ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಂಕರನಾಗ್

ವಿಕಿಸೋರ್ಸ್ದಿಂದ

ಶಂಕರನಾಗ್ 1954-90. ಕನ್ನಡದ ಪ್ರಸಿದ್ಧ ರಂಗಭೂಮಿ ನಟ, ಕನ್ನಡ ಚಿತ್ರಗಳ ನಾಯಕ ನಟ, ನಾಟಕ ಹಾಗೂ ಚಲನಚಿತ್ರ ನಿರ್ದೇಶಕ. ಇವರು 1954ರಲ್ಲಿ ಉಡುಪಿಯಲ್ಲಿ ಜನಿಸಿದರು. ಇವರ ತಂದೆ ಸದಾನಂದ ನಾಗರಕಟ್ಟೆ. ಪ್ರಸಿದ್ಧ ನಟ ಅನಂತನಾಗ್ ಇವರ ಅಣ್ಣ, ರಂಗಭೂಮಿಯ ಪ್ರಸಿದ್ಧನಟಿ ಗಾಯತ್ರಿ ಅತ್ತಿಗೆ. ಶಂಕರನಾಗ್ ವಿದ್ಯಾಭ್ಯಾಸ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ ಆಯಿತು. ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಒಮ್ಮೆ ಇವರ ಶಾಲೆಗೆ ಬಂದಿದ್ದಾಗ ಶಾಲೆಯ ಹುಡುಗರು ಆಡಿದ ನಾಟಕದಲ್ಲಿ ಇವರು ಡಾಕ್ಟರ್ ಪಾತ್ರ ವಹಿಸಿದ್ದರು. ವಿದ್ಯಾಭ್ಯಾಸದ ಕಾರಣ ಮುಂಬೈಗೆ ಹೋದರು. ಅಲ್ಲಿ ಅನೇಕ ರಂಗಭೂಮಿ ಹಾಗೂ ಚಿತ್ರರಂಗದ ದಿಗ್ಗಜರ ಪರಿಚಯ ಮತ್ತು ಕಲಿಕೆಯ ಅವಕಾಶಗಳು ದೊರೆತವು. ಓದುತ್ತಲೇ ಅನೇಕ ನಾಟಕಗಳಲ್ಲಿ ಭಾಗವಹಿಸಿದರು. ರಂಗಭೂಮಿಯ ನಟರಾಗಿ ಹಿಂದಿ, ಗುಜರಾತಿ, ಮರಾಠಿ, ಕನ್ನಡ, ಇಂಗ್ಲಿಷ್ ನಾಟಕಗಳ ಮೂಲಕ ಮುಂಬೈ ರಂಗಭೂಮಿಯಲ್ಲಿ ಚಿರಪರಿಚಿತರಾದರು. ಒಂದು ತಿಂಗಳಿಗೆ 15ರಿಂದ 20 ನಾಟಕಗಳನ್ನು ಮಾಡುತ್ತಿದ್ದರು. ಖ್ಯಾತ ನಿರ್ದೇಶಕಿ ಸಾಯಿ ಪರಾಂಜಪೆಯವರಲ್ಲಿ ಸಹಾಯಕರಾಗಿ ಸುಮಾರು ನಾಲ್ಕು ವರ್ಷ ದುಡಿದರು. ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದರೂ ಅದನ್ನು ತ್ಯಜಿಸಿ ಅಭಿನಯ ಹಾಗೂ ನಟನೆಯ ಜೀವನವನ್ನೇ ಆಯ್ಕೆಮಾಡಿಕೊಂಡರು. ಮುಂಬೈ ರಂಗಭೂಮಿ ಇವರ ಅನುಭವವನ್ನು ಗಟ್ಟಿಯಾಗಿಸಿತು. ಇದೇ ಸಂದರ್ಭದಲ್ಲಿ ಅರುಂಧತಿ ಎಂಬ ಕಲಾವಿದೆಯನ್ನು ವಿವಾಹವಾದರು. ಗಿರೀಶ್‍ಕಾರ್ನಾಡ್ ನಿರ್ದೇಶಿಸಿದ ಒಂದಾನೊಂದು ಕಾಲದಲ್ಲಿ (1979) ಇವರ ಅಭಿನಯದ ಮೊದಲ ಚಿತ್ರ. ಈ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ಪಡೆದರು. ಅನಂತರ ಇವರು ಸೀತಾರಾಮು (1979) ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು; ಜೊತೆಗೆ ಇವರ ತಾರಾಮೌಲ್ಯವನ್ನು ಹೆಚ್ಚಿಸಿತು. ಶಂಕರನಾಗ್ ಅವರು ಅನೇಕ ಚಿತ್ರಗಳನ್ನು ನಿರ್ದೇಶಿದ್ದಾರೆ. ಮಿಂಚಿನ ಓಟ (1980), ಅನುಬಂಧ (1980), ಗೀತಾ (1981), ನೋಡಿ ಸ್ವಾಮಿ ನಾವಿರೋದು ಹೀಗೆ (1983), ಪರಮೇಶಿಯ ಪ್ರಣಯ ಪ್ರಸಂಗ, ಆಕ್ಸಿಡೆಂಟ್ (1984), ಒಂದು ಮುತ್ತಿನ ಕಥೆ (1987) ಇವರ ಕೆಲವು ಮುಖ್ಯ ಚಿತ್ರಗಳು. ಇವರು ಅಭಿನಯಿಸಿದ ಚಲನಚಿತ್ರ ಗಳಿವು: ಒಂದಾನೊಂದು ಕಾಲದಲ್ಲಿ (1978), ಸೀತಾರಾಮು (1979), ಪ್ರೀತಿ ಮಾಡು ತಮಾಷೆ ನೋಡು (1979), ಮಿಂಚಿನ ಓಟ (1980), ಆಟೋರಾಜ (1980), ಮೂಗನ ಸೇಡು (1980), ಗೀತಾ (1981), ಮುನಿಯನ ಮಾದರಿ (1981), ಗಂಡಭೇರುಂಡ (1984), ರಸ್ತೆರಾಜ (1986), ತಾಯಿ (1987), ಸಾಂಗ್ಲಿಯಾನ (1988).

ಶಂಕರನಾಗ್ ಅವರಿಗೆ ಶ್ರೇಷ್ಠ ನಿರ್ದೇಶನ ಹಾಗೂ ಅಭಿನಯಕ್ಕಾಗಿ ಅನೇಕ ಪ್ರಶಸ್ತಿಗಳು ದೊರಕಿವೆ. ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿನ ಅಭಿನಯಕ್ಕೆ ಶ್ರೇಷ್ಠನಟ ಪ್ರಶಸ್ತಿ (1979), ಮಿಂಚಿನ ಓಟ ಚಿತ್ರಕ್ಕೆ ದ್ವಿತೀಯ ಅತ್ಯುತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ (1980), ಆಕ್ಸಿಡೆಂಟ್ (1985) ಚಿತ್ರಕ್ಕೆ, ಸ್ವಾಮಿ (ಹಿಂದಿ) ಟಿ.ವಿ. ಧಾರಾವಾಹಿಗೆ ಕೇಂದ್ರ ಸರ್ಕಾರದ ಪ್ರಶಸ್ತಿ(1987) ಇವುಗಳನ್ನು ಹೆಸರಿಸಬಹುದು.

ಕಿರುತೆರೆಯಲ್ಲಿಯೂ ಇವರು ಧಾರಾವಾಹಿಗಳನ್ನು ನಿರ್ದೇಶಿಸಿದ್ದರು. ಆರ್.ಕೆ.ನಾರಾಯಣ್ ಅವರ ಕಾದಂಬರಿಯಾಧಾರಿತ ಮಾಲ್ಗುಡಿ ಡೇಸ್ ಹಾಗೂ ಸ್ವಾಮಿ ಧಾರಾವಾಹಿಗಳು ರಾಷ್ಟ್ರೀಯ ಪ್ರಸಾರ ಪಡೆದು ಅತ್ಯಂತ ಜನಪ್ರಿಯ ವಾದುವು. ಇವರು ಸ್ಥಾಪಿಸಿದ ಸಂಕೇತ್ ಎಲೆಕ್ಟ್ರಾನಿಕ್ ಸಂಸ್ಥೆ ಸುಸಜ್ಜಿತ ರೆಕಾರ್ಡಿಂಗ್ ಸ್ಟೂಡಿಯೋ ಆಗಿ ಕನ್ನಡ ಚಿತ್ರೋದ್ಯಕ್ಕೆ ಕೆಲವು ಕಾಲ ಸೇವೆ ಸಲ್ಲಿಸಿತು.

ಶಂಕರ್‍ನಾಗ್ ರಾಜಕೀಯ ರಂಗದಲ್ಲಿಯೂ ತಮ್ಮನ್ನು ಗುರುತಿಸಿಕೊಂಡು ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದರು. ಕಾರು ಅಪಘಾತದಲ್ಲಿ 1990 ಸೆಪ್ಟೆಂಬರ್ 30ರಂದು ನಿಧನರಾದರು. ಇವರ ಗೌರವಾರ್ಥ ಬೆಂಗಳೂರಿನಲ್ಲಿ ಸಿಂಫೊನಿ ಚಿತ್ರಮಂದಿರಕ್ಕೆ ಶಂಕರನಾಗ್ ಅವರ ಹೆಸರನ್ನು ಇಡಲಾಯಿತು. ಇವರ ಪತ್ನಿ ಅರುಂಧತಿನಾಗ್ ಅವರು ಶಂಕರನಾಗರ ಕನಸಿನ ಕೂಸಾಗಿದ್ದ, ರಂಗಭೂಮಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ರಂಗಶಂಕರ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ (2004). *