ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೆಂಕಟಮಖಿ
ವೆಂಕಟಮಖಿ ಸು. 16-17ನೆಯ ಶತಮಾನ. ಕರ್ಣಾಟಕ ಸಂಗೀತದ 72 ಮೇಳ ರಾಗಗಳನ್ನು ವ್ಯವಸ್ಥೆಗೊಳಿಸಿದ ಸಂಗೀತಶಾಸ್ತ್ರಜ್ಞ. ತಂದೆ ಗೋವಿಂದ ದೀಕ್ಷಿತ, ತಾಯಿ ನಾಗಮ್ಮ. ವೆಂಕಟಮಖಿ ಈ ದಂಪತಿಗಳ ದ್ವಿತೀಯ ಪುತ್ರ. ನಾಯಕವಂಶದ 140 ವರ್ಷಗಳ ಆಳಿಕೆಯನ್ನು ಸ್ಥಾಪಿಸಿದಾತ ಗೋವಿಂದ ದೀಕ್ಷಿತ. ಈತ ಚೆನ್ನಪ್ಪನಾಯಕನ ಪ್ರಧಾನಮಂ ತ್ರಿಯಾಗಿದ್ದ. ಚೋಳಮಂಡಲದ ಯಶಸ್ಸಿಗೆ ಕಾರಣನಾದ.
ಗೋವಿಂದ ದೀಕ್ಷಿತ ಕನ್ನಡಿಗ, ಶಿವಮೊಗ್ಗ ಸೀಮೆಯವ. ಈತನ ತಂದೆ ಮತ್ತು ಅಣ್ಣ ಯಜ್ಞನಾರಾಯಣ ದೀಕ್ಷಿತ ಇಬ್ಬರೂ ವೇದ ಪಾರಂಗತರು, ಅದ್ವೈತಾಚಾರ್ಯರು, ಸಾಹಿತಿಗಳು ಆಗಿದ್ದರು. ಶ್ರೌತವಿದ್ಯೆಯಲ್ಲಿ ಉಕ್ತವಾಗಿರುವ ಎಲ್ಲ ಯಜ್ಞಗಳನ್ನೂ ನೆರವೇರಿಸಿ ದೀಕ್ಷಿತರೆನಿಸಿಕೊಂಡಿದ್ದರು. ಗೋವಿಂದ ದೀಕ್ಷಿತ ತಂಜಾವೂರಿನ ನಾಯಕ ದೊರೆಗಳ ಪೈಕಿ ಒಬ್ಬನಾದ ರಘುನಾಥ ನಾಯಕನ ಪ್ರಧಾನಿಯಾಗಿದ್ದ.
ಸಹಜವಾಗಿ ವೆಂಕಟಮಖಿ ಹುಟ್ಟಿನಿಂದಲೂ ಶಿಕ್ಷಣದಿಂದಲೂ ಸಕಲವೇದ ವಿದ್ಯಾಪಾರಂಗತನಾದ. ಜೊತೆಗೆ ಕಾವ್ಯ, ನಾಟಕ, ಸಂಗೀತ, ಛಂದಸ್ಸು ಮುಂತಾದ ಶಾಸ್ತ್ರ ಪ್ರಕಾರಗಳಲ್ಲಿ ಪ್ರಾವೀಣ್ಯ ಕೂಡ ಗಳಿಸಿದ. ಈತ ಬೋಧಾಯನ ಸೂತ್ರಶಾಸ್ತ್ರ, ದರ್ಶಪೂರ್ಣಮಾಸಪ್ರಯೋಗ, ಮೀಮಾಂಸ, ಚತುರ್ದಂಡೀ ಪ್ರಕಾಶಿಕಾ(ಸಂಗೀತಶಾಸ್ತ್ರ ಗ್ರಂಥ) ಮುಂತಾದ ಕೃತಿಗಳನ್ನು ರಚಿಸಿದ್ದಾನೆ. ಕುಮಾರಿಲ ಭಟ್ಟನ ಲಘುವಾರ್ತಿಕಕ್ಕೆ ವಾರ್ತಿಕಾ ಭರಣ ಎಂಬ ವ್ಯಾಖ್ಯಾನ ಬರೆದಿದ್ದಾನೆ (ನೋಡಿ-ಚತುರ್ದಂಡೀ).
ಸ್ವತಃ ಶಾಸ್ತ್ರಜ್ಞ, ವಾಗ್ಗೇಯಕಾರ, ಗಾಯಕ ಮತ್ತು ವೈಣಿಕ ಆಗಿದ್ದ ವೆಂಕಟಮಖಿ ದೊರೆ ವಿಜಯರಾಘವನ (ರಘುನಾಥನಾಯಕನ ಮಗ) ಆಣತಿಯಂತೆ ಚತುರ್ದಂಡೀ ಪ್ರಕಾಶಿಕಾ ಎಂಬ ಶಾಸ್ತ್ರ ಗ್ರಂಥ ರಚಿಸಿದ (ಸು. 1660). ಈ ಕುರಿತು ಗ್ರಂಥದಲ್ಲೇ ಉಲ್ಲೇಖಿಸಿದ್ದಾನೆ. ಆಧುನಿಕ ಕರ್ಣಾಟಕ ಸಂಗೀತಕ್ಕೆ ಭದ್ರಬುನಾದಿ ಹಾಕಿಕೊಟ್ಟಿರುವ ಆಕರ ಗ್ರಂಥವಿದು.
ದಂಡಿ ಅಂದರೆ ಆಧಾರಸ್ತಂಭ. ಸಂಗೀತದ ನಾಲ್ಕು ಸ್ತಂಭಗಳಾದ ಗೀತ, ಠಾಯ, ಆಲಾಪ, ಪ್ರಬಂಧ ಮತ್ತು ಅವುಗಳ ಅವಯವಗಳನ್ನು ವಿಶದಪಡಿಸುತ್ತದೆ. ಇದು ಸಂಸ್ಕøತ ಭಾಷೆಯ ಅನುಷ್ಟುಪ್ ಛಂದಸ್ಸಿನ ಲ್ಲಿದೆ. ಇದರಲ್ಲಿ ಹತ್ತು ಪ್ರಕರಣಗಳಿವೆ. 1. ವೀಣಾ, 2. ಶ್ರುತಿ, 3. ಸ್ವರ, 4. ಮೇಳ, 5. ರಾಗ, 6. ಆಲಾಪ, 7. ಠಾಯ, 8. ಗೀತ, 9. ಪ್ರಬಂಧ ಹಾಗೂ 10. ತಾಳಪ್ರಕರಣ. ತಾಳಪ್ರಕರಣ ಈಗ ಅಲಭ್ಯ.
ವೀಣಾ ಪ್ರಕರಣದಲ್ಲಿ ವೀಣೆಯ ರಚನೆ, ವೈವಿಧ್ಯ, ವಾದ್ಯದ ಬಗ್ಗೆ, ವಾದಕ, ವಾದನತಂತ್ರ ಮುಂತಾದ ವಿವರಗಳಿವೆ. ಶುದ್ಧಮೇಳವೀಣ, ಮಧ್ಯಮೇಳವೀಣ, ರಘುನಾಥೇಂದ್ರ ಮೇಳವೀಣಗಳ ಬಗ್ಗೆ ವಿವರಿಸುತ್ತಾನೆ. ಮೊದಲೆರಡು ವೀಣೆಗಳಲ್ಲಿ ರಾಗಕ್ಕೆ ತಕ್ಕಂತೆ ಮೆಟ್ಟುಗಳ ಹೊಂದಾಣಿಕೆ ಮತ್ತು ಮೂರನೆಯ ವೀಣೆಯಲ್ಲಿ ಅಚಲಮೆಟ್ಟುಗಳ ಬಗ್ಗೆ ವಿವರಣೆ ನೀಡುತ್ತಾನೆ. ಸ್ವರಾಷ್ಟಕದಲ್ಲಿರುವ ಸ್ವರಗಳ ಸ್ಥಾನ ಹನ್ನೆರಡು ಎಂದು ಹೇಳಿ, ಆ ಕಾಲದಲ್ಲಿ ಸಂಗೀತ ವಿದ್ವಾಂಸರು ಹಾಡುತ್ತಿದ್ದ ರಾಗಗಳ ಹೆಸರಿನೊಡನೆ ಸಮೀಕರಿಸಿ ಬೇರೆ ಬೇರೆ ರಾಗಗಳನ್ನು ನುಡಿಸುವಾಗ ಯಾವ ತಂತಿಯನ್ನು ಹೇಗೆ ಶ್ರುತಿ ಮಾಡಬೇಕು ಎಂಬ ವಿವರಣೆ ನೀಡಿದ್ದಾನೆ. ಇದರಲ್ಲಿ ಮೊತ್ತ ಮೊದಲಬಾರಿಗೆ ಸಾರಣೆಯ ಕಲ್ಪನೆ ಬರುತ್ತದೆ. ಸಪ್ತಸ್ವರಗಳಲ್ಲಿ ಇಪ್ಪತ್ತೆರಡು ಶ್ರುತಿಗಳು ಹೇಗೆ ಅಡಕವಾಗಿವೆ ಎಂಬ ಅಂಶವೂ ವೀಣೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಅರಿತು ಕೊಳ್ಳುವ ಬಗೆಗಿನ ವಿವರಣೆಯೂ ಶ್ರುತಿಪ್ರಕರಣದಲ್ಲಿವೆ.
ಸ್ವರಪ್ರಕರಣದಲ್ಲಿ ದೀರ್ಘ ವಿವರಣೆಯೊಂದಿಗೆ ಶ್ರುತಿಗಳಿಂದ ಹುಟ್ಟುವ ಸ್ವರಗಳನ್ನು ನಿರೂಪಿಸಲಾಗಿದೆ. ಏಳು ಶುದ್ಧಸ್ವರಗಳೂ ಐದು ವಿಕೃತಸ್ವರ ಗಳೂ ಸೇರಿ ಒಟ್ಟು ಹನ್ನೆರಡು ಪ್ರಸಿದ್ಧವಾಗಿವೆ. ಸ್ವರ ಸಮೂಹವನ್ನು ಗ್ರಾಮ ಎಂದು ಕರೆದು, ಷಡ್ಜಗ್ರಾಮವೊಂದೇ ಉಪಯುಕ್ತವಾದುದೆಂದು ಸ್ಪಷ್ಟಪಡಿಸುತ್ತಾನೆ. ಪುರಂದರದಾಸರಿಂದ ರೂಢಿಗೆ ಬಂದ ಸುಳಾದಿ ಸಪ್ತತಾಳಾಲಂಕಾರಗಳನ್ನು ನಿರೂಪಿಸಿ, ಗಮಕ ಬಲು ಮುಖ್ಯವೆಂದೂ “ಸ್ವರಸ್ಯ ಕಂಪೋಗಮಕಃ ಶ್ರೋತೃ ಚಿತ್ತಸುಖಾವಹಃ” ಎಂದೂ ವಿವರಿ ಸುತ್ತಾನೆ.
ಚತುರ್ದಂಡೀ ಪ್ರಕಾಶಿಕಾ ಕೃತಿ ಪ್ರಸಿದ್ಧಿ ಪಡೆದದ್ದು ಮುಖ್ಯವಾಗಿ ಮೇಳ ಪ್ರಕರಣದಿಂದ. ಎಪ್ಪತ್ತೆರಡು ಮೇಳಗಳನ್ನು ಕಲ್ಪಿಸಲು ಸ್ವರಗಳ ವಿಕೃತಿ ಭೇದಗಳು ಸೇರಿ ಒಟ್ಟು ಹದಿನಾರು ಸ್ವರಗಳಾಗುತ್ತವೆ. ರಿ, ಗ, ದ, ನಿಗಳಿಗೆ ಮೂರು ಮೂರು ಭೇದಗಳು. ಅವುಗಳ ಸಂಜ್ಞೆ ರ, ರಿ, ರು, ಗ, ಗಿ, ಗು ಹೀಗೆ. ಮಧ್ಯಮಸ್ವರಕ್ಕೆ ಮಾತ್ರ ಎರಡು ಭೇದಗಳು ಶುದ್ಧ ಮತ್ತು ಪ್ರತಿ, ಸ್ವರ ಸಂಜ್ಞೆ - ಮ, ಮಿ. ಎಲ್ಲ ರಾಗಗಳಿಗೂ ಷಡ್ಜ, ಪಂಚಮ ಸ್ವರಗಳು ಆವಶ್ಯಕ. ಏಳು ಸ್ವರಗಳ ಸೇರುವಿಕೆಯೇ ಮೇಳವೆಂದು ಗೀತ ಬಲ್ಲವರು ಹೇಳುತ್ತಾರೆ ಎಂದಿದ್ದಾನೆ. ಎಪ್ಪತ್ತೆರಡು ಭೇದಗಳನ್ನು ವಿವರಿಸಲು ಸ್ಫುಟವಾದ ಉಪಾಯವನ್ನು ಹೇಳುತ್ತೇನೆಂದು ಹೀಗೆ ವಿವರಿಸಿದ್ದಾನೆ: ಮೊದಲ ಆರು ರಾಗಗಳು -
ಪೂರ್ವಾಂಗ ಸ್ವರ ಉತ್ತರಾಂಗಸ್ವರ (ಅ) ರ, ಗ ಧ, ನ (ಆ) ರ, ಗ ಧ, ನಿ (ಇ) ರ, ಗ ಧ, ನು (ಈ) ರ, ಗ ಧಿ, ನಿ (ಉ) ರ, ಗ ಧಿ, ನು (ಊ) ರ, ಗ ಧು, ನು ಎರಡನೆಯ ಆರು ರಾಗಗಳು - ರ, ಗಿ ಮೂರನೆಯ ಆರು ರಾಗಗಳು - ರ, ಗು ನಾಲ್ಕನೆಯ ಆರು ರಾಗಗಳು - ರಿ, ಗಿ ಐದನೆಯ ಆರು ರಾಗಗಳು - ರಿ, ಗು ಆರನೆಯ ಆರು ರಾಗಗಳು - ರು, ಗು
ಉಳಿದ ಆರು ಗುಂಪುಗಳಿಗೂ ಪೂರ್ವಾಂಗ ಸ್ವರ ಹೀಗೇ ಇರುತ್ತದೆ: 1ನೆಯ ಗುಂಪು+7ನೆಯ ಗುಂಪು ಒಂದೇ ರೀತಿ, 2+8, 3+9, 4+10, 5+11, 6+12. ಇದೇ ಕ್ರಮದಲ್ಲಿದ್ದು ಮೊದಲ ಆರು ಗುಂಪಿನ ಮೂವತ್ತಾರು ರಾಗಗಳು ಶುದ್ಧ ಮಧ್ಯಮವನ್ನು ಹೊಂದಿ ಪೂರ್ವಮೇಳ ವೆಂದೂ ಅನಂತರದ ಆರುಗುಂಪಿನ ಮೂವತ್ತಾರು ರಾಗಗಳು ಪ್ರತಿಮಧ್ಯಮವನ್ನು ಹೊಂದಿ ಉತ್ತರ ಮೇಳವೆಂದೂ ಪ್ರಸಿದ್ಧಿ ಪಡೆದಿವೆ. ಒಟ್ಟು ಎಪ್ಪತ್ತೆರಡು ಮೇಳಗಳಾಗಿವೆ. ಹಾಡುವಾಗ ಸ್ವರ ಪ್ರತೀಕ “ಸರಿಗಮಪದನಿ”ಯೆಂದೇ ವ್ಯವಹರಿಸಬೇಕು.
ವೆಂಕಟಮಖಿ ಈ ಎಪ್ಪತ್ತೆರಡು ಮೇಳಗಳಿಗೆ ಹೆಸರು ಸೂಚಿಸಿಲ್ಲ. ಆತನ ಮೊಮ್ಮಗ ಮುದ್ದು ವೆಂಕಟಮಖಿ ಮೇಳಗಳಿಗೆ ಹೆಸರಿಟ್ಟು ಅನುಬಂಧವಾಗಿ ಚತುರ್ದಂಡೀ ಪ್ರಕಾಶಿಕಾ ಗ್ರಂಥದೊಡನೆ ಸೇರಿಸಿದ ನೆಂದು ವಿದ್ವಾಂಸರು ಹೇಳುತ್ತಾರೆ.
ಇನ್ನು ಐದನೆಯ ರಾಗ ಪ್ರಕರಣದಲ್ಲಿ ಕೇಳುಗರ ಮನಸ್ಸನ್ನು ರಂಜಿಸುವುದೇ ರಾಗವೆಂದು ಹೇಳಿ ಅದಕ್ಕೆ ದಶಲಕ್ಷಣಗಳನ್ನೂ ಸ್ವರಗಳ ಲಂಘನ, ಅಲಂಘನಗಳನ್ನೂ ವಾದಿ ಸಂವಾದಿ ಸ್ವರಗಳನ್ನೂ ವಿವರಿಸುತ್ತಾನೆ. ಗುರು ತಾನಪ್ಪಾಚಾರ್ಯರಿಂದ ಲಕ್ಷ್ಯದಲ್ಲಿ ಹೇಳಲ್ಪಟ್ಟ ಐವತ್ತನಾಲ್ಕು ರಾಗಗಳ ವಿವರಣೆ, ಅವುಗಳ ಗಾನಕಾಲ ನಿಯಮವನ್ನು ತಿಳಿಸುತ್ತಾನೆ. ರಾಗಾಂಗ, ಭಾಷಾಂಗ, ಉಪಾಂಗ, ಕ್ರಿಯಾಂಗ ಇವು ದೇಶೀರಾಗಗಳೆಂದು ವರ್ಣಿಸಿದ್ದಾನೆ.
ಆಲಾಪನೆ ಮಾಡುವ ಬಗೆಯನ್ನು ಆಲಾಪ ಪ್ರಕರಣದಲ್ಲಿ ಹೇಳಿದೆ. ಆಲಾಪನೆಯ ಪ್ರಾರಂಭಭಾಗ ಆಕ್ಷಿಪ್ತಿಕಾ, ಎರಡನೆಯದು ರಾಗವರ್ಧಿನಿ. ಆಕ್ಷಿಪ್ತಿಕಾದಿಂದ ಆರಂಭಗೊಂಡ ಆಲಾಪ ಸ್ಫುಟವಾಗಿ ವರ್ಧಿಸುವುದು. ಅನಂತರ ಮುಕ್ತಾಯ ಬರುವುದು.
ಉದ್ದಿಷ್ಟ ರಾಗಕ್ಕೆ ತಕ್ಕಂತೆ ಒಂದು ಸ್ವರದಲ್ಲಿ ನ್ಯಾಸಮಾಡಬೇಕು. ಆ ಸ್ವರದಿಂದ ಮುಂದೆ ನಾಲ್ಕು ಸ್ವರಗಳಲ್ಲಿ ತಾನವನ್ನು ಆರೋಹಣ, ಅವರೋಹಣ ಕ್ರಮದಲ್ಲಿ ಹಾಡಿ ಅನಂತರ ಮಂದ್ರಷಡ್ಜದಲ್ಲಿ ನ್ಯಾಸಮಾಡ ಬೇಕು. ಇದು ಏಳನೆಯ ಠಾಯ ಪ್ರಕರಣದ ಸಾರ.
ಎಂಟನೆಯದು ಗೀತ ಪ್ರಕರಣ. ಗೀತ ಎಂದರೆ ಹಾಡು ಎಂಬರ್ಥದಲ್ಲಿ ಹೇಳಲಾಗಿದೆ. ಸಾಲಗಸೂಡವೆಂಬ ಗೀತದ ಬಗ್ಗೆ ನಿರೂಗೀತವು ಪ್ರತ್ಯೇಕ ತಾಳದಲ್ಲಿ ನಿಬದ್ಧವಾಗಿದೆ. ಇಲ್ಲಿ ರಸಾಭಿವ್ಯಕ್ತಿಯ ಬಗ್ಗೆ ವಿವರಿಸಿದ್ದಾನೆ.
ಆರು ಅಂಗಗಳಿಂದ ಮತ್ತು ನಾಲ್ಕು ಧಾತುಗಳಿಂದ ರಚಿತವಾದ ರಚನೆಯನ್ನು ಪ್ರಬಂಧವೆಂದು ಕೊನೆಯ ಪ್ರಕರಣದಲ್ಲಿ ವಿವರಿಸುತ್ತಾನೆ. ಆರು ಅಂಗಗಳಿವು: ಸ್ವರ, ಬಿರುದ, ಪದ, ತೇನಕ, ಪಾಟ, ತಾಳ. ಇವು ಪ್ರಬಂಧದಲ್ಲಿ ಮುಖ್ಯ. ಪ್ರಬಂಧದ ಧಾತು ಅಂದರೆ ಅವಯವಗ ಳಿವು: ಉದ್ಗ್ರಾಹ, ಮೇಲಾಪಕ, ಧ್ರುವ, ಆಭೋಗ. ಇವು ಆಧುನಿಕಕಾಲದ ಪಲ್ಲವಿ, ಅನುಪಲ್ಲವಿ, ಚರಣ, ಮಧ್ಯಮಕಾಲ ಸಾಹಿತ್ಯವೆಂದು ಮಾರ್ಪಾ ಡಾಗಿವೆ. ಕರ್ತೃ ಏಕಧಾತು, ದ್ವಿಧಾತು, ತ್ರಿಧಾತು, ಚತುರ್ಧಾತು ಪ್ರಬಂಧ ರಚನೆಗಳನ್ನು ನೀಡಿದ್ದಾನೆ.
ಹತ್ತನೆಯದು (ತಾಳಪ್ರಕರಣ) ಲಭ್ಯವಾಗಿಲ್ಲದಿರುವುದರಿಂದ ಗ್ರಂಥ ಅಪೂರ್ಣವಾಗಿದೆ. (ಆರ್.ಎನ್.ಎಸ್.ಆರ್.)
*