಗೊಂಡವರು ಧಾರ್ಮಿಕ ಕಥೋಪಜೀವಿಗಳು. ನೀಲಗಾರರು, ದೇವರಗುಡ್ಡರು, ಚೌಡಿಕೆಯವರು, ಗೊಂದಲಿಗರು, ಜೋಗಿಯರು, ಗೊರವರು ಹಾಗೂ ಜುಂಜಪ್ಪನ ಸಂಪ್ರದಾಯದವರು ಈ ವರ್ಗಕ್ಕೆ ಸೇರುತ್ತಾರೆ.

ಯಾವ ಒಂದು ಧಾರ್ಮಿಕ ಚೌಕಟ್ಟಿಗೂ ಒಳಪಟ್ಟವರಾಗಿರದೆ ಕೇವಲ ಸಾಹಿತ್ಯವನ್ನಷ್ಟೇ ಅವಲಂಬಿಸಿ ಅದರ ನೆರವಿನಿಂದ ತಮ್ಮ ಬದುಕನ್ನು ನಡೆಸುವ ಮಾರ್ಗವನ್ನು ಕಂಡುಕೊಂಡವರು ಲೌಕಿಕ ಕಥೋಪಜೀವಿಗಳು. ಹೆಳವರು, ಕರಪಾಲದವರು, ದೊಂಬಿದಾಸರು, ತಂಬೂರಿಯವರು ಹಾಗೂ ತೆಲುಗು ಜಂಗಮರು ಮತ್ತು ತೆಲುಗು ಬಣಜಿಗರು ಈ ವರ್ಗಕ್ಕೆ ಸೇರುತ್ತಾರೆ. ವೃತ್ತಿಗಾಯಕರನ್ನು ಹೀಗೆ ಸ್ಥೂಲವಾಗಿ ವಿಂಗಡಿಸಬಹುದಾ ದರೂ ಇದೊಂದು ಲಕ್ಷ್ಮಣಗೆರೆಯೇನೂ ಅಲ್ಲ. ಧಾರ್ಮಿಕ ಕಥೋಪಜೀ ವಿಗಳೂ ಕೆಲವೊಮ್ಮೆ ಲೌಕಿಕ ಕಥೆಗಳನ್ನು ಕಲಿತಿದ್ದು ಜನ ಬಯಸಿದಾಗ ಹಾಡುವುದುಂಟು. ಇವರು ಬಳಸುವ ವಾದ್ಯ ವಿಶೇಷಗಳು ಹಾಗೂ ಧರಿಸುವ ವೇಷಭೂಷಣಗಳು ಆಕರ್ಷಕವಾಗಿರುತ್ತವೆ. ವೃತ್ತಿಗಾಯಕರಲ್ಲಿ ಬಹುಪಾಲು ಗಂಡಸರು. ಇವರು ಕಥೆಗಳನ್ನು ಹಾಡುತ್ತ ಜನರಿಗೆ ಮನರಂಜನೆಯನ್ನೊದಗಿಸುತ್ತ ಜೀವಿತಕ್ಕೆ ದವಸ, ಧಾನ್ಯಗಳನ್ನು, ಉಡಿಗೆತೊಡಿಗೆಗಳನ್ನು ಉಡುಗೊರೆಯಾಗಿ ಪಡೆಯುತ್ತ ಊರಿಂದೂರಿಗೆ ಸಂಚರಿಸುತ್ತಾರೆ. ಎಲ್ಲಿ ಹೋದರೂ ಇವರಿಗೆ ಗೌರವವುಂಟು. ಜನ ಇವರನ್ನು ತಾವೇ ಬರಮಾಡಿಕೊಂಡು ಕಥೆ ಹಾಡಿಸುವುದೂ ಉಂಟು. ಇವರು ಹಾಡುವ ಹಾಗೂ ಹೇಳುವ ಕಥೆಗಳಿಂದ, ಹಾಡುವುದನ್ನೇ ವೃತ್ತಿಯನ್ನಾಗಿ ಕೈಗೊಂಡು ಜೀವಿಸುತ್ತಿರುವ ವಿಶಿಷ್ಟ ಪ್ರವೃತ್ತಿಯ ಸಂಪ್ರದಾಯಗಳಿಂದ ಜಾನಪದ ಕ್ಷೇತ್ರದಲ್ಲಿ ಇವರಿಗೆ ಮಹತ್ತ್ವದ ಸ್ಥಾನ ಸಂದಿದೆ. ಕರ್ನಾಟಕದಲ್ಲಿ ವೃತ್ತಿಗಾಯಕರು ಪರಂಪರೆಯನ್ನು ಮೊದಲಿಗೆ ಗುರುತಿಸಿ, ಅದರ ಮಹತ್ತ್ವ ತಿಳಿಸಿದವರು ಜೀ. ಶಂ. ಪರಮಶಿವಯ್ಯ. ಇವರ ದಕ್ಷಿಣ ಕರ್ನಾಟಕ ಜನಪದ ವೃತ್ತಿಗಾಯಕರು ಮಹಾಪ್ರಬಂಧ (1979) ಈ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದೆ. (ಡಿ.ಕೆ.ಆರ್.)

  *